“ನೀನು ಹುಚ್ಚನಂತೆ ಮಾತಾಡಬೇಡ. ನಮ್ಮ ಊರಿನಲ್ಲಿ ಮನುಷ್ಯರು ಮಾತ್ರ ಇದ್ದಾರೆ. ಇಲ್ಲಿ ಯಾವ ಕ್ಷಣಕ್ಕೂ ದೊಂಬಿ, ಗಲಭೆ ನಡೆದಿಲ್ಲ. ಜಾತಿ ಮತ್ಸರದಿಂದ ಹೃದಯಗಳು ಹೊತ್ತಿ ಉರಿದಿಲ್ಲ. ನೀನು ವಿನಾಕಾರಣ ನಮ್ಮಗಳ ಬಾಂಧವ್ಯಕ್ಕೆ ಬೆಂಕಿ ಹಚ್ಚಬೇಡ”
ಸ. ರಘುನಾಥ್‌ ಹಾಗೂ ಆರ್.‌ ವಿಜಯರಾಘವನ್‌ ಅವರ ಸಂಪಾದಕತ್ವದಲ್ಲಿ ರೂಪುಗೊಂಡ “ನಾನು ಮೆಚ್ಚಿದ ನನ್ನ ಕಥೆ” ಪುಸ್ತಕ ನಾಲ್ಕು ಸಂಪುಟಗಳಲ್ಲಿ ಮುದ್ರಣಗೊಂಡಿದೆ. ಈ ಭಾನುವಾರದಿಂದ ಹದಿನೈದು ದಿನಕ್ಕೊಮ್ಮೆ ಈ ಸಂಪುಟಗಳ ಕಥೆಗಳು ನಿಮ್ಮ ಓದಿಗೆ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿವೆ.
ಅಬ್ಬಾಸ್‌ ಮೇಲಿನಮನಿ ಅವರು ಮೆಚ್ಚಿದ ಅವರದ್ದೇ ಕಥೆ ʼಮನುಷ್ಯರಾಗಿ ಇರುವ ಕ್ಷಣವುʼ ನಿಮ್ಮ ಈ ಭಾನುವಾರದ ಓದಿಗೆ.

 

ನಿನ್ನೊಳು ನೀನು ಶೋಧ ಮಾಡಲು ನೀನೇ ಸಂತ,

ನಿನ್ನ ಬಿಟ್ಟು ಏನಿಲ್ಲಂತ-ಗುರುಖಾದರಿ ಪೀರಾ ಸೂಫಿ ಕವಿ

ಸೂರ್ಯಾಸ್ತದ ಸಮಯ. ಜೀವಪುರದ ಯಾವುದೋ ಒಂದು ಮೂಲೆಯಿಂದ ಢಂ…. ಢಮಾರ…. ಚಟ್‍ಪಟ್ ಅಂತ ಮದ್ದು ಸುಡುವ ಸದ್ದು ಕೇಳಿ ಬಂದು ಅಚ್ಚರಿ ಹುಟ್ಟಿಸಿತು. ಕ್ಷಣಕ್ಷಣಕ್ಕೂ ಆ ಸದ್ದು ಹೆಚ್ಚುತ್ತಲೇ ಹೋಗಿ ಮರದ ಗೂಡುಗಳಲ್ಲಿದ್ದ ಹಕ್ಕಿಗಳು, ಗುಡಿಗೋಪುರ, ಮಸೀದೆಯ ಮಿನಾರುಗಳಲ್ಲಿ ಬೆಚ್ಚಗಿದ್ದ ಪಾರಿವಾಳಗಳು ತಲ್ಲಣದಲಿ ಉಲಿದವು. ಮದ್ದಿನ ಸದ್ದಿನೊಂದಿಗೆ ಅಯೋಧ್ಯೆಯ ಬಾಬರಿ ಮಸೀದೆ ಕೆಡವಿದ ಸಮಾಚಾರವು ತೇಲಿ ಪುರದ ಒಡಲು ವಿಹ್ವಲಗೊಂಡಿತು. ಗಲಭೆಯ ಅನುಮಾನದಿಂದ ಬೀದಿಯಲ್ಲಿ ಆಡಿಕೊಳ್ಳುತ್ತಿದ್ದ ಮಕ್ಕಳನ್ನು ಹೆಂಗಸರು ಧಾವಂತದಲ್ಲಿ ಮನೆಯೊಳಕ್ಕೆ ಕರೆದೊಯ್ದರು. ಮಗರೀಬ ನಮಾಜ ಮಾಡಿ ಮನೆಗಳತ್ತ ನಡೆದಿದ್ದ ಜನ ಆತಂಕಕ್ಕೊಳಗಾಗಿ ಮಸೀದೆಯತ್ತ ತಿರುಗಿ ಬಂದರು. ಹಾಗೆ ಬಂದವರನ್ನು ಸಮಾಜದ ಮುಖಂಡರಾದ ರೆಹಮಾನ ಸಾಹೇಬರು ಕುಳ್ಳಿರಿಸಿ,
“ಈಗ ನಾವೆಲ್ಲರೂ ತಾಳ್ಮೆಯಿಂದ ಇರಬೇಕು” ಎಂದರು.

“ಆದರೆ ಈ ಪಟಾಕ್ಷಿಯ ಸದ್ದು ….?” ಭೀತಿಯಿಂದ ಕೇಳಿದ ಮೌಲಾಲಿ.

“ಅದು ತಾತ್ಕಾಲಿಕ. ಹೆದರುವ ಕಾರಣ ಇಲ್ಲ”

“ಅದು ನಿಂತರೆ, ಕೆಲವರ ಕೂಗಾಟ, ಗದ್ದಲ ಏಳುವದು” ರಸೂಲ ಹೇಳಿದ.

“ಅದರತ್ತ ಗಮನ ಕೊಡುವದು ಬೇಡ”

“ಮುಸಿಬತ್ತು ಹೇಳಿ-ಕೇಳಿ ಬರುವುದೆ? ನಾವು ರಾತ್ರಿ ಕಳೆಯೋದು ಹೇಗೆ?” ಚಡಪಡಿಸಿದ ಹಸನ್‍ ಅಲಿ.

“ಕಿಡಿಗೇಡಿಗಳು ನಮ್ಮ ಜಿಂದಗಿ ಹಾಳು ಮಾಡುವರು” ವಿಲಿವಿಲಿಸಿದ ಅನ್ವರ್. “ಬರಿ ಊಹೆಯಿಂದ ನಮ್ಮ ಜಿಂದಗಿ ನಡೆಯೋದಿಲ್ಲ ಅನ್ವರ್. ಯಾರೋ ನಮ್ಮ ಜೀವಕ್ಕೆ ಅಪಾಯ ತರ್ತಾರೆಂದು ಅಂದುಕೊಳ್ಳೋದು ಸರಿಯಲ್ಲ”

“ಅವರು, ನಮ್ಮನ್ನು ಈ ದೇಶ ಬಿಟ್ಟು ಓಡಿಸುವುದಾಗಿ ಹೇಳುತ್ತಲೇ ಇರುತ್ತಾರೆ. ಇಂಥ ಪ್ರಸಂಗದಲ್ಲಿ ಅವರು ಸುಮ್ಮನಿರುತ್ತಾರೇನು?” ದಸ್ತಗೀರ ಏನೋ ನೆನಪಿಸಿಕೊಂಡು ಹೇಳಿದ.

“ಅದು ಅಂದಷ್ಟು ಸುಲಭ ಅಲ್ಲಬಿಡು. ನಾವೂ ಈ ನೆಲದಲ್ಲಿ ಹುಟ್ಟಿದೋರು. ಈ ನೆಲದ ಅನ್ನ ತಿಂದು, ನೀರು ಕುಡಿದು, ಗಾಳಿ ಸೇವಿಸಿದೋರು. ಎಲ್ಲರಂತೇ ನಮ್ಮ ಬದುಕು ಇಲ್ಲೆ, ಸಾವೂ ಇಲ್ಲೇ. ಇದು ಅವರಿಗೂ ಗೊತ್ತಿದೆ” ಹಲವಾರು ಸಲ ಹೇಳಿದ ಮಾತನ್ನೇ ಆಡಿದ್ದರು ರೆಹಮಾನ ಸಾಹೇಬರು.

“ಈ ಮಾತು ಸತ್ಯ. ಆದರೂ ಅವರು ಒಂದಿಲ್ಲ ಒಂದು ನೆಪದಲ್ಲಿ ದಾಳಿ ಮಾಡಿ ನಮ್ಮನ್ನು ಅಸ್ಥಿರಗೊಳಿಸುತ್ತಾರೆ” ಆತಂಕ ವ್ಯಕ್ತಪಡಿಸಿದ ಟೇಲರ ಮೋದಿನ.

“ನಾವು ಕೇವಲ ಅನುಮಾನಗಳನ್ನಿಟ್ಟುಕೊಂಡು ಆಲೋಚಿಸುವುದರಲ್ಲಿ ಅರ್ಥವಿಲ್ಲ. ಈ ಅನುಮಾನಗಳು, ಗಾಳಿ ಸುದ್ದಿಗಳು ಬಹಳ ಅಪಾಯಕಾರಿ. ಇಂಥವುಗಳಿಂದಲೇ ಮನುಷ್ಯ ಆವೇಶಕ್ಕೊಳಗಾಗೋದು. ಸೈತಾನ ಕೆಲಸ ಮಾಡೋದು. ಸೈತಾನ ಬೆಂಕಿಗೆ ಎಲ್ಲವನ್ನು ಸುಟ್ಟು ಭಸ್ಮ ಮಾಡುವ ಹಟ. ಆ ಸೈತಾನನ್ನು ನಮ್ಮೊಳಗೆ ಬಿಟ್ಟುಕೊಂಡರೆ ನಾವು ಮನುಷ್ಯರಾಗಿ ಉಳಿಯೋದು ಸಾಧ್ಯವೇ?” ರೆಹಮಾನ ಸಾಹೇಬರು ತಿಳಿ ತಿಳಿಯಾಗಿ ಉಲಿದರು.

