ನಾನು ಧಡಕ್ಕನೇ ಎದ್ದು ಕೂತೆ. ಆ ಹುಡುಗ ಅಮ್ಮ ಅವಳು ಎದ್ದಳ್ ಎದ್ದಳ್ ಎಂದು ಕೂಗಿಕೊಳ್ತಾ ಓಡಿದ. ಮೈತುಂಬಾ ಬೆವರು ಹರಿಯುತ್ತಿತ್ತು. ಆ ಹುಡುಗಿ, ಎದ್ದೇಳಾ? ಆ ಕಡೆ ಗುಡ್ಡದಲ್ಲಿ ರಾಶಿ ಮುಳ್ಳು ಹಣ್ಣು ಬಿಟ್ಟಿತ್ತು. ನಿನ್ನ ಕರ್ಕಂಡು ಹೋಗಣಾ ಅಂತ್ಹೇಳಿ ಕಾಯ್ತಾ ಕೂತ್ಕಂಡಿದ್ದ್ ಅಂತ್ಹೇಳಿ ನನ್ನ ಕೈ ಹಿಡಿದು ಎಳೆಯತೊಡಗಿದಳು. ಅಷ್ಟರಲ್ಲಿ ಅಮ್ಮಮ್ಮ ಬಂದ್ಬಿಟ್ಟು ಮೈ ಕೈಯಲ್ಲ ಮುಟ್ಟಿ ಜ್ವರ ಬಿಟ್ಟಿದೆ.
‘ನಾನು ಮೆಚ್ಚಿದ ನನ್ನ ಕಥೆʼಯ ಸರಣಿಯಲ್ಲಿ ಅಕ್ಷತಾ ಹುಂಚದಕಟ್ಟೆ ಬರೆದ ಕಥೆ ‘ಸೋರುತಿಹುದು’…

 

ದಸರಾ ರಜೆ ಬಂದ ಕೂಡಲೇ ಅಜ್ಜಿ ಮೊಮ್ಮಗಳ ಸವಾರಿ ಊರೂರು ಸುತ್ತಲು ಹೊರಟುಬಿಡುತ್ತಿತ್ತು. ಅಮ್ಮ, ಅಪ್ಪ ಇಬ್ಬರೂ ಶಾಲೆಯಲ್ಲಿ ಮೇಷ್ಟ್ರಾಗಿರೋದ್ರಿಂದ ರಜೆ ಬಂದಾಗ ಎಲ್ಲಿಗೂ ಹೋಗದೆ ಮನೆಯಲ್ಲೆ ಇರಲು ಇಷ್ಟ ಪಡುತ್ತಿದ್ದರು. ಆದರೆ ಅವರ ಜೊತೆ ಮನೆಯಲ್ಲೆ ಉಳಿದರೆ ರಜೆ ಮುಗಿದು ಶಾಲೆಗೆ ಮರಳಿ ಹೋದಾಗ ರಜೆಯಲ್ಲಿ ಅಜ್ಜಿಮನೆ, ನೆಂಟರ ಮನೆಗೆ ಹೋಗಿಬಂದ ನನ್ನ ಗೆಳತಿಯರು ಅಲ್ಲಿನ ದಿನಗಳನ್ನು ಬಣ್ಣ ಕಟ್ಟಿ ಹೇಳುವಾಗ ನನಗೆ ಹೇಳಿಕೊಳ್ಳಲು ಏನೂ ಇರದೇ ಒಂದು ರೀತಿ ಅನಾಥಭಾವ ಕವಿಯುತ್ತಿತ್ತು. ಆದ್ದರಿಂದ ಅಂಥದೊಂದು ಪಜೀತಿಯಿಂದ ಪಾರು ಮಾಡುವ ದೇವತೆಯಂತೆ ಅಮ್ಮಮ್ಮ ನನಗೆ ಕಾಣುತ್ತಿದ್ದಳು.

ಆದರೆ ಈ ಅವಕಾಶ ದಸರಾ ರಜೆಯಲ್ಲಿ ಮಾತ್ರ. ಬೇಸಿಗೆ ರಜೆಯಲ್ಲಿ ನಮ್ಮ ಸವಾರಿ ಎಲ್ಲೂ ಹೊರಡುತ್ತಿರಲಿಲ್ಲ. ಏಕೆಂದರೆ ಆಗ ಮದುವೆ ಸುಗ್ಗಿ ಆದ್ದರಿಂದ ಅಮ್ಮಮ್ಮನಿಗೆ ಬಾಸಿಂಗದ ಸೀಸನ್. ಬಾಸಿಂಗದಿಂದ ಬಂದ ದುಡ್ಡಿನಲ್ಲಿ ಊರಿಗೆ ಹೋದಾಗ ಅವರಿಗೆ ಸೀರೆ ಕೊಡಬೇಕು, ಇವರಿಗೆ ಕೈಯಲ್ಲಿ ಕೊಟ್ಟು ಬರಬೇಕು ಅಂತ ಯಾರ್ಯಾರೋ ನೆಂಟರ ಹೆಸರಿನಲ್ಲಿ ಅಮ್ಮಮ್ಮ ಉಳಿಸಿಟ್ಟುಕೊಂಡಿರೋಳು.

ಹೋಗುವಾಗ ಇಂಥಲ್ಲಿಗೆ ಹೋಗ್ತಿದೀವಿ ಅಂತೇನು ಅಮ್ಮಮ್ಮ ಮೊದಲೆ ಹೇಳ್ತಿರಲಿಲ್ಲ. ಐದಾರು ನೆಂಟರ ಮನೆಯ ಪಟ್ಟಿ ಕೊಡುವಳು. ಎಲ್ಲ ಅಕ್ಕ ಪಕ್ಕದ ಊರಿನಲ್ಲೋ, ಒಂದು ಊರಿನ ಒಂದೇ ಕಾಪೌಂಡಿನಲ್ಲೋ ಇರುವ ಮನೆಗಳಾಗಿರುತ್ತಿದ್ದವು. ನಿಮ್ಮ ಅಜ್ಜ ಘಟ್ಟದ ಮೇಲಿನ ಈ ಊರಿಗೆ ಹೇಳದೆ ಕೇಳದೆ ಓಡಿ ಬರದಿರುತ್ತಿದ್ದರೆ, ನಾನು, ನಿಮ್ಮಮ್ಮ, ನೀನು ಎಲ್ಲ ಈಗ ಅಲ್ಲೆ ಸಮುದ್ರದ ತಾಜಾ ಮೀನುಸಾರು ಊಟ ಮಾಡಿಕೊಂಡು ಇದ್ದು ಬಿಡಬಹುದಿತ್ತು. ಐಸ್ ಹಾಕಿಕೊಂಡು ಮೂರ್ನಾಲ್ಕು ದಿನದ ನಂತರ ಬರುವ ಬಂಗ್ಡೆ, ಬೈಗೆ ಮೀನಿಗೆ ಕಾದು ನಿಲ್ಲಬೇಕಾದ ದುಸ್ಥಿತಿ ಬರ್ತಿರಲಿಲ್ಲ ಎಂದು ದಿನಕ್ಕೆ ನಾಲ್ಕು ಸರ್ತಿಯಾದರೂ ಹೇಳುವಳು. ಅಜ್ಜನ ಊರು ಬಸ್ರೂರನ್ನು ಅಮ್ಮಮ್ಮ ನಂಗೆ ತೋರಿಸಿದ್ದಳು.

ನಮ್ಮಮ್ಮ ಇನ್ನೂ ಚಿಕ್ಕ ಮಗುವಂತೆ, ಆಗ ಅಜ್ಜ ಅವರಣ್ಣನ ಜೊತೆ ಜಗಳ ಆಡಿಕೊಂಡು ಊರು ಬಿಟ್ಟು ಓಡಿ ಬಂದಿದ್ದಂತೆ, ತಿಂಗಳಾನುಗಟ್ಟಲೆ ಅಜ್ಜ ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿರಲಿಲ್ಲವಂತೆ. ಆಮೇಲೆಷ್ಟೋ ದಿನದ ಮೇಲೆ ಯಾರೋ ಘಟ್ಟದ ಮೇಲೆ ಹೋಗಿ ಬಂದಿದ್ದ ಶೇರೆಗಾರ್ರು ಅಜ್ಜ ಇಲ್ಲಿರುವ ವಿಷಯ ಅವರ ಅಣ್ಣನಿಗೆ ತಿಳಿಸಿದರಂತೆ. ಅದೇ ದಿನ ದೊಡ್ಡಜ್ಜ ಅಮ್ಮಮ್ಮನ ಅಪ್ಪನನ್ನು ಕರೆಸಿ ಇಲ್ಲಿಗೆ ಬರುವಷ್ಟು ಬಸ್ ಚಾರ್ಜು ಅವರ ಕೈಗಿಟ್ಟು ಮಗುವಿನೊಂದಿಗೆ ಅಮ್ಮಮ್ಮನನ್ನು ಕಳಿಸಿದರಂತೆ. ತಮ್ಮನಿಗೆ ಆಸ್ತಿ ಕೊಡೋದು ತಪ್ಪತ್ತಲ್ಲ ಮಗಾ, ನಾನು ಅಲ್ಲೆ ಇದ್ದಿದ್ರೆ ಅಜ್ಜ ಒಂದಷ್ಟು ದಿನ ಬಿಟ್ಟಾದ್ರೂ ವಾಪಾಸ್ ಬರೋರು. ಅದನ್ನು ತಪ್ಪಿಸೋಕೆ ನನ್ನನ್ನೇ ಇಲ್ಲಿಗೆ ಕಳಿಸಿದ್ರು. ಇಲ್ಲಿ ಬಂದ್ರೆ ಥಂಡಿ, ಥಂಡೀ, ವಾರಗಟ್ಟಲೆ ಪುರಸೊತ್ತು ಕೊಡದೇ ಸುರಿಯೋ ಮಳೆ. ಮನೆಯಿಲ್ಲ ಮಠವಿಲ್ಲ. ಬಾಸಿಂಗದ ಕೆಲಸವೊಂದೆ ಕೈ ಹಿಡಿದಿದ್ದು, ಆಮೇಲೆ ಆಸ್ತಿ ಕೇಳಲಿಕ್ಕೆ ಹೋಗಲೂ ಇಲ್ಲ. ಆಸ್ತಿ ಇದ್ದಿದ್ದಾದ್ರೂ ಎಷ್ಟು? ಕೊಡೋ ಮನಸಿದ್ರೆ ಅದ್ರಲ್ಲೇ ಕೊಡಬಹುದಿತ್ತು ಆದರೆ ಅದೇ ಇರಲಿಲ್ಲ. ಅಜ್ಜ ತೀರಿ ಹೋದಾಗಲೂ ಬಂದ್ರು ಹೊರಗಿಂದ ಹೊರಗೆ ಎಲ್ಲ ಕೆಲಸ ಮುಗಿಸಿದ್ರು ಹೋದ್ರು. ಅಷ್ಟೊತ್ತಿಗೆ ನಾನು ಗದ್ದೆ ಕೆಲಸ ಎಲ್ಲ ಕಲಿತಿದ್ದೆ. ಇದ್ದಿದ್ದು ನಾನು, ನಿಮ್ಮಮ್ಮ ಇಬ್ಬರ ಹೊಟ್ಟೆಗೆ ಆಗುವಷ್ಟು ದುಡೀಲಿಕ್ಕೆ ನಂಗೇನೂ ಆಗದ? ಯಾರಿಗೆ ಬೇಕು ಆಸ್ತಿ? ಇಟ್ಕಂಡು ಅವರೇ ಸುಖವಾಗಿರ್ಲಿ ಎಂದೆಲ್ಲ ಶಾಪಾನೋ ವರಾನೋ ಕೊಡ್ತಾ ಹಳೆ ಕಥೆ ಹೇಳುವಳು.

ಆಗುಂಬೆ ಅಥವಾ ಹುಲಿಕಲ್ ಘಾಟಿ ಇಳಿದರೆ ಸಾಕು. ಕನ್ನಡ ಜಿಲ್ಲೆಯ ಪ್ರತಿ ಊರಿನಲ್ಲೂ ಅಮ್ಮಮ್ಮನಿಗೆ ನೆಂಟರಿದ್ದರು. ಉಳಿದುಕೊಳ್ಳುವಂತ ಮನೆಗಳಿದ್ದವು. ಈ ಸರ್ತಿ ಮೊದಲಿಗೆ ಸಿದ್ದಾಪುರದ ದೊಡ್ಡತ್ತೆ ಮನೆಗೆ ಹೋಗೋದು ಅಂತ ಅಮ್ಮಮ್ಮ ಹೇಳಿದ್ಲು. ಆದರೆ ಹೊಸನಗರ ದಾಟುವಾಗಲೇ ನಾನು ಸುಸ್ತಾಗಿ ಅಮ್ಮಮ್ಮನ ತೊಡೆಯ ಮೇಲೆ ಮಲಗಿ ಬಿಟ್ಟೆ, ಮೈ ಕೈ ಬಿಸಿಯಾಗಿತ್ತು. ಸುಸ್ತಾಗಿ ನರಳುತ್ತಿದ್ದೆ. ಅಮ್ಮಮ್ಮ ಯಾವುದೋ ಊರಿನ ಸ್ಟಾಪ್ ಬರುತ್ತಿದ್ದಂತೆ ಏಕಾಏಕಿ ನನ್ನನ್ನು ಇಳಿಸಿಕೊಂಡು ಬ್ಯಾಗು ಸಹಿತ ಇಳಿದೇಬಿಟ್ಟಳು. ಕಂಡೆಕ್ಟರ್ ಕೂಗುತ್ತಲೇ ಇದ್ದ ಸಿದ್ದಾಪುರಕ್ಕೆ ನೀವು ಟಿಕೆಟ್ ಮಾಡಿಸಿದ್ದು ಅಂತ. ನೀನೇನೂ ದುಡ್ಡು ವಾಪಾಸ್ ಕೊಡಬೇಡ, ಈ ಬ್ಯಾಗ್ ಇಳಿಸಿಕೊಡು, ಮಗುವಿಗೆ ಮೈ ಕಾದಿದೆ, ಈ ಸ್ಥಿತಿಯಲ್ಲಿ ಅಲ್ಲಿವರೆಗೆ ಹೋಗಕ್ಕಾಗಲ್ಲ. ಇಲ್ಲೆ ಒಬ್ಬರ ಮನೆ ಇದೆ ಹೋಗ್ತಿವಿ ಎನ್ನುತ್ತಲೇ ನನ್ನ ಎತ್ತಿಕೊಂಡೆ ಇಳಿದಳು.

ಬಿಸಿಲು ಕಾಯುತ್ತಿತ್ತು. ಮಗಾ ಇಲ್ಲಿ ಒಳದಾರಿಯಲ್ಲಿ ನಾಲ್ಕು ಮೈಲು ನಡೆದರೆ ಶಾಂತು ಚಿಕ್ಕಮ್ಮನ ಮನೆ ಸಿಕ್ತದೆ ಅಲ್ಲಿಗೆ ಹೋಗಕ್ಕೆ ಏನಾರೂ ಸಿಕ್ತದ ನೋಡ್ತೀನಿ ಎಂದು ನನ್ನ ಹೊತ್ತುಕೊಂಡ ಸ್ಥಿತಿಯಲ್ಲೇ ಅಲ್ಲಿದ್ದ ಚೌರದ ಶಾಪಿನಲ್ಲಿ ವಿಚಾರಿಸಿದಳು. ಓಹೋ ನೀವು ಡ್ರೈವರ್ ಸುಬ್ರಾಯಣ್ಣನ ಮನೆಗೆ ಹೋಗಬೇಕ? ಕಾಡು ದಾರಿ ಬಿಸಿಲೇನಿಲ್ಲ, ಆದರೂ ಮಗೀಗೆ ಜ್ವರ ಅಂತೀರಿ ಹೇಗೆ ನಡ್ಕಂಡು ಹೋಗ್ತೀರಿ. ಇಲ್ಲೇ ಕೂತ್ಕಳಿ ಅದೇ ದಾರಿಯಾಗೆ ಹೋಗೋ ಆಪೆ ಗಾಡಿಯೊಂದು ಮಿಲ್ಲಿಗೆ ಭತ್ತ ತುಂಬಿಕೊಂಡು ಹೋಗಿದ್ದು ವಾಪಾಸ್ ಬರೋ ಹೊತ್ತು. ನೋಡನಾ ಅದರಲ್ಲಿ ಸಾಧ್ಯ ಆದ್ರೆ ಹೋಗಬಹುದಂತೆ ಎಂದು ಒಂದು ಚಾಪೆ ಹಾಸಿ ಕೂರಿಸಿದ. ಅಮ್ಮಮ್ಮನ ತೊಡೆ ಮೇಲೆ ಹಾಗೆ ನಿದ್ದೆ ಹೋದೆ. ಎಚ್ಚರವಾದಾಗ ನೋಡಿದರೆ ಒಂದು ಮನೆಯಲ್ಲಿದ್ದೆ. ಒಬ್ಬ ಹುಡುಗಿ ಮತ್ತೊಬ್ಬ ಹುಡುಗ ನನ್ನನ್ನೇ ಕಣ್ಣು ಕಣ್ಣು ಬಿಡುತ್ತಾ ನೋಡುತ್ತಿದ್ದರು.

