ಮಳೆ ನಿಂತಿತ್ತಾದರೂ ಸಂದಿಯಲ್ಲಿರುವ ನೀರು ಖಾಲಿಯಾಗುವವರೆಗು ಮನೆಯೊಳಗೆ ನೀರು ಬರುತ್ತಲೆ ಇತ್ತು. ಹಾಗಾಗಿ ಅವಳು ಬಹುಪಾಲು ರಾತ್ರಿಯೆಲ್ಲ ಹಾಗೆ ನೀರನ್ನು ಹೊರ ಹಾಕುತ್ತಲೆ ಇದ್ದಳು. ಅದಾದ ಮೇಲೆ ಮಣ್ಣನ್ನೆಲ್ಲ ತೆಗೆದು ಒಂದಷ್ಟು ಸ್ವಚ್ಛಗೊಳಿಸಿದ್ದಳಾದರು ಮುಂಜಾವಿನವರೆಗೂ ತಾರಸಿ ಸೋರುತ್ತಲೆ ಇತ್ತು. ಅವಳು ತುಂಬಿದ ಪಾತ್ರೆಗಳಲ್ಲಿನ ನೀರನ್ನು ಆಚೆ ಚಲ್ಲಿ ಮತ್ತೆ ಅದೇ ಜಾಗದಲ್ಲಿ ಇಡುತ್ತಿದ್ದಳು. ಹೀಗೆ ರಾತ್ರಿಯೆಲ್ಲ ಎದ್ದು ಬಗ್ಗಿ ಓಡಾಡಿ ಹೈರಾಣಾಗಿದ್ದಳು. ರಾತ್ರಿಯ ಕತ್ತಲಲ್ಲಿ ಅದುಮಿಟ್ಟುಕೊಂಡಿದ್ದ ಅವಳೆಲ್ಲ ಭಾವನೆಗಳು ಬೆಳಗಾಗುತ್ತಿದ್ದಂತೆ ಸಿಡಿದು ಸದ್ದು ಮಾಡತೊಡಗಿದವು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಚೀಮನಹಳ್ಳಿ ರಮೇಶಬಾಬು ಬರೆದ ಕತೆ ‘ಗಯ್ಯಾಳಿ’ ನಿಮ್ಮ ಈ ಭಾನುವಾರದ ಓದಿಗೆ

 

‘ಲೇ ಮುಂಡೆ ಮಗ್ನೆ, ನಿಂಕೇನೊ ಬಂದಿರೋದ್ರೋಗ… ನಿನ್ ಜನ್ಮು ನಾಶಿನಾಗ, ನಿನ್ ಸಂಸಾರ ಎಕ್ಕುಟ್ಟೋಗ. ಅಲ್ಲ ಕನ್ಲ, ನಾ ಆವಾಕ್ನಿಂಚಿ ಬಾಯಿ ಹರ್ಕೊಂಡು ಮಾತಾಡ್ತಿದೀನಿ. ಸುಮ್ಕೆ ಕುಂತೀಯಲ್ಲ… ನಿನ್ ನಾಲುಗೇಲಿ ಹುಳ ಬೀಳ. ನೀನು ನಿನ್ ಸಂಸಾರ ಸುಕ್ವಾಗಿ ಉನ್ಕಂಡು ಕುಂತಿದ್ರೆ ಇಲ್ಲಿ ನನ್ ಕಸ್ಟ ಕೇಳೋನ್ಯಾರೊ… ನಿಂಕೆ ಗರ ಬಡಿಯ… ಬರ್ಬಾರ್ದ ರೋಗ ಬರ… ಲೇ ಏನೊ ಅಂಕ್ನೋಡ್ತಿ ಕನ್ಗುಡ್ಡೆ ಇಸ್ಕಾಕ್ಬಿಡ್ತೀನಿ. ದುರ್ಗುಟ್ ನೋಡ್ತೀಯ ಬಡ್ಡಿ ಮಗ್ನೆ. ಇರು ನಿಂಕೆ… ಇಲ್ಲೇನು ಸಿಕ್ತಿಲ್ಲ ಲೇದಂಟೆ ಚಮ್ಡ ಸುಲ್ದಾಕ್ಬುಡ್ತಿದ್ದೆ. ಯೇಮಿ ತೆಲುಸ್ಕೋಂಡಾವ್ರ ಬಡ್ಡಿಕೊಡಕ. ನನ್ನೂರ್ನಾಕೆ ನಂಕೆ ಅವುಮಾನ ಮಾಡ್ತೀಯ. ನಿನ್ ತಲೆ ಕಡ್ದು ನಾಯೀಗಾಕ್ಬುಡ್ತೀನಿ ಉಶಾರ್. ಜಮ್ಮಂತ ಬದ್ಕಿದ್ ವಂಶ ಕನ್ಲ ನಂದು… ಈವಾಕ ನಡುನೀರಾಕ ತಂದು ಕಣ್ಮುಚ್ಕೊಂಡ್ ಕುಂತೀಯ… ಹೆಣ್ಮುಂಡೆ ಇವಳ್ ಕೈನಾಕ ಏನಾಗ್ತೈತಿ ಅಂತ ಅನ್ಕೋಬೇಡ. ಮೊದ್ಲೆ ಗಯ್ಯಾಳಿ ನಾನು, ಊರ್ಕೆ ದಿಗ್ಲು ನನ್ಕಂಡ್ರೆ. ಇನ್ನು ನೀನ್ಯಾವ ಲೆಕ್ಕ, ಹರ್ಕೊಂಡು ಮುಕ್ಬುಡ್ತೀನಿ ಹಲ್ಕಟ್ ಮಗ್ನೆ. ಇನ್ನೊಂದ್ಕಿತ ನನ್ ಸಾವಾಸಕ್ಕೆ ಬಂದ್ರೆ ಜುಟ್ಟು ಯಿಡ್ದು ಊರ ಬೀದಿಗಳಾಗ ಮಾನ ಮೂರ್ಕಾಸ್ಕೆ ಅರಾಜಾಕ್ತೀನಿ… ಬಡ್ಡಿಕೊಡಕ ನೇನೆ ಕಾವಾಲ್ನೇಮ್ರ ನೀಕು…’ ಹೀಗೆ ಸೂರ್ಯ ಹುಟ್ಟುತ್ತಿದ್ದಂತೆಯೆ ನಂಜಮ್ಮನ ಬಯ್ಗುಳ ಇಡೀ ಊರಿಗೆ ಕೇಳಿಸತೊಡಗಿತು. ತನ್ನ ಮನೆಯ ಮುಂದೆ ಕುಳಿತು ಆಕಾಶದ ಕಡೆ ಕೈತೋರಿಸುತ್ತಾ ಹೀಗೆ ಬಯ್ಗುಳದ ಮಳೆ ಸುರಿಸುವ ಪರಿ ಊರಿಗೆ ಹೊಸದೇನು ಅಲ್ಲ. ಅವಳಿರುವುದೆ ಹಾಗೆ. ದಿನಕ್ಕೆ ಒಮ್ಮೆಯಾದರು ಹೀಗೆ ಬಯ್ಯಲಿಲ್ಲವೆಂದರೆ ಅವಳಿಗೆ ತಿಂದದ್ದು ಅರಗುವುದೆ ಇಲ್ಲವೆಂದು ಎದುರು ಮನೆಯ ಮಂಜೇಗೌಡನ ಸಮೇತ ಊರವರಿಗೆಲ್ಲ ಗೊತ್ತು. ಅವಳು ಬಯ್ಗುಳ ಶುರು ಮಾಡುತ್ತಿದ್ದಂತೆ ಹೊರಗೆ ಬಂದ ಮಂಜೇಗೌಡ ‘ಏನ್ ನಂಜಕ್ಕ ಇವತ್ತು ಮುಂಜಾನೇಕೆ ಶುರು ಮಾಡ್ಬಿಟ್ಟಿ… ಎದಿ ಹಗೂರಾಗೊ ತನ್ಕ ಬಿಡ್ಬೇಡ. ನೀನ್ತಾನೆ ಏನ್ಮಾಡ್ತಿ, ಅವುನ್ಕಲ್ದೆ ಇನ್ನಾರ್ಕೆ ಅನ್ಬೇಕು ನೀನು’ ಎನ್ನುತ್ತಾ ತನ್ನ ಪಾಡಿಗೆ ತಾನು ಡಾಬಾದ ಕಡೆಗೆ ಹೊರಟುಬಿಟ್ಟಿದ್ದ.

ಕಳೆದ ರಾತ್ರಿ ನಂಜಮ್ಮ ಇನ್ನೇನು ಮಲಗಲೆಂದು ಅಣಿಯಾಗುತ್ತಿದ್ದಂತೆ ಮಳೆ ಶುರುವಿಟ್ಟುಕೊಂಡಿತ್ತು. ಬಹಳ ದಿನಗಳ ನಂತರ ಅಪರೂಪಕ್ಕೆ ಬಂದ ಮಳೆ ಸರಿಯಾಗಿ ಜಡಿದಿತ್ತು. ಮುಂಗಾರು ಶುರುವಾಗುವ ಮೊದಲೆ ಮನೆಯ ಮೇಲೆ ಮಣ್ಣು ಹೊಡೆಸಬೇಕು ಅಂದುಕೊಂಡಿದ್ದಳು. ಅಚಾನಕ್ಕಾಗಿ ಬಂದ ಮಳೆ ಮೂರು ತಾಸಿಗೂ ಹೆಚ್ಚು ಬಿಡದೆ ಹೊಡೆಯಿತು. ಮಳೆಯ ರಭಸಕ್ಕೆ ಮನೆಯ ಮೇಲಿದ್ದ ಒಂದಷ್ಟು ಮಣ್ಣು ಕೊಚ್ಚಿಕೊಂಡು ಹೋಗಿದ್ದರಿಂದ ತಾರಸಿ ಸೋರಲು ಶುರುವಿಟ್ಟುಕೊಂಡಿತ್ತು. ಆ ಸಮಯದಲ್ಲಿ ನಂಜಮ್ಮನಿಗೆ ದಿಕ್ಕು ತೋಚಿರಲಿಲ್ಲ. ಸೋರಿದ ಕಡೆಯೆಲ್ಲ ಪಾತ್ರೆ, ಚಂಬು, ಗ್ಲಾಸು, ಬಿಂದಿಗೆ, ತಪಲೆ, ತಟ್ಟೆ ಹೀಗೆ ಕೈಗೆ ಸಿಕ್ಕಿದ್ದೆಲ್ಲವನ್ನು ಇಟ್ಟಿದ್ದಳು. ‘ಅಯ್ಯೋ ನನ್ ಬುದ್ದೀಕೆ ಮಣ್ ಬಡಿಯ… ಕೂನಿಕೆ ನೀರೋಗ್ದಂಗೆ ಅಡ್ಲಾಗಿ ಏನಾರ ನಿಂತಿರ್ಬೇಕು. ಅದ್ಕೆ ಈ ಪಾಟಿ ಸೋರ್ತಿದೆ. ವೋಗಿ ತೆಗೆದಿದ್ರೆ ಸರೋಗಿರೋದು’ ಎಂದುಕೊಳ್ಳುತ್ತ ಹೊಸ್ತಿಲ ಬಳಿ ಬಂದಿದ್ದಳು. ಜೋರು ಮಳೆ ಜೊತೆಗೆ ಕತ್ತಲು. ಮತ್ತೆ ಒಳ ಹೋದ ಅವಳು ಒಂದು ಕೈಯಲ್ಲಿ ಟಾರ್ಚ್ ಹಿಡಿದು ಮತ್ತೊಂದು ಕೈಯಲ್ಲಿ ತನ್ನ ಮದುವೆಯ ಹೊಸದರಲ್ಲಿ ತಂದೆ ಕೊಡಿಸಿದ್ದ ಹಳೇ ಕಪ್ಪು ಛತ್ರಿಯನ್ನು ಹಿಡಿದು ಆಚೆ ಬಂದಿದ್ದಳು. ಇದನ್ನು ಗಮನಿಸಿದ್ದ ಮಂಜೇಗೌಡ ‘ನಂಜಕ್ಕೊ ಮಳೆ ಜೋರೈತಿ ಮನಿ ಮ್ಯಾಕೆ ವೋಕ್ಬೇಡ’ ಎಂದು ನುಡಿದಿದ್ದ.

ಅದಕ್ಕವಳು ‘ಇಲ್ಲ ಮಂಜ್ಗೌಡ, ಕೂನಾಕ ನೀರೋಕ್ತಿಲ್ಲ ಅಂತ ಕಾಣುತ್ತೆ. ಮನೆ ಸೋರಾಕ ಸುರುವಿಟ್ಕೊಂಡೈತಿ. ಅದ್ಕೆ ಮೇಲೋಗಿ ನೋಡ್ಕಂಡ್ ಬತ್ತೀನಿ… ಸಂಚ್ಗಿಂಚೇನಾರ ಸಿಕಾಕೊಂಡಿರ್ಬೋದು’ ಎನ್ನುತ್ತ ಮೇಲೆ ನಡೆದಿದ್ದಳು. ಮಂಜೇಗೌಡ ‘ಉಶಾರು ನಂಜಕ್ಕೊ…’ ಎಂದು ನುಡಿದು ಬಾಗಿಲು ಹಾಕಿ ಮಲಗಿಕೊಂಡಿದ್ದ. ಅಲ್ಲಿ ಅವಳು ಎಣಿಸಿದಂತೇನು ಆಗಿರಲಿಲ್ಲ. ಮಳೆ ನೀರು ಸರಾಗವಾಗಿ ಹರಿಯುತ್ತಿತ್ತು. ಮಳೆಯ ರಭಸಕ್ಕೆ ಒಂದಷ್ಟು ಮಣ್ಣು ಕೊಚ್ಚಿಕೊಂಡು ಹೋಗಿದ್ದುದ್ದರಿಂದ ತಾರಸಿಯ ಮಣ್ಣು ಸವಕಲಾಗಿತ್ತು. ‘ಎಂತಾ ಗುಡ್ಬುದ್ದಿ ನಂದು. ವೋದ ತಿಂಗ್ಳಾಕೆ ಶಿವಣ್ಣ ತನ್ನ ಮನೇಕೆ ಮಣ್ಣಾಕಿಸ್ದಾಗ ನಾನೂ ಆಕಿಸ್ಬಿಡ್ಬೇಕಿತ್ತು. ನನ್ ಬುದ್ದಿ ಯಾವಾಕ್ಲು ಇಂಕೇನೆ’ ಎಂದುಕೊಳ್ಳುತ್ತಾ ಕೆಳಗಿಳಿದ ನಂಜಮ್ಮ ಮತ್ತೆ ತನ್ನ ಮನೆಯೊಳಗಡೆ ಹೋಗುವಷ್ಟರಲ್ಲಿ ಹಾಲಿನ ಗೋಡೆಯ ಮಧ್ಯದ ಭಾಗ ಸಿಡಿದು ನೀರು ನುಗ್ಗತೊಡಗಿತ್ತು. ಪಕ್ಕದ ಪಾಳು ಬಿದ್ದ ಮನೆಯ ಗೋಡೆಗೂ ನಂಜಮ್ಮನ ಮನೆಯ ಗೋಡೆಗೂ ನಡುವೆ ಒಂದು ಸಂದಿಯಿದ್ದು ಅದರಲ್ಲಿ ಕಸ, ಕಡ್ಡಿ, ಪ್ಲಾಸ್ಟಿಕ್, ಮೂಳೆ, ಗಾಜಿನ ಚೂರುಗಳು, ಚಿಂದಿ ಬಟ್ಟೆ, ಹರಿದ ಚಪ್ಪಲಿ, ಪಟದ ಒಣಗಿದ ಹಾರ, ತೋರಣದ ಒಣಗಿದೆಲೆಗಳು, ಊದುಕಡ್ಡಿಯ ಬುಡಗಳು, ಸುರ್‍ಸುರ್ ಬತ್ತಿಯ ಕಂಬಿಗಳು, ಸಿಡಿದ ಪಟಾಕಿಗಳ ಅವಶೇಷಗಳು, ಮಾವಿನ ವಾಟೆ ಹೀಗೆ ಏನೆಲ್ಲವನ್ನು ತುಂಬಿಕೊಂಡು ಐದಡಿಯಷ್ಟು ಎತ್ತರಕ್ಕೆ ಮಣ್ಣಾಗಿ ಬೆಳೆದುಕೊಂಡಿತ್ತು. ಅದೇ ಇಲಿ ಹೆಗ್ಗಣಗಳ ನೆಚ್ಚಿನ ತಾಣವಾಗಿ ಅವು ಎರಡೂ ಕಡೆಯ ಗೋಡೆಗಳನ್ನು ಒಂದಷ್ಟು ಕೊರೆದು ಸುಖದಲ್ಲಿ ಓಡಾಡಿಕೊಂಡಿದ್ದವು. ಹಿತ್ತಲ ಮನೆಯ ಸುಬ್ಬಮ್ಮನು ಒಂದೆರಡು ಬಾರಿ ಮನೆಯ ಸಂದಿಯಲ್ಲಿ ಇಲಿ ಹೆಗ್ಗಣಗಳು ಓಡಾಡುತ್ತಿರುವುದಾಗಿ ತಿಳಿಸಿ ಅವು ಮನೆಯ ಗೋಡೆಯನ್ನೂ ಕೊರೆದಿರುವುದಾಗಿ ಎಚ್ಚರಿಸಿದ್ದಳು. ಹಾಗೆ ಅವಳು ಎಚ್ಚರಿಸುವುದಕ್ಕೆ ಕಾರಣವೂ ಇತ್ತು.

ನಂಜಮ್ಮನ ಮನೆ ಹಸಿ ಗೋಡೆಗಳಿಂದ ಕೂಡಿದ್ದು ಇಲಿ ಹೆಗ್ಗಣಗಳು ಸಲೀಸಾಗಿ ಕೊರೆಯಬಹುದಾಗಿತ್ತು. ಸುಬ್ಬಮ್ಮನದು ಅದೇ ಉದ್ದೇಶವನ್ನು ಒಳಗೊಂಡ ಕಾಳಜಿಯಾಗಿತ್ತು. ಅದಕ್ಕೆ ನಂಜಮ್ಮ ‘ಬಿಡು ಸುಬ್ಬಕ್ಕ ನನ್ ಜೊತೇಕೆ ಯಾರವ್ರೆ? ಅವಾರ ಓಡಾಡ್ಕಂಡಿರ್ಲಿ. ಏನ್ ಈ ಮನೇನ ವೊತ್ಕೊಂಡ್ ವೋಕ್ತಾವ ಅವು. ಆಗುತ್ಯ ಅವ್ಕೆ. ಇರ್ಲಿ ಬಿಡು ನಂಜೊತೇಕೆ… ನಂಕೂನು ಬಲ್ಮು ಬಂದಂಕಾಗುತ್ತೆ’ ಎಂದು ನುಡಿದಿದ್ದಳು. ಈಗ ಅದೇ ಇಲಿ ಹೆಗ್ಗಣಗಳ ದೆಸೆಯಿಂದ ಗೋಡೆ ಸಿಡಿದು ನೀರು ಒಳಗೆ ನುಗ್ಗಿತ್ತು. ಅವಳು ಕೈಲಿದ್ದ ಛತ್ರಿ ಮತ್ತು ಟಾರ್ಚನ್ನು ಬಿಸಾಡಿ ಕೆಳಗಿರುವ ಪಾತ್ರೆಯೊಂದನ್ನು ಸಿಡಿದ ಗೋಡೆಯ ಭಾಗಕ್ಕೆ ಅದುಮಿ ಹಿಡಿದುಕೊಂಡಿದ್ದಳು. ಕೊನೆಗೆ ಏನೋ ಹೊಳೆದು ಮೂಲೆಯಲ್ಲಿದ್ದ ಗೋಣಿ ಚೀಲ ಮತ್ತೊಂದಿಷ್ಟು ಹಳೆಯ ಬಟ್ಟೆಗಳನ್ನು ತಂದು ಗೋಡೆಯಲ್ಲಾಗಿರುವ ಬೊಕ್ಕೆಯೊಳಗೆ ತುರುಕತೊಡಗಿದಳು. ಆಗಲೆ ಸಾಕಷ್ಟು ನೀರು ಹರಿದು ಮನೆಯಲ್ಲ ಹರಡಿಕೊಂಡಿತ್ತು. ಗೋಣಿ ಚೀಲ ಮತ್ತು ಬಟ್ಟೆಗಳನ್ನು ತುರುಕಿದರೂ ಒಂದಷ್ಟು ನೀರು ಜಿನುಗುತ್ತಲೆ ಇತ್ತು. ನಂತರ ಅವಳು ಮನೆಯಲ್ಲಿರುವ ನೀರನ್ನು ಬಟ್ಟೆಯೊಂದರಲ್ಲಿ ಹಿಡಿದು ಪಾತ್ರೆಗೆ ಹಿಂಡಿ ಹಿಂಡಿ ಹೊರಗೆ ಹಾಕಿದ್ದಳು. ಮಳೆ ನಿಂತಿತ್ತಾದರೂ ಸಂದಿಯಲ್ಲಿರುವ ನೀರು ಖಾಲಿಯಾಗುವವರೆಗು ಮನೆಯೊಳಗೆ ನೀರು ಬರುತ್ತಲೆ ಇತ್ತು. ಹಾಗಾಗಿ ಅವಳು ಬಹುಪಾಲು ರಾತ್ರಿಯೆಲ್ಲ ಹಾಗೆ ನೀರನ್ನು ಹೊರ ಹಾಕುತ್ತಲೆ ಇದ್ದಳು. ಅದಾದ ಮೇಲೆ ಮಣ್ಣನ್ನೆಲ್ಲ ತೆಗೆದು ಒಂದಷ್ಟು ಸ್ವಚ್ಛಗೊಳಿಸಿದ್ದಳಾದರು ಮುಂಜಾವಿನವರೆಗೂ ತಾರಸಿ ಸೋರುತ್ತಲೆ ಇತ್ತು. ಅವಳು ತುಂಬಿದ ಪಾತ್ರೆಗಳಲ್ಲಿನ ನೀರನ್ನು ಆಚೆ ಚಲ್ಲಿ ಮತ್ತೆ ಅದೇ ಜಾಗದಲ್ಲಿ ಇಡುತ್ತಿದ್ದಳು. ಹೀಗೆ ರಾತ್ರಿಯೆಲ್ಲ ಎದ್ದು ಬಗ್ಗಿ ಓಡಾಡಿ ಹೈರಾಣಾಗಿದ್ದಳು. ರಾತ್ರಿಯ ಕತ್ತಲಲ್ಲಿ ಅದುಮಿಟ್ಟುಕೊಂಡಿದ್ದ ಅವಳೆಲ್ಲ ಭಾವನೆಗಳು ಬೆಳಗಾಗುತ್ತಿದ್ದಂತೆ ಸಿಡಿದು ಸದ್ದು ಮಾಡತೊಡಗಿದವು.

ಮಂಜೇಗೌಡ ಆ ಕಡೆ ಹೊರಟಮೇಲೆ ನಂಜಮ್ಮನ ಮನೆಯ ಮುಂದೆ ಹಾದು ಹೋಗುತ್ತಿದ್ದ ನಾಗೇಶ ‘ಏಮಕ್ಕ ಎಪ್ಪಡೂ ತಿಟ್ಲೇನ ನೀ ನೋಟ್ಲೊ. ಒಕ್ಕ ನಾಡೂ ಗಮ್ಮನುಂಡವಾ…’ ಎಂದು ಕೇಳಿದ. ಅದಕ್ಕವಳು ‘ನಾ ಕೊಡಕ, ನೀಕೇಮಿ ತೆಲುಸ್ರಾ ನಾ ಬಾಧ. ಮನೇಕ ಬಂದು ಸೂಡು… ಬೇವಾರ್ಸಿ ಏನ್ ಮಾಡಿದೇಂತ. ಬಂದ್ಬಿಟ್ಟ ಬಡ್ಡೀ ಕೊಡಕು’ ಎಂದು ನುಡಿದು ಮೂಗಲ್ಲಿ ಮಡುಗಟ್ಟಿದ್ದ ಸಿಂಬಳವನ್ನು ಸೆರಗಿನಲ್ಲಿ ಸೀದಿ ಕೈಯಿಂದ ಮೂಗನ್ನು ಒರೆಸಿಕೊಂಡಳು. ಸೂರ್ಯನ ಬಿಸಿಲು ತುಸುವೆ ನಂಜಮ್ಮನ ಮನೆಯ ಮೇಲೆ ಬೀಳತೊಡಗಿತು. ಬಹಳ ದಿನಗಳ ನಂತರ ಬಿದ್ದ ಮಳೆಗೆ ಶುಭ್ರಗೊಂಡಿದ್ದ ಊರು ಎಳೆ ಬಿಸಿಲಿಗೆ ಹೊಳೆಯುತ್ತಿತ್ತು. ಎರಡು ಕಾಗೆಗಳು ನಂಜಮ್ಮನ ಮನೆಯ ಮುಂದಿರುವ ವಿದ್ಯುತ್ ತಂತಿಯ ಮೇಲೆ ಕುಳಿತು ರೆಕ್ಕೆಗಳನ್ನು ತುಸುವೆ ಅಗಲಿಸಿ ಎಳೆಬಿಸಿಲಿಗೆ ಪುಕ್ಕಗಳನ್ನು ಒಣಗಿಸಿಕೊಳ್ಳುತ್ತಿದ್ದವು. ಊರ ದೇವಸ್ಥಾನದ ಮುಂದಿರುವ ಅರಳಿ ಮರದಲ್ಲಿ ಕೋತಿಗಳ ಸದ್ದು ಹಿಂದೆಂದಿಗಿಂತ ಭಿನ್ನವಾಗಿತ್ತು. ಪಾಳು ಬಿದ್ದ ಮನೆಯ ಮೇಲಿಂದ ಹಾರಿ ಬಂದ ಒಂಟಿ ಗುಬ್ಬಿಯೊಂದು ಅವಳ ಅಂಗಳದಲ್ಲಿ ಅಡ್ಡಾಡತೊಡಗಿತು. ಎದ್ದು ಒಳಕ್ಕೆ ಹೋದ ನಂಜಮ್ಮ ಒಂದು ಹಿಡಿಯಷ್ಟು ರಾಗಿ ಕಾಳು ತಂದು ಅಂಗಳದಲ್ಲಿ ಹರಡಿದಳು. ಅದು ಸಂಭ್ರಮದಲ್ಲಿ ಹೆಕ್ಕಿ ತಿನ್ನತೊಡಗಿತು.

ನಂಜಮ್ಮನದು ಎಂಟು ವರ್ಷಗಳಿಂದಲು ಒಂಟಿ ಬದುಕೆ. ಗಂಡನೆಂಬೋನು ಸತ್ತು ಮೂವತ್ತು ವರ್ಷಗಳು ಕಳೆದಿವೆ. ಗಂಡ ಸತ್ತ ಮೇಲೆ ತೊಗಟರ ನಾರಾಯಣಪ್ಪನ ಜೊತೆ ಸಲುಗೆಯನ್ನು ಬೆಳೆಸಿಕೊಂಡಿದ್ದಳು. ಅವಳು ನಾರಾಯಣಪ್ಪನನ್ನು ಕರೆಯುತ್ತಿದ್ದುದು ‘ಲೇ ನಾರಾಯ್ಣಿ’ ಎಂತಲೆ. ಊರ ಮಂದಿ ಕೂಡ ಅವರಿಬ್ಬರ ನಡುವಿನ ಸಂಬಂಧದ ಕುರಿತಾಗಿ ನಾನಾ ರೀತಿಯಾಗಿ ಮಾತಾಡಿಕೊಂಡಿದ್ದರು. ಅದಕ್ಕೆಲ್ಲ ಅವಳು ‘ಊನ್ರೊ ಬೇವಾರ್ಸಿಗ್ಳ… ಅವ್ನು ಎಣ್ತಿ ಸತ್ತೋನು, ನಾನು ಗಂಡ್ ಸತ್ತ ಮುಂಡೆ… ನಾವ್ ಎಂಗಾರ ಬದುಕ್ತೀವಿ. ಅದ್ನೆಲ್ಲ ಕೇಳಾಕೆ ನೀವ್ಯಾರು? ಇನ್ನೊಂದ್ಕಿತ ನಮ್ಮಿಬ್ಬರ ಬಗ್ಗೆ ಏನಾರ ಗುಸ್ಗುಸು ಮಾತಾಡಿದ್ರೆ ಒಂದೇ ಮನೇಕೆ ವಾಸ ಮಾಡ್ತೀವಿ. ಅದೇನ್ ಅರ್ಕೋತೀರೊ ಅರ್ಕೋ ವೋಗಿ… ಅಲ್ಕಟ್ ನನ್ಮಕ್ಳು, ತವ್ಮಾತ್ರ ಸಾಚಾ ಅನ್ನೋಂಗೆ ಮಾತಾಡ್ತಾವೆ.’ ಎಂದು ಏರು ದನಿಯಲ್ಲಿ ಮಾತಾಡಿ ಊರ ಸದ್ದಡಗಿಸುತ್ತಿದ್ದಳು. ಮಗ ವೆಂಕಟೇಶನಿಗೂ ನಾರಾಯಣಪ್ಪನನ್ನು ತೋರಿಸಿ ‘ನೋಡೊ ವೆಂಕ್ಟೇಸ ಇವ್ನು ನಿನ್ ಚಿಗಪ್ಪ. ಇನ್ಮೇಕೆ ಚಿಗಪ್ಪ ಅಂತ್ಲೆ ಕರಿ. ಊರು ಏಳೋದ್ನ ತಲೇಗಾಕ್ಕೊಳ್ದೆ ಚಂದಾಕೋದು.’ ಎಂದು ಹೇಳಿದ್ದಳು. ಅವನು ಹಾಗೂ ಹೀಗೂ ಮಾಡಿ ಬಿ.ಫಾರ್ಮ್ ಮುಗಿಸಿ ಹತ್ತಿರದ ಚಿಂತಾಮಣಿಯ ಮೆಡಿಕಲ್ ಸ್ಟೋರ್ ಒಂದರಲ್ಲಿ ಒಂದಷ್ಟು ವರ್ಷ ಕೆಲಸ ಮಾಡಿದ್ದ. ನಂತರ ನೆಂಟರ ಪೈಕೆ ಒಬ್ಬರು ಒಳ್ಳೆ ಹುಡುಗ ಎಂದು ತಮ್ಮ ಮಗಳನ್ನು ಕೊಟ್ಟು ಹೊಸಕೋಟೆಯಲ್ಲಿ ಮೆಡಿಕಲ್ ಸ್ಟೋರ್ ಹಾಕಿಸಿಕೊಟ್ಟಿದ್ದರು. ನಂಜಮ್ಮನ ಹರಕು ಬಾಯಿ, ಜೊತೆಗೆ ನಾರಾಯಣಪ್ಪನ ಸಹವಾಸ ವೆಂಕಟೇಶನ ಹೆಂಡತಿಗೆ ಹಿಡಿಸದಾಗಿ ಜಪ್ಪಯ್ಯ ಅಂದ್ರು ಆ ಮನೆಗೆ ಕಾಲಿಡುವುದಿಲ್ಲ ಎಂದು ಹಠ ಹಿಡಿದು ಕೂತಿದ್ದಳು. ಒಂದು ಬಾರಿ ಇದೇ ವಿಷಯವಾಗಿ ನಂಜಮ್ಮನ ಜೊತೆ ಜೋರು ಜಗಳ ಮಾಡಿ ‘ಗಂಡ ಸತ್ಮೇಕೆ ಅದ್ರಲ್ಲು ಬೆಳೆದ ಮಗ ಮನೇಲಿದ್ರು ಅವನ್ನ ಮಡಿಕ್ಕಂಡಿದೀಯಲ್ಲ… ಊರಾಕ ಈ ರೀತಿ ಬದ್ಕೋಕೆ ನಾಚ್ಕೆ ಆಗಾಕಿಲ್ಲ ನಿಂಕೆ’ ಎಂದು ಇಡೀ ಹಳ್ಳಿಗೆ ಕೇಳಿಸುವ ಹಾಗೆ ನುಡಿದಿದ್ದಳು. ಸೊಸೆಯ ಆ ಪಾಟಿ ವರಸೆಯನ್ನು ಕಂಡು ನಂಜಮ್ಮ ದಂಗಾಗಿದ್ದಳು. ಬಹುಶ ತನ್ನ ಜೀವನದಲ್ಲಿ ಮೊದಲ ಬಾರಿಗೆ ಎಂಬಂತೆ ಸುಮಾರು ಹತ್ತು ನಿಮಿಷಗಳ ಕಾಲ ಪ್ರತಿ ನುಡಿಯದೆ ಸುಮ್ಮನಾಗಿದ್ದಳು. ಅದೇ ಸಮಯಕ್ಕೆ ಅಲ್ಲಿಗೆ ಬಂದಿದ್ದ ನಾರಾಯಣಪ್ಪ ನಂಜಮ್ಮನ ಸೊಸೆಗೆ ಸಮಜಾಯಿಷಿ ನೀಡಲು ಮುಂದಾಗಿದ್ದ. ಆಗ ನಂಜಮ್ಮ ನಾರಾಯಣಪ್ಪನ ರಟ್ಟೆ ಹಿಡಿದು ಪಕ್ಕಕ್ಕೆಳೆದು ‘ಲೇ ನಾರಾಯ್ಣಿ, ನೀನೇನ್ಲ ಅವುಳ್ಕೆ ಸಂಜಾಯಿಸೋದು. ಚಿಕ್ಕ ವಯಸ್ಕೆ ಗಂಡನ ಕಳ್ಕೊಂಡೋರ ಕಸ್ಟ ಅವಳ್ಕೇನು ಗೊತ್ತು. ನಾಳೇಕೇನಾರ ಎಚ್ಕಮ್ಮಿಯಾದ್ರೆ ಆವಾಕ ಗೊತ್ತಾಗುತ್ತೆ ಅವುಳ್ಕೆ… ನನ್ನ ಬಾಧೆ ಏನೂಂತ.’ ಎಂದು ನುಡಿದಿದ್ದಳು. ನಂಜಮ್ಮನ ಸೊಸೆ ಸರಸ್ವತಿಗೆ ಅಷ್ಟು ಸಾಕಾಗಿತ್ತು. ತನ್ನ ಗಂಡನ ಪಕ್ಕಕ್ಕೆ ಹೋಗಿ ‘ನೋಡಿದ್ರೇನ್ರಿ ನಿಮ್ತಾಯಿ ಏನ್ಮಾತಾಡ್ತಾವ್ರೆ. ತಾಯಿ ಹೇಳೊ ಮಾತ ಇದು. ನಿಮ್ಮನ್ನೆ ಸಾಯಿಸೋಕೆ ಹೊಂಟವ್ರೆ. ಎಂತಾ ಹೆಂಗ್ಸು ಇದು. ಈ ಮನೇಕೆ ಇನ್ಮೇಕೆ ನಾನೆಂದೂ ಬರಾಕಿಲ್ಲ ನಡೀರಿ ಹೋಗೂವ’ ಎಂದು ನುಡಿದು ಗಂಟು ಮೂಟೆ ಕಟ್ಟಿದ್ದಳು. ಆಗ ನಂಜಮ್ಮ ಮಗನ ಕೈ ಹಿಡಿದು ಊರಿಂದ ಆಚೆ ಕರೆದುಕೊಂಡು ನಡೆದಿದ್ದಳು.

ನಂಜಮ್ಮ ತನ್ನ ಗಂಡನನ್ನು ಪುಸುಲಾಯಿಸಿ ಎಲ್ಲಿ ತನಗೇ ವಿರುದ್ಧ ಎತ್ತಿಕಟ್ಟುತ್ತಾಳೊ ಎಂದು ಸರಸ್ವತಿ ಆತಂಕಗೊಂಡಿದ್ದಳು. ನಂಜಮ್ಮ ಮಗನನ್ನು ಊರ ಓವರ್ ಹೆಡ್ ಟ್ಯಾಂಕಿನ ಬಳಿ ಕರೆದೊಯ್ದು ‘ನೋಡು ಮೊಕ, ಸೊಸಿ ಗಟ್ಟಿಗಿತ್ತಿ ಅವ್ಳೆ. ಸಂಸಾರ ನಡೆಸೊ ತಾಕತ್ತೈತಿ ಅವಳಾಕ. ನೀನ್ ನನ್ನ ಬಗ್ಗಿ ಚಿಂತಿ ಮಾಡ್ಬೇಡ. ಅವುಳ್ಕೆ ಇಷ್ಟ ಇಲ್ಲಾಂದ್ರೆ ಇಲ್ಲಿ ಬರೋದು ಬೇಡ. ನೀ ಯಾವಾಕ್ಲಾರ ಬರ್ತಿರು. ಸುಮ್ಕೆ ಊರ್ನಾಕ ಪಂಚಾಯ್ತಿ ಯಾಕೆ. ಕರ್ಕೊಂಡು ವಂಟ್ಬಿಡು’ ಎಂದು ನುಡಿದಿದ್ದಳು. ಅವನು ‘ಅವುಳ್ ಕಷ್ಟ ಪಡ್ಲಿ ಅಂತ ನಾನ್ ಸಾಯೊ ಮಾತಾಡ್ದಲ್ಲವ್ವ ನೀನು. ನಿಂಕೆ ಸರಿ ಕಾಣುತ್ತ’ ಎಂದು ನುಡಿದಿದ್ದ. ಅವಳು ಮಗನ ಮುಖವನ್ನೆ ದಿಟ್ಟಿಸಿ ನೋಡಿದ್ದಳು. ಅವನು ತಲೆ ತಗ್ಗಿಸಿದ್ದ. ಮತ್ತೆ ತನ್ನ ಮಗನ ಕೈ ಹಿಡಿದ ಅವಳು ಮನೆಗೆ ನಡೆದು ಸೊಸೆಗೆ ‘ನೀನು ನಿನ್ಗಂಡನ್ನ ಕರ್ಕೊಂಡು ವೊಂಟೋಗು. ಇಲ್ಯಾರೂ ಬರೋದು ಬೇಕಿಲ್ಲ’ ಎಂದು ಗುಡುಗಿದ್ದಳು. ಅಂದು ಹೋದ ಮಗ ಸೊಸೆ ಮತ್ತೆ ಊರಿನ ಕಡೆ ಮುಖ ಮಾಡಿದ್ದಿಲ್ಲ. ಅದೇ ವರ್ಷದಲ್ಲೆ ನಾರಾಯಣಪ್ಪನು ಆಕ್ಸಿಡೆಂಟ್ ಒಂದರಲ್ಲಿ ತೀರಿಕೊಂಡಿದ್ದ. ಅಂದಿನಿಂದ ಅವಳು ಒಂಟಿಯಾಗೆ ಜೀವನ ಸಾಗಿಸುತ್ತಿದ್ದಾಳೆ. ಎದೆಯ ಭಾರ ಜಾಸ್ತಿ ಆದಾಗಲೆಲ್ಲ ಆಕಾಶದ ಕಡೆ ಕೈ ತೋರಿಸಿಯೊ, ಊರ ದೇವಸ್ಥಾನದ ಕಡೆ ಕೈತೋರಿಸಿಯೊ ತೋಚಿದ್ದು ಬೈದು ಹಗುರಾಗುತ್ತಾಳೆ.

ಬಿಸಿಲು ಬಲಿಯತೊಡಗಿದಂತೆ ತುಸು ತುಸುವೆ ನಂಜಮ್ಮನ ಮನೆಯ ಮುಂಭಾಗದ ಗೋಡೆಯನ್ನು ನೆಕ್ಕತೊಡತು. ನಂಜಮ್ಮ ನಿಸ್ಸಾರಗೊಂಡವಳಂತೆ ಗೋಡೆಗೊರಗಿ ಕುಳಿತಿದ್ದಳು. ಬಿಸಿಲು ಅವಳ ಹಣೆಯನ್ನು ನೇವರಿಸಿ ಸಂತೈಸುತ್ತಿರುವಂತೆ ಕಾಣತೊಡಗಿತು. ಅವಳಿಗೆ ತುಸುವೆ ಚೈತನ್ಯ ಬಂದಂತಾಗಿ ಎದ್ದು ಗೇಟಿನ ಬಳಿ ಬಂದಳು. ಬೀದಿಯಲ್ಲಿ ನಾಯಿಯೊಂದು ಆಕಾಶದ ಕಡೆ ಮುಖಮಾಡಿ ದೀರ್ಘವಾದ ಆಲಾಪವನ್ನು ಮಾಡುತ್ತಲಿತ್ತು. ಅವಳು ‘ನಂದಾತು, ಇವಾಕ ನಿಂದ… ಜೀವ ಸುಮ್ಕಿರಾಕಿಲ್ಲ ನೋಡು’ ಎಂದುಕೊಳ್ಳುತ್ತ ತನ್ನ ಕಡೆಗೆ ಬರುತ್ತಿರುವ ನಾಗರಾಜನನ್ನು ದಿಟ್ಟಿಸಿದಳು. ಅವನ ಕಂಗಳಲ್ಲಿ ಸುದ್ದಿಯೊಂದನ್ನು ಮುಟ್ಟಿಸುವ ಕಾತುರವಿತ್ತು. ಬಂದವ್ನೆ ‘ಯಕ್ಕೊ ವೆಂಕ್ಟೇಶ ಫೋನ್ ಮಾಡಿದ್ದ. ನಾಳೀಕೆ ಎಣ್ತಿ ಮಗ್ಳು ಎಲ್ಲ ಬರ್ತಾವ್ರಂತೆ’ ಎಂದು ನುಡಿದ. ಅವಳಲ್ಲೇನು ಅಂತಹ ಬದಲಾವಣೆಗಳಾಗಲಿಲ್ಲ. ಸುಮ್ಮನೆ ಕೇಳಿಸಿಕೊಳ್ಳುತ್ತ ನಿಂತಿದ್ದಳು. ಅವರು ಊರಿಗೆ ಬಂದರೂ ಸೊಸೆ ತನ್ನನ್ನು ಮಾತನಾಡಿಸುವುದಿಲ್ಲವೆಂಬ ಖಾತರಿಯಿತ್ತು. ಊರ ಮಂದಿಯ ಮುಂದೆ ಅತ್ತಿ ಸೊಸಿ ಮಾತಾಡ್ದೆ ಕುಂತಿದ್ರೆ ಹೋಗೋದು ತನ್ನ ಮಾನಾನೆ ಅಲ್ಲವೆ ಎಂಬ ಎಣಿಕೆಯಲ್ಲಿ ಅವಳು ನಿಂತಿದ್ದಳು. ಹಾಗೆ ಸುಮ್ಮನೆ ಕೂತು ಹೋಗುವುದಕ್ಕೆ ಬರುವ ಅವಶ್ಯಕತೆಯಾದ್ರು ಏನುಂಟು ಎಂದು ಯೋಚಿಸುತ್ತಿದ್ದವಳಿಗೆ ನಾಗರಾಜ ಮತ್ತೆ ‘ಯಕ್ಕೊ ಏನೊ ಬಾಳ ಇಂಪಾರ್ಟೆಂಟ್ ಕೆಲಸ್ವಂತೆ. ಮನೆ ವಿಶ್ಯ ಮಾತಾಡ್ಬೇಕು ಅಂತ್ಲೇನೊ ಹೇಳ್ತಿದ್ದ. ಆಮೇಕೆ ನೀನು ಮನೇಕೆ ಇರ್ಬೇಕು ಅಂತ ಬೇರೆ ಹೇಳ್ದ’ ಎಂದು ನುಡಿಯುತ್ತಿದ್ದಂತೆ ನಂಜಮ್ಮನ ಕಂಗಳು ಅರಳತೊಡಗಿದವು. ಅವಳೊಳಗೆ ಸಣ್ಣದೊಂದು ಆಸೆ ಪುಟಿದೇಳತೊಡಗಿತು. ವೆಂಕ್ಟೇಶನ ಮನಸ್ಸಿನಲ್ಲಿ ತನ್ನ ಹರಕಲು ಮನೆಯನ್ನು ಕೆಡವಿ ಹೊಸ ಮನೆಯನ್ನು ಕಟ್ಟಿಸಿಕೊಡುವ ಉದ್ದೇಶ ಇದ್ದರೂ ಇರಬಹುದು ಎಂದು ಊಹಿಸತೊಡಗಿದಳು. ಹಾಗೊಂದು ಬಣ್ಣಬಣ್ಣದ ಮನೆ ಅಂತಾಗಿ ಊರ ಮಂದಿ ‘ನೋಡ್ರೊ ನಂಜಮ್ಮಕ್ಕನ ಮನಿ ಏನ್ ಪಸಂದಾಗೈತಿ’ ಎಂದು ನುಡಿಯುವುದನ್ನು ಕೇಳಿಸಿಕೊಳ್ಳಬೇಕೆಂಬ ಆಸೆ ಅವಳೊಳಗೆ ಚಿಗುರೊಡೆಯತೊಡಗಿತು. ಅಲ್ಲೆ ನಿಂತಿದ್ದ ನಾಗರಾಜನಿಗೆ ‘ಆಮೇಕೇನಾರ ಯೇಳಿದ್ನೇನ್ಲ’ ಎಂದು ಕೇಳಿದಳು. ಅವನಿಗೆ ಅವಳ ಕಂಗಳೊಳಗಿನ ಹೊಳಪು ಸ್ಪಷ್ಟವಾಗಿ ಕಾಣುವಂತಿತ್ತು. ನಾಯಿ ತನ್ನ ಆಲಾಪವನ್ನು ನಿಲ್ಲಿಸಿ ಅಲ್ಲೆ ಪಾಳು ಬಿದ್ದ ಮನೆಯ ಗೋಡೆಗೆ ಕಾಲೆತ್ತಿ ಮೂತ್ರ ಮಾಡುತ್ತಿತ್ತು.

