ನನ್ನೊಳಗೆ ಉಷಾ ಜೀವಂತವಾಗಿಯೇ ಇದ್ದಳು. ಕೆಲವೊಮ್ಮೆ ಕನಸುಗಳಲ್ಲಿ ಬಂದು ತನ್ನ ದುಃಖದ ಕಥೆಗಳನ್ನು ಹೇಳಿಕೊಂಡಳು. ಇನ್ನು ಕೆಲವೊಮ್ಮೆ ಅವಳೊಬ್ಬ ಸದ್ಗೃಹಿಣಿಯಾಗಿ ತಲೆಗೆ ಮಿಂದು, ಕೂದಲು ಕಟ್ಟಿಕೊಂಡು, ಬಟ್ಟೆ ತುರುಬು ಹಾಕಿ, ಮಂಗಲ ಕುಂಕುಮವನ್ನಿಟ್ಟುಕೊಂಡು ನಂದಿನಿ ಹಾಲಿನ ಪ್ಯಾಕೆಟ್ ಮನೆಯೊಳಗೆ ತರುತ್ತಿರುವಂತೆ ಕನಸಾಗುತ್ತಿತ್ತು. ‘ಸದಾಶಿವಯ್ಯನವರ ಮಾತನ್ನು ಎಂದಿಗೂ ನಂಬಬೇಡ’ ಎಂದು ಒಂದು ಸಲ ಹೇಳಿ ಹೋದಳು.  ‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಚಿಂತಾಮಣಿ ಕೊಡ್ಲೆಕೆರೆ ಬರೆದ ಕತೆ ‘ಯಾದೇವಿ..’ ನಿಮ್ಮ ಈ ಭಾನುವಾರದ ಓದಿಗೆ

“ನನ್ನ ಬಾಲ್ಯದ ಗೆಳತಿಯೂ, ಇಂದು ಧರೆಗಿಳಿದ ಭಗವತಿ ಎಂದು ಪ್ರಸಿದ್ಧರಾಗಿರುವ ದೇವಿಯೂ ಆದ ಉಷಾಂಬಿಕಾ ಅವರಿಗೆ ನಮಸ್ಕಾರಗಳು. ಹಿರಣ್ಯಗರ್ಭದ ಕನ್ನಡ ಶಾಲೆಯಲ್ಲಿ ಮೊದಲ ಮೂರು ವರ್ಷಗಳು, ಬಳಿಕ ಮಾಧ್ಯಮಿಕ ಶಾಲೆಯಲ್ಲಿ ಎರಡು ವರ್ಷಗಳು ನಿಮ್ಮೊಟ್ಟಿಗೆ ಓದಿದ ಕೇಶವವರ್ಮನೆಂಬ ಹೆಸರಿನ ನನ್ನನ್ನು, ಕ್ಲಾಸಿನ ಪರೀಕ್ಷೆಗಳಲ್ಲಿ ಸದಾ ಮೊದಲಿಗನಾಗಿರುತ್ತಿದ್ದ ನನ್ನನ್ನು ತಾವು (ಅಂದರೆ ನೀನು) ಗುರುತಿಸುತ್ತೀರಿ (ಅಂದರೆ ಗುರುತಿಸುತ್ತೀ) ಎಂಬ ಧೈರ್ಯದಿಂದ ಮತ್ತು ಸಹಪಾಠಿಯಾಗಿದ್ದೆನೆಂಬ ಸಲಿಗೆಯಿಂದ ಈ ಪತ್ರ ಬರೆಯುತ್ತಿದ್ದೇನೆ. ನಿನ್ನ ದೈವೀ ವ್ಯಕ್ತಿತ್ವದ ಬಗೆಗೆ ನನಗೆ ತಿಳಿದಿರಲಿಲ್ಲ ಮತ್ತು ಈಗಲಾದರೂ ನಿನಗೆ ಪತ್ರ ಬರೆಯಲು ಯಾವುದೇ ನಿರ್ದಿಷ್ಟ ಕಾರಣವಿಲ್ಲ. ಆದರೆ ನಿನ್ನ ಬಗೆಗೆ ತಿಳಿಯುವ ಕುತೂಹಲ ಮಾತ್ರ ವಿಪರೀತ ಇದೆ. ‘ನಿನ್ನ ಬಗೆಗೆ’ ಎಂಬಲ್ಲೆಲ್ಲ ‘ತಮ್ಮ ಬಗೆಗೆ’ ಎಂದು ಓದಿಕೊಳ್ಳಬಹುದು. ನಿನ್ನನ್ನು ಹೇಗೆ ಕರೆಯಬೇಕೆಂಬ ವಿಷಯದಲ್ಲಿ ನನಗೆ ಗೊಂದಲವಿರುವುದು ನಿಜ. ನೀನು ಉತ್ತರಿಸಿದ ಮೇಲೇ ಅದು ಪರಿಹಾರವಾಗಬೇಕು. ಸುಮಾರಾಗಿ ಈ ಅರ್ಥ ಬರುವ ಪತ್ರವನ್ನು ಉಷಾಂಬಿಕಾ ದೇವಿಯವರಿಗೆ ಬರೆದು ಹಾಕಿದೆ. ನಾಡಿನಲ್ಲೆಲ್ಲ ತುಂಬ ಪ್ರಸಿದ್ಧಳಾದ ಉಷಾಂಬಿಕಾದೇವಿಯ ಕುರಿತು ನಾನು ಕುತೂಹಲ ತಾಳಿದ್ದೆ. ಅದರ ಜೊತೆಗೆ ಉಷಾ ಎಂಬ ಹೆಸರಿನ ಹುಡುಗಿಯೊಬ್ಬಳು ಶಾಲೆ ಓದುವಾಗ ನನ್ನ ಜತೆಗಿದ್ದಳು ಎಂಬ ನೆನಪೂ ಹಾದು ಹೋಗುತ್ತಿತ್ತು. ಈ ಎರಡೂ ಸಂಗತಿಗಳು ಹದಿನೈದಿಪ್ಪತ್ತು ದಿನಗಳ ಹಿಂದೆ ದೂರದರ್ಶನದ ಪರದೆಯ ಮೇಲೆ ಒಂದು ಶುಭಮುಹೂರ್ತದಲ್ಲಿ ಸಂಧಿಸಿದವು. ಸಂದೇಹವಿಲ್ಲ: ಅವಳೇ ಇವಳು. ಹೆಂಡತಿ ಕುಸುಮಾ ಮಾತ್ರ ಆ ಸಾಧ್ಯತೆಯನ್ನು ತಳ್ಳಿ ಹಾಕಿದಳು. ನೀವು ಓದಿದ ಕಾಲದಲ್ಲಿ ಕಂಡ ಹುಡುಗಿಯ ಛಾಯೆಯನ್ನು ಈಗ ಕಂಡ ಈ ಮಹಾಮಾತೆಯಲ್ಲಿ ಹುಡುಕುವುದಾದರೂ ಹೇಗೆಂಬುದು ಅವಳ ಪ್ರಶ್ನೆ. ಆದರೆ ನನಗೆ ಮಾತ್ರ ಕಿಂಚಿತ್ತೂ ಸಂಶಯ ಉಳಿದಿರಲಿಲ್ಲ. ಆದುದರಿಂದಲೇ ಮೇಲಿನಂತೆ ಪತ್ರ ಬರೆದಿದ್ದು.

ವಾಸ್ತವಿಕವಾಗಿ ನಾನು ಉಷಾಳನ್ನು ಹುಡುಕದ ಜಾಗವಿಲ್ಲ. ಸದಾ ವರ್ಗಾವಣೆಯ ಸರಕಾರೀ ಉದ್ಯೋಗದಲ್ಲಿ ನನ್ನ ತಂದೆ ಇದ್ದರಾದುದರಿಂದ ಅವರೊಟ್ಟಿಗೆ ನನ್ನ ಬಾಲ್ಯದ ಅನೇಕ ವರ್ಷಗಳು ಅನೇಕ ಊರುಗಳಲ್ಲಿ ಹಂಚಿ ಹೋಗಿವೆ. ಆದರೆ ಹಿರಣ್ಯಗರ್ಭಕ್ಕೆ ಮಾತ್ರ ಎರಡು ಸಲ ಅವರಿಗೆ ವರ್ಗವಾಗಿತ್ತಾದುದರಿಂದ ಕನ್ನಡ ಶಾಲೆಯ ಕೆಲ ವರ್ಷಗಳು, ಬಳಿಕ ಹೈಸ್ಕೂಲಿನಲ್ಲೂ ಒಂಬತ್ತು, ಹತ್ತನೆಯ ತರಗತಿ ಅಲ್ಲಿ ಓದಲು ಸಾಧ್ಯವಾಯಿತು. ಹಾಗೆ ವಾಪಸು ಆ ಊರಿಗೆ ಬಂದಾಗಲೂ ಉಷಾ ಅಲ್ಲೇ ಇದ್ದಳು. ಹಳೆಯ ಗುರುತು ಮರೆತಿರಲಿಲ್ಲ. ಮರೆಯುವುದು ಸಾಧ್ಯವಿರಲಿಲ್ಲ. ಅಷ್ಟು ಪ್ರೀತಿಯಿಂದ ನಾವು ಕನ್ನಡ ಶಾಲೆಯ ದಿನಗಳಲ್ಲಿ ಆಡುತ್ತಿದ್ದೆವು, ಅವಳ ಮನೆ ಎದುರಿನ ಗದ್ದೆಬದಿಯಲ್ಲಿ ಬೆಳೆಯುತ್ತಿದ್ದ ಕುಸುಮಾಲೆ ಹಣ್ಣುಗಳನ್ನು ಅವಳು ನನಗಾಗಿ ತಂದುಕೊಡುತ್ತಿದ್ದಳು. ಆ ಹಣ್ಣುಗಳು ಯಾವಾಗಲೂ ಸಿಹಿಯಾಗಿರುತ್ತಿದ್ದವು- ನನ್ನ ಗೆಳತಿಯ ಮಧುರ ಪ್ರೀತಿಯಂತೆ. ಅವಳ ಅಂಗಿಯ ಮುದ್ದಾದ ಕೆಂಪು ಹೂಗಳಂತೆ. ಸದಾ ಸರ್ವದಾ ಅವಳ ಮೊಗದಲ್ಲಿ ನಗುವಿರುತ್ತಿತ್ತು. ಈಗಷ್ಟೇ ಬೆಳಕಿನ ಕಿರಣಗಳಲ್ಲಿ ತೊಳೆದಿಟ್ಟಂಥ ನಗು.