ನಾನು ಧಡಕ್ಕನೇ ಎದ್ದು ಕೂತೆ. ಆ ಹುಡುಗ ಅಮ್ಮ ಅವಳು ಎದ್ದಳ್ ಎದ್ದಳ್ ಎಂದು ಕೂಗಿಕೊಳ್ತಾ ಓಡಿದ. ಮೈತುಂಬಾ ಬೆವರು ಹರಿಯುತ್ತಿತ್ತು. ಆ ಹುಡುಗಿ, ಎದ್ದೇಳಾ? ಆ ಕಡೆ ಗುಡ್ಡದಲ್ಲಿ ರಾಶಿ ಮುಳ್ಳು ಹಣ್ಣು ಬಿಟ್ಟಿತ್ತು. ನಿನ್ನ ಕರ್ಕಂಡು ಹೋಗಣಾ ಅಂತ್ಹೇಳಿ ಕಾಯ್ತಾ ಕೂತ್ಕಂಡಿದ್ದ್ ಅಂತ್ಹೇಳಿ ನನ್ನ ಕೈ ಹಿಡಿದು ಎಳೆಯತೊಡಗಿದಳು. ಅಷ್ಟರಲ್ಲಿ ಅಮ್ಮಮ್ಮ ಬಂದ್ಬಿಟ್ಟು ಮೈ ಕೈಯಲ್ಲ ಮುಟ್ಟಿ ಜ್ವರ ಬಿಟ್ಟಿದೆ. ಜಾಸ್ತಿ ದೂರ ಕರ್ಕಂಡು ಹೋಗ್ಬೇಡಿ, ಒಂದು ಹೋಗಿ ಒಂದು ಆದರೆ ಕಷ್ಟ ಎನ್ನುತ್ತಿದ್ದಂತೆ ನನ್ನ ಅಮ್ಮನ ಹಾಗೆ ಇರುವ ಚೆಂದದ ಹೆಂಗಸು ಬಂದರು. ಅವರ ಸೆರಗಿನಡಿಯಲ್ಲಿ ಆಗ ಕೂಗಿಕೊಳ್ತಾ ಓಡಿ ಹೋದ್ನಲ್ಲ ಆ ಹುಡುಗ.

ನೋಡಿ ದೊಡ್ಡಮ್ಮ ನನ್ನ ಕಷಾಯದ ಎಫೆಕ್ಟ್, ನಾ ಹೇಳಿರ್ಲಿಲ್ಲ ಒಂದು ತಾಸು ಒಳಗೆ ಜ್ವರ ಪೂರ್ತಿ ಇಳಿಯತ್ತೆ ಅಂತ, ಪೂರ್ತಿ ಹುಷಾರಾಯಿತಲ್ಲ. ಇನ್ನು ಮಕ್ಕಳೇ ನೀವು ಇವಳನ್ನ ಕರ್ಕಂಡು ಹೋಗಬಹುದು ಎನ್ನುತ್ತಿದ್ದಂತೆ, `ಮುಂಡೆ ಎಲ್ಲಿ ಸತ್ಯೆ, ನಾನು ಇಲ್ಲಿ ನರಳ್ತ ಬಿದ್ದಿದೀನಿ, ಯಾರ ಜೊತೆ ಪಟ್ಟಾಂಗ ಹೊಡಿತಿದ್ವೇ? ಬಾರೆ, ಒಂದು ಸರ್ತಿ ನನಗೆ ಪೂರ್ತಿ ಹುಷಾರಾಗಿ ದೈವ ಒದಗಿಸಿದರೆ ನಿನ್ನ ಮೂಳೆ ಮುರಿಯಲ್ವೇನೆ ಕಾಯ್ಕಂಡಿರು. ಬಾರೆ, ಮುಂಡೆ ಬಾರೆ ಇಲ್ಲಿ’ ಆ ಕಡೆಯಿಂದ ಕೂಗಾಟ ಕೇಳಿತು. ನಾನು ಬೆಚ್ಚಿಬಿದ್ದೆ, ಶಾಂತು ಚಿಕ್ಕಮ್ಮ ನನ್ನನ್ನು ಹೊರಗೆ ಕರೆದುಕೊಂಡು ಹೋಗುವಂತೆ ಸೂಚಿಸಿದಳು. ಪಕ್ಕದ ಕೋಣೆಯಲ್ಲಿ ಆ ಗಂಡಸಿನ ಕೂಗಾಟ ಮುಂದುವರೆದಿತ್ತು. ಕೆಟ್ಟಾ ಕೊಳಕ ಪದಗಳನ್ನೆಲ್ಲ ಉಪಯೋಗಿಸಿ ಅರಚುತ್ತಿದ್ದ. ಹುಡುಗಿ-ಹುಡುಗ ನನ್ನ ಕೈ ಹಿಡಿದು ಮನೆಯಿಂದ ಹೊರಗೆ ನಡೆಸಿಕೊಂಡು ಹೋದರು. ಮನೆಯ ಎದುರಿಗೆ ದೊಡ್ಡ ಕಪ್ಪು ಬಂಡೆ ಮುಗಿಲಿಗೆ ತಾಕುವಂತೆ ನಿಂತಿತ್ತು. ಸುತ್ತೆಲ್ಲ ದೊಡ್ಡ ಗುಡ್ಡ. ಅಷ್ಟು ಎತ್ತರ ಅಗಲಕ್ಕೆ ಚಾಚಿ ನಿಂತಿರುವ ಬಂಡೆಯನ್ನು ನಾನು ನೋಡೆ ಇರ್ಲಿಲ್ಲ. ಆದರೆ ನನಗೆ ಆ ಗಂಡಸಿನ ಬಯ್ಗಳದ್ದೆ ಭಯ. ಯಾರು ಅದು ಕೂಗ್ತಾ ಇದ್ದಿದ್ದು ಅಂದೆ, ಅದು ಅಪ್ಪಯ್ಯ, ಅವರು ಮೊದಲೆಲ್ಲ ಕೂಗ್ತಾ ಇರ್ಲಿಲ್ಲ.

ಜಕ್ಕಿಣಿ ಮೆಟ್ಕಂಡಿತ್ತಲ್ಲ ಅದಕ್ಕೆ ಕೂಗ್ತರ್. ಜಕ್ಕಿಣಿ ಬಿಟ್ಟು ಹೋದ್ರೆ ಎಲ್ಲ ಸರಿ ಹೋಗ್ತ್, ಬಿಟ್ಟುಹೋಗಬೇಕಲ್ಲೆ ಅಷ್ಟ್ ಸುಲಭಕ್ಕ್ ಎಂದಳು ಅಕ್ಕ. ಬಂಡೆಯ ಬಳಿ ಬರುತ್ತಿದ್ದಂತೆ ಅಕ್ಕ-ತಮ್ಮ ಇಬ್ಬರೂ ಹೋ ಅಂತ ಕೂಗು ಹಾಕತೊಡಗಿದರು. ಆ ಧ್ವನಿ ಮತ್ತೆ ಮತ್ತೆ ಬರತೊಡಗಿತು. ನನಗೂ ಖುಷಿಯಾಗಿ ನಾನು ಕೂಗು ಹಾಕತೊಡಗಿದೆ. ಆದರೆ ನನ್ನ ಧ್ವನಿ ಮತ್ತೆ ಮತ್ತೆ ಬರ್ತಲೇ ಇರ್ಲಿಲ್ಲ. ಹಾಗಲ್ಲ ಹೀಗೆ ಜೋರಾಗಿ ಬಂಡೆಗೆ ಮುಖ ಕೊಟ್ಟು ಕೂಗಬೇಕು. ನಿನ್ನ ಹೆಸರು ಕೂಗು ಎಂದರು. ಅವರು ಹೇಳಿದ ಹಾಗೆ ಮಾಡಿದೆ. ಮತ್ತೆ ಮತ್ತೆ ನನ್ನ ಹೆಸರು ಪ್ರತಿಧ್ವನಿ ಆಯಿತು. ನಾನು ಖುಷಿಯಿಂದ ಕುಣಿಯತೊಡಗಿದೆ. ಅಕ್ಕ, ಬಂಡೆ ಮೇಲೆ ಸಂದಿಯಲ್ಲಿ ಒಂದು ಮುಳ್ಳಣ್ಣಿನ ಗಿಡ ಇತ್ತ್, ಮೊನ್ನೆ ನೋಡ್ತಿರಬೇಕಾದ್ರೆ ತುಂಬಾ ದ್ವಾರಗಾಯಿ ಇದ್ವು ಇವತ್ತು ಹಣ್ಣು ಆಗಿತ್ತೇನೋ ಕಾಣುವ ಅಂದ ತಮ್ಮ. ಹೌದನಾ ನಂಗೆ ತೋರಿಸೇ ಇಲ್ಲ ನಡಿ ಹೋಗುವ ಎಂದಳು. ನನಗೆ ಬಂಡೆ ಹತ್ತೋಕೆ ಬರಲ್ಲ ಅಂದೆ. ಅಯ್ಯೋ ಅದೆಂತಾ ಕಷ್ಟ ನಾವಿಬ್ಬರೂ ಸೇರಿ ಹತ್ತಿಸತೀವಿ ನೋಡು ಹೀಗೆ ಕಾಲಿಡು, ಹೀಗೆ.. ಜಾರಬೇಡ, ಚಪ್ಪಲಿ ತೆಗೆದು ಕೈಯಲ್ಲಿ ಇಟ್ಕೋ ಅಂತೆಲ್ಲ ಹೇಳ ಹೇಳುತ್ತಲೇ ಆ ಕಡೆ ಒಬ್ಬರೂ ಈ ಕಡೆ ಒಬ್ಬರು ಕೈ ಹಿಡಿದು ನಡೆಸತೊಡಗಿದರು. ನೋಡ ನೋಡತ್ತಿದ್ದಂತೆ ನಾವು ಬಂಡೆಯ ತುತ್ತ ತುದಿಯಲ್ಲಿದ್ದೆವು.