“ಈ ಹಿಂದೆ ಅನೇಕ ಸಲ ಸಣ್ಣ ಪುಟ್ಟ ನೆವಕ್ಕೂ ಅವರು ನಮ್ಮ ಮೇಲೆ ಆಕ್ರಮಣ ಮಾಡಿದ್ದಾರಲ್ಲಾ” ಪಿಂಜಾರ ಡೋಂಗ್ರಿ ಹಳೆಯ ಪ್ರಸಂಗಗಳನ್ನು ಜ್ಞಾಪಿಸಿದ.

“ಆಕ್ರಮಣಗಳು ಸಂಭವಿಸಿದ್ದು ನಿಜ. ಆದರೆ ಇಂಥದರ ಹಿಂದೆ ಎರಡೂ ಕಡೆಯ ಮನಸ್ಸುಗಳು ಕೆಲಸ ಮಾಡಿದ್ದೂ ಇದೆ. ನಮ್ಮ ಬಗ್ಗೆ ಕೆಲವು ಹಿಂದೂಗಳಲ್ಲಿ ತಪ್ಪು ಗ್ರಹಿಕೆಗಗಳಿವೆ. ಅವರ ಬಗ್ಗೆ ನಮಗೂ ಸಂಶಯಗಳಿವೆ. ಇವೆರಡೂ ಭಯಂಕರವೇ. ಅವರಿವರು ಹೇಳುತ್ತಾ ಬಂದಿರುವುದನ್ನು, ಈಗಲೂ ಹೇಳುತ್ತಿರುವದನ್ನು ಕೇಳುತ್ತಾ ಬಂದಿದ್ದೇವೆ. ಅದರಲ್ಲಿ ಸಚ್ ಎಷ್ಟು, ಝೂಟ್ ಎಷ್ಟು ಅಂತ ಒಮ್ಮೆಯೂ ಯೋಚಿಸಿಲ್ಲ. ನೆಲಗೆಬರಿ ಸತ್ತ ಪಳೆಯುಳಿಕೆಗಳನ್ನು ಹುಡುಕುವರಿಗೆ ಪಿಶಾಚಿ ಹುಮ್ಮಸ್ಸು ಇದೆ. ಅಂಥವರಿಗೆ ನೀಚರ ಕುಮ್ಮಕ್ಕೂ ಇದೆ. ನಾವು ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸಿ ಅಸಹನೀಯರಾಗಿದ್ದೇವೆ. ನೆಮ್ಮದಿ ಕಳೆದುಕೊಂಡು, ನಮ್ಮ ಗೋರಿ ತೋಡಿಕೊಳ್ಳುತ್ತಾ ಸಾವಿನ ಮುಸಿಬತ್ ತಂದುಕೊಳ್ಳುತ್ತಿದ್ದೇವೆ” ವಿಷಾದವನ್ನು ಅಭಿವ್ಯಕ್ತಿಸಿದರು ರೆಹಮಾನ ಸಾಹೇಬರು.

“ಈ ಮುಸಿಬತ್ ನಮಗಷ್ಟೇ ಇರುವುದು” ಇಸ್ಮಾಯಿಲ್ ತಣ್ಣಗಿನ ದನಿಯಲ್ಲಿ ಹೇಳಿದ.

“ಹಾಗನ್ನುವುದು ತಪ್ಪು. ಅದು ಎಲ್ಲರಿಗೂ ಇದೆ. ಬಹಳಷ್ಟು ಗರೀಬರು, ದುಡಿದು ತಿನ್ನುವವರು, ನಮ್ಮಂತೆ ಹಿಂದೂಗಳಲ್ಲೂ ಇದ್ದಾರೆ”

“ಅದು ಅವರಿಗೆ ತಿಳಿಯೋದಿಲ್ಲೇನು?”

“ತಿಳಿವಳಿಕೆ ಕಮ್ಮಿ ಇದ್ದವರೇ ಮುಸಿಬತ್‍ ಗಳನ್ನು ಸೃಷ್ಟಿ ಮಾಡ್ತಾರೆ. ಅದಕ್ಕೆ ದೇವರು ಧರ್ಮದ ಹೆಸರು ಕೊಡ್ತಾರೆ. ಮುಗ್ಧರ ಎದೆಗಳಲ್ಲಿ ಅಜ್ಞಾನದ ಬೀಜ ಬಿತ್ತುತ್ತಾರೆ. ನಮ್ಮ ಧರ್ಮ ಹೆಚ್ಚು, ನಮ್ಮ ದೇವರು ಹೆಚ್ಚು ಅಂತ ಅನರ್ಥ ಭಾವನೆಗಳನ್ನು ಹುಟ್ಟಿಸುತ್ತಾರೆ. ಅವರೆಲ್ಲಾ ಸ್ವಾರ್ಥಿಗಳು, ಲಾಭಖೋರರು, ಅವರು ದೇವರು, ಧರ್ಮ, ಜಾತಿಗಳನ್ನು ಅಸ್ತ್ರಗಳನ್ನಾಗಿ ಪ್ರಯೋಗಿಸುವರು. ಜಾತಿಯ ಅಸ್ತ್ರವಂತೂ ಅವರ ಪಾಲಿಗೆ ರಾಮಬಾಣ ಇದ್ದಂತೆ. ಅದನ್ನು ಮಚ್ಚು, ಖಡ್ಗ, ತ್ರಿಶೂಲ, ಬಾಂಬುಗಳಾಗಿಯೂ, ಹಾಲಾಹಲವನ್ನಾಗಿಯೂ ಬಳಸುವಲ್ಲಿ ಚಾಣಾಕ್ಷರು. ಹಾಲು ಮನಸ್ಸುಗಳಲ್ಲಿ ಹಾಲಾಹಲದ ತೊಟ್ಟು ಬೆರೆಸುವಲ್ಲಿ ನಿಪುಣರು. ಬೆಳದಿಂಗಳಿರುವಲ್ಲಿ ಬೆಂಕಿಯನ್ನು ಹಬ್ಬಿಸುವ ಕೆಟ್ಟ ಚಾಳಿಯ ಬಗ್ಗೆ ನಮಗೆ ಎಚ್ಚರಿಕೆ ಇರಬೇಕು. ಮನುಷ್ಯನ ಜೀವಪ್ರೀತಿಗಾಗಿ ಪರಮಾತ್ಮ ಸುಂದರವಾದ, ಸಮೃದ್ಧವಾದ ಈ ಜಗತ್ತು ನಿರ್ಮಿಸಿದ್ದಾನೆ. ಕ್ರೂರಿಗಳು ಅದನ್ನು ಹಾಳು ಮಾಡಲು ಯೋಚಿಸುತ್ತಾರೆ. ಅದರಲ್ಲಿ ಆ ಪರವರದಿಗಾರನ ತಪ್ಪು ಏನಿದೆ? ಎಲ್ಲಾ ಮುಸಿಬತ್ತುಗಳು ನಮ್ಮ ಅಹಂಕಾರದ ಫಲ. ಜೀವಕುಲದ ನಾಶಕ್ಕೂ ಅದೇ ಕಾರಣ” ರೆಹಮಾನ ಸಾಹೇಬರು ಗಂಧ ತೀಡುವಂತೆ ಮಾತಾಡುತ್ತಲ್ಲೇ ಇದ್ದರು. ಅಷ್ಟರಲ್ಲಿ ಇಷಾ ನಮಾಜಿಗೆ ಅಜಾನ್ ಮೊಳಗಿತು.“ಅಲ್ಲಾಹ್ ಸರ್ವಶಕ್ತ ಇದ್ದಾನೆ. ಅವನು ಕಷ್ಟದಿಂದ ಪಾರುಗೊಳಿಸುವನು. ವುಜು ಮಾಡಿಕೊಳ್ಳೋಣ ನಡಿರಿ” ಎಂದರು ರೆಹಮಾನ ಸಾಹೇಬರು. ಅವರನ್ನು ಅನುಸರಿಸಿದ ಜನರ ಮುಖದಲ್ಲಿ ಸಮಾಧಾನದ ಚಿಹ್ನೆಗಳು ಕಾಣಿಸಿದವು.

ಪ್ರಾರ್ಥನೆಯ ನಂತರ ಪೇಶ್ ಇಮಾಮರು “ಯಾ ಮಾಲಿಕ್! ನಮಗೆ ತಾಳ್ಮೆಯನ್ನು ದಯಪಾಲಿಸು. ನಮ್ಮ ಪಾದಗಳನ್ನು ಸ್ಥಿರಗೊಳಿಸು. ಎದುರಾಗುವ ಸಂಕಟಗಳನ್ನು ನಿವಾರಿಸು. ಜೀವಪುರದ ಮನ-ಮನೆಗಳಲ್ಲೂ ಶಾಂತಿ, ನೆಮ್ಮದಿಯನ್ನು ವರ್ಧಿಸು” ಎಂದು ದುಆ ಪಠಿಸಿದರು, ಎಲ್ಲರೂ ಆಮಿನ್…. ಆಮಿನ್ ಎಂದುಲಿದರು. ಹಾಗೆ ದುಗುಡರಹಿತ ಮನಸ್ಸಿನವರಾಗಿ ಜನ ತಮ್ಮ ತಮ್ಮ ಮನೆಗಳಿಗೆ ತೆರಳುವದನ್ನು ನೋಡಿದ ರೆಹಮಾನ ಸಾಹೇಬರ ಮನಸ್ಸಿಗೆ ಹಿತವೆನಿಸಿತು.

******

ಪಟಾಕ್ಷಿಗಳ ಸದ್ದು ಯಾವಾಗಲೋ ಸ್ತಬ್ಧಗೊಂಡಿತ್ತು. ಆಗಾಗ ಪೋಲಿಸರ ಜೀಪು ಸಂಚರಿಸುವ ಆವಾಜು ಬಿಟ್ಟರೆ ಊರಲ್ಲೆಲ್ಲ ನೀರವತೆ. ಆಕಾಶದಲ್ಲಿ ಮೋಡ ಮುಸುಕಿದ ವಾತಾವರಣ. ಬೀದಿ ದೀಪಗಳು ಬೆಳಗತೊಡಗಿದ್ದವು. ರೆಹಮಾನ ಸಾಹೇಬರು ಎಚ್ಚರವಾಗಿಯೇ ಇದ್ದರು. ಉಲುಕೋಚಿಗಳಿಂದ ಅನಾಹುತಗಳೇನಾದರೂ ಸಂಭವಿಸಬಹುದೋ ಎನ್ನುವ ಅವ್ಯಕ್ತ ದಿಗಿಲು. ಬೆಳ್ಳಂಬೆಳಗು ಕೈಯಲ್ಲಿ ತಸ್ಬಿ ಹಿಡಿದು ಅಲ್ಲಾಹ್‍ ನನ್ನು ಸ್ಮರಿಸುತ್ತ ಕುಳಿತೇ ಇದ್ದರು.

