ಅಳುತ್ತಿದ್ದ ಅವಳನ್ನು ಡಾಕ್ಟರ್ ಒಂದೆರಡು ಗುಳಿಗೆ ನುಂಗಿಸಿ ನೀರು ಕುಡಿಸಿ ಸಮಾಧಾನಪಡಿಸಿದರು. ಕೂಡಲೆ ಆಕೆ ನಿದ್ದೆಹೋದಳು. ಆಕೆಯ ಮನಸ್ಸು ಕೃಷ್ಣನ ಕಥೆಯಿಂದ ಘಾಸಿಗೊಂಡಿದೆಯೆಂದು ಅವರಿಗೆ ತಿಳಿಯಿತು. ‘ನಾಟಕದ ಕೃಷ್ಣ ಬಂದು ನಮ್ಮಣ್ಣನ ಸಾಯಹೊಡದು ನನ್ನ ಕರ್ಕೊಂಡು ಹೋಗ್ತಾನಂತ.’ ಎಚ್ಚರಾದಾಗ ವಿಮಲವ್ವ ಹೇಳಿದ ಮಾತಿಗೆ ಡಾಕ್ಟರ್ ನಕ್ಕರು. ‘ನಿಮ್ಮಣ್ಣ ದೊಡ್ಡ ಹುಲಿ ಅದಾನು. ಇಂವ ಅಡರ್ ಅಂದ್ರ ಕೃಷ್ಣನ ಕಿರೀಟ ಅಲ್ಲೇ ಬೀಳ್ತದ ತಗೋ. ನೀಯೇನೂ ಹೆದರಬ್ಯಾಡ’. ವಿಮಲವ್ವ ಈಗ ಮತ್ತೊಮ್ಮೆ ಜೋರಾಗಿ ನಕ್ಕಳು, ನಿದ್ರಿಸಿದಳು.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಡಾ. ಬಸು ಬೇವಿನಗಿಡದ ಬರೆದ ಕತೆ ‘ಪಾರಿಜಾತ’

 

ಒಂದು ಕಾಲದಲ್ಲಿ ಮುದುಕಪ್ಪ ಮುದಕವಿ ಬೆಳದಿಂಗಳ ಹೊತ್ತಿನಲ್ಲಿ ಅರಳಿಗಿಡದ ಕಟ್ಟೆಗೆ ಗಡದ್ದಾಗಿ ಕುಳಿತು ದಟ್ಟಪೊದೆಯ ಹುಬ್ಬು ಕುಣಿಸುತ್ತ, ಗರುಡ ಮೂಗು ಚಾಚುತ್ತ ನಿಜವೂ ಹೌದು ಸುಳ್ಳೂ ಹೌದು ಎನ್ನುವಂತೆ ತನ್ನ ಹಿಂದಿನ ಪರಾಕ್ರಮಗಳನ್ನು ಮುಗಿಲಿಗೂ ಕೇಳುವಂತೆ ಹೇಳುತ್ತಿದ್ದರೆ ಅವನನ್ನು ಸುತ್ತುವರೆದಿದ್ದ ಮಂದಿಯ ಕಣ್ಣೆದುರು ಒಂದು ವಿಸ್ಮಯಲೋಕವೇ ತೆರೆದುಕೊಳ್ಳುತ್ತಿತ್ತು. ಹದಿಹರೆಯದ ಹುಡುಗರಂತೂ ಗಾಜುಗಣ್ಣು ತಿರುಗಿಸದೆ ಮುದುಕ ಸೃಷ್ಟಿಸುತ್ತಿದ್ದ ಲೋಕದಲ್ಲಿ ನಿಬ್ಬೆರಗಾಗಿ ತಿರುಗುತ್ತಿದ್ದರು. ಯಾವುದೋ ಮೋಡಿಗೊಳಗಾದಂತೆ, ಒಮ್ಮೊಮ್ಮೆ ಮುಗ್ಗುರಿಸಿ ಬೀಳುತ್ತ ಮೊಣಕಾಲು ಕೆತ್ತಿಸಿಕೊಳ್ಳುತ್ತಿದ್ದರು. ‘ಈ ಮುದುಕ ಸಾಯೋವಳಗಾಗಿ ಎಷ್ಟ ಹುಡುಗರನ್ನ ಕೆಡಿಸಿ ಹೋಗ್ತಾನೋ ಗೊತ್ತಿಲ್ಲ.’ ಕೆಲವರು ತಮ್ಮ ಹುಡುಗರನ್ನು ಹದ್ದುಬಸ್ತಿನಲ್ಲಿಡುವ ದಾರಿ ಕಾಣಲಾರದೆ ಕೊನೆಗೆ ತಮ್ಮ ಹುಡುಗ ಒಬ್ಬನೇ ಕೆಟ್ಟಿಲ್ಲ, ಅವನ ಜೊತೆ ಇತರ ಹುಡುಗರೂ ಕೆಟ್ಟಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದರು. ಬಿಟ್ಟಗಣ್ಣು ಬಿಟ್ಟಂತೆ ಸ್ವಪ್ನಗುದುರೆ ಹತ್ತುತ್ತ, ಆಗಾಗ್ಗೆ ಹೌಹಾರುತ್ತ ಎಂದೂ ಮುಗಿಯದ ಪಾರಿಜಾತದಲ್ಲಿ ಕಳೆದುಹೋಗುತ್ತಿದ್ದರು. ‘ಈ ಪೋಕ ಅಜ್ಜಂದೇನು ಕೇಳ್ತಾ ಕುಂತೀರಿ? ಆಂವ ಕುದುರಿ ಹತ್ತಿಸಿ ನಡೂ ಕೆಡವಿಬಿಡ್ತಾನು. ಈಗ ಮನ್ಯಾಗ ಯಾರೂ ಅಂವಗ ಕಿಮ್ಮತ್ತು ಕೊಡವಲ್ರು. ಅದಕ್ಕ ಓಣ್ಯಾಗಿನ ಮಂದಿ ಮುಂದ ಗುಂಡ ಉರುಳಿಸಲಿಕ್ಕೆ ಹತ್ತ್ಯಾನು. ನಿಮಗ ಆಮ್ಯಾಲ ಗೊತ್ತಾಗ್ತದ-ಮುದುಕ ಉರುಳಿಸಿದ್ದು ಗುಂಡ ಅಲ್ಲ, ಉರಳಾರದ ಚೌಕ ಅಂತ’ ಎನ್ನುವ ಅಜ್ಜನ ಆಜನ್ಮ ಶತ್ರು ಬಳಿಗೇರ ಕಲ್ಲಪ್ಪನ ಮಾತನ್ನು ಒಂದು ಕಿವಿಯಿಂದ ಕೇಳಿ ಮತ್ತೊಂದು ಕಿವಿಯಿಂದ ಹೊರಗೆ ಬಿಟ್ಟು ಬಂದವರೆ ಅಲ್ಲಿ ಜಾಸ್ತಿಯಿದ್ದರು. ಜನ್ಮಜನ್ಮಾಂತರ ಮುದುಕಪ್ಪ ಮತ್ತು ಕಲ್ಲಪ್ಪರ ಜಗಳ ಮುಂದುವರೆಯುವುದರ ದ್ಯೋತಕವೆಂಬಂತೆ ಹಿತ್ತಲ ಜಾಗೆಯ ವ್ಯಾಜ್ಯ ಈಗ ಹೈಕೋರ್ಟ್ ಮೆಟ್ಟಿಲೇರಿತ್ತು. ಒಂದು ಫೂಟು ಜಾಗೆಗಾಗಿ ನಡೆದಿರುವ ಸಂಘರ್ಷ ಐವತ್ತು ವರ್ಷಗಳಾದರೂ ಮುಗಿದಿಲ್ಲ. ಇದು ಒಂದು ಫೂಟು ಜಾಗ ಅಥವಾ ಅರ್ಧ ಫೂಟು ಜಾಗದ ಪ್ರಶ್ನೆಯಲ್ಲ. ಅಭಿಮಾನದ ಪ್ರಶ್ನೆ, ಮರ್ಯಾದೆಯ ಪ್ರಶ್ನೆ, ಜೀವದ ಪ್ರಶ್ನೆ, ಮರಣದ ಪ್ರಶ್ನೆ ಎಂದೆಲ್ಲ ಹಲವು ಹುಟ್ಟು-ಸಾವುಗಳು ಈ ಜಾಗದ ಜೊತೆಗೆ ತಳಕು ಹಾಕಿಕೊಂಡಿದ್ದವು. ಮನೆಯಲ್ಲಿಯ ಪ್ರತಿಯೊಬ್ಬರಿಗೂ ಆ ಗಾಯಗಳನ್ನು ಆಳವಾಗಿ ಕೊರೆಯಲಾಗುತ್ತಿತ್ತು. ಗಾಯಗಳು ಒಣಗಿದ ಕೂಡಲೆ ಮತ್ತೆ ಹಸಿ ಮಾಡಲಾಗುತ್ತಿತ್ತು. ಇಡೀ ತಮ್ಮ ಮನೆತನ, ಆಸ್ತಿ ಸತ್ಯಾನಾಶ ಆದರೂ ಆರಿಂಚು ಭೂಮಿಯನ್ನು ಕಳೆದುಕೊಳ್ಳಲಾರೆವು ಎಂದು ಕುಡಗೋಲುಗಳನ್ನು ಕಟ್ಟೆಗೆ ಮಸೆಯುತ್ತಿದ್ದರು. ಮತ್ಸರ ಹೊಗೆಯಾಡುವ ಚರ್‍ಬರ್ ಸದ್ದು ಕೀಟಗಳ ವಟವಟದಂತೆ ಹಗಲು ಇರುಳೆನ್ನದೆ ಕೇಳಿಬರುತ್ತಿತ್ತು. ಕಲ್ಲಪ್ಪ ಎಚ್ಚರದಲ್ಲಿಯೂ ನಿದ್ದೆಯಲ್ಲಿಯೂ ಜಗಳವನ್ನೆ ಬಡಬಡಿಸುತ್ತಿದ್ದರೆ ಮುದುಕಪ್ಪ ಮಾತ್ರ ಜಗಳದ ಸಮಯದಲ್ಲಿ ಜಗಳ, ಪ್ರೀತಿಯ ಸಮಯದಲ್ಲಿ ಪ್ರೀತಿ, ಬಯಲಾಟದ ಸಮಯದಲ್ಲಿ ಬಯಲಾಟ ಎಂಬ ಪದ್ಧತಿಯನ್ನು ರೂಢಿಸಿಕೊಂಡಿದ್ದನು. ‘ಮನ್ಯಾಗ ಪ್ರಳಯದಂಥ ಜಗಳ ಇದ್ದಾಗ್ಲೂ ಇಂವ ಹೆಂಗ, ಮೈಮರೆತು ಕುಣೀತಿದ್ದಾನು’ ಎನ್ನುವ ಉದ್ಗಾರ ಬಹುತೇಕ ಎಲ್ಲರ ಬಾಯಿಂದ ಹೊರಡುತ್ತಿತ್ತು. ಹೆಂಡತಿಯಿದ್ದೂ ಇಬ್ಬರು ಪ್ರೇಯಸಿಯರನ್ನು ಹೊಂದಿ ಅವರ ಸಲುವಾಗಿಯೆ ಇಡೀ ಆಸ್ತಿ ಕಳಕೊಂಡನೆನ್ನುವ ಅಪವಾದ ಹೊತ್ತು ಸಣ್ಣಾಟದ ಸಲುವಾಗಿ ಊರ ಮುಂದಿನ ಬಂಗಾರದಂಥ ಹೊಲ ಮಾರಾಟ ಮಾಡಿದನೆನ್ನುವ ಖ್ಯಾತಿ ಹೊಂದಿದ್ದ. ಹೊಲ ಕಳೆದರೂ ಮತ್ತೆ ಆಟದಿಂದ ಕಾಲುವೆಯ ಪಕ್ಕದ ಮಸಾರಿ ಹೊಲ ಹಿಡಿದಿದ್ದ. ಹೆಂಡತಿ ಮಕ್ಕಳ ಜೊತೆ ಹೊಂದಾಣಿಕೆಯಾಗದೆ ಏಕಾಂಗಿಯಾಗಿ ಬಾಡಿಗೆ ಮನೆಯಲ್ಲಿದ್ದ ಮುದುಕಪ್ಪ ಊರವರಿಗೆ ಗೂಢ ಮನುಷ್ಯನಾಗಿದ್ದ. ಅಷ್ಟು ಬಹಿರಂಗವಾಗಿರುವ ವ್ಯಕ್ತಿಯಲ್ಲಿ ಅದ್ಯಾವ ರಹಸ್ಯದ ಅಂತರಂಗವಿದ್ದೀತು ಎಂದು ಅವನ ಬಗ್ಗೆ ಇರುವ ಗೂಢಮಾತುಗಳನ್ನು ಅಲ್ಲಗಳೆಯುವವರೇ ಹೆಚ್ಚಾಗಿದ್ದರು. ಮೇಲಾಗಿ ಮುತ್ತಗಿ ಊರಿಗೆ ಕೃಷ್ಣ ಪಾರಿಜಾತದಿಂದ ಒಂದು ಹೆಸರು ತಂದುಕೊಟ್ಟವನ ಹೆಸರಿಗೆ ಮಸಿ ಬಳಿಯುವವರನ್ನು ದೇವರು ಮೆಚ್ಚಲಾರನೆಂದು ಕೆಲವು ಹೆಂಗಸರು ಸತತ ಮುಟಿಗಿ ಮುರಿಯುತ್ತಿದ್ದರು.

ಬಯಲಾಟಗಳ ಹಿಂದಿನ ಕಾಣಸಿಗದ ಆಟಗಳು ಮುದುಕಪ್ಪನ ಇಂತಹ ಬೆಳದಿಂಗಳ ಪುರಾಣಗಳಲ್ಲಿಯೆ ಬಯಲಿಗೆ ಬರುತ್ತಿದ್ದವು. ಅಂತಹ ಒಂದು ಎಳೆ ಮುದುಕಪ್ಪ ಮತ್ತು ಕಲ್ಲಪ್ಪರ ನಡುವಿನ ಘರ್ಷಣೆಯ ಮೂಲಕ್ಕೆ ಸಂಬಂಧಿಸಿದ್ದು. ಕಲ್ಲಪ್ಪನ ತಂಗಿ ವಿಮಲವ್ವನಿಗೆ ಅದು ಹೇಗೋ ನಾಟಕದ ರುಚಿ ಹತ್ತಿತ್ತು. ಸಣ್ಣವಳಿದ್ದಾಗಿನಿಂದಲೂ ಧಾರವಾಡ ರೇಡಿಯೊದಲ್ಲಿ ಕೇಳಿಬರುತ್ತಿದ್ದ ಸಂಗ್ಯಾಬಾಳ್ಯಾ ಸಣ್ಣಾಟ, ಕೃಷ್ಣಪಾರಿಜಾತದ ಗೌಳಗಿತ್ತಿ ಸನ್ನಿವೇಶ, ಮಹಾಭಾರತದ ಸುಭದ್ರಾ ಪರಿಣಯ ಮುಂತಾದವುಗಳನ್ನು ಕೇಳಿ ಕೇಳಿ ಅನೇಕ ಪ್ರೇಮ ಸನ್ನಿವೇಶಗಳನ್ನು ತನ್ನಷ್ಟಕ್ಕೆ ಸೃಷ್ಟಿಸಿಕೊಂಡಿದ್ದಳು. ಅಷ್ಟರಲ್ಲಿ ಮುದುಕಪ್ಪನ ಪಾರಿಜಾತ ಆರಂಭವಾಯಿತು. ತನ್ನ ಕೀಲುಗಡಗ, ಕೊರಳಸರ, ಬೆರಳುಂಗುರ, ತೋಳಬಂದಿ, ಮಾಣಿಕ್ಯದ ಬೆಂಡೋಲೆ, ಮುತ್ತಿನ ಮೂಗುತಿಗಳನ್ನು ಮತ್ತೆ ಮತ್ತೆ ಕನ್ನಡಿಯಲ್ಲಿ ನೋಡಿಕೊಳ್ಳುತ್ತ, ಆಟದ ಸತ್ಯಭಾಮೆಯಂತೆ ತಾನು ಕಾಣುತ್ತಿದ್ದೇನೆಯೆ ಎಂದು ಕೊರಳು ಕೊಂಕಿಸುವಳು. ದೇಹವನ್ನು ಮಣಿಸುವಳು. ಮುದುಕಪ್ಪನ ಪಾರಿಜಾತದಲ್ಲಿ ಕೃಷ್ಣನ ಪಾತ್ರ ವಹಿಸಿದ್ದ ಕುರುಬರ ಶೇಖರನಿಗೆ ಮನಸೋತು ಅವನನ್ನೆ ಮದುವೆಯಾಗುವುದಾಗಿ ಹಟ ಹಿಡಿದಿದ್ದಳು. ಊರಲ್ಲಿ ದೊಡ್ಡ ಕುಳ ಆಗಿದ್ದ ಕಲ್ಲಪ್ಪನಿಗೆ ಹೆದರಿ ಶೇಖರ ಮನಸ್ಸು ಮಾಡಲಿಲ್ಲವಾದರೂ, ಒಲಿದು ಬಂದವಳ ಪ್ರೀತಿ ಅವನನ್ನು ಒಳಗೊಳಗೆ ಕಾಡುತ್ತಿತ್ತು. ‘ಆಟ ನೋಡೋದ ಅಪರಾಧ ಆಗಿತ್ತು. ಇನ್ನ ನಾಟಕದ ತಾಲೀಮು ಮಾಡೋ ಮನಿಗೆ ಹೋಗಿಬರೋವಷ್ಟು ಮತ್ತು ಅವನನ್ನ ಮಾತನಾಡಿಸುವಷ್ಟು ಮುಂದುವರಿದ್ಯಾ ನೀನು.’ ಕಲ್ಲಪ್ಪ ಅಪ್ಪ-ಅವ್ವನೆದುರು ತಂಗಿಗೆ ಛೀಮಾರಿ ಹಾಕಿ ಅವಳನ್ನು ದರದರ ಎಳೆದು ದೇವರ ಕೋಣೆಯಲ್ಲಿ ಕೂಡಿಹಾಕಿದ. ಆಕೆ ಅನ್ನ, ನೀರು ಬಿಟ್ಟು ಪಾರಿಜಾತದ ಹಾಡುಗಳನ್ನೆ ಗುಣುಗುಣಿಸುತ್ತಿದ್ದಳು. ದೇವರ ಜಗಲಿಗೆ ಹಣೆ ಹಚ್ಚಿ “ಶ್ರೀಶ, ಸದಾನಂದ, ಗೋವಿಂದ, ಕೇಶವ, ಮಾಧವ ನನಗೆ ಗತಿ ತೋರಿಸು. ಎನ್ನ ಚಿತ್ತದ ಅಪೇಕ್ಷೆಯ ಸಲ್ಲಿಸು” ಎನ್ನುವ ಸಾಲುಗಳನ್ನೂ “ಇಂದಿರೆ ನಿನ್ನಿಂದ ನೊಂದಳು. ಚಂದ್ರಮುಖಿಯ ಅರವಿಂದನಯನಗಳು ಕಳಾಹೀನವಾದವು” ಎನ್ನುವ ಮಾತುಗಳನ್ನು ಬಡಬಡಿಸತೊಡಗಿದಳು. ಎರಡು-ಮೂರು ದಿನಕ್ಕೆ ಈ ಕೋಮಲಾಂಗಿಯ ಧ್ವನಿಯೂ ನಿಂತುಹೋಯಿತು. ನಾ ಕೂಡು-ನೀ ಕೂಡು ಎಂದು ಮಂದಿ ಕೂಡಿದರು. ಕಷಾಯ ಕುಡಿಸಿದರು. ಸೂಟಕೇಸ್ ಹಿಡಿದ ಡಾಕ್ಟರ್ ಒಬ್ಬನನ್ನು ಟ್ರ್ಯಾಕ್ಟರಿನಲ್ಲಿ ಕರೆತರಲಾಯಿತು. ಹತ್ತು-ಹನ್ನೆರಡು ಸಲಾಯಿನ್ ಬಾಟಲ್ ಹಚ್ಚಿದ ಮೇಲೆ ವಿಮಲವ್ವ ಕಣ್ಣುತೆರೆದಳು. ಯಾರಿಗೂ ಹೇಳದಿದ್ದರೂ ಜನಕ್ಕೆ ಗೊತ್ತಾಗಿ ಸುತ್ತಲೂ ಸಮುದ್ರದಂತೆ ನೆರೆದು ಅವಳ ಪರಿಸ್ಥಿತಿಗೆ ದುಃಖಪಡುತ್ತಿದ್ದರು. ಯಾರೋ ಒಂದಷ್ಟು ಮಂದಿ ಇಷ್ಟಕ್ಕೆಲ್ಲ ಕಾರಣ ಶೇಖರ ಎಂದು ಹುಡುಕಾಡಿದರು. ಅಷ್ಟರಲ್ಲಿ ಅವನು ಕಂಪನಿ ಬಿಟ್ಟು ಓಡಿಹೋಗಿದ್ದ. ಊರಲ್ಲಿ ನಾಟಕ ಆಡುವ ಮಾಸ್ತರ ಮುದುಕಪ್ಪನನ್ನು ಹುಡುಕಿ ಅಲ್ಲಿಗೆ ಎಳೆದುಕೊಂಡು ಬಂದರು. ಅವನ ಮುಖ ಕೆತ್ತಿತ್ತು. ಮೂಗಿನಿಂದ ರಕ್ತ ಸುರಿಯುತ್ತಿತ್ತು. ಅವನನ್ನು ಅವಳ ಕಾಲಿಗೆ ಬೀಳಿಸಿದರು. ‘ವಿಮಲವ್ವ ನಂದು ತಪ್ಪಾತು, ನಿನ್ನ ತಂದಿ-ತಾಯಿ ಹೇಳಿದಲ್ಲಿ ಮದ್ವಿಯಾಗಿ ಸುಖವಾಗಿರು. ಇದನ್ನ„ ನಾ ಬೇಡ್ಕೋತೇನಿ…’ ಅಷ್ಟು ಮಾತು ಹೇಳಿದ ಮೇಲೆ ಅವನನ್ನು ಅಲ್ಲಿಂದ ಹೊರಗೆ ದೂಡಿದರು. ಆಕೆಯ ನಾಲಿಗೆಯಿಂದ ಮಾತು ಹೊರಳುತ್ತಿಲ್ಲವೆಂದೂ ಬರೀ ಗುಳಿಗಿ-ಔಷಧಗಳ ಮೇಲೆ ಬದುಕಿದ್ದಾಳೆಂದೂ ದವಾಖಾನೆಯಿಂದ ಸುದ್ದಿ ಬರುತ್ತಿದ್ದವು. ನೋಡಲು ಹೋದವರನ್ನು ಪಾರಿಜಾತದ ಒಂದು ಹಾಡು ಹೇಳಲು ಪೀಡಿಸುತ್ತಿದ್ದಳಂತೆ. ಒಂದು ಸಲ ಕೃಷ್ಣ ಬಂದು ಅವಳ ಅಣ್ಣನನ್ನು ಕೊಲ್ಲುವ ಕನಸು ಬಿತ್ತಂತೆ. ಕನಸಿನಲ್ಲಿ ರಕ್ತ ನೋಡಿ ಹೆದರಿದ ಆಕೆ ‘ಕೊಲ್ಲಬೇಡವೀಗಾ, ನಮ್ಮಣ್ಣನ ಕೊಲ್ಲಬೇಡವೀಗಾ, ಕಾಯದೆ ಕೊಲ್ವದಾವ ನೀತಿ’ಯೆಂದು ಎರಡು-ಮೂರು ದಿನ ಅಣ್ಣ, ಅಪ್ಪ-ಅವ್ವರನ್ನು ತಬ್ಬಿ ಅತ್ತಳು. ಇವಳಿಗೆ ಯಾಕೋ ಮನಸ್ಸು ಸರಿಯಿಲ್ಲ, ಧಾರವಾಡದ ಮಾನಸಿಕ ದವಾಖಾನೆಯಲ್ಲಿ ಒಮ್ಮೆ ತೋರಿಸುವುದು ಒಳ್ಳೆಯದೆಂದು ಹುಬ್ಬಳ್ಳಿ ಡಾಕ್ಟರರು ಹೇಳಿದರು. ಅವರು ಹೇಳಿದ ಮೇಲೆ ಹೋಗದೆ ಇರಲಿಕ್ಕೆ ಆಗುತ್ತದೆಯೇನು? ಇವರ ಪುಣ್ಯಕ್ಕೆ ಒಬ್ಬ ವಿನಯವಂತ ಡಾಕ್ಟರ ಸಿಕ್ಕ.

‘ಏನವಾ ನಿನ್ನ ಹೆಸರು?’

“ಇದೇನ್ರಿ ಡಾಕ್ಟರ್, ಒಂದನೆ ಇಯತ್ತೆ ಹುಡುಗಿಗೆ ಕೇಳಿದಂಗ ಕೇಳ್ತೀರಿ.” ಈ ಹುಡುಗಿಯ ಬಿರುಸು ಮಾತು ಡಾಕ್ಟರರ ಸಮಾಧಾನವನ್ನು ಕದಡಿತು. ಆದರೂ ಆತ ತೋರಗೊಡಲಿಲ್ಲ. ಹುಸಿನಗೆ ನಕ್ಕ.

‘ಹೌದವಾ, ನಾ ಮಾಸ್ತರ್ ಅದೇನಿ. ನೌಕರಿ ಮಾತ್ರ ದವಾಖಾನ್ಯಾಗ. ನಮ್ಮ ನಮ್ಮ ಹೆಸರು, ನಿಮ್ಮ ನಿಮ್ಮ ಹೆಸರು ಮರತು ಹೋಗಬಾರದಲ್ಲ? ಅದಕ್ಕ„ ನನ್ನ ಇಲ್ಲಿ ಕೇಳಾಕ ಇಟ್ಟಾರ.’

“ಹೌದ್ರ್ಯಾ. ಹಂಗಾದ್ರ ಮೊದಲು ನಿಮ್ಮ ಹೆಸರು ಹೇಳ್ರಿ.” ವಿಮಲವ್ವ ಎಷ್ಟೋ ದಿನಗಳ ಮೇಲೆ ನಕ್ಕಳು. ಈಕೆ ಸೋಲುವ ಹೆಂಗಸಲ್ಲ ಅನಿಸಿತು ಅವನಿಗೆ.