ಅದೆಷ್ಟೋ ಹೊತ್ತು ಕುಣಿದು ಮನೆ ಸೇರಿದರೆ, ಅಮ್ಮಮ್ಮ-ಚಿಕ್ಕಮ್ಮ ಕೂತು ಮಾತಾಡುತ್ತಿದ್ದರು. ಒಳಗಿಂದ ಕೂಗಾಟದ ಶಬ್ದದ ಬದಲಿಗೆ ಗೊರಕೆಯ ಶಬ್ದ ಕೇಳಿ ಬರುತ್ತಿತ್ತು. ಅಲ್ಲ ಕಣೆ, ಸುಬ್ರಾಯ ಎಷ್ಟು ದಿನ ಆಯ್ತೆ ಕೆಲಸಕ್ಕೆ ಹೋಗದೆ? ಮತ್ತೆ ನಿನ್ನಮ್ಮ ಹೇಳತಿದ್ದಳ್ ಎಲ್ಲ ಸರಿ ಹೋಗಿದೆ, ಇವಾಗ ನಿಯತ್ತಾಗಿ ಕೆಲಸಕ್ಕ ಹೋಗ್ತಾ ಇದ್ದ, ಎಂಥ ಸಮಸ್ಯೆ ಇಲ್ಲೆ, ಉಡುಪಿಯಲ್ಲಿ ಒಳ್ಳೆ ಡ್ರೈವರ್ ಅಂತ್ಹೇಳಿ ಸನ್ಮಾನ ಬೇರೆ ಮಾಡಿದರ್ ಅಂತ್ಹೇಳಿ? `ಅದೆಲ್ಲ ಆಯ್ತಲ್ಲೆ, ಮೂರು ತಿಂಗಳ ಹಿಂದೆ ಏನಾಯ್ತು ರಾತ್ರಿ 8 ಗಂಟೆ ಹೊತ್ತಿಗೆ ಇವರ ಬಸ್ಸಿಗೆ ಸಿಕ್ಕಿ ಒಂದು ಹಂದಿ ಸತ್ತೋಯ್ತು. ಅದನ್ನ ಬಂದು ಹೇಳಿದ್ರು, ಅದಕ್ಕೆಂತ ಮಾಡಕ್ಕಾಗತ್ ಅಂದೆ. ಅವರೂ ಸುಮ್ಮನಾದರು.

ಮತ್ತೆ ಒಂದು ವಾರ ಆಗಿರ್ಲಿಲ್ಲ ಇವತ್ತ್ ಮತ್ತೊಂದು ಹಂದಿ ಸಿಕ್ಕಿ ಸತ್ತೋಯ್ತ ಅಂದ್ರ್, ಮತ್ತೆರಡೇ ದಿನಕ್ಕೆ ಮತ್ತೊಂದು ಹಂದಿ… ಆವತ್ತು ಬಂದವರು ಮಾತ್ರ ಮನುಷ್ಯರಾಗೇ ಇರಲಿಲ್ಲ. `ನಿನ್ನಿಂದಲೇ ಮುಂಡೆ ಎಲ್ಲ ಆಗಿದ್ದು, ನಿನ್ನ ಕಟ್ಕಳ್‍ದಿರೇ ಇಷ್ಟೆಲ್ಲ ಆಗ್ತಾ ಇರ್ಲಿಲ್ಲ, ಅವನೊಬ್ಬ ಕೋತಪ್ಪ ನಾಯಕ ನಂಗೆ ಹಗಲು ಸರ್ವಿಸ್ ಕೊಡು, ಕಣ್ಯಾಕೋ ಮಂಜು ಮಂಜು ಆಗ್ತಾ ಇದ್ದು ಅಂದ್ರೆ ಉಡುಪಿಗ್ಹೋಗಿ ಪ್ರಶಸ್ತಿ ತಗಂಡು ಹಾರ ಹಾಕ ಬಂದ್ಹಾಗ್ ಅಲ್ಲೆ, ಬೇಕಿದ್ರೆ ರಾತ್ರಿ ಸರ್ವಿಸ್ ಮಾಡು ಬೇಡದಿದ್ದರೆ ಬಿಟ್ಟು ಹೋಗು. ನಿನ್ನ ಹೆಂಡ್ತಿ ಮುಖ ನೋಡಿ ಕೆಲಸಕ್ಕೆ ಇಟ್ಕಂಡಿದೀ ಇಲ್ಲಾ ಅಂದ್ರೆ ಬಿಟ್ಯಾವಾಗಲೋ ಓಡಿಸಿರುತ್ತಿದ್ದೆ ಅಂತಾನೆ. ಅವನಿಗೇನು ಮೋಡಿ ಮಾಡಿದ್ಯೆ, ನಾನು ನಾಳೆಯಿಂದ ಕೆಲಸಕ್ಕೆ ಹೋಗದಿಲ್ಲ. ತಾಯಿ, ಮಕ್ಕಳ್ ಉಪವಾಸ ಬಿದ್ದಿರಿ ನನಗೇನು ಆಗಬೇಕು ಎಂದು ಮನಿಕಂಡವರ್ ಮತ್ತೆ ಎದ್ದು ಹೊರಡಲೇ ಇಲ್ಲೆ’. ನಾನು ಇವತ್ತ್ ಸರಿಯಾಗ್ತು, ನಾಳೆ ಸರಿಯಾತ್ರ್ ಎಂದು ಕಾದೆ, ಇವರ ದೋಸ್ತಿ ರಾಮಣ್ಣ ಅಂತ ಡ್ರೈವರ್ ಇದ್ದ ಅವನನ್ನ ಮನೆಗೆ ಕರೆಸಿ ಹೇಳಿಸಿದಿ, ಅವನು ಬಂದವನು ಮತ್ತೊಂದಿಷ್ಟ್ ಇವರ ತಲೆ ಕೆಡಿಸಿ ಹೋದ. ಹಂದಿ ಕೊಂದದ್ದು ಮಹಾಪಾಪ, ಅದು ವಿಷ್ಣುವಿನ ವರಾಹ ಅವತಾರ. ಯಾವುದೋ ಜಕ್ಕಿಣಿ ಇವರ ಮೆಟ್ಕಂಡು ಆ ಹೀನ ಕೆಲಸ ಮಾಡಿಸಿದೆ, ನೀವು ಸ್ವಲ್ಪ ದುಡ್ಡು ಕೊಡಿ ನಾನು ಕಾಸರಗೋಡಿಗೆ ಹೋಗಿ ಮಂತ್ರವಾದಿ ಕರ್ಕಂಬರ್ತೆ. ಸದ್ಯಕ್ಕೆ ಒಂದೈದು ಸಾವಿರ ಕೊಟ್ಟಿರಿ ಅವರಿಗೆ ಅಡ್ವಾನ್ಸ್ ಕೊಟ್ಟು ಕರ್ಕಂಬರ್ತೆ ಅಂತ್ಹೇಳಿದ.

