ಸಾತಪ್ಪಗ ಇಕಾಡಿದಿಕಾಡಿ ಕುಡಿಯೂ ಚಟಾ ಬಿದ್ದಂಗಿತ್ತು. ಮೊದ ಮೊದಲ ಅಪರೂಪಕ್ಕೊಮ್ಮ ಹೊಲದೊಳಗ ರಾಶಿ ಇದ್ದಾಗ… ಯಾರದರೇ ಕಣಕ್ಕ ಹೋದರ, ಇಲ್ಲಾಂದ್ರ ಭಜನಾಕ ಹೋದರ ಅಷ್ಟೇ ಕುಡೀತಿದ್ದ. ಈಗೀಗ ಎರಡು ದಿನಕ್ಕೊಮ್ಮ ಕುಡಿಯಾಕ ಸುರು ಮಾಡಿದ್ದ. ರೊಕ್ಕ ಈಡಾಗಲಿಲ್ಲಂದ್ರ ಅಲ್ಲಿ ಇಲ್ಲಿ ಸಾಲಾ ತಗೊಂತಿದ್ದ. ವಿಜಯಪುರದೊಳಗ ಒಂದಿಬ್ಬರು ಅಡತ ಅಂಗಡಿಯವರಿದ್ದರು. ಸಾತಪ್ಪನ ಅಪ್ಪ ಬೋಜಪ್ಪ ಇದ್ದಾಗಿನಿಂದಲೂ ಅಲ್ಲೇ ವ್ಯವಹಾರ ಮಾಡಕೊಂಡು ಬಂದವರು. ಹಿಂಗಾಗಿ ಆ ಅಡತ ಅಂಗಡಿ ಸೇಟಜಿಗಳು ಸಾಲಾ ಕೊಡತಿದ್ದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಎಸ್.ಬಿ.ಜೋಗುರ ಬರೆದ ಕಥೆ “ಕೇಡುಗಾಲದ ಕುದುರೆ” ನಿಮ್ಮ ಈ ಭಾನುವಾರದ ಓದಿಗೆ

ಜಾಮದಾರ ಸಾತಪ್ಪ ಅಂಬೋ ರೈತ ವಡ್ಡೀನ ದಂಡೀಗುಂಟ ಎರಡೂ ಎತ್ತ ಬಿಟಗೊಂಡು, ಮಡ್ಯಾನ ಬೇವಿನಗಿಡದ ಕೆಳಗ ಕುಂತಗೊಂಡು, ಬೀಡಿ ಸೇದತಾ ಪುಸ್.. ಪುಸ್..ಅಂತ ಹೊಗಿ ಬಿಡತಿದ್ದ. ಅಂವಾ ಹಂಗ ತಟಕೂ ಅಲಗಾಡದೇ ಕುಂತಿದ್ದು ದೂರದಿಂದ ನೋಡವರಿಗೆ ಗಿಡದ ಕೆಳಗ ಯಾವುದೋ ಒಂದು ಕಲ್ಲಿನ ಮೂರ್ತಿ ಕುಂದ್ರಸದಂಗ ಕಾಣತಿತ್ತು. ಅದು ಅನಗಾಡ ಬಿಸಲ, ಝಳದ ಸೆಳಕ ಒಂದೇ ಸವನ ರವರವ ಅಂತ ಹೊಯ್ದಾಡತಿತ್ತು. ಇಡೀ ಹೊಲದೊಳಗ ತುಸು ಹಚ್ಚಗನ ಜಾಗ ಅಂದ್ರ ಆ ವಡ್ಡಿನ ನಳ್ಳಿನೊಳಗ ಇದ್ದಂಗಿತ್ತು. ಅಲ್ಲಿರೋ ಕರಕೀ ದಡ್ದೀಗಿ ಎತ್ತಗೋಳು ಬಾಯಿ ಹಾಕಿ ಪರಕ್.. ಪರಕ್.. ಅಂತ ಜಬರಸೂ ಮುಂದ, ಅವುಗಳ ಕೊರಳಾಗಿನ ಗಂಟಿ ಬಾಳ ಗಮತ್ತಲೇ ಗಳಂಗ್.. ಗಳಂಗ್.. ಅಂತ ಸೌಂಡ್ ಮಾಡತಿದ್ವು. ಆ ಎತ್ತಗೋಳು ಮೇಯೂದನ್ನ ನೋಡಕೋಂತ, ಎರಡು ದಿನದ ಹಿಂದ ನಡದಿದ್ದನ್ನ ಗೇನಸಕೋಂತ ಸಾತಪ್ಪ ಕಲ್ಲಾಗಿದ್ದ. ಬಾಜೂ ಹೊಲದ ರಂಗಪ್ಪ ಒಡ್ಡಿನ ಮ್ಯಾಲ ಬರೋದನ್ನ ಅಂವಾ ನೋಡೀ ನೋಡದಂಗ ಕುಂತಿದ್ದ. ರಂಗಪ್ಪ ಸನ್ಯಾಕ ಬಂದು ‘ಕಾಕಾ, ಆಗಿದ್ದಾಯ್ತು ಬರೀ ಅದೇ ಯೋಚನೆ ಮಾಡ್ತಾ ಕುಂತರ ಹ್ಯಾಂಗ… ಏನು ಮಾಡೂದು, ಒಂದೊಂದು ಸಾರಿ ಹಂಗ ಆಗ್ತಾವ. ನಿನಗ ಗಿಣಿಗಿ ಹೇಳದಂಗ ಹೇಳದೆ ನೀ ಕೇಳಲಿಲ್ಲ. ನಮಗ ಮುಂಜಾನೆ ಮಾದೇವ ಬಂದು ಹೀಂಗೀಂಗ್ ಆಗೈತಿ ಅಂತ ಹೇಳದಾಗಲೇ ಹಕೀಕತ್ ಗೊತ್ತಾಗಿದ್ದು. ಕೇಳಿ ನಿನ್ನಂಗೇ ನಮಗೂ ಶಾಕ್ ಆಯ್ತು. ಈಗಂತೂ ಅಂದರೂ ಬರೂದಿಲ್ಲ. ಆಡದರೂ ಬರೂದಿಲ್ಲ’ ಅಂತ ತಲಿ ತುರಸ್ತಾ ಸಾತಪ್ಪನ ಕಡಿ ನೋಡದ. ಅಂವಾ ಮುಖಾ ತಟಕ ಮಾಡಕೊಂಡು, ದಿಟ್ಟಿಸಿ ತನ್ನ ಎತ್ತುಮೇಯೋದನ್ನೇ ನೋಡತಿದ್ದ. ‘ಆಗಿದ್ದಾಯ್ತು ಅದನ್ನೇ ಗೇನಸಗೊಂತ ಕುಂದರಬ್ಯಾಡ. ನಂದೂ ತುಸು ಕೆಲಸ ಐತಿ, ನಾ ಅಮ್ಯಾಗ ಸಿಗ್ತೀನಿ’ ಎಂದವನೇ ರಂಗಪ್ಪ ನಡದುಬಿಟ್ಟ. ಸಾತಪ್ಪ ಬೀಡಿ ಸೇದಿ ಬಿಡೋ ಹೊಗಿ, ಗಾಳಿ ಇರಲಾರದ ಕಾರಣ ಅಲ್ಲೆ ಗುಂತಿ ಗುಂತಿಯಾಗಿ ಹರದಾಡತಿತ್ತು. ತುಸು ದೂರ ನಿಂತು ನೋಡವರಿಗಿ ಕಲ್ಲಿನ ಮೂರ್ತಿ ಮುಂದ ಊದಬತ್ತಿ ಹಚ್ಚದಂಗ ಕಾಣಸತಿತ್ತು. ಎತ್ತುಗಳ ಕೊರಳಾಗಿನ ಗಂಟಿ ನಾದದ ಉಲವು ಮಾತ್ರ ಗಳಂಗ.. ಗಳಂಗಂತ ಹಂಗೇ ಕೇಳತಿತ್ತು.

