ಅರುಂಧತಿಗೆ ಎದೆಯೊಳಗೆ ಕೊಳ್ಳಿದೆವ್ವ ಓಡಾಡಿದಂತೆ ಭಾಸವಾಯಿತು.ಆಕೆ ಸುಮ್ಮನೆ ಒಮ್ಮೆ ತಿರುಗಿ ಅವರಿಬ್ಬರ ಕಡೆಗೆ ನೋಡಿದಳು.ನರ್ಸು ಹಲ್ಲು ಕಚ್ಚಿಕೊಂಡಳಾದರೂ, ಆಯಾ ಮಾತ್ರ ಅದನ್ನು ಸಮರ್ಥಿಸಿಕೊಳ್ಳುವವಳಂತೆ “ಅಯ್ಯಾ ಇರೋದನ್ನ ಏಳುದ್ನಪ್ಪ” ಇವ್ರು ರಾತ್ರಿ ಎಲ್ಲ ಸುಖ ಪಟ್ಕೊಂಡು ಈವಾಗ ನಮ್ ತವ ಕೂಗ್‍ಕೊಂಡ್ರೆ ಏನ್ ಬತ್ತದೆ” ಎಂದಳು.ಅರುಂಧತಿಗೆಒಮ್ಮೆ ಹಾವು ಮೆಟ್ಟಿದಂತಾಗಿ ಸುಮ್ಮನೆ ಅವಳನ್ನೇ ಒಮ್ಮೆ ನೋಡಿದಳು.ಬೋಳು ಹಣೆ, ಬರಿಗೈ, ನಿರ್ವಿಕಾರ ಭಾವ ಅವಳ ಕುರಿತಾಗಿ ಬೇರೆ ಏನನ್ನೋ ಧ್ವನಿಸಿತು. “ನಿಂಗೇನೋ ಗಂಡ ಇಲ್ಲ ಅಂದ್ರೆ ಎಲ್ಲರಿಗೂ ಹಂಗೆನಾ” ಎನ್ನುತ್ತ ನರ್ಸು ಆಯಾಳನ್ನು ಉಚಾಯಿಸಿದಳು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ದೀಪ್ತಿ ಭದ್ರಾವತಿ ಬರೆದ ಕತೆ ‘ಸ್ಫೋಟ’ ನಿಮ್ಮ ಈ ಭಾನುವಾರದ ಓದಿಗೆ

ಸ್ಫೋಟಗೊಳ್ಳುವುದೆಂದರೆ ಒಳಕುದಿಗಳ ಹೊರಹಾಕಿ ನಿರಾಳವಾಗುವುದು ಎನ್ನುವುದರ ಜೊತೆಗೆ ಬರಿದಾಗುವುದು, ಬಯಲಾಗುವುದು ಎನ್ನುವ ಅರ್ಥವೂ ಇರುವ ಕಾರಣಕ್ಕೆ, ಬಯಲಾಗಿ ಉರಿ ಹಿಕ್ಕೆಗಳ ಹೊರಹಾಕಿ, ಆಜುಬಾಜಿನ ಜೀವ ಸಂಕುಲಗಳ ಬೇರುಗಳನ್ನೇ ಕಳಚಿ ಎಸೆವ ಚೂರುಗಳ ಹೆಕ್ಕುತ್ತ ಬದುಕುವುದಕ್ಕಿಂತ ಒಳಗೊಳಗೇ ಕುದಿದು ಆವಿಯಾಗಿ ತನ್ನದೇ ಅಸ್ತಿತ್ವವನ್ನು ಅಳಿಸಿಕೊಳ್ಳುವುದು ಲೇಸೆಂಬ ಹುಚ್ಚು ಅಭಿಪ್ರಾಯದ ಗಾಳಕ್ಕೆ ತನ್ನನ್ನೇ ತಾನು ಸಿಕ್ಕಿಸಿಕೊಂಡ ಅರುಂಧತಿ ಯಾವೊಂದು ತಳಮಳವೂ, ತಹತಹಿಕೆಯೂ, ತುಡಿತವೂ ಇಲ್ಲದೆ ಆಸ್ಪತ್ರೆಯ ಅನಾಮಿಕ ರೂಮಿನ ಒಳಗೆ ಸ್ಟ್ರೆಚರ್‍ನಲ್ಲಿ ಮಲಗಿ ಸುಮ್ಮನೆ ಸೂರನ್ನೇ ನೋಡುತ್ತಿದ್ದಳು. ನಡು ಮಧ್ಯಾಹ್ನದಲ್ಲೂ ಆ ರೂಮು ಗೌ ಎನ್ನುವ ಕತ್ತಲೆ ಮುಸುಕನ್ನು ಹೊದ್ದು ಕೂತಿತ್ತು. ಈ ಕೋಣೆಯಲ್ಲಿ ಈ ಪರಿಯ ಕತ್ತಲು ಯಾತಕ್ಕೆ ಎನ್ನುವ ಪ್ರಶ್ನೆ ಆಕೆಯ ಮನಸ್ಸಿನಲ್ಲಿ ಮೂಡಿತಾದರೂ ಕತ್ತಲಲ್ಲೇ ನಡೆವ ಕ್ರಿಯೆಗಳ ಸಾಕ್ಷೀಕರಣವನ್ನು ಬೆಳಕಿನಲ್ಲಿ ಎದುರಿಸಲಾಗದ ಸಂಕಟಕ್ಕೆ ಇಲ್ಲಿನ ಪರಿಕರಗಳ ಆದಿಯಾಗಿ ಎಲ್ಲವೂ ಗಾಢ ನಿಶೆಯನ್ನು ಅಡರಿ ಕೂತಿರಬೇಕು ಎಂದು ಆಕೆಗೆ ಅನ್ನಿಸಿತು.ತತ್‍ಕ್ಷಣವೇ “ಯಾಕೆ ಹೀಗೆ” ಎಂಬ ತುಂಟ ಪ್ರಶ್ನೆಯೊಂದನ್ನು ಕೇಳಬೇಕೆಂಬ ಉತ್ಕಟ ಬಯಕೆ ಹುಟ್ಟಿ ಆ ಕೋಣೆಯ ಸುತ್ತಲೂ ನೋಡಿದಳು. ಅಲ್ಲಿ ಯಾರೊಬ್ಬರೂ ಕಾಣಲಿಲ್ಲ. ಅರೆ ಎಲ್ಲಿ ಹೋದರು ಇವರೆಲ್ಲ ತನ್ನನ್ನು ಹೀಗೆ ಈ ಮಲಗಿಸಿ ಎಂದು ಯೋಚಿಸಿದಳು. ತಾನಿರುವ ಈಗಿರುವ ಸ್ಥಿತಿಯ ಬಗ್ಗೆ ಆಕೆಗೇ ನಾಚಿಕೆಯಾದಂತೆ ಅನ್ನಿಸಿತು ಮತ್ತು ಆ ಅಮೂರ್ತ ಗಳಿಗೆಯಲ್ಲಿಯೇ ಈ ಹೆಣ್ಣು ದೇಹದೊಂದಿಗೆ ಇರಬಹುದಾದ ಕಟ್ಟಳೆಗಳೂ ನೆನಪಾಗಿ ಒಂದು ರೀತಿಯ ಅನೂಹ್ಯ ಭಾವವೂ ಆವರಿಸಿತು. “ಸೀರೆ ಅಷ್ಟೊಂದು ಕೆಳಗೆ ಉಟ್ಟಿದ್ದೀಯಾ? ಡೀಪ್ ನೆಕ್ ಬ್ಲೌಸ್ ಯಾಕೆ?” “ಸ್ವಲ್ಪ ಡೀಸೆಂಟಾಗಿ ಸೆರಗು ಹಾಕ್ಕೋಬಾರದ? ಎಂಬಂತಹ ನೂರೆಂಟು ಪ್ರಶ್ನೆಗಳು ಪರಿಧಿಯನ್ನು ಭೇದಿಸಿಕೊಂಡು ಬಂದು ತಾನೀಗ ಅಪರಿಚಿತ ಬಯಲಿನಲ್ಲಿ ಪೂರ್ತ ಬೆತ್ತಲಾಗಿ ಆಸ್ಪತ್ರೆಯೆಂಬ ಅನಾಮಿಕ ಗೋಡೆಗಳ ನಡುವೆ ಕಾಲ ಉಂಗುಷ್ಟದಿಂದ ಹಿಡಿದು ತಲೆ ನೆತ್ತಿಯವರೆಗೆ ತಾನೀಗ ಸಂಪೂರ್ಣ ಹುಟ್ಟುಡುಗೆಯಲ್ಲೇ ಇದ್ದೇನೆ ಅಂದುಕೊಂಡಳಾದರೂ ಮೇಲೆ ಹೊದಿಸಿರುವ ಹಸಿರು ಗೌನು ಅದು ಸುಳ್ಳು ಎಂದು ಹೇಳುವಂತೆ ತೋರುತ್ತಿತ್ತು. ಅದಾಗ್ಯೂ ಬಾಹ್ಯ ಪ್ರಪಂಚದ ರಾಯಭಾರಿಯಂತಿರುವ ಸಣ್ಣ ನೂಲು ಕೂಡ ಈ ದೇಹದ ಮೇಲಿಲ್ಲ ಎಂಬುದು ಅರಿವಾಗಿ ಆಕೆಗೆ ಒಮ್ಮೆಲೆ ಖುಷಿಯಾದಂತೆ ಅನ್ನಿಸಿತು.

