ಅವಳು ಚಡಪಡಿಸಿದಳು. ಮುಷ್ಠಿ ಬಿಗಿ ಹಿಡಿದಳು. ಉಗಿದು ಅವನನ್ನು ಓಡಿಸುವುದೋ, ಅಥವಾ ಕಿರುಚಿಕೊಳ್ಳುವುದೋ ಗೊತ್ತಾಗಲಿಲ್ಲ. ಸುಮ್ಮನೆ ನಿರ್ಲಕ್ಷಿಸಿ ನಿಂತರೆ ಹೇಗೆ, ಯೋಚಿಸಿದಳು. ಅವನು ಇದಾವುದರ ಪರಿವೆಯೆ ಇಲ್ಲದಂತೆ ಬಜ್ಜಿ ತಿನ್ನುತ್ತಲೆ ಇದ್ದ. ಅವಕಾಶ ಸಿಕ್ಕಂತೆಲ್ಲ ಅವನು ಹತ್ತಿರ ಸರಿಯುತ್ತಿರುವುದು ಅವಳಿಗೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ದೇವರ ಮೇಲೆ ಭಾರ ಹಾಕಿ ಮಗ ಬರುವವರೆಗೆ ಕಾಲ ತಳ್ಳಿದರಾಯಿತು ಎಂದು ನಿರ್ಧರಿಸಿ ಸುಮ್ಮನೆ ನಿಂತಳು. ಅತ್ತ ಹುಡುಗ ಓಡುತ್ತಲೆ ಇದ್ದ. 
“ನಾನು ಮೆಚ್ಚಿದ ನನ್ನ ಕತೆ”ಯ ಸರಣಿಯಲ್ಲಿ ಮಧುಸೂದನ ವೈ. ಎನ್. ಬರೆದ ಕತೆ “ಬೋಣಿ”

ಅವಳು ಸಾಯಂಕಾಲ ನಾಲಕ್ಕು ಗಂಟೆಗೆ ರಿಂಗ್‌ರೋಡಿನ ಪಕ್ಕದಲ್ಲಿ ತನ್ನ ಗಾಡಿ ತಂದು ನಿಲ್ಲಿಸಿದಳು. ಎಳನೀರು ಮಾರುವವನು ಬೀಡಿ ಹೊಸಕಿ ಗಾಡಿಯಿಂದ ಸ್ಟವ್ ಇಳಿಸಿಕೊಟ್ಟ. ಬಾಣಲೆಯನ್ನು ಸ್ಟವ್ ಮೇಲೆ ಕೂರಿಸಿದವಳು, ಟಿನ್ ಕ್ಯಾನಿನಿಂದ ಬಾಣಲೆ ಕಂಠ ಮಟ್ಟ ಎಣ್ಣೆ ಸುರಿದು ಸ್ಟವ್ ಹಚ್ಚಿ ಉರಿ ಸಣ್ಣ ಮಾಡಿದಳು. ಮಗ ಚೇರುಗಳನ್ನು ಮುಸುರೆ ಬಕೆಟ್ಟನ್ನು ಕೆಳಗಿಳಿಸಿ ನೀರಿನ ಕ್ಯಾನಿನ ನಲ್ಲಿ ತಿರುವಿದ. ಬಕೆಟ್ಟು ತುಂಬಿತು. ಅವಳು ದೊಡ್ಡ ಬೇಸನ್ನಿನಲ್ಲಿ ಕಡಲೆ ಹಿಟ್ಟು ನೀರು ಬೆರೆಸಿ ಕಲಸಲಾರಂಭಿಸಿದಳು. ಮಗ ಚಾಕು, ಈರುಳ್ಳಿಗಳನ್ನು ಹಿಡಿದು ಅಮ್ಮನ ಪಕ್ಕದಲ್ಲಿ ಆಸೀನನಾದ. ಕೆಲವೇ ಕ್ಷಣಗಳಲ್ಲಿ ಅವನ ಕಣ್ಣ ತುಂಬ ನೀರು. ಮೂಗಿನಲ್ಲಿ ಜಲಧಾರೆ. ಆಕೆ ನಸುನಕ್ಕು ಮೆಣಸಿನಕಾಯಿಯ ಕವರ್ರನ್ನು ಅವನ ಮುಂದಿಟ್ಟಳು. ಅಷ್ಟು ದೊಡ್ಡ ದೊಡ್ಡ ಮೆಣಸಿನಕಾಯಿಗಳನ್ನು ಅರ್ಧಕ್ಕೆ ಸರಿಯಾಗಿ ಸೀಳುವುದು ಅವನಿಗೆ ಮೋಜೆನಿಸಿತು. ಅದಕ್ಕೆ ಈರುಳ್ಳಿ ಕತ್ತರಿಸುವಷ್ಟು ತಿಣುಕಬೇಕಿರಲಿಲ್ಲ.

ಗರಿ ಗರಿ ಮೆಣಸಿನಕಾಯಿ ಬಜ್ಜಿಗಳು ಎಣ್ಣೆ ಮೇಲೆ ತೇಲುತ್ತ ಗುಳ್ಳೆನೊರೆ ಉಗುಳುತ್ತ ಸೊಳ ಸೊಳ ಸದ್ದು ಮಾಡಲಾರಂಭಿಸಿದವು. ಹುಡುಗ ಅವನ್ನೆ ತದೇಕ ಚಿತ್ತದಿಂದ ನೋಡುತ್ತಿದ್ದ. ಅಮ್ಮ ಬೋಣಿ ಆಗಲಿ ಎಂದಳು. ಹುಡುಗ ಆಗಲಿ ಎಂದು ತಲೆ ಆಡಿಸಿದ. ಪ್ರತಿದಿನವೂ ಬೋಣಿ ಯಾರು ಮಾಡುತ್ತಾರೆ, ಅಂದಿನ ವ್ಯಾಪಾರ ಎಷ್ಟಾಯಿತು ಎಂಬುದನ್ನು ಅವಳು ತಾಳೆ ಹಾಕುತ್ತಾಳೆ. ವ್ಯಾಪಾರ ಶುರು ಮಾಡಿ ಎರಡು ವರ್ಷ ಕಳೆದಿದೆ. ಇಂದಿಗೂ ಒಂದು ನಮೂನೆಯನ್ನು ಗ್ರಹಿಸಲಿಕ್ಕೆ ಅವಳಿಗೆ ಸಾಧ್ಯವಾಗಿಲ್ಲ, ಒಬ್ಬರನ್ನು ಬಿಟ್ಟು. ಅವರು ರಿಟಾಯರ್ಡ್ ಸ್ಕೂಲ್ ಮೇಷ್ಟ್ರು. ಇಲ್ಲೇ ಒಂದು ಕಿಲೋಮೀಟರ್ ಒಳಗೆ ಹೋದರೆ ಅವರ ಮನೆ. ಚೂಪು ಮೂತಿಯ ಕೊಡೆ ಅವರ ನಿತ್ಯ ಸಂಗಾತಿ. ಆ ಸ್ಥಳ ಒಂದಾನೊಂದು ಕಾಲದಲ್ಲಿ ಹಳ್ಳಿಯಾಗಿತ್ತಂತೆ. ಆ ಹಳ್ಳಿಯ ಶಾಲೆಯಲ್ಲಿ ಅವರು ಮೇಷ್ಟ್ರಾಗಿದ್ದರಂತೆ. ಅವರಪ್ಪನಿಗೆ ಸುಮಾರಾಗೆ ಜಮೀನಿತ್ತಂತೆ. ಓದಿದ್ದು ಏಳನೆ ತರಗತಿಯಾದರೂ ಆಗೆಲ್ಲ ಸರಕಾರದವರು ಕರೆದು ಕೆಲಸ ಕೊಡುತ್ತಿದ್ದರಿಂದ ಇವರು ಮೇಷ್ಟ್ರುಗಿರಿಗೆ ಇಳಿದರಂತೆ. ಇವತ್ತಿಗೂ ಹಳೆ ಓಣಿಗಳನ್ನು ಹೊಕ್ಕರೆ ಅಲ್ಲೆಲ್ಲ ಅವರು ಚಿರಪರಿಚಿತ. ಅವರ ಸಮಕಾಲೀನರೆಲ್ಲ ಬಹುತೇಕ ನಗರದ ಗಾಳಿಗೆ ಸಿಲುಕಿ ಧೂಳಿಪಟರಾಗಿರುವರು. ಒಂದಿಬ್ಬರು ಮಾತ್ರ ಚಾಣಾಕ್ಷತೆಯಿಂದ ವಿಧಾನಸೌದದಲ್ಲಿ ಸೀಟು ಪಡೆದಿರುವರು.