*****

ಸಾತಪ್ಪನ ಆ ಜಮೀನೇ ವಿಚಿತ್ರ ಇತ್ತು. ತಟಕ ಮಳಿ ಆದ್ರೂ ಸಾಕು, ಚಲೊ ಬೆಳಿ ಬರತಿತ್ತು. ತುಸು ಜೋರ ಮಳಿ ಹೊಡದರ ಆ ಜಮೀನ ಚವ್ವಾಳಿ ಹಿಡೀತಿತ್ತು. ಊರಿಗೂರೇ ಇನ್ನಾ ಸ್ವಲ್ಪ ಮಳಿ ಬೇಕು ಅನ್ನೋಮುಂದ ಸಾತಪ್ಪ ಮಾತ್ರ ಸಾಕು ಸಾಕು ರಗಡ ಅನ್ನೂವಷ್ಟಾಗೈತಿ ಅನ್ನವನು. ಸಾತಪ್ಪಗ ಇನ್ನಿಬ್ಬರು ತಮ್ಮದೇರಿದ್ದರು. ಅವರ ಪಾಲಿಗೆ ಬಂದಿರೋ ಜಮೀನೂ ಹಂಗೇ ಇತ್ತು. ಸಾತಪ್ಪನ ಹೊಲಕ್ಕ ಚೂರುಪಾರು ನೀರು ನಿಲ್ಲೂವಂಗ ಮಳಿ ಬಂದರ ಮುಗೀತು, ಆ ವರ್ಷ ಬೆಳಿ ಬರೋ ಭರೋಸಾ ಇರತಿರಲಿಲ್ಲ. ಅಂಥಾ ಅ ಜಮೀನಿನೊಳಗ ಅಂವಾ ಆ ಸಾರಿ ಇಪ್ಪತ್ತು ಚೀಲ ಕಡ್ಲಿ ಬೆಳದಿದ್ದ ಅನ್ನೂದು ನಂಬದಂಗ ಆಗಿತ್ತು. ಎರಡು ಮೂರು ವರ್ಷದಿಂದ, ಅಷ್ಟಕ್ಕಷ್ಟೆ ಮಳಿ ಆಗಿದ್ದರಿಂದ ಆಜೂ ಬಾಜೂ ಹೊಲದವರಿಗೆ ನೀರ ಸಾಲಲಾರದ ಕಾರಣಕ್ಕ ಬಿತ್ತಿದ್ದ ಬೀಜ ಸೈತ ಕೈಗಿ ಬಂದಿರಲಿಲ್ಲ. ಅಂತದರೊಳಗ ಸಾತಪ್ಪ ಇಪ್ಪತ್ತು ಚೀಲ ಕಡ್ಲಿ ಬೆಳದಿದ್ದು ಅಗಾಧ ಆಗಿತ್ತು. ಸಾಲಾ ಮಾಡಿ ಬೋರಗಿ, ಬ್ಯಾಕೊಡ ಅಂತ ಊರೂರ ತಿರುಗಾಡಿ ಚಲೋ ತುಟ್ಟಿ ಬೀಜ ತಂದು ಬಿತ್ತಿದ್ದ ಸಾತಪ್ಪಗ ಮಳಿ ಕೈಕೊಟ್ಟಿದ್ದು ನೋಡಿ, ಈ ಸಾರಿ ಬೆಳಿ ಕೈಗಿ ಹತ್ತೂವಂಗಿಲ್ಲ ಅಂತ ಅನಿಸಿತ್ತು. ಯಾವಾಗ ಜೋರ ಥಂಡಿಗಿ ಕಡ್ಲಿಗಿಡ ಒಡಿಯಾಕ ಸುರು ಆಯ್ತೋ ಆವಾಗ ಸಾತಪ್ಪಗ ತುಸು ಭರೋಸಾ ಮೂಡಾಕತ್ತತು. ಬರೀ ನಸುಕಿನೊಳಗ ಬೀಳೊ ಇಬ್ಬನಿ ಮ್ಯಾಲೇ ಬೆಳಿ ಬಂದು ಬಿಡತೈತಿ ಅನ್ನೂದು ಅಂವಂಗ ಖಾತ್ರಿ ಆಗಿ ಅಂವಾ ತುಸು ಹಗರಾಗಿದ್ದ.

ಅವನ ಕಡ್ಲಿಬೆಳಿ ನೋಡಿ ಆಜೂ ಬಾಜೂ ಹೊಲದವರು ‘ಈ ಸಾರಿ ಸಾತಪ್ಪ ಕಾಕಾನ ಕೈ ಹಿಡಿಯವರಿಲ್ಲ, ಈ ಗಜ್ಜಿನೊಳಗ ಅವನ ಸಾಲೆಲ್ಲಾ ಹರಕೊಂಡು ಹೋಗತೈತಿ’ ಅಂತ ಆಡಿಸಾಡವರು.

ಸಾತಪ್ಪ ವಿಜಯಪುರ ಜಿಲ್ಲಾದ ಅಂಚಟಗಿ ಗ್ರಾಮದವನು. ಒಂದು ಕಾಲಕ್ಕ ಬಾಳ ದೊಡ್ಡ ಒಕ್ಕಲುತನ ಮನೆತನ. ಅವನಪ್ಪ ಬೋಜಪ್ಪ ಇದ್ದಾಗ ಎಂಟೆತ್ತಿನ ಒಕ್ಕಲುತನ. ಮನಿ ತುಂಬ ಆಳು.. ಕಾಳು.. ಎತ್ತುಗಳನ್ನ ಮೇಯಿಸೋದರೊಳಗ ಅವರಪ್ಪ ಬೋಜಪ್ಪ ಹೆಸರ ಮಾಡಿದವನು. ವಿಜಯಪುರದ ಸಂಕ್ರಮಣದ ಜಾತ್ರೆಯೊಳಗ ಮೂರು ವರ್ಷ ಬಿಟ್ಟೂ ಬಿಡದೇ ಚಲೊ ಮೇಯಿಸಿದ ಎತ್ತುಗಳು ಅಂತ ಬಹುಮಾನ ಪಡೆದವನು. ಬೋಜಪ್ಪ ಗಾಡಿ ಹೂಡಕೊಂಡು ಹೊಂಟರ ಅಂಚಟಗಿ ಜನ ನಿಂತು ನೋಡತಿದ್ದರು. ಎತ್ತುಗಳು ಒಂದೇಸವನ ಮಿರಮಿರ ಅಂತ ಮಿಂಚತಿದ್ದವು. ಮೈಮ್ಯಾಗ ಒಂದೇ ಒಂದು ಸಣ್ಣ ಕಚ್ಚು ಕಾಣತಿರಲಿಲ್ಲ. ದಿನ್ನಾ ಅವುಕ್ಕ ಹಿಂಡಿ ಮೇಯಿಸಿ, ಮೈ ತಿಕ್ಕಿ ರಬ್ ಮಾಡವನು. ಮಗ ಸಾತಪ್ಪ ಒಂದು ಸಾರಿ ಸಿಟ್ಟೀಲೇ ಬಾರಕೋಲಿಂದ ಎತ್ತಿಗೆ ಜೋರಾಗಿ ಹೊಡದ ಅನ್ನೋ ಕಾರಣಕ್ಕ ಮಗನ್ನೇ ಥಳಿಸಿದ್ದ. ಎತ್ತುಗಳು ಅಂದ್ರ ಬೋಜಪ್ಪಗ ಬಾಳ ಜೀವ. ಅವು ಸತ್ತರ ಹೊಲದಾಗೇ ಮಣ್ಣ ಮಾಡಿ, ಗದ್ದಗಿ ಕಟಿಸಿದ್ದ. ಗಂಗ್ಯಾ ಅನ್ನೂ ಎತ್ತು ಬೋಜಪ್ಪ ಮುತ್ಯಾ ಸತ್ತಾಗ ಕಣ್ಣೀರ ಹಾಕತಿತ್ತು ಅನ್ನೊ ಕತಿ ಅಂಚಟಗಿಯೊಳಗ ಹುಟಗೊಂಡು, ಇತಿಹಾಸ ಆಗಿ ವರ್ತಮಾನದೊಳಗ ಹರದಾಡತಿತ್ತು. ಮುಂದ ಬೋಜಪ್ಪ ಹೋದ ಮ್ಯಾಲ ಅವನ ಮೂರು ಗಂಡು ಮಕ್ಕಳಲ್ಲಿ ಇರೋ ಹತ್ತು ಕೂರಗಿ ಜಮೀನು ಪಾಲಾಯ್ತು.