ಮಾನ ಮರ್ಯಾದೆ ಶೀಲ ಹತ್ತಾರು ಹೇಳುತ್ತ ಹೆಂಗಸಿನ ದೇಹವನ್ನೇ ಸಂಸ್ಕೃತಿಯ ಗುತ್ತಿಗೆ ಕೇಂದ್ರವೂ ಮಾಡಿ ಹಾಕಿದವರ ಮೇಲೆಲ್ಲ ಸೇಡು ತೀರಿಸಿಕೊಳ್ಳುತ್ತಿರುವಂತೆ ಅನ್ನಿಸಿತು.ತಾನು ಹೀಗೆ ಒಮ್ಮೆ ಎದ್ದು ಹೊರಗೆ ಹೋಗಿ ಬಂದರೆ ಹೇಗಿರುತ್ತದೆ ಎಂದು ಕಲ್ಪಿಸಿ ನೋಡಿದಳು. ಬಹುಶಃ ಆಸ್ಪತ್ರೆಯವರೆಲ್ಲ ದಂಗು ಬಡಿದು ಹೋದಾರು, ತೀರಾ ತಲೆ ಕೆಟ್ಟಿದೆಯೆಂದು ತನ್ನನ್ನು ಕಟ್ಟಿ ಹಾಕಿದರೂ ಸಂಶಯವಿಲ್ಲ. ಇನ್ನು ಸೆರಗ ಮರೆಯಲ್ಲಿ ಕಾಣುವ ದೇಹ ಮೊಲೆಗಳ ನೋಡಲು ಹಾತೊರೆವ ಗಂಡಸರೆಲ್ಲ ತನ್ನನ್ನು ಹೇಗೆಲ್ಲ ನೋಡಿ ಬೆಚ್ಚಬಹುದು ಎಂದು ನೆನೆಸಿಕೊಂಡು ನಕ್ಕಳು.ಆ ನಗು ವ್ಯಂಗ್ಯದ ದ್ಯೋತಕವೂ ಆದಂತೆ ಭಾಸವಾಗಿ “ಉಪ್” ಎನ್ನುವ ಶಬ್ಧವೊಂದು ಹೊರಬಂದು ಅಲ್ಲಿದ್ದ ಮೌನವನ್ನು ಸಣ್ಣಗೆ ಕಲಕಿತು.ಇವಳೆಡೆಯಿಂದ ಹೊರಟ ಸದ್ದಿಗೆ ತುಸು ಕಲಕಿದವಳಂತೆ ಕಂಡು ಬಂದ ನರ್ಸು ಒಬ್ಬಳು ಕತ್ತಲಿನಿಂದ ಮೆಲ್ಲಗೆ ಇವಳೆಡೆಗೆ ಹರಿದು ಬಂದು “ಏನು” ಎಂದಳು.“ಏನೂ ಇಲ್ಲ” ಎನ್ನುವಂತೆ ತಲೆಯಾಡಿಸಿದ ಅರುಂಧತಿ ಇನ್ನು ಎಷ್ಟು ಹೊತ್ತು ಎನ್ನುವ ಪ್ರಶ್ನಾರ್ಥಕ ನೋಟ ಅವಳೆಡೆಗೆ ಬೀರಿದಳು. ಸಿಸೇರಿಯನ್ ನಡೆಯುತ್ತಿದೆ ಆ ನಂತರ ನಿಮ್ಮದೇ..ಎನ್ನುತ್ತ ನರ್ಸು ಮತ್ತೆ ತನ್ನ ಪಾಡಿಗೆ ತಾನು ಕತ್ತಲಲ್ಲಿ ಕರಗಿದಳು.ಆಕೆ ಹಾಗೆ ಹೋಗುತ್ತಿದ್ದ ಹಾಗೆ ಅರುಂಧತಿಗೆ ಅಲ್ಲಿನ ನೀರವತೆಗೆ ಒಮ್ಮೆ ಭಯವಾದಂತೆ ಅನ್ನಿಸತಾದರೂ ಮರುಕ್ಷಣವೇ ನಿರಾಳವೂ ಅನ್ನಿಸಿತು.

ತನ್ನ ಪಾಡಿಗೆ ತಾನು ತನ್ನ ಮನಸ್ಸನ್ನು ಹರಿಯಬಿಟ್ಟು ಈ ವಾಸ್ತವದ ಕನವರಿಕೆಗಳಿಂದ ತುಸು ದೂರ ಅಡ್ಡಾಡಿ ಬರಬೇಕು ಅಂದುಕೊಂಡಳಾದರೂ, ಹಾಕಿದ್ದ ಏಸಿಯ ಕೊರೆತ ಅವಳನ್ನು ಸ್ವಲ್ಪದರಲ್ಲಿಯೆ ತಡೆ ಹಿಡಿಯಿತು. ಕಾಲ ಹೆಬ್ಬೆರಳಿನಿಂದ ಹಿಡಿದು ಕೈ ಬೆರಳಿನವರೆಗೆ ಆ ನಡುಕ ಹರಡಿಕೊಂಡದ್ದು ತನ್ನ ಗಮನಕ್ಕೆ ಈವರೆಗೂ ಹೇಗೆ ಬರದೇ ಹೋಯಿತು ಎಂದು ಆಶ್ವರ್ಯಪಟ್ಟಳು.ಹೊದ್ದಿದ್ದ ಹಸಿರು ಗೌನನ್ನೂ ಗಟ್ಟಿಯಾಗಿ ದೇಹಕ್ಕೆ ಸುತ್ತಿಕೊಂಡಳಾದರೂ ಹೆಪ್ಪುಗಟ್ಟುವಂತಿದ್ದ ತಂಪು ಅವಳ ದೇಹವನ್ನು ಮುರುಟಿಸುತ್ತಿತ್ತು.ಹರಡಿದ್ದ ನಿಶ್ಯಬ್ಧತೆಯಲ್ಲಿ ತಾನು ತೀರಾ ಒಬ್ಬಂಟಿಯಾಗಿ ಹೋಗಿರುವಂತೆ ಆಕೆಗೆ ಭಾಸವಾಯಿತು. “ಮನುಷ್ಯ, ಬೆಳಕಿನಲ್ಲಿ ಏನೆಲ್ಲ ಸಂಬಂಧಗಳ ಜೊತೆಯಲ್ಲಿ ಕಲೆತಿದ್ದೇನೆಂದುಕೊಂಡರೂ ಉಳಿವ ಕತ್ತಲೆಯಲ್ಲಿ ಅವ ಎಂದಿಗೂ ಏಕಾಂಗಿಯೇ” ಎಂದೋ ಎಲ್ಲೋ ಓದಿದ ಮಾತು ನೆನಪಾಯಿತು. ಹೌದು ತಾನು ಎಂದಿಗೂ ಆ ಸ್ಥಿತಿಯಲ್ಲಿಯೇ ಉಳಿಯಬೇಕಾದವಳುಎಂದುಕೊಳ್ಳುತ್ತ ಸುಮ್ಮನೆ ತೋಳನ್ನು ತಲೆಗಿಟ್ಟು ಮಲಗಿದಳು. ಬೇಡ ಬೇಡವೆಂದರೂ ಬದುಕಿನ ಅಲೆಗಳು ಒಂದರ ಹಿಂದೊಂದರಂತೆ ಸಣ್ಣಗೆ ಬಂದು ದಡಕ್ಕೆ ಅಪ್ಪಳಿಸತೊಡಗಿ ಮನಸ್ಸು ಕೋಣೆಯಿಂದಾಚೆಗೆ ಚಿಗಿತು ಓಡಿತು..

“ಏನಾಗಿದೆ ಅಂತ ಮದುವೆ ಬೇಡ ಅಂತಿ, ಮನೆ ತುಂಬ ಆಳು,ಕಾಳು, ಬಂಗಲೆ ಬೇಕಾದಷ್ಟು ದುಡ್ಡಿದೆ.ಏನೋ ಸ್ವಲ್ಪ ವಯಸ್ಸಾಗಿದೆ.ಬಾಯಿ ಮುಚ್ಚಿಕೊಂಡು ಒಪ್ಕೋ.ಬಂದ ಗಂಡನ್ನೆಲ್ಲ ಬೇಡ ಅನ್ನೋಕೆ ನೀನೇನು ಮಹಾರಾಜನ ಮಗಳಲ್ಲ.” ತಲೆಯ ಮೇಲೆ ಮೊಟಕಿ ಅನ್ನ ಹಾಕಿದ ಅಮ್ಮ, “ದಯವಿಟ್ಟು ಬೇಡ ಅನ್ನಬೇಡ ಮಗಳೇ” ಎನ್ನುತ್ತ ಕೈ ಮುಗಿದ ಅಪ್ಪ, ಅಕ್ಕನ ಮದುವೆಯಾದರೆ ಸಾಕು ತಮ್ಮ ದಾರಿ ಸುಗಮವಾದೀತು ಎನ್ನುತ್ತ ನಿರೀಕ್ಷೆಯ ಹೊಸ್ತಿಲಿನಲ್ಲಿ ನಿಂತಿದ್ದ ತಂಗಿಯರನ್ನು ನಿರಾಸೆಗೊಳಿಸುವುದು ತನ್ನಿಂದ ಸಾಧ್ಯವೇ ಆಗಿರಲಿಲ್ಲ. ಡಿಗ್ರಿ ಮಾರ್ಕ್ಸ್ ಕಾರ್ಡುಗಳ ಟ್ರಂಕಿನಡಿಯಲ್ಲಿ ತುಂಬಿಡುತ್ತ ಒಂದು ಬಾರಿಗೂ ತನ್ನನ್ನು ಕಣ್ಣೆತ್ತಿಯೂ ನೋಡದವನ ಜೊತೆಯಲ್ಲಿ ಹೆಜ್ಜೆ ಬೆರೆಸುವಾಗ ಅರಿಯದ ಲಜ್ಜೆ ಆವರಿಸಿ ಹೋಗಿತ್ತು.ಢಾಳು ಢಾಳು ಬಣ್ಣಗಳಲ್ಲಿ ಮಿಂದೇಳುತ್ತ “ನಮ್ ಅರುಂಧತಿ ಅದೃಷ್ಟ ಅಂದ್ರೆ ಅದೃಷ್ಟನಾಪ್ಪ” ಎಂದೆಲ್ಲ ಕರುಬುವಂತೆ ಮಾಡಿ ಊರ ಮೆಚ್ಚಿಸಿದ ಮದುವೆ ಮನಸ ಬಾಗಿಲನ್ನು ತೆರೆಯಲೇ ಇಲ್ಲ.