ಕಂಬಿಯ ಮೇಲಿದ್ದ ಕಾಗೆಗಳು ಕೂಗುತ್ತ ಅರಳಿ ಮರದ ಒಡಲೊಳಗೆ ತೂರಿಕೊಂಡವು. ಅವಳ ಅಂಗಳದಲ್ಲಿ ಒಂಟಿ ಗುಬ್ಬಿಯ ಜೊತೆಗೆ ಮತ್ತೊಂದಿಷ್ಟು ಗುಬ್ಬಿಗಳು ಜೊತೆಯಾಗಿ ರಾಗಿ ಕಾಳುಗಳನ್ನು ಹೆಕ್ಕಿ ಸಂಭ್ರಮಿಸುತ್ತಿದ್ದವು. ನಾಗರಾಜ ‘ಮತ್ತೇನು ಹೇಳ್ಳಿಲ್ಲ ಕನಕ್ಕ. ಆದ್ರೆ ಮಗಳ ಪಟಾನ ಫೇಸ್ ಬುಕ್ನಾಗ ಹಾಕವನೆ. ಪಸಂದಾಗೌಳೆ’ ಎಂದು ನುಡಿದು ಮೊಬೈಲ್ ತೆಗೆದು ಫೇಸ್ಬುಕ್ಕಿನಲ್ಲಿರುವ ಚಿತ್ರವನ್ನು ತೋರಿಸತೊಡಗಿದ. ಅವಳು ‘ಆಹಾ ನನ್ ಕಂದ ಏನ್ ಮುದ್ದಾಗಿದೀ ಮಗ್ಳೆ. ಇರು ನನ್ ದೃಷ್ಟೀನೆ ತಗಲೋಂಗಿದೆ’ ಎನ್ನುತ್ತ ಮೊಬೈಲಿನ ಪರದೆ ಮುಟ್ಟಿ ಕೈಬೆರಳುಗಳನ್ನು ಮಡಚಿ ತಲೆಯ ಇಕ್ಕೆಲೆಗಳಿಗೆ ಅದುಮಿ ನಟಿಕೆ ಮುರಿದಳು. ನಂತರ ನಾಗರಾಜನಿಗೆ ‘ಲೇ ನಾಗ್ರಾಜ, ನನ್ಮೊಮ್ಮಗಳು ತೇಟ್ ನನ್ನಂಗೆ ಅವುಳಲ್ವೆ’ ಎಂದು ಕೇಳಿದಳು. ಅವನು ತುಸುವೆ ನಕ್ಕು ‘ಅಲ್ಲಕ್ಕೊ ಅವುಳ ಕಲರ್ರೇನು ನಿನ್ ಕಲರ್ರೇನು. ಸುಮ್ಕೆ ಕನ್ಸು ಕಾಣ್ಬೇಡ ಕೆಲಸ ನೋಡೋಗು.’ ಎಂದು ಹಿತವಾಗಿ ರೇಗಿದ್ದ. ಅದಕ್ಕವಳು ‘ಲೇ ಗುಡ್ಬುದ್ದಿ ಮುಂಡೇದೆ, ಪೋಟೋದಾಕ ಎಲ್ಲಾರು ಕಲರ್ ಕಲರಾಗೆ ಕಾಣ್ತಾರೆ. ಅಷ್ಟು ಗೊತ್ತಾಗ್ದೇನ್ಲ ನಿಂಕೆ… ಸೊಟ್ಟ ಮೂತೀದೆ’ ಎಂದು ಶುರುವಿಟ್ಟುಕೊಂಡಳು. ನಾಗರಾಜ ಇನ್ನಿಲ್ಲಿರುವುದು ಸರಿಯಲ್ಲವೆಂದುಕೊಂಡು ಜಾಗ ಖಾಲಿ ಮಾಡಿದ.

ಮಳೆಯ ರಭಸಕ್ಕೆ ಮನೆಯ ಮೇಲಿದ್ದ ಒಂದಷ್ಟು ಮಣ್ಣು ಕೊಚ್ಚಿಕೊಂಡು ಹೋಗಿದ್ದರಿಂದ ತಾರಸಿ ಸೋರಲು ಶುರುವಿಟ್ಟುಕೊಂಡಿತ್ತು. ಆ ಸಮಯದಲ್ಲಿ ನಂಜಮ್ಮನಿಗೆ ದಿಕ್ಕು ತೋಚಿರಲಿಲ್ಲ. ಸೋರಿದ ಕಡೆಯೆಲ್ಲ ಪಾತ್ರೆ, ಚಂಬು, ಗ್ಲಾಸು, ಬಿಂದಿಗೆ, ತಪಲೆ, ತಟ್ಟೆ ಹೀಗೆ ಕೈಗೆ ಸಿಕ್ಕಿದ್ದೆಲ್ಲವನ್ನು ಇಟ್ಟಿದ್ದಳು.

ನಂಜಮ್ಮನ ಸಂಭ್ರಮಕ್ಕೆ ಎಣೆಯಿಲ್ಲದಾಯಿತು. ಅವಳ ಮನಸು ಮೊಮ್ಮಗಳನ್ನು ಕಂಡು ಇನ್ನಿಲ್ಲದ ಚೈತನ್ಯವನ್ನು ತುಂಬಿಕೊಂಡಿತು. ಅದೇ ಉತ್ಸಾಹದಲ್ಲೆ ಮನೆಯಲ್ಲ ಸ್ವಚ್ಛ ಮಾಡಿದಳು. ಗೋಡೆ ಕಿತ್ತು ಬಂದಿರುವ ಕಡೆಗೆ ಒಂದಷ್ಟು ಸಿಮೆಂಟ್ ಮೆತ್ತಿಸಿ ಮುಚ್ಚಲೆ ಎಂದುಕೊಂಡಳು. ನಂತರ ತೇವವಿರುವುದರಿಂದ ಒಂದೆರಡು ದಿನ ಕಳೆದ ಮೇಲೆ ಸರಿಮಾಡಿದರೆ ಆಯಿತೆಂದುಕೊಂಡು ಒಲೆಯ ಮೇಲೆ ಮುದ್ದೆಗಿಟ್ಟು ಊರ ದೇವಸ್ಥಾನದ ಬಳಿ ನಡೆದಳು. ಅವಳಿಗೆ ಕನಿಷ್ಠ ಹತ್ತು ಮಂದಿಯ ಬಳಿಯಾದರು ಆ ವಿಷಯವನ್ನು ಹೇಳಿಕೊಳ್ಳಬೇಕಿತ್ತು. ದಾರಿಯಲ್ಲಿ ಬಂದು ಹೋಗುವವರಿಗೆಲ್ಲ ನಾಳೆ ಮಗ ಸೊಸೆ ಮೊಮ್ಮಗಳು ಬರುತ್ತಿರುವ ವಿಷಯವನ್ನು ಜೋರಾಗಿ ಹೇಳತೊಡಗಿದಳು. ಪ್ರತಿ ಸಲ ಹಾಗೆ ಹೇಳುವಾಗಲು ತನ್ನ ಮೊಮ್ಮಗಳು ಥೇಟ್ ತನ್ನ ತರವೆ ಇರುವುದಾಗಿ ಒತ್ತಿ ಒತ್ತಿ ಹೇಳುತ್ತಿದ್ದಳು. ದೇವಸ್ಥಾನದ ಪಕ್ಕದ ಮನೆಯ ಮುನೆಮ್ಮ ‘ಓ ಅಂಕಾದ್ರೆ ನಿಂತರಾನೆ ಗಯ್ಯಾಳಿ ಅನ್ನು’ ಎಂದು ಹೇಳಿದ್ದಕ್ಕೆ ‘ಲೇ ಮುನೆಮ್ಮಕ್ಕ ನಿನ್ನಂತೋಳ್ನ ಸಂಬಾಳಿಸ್ಬೇಕು ಅಂತಂದ್ರ ಸುಮ್ಕೇನ. ನಂತರಾ ಗಯ್ಯಾಳೀನೆ ಆಗ್ಬೇಕು. ಅವುಳು ನಾಳೀಕೆ ಬರ್ಲಿ ಇರು… ನಿಂಕೆ ಮುಕಕ್ಕೆ ಮಂಗಳಾರ್ತಿ ಎತ್ಸಿ ಊರ ಮುಂದ ನಿನ್ನ ಮಾನ ಹರಾಜಾಕ್ಸಿಲ್ಲ ಅಂದ್ರ ನನ್ನೆಸ್ರು ನಂಜೀನೆ ಅಲ್ಲ’ ಎಂದು ನುಡಿದು ಮುನೆಮ್ಮ ಒಳ ಹೋಗುವಂತೆ ಮಾಡಿದಳು. ನಂತರ ದೇವಸ್ಥಾನದ ಎದುರಿಗಿರುವ ಅಂಗಡಿಯಲ್ಲಿ ಬೇಳೆ ಬೆಲ್ಲ ಮೈದಾ ತೆಗೆದುಕೊಂಡು ‘ಅಯ್ಯೊ ನನ್ಗುಡ್ಬುದ್ದೀಗೆ… ಒಲೆ ಮೇಲೆ ಎಸರಿಟ್ಟಿದ್ದೆ’ ಎಂದು ನುಡಿಯುತ್ತ ಬಿರಬಿರನೆ ಮನೆಯ ಕಡೆಗೆ ನಡೆಯತೊಡಗಿದಳು.

ಮಾರನೆ ದಿನ ಮುಂಜಾನೆ ಐದಕ್ಕೆಲ್ಲ ಎದ್ದ ನಂಜಮ್ಮ ತೊಗರಿ ಬೇಳೆ, ಬೆಲ್ಲ ಒಲೆ ಮೇಲಿಟ್ಟು ಬೇಯಿಸಿ ರುಬ್ಬಿ ಹೂರಣ ತಯಾರು ಮಾಡಿದಳು. ರಾತ್ರಿಯೆ ಮೈದ ಕಲಿಸಿಟ್ಟಿದ್ದಳಾದ್ದರಿಂದ ರುಬ್ಬುವ ಕೆಲಸ ಮುಗಿದ ತಕ್ಷಣ ಬಾಣಲಿಗೆ ಎಣ್ಣೆ ಹಾಕಿ ಹೂರಣದ ಉಂಡೆಗಳಿಗೆ ನಾದಿದ ಮೈದಾ ಹಿಟ್ಟನ್ನು ಸುತ್ತಿ ಕಾದ ಎಣ್ಣೆಯೊಳಗೆ ಬಿಟ್ಟು ಸುಗುಂಡೆಗಳನ್ನು ಮಾಡತೊಡಗಿದಳು. ಅದರ ಕಮ್ಮನೆ ವಾಸನೆಗೆ ಮರುಳಾಗಿ ನಂಜಮ್ಮನ ಮನೆಗೆ ಬಂದ ಮಂಜೇಗೌಡನ ಹೆಂಡತಿ ಸುಜಾತ ‘ಏನ್ ನಂಜಕ್ಕ ಬೆಳ್‍ಬೆಳಗ್ಗೆ ಈ ಪಾಟಿ ಗಮ್ಲು ಹಬ್ಬಿಸ್ತಿದ್ದಿ. ಊರ್ನಾಕಿರೊ ಯಾರೂ ಕೆಲುಸಗಳ್ಕೆ ವೋಗ್ಬಾರ್ದಂತ್ಲೋ…’ ಎಂದು ನುಡಿಯುತ್ತಾ ಒಂದು ಬಿಸಿ ಬಿಸಿ ಸುಗುಂಡೆ ಎತ್ತಿಕೊಂಡು ತಿನ್ನ ತೊಡಗಿದಳು. ನಂಜಮ್ಮ ‘ಏನಿಲ್ಲ ಸುಜಾತಮ್ಮ ಅದೆ ನನ್ನ ಮೊಕ, ಸೊಸೆ, ಮೊಮ್ಮಗಳು ಬತ್ತಿದಾರಲ್ಲ ಅದ್ಕೆ. ನಮ್ ವೆಂಕ್ಟೇಸನ್ಕೆ ಸುಗುಂಟ್ಲು ಅಂದ್ರೆ ಶಾನ ಬ್ಯಮೆ’ ಎಂದು ನುಡಿದು ಐದಾರು ಸುಗುಂಡೆಗಳನ್ನು ಒಂದು ಬಟ್ಟಲಿಗಾಕಿ ಬೇಡ ಬೇಡವೆಂದರು ಸುಜಾತಳ ಕೈಗೆ ಕೊಟ್ಟು ‘ಗೌನ್ಕೆ ಕೊಡು… ಅವನ್ಕೂನು ಬ್ಯಮೇನೆ’ ಎಂದು ನುಡಿದು ತನ್ನ ಕೆಲಸದಲ್ಲಿ ತಲ್ಲೀನಳಾದಳು.

ಬೆಳಗ್ಗೆ ಹನ್ನೊಂದು ಗಂಟೆಯ ವೇಳೆಗೆ ಮನೆಯ ಮುಂದೆ ಕಾರು ಬಂದು ನಿಂತಿತು. ನಂಜಮ್ಮ ಓಡಿ ಹೋಗಿ ಎಲ್ಲರನ್ನು ಬರಮಾಡಿಕೊಂಡು ಮೊಮ್ಮಗಳನ್ನು ಎತ್ತಿಕೊಳ್ಳಲು ಪ್ರಯತ್ನಿಸಿದಳು. ಅವಳು ಕೊಸರಿಕೊಂಡು ತಾಯಿಯ ಸೆರಗನ್ನು ಹಿಡಿದುಕೊಂಡಳು. ಸೊಸೆಗೆ ‘ವಸ್ದಲ್ವೆ ಅದ್ಕೆ ಮಗು ಎದರ್ತಿದೆ’ ಎಂದು ಹೇಳಿದಳು. ಸರಸ್ವತಿ ಏನೊಂದೂ ಮಾತನಾಡದೆ ಸುಮ್ಮನೆ ಮನೆಯೊಳಗೆ ನಡೆಯತೊಡಗಿದಳು. ನಂಜಮ್ಮ ಮತ್ತೆ ಮಗನಿಗೆ ಕಾರು ನಿಂದೆ ಯೇನ್ಲ ಎಂದು ಕೇಳಿದಳು. ಅವನು ಮೆತ್ತಗೆ ಹೌದೆಂದು ನುಡಿದು ನಾಲ್ಕು ಲಕ್ಷವಾಯಿತೆಂದು ತಿಳಿಸಿದ. ಅವಳು ‘ಒಂದ್ಮಾತೇಳಾಕಿಲ್ಲೇನೊ ಊರೆಲ್ಲ ಕೇಳಿ ವಡ್ಕಂಡ್ ಬತ್ತಿದ್ದೆ’ ಎಂದು ನುಡಿದು ಒಂದು ದೀರ್ಘವಾದ ನಿಟ್ಟುಸಿರು ಬಿಟ್ಟು ನಂತರ ‘ಬಿಡು ಮೊಕ, ಈ ಮುದುಕೀಗೆ ಕಾರ್ನ ಉಸಾಬ್ರಿ ಯಾಕೆ’ ಎಂದು ಸುಮ್ಮನಾದಳು. ವೆಂಕಟೇಶ ಮನೆಯೊಳಗೆ ನಡೆದು ಕುಳಿತುಕೊಳ್ಳುವಾಗ ಮಳೆಗೆ ಗೋಡೆ ತೂತಾಗಿರುವ ಜಾಗವನ್ನು ಗಮನಿಸಿದ. ನಂಜಮ್ಮ ಮಗ ಅದರ ಬಗ್ಗೆ ಏನಾದರು ಕೇಳಬಹುದು ಎಂದುಕೊಂಡಳು. ಆದರೆ ಅವನು ಮಾತನಾಡುವ ಗೊಡವೆಗೆ ಹೋಗದೆ ಸುಮ್ಮನೆ ಕುಳಿತುಕೊಂಡ. ಬಿಡು ಮನೇನೆ ಕೆಡ್ವಿ ವಸ ಮನೆ ಕಟ್ಟಿಸೋ ಪ್ಲಾನಲ್ಲಿದಾನಲ್ವೆ. ಅಂದ್ಮೇಕೆ ಇದನ್ನೆಲ್ಲಿ ಕೇಳಿಯಾನು ಎಂದುಕೊಂಡ ಅವಳು ಅಡುಗೆ ಮನೆಗೆ ನಡೆದು ಒಲೆ ಹತ್ತಿಸಿ ಕಾಫಿ ಮಾಡಿಕೊಂಡು ಬಂದು ಎಲ್ಲರಿಗೂ ಕೊಟ್ಟಳು. ಅಷ್ಟರಲ್ಲಿ ನಾಗರಾಜನೂ ಬಂದ. ಮತ್ತೆ ಒಳಹೋದ ಅವಳು ಮತ್ತೊಂದು ಲೋಟ ತಂದು ನಾಗರಾಜನ ಕೈಗಿತ್ತಳು. ನಾಗರಾಜ ಕಾಫಿ ಕುಡಿಯುತ್ತ ‘ಏನ್ ನಂಜಕ್ಕ ಮೊಮ್ಮಗಳು ನಿನ್ನಂಗೆ ಅಂತ ಜಂಬ ಕೊಚ್ಕೋತಿದ್ದೆ. ನೋಡು ಎಷ್ಟು ಬೆಳ್ಗವುಳೆ’ ಎಂದು ಕೇಳಿದ. ಅದಕ್ಕೆ ನಂಜಮ್ಮ ‘ಸಿಟೀನಾಕ ಇದ್ರೆ ಇನ್ನೆಂಗಿರ್ತಾರೆ. ಹಳ್ಳಿನಾಕೆ ಇದ್ದಿದ್ರೆ ನನ್ನಂಗೆ ಕಪ್ಪಕಿರ್ತಿದ್ಲು’ ಎಂದು ನುಡಿದು ಮೊಮ್ಮಗಳ ಬಳಿ ನಡೆದು ‘ಏನ್ ಎಸರವ್ವ’ ಎಂದು ಕೇಳಿದಳು. ವೆಂಕ್ಟೇಶ ‘ಸೌಪರ್ಣಿಕ’ ಎಂದು ಹೇಳಿದ. ಇನ್ನೂ ಹತ್ತಿರ ಹೋದ ಅವಳು ‘ನಂಕೆ ಕಸ್ಟ ಕಣಪ್ಪ, ನಾ ಮಗ್ಳೆ ಅಂತ ಕರೀತೀನಿ’ ಎಂದಳು. ಮೊಮ್ಮಗಳ ಕೈ ಹಿಡಿದು ‘ಮಗ್ಳೆ ಬಾರೊ ಇಲ್ಲಿ, ಮಾರಾಣಿ ಇದ್ದಂಗಿದೀ… ನನ್ ದೃಷ್ಟೀನೆ ತಾಕೋಂಗೈತಿ’ ಎಂದು ನುಡಿದು ನಟಿಕೆ ಮುರಿದಳು. ನಂತರ ನಾನಾ ರೀತಿಯಲ್ಲಿ ಮಾತನಾಡಿಸಲು ಪ್ರಯತ್ನಿಸಿದಳು. ನಂಜಮ್ಮ ಎಷ್ಟೆ ಪ್ರಯತ್ನ ಪಟ್ಟರು ಮೊಮ್ಮಗಳು ಸರಸ್ವತಿಗೆ ಮತ್ತಷ್ಟು ಅಂಟಿಕೊಳ್ಳುತ್ತಿದ್ದಳು. ಅಡುಗೆ ಮನೆಗೆ ಹೋಗಿ ಸುಗುಂಡೆಗಳನ್ನು ತಂದು ಅವಳ ಬಾಯಿಯ ಹತ್ತಿರ ಇಟ್ಟು ತಿನ್ನಿಸಲು ಪ್ರಯತ್ನಿಸಿದಳು. ಸಾಧ್ಯವಾಗದೆ ಸೊಸೆಯ ಮುಂದೆ ತಟ್ಟೆ ಇಟ್ಟು ತಿನ್ನಿಸಲು ಹೇಳಿದಳು. ಮತ್ತೊಂದು ತಟ್ಟೆಯನ್ನು ತಂದು ವೆಂಕಟೇಶ ಹಾಗು ನಾಗರಾಜನ ಮುಂದಿಟ್ಟಳು. ನಾಗರಾಜ ತಟ್ಟೆಗೆ ಕೈಹಾಕಿ ಎರಡ್ಮೂರು ಸುಗುಂಡೆಗಳನ್ನು ತಿಂದ. ವೆಂಕಟೇಶ ‘ಬೇಡವ್ವೊ ಈಗ್ತಾನೆ ಹೋಟ್ಲಲ್ಲಿ ಮಸಾಲೆ ದೋಸೆ, ಇಡ್ಲಿ ತಿನ್ಕಂಡ್ ಬಂದ್ವಿ’ ಎಂದು ನುಡಿದ. ನಂಜಮ್ಮ ಮಗನ ಕಡೆಗೇ ನೋಡತೊಡಗಿದಳು. ಅವನು ನಿಧಾನಕ್ಕೆ ತಲೆ ಬಗ್ಗಿಸಿ ನೆಲವನ್ನು ದೃಷ್ಟಿಸತೊಡಗಿದ. ನಂಜಮ್ಮ ‘ಅಲ್ಲ ಮೊಕ, ಮನೇಕೆ ಬರೋರು ಹೋಟ್ಲಲ್ಲಿ ಎಂಗ್ ತಿಂದ್ರಿ’ ಎಂದು ಕೇಳಿದಳು. ಅವನು ಸುಮ್ಮನಿದ್ದ. ಅವಳಿಗೆ ಏನನ್ನಿಸಿತೊ ಎರಡೂ ತಟ್ಟೆಗಳನ್ನು ಎತ್ತಿಕೊಂಡು ಹೋಗಿ ಅಡುಗೆ ಮನೆಯಲ್ಲಿ ಇಟ್ಟು ಒಂದು ಮೂಲೆಗೆ ಕುಳಿತುಬಿಟ್ಟಳು.

ನಾಗರಾಜ ಎದ್ದು ಆಚೆ ಬಂದು ಒಂದೆರಡು ಫೋನುಗಳನ್ನು ಮಾಡಿದ. ಸ್ವಲ್ಪ ಹೊತ್ತಿಗೆ ಮಂಜೇಗೌಡ ಮತ್ತು ಶ್ರೀರಾಮರೆಡ್ಡಿ ನಂಜಮ್ಮನ ಮನೆಗೆ ಬಂದರು. ನಂಜಮ್ಮನಿಗೆ ವಿಷಯ ಬೇರೆ ಏನೋ ಇರುವುದರ ಸೂಕ್ಷ್ಮ ಅರಿವಾಗತೊಡಗಿತು. ಅವಳು ಅಡುಗೆ ಮನೆಯಿಂದ ಎದ್ದು ಆಚೆ ಬಂದಳು. ಎಲ್ಲರನ್ನು ಕೂರಲು ಹೇಳಿದ ನಾಗರಾಜ ನಂತರ ನಂಜಮ್ಮನ ಮಗ ನಗರದಲ್ಲಿ ಮನೆ ಕಟ್ಟಿಸಲು ತೀರ್ಮಾನಿಸಿರುವ ವಿಷಯ ತಿಳಿಸಿ ‘ಮನೇ ಅಂದ್ರೆ ಸಾಮಾನ್ಯಾನೆ ನಂಜಕ್ಕ, ಏನಿಲ್ಲಾಂದ್ರು ಐವತ್ತು ಲಕ್ಷ ಬೇಕು. ಮೂರು ಫ್ಲೋರ್ ಕಟ್ಟಿಸಿ ಇಪ್ಪತೈದು ಸಾವಿರ ಬಾಡಿಗೆ ಜೇಬಿಗಿಳಿಸೊ ಪ್ಲಾನ್. ನಿನ್ ಮಗ ಬಾರಿ ಬುದ್ದಿವಂತ ನಂಜಕ್ಕ. ಒಂದು ಸೈಟು ಮೊದ್ಲೆ ಮಾಡ್ಕಂಡವ್ನೆ. ಇಲ್ಲಾಂದ್ರೆ ಎಲ್ಲಾ ಸೇರಿ ಹತ್ತಿರತ್ತಿರ ಕೋಟಿ ದಾಟಿರೋದು. ಈಗವನ್ಕೆ ಮನಿ ಕಟ್ಟಿಸೋಕೆ ದುಡ್ಡು ಬೇಕಂದ್ರೆ ಎಲ್ಲಿಂದ ಬರುತ್ತೆ ಹೇಳು… ಅದ್ಕೆ ಅವ ಊರಾಗಿರೊ ಆಸ್ತೀನ ಮಾರ್ಬೇಕು ಅಂತ ಡಿಸೈಡ್ ಮಾಡಿಕೊಂಡು ಬಂದಾನ. ನೀ ಹುಂ ಅಂದ್ರ ನಮ್ಮ ಶ್ರೀರಾಮರೆಡ್ಡೀನೆ ತಗೊಳ್ಳೋಕೆ ತಯಾರಿದಾರೆ ನೋಡು. ಎಕರೆಗೆ ಹತ್ತುಲಕ್ಷ ಮಾತಾಡಿದೀವಿ’ ಎಂದು ನುಡಿದು ಸುಮ್ಮನಾದ. ನಂಜಮ್ಮ ಅಪರೂಪಕ್ಕೆಂಬಂತೆ ಮೌನವನ್ನು ಹೊದ್ದು ಕುಳಿತಿದ್ದಳು. ಅವಳಿಗೆ ಎಲ್ಲವೂ ಸ್ಪಷ್ಟವಾಗತೊಡಗಿತು. ಎಲ್ಲ ತಯಾರಿಯನ್ನು ಮೊದಲೆ ಮಾಡಿಕೊಂಡು ಬಂದಿದ್ದಾರೆಂಬುದು ಅವಳಿಗೆ ಅರಿವಾಗತೊಡಗಿತು. ಇನ್ನು ತನ್ನ ಸಮ್ಮತಿಯೊಂದೇ ಅವರಿಗೆ ಬೇಕಿರುವುದೆಂಬುದೂ ತಿಳಿಯತೊಡಗಿತು.

ಮಂಜೇಗೌಡ ‘ನಂಜಕ್ಕ, ಎಂಗೂ ಮೂರೆಕರೆ ಐತಿ. ಒಂದೆಕರೆ ನೀನ್ ಮಡಿಕ್ಕೊ. ಮಿಕ್ಕ ಎರಡೆಕರೇನ ಮಾರಿಬಿಡು. ಅವ್ರೂ ಹ್ಯಾಪಿಯಾಗಿರ್ತಾರೆ’ ಎಂದು ನುಡಿದು ನಂಜಕ್ಕನ ಪ್ರತಿಕ್ರಿಯೆಗಾಗಿ ಕಾಯತೊಡಗಿದ. ಅವಳು ಮಗ ಮತ್ತು ಸೊಸೆಯ ಕಡೆ ನೋಡತೊಡಗಿದಳು. ಸೊಸೆಯ ಬಾಯಿಯಿಂದ ಮಾತುಗಳು ಬರಲು ಹವಣಿಸುತ್ತಿದ್ದವು. ಅವಳ ಕಂಗಳು ಗಂಡನಿಗೆ ಏನನ್ನೊ ಹೇಳಲು ಪ್ರೇರೇಪಿಸುತ್ತಿದ್ದವು. ನಂಜಮ್ಮನಿಗೆ ಎಲ್ಲವೂ ಅರ್ಥವಾಗತೊಡಗಿತು. ಇನ್ನು ತಡಮಾಡಬಾರದೆಂದು ತೀರ್ಮಾನಿಸಿ ಕೊಡವಿ ಕುಳಿತಳು. ಮಂಜೇಗೌಡನ ಕಡೆಗೆ ನೋಡುತ್ತಾ ‘ನೋಡು ಮಂಜಪ್ಪ, ನನ್ಮಾತ್ನ ಯೇಳ್ತಿವ್ನಿ. ಯಾರೂ ಅಡ್ಡ ಮಾತಾಡ್ಬಾರ್ದು ಆಯ್ತ. ನಂಕೆ ಈ ವಯಸ್ನಾಕೆ ಬಿಸ್ಲಲ್ಲಿ ಗೇಮೆ ಮಾಡಾಕಾಗುತ್ತ. ಶೇನು ಗೀನು ಎಂತೂ ಬೇಡ. ಒಂದ್ರೇಟ್ ಫಿಕ್ಸ್ ಮಾಡಿ ಎಲ್ಲ ಮಾರ್ಬಿಟ್ಟು ಮಗನ್ಕೆ ಕೊಟ್ಬಿಡಿ. ಪಾಪ ದೊಡ್ಡ ಮನಿ ಕಟ್ಟಿಸಾಕೆ ವಂಟವ್ನೆ. ನಾನ್ ತಾನೆ ಇನ್ನೇಟು ದಿನ ಇರ್ತೀನಿ. ನಿಮ್ಮಂತಾವ್ರ ಮನೇಕೆ ತಿಂದ್ಕಂಡು ಕಾಲ ಹಾಕ್ತೀನಿ. ಎಂಗೂ ಇರಾಕೆ ಈ ಮನಿ ಐತಿ’ ಎಂದು ನುಡಿದು ಮಗ ಮತ್ತು ಸೊಸೆಯ ಕಡೆಗೆ ನೋಡಿದಳು. ಅವರಿಬ್ಬರ ಮುಖಗಳು ಅರಳಿದ್ದವು. ಸಮಸ್ಯೆ ಇಷ್ಟೊಂದು ಸುಲಭವಾಗಿ ಪರಿಹಾರವಾಗುತ್ತದೆಂದು ಅವರು ಎಣಿಸಿರಲಿಲ್ಲ. ಮೊದಲೆ ಗಯ್ಯಾಳಿಯಾದ ನಂಜಮ್ಮ ಇಡೀ ಊರಿಗೆ ಕೇಳಿಸುವ ಹಾಗೆ ರಂಪ ಮಾಡಬಹುದೆಂಬ ಅಂದಾಜಿನಲ್ಲಿ ಅವರು ಬಂದಿದ್ದರು. ನಂಜಮ್ಮ ಮೊಮ್ಮಗಳ ಕಡೆಗೆ ನೋಡಿದಳು. ಅವಳು ತಾಯಿಯ ಸೀರೆಯ ಬಣ್ಣದ ಎಳೆಗಳನ್ನು ಮುಗ್ದವಾಗಿ ನೋಡುತ್ತಿದ್ದಳು. ವಿಷಯ ಇಷ್ಟೊಂದು ಸುಲಭವಾಗಿ ಇತ್ಯರ್ಥವಾಯಿತಲ್ಲ ಎಂಬ ಖುಷಿಯಲ್ಲಿ ಎಲ್ಲರೂ ಎದ್ದುನಿಂತರು. ಮಂಜೇಗೌಡ ಮತ್ತು ನಾಗರಾಜ ಶ್ರೀರಾಮರೆಡ್ಡಿಗೆ ಎರಡು ತಿಂಗಳೊಳಗಾಗಿ ದುಡ್ಡು ಮುಟ್ಟಿಸಲು ತಿಳಿಸಿ ಆಚೆ ಬಂದರು. ನಂಜಮ್ಮನ ಮಗ ಮತ್ತು ಸೊಸೆ ತಾವೂ ಹೊರಡುವುದಾಗಿ ಹೇಳಿ ಎದ್ದು ನಿಂತರು. ನಂಜಮ್ಮ ಉಳಿಯಲು ಬಲವಂತ ಮಾಡುವ ಗೋಜಿಗೆ ಹೋಗಲಿಲ್ಲ. ಎಲ್ಲವೂ ಪೂರ್ವ ನಿರ್ಧರಿತವೆ ಆಗಿರುವುದರಿಂದ ತನ್ನ ಮಾತನ್ನು ಅವರು ಕೇಳುವುದೂ ಇಲ್ಲವೆಂದು ಅವಳಿಗೆ ಗೊತ್ತಿತ್ತು. ಆದರೆ ಊಟ ಮಾಡಿಕೊಂಡು ಹೋಗಬಹುದಲ್ಲ ಎಂದು ಕೇಳಿದಳು. ಅದಕ್ಕೆ ಮಗ ‘ಕೈವಾರಕ್ಕೆ ವೋಕ್ತಿದೀವಿ, ಅಲ್ಲೆ ಮಠದಾಕ ತಿಂದ್ಕಂಡು ವೋಕ್ತೀವಿ’ ಎಂದು ನುಡಿದ. ಅವಳು ಒಳಗೆ ಹೋಗಿ ಸ್ವಲ್ಪ ಸಮಯದ ನಂತರ ಆಚೆ ಬಂದಳು. ಅವಳ ಕೈಯಲ್ಲಿ ಪೊಟ್ಟಣವಿತ್ತು. ‘ಮೊಕ ಇದಾದ್ರು ತಕೊಂಡೋಗಿ… ಸುಗುಂಟ್ಲು. ಮಗೀಗೆ ತಿನ್ಸಿ’ ಎಂದು ನುಡಿದು ಮಗನ ಕೈಗಿತ್ತಳು. ನಂತರ ಐನೂರರ ನೋಟೊಂದನ್ನು ಮೊಮ್ಮಗಳ ಕೈಗೆ ಕೊಡಲು ಹೋದಳು. ಅವಳು ತಾಯಿಯ ಸೀರೆಯನ್ನು ಅಪ್ಪಿಕೊಂಡಳು. ಮತ್ತೆ ಆ ನೋಟನ್ನು ಮಗನ ಕೈಗಿತ್ತು ‘ಟೌನಾಕೆ ರಾಮಯ್ಯನ ಅಂಗ್ಡೀಕೆ ಕಲ್ಡೆ ಬೀಜ ಕೊಡ್ಸು’ ಎಂದಳು. ಅವನು ಆಯ್ತು ಎನ್ನುವಂತೆ ನೋಟನ್ನು ತೆಗೆದುಕೊಂಡ. ನಂಜಮ್ಮ ಮತ್ತೆ ಮೊಮ್ಮಗಳ ಬಳಿಗೆ ನಡೆದು ‘ಮಗ್ಳೆ, ಒಂದೇ ಒಂದ್ ಮಾತಾಡೆ… ಒಂದ್ ಮಾತು. ಈ ಗಯ್ಯಾಳೀಕೆ ನಿನ್ ಬಾಯಿಂದ ಎಂತಾ ಮಾತ್ ಬರುತ್ತೋಂತ ಕೇಳೋ ಆಸೆ… ಮಾತಾಡ್ ಮಗ್ಳೆ’ ಎಂದು ಕೇಳತೊಡಗಿದಳು. ಅದು ಗಾಬರಿಯಲ್ಲಿ ತಾಯಿಯನ್ನು ಮತ್ತಷ್ಟು ಅಪ್ಪಿಕೊಂಡಿತು.

ಅಲ್ಲೆ ಇದ್ದ ನಾಗರಾಜ ‘ನಂಜಕ್ಕೊ ನಿನ್ನ ಮೊಮ್ಮಗಳ್ಕೆ ಮಾತು ಬರಾಕಿಲ್ಲ, ಕಿವೀನೂ ಕೇಳಾಕಿಲ್ಲ.’ ಎಂದು ನುಡಿದ. ಅವಳು ಮಗನ ಕಡೆಗೆ ನೋಡಿದಳು. ಅವನು ತಲೆ ತಗ್ಗಿಸಿ ನಿಂತಿದ್ದ. ಮತ್ತೆ ಸೊಸೆಯ ಕಡೆಗೆ ನೋಡಿದಳು. ಅವಳ ಕಣ್ಣಂಚಿಗೆ ನೀರು ಜಿನುಗುತ್ತಿತ್ತು. ನಂಜಮ್ಮನಿಗೆ ಮಾತು ಬಾರದಾಗಿ ಅಲ್ಲೆ ನಿಂತುಬಿಟ್ಟಳು. ಮಗ ಹೊರಡ್ತೀವಿ ಎಂದದ್ದು ಅವಳಿಗೆ ಕೇಳಿಸಲಿಲ್ಲ. ಅವರು ಕಾರು ಸ್ಟಾರ್ಟ್ ಮಾಡಿ ಹೊರಟುಹೋದ ಮೇಲೆ ಬಹಳ ಹೊತ್ತು ಗರ ಬಡಿದವಳಂತೆ ಅಲ್ಲೆ ನಿಂತೆ ಇದ್ದಳು. ಮತ್ತೆ ಅಲ್ಲಿಂದ ನಿಧಾನಕ್ಕೆ ಮನೆಯೊಳಗೆ ಹೋಗಿ ಕದ ಹಾಕಿಕೊಂಡಳು. ರಾತ್ರಿ ಸುಮಾರು ಒಂಬತ್ತು ಗಂಟೆಯ ಹಾಗೆ ಆಚೆ ಬಂದ ಅವಳು ಹೊಸ್ತಿಲ ಬಳಿ ಕುಳಿತು ಆಕಾಶದ ಕಡೆ ಕೈ ತೋರಿಸುತ್ತ ‘ಲೇ ಲೋಫರ್ ನನ್ಮಗ್ನೆ, ಯಾವಾಕ್ಲು ನಿಂಕೆ ನಾನೆ ಬೇಕ. ಆಡು ಅದೆಷ್ಟ್ ಆಟ ಆಡ್ತೀಯೊ ಆಡು. ನಿನ್ ಕಾಲು ಕತ್ತರಿಸ. ನಿನ್ ನಾಲ್ಗೇಲಿ ಹುಳ ಬೀಳ. ನಿನ್ ಬಾಯಿಗೆ ಮಣ್ಣಾಕ. ನಾನ್ ಸಾಲ್ದು ಅಂತ ಆ ಎಳಿ ಮಗೂ ಮೇಕೂ ಕಣ್ಣಾಕ್ದ… ನಿನ್ ಕಣ್ಕೆ ಕಾರದ್ ಪುಡಿ ಹಾಕ. ಏಮೇಮ್ ಆಟ್ಲು ಆಡ್ತಾವ್ರ ಕೊಡಕ….’ ಹೀಗೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಬಯ್ದು ಮತ್ತೆ ಸುಮ್ಮನೆ ಚಂದಿರನ ಬೆಳಕಿನಡಿಯಲ್ಲಿ ತಣ್ಣಗೆ ಗೋಡೆಗೊರಗಿ ಕುಳಿತಳು. ಬೆಳದಿಂಗಳ ಹೊತ್ತ ಗಾಳಿ ಅವಳಿಗೆ ಹಾಲೂಡಿಸುವ ತೆರದಿ ಅವಳೊಳಗೆ ಹೊಕ್ಕುತ್ತಿತ್ತು. ಚಂದ್ರನ ಮೇಲಿರುವ ಕಲೆಗಳು ತನ್ನ ಮೊಮ್ಮಗಳ ಆಕಾರವನ್ನೆ ಹೊತ್ತು ಒಳಗೆ ಮುದುಡಿ ಕುಳಿತಿರುವಂತೆ ಭಾಸವಾಗುತ್ತಿತ್ತು. ಅವಳು ಚಂದ್ರನನ್ನೆ ನೋಡುತ್ತ ಮೈಮರೆತು ಕುಳಿತುಬಿಟ್ಟಳು.

‘ಏನ್ ನಂಜಕ್ಕ ನಿನ್ನ ಎದಿ ಭಾರ ಕಮ್ಮಿ ಆಯ್ತೊ’ ಮಂಜೇಗೌಡನ ಮಾತು ಅವಳನ್ನು ಎಚ್ಚರಿಸಿತು.

‘ಎಲ್ಲಿ ಕಮ್ಮಿ ಆಗುತ್ತೆ ಮಂಜಪ್ಪ, ನನ್ ಎದಿಯಾಗ ಬೂಮೀನೆ ಐತಿ. ಕಮ್ಮಿ ತೂಕ ಅವ್ಳ ಮಾರಾಯ್ತಿ’ ಎಂದು ನುಡಿದು ಮಂಜೇಗೌಡನ ಕಡೆಗೆ ನೋಡಿದಳು.

‘ಒಂದೆಕರೆ ಜಮೀನಿಟ್ಕೊ ಅಂದ್ರು ಕೇಳ್ಳಿಲ್ಲ… ಮುಂದೇನ್ಮಾಡ್ತಿ ಜೀವುನಕ್ಕೆ’

‘ರಾಮಪ್ನ ಇಚ್ಛೆ, ನೋಡೂನ ಎಲ್ಕೆ ಕರ್ಕೊಂಡೊಯ್ತಾನೆ ಅಂತ’

‘ನನ್ನ ಡಾಬಾದಾಕೆ ಕೆಲ್ಸ ಮಾಡ್ತೀಯೊ… ಮೂರೊತ್ತು ಊಟ ಕೊಟ್ಟು ತಿಂಗಳ್ಕೆ ಐದು ಸಾವಿರ ಕೊಡ್ತೀನಿ’

‘ನೀನ್ ಹೆಣೈಕಳ್ನ ಬೇರೆ ತರ ಬಳಿಸ್ಕೋತಿ ಅಂತ ಉರೆಲ್ಲ ಗುಲ್ಲೈತಿ’

‘ಮುದ್ಕಿ ಆಗಿದ್ದಿ ನೀನು. ನಿಂಕೇನಾರ ಮಾಡಾಕಾಗುತ್ತ ನಾನು. ಮೊದ್ಲೆ ಗಯ್ಯಾಳಿ, ಸಿಗಿದಾಕ್ಬಿಡ್ತಿ’

‘ಹ್ಹ…ಹ್ಹ…ಹ್ಹ… ಅಸ್ಟು ಇದ್ರ ಸಾಕು. ಅಂದಾಗೆ ತಿಂಗಳ್ಕೆ ಐದು ಸಾವಿರಾದ್ರೆ ವರ್ಸಕ್ಕೆ ಎಂತಾಗುತ್ತೆ’

‘ಅರವತ್ತು ಸಾವಿರ ನಂಜಕ್ಕ’

‘ಹತ್ತು ವರ್ಸಕ್ಕೆ…’

‘ಆರು ಲಕ್ಷ’

‘ಅಬ್ಬಾ ಅಸ್ಟೊಂದೆ? ಅಸ್ಟರಾಕ ನನ್ ಮೊಮ್ಮಗ್ಳು ಮದುವೇಕೆ ಬಂದಿರ್ತಾಳಲ್ವೆ!’

‘ನಿನ್ ಬಗ್ಗೆ ಯಾವತ್ತು ಯೋಚ್ನೆ ಮಾಡಾಕಿಲ್ವ ನೀನು… ನೀ ಬದಲಾಗಾಕಿಲ್ಲ’

‘ಆ ಬಡ್ಡಿಕೊಡಕು ಇದಾನಲ್ಲ ನನ್ನ ನೋಡ್ಕೊಳ್ಳೋಕೆ… ನಂಕೇನ್ ಕಮ್ಮಿ. ಅಂದಾಗೆ ನಾಳಿಂದ ಡಾಬಾಕ್ಕೆ ಬತ್ತೀನಿ, ಬೇರೆ ಯಾರ್ಕು ಯೇಳ್ಬೇಡ’ ಎಂದು ನುಡಿದ ನಂಜಮ್ಮ ಸುಗುಂಡೆ ತರಲು ಒಳಗೆ ಎದ್ದು ಹೋದಳು.

*****

ಚೀಮನಹಳ್ಳಿ ರಮೇಶಬಾಬು
ಒಬ್ಬ ಕತೆಗಾರನಿಗೆ ತಾನೇ ಬರೆದ ಕತೆಗಳಲ್ಲಿ ಯಾವುದು ಇಷ್ಟ ಎಂದು ಕೇಳಿದರೆ ಉತ್ತರಿಸುವುದು ತುಸು ಕಷ್ಟವೆ. ಓದುಗರಿಗೆ ಮತ್ತು ವಿಮರ್ಶಕರಿಗೆ ಇಷ್ಟವಾದ ಕತೆ ಅವನಿಗೆ ತನ್ನಿಷ್ಟದ ಕತೆಯಾಗದೆ ಹೋಗಬಹುದು. ಇದಕ್ಕೆ ಕಾರಣಗಳನ್ನೂ ಇಂತಿಷ್ಟೆ ಎಂದು ನಿಖರವಾಗಿ ಹೇಳಲಾಗದು. ಕತೆ ನಡೆದ ಕಾಲ, ತನ್ನೊಳಗೆ ಮೊಳಕೆಯೊಡೆದ ಕಾಲ, ಬರೆಯಿಸಿಕೊಂಡ ಕಾಲ, ಕಲಾತ್ಮಕತೆ, ತಂತ್ರಗಾರಿಕೆ ಇವೆಲ್ಲಕ್ಕಿಂತ ಮುಖ್ಯವಾಗಿ ಕಥಾಭೂಮಿಕೆ ಎಷ್ಟರ ಮಟ್ಟಿಗೆ ತನ್ನ ಮನೋಭೂಮಿಕೆಯನ್ನು ಒಳಗೊಂಡಿದೆ ಎಂಬುದು ಮುಖ್ಯವಾಗುತ್ತದೆ ಎಂದು ಕಾಣುತ್ತದೆ.
‘ಗಯ್ಯಾಳಿ’ ಸಧ್ಯಕ್ಕೆ ನಾನು ಬರೆದ ಕತೆಗಳಲ್ಲಿ ನನಗೆ ಇಷ್ಟವಾದ ಕತೆ. ಇದರಲ್ಲಿ ಬರುವ ನಂಜಮ್ಮನ ತರದ ಪಾತ್ರಗಳು ಬಹುತೇಕ ನಮ್ಮ ಎಲ್ಲ ಹಳ್ಳಿಗಳಲ್ಲೂ ಸಿಗುತ್ತವೆ. ಯಾರನ್ನಾದರು ಬಯ್ಯುತ್ತಲೊ ಅಥವ ತನಗೆ ತಾನೆ ಬಯ್ದುಕೊಳ್ಳುತ್ತಲೊ ಮನಸಿನ ಭಾರವನ್ನು ಇಳಿಸಿಕೊಂಡು ಆ ಕ್ಷಣಕ್ಕೆ ನಿರಾಳವಾಗುವ ಬಗೆಯನ್ನು ನಮ್ಮ ಸಮಾಜ ಮೊದಲಿನಿಂದಲೂ ಕಂಡುಕೊಂಡಿದೆ. ಹಾಗೆ ಕಂಡುಕೊಂಡ ಮಾರ್ಗಗಳೂ ಹಲವು. ಮನೋವಿಜ್ಞಾನದ ಪರಿಭಾಷೆಯಲ್ಲಿ ಹೇಳಬೇಕೆಂದರೆ ಇದೊಂದು ರೀತಿಯ ಥೆರಾಪಿ; ಸ್ವ-ಚಿಕಿತ್ಸೆ. ಈ ಕತೆಯಲ್ಲಿ ಬರುವ ನಂಜಮ್ಮ, ಮಂಜೇಗೌಡ, ಸುಬ್ಬಕ್ಕ, ನಾರಾಯಣಪ್ಪ…. ಎಲ್ಲ ಪಾತ್ರಗಳೂ ನನ್ನೂರಿನಲ್ಲಿ ನನ್ನನ್ನು ಎಡತಾಕಿದ ಪಾತ್ರಗಳೆ. ನನ್ನೂರಿನ ಬೇರೆ ಬೇರೆ ಗಲ್ಲಿಗಳಲ್ಲಿ ಚದುರಿ ಹೋಗಿದ್ದ ಇವು ಈ ಕತೆಯಲ್ಲಿ ಒಂದಾಗಿ ಮತ್ತೊಂದು ಕತೆಯನ್ನು ಹೆಣೆದಿವೆ. ಹಾಗಾಗಿ ಈ ಕತೆಯನ್ನು ನಾನು ಬರೆದ ಕತೆ ಅನ್ನುವುದಕ್ಕಿಂತ ಪಾತ್ರಗಳೆ ಬರೆಯಿಸಿಕೊಂಡ ಕತೆ ಅಂತಲೇ ಹೇಳಬಯಸುತ್ತೇನೆ. ಜೋರು ಮಳೆ ಬರುವಾಗ ಇಲ್ಲಿ ನಂಜಮ್ಮ ಅನುಭವಿಸುವ ತಳಮಳ, ಮನೆಯ ಬಗ್ಗೆ ವ್ಯಕ್ತಪಡಿಸುವ ಕಾಳಜಿ ನನ್ನ ತಂದೆಯದೇ ಆದ ಅನುಭವ. ಸುತ್ತಮುತ್ತಲಿರುವವರಿಗೆ ಪ್ರೀತಿಯಿಂದ ತಿನ್ನಲು ಕೊಡುತ್ತಿದ್ದ ನನ್ನ ಅಜ್ಜಿಯೂ ನಂಜಮ್ಮನೊಳಗೆ ಸೇರಿಕೊಂಡಿದ್ದಾಳೆ. ಬಹುತೇಕ ಎಲ್ಲ ಪಾತ್ರಗಳು ನನ್ನ ಹಾಗು ನನ್ನ ಹತ್ತಿರದ ವ್ಯಕ್ತಿಗಳ ಅನುಭವಗಳನ್ನು ಹೊದ್ದು ಈ ಕತೆಯಲ್ಲಿ ಅನಾವರಣಗೊಂಡಿವೆ. ಹಾಗಾಗಿ ‘ಗಯ್ಯಾಳಿ’ ನನ್ನಿಷ್ಟದ ನನ್ನ ಕತೆ.