ಅವರಿಗೆ ಹಿಂದೂಗಳ ಬಗ್ಗೆ ಪ್ರೀತಿ, ಅಭಿಮಾನವಿತ್ತು. ಮೂವತ್ತೈದು ವರ್ಷಗಳ ಕಾಲ ಅವರು ಕನ್ನಡ ಶಾಲೆಯ ಮಾಸ್ತರರಾಗಿ, ಎಲ್ಲ ಸಮುದಾಯದೊಂದಿಗೆ ಬೆರೆತುಕೊಂಡು ಅವರ ಅಂತಕರಣವನ್ನು, ಮಕ್ಕಳ ನಿರ್ಮಲ ಒಡನಾಟವನ್ನು ಅನುಭವಿಸಿದವರೇ ಆಗಿದ್ದರು. ಅನ್ಯ ಕೋಮಿನ ಗೆಳೆಯರು ಮತ್ತು ಅವರ ಕುಟುಂಬಗಳೊಂದಿಗೆ ರೆಹಮಾನ ಸಾಹೇಬರ ಕರುಳಬಳ್ಳಿಗಳು ಬೆಸೆದುಕೊಂಡಿದ್ದವು. ಜೀವಪುರದಲ್ಲಿ ಅವರ ವ್ಯಕ್ತಿತ್ವಕ್ಕೂ, ಮಾತಿಗೂ ಗೌರವವಿತ್ತು. ರಮ್ಜಾನ್ ಸಂದರ್ಭದಲ್ಲಿ ಗಲ್ಲಿಯ ಎಲ್ಲ ಹಿಂದೂಗಳ ಮನೆಮನೆಗಳಿಗೂ ಅವರ ಮನೆಯ ಸುರಕುರ್ಮ ತಲುಪಿಸುವ ರಿವಾಜು ಇತ್ತು. ಹಿಂದೂಗಳ ಹಬ್ಬ, ಮಂಗಲ ಕಾರ್ಯಗಳಲ್ಲಿ ರೆಹಮಾನ ಸಾಹೇಬರು ಪ್ರೀತಿಯಿಂದ ಪಾಲ್ಗೊಳ್ಳುವರು.

ಮುಸ್ಲಿಮರಲ್ಲಿ ಹೆಚ್ಚು ಜನ ಗರೀಬರಿದ್ದು, ಅವರು ದುಡಿಯಲು ಹಿಂದೂಗಳಲ್ಲಿ ಹೋಗುತ್ತಿದ್ದರು. ಹಿಂದೂಗಳು ಕೂಡ ಆ ಶ್ರಮಜೀವಿಗಳ ಬಗ್ಗೆ ಸಹಾನುಭೂತಿ ಇರಿಸಿಕೊಂಡಿದ್ದರು. ಜಾತಿಯ ಕಲ್ಪನೆ ಇರದಂತಿದ್ದ ಅವರ ನಡುವೆ ಮಧುರವಾದ ಬಾಂಧವ್ಯ ಏರ್ಪಟ್ಟು, ಮಾನವೀಯ ಕಕ್ಕುಲಾತಿ ನಿತಾಂತವಾಗಿತ್ತು. ಅದರ ಸಂಭ್ರಮವು ರೆಹಮಾನ ಸಾಹೇಬರ ಕಣ್ಣು ತುಂಬಿಕೊಂಡು, ಹೃದಯಕ್ಕೆ ಖುಷಿ ನೀಡಿತ್ತು.
ಜೀವಪುರವೆಂದರೆ ಮನುಷ್ಯರು ಇರುವ ಊರಾಗಿತ್ತು. ಕ್ಷುಲ್ಲಕ ಕಾರಣಗಳಿಂದ ಊರನ್ನು ನರಕ ಮಾಡುವ, ಮಾತಿನ ಕಿಡಿಯಿಂದ ಜನರ ಸಂಬಂಧಕ್ಕೆ ಬೆಂಕಿ ಹಚ್ಚುವ ಕ್ರಿಮಿಗಳು ಹುಟ್ಟಿರದ ಕಾರಣಕ್ಕಾಗಿ ಮತ್ತು ಅಲ್ಲಿ ಜೀವಪ್ರೀತಿಯ ಮನಸ್ಸುಗಳಿದ್ದ ಕಾರಣಕ್ಕಾಗಿ ಹಿಂಸಾತ್ಮಕ ಘಟನೆಗಳಿಗೆ ಅವಕಾಶವಿರಲಿಲ್ಲ.

ಹಿಂದೊಮ್ಮೆ ಊರಲ್ಲಿ ಇಟ್ಟಿಗೆ ಮೆರವಣಿಗೆ, ರಾಮಜ್ಯೋತಿ, ರಥಯಾತ್ರೆಗಳು ಆತಂಕವಿಲ್ಲದಂತೆ ನಡೆದುಹೋಗಿದ್ದವು. ಒಮ್ಮೊಮ್ಮೆ ಹಿಂದು-ಮುಂದಾಗಿಯೋ, ಮತ್ತೊಮ್ಮೆ ಒಟ್ಟು ಗೂಡಿಯೋ ಮೊಹರಮ್ ಮತ್ತು ಗಣೇಶ ಚತುರ್ಥಿ ಹಬ್ಬಗಳು ತಮ್ಮಷ್ಟಕ್ಕೆ ತಾವೆನ್ನುವಂತೆ ಆಚರಣೆಗೊಳ್ಳುತ್ತಿದ್ದವು. ಇವುಗಳ ನೆಪದಲ್ಲಿ ಊರಿನ ಜೀವದ್ರವ್ಯಕ್ಕೆ ಯಾವ ಹಾನಿಯೂ ಸಂಭವಿಸಿರಲಿಲ್ಲ.

ಕೆಟ್ಟದೃಷ್ಟಿ ತಾಗಿತೋ ಎನ್ನುವಂತೆ ಒಮ್ಮೆ ಗಣೇಶನ ಮೆರವಣಿಗೆಯ ವೇಳೆಗೆ ಕಿಡಿಗೇಡಿಯೊಬ್ಬ ಜೀವಪುರದ ಹೃದಯವನ್ನು ಕಲಕಲು ಪ್ರಯತ್ನಿಸಿದ್ದ. ಅವನು ಹೊರ ಊರಿನವನು. ಗಣೇಶ ಮೆರವಣಿಗೆಯ ನೇತೃತ್ವ ವಹಿಸಿ, ಮಸೀದೆ ಮುಂದೆ ರಾದ್ಧಾಂತ ಶುರುವಿಟ್ಟುಕೊಂಡಿದ್ದ. ಅದು ನಮಾಜಿನ ಸಮಯ. ಆ ಮನುಷ್ಯ ಮೆರವಣಿಗೆಯನ್ನು ಮುಂದೆ ಹೋಗಲು ಬಿಡದೆ, ಚೀತ್ಕಾರ, ಕೇಕೆ, ಬ್ಯಾಂಡಿನ ಆವಾಜಿಗೆ ಕುಮ್ಮಕ್ಕು ನೀಡಿ ಹುಚ್ಚೆದ್ದು ಕುಣಿಯತೊಡಗಿದ್ದ.

ಮುಸ್ಲಿಮ ಹುಡುಗರಿಬ್ಬರು ಮೆರವಣಿಗೆ ಮುಂದೆ ಹೋಗಲು ವಿನಂತಿಸಿಕೊಂಡಿದ್ದರು. ಆ ಮನುಷ್ಯ ಆವೇಶಕ್ಕೊಳಗಾದವನಂತೆ “ಇದು ಸರಕಾರಿ ರಸ್ತೆ, ಮುಂದೆ ಹೋಗು ಎನ್ನಲು ನೀವ್ಯಾರು? ನಾವು ಇಲ್ಲಿಯೇ ನಿಲ್ಲುತ್ತೇವೆ, ಕುಣಿಯುತ್ತೇವೆ” ಎಂದಿದ್ದ. ಕೂಡಲೇ ಅವನ ಹತ್ತಿರ ಧಾವಿಸಿದ ರೆಹಮಾನ ಸಾಹೇಬರು “ಒಳಗೆ ನಮಾಜ ಶುರುವಾಗುವುದು. ಒಂದಿಷ್ಟು ಆವಾಜು ಕಡಿಮೆ ಮಾಡಿರಿ” ಎಂದರು.

“ನಿಮಗೆ ನಮಾಜ ಮುಖ್ಯ ಆದರೆ, ನಮಗೆ ಇದು ಮುಖ್ಯ. ನೀವು ಹೇಳಿದ ಹಾಗೆ ನಾವೇಕೆ ಕೇಳಬೇಕು” ಕದನಕ್ಕೆ ಕಾಲು ಕೆದರತೊಡಗಿದ ಆ ವ್ಯಕ್ತಿ.

“ಉತ್ಸವ ಯಾವುದೇ ಆಗಿರಲಿ, ಯಾರದೇ ಆಗಿರಲಿ. ಅದು ಅವರವರಿಗೆ ಮುಖ್ಯವೇ. ಇದೆಲ್ಲ ದೇವರ ಮೇಲಿನ ಶ್ರದ್ಧೆಗಾಗಿ, ಬದುಕಿನ ಖುಷಿಗಾಗಿ ಅಲ್ಲವೇ ಮಾಡೋದು?”