ಕನಸು ತುಂಬಿದ ರಾತ್ರಿಯಲ್ಲಿ ಸುವಾಸನೆ ಊದುಬತ್ತಿಗಳ ನಡುವೆ ಕೂತಿದ್ದವಳ ಎದೆಗೊದ್ದ ಹಾಗೆ “ನೀನೆಂದರೆ ನನಗೇನು ಅನ್ನಿಸೋದೆ ಇಲ್ಲ”ಎನ್ನುತ್ತ ದಿಂಬುಗಳ ಬೇರ್ಪಡಿಸಿ ಎದ್ದು ಹೋಗಿದ್ದ ಗೌತಮ.ಹಾಗವನು ಹಾಸಿಗೆಗಳ ಬೇರ್ಪಡಿಸಿದ ಮೇಲೂ, ಹೊದಿಕೆಯೊಳಗೆ ತಾನೊಬ್ಬನೆ ಸೇರಿಕೊಂಡ ಮೇಲೆಯೂ ಅವ ತನ್ನ ಶರ್ಟಿನ ಗುಂಡಿಯನ್ನು ತಾನೇ ಹಾಕಿಕೊಳ್ಳುವಾಗಲೂ ತನ್ನಲ್ಲಿ ಪ್ರೀತಿಯ ಹುಚ್ಚಿತ್ತು.ಒಂದಲ್ಲ ಒಂದು ದಿನ ತಾನು ಅವನನ್ನು ಒಲಿಸಿಕೊಳ್ಳುವೆನೆಂಬ ಭ್ರಮೆಯಿತ್ತು.ಹೀಗಾಗಿಯೇ ತಾನು ಅವನನ್ನು ಇನ್ನಿಲ್ಲದಂತೆ ಆರಾಧಿಸುತ್ತಲೇ ಹೋಗಿದ್ದು ಅವನ ಸಲುವಾಗಿಯೇ ಸೀರೆಗಳನ್ನು ಕೊಂಡಿದ್ದು ಹೇರ್‍ಕ್ಲಿಪ್‍ಗಳನ್ನು ಬದಲಾಯಿಸಿದ್ದು.ಹೂ ಮುಡಿದದ್ದು, ಬಳೆತೊಟ್ಟಿದ್ದು.ಅಗಲಗಲ ಬಿಂದಿಗಳ ಬದಲಾಯಿಸಿ ಅಂಟಿಸಿಕೊಂಡಿದ್ದು.ಅವ ಬದಲಾಗಲೇ ಇಲ್ಲ. “ನೀನು ಹೀಗೆಲ್ಲ ನನ್ನ ಇಂಪ್ರೆಸ್ ಮಾಡುವ ಅಗತ್ಯವಿಲ್ಲ” ಎನ್ನುತ್ತ ಅಂತರವೆನ್ನುವುದು ಅತಿರೇಕಕ್ಕೆ ಹೋಗುವಷ್ಟು ದೂರ ಸರಿದಿದ್ದ.

ಗೌತಮನ ನೆನಪು ಬಂದಿದ್ದೇ ತಡ ಅರುಂಧತಿಯ ಮನಸ್ಸು ಕದಡಿ ರಾಡಿಯಾದಂತೆ ಅನ್ನಿಸಿ ಮುಂದಿನದನ್ನು ನೆನಪಿಸಿಕೊಳ್ಳುವ ಗೋಜಿಗೆ ಹೋಗದೆ ಸೀದಾ ಆಸ್ಪತ್ರೆಯ ಗೋಡೆಗಳ ನಡುವೆ ಬಂದು ಮತ್ತೆ ಬಂಧಿಯಾಯಿತು.ಮಡುಗಟ್ಟಿದ ಲಹರಿಗಳ ಹಿಡಿಯಲ್ಲಿಟ್ಟುಕೊಂಡು ಸುಮ್ಮನೆ ಮಲಗಿದಳು.ಎಷ್ಟೋ ಹೊತ್ತು ಕಳೆದ ಮೇಲೆ ಅವಳು ಮಲಗಿದ್ದ ಆ ರೂಮಿನಲ್ಲಿ ಸಣ್ಣ ಸಣ್ಣ ಸದ್ದುಗಳು ಆರಂಭವಾದವು.ಯಾವುದೋ ಹೆಂಗಸು ಪಕ್ಕದ ಗೋಡೆಯ ಆಚೆಯಲ್ಲಿ ಜೋರು ಜೋರು ಕಿರುಚುತ್ತಿರುವ ಸದ್ದು ಸಣ್ಣಗೆ ಕೇಳುತ್ತ ಬಂದು ಜೋರಾಯಿತು.ಅದನ್ನು ಆಲಿಸುತ್ತಿರುವಂತೆಯೇ ಅರುಂಧತಿಯ ಹತ್ತಿರಕ್ಕೂ ನರ್ಸ ಒಬ್ಬಳು ಬಂದು “ರೆಡಿಯಾ” ಎಂದಳು.ಆಕೆ ರೆಡಿಯಾ ಅಂದದ್ದು ಯಾಕೆ ಎಂಬುದು ಈಗಾಗಲೇ ಮೂರು ಬಾರಿ ಅದೇ ರೀತಿಯ ಸ್ಟೆಚರ್‍ನ ಮೇಲೆ ಮಲಗಿ ಎದ್ದು ಹೋದವಳಿಗೆ ಅರಿವಾಗಿತ್ತು.“ಹೌದು” ಎನ್ನುವಂತೆ ನಿರ್ವಿಕಾರವಾಗಿ ತಲೆಯಾಡಿಸಿ ತನ್ನ ಎರಡೂ ಮಂಡಿಯನ್ನು ಅರ್ಧ ಮಡಿಚಿ ತನ್ನೆರಡು ಕಾಲುಗಳ ನಡುವೆ ಅಂತರವನ್ನು ಹೆಚ್ಚಸಿಕೊಂಡಳು. “ಈಗಲೇ ಬೇಡ, ಹೆರಿಗೆ ರೂಮಿಗೆ ಶಿಫ್ಟ್ ಆದಮೇಲೆ, ಕಳೆದ ಬಾರಿ ಅಲ್ಲೇ ತಾನೇ ಇದ್ದಿದ್ದು ನೀವು” ಎನ್ನುತ್ತ ನರ್ಸು,ಸರಿದಿದ್ದ ಗೌನನ್ನು ಮತ್ತೆ ಮುಚ್ಚಿ ಗೌಪ್ಯತೆಯನ್ನು ಗೌಪ್ಯವಾಗಿಟ್ಟಳು.ಪಕ್ಕದಲ್ಲೇ ಇದ್ದ ಹೆರಿಗೆ ಕೋಣೆಯಲ್ಲಿ ಕೂಗುವುದು ಜೋರು ಜೋರು ಕೇಳಿಸುತ್ತಿತ್ತು.“ಬೇಡ ಅಂದರೂ ಕೇಳಲಿಲ್ಲ ಹಾಳಾದವ, ನನ್ನ ನೋವು ತಿನ್ನುವಂತೆ ಮಾಡಿದ”ಎನ್ನುತ್ತ ಆಕೆ ಕೂಗುವುದು ಕೇಳಿ ಅರುಂಧತಿ ಆ ಕ್ಷಣಕ್ಕೆ ಅವಾಕ್ಕಾದಳು. ಅಲ್ಲೇ ನಿಂತುಗಮನಿಸುತ್ತಿದ್ದ ಐವತ್ತರ ಹರೆಯದ ಆಯಾ ಒಬ್ಬಳು ತುಸು ವಾರೆ ಮುಖದಲ್ಲಿ ನಕ್ಕು ಇವಳ ಕಣ್ಣುಗಳನ್ನೇ ನೋಡಿ ಬಳಿಯಿದ್ದ ನರ್ಸಿನ ಹತ್ತಿರ “ರಾತ್ರಿ ಸುಮ್ಮನೆ ಮಲಗಿಕೊಂಡರೆ ಈ ಸಂಕಟ ಯಾಕಿರತ್ತೆ” ಹಾಸ್ಯ ಚಟಾಕಿ ಹಾರಿಸಿದಳು. ನರ್ಸು ಕೂಡ “ಅವ್ಳು ಮಲಗಿದರು ಅವ ಸುಮ್ಮನಿರಬೇಕಲ್ಲ” ಮಾತು ಸೇರಿಸಿ ಸುಮ್ಮನೆ ನಕ್ಕಳು.

ಅರುಂಧತಿಗೆ ಎದೆಯೊಳಗೆ ಕೊಳ್ಳಿದೆವ್ವ ಓಡಾಡಿದಂತೆ ಭಾಸವಾಯಿತು.ಆಕೆ ಸುಮ್ಮನೆ ಒಮ್ಮೆ ತಿರುಗಿ ಅವರಿಬ್ಬರ ಕಡೆಗೆ ನೋಡಿದಳು.ನರ್ಸು ಹಲ್ಲು ಕಚ್ಚಿಕೊಂಡಳಾದರೂ, ಆಯಾ ಮಾತ್ರ ಅದನ್ನು ಸಮರ್ಥಿಸಿಕೊಳ್ಳುವವಳಂತೆ “ಅಯ್ಯಾ ಇರೋದನ್ನ ಏಳುದ್ನಪ್ಪ” ಇವ್ರು ರಾತ್ರಿ ಎಲ್ಲ ಸುಖ ಪಟ್ಕೊಂಡು ಈವಾಗ ನಮ್ ತವ ಕೂಗ್‍ಕೊಂಡ್ರೆ ಏನ್ ಬತ್ತದೆ” ಎಂದಳು.ಅರುಂಧತಿಗೆಒಮ್ಮೆ ಹಾವು ಮೆಟ್ಟಿದಂತಾಗಿ ಸುಮ್ಮನೆ ಅವಳನ್ನೇ ಒಮ್ಮೆ ನೋಡಿದಳು.ಬೋಳು ಹಣೆ, ಬರಿಗೈ, ನಿರ್ವಿಕಾರ ಭಾವ ಅವಳ ಕುರಿತಾಗಿ ಬೇರೆ ಏನನ್ನೋ ಧ್ವನಿಸಿತು. “ನಿಂಗೇನೋ ಗಂಡ ಇಲ್ಲ ಅಂದ್ರೆ ಎಲ್ಲರಿಗೂ ಹಂಗೆನಾ” ಎನ್ನುತ್ತ ನರ್ಸು ಆಯಾಳನ್ನು ಉಚಾಯಿಸಿದಳು.“ನೀನೇಳದು ಸೈಯ್ಯೇ.ಎಲ್ಲದಕ್ಕೂ ಪಡ್ಕಂಡು ಬಂದಿರಬೇಕು” ಎನ್ನುತ್ತ ಅವರಿಬ್ಬರು ಮತ್ತೆನನ್ನೋ ಅಂದುಕೊಳ್ಳುತ್ತ ಅಲ್ಲಿಂದ ಹೊರಟುಹೋದರು.

ಅರೆ ಎಲ್ಲಿ ಹೋದರು ಇವರೆಲ್ಲ ತನ್ನನ್ನು ಹೀಗೆ ಈ ಮಲಗಿಸಿ ಎಂದು ಯೋಚಿಸಿದಳು. ತಾನಿರುವ ಈಗಿರುವ ಸ್ಥಿತಿಯ ಬಗ್ಗೆ ಆಕೆಗೇ ನಾಚಿಕೆಯಾದಂತೆ ಅನ್ನಿಸಿತು ಮತ್ತು ಆ ಅಮೂರ್ತ ಗಳಿಗೆಯಲ್ಲಿಯೇ ಈ ಹೆಣ್ಣು ದೇಹದೊಂದಿಗೆ ಇರಬಹುದಾದ ಕಟ್ಟಳೆಗಳೂ ನೆನಪಾಗಿ ಒಂದು ರೀತಿಯ ಅನೂಹ್ಯ ಭಾವವೂ ಆವರಿಸಿತು.

ಮೌನ ಮತ್ತೆ ಆವರಿಸಿತು.ಅರುಂಧತಿಗೆ ಮಲಗಿ ಮಲಗಿ ಬೇಸರವಾದಂತೆ ಅನ್ನಿಸಿ ಎದ್ದು ಕೂತಳು.ಹಾಕಿದ್ದ ಗೌನ್ ಸರಿದು ಹಿಂಭಾಗ ಪೂರ್ತಿ ಬೆತ್ತಲಾಯಿತು.ಆಕೆಗೆಏನೊಂದು ಅನ್ನಿಸಲಿಲ್ಲ. ಹಾಗೆಯೇ ಕೂತಳು.ನುಗ್ಗಿ ಬರುತ್ತಿದ್ದ ಏಸಿಯ ಗಾಳಿ ಹಿಂಬದಿಯಿಂದ ತೂರಿಬಂದು ದೇಹದ ಮೂಲೆ ಮೂಲೆಗೂ ಕಚಗುಳಿ ಇಡುತ್ತಿರುವಂತೆ ಭಾಸವಾಯಿತು. ಎಷ್ಟು ದಿನವಾಗಿ ಹೋದವು ತಾನು ಹೀಗೆ ಸಣ್ಣದೊಂದು ಗಾಳಿಯ ಸ್ಪರ್ಶವನ್ನೂ ಸವಿಯದೇ..ಕಾಲೇಜಿನ ದಿನಗಳಲ್ಲಿ ಇದೇ ಈ ಬೆತ್ತಲೆಗಳ ಬಗ್ಗೆ ಕುತೂಹಲವಿತ್ತು.ಗೊತ್ತೇ ಇರದವನ ಎದುರು ತೆರೆದುಕೊಳ್ಳುವ ಭಯವಿತ್ತು, ಕಾತರಿಕೆಯಿತ್ತು, ನಿರೀಕ್ಷೆಯೂ ಇತ್ತು.ಮದುವೆ ಎಂದಾದ ಕ್ಷಣಕ್ಕೆ ಅವೆಲ್ಲ ಎದುರು ಬಂದು ನಿಂತು ತನ್ನನ್ನು ಲಜ್ಜೆಯ ಹೊಳೆಯಲ್ಲಿ ಮೀಯಿಸಬಹುದೆಂದು ಕನಸಿತ್ತು.ಆದರೆ ಈಗ.ಬೆತ್ತಲೆ ಎನ್ನುವುದು ನಿರ್ವಿಕಾರ ಎನ್ನುವಷ್ಟ ಮಟ್ಟಿಗೆ ಮನಸ್ಸು ಮರಗಟ್ಟಿ ಹೋಗಿದೆ.ಬಹುಶ: ಹಾಗಾಗಿದ್ದೇ ಒಳ್ಳೆಯದಾಯಿತು.ಅದಿಲ್ಲದಿದ್ದರೆ?ತಾನು ಈಗ ಹೀಗೆ..ಅರುಂಧತಿ ಮತ್ತೇನನ್ನೋ ಯೋಚಿಸುವ ಹೊತ್ತಿಗೆ..

ಹೊರಗಿನಿಂದ ರೂಮನ್ನು ಪ್ರವೇಶಿಸಿದ ವೈದ್ಯೆ “ಸಾರಿ ಮಿಸ್ಸೆಸ್ ಗೌತಮ್” ಎನ್ನುತ್ತ ಒಳ ಬಂದರು. ಅವರು ತನ್ನ ಹೆಸರು ಕರೆಯದೆ ಗೌತಮನ ಹೆಸರು ಹೇಳಿದ್ದರಿಂದ ಅರುಂಧತಿಯ ಮೈಯ್ಯ ನರಗಳೆಲ್ಲ ಒಮ್ಮೆಲೆ ಬಿಗಿದುಕೊಂಡವು.“ತಾನು ಹೀಗೆಲ್ಲ ಅಪರಿಚಿತರ ಮುಂದೆ ಬಯಲಾಗಲಿಕ್ಕೆ ಮೂಲ ಕಾರಣ ಅವನೇ” ಎಂದು ಅನ್ನಿಸಿ ಕೈಯ್ಯ ಬೆರಳುಗಳು ಕೋಪದಿಂದ ಸೆಟೆದುಕೊಂಡವು.ಆದರೂ ಪಾಪ ಅವನೇನು ಮಾಡಿಯಾನು?“ತನ್ನ ಮೇಲೆ ಮೋಹ ಉಕ್ಕದಿರುವುದು ಅವನ ತಪ್ಪಲ್ಲ” ತನ್ನೊಳಗೇ ಸಮರ್ಥಿಸಿಕೊಂಡಳು.ವೈದ್ಯೆಗೆ ಇವಳ ಸೆಟೆದುಕೊಂಡ ಮೈಯ್ಯ ಹುರಿಗಳಾಗಲಿ, ಬೆರಳುಗಳಾಗಲಿ ಗಮನಕ್ಕೆ ಬರಲಿಲ್ಲ. ಬದಲಾಗಿ ಆಕೆ “ಎರಡು ಸಿಸೇರಿಯನ್ ಇತ್ತು, ಈಗಿನ ಹುಡುಗಿಯರಂತೂ ನಾರ್ಮಲ್ ಒಪ್ಪದೇ ಇಲ್ಲ ನೋಡಿ, ನೋವು ತಡೆದುಕೊಳ್ಳಕ್ಕಾಗಲ್ಲ ಅನ್ನೋದು ಅವರು ಕೊಡೋ ಕಾರಣ. ಆದ್ರೂ, ನಿಜದ ಕಾರಣ ನಾರ್ಮಲ್ ಆದ್ರೆ ಸೆಕ್ಸ್ ಸಾಟಿಸ್‍ಫ್ಯಾಕ್ಷನ್ ಸಿಗದೆ ಗಂಡ ಬೇರೆ ಕಡೆಗೆ ಹೋದಾನು ಎನ್ನುವ ಇನ್‍ಫಿರಿಯಾರಿಟಿ ಕಾಂಪ್ಲೆಕ್ಸ್ ನೀವೇನನ್ನುತ್ತೀರಿ” ಎಂದು ಇವಳನ್ನೇ ಪ್ರಶ್ನಿಸಿದಳು.

ಮದುವೆಯಾಗಿ ನಾಲ್ಕು ವರ್ಷವಾದರೂ ಹೊರಳಾಟ ಅನ್ನುವುದು ಹೇಗಿರತ್ತೆ ಅನ್ನುವುದೇ ಗೊತ್ತಿಲ್ಲದೆ ಮಗುವನ್ನು ಹಡೆಯಬೇಕು ಎನ್ನುವ ಒಂದೇ ಹಠಕ್ಕೆ ಬಿದ್ದು ಹೀಗೆ ಆಸ್ಪತ್ರೆಗೆ ಸೇರಿ “ಯಾಕೋ ಏನೋ ಇನ್ನೂ ನೀರು ನಿಂತಿಲ್ಲ” ಎನ್ನುತ್ತ ತನ್ನ ಗಂಡನ ತಪ್ಪು ಏನೂ ಇಲ್ಲ ಎಂದವಳಿಗೆ ಈ ಪ್ರಶ್ನೆ ಮತ್ತು ಉತ್ತರ ಎರಡೂ ವಿಚಿತ್ರ ಅನ್ನಿಸಿ ಏನೊಂದು ಮಾತನಾಡದೆ ಸುಮ್ಮನಾದಳು. ಲೈಂಗಿಕತೆ ಅನ್ನೋದು ಅಷ್ಟೊಂದು ಅನಿವಾರ್ಯವಾ ಅನ್ನಿಸಿತು.ಆದರೆ ಅಂತಹ ಅನಿವಾರ್ಯತೆ ಗೌತಮನನ್ನು ಏಕೆ ಕಾಡಲಿಲ್ಲ ಎನ್ನುವ ಪ್ರಶ್ನೆಯೂ ನುಗ್ಗಿ ಬಂದಿತು.ಏನು ಕಡಿಮೆ ಇತ್ತು ತನ್ನಲ್ಲಿ, ಒಂದು ದಿನಕ್ಕೂ ತನ್ನನ್ನು ಬಯಸದೇ ಹೋಗುವಷ್ಟು.ಅಂದರೆ ಇದು ದೇಹಕ್ಕೆ ಸಂಬಂಧಿಸದೆ ಮನಸ್ಸಿಗೆ ಸಂಬಂಧಿಸಿದ್ದಾ? ದೇಹಕ್ಕೆ ಸಂಬಂಧಿಸಿದ್ದರೆ ಆತ ಎಂದೋ ತನ್ನ ಬಳಿ ಬಂದು ಬಿಡುತ್ತಿದ್ದ; ಆದರೆ ಹಾಗಾಗಲಿಲ್ಲ. “ನೀನು ನನ್ನಿಂದ ಏನನ್ನೂ ನಿರೀಕ್ಷಿಸಬೇಡ” ಎಷ್ಟು ನಿರಾಳವಾಗಿ ನಿರುದ್ವಿಗ್ನವಾಗಿ ಹೇಳಿ ಅಂತೆಯೇ ಉಳಿದು ಹೋದ .ಅವನ ಮೌನದ ಕುದಿಯ ತಾಳಲಾರದೆ ತಾನು ಸಿಡಿದಿದ್ದೆ, “ಏನು ತಪ್ಪಿದೆ ನನ್ನದು?” ಜೀವವಿಲ್ಲದ ಗೋಡೆಗಳ ನಡುವೆ ನಿಂತು ಗೋಗರೆದಿದ್ದೆ. ಪ್ರಯೋಜನ ಎಂಬುದು ಶೂನ್ಯವೇ ಆಗಿತ್ತಲ್ಲದೆ ಬೇರೇನೂ ಅಲ್ಲ. “ಅಮ್ಮನ ಸಲುವಾಗಿ ಮದುವೆಯಾದೆ, ಕ್ಷಮಿಸಿ ಬಿಡು” ಎದ್ದು ಹೋಗಿದ್ದ.

ಆ ಕ್ಷಣ ಕುಸಿದು ಹೋಗಿದ್ದೆ.ಕೀಳರಿಮೆಯ ಹಂದರಕ್ಕೆ ಸಿಕ್ಕ ಮನಸ್ಸು ರೆಕ್ಕೆ ಹರಿದ ಹತಾಶ ಹಕ್ಕಿಯಂತೆ ಒದ್ದಾಡಿ ಹೋಗಿತ್ತು.ಪದೇ ಪದೇ ಅವನೆದುರು ಸಿಡಿದು ಹೊತ್ತಿ ಉರಿಯಬೇಕು ಅನ್ನಿಸುತ್ತಿತ್ತು. ಹಾಗೆ ಮಾಡಿದರೆ ಪ್ರಯೋಜನವಾದರೂ ಏನಿತ್ತು? ಯಾವ ಹೆಂಗಸನ್ನು ಕಂಡರೂ ಉಕ್ಕಲಾರದ ಉಲ್ಕೆಯ ಮುಂದೆ ಉರಿಯುವ ಅಗತ್ಯವಾದರೂ ಎಲ್ಲಿತ್ತು.ಅಲ್ಲದೆ ಹತ್ತಿ ಉರಿದು ಸಿಡಿದು ಸ್ಫೋಟಿಸಿ ಭೂಮಿಯಂತೆ ಬೇರೊಂದು ಗ್ರಹವೇ ಆಗಿ ತನ್ನ ಅಸ್ತಿತ್ವವನ್ನು ತಾನು ಸ್ಥಾಪಿಸಿಕೊಳ್ಳುವ ಛಲವಿದ್ದರೆ ಹಾಗೆ ಮಾಡುವುದರಲ್ಲಿಯೂ ಅರ್ಥವಿತ್ತು.ಆದರೆ, ಮರ್ಯಾದೆ, ಗೌರವ ಎಂತೆಲ್ಲ ಟೊಳ್ಳು ಇರುವೆ ಗೂಡುಗಳ ನಿರ್ಮಿಸಿಕೊಂಡು ಬದುಕ ಹೊರಟವಳಿಗೆ ಬೇರೆ ದಾರಿಯಾದರೂ ಎಲ್ಲಿತ್ತು? “ಹೊಂದಿಕೊಂಡು ಹೋಗು ಮಗಳೇ, ಹೆಂಗಸರಿಗೆ ಸುಖಬೇಕು ಅಂತ ಕೇಳೋ ಹಕ್ಕಿಲ್ಲ” ಎನ್ನುತ್ತ ತನ್ನ ಈ ಬರಡು ಜೀವನವನ್ನೇ ಸಮರ್ಥಿಸಿ, ತಂಗಿಯರಿದ್ದಾರೆ ಎನ್ನುವುದನ್ನು ಸೂಚ್ಯವಾಗಿ ನುಡಿದು ತಮ್ಮ ಸಂಸಾರವನ್ನು, ಜವಾಬ್ದಾರಿಯನ್ನು ಮಾತ್ರವೇ ಪರಿಗಣಿಸಿಕೊಂಡ ಅಪ್ಪ ಅಮ್ಮನೇ ತನ್ನ ಗಂಡನಿಂದ ಬಸ್ ಚಾರ್ಜು ಪಡೆದು ಧೃವಗಳಂತೆ ನಡೆದು ಹೋದ ಮೇಲೆ ಬೇರೆಯವರಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯವಿತ್ತು? “ಏನೋ ಒಂದು ತಿನ್ನೋದಕ್ಕಾದರೂ ಎರಡು ಹೊತ್ತು ಅನ್ನ ಸಿಕ್ಕಿದೆಯಲ್ಲ, ಮನೆ,ಕಾರು,ಬಂಗಲೆ, ಏನೆಲ್ಲ ಇದೆಯಲ್ಲೇ ನಿನ್ನಲ್ಲಿ.ಇದು ಒಂದು ಐಬು ತಾನೇ?ಹೊಂದಿಕೊಂಡು ಬಿಡು” ಎನ್ನುತ್ತ ತನ್ನ ರೇಷ್ಮೇ ಸೀರೆಯನ್ನೇ ಮುಟ್ಟಿ ನೋಡುವ ಅಮಾಯಕ ಗೆಳತಿಯರಿಂದ ಯಾವ ಸಹಾಯವನ್ನು ತಾನೇ ನಿರೀಕ್ಷಿಸಬಹುದಿತ್ತು?ಅಂತೆಯೇ ಸುಮ್ಮನಾಗಿದ್ದು.ಆಡಲಾಗದ ಕಾರಣ, ಆಡಿ ಉಳಿಯಲಾಗದ ಕಾರಣ “ನನ್ಮಗ ಮುಟ್ಟಿದರೆ ಸಾಕು ಮಕ್ಕಳಾಗುತ್ತವೆ” ಎನ್ನುವ ಅತ್ತೆಯ ನಂಬಿಕೆಯನ್ನು ಬುಡಮೇಲು ಮಾಡಲಾಗದ ಕಾರಣ ಎಲ್ಲ ಮೆಟ್ಟಿ ನಿಂತು ಗೌತಮನ ಮುಖವಾಡ ಕಳಚಿದ ಮೇಲೆ ಮುಂದೇನು?ಎನ್ನುವ ಪ್ರಶ್ನೆಗೆ ಉತ್ತರ ಸಿಗದ ಕಾರಣ, ಕಾರಣಗಳಷ್ಟೇ ಉಳಿದು ಹೋಗಿ ಬದುಕು ಕರಕಲಾಗಿದ್ದು, ಆಸೆಗಳು ವಿಷ ಕುಡಿದಿದ್ದು , ಕನಸುಗಳು ಮನೆ ಖಾಲಿ ಮಾಡಿದ್ದು.ಆದರೆ ಅಪವಾದಗಳು ಏನೂ ತಪ್ಪಿಲ್ಲದ ತನ್ನನ್ನೇ ಹುಡುಕಿ ಬರುವಾಗ ಮಾತ್ರ ಗೌತಮನ ಮುಖಾಮುಖಿಯಾಗಿತ್ತು.ತನ್ನ ಜೊತೆಯಲ್ಲಿ ಒಮ್ಮೆಯೂ ಹಾಸಿಗೆ ಸುಕ್ಕಾಗದ ರಾತ್ರಿಯನ್ನು ಕಳೆದವನಿಗೆ ಮೊದಲಿನಷ್ಟು ತನ್ನನ್ನು ಎದುರಿಸಿ ನಿಲ್ಲುವ ಚೈತನ್ಯವಿರಲಿಲ್ಲ. “ಕ್ಷಮಿಸಿ ಬಿಡು.ಬೇಕಿದ್ದರೆ ಬೇರೆ ಮದುವೆಯಾಗು.”ಸೋಲೊಪ್ಪಿದ್ದ ಶತ್ರುವಿನ ಹಾಗೆ ಕೈ ಮುಗಿದು ನಿಂತಿದ್ದ.ಕೆಂಡವಿದ್ದರೆ ಉರಿಯ ಜೊತೆಯಲ್ಲಿ ಸರಸವಾಡಬಹುದು.ತಣ್ಣೆಗೆ ಕೊರೆವ ಇದ್ದಿಲ ಜೊತೆಯಲ್ಲಿ ಗುದ್ದಾಡಿದರೆ ಮಸಿಯಲ್ಲದೆ ಮತ್ತೇನು ಸಿಗಲಿಕ್ಕೆ ಸಾಧ್ಯ?ಎಂದು ಅನ್ನಿಸಿ ಸುಮ್ಮನಾಗಿದ್ದು.ಆಸ್ಪತ್ರೆಗಳ ಅಲೆಯತೊಡಗಿದ್ದು.

“ಸ್ವಲ್ಪ ಕಾಲು ಮಡಿಚಿ’ ಧ್ವನಿ ಕೇಳಿ ಅರುಂಧತಿ ವಾಸ್ತವಕ್ಕೆ ಮರಳಿದಳು. ಹೆರಿಗೆ ರೂಮಿಗೆ ಶಿಫ್ಟ್ ಮಾಡುವುದಿಲ್ಲವಾ? ಎಂದು ಕೇಳಬೇಕು ಎಂದುಕೊಂಡಳಾದರೂ, ಎಲ್ಲಿಯಾದರೇನು ಬರಿದಾಗುವುದಕ್ಕೆ ಎಂದುಕೊಳ್ಳುತ್ತ ನಿರ್ಲಿಪ್ತವಾಗಿ ತನ್ನೆರಡು ಮಂಡಿಗಳನ್ನು ಮಡಿಚಿ ಮತ್ತೊಮ್ಮೆ ತನ್ನ ತೊಡೆಗಳ ನಡುವಿನ ಅಂತರವನ್ನು ಹೆಚ್ಚಿಸಿದಳು. “ಸಾಕು, ದಟ್ಸ್ ಫೈನ್” ಈಗ ಅಭ್ಯಾಸವಾಗಿ ಹೋಯ್ತಲ್ಲ ನಿಮಗೆ” ಎನ್ನುತ್ತ ಡಾಕ್ಟರ್ ಮೋಹಕವಾಗಿ ನಕ್ಕರು.ಎಲ್ಲವೂ ಕೂಡ ಮಾಮೂಲಿ ಅನ್ನಿಸಿದ ಹಾಗೆ ಅದರ ಕುರಿತಾಗಿನ ಮುಜುಗರ ಕುತೂಹಲ ಆಸಕ್ತಿ ಎಲ್ಲವೂ ಕಳೆದುಹೋಗುತ್ತವೆ ಎಂದು ಅರುಂಧತಿಗೆ ಹೇಳಬೇಕೆನ್ನಿಸಿತು. ಹೇಳಲಿಲ್ಲ. “ಹೌದು:” ತಲೆಯಾಡಿಸಿ ಸುಮ್ಮನಾದಳು. ಅವಳ ಕಾಲ ಹೆಬ್ಬೆರಳ ತನಕ ಮುಚ್ಚಿದ್ದ ಗೌನನ್ನು ನರ್ಸು ನಿಧಾನವಾಗಿ ಮಂಡಿಯ ತನಕ ಎತ್ತಿ ಸರಿ ಮಾಡಿದಳು. ಹೊಳೆ ಹೊಳೆವ ಹಾಲುಬಿಳುಪಿನತನ್ನ ತೊಡೆಗಳನ್ನು ನೋಡಿ ಸ್ವತ:ಅವಳಿಗೇ ಹೆಮ್ಮೆ ಅನ್ನಿಸಿತಾದರೂ ಯಾತಕ್ಕೂ ಉಪಯೋಗವಿಲ್ಲದ್ದು ಹೇಗಿದ್ದರೇನು ಅನ್ನಿಸಿ ತಾತ್ಸಾರವೂ ಮೂಡಿತು. ಅಲ್ಲದೇ ಬೆತ್ತಲಾಗಿದ್ದ ಸೊಂಟದ ಕೆಳಭಾಗಕ್ಕೂ ತನಗೂ ಈ ಕ್ಷಣಕ್ಕೆ ಸಂಬಂಧವೇ ಇಲ್ಲವೇನೋ ಅನ್ನಿಸಿ ಅದೀಗ ಏನಿದ್ದರೂ ಆ ಮನೆಯ ಅನ್ನದ ಋಣ ಸಂದಾಯಕ್ಕೆಂದು ಮೀಸಲಾದ ಮಗ್ಗಲಷ್ಟೇ. “ನಿನ್ನಿಂದಲೇ ಈ ಮನೆ ಬೆಳಗಬೇಕು” ಎಂದು ಅತ್ತೆ ಗೋಗರೆಯುವುದಕ್ಕೊಂದು ಸಾಂತ್ವನ ಹೇಳುವ ಕ್ಷೇತ್ರವಷ್ಟೇ ಅನ್ನಿಸಿ ನಿರ್ಲಿಪ್ತತೆಯ ತೆಳು ನಗುವೊಂದು ಜಾರಿ ಹೋಯಿತು.