ನನಗೆ ಸಿಟ್ಟು ಬಂತು ನಿನ್ಮನೆ ಹಾಳಾಗ ಇವರಿಗೆ ಬುದ್ದಿ ಹೇಳಿ ಕೆಲಸಕ್ಕೆ ಕರ್ಕ ಹೋಗು ಅಂದ್ರೆ ನನ್ನ ಕೈಲಿ ಹೆರೆಯಕ್ಕೆ ನೋಡ್ತೀಯಾ. ಎಲ್ಲಿದೆ ಅಷ್ಟು ದುಡ್ಡು, ನಿಮ್ಮಪ್ಪ ಕೊಟ್ಟಿಟ್ಟಿದ್ದಾನ ಅಂತ್ಹೇಳಿ ಬಯ್ದೆ. ಅಷ್ಟಕ್ಕೆ ಅಂವ ನಾನು ಗೇರು ಗಿಡಕ್ಕೆ ಮಣ್ಣು ಹಾಕಿಸೋ ಹೊತ್ತಲ್ಲಿ ಕಾದ್ಕಂಡಿದ್ದು ಬರೋದು, ಇವರ ತಲೇಲಿ ನನ್ನ ಬಗ್ಗೆ ಏನೇನೋ ಹುಳ ಬಿಡದು. ನಿನ್ನ ಹೆಂಡ್ತಿ ಸರಿಯಿಲ್ಲೆ, ನಿನಗಿಂತ ಅವಳಿಗೆ ನಿನ್ನ ಬಸ್ಸಿನ ಒಡೇರೆ ಜಾಸ್ತಿ ಆದ್ರು, ಅವಳೇ ಹೇಳಿ ನಿನಗೆ ರಾತ್ರಿ ಸರ್ವಿಸ್‍ಗೆ ಹಾಕಂಗೆ ಮಾಡಿದ್ದು ಅಂತೆಲ್ಲ ಹೇಳಿ ತಲೆ ಕೆಡಿಸಿದ. ನಿಜ ಹೇಳ್ತೆ ದೊಡ್ಡಮ್ಮ ನೀನು ಹೇಳಿದ ಮಾತು ಕೇಳಬೇಕಿತ್ತು, ಎಸ್ಸೆಲ್ಸಿ ಮುಗಿಬೇಕಿದ್ರೆ ಮದಿ ಮದಿ ಅಂತ ಕುಣಿಬಾರದಿತ್ತು. ಸರಸೂ ಹಾಗೆ ಟಿಸಿಹೆಚ್ ಮಾಡಿದ್ರೆ ಈಗ ಅವಳ ಹಾಗೆ ಟೀಚರ್ ಆಗಿರಬಹುದಿತ್ತು. ನೀನು ಯಾರ ಮಾತು ಕೇಳದೆ ಅವಳನ್ನ ಓದಿಸಿದ್ದು ಒಳ್ಳೆಯದೇ ಆಯಿತು. ನನ್ನ ಹಾಗೆ ಕಷ್ಟ ಪಡಲಿಲ್ಲ.

ಅಮ್ಮಮ್ಮನ ತೊಡೆ ಮೇಲೆ ಹಾಗೆ ನಿದ್ದೆ ಹೋದೆ. ಎಚ್ಚರವಾದಾಗ ನೋಡಿದರೆ ಒಂದು ಮನೆಯಲ್ಲಿದ್ದೆ. ಒಬ್ಬ ಹುಡುಗಿ ಮತ್ತೊಬ್ಬ ಹುಡುಗ ನನ್ನನ್ನೇ ಕಣ್ಣು ಕಣ್ಣು ಬಿಡುತ್ತಾ ನೋಡುತ್ತಿದ್ದರು.

ಇವನ ಜೊತೆ ಒಂದೆರಡು ಊರು ತಿರುಗಿದಿನಾ? ಆ ಊರು ಈ ಊರು ಅಂತ್ಹೇಳಿ… ಎರಡು ವರ್ಷದ ಹಿಂದೆ ಈ ಕಾಟು ಗುಡ್ಡದ ಊರಿಗೆ ಬಂದು ಮನೆ ಕಟ್ಕಂಡ್ ಮೇಲೆ ಒಂದು ನೆಲೆ ಅಂತ ಆಯಿತು, ಎರಡು ಎಕ್ರೆ ಜಾಗದಲ್ಲಿ ಭತ್ತ ಬೆಳದ್ವಿ, ನೂರು ಗೇರು ಗಿಡ ಹಾಕಿದ್ವಿ, ಅದು ಚೆಂದ ಫಲ ಕೊಡ್ತು, ಎರಡು ಹೊತ್ತು ಊಟದ ಚಿಂತೆ ಮಾಡ್ಬೇಕಾಗಿಲ್ಲೆ ಅಂತ ಅನ್ಕೊಳೋ ಹೊತ್ತಲ್ಲಿ ಇವರು ಹೀಗೆ ಮೂಲೆ ಹಿಡಿದ್ರು. ಸತ್ಯ ಹೇಳ್ತೆ ದೊಡ್ಡಮ್ಮ ಕಳೆದ ಮೂರು ತಿಂಗಳಿಂದ ಒಂದು ತುತ್ತು ಅನ್ನ ನೆಮ್ಮದಿಯಿಂದ ಉಂಡಿಲ್ಲ. ಸುತ್ತ ಮುತ್ತ ಒಂದಾರೂ ಮನೆ ಕಾಣುತ್ತಾ ನೋಡು, ಹಗಲಿನಲ್ಲಿ ಸಾಯ್ತಾ ಇದೀವಿ ಅಂತ ಕೂಗು ಹಾಕಿದ್ರೆ ಇಲ್ಲಿ ಒಂದು ಲೋಟ ನೀರು ಹಿಡಿದು ಬರೋಕೆ ಯಾರು ಇಲ್ಲೆ. ಆದರೆ ರಾತ್ರಿ ಗರಗಸ ಕೊಯ್ಯೋ ಶಬ್ದ ಕೇಳಿಸ್ತು, ಯಾರ್ಯಾರೋ ಓಡಾಡೋ ಶಬ್ದ, ಕಾರು, ಬೈಕಿನ ಶಬ್ದ ಎಲ್ಲ ಕೇಳ್ತು.

ಒಂದು ಬೆಳಿಗ್ಗೆ ನೋಡಿದ್ರೆ ನಮ್ಮನೆ ಎದುರಿದ್ದ ಎರಡು ಗಂಧದ ಮರವೇ ನಾಪತ್ತೆ, ಮತ್ತೊಂದು ಸರ್ತಿ ಆಚೆ ಬದಿ ಕೊಟ್ಟಿಗೆ ಹತ್ರ ದೊಡ್ಡ ತೇಗದ ಮರ ಇತ್ತು ಅದಕ್ಕೆ ಕೊಡಲಿ ಇಟ್ಟು ಇಡೀ ರಾತ್ರಿ ಕೊಯ್ದು ಉರುಳಿಸಿದರು. ಗೊತ್ತಾಗ್ತ ಇತ್ತು. ಯಾರೋ ಮರ ಉರುಳಿಸ್ತಿದಾರೆ, ಆದರೆ ಹೊರಗೆ ಬರಕ್ಕೆ ಹೆದರಿಕೆ, ದೀಪ ನಂದಿಸಿ ಸದ್ದೆ ಮಾಡದೇ ಇಡೀ ರಾತ್ರಿ ಮಕ್ಕಳನ್ನು ಅವಚಿಕೊಂಡು ನಿದ್ದೆಯೂ ಮಾಡಲಾಗದೇ ಒದ್ದಾಟ ಮಾಡಿದ್ದು. ಒಂದೆರಡಲ್ಲ ಹೇಳಕ್ಕೋದ್ರೆ ಹತ್ತೆಂಟು ಇಂಥವು. ಅಂಥದ್ರಲ್ಲಿ ಇವ್ರಿಗೆ ನಾನು ರಾತ್ರಿ ಡ್ಯೂಟಿಗೆ ಹಾಕಿ ಅಂತ ಬೇಡ್ಕೊಳ್ತೀನಾ? ಬಸ್ಸಿನ ಒಡೇರನ್ನು ಕಂಡದ್ದು ಹೌದು, ಅವರೇ ನನ್ನ ಕರೆಸಿದ್ದರ್, ಕಾರಣ ಏನು `ಪಂಚಾಯ್ತಿ ಚುನಾವಣೆಗೆ ಮಹಿಳೆ ಮೀಸಲು ಬಂದಿತ್ ನೀನು ನಿಲ್ಲು, ನೀನು ನಿಂತರೆ ಗೆಲ್ಲುಸೋ ಜವಾಬ್ದಾರಿ ನಂದು’ ಎಂದರ್. ನಾನು ಕೇಳಿ ಹೇಳ್ತೆ ಅಂದೆ. ಇವರ್ ಕೇಳಿದ ಕೂಡಲೇ ಬೇಡ ಅಂದ್ರು ನಾನು ಸುಮ್ಮನಾದೆ. ಅಲ್ಲಿಗೆ ಪ್ರಸ್ತಾಪ ಮುಗೀತು. ಇವರ್ ಬೇಡ ಅಂದಿರ್ ಅಂತ್ಹೇಳಿ ಹೇಳಿ ಕಳಿಸಿದೆ.