“ನಮ್ಮದೂ ಅದೇ ಉದ್ದೇಶ. ನಾವು ಡೊಂಬರಾಟ ಮಾಡುತ್ತಿಲ್ಲ”

“ನೀನು ಇಂಥ ದ್ವೇಷದ ಮಾತು ಆಡಬೇಡ”

“ನಮ್ಮಲ್ಲಿ ದ್ವೇಷವಿಲ್ಲ ಅದನ್ನು ನಿಮ್ಮಲ್ಲಿ ಇಟ್ಟುಕೊಂಡು ನಮಗೆ ಬುದ್ಧಿ ಹೇಳಲು ಬರಬೇಡ”

“ನೀನು ಹುಚ್ಚನಂತೆ ಮಾತಾಡಬೇಡ. ನಮ್ಮ ಊರಿನಲ್ಲಿ ಮನುಷ್ಯರು ಮಾತ್ರ ಇದ್ದಾರೆ. ಇಲ್ಲಿ ಯಾವ ಕ್ಷಣಕ್ಕೂ ದೊಂಬಿ, ಗಲಭೆ ನಡೆದಿಲ್ಲ. ಜಾತಿ ಮತ್ಸರದಿಂದ ಹೃದಯಗಳು ಹೊತ್ತಿ ಉರಿದಿಲ್ಲ. ನೀನು ವಿನಾಕಾರಣ ನಮ್ಮಗಳ ಬಾಂಧವ್ಯಕ್ಕೆ ಬೆಂಕಿ ಹಚ್ಚಬೇಡ” ರೆಹಮಾನ ಸಾಹೇಬರು ಸಾವಧಾನವಾಗಿ ಹೇಳಿದರು.

“ನೀನು ಹೀಗೆ ಹೇಳಿ ಬಿಟ್ಟರೆ ನಾವು ಹೆದರಿಕೊಂಡು ಓಡಿ ಬಿಡುತ್ತೇವೆ ಅಂದುಕೊಂಡಿಯೇನು?” ಆ ಮನುಷ್ಯನ ಕಣ್ಣು ಹಿಗ್ಗಿತ್ತು.

“ನನಗೆ ಗೊತ್ತು ಇಷ್ಟು ಯುವಕರು ನಿನ್ನ ಹಿಂದೆ ಇದ್ದಾರೆಂದು ಈ ರೀತಿ ಮಾತಾಡುತ್ತಿರುವೆ. ನಿನ್ನೊಬ್ಬನ್ನನ್ನು ಬಿಟ್ಟರೆ ನಾವೆಲ್ಲರೂ ಇದೇ ಊರಿನವರು. ದಿನಾಲೂ ಒಬ್ಬರಿಗೊಬ್ಬರು ಮುಖ ನೋಡುವವರು, ಪರಸ್ಪರ ವ್ಯವಹರಿಸುವವರು. ಹೀಗೆ ಉತ್ಸವದ ನೆಪದಲ್ಲಿ ಮನಸ್ಸು ಕೆಡಿಸಿಕೊಂಡರೆ ಬದುಕು ಸರಳವಾಗಿರುವುದಿಲ್ಲ” ಎಂದ ರೆಹಮಾನ ಸಾಹೇಬರ ಮಾತುಗಳನ್ನು ಕೂಡಲೇ ತಮ್ಮ ಮನದಾಳಕ್ಕಿಳಿಸಿಕೊಡ ಯುವಕರು “ಜನಾಬರೆ ನೀವು ನಮಾಜ ಮಾಡಲು ಹೋಗಿ, ನಾವು ಮುಂದೆ ಹೋಗುತ್ತೇವೆ” ಎಂದು ಎಲ್ಲರನ್ನು ಸಾಗು ಹಾಕಿಕೊಂಡು ದಾರಿ ಕ್ರಮಿಸಿದರು. ತೀವ್ರ ಅಪಮಾನಕ್ಕೊಳಗಾದಂತವನಿದ್ದ ಆ ಮನುಷ್ಯ ಅವರ ಹಿಂದೆ ತೆವಳುತ್ತ ನಡೆದು ಹೋದ.

******

ಬೆಳಗುವ ಮನಸ್ಸಿಲ್ಲವೋ ಎನ್ನುವಂತೆ ಸೂರ್ಯ ಸಪ್ಪೆಯಾಗಿದ್ದ. ಗಾಳಿಯು ಮಂದವಾಗಿ ಬೀಸತೊಡಗಿತ್ತು. ದುಷ್ಕರ್ಮಿಗಳಿಂದ ಕುಕೃತ್ಯಗಳು ನಡೆಯಬಾರದೆನ್ನುವ ಮುಂಜಾಗ್ರತೆಯಿಂದ ಊರಲ್ಲಿ ಕರ್ಫ್ಯೂ ಜಾರಿಯಲ್ಲಿತ್ತು. ಕಣ್ಣಲ್ಲಿ ಬೆಳಕಿಲ್ಲದ, ಮುಖದಲ್ಲಿ ನಗುವಿಲ್ಲದ ದುಗುಡವು ಜನರ ಮನಸ್ಸು ಆವರಿಸಿಕೊಂಡ ಜನರ ಮುಖದಲ್ಲಿ ನಗುವಿರಲಿಲ್ಲ, ಕಣ್ಣಲ್ಲಿ ಬೆಳಕಿರಲಿಲ್ಲ.

ಹಗಲು ತೆವಳುತ್ತ ಸರಿದು, ಸೂರ್ಯ ಮೋಡಗಳಲ್ಲಿ ಅಸ್ತಮಿಸಿದ್ದ. ಮಗ್ರೀಬ್ ನಮಾಜ ಮುಗಿಸಿ ಹೊರಗೆ ಕಾಲಿಡುತ್ತಿದ್ದತೆ ಮುಜಾವರ ಖಾಜಾ, ರೆಹಮಾನ ಸಾಹೇಬರ ಹತ್ತಿರ ಧಾವಿಸಿ ಬಂದು “ಜನಾಬರೆ, ಮಾಬೂಬ್‍ ಸುಹಾನಿ ದರ್ಗಾದ ಗುಮ್ಮಜಗಳನ್ನು ಒಡೆದು ಹಾಕಿದ್ದಾರೆ” ಎಂದ. ಈ ಆಕಸ್ಮಿಕ ಸುದ್ದಿ ರೆಹಮಾನ ಸಾಹೇಬರನ್ನು ಕಂಗೆಡಿಸಿತು. ಅದನ್ನು ನಂಬಲಾರದ ಸ್ಥಿತಿಯೂ ಉಂಟಾಗಿ ಅವರು “ಇದು ಸುಳ್ಳು ಸುದ್ದಿ ಇರಬೇಕು ನೋಡು” ಎಂದರು. “ಜನಾಬರೆ ನಾನು ಇದನ್ನು ನಂಬಿರಲಿಲ್ಲ. ದನ ಕಾಯುವ ಹುಡುಗನೊಬ್ಬ ಹೇಳಿದ. ನಾನು ಗುಡ್ಡ ಹತ್ತಿ ನೋಡಿ ಬಂದೆ. ಕಂಪೌಂಡಿನ ನಾಲ್ಕೂ ಗುಮ್ಮಜಗಳನ್ನು ರಾತ್ರಿಯೇ ಒಡೆದು ಹಾಕಲಾಗಿದೆ” ಎಂದ ಖಾಜಾ.

“ಜನಾಬರೆ ಈಗವರಿಗೆ ಮೋಕಾ ಸಿಕ್ಕಿದೆ. ಈಗ ಗುಮ್ಮಜ ಒಡೆದು ಹಾಕಿದ್ದಾರೆ, ನಾಳೆ ಮಸೀದೆ ಕೆಡವುದೇ ಇರುವುದಿಲ್ಲ” ರಸೂಲನ ಧ್ವನಿಯಲ್ಲಿ ಕಳವಳವಿತ್ತು.

“ರಸೂಲ ಹೇಳಿದ್ದರಲ್ಲಿ ನಿಜ ಇದೆ. ನಾವೂ ಅದಕ್ಕೆ ಪ್ರತಿಯಾಗಿ..” ನಾಲ್ಕಾರು ಹುಡುಗರು ಒಟ್ಟಾಗಿ ಧ್ವನಿ ಹೊರಡಿಸುತ್ತಿದ್ದಂತೆ ರೆಹಮಾನ ಸಾಹೇಬರು,

“ತಪ್ಪು ತಪ್ಪು, ಇಂಥ ದುಡುಕಿನ ನಿರ್ಧಾರಗಳ ಬಗ್ಗೆ ಯೋಚಿಸಬಾರದು. ದ್ವೇಷಕ್ಕೆ ದ್ವೇಷ ಒಳ್ಳೆಯ ಫಲ ಅಲ್ಲ. ಆವೇಶ ಮನುಷ್ಯನನ್ನ ಮೃಗ ಮಾಡುವುದು” ಎಂದರು.

“ನಿಮ್ಮ ಹಾಗೆ ಅವರು ಯೋಚಿಸ್ತಾರೇನು?” ನಜೀರ ಕೇಳಿದ.

“ಜಂಗು ಹಿಡಿದ ಮನಸ್ಸಿನವರು ಇಂಥ ಕೆಲಸ ಮಾಡುತ್ತಾರೆ. ಇದರಲ್ಲಿ ಇಡೀ ಸಮುದಾಯದ ಪಾತ್ರ ಇದೆಯೆಂದು ಆಲೋಚಿಸುವುದು ಸರಿಯಲ್ಲ. ತಪ್ಪುಗಾರರನ್ನು ದೇವರು ನೋಡಿಕೊಳ್ಳುತ್ತಾನೆ”

“ಅಲ್ಲಾಹ್ ನೋಡಿಕೊಳ್ಳುತ್ತಾನೆಂದು ನಾವು ಸುಮ್ಮನಾಗಿ ಬಿಟ್ಟರೆ, ಸೈತಾನರು ಹತ್ತಾಗಿ, ನೂರಾಗಿ, ಸಾವಿರಾಗಿ ನಮಗೆ ಆಪತ್ತು ತರ್ತಾರೆ” ಫಯಾಜ್ ಆಕ್ರೋಶ ವ್ಯಕ್ತಪಡಿಸಿದ.

“ದೇವರ ಬಲದ ಎದುರು ಸೈತಾನನ ಬಲ ಏನು? ಬಿಸಿ ರಕ್ತದ ತೀರ್ಮಾನಗಳು ಜೀವಕುಲವನ್ನೇ ನಾಶ ಮಾಡುತ್ತವೆ. ಅಲ್ಲಾಹನನ್ನು ಪ್ರಾರ್ಥಿಸುವ ಈ ಕೈಗಳಿಗೆ ಒಳ್ಳೆಯದನ್ನ ಮಾಡುವ ಹಕ್ಕಿದೆ ಹೊರತು ಕೆಟ್ಟದ್ದನಲ್ಲ. ಕುರಾನ್ ನಮಗೆ ಇದನ್ನೇ ಕಲಿಸುವುದಲ್ಲವೇ? ದ್ವೇಷಕ್ಕೆ ಬದಲು ಪ್ರೀತಿ ಹಂಚುವ ಕೆಲಸ ನಮ್ಮಿಂದಾಗಬೇಕು. ಇಸ್ಲಾಂದ ಅರ್ಥ ಶಾಂತಿಯೇ ಆಗಿದೆ. ಇದು ಹೇಳುವದಕ್ಕಷ್ಟೆ ಸಾಕೆ? ನಡವಳಿಕೆಯಲ್ಲಿ ಇರಬೇಡವೆ?”

“ಹಾಗಾದರೆ ನಾವು ಹೇಡಿಗಳಂತೆ ಕುಳಿತಿರಬೇಕೇನು?”ಅಸಹನೆಯಿಂದ ಕೇಳಿದ ಉಮರ.

“ಸಂಯಮ ಮಾನವೀಯ ಲಕ್ಷಣ. ಅದು ಹೇಡಿಯ ಲಕ್ಷಣವಲ್ಲ”

“ನೀವು ಯಾವಾಗಲೂ ಹೀಗೆಯೇ ನಮ್ಮನ್ನು ಮುನ್ನುಗ್ಗಲು ಬಿಡುವುದೇ ಇಲ್ಲ”

“ಮನುಷ್ಯನಿಗೆ ಉದ್ವೇಗ ಒಳ್ಳೆಯದಲ್ಲ. ಅದು ಬಹಳ ಅಪಾಯಕಾರಿ”

“ಗುಮ್ಮಟಗಳನ್ನು ಒಡೆದು ಹಾಕಿದ ವ್ಯಕ್ತಿಗಳು ಯಾರು ಅನ್ನೋದು ನಮಗೆ ತಿಳಿಯಬೇಡವೆ?”

“ಅದು ಅಲ್ಲಾಹ್‍ನ ನಿಗೆ ತಿಳಿದರೆ ಸಾಕು. ನಮಗೆ ಒಂದು ವಿಚಾರ ಗೊತ್ತಿರಬೇಕು. ಮಸೀದೆ, ಮಂದಿರ ಪರಮಾತ್ಮನ ನೆಲೆಗಳೆಂದು ನಾವು ನಂಬಿದ್ದೇವೆ. ನಮ್ಮ ಪೂರ್ವಾಗ್ರಹ ದೋಷದಿಂದ, ದ್ವೇಷದಿಂದ ಅವುಗಳ ಇಮಾರತುಗಳನ್ನು ಒಡೆದು ಹಾಕುವ ಅಥವಾ ಸುಟ್ಟು ಬೂದಿ ಮಾಡುವ ನೀಚ ಕೆಲಸವನ್ನು ನಾವು ಮಾಡಬಾರದು. ಇದು ದೇವರ ಮೇಲಿನ ವಿಶ್ವಾಸವನ್ನೇ ಇಲ್ಲವಾಗಿಸುವುದು”.

ಹಾಲು ಮನಸ್ಸುಗಳಲ್ಲಿ ಹಾಲಾಹಲದ ತೊಟ್ಟು ಬೆರೆಸುವಲ್ಲಿ ನಿಪುಣರು. ಬೆಳದಿಂಗಳಿರುವಲ್ಲಿ ಬೆಂಕಿಯನ್ನು ಹಬ್ಬಿಸುವ ಕೆಟ್ಟ ಚಾಳಿಯ ಬಗ್ಗೆ ನಮಗೆ ಎಚ್ಚರಿಕೆ ಇರಬೇಕು. ಮನುಷ್ಯನ ಜೀವಪ್ರೀತಿಗಾಗಿ ಪರಮಾತ್ಮ ಸುಂದರವಾದ, ಸಮೃದ್ಧವಾದ ಈ ಜಗತ್ತು ನಿರ್ಮಿಸಿದ್ದಾನೆ.

ರೆಹಮಾನ ಸಾಹೇಬರ ಮಾತುಗಳನ್ನು ಜನ ತಾಳ್ಮೆಯಿಂದ ಆಲಿಸತೊಡಗಿದ್ದರು.

“ನಾವು ಅಹಂಕಾರದಿಂದ ಎಂದೂ ಮನುಷ್ಯರಾಗುವುದಿಲ್ಲ ಸೋದರರೆ, ಈ ಜಗತ್ತನ್ನು ಸೃಷ್ಟಿಸಿದವನು ಆ ದೇವರು. ಇದನ್ನು ನಾಶ ಮಾಡುವ ಶಕ್ತಿಯು ಅವನದೇ. ನಾವೇ ದೊಡ್ಡವರು ನಮ್ಮಿಂದಲೇ ಜಗತ್ತಿಗೆ ಬೆಳಕು ಅಂದುಕೊಳ್ಳೋದು ಒಂದು ಭ್ರಮೆ. ನಮ್ಮ ಇರುವು ನೀರ ಮೇಲೆ ಗುಳ್ಳೆಯಂತೆ, ನಾವು ಯಾರೂ ಶಾಶ್ವತ ಅಲ್ಲ. ಹುಟ್ಟಿನ ಬೆನ್ನ ಹಿಂದೆ ಸಾವನ್ನೂ ಕಟ್ಟಿಕೊಂಡು ಬಂದಿದ್ದೇವೆ. ನಡುವೆ ಬದುಕಿನಾಟ ಚಂದ ಇದೆ. ಇದು ಮಕ್ಕಳಾಟ, ಆಟವಾದ ಮೇಲೆ ನಮ್ಮ ಗೂಡಿಗೆ ಮರಳಲೇಬೇಕು ಕೂಡಿ ಆಡುವಾಗ ಪ್ರೇಮ ಇರಬೇಕು, ವಿಶ್ವಾಸ ಇರಬೇಕು. ನಾವು ಒಬ್ಬರಿಗೊಬ್ಬರು ಅಸಹನೆಯಿಂದ ಇದ್ದರೆ ನಮ್ಮ ಬದುಕಿನ ಬಣ್ಣ ಕೆಡುವುದು. ಅದರ ಸ್ವಾಸ್ಥವೂ ಕೆಡುವುದು.

ಒಬ್ಬರ ನಾಶಕ್ಕೆ ನಾವು ಆಲೋಚಿಸಿದರೆ ನಮ್ಮ ನಾಶಕ್ಕೆ ಮತ್ತೊಬ್ಬರು ಬಲೆ ಹೆಣೆಯುತ್ತಾರೆ. ಹೀಗೆ ಪ್ರತಿಯೊಬ್ಬರು ಬಲೆ ಹೆಣೆಯುತ್ತ ಹೋದರೆ ಪರಮಾತ್ಮನ ಕೃಪೆ ಯಾರಿಗೆ ಸಿಕ್ಕೀತು? ಅನುಮಾನ ಅನ್ನೋದು ಒಂದು ರೋಗ, ಕೊಲ್ಲುವುದೇ ಅದರ ಕೆಲಸ. ತಿಳಿವಳಿಕೆ ಪ್ರೀತಿ ಇದ್ದವರಿಗೆ ಈ ರೋಗ ತಗಲುವುದಿಲ್ಲ”

ರೆಹಮಾನ ಸಾಹೇಬರ ಒಡಲಾಳದ ಮಾತು ನೆರೆದವರ ಮನಸ್ಸಿನ ತುಂಬಾ ಪ್ರಕಾಶಿಸಿತು. ಅವರು ಉಲ್ಲಾಸದಿಂದ ಮನೆಗಳತ್ತ ಹೊರಟರು.

******

“ನಮಸ್ಕಾರ ಜನಾಬರಿಗೆ” ಧ್ವನಿ ಹರಿದು ಬಂದತ್ತ ದೃಷ್ಟಿ ಹೊರಳಿಸಿದರು ರೆಹಮಾನ ಸಾಹೇಬರು. ಪುರಸಭಾ ಅಧ್ಯಕ್ಷ ಚಂದ್ರೇಗೌಡರು, ನಾಲ್ಕಾರು ಜನ ಊರ ಪ್ರಮುಖರೊಂದಿಗೆ ಮನೆಯ ಅಂಗಳಲ್ಲಿ ನಿಂತಿದ್ದನ್ನು ನೋಡುತ್ತಲೇ ರೆಹಮಾನ ಸಾಹೇಬರು ಸಂತಸದಿಂದ ಎದ್ದು ಹೋಗಿ “ಬನ್ರಿ ಚಂದ್ರಣ್ಣ” ಎಂದು ಎಲ್ಲರನ್ನೂ ಬರಮಾಡಿಕೊಂಡು, ಕಟ್ಟೆಯ ಮೇಲೆ ಹಾಕಿದ ಚಾಪೆಯ ಮೇಲೆ ಕುಳ್ಳಿರಿಸಿದರು.

“ಜನಾಬರೆ ಈ ಸುದ್ದಿಯಿಂದ ನಮಗೆ ಬಹಳ ಆಘಾತವಾಗಿದೆ” ವಿಷಾದ ವ್ಯಕ್ತಪಡಿಸಿದರು ಚಂದ್ರೇಗೌಡರು. ಉಳಿದವರೂ ಅವರ ಧ್ವನಿಯೊಂದಿಗೆ ಧ್ವನಿ ಬೆರೆಸಿದರು.

ರೆಹಮಾನ ಸಾಹೇಬರು ಮೌನವಾಗಿಯೇ ಇದ್ದರು. ಶಿವಲಿಂಗಪ್ಪ ಶೆಟ್ಟರು “ಶಾಂತವಾಗಿರುವ ಊರನ್ನು ಸುಡುಗಾಡು ಮಾಡುವ ಕೆಲಸ ಇದು. ಅಷ್ಟೂ ತಿಳಿಯಬೇಡವೆ ಆ ಮೂರ್ಖರಿಗೆ” ಎಂದು ಸಿಟ್ಟು ಅಭಿವ್ಯಕ್ತಿಸಿದರು.

“ಅವರು ಗುಮ್ಮಟ ಒಡೆದು ಹಾಕಿದ್ದಾರೆ. ನಮ್ಮ ಮನಸ್ಸುಗಳನ್ನಲ್ಲ. ಪ್ರೀತಿ ತುಂಬಿರುವ ಮನಸ್ಸುಗಳು ಎಂದಿಗೂ ಒಡೆಯುವದಿಲ್ಲ ಶೆಟ್ಟರೆ” ರೆಹಮಾನ ಸಾಹೇಬರು ಮೌನ ಮುರಿದರು.

“ನಿಜ ಜನಾಬರೆ, ನಾವೆಲ್ಲ ಬೇರೆ ಬೇರೆಯಾಗಿ ಮನೆ-ಮಠ ಕಟ್ಟಿಕೊಂಡಿದ್ದೇವೆ. ಇಷ್ಟವಾದ ದೇವರನ್ನು ಪೂಜಿಸುತ್ತೇವೆ, ಪ್ರಾರ್ಥಿಸುತ್ತೇವೆ. ಧರ್ಮಗಳನ್ನು ಅನುಸರಿಸುತ್ತೇವೆ. ಆದರೆ ನಮ್ಮ ಮನುಷ್ಯತ್ವ ಒಂದೇ ಆಗಿದೆ” ಹೃದಯದ ಮಾತಾಡಿದರು ಚಂದ್ರೇಗೌಡರು.

“ಎಲ್ಲ ಧರ್ಮಗಳ ಮೂಲ ಸೆಲೆ ಅದೇ ಗೌಡರೆ. ಅಜ್ಞಾನಿಗಳಾಗಿ ನಾವು ಕಚ್ಚಾಡುತ್ತಿದ್ದೇವೆ” ಜನಾಬ ಹೇಳಿದರು.

“ಜನಾಬರೆ ಈ ಕಚ್ಚಾಟಕ್ಕೆ ವಿಷಜಂತುಗಳ ಪ್ರಚೋದನೆ ಕಾರಣ. ಅಂಥವರು ಜಾತಿ, ಧರ್ಮ, ಮಂದಿರ-ಮಸೀದೆಗಳ ನೆಪದಲ್ಲಿ ಕ್ರೌರ್ಯ ಎಸಗುತ್ತಾರೆ. ಇದು ನಮ್ಮ ದೇಶದ ದುರಂತ” ರಾಮಭಟ್ಟರು ನಿಟ್ಟುಸಿರ್ಗರೆದರು.

“ಭಟ್ಟರೆ, ಇದಕ್ಕೆ ಹೊರತಾಗಿ ಮಾಡಬೇಕಾದ ಕೆಲಸಗಳು ಎಷ್ಟಿಲ್ಲ ನಮಗೆ? ಹಸಿವಿನಿಂದ ಎಷ್ಟೋ ಗರೀಬರು ಸಾಯುತ್ತಿದ್ದಾರೆ. ಉದ್ಯೋಗ ಇಲ್ಲದೆ ತರುಣರು ಹತಾಶಕ್ಕೊಳಗಾಗುತ್ತಿದ್ದಾರೆ. ಅನಕ್ಷರತೆ ಕಂದಾಚಾರದಿಂದ ಬಳಲುವ ಜನ ಶೋಷಣೆಗೊಳಗಾಗಿ ನೋವು ಅನುಭವಿಸುತ್ತಿದ್ದಾರೆ. ಭ್ರಷ್ಟಾಚಾರ, ಅಸಮಾನತೆಗಳು, ಅತ್ಯಾಚಾರ, ಅನೈತಿಕತೆ, ರೈತರ ಆತ್ಮಹತ್ಯೆಗಳು ಅವ್ಯಾಹತವಾಗಿಯೇ ನಡೆಯುತ್ತಿವೆ. ಇದರ ಬಗ್ಗೆ ಯೋಚನೆಯಿಲ್ಲ. ಸಂಬಂಧಕ್ಕಿಂತ ಮನುಷ್ಯ-ಮನುಷ್ಯರ ನಡುವೆ ಗೋಡೆಗಳನ್ನು ಕಟ್ಟುವುದೇ ಮಿಗಿಲಾಗಿದೆ. ಬದುಕಿಸುವುದಕ್ಕಿಂತ ಕೊಲ್ಲುವ ಕೆಲಸ ನಡದೇ ಇದೆ. ಇದು ಯಾವ ದೇವರಿಗೆ ಪ್ರೀತಿ? ಯಾವ ಧರ್ಮದ ಶ್ರೇಯಸ್ಸು”

ರೆಹಮಾನ ಸಾಹೇಬರ ದನಿಯಲ್ಲಿ ತೀವ್ರವಾದ ವಿಷಾದವಿತ್ತು.

“ನಾವೂ ಬಹಳ ಕೋಶಿಷ ಮಾಡಿದೆವು, ದರ್ಗಾದ ಗುಮ್ಮಟ ಒಡೆದವರು ಯಾರು ಅನ್ನೋದು ಗೊತ್ತಾಗಲಿಲ್ಲ” ಮಲ್ಲಿಕಾರ್ಜುನಯ್ಯ ನಿರಾಶೆ ಪ್ರಕಟಿಸಿದರು.

“ಅಣ್ಣ ಅವರ ಬಗ್ಗೆ ದೇವರು ತಿಳಿದಿರುತ್ತಾನೆ ಬಿಡಿ. ಮಂದಿರ-ಮಸೀದೆ, ಚರ್ಚು-ದ್ವಾರ ಪವಿತ್ರ ಶ್ರದ್ಧಾಕೇಂದ್ರಗಳು. ಆಯಾ ಸಮುದಾಯಗಳಿಗೆ ಮುಖ್ಯವೆ, ಮನುಷ್ಯ ಜೀವ ಮತ್ತು ಸಂಬಂಧಗಳು ಅಷ್ಟೇ ಮುಖ್ಯ ಅಲ್ಲವೇ? ಕಲ್ಲು, ಮಣ್ಣು, ಇಟ್ಟಿಗೆ, ಸಿಮೆಂಟಿನ ಗೋಪುರ, ಗುಮ್ಮಟಗಳನ್ನು ದುಷ್ಟರು ಒಡೆದುಹಾಕಬಹುದು. ಕೂಡಿದ ಮನಸ್ಸುಗಳನ್ನು ಒಡೆಯೋದು ಅಷ್ಟು ಸುಲಭವಲ್ಲ”.

“ದರ್ಗಾ ಮುಸ್ಲಿಮ ಶರಣರದ್ದೇ ಆದರೂ ನಾವೆಲ್ಲ ಅದಕ್ಕೆ ನಡೆದುಕೊಳ್ಳುತ್ತೇವೆ. ಅದು ಇಡಿ ಊರಿನ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಇದು ಶಾಶ್ವತವಾಗಿರುವದು. ಈಗ ಒಡೆದು ಹಾಕಿದ ಗುಮ್ಮಟಗಳನ್ನು ನಾವು ಕಟ್ಟಿಸುತ್ತೇವೆ ಜನಾಬರೆ” ಎಂದರು ಚಂದ್ರೇಗೌಡರು. ಉಳಿದವರು ಅವರ ಮಾತನ್ನು ಅನುಮೋದಿಸಿದರು.

“ನಿಮ್ಮೆಲ್ಲರ ಪ್ರೀತಿ, ಅಂತಃಕರಣಕ್ಕೆ ನನ್ನ ಮನಸ್ಸು ಕೃತಜ್ಞವಾಗಿದೆ ಗೌಡರೆ” ರೆಹಮಾನ ಸಾಹೇಬರು ಉಲ್ಲಸಿತರಾಗಿ ಹೇಳಿದರು.

“ಜನಾಬರೆ, ನಾವು-ನೀವು ಅಣ್ಣ ತಮ್ಮದಿರಂತೆ ಬದುಕುತ್ತ ಬಂದಿದ್ದೇವೆ. ಹೀಗೆ ಬಾಳುವುದರಲ್ಲಿ ಊರಿನ ಹಿತವಿದೆ. ನೀವು ಆತಂಕ ಪಡುವ ಪ್ರಮೇಯವೇ ಇಲ್ಲ. ನಾವೆಲ್ಲ ನಿಮ್ಮೊಂದಿಗೆ ಇದ್ದೇವೆ” ಚಂದ್ರೇಗೌಡರು ಒಡಲಾಳದ ನುಡಿಯಾಡಿದರು. ರೆಹಮಾನ ಸಾಹೇಬರು ಅವರಿಗೆಲ್ಲ ಚಹಾ ಕುಡಿಸಿ ಗೌರವದಿಂದ ಬೀಳ್ಕೊಟ್ಟರು.

******

ಹಗಲು ಇರುಳುಗಳ ಹೊರಳಿನಲ್ಲಿ ಈಗ ಜೀವಪುರ ಶಾಂತವಾಗಿತ್ತು.

ಗುಡ್ಡದ ಮೇಲಿನ ದರ್ಗಾದ ಗುಮ್ಮಟಗಳು ಪುನಃ ನಿರ್ಮಿಸಲ್ಪಟ್ಟು, ಸುಣ್ಣ-ಬಣ್ಣಗಳಿಂದ ಮೊದಲಿಗಿಂತಲೂ ಚಂದಾಗಿ ತೋರತೊಡಗಿದ್ದವು. ಊರಿನ ಜೀವಪ್ರೀತಿ ಎಂದಿನಂತೆ ನಿರಾಳವಾಗಿ ಜನರು ಕ್ರಿಯಾಶೀಲರಾದರು.

ಆ ದಿನದ ಸೂರ್ಯೋದಯದೊಂದಿಗೆ ಊರಿನ ಪತ್ರಕರ್ತನೊಬ್ಬನ ಸಾವಿನ ಸುದ್ದಿಯೂ ಹರಡಿತು. ಅದರ ಸುತ್ತ ವದಂತಿಗಳು ರೆಕ್ಕೆ ಬಿಚ್ಚಿಕೊಂಡು ಉದ್ವಿಗ್ನತೆ ಸೃಷ್ಟಿಸಿದವು. ಪುರಸಭೆಗೆ ಸೇರಿದ ಜಾಗೆಯಲ್ಲಿ ಬೇಕಾಬಿಟ್ಟಿ ವಾಸವಾಗಿರುವ ಮುಸ್ಲಿಮರ ಜೋಪಡಿಗಳನ್ನು ಕಿತ್ತುಹಾಕುವ, ಹಿಂದೂಗಳ ಅಂಗಡಿ, ಫ್ಯಾಕ್ಟರಿಗಳಲ್ಲಿ ದುಡಿಯುವರನ್ನು ಕೆಲಸದಿಂದ ಬಿಡಿಸುವ, ಅವರು ವ್ಯಾಪಾರ ಮಾಡುತ್ತಿರುವ ಮಳಿಗೆಗಳನ್ನು ಕದಲಿಸುವ ಇಂಥವೇ ಮಾತು ಕಿವಿಗೆ ಬೀಳುತ್ತಿರುವಂತೆ ರೆಹಮಾನ ಸಾಹೇಬರು ವಿಚಲಿತಗೊಂಡರು.