“ಮೈ ಸ್ವಲ್ಪ ಸಡಿಲ ಬಿಡಿ” ವೈದ್ಯರ ಮಾತಿಗೆ ಆಕೆ ಏನೊಂದು ಪ್ರತಿಕ್ರಿಯಿಸದೆ ಸುಮ್ಮನೆ ಇದ್ದಳು.“ಇನ್ನೆಂಥ ಮುಜುಗರ ಇದು ನಾಲ್ಕನೇ ಸರ್ತಿ ಅಲ್ಲವಾ” ಎಂದರು “ಹೆಣ್ತನದ ಪೊರೆಗಳ ಕಳಚಿದ ಮೇಲೆಯೇ ನಾನು ಇಲ್ಲಿಗೆ ಹೀಗೆ ಬರಲು ಅಣಿಯಾದದ್ದು” ಎಂದು ಹೇಳಬೇಕು ಅಂದುಕೊಂಡಳಾದರೂ ಅಷ್ಟರಲ್ಲಿ ಆಕೆಯ ಕೈಯ್ಯಲ್ಲಿದ್ದ ದಪ್ಪ ನಳಿಕೆಯನ್ನು ನೋಡಿ ಉಸಿರು ಒಂದು ಕ್ಷಣ ಸ್ತಬ್ಧವಾಯಿತು.ತನ್ನ ಅಣು ಅಣುವಿನೊಳಗೆ ಸೇರಿಕೊಳ್ಳಲು ಹೊರಟ ಗೌತಮನ ಜೀವ ತಂತುಗಳು ನಿರ್ಜೀವ ಪ್ಲಾಸ್ಟಿಕ್ ಸಿರೆಂಜಿನ ಒಳಗಿರುವುದ ನೋಡಿ ಹೊಟ್ಟೆಯಲ್ಲಿ ಒಮ್ಮೆ ಸಂಕಟವಾದಂತೆ ಅನ್ನಿಸಿ ಅದು ದೇಹದ ನರನಾಡಿಯನ್ನೆಲ್ಲ ವ್ಯಾಪಿಸಿ ಚುಚ್ಚಿ ನೋಯಿಸಿದಂತೆ ಭಾಸವಾಯಿತು. ಹಾಸಿದ್ದ ಹೂ ಮಂಚದ ಮೇಲೆ ನೂರಾರು ಕವಿತೆಗಳ ಎಣಿಸುತ್ತ ಕೂತು ಸ್ಪರ್ಶದ ಕನಸ ಕಾಣುತ್ತಿದ್ದವಳಿಗೆ “ನೀನೆಂದರೆ ನನಗಿಷ್ಟವಿಲ್ಲ” ಎಂದ ಅವನ ಮಾತು ಬೇಡ ಬೇಡವೆಂದರೂ ನೆನಪಾಯಿತು.ತಾನೊಮ್ಮೆ ತನ್ನದೇ ಬೆಡ್ ರೂಮಿನಲ್ಲಿ ನೋಡಿದ ಅವನ ಮತ್ತು ಅವನ ಆಫೀಸಿನ ಗೆಳೆಯನೊಬ್ಬನ ನೋಡಬಾರದ ಸ್ಥಿತಿಯ ದೃಶ್ಯಗಳು ಕಣ್ಣೆದುರಿಗೆ ಬಂದವು.ಮೈಯ್ಯ ನರಗಳು ಯುದ್ಧದಲ್ಲಿ ಸೆರೆಯಾದ ಅಡಿಯಾಳುಗಳ ಹಾಗೆ ಬಿಳಚಿಕೊಂಡವು.ತಣ್ಣಗೆ ಕೊರೆಯುತ್ತಿದ್ದ ಏಸಿಯಲ್ಲಿಯೂ ಆಕೆಯ ಉಸಿರ ಹೊಯ್ದಾಟ ಅತಿಯಾಯಿತು “ಕೂಲ್ ಡೌನ್, ಏನೂ ನೋವಾಗಲ್ಲ ಅಂತ ನಿಮಗೆ ಗೊತ್ತಲ್ಲ” ಎನ್ನುವ ಮಾತು ಆಕೆ ಗಮನದ ವ್ಯಾಪ್ತಿಯನ್ನು ಮೀರಿ ಹೋಗಿ “ತಾನೊಮ್ಮೆ ಇಂತಹದೇ ನೋವಿನ ಬೇರೆ ಆಯಾಮವನ್ನು ಕುತೂಹಲದಿಂದ ಕಾಯುತ್ತಿದ್ದೆ ಎನ್ನುವ ನೆನಪಾಯಿತು. ಕೊರಳು ಬಿಗಿದು ಬಂದಿತು.“ನೀವು ಅನಾವಶ್ಯಕವಾಗಿ ಎಕ್ಸೈಟ್ ಆಗುತ್ತಿದ್ದೀರಿ ಹೀಗಾಗಿಯೇ ಮೂರು ಸಲ ಇನ್‍ಸೆಮೆನೇಷನ್ ಮಾಡಿದಾಗಲೂ ಫೇಲ್ ಆಗಿದೆ.ಪ್ಲೀಸ್ ಅರುಂಧತಿ. ಸ್ವಲ್ಪ ಕೋಆಪರೇಟ್ ಮಾಡಿ, ಮದುವೆಯಾಗದ ಹುಡುಗಿಯರಿಗಾದರೆ ಈ ಎಲ್ಲ ಹೊಸದಾಗಿರತ್ತೆ.ಮದುವೆಯಾಗಿ ನಾಲ್ಕು ವರ್ಷ ಆದ ಮೇಲೆ ಇಂಥದ್ದೆಲ್ಲ ಇರಲ್ಲ ಅಲ್ವಾ” ಡಾಕ್ಟರ್ ಸ್ವಲ್ಪ ಅವಮಾನಿಸುವ ಹಾಗೆ ನಕ್ಕು ನುಡಿದಳು.“ನನ್ನ ಸರ್ವೀಸಿನಲ್ಲಿ ನೀವು ಇನ್ನೂರ ಹದಿನೈದನೇ ಕೇಸು.ಈವರೆಗೆ ಯಾವುದೂ ಫೈಲ್ ಆದದ್ದೇ ಇಲ್ಲ” ಎನ್ನುತ್ತ ತನ್ನ ಕಾರ್ಯವಾಪ್ತಿಯ ವಿವರವನ್ನು ನೀಡುತ್ತ ಒಂದು ರೀತಿಯ ಗತ್ತಿನಲ್ಲಿ ಹೇಳುವಾಗ ಆದ ತಪ್ಪುಗಳೆಲ್ಲವೂ “ನಿನ್ನಿಂದಲೇ”ಆಗುತ್ತಿವೆ ಎಂದು ಆರೋಪಿಸಿದಂತೆ ಆಕೆಗೆ ತೋರತೊಡಗಿತು.ಈ ಎಲ್ಲ ರಗಳೆಗಳ ಅನುಭವಿಸಿ ತಾನೇಕೆ ಈ ರೀತಿಯಿಂದ ಮಗುವನ್ನು ಪಡೆಯಬೇಕು ಅಂತಹ ಅಗತ್ಯವಾದರೂ ಏನಿದೆ ತನಗೆ?ಈ ಜೀವದ ಅವಶ್ಯಕತೆಯಾದರೂ ಏನು? ಹೆಣ್ತನದ ಸಾಬೀತು ಮತ್ತು ಸಾರ್ಥಕತೆ ಪ್ರಚುರ ಪಡಿಸುವುದಕ್ಕಾ? ಯಾವುದಕ್ಕೆ?ಹೀಗೆ ಮುಟ್ಟಾದ ದಿನಗಳ ಎಲ್ಲರ ಎದುರಲ್ಲಿ ಬಿಡಿಸಿ ಹೇಳುತ್ತ ಸ್ಕಾನಿಂಗ್ ಎನ್ನುವ ಯಂತ್ರ ನಡುವೆ ಬಟ್ಟೆ ಕಳಚಿ, ಅಂಡಾಣು ಇದೆಯೋ ಇಲ್ಲವೋ?ಇದ್ದರೆ ಎಷ್ಟು ದಿನವಿರುತ್ತದೆ?ಈಗ ವೀರ್ಯಾಣು ಸೇರಿಸಿದರೆ ಮಗು ಆಗುತ್ತದೋ ಇಲ್ಲವೋ? ಹೀಗೆ ನೂರೆಂಟು ಪ್ರಶ್ನೆಗಳ ಹಿಂದೆ ತಿರುಗುತ್ತಿರುವುದಾದರೂ ಯಾವುದಕ್ಕೆ?ಗಂಡು ಹೆಣ್ಣು ಪಟ್ಟ ಸುಖದ ಸಾಕ್ಷಿ ಎಂಬಂತೆ ರೂಪು ತಳೆದು ಬರಬೇಕಾದ ಜೀವ ಹೀಗೆ ಸಿರೆಂಜಿನ ನಡುವಿನಿಂದ ಇಂಜೆಕ್ಷಿನ್ನಿನ ಹಾಗೆ ನೋವು ನೀಡುತ್ತ ಒಳ ಸುಳಿದು ಹುಟ್ಟನ್ನು ಬರಿಸುವ ಈ ಕ್ರಿಯೆ ಯಾರ ಸಲುವಾಗಿ?ಜಗತ್ತಿನ ಸಲುವಾಗಿಯಾ? ನನ್ನ ಸಲುವಾಗಿಯಾ?ನಾನು ಸುಖದ ತುತ್ತ ತುದಿಯಲ್ಲಿ ನಿಂತಿದ್ದೇನೆ ಎಂದು ಜಗಜ್ಜಾಹೀರು ಮಾಡಲಿಕ್ಕಾ?ಅಥವಾ ಒಂಟಿತನವನ್ನು ಕಳಚಿ ನಿಲ್ಲುವುದಕ್ಕಾ?ತಾನು ಬಂಜೆಯಲ್ಲ ಎನ್ನುವುದು ತೋರ್ಪಡಿಸುವುದಕ್ಕ? ನಾಲ್ಕು ಗೋಡೆಗಳ ನಡುವಿರುವ ಸುಳ್ಳಿನ ಹಂದಕ್ಕೊಂದು ಸತ್ಯದ ಮುಖವಾಡ ಹಾಕಲಿಕ್ಕಾ?ಈಗ ತಾನು ಹೀಗೆ ಬಂದು ಮಲಗಿರುವುದು ಸ್ವಾರ್ಥದ ಸಂಕೇತವಲ್ಲದೆ ಮತ್ತೇನು?ಹೀಗೆ ಸಾವಿರ ಸಾವಿರ ಪ್ರಶ್ನೆಗಳುಪ್ರತಿಬಾರಿಯಂತೆ ಈ ಬಾರಿಯೂ ಅರುಂಧತಿಯ ಎದುರು ಬಂದು ನಿಂತು ದಾಳಿ ಮಾಡತೊಡಗಿದವು. ಮನಸ್ಸು ಮುದ್ದೆಯಾಯಿತು ಆ ಭಾಗದ ಎಲ್ಲ ನರಗಳನ್ನು ತನ್ನ ಕೈವಶ ಮಾಡಿಕೊಂಡು ಸೆಟೆದುಕೊಂಡಳು. “ನೀವು ಹೀಗೆ ಮಾಡಿದರೆ ಕಷ್ಟ ಆಗತ್ತೆ” ವೈದ್ಯೆ ಹತಾಶೆಯ ದನಿಯಲ್ಲಿ ಹೇಳಿ ಸುಮ್ಮನೆ ನಿಂತಳು.ಅವಳಿಗೆ ತನ್ನನ್ನು ಅಂದರೆ ಗೌತಮ್ ಗ್ರೂಪ್ ಆಫ್ ಕಂಪೆನೀಸ್‍ನಛೇರ್‍ಮನ್ ಹೆಂಡತಿಯನ್ನು ಗದರಿಸುವ ಶಕ್ತಿ ಇದ್ದಂತೆ ತೋರಲಿಲ. ಅವಳ ಹತಾಶ ಭಾವ ನೋಡಿದ ಅರುಂಧತಿ “ಸಾರಿ” ಎನ್ನುತ್ತ ಮೈ ನರಗಳ ಸಡಿಲಿಸಿ ಮಲಗಿದಳು. “ಹೌದು ತಾನು ಹೀಗೆ ಇಲ್ಲಿ ಮಲಗಿರುವುದು ಸ್ವಾರ್ಥದಿಂದಲೇ ಅಲ್ಲದೆ ಮತ್ತೇನು ಅಲ್ಲ ಕುಹಕ ಕಣ್ಣುಗಳ ಎದುರಿಸಲಾಗದ ಸ್ವಾರ್ಥ, ಕಟ್ಟಿಕೊಂಡ ಗೌರವದ ಬದುಕು ಕುಸಿದು ಹಾಳಾಗಬಾರದೆಂಬ ಸ್ವಾರ್ಥ.ಅರುಂಧತಿಯ ಅದೃಷ್ಟ ನೋಡೆ ತಿಪ್ಪೆಯಲ್ಲಿದ್ದವಳು ಅರಮನೆಯಲ್ಲಿ ಮೆರೆಯುತ್ತಿದ್ದಾಳೆ ಎನ್ನುವ ಸಂಬಂಧಿಕರ ಹಗೆಗಳನ್ನು ಹಾಗೆ ಉಳಿಸುವ ಸ್ವಾರ್ಥ.ಚಂದದ ಮಗುವಿನ ತಾಯಾಗಬೇಕು ಎನ್ನುವ ಸ್ವಾರ್ಥ.ಹೌದು ಅದೇ ಕಾರಣವಲ್ಲದೆ ಮತ್ತೇನು ಅಲ್ಲ. ತನ್ನದೇ ಪ್ರಶ್ನೆಗೆ ಸಿದ್ಧ ಉತ್ತರವೊಂದನ್ನು ಹುಡುಕಿಕೊಂಡ ಅರುಂಧತಿ ಸಣ್ಣಗೆ ತುಟಿ ಬಿರಿದು ನಕ್ಕು “ರೆಡಿ ಡಾಕ್ಟರ್.ಸ್ವಲ್ಪ ಟೆನ್‍ಷನ್ ಆಯಿತು ಅಷ್ಟೇ” ಎಂದಳು. “ಇಟ್ಸ್ ಓಕೆ, ಐ ಕ್ಯಾನ್ ಅಂಡ್‍ಸ್ಟಾಂಡ್ ಯುವರ್ ಮೆಂಟಲ್ ಸ್ಟೇಟಸ್” ಎನ್ನುತ್ತ “ಈ ಬಾರಿ ನಿಮಗೋಸ್ಕರ ಸ್ಪೆಷಲ್ ಜೆಲ್ ತರಿಸಿದ್ದೀನಿ.ಅದು ಸ್ಪರ್ಮ್ ಆಕ್ಟಿವ್ ಆಗಿ ಮೂವ್ ಮಾಡೋದಕ್ಕೆ ಹೆಲ್ಪ್ ಆಗತ್ತೆ.ಗೌತಮ್ ಹೇಳಿದ್ರು ಎಷ್ಟು ಖರ್ಚಾದರೂ ಪರವಾಗಿಲ್ಲ ಅಂತ” ಎನ್ನುತ್ತ ಹುಬ್ಬು ಕುಣಿಸಿದರು, “ರಿಯಲಿ ಲಕ್ಕಿ ವುಮನ್ ಯು ಆರ್.ಎಷ್ಟು ಒಳ್ಳೆಯ ಹಸ್ಬೆಂಡ್, ನೀವು ಹಾಸಿಗೆಯಲ್ಲಿ ಸ್ವಲ್ಪನೂ ಕೋ ಆಪರೇಟ್ ಮಾಡದೇ ಇದ್ರೂ ಅವ್ರು ನಿಮ್ಮನ್ನ ಎಷ್ಟು ಚನ್ನಾಗಿ ನೋಡ್ಕೋತಾರೆ. ಇನ್ಯಾರಾದರೂ ಆಗಿದ್ರೆ ಇದೇ ಕಾರಣ ಇಟ್ಟುಕೊಂಡು ಬೇರೆ ಮದುವೆ ಮಾಡ್ಕೋತಿದ್ರು” ಎನ್ನುತ್ತ ತಲೆ ಸವರಿದರು. ಆ “ಕೋಆಪರೇಟ್” ಅನ್ನುವ ಪದ ಅರುಂಧತಿಯ ಕಿವಿಯನ್ನು ನೂರಾರು ಅಲುಗಿನ ಚೂರುಗಳಾಗಿ ತಲುಪಿ ಇನ್ನಿಲ್ಲದಂತೆ ಹಿಂಡಲು ಶುರು ಮಾಡಿತು.ತಾನು ಎಷ್ಟು ಹೇಳಿದರೂ ಕೇಳದೆ “ತಪ್ಪಾಯಿತು ಕ್ಷಮಿಸು, ಆರ್ಟಿಫಿಷಿಯಲ್ ಇನ್‍ಸೆಮೆನೇಷನ್ ಮಾಡಿಸಿಕೋ ಪ್ಲೀಸ್” ಎನ್ನುತ್ತ ಅವ ತನ್ನನ್ನು ಬಲವಂತ ಪಡಿಸಿದ್ದು ತನ್ನ ಪುರುಷತ್ವದ ಸಾಬೀತಿಗಾ? ಅಂದರೆ ಅವನಿಗೆ ಬೇಕಾದ್ದಾದರೂ ಏನು?ಎಂಬ ಪ್ರಶ್ನೆ ಏಳುತ್ತಿದ್ದಂತೆಯೇ ಕೋಪದಿಂದ ಅವಳ ಮುಖವೊಮ್ಮೆ ರಣ ರಣ ಬಿಸಿಲಿನಂತೆ ಪ್ರಜ್ವಲಿಸಿ ಭುವಿಯ ನೀರನ್ನೆಲ್ಲ ಇಂಗಿಸಿತು.ಸಣ್ಣ ತಿರಸ್ಕಾರವೊಂದು ಮೆಲ್ಲಗೆ ಎದ್ದಿತಾದರೂ ತೋರಗೊಡಲಿಲ್ಲ. ಸಿರೆಂಜು ಇನ್ನೇನು ಹೊರಗಿನ ಎಲ್ಲ ಜಂಜಡಗಳಿಂದ ಮುಕ್ತವಾಗಿ ಹೊಸ ಉಸಿರನ್ನು ತಳೆದು ಬರುವ ಸಲುವಾಗಿ ಅರುಂಧತಿಯ ಒಳಗನ್ನು ಪ್ರವೇಶಿಸಲು ಸಿದ್ದವಾಗುತ್ತಿದ್ದಂತೆಯೇ ಆಕೆ ಮಲಗಿದ್ದಲ್ಲಿಂದ ದಢಕ್ಕನೆ ಎದ್ದು ಡಾಕ್ಟರರ ಕೈಯ್ಯನ್ನು ಬಲವಾಗಿ ಹಿಡಿದುಕೊಂಡಳು.“ಬೀ ಕೂಲ್” ಡಾಕ್ಟರ್ ಹೇಳಿದ್ದನ್ನು ಕೇಳಿಸಿಕೊಳ್ಳದೆ “ಇದು ಗೌತಮ್ನ ಸೆಮೆನ್ ತಾನೇ” ಎಂದಳು.“ಆಫ್ ಕೋರ್ಸ್, ಯಾಕಿಂತ ಅನುಮಾನ” ಎನ್ನುತ್ತ ಸ್ಪರ್ಮ್ ಕಲೆಕ್ಟರ್ ಕಪ್‍ನ ಮೇಲಿದ್ದ ನಂಬರ್ ತೋರಿಸಿದಳು.ಮತ್ತು ತಮ್ಮ ಆಸ್ಪತ್ರೆಯಲ್ಲಿ ಇಂತಹ ಅನುಮಾನಗಳನ್ನು ಇಟ್ಟುಕೊಳ್ಳುವ ಉದ್ದೇಶವೇ ಇಲ್ಲ ಎನ್ನುವಂತೆ ಅದಕ್ಕೆ ಸಂಬಂಧಿಸಿದ ರಿಜಿಸ್ಟರ್ ಅನ್ನು ತರುವಂತೆ ನರ್ಸನ್ನು ಅಟ್ಟಿ ಅರುಂಧತಿಯನ್ನು ಒಂದು ರೀತಿಯ ಉರಿಗಣ್ಣಿನಲ್ಲಿ ಸಣ್ಣಗೆ ನೋಡತೊಡಗಿದಳು. ಅವಳ ಮುಖಭಾವ ಮತ್ತು ಅದರೊಳಗೆ ಇದ್ದ ಅಸಹನೆಯನ್ನು ಪತ್ತೆ ಹಚ್ಚಿಕೊಂಡ ಅರುಂಧತಿ “ಸಾರಿ ನಂಗೆ ನಿಮ್ಮ ಬಗ್ಗೆ ಏನೂ ಅನುಮಾನವಿಲ್ಲ” ಎನ್ನುತ್ತ ಆಚೀಚೆ ಯಾರಾದರೂ ಇದ್ದಾರೆಯೇ ಎಂದು ನೋಡಿ, ಯಾರೂ ಇಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು “ಪ್ಲೀಸ್ ಆ ಸೆಮೆನ್ ಬದಲು ನಂಗೆ ಬೇರೆ ಯಾರದ್ದಾದರೂ ಇನ್‍ಸರ್ಟ್ ಮಾಡಕ್ಕಾಗತ್ತಾ” ಎನ್ನುತ್ತ ಆಕೆಯ ಕೈ ಹಿಡಿದುಕೊಂಡಳು.ಗಾಬರಿ ಬಿದ್ದ ಡಾಕ್ಟರ್ ಸಾವರಿಸಿಕೊಳ್ಳುವ ಮೊದಲೇ ಪಕ್ಕದ ರೂಮಿನಿಂದ ಮಗು ಅಳುವ ಸದ್ದು ಮೆಲ್ಲಗೆ ತೇಲಿ ಬರತೊಡಗಿತು.