“ನನ್ನ ಹೆಸರು ಕಿಟ್ಟಣ್ಣ, ಕೃಷ್ಣ ಅಂತ…”

ಡಾಕ್ಟರ್ ತನ್ನ ಹೆಸರನ್ನು ಇನ್ನೂ ಪೂರ್ತಿ ಹೇಳಿರಲಿಲ್ಲ. ಅಷ್ಟರಲ್ಲಿ ವಿಮಲವ್ವ ಅವನ ಕಪಾಳಕ್ಕೆ ರಪ್ ಅಂತ ಹೊಡೆದಳು. ಅವನು ಹಾಕಿಕೊಂಡಿದ್ದ ಕನ್ನಡಕ ಕೆಳಗೆ ಬಿತ್ತು. ಆಘಾತಗೊಂಡಿದ್ದ ಅವನು ಅವಳ ಕೆನ್ನೆಗೆ ಎರಡು ಬಾರಿಸಬೇಕೆನ್ನುವಷ್ಟರಲ್ಲಿ ಕಲ್ಲಪ್ಪನೆ ಅವಳ ಬೆನ್ನಿಗೆ ಜೋರಾಗಿ ಗುದ್ದಿದ. ಡಾಕ್ಟರನೆ ಈಗ ಅವನನ್ನು ಬಿಡಿಸಬೇಕಾಯಿತು. ಮತ್ತಿಬ್ಬರು ಡಾಕ್ಟರ್ ಬಂದರು. ಅಳುತ್ತಿದ್ದ ಅವಳನ್ನು ಡಾಕ್ಟರ್ ಒಂದೆರಡು ಗುಳಿಗೆ ನುಂಗಿಸಿ ನೀರು ಕುಡಿಸಿ ಸಮಾಧಾನಪಡಿಸಿದರು. ಕೂಡಲೆ ಆಕೆ ನಿದ್ದೆಹೋದಳು. ಆಕೆಯ ಮನಸ್ಸು ಕೃಷ್ಣನ ಕಥೆಯಿಂದ ಘಾಸಿಗೊಂಡಿದೆಯೆಂದು ಅವರಿಗೆ ತಿಳಿಯಿತು. ಇದನ್ನು ಮೊದಲೆ ಹೇಳಬಾರದಾಗಿತ್ತೆ ಎಂದು ಎಲ್ಲ ವಿಷಯ ತಿಳಿದು ಕಲ್ಲಪ್ಪನನ್ನು ಝಾಡಿಸಿದರು. ‘ನಾಟಕದ ಕೃಷ್ಣ ಬಂದು ನಮ್ಮಣ್ಣನ ಸಾಯಹೊಡದು ನನ್ನ ಕರ್ಕೊಂಡು ಹೋಗ್ತಾನಂತ.’ ಎಚ್ಚರಾದಾಗ ವಿಮಲವ್ವ ಹೇಳಿದ ಮಾತಿಗೆ ಡಾಕ್ಟರ್ ನಕ್ಕರು. ‘ನಿಮ್ಮಣ್ಣ ದೊಡ್ಡ ಹುಲಿ ಅದಾನು. ಇಂವ ಅಡರ್ ಅಂದ್ರ ಕೃಷ್ಣನ ಕಿರೀಟ ಅಲ್ಲೇ ಬೀಳ್ತದ ತಗೋ. ನೀಯೇನೂ ಹೆದರಬ್ಯಾಡ’. ವಿಮಲವ್ವ ಈಗ ಮತ್ತೊಮ್ಮೆ ಜೋರಾಗಿ ನಕ್ಕಳು, ನಿದ್ರಿಸಿದಳು. ಎರಡು-ಮೂರು ದಿನಗಳಲ್ಲಿ ಆಕೆಯ ಪರಿಸ್ಥಿತಿಯಲ್ಲಿ ಎಷ್ಟೋ ಸುಧಾರಣೆಯಾಯಿತು. ಅಡರ್ ಅಡರ್ ಎಂದು ಅಣ್ಣನನ್ನು ಕಚ್ಚುತ್ತ ಎಷ್ಟೋ ಹೊತ್ತಿನತನಕ ನಗುತ್ತಿದ್ದಳು.

ಕಲ್ಲಪ್ಪ ತುಸು ನಿರಾಳಗೊಂಡ. ತಂಗಿಯ ಹುಚ್ಚು ಸಂಪೂರ್ಣ ವಾಸಿಯಾದಂತೆ ಅನಿಸಿತು. ವಾಸಿಯಾಗಲಿ, ಬಿಡಲಿ. ಆ ಕೃಷ್ಣನನ್ನು ದ್ವೇಷಿಸುವಂತಾದಳಲ್ಲ ಎಂದು ಮತ್ತೂ ಸಂತೋಷವೆನಿಸಿತು. ನಾಟಕದ ಹಾಡುಗಳನ್ನು ಹಾಡುತ್ತಿದ್ದವಳು, ತಾಲೀಮಿನ ಮಂದಿಗೆ ಫಳಾರ ವ್ಯವಸ್ಥೆ ಮಾಡಿ ಕಂಪನಿಯನ್ನು ಚಹಾಕ್ಕೆ ಕರೆದು ಓಣಿಯಲ್ಲಿ ಮೆರೆಯುತ್ತಿದ್ದವಳು ಈಗ ದವಾಖಾನೆಯಿಂದ ವಾಪಸ್ ಮನೆಗೆ ಬಂದ ಮೇಲೆ ಆಟಗಳನ್ನೂ, ಆಟದ ಮಂದಿಯನ್ನೂ ಒಂದೆ ಸಮನೆ ದ್ವೇಷಿಸತೊಡಗಿದಳು. ‘ಅಣ್ಣಂದಿರಾ, ಅವ್ವಂದಿರಾ ನಾನು ತಪ್ಪು ಮಾಡಿದೆ. ಜೀವನ ಬೇರೆ, ನಾಟಕ ಬೇರೆ, ಅಣ್ಣಾ, ನಿನಗೆ ಎಷ್ಟೋ ದುಃಖ ಕೊಟ್ಟೆ…’ ಎಂದು ಒಂದು ಸಲ ಓಣಿಯ ಹಿರಿಯರನ್ನೆಲ್ಲ ಕೂಡಿಸಿ ತಾನಿನ್ನು ಯಾವ ಬಯಲಾಟಕ್ಕೂ ಹೋಗುವುದಿಲ್ಲ, ಯಾರ ಮಾತಿಗೂ ಮೋಸ ಹೋಗುವುದಿಲ್ಲವೆಂದು ಅರಳಿಗಿಡದ ಪಕ್ಕಕ್ಕೆ ಶಿಥಿಲಗೊಂಡ ಉಡುಚಮ್ಮನ ಗುಡಿಯೆದುರು ಉಧೋ ಎಂದು ನಾಟಕದ ಶೈಲಿಯಲ್ಲಿ ಬಿದ್ದಳು. ಮನಪರಿವರ್ತನೆಗೊಂಡ ಇವಳನ್ನು ಎಬ್ಬಿಸಿದ ಹಿರಿಯರು ಅಂದು ತಾವೇ ತಮ್ಮ ಕೈಯಾರೆ ಚುರುಮುರಿ-ಕಾರದಾನಿ ತರಿಸಿ ಅದರಲ್ಲಿ ದೇವತೆಗೆ ಒಡೆದ ತೆಂಗಿನಕಾಯಿಯನ್ನು ಚೂರುಗಳಾಗಿ ಬೆರೆಸಿ ಮನೆಮನೆಗೆ ಹಂಚಿದರು. ಪ್ರೇಮವಿವಾಹ ಎಷ್ಟು ನಿಷ್ಫಲವಾಗುತ್ತವೆ, ಎಷ್ಟೊಂದು ಸಂಕಟಗಳನ್ನು ಅದು ಹೊತ್ತು ತರುತ್ತದೆ ಎಂಬುದರ ಕುರಿತು ತಾನೂ ಒಂದು ಸಣ್ಣಾಟ ರಚಿಸುವುದಾಗಿಯೂ, ಮುದುಕಪ್ಪನ ತಂಡದ ಮಂದಿಯನ್ನು ಕರೆದುಕೊಂಡೇ ಅದನ್ನು ಆಡುವುದಾಗಿಯೂ ಕಲ್ಲಪ್ಪ ಶಪಥ ತೊಟ್ಟನು. ‘ಇಂತಹ ತಂಗಿ ಪಡ್ಯಾಕ ಪುಣ್ಯ ಮಾಡೀದಿ ನೀನು. ನಿನ್ನ ಮನಿ ಕಿಮ್ಮತ್ತು ಉಳೀತು ಮತ್ತು ಈ ಊರ ಕಿಮ್ಮತ್ತು ಉಳೀತು. ಹುಷಾರವಾ ತಂಗಿ, ನಿನ್ನ ಹಿಡಕೊಂಡ ಸೋಂಕು ಅಷ್ಟು ಲಗೂ ಹೋಗಿರಾಂಗಿಲ್ಲ. ಪ್ರೇಮದ ಮಹಲಿನಿಂದ ಕೆಳಗೆ ಬಿದ್ದವರು ಬದುಕಿರೋದು ಬಾಳ ಕಡಿಮಿ. ನಿನ್ನ ನೋಡಿದ್ರ ಆ ಗುಂಗು ಇನ್ನೂ ಸ್ವಲ್ಪ ಐತಿಯೆಂತ ಅನಸ್ತದ. ಕಾಯಿಲೆಯ ಕಸರ ಉಳಕೊಂಡಿರತೈತಿ. ಹುಷಾರಾಗಿರು. ಮನಿ ಬಿಟ್ಟು ಹೊರಗ ಬಂದಗಿಂದಿ.’ ಹಿರಿಯರು ಅಣ್ಣನಿಗೆ ಹೇಳುವುದನ್ನು ಹೇಳಿ, ತಂಗಿಗೆ ಹೇಳುವುದನ್ನು ಹೇಳಿ ಹೊಸ ಚಿಮಣಾ ಭಾಗವಹಿಸುವವಳಿದ್ದ ಸಂಗ್ಯಾ ಬಾಳ್ಯಾ ನೋಡಲು ಸಂಜೆಯಾಗುತ್ತಿದ್ದಂತೆಯೇ ಪಕ್ಕದೂರಿಗೆ ಚಕ್ಕಡಿ ಹೂಡಿದರು.

ನಾಟಕ ನೋಡಲು ವಿಮಲವ್ವ ಬರುವುದಿಲ್ಲವೆಂದ ಮೇಲೆ ಇನ್ನು ಆಕೆಯನ್ನು ನೋಡಲೆಂದೆ ಬರುವವರು ಬಂದಾರೆಯೆ? ಯಾರು ಏನೇ ಅನ್ನಲಿ, ಬಿಡಲಿ ಅವಳತ್ತ ಕಣ್ಣು ಹಾಯಿಸುತ್ತಿದ್ದ ಪಡ್ಡೆ ಹುಡುಗರಿಗಂತೂ ಆಕೆಯ ಗೈರುಹಾಜರಿ ಇಂತಹ ಆಟಗಳ ಸ್ವಾರಸ್ಯವನ್ನೆ ತಿಂದುಹಾಕಿತು. ಶೇಕಣ್ಣ ಕೃಷ್ಣನ ಪಾರ್ಟು ಯಾಕಾದರೂ ಹಾಕಿದನೊ, ಇವಳು ಯಾಕಾದರೂ ಮನಸೋತಳೊ, ಮನಸೋತರೆ ಸೋಲಲಿ ಅವನ ಜೊತೆ ಓಡಿಯಾದರೂ ಯಾಕೆ ಹೋಗಲಿಲ್ಲವೊ ಎಂದು ಮುರುಕು ಚಕ್ಕಡಿಯ ಮೇಲೆ ಕಳ್ಳತನದಿಂದ ಸಿಗರೇಟು ಸೇದುತ್ತ ಸರಹೊತ್ತಿನತನಕ ಚರ್ಚಿಸುತ್ತಿದ್ದರು. ಒಂದು ವೇಳೆ ವಿಮಲವ್ವ ಚಿಮಣಾ ಆಗಿದ್ದರೆ ಆಕೆಯನ್ನು ಮೀರಿಸುವ ಸೌಂದರ್ಯವತಿ ಯಾರೂ ಇರುತ್ತಿರಲಿಲ್ಲವೆಂದು ಬೈಲಹೊಂಗಲ-ಸಂಪಗಾವ, ಕುಂದಗೋಳ-ಬೆನಕಟ್ಟಿ ಮುಂತಾದ ಊರುಗಳ ಚಿಮಣಾಗಳೊಂದಿಗೆ ಹತ್ತಾರು ಕೋನಗಳೊಂದಿಗೆ ಆಕೆಯನ್ನು ಹೋಲಿಸಿ ನೋಡುವರು.

“ಆಕೀನ್ನ ತಗೊಂಡು ಏನ ಮಾಡ್ತೀ? ಬಂದಿದ್ದಲ್ಲ, ಬಾರಿಸಿದ್ದಲ್ಲ. ಮನಸ್ಸ ಇಲ್ಲದವಳನ್ನ ಮದುವಿಯಾಗಿ ಯಾರೋ ಗ್ವಾಡಿಗೆ ಹಾದರಂತ. ಹಂಗಾತು ನಿನ್ನ ಬಾಳೆ. ಜಗತ್ತು ಇದ„ ಸುಂದರಿ ಮ್ಯಾಲೆ ನಿಂತಿಲ್ಲ. ಬಾ, ಕಲ್ಲಪ್ಪಗ ಹೆದರಿ ಎಷ್ಟಂತ ಹುಟ್ಟಿದೂರಿಗೆ ಹೊರಗಾಗ್ತಿ?” ಎಲ್ಲೆಲ್ಲೊ ಅಲೆಯುತ್ತಿದ್ದ ಶೇಕಣ್ಣನನ್ನು ಮುದುಕಪ್ಪ ಒಂದು ವಾರ ಹುಡುಕಾಡಿ ಮತ್ತೆ ಮುತ್ತಳ್ಳಿಗೆ ಕರೆತಂದ.

‘ಕಾಕಾ, ಆಕಿಗೆ ನನ್ನ ಬಗ್ಗೆ ಒಳಗಿಂದೊಳಗ ಮನಸೈತಿ. ಆದರ ಮಂದಿಗೆ ಹೆದರಿ ಹಂಗ ಮಾಡ್ತಾ ಇದಾಳ. ನಮ್ಮಿಬ್ಬರ ನಡುವೆ ನೀ ದೂತೆ ಆದರ ಕೆಲಸ ಸರಳ ಆಕ್ಕೇತಿ.’

‘ಏ ಹುಡುಗಾ, ನಿನಗೆಲ್ಲೊ ಹುಚ್ಚ ಹಿಡಿದೈತಿ. ಮತ್ತೂ ನಿಗಿನಿಗಿ ಬೆಂಕಿಮ್ಯಾಲ, ನಡದನಂತಿಯಲ್ಲೊ? ಚೂಪಾದ ಖಡ್ಗದ ಬಾಯಿಗೆ„ ಹಾದನಂತಿಯಲ್ಲೊ?’

‘ಕಾಕಾ, ಆಕಿ ಪ್ರೀತಿನ ಹಂಗೈತಿ. ನಾ ಹಾಡೋ ಹಾಡು ಬಾಯಿಪಾಠ ಮಾಡಿ ನನ್ನ ಕಿವ್ಯಾಗ ಹೇಳಾಕಿ. ನನ್ನ ಗಲ್ಲ ಕಚ್ಚಾಕಿ. ಎಲ್ಲಿ ಹೋಗ್ತಿ ಇಲ್ಲೇ ಇರು ಅಂತ ಬೆಳದಿಂಗಳದಂತ ತನ್ನ ಎದಿಯೊಳಗ ಹುದುಗಿಸಿಕೊಳ್ಳಾಕಿ…’

‘ಬಾ ಬಾ ಶಾಣ್ಯಾ ಅದಿ ಬಾ. ಹಂಗಾದ್ರ ಈ ಸಲ ನಮ್ಮಿಬ್ಬರನ್ನ ಕೂಡೇ ಕೊಲ್ತಾರು ಅಂದಂಗಾತು’.

ಮುತ್ತಳ್ಳಿಯಲ್ಲಿ ಇನ್ನು ಆಟ ಕನಸೆಂಬಂತೆ ಆಗಿ ನಾಲ್ಕೈದು ತಿಂಗಳು ಕಳೆಯುವುದರೊಳಗೆ ಮತ್ತೆ ತಾಲೀಮಿನ ಮನೆಯಲ್ಲಿ ಗುಟ್ಟಾಗಿ ತಾಲೀಮು ನಡೆಯತೊಡಗಿತು. ರಂಗದ ಮೇಲೆ ಪಾರಿಜಾತವನ್ನು ನೋಡುವ ಮೊದಲೆ ಅನೇಕ ನಾರಿಮಣಿಗಳು ಕೊರವಂಜಿಯ ವೇಷದಲ್ಲಿರುವ ಕೃಷ್ಣನ ಜಾರತನ, ಚೋರತನ, ಕಪಟತನಗಳಿಗೆ ಮೋಹಗೊಂಡು ಆ ಮಾತು-ದೃಶ್ಯಗಳನ್ನು ಕದ್ದುಕೇಳತೊಡಗಿದರು.

“ನಮ್ಮ ಸೂರ್ಯದೇವರ ಸತ್ಯ ನಮಗಿದ್ದರೆ
ನಮ್ಮ ತಂದೆ-ತಾಯಿಯ ಪುಣ್ಯ„ ನಮಗಿದ್ದರೆ
ದೊರೆಯಲಿ ಕೃಷ್ಣನಂತಹ ಪುರುಷ”-ಎಂದು ತುಟಿಬಿಚ್ಚದೆ ಹಾಡಿದರು.

ಮಾತಾಡದ ಮೂಕರನ್ನು ಅವನು ಮಾತಾಡಿಸುತ್ತಾನೆ ಎಂಬ ಪ್ರತೀತಿ ಹಬ್ಬಿತು. ಆ ಮಾತುಗಳನ್ನು ಕೇಳಬಾರದೆಂದರೂ ವಿಮಲವ್ವನ ಕಿವಿಗಳು ತಂತಾನೆ ಅವುಗಳತ್ತ ತಿರುಗುತ್ತಿದ್ದವು. ಶೇಕಣ್ಣ ಆಟದಲ್ಲಿ ಬಿಳಿಧೋತರ ಉಟ್ಟು, ಮುಗಿಲ ನೀಲಿ ಅಂಗಿ ತೊಟ್ಟು, ಗೋಡಂಬಿ ಅಚ್ಚು ತಿರುವಿದ ಜರದ ಪಟಗಾ ಸುತ್ತಿ, ಅದಕ್ಕೊಂದು ನವಿಲುಗಿರಿ ಸಿಕ್ಕಿಸಿ, ಕೊರಳಲ್ಲಿ ಮುತ್ತಿನ ಸರ ಹಾಕಿದನೆಂದರೆ ಕನಸಿನಲ್ಲಿ ಕಂಡ ಪುರುಷ ರೂಪ ಕಣ್ಣೆದುರು ಬಂದಂತಾಗುವುದು. ಅವನು ‘ಧಿತ್ತೋಂ, ಧಿತ್ತೊಂ, ಧಿತ್ತೋಂ, ಧಂ…’ ಎಂದು ಕುಣಿಯುತ್ತಿದ್ದರೆ ತಮ್ಮೆದೆಯ ನಗಾರಿಯನ್ನು ನುಡಿಸಿದಂತಾಗುವುದು.

ಈ ಸಲ ಆಟಗಳಿಗೆ ಮಂದಿ ಮಿತಿಮೀರಿ ಬರತೊಡಗಿದರು. ಮುದುಕಪ್ಪ ದೂತೆಯಾಗಿ ಶೇಕಣ್ಣ ಕೃಷ್ಣ-ಕೊರವಂಜಿಯಾಗಿ ಮನೆಮಾತಾದರು. ಇದ್ದರೆ ಇಂತಹ ಗುರು-ಶಿಷ್ಯ ಜೋಡಿ ಇರಬೇಕೆಂದು ಅನ್ನತೊಡಗಿದರು. ಸುತ್ತ ಊರುಗಳ ಮಂದಿ, ಇದ್ದ ಊರಿನ ಮಂದಿ ಎರಡೆರಡು ಸಲ ನೋಡಿದರೂ ಅವರ ಮನಸ್ಸು ತಣಿಯದು. ಸತ್ಯಭಾಮೆಗೆ ಎಷ್ಟು ಸೊಕ್ಕು ಎಂದು ಎಲ್ಲರೂ ಆಕೆಯನ್ನು ಜರಿಯುವವರೆ. ಕೃಷ್ಣನಿಗೆ ಎಲ್ಲರನ್ನೂ ಗೆದ್ದರೂ, ಅವನು ಹಿಡಿದ ಕೈಯನ್ನು ಬಿಡದಿರಲೆಂದು ಚಿಮಣಾಗಳು ತಮ್ಮ ಚಿತ್ತವನ್ನು ಇವನಿಗೆ ಅರ್ಪಿಸಿದ್ದರೂ ಅವನ ಸತ್ಯಭಾಮೆಯಾಗಿದ್ದ, ಅವನೆದೆಯ ಪ್ರಾಣಪದಕವಾಗಿದ್ದ ವಿಮಲವ್ವ ಮಾತ್ರ ನಾಟಕ ನೋಡಲು ಬರಲಿಲ್ಲ.

ನಾಟಕದ್ವೇಷಿಯಾಗಿದ್ದ ಕಲ್ಲಪ್ಪ ಕೂಡ ದೂರದಿಂದ ಆಟ ನೋಡಿ ಹೋಗಿದ್ದನ್ನು ಮುದುಕಪ್ಪ ನೋಡಿದ. ‘ಅಣ್ಣ ಒಲಿದಿದ್ದಾನೆಂದ ಮೇಲೆ ತಂಗಿ ಒಲಿಯುವುದು ಎಷ್ಟೊತ್ತು? ನೋಡ್ತಾ ಇರು.’ ಶೇಕಣ್ಣನಿಗೆ ಧೈರ್ಯ ತುಂಬಿದ. ಮತ್ತೆರಡು ದಿನ ಏನೂ ಸಂಭವಿಸಲಿಲ್ಲ. ಇನ್ನು ಉಳಿದಿರುವುದು ಒಂದೇ ಆಟ. ಕಟ್ಟಕಡೆಯ ಆಟ. ಕೊರವಂಜಿ ವೇಷದಲ್ಲಿ ಕೃಷ್ಣ ರಂಗದ ಮೇಲೆ ಬರಬೇಕು. ಬರಲಿಲ್ಲ. ದೂತೆಗೆ ಆಘಾತವಾಯಿತು. ಹಾಡು ಎಲ್ಲಿಯತನಕ ನಡೆಯುತ್ತದೆ? ಒಳಗಡೆ ಕೃಷ್ಣನಿಲ್ಲ. ‘ಕೃಷ್ಣ ಪಾತ್ರಧಾರಿಗೆ ಆರಾಮವಿಲ್ಲ. ಪ್ರೇಕ್ಷಕರು ಕ್ಷಮಿಸಬೇಕು.’ ಮುದುಕಪ್ಪ ಕೈಮುಗಿದು ಹೇಳಿದಾಗ ಅರ್ಧ ಜನ ನಂಬಲಿಲ್ಲ. ದಾಂಧಲೆಯಾಯಿತು. ಏನಾಗಿದೆಯೆಂದು ಕೆಲವರು ಒಳಗಡೆ ನೋಡಲು ಹೋದರು.

ಬಣ್ಣ ತೊಳೆಯುತ್ತಿದ್ದ ಮುದುಕಪ್ಪನಿಗೆ ಇದೆಲ್ಲ ಬಹಳ ವಿಚಿತ್ರವಾಗಿ ತೋರಿತು. ತಾಸಿನ ಹಿಂದೆ ಬಣ್ಣ ಹಚ್ಚಿಕೊಂಡು ತಯಾರಾಗಿ ಕುಳಿತಿದ್ದ ಕೃಷ್ಣ ಈಗ ಇಲ್ಲ. ಬಯಲ ಕಡೆ ಹೋಗಿರಬಹುದೆಂದೋ, ಇತ್ತೀಚೆಗೆ ಕಲಿತ ಸಿಗರೇಟಿನ ಹುಕಿಗೆ ಹೊರಗಡೆ ನಿಂತಿರಬಹುದೆಂದೋ ಯೋಚಿಸಿದ್ದ ಅವನು ಹಾಡುಗಳಿಂದ ಆಟ ಮುನ್ನಡೆಸಿ ಸುಸ್ತಾದ. ಕೊನೆಗೆ ಉಸಿರುಗಟ್ಟಿ ನಿಂತ. ಮರುದಿನ ಮುಂಜಾನೆ ಊರಿನಲ್ಲಿ ಇದ್ದರೆ ಜೀವಕ್ಕೆ ಕುತ್ತು ಎಂದು ಅವನಿಗೆ ತಿಳಿದಿತ್ತು. ರಾತ್ರೋ ರಾತ್ರಿ ಊರುಬಿಟ್ಟ. ನಾಟಕದ ಚಿಮಣಾ ಇವನ ಸತ್ಯಭಾಮೆಯನ್ನು ದೊರಕಿಸಿಕೊಡಲು ಹದಿನೈದು ದಿನಗಟ್ಟಲೆ ಶ್ರಮಿಸಿದ್ದಳಂತೆ! ಅವನ ಪ್ರೀತಿಯನ್ನು ಅವಳಿಗೆ ಹೋಗಿ ಅರುಹಿದಳಂತೆ! ಅಂತೂ ಮಾತಾಡದ ವಿಮಲವ್ವನನ್ನು ಇವನು ದೂರದಿಂದಲೆ ಮಾತಾಡಿಸಿಬಿಟ್ಟ. ಬಯಲಕಡೆ ಬಂದಂತೆ ಮಾಡಿ ಢವಗುಡುವ ಎದೆಯನ್ನು ಸಂಭಾಳಿಸುತ್ತ ಇವನು ನಾಟಕ ಬಿಟ್ಟು ಬರುವನೋ ಇಲ್ಲೊ ಎಂದು ಹಾರಿಹೋಗುತ್ತಿದ್ದ ಜೀವವನ್ನು ಹಿಡಿದು ಕೊನೆಗೆ ನಾಟಕದ ವೇಷದಲ್ಲಿಯೆ ಇವನು ಬಂದದ್ದು ಕಂಡು ಆ ಭಯದಲ್ಲಿಯೂ ಜೀವಸೆಲೆಯಿಂದ ನಕ್ಕು ಊರಿಗೆ ಕೇಳುವಷ್ಟು ಸಪ್ಪಳ ಮಾಡುವ ಬೈಕ್ ಹಿಂದೆ ಅವನನ್ನು ಬಿಗಿಯಾಗಿ ತಬ್ಬಿ ಕುಳಿತಳಂತೆ! ಚಿಮಣಾ ಇಷ್ಟೆಲ್ಲಾ ಹೇಳುತ್ತಿರಬೇಕಾದರೆ ಮುದುಕಪ್ಪ ಬೆವೆಯುತ್ತಿದ್ದ. ‘ಶಾಣ್ಯಾರದೀರಿ ತಗೋ, ನಾಟಕಮಾಸ್ತರನ ತಲೀನ ಮಟಮಟ ಮಧ್ಯಾಹ್ನ ಹಾರಿಸಾವ್ರು ನೀವು.’ ರೊಕ್ಕದ ಚೀಲವನ್ನು ಸೊಂಟಕ್ಕೆ ಸಿಗಿಸಿಕೊಳ್ಳುತ್ತ ಅವನು ಬಾಡಿಗೆ ಜೀಪು ಏರಿದ. ದಾರಿ ಕರೆದೊಯ್ಯುವಲ್ಲಿಗೆ ಜೀಪು ಹೋಗುತ್ತಿತ್ತು.

*****

‘ಅಯ್ಯ ಯವ್ವಾ, ಹುಡುಗಿ ಹೆಂಗ ಮಳ್ಳ ಮಾಡಿತು. ನೋಡಿದ್ಯಾ ನೀನು? ಹುಚ್ಚು ಹಿಡಿದಿದ್ದು ಖರೆಖರೆ ಅನ್ನಬೇಕು, ಖರೆ ಹುಚ್ಚು ಹಿಡಿದಿತ್ತೋ? ಇಲ್ಲಾ ನಾಟಕ ಮಾಡಿದ್ಲೊ ಯಾರಿಗ್ಗೊತ್ತು?. ತನ್ನ ಅಪ್ಪ-ಅವ್ವಗ, ಅಗದೀ ಮುಖ್ಯ ಅಂದ್ರ, ಆ ಬಾಡ್ಯಾ, ಆಕಿ ಅಣ್ಣ ಕಲ್ಲಪ್ಪಗ ಚಳ್ಳೆಹಣ್ಣು ತಿನ್ನಿಸಿದ್ಲು. ಖರೇ, ಆಕೀ ಧೈರ್ಯ ಮೆಚ್ಚಬೇಕು. ನಾವೆಲ್ಲ ಇಲ್ಲೆ ಕುಂತೀವಿ…’ ದೂರದಲ್ಲಿ ಹೊಳೆಯುವ ಮಿಣುಕು ಮಿಣುಕು ಬೆಳಕಿನಲ್ಲಿ ಮುಂದೆ ಚರಗಿ ಇಟ್ಟುಕೊಂಡು ಬಯಲಕಡೆ ಕುಳಿತಿದ್ದ ಹೆಂಗಸರಲ್ಲಿ ಆಪ್ತ ಮಾತುಕತೆ ನಡೆಯುತ್ತಿತ್ತು. ಹೊಸ ಹುಡುಗಿಯರಲ್ಲಿ ಯಾರು ಮದುವೆಯಾದವರು, ಯಾರು ಆಗದೆ ಇರುವವರು, ಯಾರು ಓಡಿಹೋಗಲು ಬಯಸುವವರು ಎಂಬ ಗುಟ್ಟು ಗಾಢಕತ್ತಲಿನಲ್ಲಿ ಬಿಚ್ಚಿಕೊಂಡು ತುಸುಹೊತ್ತಿನ ನಂತರ ಮತ್ತಷ್ಟು ಗಾಢವಾಗಿ ಹೆಣೆದುಕೊಳ್ಳುತ್ತಿತ್ತು. ಕಲ್ಲಪ್ಪ ಮುದುಕಪ್ಪನ ಮನೆಯ ಮುಂದೆ ಒದರಾಡಿದ. ದೊಡ್ಡ ಸಂಚು ಮಾಡಿ ತನ್ನ ತಂಗಿಯನ್ನು ಅಪಹರಿಸಿದ್ದಾರೆಂದು, ಅದಕ್ಕೆ ಸೇಡು ತೀರಿಸಿಕೊಳ್ಳದಿದ್ದರೆ ತಾನು ಬದುಕಿರುವುದಿಲ್ಲವೆಂದು ಅಂಗಳದ ಮಣ್ಣುಮುಟ್ಟಿ ಪ್ರತಿಜ್ಞೆ ಮಾಡಿದ. ಮುದುಕಪ್ಪನ ಮಕ್ಕಳು ಆಗಲೆ ದೊಡ್ಡವರಾಗಿ ಕಮತ ಮಾಡುತ್ತಿದ್ದರು. “ನಮ್ಮಪ್ಪಗ, ನಮಗ ಏನೂ ಸಂಬಂಧ ಇಲ್ಲ. ಆಂವ ನಮ್ಮ ಮನಿ ಬಿಟ್ಟ„ ಬಾಳ ದಿನ ಆತು. ಅಷ್ಟೂ ಮೀರಿ ನೀ ಒದರಾಡಿದ್ರ ನಿನ್ನ ಕೈಕಾಲ ಮುರೀತೀವಿ” ಎಂದರು. ಮುದುಕಪ್ಪನ ಮೊದಲನೆ ಹೆಂಡತಿ ಮುಸಿಮುಸಿ ಅಳುತ್ತಿದ್ದರೆ ಎರಡನೆ ಹೆಂಡತಿ ‘ನಾ ಇಂವನ ನಂಬಿ ಬಂದಿದ್ದಕ್ಕ ನನಗೂ ಮೋಸ ಮಾಡಿದ. ಪಾಪ, ಈ ಅಕ್ಕಾ ಇರಲಿಲ್ಲಂದ್ರ ನಾನು ಹೊಳೀನೊ, ಬಾಂವಿನೊ ನೋಡಕೋಬೇಕಾಗಿತ್ತು’ ಎಂದು ಲಟಿಕೆ ಮುರಿದಳು. ಹೋದವನು ತಿರುಗಿ ಬಾರದಿದ್ದರೆ ಒಳ್ಳೆಯದು ಎಂದು ಆಕೆ ಕಲ್ಲಪ್ಪನ ಪರವಾಗಿಯೆ ಮಾತಾಡಿದಳು.

ಮುದುಕಪ್ಪ ಹಳೇ ದೋಸ್ತಿಯನ್ನು ಹಿಡಿದುಕೊಂಡು ವಿಜಾಪುರದ ಸಮೀಪ ಬಬಲೇಶ್ವರ ಕಂಪನಿಯನ್ನು ಸೇರಿಕೊಂಡ. ಇವನ ಬಗ್ಗೆ ಅಲ್ಪಸ್ವಲ್ಪ ಕೇಳಿದ್ದ ಮಂದಿಗೆ ‘ಮುದುಕಪ್ಪ ಮಾಸ್ತರ್ ಬಂದಾನಂದ್ರ ನಮ್ಮ ಆಟದ ಹಸಿವಿ ತೀರಿತು’ ಎಂದು ಇವನನ್ನು ತಮ್ಮ ರಾಜನಂತೆ ನೋಡಿಕೊಳ್ಳತೊಡಗಿದರು. ಬಬಲೇಶ್ವರ ಕಂಪನಿ ಜಗಳದಿಂದ ಮುಚ್ಚುವ ಸ್ಥಿತಿಗೆ ಬಂದಿತ್ತು. ಇವನು ಹೋಗಿ ಅದರ ಉಸ್ತುವಾರಿಯನ್ನು ವಹಿಸಿಕೊಂಡ: ‘ಮಂಗ್ಯಾಗೋಳ, ಪಾರಿಜಾತ ಅಂದ್ರ ಏನ ತಿಳ್ಕೊಂಡೀರಿ. ಅದ„ ಜೀವನ. ನಾಟಕನ„ ನಮ್ಮ ಬಾಳಾಗಬೇಕು. ಅದ„ ಗುಂಗಿನ್ಯಾಗ ಇರಬೇಕು. ಮಂದಿಗೆ ಪರಮಾತ್ಮನ ಲೀಲಾ ತೋರಿಸೋದ„ ನಮ್ಮ ಕೆಲಸ. ಜೀಂವ ಹ್ವಾದ್ರೂ ಆಟ ಬಿಡಬಾರದು!’ ಮುದುಕಪ್ಪನ ಮಾತುಗಳಿಗೆ ಹೋ ಎಂದು ಸಹಕಲಾವಿದರು ಸಂತೋಷದಿಂದ ಚೀರುತ್ತಿರುವಾಗ ಇವನು ಹಾರ್ಮೋನಿಯಂ ಮೇಲೆ ಸರಸರ ಬೆರಳನ್ನಾಡಿಸುತ್ತ ‘ಮೂರುತಿಯನು ನಿಲ್ಲಿಸೋ ಮಾಧವ ನಿನ್ನ’ ಎಂದು ರಾಗಬದ್ಧವಾಗಿ ಹಾಡತೊಡಗಿದ. ಕಂಪನಿ ನಿಂತರೆ ತಾನೆಲ್ಲಿಗೆ ಹೋಗಬೇಕು ಎಂದು ಚಿಂತಿಸುತ್ತಿದ್ದ ಕಡಕೋಳದ ಮಧ್ಯವಯಸ್ಸಿನ ಚಿಮಣಾ ರೇಣುಕಾ ಇವನ ಹಾಡಿಗೆ ಮೋಹಕವಾಗಿ ನಕ್ಕಳು.

ನಾಟಕದ ಸಲುವಾಗಿ ತಾನು ಮದುವೆಯನ್ನೆ ಆಗಲಿಲ್ಲ, ಪಾರಿಜಾತವೆ ತನ್ನ ಹೆಂಡತಿ ಎಂದು ಆತ ಹೇಳಿದಾಗ ರೇಣುಕಾ ಉಬ್ಬಿದಳು. ಇಂತಹ ಪರಮಪುರುಷ ಸಿಗಲು ತಾನು ಪುಣ್ಯ ಮಾಡಿರಬೇಕೆಂದು ಆತ ಉಣ್ಣುತ್ತಿದ್ದ ಹೋಳಿಗೆಗೆ ಮತ್ತಷ್ಟು ತುಪ್ಪ ಸುರುವಿದಳು. ಕಂಪನಿ ನಡೆಸಲು ದುಡ್ಡಿಲ್ಲವೆಂದು ಅವನು ಬೊಗಸೆಯೊಡ್ಡಿದಾಗ ಬಬಲೇಶ್ವರದ ಸಾಹುಕಾರ ಮಾಡಿಸಿಹಾಕಿದ್ದ ಅವಲಕ್ಕಿ ಸರವನ್ನು ಹಿಂದು-ಮುಂದು ಯೋಚನೆ ಮಾಡದೆ ಅವನ ಮುಟಿಗೆಗೆ ಹಾಕಿದಳು. ತನ್ನ ಬೆರಳಿನುಂಗುರಗಳನ್ನು ಅವನ ಕೈಗೆ ಇಟ್ಟು, ತನ್ನೆದೆಯ ಪದಕವನ್ನು ಅವನ ಎದೆಯ ಮೇಲಿಟ್ಟು ಸಂತೋಷಪಟ್ಟಳು. ವಿಜಾಪುರ, ಬಬಲೇಶ್ವರ, ಇಂಡಿ ಊರುಗಳಲ್ಲಿ ಮುದುಕಪ್ಪನ ಪಾರಿಜಾತ ಬಲು ಬೇಗನೆ ಪ್ರಸಿದ್ಧಿಯಾಯಿತು. ತನ್ನ ಹಿಂದಿನ ಹೆಂಡಂದಿರನ್ನು ಅವನು ಮರೆತು ರೇಣುಕಾ ಒಬ್ಬಳೆ ತನಗಿರುವ ಸತಿಯೆಂದು ನಂಬಿದ. ತೆರೆಯ ಮರೆಗೆ ಸರಿಯುತ್ತಿದ್ದ ರೇಣುಕಾಳಲ್ಲಿ ಮತ್ತೆ ತಾರುಣ್ಯವುಕ್ಕಿತು. ಆಕೆ ಚಿರಯೌವ್ವನೆಯೆಂದೂ ಆತ ಚಿರಂಜೀವಿಯೆಂದೂ ನಾಟಕ ನೋಡುವವರು ಮಾತಾಡಿಕೊಳ್ಳತೊಡಗಿದರು. ಮುದುಕಪ್ಪ ಊರು ಬಿಟ್ಟಮೇಲೆ ಮುತ್ತಳ್ಳಿಯಲ್ಲಿ ಆಟಗಳನ್ನು ಆಡುವವರಿಲ್ಲದೆ ಊರು ತನ್ನ ಚೆಲುವಿಕೆಯನ್ನು ಕಳೆದುಕೊಂಡು ವೈಧವ್ಯ ಪ್ರಾಪ್ತಿಯಾಗದಂತೆ ಗೋಚರಿಸುತ್ತದೆಯೆಂದು ಒಂದಿಬ್ಬರು ಸುದ್ದಿ ಮುಟ್ಟಿಸಿದರು. ಅದೂ ಅಲ್ಲದೆ ಇನ್ನೊಂದು ಆಘಾತಕಾರಿ ಸುದ್ದಿ ಗೊತ್ತಾಯಿತು.

ನಾಟಕದ್ವೇಷಿಯಾಗಿದ್ದ ಕಲ್ಲಪ್ಪನಿಗೆ ಏನು ಗುಪ್ತ ಸ್ಫೂರ್ತಿ ಬಂದಿತೋ, ಯಾವ ಪರವಶದ ಗಾಳಿಯನ್ನು ಒಳಗೆ ಎಳೆದುಕೊಂಡನೋ, ಏನು ಹುಕಿ ಬಂದಿತೋ ಗೊತ್ತಿಲ್ಲ. ಪರವೂರಿನ ನಾಟಕ ನೋಡಲು ಹೋಗಿ, ಅದನ್ನು ಮೆಚ್ಚಿಕೊಂಡು ತನ್ನೂರಿಗೆ ಕರೆಸಿ ಆಡಿಸಿದನಂತೆ. ಆ ಚಿಮಣಾಳಿಗೆ ಸಾವಿರದಾ ಒಂದು ಆಯೇರು ಮಾಡಿದನಂತೆ. ಇನ್ನು ಮೇಲೆ ಪ್ರತಿ ವರ್ಷ ಜಾತ್ರೆಗೆ ಕರೆಸುತ್ತಾನಂತೆ. ಶೇಕಪ್ಪ-ವಿಮಲವ್ವನ ಸುದ್ದಿಯೇ ಬಂದಿರಲಿಲ್ಲ. ಕೆಲವು ಕಡೆ ವಿಚಾರಿಸಿ ಮುದುಕಪ್ಪನೂ ಸುಮ್ಮನಾಗಿದ್ದ.

ವರ್ಷೊಪ್ಪತ್ತಿನಲ್ಲಿ ಶೇಕಪ್ಪ ಜಮಖಂಡಿ ಅಪ್ಪಾಲಾಲನ ಕಂಪನಿಯಲ್ಲಿ ಇದ್ದಾನೆಂದು ಸುದ್ದಿ ಬಂದಿತು. ಮುದುಕನಿಗೆ ಅವನ ಸತ್ಯಭಾಮೆ ರೇಣುಕಾಳ ಮುಂದೆ ಅವರಿಬ್ಬರ ಪ್ರೇಮ-ಪರಿಣಯವನ್ನು ಎಷ್ಟು ಬಣ್ಣಿಸಿದರೂ ಕಡಿಮೆಯೆ. “ರೇಣು, ಜೀವನದಾಗ ನೀ ಒಮ್ಮೆಯಾದ್ರೂ ಅವರನ್ನ ನೋಡಬೇಕು. ಖರೇಯಂದ್ರೂ ಆಕೀ ಸಲುವಾಗಿ ಅಂವನ್ನ, ಅಂವನ ಸಲುವಾಗಿ ಆಕೀನ್ನ ದೇವರು ಸೃಷ್ಟಿ ಮಾಡಿದಾನ. ಶೇಕಪ್ಪನ್ನ ನೋಡಿದರ ಖರೇ ಖರೇ ಕೃಷ್ಣನ್ನ ನೋಡಿದಂಗ„ ಆಗ್ತದ. ಆಂವ ಒಂದು ಮುಗುಳ್ನಗೆ ನಕ್ರ ಸಾಕು, ಅಥವಾ ಒಂದು ಕಣ್ಸನ್ನೆ ಮಾಡಿದ್ರು ಸಾಕು, ಹೆಂಗಸರ ಜೀಂವ ಝಲ್ ಅನ್ನಬೇಕು. ಅಂವನ ಸಲುವಾಗಿ ವಿಮಲವ್ವ ಕ್ವಾಟಿ ಹಾರಿ ಬಂದ್ಲು. ಬೇಲಿ ಜಿಗಿದು ಬಂದ್ಲು…”

‘ಸಾಕ ಸಾಕು. ಆಕೀನ ಬಣ್ಣಿಸಿದ್ದು ಸಾಕು. ಆಕೀನ ನೋಡೋ ಆಸೆಯಿಲ್ಲ ನನಗ. ನೀ ಹೇಳಿದ್ದ ಕೃಷ್ಣನ ನೋಡಬೇಕು. ಯಾವಾಗ ಕರಕೊಂಡು ಹೋಗ್ತಿ ಜಮಖಂಡಿಗೆ?’ ರೇಣುಕಾ ಮುದುಕಪ್ಪನ ಉದ್ದ ಕೂದಲು ಜಗ್ಗಿ ಹೆಣ್ಣಿನ ನೂರೆಂಟು ಭಾವಗಳನ್ನು ಆ ಕ್ಷಣದಲ್ಲಿ ಪ್ರದರ್ಶಿಸಿದಳು.

ಅವರು ಮುಂದಿನ ವಾರ ಜಮಖಂಡಿಗೆ ಹೋಗುವ ತಯಾರಿ ಮಾಡಿಕೊಂಡಿದ್ದರು. ಅಷ್ಟರಲ್ಲಿ ಶೇಕಪ್ಪನಿದ್ದ ಅಪ್ಪಾಲಾಲನ ಕಂಪನಿ ಮಹಾಲಿಂಗಪುರ, ಕೌಜಲಗಿಗಳಲ್ಲಿ ಆಟ ಆಡುತ್ತಿದ್ದಾರೆಂಬ ವಾರ್ತೆ ಬಂತು. ಇವರು ಹೋಗುವುದು ಮತ್ತೆ ಮುಂದೆ ಹೋಯಿತು. ವಿಮಲವ್ವನೂ ಈಗ ಪಾರ್ಟು ಮಾಡುತ್ತಿದ್ದಾಳೆಂಬ ಸುದ್ದಿ ಕೇಳಿ ಮುದುಕಪ್ಪ ಖುಶಿಪಟ್ಟ. “ನನಗ ಗೊತ್ತಿತ್ತು. ಹಗಲು-ರಾತ್ರಿ ಪಾರಿಜಾತ ಹಾಡು ಗುಣುಗುಣುಸಾಕಿ ಪರದೆ ಮ್ಯಾಲ ಯಾವಾಗ ಬಂದೇನೋ ಅಂತ ಚಡಪಡಿಸ್ತಿರತಾಳು ಅಂತ. ಖರೇಯಂದ್ರ ಪಾರಿಜಾತ ಈಗ ಸಂಪೂರ್ಣ ಆತು…”

ಒಂದು ಸಲ ಕೃಷ್ಣ ಬಂದು ಅವಳ ಅಣ್ಣನನ್ನು ಕೊಲ್ಲುವ ಕನಸು ಬಿತ್ತಂತೆ. ಕನಸಿನಲ್ಲಿ ರಕ್ತ ನೋಡಿ ಹೆದರಿದ ಆಕೆ ‘ಕೊಲ್ಲಬೇಡವೀಗಾ, ನಮ್ಮಣ್ಣನ ಕೊಲ್ಲಬೇಡವೀಗಾ, ಕಾಯದೆ ಕೊಲ್ವದಾವ ನೀತಿ’ಯೆಂದು ಎರಡು-ಮೂರು ದಿನ ಅಣ್ಣ, ಅಪ್ಪ-ಅವ್ವರನ್ನು ತಬ್ಬಿ ಅತ್ತಳು.

“ಅಕಸ್ಮಾತ್ ಆಕೀ ಬಗ್ಗೆ ನಮ್ಮ ನಾಡಿನ್ಯಾಗ ಸುದ್ದಿಯಾತು ಅಂದ್ರ ಅದ„ ಪಾತ್ರದಾಕಿ ಬೇಕು ಅಂತ ಇಲ್ಲಿ ಮಂದಿ ಬೇಡಿಕಿ ಇಡತಾರು. ಆವಾಗ ನಾನು ಮೂಲಿಗೆ ಸರೀಬೇಕೇನು?” ರೇಣುಕಾ ತನ್ನ ಮತ್ಸರ, ಅಳುಕುಗಳನ್ನು ತೋಡಿಕೊಂಡಳು.

“ಅಂತಹ ಹತ್ತು ಚಿಮಣಾರು ಬಂದ್ರು ನಿನ್ನ ಮಾತು, ರೂಪದ ಮುಂದ ಮಂಕಾಗ್ತಾರು. ನಾ ಹಂಗ ಮಾಡ್ತೀನಿ ಸುಮ್ನಿರು.” ಮುದುಕಪ್ಪ, ಅವಳ ದನಿ ಹಾಗೂ ಕೊರಳನ್ನು ತಿದ್ದುತ್ತ ಅವಳ ವಿಶ್ವಾಸವನ್ನು ಇಮ್ಮಡಿಗೊಳಿಸಿದ. ಅಪ್ಪಾಲಾಲನ ಕಂಪನಿಯಲ್ಲಿ ಈಗ ಕೃಷ್ಣನಿಗಿಂತ ಸತ್ಯಭಾಮೆಯೆ ಹೆಚ್ಚು ಪ್ರಸಿದ್ಧವೆಂದೂ ಬನಹಟ್ಟಿಯಲ್ಲಿ ನಾಟಕ ನಡೆದ ವೇಳೆಯೆ ಗಂಡ-ಹೆಂಡತಿ ನಡುವಿನ ತಿಕ್ಕಾಟ ಬಯಲಿಗೆ ಬಂದಿತೆಂದೂ ಅವನು ಬಣ್ಣ ಕಂಡು ಹಾರುವ ಪತಂಗವೆಂದೂ, ಅವಳು ದ್ರೋಹವೆಸಗುವ ಹೆಣ್ಣೆಂದೂ ಜರಿದಾಡಿದ ಸುದ್ದಿಗಳು ಬಂದವು.

‘ಮಂದಿ ಏನೇನೋ ಹೇಳ್ತಿರತಾರು. ಅದಕ್ಕೆಲ್ಲ ತಲಿ ಕೆಡಿಸಕೋಬಾರದು.’ ಮುದುಕಪ್ಪನ ಮಾತು ರೇಣುಕಾಳಿಗೆ ಸಮಾಧಾನ ತಂದರೂ ಸ್ವತಃ ಈ ಮುದುಕನ ಬಗ್ಗೆ ಇರುವ ವದಂತಿಗಳನ್ನು ಕೇಳಬೇಕೆಂದವಳು ಈಗ ಸಮಯ ಯಾಕೋ ಪ್ರಶಸ್ತ್ಯವಿಲ್ಲ, ಮತ್ತೊಂದು ಸಲ ಕೇಳಿದರಾಯ್ತೆಂದು ಸುಮ್ಮನಾದಳು.

ಅದಾಗಿ ಒಂದು ತಿಂಗಳು ಕಳೆದಿರಬೇಕು. ಬೆಳಗಾವಿ ಪೋಲೀಸರು ಮುದುಕಪ್ಪನನ್ನು ಹುಡುಕಿಕೊಂಡು ಬಂದರು. ಪುಣ್ಯಕ್ಕೆ ರಣರಣ ಬಿಸಿಲಿನ ಬಬಲೇಶ್ವರದಲ್ಲಿ ನಾಲ್ಕೈದು ಮಂದಿ ಬಿಟ್ಟರೆ ಇವರ ಮನೆಯಲ್ಲಿ ಇಂದು ಜಾಸ್ತಿ ಜನರಿರಲಿಲ್ಲ. ಪೋಲೀಸಪ್ಪನನ್ನು ಕಂಡು ಮಾಸ್ತರನ ಕಾಲು ಥರಥರ ನಡುಗಿದವು. ಬಬಲೇಶ್ವರ ಠಾಣೆಯ ಇನಸ್ಪೆಕ್ಟರ್ ಅಮರಪ್ಪನನ್ನು ಕಂಡು ಮುದುಕಪ್ಪನಿಗೆ ಜೀವ ಬಂದಂತಾಯಿತು. ಇನಸ್ಪೆಕ್ಟರ್‍ನಿಗೆ, ಅವನ ಪೋಲೀಸ್ ಸಿಬ್ಬಂದಿಗೆ, ಅವನ ಹೆಂಡತಿ ಸಂಬಂಧಿಕರಿಗೆ ಪುಕ್ಕಟೆ ನಾಟಕ ಪಾಸ್‍ಗಳನ್ನು ಮಾಸ್ತರರೆ ವಿತರಿಸಿ ಬರುತ್ತಿದ್ದರು. ಪೋಲೀಸರನ್ನು ಬೆಂಚ ಮೇಲೆ ಕುಳ್ಳಿರಿಸಿ ರೇಣುಕಾಳಿಗೆ ಚಹಾ ಮಾಡಲು ಹೇಳಿದರು. ಸತ್ಯಭಾಮೆಯ ಕೈಯಿಂದ ಚಹಾ ಕುಡಿಯುವ ಸೌಭಾಗ್ಯ ಕೂಡಿಬಂದುದಕ್ಕೆ ಸ್ಥಳೀಯ ಪೋಲೀಸರು ಖುಶಿಯಿಂದಿದ್ದರು. ಫೌಜುದಾರ ಅಮರಪ್ಪನೆ ಹೆದರಿದಂತಿದ್ದ ಮಾಸ್ತರರನ್ನು ಮಾತನಾಡಿಸಿದ.