ಮೇಷ್ಟ್ರು ಹರಟೆ ಲಹರಿಯಲ್ಲಿರುವಾಗ ಹಲ್ಲಿಲ್ಲದ ದವಡೆಯಲ್ಲಿ ಸುಡು ಸುಡು ಬಜ್ಜಿಗಳನ್ನು ಹೊರಳಾಡಿಸುತ್ತ ಇವನ್ನೆಲ್ಲ ನೆನಪಿಸಿಕೊಳ್ಳುತ್ತಾರೆ. ಅಲ್ಲಿ ಎದ್ದಿರುವ ಯಾವ ಯಾವ ಕಟ್ಟಡಗಳು ತನ್ನ ಜಮೀನಿನ ಮೇಲೆ ನಿಂತಿವೆ ಎಂಬುದನ್ನು ಪಕ್ಕಾ ಗುರುತಿಸುತ್ತಾರೆ. ಮೂರು ಸಾವಿರಕ್ಕೆ ಎಕರೆ ಜಮೀನು ಮಾರಿದ್ದು, ರೌಡಿಗಳು ಬಲವಂತದಿಂದ ಬರೆಸಿಕೊಂಡದ್ದು ಯಾವುದನ್ನು ಮರೆತಿಲ್ಲ. ಸ್ವಂತ ಮನೆ, ಅದಕ್ಕಿದ್ದ ಕಾಂಪೋಂಡು ಉಳಿಸಿಕೊಂಡಿದ್ದರಿಂದ ಮಕ್ಕಳು ಮನೆ ಕೆಡವಿ ಇರುವಷ್ಟು ಜಾಗದಲ್ಲಿ ಮೂರು ಮಹಡಿ ಕಟ್ಟಡ ಕಟ್ಟಿಕೊಂಡಿದ್ದಾರೆ. ಬಾಡಿಗೆ ಬರುತ್ತಿರುವುದರಿಂದ ಅವರ ಜೀವನ ನಿಶ್ಚಿಂತೆಯಿಂದ ಸಾಗಿದೆ.

ಮೇಷ್ಟ್ರು ಕೈ ಬೋಣಿಯಾದ ದಿನಗಳು ಅವಳಿಗೆ ಎಂದು ನಷ್ಟವನ್ನುಂಟು ಮಾಡಿಲ್ಲ. ಕೆಲವು ಸಲ ವ್ಯಾಪಾರ ಭರ್ಜರಿಯಾದರೆ ಕೆಲವು ಸಲ ಸಾಧಾರಣ. ಆದರೆ ಮೇಷ್ಟ್ರು ನಿತ್ಯ ಬರಲಾರರು. ಇಳಿ ವಯಸ್ಸಿನ ನಾಲಿಗೆ ಚಪಲ ಅವರಿಗಿದ್ದರೂ, ಮಕ್ಕಳು ಬಿಡುತ್ತಿರಲಿಲ್ಲ. ಎರಡು ಮೂರು ದಿನ ನಿರಂತರ ಬಜ್ಜಿ ಸೇವಿಸಿದರೆ ಅಜೀರ್ಣವಾಗಿ ಬೇಧಿಯಾಗಿಬಿಡುತ್ತಿತ್ತು. ಕರುಳುಗಳು ಸವೆದಿದ್ದರಿಂದ ತುರ್ತಾಗಿ ಬಂದಾಗ ಹಿಡಿದಿಡಲೂ ಆಗುತ್ತಿರಲಿಲ್ಲ.

ಮೇಷ್ಟ್ರು ದಿನಾಲು ಬರಲಾರರೆಂಬುದು ಅವಳಿಗೆ ಗೊತ್ತು. ಆದರೂ ಇವತ್ತೊಂದು ದಿನ ಮಾತ್ರ ಅವರೇ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾಳೆ. ಮೂರ್ನಾಲ್ಕು ದಿನಗಳಿಂದ ಅವರು ಇತ್ತ ತಲೆ ಹಾಕಿಲ್ಲ. ಕಾರಣ ಜಡಿ ಮಳೆ. ಅವಳ ವ್ಯಾಪಾರವೆಲ್ಲ ಸಂಜೆ ಆರೇಳರಿಂದ ಎಂಟು ಗಂಟೆಯೊಳಗೆ ಜರುಗಬೇಕು. ಅದು ಮಂದಿ ಆಫೀಸು ಮುಗಿಸಿ ಮನೆ ಸೇರುವ ಹೊತ್ತು. ಆ ಹೊತ್ತಲ್ಲೆ ಮಳೆ ಹಿಡಿದು ಬಜ್ಜಿಗಳು ಖರ್ಚಾಗದೆ ಮೆತ್ತಗಾಗಿ ಪ್ರತಿದಿನವೂ ತಿಪ್ಪೆ ಸೇರುತ್ತಿವೆ. ಅವಳಿಗೆ ಒಂದೆರಡು ದಿನಗಳ ನಷ್ಟವನ್ನು ಭರಿಸಿಕೊಳ್ಳುವ ಶಕ್ತಿಯಿದೆ. ಒಂದು ವಾರ? ಗಂಡ ಸೀರೆ ಅಂಗಡಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡು. ತಿಂಗಳಿಗೊಂದೇ ಸಲ ಸಂಬಳ. ಅದೂ ಮನೆ ಬಾಡಿಗೆಗೆ ಸರಿ. ವಿಧಿಯಿಲ್ಲದೆ ಫೈನಾನ್ಸಿಯರಿಂದ ಒಂದು ಸಾವಿರ ಕೈಸಾಲ ಪಡೆದಿದ್ದಾಳೆ. ದಿನದ ಬಡ್ಡಿ. ಇವತ್ತೂ ವ್ಯಾಪಾರ ಕುದುರಲಿಲ್ಲವೆಂದರೆ ಇತ್ತ ಹಾಕಿದ ಬಂಡವಾಳವೂ ನೀರುಪಾಲು. ಅತ್ತ ಬಡ್ಡಿಯೂ ಜಿಗಿಯುವುದು. ನಾಳೆಗೆ ಪುನಃ ಸಾಲ ಕೇಳಬೇಕಾಗುವುದು.

ಎಷ್ಟೋ ಸಲ ಅವಳಿಗೆ ಅನ್ನಿಸಿದ್ದಿದೆ, ಈ ಮಳೆಯೇನಾದರೂ ಶ್ರೀಮಂತರ ಜೊತೆ ಗುಪ್ತವಾಗಿ ಒಡಂಬಡಿಕೆ ಮಾಡಿಕೊಂಡಿದೆಯಾ ಎಂದು. ಅವಳು ಹಳ್ಳಿ ತೊರೆದು ನಗರಕ್ಕೆ ಬಂದದ್ದೆ ಬರಗಾಲದ ಕೃಪೆಯಿಂದ. ಸತತ ಮೂರು ವರ್ಷ ಬಿತ್ತಿದ ಬೀಜ ಬೆಂದ ಮಣ್ಣಿನಲ್ಲೆ ಸೀದುಹೋಗಿ, ಹೇಗೋ ಕೂಲಿ ನಾಲಿ ಮಾಡಿ ಜೀವನ ಸವೆಸಿ, ಕೊನೆಗೆ ಇಲ್ಲೇ ಇದ್ದರೆ ಮಕ್ಕಳೂ ಕೂಲಿಗೆ ಲಾಯಕ್ಕಾಗುತ್ತಾರೆ ಎಂದು ಹೆದರಿ ನಗರ ಸೇರಿದ್ದರು ಗಂಡ ಹೆಂಡತಿ. ಅದೇ ಮಳೆ ಇಲ್ಲಿ ಇನ್ನೊಂದು ಅವತಾರ ತಾಳಿ ಕೊರಳಿಗೆ ಉರುಳಾಗುತ್ತಿರುವುದು ಯಾಕೆಂದು ಅವಳಿಗಿನ್ನೂ ಅರ್ಥಮಾಡಿಕೊಳ್ಳಲಾಗಿಲ್ಲ.

ಇವತ್ತು ಕೂಡ ಅವಳು ಪ್ರಾರ್ಥಿಸುತ್ತಿದ್ದುದು ಮೇಷ್ಟ್ರು ಬರಲೆಂದು. ಬಂದದ್ದು ಮಳೆ. ಬಂದಾಗಿಂದ ಕಾಯುತ್ತಿದ್ದ ಹುಡುಗ ಸಪ್ಪಗಾದ. ಅವನಿಗೆ ಬಿಸಿ ಬಜ್ಜಿಗಳನ್ನು ನೋಡುತ್ತಲೇ ಇರಬೇಕೆನ್ನಿಸುತ್ತಿತ್ತು. ತಾಯಿ ಮಗ ಸೇರಿ ಮಡಚಿದ್ದ ಟಾರ್ಪೆಲನ್ನು ಹರಡಿ ಗಾಡಿಗೆ ಗುಬುರು ಹಾಕಿ ತಾವೂ ಅದರ ಕೆಳಗೆ ಆಶ್ರಯ ಪಡೆದರು. ಅವಳು ಒಂಟಿ ಕಾಲಿನಲ್ಲಿ ಮಳೆಯನ್ನೆ ದಿಟ್ಟಿಸುತ್ತ ನಿಂತಳು. ಹುಡುಗನ ಎಳೆಯ ಕಾಲುಗಳಿಗೆ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಅವನು ಕೂತ. ಬೋಣಿ ಆಗುವವರೆಗು ಅವಳು ಕೂರುವಂತಿಲ್ಲ. ನಿತ್ಯವೂ ಪಾಲಿಸಿಕೊಂಡು ಬಂದಿರುವ ನಿಯಮವದು. ಗಂಟೆಯಾಯಿತು. ಅವಳು ಹಾಗೇ ನಿಂತಿದ್ದಳು. ಮಳೆಗೆ ಕರುಣೆಯೆಂಬುದೆ ಇರಲಿಲ್ಲ. ವಿವೇಕವಂತು ಮೊದಲೇ ಇಲ್ಲ.

*****

ಗಂಟೆಯಾಗಲೆ ಎಂಟು ದಾಟಿತ್ತು. ಹುಡುಗ ಆಗಾಗ್ಗೆ ಟಾರ್ಪೆಲ್ಲನ್ನು ಕಡ್ಡಿಯಿಂದ ತಿವಿಯುತ್ತ ಟಾರ್ಪೆಲ್ಲಿನ ಮೇಲೆ ಶೇಖರಣೆಗೊಳ್ಳುತ್ತಿದ್ದ ನೀರನ್ನು ಹೊರಹಾಕುತ್ತಿದ್ದ. ಹೀಗೆ ಮಳೆ ನೀರು ತುಂಬಿಕೊಂಡಂತೆಲ್ಲ ಕಡ್ಡಿಯಿಂದ ತಿವಿದು ಹೊರಹಾಕುವುದು ಅವನಿಗೆ ಆಟವಾಯಿತು. ಬಜ್ಜಿಯನ್ನು ಮರೆತ. ಅವಳು ಇನ್ನು ನಿಂತೆ ಇದ್ದಳು. ರಸ್ತೆಯ ಎರಡೂ ಬದಿ ಖಾಲಿ ಖಾಲಿ. ಎಳನೀರಿನವನು ಟಾರ್ಪೆಲ್ಲು ಕಟ್ಟಿ ಮನೆ ಸೇರಿದ್ದ. ಅಲ್ಲಲ್ಲಿ ಅಂಗಡಿ ಮುಂಗಟ್ಟುಗಳ ಅಂಗಳದಲ್ಲಿ ಮಂದಿ ಮಳೆಯಿಂದ ರಕ್ಷಣೆ ಪಡೆದಿದ್ದರು. ರಸ್ತೆ ಮೇಲೆ ಕಾರು ಬಸ್ಸು ಲಾರಿಗಳು ಭರ್ರೋ ಎಂದು ಹಾದುಹೋಗುತ್ತಿದ್ದವು. ಸುತ್ತಲು ಜನರಿದ್ದರು ಸಹ ಆ ಪ್ರದೇಶ ನಿರ್ಜನದಂತಿತ್ತು.

ಸ್ವಲ್ಪ ದೂರದಲ್ಲಿದ್ದ ಗುಂಪೊಂದರಿಂದ ಒಬ್ಬ ವ್ಯಕ್ತಿ ಓಡಿ ಬಂದು ಟಾರ್ಪೆಲ್ಲಿನ ಅಡಿ ನಿಂತು ಒಂದು ಪ್ಲೇಟು ಬಜ್ಜಿಯನ್ನು ಆರ್ಡರ್ ಮಾಡಿದ. ಅವಳು ಕೂಡಲೆ ಸ್ಟವ್ವಿನ ಉರಿಯನ್ನು ಹೆಚ್ಚಿಸಿ ಕರಿದ ಬಜ್ಜಿಗಳನ್ನು ಎಣ್ಣೆಯೊಳಗೆ ತೇಲಿಬಿಟ್ಟಳು. ಹುಡುಗ ತಕ್ಷಣ ಕಾರ್ಯಪ್ರವೃತ್ತನಾಗಿ ಒಂದು ಲೋಟ ನೀರು ತುಂಬಿಸಿ ಗಿರಾಕಿಯ ಕೈಗೆ ಕೊಟ್ಟ. ಬೇರೇನು ಮಾಡಬೇಕೆಂದು ತಿಳಿಯದೆ ಪುನಃ ಕುಳಿತುಕೊಂಡ. ಇನ್ನೇನು ಮೊದಲ ಬೋಣಿ ಬಂತಲ್ಲ, ಅವಳು ಖಾನಿ ತಡಕಿದಳು, ಓಹ್! ಮರೆತು ಬಂದಿದ್ದಾಳೆ. ಮಗನ ಕೈಗೆ ಮನೆ ಬೀಗ ಕೊಟ್ಟು ಓಡಿಹೋಗಿ ಖಾನಿಯನ್ನು ತಾ ಎಂದು ಹೇಳಿ ಕಳಿಸಿದಳು.

ಮಳೆ ಚಾಲಕನಿಲ್ಲದ ಯಂತ್ರದಂತೆ ಸುರಿಯುತ್ತಲೆ ಇತ್ತು. ಗಿರಾಕಿ ಬಜ್ಜಿ ಸವಿಯುತ್ತಿದ್ದ. ಟಾರ್ಪೆಲ್ಲಿನ ಮೇಲೆ ನೀರು ತುಂಬಿಕೊಳ್ಳುತ್ತಿತ್ತು. ಗಿರಾಕಿಯ ಪ್ಯಾಂಟಿನ ಜಿಪ್ಪು ತೆರೆದುಕೊಂಡಿದ್ದನ್ನು ಅವಳು ಗಮನಿಸಿದಳು. ಅವನಿಗೆ ಹೇಳಬೇಕೋ ಸುಮ್ಮನಿರಬೇಕೋ ಅವಳಿಗೆ ತಿಳಿಯಲಿಲ್ಲ. ಟಾರ್ಪೆಲ್ಲಿನ ಅಂಚಿನಿಂದ ನೀರು ಸೋರಲಾರಂಭಿಸಿತು. ಗಿರಾಕಿ ಇನ್ನು ಹತ್ತಿರ ಸರಿದ. ಅವಳು ಪುನಃ ಅತ್ತ ನೋಡಿದಳು, ಅವನ ಇಂಗಿತ ಅವಳಿಗೆ ಅರ್ಥವಾಯಿತು.

ಅವಳು ಚಡಪಡಿಸಿದಳು. ಮುಷ್ಠಿ ಬಿಗಿ ಹಿಡಿದಳು. ಉಗಿದು ಅವನನ್ನು ಓಡಿಸುವುದೋ, ಅಥವಾ ಕಿರುಚಿಕೊಳ್ಳುವುದೋ ಗೊತ್ತಾಗಲಿಲ್ಲ. ಸುಮ್ಮನೆ ನಿರ್ಲಕ್ಷಿಸಿ ನಿಂತರೆ ಹೇಗೆ, ಯೋಚಿಸಿದಳು. ಅವನು ಇದಾವುದರ ಪರಿವೆಯೆ ಇಲ್ಲದಂತೆ ಬಜ್ಜಿ ತಿನ್ನುತ್ತಲೆ ಇದ್ದ. ಅವಕಾಶ ಸಿಕ್ಕಂತೆಲ್ಲ ಅವನು ಹತ್ತಿರ ಸರಿಯುತ್ತಿರುವುದು ಅವಳಿಗೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ದೇವರ ಮೇಲೆ ಭಾರ ಹಾಕಿ ಮಗ ಬರುವವರೆಗೆ ಕಾಲ ತಳ್ಳಿದರಾಯಿತು ಎಂದು ನಿರ್ಧರಿಸಿ ಸುಮ್ಮನೆ ನಿಂತಳು.

ತತ ಮೂರು ವರ್ಷ ಬಿತ್ತಿದ ಬೀಜ ಬೆಂದ ಮಣ್ಣಿನಲ್ಲೆ ಸೀದುಹೋಗಿ, ಹೇಗೋ ಕೂಲಿ ನಾಲಿ ಮಾಡಿ ಜೀವನ ಸವೆಸಿ, ಕೊನೆಗೆ ಇಲ್ಲೇ ಇದ್ದರೆ ಮಕ್ಕಳೂ ಕೂಲಿಗೆ ಲಾಯಕ್ಕಾಗುತ್ತಾರೆ ಎಂದು ಹೆದರಿ ನಗರ ಸೇರಿದ್ದರು ಗಂಡ ಹೆಂಡತಿ. ಅದೇ ಮಳೆ ಇಲ್ಲಿ ಇನ್ನೊಂದು ಅವತಾರ ತಾಳಿ ಕೊರಳಿಗೆ ಉರುಳಾಗುತ್ತಿರುವುದು ಯಾಕೆಂದು ಅವಳಿಗಿನ್ನೂ ಅರ್ಥಮಾಡಿಕೊಳ್ಳಲಾಗಿಲ್ಲ.

ಅತ್ತ ಹುಡುಗ ಓಡುತ್ತಲೆ ಇದ್ದ. ಮಳೆಯನ್ನು ಲೆಕ್ಕಿಸದೆ. ಮೋರಿಗಳನ್ನು ಹಾರುತ್ತಿದ್ದ. ಕಾರುಗಳ ನಡುವೆಯೆ ನುಗ್ಗುತ್ತಿದ್ದ. ಕೊನೆಗೂ ಗಿರಾಕಿ ಬಂದದ್ದು ಅವನಿಗೆ ಇನ್ನಿಲ್ಲದ ಖುಷಿ ಕೊಟ್ಟಿತ್ತು. ಒಬ್ಬ ಗಿರಾಕಿ ಬಂದರೆ ಸಾಕು, ಆಮೇಲೆ ಒಬ್ಬರನ್ನು ನೋಡಿ ಇನ್ನೊಬ್ಬರು ಎಂಬಂತೆ ಮಳೆಯನ್ನು ಮರೆತು ಜನ ಬಂದುಬಿಡುತ್ತಾರೆ ಎಂಬುದನ್ನು ಅವನು ಕಂಡುಕೊಂಡಿದ್ದ. ಅವನು ಓಡುವ ಭರದಲ್ಲಿ ಚಡ್ಡಿಯ ಪಿನ್ನು ಕಿತ್ತುಹೋಗಿ, ಒಂದು ಕೈಲಿ ಅದನ್ನು ಹಿಡಿದು ಓಡುತ್ತಿದ್ದ. ತಡಮಾಡಿದರೆ ಗಿರಾಕಿ ಬೇಸರಿಸಿಕೊಂಡು ಬಜ್ಜಿ ಕೊಳ್ಳದೆ ಹೋದರೆ?