ಬೋಜಪ್ಪಗ ಒಬ್ಬಳು ಹೆಣ್ಣು ಹುಡುಗಿನೂ ಇದ್ದಳು. ಆಕಿನ್ನ ಮದುವೆ ಮಾಡಿ ಅಲ್ಲೇ ಬಾಜೂ ಹಳ್ಳಿಗೆ ಕೊಟ್ಟಿದ್ದ. ಹಂಗ ನೋಡದರ ಆಕಿಗೂ ಒಂದು ಪಾಲು ಬರಬೇಕು ಅಂತ ಪಾಲು ಮಾಡೂವಾಗ ಊರಾಗಿನ ದೈವದವರು ಹೇಳದರೂ ಸಾತಪ್ಪನ ತಂಗಿ ಶಾರವ್ವ ‘ನಮ್ಮದೇ ನಮಗ ಮನಾರ ಐತಿ, ಅಣ್ಣ ತಮ್ಮದೇರ ಪಾಲ ತಗೊಂಡು ಏನು ಉದ್ಧಾರ ಆಗೂದೈತಿ’ ಅಂದಿಂದ ಮೂರೇ ಪಾಲು ಆಗಿದ್ವು.

ಮೊದಮೊದಲ ಎಲ್ಲಾ ಚಲೊನೇ ಇತ್ತು. ಮೂರೂ ಜನ ಅಣ್ಣ ತಮ್ಮದೇರು ಒಕ್ಕಲುತನ ಮಾಡವರು. ಎಲ್ಲರೊಳಗ ಹಿರಿಯವನು ಅಂದರ ಈ ಸಾತಪ್ಪ. ಅವನಿಗಿ ಎರಡು ಗಂಡು ಒಂದು ಹೆಣ್ಣು. ಹಂಗೇ ಇಬ್ಬರೂ ತಮ್ಮದೇರಿಗೂ ಎರಡು.. ಮೂರು ಮಕ್ಕಳು. ಬೋಜಪ್ಪ ಸಾಯೂಮಟ ಸಾತಪ್ಪ ಬಾಳ ರೀತಿ ಮ್ಯಾಲ ಇದ್ದ. ಅಪ್ಪ ಸತ್ತಿಂದ ಹೇಳವರು ಕೇಳವರು ಯಾರೂ ಇರಲಾರದಂಗ ಆಗಿ, ಕುಡಿಯೋ ಚಟಕ್ಕ ಬಿದ್ದ. ಸಾತಪ್ಪನ ಹೆಂಡತಿ ಶಂಕ್ರಮ್ಮ ಬಾಳ ಚಲೊ ಹೆಣಮಗಳು ಅಂತ ಊರ ಮಂದಿನೇ ಗುರುತಿಸಿರೋದಿತ್ತು. ಗಂಡು ಹುಡುಗರ ಪೈಕಿ ಅವನ ಹಿರಿ ಮಗ ಮಾದೇವ ಡಿಗ್ರಿ ಓದತಿದ್ದ. ಕಿರಿ ಮಗ ಬಸವರಾಜ ಪಿ.ಯು.ಸಿ ಯಲ್ಲಿದ್ದ. ತಂಗಿ ಚನ್ನಮ್ಮ ಏಳನೆತ್ತೆಮಟ ಕಲತು ಬಿಟ್ಟಿದ್ದಳು. ಒಕ್ಕಲತನದೊಳಗ ಸುಖಾ ಇಲ್ಲ. ಇಲ್ಲಿ ಎಷ್ಟು ದುಡದರೂ ಅಷ್ಟೆ ಐತಿ ಮಾಲ ಬಂದಾಗ ಧಾರಣಿ ಇರಲ್ಲ… ಧಾರಣಿ ಇದ್ದಾಗ ಮಾಲ ಬರಲ್ಲ ಅಂತ ಗಂಡ-ಹೆಂಡತಿ ಇಬ್ಬರೂ ಯೋಚನೆ ಮಾಡಿ ಮಕ್ಕಳರೇ ಓದಿ ಸ್ಯಾಣೇರಾಗಲಿ ಅಂತಿದ್ದರು.

ಸಾತಪ್ಪಗ ಇಕಾಡಿದಿಕಾಡಿ ಕುಡಿಯೂ ಚಟಾ ಬಿದ್ದಂಗಿತ್ತು. ಮೊದ ಮೊದಲ ಅಪರೂಪಕ್ಕೊಮ್ಮ ಹೊಲದೊಳಗ ರಾಶಿ ಇದ್ದಾಗ… ಯಾರದರೇ ಕಣಕ್ಕ ಹೋದರ, ಇಲ್ಲಾಂದ್ರ ಭಜನಾಕ ಹೋದರ ಅಷ್ಟೇ ಕುಡೀತಿದ್ದ. ಈಗೀಗ ಎರಡು ದಿನಕ್ಕೊಮ್ಮ ಕುಡಿಯಾಕ ಸುರು ಮಾಡಿದ್ದ. ರೊಕ್ಕ ಈಡಾಗಲಿಲ್ಲಂದ್ರ ಅಲ್ಲಿ ಇಲ್ಲಿ ಸಾಲಾ ತಗೊಂತಿದ್ದ. ವಿಜಯಪುರದೊಳಗ ಒಂದಿಬ್ಬರು ಅಡತ ಅಂಗಡಿಯವರಿದ್ದರು. ಸಾತಪ್ಪನ ಅಪ್ಪ ಬೋಜಪ್ಪ ಇದ್ದಾಗಿನಿಂದಲೂ ಅಲ್ಲೇ ವ್ಯವಹಾರ ಮಾಡಕೊಂಡು ಬಂದವರು. ಹಿಂಗಾಗಿ ಆ ಅಡತ ಅಂಗಡಿ ಸೇಟಜಿಗಳು ಸಾಲಾ ಕೊಡತಿದ್ದರು. ಬೆಳದ ಮಾಲ ತಮ್ಮ ಅಡತಿಗೇ ತಂದು ಹಚ್ಚಬೇಕು ಅನ್ನೋ ಕರಾರಿನ ಮ್ಯಾಲ ಅವರು ಸಾಲ ಕೊಡವರು. ಒಂದು ಪೀಕು ಕೈಗಿ ಬರೂಮಟ ಇಡೀ ಮನಿ ಖರ್ಚು ಹಿಂಗ ಸಾಲಾ ಮಾಡೇ ಜಗ್ಗತಿದ್ದ. ನೂರು ರೂಪಾಯಿಯೊಳಗ ಐವತ್ತು ಅವನ ಚಟಕ್ಕಾದರ, ಇನೈವತ್ತು ಮನಿಗಿ. ಮಕ್ಕಳ ಶಿಕ್ಷಣ, ಬಟ್ಟೆ ಬರೆ, ಮನಿ ಖರ್ಚು ಅಂತ ಸಿಕ್ಕಾಪಟ್ಟೆ ಅಡಚಣೆ ಆಗ್ತಿತ್ತು. ಇನ್ನು ಸಾಲಾ ಕೊಟ್ಟಿರೋ ಸೇಟಜಿಗಳು ರಾಶಿ ಆಗಿದ್ದೇ ತಡ ಮಾಲ್ ತಂದು ಹಚ್ಚಾಕ ಹೇಳಕತ್ತಿದ್ದರು. ರೇಟ್ ಇರಲಿ ಬಿಡಲಿ ಬಂದ ಮಾಲನ್ನ ಅಡದುಡ್ಡಿಗೆ ಕೊಟ್ಟು, ಮತ್ತ ಮುಂದಿನ ಬದುಕಿಗಿ ಸಾಲಾ ಮಾಡಬೇಕಿತ್ತು. ಅದೇ ಚಿಂತಿಯೊಳಗ ಹೆಂಡತಿ ಶಂಕ್ರಮ್ಮ ಒಣಗಿ ಕಡ್ದಿ ಆದಂಗ ಆದಳು.

ಸಾತಪ್ಪ ತಾನೊಬ್ಬನೇ ಅಲ್ಲದೇ ತನ್ನ ಜೋಡಿ ಆಜೂ ಬಾಜೂ ಹೊಲದವರನ್ನ ಕರಕೊಂಡು ಹೋಗಿ ಕುಡಿಯವನು.. ಕುಡಸವನು. ಹೆಂಡತಿ ಶಂಕ್ರಮ್ಮ ಸಿಟ್ಟೀಲೇ ‘ಹಿಂಗ ಆದ್ರ ಹ್ಯಾಂಗ..? ಬಾವ್ಯಾಗಿನ ನೀರು ಈಡ್ ಆಗುವಂಗಿಲ್ಲ, ಇನ್ನ ರೊಕ್ಕ ಎಲ್ಲಿ ಸಾಲತೈತಿ’ ಅಂತ ಹೇಳಿದ್ದಕ್ಕ ‘ನಿಮ್ಮಪ್ಪನ ಮನೀದು ತಂದು ಕೊಟ್ಟಿದ್ದೆನೂ’ ಅಂತ ದನಕ್ಕ ಬಡದಂಗ ಬಡದಿದ್ದ. ಹಂಗಾಗಿ ಆಕಿಗೂ ಸಾಕು ಸಾಕಾಗಿತ್ತು. ಬೆಳದು ನಿಂತ ಮಕ್ಕಳ ಎದುರಿಗಿ ಅದೇನು ದಿನ್ನಾ ಜಗಳಾಡೂದು ಅಂತ ನುಂಗಿ ಸುಮ್ಮ ಇರತಿದ್ದಳು. ಬಾಜೂ ಹೊಲದ ರಂಗಪ್ಪ, ಚನಬಸು, ಕರಿಸಿದ್ದ ಸಾತಪ್ಪನ ಕಿಸೆಯೊಳಗ ರೊಕ್ಕ ಇದ್ದಾಗ ಕಾಕಾ ಕಾಕಾ ಅನ್ಕೊಂತ ಅವನ ಹಿಂದಿಂದೇ ತಿರಗವರು. ಶಂಕ್ರಮ್ಮ ‘ಎಲ್ಲಾರೂ ಅವರೇ ಕೂಡೀರಿ’ ಅಂದಾಗ ಮೂರೂ ಬಿಟ್ಟವರಂಗ ಕೆಳಗ ಮಾರಿ ಮಾಡಿ ನಗತಿದ್ದರು. ಸಾತಪ್ಪಗ ಮಾತ್ರ ಇವರೆಲ್ಲಾ ಬಾಳ ಚಲೋ. ಎಷ್ಟೋ ಸಾರಿ ಅಂವಗ ಎದ್ದು ನಡೀಯಾಕ ಆಗದಿದ್ದಾಗ ಅವರೇ ಹೊತಗೊಂಡು ಬಂದು ಮನಿ ಮುಟ್ಟಿಸಿದ್ದಿತ್ತು. ರಂಗಪ್ಪಂತೂ ಅವನ ಚಪ್ಪಲಿ ಸೈತ ಕೈಯಾಗ ಹಿಡಕೊಂಡು ಬಂದು ಕಾಳಜಿ ತೋರಸಿದ್ದಿತ್ತು. ಹಂಗಾಂಗೇ ಶಂಕ್ರಮ್ಮ ಗಂಡನ ಜೋಡಿ ಇವರು ಅದಾರಂದ್ರ ತುಸು ನಿಶ್ಚಿಂತಿಯಿಂದ ಇರತಿದ್ದಳು. ಹಿಂದೊಮ್ಮ ಸಾತಪ್ಪ ಯದ್ವಾ ತದ್ವಾ ಕುಡದು ಬಸ್ಸಿಂದ ಇಳಿಯೂ ಮುಂದ ಕಾಲು ಪಿಸಕಿ, ಕೆಳಗ ಬಿದ್ದು ತಲಿ ಒಡಕೊಂಡಿದ್ದಿತ್ತು. ಆವಾಗ ಇವರಾರೂ ಸಾತಪ್ಪನ ಜೋಡಿ ಇರಲಿಲ್ಲ. ಹಂಗಾಗೇ ಶಂಕ್ರಮ್ಮಇವರು ಅದಾರಂದ್ರ ತುಸು ಹಗರ ಆಗಿರತಿದ್ದಳು.

ಸಾತಪ್ಪನ ಹೊಲಕ್ಕ ಚೂರುಪಾರು ನೀರು ನಿಲ್ಲೂವಂಗ ಮಳಿ ಬಂದರ ಮುಗೀತು, ಆ ವರ್ಷ ಬೆಳಿ ಬರೋ ಭರೋಸಾ ಇರತಿರಲಿಲ್ಲ. ಅಂಥಾ ಅ ಜಮೀನಿನೊಳಗ ಅಂವಾ ಆ ಸಾರಿ ಇಪ್ಪತ್ತು ಚೀಲ ಕಡ್ಲಿ ಬೆಳದಿದ್ದ ಅನ್ನೂದು ನಂಬದಂಗ ಆಗಿತ್ತು. ಎರಡು ಮೂರು ವರ್ಷದಿಂದ, ಅಷ್ಟಕ್ಕಷ್ಟೆ ಮಳಿ ಆಗಿದ್ದರಿಂದ ಆಜೂ ಬಾಜೂ ಹೊಲದವರಿಗೆ ನೀರ ಸಾಲಲಾರದ ಕಾರಣಕ್ಕ ಬಿತ್ತಿದ್ದ ಬೀಜ ಸೈತ ಕೈಗಿ ಬಂದಿರಲಿಲ್ಲ. 