ಅಷ್ಟೊತ್ತಿಗೆ ಮತ್ತೆ ಕೂಗು ಕೇಳತೊಡಗಿತು `ಮುಂಡೆ ಎಲ್ಲಿ ಸತ್ಯೆ, ಬಾರೆ, ಯಾವನು ಬಂದ್ನೆ, ಇಂಥ ಕಾಡೊಳಗೆ ಈ ರಾತ್ರಿಯಲ್ಲಿ ನಿನ್ನ ಹುಡ್ಕಂಡು ಬರ್ತಾನಲ್ಲೇ? ನಾನೇನು ಸತ್ತಿದ್ದಿ ಅಂತ ತಿಳಿದಿದ್ದೆಯೇನೇ?’ ಇಂಥದ್ದೆ ಮಾತುಗಳು. `ದೊಡ್ಡಮ್ಮ ಮಕ್ಕಳಿಗೆ ಬಡಿಸಿ, ನೀವು ಉಂಡು ಮಲಗಿ ಇಲ್ಲೇ ಹಾಸಿಗೆ ಹಾಸಿದ್ದೀʼ ಎಂದು ಹೇಳಿ ಒಳಗೆ ನಡೆದು ರೂಮಿನ ಬಾಗಿಲು ಹಾಕಿಕೊಂಡಳು. ಬಯ್ಯುವ ಧ್ವನಿ ನಿಂತು ನಿಶಬ್ದ ಹರಡಿತು. ಅಮ್ಮಮ್ಮ ಮೂವರು ಮಕ್ಕಳಿಗೂ ಊಟ ಹಾಕಿದಳು. ಅಮ್ಮಮ್ಮ ಇವರ ಮನೆಯಲ್ಲಿ ಟಿವಿನೇ ಇಲ್ಲ ಅಂದೆ. ಪ್ರಥಮ್, ಬಾಗ್ಯ ಜ್ಯೋತಿಗೆ ಟಿವಿ ಬತ್ತಿಲ್ಲೇ, ಇಲ್ಲದಿದ್ದರೆ ಅಮ್ಮ ಯಾಗಳಿಕೋ ಟಿವಿ ತರ್ತಿದ್ದಳ್ ಅಂದ. ಪದ್ಮಕ್ಕ ಸುಮ್ಮನೇ ಊಟ ಮಾಡುತ್ತಿದ್ದಳು. ನೀನು ಸಿನಿಮಾ ಕಂಡಿದ್ಯಾ ಎಂದ ಪ್ರಥಮ್. ಟಿವಿಯಲ್ಲಿ ಹಾಕದಾಗ ಯಾವತ್ತಾದ್ರೂ ನೋಡ್ತೀನಿ. ಮಕ್ಕಳ್ ಸಿನ್ಮಾ ಅಲ್ಲದೆ ಬೇರೆ ಸಿನ್ಮಾ ನೋಡ್ಲಿಕ್ಕೆ ಅಮ್ಮ ಬಿಡೋದಿಲ್ಲ ಎಂದೆ. ಸಿನ್ಮಾ ಟಾಕೀಸ್‍ನಲ್ಲಿ ನಾನು ಎಷ್ಟು ಸಿನಿಮಾ ಕಂಡಿದ್ದೆ ಗೊತ್ತುಂಟಾ ಎಂದ. ಪದ್ಮಕ್ಕ ಅಮ್ಮಮ್ಮನ ಹತ್ತಿರ ಅಪ್ಪನಿಗೆ ಜಕ್ಕಿಣಿ ಹಿಡಿಯೂಕು ಮೊದಲು ಪ್ರತಿ ತಿಂಗಳಿಗೊಂದು ನಮ್ಮ ಮೂವರನ್ನೂ ಸಿನಿಮಾಕ್ಕೆ ಕರ್ಕಂಡು ಹೋಗಿ, ಸಿದ್ದಾಪುರ ಪೇಟೆ ಹೋಟೆಲಲ್ಲಿ ಗೋಲಿ ಬಜೆ ಕೊಡಿಸ್ತಿದ್ದ ಎಂದಳು. ಅಮ್ಮಮ್ಮ ಎಲ್ಲ ಸರಿ ಹೋಗ್ತು ಮಗಾ, ಅಪ್ಪಂಗೆ ಬೇಗ ಹುಷಾರಾಗ್ತು ಎಂದು ಅವಳ ತಲೆ ಸವರಿದಳು.

ನಾಲ್ಕೂ ಜನ ಒಟ್ಟಿಗೆ ಮಲಗಿದೆವು. ಮಧ್ಯ ರಾತ್ರಿ ಅದೆಷ್ಟೋ ಹೊತ್ತಿಗೆ ಎಚ್ಚರಾದಾಗ ಅಮ್ಮಮ್ಮನ ಪಕ್ಕ ಚಿಕ್ಕಮ್ಮ ಮಲಗಿಕೊಂಡು ಮಾತಿಗಿಳಿದಿದ್ದಳು. ಅಲ್ಲೇ ಮಲಗಕಾಗಿಲ್ಲೇನೆ ಅಮ್ಮಮ್ಮ ಕೇಳುತಿದ್ದಳು. ಬರೀ ಮಾತಲ್ಲಷ್ಟೆ ರೋಷ, ಎರಡು ಸುತ್ತು ಹಿಡ್ಕಂಡು ಉರುಳುವಷ್ಟೊತ್ತಿಗೆ ಘಟ ಸುಸ್ತು ಬಿದ್ದು ಹೋಗ್ತು. ಆದರೂ ಎಂಥ ಮಾಡದು ತೆವಲು ಬಿಡಾದಿಲ್ಲ ಎಂದು ಮಲಗಿದಲ್ಲೇ ಚಿಕ್ಕಮ್ಮ ಕುಲು ಕುಲು ನಕ್ಕಳು. ನನಗೂ ನಗು ಬಂತು, ನಗಲಿಲ್ಲ, ಗಟ್ಟಿ ಹಿಡಿದೆ. ಪಕ್ಕಕ್ಕೆ ತಿರುಗಿದರೆ ಪದ್ಮಕ್ಕ ಕೂಡಾ ಕಣ್ಣು ಬಿಟ್ಟು ಮಲಗಿದ್ದಾಳೆ. ನಾನು ನಿದ್ದೆ ಹೋಗಿದ್ದೇನೆಂದು ಅವಳು ತಿಳಿಯಲಿ ಎಂದು ನಾನು ಗಟ್ಟಿಯಾಗಿ ಎರಡೂ ಕಣ್ಣುಗಳನ್ನು ಮುಚ್ಚಿಕೊಂಡೆ.

ಮರು ದಿನ ನಾ ಏಳುವ ಹೊತ್ತಿಗೆ ಚಿಕ್ಕಮ್ಮ ಕಾರ ಕಲ್ಲಿಗೆ ಹಾಕಿ ಅರೆಯುತಿದ್ದಳು, ಅಮ್ಮಮ್ಮನನ್ನು ಹುಡುಕಿದರೆ ಅವಳ ಮಾತು ಕೇಳತಿತ್ತು. ಅಮ್ಮಮ್ಮ ಕಾಣ್ತಾ ಇಲ್ಲ. ನೋಡಿದರೆ ಅಮ್ಮಮ್ಮ ಆ ರೂಮಲ್ಲಿ ಕೂತು ಮಾತಾಡ್ತಿದಾಳೆ, ಪದ್ಮಕ್ಕನ ಅಪ್ಪನ ಜೊತೆ, ಅವನು ಸುಮ್ಮನೇ ಕೂತಿದಾನೆ, ಹರ ಇಲ್ಲ ಶಿವ ಇಲ್ಲ. ನಿನ್ನೆ ಕೂಗಾಡಿದ ಮನುಷ್ಯ ಇವನೇ ಅಂತ ನಂಗೆ ಅನುಮಾನ ಆಯಿತು. ನಾನು ಹೋಗಿ ಅಮ್ಮಮ್ಮನ ಸೆರಗಿನೆಡೆಗೆ ಅವಿತು ಕೂತೆ. ಏನೇ ಸರಸೂ ಟೀಚರ್ ಮಗಳೇ ಎಂದ. ನನ್ನ ಭಯ ಜಾಸ್ತಿ ಆಯಿತು. ಅಮ್ಮಮ್ಮ, ಹಂಗಿರ್ ನಾನು ಶಾಂತು ಕರ್ಕಂಡು ಇವತ್ತ ಹೋಗಿ ಸಂಜೆ ಒಳಗೆ ಬರ್ತೀನಿ, ನೀನೇನು ಯೋಚನೆ ಮಾಡಬೇಡ. ಎಲ್ಲ ಸರಿ ಹೋಗ್ತದೆ ಎನ್ನುತ್ತಾ ಎದ್ದಳು. ನಾನು ಅವಳ ಸೆರಗಿನಡಿ ಅವಿತೇ ಹೊರಬಂದೆ. ಶಾಂತು ಬೇಗ ಬೇಗ ಒಂದು ಸಾರು ಅನ್ನ ಮಾಡಿ ಹೊರಡು, ದೇವರ ಹತ್ತಿರ ಹೋಗಿ ಬರ್ತೀವಿ ಅದೇನೋ ಕರಣಿಕ ಹೇಳ್ತಾರಂತೆ ಅಂತೆಲ್ಲ ಹೇಳಿ ಒಪ್ಪಿಸಿದೀನಿ, ಬೇಗ ಹೋಗಿ ಬಂದು ಬಿಡೋಣ ಎಂದವಳೇ ನನ್ನ ಕಡೆ ತಿರುಗಿ ಮಗಾ ನಾನು ಚಿಕ್ಕಿ ಸಿದ್ದಾಪುರಕ್ಕೆ ಹೋಗಿ ಬರ್ತಿವಿ ಇಲ್ಲೆ ಇರು ಆಯ್ತಾ ಸಂಜೆ ಬೇಗ ಬಂದು ಬಿಡ್ತೀವಿ ಎಂದಳು. ಬೇರೆ ಹೊತ್ತಲ್ಲಾಗಿದ್ರೆ ಅಮ್ಮಮ್ಮನ ಬಿಟ್ಟಿರೋಕೆ ಒಪ್ತಿರಲಿಲ್ಲ. ಆದರಿಲ್ಲಿ ಪದ್ಮಕ್ಕ-ಪ್ರಥಮ್, ಗುಡ್ಡ, ಬೆಟ್ಟ, ಬಂಡೆ, ಮುಳ್ಳಣ್ಣು ಎಲ್ಲಾ ಇದೆ. ಆದರೆ ಕೆಟ್ಟ ಮಾತಾಡುವ ಕಿರುಚುವ ಆ ಮನುಷ್ಯನ ಬಗ್ಗೆ ಭಯ… ನಾನೇನೂ ಹೇಳುವ ಮುಂಚೆಯೇ ಪದ್ಮಕ್ಕ ನೀವು ಹೋಗಿಬನ್ನಿಯಾ, ನಾನು ಇಟ್ಟುಕೊಳ್ತೆ ಎಂದಳು.

ರಾತ್ರಿಯಾಗುತ್ತಾ ಬಂದರೂ ಅಮ್ಮಮ್ಮ ಬರಲಿಲ್ಲ. ಇಡೀ ದಿನ ಬಂಡೆ ಮೇಲೆ ನಾವು ಮೂವರೂ ಆಟ ಆಡಿ ಸುಸ್ತಾಗಿದ್ವಿ, ನನಗೆ ಗೊತ್ತಿರದ ಎಷ್ಟೋ ಹೊಸ ಆಟಗಳು ಅಕ್ಕ ತಮ್ಮನಿಗೆ ಗೊತ್ತಿತ್ತು. ನಾನು ಶಾಲೆ ಬಿಟ್ಟ ಕೂಡಲೇ ಮನೆಗೆ ಬಾರದಿದ್ದರೆ ಅಮ್ಮನಿಂದ ನನಗೆ ಹೊಡ್ತಾ ಬೀಳ್ತಿತ್ತು. ಆದರೆ ಇವರಿಗೆ ಹಾಗೇನೂ ಇಲ್ವಂತೆ ಕತ್ತಲಾಗೋ ತನಕವೂ ಇವರು ಶಾಲೆಯಲ್ಲಿ ಆಡುತ್ತಲೇ ಇರುತ್ತಾರಂತೆ.

(ಅಕ್ಷತಾ ಹುಂಚದಕಟ್ಟೆ)

ಮಧ್ಯಾಹ್ನ ಅಕ್ಕನೆ ಆ ಕೋಣೆಗೆ ಊಟ ಒಯ್ದು ಕೊಟ್ಟಿದ್ದಳು. ನಾವೂ ಊಟ ಮಾಡಿ ಮತ್ತೆ ಆಡಲು ಹೋಗಿದ್ವಿ. ಈಗ ರಾತ್ರಿಯಾದರೂ ಚಿಕ್ಕಿ ಮತ್ತು ಅಮ್ಮಮ್ಮನ ಪತ್ತೆಯೇ ಇರಲಿಲ್ಲ. ಆ ಕೋಣೆಯಿಂದ ಬಯ್ಗುಳಕ್ಕೆ ಬದಲು ನರಳುವ ಶಬ್ದ ಕೇಳಿ ಬರತೊಡಗಿತು. ಅಕ್ಕ, ಅಪ್ಪನಿಗೆ ತುಂಬಾ ಜ್ವರ ಬಂದಿದೆ ಮಾಣಿ, ಡಾಕ್ಟರ್ ಹತ್ತಿರ ಹೋಗ್ಬರ್ತೀಯಾ ಎಂದಳು. ತಮ್ಮ, ಅಕ್ಕ ಚೂರೂ ಬೆಳಕಿಲ್ಲೇ ಹೇಗೆ ಹೋಗೋದು ಎಂದ. ಸೈಕಲ್ ಹೊಡ್ಕಂಡು ಹೆಂಗಾದ್ರೂ ಹೋಗಿ ಬಾ ಮಗ. ಇಲ್ಲಾ ಅಂದ್ರೆ ಅಪ್ಪಾ ಕೂಗೋದು ಜಾಸ್ತಿ ಆಗ್ತು ಎಂದಳು. ಹೊರಗೆ ನೋಡಿದರೆ ಕಗ್ಗತ್ತಲು. ಒಂದೆ ಒಂದೆ ಚುಕ್ಕಿಯ ಬೆಳಕೂ ಇರಲಿಲ್ಲ. ಕೊನೆಯ ಬಸ್ಸು ಹೋಗಿ ಆಯ್ತು ಕಾಣಿಸ್ತು, ಇವರು ಇವತ್ತು ಬರಲ್ಲ ಅಂದಳು ಅಕ್ಕ. ನನಗೇ ಹೆದ್ರಿಕೆ ಅಂದ್ರೆ ಹೆದ್ರಿಕೆ ಸುರುವಾಗಿತ್ತು.