ಅವನು ಅಂಗಡಿ ಬಳಿ ಮರಳಿದಾಗ ಅಲ್ಲಿ ಗಿರಾಕಿಯಿರಲಿಲ್ಲ. ಬೋಣಿ ಮಾಡದೆ ಹೋಗಿಬಿಟ್ಟನೋ? ಸುಸ್ತು ಮಾಡಿಕೊಂಡು ಓಡಿ ಖಾನಿ ತಂದದ್ದು ವ್ಯರ್ಥವಾಯಿತಲ್ಲ? ಟಾರ್ಪೆಲ್ಲಿನ ಕೆಳಗೆ ಅಪ್ಪ ಕುಳಿತಿದ್ದ. ಇಬ್ಬರ ಮುಖಗಳು ಗಂಟಿಕ್ಕಿಕೊಂಡಿದ್ದುದು ಯಾಕೆಂದು ಅವನಿಗೆ ಅರ್ಥವಾಗಲಿಲ್ಲ. ಬಜ್ಜಿ ತಿಂದು ಬಿಸಾಕಿದ ಅವಶೇಷಗಳು ಕಂಡವು. ಬಹುಶಃ ಅಪ್ಪ ಚಿಲ್ಲರೆ ಕೊಟ್ಟಿರಬೇಕು ಎಂದೆಣಿಸಿ ಹುಡುಗ ತಟ್ಟೆಗೆ ಕೈಹಾಕಿ ಎರಡು ಬಜ್ಜಿ ಎತ್ತಿಕೊಂಡ.

ತಟ್ಟೆ ತುಂಬ ಬಜ್ಜಿಗಳು ಉಳಿದುಕೊಂಡಿದ್ದವು. ಮಳೆ ನಿಂತಿತ್ತು. ಜನರೆ ಇರಲಿಲ್ಲ. ಗಂಡ ಹೆಂಡತಿ ಟಾರ್ಪೆಲ್ಲು ಮಡಚಿಕ್ಕಿ ಗಾಡಿಯನ್ನು ರಸ್ತೆಗಿಳಿಸಿದರು. ಅವಳಿಗೆ ಮನೆಗೆ ಬರಿಗೈಲಿ ಹೋಗುವುದೂ ಒಂದೆ, ಯಾವುದಾದರೂ ಲಾರಿಗೆ ತಲೆಕೊಡುವುದೂ ಒಂದೆ ಎನಿಸಿತ್ತು. ಯೋಚಿಸುತ್ತಿದ್ದವಳು ಗಾಡಿಯನ್ನು ಹಿಂದೆ ತಿರುಗಿಸಿ, ಒಂದು ಕಿಲೋಮೀಟರು ದೂರದಲ್ಲಿದ್ದ ಬಾರಿನ ಎದುರು ನಿಲ್ಲಿಸಿದಳು. ಗಂಡ ಬಾರಿನೊಳಗೆ ತೂರಿಕೊಂಡ. ಅವಳು ಬಜ್ಜಿಗಳನ್ನು ಮಾರುವುದರಲ್ಲಿ ಮುಳುಗಿದಳು. ಹುಡುಗನಿಗೆ ತಟ್ಟೆ ಎತ್ತುವುದು, ನೀರು ಕೊಡುವುದು? ಕೈತುಂಬ ಕೆಲಸ. ಇದರ ನಡುವೆ ಅವನಿಗೆ ಹೊಸದೊಂದು ಜವಾಬ್ದಾರಿಯೂ ದೊರಕಿತು. ದೂರದಲ್ಲಿದ್ದ ಜೀಪಿನ ಬಳಿ ತೆರಳಿ ತಾಯಿ ಕೊಟ್ಟಿದ್ದ ನೋಟನ್ನು ಅವರ ಕೈಗಿತ್ತು ಬಂದ. ಇಂತಹ ಮಹತ್ ಕಾರ್ಯವನ್ನು ತನ್ನ ಮೇಲೆ ಹೊರಿಸಿದ್ದು, ತಾನು ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದು, ಹುಡುಗನಿಗೆ ತಾನು ದೊಡ್ಡವನೆನಿಸಿತು.

*****

ಸಮಯ ಎಷ್ಟಾಗಿರಬಹುದು? ಹುಡುಗನಿಗೆ ಇದ್ದಕ್ಕಿದ್ದಂತೆ ಎಚ್ಚರವಾಗಿತ್ತು. ಏನೋ ಗಲಾಟೆ. ಮನೆಯ ವಸ್ತುಗಳೆಲ್ಲವು ಚೆಲ್ಲಾಪಿಲ್ಲಿಯಾಗಿದ್ದವು. ಅಪ್ಪ ಕುಡಿದು ಬಂದಿದ್ದ. ಅಮ್ಮ ಮೂಲೆಯಲ್ಲಿ ಕುಳಿತಿದ್ದಳು. ಮನೆ ಎಂದರೆ ನಾಲಕ್ಕೆ ಮೂಲೆಗಳು. ಒಂದು ಮೂಲೆ ಅಡಿಗೆ ಮನೆ. ಒಂದು ಮೂಲೆ ಚಾಪೆ ಹಾಸಿಗೆಗಳಿಗೆಂದು. ಒಂದರಲ್ಲಿ ಗುಡಿಸಿದ ಕಸ. ಇನ್ನೊಂದರಲ್ಲಿ ಟ್ರಂಕುಗಳನ್ನು ಚೀಲಗಳನ್ನು ಒಟ್ಟಲಾಗಿತ್ತು. ಅದರಲ್ಲೀಗ ಎರಡು ಟ್ರಂಕುಗಳು ಇಳಿದು ನಡುಮನೆಗೆ ಬಂದಿದ್ದವು. ಯಾರು ಹೊರಟಿದ್ದಾರೆ? ಎಲ್ಲಿಗೆ ಹೊರಟಿದ್ದಾರೆ? ಹುಡುಗನಿಗೆ ಗಾಬರಿ. ಹಿಂದೆ ಅಮ್ಮ ಮನೆ ಬಿಟ್ಟು ಹೊರಟ ಪ್ರಸಂಗಗಳು ನೆನಪಾದವು.

“ನೀನು ಬರ್ತಿಯೋ ಬರಲ್ವೋ?”, ಅಪ್ಪ ಕೇಳುತ್ತಿದ್ದ.
“ಬರಲ್ಲಾಂದರೆ ಬರಲ್ಲ”, ಅಮ್ಮನ ಉತ್ತರ.
“ಇಷ್ಟೆಲ್ಲ ಆದರೂ ಬರಲ್ಲ ಅಂತೀಯಲ್ಲ, ಮೂರು ಬಿಟ್ಟವಳಲ್ಲವ ನೀನು?”
“ಅಲ್ಲೋಗಿ ಏನು ಗೆಣಸು ತಿಂತೀರಿ?”,
“ಕೂಲಿ ಮಾಡಿ ತಿನ್ನಾಣ. ಮೈಮಾರಿ ಬದುಕೋದು ಬೇಕಿಲ್ಲ”
“ಅಂಗಂತ ನಾ ಹೇಳುದ್ನ.”