“ಮನಿಗೆ ಪೋಲೀಸರು ಬಂದಾರಂತ ಮಾಸ್ತರರೇ ನೀವು ಹೆದರಬೇಕಾಗಿಲ್ಲ. ನಾನ„ ಸ್ಟೇಷನ್ನಿಗೆ ಕರೆಸಬೇಕಂತ ಮಾಡಿದ್ನಿ. ಆದರ ಈ ನಮ್ಮ ಬೆಳಗಾವಿ ಸಿಬ್ಬಂದಿ ನಿಮ್ಮನ್ನ, ನಾಟಕದವರನ್ನ ನೋಡಬೇಕಂತ ಆಸೆಪಟ್ರು. ನಾಟಕದವರನ್ನ ಹಗಲ ನೋಡಬಾರದು, ರಾತ್ರಿ ಹೊತ್ತು ಮಾತ್ರ ನೋಡಬೇಕು ಅಂತ ನಾ ಹೇಳಿದೆ. ಆದ್ರೂ ಅವರೂ ಒತ್ತಾಯ ಮಾಡಿದ್ದಕ್ಕೆ ಬಂದೆ. ಅದೂ ಅಲ್ಲದೆ ಇನ್ನೊಂದು ಸಣ್ಣ ವಿಷಯ ನಮ್ಮ ಬೆಳಗಾವಿ ಪೋಲೀಸ್ ವ್ಯಾಪ್ತಿಯೊಳಗ ನಡೆದ„ದ… ಅಕ್ಕಾರ ಈಗೇನ ಚಾ ಬ್ಯಾಡ್ರಿ…” ಫೌಜುದಾರ ಅಡಿಗೆ ಮನೆಯತ್ತ ನೋಡುತ್ತ ಸತ್ಯಭಾಮೆ ಹಗಲು ಹೊತ್ತು ಇಷ್ಟು ಸಾದಾ ಸೀರೆಯಲ್ಲಿ ಇರುತ್ತಾಳೆಯೆ ಎಂದು ತರ್ಕಿಸುತ್ತ ನುಡಿದ.

“ನಾವು ಕೃಷ್ಣನ ಪಾರ್ಟು ಮಾಡಿದ್ರೂ ನಮ್ಮ ಪರಿಸ್ಥಿತಿ ಮಾತ್ರ ಸುದಾಮನದು. ಮನ್ಯಾಗ ಅವಲಕ್ಕಿನೂ ಖಾಲಿ ಆಗೇತಿ. ರವದಿ ತಿನ್ನೋರ ಮನಿಗೆ ಯಾರೋ ಹಪ್ಪಳಕ ಹ್ವಾದ್ರಂತ. ಹಂಗಾತು. ಅಲ್ಲ?” ಮುದುಕಪ್ಪ ಅವರಿಗೆ ಚಹಾ ಕೊಡುತ್ತ ದೊಡ್ಡದಾಗಿ ನಕ್ಕ.

‘ಬೆಳಗಾವಿ ವಿಷಯ ಏನು? ಮಾಸ್ತರರು ಕೇಳಿದರು.

“ಅದ„ ನಿಮ್ಮ ಶಿಷ್ಯ ಶೇಕಪ್ಪ ಇದ್ದನಲ್ಲ. ಪಾರಿಜಾತ ಪಾರ್ಟ ಮಾಡಾಂವ…”

‘ಹೌದು. ಮೊನ್ನಿ ಮೊನ್ನಿ ನೇಸರಗಿ ಊರೊಳಗ ಪಾರಿಜಾತ ಆಡ್ತಾ ಇದಾರಂತ ಸುದ್ದಿ ಬಂದಿತ್ತು.’

“ಹೂಂ, ಅದ„ ಶೇಕಪ್ಪನ ಕೊಲೆಯಾಗೇತಿ…”

‘ಹಾಂ…’ ಕುಳಿತಿದ್ದ ಮುದುಕಪ್ಪ ಎದ್ದು ನಿಂತ. ಕಪ್ಪು ಬಸಿಗಳನ್ನು ಒಳಗೊಯ್ದು ಇಡುತ್ತಿದ್ದ ರೇಣುಕಾಳ ಕೈಯಿಂದ ನಾಲ್ಕೈದು ಬಸಿಗಳು ದಬದಬನೆ ಕೆಳಗೆ ಬಿದ್ದವು.

‘ಹಾಂ. ಇದೇನ ಹೇಳಾಕ ಹತ್ತೀರಿ ನೀವು. ಅವನಂತ ಪಾತ್ರಧಾರಿಯನ್ನು ಕೊಲ್ಲಾಕ ಯಾರಿಗಾದ್ರೂ ಮನಸೆಂಗ ಬರ್ತೈತಿ?’

“ಎಲ್ಲಾರಿಗೂ ಅದ„ ವಿಚಿತ್ರ ಆಗೇತಿ. ಅದೂ ಕೊಂದದ್ದು ಯಾರ ಗೊತ್ತೈತೇನು? ಅವನ ಹೇಂತಿ ವಿಮಲಾ…” ಅಲ್ಲಿ ಈಗ ಕೂಡಿದ ಮಂದಿ ಒಮ್ಮೆಲೆ ‘ಹಾಂ’ ಎಂದರು.

‘ಇದಂತೂ ನೂರಕ್ಕ ನೂರ ಸುಳ್ಳು…’ ಮುದುಕಪ್ಪ ಹತಾಶಭಾವದಿಂದ ಹೇಳಿದ.

“ಆಕೀನ„ ಒಪ್ಪಿಕೊಂಡಾಳ… ಅದ„ ಎಲ್ಲರಿಗೂ ಆಶ್ಚರ್ಯ. ಆದರ ನಡುಹಗಲ ಆಕೀ ಕೊಲೆ ಮಾಡಿದ್ದು ಖರೆ. ಮಂದಿ ನೋಡಿದ್ದು ಖರೆ.”

ಯಾವುದೇ ಮಾತಿಲ್ಲದೆ ಕೆಲವು ಕ್ಷಣಗಳು ಸರಿದವು.

“ಅವರ ನಡುವಿ ಸಣ್ಣ-ಪುಟ್ಟ ಮನಸ್ತಾಪ ಇರಬಹುದಿತ್ತು. ಆದರ ಕೊಲೆ ಮಾಡೋ ಮಟ್ಟಕ್ಕ ಹೋಗೋವಂಥವು ಅಲ್ಲ ಅಂತ ನನಗನಸ್ತದ. ಇದರಾಗ ಯಾರದೋ ಕಾರಸ್ತಾನ ಇರಬೇಕು…”

‘ನಮ್ಮ ಬೆಳಗಾವಿ ಸಾಹೇಬರಿಗೂ ಹಂಗ„ ಅನಸ್ಲಕ್ಕೆ ಹತ್ತೇದ. ಅದಕ್ಕ„ ನಿಮ್ಮನ್ನ ಕರಕೊಂಡು ಬಾ ಅಂತ ಹೇಳ್ಯಾರ. ಆಕೀನ„ ಉಳಸಬೇಕು ಅಂತ ಮಿತಿಮೀರಿ ಪ್ರಯತ್ನ ಮಾಡ್ಲಿಕ್ಕೆ ಹತ್ತ್ಯಾರ. ಆದರ ಆಕಿ ನಾನ„ ಕೊಂದೇನಿ ಅಂತ ಒಪ್ಪಿಕೊಂಡಾಳ. ಮ್ಯಾಲಾಗಿ ಕೋರ್ಟ್ ಮುಂದ„ ಹಂಗ„ ಹೇಳ್ತೇನಿ ಅಂತ ಕುಂತಾಳ. ನಿಮ್ಮ ಕಡಿಯಿಂದ ಹೇಳಿಸಿದ್ರ ಆಕೀ ಕೇಳಬಹುದು…’

*****

ಮುದುಕಪ್ಪ-ರೇಣುಕಾ ಜೊತೆಗೂಡಿ ಬೆಳಗಾವಿ ಠಾಣೆಗೆ ಹೋದಾಗ ಅಲ್ಲಿಯ ಮಹಿಳಾ ಅಪರಾಧಿಗಳ ಕೋಣೆಯಲ್ಲಿ ವಿಪರೀತ ಕತ್ತಲಿತ್ತು. ಕತ್ತಲ ಜೊತೆಗೆ ಭಯ ತಳಕು ಹಾಕಿಕೊಂಡಿತ್ತು. ಪ್ರತಿಸ್ಪರ್ಧಿಯಾಗಿ ತನ್ನನ್ನು ಮೂಲೆಗೆ ಸರಿಸುತ್ತಾಳೆಂದು ಭಯಪಟ್ಟಿದ್ದ. ಅಂತಹ ಚೆಲುವೆಯನ್ನು ಒಮ್ಮೆಯಾದರೂ ನೋಡಬೇಕೆಂದು ಆಸೆಪಟ್ಟಿದ್ದ ರೇಣುಕಾ ವಿಮಲಾಳನ್ನು ಈ ರೀತಿಯಾಗಿ ನೋಡುತ್ತೇನೆ ಎಂದುಕೊಂಡಿರಲಿಲ್ಲವೇನೋ! ಮಾಸ್ತರರ ಕೈಹಿಡಿದಿದ್ದ ಅವಳೀಗ ಥರಥರ ನಡುಗುತ್ತಿದ್ದಳು. ಅಲ್ಲಿಯ ಐದಾರು ಕಳೆಗುಂದಿದ ಮಹಿಳೆಯರ ಪೈಕಿ ಗೋಡೆಯನ್ನು ಎಂದಾದರೂ ನೋಡಿದ್ದಳೋ ಇಲ್ಲವೊ ಎನ್ನುವಂತೆ ದಿಟ್ಟಿಸಿ ನೋಡುತ್ತಿದ್ದ ವಿಮಲವ್ವನನ್ನು ಮಗಳನ್ನು ಗುರುತಿಸುವಂತೆ ಮುದುಕಪ್ಪ ಒಮ್ಮೆಲೆ ಗುರುತಿಸಿದ ಮತ್ತು ಕಬ್ಬಿಣ ಸರಳ ಹಿಡಿದುಕೊಂಡು ಮಗುವಿನಂತೆ ಅಳತೊಡಗಿದ. ಆಕೆಯೂ ಕೂತಲ್ಲಿಂದ ಎದ್ದು ಬಂದು ನಡುಗುವ ಬೆರಳುಗಳಿಂದ ಮಾಸ್ತರರ ಕಣ್ಣೀರು ಒರೆಸಿದಳು. ಮಾತನಾಡಲು ತೊಡಗಿದರೆ ಮಾಸ್ತರರಾದರೂ ಅಳುತ್ತಿದ್ದರು ಇಲ್ಲವೆ ವಿಮಲವ್ವನಾದರೂ ಅಳುತ್ತಿದ್ದಳು. ‘ಅಕ್ಕ’ ಎಂದು ರೇಣುಕಾಳನ್ನು ವಾತ್ಸಲ್ಯದಿಂದ ಸ್ಪರ್ಶಿಸಿದಳು. ಮಾಸ್ತರರ ಮುಂದೆ ಹೇಳದಿದ್ದರೆ ಹೋಗಲಿ, ತನ್ನ ಮುಂದೆಯಾದರೂ ಏನು ನಡೆಯಿತೆಂದು ಹೇಳು ಎಂದು ಅಕ್ಕ ತಂಗಿಗೆ ಗೋಗರೆದಳು.

‘ಏನು ಪುಣ್ಯದ ಕೆಲಸ ಮಾಡಿದ್ದೇನಂತ ಹೇಳಬೇಕು ಯಕ್ಕಾ, ನನ್ನ ಪಾರಿಜಾತವನ್ನು ನಾನೇ ಹಿಸುಕಿದೆ. ಯಾವ ಗಳಿಗೆಯಲ್ಲಿ ಎಂಥ ಸಾವು ಇರುತ್ತದೆಯೊ ಯಾರಿಗೆ ಗೊತ್ತು? ಯಾವ ಮನಸ್ಸಿನಿಂದ ನಾನು ಸುಳ್ಳು ಹೇಳಲಿ? ಜೈಲು ಸೋಸದಿದ್ದರೆ ನನ್ನ ತಾಪ ಕಡಿಮೆಯಾಗಲಾರದು…’ ತಮ್ಮ ಮಾತು ಕೇಳದಿದ್ದರೆ, ಶೇಕಪ್ಪನನ್ನು ತಾನು ಕೊಂದಿಲ್ಲ ಎಂದು ಹೇಳುವವರೆಗೆ ತಾವು ಇಲ್ಲಿಂದ ಕದಲಲಾರವೆಂದು ಎಷ್ಟೊ ಹೊತ್ತು ಮಾಸ್ತರರು ಮತ್ತು ರೇಣುಕಾ ನಿಂತೇ ಇದ್ದರು. ಅವಳು ಹೂಂ ಅಂದರೆ ಸಾಕು ಅವಳ ಜೊತೆಗೆ ಬಂಧಿಸಲಾಗಿರುವ ನಾಲ್ಕೈದು ಮಂದಿ ಗಂಡಸರಲ್ಲಿ ಯಾರನ್ನಾದರೂ ಕೋರ್ಟ್‍ನಲ್ಲಿ ಹಾಜರುಪಡಿಸುತ್ತಾರೆ ಪೋಲೀಸರು.

ಕೊನೆಗೆ ರೇಣುಕಾಳಿಗಷ್ಟೇ ಕೇಳುವ ಹಾಗೆ ಅವಳ ಕಿವಿಯಲ್ಲಿ ವಿಮಲಾ ಅಂದಳು: ‘ನೀವು ಹೇಳಿದಂತೆ ಯಾವುದೇ ಪ್ರತಿಫಲ ಇಲ್ಲದೆ ಇನಸ್ಪೆಕ್ಟರ್ ನನ್ನನ್ನು ಬಿಡಲು ಸಿದ್ಧನಿದ್ದಾನೆಯೇ?’

ತಾನು ಗೆದ್ದೆ ಎಂದು ಮುದುಕಪ್ಪ ಫೌಜುದಾರನ ಬಳಿ ಹೋದ. ಇಂತಹ ಕೋಮಲಾಂಗಿ ಜೈಲಿಗೆ ಹೋದರೆ ಜೈಲಿಗೆ ಕೆಟ್ಟ ಹೆಸರು ಬಂದಂತಲ್ಲವೆ ಎಂದು ವಿಮಲಾಳ ಸೌಂದರ್ಯವನ್ನು ಇನಸ್ಪೆಕ್ಟರ್ ಬಣ್ಣಿಸತೊಡಗಿದ. “ಈಗ ಮಂದಿಗೆಲ್ಲ ಗೊತ್ತಾಗೈತಿ. ಒಮ್ಮಿಂದೊಮ್ಮೆಲೆ ಆಕೀನ ಬಿಡುಗಡೆ ಮಾಡಿದ್ರ ಪೋಲೀಸ್ ಇಲಾಖೆಗೆ ಕೆಟ್ಟ ಹೆಸರು ಬರತೈತಿ. ಅದಕ್ಕ ಆಕಿ ಒಂದಷ್ಟ ದಿನ ಇಲ್ಲೇ ಇರಬೇಕು. ನಾವು ಉಪಾಯ ಮಾಡ್ತೇವಿ. ಆಕಿ ಸಹಕಾರ ಬೇಕು ಅಷ್ಟ„.” ಎಷ್ಟೋ ಹೊತ್ತು ಮಾಸ್ತರ್ ಬರದೆ ಇದ್ದುದನ್ನು ಕಂಡು ವಿಮಲಾ ಈಗ ತಾನು ಗೆದ್ದೆ ಎಂಬಂತೆ ನಸುನಕ್ಕಳು:

“ಅಕ್ಕಾ, ನನಗೆ ಗೊತ್ತಿತ್ತು. ಪೋಲೀಸರು ಸಹ ನನ್ನ ಗಂಡನ ಮಾತನ್ನೇ ಹೇಳುವವರು ಅಂತ. ‘ನನ್ನ ಅನ್ನಾ ಉಂಡೀ, ನನ್ನ ಸುಣ್ಣಾ ತಿಂದೀ, ನಾ ಹೇಳಿದ ಮಾತು ಸಲಿಸಲಾರೆಯಾ?’ ಅಂತ. ಅವರ ಮಾತು ಕೇಳದಿದ್ದರೆ ರೇಶಿಮೆಪಟ್ಟಿ ಉಡುವುದು ಬಿಡಬೇಕು, ಮುತ್ತಿನ ಸರ ತ್ಯಜಿಸಬೇಕು, ಮೆಟ್ಟಿಲು ಇಳಿಯುವುದು ಬಿಡಬೇಕು. ಪಂಜರದೊಳಗೆ ಇರಬೇಕು… ಹೇಳು ಅಕ್ಕಾ, ನಾನು ಸೂಳೆಯೋ, ಗರತಿಯೋ…”

ಉಳಿಯಲು ಎಷ್ಟೊಂದು ದಾರಿಗಳಿದ್ದರೂ ವಿಮಲಾ ಅವುಗಳಿಗೆ ವಿಮುಖಳಾದಳು. ಅವನನ್ನು ಪ್ರೀತಿಸಿದ ರೋಷದಲ್ಲಿಯೆ ಅವನ ಮೃತ್ಯು ಕೂಡ ಸೇರಿದ್ದು ಅವಳಿಗೆ ವಿಸ್ಮಯವೆನಿಸಿತು. ತನ್ನನ್ನು ಉಳಿಸಿಕೊಳ್ಳಲು, ಅಭಿಮಾನ ಕಾಯ್ದುಕೊಳ್ಳಲು ತನ್ನ ಅರ್ಧ ಜೀವ ಕೊಂದೆ ಎಂದು ಮುಖ ಕೆಳಗೆ ಮಾಡಿದಳು.

ನ್ಯಾಯಾಧೀಶರ ಮುಂದೆ ವಿಮಲವ್ವ ತನ್ನ ಅಪರಾಧವನ್ನು ಒಪ್ಪಿಕೊಂಡಳು. ಆತ ತನ್ನ ಮೇಲೆ ಸಂಶಯ ಪಟ್ಟಿದ್ದರಿಂದ ಒಂದು ಕೆಟ್ಟ ಗಳಿಗೆಯಲ್ಲಿ ಕೊಂದೆ ಎಂದಳು. ಮುತ್ತಳ್ಳಿಯ ಕೆಲವರು ಆಕೆಯ ಭೆಟ್ಟಿಗೆ ಹೋದರೂ ಆಕೆಯ ತವರುಮನೆಯವರಾರೂ ಹೋಗಲಿಲ್ಲ. ತನ್ನ ಬಳಿಯಿದ್ದ ಎಲ್ಲ ಒಡವೆ-ವಸ್ತು-ಹಣವನ್ನು ರೇಣುಕಾಳ ಉಡಿಗೆ ಸುರಿದಳು. ಹಿಂಡಲಗಾ ಜೈಲಿನಲ್ಲಿ ಒಂದು ಸಲ ಅವರನ್ನು ಕರೆಸಿಕೊಂಡು ಜೈಲು ಆವರಣದಲ್ಲಿಯೆ ಪಾರಿಜಾತ ಆಡಿಸಿದಳು. ತಾನು ಹುಟ್ಟಿದೂರಿನಲ್ಲಿ ಒಂದು ರಂಗಮಂದಿರ ಆಗಬೇಕೆಂಬ ಅವಳ ಆಸೆ ಈಡೇರುವ ಮೊದಲೆ ತೀರಿಕೊಂಡಳು. ಅದೇ ರಂಗಮಂದಿರದಲ್ಲಿ ಕುಳಿತು ಮುದುಕ ಈಗ ನೆನಪು ಬಿಚ್ಚುವನು…

ಡಾ. ಬಸು ಬೇವಿನಗಿಡದ
ಲೇಖಕನೊಬ್ಬನಿಗೆ ಕತೆಯೊಂದು ಯಾಕೆ ಮೆಚ್ಚಿಕೆಯಾಗುತ್ತದೆ ಮತ್ತು ಯಾಕೆ ಅದರ ಬಗ್ಗೆ ಅವನಲ್ಲಿ ಇತರರಿಗಿಂತ ಬೇರೆ ಕಾರಣಗಳಿರುತ್ತವೆ ಎಂಬುದು ಯಾವಾಗಲೂ ಕುತೂಹಲಕಾರಿಯಾದುದು. ಅವನು ಒಳ್ಳೆಯದೆಂದು ಬರೆದ ಕತೆ ಹಿಂದೆ ಪ್ರಕಟವಾಗಿರಲಿಕ್ಕಿಲ್ಲ. ಅಥವಾ ಅವನು ಸಾಮಾನ್ಯವೆಂದುಕೊಂಡ ಬರವಣಿಗೆಗೆ ತುಂಬ ಪ್ರಾಶಸ್ತ್ಯ ಬಂದುಬಿಟ್ಟಿರಬಹುದು. ನಾನು ಕತೆ ಬರೆಯಲು ತೊಡಗಿ ಸುಮಾರು ಮೂರು ದಶಕಗಳು ಸರಿದು ಹೋದವು. ಈ ಮೂವತ್ತು ವರ್ಷಗಳಲ್ಲಿ ನಾನು ಹೊರ ತಂದ ಐದು ಕತಾ ಸಂಕಲನಗಳಲ್ಲಿ ಯಾವುದು ನನಗೆ ಆಪ್ತವಾದದ್ದು, ಯಾವುದು ನನ್ನನ್ನು ಕಾಡಿದ್ದು ಎಂದು ಪ್ರಶ್ನಿಸಿಕೊಂಡಾಗ ಅದಕ್ಕೆ ಇಂತಹುದೇ ಕತೆ ಎನ್ನುವ ನಿಕ್ಕಿ ಉತ್ತರ ಖಂಡಿತ ಬರಲಾರದು. ಹಲವು ಕತೆಗಳು ನನಗೆ ಆಪ್ತವೆನಿಸಿದವುಗಳಾದರೂ “ಪಾರಿಜಾತ” ಎನ್ನುವ ಇಲ್ಲಿಯ ಕತೆ ನನ್ನನ್ನು ಬಹುವಾಗಿ ಕಾಡಿಸಿ ಬರೆಸಿಕೊಂಡ ಕತೆಯಾಗಿದೆ. ಎಷ್ಟೋ ದಿನಗಳಿಂದ ಅದನ್ನು ಬರೆಯಬೇಕೆಂದುಕೊಂಡಿದ್ದರೂ ಆಗಿರಲಿಲ್ಲ. ಆದರೆ ಒಂದು ದಿನ ಯಾವ ಘಳಿಗೆಯಲ್ಲಿಯೋ ಏನೋ ಮುಂಜಾನೆ ಸುರು ಮಾಡಿದವನು ಸಂಜೆಯ ಹೊತ್ತಿಗೆ ಅದನ್ನು ಬರೆದುಬಿಟ್ಟಿದ್ದೆ.
ಕಲಾವಿದೆಯೊಬ್ಬಳ ಜೀವನಕತೆಯನ್ನು, ಅವಳ ಅದೃಷ್ಟ ಹಾಗೂ ದುರಾದೃಷ್ಟಗಳನ್ನು, ಅವಳಲ್ಲಿಯ ನೈತಿಕ ಎಚ್ಚರವನ್ನು ನಾನು ಅಭಿವ್ಯಕ್ತಿಸಲು ಸಫಲನಾಗಿದ್ದೆ. ಕತೆ ಬರೆದಾದ ಮೇಲೆ ಎಷ್ಟೋ ದಿನಗಳವರೆಗೆ ಅದನ್ನು ಎಲ್ಲಿಯೂ ಕಳಿಸಲು ಹೋಗಿರಲಿಲ್ಲ. ‘ಉಗುಳುಬುಟ್ಟಿ’ ಎನ್ನುವ ಕತೆಯನ್ನು ಕೂಡ ನಾನು ಹಾಗೆಯೇ ಬರೆದಿದ್ದೆ. ಮುಂದೆ ಈ ಎರಡೂ ಕತೆಗಳನ್ನು ಜಿ.ಪಿ.ಬಸವರಾಜು ಅವರಿಗೆ ಕಳಿಸಿ ‘ಸರ್, ಒಂದು ಸಲ ನೋಡಿ’ ಎಂದು ವಿನಂತಿಸಿಕೊಂಡಿದ್ದೆ. ಅವರು ಓದಿದ ತಕ್ಷಣ ಫೋನ್ ಮಾಡಿ ತುಂಬ ಒಳ್ಳೆಯ ಕತೆಗಳೆಂದು ಮೆಚ್ಚಿ ಮಾತಾಡಿದರು. ‘ಪಾರಿಜಾತ’ವನ್ನು ತಾವು ಮರೆಯಲು ಸಾಧ್ಯವೇ ಇಲ್ಲ ಎಂದರು. ಅವರ ಮಾತಿನಿಂದ ನನಗೆ ತುಂಬ ಸಂತಸವೆನಿಸಿತು. ಅವುಗಳನ್ನು ಪತ್ರಿಕೆಗಳಿಗೆ ಕಳುಹಿಸಿದೆ. ‘ಉಗುಳುಬುಟ್ಟಿ’ ಪ್ರಜಾವಾಣಿಯಲ್ಲಿ ಹಾಗೂ ‘ಪಾರಿಜಾತ’ ವಿಜಯವಾಣಿಯ ದೀಪಾವಳಿ ವಿಶೇಷಾಂಕದಲ್ಲಿ ಮೊದಲ ಬಾರಿ ಬೆಳಕು ಕಂಡವು. ಸಂಕಲನ ಮಾಡುವುದಾದರೆ ‘ಪಾರಿಜಾತ’ ಎಂದೇ ಶೀರ್ಷಿಕೆ ಕೊಡಿ ಎಂದು ಬಸವರಾಜು ಅವರು ಹೇಳಿದ್ದರು. ಆದರೆ ಅಬ್ದುಲ್ ರಶೀದ್ ಅವರ ಒಂದು ಸಂಕಲನದ ಹೆಸರು ಪಾರಿಜಾತ ಎಂದು ಇದ್ದುದಕ್ಕಾಗಿ ನಾನು ‘ಉಗುಳುಬುಟ್ಟಿ’ ಯನ್ನು ಆಯ್ಕೆ ಮಾಡಿಕೊಂಡೆ. 2014ರಲ್ಲಿ ಗುಲಬರ್ಗದ ಕನ್ನಡನಾಡು ಪ್ರಕಾಶನದಿಂದ ಅದು ಪ್ರಕಟವಾಯಿತು. ಆ ಕತಾ ಸಂಕಲನಕ್ಕೆ ಮುನ್ನುಡಿ ಬರೆಯುತ್ತ ಖ್ಯಾತ ವಿಮರ್ಶಕರಾದ ಡಾ.ಸಿ.ಎನ್.ರಾಮಚಂದ್ರನ್ ಅವರು ‘ಉಗುಳುಬುಟ್ಟಿ’ಯನ್ನು ಮೌಲ್ಯಪಲ್ಲಟದ ಪ್ರತೀಕವೆಂದು ಹೇಳಿದರು. ‘ಪಾರಿಜಾತ’ಕತೆಯ ಬಗ್ಗೆ ಅವರು ಹೀಗೆ ಬರೆದರು: ‘ಆಟವು ಎಲ್ಲಿ ಮುಗಿದು ವಾಸ್ತವವು ಎಲ್ಲಿ ಪ್ರಾರಂಭವಾಗುತ್ತದೆ ಎಂಬುದೇ ಗೊತ್ತಾಗದಂತೆ ಅವುಗಳ ಗಡಿಗೆರೆಗಳನ್ನು ಕತೆ ಅಳಿಸಿಹಾಕುತ್ತದೆ.’ ನನ್ನ ಮನಸ್ಸಿನಲ್ಲಿದ್ದ ಮಾತುಗಳೇ ಅಲ್ಲಿದ್ದವು.