`ಡಾಕ್ಟರ್ ಹತ್ರ ಹೋದನೇನೆ? ಆ ಮುದುಕಿ ಸಂಜೆ ಒಳಗೆ ಇಲ್ಲಿ ಬಿದ್ದಿರ್ತೀವಿ ಅಂತ್ಹೇಳಿ ಈ ಮುಂಡೆನೂ ಕರ್ಕಂಡು ಹೋದಳಲ್ಲ. ಇಬ್ಬರೂ ಪತ್ತೆ ಇಲ್ಲ. ನಂಗೆ ಗೊತ್ತಿತ್ತು, ಹಿಂಗೆ ಆಗತ್ತೆ ಅಂತ, ನಾನು ಜ್ವರ ಬಂದು ಸಾಯ್ತಾ ಬಿದ್ದಿದ್ದೆ ಅವರ್ ಮೆರೆಯಕ್ ಹೋಗಿದ್ದಳ್, ಹಸಿವೆ ಆ ಮುಂಡೆಗೆ, ಅವಳಿಗೆ ನಾನು ಸಾಲದಿಲ್ಲೇ, ಬೇಕವಳಿಗೆ ಗಟ್ಟಿ ಮುಟ್ಟಾಂದವ, ನನ್ನಂತ ಬೆನ್ನು ಮುರಿದ ಡ್ರೈವರ್ ಅವಳಿಗೆ ಎಲ್ಲಿಗೆ ಸಾಕು’. ಮತ್ತೆ ಆ ಕೋಣೆಯಿಂದ ಭಯಂಕರ ಮಾತು ಕೇಳಿ ಬರತೊಡಗಿತು. ಮಧ್ಯೆ ಮಧ್ಯೆ ನರಕಾಟ. ಅಕ್ಕ ಬೆಂಕಿ ಉರಿಸಿ ಏನೋ ಮಾಡುತ್ತಿದ್ದಳು. ಇಡೀ ಮನೆ ಹೊಗೆಯಾಗಿ ಉಸಿರುಗಟ್ಟುತ್ತಿತ್ತು. ರೂಮಿನಿಂದ ಬಯ್ಗುಳ ನಿಂತು ನರಕುವ ದನಿಯೇ ದೊಡ್ಡದಾಗಿ ಬರುತ್ತಿತ್ತು. ಪ್ರಥಮ ಹೋದ ಸ್ವಲ್ಪ ಹೊತ್ತಿಗೆ ಹಿಂದೆ ಬಂದ. ಕೈಕಾಲು ತರಚಿಸಿಕೊಂಡಿದ್ದ, ಸೈಕಲ್ಲಿನ ಹೆಡ್ ಲೈಟ್ ಆಫ್ ಆಗಿ ಏನೂ ಕಾಣದೇ ಬಂಡೆಗಲ್ಲಿಗೆ ಡಿಕ್ಕಿ ಹೊಡೆದು ಬಿದ್ದು ಬಂದಿದ್ದ. ಅಯ್ಯೋ ನೋವು ಎಂದು ನಮ್ಮನ್ನು ಕಂಡದ್ದೆ ನರಳತೊಡಗಿದ. ಅಕ್ಕ ಅಳೋದಕ್ಕೆ ಸುರು ಮಾಡಿದಳು, ತಮ್ಮನೂ ಅಳತೊಡಗಿದ. ನಾನೂ ಅಳತೊಡಗಿದೆ.

ಅಕ್ಕ, ಅಳುವುದನ್ನು ನಿಲ್ಲಿಸಿದಳು. ಏಯ್ ಅಳಬೇಡ. ಎಂತ ಆಗ್ತಿಲ್ಲೆ, ಲಕ್ಕಿ ಎಲೆ ಅರೆದುಕೊಡು ಅವನಿಗೆ ಹಚ್ಚೋಣ ಕೂಡಲೇ ವಾಸಿಯಾಗ್ತು ಅಂತ ನನ್ನ ಕೈಗೆ ಒಂದಿಷ್ಟು ಲಕ್ಕಿ ಎಲೆ ಕೊಟ್ಟು ಅರೆಯೋ ಕಲ್ಲು ಮೇಲೆ ಕೂರಿಸಿದಳು. ಅಪ್ಪಯ್ಯನಿಗೆ ಕಷಾಯ ಕೊಡ್ತೆ, ಇದಕ್ಕೆ ಜ್ವರ ಬಿಟ್ಟರೂ ಬಿಡಬಹುದು ಎಂದು ಕಷಾಯ ಮಾಡತೊಡಗಿದಳು. ತಮ್ಮ ನನ್ನ ಪಕ್ಕ ಕೂತು ನಾನು ಅರೆದ ಹಾಗೂ ರಸವನ್ನು ತನ್ನ ತರಚಿದ ಗಾಯದ ಮೇಲೆ ಹಿಂಡಿಕೊಳ್ಳತೊಡಗಿದ.

ಆ ರಾತ್ರಿ ಮಲಗಿದರೆ ನಿದ್ದೆಯೇ ಬರಲಿಲ್ಲ. ಬೆಳಿಗ್ಗೆ ಏಳುವಾಗ ಬಿಸಿಲೇರಿತ್ತು. ನಾನು, ತಮ್ಮ ಒಟ್ಟಿಗೆ ಎದ್ದೆವು. ಅಕ್ಕ ಎದ್ದು ಗಂಜಿ ಮಾಡಿದ್ದಳು, ಅದನ್ನು ಕುಡಿದು ಅಂಗಳಕ್ಕೆ ಬಂದು ನೋಡಿದರೆ ಅಮ್ಮಮ್ಮ ಬರುತ್ತಿರುವುದು ಕಾಣಿಸಿತು. ಅಮ್ಮಮ್ಮ ಬಂದ್ಲು ಎಂದು ಕೂಗಿಕೊಂಡೆ. ಪದ್ಮಕ್ಕನ ಅಪ್ಪ ಧಡಧಡನೇ ಹೊರಗೆ ಓಡಿ ಬಂದ. ಅವನನ್ನು ಅದೇ ಮೊದಲ ಬಾರಿಗೆ ನೋಡಿದೆ ಸೂರ್ಯನ ಬೆಳಕಲ್ಲಿ. ಅಮ್ಮಮ್ಮ ಒಬ್ಬಳೇ ಬಂದಿದ್ದಳು. ಚಿಕ್ಕಮ್ಮ ಕಾಣಿಸಲಿಲ್ಲ. ಎಲ್ಲಿ ಹೋದ್ಲು ಆ ಮುಂಡೆ ಎಂದು ಕೂಗಿದ. ಸಂಜೆ ಮೇಲೆ ಬರ್ತೀನಿ ನೀವು ಹೋಗಿ ಅಂತ್ಹೇಳಿ ನನ್ನ ಬಸ್ ಹತ್ತಿಸಿ ಎಲ್ಲೋ ಹೋದ್ಲಪ್ಪ ಎಂದಳು ಅಮ್ಮಮ್ಮ.

ನಂಗೆ ಗೊತ್ತು ಎಲ್ಲಿ ಸತ್ತಿರ್ತಾಳೆಂತ. ಬಿಡ್ತೀನಾ ನಾನು ಹೆಡೆ ಮುರಿ ಕಟ್ಟಿ ಎಳ್ಕೊ ಬರ್ತೀನಿ ಎಂದು ಉಟ್ಟ ಬಟ್ಟೆಯಲ್ಲೆ ಓಡತೊಡಗಿದ. ಬರ್ತಳ್, ಮಕ್ಕಳು ಮರಿ ಬಿಟ್ಟು ಹೋಪುದಾದರೂ ಎಲ್ಲಿಗೆ, ನೀ ಓಡೋ ಅವಶ್ಯಕತೆ ಇಲ್ಲೆ ಎಂದು ಕೂಗತ್ತಿದ್ದರೂ, ಅದನ್ನು ಕೇಳಿಸಿಕೊಳ್ಳದೆ ಅವನು ಓಡುತ್ತಾ ಮರೆಯಾದ. ಅಮ್ಮಮ್ಮ ಇದ್ದವಳು ಮಗಾ ನಾನು ಹೊರಡ್ತೆ, ನಿಮ್ಮಮ್ಮ ಕತ್ತಲಾಗೋದ್ರೊಳಗೆ ವಾಪಾಸ್ ಬರ್ತಾಳೆ ಹೆದ್ರಬೇಡಿ ಎಂದು ನನ್ನನ್ನು ಹೊರಡಿಸಿಕೊಂಡು ಹೊರಗೆ ಬಂದಳು. ಅಕ್ಕ ಇದ್ದವಳು `ದೊಡ್ಡಮ್ಮ, ಬಸಳೆ ಸೊಪ್ಪು ಕೊಯ್ದಿಟ್ಟಿದ್ದಿ, ಚೂರು ಸಾರು ಮಾಡಿಕೊಡಾ, ಅಪ್ಪ-ಅಮ್ಮ ಬರುವಾಗ ಊಟದ ಹೊತ್ತಾಗಿರ್ತದೆ, ಮತ್ತೆ ಅಪ್ಪ ಸಿಟ್ಟು ಮಾಡ್ತಾನೆ. ಅನ್ನ ನಂಗೆ ಮಾಡ್ಲಿಕ್ಕೆ ಬರ್ತ್ ನಾನು ಮಾಡ್ಕಂತೆ ಎಂದಳು. ಅಮ್ಮಮ್ಮ ಬ್ಯಾಗನ್ನು ಚಿಟ್ಟೆಯ ಮೇಲೆ ಇಟ್ಟು ಸಾರು ಮಾಡಲು ಒಳಗೆ ಹೋದಳು. ನಾನು ಪ್ರಥಮ ಚಿಟ್ಟೆಯ ಮೇಲೆ ಕುಳಿತು ಅಮ್ಮಮ್ಮನ ಕೆಲಸ ಮುಗಿಯುವವರೆಗೂ ಆಡೋಣ ಎಂದು ಎತ್ತು ಕಲ್ಲು ಆಡತೊಡಗಿದೆವು.