ನಾನೂ, ಅವಳೂ ಮನೆ ಎದುರಿನ ಗುಡ್ಡದಿಂದ ಇಳಿಜಾರಿಗೆ ಕೈ ಕೈ ಹಿಡಿದು ಸುಂಯೆAದು ಜಾರುತ್ತಿದ್ದೆವು. ಪೇರಲದ ಮರಗಳಲ್ಲೇ ನಮ್ಮ ನಡು ಮಧ್ಯಾಹ್ನದ ವಾಸ. ಅವಳಿಗೊಂದು ಹಾಡು ಬರುತ್ತಿತ್ತು. “ಗಿಳಿಯೇ, ಮರಿಯೇ, ಸುಂದರಿ, ಡೌಲು ಎಷ್ಟೇ ವಯ್ಯಾರಿ, ಪೇಟೆಗೆ ಹೋಗಿ ಬಂದೆ, ಬೀಡಾ ಕದ್ದು ತಿಂದೆ, ಅದಕೇ ತುಟಿಯು ಕೆಂಪಾಯ್ತು” ಎನ್ನುತ ಕೆಂಪು ತುಟಿಗಳನ್ನು ತೋರಿ ಮುದ್ದಾಗಿ ನಗುತ್ತಿದ್ದಳು. “ಪಂಜರವಾಸವು ನಿನಗಾಯ್ತು” ಎಂದು ಆ ಹಾಡಿನ ಕೊನೆಯ ಸಾಲನ್ನು ಹೇಳಿ ನಾನವಳನ್ನು ಅಣಕಿಸುತ್ತಿದ್ದೆ. ಈ ಹಾಡನ್ನು ಅವಳು ಎಷ್ಟು ಬಾರಿ ಬೇಕಾದರೂ ಹೇಳುತ್ತಿದ್ದಳು. ಎಷ್ಟು ಜನರ ಮುಂದೆ ಬೇಕಾದರೂ ಬೇಸರವಿಲ್ಲದೆ ಹೇಳಬಲ್ಲವಳಾಗಿದ್ದಳು. ಇದಲ್ಲದೆ ಅವಳ ಬಳಿ ಒಂದು ಕಥೆ ಇತ್ತು. ಅದನ್ನು ಎಷ್ಟು ಸಲ ಕೇಳಿಸಿಕೊಂಡರೂ ನನಗೆ ಕಲಿಯಲಾಗಲಿಲ್ಲ. ಅದರಲ್ಲಿ ಬರುತ್ತಿದ್ದ ರಾಕ್ಷಸರು, ದೇವತೆಗಳು, ಗಂಧರ್ವರು, ಕಿನ್ನರರಿಗೊಂದು ಲೆಕ್ಕವೇ ಇರಲಿಲ್ಲ. ಪ್ರತಿಸಲ ಕೇಳಿದಾಗಲೂ ಅವಳು ಹೊಸದಾಗಿಯೇ ಒಂದಷ್ಟು ದೇವತೆಗಳನ್ನು ಅಥವಾ ಗಂಧರ್ವರನ್ನು ಕಥೆಯೊಳಗೆ ಸೇರಿಸುತ್ತಿದ್ದಳು. ಕೇಳಿದರೆ ನಕ್ಕು ಬಿಡುತ್ತಿದ್ದಳು. ಎಂದೂ ಬದಲಾಗದ ಒಂದು ಕವಿತೆ, ಬದಲಾಗುತ್ತಲೇ ಇದ್ದ ಒಂದು ಕಥೆ ಅವಳ ಆಸ್ತಿಯಾಗಿದ್ದವು. ಜೊತೆಗೆ ಸ್ಕರ್ಟಿನ ತುಂಬ ಕುಸುಮಾಲೆ ಹಣ್ಣುಗಳು.

ಆ ನೆನಪು ಹೊತ್ತು ನಾನು ಒಂಬತ್ತನೆಯ ತರಗತಿಗೆ ಹಿರಣ್ಯಗರ್ಭಕ್ಕೆ ವಾಪಸು ಬಂದೆ. ಗೆಳತಿ ನನ್ನನ್ನು ಮರೆತಿರಲಿಲ್ಲ. ಗುರುತು ಹಿಡಿದು ವಿಶ್ವಾಸದಿಂದ ನಕ್ಕಳು. ಆ ನಗು ಹೇಗಿತ್ತೆಂದರೆ ಅದು ನನ್ನನ್ನು ಸ್ವಾಗತಿಸಿದಂತೆಯೂ ಇತ್ತು ಕೊಂಚ ದೂರದಲ್ಲಿಟ್ಟಂತೆಯೂ ಇತ್ತು. ಅದನ್ನು ಅಲಕ್ಷಿಸಿ ನಾನು ‘ಈಗಲೂ ಕುಸುಮಾಲೆ ಹಣ್ಣುಗಳನ್ನು ತಂದು ಕೊಡುತ್ತೀಯಾ?’ ಎಂದೆ. ಆಕೆ ಗಂಭೀರವಾಗಿ ‘ನಾವೀಗ ದೊಡ್ಡ ಕ್ಲಾಸಿನ ವಿದ್ಯಾರ್ಥಿಗಳು, ಹುಡುಗಾಟ ಆಡಬಾರದು’ ಎಂದಳು. ‘ಅರೇ, ಹೌದಲ್ಲ’ ಎನಿಸಿ ನಾನು ಸುಮ್ಮನಾದೆ. ನನಗೆ ನನ್ನ ಹಿಂದಿನ ಗೆಳತಿ ಸಿಕ್ಕಲಿಲ್ಲವಲ್ಲ ಎಂದು ಒಮ್ಮೆ ದುಃಖವಾಯಿತು.

ಪ್ರತಿಸಲ ಕೇಳಿದಾಗಲೂ ಅವಳು ಹೊಸದಾಗಿಯೇ ಒಂದಷ್ಟು ದೇವತೆಗಳನ್ನು ಅಥವಾ ಗಂಧರ್ವರನ್ನು ಕಥೆಯೊಳಗೆ ಸೇರಿಸುತ್ತಿದ್ದಳು. ಕೇಳಿದರೆ ನಕ್ಕು ಬಿಡುತ್ತಿದ್ದಳು. ಎಂದೂ ಬದಲಾಗದ ಒಂದು ಕವಿತೆ, ಬದಲಾಗುತ್ತಲೇ ಇದ್ದ ಒಂದು ಕಥೆ ಅವಳ ಆಸ್ತಿಯಾಗಿದ್ದವು. ಜೊತೆಗೆ ಸ್ಕರ್ಟಿನ ತುಂಬ ಕುಸುಮಾಲೆ ಹಣ್ಣುಗಳು.