ಎಷ್ಟು ಹೊತ್ತಿನಿಂದ ಜಗಳವಾಡುತ್ತಿದ್ದಾರೆ? ಬಹುಶಃ ಮಲಗಿಯೆ ಇಲ್ಲ ಇಬ್ಬರು. ತನಗಂತೂ ಕುಂತು ನಿಂತು ಗಾಡಿ ತಳ್ಳಿ ಸಾಕಾಗಿ ಬಂದ ತಕ್ಷಣ ನಿದ್ದೆ ಅಮರಿಕೊಂಡಿತು. ಸೀರೆ ಅಂಗಡೀಲೆ ಕೆಲಸ ಮಾಡಿದರೂ ಒಂದು ಸೀರೆ ಕೊಡಿಸಕಾಗಿರದಿದ್ದುದು, ಸೀರೆ ಅಂಗಡಿ ಮಾಲೀಕರನ್ನೆ ಸಾಲ ಕೇಳಿ ಚೆನ್ನಾಗಿ ಬೈಸಿಕೊಂಡಿದ್ದುದು, ಈಗ ಇದು? ಇದು ಅಂದರೆ ಅದೇನು? ಅಪ್ಪ ತಾನೆಷ್ಟು ರೋಸಿಹೋಗಿದ್ದೇನೆ ಎಂದು ಲೆಕ್ಕ ಕೊಡುತ್ತಿದ್ದ. ಅಮ್ಮನದು ಎಲ್ಲದಕ್ಕು ಒಂದೇ ಮರುಪ್ರಶ್ನೆ, ಹಳ್ಳಿಗೆ ಹೋಗಿ ಏನು ಮಾಡುವುದು ಅಂತ. ಕೂಲಿ ಮಾಡುವುದು ಅವಳಿಗೆ ಸುತರಾಂ ಇಷ್ಟವಿಲ್ಲ. ಕೆಲವು ಸಲ ವಾರಾನುಗಟ್ಟಲೆ ಕಾಸಿನ ಮುಖವನ್ನೇ ನೋಡುವುದಿಲ್ಲ. ಲಾಭವೋ ನಷ್ಟವೋ ವ್ಯಾಪಾರ ಅಂದರೆ ಯಾವಾಗಲೂ ಕೈಯಲ್ಲಿ ಕಾಸು ಆಡುವ ಉದ್ಯೋಗ. ಹಾಗಂತ ಈ ಪಟ್ಟಣದ ಕೊಡಲಿಗೆ ತಲೆ ಕೊಡಬೇಕೆ? ಅಪ್ಪನ ಪ್ರಶ್ನೆ. ಯಾರ ವಾದದಲ್ಲೂ ಸುಳ್ಳಿಲ್ಲ.

ಗಿರಾಕಿಯೆ ಇದಕ್ಕೆಲ್ಲ ಕಾರಣ ಎಂಬುದು ಹುಡುಗನಿಗೆ ನಿಧಾನವಾಗಿ ಇವರ ವಾಕ್ ಸಮರದ ಮೂಲಕ ತಿಳಿಯಿತು. ಆ ಘನಂದಾರಿಯ ಕೃತ್ಯ ಏನೆಂಬುದೂ ಪಟ್ಟಣದ ಹುಡುಗರ ಸಂಗದಿಂದ ದೊರೆತ ಜ್ಞಾನದಿಂದ ಅರ್ಥವಾಯಿತು. ಅವರ ಕೂಗಾಟ ತಾರಕಕ್ಕೇರಿ, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಹುಡುಗ ಧಿಗ್ಗನೆ ಎದ್ದು ಕುಳಿತ. ಗಂಡ ಹೆಂಡತಿ ಪೆಚ್ಚಾದರು.

“ನೀ ಬರದಿದ್ರೇನು ನನ್ ಸ್ಯಾ*. ನಂಗೆ ನನ್ ಮಗ ಅವ್ನೆ”, ತಂದೆ ಮಗನನ್ನು ಹೆಗಲ ಮೇಲೆ ಎತ್ತಿಕೊಂಡ. ಕುಡಿದ ಅಮಲಿನಲ್ಲಿ ತಟ್ಟಾಡುತ್ತಿದ್ದರಿಂದ ಎಲ್ಲಿ ಬೀಳಿಸಿಬಿಡುವನೋ ಎಂದು ಹುಡುಗನಿಗೆ ದಿಗಿಲಾಗಿ ಕಣ್ಣಿಗಂಟಿದ್ದ ನಿದ್ದೆಯೂ ಓಡಿಹೋಯಿತು. ನಶೆಯಿಲ್ಲದ ಅಪ್ಪ ಯಾವಾಗಲೂ ಗರಂ ಆಗಿರುತ್ತಿದ್ದರಿಂದ ಹುಡುಗನಿಗೆ ಕುಡಿದ ತಂದೆ ಬಹಳ ಹಿತವೆನಿಸುತ್ತಿದ್ದ.

“ಯಾಕೆ? ನಂಗು ಮಗ ಅಲುವ ಅವ್ನು. ನೀವು ಹೋಗದಾದ್ರೆ ಹೋಕ್ಕಳಿ. ಹುಡುಗನ್ನ ಮಾತ್ರ ನಾನು ಕಳಿಸಕಿಲ್ಲ”, ತಾಯಿ ಮಗನನ್ನು ಕಿತ್ತುಕೊಳ್ಳಲು ಧಾವಿಸಿದಳು. ತಂದೆ ಒಂದು ಕೈಲಿ ಟ್ರಂಕು ಹಿಡಿದು ಇನ್ನೊಂದು ಕೈಲಿ ಮಗನನ್ನು ಹಿಡಿದು ಬಿರಬಿರನೆ ಮನೆಯಿಂದ ಹೊರಗೆ ನಡೆದ. ಅವಳು ಅವನನ್ನು ಹಿಂಬಾಲಿಸಿದಳು.

ಬೀದಿ ದೀಪಗಳು ಹಳದಿ ಬೆಳಕನ್ನು ಚಿಮ್ಮಿಸುತ್ತಿದ್ದವು. ಬೆಳಕಿನ ಪ್ರಜ್ವಲತೆಯಿಂದ ತೇವದ ರಸ್ತೆ ಹೊಳೆಯುತ್ತಿತ್ತು. ವಿಕಲಾಂಗ ಮರಗಳು ರೋದಿಸುತ್ತಿದ್ದವು. ಕತ್ತಲೆಂಬುದು ಸುತ್ತ ಮುತ್ತಲಿನ ಮನೆಗಳ ಒಳಗೆ ಅವಿತುಕೊಂಡಿತ್ತು. ತಂದೆ ಹುಡುಗನನ್ನು ಟ್ರಂಕನ್ನು ಬ್ಯಾಲೆನ್ಸು ಮಾಡಲು ಹರಸಾಹಸ ಪಡುತ್ತಿದ್ದ. ಅವಳಿಗೆ ಹೋದರೆ ಹೋಗಲಿ ಎಂಬ ದಿಟ್ಟತನ ಒಂದು ಕಡೆ. ಹೋಗಿಬಿಟ್ಟರೆ ಒಂಟಿಯಾಗಿಬಿಡುವ ಆತಂಕ ಇನ್ನೊಂದು ಕಡೆ. ಗಂಡನ ಕೈ ಹಿಡಿದು ಜಗ್ಗುತ್ತಿದ್ದಳು. ಅವರಿಬ್ಬರ ಎಳೆದಾಟದಲ್ಲಿ ಹುಡುಗ ಜಾರಿ ಜಾರಿ ಹೋಗುತ್ತಿದ್ದ. ಇರುಳು ಗಪ್ ಚುಪ್ ಎನ್ನದೆ ನಿಶಬ್ಧವಾಗಿ ರಂಪಾಟವನ್ನು ಆಲಿಸುತ್ತಿತ್ತು. ತನ್ನ ಸಹಪಾಠಿಗಳು ಯಾರೂ ಎಚ್ಚರವಾಗದಿರಲಿ ಎಂದು ಹುಡುಗ ಪ್ರಾರ್ಥಿಸುತ್ತಿದ್ದ.

ಎಳೆದಾಟ ನಿಲ್ಲುವಂತೆ ಕಾಣಲಿಲ್ಲ. ಹಗಲು ಬೆನ್ನೇರಿದ್ದ ದಣಿವು ಅವಳ ಸೆರಗು ಹಿಡಿದು ಹಿಂದೆ ಎಳೆಯುತ್ತಿತ್ತು. ಅವಳು ಸೋತು ಮಗನತ್ತ ತಿರುಗಿ “ಮಗಾ ನೀ ನಂ ಜೊತಿನೆ ಇರ್ತಿಯೋ ಅಪ್ಪನ ಕೂಟೆ ಹೋಗ್ತಿಯೋ?” ಎಂದು ಬಿಕ್ಕುತ್ತಲೆ ಕೇಳಿದಳು. ತಂದೆಯೂ ಕೂಡ ಮಗನನ್ನು ಕೆಳಗಿಳಿಸಿ “ನನ್ನ ಜೊತೆ ಬತ್ತೀಯ ಅಲ್ವ ಅಪ್ಪಿ?” ಎಂದು ಗಲ್ಲವನ್ನು ಹಿಡಿದು ಮುದ್ದುಗರೆದ.

ಹುಡುಗ ಕಕ್ಕಾಬಿಕ್ಕಿಯಾದ. ಅವನಿಗೆ ಹಳ್ಳಿಯೆಂದರೆ ಬೆಚ್ಚಗಿನ ಮನೆ. ನಗರವೆಂದರೆ ಬೋಂಡಾ ಬಜ್ಜಿ. ಇಷ್ಟೇ ವ್ಯತ್ಯಾಸ ಗೊತ್ತಿದ್ದು. ಅಪ್ಪ ಬೇಕು ಅಂದರೆ ಅಮ್ಮ ಸಿಟ್ಟಿಗೇಳುತ್ತಾಳೆಂದೂ ಅಮ್ಮ ಬೇಕು ಅಂದರೆ ಅಪ್ಪ ಅಳುತ್ತಾನೆಂದೂ ಏನೊಂದು ಉತ್ತರಿಸಲು ಗಲಿಬಿಲಿಯಾಗಿ ತಾನೇ ಜೋರಾಗಿ ಅಳಲಾರಂಭಿಸಿದ. ಅಷ್ಟರಲ್ಲಿ ಅದೆಲ್ಲಿ ಅಡಗಿತ್ತೋ ಮಾಯಕಾರ ಮಳೆ, ತಟ ತಟನೆ ಸುರಿಯಲಾರಂಭಿಸಿತು.

ಮನುಷ್ಯನ ಹುಟ್ಟು, ಸಾವು, ಅತಿಯಾಗಿ ತಿಂದರೆ ಬೇಧಿ, ಇವನ್ನು ಮಾತ್ರ ಮಳೆಯಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಮಿಕ್ಕಿದ್ದೆಲ್ಲವೂ ಅದರ ಅಡಿಯಾಳುಗಳೆ. ತಾಯಿ ಮಗನನ್ನು ಎತ್ತಿಕೊಂಡಳು. ತಂದೆ ಟ್ರಂಕನ್ನು ಹಿಡಿದ. ಇಬ್ಬರು ತಿರುಗಿ ದಢದಢನೆ ಮನೆಯತ್ತ ಓಡಿದರು.

*****

ರಾತ್ರಿ ಅಷ್ಟೆಲ್ಲ ಮಳೆ ಸುರಿದರೂ ಮುಂಜಾನೆ ವಾತಾವರಣ ಎಂದಿನಂತೆ ತಿಳಿಯಾಗಿತ್ತು. ಧೂಳು ಹಿಡಿದು ಮಸಿ ಮಸಿಯಾಗಿದ್ದ ನಗರ ತೊಳೆದಿಟ್ಟಂತಾಗಿತ್ತು. ಫುಟಪಾತು ಗಜಿಬಿಜಿ. ರಸ್ತೆ ತುಂಬ ವಾಹನಗಳು. ರಸ್ತೆ ಬದಿ ಬೆಳಗಿನ ತಿಂಡಿ ವ್ಯಾಪಾರ ಜೋರು. ತಂಪು ಹವಾ. ಹುಡುಗ ಚಡ್ಡಿ ಹಿಡಿದು ಕೆರೆಯ ಏರಿ ಮರೆಯಲ್ಲಿ ಕಕ್ಕಸು ಮಾಡಲು ತಿಣುಕುತ್ತ ಸಣ್ಣ ಕಡ್ಡಿಯೊಂದನ್ನು ಮುರಿದು ನೆಲದ ಮೇಲೆ ರಂಗೋಲಿ ಬಿಡಿಸುವುದರಲ್ಲಿ ಮಗ್ನನಾಗಿದ್ದ. ಕಾಲುಗಳು ಜವಿ ಹಿಡಿಯುತ್ತಿದ್ದುದರಿಂದ ಆಗಾಗ್ಗೆ ಎದ್ದು ಸ್ಥಳಾಂತರ ಮಾಡುತ್ತಿದ್ದ. ಇತ್ತೀಚೆಗೆ ಸ್ನೇಹಿತರಿಂದ ಸಣ್ಣ ಡಬ್ಬಿಯೊಂದು ಸಂಪಾದಿಸಿದ್ದ. ಆಗಾಗ್ಗೆ ಅದನ್ನು ತೆಗೆದು ಮೂಗಿನ ಬಳಿ ಹಿಡಿದು ಗಾಢವಾಗಿ ಉಸಿರು ಎಳೆಯುತ್ತಿದ್ದ. ಒಂದೊಂದು ಸಲ ಎಳೆದಾಗಲೂ ಮೈಯಲ್ಲಿ ಕರೆಂಟು ಹರಿದಂತಾಗುತ್ತಿತ್ತು.

ಕಳೆದ ರಾತ್ರಿಯ ಘಟನೆ ಮಾಸಿಹೋಗಿತ್ತು. ಪ್ರತಿ ಸಲವೂ ಹೀಗೆಯೆ. ಗಾಯವಾದಾಗ ಏನೋ ಅನಾಹುತ ಆಗಿಬಿಟ್ಟಷ್ಟು ಪ್ರಕ್ಷುಬ್ಧ. ವಾಸಿಯಾದ ಕೂಡಲೆ ಮರೆವು. ಉಳಿಯುವುದು ಗಾಯದ ಕಲೆ ಮಾತ್ರ. ಕೆರೆಯ ನೀರಿನಲ್ಲಿ ಅಂಡನ್ನು ಜಾಲಾಡಿಸಿ ಏರಿ ಹತ್ತಿ ಬಂದ. ಏರಿ ಮೇಲಿನ ಪೊದೆಯೊಳಗಿಂದ ಪುಟ್ಟ ಮೊಲದ ಮರಿಯೊಂದು ಬಂದು ಕಾಲು ಹತ್ತಿತ್ತು. ಕಂದು ಬಣ್ಣದ ಬೆಣ್ಣೆ. ಪಿಳಿ ಪಿಳಿ ಕಣ್ಣು ಬಿಡುತ್ತಿತ್ತು. ಹುಡುಗನಿಗೆ ಬಗ್ಗಿ ಎತ್ತಿಕೊಳ್ಳುವ ಮನಸ್ಸು. ಆದರೆ ಅದು ಎಷ್ಟು ಚೊಕ್ಕಾಗಿ ಅವನ ಬಲ ಮುಂಗಾಲಿನ ಮೇಲೆ ಕುಳಿತಿತ್ತೆಂದರೆ, ಹುಡುಗ ಎಡಗಾಲನ್ನು ಒಂದು ಹೆಜ್ಜೆ ಮುಂದೆ ಊರಿದವನೆ ಫುಟಬಾಲಿನಂತೆ ಮೊಲವನ್ನು ಬಲವಾಗಿ ಗಾಳಿಯಲ್ಲಿ ಒಗೆದ. ಮೊಲ ಚೆಂಡಿನಂತೆ ಹಾರಿ ಕೆರೆಯ ನೀರಿನಲ್ಲಿ ಧೊಪ್ಪನೆ ಬಿತ್ತು. ಅದು ಮುಳುಗುವವರೆಗೂ ನೋಡಿ ಆನಂದಿಸಿ ಮನೆಯತ್ತ ಹೆಜ್ಜೆ ಹಾಕಿದ.

ಮಧುಸೂದನ ವೈ ಎನ್.
ಸಾಮಾನ್ಯವಾಗಿ ನಾನು ಆಫೀಸಿಗೆ ನಡಕೊಂಡು ಹೋಗುತ್ತೇನೆ. ತುಂಬ ತಡವಾದಾಗ, ಮೀಟಿಂಗಿದ್ದಾಗ ಮಾತ್ರ ಬೈಕು ಇಲ್ಲವಾ ಕಾರು ಎತ್ತಿಕೊಳ್ಳುತ್ತೇನೆ. ಮಾರತ್ತಳ್ಳಿ ಸುತ್ತ ಮುತ್ತ ನಿಮಗೆ ಫುಟ್‌ಪಾತುಗಳು ಅಂಗಡಿಗಳಿಂದ ಫುಲ್ಲಾಗಿರುತ್ತವೆ. ಓಡಾಡುವುದು ಕಷ್ಟ. ಹಾಗೆ ಪ್ರತಿದಿನ ಆಫೀಸಿಂದ ಮನೆಗೆ ನಡಕೋಂತ ಬರುವಾಗ ದಾರಿಯಲ್ಲಿ ಹಲವಾರು ತಳ್ಳೋ ಗಾಡಿಗಳು ಎದುರಾಗುತ್ತಿದ್ದವು. ಅವುಗಳಲ್ಲಿ ಒಂದು ಗಾಡಿ ನನ್ನನ್ನು ಕಾಡುತ್ತಿತ್ತು. ಒಂದು ನಡುವಯಸ್ಕ ಹೆಂಗಸು ಬೋಂಡಾ ಬಜ್ಜಿ ಮಾರುತ್ತಿದ್ದಳು. ಜೊತೆಗೊಂದು ಹುಡುಗ. ಕೆಲಸದವನೋ ಮಗನೋ ಗೊತ್ತಿಲ್ಲ. ಬೆಂಗಳೂರಿನ ಮಳೆ ಗೊತ್ತಲ್ಲ, ಅಂತ ಮಳೆಯ ದಿವಸಗಳು ಫುಟ್‌ಪಾತು ಗಜಿಬಿಜಿಯಾಗಿ ಜನ ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಒಂದೋ ಓಡುತ್ತಿದ್ದರು, ಇಲ್ಲವಾ ಎಲ್ಲಾದರೊಂದು ಕಡೆ ನಿಂತುಬಿಡುತ್ತಿದ್ದರು. ಅಂತ ಸಮಯದಲ್ಲಿ ಈ ಬೋಂಡಾ ಬಜ್ಜಿ ಅಂಗಡಿಯ ಹತ್ತಿರ ಒಂದು ನರಪಿಳ್ಳೆಯೂ ಸುಳಿಯುತ್ತಿರಲಿಲ್ಲ. ಕಾರಣ ಅವರ ಬಳಿ ಇದ್ದ ಟಾರ್ಪೆಲ್ಲು ಅವರಿಗೇ ಸಾಕಾಗುತ್ತಿರಲಿಲ್ಲ. ಥಂಡಿಗೆ ಮೆತ್ತಗಾದ ಬೋಂಡಾಗಳು ತಟ್ಟೆ ತುಂಬ ತುಳುಕುತ್ತಿದ್ದವು. ಮನಸ್ಸಿಗೆ ಬೇಜಾರಾಗುತ್ತಿತ್ತು.
ನನಗೆ ಮೀಟರ್ ಬಡ್ಡಿಯ ಬಗ್ಗೆ ಅನುಭವವಿತ್ತು. ನನ್ನ ಸಂಬಂಧಿಯೊಬ್ಬರು “ಕಲೆಕ್ಷನ್” ಗೆಂದು ದಿನಾ ಸಂಜೆ ರಸ್ತೆ ಬದಿ ಅಂಗಡಿಗಳಿಗೆ ಭೇಟಿ ಕೊಡುತ್ತಿದ್ದರು. ಅವರ ಜೊತೆ ನಾನು ಸುತ್ತಿದ್ದೆ. ಈ ಚಿತ್ರಗಳು ಮನಸ್ಸಿನಲ್ಲುಳಿದು ಕತೆಯಾಗಿ ಬೆಳೆಯಿತು. ಕತೆ ಯಾಕೆ ಆಪ್ತವಾಯಿತೆಂದರೆ ಇದು ಎಂದೋ ನೋಡಿದ ಘಟನೆ ನೆನಪಿಸಿಕೊಂಡು ಬರೆದದ್ದಲ್ಲ. ಕಣ್ಣ ಮುಂದೆ ಹಸಿ ಹಸಿಯಾಗಿ ದೃಶ್ಯಗಳು. ಎರಡು ಮೂರು ದಿನಗಳಲ್ಲಿ ಕಲ್ಪನೆಯಾಗಿ ಬಲಿತು ಕಣ್ಣಿಗೆ ಕಟ್ಟಿದಂತೆ ಬರೆಯಲು ಸಾಧ್ಯವಾಯಿತು. ಮತ್ತು ಸಾಧ್ಯವಾದಷ್ಟು ಭಾವನೆಗಳನ್ನು ಶಬ್ಧಗಳ ನಡುವೆ, ನಂತರ, ಅಂತ್ಯದಲ್ಲಿ ಓದುಗನಿಗೆ ಮಾತ್ರ ತಟ್ಟುವಂತೆ ಬಚ್ಚಿಟ್ಟಿದ್ದು. ಅದ್ಯಾವುದೂ ಪೂರ್ವನಿಯೋಜಿತವಲ್ಲ. ಆ ಮಟ್ಟಿಗೆ ಕತೆ ನನ್ನನ್ನು ಆವರಿಸಿತ್ತು.