ಸುತ್ತಮುತ್ತ ಇರೋ ಯಾರ ಹೊಲದೊಳಗೂ ಪೀಕ ಇರಲಿಲ್ಲ. ಇದ್ದರೂ ಸೈತ ಅರ್ಧ ಮರ್ಧ ಒಣಗಿದ್ದು, ಬಿತ್ತಿದ ಬೀಜರೇ ಕೈಗಿ ಬರ್ತಾವೋ ಇಲ್ಲೋ ಅನ್ನೂವಂಗ ಇತ್ತು. ಬಾಜೂ ಹೊಲದ ರಂಗಪ್ಪ ಜೋಳ ಹಾಕಿದ್ದ, ನೀರ ಸಾಲಲಾರದಕ್ಕ ಅದು ಹಳಚ ಒಡದು ಅದನ್ನ ಕಿತ್ತು ದನಗಳಿಗಿ ಹಾಕಿದ್ದ. ಬಾಳಷ್ಟು ಬೋರ್‌ಗಳು ಒಣಗಿದ್ವು. ಅಂಥದರೊಳಗ ಸಾತಪ್ಪನ ಬಾವಿಯೊಳಗ ಇನ್ನೂ ಒಂದಾಳು ನೀರಿತ್ತು. ವಾರಕ್ಕ ಒಮ್ಮಾದರೂ ನೀರ ಹಾಯಸದರ ಸಾಕು, ಅನ್ನೂವಂಗ ಭೂಮಿಯೊಳಗ ತೇವಿತ್ತು. ಥಂಡಿ ದಿನದೊಳಗಂತೂ ಹಂಗ ನೀರ ಹಾಯಿಸೋ ಜರೂರತ್ತೂ ಸಾತಪ್ಪಗ ಕಾಣಲಿಲ್ಲ. ನಸಿಕಿನೊಳಗ ಬಾಳ ಇಬ್ಬನಿ ಬೀಳತಿತ್ತು. ಆ ತಂಪಿನೊಳಗೇ ಸಾತಪ್ಪನ ಕಡ್ಲಿಗಿಡ ಒಡೀತಾ ಹೊಯ್ತು. ಒಂದೊಂದು ಗಿಡ ಒಂದೊಂದು ಮಾರ ಅಗಲ ಆದ್ವು. ಭರ್ಚಕ ಹೂ… ಕಾಯಿ ಹಿಡೀತು. ಒಂದು ಗಿಡ ಕಿತ್ತಿ ತಿಂದರ ಅ… ಬ… ಅಂತ ಡೇಕರಕಿ ಬರೂವಂಗ ಇತ್ತು. ಕಡ್ಲಿ ಗಿಡಕ್ಕ ಕಾಯಿ ಹಿಡಿಯಾಕ ಸುರು ಆಗಿಂದ ಸಾತಪ್ಪ ಅಲ್ಲೇ ಹೊಲದಾಗ ಮಲಗಾಕ ಸುರು ಮಾಡದ. ಕಡ್ಲಿ ಗಿಡ ಒಣಗತಾ ಬಂದಿಂದ ಸಾತಪ್ಪಗ ಬೆಳಿ ಮ್ಯಾಲಿನ ಖಾಳಜಿ ಇನ್ನೂ ಜೋರ ಆಗಿತ್ತು. ಶಂಕ್ರಮ್ಮ ಐದಾರು ಆಳು ತಗೊಂಡು ಕಡ್ಲಿಗಿಡ ಕಿತ್ತಿ ಅದನ್ನ ಅಲ್ಲಲ್ಲಿ ಮೆದಿ ಮಾಡಿ ಹಚ್ಚಿ, ಅದು ಗಾಳಿಗಿ ಹಾರಬಾರದು ಅಂತ ಅದರ ಮ್ಯಾಲ ಒಂದೊಂದು ಲಟ್ಟಾ ಕಲ್ಲ ಹೇರಿದ್ದಳು. ಅಷ್ಟೂ ಮೆದಿ ಎಣಸಿ ಹೆಚ್ಚೂ ಕಮ್ಮಿ ಎಷ್ಟು ಚೀಲ ಆಗತೈತಿ ಅಂತ ಸಾತಪ್ಪ ಲೆಕ್ಕಾ ಹಾಕಿದ್ದ. ಈಗಂವ ಒಂದು ಅಳತಿ ಮ್ಯಾಲ ಕುಡಿತಿದ್ದ. ಒಂದೇ ಒಂದು ಮೆದಿ ಯಾರರೇ ಕದ್ದಕೊಂಡು ಹೋದರ ದೊಡ್ದ ಹೊಡತ ಅಂತ ಹೇಳಿ, ಮಲಗೋ ಮಂಚಕ್ಕ ತಾಗಿಸಿ ಒಂದು ಗಂಟ ಬಡಗಿ ಇಟಗೊಂಡು, ಎಚ್ಚರಾದಾಗೊಮ್ಮ ಕೆಮ್ಮಿ.. ಸುತ್ತಾಲಕೂ ಬ್ಯಾಟರಿ ಹೊಡೀತಿದ್ದ. ಬೆಳ್ಳ ಬೆಳತನ ಜೀವಕ್ಕಿಂತ ಜತ್ತನ ಮಾಡಿ ಕಾಯತಿದ್ದ. ತುಸು ಬಿಸಲಿಗಿ ಬಿದ್ದರ ಚಲೊ ಅಂತ ಹೇಳಿ ಹಗಲ ರಾತ್ರಿ ಕೂಡೇ ಆ ಮೆದಿ ಕಾಯತಿದ್ದ. ಸಾತಪ್ಪಗ ಕಡ್ಲಿ ಧಾರಣಿ ಕೇಳಿ ಬಾಳ ಖುಷಿ ಆಗಿತ್ತು. ರಾಶಿ ಮಾಡೊ ವ್ಯಾಳೆಕ ಮಕ್ಕಳಾದ ಮಾದೇವ ಮತ್ತು ಬಸವರಾಜ ಇಬ್ಬರೂ ಹೊಲದಾಗೇ ಉಳದಿದ್ದರು. ಸಾತಪ್ಪನ ಲೆಕ್ಕ ಸುಳ್ಳಾಗಿತ್ತು. ಹತ್ತರಿಂದ ಹದಿನೈದು ಚೀಲ ಅಂದ್ಕೊಂಡಿದ್ದು ಇಪ್ಪತ್ತು ಚೀಲ ಆಗಿತ್ತು. ಬರೀ ಅಂಚಟಗಿ ಮಾತ್ರ ಅಲ್ಲ, ಸುತ್ತ ಮುತ್ತ ಹಳ್ಳಿಗಳೊಳಗೂ ಯಾರೂ ಅಷ್ಟು ಕಡ್ಲಿ ಬೆಳದಿರಲಿಲ್ಲ. ಕಣದೊಳಗಿರೋ ರಾಶಿ ನೋಡಿ, ಸಾತಪ್ಪನ ಎದಿ ಅಗಲಾಗಿತ್ತು. ಅಂತೂ ಇಂತೂ ಒಕ್ಕಲುತನ ಕೈ ಹಿಡೀತು ಇಷ್ಟರೊಳಗ ಎಲ್ಲಾ ಹಳೆ ಸಾಲ ಹರದು, ಒಂದಿಷ್ಟು ರೊಕ್ಕ ಕೈಗಿ ಹತ್ತತಾವ ಅನ್ನೋ ಖುಷಿನೂ ಇತ್ತು. ಇನ್ನ ತಡ ಮಾಡೂದರೊಳಗ ಅರ್ಥ ಇಲ್ಲ ಅಂದವನೇ ರಂಗಪ್ಪನ ಗಾಡಿ ತರಿಸಿ ಅದರೊಳಗ ಹತ್ತು ಚೀಲ, ತನ್ನ ಗಾಡಿಯೊಳಗ ಹತ್ತು ಚೀಲ ಹೇರಕೊಂಡು ಸೀದಾ ವಿಜಯಪುರದ ಅಡತಿಗಿ ಹೊಂಟ. ಶಂಕ್ರಮ್ಮ ‘ಹುಷಾರಾಗಿ ಹೋಗಿ ಬರ್ರಿ’ ಅನ್ನೊ ಮಾತಿಗಿ ಆಯ್ತು ಆಯ್ತು ಅನ್ನೂವಂಗ ಗೋಣ ಹಾಕಿ ಗಾಡಿ ಹೊಡಕೊಂಡು ನಡದ.

ಇನ್ನೂ ತುಸು ಧಾರಣೆ ಬರೋ ಮಟ ಇಲ್ಲೇ ನಿಮ್ಮ ಅಡತಿಯೊಳಗ ಇಟಗೋರಿ ಅಂದ್ರ ಅದಕ್ಕ ಸೇಟಜಿ ತಯಾರಿರಲಿಲ್ಲ. ‘ನೋಡು ಧಾರಣೆ ಮುಂದ ವಾರದೊಳಗ ಹೆಚ್ಚೂ ಆಗಬೋದು, ಕಡಿಮಿನೂ ಆಗಬೋದು.. ಅದೆಲ್ಲಾ ಇದ್ದಿದ್ದೇ. ಈಗ ಚಲೋ ರೇಟ್ ಐತಿ ತೂಕ ಮಾಡಿ ಬಿಡಮ್ಮು’ ಅಂದಾಗ ಸಾತಪ್ಪ ‘ನೋಡು ಸೇಟ್, ನಮ್ಮಪ್ಪನ ಕಾಲದಿಂದಲೂ ನಿಮ್ಮ ಜೋಡಿನೇ ವ್ಯವಹಾರ ಮಾಡಕೊಂಡು ಬಂದೀವಿ, ನಿಮಗ ಹ್ಯಾಂಗ ಚಲೊ ಅನಸತೈತಿ ಹಂಗ ಮಾಡ್ರಿ. ನಿಮ್ಮ ಮ್ಯಾಗ ವಿಶ್ವಾಸ ಐತಿ.’ ಅಂದದ್ದೇ ಸೇಟಜಿ ಅಲ್ಲಿರೋ ಹಮಾಲರನ್ನ ಕರದು ತೂಕಕ್ಕ ಹಚ್ಚದ. ತೂಕ ಮುಗದು ಎಲ್ಲಾ ಲೆಕ್ಕಾ ಮಾಡಿ ಸಾತಪ್ಪಗ ಕರದ. ‘ನೋಡು ಸಾತಪ್ಪ, ಇಲ್ಲೀತನ ನೀ ತಗೊಂಡಿರೋ ಸಾಲ ಅರವತ್ತು ಸಾವಿರ ಆಗೈತಿ. ಒಟ್ಟೂ ಮಾಲು ಇವತ್ತಿನ ಧಾರಣಿಗಿ ಹಿಡದರ ಒಂದು ಲಕ್ಷ ಹತ್ತು ಸಾವಿರ ರೂಪಾಯಿ ಆಗತೈತಿ. ನೀ ಹುಂ ಅಂದರ ಮುಂದಿನ ವ್ಯವಹಾರ. ಮೊದಲಿಂದು ಮುರದು ಉಳಿದದ್ದು ಕೊಡ್ರಿ ಅಂದ್ರೂ ಸೈ.. ಇಲ್ಲಾ ಅಷ್ಟೂ ಕೊಡ್ರಿ ಅಂದರೂ ಸೈ. ಆದರ ಬಡ್ದಿ ಬೆಳೀತಾ ಹೋಗತೈತಿ’ ಅಂದಾಗ ರಂಗಪ್ಪ ಚನಬಸು ಜೋಡಿ ಏನೋ ಗುಸು ಗುಸು ಅಂತ ಮಾತಾಡಿ ‘ಸೇಟಜಿ ಮೊದಲಿಂದೆಲ್ಲಾ ಲೆಕ್ಕಾ ಚುಕ್ತಾ ಮಾಡಿ ಉಳದಿದ್ದು ಕೊಡ್ರಿ’ ‘ಆಯ್ತು ಹಂಗಿದ್ದರ ಚೀಟಿ ಮಾಡಿ ಬಿಡಲಾ..?’ ‘ಮಾಡ್ರಿ ಮಾಡ್ರಿ’ ‘ಉಳದಿದ್ದು ಐವತ್ತು ಸಾವಿರ ರೂಪಾಯಿ ಅಷ್ಟೂ ಬೇಕೋ.. ಹ್ಯಾಂಗೊ’ ‘ಹೌದರಿ ಸೇಟಜಿ ಅಷ್ಟೂ ಬೇಕು. ಮನಿಯೊಳಗೂ ಬ್ಯಾರೆ ಬ್ಯಾರೆ ಖರ್ಚ ಅದಾವ’ ‘ಆಯ್ತು ಆಯ್ತು ನೀ ಹ್ಯಾಂಗ ಅಂತೀದಿ ಹಂಗ’ ಅಂತ ಟ್ರೆಜರಿಯೊಳಗಿಂದ ಹಣ ತಗದು ಎಣಸಿ ಸಾತಪ್ಪನ ಕೈಗೆ ಕೊಟ್ಟ. ರಂಗಪ್ಪ.. ಚನಬಸು.. ಕರಿಸಿದ್ದ ‘ಕಾಕಾ ಇವತ್ತ ಮೌಲಾಲಿ ದಾಬಾದೊಳಗ ಭರ್ಚಕ ಆಗಬೇಕು’ ಅಂದರು. ‘ಅಲ್ರೋ ನಿಮಗಿಂತ ಹೆಚ್ಚಿಂದಲ್ಲ ಅದೇನು ತಿಂತೀರಿ ತಿನ್ನರಿ.. ಕುಡೀತೀರಿ ಕುಡೀರಿ’ ಅಂದದ್ದೇ ಎಲ್ಲರೂ ಹುರುಪ ಆದರು. ದಾಬಾ ಬಾಜೂ ಗಾಡಿ ನಿಲ್ಲಿಸಿದರು. ಮೋಕ ಹರದು ಎತ್ತುಗಳಿಗೆ ಮೇವು ಹಾಕಿ, ಜಗ್ಗಿನೊಳಗ ನೀರ ತಗೊಂಡು ಮುಖ ತೊಳ್ಕೊಂಡು ಕುಂತರು. ಆವಾಗ ಟೈಮ್ ರಾತ್ರಿ ಎಂಟಾಗಿತ್ತು. ಹತ್ತಾಯ್ತು.. ಹನ್ನೊಂದಾಯ್ತು.. ಹನ್ನೆರಡಾಯ್ತು.. ಯಾರೂ ಎದ್ದು ನಿಲ್ಲೋ ಸ್ಥಿತಿಯೊಳಗ ಇರಲಿಲ್ಲ. ಎಲ್ಲರೂ ಜಿದ್ದಿಗಿ ಬಿದ್ದಂಗ ಕುಡದಿದ್ದರು. ಸಾತಪ್ಪಂತೂ ಕುಂತ ಜಾಗದೊಳಗೇ ಮೈ ಹೊಳಿಸಿದ್ದ. ಮೌಲಾಲಿ ‘ಇಲ್ಲಿ ಮಲಗಬ್ಯಾಡ್ರಿ ಪೋಲಿಸರು ಬರ್ತಾರ’ ಅನ್ನೂದರೊಳಗ ಸೊಂಯ್.. ಅಂತ ಸೀಟಿ ಊದತಾ ಒಬ್ಬ ಬೀಟ್ ಪೋಲಿಸ್ ಹಾಜರ್.. ‘ಏ ಮೌಲಾಲಿ ಹೊರಗಿನ ಲೈಟ್ ಆಫ್‌ ಮಾಡು. ಎಷ್ಟಾಯ್ತು ಟೈಮು.. ಯಾರಿವರು ಇಲ್ಯಾಕ ಮಲಗ್ಯಾರ, ಏ ಏಳು ನಡೀ ಏಳು’ ಅಂತ ಆ ಪೋಲಿಸ್ ಸಾತಪ್ಪನ ಹಿಡದು ಅಲ್ಲಾಡಿಸಿದ. ಅಂವಾ ಮಿಸಕಾಡಲಿಲ್ಲ. ಅಲ್ಲೇ ನಿಂತು ನೋಡ್ತಿರೋ ಚನಬಸುಗೆ ‘ಏ ನಿಮ್ಮ ಮನಸ್ಯಾನೇ ಹೌದಿಲ್ಲೊ.. ಕರಕೊಳ್ರೊ.. ಹೊತ್ತೂ ಗೊತ್ತು ಏನೂ ಇಲ್ಲಾ..’ ಅಂದಾಗ ಚನಬಸು ಮತ್ತ ರಂಗಪ್ಪ ಸಾತಪ್ಪನ ಬಗಲಲ್ಲಿ ಕೈ ಹಾಕಿ ಹಗೂರಕ ಎತಗೊಂಡು ಹೋಗಿ ಗಾಡಿಯೊಳಗ ಮಲಗಸದರು. ಅಡೂಡಿಲೇ ಗಾಡಿ ಹೂಡಕೊಂಡು ಹೊಂಟರು. ಕರಿಸಿದ್ದ ಗಾಡಿಯೊಳಗ ಕುಂತೇ ವ್ಯಾಕ್.. ವ್ಯಾಕ್..ಅಂತ ವಾಂತಿ ಮಾಡಕೋತಿದ್ದ. ಅಂಚಟಗಿ ಬಂತು. ಊರೊಳಗ ಕರಂಟ್ ಇರಲಿಲ್ಲ ಎತ್ತಿನ ಕೊರಳಾಗಿನ ಗಂಟೀನಾದ ಕೇಳಿ ಶಂಕ್ರಮ್ಮ ಕಂದೀಲ ಹಿಡಕೊಂಡು ಹೊರಗ ಬಂದಳು, ‘ನೀವು ಬಂದು ಮುಟ್ಟೂತನ ಜೀವದಾಗ ಜೀವ ಇರಲಿಲ್ಲ. ಎಲ್ಲಾ ಬರೊಬ್ಬರಿ ಆಯ್ತಾ’ ಅಂದಾಗ ರಂಗಪ್ಪ ‘ಯವ್ವಾ ಬರೊಬ್ಬರಿ ಆಯ್ತು. ಕಾಕಾನ ಸಾಲ ಚುಕ್ತಾ ಆಯ್ತು. ಕಿಸೆಯೊಳಗ ರೊಕ್ಕ ಅದಾವ ಬಿದ್ದ ಗಿದ್ದಾವು ಹಗೂರಕ ಮಲಗಸರಿ’ ಅಂದ. ಮಾದೇವ ಮತ್ತು ಚನಬಸು ಎತಗೊಂಡು ಹೋಗಿ ಹಾಸಗಿಗಿ ಹಾಕಿದರು. ಸಾತಪ್ಪಗ ಮೈಮ್ಯಾಲ ಯಾವ ಖಬರೂ ಇರಲಿಲ್ಲ. ‘ಯವ್ವ ನಾವಿನ್ನ ಬರ್ತೀವಿ’ ಅಂದವರೇ ಅವರವರ ಮನಿಕಡೆ ನಡದು ಬಿಟ್ಟರು. ಊರೊಳಗಿನ ನಾಯಿಗೋಳು ಒಂದೇ ಸವನೆ ಶ್ರುತಿ ಹಿಡದಂಗ ಬೊಗಳತಿದ್ದವು.

*****

ಹಗಲು ಹರಿಯೂದರೊಳಗ ಸಾತಪ್ಪಗ ಎಚ್ಚರಾಯ್ತು. ತಲಿ ದಿಮ್.. ದಿಮ್..ಅಂತಿತ್ತು. ಹಗೂರಕ ಕಿಸೆ ಮುಟ್ಟಿ ನೋಡದ. ಏನೂ ಇರಲಿಲ್ಲ. ಒಳಗ ಕೈ ಹಾಕದ, ಕೈ ಹೊರಗ ಬಂತು. ಶಾಕ್ ಆಯ್ತು. ಪುಸುಂಗನೇ ಎದ್ದು ಕುಂತ. ‘ಕಿಸೆ ಕತ್ತರಿಸಿ ಯಾರು ರೊಕ್ಕ ತಗೊಂಡರಿ’ ಶಂಕ್ರಮ್ಮ ಗಾಭರಿಯಾಗಿ ‘ನಿಮ್ಮ ಚಾಟಿ ಎದೀ ಮ್ಯಾಲಿನ ಕಿಸೆಯೊಳಗ ಐದು ಸಾವಿರ ರೂಪಾಯಿ ಇತ್ತು. ಅದನ್ನ ನಾನೇ ತಗದೀನಿ’ ಅಂದದ್ದೇ ಸಿಟ್ಟಿನಿಂದ ‘ಕಳ್ಳ ಬೋಳಿ ಮಕ್ಕಳೆ, ನನಗೇನೂ ನೆನಪಿಲ್ಲಂತ ಮಾಡೀರೆನೂ.. ಚಾಟೀ ಬಾಜೂ ಒಳಗಿನ ಕಿಸೆಯೊಳಗ ನಲವತ್ತು ಸಾವಿರ ರೂಪಾಯಿ ಇತ್ತು’ ಅಂತ ಚೀರೋದು ಕೇಳಿ ಮಕ್ಕಳೂ ಎದ್ದು ಕುಂತರು. ‘ಇಲ್ಲ.. ಇಲ್ಲ.. ಇದ್ದದ್ದಷ್ಟೆ ನಾವೂ ನೋಡೀವಿ’ ಅಂದರು. ಸಾತಪ್ಪಗ ತಲಿ ಗಿರ್ ಅಂದಂಗ ಆಯ್ತು. ಮಗನ ಕಡೆ ನೋಡಿ ‘ಏಯ್ ಹೋಗಿ ಅವರನ್ನ ಕರಕೊಂಡು ಬಾ’ ಅಂದ. ಮಗ ಮಾದೇವ ‘ಅಪ್ಪಾ, ನೆನಪ ಮಾಡಕೊ, ನೀ ಎಲ್ಲೆಲ್ಲಿ ಹೋಗಿದ್ದಿ..’ ‘ನೀ ಮೊದಲ ಹೋಗು, ಅವರನ್ನ ಕರಕೊಂಡು ಬಾ.. ನಂದೇ ತಿಂದು.. ಕುಡದು ನನಗೇ..’ ಶಂಕ್ರಮ್ಮ ಗಂಡಗ ‘ಸಿಟ್ಟ ಬ್ಯಾಡ ಚಂದಗೇ ಕೇಳ್ರಿ’ ಅಂದಳು. ರಂಗಪ್ಪ, ಚನಬಸು, ಕರಿಸಿದ್ದಪ್ಪ ಅಡ್ರಾಸಿ ಓಡಿ ಬಂದರು. ‘ಕಾಕಾ ಏನಾಯ್ತು..?’ ‘ಆಗೋದೇನು..? ಅಂಗಿ ಒಳಗಿನ ಬಾಜೂ ಕಿಸೆ ಕತ್ತರಿಸಿ ರೊಕ್ಕ ತಗೊಂಡಾರ, ಯಾರು ತಗೊಂಡೀರಿ ಖರೆ ಹೇಳರಿ’ ‘ಕಾಕಾ ಯಾವ ದೇವರ ಗುಡಿ ಹೋಗು ಅಂತೀದಿ ಹೋಗ್ತಿವಿ. ಮಕ್ಕಳ ಮ್ಯಾಲ ಆಣೆ ಮಾಡಿ ಹೇಳ್ತೀವಿ, ಅಂಥಾ ಹೊಲಸ್ ತಿನ್ನೋ ಕೆಲಸಾ ಮಾತ್ರ ಮಾಡಲ್ಲ. ನೀ ರೊಕ್ಕ ಎಲ್ಲಿ ಇಟಗೊಂಡಿದ್ದಿ ಅನ್ನೂದು ಸೈತ ನಾವು ನೋಡಿಲ್ಲ.’ ಈಗಂತೂ ಸಾತಪ್ಪಗ ದಿಕ್ಕ ತಪ್ಪದಂಗೇ ಆಯ್ತು. ಅವರಾರೂ ಕದಿಯೂ ಪೈಕಿ ಅಲ್ಲ ಅನ್ನೂದು ಅಂವಗ ಮೊದಲೇ ಗೊತ್ತಿತ್ತು. ಸೇಟಜಿ ಕಡಿಂದ ದುಡ್ಡ ಇಸಗೊಂಡು ಎಲ್ಲೆಲ್ಲಿ ಹೋದೆ ಅಂತ ನೆನಪು ಮಾಡಕೊಂಡ. ಸೀದಾ ಅಲ್ಲಿಂದ ದಾರೂದ ಅಂಗಡಿಗೆ ಹೋಗಿದ್ದು. ಅಲ್ಲಿ ಬಾಳ ಗದ್ದಲಿತ್ತು ಆ ಗದ್ದಲದೊಳಗ ದಾರೂ ತಗೋಳೋಮುಂದ ಒಂದಿಬ್ಬರು ಇವನನ್ನು ದೂಕಾಡಿಕೊಂಡು ಹೋಗಿದ್ದು ನೆನಪಾಗಿ ‘ರಂಗಪ್ಪ ಘಾತ ಐತಲ್ಲೋ.. ಅವರೇ ಹೊಡದಿರಬೇಕು.. ಆ ಅಂಗಡಿಯೊಳಗ ಅದನ್ನ ತರಾಕ ಹೋದಾಗೇ ಒಬ್ಬಂವ ನನಗ ನುಗುಸಿ ಹೋದ. ಹೊಡದರಲ್ಲೋ… ದುಡ್ಡಲ್ಲ.. ಎರಡು ದುಡ್ಡಲ್ಲ..’ ಅಂತ ಹಣಿಗಿ ಕೈ ಹಚಗೊಂಡು ಕುಂತ. ‘ಯಲಾ ಇವನ. ಎಂಥಾ ಕೆಲಸ ಆಯ್ತೋ ಕಾಕಾ…. ಪಾಪ.. ಆರು ತಿಂಗಳ ದುಡಿಮಿ, ಯಾರೋ ಕಳ್ಳ ಬೋಳಿ ಮಗ ನುಂಗಿ ಹಾಕದನಲ್ಲ…..!’ ಶಂಕ್ರಮ್ಮ ಅಳ್ಕೊಂತ ‘ನಾ ಎಷ್ಟು ಹೇಳದರೂ ನನ್ನ ಮಾತೇ ಕೇಳೂದಿಲ್ಲ. ಒಂದು ದಿವಸ ಕುಡಿಯೂದು ಬಿಟ್ಟರ ಸಾಯತಿದ್ದಿರೆನೂ.. ಈಗ ನೋಡು ತುಸು ರೊಕ್ಕಾ..? ತಿಂದಂಗಲ್ಲ.. ಉಂಡಂಗಲ್ಲ..’ ಸಾತಪ್ಪ ಗ್ವಾಡಿಗಿ ಗರ ಬಡದವರಂಗ ಕುತಗೊಂಡಿದ್ದ. ರಂಗಪ್ಪ ‘ಕಾಕಾ ಆಗಿದ್ದಾಯ್ತು. ತಗೊಂಡಂವ ಕಳ್ಳತನ ಮಾಡಿದ್ದೆ ತಗೋರಿ ಅಂತ ತಿರುಗೆಂತೂ ತಂದು ಕೊಡಲ್ಲ. ಅದು ನಿಂದಿರಲಿಲ್ಲ ಹೋಯ್ತುʼ. ಶಂಕ್ರಮ್ಮ ಸಿಟ್ಟೀಲೇ ‘ಎಷ್ಟು ಹಗರ ಹೇಳ್ತಿ ನೋಡಪಾ.. ನಲವತ್ತು ಸಾವಿರ ರೂಪಾಯಿ.. ಎಲ್ಲರೂ ಚಲೊ ಕೂಡಿರಿ, ನಿಮ್ಮ ಕಾಲಾಗ ನನಗೇ ಸಾಕ್ ಸಾಕಾಗೈತಿ’ ಅನ್ಕೊಂತ ಸೀರಿ ಸೆರಗಲೇ ಕಣ್ಣೀರ ಒರಸಕೊಂತ ಅಡುಗಿ ಮನೀಗಿ ಹೋದಳು. ಸಾತಪ್ಪಗ ದಿಕ್ಕ ತಪ್ಪದಂಗ ಆಯ್ತು. ಅವನ ಉಮೇದು ಒಂದೇ ರಾತ್ರಿಯೊಳಗ ಮಣ್ಣ ಪಾಲಾದಂಗಿತ್ತು. ಮಾತು ಸತ್ತವನಂಗ ಸುಮ್ಮ ಒಂದು ಕಡಿ ಮೂಲ್ಯಾಗ ಕುಂತ. ಜಂತಿ ನೋಡತಾ ಪುಸ್… ಪುಸ್.. ಅಂತ ಬೀಡಿ ಸೇದಿ ಹೊಗಿ ಬಿಡತಿದ್ದ. ಅದನ್ನೇ ಗೇನಸತಾ ಕುಂತಿದ್ದ. ಒಂಥರಾ ಹುಚ್ಚ ಆದಂಗ ಆಗಿದ್ದ. ಎರಡು ಮೂರು ದಿನ ಸಾತಪ್ಪ ಮನಿ ಬಿಟ್ಟು ಹೊರಗೇ ಹೋಗಲಿಲ್ಲ. ಶಂಕ್ರವ್ವ ‘ಆಗಿದ್ದಾಯ್ತು.. ಹಿಂಗ ಊಟಾ ಬಿಟ್ಟು ಕುಂತರ ಹೋದ ದುಡ್ದ ಬರತೈತಾ..? ಹೊಲದ ಕಡಿ ಹೋಗರಿ, ಎರಡು ದಿನ ಆಯ್ತು, ಪಾಪ ಎತಗೊಳಿಗಿ ಹುಲ್ಲ ಸೈತ ಇಲ್ಲ’ ಅಂದಾಗ ಸಾತಪ್ಪ ದೊಡ್ಡದೊಂದು ನಿಟ್ಟುಸಿರು ಬಿಟ್ಟು ನೆಲಕ್ಕ ಬಲಕೈಯೂರಿ, ಹಗೂರಕ ಮೇಲೆದ್ದು ಬಚ್ಚಲ ಕಡೆ ನಡದ. ಮುಖ ತಕ್ಕೊಂಡವನೇ ಎತಗೊಳು ಬಿಚಗೊಂಡು ಹೊಲದಕಡಿ ನಡದಬಿಟ್ಟ.

*****

‘ಸೋರುತಿಹುದು ಮನೆಯ ಮಾಳಿಗೆ ಅಜ್ಞಾನದಿಂದ..’ ಅಂತ ಆ ಹುಡುಗ ಹಾಡತಾ ರೂಮಿಗೆ ಬಂದ.

‘ಲೇ ನಾ ಹೇಳಿದ್ದ ಸಿಗರೇಟೇ ಬ್ಯಾರೆ, ನೀ ತಂದಿದ್ದೇ ಬ್ಯಾರೆ’ ಅಂತ ಮಾದೇವ ಆ ಹುಡುಗಗ ಬೈದ. ಅಂವಾ ವಿಜಯಪುರದ ಲಾಜಿಂಗ್ ಒಂದರಲ್ಲಿ ಕುತ್ಗೊಂಡು ಇಸ್ಪೀಟ್ ಆಡತಿದ್ದ. ಡಿಗ್ರಿಯಲ್ಲಿ ಫೇಲಾಗಿದ್ದನ್ನ ಮನಿಯೊಳಗೂ ಹೇಳಿರಲಿಲ್ಲ. ಅವನ ಜೋಡಿ ಇರೋರೆಲ್ಲಾ ಅವನಂಗೇ ಫೇಲ್ ಕಂಪನಿ. ಲಾಜಿಂಗ್‌ನಲ್ಲಿ ತಪಕ್.. ತಪಕ್.. ಅಂತ ಕಾರ್ಡ್ ಮ್ಯಾಲ ಕಾರ್ಡ್.. ನೋಟ ಮ್ಯಾಲ ನೋಟ ಬೀಳತಿದ್ವು. ನೂರು.. ಐವತ್ತು ಆಡೊ ಮಾದೇವ, ಆ ದಿವಸ ಐನೂರು.. ಸಾವಿರಕ್ಕ ಮುಟ್ಟಿದ್ದ. ಆ ಹುಡುಗ ಆವಾಗಾವಾಗ ಚಾ.. ಸಿಗರೇಟು.. ಡ್ರಿಂಕ್ಸ್ ತಂದು ಕೊಡತಿದ್ದ. ಒಬ್ಬ ಗೆದೀತಿದ್ದ ಐದು ಮಂದಿ ಸೋಲತಿದ್ದರು. ಆ ದಿನ ಗೆದ್ದವನು ಮರುದಿನ ಸೋತಿರತ್ತಿದ್ದ. ಹಂಗಾಗಿ ಅಲ್ಲಿದ್ದವರೆಲ್ಲಾ ಬಹುತೇಕವಾಗಿ ಸೋತವರೇ ಹೊರತು ಗೆದ್ದವರಲ್ಲ. ಅವರಿಗೆ ನಿನ್ನೆಯ ಖಬರಿಲ್ಲ.. ನಾಳಿನ ಹಂಗಿಲ್ಲ.. ಅವರೆಲ್ಲಾ ಒಂಥರಾ ಕೇಡುಗಾಲದ ಕಾಡು ಕುದುರೆಗಳ ಥರಾ, ಓಡಿದ್ದೇ ಓಡಿದ್ದು.. ಮದುವೆಗೋ.. ಮಸಣಕೋ.. ಯಾವುದೂ ತಿಳಿದಿಲ್ಲ..ಕಡೆಗೂ ಹೊರಳಿ ನೋಡದೇ ಓಡಿದ್ದಷ್ಟೇ ಖರೆ. ಉಳಿದದ್ದೆಲ್ಲಾ ಸುಳ್ಳು.

ಡಾ.ಎಸ್.ಬಿ.ಜೋಗುರ
ಈ ಕತೆ ನನಗಿಷ್ಟವಾಗಲು ಕಾರಣವೆಂದರೆ ಈ ಕತೆಯನ್ನು ನಾನು ಬರೆದೆ ಎನ್ನುವುದಕ್ಕಿಂತಲೂ ಈ ಕತೆಯೇ ನನ್ನಿಂದ ಬರೆಯಿಸಿಕೊಂಡಿತು ಎನ್ನುವುದು ಹೆಚ್ಚು ಸೂಕ್ತ. ಕೆಲವು ಕತೆಗಳು ಬರೆಯಲ್ಪಡುತ್ತವೆ, ಮತ್ತೆ ಕೆಲವು ಬರೆಯಿಸಿಕೊಳ್ಳುತ್ತವೆ. ಇದು ಎರಡನೆಯ ಪ್ರಕಾರಕ್ಕೆ ಸೇರುತ್ತದೆ. ಕತೆಗಳನ್ನು ಬರೆಯಬೇಕೆಂದು ತೀರ್ಮಾನಿಸಿ ಬರೆಯುವುದಕ್ಕೂ ಕತೆಯೊಂದು ತಾನೇ ಬರೆಯಿಸಿಕೊಳ್ಳುವದಕ್ಕೂ ಅಂತರಗಳಿವೆ. ಬರೆಯುವ ಕ್ರಿಯೆಯಲ್ಲಿ ಒಂದು ಬಗೆಯ ಯಾಂತ್ರಿಕತೆಯಿದ್ದರೆ, ಬರೆಯಿಸಿಕೊಳ್ಳುವ ಕ್ರಿಯೆಯಲ್ಲಿ ಸಹಜತೆಯಿದೆ. ಸಿಜೇರಿಯನ್ ಹೆರಿಗೆ ಮತ್ತು ಸಹಜ ಹೆರಿಗೆಯ ನಡುವಿನ ಅಂತರದಂತೆ. ಈ ಕತೆ ತಾನೇ ತಾನಾಗಿ ಕತೆಗಾರನ ಬೆನ್ನಿಗೆ ಬಿದ್ದು ಬರೆಯಿಸಿಕೊಂಡ ಕತೆ. ಹೀಗಾಗಿ ನನಗೆ ಇದು ಇಷ್ಟವಾದ ಕತೆ