ಆದರೆ ಈಗಲೂ ಅವಳು ಅಕ್ಕನಂತೆ ನನ್ನನ್ನು ತರಾಟೆಗೆ ತೆಗೆದುಕೊಳ್ಳುವ ಹಕ್ಕು ಉಳಿಸಿಕೊಂಡಿದ್ದಳು. ಒಂದು ಸಲ ಗಣಿತದಲ್ಲಿ ಕಡಿಮೆ ಅಂಕ ತೆಗೆದುಕೊಂಡಿದ್ದಕ್ಕಾಗಿ ದೂರದಿಂದಲೇ ಕೆಕ್ಕರಿಸಿ ನೋಡಿ ‘ಸರಿಯಾಗಿ ಓದು’ ಎಂದು ನನ್ನನ್ನು ಎಚ್ಚರಿಸಿದ್ದಳು. ಅವಳ ಬಗೆಗಿನ ಪ್ರೀತಿ ಎಷ್ಟಿತ್ತೆಂದರೆ ‘ಹೋಗೇ, ನಿನಗೆ ಪಾಸಾಗುವ ಮಾರ್ಕು ಸಹ ಬಿದ್ದಿಲ್ಲ’ ಎಂದು ಅವಳಿಗೆ ಯಾವತ್ತೂ ಹೇಳಲಾರದವನಾಗಿದ್ದೆ. ಅವಳಾದರೂ ತನ್ನ ಓದನ್ನು ದೊಡ್ಡ ಸಂಗತಿ ಎಂದು ತಿಳಿದಿರಲಿಲ್ಲ. ಕ್ಲಾಸಿನಲ್ಲಿ ಓದಿನಲ್ಲಿ ಮುಂದಿರಬೇಕಾದ ಜವಾಬ್ದಾರಿಯನ್ನು ನನಗೆ ವಹಿಸಿ ಅವಳು ತನ್ನ ಕರ್ತವ್ಯ ಏನಿದ್ದರೂ ಮುಂದೆ ಗೃಹಿಣಿಯಾಗಲು ಸಿದ್ಧತೆ ನಡೆಸುವುದು ಎಂದು ತಿಳಿದಂತಿತ್ತು. ಎಸ್.ಎಸ್.ಎಲ್.ಸಿ.ಯಲ್ಲಿ ಅಂತೂ ಇಂತೂ ಪಾಸಾಗುವ ಅಂಕ ಪಡೆದ ಅವಳು ಒಳ್ಳೆ ಮಾರ್ಕು ಪಡೆದ ನನ್ನ ಬಗೆಗೆ ಕರುಬಲಿಲ್ಲ. ಸಿಹಿಕೊಟ್ಟಾಗ ‘ಇನ್ನೂ ಲಕ್ಷ÷್ಯಕೊಟ್ಟು ಓದಿದ್ದರೆ ರ‍್ಯಾಂಕು ಬರಬಹುದಿತ್ತಲ್ಲವೇ?’ ಎಂದು ಕಿವಿ ಹಿಂಡಿದಳು.

ಸದಾ ಚೈತನ್ಯದಿಂದ ಕೆಂಪು ಕೆಂಪಗೆ ಪುಟಿಯುವವಳು, ಹುರುಪಿಗೆ ಇನ್ನೊಂದು ಹೆಸರೇ ಇವಳು ಎಂಬಂತಿದ್ದವಳು – ಉಷಾ – ಮುಂದೆ ಎಲ್ಲೋ ಹೊರಟುಹೋದಳು. ನಾನು ಹಿರಣ್ಯಗರ್ಭದ ವಿಳಾಸಕ್ಕೆ ಬರೆದ ಪತ್ರಕ್ಕೆ ಉತ್ತರವಿರುತ್ತಿರಲಿಲ್ಲ. ಎರಡು ಕಾರಣಗಳಿದ್ದಾವು: ಪತ್ರ ತಲುಪುವ ಮೊದಲೇ ಉಷಾಳ ಕುಟುಂಬ ಹಿರಣ್ಯಗರ್ಭದಿಂದ ಸ್ಥಳಾಂತರಗೊಂಡಿರಬೇಕು. ಇನ್ನೊಂದು ಕಾರಣ, ಅದೇ ಮುಖ್ಯವಾದದ್ದು, ಉಷಾಳ ಸ್ನೇಹ ಇಂಥ ಔಪಚಾರಿಕ ವಿಧಿವಿಧಾನಗಳನ್ನು ಬಿಟ್ಟುಕೊಟ್ಟಿದ್ದಾಗಿತ್ತು. ಅವಳು ಪತ್ರ ಬರೆಯುವುದಿರಲಿ, ನಾನೇಕೆ ಪತ್ರ ಬರೆದಿದ್ದೇನೆಂದೇ ಅವಳು ಕಾಗದವನ್ನು ಧಿಕ್ಕರಿಸಿ ನೋಡಬಲ್ಲವಳಾಗಿದ್ದಳು. ಮುಂಜಾನೆಯ ಹೂವಿನಂತೆ, ಮಧ್ಯಾಹ್ನದ ಮರದ ನೆಳಲಿನಂತೆ, ಸಂಜೆಯಾಕಾಶದ ಕೆಂಬಣ್ಣದಂತೆ ಇರಬಲ್ಲವಳಾಗಿದ್ದ ಉಷಾ ದೀರ್ಘವಾಗಿ ಕೂಗುತ್ತಿರುವ ಹಕ್ಕಿಯ ಹಾಡನ್ನನುಸರಿಸಿ ಕಾಡಿನಲ್ಲಿ ಒಬ್ಬಳೇ ಹೋಗಿ ಬಿಡಬಲ್ಲವಳಾಗಿದ್ದಳು. ಆ ಹಕ್ಕಿಯಾದರೋ ತಾನು ಹೋದಲ್ಲೆಲ್ಲ ತನ್ನ ಹಾಡನ್ನು ಕರೆದೊಯ್ಯುತ್ತಿತ್ತು. ಇವಳೂ ಬೇಸರವಿಲ್ಲದೆ ಅದನ್ನು ಹಿಂಬಾಲಿಸಿ ಹೋಗುತ್ತಿದ್ದಳು .ಹೆಸರು ಅರಿಯದ ಆ ಹಸಿರು ಹಕ್ಕಿಗೆ ಅವಳು ಸುಮ್ಮನೆ ಕಾಡುಹಕ್ಕಿ ಎಂದೇ ಕರೆಯುತ್ತಿದ್ದಳು. ಆ ಹಕ್ಕಿಯ ಹಾಡನ್ನು ನಾನು ಗುರುತಿಸಬಲ್ಲವನೇ ಆಗಿದ್ದೆ. ಆದರೆ ಉಷಾಳ ಆ ಹುಚ್ಚಾಟದಲ್ಲಿ ಮಾತ್ರ ನನಗೆ ಜಾಗವಿರಲಿಲ್ಲ. ಕಣ್ಣಿಗೆ ಕಾಣಿಸದಂತೆ ಹಾರಿಬಿಡುವ, ಹಾಡುತ್ತ ಕೂರುವ ಆ ಹಕ್ಕಿಯ ಹಾಡಿಗೆ ಅವಳು ವಿವಿಧಾರ್ಥಗಳನ್ನು ಕಲ್ಪಿಸುತ್ತಿದ್ದಳು. ಒಮ್ಮೆ ಹೇಳುತ್ತಿದ್ದಳು ಆ ಹಕ್ಕಿಗೆ ಏನೋ ದುಃಖ, ಇನ್ನೊಮ್ಮೆ ಹೇಳುತ್ತಿದ್ದಳು ಇಂದು ಮಳೆ ಬೀಳುವುದಂತೆ, ಮತ್ತೊಂದು ದಿನ ಹೇಳುವಳು, ಇಂದಿನ ಹಾಡಿನ ಅರ್ಥ: ಕಾಡಿನಲ್ಲಿ ನರಿಗಳ ಮದುವೆ, ಊಟಕ್ಕೆ ಎಲ್ಲರೂ ಬನ್ನಿ. ಕಾಡು ಹಕ್ಕಿಯ ಬೆನ್ನು ಹತ್ತಿಹೋಗುವುದು ಅವಳ ಅತ್ಯಂತ ಖಾಸಗಿಯಾದ ಕಾಯಕವಾಗಿತ್ತು.

ಉಷಾಂಬಿಕೆಯ ಅಪ್ಪ ಒಂದು ಅಂಗಡಿಯಲ್ಲಿ ಲೆಕ್ಕ ಬರೆಯುತ್ತಿದ್ದರು. ಆ ಅಂಗಡಿಯಿಂದ ಚಿಕ್ಕಂದಿನಲ್ಲಿ ನಾವು ಅನೇಕ ಸಲ ಪೆಪ್ಪರಮೆಂಟಿನ ಕಾಣಿಕೆ ಪಡೆದಿದ್ದೇವೆ. ಅವರಿಗೆ ಉಷಾ ಇಳಿವಯಸ್ಸಿನಲ್ಲಿ ಹುಟ್ಟಿದ ಮಗಳು. ಅಪರಿಚಿತರು ‘ನಿಮ್ಮ ಮೊಮ್ಮಗಳೇ’ ಎಂದು ಕೇಳಿಬಿಡುಬಹುದಾದಷ್ಟು ಅಂತರ ಅವರಿಬ್ಬರಿಗೂ. ಮಸುಕು ಬಣ್ಣದ ಅಂಗಿ, ಮಸುಕು ಬಣ್ಣದ ಟೊಪ್ಪಿ, ಹಳ್ಳಿಯ ಚಮ್ಮಾರ ಹೊಲಿದು ಕೊಟ್ಟ ಸಶಬ್ದ ಹೆಜ್ಜೆಗಳ ಕಪ್ಪು ಚಪ್ಪಲಿ- ಅವರ ವ್ಯಕ್ತಿತ್ವದ ಹೊರರೇಖೆಗಳು. ಅಂಗಡಿಯೊಳಗೆ ಕಾಲು ಮಡಿಸಿ ಹದಾ ಎತ್ತರದ ಪೆಟ್ಟಿಗೆಯ ಮೇಲೆ ದಪ್ಪ ರಿಜಿಸ್ಟರುಗಳಲ್ಲಿ ಸದಾ ಲೆಕ್ಕ ಬರೆಯಲೆಂದೇ ಅವರು ಹುಟ್ಟಿರಬಹುದೇ ಎಂದು ನನ್ನಂಥ ಅವಿವೇಕಿಗಳಿಗೆ ಭಾಸವಾಗುತ್ತಿತ್ತು. ನಿನ್ನ ಅಪ್ಪ ಇಷ್ಟು ದಪ್ಪದ ಕನ್ನಡಕ ಹಾಕಿ ಹೀಗೆ ಕೂತು ಬರೆಯುತ್ತಿರುತ್ತಾರೆ ಎಂದು ನಾನು ಅಭಿನಯಿಸಿ ತೋರಿದರೆ ಒಮ್ಮೆ ಉಷಾ ನಗುತ್ತಿದ್ದಳು, ಮತ್ತೊಮ್ಮೊಮ್ಮೆ ಸಿಟ್ಟಿಗೇಳುತ್ತಿದ್ದಳು. ರಸ್ತೆಯ ಮೇಲೆ ಅವರು ನಡೆಯುತ್ತಿದ್ದರೆ ಅವರ ಕೈಮುಷ್ಠಿಯಲ್ಲಿ ಈಗ ಉಷಾಂಬಿಕೆ, ಇನ್ನೊಂದು ಕ್ಷಣಕ್ಕೆ ಕೈ ಬಿಡಿಸಿಕೊಂಡು ಅಲ್ಲೆಲ್ಲೋ ಓಡಿಯಾಗಿದೆ. ಮಕ್ಕಳ ಇಂಥ ಆಟಗಳನ್ನು ಬಲ್ಲ ವಿವೇಕಪೂರ್ಣ ನಗೆಯೊಂದು ಅವಳ ತಂದೆಯ ಬಿಳಿ ಮೀಸೆಯಂಚಲ್ಲಿ ಮೂಡಿ ಮರೆಯಾಗುವುದು.

ಅವರಿಗೆ ಒಬ್ಬ ಮಗನಿದ್ದ. ಮುಂಬಯಿಯಲ್ಲಿ ಯಾವುದೋ ಕಂಪನಿಯಲ್ಲಿದ್ದ. ಅವನನ್ನು ನೋಡುವ ಭಾಗ್ಯ ನನ್ನದಾಗಲಿಲ್ಲ. ಅವನ ಸ್ನೇಹಿತರ ಜೊತೆ ತೆಗೆಸಿಕೊಂಡ ಗ್ರೂಪ್ ಫೋಟೋ – ಮನೆಯ ಹೊರ ಜಗುಲಿಯ ಗೋಡೆಯ ಮೇಲೆ ಎತ್ತರದ ಸಾಲಲ್ಲಿ ಪ್ರತಿಷ್ಠಾಪಿತವಾಗಿತ್ತು. ಆ ಫೋಟೋ ಸರಿಯಾಗಿ ನೋಡಬೇಕೆಂದು ಹಾರಿ ಹಾರಿ ಪ್ರಯತ್ನಿಸಿದ್ದೆ. ಉಷಾಳ ತಾಯಿ ಆ ಫೋಟೋವನ್ನು ಯಾವತ್ತೂ ಕೆಳಗಿಳಿಸಲು ಬಿಡಲಿಲ್ಲ. ತಾಯಿಯ ಹೆಸರಿಗೆ ಅವನಿಂದ ಆಗಾಗ ಮನಿ ಆರ್ಡರ್ ಬರುತ್ತಿತ್ತು. ‘ಹಣ ಪಡೆದವರ ಸಹಿ’ ಎಂಬಲ್ಲಿ ಬಹು ಪ್ರಯಾಸದಿಂದ ಆಕೆ ಹೆಸರು ಬರೆಯುವಾಗ ಎಷ್ಟೋ ಸಲ ನಾನು ಅಲ್ಲಿ ಹಾಜರಿರುತ್ತಿದ್ದೆ.

ಹೆಂಡತಿ ತೀರಿಕೊಂಡ ಮೇಲೆ ಉಷಾಳ ತಂದೆ ಮುಂಬಯಿಗೆ ಹೊರಟುಹೋದರು. ಅಲ್ಲಿ ಹೋದ ಮೇಲೆ ಉಷಾಳ ಮದುವೆಯಾಯಿತೋ, ಉಷಾಳ ಮದುವೆ ಪೂರೈಸಿ ಅವರು ಮುಂಬಯಿಗೆ ತೆರಳಿದರೋ- ನನಗೆ ಖಚಿತವಾಗಿ ತಿಳಿದುಬರಲಿಲ್ಲ. ನಾನು ಈ ಕುರಿತು ವಿಚಾರಿಸಲು ಹೊರಟಾಗ ಆ ಕುರಿತು ತಾಳ್ಮೆಯಿಂದ ಸರಿಯಾಗಿ ಹೇಳಬಲ್ಲವರು ಯಾರೂ ಸಿಕ್ಕಲಿಲ್ಲ. ಉಷಾಳ ತಂದೆ ತೀರಿಕೊಂಡು ಕೆಲ ವರ್ಷಗಳಾದವೆಂದೂ, ಆಗ ಅವರ ಮಗ ಗೋಕರ್ಣಕ್ಕೆ ಬಂದು ಅಂತ್ಯವಿಧಿಗಳನ್ನು ಪೂರೈಸಿಕೊಂಡು ಹೋದನೆಂದೂ ಮಾತ್ರ ತಿಳಿಯಿತು. ಉಷಾಳ ಮನೆಯ ಹೊರಬಾಗಿಲಿಗೆ ಹಳೆಯ ಮಾವಿನಕುರ್ವೆ ಕೀ ಇತ್ತು. ಅವರ ಮನೆಯಲ್ಲಿ ಅದು ಮೊದಲಿನಿಂದಲೂ ಇತ್ತೆಂದು ನೆನಪಿಸಿಕೊಂಡೆ. ಜಗುಲಿಯ ಮೇಲೆ ಅಷ್ಟು ಹೊತ್ತು ಸುಮ್ಮನೆ ಕುಳಿತ್ತಿದ್ದೆ. ಮನೆ ತುಂಬಿದ್ದ ಕತ್ತಲು ನಿನ್ನ ಬಾಲ್ಯದ ದಿನಗಳು ಯಾವುದೋ ಕಾಲಕ್ಕೆ ಸಂದುಹೋದವೆಂದು ಅಣಕಿಸಿದಂತಾಯಿತು. ಉಷಾಳ ಕಾಡುಹಕ್ಕಿ ಈಗಲೂ ಒಮ್ಮೊಮ್ಮೆ ಇಲ್ಲಿಗೆ ಬಂದು ಹಾಡುತ್ತಿರಬಹುದೇ ಎಂದು ಯೋಚಿಸಿ ನರಳಿದೆ.

ಒಟ್ಟಿನಲ್ಲಿ ಉಷಾಳ ಕುರಿತು ಹೆಚ್ಚು ತಿಳಿಯಲಾಗಲಿಲ್ಲ. ಅವಳ ಗಂಡನ ಮನೆ ಸಿದ್ದಾಪುರದ ಕಡೆಯ ಒಂದು ಹಳ್ಳಿ ಎಂದೋ, ಸಾಗರದ ಕಡೆಯ ಒಂದು ಹಳ್ಳಿ ಎಂದೋ ಪಥದರ್ಶನ ಮಾಡಬಲ್ಲವರು ಸಿಕ್ಕರೇ ಹೊರತೂ ಆ ಊರಿನ ಹೆಸರು ನೆನಪಿಸಿಕೊಂಡು ಹೇಳಬಲ್ಲವರು ಸಿಕ್ಕಲಿಲ್ಲ. ಸದಾಶಿವಯ್ಯನವರಂತೂ ‘ಅದೊಂದು ದುರಂತ ಕಥೆ ಬಿಡಿ, ಹೆಚ್ಚೇನೂ ಕೇಳಬೇಡಿ’ ಎಂದು ಕೈ ಮುಗಿದು ಒಳಹೋಗಿಬಿಟ್ಟರು. ಇನ್ನೇನೂ ತಿಳಿಯುವ ಸಾಧ್ಯತೆ ಇಲ್ಲ ಎಂದು ನಿರಾಶನಾಗಿ ಮರಳಿದೆ.

ಆದರೆ ನನ್ನೊಳಗೆ ಉಷಾ ಜೀವಂತವಾಗಿಯೇ ಇದ್ದಳು. ಕೆಲವೊಮ್ಮೆ ಕನಸುಗಳಲ್ಲಿ ಬಂದು ತನ್ನ ದುಃಖದ ಕಥೆಗಳನ್ನು ಹೇಳಿಕೊಂಡಳು. ಇನ್ನು ಕೆಲವೊಮ್ಮೆ ಅವಳೊಬ್ಬ ಸದ್ಗೃಹಿಣಿಯಾಗಿ ತಲೆಗೆ ಮಿಂದು, ಕೂದಲು ಕಟ್ಟಿಕೊಂಡು, ಬಟ್ಟೆ ತುರುಬು ಹಾಕಿ, ಮಂಗಲ ಕುಂಕುಮವನ್ನಿಟ್ಟುಕೊಂಡು ನಂದಿನಿ ಹಾಲಿನ ಪ್ಯಾಕೆಟ್ ಮನೆಯೊಳಗೆ ತರುತ್ತಿರುವಂತೆ ಕನಸಾಗುತ್ತಿತ್ತು. ‘ಸದಾಶಿವಯ್ಯನವರ ಮಾತನ್ನು ಎಂದಿಗೂ ನಂಬಬೇಡ’ ಎಂದು ಒಂದು ಸಲ ಹೇಳಿ ಹೋದಳು. ಆಗ ಅವಳು ಚಿಕ್ಕ ಹುಡುಗಿಯಾಗಿ ಸ್ಕರ್ಟ್ ಹಾಕಿಕೊಂಡಿದ್ದಳು. ಮತ್ತೊಂದು ಸಲ ಅವಳ ಪ್ರೀತಿಯ ಕಾಡುಹಕ್ಕಿ ಕನಸಿನ ಪೂರ್ತಿ ಹಾಡಿ, ಹಾಡಿ ನನ್ನನ್ನು ಎಬ್ಬಿಸಿಬಿಟ್ಟಿತು. ಹಿರಣ್ಯಗರ್ಭದಲ್ಲಿ ನನ್ನೊಟ್ಟಿಗೇ ಓದುತ್ತಿದ್ದ ವೆಂಕಟೇಶ ಒಮ್ಮೆ ಸಿಕ್ಕಾಗ “ಉಷಾ ಸತ್ತುಹೋಗಿದ್ದಾಳೆಂದು ಕೇಳಿದೆ, ನೀನು ಅವಳ ಪ್ರಿಯಸ್ನೇಹಿತ, ನಿನಗೇ ಹೆಚ್ಚು ಗೊತ್ತಿರಬೇಕು” ಎಂದು ಹೇಳಿ ನನ್ನನ್ನು ಇನ್ನಷ್ಟು ಗೊಂದಲಕ್ಕೀಡು ಮಾಡಿದ. ‘ಯಾಕೆ, ಏನಾಗಿತ್ತಂತೆ’ ಮುಂತಾದ ನನ್ನ ಕಳವಳದ ಪ್ರಶ್ನೆಗಳಿಗೆ ಅವನ ಬಳಿ ಉತ್ತರವಿರಲಿಲ್ಲ.

 

ಇಂಥದೊಂದು ಸಂದರ್ಭದಲ್ಲೇ ನಾನು ಉಷಾಂಬಿಕಾ ದೇವಿಯವರ ಭಾವಚಿತ್ರವನ್ನು ಪತ್ರಿಕೆಯಲ್ಲಿ ನೋಡಿದ್ದು. ಆ ಮಸುಕು ಚಿತ್ರದಿಂದ ನನ್ನ ಬಾಲ್ಯದ ಗೆಳತಿಯನ್ನು ಪತ್ತೆ ಹಚ್ಚುವುದು ನಿಜಕ್ಕೂ ಕಷ್ಟವೇ. ಎಲ್ಲಕ್ಕಿಂತ ಹೆಚ್ಚಾಗಿ ಈ ಬೆಳವಣಿಗೆಯನ್ನು ಒಪ್ಪಿಕೊಳ್ಳಲು ಮನಸು ಹಿಂದೇಟು ಹೊಡೆಯುತ್ತಿತ್ತು. ಕೆಲವು ಸಲ ಪತ್ರಿಕೆಯೊಂದರಲ್ಲಿ ಅವಳ ವಿಚಾರಗಳ ಆಯ್ದ ಭಾಗಗಳು ಪ್ರಕಟವಾಗುತ್ತಿದ್ದವು. ನನ್ನ ಗೆಳತಿಯೇ ಇವಳಾಗಿರಬಹುದು ಎಂದು ನಾನು ಊಹಿಸುವುದಕ್ಕೆ ಕಾರಣವಾದ ಅವಳ ವಿಚಾರಗಳ ಪರಿಚ್ಛೇದ ಹೀಗಿದೆ. “ನೀವೊಂದು ಹಾಡನ್ನು ಕೇಳಿದ್ದೀರಿ. ಅದನ್ನು ನೀವು ಮತ್ತೆ ಕೇಳಬೇಕು. ನೀವೊಂದು ಹಾಡನ್ನು ಕೇಳಬಯಸುತ್ತೀರಿ. ಅದೇನೆಂದು ನಿಮಗೆ ಗೊತ್ತಿಲ್ಲ. ಆದರೆ ಅದು ನಿಮಗೆ ಬೇಕು. ಈಗ ನಿಮಗೆ ನನ್ನ ಪ್ರಶ್ನೆ ಎಂದರೆ ನಿಮ್ಮ ಈ ಒಣ ಬಡಬಡಿಕೆಯ ಮಾತುಗಳೆಲ್ಲಾ ನಿಂತ ಹೊರತೂ ಆ ಕಾಡುಹಕ್ಕಿಯ ಹಾಡನ್ನು ನೀನು ಹೇಗೆ ಕೇಳಬಲ್ಲಿರಿ? ಆ ಹಕ್ಕಿ ನೀವೇ ಆಗಿರಬಹುದಲ್ಲವೆ? ಅಥವಾ ಆ ಕಾಡು?”

ನನ್ನನ್ನು ಉದ್ದೇಶಿಸಿಯೇ ಹೇಳಿರುವ ವಾಕ್ಯಗಳೇನೋ ಎಂಬ ಮಟ್ಟಿಗೆ ಈ ಪರಿಚ್ಛೇದ ನನ್ನನ್ನು ಪ್ರಭಾವಿಸಿತು. ಕಾಡು, ಕಾಡು ಹಕ್ಕಿಯ ಪ್ರಸ್ತಾಪ ಕೊಂಚ ತಬ್ಬಿಬ್ಬುಗೊಳಿಸುವಂತಿತ್ತು. ಆ ಕಾಡು ಅಥವಾ ಆ ಹಕ್ಕಿ ನೀವೇ ಆಗಿರಬಹುದಲ್ಲವೇ ಅಂದರೆ ಏನರ್ಥ? ನೀವು ನಿಮ್ಮನ್ನೇ ಹುಡುಕುತ್ತಿದ್ದೀರಿ ಅಂತಲೇ? ಎಲ್ಲವೂ ಫಕ್ಕನೆ ಅಧ್ಯಾತ್ಮಕ್ಕೆ ತಿರುಗಿ ಬಿಡುವ ರೀತಿಗೆ ಸೋಜಿಗವಾಗುತ್ತಿದೆ. ಅಷ್ಟರಲ್ಲೇ ಉಷಾಂಬಿಕಾ ದೇವಿಯವರು ಹರಿದ್ವಾರದ ಪಕ್ಕದ ಹಳ್ಳಿಯೊಂದರಲ್ಲಿ ಇರುತ್ತಾರೆಂದೂ, ಅವರ ಪ್ರವಚನಗಳನ್ನು ಪತ್ರಿಕೆಯವರು ಅನುವಾದಿಸಿ ಕೆಲ ಪಂಕ್ತಿಗಳನ್ನು ಪ್ರತಿದಿನ ಪ್ರಕಟಿಸುತ್ತಾರೆಂದೂ ತಿಳಿದು ಈ ದೇವಿ ನನಗೆ ಸಂಬಂಧಿಸಿದವರಲ್ಲ ಎಂದುಕೊಂಡೆ. ಹೀಗೆಂದುಕೊಂಡ ಒಂದೆರಡು ವಾರಗಳಲ್ಲೇ ದೇವಿ ಉಪಸ್ಥಿತರಾಗಿದ್ದ ಕಾರ್ಯಕ್ರಮದ ವರದಿ ದೂರದರ್ಶನದಲ್ಲಿ ಕ್ಷಣಾರ್ಧದಷ್ಟು ಹೊತ್ತು ಮೂಡಿ ಮರೆಯಾಯಿತು. ಆಗ ಮತ್ತೊಮ್ಮೆ ಇವಳು ನನ್ನ ಗೆಳತಿಯೇ ಎಂಬ ಭಾವನೆ ಬಲವಾಗತೊಡಗಿತು. ಆಶ್ರಮದ ವಿಳಾಸ ಸಂಪಾದಿಸಿ ಅಲ್ಲಿಯ ಅಧಿಕಾರಿಗಳನ್ನುದ್ದೇಶಿಸಿ ಒಂದು ಪತ್ರ ಬರೆದೆ. ‘ಉಷಾಂಬಿಕಾದೇವಿಯವರು ಕರ್ನಾಟಕದವರೇ?’ ಎಂದು ಮಾತ್ರ ಕೇಳಿ ಬರೆದಿದ್ದ ಪತ್ರಕ್ಕೆ ಶೀಘ್ರದಲ್ಲೇ ಉತ್ತರ ಬಂತು. “ಮಾತೆಯವರ ಪೂರ್ವೇತಿಹಾಸದ ಬಗೆಗೆ ನಮಗೇನೂ ತಿಳಿಯದು. ಅಂಥ ಪ್ರಶ್ನೆಗಳನ್ನು ಅವರು ಉತ್ತರಿಸುವುದೂ ಇಲ್ಲ. ಮಾತೆಯವರನ್ನು ತಮ್ಮ ಜೀವನದ ಉದ್ಧಾರಕ್ಕಾಗಿ ಅವಲಂಬಿಸಿರುವ ಶಿಷ್ಯವರ್ಗ ಅಂಥ ವಿಷಯಗಳಲ್ಲಿ ಆಸಕ್ತಿ ತೋರಬಾರದೆಂಬುದೇ ಅವರ ಇಚ್ಛೆಯಾಗಿರುವಂತಿದೆ. ಆದುದರಿಂದ ಈ ಕುರಿತು ಪತ್ರ ವ್ಯವಹಾರ ಸೂಕ್ತವಾಗಲಾರದೆಂದು ಭಾವಿಸುತ್ತೇವೆ” ಎಂದು ಯಾವುದೋ ದ್ವಿವೇದಿ ಸಹಿ ಹಾಕಿದ್ದ ದೇವನಾಗರಿ ಲಿಪಿಯ ಪತ್ರ ಬಂತು. ‘ದಯವಿಟ್ಟು ನನ್ನ ಪತ್ರವನ್ನು ಮಾತೆಯವರ ಗಮನಕ್ಕೆ ತನ್ನಿ’ ಎಂದು ನಾನು ಬರೆದ ಮುಂದಿನ ಪತ್ರಕ್ಕೆ ಉತ್ತರ ಬರಲಿಲ್ಲ.

ಧೃತಿಗೆಡದೆ ಉಷಾಂಬಿಕೆಗೇ ಪತ್ರ ಬರೆದು ವಿಚಾರಿಸುವುದೆಂದು ನಿರ್ಧರಿಸಿದೆ. ಆಶ್ರಮಕ್ಕೆ ದೂರವಾಣಿ ವ್ಯವಸ್ಥೆ ಇಟ್ಟುಕೊಂಡಿರಲಿಲ್ಲವಾದ್ದರಿಂದ ಪತ್ರ ವ್ಯವಹಾರ ಅನಿವಾರ್ಯವಾಯಿತು. ಎಲ್ಲ ವಿಷಯ ತಿಳಿದ ಕುಸುಮಾ ಇದೊಂದು ಅರ್ಥವಿಲ್ಲದ ಹುಡುಕಾಟ ಎಂದೇ ವಾದಿಸಿದಳು. ಆದರೆ ನನಗೊಂದು ಹುಂಬ ಧೈರ್ಯವಿತ್ತು. ಉಷಾ ನನ್ನ ಪತ್ರಕ್ಕೆ ಉತ್ತರಿಸದೆ ಹೋಗಲಾರಳು. ಪತ್ರವನ್ನು ಕನ್ನಡದಲ್ಲಿ ಬರೆದಿರುವುದರಿಂದ ಅವಳು ಕನ್ನಡ ಬಲ್ಲವಳಾದರೆ ಆ ಪತ್ರವನ್ನು ಓದುತ್ತಾಳೆ. ಓದಲಿಲ್ಲವೆಂದರೆ ಅವಳು ನನ್ನ ಗೆಳತಿ ಉಷಾ ಅಲ್ಲ ಎಂದಂತಾಯಿತು. ಅಲ್ಲಿಗೆ ಒಂದು ಪ್ರಕರಣ ಮುಗಿಯಿತು.

ಎರಡು ಮೂರು ವಾರಗಳಾದರೂ ಉತ್ತರ ಬರಲಿಲ್ಲವೆಂದು ಯೋಚಿಸುತ್ತಿದ್ದೆ. ಒಂದು ದಿನ ಆಫೀಸಿಂದ ಬಂದವನಿಗೆ ಕುಸುಮಾ ಕಾಫಿ ಕೊಡುತ್ತ ‘ನಿಮಗೊಂದು ಅಚ್ಚರಿ ಕಾದಿದೆ’ ಎಂದಳು. “ಬಹುಶಃ ನಿಮ್ಮ ಗೆಳತಿ ಪತ್ರ ಬರೆದಿದ್ದಾಳೆ. ಆಶ್ರಮದಿಂದ ಪತ್ರ ಬಂದಿದೆ. ನೀವೇ ಓದಿ. ಬಹುಶಃ ಮೊಟ್ಟ ಮೊದಲಬಾರಿಗೆ ನಾನು ಹೇಳಿದ್ದು ಹುಸಿಯಾಗಿರಬೇಕು.” ನಗುತ್ತಾ ಪತ್ರ ಕೊಟ್ಟಳು. ಪತ್ರ ಒಡೆದು ನೋಡಿದರೆ ನನ್ನ ಪತ್ರ ವಾಪಸು ಇಡಲಾಗಿತ್ತು! ಜೊತೆಗೊಂದು ಪತ್ರ: “ನಿಮ್ಮ ಪತ್ರದ ಲಿಪಿ ಇಲ್ಲಿ ಯಾರಿಗೂ ತಿಳಿಯದು. ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಬರೆದರೆ ನಾವು ಉತ್ತರಿಸಬಲ್ಲೆವು. ಹಾಗೆಯೇ ಇನ್ನೊಂದು ವಿಷಯವೂ ನಿಮ್ಮ ಲಕ್ಷ್ಯದಲ್ಲಿರಲಿ.  ಮಾತೆಯವರನ್ನು ನೇರವಾಗಿ ಉದ್ದೇಶಿಸಿ ಯಾವ ಪತ್ರವನ್ನೂ, ಯಾವುದೇ ಕಾರಣಕ್ಕೂ ಬರೆಯಬೇಡಿ. ಮಾತೆಯವರು ಪತ್ರಗಳನ್ನು ಓದುವುದಿಲ್ಲ. ಅವರ ಪೂರ್ವ ಜೀವಿತದ ಕುರಿತಾಗಲೀ, ವೈಯಕ್ತಿಕ ಸಂಗತಿಗಳ ಕುರಿತಾಗಲೀ ಪತ್ರ ಬರೆಯಬಾರದೆಂಬ ಸೂಚನೆಯನ್ನು ತಮಗೆ ಈಗಾಗಲೇ ನೀಡಲಾಗಿದೆ. ತಮ್ಮ ಪತ್ರವನ್ನು ವಿಷಾದಗಳೊಂದಿಗೆ ಹಿಂತಿರುಗಿಸುತ್ತಿದ್ದೇವೆ. ವಂದನೆಗಳೊಂದಿಗೆ ದ್ವಿವೇದಿ,” ಕುಸುಮಾಳಿಗೆ ಪತ್ರಕೊಡುತ್ತಾ “ಯಾರು ಗೆದ್ದರೆಂದು ನೀನೇ ಹೇಳು” ಎಂದೆ ಬೇಸರದಿಂದ. ಆಶ್ಚರ್ಯವೆಂದರೆ ಪತ್ರ ಓದಿದವಳು’ ಆಕೆ ನಿಮ್ಮ ಗೆಳತಿಯೇ ಆಗಿರಬೇಕು ಅನಿಸುತ್ತಿದೆ’ ಎಂದಳು. ‘ಏನಿದ್ದರೂ ಪ್ರಯತ್ನ ಮುಂದುವರಿಯಲು ಸಾಧ್ಯವಿಲ್ಲವಲ್ಲ’ ಎಂದೆ.

ಇಡಿಯ ಸಂಗತಿ ಹೊಸರೂಪ ಪಡೆದಿದ್ದು ವೆಂಕಟೇಶ ಬರೆದ ಪತ್ರದಿಂದ. ತೀರ ಆಕಸ್ಮಿಕವಾಗಿ ಆ ಪತ್ರ ಬಂದಿತೆನ್ನಬೇಕು. ‘ನಿನ್ನ ಗೆಳತಿಯ ವಿಷಯ ನಿನಗೇ ತಿಳಿದಿರಬೇಕು’ ಎಂದು ಕುಟುಕಿ ಹೋಗಿದ್ದ ಗೆಳೆಯ ಉಷಾ ಕುರಿತು ಕೆಲ ಮಾಹಿತಿ ಸಂಗ್ರಹಿಸಿದ್ದ. ಅವನಿಗೆ ಕೆಲ ಸಂಗತಿ ತಿಳಿಸಿದವಳು ನಮ್ಮ ಸಹಪಾಠಿಯೇ ಆಗಿದ್ದ ಸರೋಜಾ.ಅವಳಿಗೂ, ಉಷಾಂಬಿಕೆಗೂ ಪತ್ರ ವ್ಯವಹಾರ ಇತ್ತು. ಉಷಾಂಬಿಕೆಯ ಗಂಡ ಮಹೇಶ್ವರ ಊರಲ್ಲಿ ಅನೇಕ ಬಿಸಿನೆಸ್‌ಗಳನ್ನು ಮಾಡಿ ಯಾವುದರಲ್ಲೂ ಲಾಭ ಗಿಟ್ಟದೇ ಗುಜರಾತಿಗೆ ಹೋಗಿ ಟೆಕ್ಸ್ ಟೈಲ್ ಉದ್ದಿಮೆಯಲ್ಲಿ ತೊಡಗಿಕೊಂಡ. ಕುಟುಂಬ ಸಾಗರದಲ್ಲೇ ಇತ್ತು. ಕುಟುಂಬವೆಂದರೆ ಉಷಾ ಮಾತ್ರ, ಮಕ್ಕಳಿರಲಿಲ್ಲ. ಮಹೇಶ್ವರ ಹೆಂಡತಿಯನ್ನು ಸೂರತ್ತಿಗೆ ಕರೆದೊಯ್ಯುವ ಉತ್ಸಾಹವನ್ನೇ ತೋರಿಸಲಿಲ್ಲ. ಕ್ರಮೇಣ ಅವನು ಬರುವುದು ನಿಂತೇಹೋಯಿತು. ಅವನಿಂದ ಮನಿಯಾರ್ಡರ್ ಬರುವುದೂ ನಿಂತಿತು. ‘ತಾನು ಅಣ್ಣನ ಬಳಿಗೆ ಹೋಗಲೇ ಎಂದು ಯೋಚಿಸುತ್ತಿದ್ದೇನೆ.’ ಎಂದೂ ಒಮ್ಮೆ ಪತ್ರದಲ್ಲಿ ಬರೆದಿದ್ದಳಂತೆ. ತನ್ನಿಂದ ದೂರವಾದ ಮಹೇಶ್ವರನ ಕುರಿತು ಅವಳು ಬರೆಯುತ್ತಲೇ ಇರಲಿಲ್ಲ. “ಕಷ್ಟವೋ, ಸುಖವೋ – ನಿನ್ನ ಬಾಳುವೆ ಇರುವುದು ಮಹೇಶ್ವರರೊಟ್ಟಿಗೆ. ಅವರು ಬರಲಿಲ್ಲ ಎಂದರೆ ಮುಗಿಯಲಿಲ್ಲ. ಪತ್ರವೋ, ಫೋನೋ ಹೇಗಾದರೂ ಸರಿ, ಅವರೇನು ಮಾಡುತ್ತಿದ್ದಾರೆ ಎಂದು ತಿಳಿ” ಇದು ಸರೋಜಾಳ ಬುದ್ಧಿವಾದ. ಆದರೆ ಮಹೇಶ್ವರ ಸೂರತ್ ಬಿಟ್ಟು ಹೋಗಿರಬೇಕೆಂದೂ, ಅವರಿಗೆ ಬರೆದ ರಿಜಿಸ್ಟರ್ ಪತ್ರಗಳೂ ಡೆಲಿವರಿ ಆಗದೆ ವಾಪಸಾದವೆಂದೂ, ಅದರಿಂದಲೇ ತಾನು ಬೇರೆ ಮಾರ್ಗ ಯೋಚಿಸಬೇಕಾಯಿತೆಂದೂ ಉಷಾ ಉತ್ತರಿಸಿದಳು. ಅಂದರೆ ಮಹೇಶ್ವರ ಏನಾದರೆಂದೂ ತಿಳಿಯಲಾಗದ ಸ್ಥಿತಿಯಲ್ಲಿ ಉಷಾ ಇದ್ದಳು ಎಂದು ಊಹಿಸಬೇಕು. ‘ಬದುಕಿ ಬೇರೆಲ್ಲೋ ಇರುವರಾದರೆ ನಾನು ಅವರಿಗೆ ಬೇಡವೆನಿಸಿದೆನೇ?’ – ಇದು ಮುಂದಿನ ಪ್ರಶ್ನೆ. ಉಷಾ ಆ ಬಳಿಕ ಪತ್ರ ಬರೆಯಲಿಲ್ಲ. ಅವಳು ಎಲ್ಲಿ ಹೋದಳೆಂಬುದು ತಿಳಿಯದು, ಬದುಕಿದ್ದಾಳೆಯೇ – ತಿಳಿಯದು. ಇಷ್ಟು ನಿಜ: ಅವಳು ಮುಂಬಯಿಗೆ ಅಣ್ಣನ ಮನೆಗೆ ಹೋಗಲಿಲ್ಲ.

ಸರೋಜಾಳೇ ತಿಳಿಸುವ ಊಹಾಪೋಹದ ಇನ್ನೊಂದು ಕಥೆಯಿದೆ. ಅದರ ಪ್ರಕಾರ ಉಷಾಳಿಗೆ ತನ್ನ ಗಂಡ ತೀರಿಕೊಂಡನೆಂಬುದು ತಿಳಿದಿತ್ತು. ಸಾಗರದಲ್ಲಿ ಕೆಲವರು ಹೇಳುವ ಪ್ರಕಾರ ಉಷಾ ಇನ್ನೊಂದು ಮದುವೆಯಾಗಿ ಬೇರೆಲ್ಲೋ ನೆಲೆಸಿದ್ದಾಳೆ. ಈ ಕಥೆಯ ಇನ್ನೊಂದು ಸ್ವರೂಪವೆಂದರೆ ಉಷಾಳಿಗೆ ತನ್ನ ನೆರೆಯ ವ್ಯಕ್ತಿಯೊಬ್ಬನ ಜೊತೆ ಸಂಬಂಧವಿತ್ತು. ಅದನ್ನು ತಿಳಿದ ಅವಳ ಗಂಡ ಸಂಸಾರಕ್ಕೆ ನಮಸ್ಕಾರ ಹೇಳಿ ಎಲ್ಲೋ ಹೊರಟು ಹೋಗಿದ್ದಾನೆ. ಈ ಕಥೆಯಲ್ಲಿ ಅವನು ಅನೂಹ್ಯ ಹಾದಿಯಲ್ಲಿ ಪಯಣಿಸುತ್ತಿರುವ ಒಬ್ಬ ಭಗ್ನಹೃದಯಿ ಪಥಿಕ.

ಕ್ಷಮಿಸಿ, ದಂತಕತೆಗಳು ಇನ್ನೂ ಮುಂದುವರಿಯುತ್ತವೆ: ಇತ್ತೀಚೆಗೆ ಅವಳ ಎರಡನೆಯ ಗಂಡ ತೀರಿಕೊಂಡನಂತೆ. ಅವನು ಸಾಯುವ ಮೊದಲು ‘ಇನ್ನೊಂದು ಮದುವೆಯಾಗುವುದಿಲ್ಲ’ ಎಂದು ಇವಳಿಂದ ಮಾತು ತೆಗೆದುಕೊಂಡಿದ್ದನಂತೆ. ಆತನಿಗೆ ಸಿಕ್ಕಾಪಟ್ಟೆ ಆಸ್ತಿ ಇದೆ. ಆದರೆ ಇವಳೀಗ ಐದಾರು ವರ್ಷದ ತನ್ನ ಮಗಳನ್ನು ಹಾಸ್ಟೆಲಿನಲ್ಲಿ ಬಿಟ್ಟು ಮೂರನೆಯ ಮದುವೆಯಾಗುವ ಸಿದ್ಧತೆಯಲ್ಲಿದ್ದಾಳೆ ಅಥವಾ ಈಗಾಗಲೇ ಮದುವೆ ಆಗಿರಬಹುದು. ಇವೆಲ್ಲವನ್ನೂ ಅಲ್ಲಗಳೆಯುವ ಇನ್ನೊಂದು ಆವೃತ್ತಿ ಇದೆ. ಮೇಲಿನ ಎಲ್ಲ ಕಥೆಗಳೂ ಶುದ್ಧ ಸುಳ್ಳು. ಜೀವಮಾನವಿಡೀ ಒಂದಲ್ಲ ಒಂದು ಬಗೆಯಲ್ಲಿ ಕಷ್ಟವನ್ನೇ ಕಂಡ ಹೆಣ್ಣು, ಸುಖವನ್ನೇ ಕಾಣದ ಹೆಣ್ಣು ನಿಜ ಸುಖವನ್ನರಸಿ ಅಥವಾ ಬದುಕಿನಿಂದ ಬಿಡುಗಡೆಯನ್ನು ಬಯಸಿ ಯಾವುದೋ ನದಿಗೆ ಆಹಾರವಾಗಿರಬೇಕು, ಯಾವುದೋ ಹಳಿಯ ಮೇಲೆ ಅಪ್ಪಚ್ಚಿಯಾಗಿರಬೇಕು. ವೆಂಕಟೇಶ ಮತ್ತು ಸರೋಜಾರ ಪ್ರಕಾರ ಉಷಾ ಈಗ ಉಳಿದಿಲ್ಲ. ಆದರೆ ನನ್ನ ಮನಸೇಕೋ ಅದನ್ನು ಒಪ್ಪುತ್ತಲೇ ಇಲ್ಲ.

ಹುಣ್ಣಿಮೆಯ ಒಂದು ರಾತ್ರಿ ಏನು ಮಾಡಲೂ ತೋಚದೆ, ಏನು ಹೇಳಲೂ ತೋಚದೆ ಪಾರ್ಕಿನಲ್ಲಿ ಅಲೆದಾಡಿದೆ. ನನ್ನಂತೆಯೇ ಆಡಿಕೊಂಡಿದ್ದ ಹುಡುಗಿಯ ಬದುಕು ಇಷ್ಟೊಂದು ಕಗ್ಗಂಟಾಯಿತೇ ಎಂದು ನನ್ನ ಜೀವ ಒದ್ದಾಡಿಹೋಯಿತು. ಮರಳಿ ಬಂದವನು ಡೈರಿಯಲ್ಲಿ ಬರೆದೆ:

ನನ್ನ ಜೀವದ ಗೆಳತಿ
ಕನಸುಗಳ ಜತೆಗಾತಿ
ನಿನ್ನನ್ನು ನಾನೊಮ್ಮೆ ನೋಡಬೇಕು
ನಿನ್ನ ಕರುಳಿನ ಕಥೆಯ ಕೇಳಬೇಕು
ಉಷಾಳ ಕೈ ಹಿಡಿದು ಎದೆಗೊತ್ತಿಕೊಂಡು ಅವಳ ಕಥೆ ಕೇಳುತ್ತ ಅತ್ತು ಬಿಡಬೇಕು, ಅವಳ ಬದುಕು ಸರಿಹೋಗಲು ನಾನೇನಾದರೂ ಮಾಡಬೇಕು ಎಂದೆಲ್ಲ ಯೋಚಿಸುತ್ತಲೇ ಮನಸ್ಸು ಪುನಃ ತಾನು ಕಟ್ಟಿದ ತರ್ಕಕ್ಕೇ ಸಿಲುಕಿಕೊಂಡಿತು. ಹರಿದ್ವಾರದ ಉಷಾಂಬಿಕೆಯೇ ನನ್ನ ಗೆಳತಿ ಏಕಾಗಿರಬಾರದು? ಯಾವುದೋ ಹೊಳೆಯಲ್ಲಿ ಹಾರಿ ಪ್ರಾಣ ಬಿಡುತ್ತೇನೆಂದುಕೊಂಡ ಕ್ಷಣದಲ್ಲಿ ಇನ್ನಾರೋ ಬಂದು ರಕ್ಷಿಸಿರಬಹುದು. ಯಾವುದೋ ಆಶ್ರಮಕ್ಕೆ ಸೇರಿರಬಹುದು, ಆಶ್ರಮದ ನಿಯಮದಂತೆ ಸನ್ಯಾಸಿನಿ ಆಗಿರಬಹುದು-ಹಾಗಾದರೂ ಸಂತೋಷವೇ, ನನ್ನ ಗೆಳತಿ ಬದುಕಿರುವಳೆಂಬುದೇ ಮಹತ್ವದ್ದಲ್ಲವೇ? ಹಾಗಾಗಿರಲಿ ದೇವರೇ, ಎನ್ನುತ್ತ ನಿದ್ದೆಗೆ ಶರಣಾದೆ.

ಆಫೀಸಿನ ಕಾರ್ಯಗಳ ಅವಸರದಲ್ಲಿ ಅನೇಕ ದಿನ ಉಷಾಂಬಿಕೆಯ ವಿಷಯ ಮರೆತೂಬಿಟ್ಟೆ. ಭಾವನೆಗಳಿಗೆ ಕಿಂಚಿತ್ತೂ ಬೆಲೆಯಿಲ್ಲದೇ ನಿರ್ದಯವಾಗಿ ವ್ಯಾವಹಾರಿಕ ನಡಾವಳಿಗಳಲ್ಲಿ ದಿನಗಳು ಕಳೆದುಹೋಗುತ್ತವೆ. ಕೆಲವೊಮ್ಮೆ ಬಂಜರು ನೆಲವನ್ನು ಊಳುತ್ತಿದ್ದೇವೆ ಅನಿಸಿಬಿಡುತ್ತದೆ. ಬೆಳೆಯೂ ಇಲ್ಲ, ಬೆಲೆಯೂ ಇಲ್ಲ, ಬೆವರಿದ್ದಷ್ಟೇ ಲಾಭ. ಒಂದು ದಿನ ಆಕಸ್ಮಿಕವಾಗಿ ಮುಖ್ಯ ಕಾರ್ಯಾಲಯದಿಂದ ಒಂದು ಕರೆ ಬಂತು: ‘ಮಹತ್ವದ ಒಂದು ಸಮಾಲೋಚನೆಗಾಗಿ ಯಾರಾದರೊಬ್ಬ ಜವಾಬ್ದಾರಿಯ ವ್ಯಕ್ತಿ ದೆಹಲಿಗೆ ಹೋಗಬೇಕಾಗಿದೆ. ಬಾಸ್ ನಿಮ್ಮ ಹೆಸರನ್ನು ಸೂಚಿಸಿದ್ದಾರೆ, ಹೊರಡುವಿರಷ್ಟೇ?. ‘ ಇಲ್ಲವೆನ್ನಲು ಅವಕಾಶವೇ ಇರಲಿಲ್ಲ. ಮನೆಗೆ ಬಂದು ನಿರುತ್ಸಾಹದಿಂದ ಈ ವಿಷಯ ಹೇಳಿದೊಡನೆಯೇ ಕುಸುಮಾ ‘ದೆಹಲಿಯಿಂದ ಹರಿದ್ವಾರ ಎಷ್ಟು ದೂರ?’ ಎಂದಳು. ಫಕ್ಕನೆ ನೂರಾರು ದೀಪಗಳು ಹೊತ್ತಿಕೊಂಡ ಅನುಭವವಾಯಿತು. ‘ಹತ್ತಿರವಲ್ಲ, ತೀರ ದೂರವಲ್ಲ. ಇನ್ನೂರು ಕಿ.ಮೀ ಇದ್ದೀತು. ಒಂದು ದಿನ ಬಿಡುವಾಗಿದ್ದರೂ ಸಾಕು, ಪ್ರಯತ್ನಿಸಿಯೇ ಬಿಡಬಹುದು’ ಎಂದೆ. ನಾವಿಬ್ಬರೂ ಉಷಾಳ ಹೆಸರು ಹೇಳದಿದ್ದರೂ ವಿಷಯ ಸ್ವಯಂ ಸ್ಪಷ್ಟವಿತ್ತು. ನನ್ನ ದೆಹಲಿಯ ಪ್ರಯಾಣಕ್ಕೆ ಹೊಸ ಹುರುಪು ಬಂತು.

ನಾನು ದೆಹಲಿ ತಲುಪಿದ್ದು ಒಂದು ಶುಕ್ರವಾರ. ಆದರೆ ಅನಿವಾರ್ಯ ಕಾರಣಗಳಿಂದ ಸಮಾಲೋಚನೆಯ ದಿನವನ್ನು ಸೋಮವಾರವೆಂದು ಗೊತ್ತುಪಡಿಸಿದರು. ಸರಿ, ನನಗೊಂದು ಸುವರ್ಣವಕಾಶವೇ ದೊರೆಯಿತು. ಅದೇ ರಾತ್ರಿ ಹರಿದ್ವಾರ ತಲುಪಿ, ಬೆಳಿಗ್ಗೆ ಗಿರಿಗಂಜ್ ಗ್ರಾಮಕ್ಕೆ ಹೋಗಿ ತಲುಪಲು ಅನುಕೂಲವಾಗುವಂತೆ ಮಾಡಿಕೊಂಡೆ.

ಬೆಳಿಗ್ಗೆ ಏಳಕ್ಕೆಲ್ಲ ಆ ಹಳ್ಳಿ ತಲುಪಿದೆ. ಆದರೆ ಆಶ್ರಮವಿರುವುದು ಆ ಹಳ್ಳಿಯಿಂದ ಕೊಂಚ ದೂರದಲ್ಲಿ ಎಂದು ತಿಳಿಯಿತು. ಗಂಗಾನದಿಯ ಸಣ್ಣದೊಂದು ಕವಲು ಆ ಹಳ್ಳಿಯಲ್ಲಿ ಹರಿದಿದೆ. ವಾಹನ ಈ ಹಳ್ಳಿಯ ದಡದಲ್ಲಿ ನಿಲ್ಲಿಸಿ ಆಶ್ರಮವಿರುವ ಜಾಗಕ್ಕೆ ದೋಣಿ ಗೊತ್ತುಪಡಿಸಿಕೊಂಡು ಹೋಗಬೇಕು. ಆಶ್ರಮದ ಕಟ್ಟಡವನ್ನು ದೂರದಿಂದಲೇ ಕಾಣಬಹುದು. ಆದರೆ ಯಾವುದೇ ಕಾಲದಲ್ಲೂ ದೋಣಿ ಪ್ರಯಾಣ ಅನಿವಾರ್ಯ.

ನಾನು ದೆಹಲಿ ತಲುಪಿದ್ದು ಒಂದು ಶುಕ್ರವಾರ. ಆದರೆ ಅನಿವಾರ್ಯ ಕಾರಣಗಳಿಂದ ಸಮಾಲೋಚನೆಯ ದಿನವನ್ನು ಸೋಮವಾರವೆಂದು ಗೊತ್ತುಪಡಿಸಿದರು. ಸರಿ, ನನಗೊಂದು ಸುವರ್ಣವಕಾಶವೇ ದೊರೆಯಿತು. ಅದೇ ರಾತ್ರಿ ಹರಿದ್ವಾರ ತಲುಪಿ, ಬೆಳಿಗ್ಗೆ ಗಿರಿಗಂಜ್ ಗ್ರಾಮಕ್ಕೆ ಹೋಗಿ ತಲುಪಲು ಅನುಕೂಲವಾಗುವಂತೆ ಮಾಡಿಕೊಂಡೆ.

ನಸುಕಿನ ಬೆಳಕಿನಲ್ಲಿ ಗಂಗೆಯ ಅಲೆಗಳಲ್ಲಿ ತುಳುಕಾಡುತ್ತಿದ್ದ ಎತ್ತರದ ಮರದ ನೆಳಲುಗಳು ವಿಚಿತ್ರ ಪುಲಕ ಹುಟ್ಟಿಸುತ್ತಿದ್ದವು. ದೋಣಿ ನಡಸುವ ಡೋಮೂ ಹೆಳಿದ: “ಸಾಬ್, ಮೊದಲು ಆ ತೀರದಲ್ಲಿ ಜನವಸತಿಯು ಇರಲಿಲ್ಲ, ಈಗಲೂ ಇಲ್ಲ ಅಂತಲೇ ಇಟ್ಟುಕೊಳ್ಳಿ. ಮಾತಾಜಿ ಬಂದ ಮೇಲೆ ