ಕುಲಕರ್ಣಿ ದತ್ತು ಎದ್ದು ನಿಂತು “ಗುರಪಾದ ಹೆಣಾ ಮಣ್ಣ ಮಾಡಬ್ಯಾಡ. ಹಂಗೇನಾದರು ಆತಂದ್ರ ಪೋಲಿಷವರೆಗೆ ಹೋಗತದ ನೋಡು. ನಮ್ಮದಂತು ಕಬೂಲಿಲ್ಲ. ನಾ ನಡೀತೇನ ಅಂತಂದು ಎದ್ದು ಹೊರನಡೆದ. ಅವನ ಜೋಡ ಏಳೆಂಟಮಂದಿ ಎದ್ದರು. ಮಹಮ್ಮದ ಅಲಿ ಎದ್ದು ನಿಂತು ಗುರಪಾದನ ಕಡೀಗಿ ತಿರಿಗಿ “ಗುರುಪಾದನ್ನ ನಮ್ಮ ಜಾತಿಗಿ ವಿರುದ್ಧವಾಗಿ ನಾನೇನು ಮಾಡಂಗಿಲ್ಲ. ನಿಮಗ ಶಿವಾ ಹೆಂಗೋ ನಮಗ ಅಲ್ಲಾನು ಹಂಗ, ನಾವಿನ್ನ ಬರ್ತಿವಿ.. ಎಂದ್ಹೇಳಿ ಅವರು ಎಲ್ಲರು ಎದ್ದುಹೋದರು.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಬಸವಣ್ಣೆಪ್ಪಾ ಪ. ಕಂಬಾರ ಬರೆದ ಕತೆ ‘ನೆರಳ ಹಿಂದಿನ ಬೆಳಕು’

 

ಶಿವಾಪೂರದೊಳಗ ಬ್ಯಾಸಿಗಿ ಬಿಸಿಲಿಗಿ ಕಲ್ಲ ಮಣ್ಣ ಎಲ್ಲಾ ಕುದ್ದ ಹೋಗಿ ಗುಡ್ಡಗೋಳ ಕರಗಿ ಬೀಳುವಂತ ಬಿಸಿಲ ಒಂದಳತಿ ಮುಗಿಲಿನಿಂದ ಭೂಮಿತನಕ ಎಕಸರಕಿ ಸಳ್ ಬಳ್ ಅಂತ ಸುರಿಯುತಿತ್ತು. ಗಂಡಸರು ಶಿವ ಶಿವಾ ಅಂತ ನೆನದರ, ಹೆಂಗಸರು ತಾಯಿ ಮಾದೇವಿ, ಮಾರಮ್ಮ ಅಂತ ಉಟ್ಟ ಅರಿವಿ ಬಿಚ್ಚಿ ಸೀರಿ ಶೆರಗಿನಿಂದ ಎದಿಗಿ ಗಾಳಿ ಬೀಸಿಕೊಳ್ಳತ ತಮ್ಮ ಸಂಕಟವನ್ನು ಹೊರಹಾಕಿದರು “ಅವ್ವಾ ತಾಯಿ ಗಾಳಿ ಅಂಬೊದು ಎಲ್ಲಾಯರ ಹೋಗಿದ್ದೊತು ಹಾಂಟ್ಯಾಂದ, ಗೊತ್ತಗುರಿಯಿಲ್ಲದ ಪಂಗಾಪಂಗಾ ತಿರಿಗಿದರ ಅದನ ನಂಬಿ ಉಸರ ಹಿಡದವರ ಗತಿ ಏನಾಗತೈತಿ ಅಂತ ಖಬರಿ ಬ್ಯಾಡ ಮೂಳಿಗಿ. ಹಳಿ ಮೂಳಿಗಿ, ಈಗ ಸಾಯತೇವೊ ಇನ್ನೊಂಡಿಟ ಬಿಟ್ಟ ಸಾಯತೀವೊ ಗೊತ್ತಿದಾಗವಲ್ಲದು ಅಂತ ಸಿಡಿಸಿಡಿ ಮಾಡಿದರು ಕುಮುದವ್ವನ ಗುಡಿಮುಂದಿನ ಪೌಳಿಲಿ, ದೀಪಕಂಬದ ಕಟ್ಟಿಮ್ಯಾಲ ಕುಂತಿದ್ದ ಭರಮ, ಬಳುಬಾಳ ಸಿದ್ದ, ಪೂಜೇರಿ ಅಶ್ಯಾನ ಮಗಾ ರ್ಯಾವು, ಹೂನೂರು ರಾಯಪ್ಪ, ಬೆಳವಿ ಮಲ್ಲ, ಮುಗಳಿ ಅಪ್ಪಣ್ಣ ಟವಳಿಯಗಿ ನಗಚಾಟಿಕಿ ಮಾಡಕೊಂತ ಕುಂತಿರಬೇಕಾದರ ಹೋಳಿಕಡೆ ಓಣ್ಯಾಗಿನ ಹತ್ತ ಹನ್ನೇರಡ ಹುಡುಗರು, ಅಗಸಿ ಮನಿ ಕಡೇ ಏಳೆಂಟ ಹುಡುಗರು ಓಡಕೊಂತ ಓಡಕೊಂತ ಹುಂಚಿಕೊಪ್ಪ ಈರಬದ್ರುನ ಮನೀ ಸಂದರಿ ಹಿಡದ ಓಡಿದರು. ಅಪ್ಪಣ್ಣ ಬೆರಗಗಣ್ಣಿನಿಂದ ಅದನ ನೋಡಿದ.

“ಯಾರಿಗಿ ಏನಾತೋ…? ಹಿಂಗ್ಯಾಕ ಓಡಿಹೋದರು ಅವರು..? ಅಂದ. ಅವನ ಜೋಡ ಕುಂತವರೆಲ್ಲ ಅದಾ ಪ್ರಶ್ನಾ ಮುಖದ ಮ್ಯಾಲ ಇಟಗೊಂಡ ಒಬ್ಬರನ್ನೊಬ್ಬರು ನೋಡಿದರು. ಆದರ ಮೂಲ ಹಕೀಕತ ಎನಂಬೋದು ಯಾರಿಗಿ ತಿಳಿಲಿಲ್ಲ. ಏನಿರಬಹುದು..? ತಲಿಯೊಳಗ ಹುಳಾ ಹೊಕ್ಕು ಕೆದರತೊಡಗಿದವು. ತಲಿಮ್ಯಾಲಿನ ಪಟಗಾ ಬಿಚ್ಚಿ ಮತ್ತ ಅದರೀತಿ ಸುತ್ತಿಕೊಳ್ಳುತಿದ್ದ ಕುರುಬರ ರಾಯಪ್ಪ
“ಸ್ವಾಮಗೋಳ ಹೊಲಕ ಯಾರರ ಸನೇಪ ಮಾಡ್ಯಾರೇನಪಾ.., ಮತ್ತ.., ಕೇಳಿದಾ ಮಾತಿಗೆ “ಏ.. ಹಂಗ್ಯಾರ ಇಲ್ಲ ಬಿಡಾ ಬಾಡ. ಕರ್ಜಗ್ಯಾರ ಮುದಿಕಿಗಿ ಜಡ್ಡ ಜೋರಿತ್ತು, ಅಕೀನ ನಿನ್ನಿ ಗೋಕಾವಿ ಒಯ್ದ ಹಾಕಿದಾರ. ಆರಾಮಾಗ್ಯಾಂತ ಇಂದ ಬೆಳಿಗ್ಗಿ ಅಕೀ ಸೊಸಿ ಊಟಾ ಒಯ್ದಳಲ್ಲ. ಅಂದ ಮತ್ತ ಯಾರ ಇರಬಹುದು..? ಎಂಬ ಪ್ರಶ್ನೆಗೆ ಊರಾಗ ಸದ್ದೆ ಜಾಗ ಬಿಡುವಂತ ಗಿರಾಕಿ ಯಾವು ಇಲ್ಲ. ಹಂಗಾದರ ಯಾರ ಜಾಗಾ ಬಿಟ್ಟರು….? ಎಂಬ ಚರ್ಚೆ ಶುರುವಾಯ್ತು. ಯಾರನಾದರು ಕೇಳೋನೆಂದರೆ ತಿರಿಗಿ ಆ ಕಡಿ ಯಾರು ಹೋಗುತ್ತಿಲ್ಲ, ಆ ಕಡೇಯಿಂದ ಹೊಡಮಳ್ಳಿ ಯಾರೋಬ್ಬರು ಬರತಿಲ್ಲ, ಯಾರನ್ನ ಕೇಳೋದ…… ಚಿಂತಿಯಾಯ್ತು. ಬೆಳವಿ ಮಲ್ಲ ಕಟ್ಟಿ ಕೆಳಗಿಳಿದು ಮೈ ಒಡಮುರಿದು ಆಕಳಿಸಿದ.

ಹೆಗಲಮ್ಯಾಲಿನ ಟಾವಲಿನಿಂದ ಮಾರಿ ಒರಿಸಿಕೊಳ್ಳುತ. “ನೋಡ್ರೋ ಅವರನ ಇವರನ್ನ ಯಾಕ ಕೇಳಕೊಂತ ಕುಂದರತಿರಿ. ನಾವ ಒಂದ ಗಳಿಗಿ ಹೋಗಿ ಬರೋಣ ನಡೀರಿ. ಎನಂಬೋದು ಖರೆ ಕೊಟ್ಟಿ ತಿಳಿತೈತೆಲ್ಲ ಅಂದ. ಆ ಮಾತಿಗೆ ಹೂನುರ ರಾಯಾ “ಹೂಂಸ ಬಿಟ್ಟರ ಗೊತ್ತಾಗತ್ತಂತ ಇನ್ನ ಊರಾಗಿನ ಸುದ್ದಿ ಗೊತ್ತಾಂಗಿಲ್ಲೇನ……? ಇನ್ನೊಂದಿಷ್ಟ ತಡೀರಿ ಎನಂಬೊದು ಯಾರರ ಸುದ್ದಿ ಹೊತಗೊಂಡ ಬರತಾರ ಅಂದ. ಆದರ ಭರಮಗ ತಾಳ್ಮೆ ಇರಲಿಲ್ಲ. ಬ್ಯಾಡ ಹೋಗಿ ಬರೋಣ ನಡೀರಲೇ…. ನಾವರ ಇಲ್ಲಿ ಕುಂತ ಏನ ಕುದರಿ ಗೂಟಾ ಕೆತ್ತಾತೀವಿ….? ಅವನ ಮಾತಿಗೆ ಯಾರೊಬ್ಬರಿಗು ಮರುತ್ತರ ನೀಡಲು ಮನಸ್ಸಾಗದೆ ಸುಮ್ಮನೆ ಎದ್ದು ಹುಂಚಿಕೊಪ್ಪ ಈರಬದ್ರುನ ಮನೀ ಸಂದರಿ ಹಿಡದ ಹೊರಟರು.

ವಡದಡರ ಪರಸನ ಹಾಳಮಣ್ಣ ದಿಬ್ಬಾ ಇಳದ ಕಾಶಿಮನ ಮನೆಮುಂದ ಬರೋದಕ ಸ್ವಲ್ಪ ದೂರದಾಗ ಜನಾ ಕೂಡಿ ನಿಂತದ ಕಾಣಿಸಿತು. ಅಲ್ಲಲ್ಲಿ ಮಂದಿ ಗುಂಪು ಗುಂಪಾಗಿ ಗುಸು ಪಿಸುಪಿಸು ಅಂತ ಮಾತಾಡತಿದ್ದರು, ಗಂಡಸರು ಮುಂದೇನ ಮಾಡೋದು…? ಎಂದು ವಿಚಾರಿಸುತ್ತಿದ್ದರು. ಇಷ್ಟು ಮಂದಿಗಿ ಕುತೂಹಲ ದ್ವಿಗುಣವಾಗಿ ಅವರತ್ತ ದೈಡಾಯಿಸಿದರು. ಅಲ್ಲಿದ್ದವರನ್ನ ಕೇಳಿದ; ಒಬ್ಬ ಹೇಳಿದ, “ಅಂಕಲಿಗ್ಯಾರ ಹುಡಿಗಿ ಬಸವ್ವ ಊರ್ಲ ಹಾಕೊಂಡಾಳಂತ” ಅಂದ.

“ಯಾಕ ಏನಾಗಿತ್ತು….. ಎಂಬ ಪ್ರಶ್ನೆಗೆ ಅವನಿಂದ ಸರಿಯಾದ ಉತ್ತರ ಬರಲಿಲ್ಲ ಹುಡಿಗಿ ಅಪ್ಪ ಅವ್ವ ಹೊಲಕ ಹೋಗಿದಾರ. ಅವರನ್ನ ಕರಿಲಾಕ ಈಗ ಯಾರೋ ಸೈಕಲ್ಲ ತುಳಕೊಂತ ಹೋದರು ಅಂದ. ಬೆಳವಿ ಮಲ್ಲ ಹಣಿಮ್ಯಾಲ ಬಂದ ಬೆವರ ಹನಿ ಒರಿಸಿಕೊಳ್ಳುತ ತಲಿಮ್ಯಾಲ ಲುಂಗಿ ಹೊತಗೊಂಡು ಇದೀಗ ಹೇಳಿದವನತ್ತ ಮುಖಮಾಡಿ ಕೇಳಿದ.

“ಉರ್ಲ ಹಾಕೊಂಡಿದ್ದನ್ನ ಮೊದಲ ಯಾರ ನೋಡಿದರಂತ….?ʼ ಕೇಳಿದ. ಆ ಮಾತಿಗಿ ಅದ ಓಣ್ಯಾಗಿನವನ ಹೇಳಿದ “ನಮ್ಮ ಬಾಳಗೊಂಡನ ಹ್ಯಾಂತಿ ಮಲ್ಲವ್ವ ಅರಿವಿ ತೊಳಿಲಾಕ ಹಳ್ಳಕ ಬರ್ತಿಯೇನಂತ ಕೇಳಾಕ ಹೋಗಿದಾಳ, ಬಾಗಿಲ ಒಳಗಿನಿಂದ ಚಿಲಕ ಹಾಕಿತ್ತು…. “ಬಸವ್ವ …ಬಸವ್ವ.. ಅಂತ ಕರದ್ದಾಳ, ಬಾಗಿಲಾ ದೂಗಿಸಿ ನೋಡಿದಾಳ, ಎರಡ ಮೂರ ಕಿಪೆ ಬಾಗಲಮ್ಯಾಲ ಬಡದು ಕರದಿದಾಳ, ಹಾಂ.. ಇಲ್ಲ. ಹೂಂ ಇಲ್ಲ,… ಅವ್ವಾ ಇದೀಗರೆ ನನ್ನ ಕಣ್ಣಮುಂದರ ಒಳಗ ಹೋಗಿದ್ದ ನೋಡೆನಿ ಮಲಗಿದರ ಇಷ್ಟರಾಗ ಹೆಂಗ ನಿದ್ದಿ ಹಿಡಿತೈತಿ….? ಅಂತಂದು ಜೋರ ಬಾಯಿ ಮಾಡಿ ಮತ್ತೋಮ್ಮಿ ಕರದ್ದಾಳ. ಒಳಗಿನಿಂದರೆ ಯಾವ ಸುದ್ದಿ ಇಲ್ಲ ಸುಕಾಲಿಲ್ಲ, ಒಂದ ಸವನ ಹಿಂಗ ಕರಿಯೊದ ನೊಡಿ ಓಣ್ಯಾಗಿನ ಮಂದಿ ಏನಾತ…? ಏನಾತ..? ಅಂತ ಕೂಡಿದಾರ. ಆಮ್ಯಾಲ ಎಳೆಂಟ ಮಂದಿ ಕೂಡಿ ಕರದರು, ಬಾಗಲಾ ಬಡದರು ಹೋಳ್ಳಿ ಉತ್ತರ ಇಲ್ಲ ಅಂತಂದ ಸಂಶೆ ಬಂದು ಬಾರಿಗಿಡದಾರ. ಸಿದ್ರಾಮ ಹೊಲಕ ಹೊಂಟಿದ್ದ. ಅವನ ಕರೆದ ಮ್ಯಾಲ ಹತ್ತಿಸಿ ನೋಡಿದರ ಅವ ನಾಲ್ಕ ಹೆಂಚ ತೆಗೆದ ಒಳಗ ಬಗ್ಗಿ ನೋಡಿದಾಗ ಗೊತ್ತಾತ, ಹಡಸು ತೊಲಿಗಿ ಸೀರಿ ಕಟ್ಟಿ ಅದರಲೆ ಉರ್ಲ ಹಾಕೊಂಡಾಳಂತ ಹೇಳಿದ ಅಷ್ಟ. ಅಂದಾಗ ಅಪ್ಪಣ್ಣ, ಮಲ್ಲ, ಸಿದ್ದ, ಎಲ್ಲರು ಕೇಳಿ ಇಮ್ಮಿ ನಿಟ್ಟುಸಿರ ಬಿಟ್ಟರು, ಉರ್ಲ ಯಾಕ ಹಾಕೊಂಡ್ಲು ಅಂತ ಇನ್ನೊಮ್ಮಿ ಅದ ವ್ಯಕ್ತಿನ ಕೇಳಬೇಕಂತ ಮಾಡಿದರ ಅವ ಅಲ್ಲಿಂದ ಜಾಗಾ ಖಾಲಿಮಾಡಿದ್ದ. ಊರಾಗ ಹುಟ್ಟಿದ ಕೂಸಿನಿಂದ ಹಿಡಿದು ಮುಪ್ಪಾನ ಮುದುಕರವರೆಗು ಇದು ಬಹು ಚರ್ಚಿತ ವಿಷಯವಾಗಿ ಬಿಟ್ಟಿತು.

ಒಳ್ಳೆ ಮನಿತನದ ಹುಡುಗಿ, ತಾಯಿ ತಂದಿ ನಾಕ ಮಂದಿಗಿ ಅಂಜಿ ಬಾಳ್ವೇ ಮಾಡಿದವರ, ಯಾರಿಗಿ ‘ಬ್ರ’ ಅಂದವರಲ್ಲ, ಇನ್ನ ಇವರ ಮಗಳ ಕಾರಭರಿಯಲ್ಲ, ಮಾತಿನಾಕಿಯಲ್ಲ, ಕಣ್ಣೆತ್ತಿ ಯಾರನ ನೋಡಾಕ್ಕೆಲ್ಲ. ಬಾನಗಡಿ ಬನಾವಟ ಮಂದೀನ ಅಲ್ಲ. ಹಿಂಗಿದ್ದ ಮ್ಯಾಲ ಇಂತಾ ಹುಡುಗಿ ಏಕಾಎಕಿ ಉರ್ಲ ಹಾಕೊಂಡ ಸಾಯತಾಳಂದ್ರ, ಅಂತಾ ಪ್ರಸಂಗ ಏನ ಬಂತ… ಊರಾಗ ಚಂಡಾಳ ಚೋಕರಿ ಮಂದೆಲ್ಲ ಗುಂಡಕಲ್ಲಿನಂಗ ಇರಬೇಕಾದರ ಇಂತಾ ಗುಣವಂತರ ಮಂದಿಗೆ ಇಂತಾ ತಾಪತ್ರಯ ಇರತಾವಲ್ಲಾ ಇವನೌವ್ವನ ಹಡಾ….? ಯಾವ ಅಡ್ನಾಡ ಸೂಳಿಮಗಾ ಏನಾರ ಅಂದಿತಾನ. ಹುಡಿಗಿ ಅದನ ಮನಿಸ್ಸಿಗಿ ಹಿಡಕೊಂಡ ಹಿಂಗೇನಾದರು ಮಾಡಕೊಂಡಳೊ ಏನೋ…… ಹೀಗೆ ಅಲ್ಲಿದ್ದ ಜನ ತಮಗ ಹೊಳಿದಷ್ಟ ವಿಚಾರ ಮಾಡಿ ತಲಿ ಕೆರೆದುಕೊಂಡರು.

ಗುರಪಾದ, ಲಕ್ಕವ್ವಗ ಮಗಳ ಉರ್ಲ ಹಾಕೊಂಡಿದ ಸುದ್ದಿ ಕಿವಿಗಿ ಬೀಳತಿದ್ದಂಗ ಲಕ್ಕವ್ವ ಹಾಂ ಅಂತ ಉಸಲ ಬಿಟ್ಟಾಕಿ ಹೊಳ್ಳಿ ಉಸಲ ಬಂತ ಇಲ್ಲೊ ಗೊತ್ತಿಲ್ಲ. ಆದರು ಗಂಡ ಹೆಂಡತಿ ಬೇಖಬರಹಾರಿ ಸುಂಟರಗಾಳಿಯಂತೆ ಮನೀಕಡೇ ಧಾವಿಸತೊಡಗಿದರು. ಸೈಕಲ್ ತಂದ ಹುಡಗ “ಇವರನ ನೋಡಿ, “ಚಿಗವ್ವಾ ಸೈಕಲ್ಲ ಮ್ಯಾಲ ಕರಕೊಂಡ ಹೊಗತಿನಿ ತಡಿವಾ … ನಿಲ್ಲ ನಿಲ್ಲ… ಅಂತ ಅವನು ಬೆನ್ನತ್ತಿ ಒದರಿದರು ಅದು ಅವರ ಕಿವಿಗಿ ಬೀಳಲಿಲ. ಗಂಡ ಹೆಂಡತಿ ಓಡೋಡಿ.. ಒಂದ ಉಸಲಮ್ಯಾಲ ಮನೀಗಿ ಬಂದರು. ಮನೀಮುಂದ ಮಂದಿ ಮುಕರಿತ್ತು. ಅದನ ನೋಡಿದವಳ ಲಕ್ಕವ್ವಳ ದುಕ್ಕದ ಕಟ್ಟಿ ಒಡೆದು ನೀರಾಗಿ “ನನ್ನ ಮಗಳಿಗಿ ಏನಾತ…. ಯವ್ವಾ…. ನನ್ನ ಚಿನ್ನವ್ವಾ… ಎಲ್ಲಿ ಹ್ವಾದೆ ನನ್ನ ಕೂಸ…., ಯಾರ ಎನಂದ್ತಂತ ಹೀಂಗ ಮಾಡಕೊಂಡೆ ನನ್ನ ಚಿನ್ನವ್ವ,… ಅಯ್ಯೊ ಮಗಳ…….. ನನ್ನ ಹಡದವ್ವಾ…. ಅಂತ ಎದಿ ಎದಿ ಬಡಕೊತ ಬಾಯಿಬಾಯಿ ಬಡಕೊಂತ ಬೋರಾಡಿ ಅಳಲಾರಂಭಿಸಿದಳು. ಆದರ ಬಾಗಿಲ ಒಳಗಿನಿಂದ ಚಿಲಕಾ ಹಾಕಿತ್ತು ಗುರಪಾದ ಬಾಗಿಲಾ ಬಡ ಬಡೆದು ನುಗಿಸಿದ. ಅದಕ ಹೋಗಿ ದಡಾದಡಾ ಹಾಯ್ದ ತಲಿ ತಲಿ ಬಡಕೊಂಡ ಅತ್ತ. ಓಣ್ಯಾಗಿನ ಮಂದಿ ಹೀರೇರೆಲ್ಲ ಕೂಡಿದರು. ಮನಿಮ್ಯಾಲ ಹತ್ತಿ ಹಂಚ ತೆಗೆದು ಒಬ್ಬನ ಕೆಳಗ ಇಳಿಸಿ ಬಾಗಿಲ ಚಿಲಕಾ ತೆಗೆಯಲು ಹೇಳಿದರು ಅವ ಅದ ರೀತಿ ಮಾಡಿದ, ಬಾಗಲ ತೆರೆದದ ತಡಾ ಲಕ್ಕವ್ವ ಗುರುಪಾದ ಅಡರಾಯಿಸಿ ಒಳಗ ಹೋಗಿ ಜೋತಾಡುವ ಮಗಳ ಹೆಣಾ ತೆಕ್ಕಿ ಹಾದು ಬಿಕ್ಕಿಬಿಕ್ಕಿ ಅಳತೊಡಗಿದರು.

“ಯವ್ವಾ ನನ್ನ ಕಾಶಿ…. ನೀನಾ…? ನನ್ನ ಬಂಗಾರ ನೀನ……. ಯಾರ ಏನ ಅಂದರ ನಿನಗಾ…? ನಮ್ಮನ್ನೆಲ್ಲಾ ಬಿಟ್ಟ ಹೆಂಗಹ್ವಾದೇ…? ನನ್ನವ್ವಾ… ನಾ ಬರುತನಾ ತಡಿಯಾಕ ಆಗಲಿಲ್ಲೇನ ನಿನಗಾ….? ನನ್ನ ಬಂಗಾರ ನೀನಾ… ನನ್ನ ಮಗಳ ಬಿಟ್ಟ ಹೆಂಗ ಬದಿಕಲೆ ಯವ್ವಾ… ಮನಿಯೊಳಗ ಒಂದಿತ್ತ ಒಂದಿಲ್ಲ ಸವುನಸುದ್ದ ನಡಿಸಿಕೊಂಡ ಹೋಗತಿದ್ದೆಲ್ಲ ನನ್ನ ಬಸವ್ವಾ…, ನನ್ನ ಮಗಳ ಸತ್ತಳಲ್ಲೊ ಯಪ್ಪಾ… ನಾ ಯಾರಿಗಿ ಹೇಳಲೆ ನನ್ನವ್ವಾ… ಅಂತ ಕೂಗಿ ಕೂಗಿ ಹಾರಾಡಿಕೊಂಡು ಅಳತಿರಬೇಕಾದರೆ ಗುರುಪಾದ ಮಾರಿಗಿ ಟವಲ ಹಿಡಕೊಂಡು ಅಳತಾ ಗ್ವಾಡಿಗಿ ಆತಕೊಂಡ ಕುಳಿತ. ನಾಲ್ಕ ಜನ ಆ ಮ್ಯಾಲೆರಿ ಕುಡಗೊಲನಿಂದ ಹಗ್ಗಾ ಕೊಯ್ದು ಕೊಳ್ಳಿಗಿ ಹಾಕೊಂಡಿದ್ದ ಕಿಣಿಕಿ ಬಿಚ್ಚಿ ತೆಗೆದರು. ಹೆಣಾ ನೆಲಕ ಕುಂದಿರಿಸಿದ್ದ ತಡಾ ಓಣ್ಯಾಗಿನ ಹೆಂಗಸರು ಅಂಗಳದಾಗ ಸೇರಿ ನಿಂತ ಜನ ಬಹು ತವಕದಿಂದ ಬಸವ್ವನ ಹೆಣಾ, ಅಕೀ ಸತ್ತ ಬಗೆ ನೋಡಲು ಬಾಗಿಲ ನುಗಿಸಿ ಒಳಹೊಕ್ಕರು. ಓಣಿಯೊಳಗಿನ ಕೆಲ ಹೆಂಗಸರಿಗೆ ದುಕ್ಕ ತಡಿಯಲಾಗದೆ ಲಕ್ಕವ್ವನ ಜೋಡ ಅಳಾಕತ್ತರು.

ಬಾಳಗೊಡನ ಹ್ಯಾಂತಿ ಮಲ್ಲವ್ವ. ಲಕ್ಕವ್ವನ ಬಾಜೂಕಿಗಿ ಬಂದ ಕುಡ್ರತ ಅವಳನ್ನ ಸಮಾಧಾನ ಮಾಡುತ ಬಂಗಾರದಂತಾ ಹುಡಿಗಿವಾ. ಹಿಂಗ ಮಾಡಕೋತಾಳಂತ ಯಾರಿಗು ಕನಸ ಮನಿಸಿನಾಗು ಇಲ್ಲ ತಗಿ. ಅಕೀ ಆತ್ಮಕ ನೋವು ಆಗುವಂಗ ಆ ದೇವರು ಏನ ತಂದಿಟ್ಟನೋ ಯಾರಿಗ್ಗೊತ್ತ. ಕಡ್ಡಿಲಿ ಬರದಂತಾ ಚಲ್ವಿಕಿ ನಮ್ಮವ್ವ, ದಿನಾ ನನ್ನ ಸಂಗಾಟ ನೀರಿಗಿ ಬರೋಳ, ಅರಿವಿ ಒಗ್ಯಾಕ ಕೆರಿಗಿ ಬರೋಳು, ತನ್ನು ಬರಾ ಬರಾ ಒಗದ ಆಮ್ಯಾಲ ನನ್ನ ತಾನ ಹಿಂಡಿ ಹಾಕಾಕಿ ಎಷ್ಟ ಚಂದಾ ಮಾತಾಡಾಕಿ… ಇಂದು ಹಿಂಗಾ ಆತವಾ… ಆಕಡಿಗಿ ಎಲ್ಲಿ ಹೋಗಿದ್ದಳೋ ಏನೋ ಅಗಸಿಕಡಿಂದ ಬರಿಗೈಲಿ ಬಂದಳು. ನಾ ಪಡಸಾಲ್ಯಾಗೆ ಜ್ವಾಳಾ ಹಸಮಾಡತಾ ಕುಂತಿದ್ನಿ. ಅಕೀನ ನೋಡಿ ಕರಿದಿನಿ.. ಕೇಳಿ ಕೇಳಿದಂಗಾ ಒಳಗ ಹೋದಳು. ಹೋದಾಕಿನ ಬಾಗ್ಲಾ ಹಾಕೊಂಡಳು. ನಾ ಏನ ತಿಳಕೊಂಡಿನಿ ಜಳಕಾ ಮಾಡತಾಳೇನೋ ಅಂತ ತಿಳಿದು ಅಕೀ ಜಳಕಾ ಮಾಡಗುಡದ ಇವಷ್ಟ ಹಸಮಾಡಿಗಿ ನಿಗಿ ಇಟ್ಟ ಬರಬೇಕು. ನಾಳಿ ಅಮಾಸಿ ಬರಿ ಗೊದಿ ಬಂದಿರತಾವ. ನಿಂತ ಬೀಸಕೊಂಡ ಬಂದರಾತ ಅಂತ ಮನಿಸಿನಾಗ ಎಣಿಕಿ ಹಾಕೊಂಡೆ. ಗಿರನಿಂದ ಬಂದಮ್ಯಾಲ ನೋಡಿದರು ಇನ್ನು ಬಾಗಿಲ ತೆರದಿರಲಿಲ್ಲ. ಅಯ್ಯ್ ಶಿವನ ಒಳಗ ಕುತಗೊಂಡ ಏನ ಮಾಡಾತಾಳಿಕಿ. ಅರಿವಿ ಒಗ್ಯಾಕ ಕೆರಿಗರ ಬರತಾಳೆನಂತ ಕೇಳಬೇಕಂತ ಬಾಗಲಾ ಬಡದರಿಲ್ಲ, ಕರೆದರು ಇಲ್ಲ, ಮಲಗಿರಬೇಕಂತ ಜೊರಲೆ ಕರಿದಿನಿ. ಆಗು ಸದ್ದಿಲ್ಲ ಸಪ್ಪಳಿಲ್ಲ. ಆಮ್ಯಾಲ ಮಂದಿ ಕೂಡಿ ಮಾಡಿ ನೋಡಿದಾಗ ಗೊತ್ತಾತ….. ನೀ ಏನರ ಅಂದಿಯೇನ…? ಇಬ್ಬರ ನಡುವ ಹರ್ಯಾಗಳೆ ಏನರ ಹಾಕ್ಯಾಡಿರೆನ ಮತ್ತ… ಅಂತ ಲಕ್ಕವ್ವನ ಕೇಳಿದರ ಲಕ್ಕವ್ವ ಬಿಕ್ಕಿಬಿಕ್ಕಿ ಅಳುತ…

“ನಾ ಯಾಕ ಜಗಳಾಡಲೆ ನನ್ನವ್ವಾ… ಸ್ವಾಮಿ ಶಿವನ ಅಕೀ ಇನ್ನೊಬ್ಬರಿಗಿ ಬ್ರ ಅನ್ನಾವಳಲ್ಲ… ಗಂಡಾ ಹ್ಯಾಂತಿಗಿ ಅಕೀನ ಬುದ್ದಿ ಹೇಳೊಳು, ಅಕೀ ಹೇಳಿದಂಗಾ ನಾವಿಬ್ಬರು ಕೇಳತಿದ್ದಿವಿ… ಖರೇ ಹಿಂಗ್ಯಾಕ ಮಾಡಿ ಹ್ವಾದೆ ನನ್ನ ಹಡದವ್ವಾ…” ಅಂತ ದೇನಿಸಿಕೊಂಡು ಬಿಕ್ಕಿದಳು. ಮುಗಳಿ ಅಪ್ಪಣ್ಣಾ ಗುರುಪಾದನ ಸ್ವಲ್ಪ ಬಾಜೂಕಿಗಿ ಕರಕೊಂಡ ಹೋಗಿ,

“ಗುರಪಾದ ಆಗೋದ ಆಗಿಹೋತು ಮುಂದಿನ ಕಾರ್ಯದ ಮಾಡಬೇಕು. ಬೀಗರ ಯಾವ್ಯಾವೂರಾಗ ಅದಾರ ಹೇಳು… ಹೋಲೇರನ ಬಿಡತೀನಿ” ಅಂತ ಹೇಳಿ ಮಾಹಿತಿ ಪಡೆದು ಅವನ ಬೀಗರಿದ್ದ ಊರಿಗೆಲ್ಲ ಸುದ್ದಿ ತಿಳಿಸಲು ಆಳು ಹೋದರು. ಊರಿಗೆ ಸುದ್ದಿ ತಿಳಿದು ಜನಾ ಹೌಹಾರಿದರು. ಕೆಲವರು ಆತಂಕ, ದುಕ್ಕ ಪಟ್ಟರು. ಇನ್ನ ಕೆಲವರು ಛೀಮಾರಿ ಹಾಕಿದರು “ಸಂಬಾಯತರಂಗ ಯಾರ ಕಾಣತಾರೊ ಹುಳಕ ಡೊಬ್ಬಿಯೆಲ್ಲಾ ಅವರ ಹಂತ್ಯಾಕ ಇರತಾವ. ಯಾವನ ಜೋಡ ಇದ್ದಳೋ.. ಯಾರಿಗ್ಗೊತ್ತ. ಸಿಕ್ಕಿಬಿದ್ದಿರಬೇಕು ಬೋಸಡಿ. ಮಾರಿ ಹೆಂಗ ತೋರಿಸೋದಿನ್ನಾ ಅಂತ ಬುಗುಲ ಬೀಳುತಲೆ ಹಾದಿ ಯಾವ ಇಲ್ಲಾಲಾ ಅದಕ ಹಿಂಗ ಮಾಡಕೊಂಡಿರಬೇಕು…. ಅಂತ ಕೆಲವರು ಮಾತಾಡಿಕೊಂಡರು.

ಗೋರಿ ಹಡ್ಡಾಕ ನಾಲ್ಕ ಹುಡುಗರನ ಜೋಡಿಸಿ ಒಂದ ತೆಂಗಿನಕಾಯಿ ಗುದ್ದಲಿ, ಪಿಕಾಸಿ, ಸಣಿಕಿ, ಎರಡ ಸಿಂದಿ ಬುಟ್ಟಿ, ಮ್ಯಾಲ ಹತ್ತ ರೂಪಾಯಿ, ಒಂದ ಕೊಳಗ ಸೆರೆಕೊಟ್ಟ ತಾಸಿನಾಗ ಕುಣಿ ತಯ್ಯಾರಾಗಬೇಕಂತ ಹೇಳಿಕಳಿಸಿದರು. ಈ ವಿಷಯದಲಿ ಗುರಲಿಂಗನ ಮುಂದಾಳುತ್ವ ವಹಿಸಿದ್ದ ಅಲ್ಲಿದ್ದವರೆಲ್ಲ ಎನೆ ಮಾಡಬೇಕಾದರು ಅವನ ಕೇಳಿಯೇ ಮಾಡುತ್ತಿದ್ದರು. ಎಲ್ಲರಿಗು ಒಂದೊಂದು ಕೆಲಸ ನಿರ್ವಹಿಸಿ, ಕಟ್ಟಿಗಿ ಬಂದು ಬೀಡಿಯೊಂದನ್ನು ಹೊತ್ತಿಸಿ ಹೊಗಿ ಬಿಡುತ ಕುಳಿತ.

*****

ಎಲ್ಲಾ ಸಂಬಂಧಿಕರು ಬಂದರು, ಗೋರಿಯು ತಯ್ಯಾರಾಗಿತ್ತ. ಇನ್ನೇನ ಹೆಣಾ ಎತ್ತಬೇಕು ಅಂತನ್ನುವಾಗ ಆಯಿಬಸ್ಯಾ ಗೌಡರ ಮನೀಗಿ ಓಡಕೊಂತ ಓಡಕೊಂತ ಬಂದ. ಬಂದು ಗೌಡರ ಮನಿ ಒಳ ಹೋಗಿತ್ತಿದ್ದಂತೆ ಹಿಂದಿನಿಂದ ನಿಪ್ಪಾಣಿ ರಾಜು, ಬ್ಯಾಡರ ಪರಮೇಸಿ ಇಬ್ಬರು ಇಳಬಂದರು. ಗೌಡರು ತಮ್ಮ ಆರಾಮ ಕುರ್ಚಿಲಿ ಕುಂತು ಇವತ್ತಿನ ಪೇಪರ ನೋಡುತಿದ್ದರು. ಆಯಿ ಬಸ್ಯಾ ದನೇವರಿ ಓಡಕೊಂತ ಬಂದು ಡೊಗ್ಗಾಲ ಒಗೆದು ಅವರ ಮುಂದ ಕುಳಿತು ನಿಟ್ಟುಸಿರ ಬಿಟ್ಟ, ಉಸಿರ ತೆಳಗ ಮ್ಯಾಲ ಆಗತಿತ್ತು. ಗೌಡರು ಹಡಬಡಿಸಿ ಆಯಿಬಸ್ಯಾನ ನೋಡಿ ದಿಂಬಡೆದರು. “ಗೌಡರ ಗಾತ ಆತರಿ…. ನಮ್ಮ ಕುಲಾ ಕೆಟ್ಟ ಕೆರಾ ಹಿಡಿತರಿ. ಹ್ಯಾಂಗರ ಮಾಡಿ ಧರ್ಮಾ ಕಾಯರಿ…. ನಿಮ್ಮ ಕಾಲಿಗಿ ಬೀಳತೇನ, ಊರಾಗ ಬಾಳ ಕೆಟ್ಟ ಬೇನಾಮಿ ಕೆಲಸ ನಡದೈತಿ. ಇಲ್ಲದಿರ ನಮ್ಮ ಬಗ್ಗೆ ನಮಗ ನೆಲಿ ಇಲ್ಲದಂಗ ಆಗತೈತಿರಿ….” ಅಂದು ಎದುಸಿರ ಬಿಟ್ಟ. ಇಷ್ಟ ಮಾತಾಡು ಹೊತ್ತಿಗಿ ಎದಿ ತುಂಬಿ ಬಂದು ಮಾತ ನಿಲ್ಲಿಸಿದ. ಗೌಡರು ಮಾರಿ ಮುಂದ ಹಿಡಕೊಂಡಿದ್ದ ಪೇಪರ ಬಾಜೂಕಿಗ ಇಟ್ಟು,
“ಅಂತಾದ್ದ ಏನಾತೋ.. ಹಡ್ಸಿಮಗನ…. ಊರಾಗ ಸಮ್ನ ಕುಂಡಾಗಿಲ್ಲ ನೋಡಿ ಈ ಮಂದಿ. ಯಾವನದರ ಮುಕಳಿರ ಚೂಟಿ ಜಗಳಾ ತೆಗೆದ ಇರತಾರ. ಕುಲಾ ಕೆಟ್ಟ ಹೊಗುವಂತಾ ಕೆಲಸ ಏನ ನಡೀತು ಅದನ ಬೊಗಳಲೆ.. ಮಿಂಡ್ರಿಕೆ..” ಅಂತ ಸಿಡಿಸಿಡಿ ಮಾಡಿದರು. ಇಷ್ಟರಾಗ ತುಸು ಸುಧಾರಿಸಿಕೊಂಡಿದ್ದ ಆಯಿಬಸ್ಯಾ ಬಾಯಿ ಒರಿಸಿಕೊಂಡು ಹೆಗಲಮ್ಯಾಲ ಟವಲ ಎಳಕೊಂಡು “ನೀವ ಚಾವಡಿತನಕಾ ಬರ್ರೀ. ಅಲ್ಲೇ ಸಾವಕಾರ್ರು, ಕುಲಕರ್ಣ್ಯಾರು ಎಲ್ಲಾ ಕೂಡ್ಯಾರ. ಇದರ ಬಗ್ಗೆನ ಚರ್ಚಾ ಮಾಡಾತಾರ” ಅಂದ. ಗೌಡರು ಗಾಬರಿಯಾಗಿ ಏನೋ ದುರಂತ ನಡದದ ಅಂತ ತಿಳಿದು ಗಡಬಡಿಸಿ ಪೇಪರ ಬಿಸಾಕಿ “ಹೋಂ ನಡೀಲೆ ಅಂತ ಹೇಳಿ ಕಾಲ್ಮರಿ ಮೆಟಗೊಂಡು ಕೈಯಾಗ ಬಿಸಾಡಿದ ಪೇಪರ ಮತ್ತ ಹಿಡಕೊಂಡು, ಪಟಗಾ ಸುದಮಾಡಿಕೊಂಡ ಆಯಿ ಬಸ್ಯಾನ ಹಿಂದಿನಿಂದ ನಡೆದರು.. ನಿಪ್ಪಾಣಿ ರಾಜು, ಬ್ಯಾಡರ ಪರಮೇಶಿಗೆ ನೀವು ಅಲ್ಲೇ ಬರ್ರಿ. ಏನೈತಿ ಮಾತಾಡೋನಂತ ಹೇಳಿ ಹೊರ ಬಂದರು. ಇವತ್ತ ಊರ ಶಾಂತ ಐತಿ ಅನ್ನಂಗಿಲ್ಲ. ಯಾವನರೆ ಮಗಾ ಕಿತಿಬಿ ಮಾಡೆ ಇರತಾನ. ಮೀಸಿ ಬಂದಾವರೆಲ್ಲ ಯಾಸಿ ದೀಡಿ ಮಾತಾಡತಾ ಹೂಂಕರಿಸುತ ಟಬರಲೆ ತಿರಿಗಾಡತಿರಬೇಕಾದರೆ ಯಾರಿಗಿ ಯಾರ ಹೆದರವರು….? ಜಗಳ ಆಗದ ಇನ್ನೇನ ಮಾಡತಾವ.. ನಾಲ್ಕ ದುಡ್ಡ ಮಾಡಿದವರೆಲ್ಲ ಹೀರೇರ ಆಗಾಕ ಹೋಗತಾರ, ಆಯಿ ಬಸ್ಯಾ ಸುದ್ದಿ ಹೇಳಿದ ಪೂರ್ತಿನು ಹೇಳದ ತಲ್ಯಾಗ ಹುಳಾ ಕೆಡಿವಿ ಬಿಟ್ಟ ಸೂಳಿಮಗಾ….” ಹಿಂಗ ಮನಸಿನೊಳಗ ಗೌಡರು ತಳಮಳಿಸುತ ಹೆಣಗಾಡುತ ಎದುರಿಗೆ ಸಿಕ್ಕವರನ್ನು ಕ್ಯಾಕರಿಸಿ ಉಗುಳುತ ಚಾವಡಿಗಿ ಬಂದರು.