ಆ ಪತ್ರಕರ್ತನೋ ಕಳೆದ ಸಂಜೆ ಯಾವುದೋ ರಾಜಕೀಯ ಸಮಾರಂಭದ ವರದಿ ಮಾಡಲು ಹೋಗಿದ್ದು, ಆನಂತರ ನಡೆದ ಪಾರ್ಟಿಯಲ್ಲಿ ವಿಪರೀತವಾಗಿ ಕುಡಿದು, ಅರ್ಧರಾತ್ರಿಯ ಹೊತ್ತಿಗೆ ಬಂದು ಮಲಗಿದವನು ಹೃದಯಾಘಾತದಿಂದ ಅಸುನೀಗಿದ್ದ. ಬ್ಲ್ಯಾಕ್‍ಮೇಲ್ ತಂತ್ರಗಳನ್ನು ಪ್ರಯೋಗಿಸಿ ಹೆದರಿಸಿ ಪತ್ರಿಕಾಧರ್ಮವನ್ನು ತನ್ನ ಚಿಲ್ಲರೆತನದ ಬಂಡವಾಳವನ್ನಾಗಿಸಿಕೊಂಡು ಹರಾಮಿ ಗಬ್ಬುಗೌಲಿನಿಂದಲೆ ತನ್ನ ಬದುಕು ರೂಪಿಸಿಕೊಳ್ಳುವ ಅವನ ಸ್ವಾರ್ಥಕ್ಕೆ ಜೀವಪುರವೇನೂ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಅವನು ಕೋಮು ಕ್ರಿಮಿಯಾಗಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವುದು ಮತ್ತು ತನ್ನಂತೆ ಕೆಲವು ಹುಳುಗಳನ್ನು ಬೆಳೆಸುತ್ತಿರುವುದು ಜನರಿಗೆ ಬ್ರಹ್ಮರಾಕ್ಷಸವಾಗಿ ಕಾಡತೊಡಗಿತ್ತು. ದರ್ಗಾದ ಗುಮ್ಮಟಗಳನ್ನು ಒಡೆಯುವ ನೀಲನಕ್ಷೆ ಕೂಡ ಅವನ ಮಿದುಳಿನ ಟ್ಯಾಂಕಿನದು ಎನ್ನುವ ಸಂಗತಿಯೂ ಗುಸುಗುಸು ಕೇಳಿಬಂದಿತ್ತು.

ಪತ್ರಕರ್ತ ಸತ್ತಿದ್ದು ಜೈನಾಬಿ ಗುಡಿಸಿಲಿನಲ್ಲಿ. ಆಕೆ ಮುಸ್ಲಿಮ ಎನ್ನುವ ಕಾರಣಕ್ಕಾಗಿ ಮೇಲೆ ಹೇಳಿದ ವದಂತಿಗಳು ಅವನ ಚೇಲಾಗಳಿಂದ ಹರಡಿಕೊಂಡಿದ್ದವು. ಅವನ ಸಾವಿನ ಹಿಂದೆ, ಆ ಕೋಮಿನವರ ಕೈವಾಡ ಇದೆಯಂದು, ಅವರು ಜೈನಾಬಿಯ ಮೂಲಕ ಪತ್ರಕರ್ತನ ಜೀವಕ್ಕೆ ಕುತ್ತು ಬಂದಿದೆಯೆಂದು ನಂಬಿಸುವ, ಆ ಮೂಲಕ ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ವ್ಯವಸ್ಥಿತ ಸಂಚೊಂದನ್ನು ಅವರು ರೂಪಿಸಿದ್ದರು.

ಈಗ ಮಸೀದೆಯಲ್ಲಿ ನೆರೆದ ಜನರ ಮುಖದಲ್ಲಿ ದುಗುಡದ ಛಾಯೆ ದಟ್ಟವಾಗಿತ್ತು. ಕೆಲವರು ಅಲ್ಲಲ್ಲಿ ಮೆಲುವಾಗಿ ಚರ್ಚೆಗಿಳಿದಿದ್ದರು. ಒಂದು ಕಡೆಗೆ ಯುವಕರು ತೀವ್ರವಾಗಿ ಚಡಪಡಿಸಲಾರಂಭಿಸಿದ್ದರು. ಅವರೊಳಗೊಬ್ಬ ಎದ್ದುನಿಂತು “ಜನಾಬರೆ ಈ ಸಲ ನಾವು ನಿಮ್ಮ ಮಾತು ಕೇಳುವುದಿಲ್ಲ. ಅವರು ಯಾರಾದರೂ ನಮ್ಮ ಮೇಲೆಬಿದ್ದರೆ, ನಾವೂ ಹೋರಾಟಕ್ಕಿಳಿಯುತ್ತೇವೆ” ಎಂದು ಆವೇಶದ ಮಾತಾಡಿದ.

“ಬಿಸಿರಕ್ತದ ತೀರ್ಮಾನಗಳು ಒಳ್ಳೆಯ ಫಲ ನೀಡೋದಿಲ್ಲ. ನಾನು ಮೊದಲೇ ಹೇಳಿದ್ದೇನೆ. ಗಾಳಿ ಮಾತುಗಳನ್ನು ನಂಬಬಾರದು ಅಂತ. ಅವುಗಳಿಗೆ ತಳಬುಡ ಇರೋದಿಲ್ಲ. ಹೋರಾಟಕ್ಕೆ ಅವು ಆಧಾರವೂ ಅಲ್ಲ. ವದಂತಿಗಳನ್ನು ಹುಟ್ಟಿಸುವವರು ಮತ್ತು ಹಬ್ಬಿಸುವವರು ಹಿಜಡಾಗಳು. ಅವರು ಮುಖಾಮುಖಿಯಾಗುವರಲ್ಲ, ಹಿಂದೆ ನಿಂತು ಅಮಾಯಕರ ಸಾವು ನೋವುಗಳ ಮಜಾ ಅನುಭವಿಸೋರು. ಆ ಸೈತಾನರ ಬಗ್ಗೆ ನಾವು ಎಚ್ಚರವಹಿಸಬೇಕಷ್ಟೆ. ತರುಣರು ವಿವೇಕ ಇಲ್ಲದವರಂತೆ ದುಡುಕಬಾರದು” ಎಂದಿನ ಧಾಟಿಯಲ್ಲಿ ಉಲಿದರು ರೆಹಮಾನ ಸಾಹೇಬರು.

“ಸಂಯಮ, ಸಮಾಧಾನ ಅಂತೀರಿ. ನಾವು ಬೇಗುದಿಯಲ್ಲೇ ಬದುಕಬೇಕೆ?” ರಬ್ಬಾನಿ ಹುಬ್ಬೇರಿಸಿ ಕೇಳಿದ.

“ರಬ್ಬಾನಿ ನಮ್ಮ ಬೇಗುದಿಗೆ ವಿಪರೀತ ಕಲ್ಪನೆಗಳೇ ಕಾರಣ. ಮನುಷ್ಯನ ನಾಲಗೆಗೆ ಎಲುಬಿಲ್ಲ. ದುಷ್ಟರು ಅದನ್ನು ಮನಬಲ್ಲಂತೆ ಬಳಸಿ ಕ್ಷೋಭೆಗೂ ಕಾರಣರಾಗುವರು. ಅವರೆಲ್ಲ ಜೀವವಿರೋಧಿಗಳು. ತಾವು ಮಾತ್ರ ಸುಖವಾಗಿ ಬದುಕಬೇಕೆಂದುಕೊಳ್ಳುವವರು. ಅವರಿಗೆ ನೈತಿಕ ಸ್ಥೈರ್ಯ ಇರೋದಿಲ್ಲ. ಒಂದು ತನದ ಭಂಡತನ ಇರೋದು. ಅವರು ಉಮ್ಮೇದಿನಿಂದಲೆ ಉದ್ವಿಗ್ನತೆ ಹುಟ್ಟುಹಾಕುವರು.”

“ಅವರು ನಮ್ಮ ಮೇಲೆ ಬೀಳುವ ಮಾತು ಆಡಿದ್ದಾರೆ” ಚಾಂದಪೀರಾ ಹೇಳಿದ.

“ತಮ್ಮ ತಂಟೆಗೆ ಬಂದರೆ, ಈ ಲೋಕವನ್ನೇ ನಾಶ ಮಾಡುತ್ತೇವೆ ಎಂದು ಜಂಭಕೊಚ್ಚಿಕೊಳ್ಳುವ ಪಾಖಂಡಿಗಳಿಗೇನೂ ಕಮ್ಮಿಇಲ್ಲ. ಅವರನ್ನು ಉದಾಸೀನ ಮಾಡುವುದೇ ಸರಿಯಾದ ಮಾರ್ಗ”

“ಆ ಪತ್ರಕರ್ತನನ್ನು ನಾವೇ ಕೊಲ್ಲಿಸಿದ್ದೇವೆ ಎನ್ನುವುದು ಅವರ ಆರೋಪ”

“ಅದಕ್ಕೆ ಸಾಕ್ಷಿ-ಆಧಾರಗಳೇನು?”