ದೀಪ್ತಿ ಭದ್ರಾವತಿ..
ಈ ಕತೆ ನಿಮಗೆ ಯಾಕಿಷ್ಟ ಎಂದು ಯಾರಾದರೂ ಕೇಳಿದರೆ ಈ ಕ್ಷಣಕ್ಕೂ ತಡವರಿಸುವಂತಾಗುತ್ತದೆ.ಕಾರಣ ಇಷ್ಟ ಎನ್ನುವುದು ಆತ್ಮತೃಪ್ತಿಯೋ ಅಥವಾ ಪ್ರೀತಿಯೋ ಎನ್ನುವ ಸಹಜ ಗೊಂದಲ ನನ್ನೆದರು ನಿಲ್ಲುತ್ತದೆ.ಇಷ್ಟಾಗಿಯೂ ಕೆಲವೊಂದು ನಮ್ಮದೇ ಬರಹಗಳು ನಮಗರಿವಿಲ್ಲದಂತೆ ನಮ್ಮನ್ನು ಆಳವಾಗಿ ಹಿಡಿದಿಟ್ಟು ಕೆಲವು ಸಮಯದ ಮಟ್ಟಿಗಾದರೂ ನಿರಾಳತೆಯನ್ನು ಒದಗಿಸುತ್ತವೆ. ಅಂತಹ ಒಂದು ಕತೆಗಳಲ್ಲಿ ಈ “ಸ್ಫೋಟ” ಕತೆಯೂ ಒಂದು. ಅದೊಂದು ದಿನ ಟಿವಿ ನೋಡುತ್ತಿದ್ದಾಗ ತೀರಾ ಆಕಸ್ಮಿಕವಾಗಿ ಸಿಕ್ಕ ಎಳೆಯೊಂದನ್ನು ಕೇವಲ ಒಂದೇ ಒಂದು ಪುಟದ ಪುಟ್ಟ ಕತೆಯಾಗಿಸಬೇಕೆಂಬ ಹಂಬಲದಲ್ಲಿ ಬರೆಯಲು ತೊಡಗಿದ ಮೇಲೆ ಅದು ನನ್ನರಿವು ಮೀರಿದಂತೆ ಸುಮಾರು ಹತ್ತು ಹನ್ನೆರಡು ಪುಟಗಳವರೆಗೆ ಸರಾಗವಾಗಿ ಸಾಗಿ ನನ್ನ ಯಾವ ಮಧ್ಯಸ್ಥಿಕೆಯಿಲ್ಲದೆ ತಾನೇ ತಾನಾಗಿ ತನ್ನ ಹರಿವನ್ನು ಕಂಡುಕೊಂಡ ಕತೆ ಇದು. ಬರೆದು ಮುಗಿಸಿದ ತಕ್ಷಣಕ್ಕೆ ಇಂತಹದ್ದೊಂದು ಕತೆ ನನ್ನೊಳಗೆ ಇತ್ತಾ?ಎಂದು ಆಶ್ಚರ್ಯಪಟ್ಟಿದ್ದೇನೆ. ಆಸ್ಪತ್ರೆಯ ಆವರಣದಲ್ಲಿ ನಡೆಯುವ ಈ ಕತೆ ನನ್ನ ಹೊಟ್ಟೆಪಾಡಿಗೆ ಆರಿಸಿಕೊಂಡ ವೃತ್ತಿಯ ಆವರಣವೂ ಆಗಿರುವ ಕಾರಣಕ್ಕೆ ಈ ಕತೆ ಇಷ್ಟವಾಗುತ್ತದೆ ಎನ್ನಬಹುದಾದರೂ ನಿಜದ ಕಾರಣ ಈ ಕತೆ ನನ್ನೊಳಗೆ ನಾನೇ ಸ್ಫೋಟಿಸಿಕೊಂಡಂತೆ ಬರೆಯಲು ಅನುವು ಮಾಡಿಕೊಟ್ಟ ಕತೆ. ಯಾವುದೇ ಲೇಖಕಿ ಬರೆಯುವ ಬರಹಗಳಲ್ಲಿ ಆಕೆಯನ್ನೇ ಹುಡುಕಿಬಿಡುವ ಆ ಮೂಲಕ ಅವಳನ್ನು ಅರಿಯಲು ಯತ್ನಿಸಲು ಕುತೂಹಲದ ಕಣ್ಣುಗಳು ಈ ಕಾಲಘಟ್ಟದಲ್ಲಿಯೂ ನಮ್ಮಲ್ಲಿದೆ. ಅದೂ ಅಲ್ಲದೆ ಸಮಾಜ ಎನ್ನುವ ವಾಸ್ತವದ ನಡುವೆ ಹೆಣ್ಣು ಬದುಕುವಾಗ ಕಟ್ಟಿಕೊಂಡ ಸಂಬಂಧಗಳು ರೆಪ್ಪೆಗಳ ನೆರಳಲ್ಲಿಯೇ ಇರುವಾಗ ಇಂತಹದ್ದೊಂದು ಅಂದರೆ ಸ್ವಲ್ಪ ಬಿಡುಬೀಸು ಎನ್ನುವಂತಹ ಕತೆ ಬರೆದು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ.ಇನ್ನು ಸುತ್ತ ಮುತ್ತ ಓದುವ ವರ್ಗವಿದ್ದರಂತೂ ಪ್ರಶ್ನೆಗಳ ಸಾಗರವೇ ಎದುರು ನಿಂತು ಬಿಡುತ್ತವೆ. ಅಲ್ಲದೇ ನಮ್ಮನ್ನು ನೋಡುವ ದೃಷ್ಟಿಕೋನವೇ ಬದಲಾಗಿ ಬಿಡುವ ಸಾಧ್ಯತೆಗಳೇ ಹೆಚ್ಚು.ಅದೇ ಕಾರಣಕ್ಕೆ ಈ ಕತೆ ಬರೆದು ಒಂದೂವರೆ ವರ್ಷದವರೆಗೆ ಯಾರೊಬ್ಬರಿಗೂ ಹೇಳದೇ ಬದಿಗಿಟ್ಟಿದ್ದೆ.ಆ ನಂತರ ಹಿರಿಯರೊಬ್ಬರು ಇದೇ ಭಿತ್ತಿಯ ಮತ್ತೊಂದು ಕತೆಯನ್ನು ನನಗೆ ಹೇಳಿದಾಗ ನಾನವರ ಬಳಿ ಈ ಕತೆಯನ್ನು ಪ್ರಸ್ತಾಪ ಮಾಡಿ ಅವರು ಧೈರ್ಯ ತುಂಬಿದ ಮೇಲಷ್ಟೇ ಈ ಕತೆಯನ್ನು ಪತ್ರಿಕೆಗೆ ಕಳಿಸಿದ್ದೆ.ಅದು ಪ್ರಕಟಗೊಂಡ ನಂತರ ನಾನೆಷ್ಟು ಮುಜುಗರ ಅನುಭವಿಸಿದೆನೆಂದರೆ ಯಾರಾದರೂ ಆ ಕತೆ ಓದಿದೆ ಎಂದರೆ ಸಾಕು ನನಗೆ ಬಚ್ಚಿಟ್ಟುಕೊಳ್ಳುವಂತಾಗುತ್ತಿತ್ತು.ಅದಾಗ್ಯೂ ಸಮಕಾಲೀನ ಬರಹಗಾರರ ಹತ್ತಾರು ಮೆಚ್ಚಿಗೆಯ ನಂತರ ನನ್ನೊಳಗೊಂದು ಆತ್ಮಸ್ಥೈರ್ಯ ತುಂಬಿದ, ಬರಹಕ್ಕೊಂದು ಹೊಸ ಆಯಾಮ ಒದಗಿಸಿದಂತಹ ಮತ್ತು ಬದುಕಿನ ಹುಡುಕಾಟದ ಕುರಿತಾಗಿ ಮತ್ತೊಂದು ಮಗ್ಗುಲನ್ನು ಪರಿಚಯಿಸಿದ ಕತೆ ಇದು. ಕತೆಯನ್ನು ಬಹಳ ದೂರದಿಂದಲೇ ಹೇಳಬೇಕೆಂಬ ಕಟ್ಟು ಪಾಡಿಗೆ ಬಿದ್ದಿದ್ದ, ಏನೇ ಆಗಲಿ ಹೆಂಗಸರ ಕತೆಗಳನ್ನು ಬರೆಯಲೇ ಬಾರದು ಎಂದು ನನ್ನನ್ನು ನಾನೇ ನಿರ್ಬಂಧಿಸಿಕೊಂಡಿದ್ದ ಎಲ್ಲ ಬೇಲಿಗಳನ್ನು ಬದಿಗೊತ್ತಿ ನನ್ನನ್ನು ನಾನು ಬರಹಗಳಲ್ಲಿ ಕಂಡುಕೊಳ್ಳುವಂತೆ ಮಾಡಿದ ಮೊದಲನೆ ಕತೆ ಇದು.