ಚಾವಡ್ಯಾಗ ಸಾವಕಾರ ರುದ್ರಪ್ಪಾ, ಕುಲಕರ್ಣಿ ದತ್ತು, ಹಳಬ, ಪ್ಯಾಟಿಸಿವನಿಂಗ, ಮೂಲಿಮನಿ ನಿಂಗಪ್ಪ ಕುಳಿತಿದ್ದರು. ಗೌಡರು ಕುಲಕರ್ಣ್ಯಾರ ನಡುವ ಜಾಗಾ ಮಾಡಿಕೊಂಡು ಹೋಗಿ ಕುಂತರು. ಬಹುಶಾ ಅಲ್ಲಿ ಸೇರಿದವರೆಲ್ಲ ಗೌಡರು ಬರೊತನ ಕಾದಿದ್ದರಂಬಂತೆ ಕಾಣುತಿತ್ತು. ಅದನ್ನು ಅವರ ಮೇಲಿನ ಚಿಂತಿ ಗೆರೆಗೋಳ ಹೇಳುತಿದ್ದವು. ಕುಲಕರ್ಣಿ(ದತ್ತು ಸುದ್ದಿ ಹೆಂಗ ಹೇಳೋದಂತ ಚಿಂತಿ ಮಾಡುತಿದ್ದ. ಆಯಿ ಬಸ್ಯಾ ಆಕಳಿಸುತ ಗೌಡರನ ನೋಡಿದ ಗೌಡರು ಅವನತ್ತ ನೋಡಿ. “ಅದೇನೋ ಕುಲಾ ಕೆಡಾತೈತಿ; ಧರ್ಮ ಹಾಳಾಗಾತೈತಿ ಅಂತ ಅಂದೆಲ್ಲ, ಬಿಡಿಸಿ ಹೇಳು” ಅಂದರು. ಈ ಮಾತಿಗಾಗಿಯೇ ಕಾದು ಕುಂತಿದ್ದವ ಬಾಯಿ ತೆಗೆದು ಹೇಳಬೇಕೆನ್ನುವಷ್ಟರಲ್ಲಿ ಕುಕಲರ್ಣಿ ದತ್ತು ಆಯಿ ಬಸ್ಯಾನಿಗೆ ಸುಮ್ನಿರು ನಾ ಹೇಳ್ತಿನಿ ಎಂಬಂತೆ ಕಣ್ನಸನ್ನೆ ಮಾಡಿದ. “ಅದೇನಾತು ಅಂದರ ಇವತ್ತ ಬೆಳಿಗ್ಗಿ ಹತ್ತ ಹತ್ತುವರಿಗೆಲ್ಲ ಆಯಿಬಸ್ಯಾ ಮರವ್ವನ ಗುಡಿಗಿ ಜಳಕಾ ಮಾಡಾಕ ಹೋಗಿದಾನ. ಮಠದ ಹೊಲದಾಗ ಏನೋ ಸರ್ ಬರ್ ಅಂತ ಸಪ್ಪಳ ಬಂತಂತ… ಒಳಗ ಹೋಗಿ ಬಗ್ಗಿ ನೋಡತಾನ ಅಂಕಲಿಗ್ಯಾರ ಹುಡಿಗಿ ಬಸವ್ವ ಅದ ಇಂದ ಉರ್ಲ ಹಾಕೊಂಡ ಸತ್ತಳಲ್ಲ ಅದ ಹುಡಿಗಿ ಮತ್ತ ನಮ್ಮ ಹುಸೇನಿ ಮಗಾ ಮುಸ್ತಪ ಬೆಂಗಳೂರಿಗಿ ನವಕ್ರಿ ಮಾಡತೇನಂತ ರೊಕ್ಕಾ ತುಡುಗ ಮಾಡಕೊಂಡ ಹೋಗಿದ್ದನಲ್ಲ ಆ ಹುಡುಗ ಇಬ್ಬರು ಸಿಕ್ಕಬಿದ್ದಾರ… ಇವ ನೋಡಿದವನ ಯಾವ್ಯಂವರೋ ಸೂಳಿಮಕ್ಕಳ್ರಾ ಅಂತ ಬಾಯಿ ಮಾಡಿ ಕೈಗಿ ಸಿಕ್ಕ ಕಲ್ಲ ಒಗೆದಾನ ಅಷ್ಟರಾಗ ಅವ ಜಿಗಿದ ಓಡಿ ಹೋಗಿದಾನ. ಹುಡಿಗಿ ಇಕಿ ಒಬಾಕಿನ ಅಳಕೊಂತ ನಿಂತಳು. ಇವ ಅಕೀಗಿ ಏನೂ ಅಂದಿಲ್ಲ ಆಡಿಲ್ಲ… ನಡಿ ಮನಿಗಿ ಸಂಜೀಕ ನಿಮ್ಮಪ್ಪನ ಹಂತ್ಯಾಕ ಬರ್ತಿನಿ… ಅಂದಾನ. ಅಕೀ ಮನೀಕಡೇ ಹೋದ ಮ್ಯಾಲ ಬಾವ್ಯಾಗ ಜಳಕಾ ಮಾಡಿ.. ನಮ್ಮ ಮನೀಗಿ ಬಂದ ಸುದ್ದಿ ಹೇಳಿದ, ಸಾವಕಾರ್ರಿಗು ಹೇಳಿದ.. ನಾವು ಗುರಪಾದನ ಕರಿಸಿ ಹುಡಿಗಿ ಹಾದಿ ಬಿಡಂಗ ಕಾನಾತೈತಿ. ಗಡಾನ ಒಂದ ಗಂಡ ನೋಡಿ ಕಟ್ಟಿಬಿಡು ಅಂತ ಮಾಡಿದ್ವಿ. ಎಲ್ಲಾ ಆಗಿತ್ತೀ ಸುದ್ದಿ ನಮ್ಮ ಒಳಗ ಇತ್ತು. ಆದರ ಆ ಹುಡುಗಿ ಸಾಯತಾಳಂತ ಯಾರಿಗಿ ಗೊತ್ತಿರಲಿಲ್ಲಕಿ. ಸಾಯದಿದ್ರ ಇದೆಲ್ಲ ರಾಡಿ ಹೊರಗ ಬರತಿರಲಿಲ್ಲ ಅಂದ. ಗೌಡರಿಗಿ ಸಿಟ್ಟು ಇನ್ನು ಹೆಚ್ಚಾತು. ಬೆಳಿಗ್ಗೆ ಬೆಳಿಗ್ಗೆ ಸತ್ತ ಸುದ್ದಿ. ಈಗ ಹಾದರದ ಸುದ್ದಿ. ಇದರಿಂದ ಇದರಿಂದ ಧರ್ಮಾ ಕೆಡತೈತೆಂತ ಚಾವಡಿಗಿ ಸೇರಿಸಿರೋ ಬುದ್ದಿವಂತಿಕೆ ನೋಡಿ “ಏನ ಹುಚ್ಚ ಸೂಳಿಮಕ್ಕಳಿದಿರಲೇ……. ಎಲ್ಲಾ ಮುಗದ ಮ್ಯಾಲ ಇನ್ನೇನ ಉಳದೈತಿ ಅಂತ ನಮ್ಮನ ಕೂಡಿಸಿದಿರಿ….? ಅಕೀ ಸಾವಿನ ಜೋಡ ಆ ವಿಚಾರು ಸತ್ತ ಹೋಗಿತ್ತ. ಅದನ ಯಾಕ ಹಡ್ಡಿ ಹಡ್ಡಿ ತೆಗ್ಯಾಕ ಹೋದಿರಿ….?” ಅಂತ ಕಿಡಿ ಕಾರಿದರು. ಗೌಡರು ಹಿಂಗ ಕವ್ವಕಂತ ಸಿಟ್ಟಿಗಿ ಬಂದುದ ನೊಡಿ ಎಲ್ಲಾರಿಗು ಕುಂಡಿ ಉರಿಯಿತು, ಕುಲಕಣ್ಣಿ ದತ್ತು ಕಸಿವಿಸಿಗೊಂಡ, “ಗೌಡರ ನಾ ಏನ ಹೇಳಾಕತ್ತಿನಿ ಅದನ್ನಾರ ಕೇಳಿಸಿಕೋರಲಾ…? ಆಮ್ಯಾಲ ನೀವ ಮಾತಾಡವಲ್ಲರ್ಯಾಕ” ಅಂತ ಸಮಜಾಯಿಸಲು ಯತ್ನಿಸಿದ. ಗೌಡರು ಕಾಲ ಮ್ಯಾಲ ಕಾಲ ಹಾಕಿಕೊಂಡು ಕುಳಿತು “ಆಗಲಿ ನಿಮ್ಮಂಗ ಹೋಗೋಣು ಮೊದಲ ನಿಮ್ಮದ ಮುಗಿಲಿ, ನಂತರ ನನ್ನ ಪುರಾಣ ಬಿಚ್ಚತಿನಂತ” ಅಂದರು.

“ಮೂಲ ಹಕಿಕತ ಏನಂದರ ಹುಡಿಗಿ ಆ ಮುಸಲರ ಹುಡುಗನ ಜೋಡ ಬಾಳ ದಿನದಿಂದ ಸಂಬಂದ ಇಟಗೊಂಡಾಳ, ಅಷ್ಟ ಅಲ್ಲ ಈಗ ಮೂರ ತಿಂಗಳ ಹೊಟ್ಟಿಲೆನು ಅದಾಳ. ಮುಸಲಿಂರಾವಗ ನಮ್ಮ ಧರ್ಮದ ಹುಡಿಗಿ ಬಸರ ಆಗ್ಯಾಳಂದರ ಆ ಹುಡಿಗಿ ನಮ್ಮ ಧರ್ಮಕ ಹೆಂಗ ಸೇರತಾಳ, ಇಷ್ಟಕೂ ಅವ್ರಿಬ್ರೂ ಕಳ್ಳತನದಿಂದನ ಮದಿವಿ ಆಗತಿದ್ದರೂ ಅಂದರ ಆಗ ಹುಡಿಗಿ ಯಾವ ಧರ್ಮಕ ಸೇರತಿದ್ದಳು. ಬ್ಯಾಡಾ ಎಲ್ಲಾರ ಸಮಕ್ಷಮ ಮದಿವಿ ಆಗಿದಾಳಂದರು ಮುಸ್ಲೀಂಗ ಬಸರಾದಾಕಿನ ಹಿಂದೂ ಪದ್ಧತಿ ಪ್ರಕಾರ ಹೆಂಗ ಮಣ್ಣ ಮಾಡತೀರಿ….. ಇದು ನಮ್ಮ ಈಗಿನ ಪ್ರಶನಾ….? ಹಂಗಾಗಿ ಹುಡುಗಿ ಹೆಣ ನಮ್ಮ ಧರ್ಮದ ಪ್ರಕಾರ ಹುಗಿಯೊದ ಬ್ಯಾಡ. ಮುಸ್ಲೀಂರ ಅದಾರಲ್ಲ ಅವರನ ಕರಿಸಿ ಹೀಂಗಿಂಗ ಅಂತ ತಿಳಿಸಿ ಹೇಳಿ ಮುಗಿಸಿ ಬಿಡ್ರಿ, ಇಲ್ಲದಿದ್ದರ ಊರಾಗ ಕೆಟ್ಟ ಹೆಸರ ಬರತಾವ” ಅಂದ. ಗೌಡರು ದತ್ತುನ ಮಾತ ಕೇಳಿ ‘ಇದರಾಗೇನೈತಿ ಅಂತ ಹಾರಿಸಿ ಬಿಡಾತಿದ್ದೆ, ಇಟ್ಟೆಲ್ಲ ಒಳಗುಟ್ಟೈತಿ ಅಂತ ಗೊತ್ತ ಇಲ್ಲ ನೋಡು. ಇದ ವಿಚಾರ ಮಾಡಬೇಕಾದ ಮಾತಿದು ಹೌದು’ ಎಂಬಂತೆ ತಲೆಯಾಡಿಸಿದರು

“ನೋಡ್ರೆಪಾ ಸಣ್ಣ ಹುಡುಗ್ರು ಅಂತೀವಿ, ಎಂತಾ ಎತ್ತ ಬಾರದಂತಾ ಕೆಲಸಾ ಮಾಡಿ ಒಗದಾರ ನೋಡು, ಇವೆಲ್ಲಾ ನಮ್ಮ ತಲೀಗಿ ಕೆಟ್ಟ ಹೆಸರು ತರುವಂತಾ ವಿಚಾರ ಮೊದಲ ಗುರುಪಾದನ ಕರಿಸಿ ಈ ಸುದ್ದಿ ಹೇಳಬೇಕ. ಹಾಂಗ ಹೆಣಾ ಎಬ್ಬಿಸಬಾರದಂತ ಮನೀಗಿ ಹೋಗಿ ತಿಳಿಸಿ ಬಾ. ಹಳಬಾ ಬಸ್ಯಾ ನೀವಿಬ್ಬರು ಕಾಶಿಮ ಸಾಬಗ, ರಮಜಾನಗ ಗೌಡರು ಚಾವಡ್ಯಾಗ ಕುಂತಾರ, ಕರ್ಯಾಕತ್ತಾರ, ಬಾಳ ಅರ್ಜಂಟ ಅಂತ ಹೇಳಿ ಕರಕೊಂಡ ಬಾ… ಎಂದು ಎಬ್ಬಿಸಿ ಕಳಿಸಿದರು. ಕುಡಿದ ಪಂಚರು ಗಂಟಿಕ್ಕಿದ ಮುಖಗೋಳ ಸವ್ಲಪ್ ಬಿಡಿಸಿದಂಗಾದವು. ದತ್ತುಗು ಸ್ವಲ್ಪ ನೀರಾಳ ಆತು. ಸಾವಕಾರ್ರು ಗೌಡರ ಮಾತಿಗಿ ಒಪ್ಪಿಗೆ ಸೂಚಿಸಿ ಸುಮ್ಮನಾದರು. ಆಮ್ಯಾಲ ಪ್ಯಾಟಿ ಶಿವಲಿಂಗಪ್ಪನ ಕರೆದು “ಇದು ಲಗ್ಗ ಬಗಿ ಹರಿವಂಗ ಕಾಣವಲ್ಲದು. ಇಂದ ಶನಿವಾರ ಉಪವಾಸ ಬ್ಯಾರೆ ನಮ್ಮ ಮನೀಗಿ ಯಾರನರ ಕಳಿಸಿ ನಾಕ ಸಿಂಗಲ ಚಾ ಮಾಡಿಕೊಂಡಂತ ಹೇಳಿ ಕಳಿಸು. ಹಾಂಗ ಬರುವಾಗ ವಜ್ರ್ಯಾನ ಅಂಗಡ್ಯಾಗ ಬಿಸ್ಕಿಟ ಪುಡಕಾ ಒಂದ ತಗೋಂದ ಬಾ..” ಅಂದರು. “ನಿಂಗಪ್ಪಾ ನೀನು ಹಿಂಬಾಲ ಹೋಗಿ ಕಾಶಿಮನ ಕರಕೊಂಡ ಬರೋಗರ್ರಿ.. ಬರಲಿಲ್ಲಂದ್ರ ನಾಕ ಮಂದಿಯಾಗಿ ಹೊತಗೊಂಡ ಬರ್ರಿ. ಮುಂದ ಬಂದುದಕ ನಾವದೇವ” ಅಂದರು. ನಿಂಗಪ್ಪ ಒಂದ ಹಾರಿಕಿಗಿ ಚಾವಡಿ ಕಟ್ಟಿ ಇಳದವನ ತಲೀಗಿ ಟವಲ ಸುತಗೊಂತ ಓಡಿಹೋದ.

ನನ್ನ ಮಗಳ ಸತ್ತಳಲ್ಲೊ ಯಪ್ಪಾ… ನಾ ಯಾರಿಗಿ ಹೇಳಲೆ ನನ್ನವ್ವಾ… ಅಂತ ಕೂಗಿ ಕೂಗಿ ಹಾರಾಡಿಕೊಂಡು ಅಳತಿರಬೇಕಾದರೆ ಗುರುಪಾದ ಮಾರಿಗಿ ಟವಲ ಹಿಡಕೊಂಡು ಅಳತಾ ಗ್ವಾಡಿಗಿ ಆತಕೊಂಡ ಕುಳಿತ.

ಕಾಶೀಮಸಾಬ, ರಮಜಾನ ಅಲಿಸಾಬ, ಗುಡುಸಾಬ ಮೊಕಾಶಿ ಅಕಬರ, ಒಂದೇಳೇಂಟ ಮಂದಿ ಮುಸಲಮಾನರೆಲ್ಲ ಕೂಡಿಕೊಂಡ ಚಾವಡಿಗಿ ಬಂದರು. ಹಳಬ ಹೆಣಾ ಎಬಿಸಬಾರದಂತ ಸೇರಿದ ಮಂದಿಯೊಳಗ ಸುದ್ದಿ ಹೇಳಿ ಹಿಂಬಾಲಕ ಗುರುಪಾದನ ಕರಕೊಂಡು ಚಾವಡಿಗಿ ಬಂದ. ಹಲಬಾ ಗೌಡನ ಮಾತು ತಿಳಿಸಿ ಖರೆ ಅನಿಸಿಕೊಂಡ ಆ ಮಾತೇನು ಬ್ಯಾರೆ ಬಿಡು. ಆದರ ಸೇರಿದ ಮಂದಿಗಿ ದಿಗಿಲ ಬಿತ್ತು. ಅಲ್ಲಿವನ ಹೆಂತಿ ಹಡ್ಡಿ ಹೆಣಾ ಯಾಕ ಎತ್ತಬ್ಯಾಡ ಅಂತಾರೀವರಾ…? ಅಂತ ಕಬರಿಗೆಟ್ಟ ಹೌಹಾರಿದರು…. ಪೋಲಿಸರಿಗಿ ಯಾರರ ದೂರ, ಮೂಕ ಅರ್ಜಿ ಗಿರ್ಜಿ ಕೊಟ್ಟಾರೇನ, ಮತ್ತ….. ಅದಕ ಹೆಣಾ ಹಂಗಾ ಸಬಳ ಎತ್ತಾಕ ಬರಾಂಗಿಲ್ಲಂತಂದುಕೋದು ಇಲ್ಲೆ ಪಂಚನಾಮೆ ಮಾಡತಾರೋ ಏನೋ… ಆದರು ಪೋಲಿಸರಿಗಿ ಸುದ್ದಿ ಮುಟ್ಟಾಕ ಶಖ್ಯ ಇಲ್ಲ.. ಯಾಕಂತಿವಂದರ ಊರಾಗ ಗೌಡರ ಇರಬೇಕಾದರ ಹಂತಾ ಬಂಡ ಉಸಾಬರಿಗಿ ಯಾಂವ ಕೈ ಹಾಕಾಂಗಿಲ್ಲ. ಆದರು ಊರಾಗ ಬಂಡಿ ತುಂಬ ಹೀರೆರ ಅದಾರ. ಇಂತ ಒಂದ ಸಣ್ಣ ತಪ್ಪ ಮುಚ್ಚಿ ಹಾಕಾಕ ಆಗುದುಲ್ಲ ಅಂದರ ಇದೆಂತಾ ಊರಾ…? ಇವರೆಂತಾ ಪಂಚರಾ …? ಇದರ ಹಿಂದ ಇದಕ್ಕಿನ್ನ ಸುಮಾರ ಕೇಸಗೋಳನೆಲ್ಲಾ ಮುಚ್ಚಿ ಹಾಕಿದಾರ. ಅದನ ನೋಡಿದರ ಇದು ದೊಡ್ಡದ ಅಂತ ನನಗೇನ ಅನಿಸವಲ್ಲದು ಅಂತ ಹಿಂಗ ಮಣ್ಣಿಗಿ ಕೂಡಿದ ಮಂದಿಯೆಲ್ಲ ತಮ್ಮತಮ್ಮೋಳಗ ಮಾತಾಡತೊಡಗಿದರು. ಇಲ್ಲಿ ಕುಂತ ಏನ ಕಿಸಿಯೊದೈತಿ..? ಚಾವಡಿತನಕಾ ಹೋಗೆ ಬರೋಣ ನಡೀರಿ ಅಂತ ಕುಂಡಿ ಜಾಡಿಸಿಕೊಳ್ಳುತ ಎದ್ದು ಬಂದರು.

ಚಾವಡ್ಯಾಗ ಸೇರಿದ ಹಿರೇರನ ನೋಡಿ, ಅವರ ಮುಖವನ್ನು ತದೇಕ ಚಿತ್ತದಿಂದ ಆಲೊಚಿಸುತಿದ್ದ ಜನರಿಗೆ ಇವರು ಹಿಂಗಯಾಕ ಕೂಡಿದಾರ ಏನ ಸುದ್ದಿ ಇದ್ದರು, ಇನ್ನು ಯಾಕ ಚರ್ಚಾ ಮಾಡವಲ್ಲರು, ಅದನ ಲಗ್ಗ ಮಂದಿಗಿ ಯಾಕ ಹೇಳವಲ್ಲರು ಅಂತ ಕುಂತ ಮಂದಿ ಚಡಪಡಿಸತೊಡಗಿತ್ತು. ಹೆಣಾ ಮಣ್ಣಿಗಿ ಒಯ್ಯಬ್ಯಾಡ ಅಂತ ಹೇಳಿದ್ದು ಮಾತು ಜನರಲ್ಲಿ ಅತ್ಯಂತ ಸೋಜಿಗ ತಂದಿತ್ತು.

ಒಬ್ಬರೊಳಗೊಬ್ಬರು ಪಿಸಿಪಿಸಿ ಅಂತ ಗುಜುಗುಜು ಮಾತಾಡಿದರು. ಇನ್ನಷ್ಟ ಮಂದಿ ಚಾವಡಿ ಕಟ್ಟಿ ಹತ್ತಿ ಕುಳಿತರು. ವಿಷಯ ಪ್ರಸ್ತಾಪ ಶುರು ಆಯ್ತು. ಗೌಡು ದತ್ತುಗ ಕಣ್ಣಸನ್ನಿ ಮಾಡಿ ಮಹಮ್ಮದ ಅಲಿಗಿ ಸುದ್ದಿ ಹೇಳು ಅಂತ ಹೇಳಿದರು.

ದತ್ತು ಬಗಲ ಕಿಸೆಯೊಳಗಿನ ಬಿಳಿ ಅರಿವಿಯಿಂದ ಮೂಗ ಒರಿಸಿಕೊಳ್ಳುತ “ಅಲಿ ಸಾಹೇಬರ .. ಗುರುಪಾದನ ಮಗಳ ಬಸವ್ವ ಅನ್ನು ಹುಡಿಗಿ ಸತ್ತ ಸುದ್ದಿ ನಿಮಗೂ ಗೊತ್ತೈತಿ.. ಹೌದಿಲ್ಲ……?” ಕೇಳಿದ.

“ಹೌದ ಸಾಹೇಬರ… ಸಬೇರೇ.. ಸಬೇರೇ… ನಮಗ ಊರ್ಲ ಹಾಕೊಂಡ ಸತ್ತಳಂತ ಆ ಚೋಕರಿನ ಹೌದಿಲ್ಲ, ಯಾ ಅಲ್ಲಾ… ಗುರಪಾದ ಜೈಸಾ ಆದಿಮಿಕೊ ಐಸಾ ಹಾಲತ ನಹಿ ಆನೆಕತಾ…… ಗುರುಪಾದ ದೇವರಂತಾ ಮನಿಷ್ಯಾ… ಯಾವ ಸೈತಾನ ಏನ ಅಂದನೋ.. ಪಾಪ.. ಹುಡಿಗಿಗಿ ಹಿಂಗಾಗಬಾರದಿತ್ತು..” ಎಂದು ತನ್ನ ದುಕ್ಕವನ್ನು ಹಾಗು ಕಳಕಳಿಯನ್ನು ತೋರ್ಪಡಿಸಿದ. ಅವನ ಜೊತೆ ಬಂದಿದ್ದ ಸಂಗಡಿಗರು ಸಹ ಅದನ್ನೆ ಅನುಮೋದಿಸಿದರು.

“ಸಾಹೇಬರ ನಾವ ಈ ಸುದ್ದಿ ಮಾತಾಡಾಕ ನಿಮ್ಮನ್ನ ನಿಮ್ಮ ಮಂದಿನ ಇಲ್ಲಿಗಿ ಕರಿಸಿದಿವಿ… ಇದು ಧರ್ಮಕ ಸಂಬಂದ ಪಡುವ ಸುದ್ದು. ಕದ್ದಾ ಮುಚ್ಚಿ ಮಾಡಾಕ ಸುಳ್ಳ ಹೇಳಾಕ ಇದೇನ ಮದಿವಿಯಲ್ಲ. ಯಾಕಂದರ ತಪ್ಪಾ ಯಾರ ಮಾಡಲಿ ಅದು ತಪ್ಪ ತಪ್ಪ. ಈ ತಪ್ಪ ಊರಿನ ಹುಡಗ ಹುಡಿಗೆರಿಗೆಲ್ಲ ಊರಿನ ಪಾಲಕರಿಗೆಲ್ಲ ಒಂದ ಎಚ್ಚರಿಕಿ ಅನಕೊರಿಲಾ.. ಅದಕ ಈ ಚಾವಡಿ ಸೇರಿಸಿದಿವ…” ದತ್ತುನ ಮಾತ ಕೇಳಿ ಗೌಡರಿಗಿ ತಳಮಳ ಶುರುವಾತ.. ಸಿಡಿಮಾಡುತ.. “ನೀ ಇಟ ಇದ್ದದ ಪುರಾಣಮಾಡಿ ಹೇಳಬ್ಯಾಡ.. ಸುದ್ದಿ ಏನ್ಯತಿ ಅದನ ಹಿಡತದಾಗ ಹೇಳಿಬಿಡ. ಅಲ್ಲಿ ಹೆಣಾ ಕಾಕೊಂತ ಅವರು ಕುಂದರೊದು ಇಲ್ಲಿ ಸೇರಿದ ಮಂದಿ ನಮನ ಹೆಣಾ ಮಾಡಿ ಒಗಿತಾರ” ಎಂದು ಕವಕ್ಕಂತ ಹರಿಹಾಯ್ದಾಗ ದತ್ತುಗ ಒಂದ ಸ್ವಲಪ್ ಗೊಂದಲಾತು. “ಏನ ಹುಚ್ಚ ಬಣವಿ ಗೌಡಲೇ, ಇಂವಾ” ಅಂತ ಮನಿಸ್ಸಿನಾಗ ಅನಕೊಂಡು “ಅದಕ ಬರಾತೇನ್ರಿ…” ಅಂತಂದು ಮುಂದವರಿಸಿದ. “ಸಾಹೇಬರ, ಹುಡಿಗಿ ಸಾವಿನ ಹಿಂದ ಒಂದ ಘಟನಾ ಅದ, ಗುರುಪಾದನ ಮಗಳ ಈಗ ಸತ್ತಳಲ್ಲ ಬಸವ್ವ ಅನ್ನು ಹುಡಿಗಿ ನಿಮ್ಮ ಪಾಚ್ಚಾಪುರ ಕಾಶೀಮಸಾಬನ ಮಗಾ ಮುಸ್ತಪಾಗು ಬಹಳ ದಿನದಿಂದ ವಗೆತಾನ ಇತ್ತು. ಇಬ್ಬರು ತುಡಿಗೆಲಿ ಕೂಡತಿದ್ದರು, ಮಾತಾಡತಿದ್ದರು, ಹಾಂಗ ಇಂದು ಬೆಳಗಿನ ಹತ್ತ-ಹತ್ತುವಿಗೆಲ್ಲ ಸ್ವಾಮಗೋಳ ಹೊಲದಾಗ ಇಬ್ಬರು ನಮ್ಮ ಆಯಿ ಬಸಯಾನ ಕೈಯಾಗ ಸಿಕ್ಕಾರ ಆ ಹುಡುಗ ಓಡಿಹೋಗಿದಾನ, ಸಿಗಲಿಲ್ಲ, ಈ ಹುಡಿಗಿ ಒಬ್ಬಾಕಿನ ಸಿಕ್ಕಿದಳ. ಇವ ಬೈದ್ ಕಳಿಸಿದಾನ. ಹುಡಿಗಿ ಮನೀಗಿ ಬಂದಾಕಿನ ತನ್ನ ಗುಟ್ಟ ರಟ್ಟ ಆಗತೈತಿ ಅಂತ ತಿಳದಾಕಿನ ಉರ್ಲ ಹಾಕೊಂಡಿದಾಳ. ಇಲ್ಲಿ ಇನ್ನೊಂದ ಏನಂದರ.. ಹುಡುಗಿ ಮೂರ ತಿಂಗಳ ಬಸರ ಅದಾಳ. ಈ ಸುದ್ದಿ ಮನ್ಯಾಗು ಗೊತ್ತ ಇಲ್ಲ. ಗೊತ್ತಾದರ ತನ್ನ ಮನಿ ಮಾನ ಎನು ಊಳ್ಯಾಂಗಿಲ್ಲಂತ ಮುಚ್ಚಿ ಇಟ್ಟಿದಾಳ. ಈಗರ ಏನ ಉಳದದ. ಬಿಡ್ರಿ ಮಾತಿಗಿ ಬಂದ ಹೇಳಾತೀನಿ..” ಅಂತಂದು ಇನ್ನು ಮುಂದುವರೆಸಬೇಕೆನ್ನಿಸುವಷಟ್ರಲ್ಲಿ ಅಕಬರ ಸಾಬ ನಡುವ ಬಾಯಿ ಹಾಕಿ “ಇದ ಧರ್ಮಕ ಸಂಬಂಧ ಐತಿ ಅಂತ ಹೆಂಗ ಹೇಳತಿರಿ…?” ಕೇಳಿದ. “ತಪ್ಪಂತು ಹುಡಗಾ ಹುಡಿಗಿದ ಇಬ್ಬರದು ಐತಿ. ಅದನ ಒಪ್ಪಕೊತಿವಿ. ಯಾಕಂದರ ಇಬ್ಬರಿಗು ಮನಸ ಕೂಡಿದಾವ. ಒಂದ ವ್ಯಾಳೆ ಹುಡುಗ ದುಡುಕಿ ಹುಡಿಗಿನ ಎಳದಾಡಿ ರಂಪಾ ಮಾಡಿದ್ದ ಹುಡಿಗಿ ಸಿಟ್ಟಿಗೆದ್ದು ಏನರ ನ್ಯಾಯ ಕೇಳಕ ಬಂದಿದ್ದರ ಹುಡುಗನದೊಬ್ಬನದ ತಪ್ಪಂತ ಹೇಳಬಹುದಿತ್ತ. ಇಲ್ಲಿ ನಿಮ್ಮ ಮಾತಿಗಿ ಹೌದ ಅನಬಹುದಿತ್ತ. ಆದರ ಹಂಗಾಗಿಲ್ಲಲ್ಲ” ಅಂತಂದು ಮುಂದುವರೆಸಿದ. “ಅಲ್ಲದ ನ್ಯಾಯ ಕೇಳಬೇಕಾದ ಹುಡಿಗಿನ ಸತ್ತ ಹೋದಮ್ಯಾಲ ಇದನ ಚರ್ಚಾಮಾಡಿ ಏನ ಮಾಡ್ತಿರಿ…?” ಅಂದ. ಆಮಾತಿಗಿ ಸಾವಕಾರ ದಡಕ್ಕನ ಎದ್ದ ಕುಂತು “ಅಂದರ ಗುರುಪಾದಗ ಏನ ಹೇಳ್ತಿರಿ… ಕಾಶೀಮನ ಮಗಾ ಮಾಡಿದ್ದ ಸರೀ ಅಂತ ನಿಮ್ಮ ಮಾತಾ… ಊರಾಗ ಮಾನುಳ್ಳವ್ವರು ತಲಿ ಎತ್ತಿ ಬದಕೊಂದ ಹೆಂಗ…? ನಾಳಿ ನಿಮಗು ಹೆಣ್ಣಮಕ್ಕಳಿಲ್ಲ…? ಅವರನ ನಮ್ಮ ಹುಡುಗರು ಎಳೆದ ಕೆಡಿಸೊದು ದೊಡ್ಡ ಕೆಲಸೇನಪಾ… ನೀವ ಸುಮ್ನ ಕುಂಡಿ ಮುಚಕೊಂಡ ಕುಂತದಿರತಿರಿ… ಇದ ನಿಮ್ಮಿಂದ ಸಾದ್ಯ ಐತಿ ಅಂದರ ಇಗ ನಾವ ಏನು ಮಾತಾಡಾಂಗಿಲ್ಲ..?” ಕೇಳಿದ. ಸಿಟ್ಟಿನಿಂದ ತಲಿ ದಿಂ ಅನತಿತ್ತು. ರಮಜಾನ ಎಲ್ಲರನ್ನು ಸಮಾದಾನ ಮಾಡುತ ಸಮಜಾಯಿಸಿ ನುಡಿದ “ದೇಕೊ ಶೇಠಜಿ, ತಪ್ಪಾ ಆಗೇದ ಮಾಪಿ ಮಾಡ್ರಿ. ಇದಕ ಎನಾರ ದಂಡಾ ಕೊಡತೀವಿ. ಕಾಶೀಮನ ನಾನ ಒಪ್ಪಿಸಿತಿನಿ.. ಇಲ್ಲಿಗೆ ಇದು ಮುಗಿಲಿ. ಹೆಚ್ಚ ಮಾಡಿದರ ಹೆಚ್ಚ ಆಕ್ಯತಿ ಅಂದ. ಸುನ ಮೇರೆ ಬಾತ ಸುನೋ.. ನಹಿತೋ….. ಅಂತ ಏನೋ ಹೇಳವನಿದ್ದ.. ಗೌಡರು ಮೀಸಿ ಹುರಿಮಾಡಿಕೊಂಡು ಅಡರಾಯಿಸಿ, “ಅಲ್ಲಪಾ ಶಾಣ್ಯಾ ನಿಮ್ಮ ಕಡೀಂದ ದಂಡಾ ಇಸ್ಕೊ ಸಲವಾಗಿ ಈ ಚಾವಡಿ ಕೂಡಿರಿಸಿಲ್ಲ. ಬಂದ ಪ್ರಶ್ನಾ ಏನಂತ ಅಂದರ.. ಹೆಣಾ ಮಣ್ಣ ಮಾಡಾಕ ನಮ್ಮ ಧರ್ಮದ ಪ್ರಕಾರ ಬರಾಂಗಿಲ್ಲ. ಅಕಿ ನಿಮ್ಮ ಜಾತಿ ಹುಡುಗನಿಗಿ ಬಸರ ಆಗಿದಾಳ. ನಮ್ಮ ಧರ್ಮದ ಪ್ರಕಾರ ಹೆಂಗ ಮಣ್ಣ ಮಾಡೋಣ ನೀವ ಹೇಳ್ರೀ…? ಅದಕ ನಿಮ್ಮ ಧರ್ಮದ ಪ್ರಕಾರ ನೀವ ಮಣ್ಣ ಮಾಡಿ ಮುಗಿಸಿ ಬಿಡ್ರಿ ಅಂತ ಹೇಳಾತಿವಿ” ಅಂದ. ಈ ಮಾತಿಗಿ ಮುಸ್ಲೀಂ ಜನಗಳೆಲ್ಲ ಹೌಹಾರಿದರು, ಹುಬ್ಬೇರಿಸಿ ನೋಡಿದರು. ಗೌಡರಿಗಿ ತಲಿ ಕೆಟ್ಟೈತೇನೊ ಅಂತ ಅನಕೊಂಡರು. ಮಹಮದ ಅಲಿ ಎದ್ದು ನಿಂತು “ನಿಮ್ಮ ಹೆಣಾ ನಮ್ಮ ಧರ್ಮದಂಗ ಮಣ್ಣ ಮಾಡಾಕ ಹೆಂಗ ಸಾಧ್ಯ ಅದ ಹೇಳ್ರೀ…? ಅವನಳೇನು ನಿಖಾ ಮಾಡಿಕೊಂಡು ಕಾಶೀಮನ ಮನೀಗಿ ಬಂದಾಳಾ…? ಇಲ್ಲಾ. ನಮ್ಮ ಧರ್ಮಕ ಸೇರಿಕೊಂಡಾಳಾ… ಹಾಂಗು ಇಲ್ಲ ಹೀಂಗು ಇಲ್ಲ. ನಿಮ್ಮ ಧರ್ಮದ ಪ್ರಕಾರ ಒಯ್ದ ಮಣ್ಣಮಾಡ್ರಿ… ಅಂದರ ಒಪ್ಪುಮಾತಾ… ಇದು… ನೀವ ವಿಚಾರಮಾಡ್ರಲಾ… ಇನ್ನು ನೀವ ಏನ ಮಾಡಬೇಕಿತ್ತು.. ಅವರಿಬ್ಬರು ಸಿಕ್ಕಾಗ ಎಳತಂದು ಪಂಚಾಯ್ತಿ ಕೂಡಿಸಿ ಮನಿ ಹೊಗಿಸಿದ್ದರ ಒಪ್ಪತಿದ್ವಿ. ಅದಾರ ಆಗೇತ್ಯಾ…? ಇಲ್ಲಾ…” ವಿವರಿಸಿ ಹೇಳಿದ.. ಗೌಡನಿಗೆ ರೋಷ ಕುದಿಯುತಿತ್ತು. “ಮಹಮ್ಮದಲಿ ನೀನ ಹೇಳಿದ ನನ್ನ ತಲ್ಯಾಗ ನಾಟೇತಿ ಇಲ್ಲಂತಲ್ಲ. ನಿಮ್ಮ ಧರ್ಮಕ ಬಂದಿಲ್ಲ ಅಂತಿ ಅದೂ ಖರೇ. ಒಂದ ಹೆಣ್ಣನ್ನು ಬೆತ್ತಲೆ ನೋಡುವ ಅದಿಕಾರ ಅಕೀ ಗಂಡನಿಗ ಮಾತ್ರ ಐತಿ ಹೊರತು ಇನ್ನಾರಿಗು ಇಲ್ಲ. ಇದನ ನಿನ್ನ ಧರ್ಮು ಒಪ್ಪೇತಿ ನನ್ನ ಧರ್ಮು ಒಪ್ಪೇತಿ. ಅಂದ ಬಳಿಕ ನಿಮ್ಮ ಧರ್ಮದ ಹುಡುಗನಿಗೆ ಬಸರ ಆದದ ಸುಳ್ಳಲ್ಲಲಾ. ಇದನ ನಮ್ಮ ಧರ್ಮದವರು ಹೆಂಗ ಒಪ್ಕೊಬೇಕು… ಈಗ ನನ್ನ ಧರ್ಮು ಹಿಂಗ ಹೇಳತೈತಿ ಗಂಡನ ಜೋಡಿ ಕೂಡಿ ಮಾಡಿದರ ಸಂಸಾರ, ಅದನ ಇನ್ನೊಬ್ಬ ಗಂಡಸಿನ ಕೂಡ ಮಾಡಿದರ ಹಾದರ. ಇದ ಹಾದರ ಅದ. ಇದನ ನಮ್ಮ ಧರ್ಮಕ ತಗೊಳ್ಳುದುಲ್ಲಾ..” ಅಂತ ಕಡ್ಡಿ ಮುರದಂಗ ಹೇಳಿಬಿಟ್ಟರು. ಈ ಮಾತಿಗೆ ಮುಸ್ಲೀಂ ಮಂದಿ ನಿರಾಕರಿಸಿದರು. ಒಪ್ಪುವ ಮಾತಂತು ಅಲ್ಲವೇ ಅಲ್ಲೆಂದರು. ಅಕಬರ “ನೋಡ್ರಿ.. ಶೇಠಜಿ.. ನಿಮ್ಮ ಧರ್ಮಕ ಇದು ಹೆಂಗ ನಡಿಯೋದಿಲ್ಲ ಹಾಂಗ ನಮ್ಮ ಧರ್ಮಕು ನಡಿಯುದಿಲ್ಲ” ಅಂದ. ದತ್ತು ಸಂದರ್ಭವನ್ನು ಅರಿತುಕೊಂಡು ಮದ್ಯ ಬಾಯಿಹಾಕಿದ. “ಇಲ್ಲಿ ಕೇಳ್ರಿ.. ಅಲಿ ಸಾಹೇಬರ ನಿಮ್ಮ ಧರ್ಮದಾಗ ನಡಿದುಲ್ಲಂತ ಹೇಳಿದಿರಿ, ಇದನ ನಮ್ಮಧರ್ಮಕ ಹೆಂಗ ನಡಿಸಿಕೊಬೇಕಪಾ.. ನಿಮ್ಮದ ನಿಮಗ ಹೆಂಗ ಶ್ರೇಷ್ಠೊ ಅದರಂತೆ ನಮದ ನಮಗ ಶ್ರೇಷ್ಠಲ್ಲೆನ….? ನಾವೇನ ಹುಡಿಗಿನ ಮನಿ ಹೊಗಿಸಿ ಧರ್ಮಾ ಮಾಡ್ರಿ ಅನ್ನಾನಿಲ್ಲ. ಹಂಗ ನೋಡಿದರ ತಪ್ಪಾ ಯಾರದ ಆಕೈತಿ ನಿವ ಹೇಳ್ರಿ… ಹುಡಿಗಿ ಬದಕಿದ್ದರ ನಿಮ್ಮ ಧರ್ಮಕ ನುಗಿಸಿ ಬಿಡತಿದವಿ…. ಇಲ್ಲಾ.. ಮನ್ಯಾಗರ ಇಟಗೊಂಡತಿದ್ವಿ. ಅದು ಬ್ಯಾಡಾ ಕಡದ ಹೆಡಿಗಿ ತುಂಬಿತಿದ್ವಿ. ಏನಾ ಸಬತಿ ಇರತಿದ್ದರ ಮಾತ್ರ, ಹುಡಿಗಿ ಹೊಟ್ಟಿಲೆ ಅದಾಳ ನಿಮ್ಮ ಧರ್ಮದ ಒಬ್ಬ ಹುಡುಗನಿಗ ಬಸರ ಆಗಿದಾಳ. ಒಂದವ್ಯಾಳೆ ಮದಿವಿನ ಮಾಡಿಕೊಟ್ಟಿದ್ದರ ನಿಮ್ಮ ಧರ್ಮದವಳ ಆಗತಿದ್ದಳಿಲ್ಲ..? ಆಗೇನ ಸತ್ತಿದ್ದರ ಹೆಣಾ ತಂದ ನೀವ ಮಣ್ಣ ಮಾಡಕೊರಿ ಅಂತ ಹೇಳತಿದ್ದಿರೇನು..?” ಕೇಳಿದ.. ಶಾಂತಚಿತ್ತದಿಂದ ಆಲಿಸುತಿದ್ದ ಹಿರಿಯರು ಸೇರಿದ ಜನರು ದತ್ತುನ ಮಾತಿನೊಳಗ ಸತ್ಯ ಐತಿ ಅಂತ ಅನಿಸಿತು. ಮುಸ್ಲೀಂ ಜಮಾತದವರದು ತಪ್ಪ ಆಕೈತಿ.. ಹಿಂಗ ಅಡ್ಡಾ ದಿಡ್ಡಿ ಮಾತಾಡಬಾರದ.. ಅಂತ ಮಾತಾಡಿಕೊಂಡರು. ಆದರು ಅಕಬರ ಸಾಬ ಸುಮ್ಮನಿರಲಿಲ್ಲ. “ಕುಲಕರ್ನಿ ಸಾಬ ನೀವ ಹೇಳಿದ್ದ ಒಪ್ಪು ಮಾತ. ಅದು ಹುಡಿಗಿಗಿ ನಿಖಾ ಆಗಿದ್ದರ ನಾವ ಅಲ್ಲಾ ಕೆ ಕಸಮ ಹೂಂ ಅನತಿದ್ವಿ. ಇದು ಯಾರಿಗಿ ಹೇಳಿ ಆಗೆದ ಹೇಳ್ರಿ…? ಇಸಕಿ ಮಾ ಕಿ ಚೊಕರ್ಯಾಂ… ಕ್ಯಾ ಕರೇ ನಾ ಇಸಕೆ ವಜಾಸೆ ಸಬಿ ಗಾಂವ ಕೊ ಶರಮ ಲಾಯೆ ಉನೆ…” ಅಂದ. ಈ ಧರ್ಮ ಸಂಕಟದಿಂದ ಪಾರಾಗುವುದು ಎರಡು ಪಂಗಡಗಳಿಂದ ಬಾಳ ಕಠಿಣ ಐತಿ ಇಬ್ಬರೊಳಗೊಬ್ಬರು ಒಪ್ಪಿಕೊಂಡರ ಸಮಸ್ಯ ಹುಟ್ಟಾಂಗಿಲ್ಲ ಆದರ ಒಪ್ಪರ ಯಾರ…? ಸೋತರ ಊರಾಗ ಕಿಮ್ಮತ ಊಳ್ಯಾಂಗಿಲ್ಲ. ಊರ ಸಾವಕಾರ ಮಾರಿ ಒರಿಸಿಕೊಳ್ಳುತ “ಅಂದರ ನಿಮ್ಮ ಮಾತಿನ ಅರ್ಥ ಏನು..? ನಮ್ಮ ಮ್ಯಾಲ ಟೊಂಪಿ ಇಟ್ಕೊಳ್ಳೊನು…? ಊರಾಗ ಚೌದಾಮನಿ ಇಲ್ಲ ನಿಮ್ಮು… ಎನಿಸಿದರ ದೋನಸೆ ಮಂದಿ ಅದೀರಿ, ನಾವ ಈಡೀ ಊರಕ ಊರೆಲ್ಲ ನಾನ ಅಧೇವ. ಇದರಾಗ ತಪ್ಪಿದರ ಸಣ್ಣ ಹುಡಗೋರ ಮೊದಲಾಗಿ ನಮಗ ಉಳಾಗಡ್ಡಿ ಕಿವಿಗಿ ತಂದ ಕಟ್ಟತಾರ. ಅಜ್ಜಾ ಆರತಲಿ.. ಮುತ್ಯಾ ಮೂರತಲಿಂದ ಊರ ಗೌಡಕಿ ಮಾಡೊತ ಬಂದ ಮನಿ ನಮ್ಮದು ಇನ್ನು ತನಾ ಸುತ್ತ ಹತ್ತಹಳ್ಳಾಗಿನ ಯಾರ ಒಬ್ಬರು ಬಟ್ಟ ಮಾಡಿ ತೋರಿಸುವಂಗ ನ್ಯಾಯ ಹೇಳಿದವರಲ್ಲ. ಈಗ ತಪ್ಪಿದರ ಜನಾ ಏನಂದಾರ… ಕೇಳಿದ. ಮಹಮ್ಮದ ಅಲಿಗೆ ಈ ಮಾತಿನಿಂದ ಬಾಯಿ ಕಟ್ಟಿ ಹೋಯಿತು. ಅವನಷ್ಟೆ ಅಲ್ಲ ಇಡೀ ಮುಸ್ಲೀಂರೆಲ್ಲ ಮೌನವಾದರು. ಆದರೆ ಒಪ್ಪಿಕೊಳ್ಳುವ ಹಾಗಿಲ್ಲ ಬಾಯಿಬಿಟ್ಟು ಹೇಳುವಾಂಗಿಲ್ಲ. ಇದು ಧರ್ಮಕ ವಿರುದ್ದ ಆಗತದ. ನಾವು ಅಲ್ಲಾನಿಗೆ ದ್ರೋಹಮಾಡಿದಂಗಾಗತೈತಿ. ಅಂತಂದು ತಲಿ ಕೆಳಗಮಾಡಿ ಸುಮ್ಮನ ಕುಳಿತ. ಇದು ಲಗ್ಗ ಬಗಿಹರಿವಂಗ ಕಾಣಲಿಲ್ಲ. ಎಲ್ಲರು ತಮ್ಮನ್ನು ತಾವ ಸಮರ್ಥಿಸಿಕೊಂಡು ಸುಮ್ಮನಾದರು. ಜನಾ ಎರಡು ಕಡೇ ವಾದ ಕೇಳಿ ನಿಟ್ಟುಸಿರಬಿಟ್ಟರು. ಹೊರಗೆ ಕತ್ತಲೆ ಕವಕೊಂಡಿತ್ತು. ಹಳಬ ಎರಡು ಕಂದೀಲ ತಂದು ತೂಗು ಹಾಕಿದ. ಬಾಳೊತ್ತಿನ ತನಕಾ ಸುಮಸುಮ ಕುಂತಕುಂತ ಬ್ಯಾಸತ್ತರು. ಚಾವಡಿ ಕಟ್ಟಿತುದಿಗಿ ಒಂದಿಬ್ಬರು ಹಿರಿಯರು ಎದ್ದು ಹೊರ ಬಂದರು. ಆಮ್ಯಾಲ ಗೌಡರು ಎದ್ದರು. ಸಾಹುಕಾರರು ಎದ್ದರು. ಪ್ಯಾಟಿ ಶಿವನಿಂಗ. ಮೂಲಿಮನಿ ನಿಂಗ ಇನ್ನು ಕುಂತಿದ್ದರು.