“ಅವನು ಸತ್ತಿದ್ದು ಆ ಜೈನಾಬಿಯ ಮನೆಯಲ್ಲಿ”

“ಜೈನಾಬಿ ಮತ್ತು ಪತ್ರಕರ್ತನ ನಡುವಿನ ನಂಟು ವೈಯಕ್ತಿಕವಾದದ್ದು. ಸಮುದಾಯಕ್ಕೂ ಅದಕ್ಕೂ ಸಂಬಂಧವೇ ಇಲ್ಲ. ಅದನ್ನು ಮೈಮೇಲೆ ಎಳೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ನಮ್ಮ ಹೋರಾಟ ಏನಿದ್ದರೂ ಬೇಇಮಾನ, ಅಜ್ಞಾನದ ವಿರುದ್ಧ ನಡೆಯಬೇಕು. ದೇವರಿಗೂ, ಧರ್ಮಕ್ಕೂ ಇಷ್ಟವಿಲ್ಲದ ವಿಚಾರಗಳೆದರು ಸೆಣಸಬೇಕು. ಇದು ನಿಜವಾದ ಹೋರಾಟ. ಇದು ಸಮುದಾಯಕ್ಕೂ, ಊರಿಗೂ ನೆಮ್ಮದಿ ತರುವದು” ರೆಹಮಾನ ಸಾಹೇಬರ ಮಾತುಗಳು ಮಲ್ಲಿಗೆಯಂತೆ ಘಮಘಮಿಸಿದವು. ಅದರ ಸುಗಂಧ ದುಗುಡದ ಮನಸ್ಸುಗಳನ್ನು ಆವರಿಸಿಕೊಂಡು ನೆಮ್ಮದಿ ನೀಡುತ್ತಿರುವಂತೆ ಜನ ಮಸೀದೆಯಿಂದ ನಿರ್ಗಮಿಸತೊಡಗಿದರು.

******

(ಅಬ್ಬಾಸ್‌ ಮೇಲಿನಮನಿ)

ಕಥೆ ನನಗೆ ತುಂಬ ಇಷ್ಟವಾದ ಪ್ರಕಾರ. ನನ್ನ ಬರವಣಿಗೆ ಕಾವ್ಯದಿಂದ ಆರಂಭವಾಗಿದ್ದರೂ ಕಥೆ ಬರೆಯುವಲ್ಲಿನ ಪ್ರೀತಿ, ಲವಲವಿಕೆ ಅದಮ್ಯವೆನಿಸಿದೆ. ಇದು ನನ್ನ ಜೀವ ಮತ್ತು ಅಸ್ಮಿತೆ ಕೂಡ. ಸ್ವಾನುಭವ, ಲೋಕಾನುಭವಗಳ ಸಂವೇದನಾ ಸಾಂದ್ರತೆ ಹಾಗೂ ತೀವ್ರ ತುಡಿತವೇ ನನ್ನೆಲ್ಲ ಕಥೆಗಳಿಗೆ ಕಾರಣ ಮತ್ತು ಉಸಿರು. ನನ್ನ ಪಾಲಿಗೆ ಕಥೆ ಎಂದರೆ ಬದುಕಿನ ವಾಸ್ತವ, ಮನುಷ್ಯ ಸಂಬಂಧಗಳ ಅರ್ಥಪೂರ್ಣ ಹುಡುಕಾಟ, ಜೀವ ಮಿಡಿತದ ನಿತಾಂತತೆ.ಮಾನವೀಯ ಮೌಲ್ಯಗಳ ಅನಾವರಣ.ಕುಶಲ ಸಮಾಜದ ಕಾಳಜಿಯೆನಿಸಿದೆ.ವಾಸ್ತವ ಮತ್ತು ಕಲ್ಪನೆಯ ಸಾತತ್ಯವು ಹೊಸ ಸಾಧ್ಯತೆಯೊಂದರ ನಿರಾಳತೆಯ ಚೆಲುವನ್ನು ಸಂಭ್ರಮಿಸುವುದು ಈ ಕಥೆಗಳ ಅರಿವಿನ ಲಯವಾಗಿದೆ ಎಂಬುದು ನನ್ನ ಗ್ರಹಿಕೆ.

ನನ್ನ ನೂರಕ್ಕೂ ಮಿಕ್ಕಿದ ಕಥೆಗಳಲ್ಲಿ ಯಾವುದು ಮೆಚ್ಚು ಎಂದು ಹೇಳುವುದು ಕಷ್ಟಸಾಧ್ಯದ ಕೆಲಸ. ಎಲ್ಲ ಕಥೆಗಳು ನನಗೆ ಪ್ರಿಯವೇ.ಇದನ್ನು ಕೆಲವರು ಹೆತ್ತವರಿಗೆ ಹೆಗ್ಗಣ ಮುದ್ದು ಎಂದು ದೂಷಿಸಬಹುದು. ಒಂದೊಂದು ಕಥೆ ತನ್ನದೆ ಆದ ವಸ್ತುವಿನ ನಿಜದ ದನಿಯಿಂದ, ಒಡಲ ಭಾಷೆ, ತಂತ್ರಗಾರಿಕೆಯಿಂದ ಯಾತನೆಯ ಚಡಪಡಿಕೆಗೊ, ಕರುಳ ಆದ್ರ್ರತೆಗೊ, ಸ್ವಾದದ ಶೋಧಕ್ಕೊ, ಜೀವ ಪುಳಕಕ್ಕೊ ಸಂವಹನಗೊಂಡು, ಮನುಷ್ಯ ಸ್ವಭಾವಕ್ಕೆ ವಿವೇಕದ ಬೆಳಕು ಹನಿಸಿ ಬದುಕು ಕೊಡುವ ಗೌರವದ ಘನತೆಗೆ ತಹತಹಿಸುವುದೆಂದಾರೆ ಆ ಕಥೆ ನನಗೂ ಮೆಚ್ಚುಗೆ ಮತ್ತು ಸೊಗಸು ತರುವಂಥದೆಂದು ವಿನಮ್ರವಾಗಿ ಹೇಳಲಿಚ್ಛಿಸುತ್ತೇನೆ.

‘ಮನುಷ್ಯರಾಗುವ ಕ್ಷಣವು’ ಅಂಥದೊಂದು ಕಥೆ.ಬಾಬರಿ ಮಸೀದೆ ಉರುಳಿದ ಸಮಯವು ಈ ಕಥೆಯ ಹುಟ್ಟಿಗೆ ಕಾರಣ.ಮಸೀದೆ ಕೆಡವಿದ್ದರ ಬಗ್ಗೆಯಾಗಲಿ, ಅಲ್ಲಿ ರಾಮ ಮಂದಿರ ಕಟ್ಟುವುದರ ಬಗ್ಗೆಯಾಗಲಿ ನನ್ನ ಧೋರಣೆ ನಿರ್ಲಿಪ್ತವಾಗಿದ್ದರೂ ಆತಂಕ ತೀವ್ರವೆನಿಸಿದ್ದು, ದೇವರು-ಧರ್ಮ-ಜಾತಿಗಳ ಹೆಸರಿನಲ್ಲಿ ಭಾರತೀಯ ಮನಸ್ಸುಗಳು ಛಿದ್ರವಾಗುವುದರ ಬಗ್ಗೆ ಹಾಗೂ ನನ್ನ ದೇಶದ ಏಕತೆ, ಸಾಮರಸ್ಯ ಸಂಸ್ಕøತಿಗೆ ಧಕ್ಕೆ ಉಂಟಾಗುವುದರ ಬಗ್ಗೆ.ಕೋಮುವಾದವನ್ನೇ ಆಶ್ರಯಿಸಿ, ಅಧಿಕಾರಕ್ಕಾಗಿ ಗರಿಗೆದರಿಕೊಳ್ಳುವ ಮೂಲಕ ಮನುಷ್ಯ ಸಂಬಂಧವನ್ನು ಧಿಕ್ಕರಿಸುವುದರ ಪರಿಣಾಮಗಳು ರೂಕ್ಷವಾಗಿ ಕಾಡಿದ್ದವು.ಆ ಕ್ಷಣದಲ್ಲಿ ನನ್ನೂರಿನಲ್ಲಿ ಸಂಭವಿಸಿದ ನಾಲ್ಕಾರು ಘಟನೆಗಳು ತಲ್ಲಣಕ್ಕೆ ಕಾರಣವಾಗಿ ಈ ಕಥೆ ನನ್ನಿಂದ ಬರೆಯಿಸಿಕೊಂಡಿತು.

ಆವೇಶದ ನಡುವೆಯೂ ಮನುಷ್ಯ ರಾಕ್ಷಸನಾಗದೇ ಮಾನವನಾಗಿ ಉಳಿಯಬೇಕೆಂಬುದು ಈ ಕಥೆಯ ಕೇಂದ್ರಪ್ರಜ್ಞೆ.ಮಂದಿರ-ಮಸೀದೆ, ಚರ್ಚು-ದ್ವಾರ, ಬಸದಿ-ವಿಹಾರಗಳು ಕಲ್ಲು-ಮಣ್ಣು, ಗಚ್ಚು-ಗಾರೆಯ ಕಟ್ಟಡಗಳಷ್ಟೆ.ಇವುಗಳಿಗಿಂತಲೂ ಮನುಷ್ಯ ಜೀವಗಳು ಪವಿತ್ರ, ಅವುಗಳ ಹೃದಯ ಸಂಬಂಧ ಮುಖ್ಯ.ಇವು ಯಾವ ಸಮಯಕ್ಕೂ ಮುಕ್ಕಾಗಬಾರದು ಎನ್ನುವ ಊರಿನ ಹಿರಿಯ ಜೀವ ರಹಿಮಾನಸಾಹೇಬರು ತೋರುವ ಸಂಯಮ, ಅಭಿವ್ಯಕ್ತಿಸುವ ವಿಚಾರಗಳು, ಬೆಂಕಿಯನ್ನು ಬೆಳದಿಂಗಳಾಗಿಸುವ ಅಂತರಾಳದ ಸೇಂದ್ರೀಯತೆ ಫಲವಂತಿಕೆಯನ್ನು ದರ್ಶಿಸುವುದು ಈ ಕಥೆಯ ಪ್ರಧಾನ ನೆಲೆಯಾಗಿದೆ.ಮನುಷ್ಯ ಸ್ವಭಾವತ ಕ್ರೂರಿಯಲ್ಲ; ಅವನು ದಯಾಳು.ತಾನೂ ಬದುಕಿ ಇನ್ನೊಬ್ಬರನ್ನೂ ಬದುಕಿಸುವ ಅವನ ಮಾನವೀಯತೆ ಮಿಗಿಲಾದುದನ್ನು ಸಾಕ್ಷೀಕರಿಸುವ ಈ ಕಥೆ ನನಗೆ ಸಮಾಧಾನ ತರುವಂತಿದೆ.