ಕುಲಕರ್ಣಿ ದತ್ತು ಎದ್ದು ನಿಂತು “ಗುರಪಾದ ಹೆಣಾ ಮಣ್ಣ ಮಾಡಬ್ಯಾಡ. ಹಂಗೇನಾದರು ಆತಂದ್ರ ಪೋಲಿಷವರೆಗೆ ಹೋಗತದ ನೋಡು. ನಮ್ಮದಂತು ಕಬೂಲಿಲ್ಲ. ನಾ ನಡೀತೇನ ಅಂತಂದು ಎದ್ದು ಹೊರನಡೆದ. ಅವನ ಜೊಡ ಏಳೆಂಟಮಂದಿ ಎದ್ದರು. ಮಹಮ್ಮದ ಅಲಿ ಎದ್ದು ನಿಂತು ಗುರಪಾದನ ಕಡೀಗಿ ತಿರಿಗಿ “ಗುರುಪಾದನ್ನ ನಮ್ಮ ಜಾತಿಗಿ ವಿರುದ್ದವಾಗಿ ನಾನೇನು ಮಾಡಂಗಿಲ್ಲ. ನಿಮಗ ಶಿವಾ ಹೆಂಗೋ ನಮಗ ಅಲ್ಲಾನು ಹಂಗ, ನಾವಿನ್ನ ಬರ್ತಿವಿ.. ಎಂದ್ಹೇಳಿ ಅವರು ಎಲ್ಲರು ಎದ್ದುಹೋದರು. ಚಾವಡಿಯೊಳಗ ಊಳಿದವರೆಂದರ ಆಯಿಬಸ್ಯಾ, ಹಳಬಾ, ಬಿಕ್ಕಿಬಿಕ್ಕಿ ಅಳುತಿರುವ ಗುರುಪಾದ. ಗುರುಪಾದನಿಗೆ ಬಾಳ ಕೆಟ್ಟೆನಿಸಿತು. ತಾನೆಂತಾ ಪಾಪಿ ಅದೆನಿ. ದೇವರು ನನಗಿನ್ನು ಯಾಕರ ಬದಿಕಿಸಿದಾನಪಾ… ಶಿವನ… ಇನ್ನು ಏನೆನ ಪರಿಕ್ಷಾ ನಡಿಸತಾನ…? ಆ ಸಾವ ತನಗಾರ ಬರಬಾರದಿತ್ತಾ ಅಂತ ಗೊಡಿಗಿ ತಲಿ ತಲಿ ಹಾದು ಬಿಕ್ಕಿ ಬಿಕ್ಕಿ ಅತ್ತಬಿಟ್ಟ. ಹಳಬಾ, ಆಯಿಬಸ್ಯಾನಿಗೂ ಬಾಳ ಕೆಟ್ಟೆನಿಸಿತು. ಮನಸ್ಸಿಗು ತಲಮಳಿಸಿ ಹೆಂತಿ ನೆನಪಾಗಿ ಮನಿಕಡೀಗಿ ಬಂದರು. ಇತ್ತ ಗುರಪಾದನ ಮನೀಗಿ ಬಂದಾಗ ಸತ್ತ ಹುಡಿಗಿ ಮುಂದ ದಿಂಬ ಬಡದವರಂಗ ಕುಂತಿದ್ದ ಲಕ್ಷವ್ವನ ಬಿಟ್ಟರ ಯಾರ ಇರಲಿಲ್ಲಾ. ಆಜೂಬಾಜೂ ಮನಿಮುಂದ ಕೂಡ ಯಾರ ನಿಂತಿರಲಿಲ್ಲ ಉದ್ದಕ ಮಲಿಗಿಸಿದ ಹೆಣದಮುಂದ ಒಂದ ಕಂದೀಲ ಇಟಗೊಂಡ ಹೆಂಡತಿ ಎತ್ತೊ ನೋಡುತ ಕುಂತಿದ್ದಳು. ತನಗ ಒದಗಿ ಬಂದಿರುವ ಈ ಪರಿಸ್ಥಿತಿ ನೆನೆದು ಗುರುಪಾದನಿಗೆ ಕೆಟ್ಟ ಸಿಟ್ಟ ಬಂತು. “ಹಾದರಾ ಮಾಡಿ ನೀ ಹಾಳಾಗೊದಲ್ಲದೆ ನಮ್ಮನ್ನು ಹಾಳಮಾಡಿದಲ್ಲೆ ಹಾದರಗಿತ್ತೆ…” ಎಂದು ಹೊರಗಿನಿಂದ ಬಂದವನ ಹೆಣವನ್ನು ಒಮ್ಮಿ ಜಾಡಿಸಿ ಒದ್ದ, ಆ ಏಟೀಗೆ ಅದು ಒಮ್ಮಿ ಅಲುಗಾಡಿದಂತೆ ಮಾಡಿ ಸುಮ್ಮನಾಯಿತು. ಕಣ್ಣಿಗೆ ಕತ್ತಲಾವರಿಸಿದಂತಾಗಿ ಹಿಂದೆ ಸರಿದಾ. ಕಾಲಿಗೆ ಕಂದೀಲ ಬಡೆದು ಕಂದೀಲು ಊರುಳಿ ನೆಲಕೆ ಬಿತ್ತು. ದೀಪ ಆರಿಹೋಗಿ ಮನೇಯೆಲ್ಲ ಕತ್ತಲು ಕವಿದುಕೊಂಡಿತು. ಮಗಳಜೊತೆ ತಾವು ಹೆಣಗಳಂತೆ ಭಾಸವಾಗಿ ಗುರುಪಾದ ಮೂರ್ಚೆಹೋಗಿ ನೆಲಕ್ಕೆ ಕುಸಿದು ಕುಳಿತುಬಿಟ್ಟ.

ಮ್ಯಾಲ ಬಿದರ ಬಲಿಯೊಳಗ ಸಿಗಹಾಕಿದ್ದ ಪರಕನಟ್ಟಿ ಕುಡಗೋಲ ಹಿರಿದ ತೆಗೆದ. ಅದರ ಬಾಯಿಮ್ಯಾಲ ಬೆರಳಿಟ್ಟ ಎಷ್ಟ ಹದನ ಅದ ನೋಡಿದ. ಸಪ್ ಕಲ್ಲಿಗಿ ಮಸೆದರ ದಾರಿ ಬರತದ ಅಂತ ತಿಳದ ಅಂಗಳಕ ಬಂದು ಗುರಪಾದ ಕಟ್ಟಿ ಕಲ್ಲಿಗಿ ಕುಡಗೋಲ ಚರಕ್.. ಪರಕ್…ಅಂತ ಮೇಲಿಂದ ಕೆಳಗೆ ಕೆಳಗಿನಿಂದ ಮೇಲೆ ತಿಕ್ಕಿ ತಿಕ್ಕಿ ಬೆರಳಿಡಿದು ಹದನಾಗಿರೋದನ್ನ ಖಚಿತಪಡಿಸಿಕೊಂಡ. ರಾತ್ರಿ ಒಂದ, ಒಂದೂವರಿ ಅಗಿತ್ತು. ಬಡದ ಹುಡಿಕಿದರು ಒಂದ ನರಪಿಳ್ಳೆ ಇರಲಿಲ್ಲ. ದಿನಾ ಕಟ್ಟಿಗಿ ಮಲಗವರು ಇಂದ ಓಣ್ಯಾಗ ಒಬ್ಬನು ಹೊರಗ ಮಲಿಗಿರಲಿಲ್ಲ. ಗುರುಪಾದ ಅಡಿಗಿ ಮನೀಗಿ ಹೋಗಿ ಕಡ್ಡಿಪೆಟ್ಟಿಗಿ ತಂದು ಆರಿ ಹೋಗಿದ್ದ ಕಂದೀಲ ಬಿಚ್ಚಿ ದೀಪ ಹಚ್ಚ ಬತ್ತಿ ಎತ್ತರಿಸಿದ. ಕಂದೀಲ ತಂದು ತೊಲಿಗಿ ತೂಗು ಹಾಕಿದ. ಹೆಂಡತಿ ಗರಾ ಬಡದವರಂಗ ಹಂಗ ಕುಂತಿದ್ದಳು. ಅಕೀಗಿ ವಾಸ್ತವದ ಖಬರ ಇದ್ದಿರಲಿಲ್ಲ. ಅವಳ ಬಗಲಾಗ ಕೈ ಹಾಕಿ ಎಬ್ಬಿಸಿ ಹಾಂಗ ಅಡಿಗಿ ಮನೀಗಿ ಒಯ್ದ ಬಿಟ್ಟು ಹೊರಗ ಬಂದು ಚಿಲಕಹಾಕಿದ. ಹೊರಗಿನ ಬಾಗಿಲ ಹಾಕಿ ಒಳಗಿನ ಕೊಂಡಿ ಹಾಕಿದ. ಕೈಯಾಗ ಕುಡಗೋಲ ತೆಗೆದಕೊಂಡು ಕಂದೀಲ ಮುಂದಿಟಗೊಂಡು ಹಗರಕ ಮಗಳ ಹೊಟ್ಟಿಮ್ಯಾಲ ಕೈಯಾಡಿಸಿ ನೋಡಿದ ಹೊಕ್ಕಳದಿಂದ ಮ್ಯಾಲ ನಾಲ್ಕ ಬೆರಳಮ್ಯಾಲ ಹಿಡಕೊಂಡ ಕಡಗೋಲ ಹೊಟ್ಟಿಯೊಳಗ ಪಸಕ್ಕನ ಚುಚ್ಚಿ ಸುತ್ತುವರೆದ… ಒಂದ ತಾಬಾನ ಅಗಲದಷ್ಟು ದುಂಡಗ ಕೊಯ್ದ ಒಳಗ ಕೆಂಪಗ ಗಡ್ಡಿಯಂಗಿತ್ತು ಅದರ ಸುತ್ತ ರಕ್ತ ಹೆಪ್ಪಗಟ್ಟಿ ಕಪ್ಪಾಗಿತ್ತು ಅದಕ ಏಳೆಂಟ ನರಗೋಳ, ಕರಳ ಗಂಟ ಕೂಡಿಕೊಂಡಿದ್ದು ಒಂದ ಕೈಯಿಂದ ಹಿರಿದ ಆ ಗಡ್ಡಿ ಮ್ಯಾಲ ತೆಗೆದ ಅದರ ಜೋಡಿ ನರಗಳು, ಕರಳು ಮ್ಯಾಲ ಬಂದವು ಅವನ್ನು ಕೊಯ್ದು ಅದರಿಂದ ಬಿಡಿಸಿ ತೆಗೆದಿಟ್ಟ ಅಷ್ಟರಾಗ ಮನಿಯೆಂಬೂದೆಲ್ಲ ರಕ್ತದಿಂದ ತುಂಬಿಹೊಗಿತ್ತು. ಈಗ ಗುರುಪಾದನ ಮುಖದಲ್ಲಿ ನೆಮ್ಮದಿಯ ನಗೆ ಮೂಡಿತು. ಮಡಿಚಿಟ್ಟಿದ್ದ ಚಾದರ ತೆಗೆದಕೊಂಡು ಅದರಾಗ ಮಗಳಹೊಟ್ಟಿಗಿ ಅದನ ಬಿಗದ ಹೆಗಲಮ್ಯಾಲ ಹೊತಗೊಂಡ ರವತ ಸರವತ ಅದನ್ನ ಗೋರಸ್ಥಾನದ ಕಡೀಗಿ ನಡೆದ. ನಾಯಿ ಬೊಗಳಿದವು ಹಿಂತಿರಿಗಿ ನೋಡಲಿಲ್ಲ ಗೂಗಿ ಒದರಿದರು ಹಿಂತಿರಿಗಿ ನೋಡಲಿಲ್ಲ. ಮುಂಜಾನೆ ತೆಗೆದ ಗೋರಿಯೊಳಗ ಮಗಳ ಹೆಣಾ ಮುಚ್ಚಿ ಮನೆಗೆ ಬಂದಾ. ಮನೀಯೊಳಗ ಇಟ್ಟಿದ್ದ ಮಾಂಸದ ಮುದ್ದೆಯನ್ನು ಹಿಡಕೊಂಡ ಮಸೀದಿ ಕಡಿಗಿ ಹೊರಟ. ಅಗಸಿಗಿ ಬರುವಷ್ಟರಾಗ ಮೂಲಿಮನಿ ನಿಂಗಪ್ಪಾ ರಾತ್ರಿ ಸಂಡಾಸಕ ಬಂದಿದ್ದ ಗುರಪಾದನ ಮೈಯೆಲ್ಲ ರಕ್ತದಿಂದ ತೊಯ್ದುದು ಮತ್ತು ಅವನ ಕೈಯಾಗ ಹಿಡಿದ ಮಾಂಸದ ಮುದ್ದಿ ನೋಡಿ ಯಾರದೊ ರುಂಡದಂಗ ಕಾಣಿಸಿತವನಿಗೆ ಅವನ ರಾಕ್ಷಸ ಅವತಾರ ನೋಡಿ ಸಂಡಾಸ ಮಾಡಕೊಂತ ಊರೋಳಗ ಹೆದರಿ ಓಡಿದ. “ಅಯ್ಯೋ ಗುರಪಾದ ಕೊಲಿ ಮಾಡಿದಾನ ಬರ್ರೋ… ಅಂತ ಚಿರ್ಯಾಡುತ ಓಡಿದ. ಮಲಗಿದ ಜನ ಅಂಗಳಕ ಬಂದರು.. ಗಾಬರಿಯಿಂದ ಜನಾ ನಿಂಗಪ್ಪಾ ಸಂಡಾಸ ಮಾಡಿಕೊಂಡಿದ್ದನ್ನು ಗಮನಿಸದೆ ಅವನ ರಟ್ಟೆ ಹಿಡಿದು ಕೇಳಿದರು. “ಎಲ್ಲಿ ಎಲ್ಲಿ ಗುರಪಾದ ಯಾವ ಕೊಲಿ…… ಎನ ಹೇಳತದಿನೋ……? ಅಂತ ಕೇಳಿದರು ಸರಿಯಾಗಿ ಹೇಳಲು ಬರದಾಗಿದ್ದ ನಿಂಗಪ್ಪ ಅಗಸಿಕಡಿಗಿ ಕೈಮಾಡಿ ತೋರಿಸಿದನಷ್ಟೆ…. ಜನ ಅತ್ತ ನೋಡಿದರು…. ಬೆರಗುಗಣ್ಣಿನಿಂದ.. ಆದರೆ ಆ ರಾತ್ರಿ ಹೊತ್ತಲ್ಲಿ ಆ ಕಡೆ ಹೋಗಿ ನೋಡುವ ದೈರ್ಯ ಯಾರು ಮಾಡಲಿಲ್ಲ ಅಷ್ಟೆ…….

ಬಸವಣ್ಣೆಪ್ಪಾ.ಪ.ಕಂಬಾರ
ಇದು ನನ್ನ ಮೊದಲ ಕಥಾ ಸಂಕಲನ “ಆಟಿಕೆ” ಯಿಂದ ಆಯ್ದು ಕಳಿಸುತ್ತಿದ್ದೆನೆ ಇದು 2012 ರ ಛಂದ ಪುರಸ್ಕಾರದ ಜೊತೆಗೆ ಒಟ್ಟು ಆರು ಪ್ರಶಸ್ತಿಗಳಿಗೆ ಭಾಜನವಾಗಿದೆ. ಈ ಕತೆ ನನಗೇಕೆ ಇಷ್ಟವೆಂದರೆ, ಸಮಾಜದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೂ ತಮ್ಮದಲ್ಲದೆ ವಿಚಾರವಿದ್ದರು, ಹಾಗೂ ಧರ್ಮ ಸೂಕ್ಷ್ಮ ವಿಚಾರಗಳು ಸಮಾಜದ ಯಾವದೇ ಹಂತದ ವ್ಯಕ್ತಿಯನ್ನು ಕೂಡಾ ಬಿಡಲಾರದೆ ಕಾಡುತ್ತವೆ ಎಂಬುದಕ್ಕೆ ನಿದರ್ಶನವಾಗಿದೆ. ಭಿನ್ನ ಕೋಮಿನ ಯುವ ಪ್ರೇಮಿಗಳಿಬ್ಬರ ಸುತ್ತ ಹೆಣೆಯಲಾದ ಈ ಕಥೆಯಲ್ಲಿ ಪ್ರೇಮಿಗಳು ಸತ್ತ ಮೇಲೂ ಹೇಗೆ ಕೋಮುವಾದ ಕಾಡುತ್ತದೆ, ಕೋಮು ಪ್ರೇರಿತ ಸಮಾಜ ಹೊಡೆದಾಡುತ್ತದೆ ಎನ್ನುವುದನ್ನು ಇಲ್ಲಿ ಬಿಂಬಿಸಲಾಗಿದೆ. ಮನುಷ್ಯನಿಗೆ ಧರ್ಮ ಹಾಗು ಜಾತಿಗಳು ಮೈಗಂಟಿದ ಚರ್ಮದಂತೆ ಯಾವತ್ತೂ ಬಿಟ್ಟು ಹೋಗಲಾರವು. ಇದು ಈ ಕಥೆಯ ವಿಷಯ ಹಾಗೂ ವಿಶೇಷ.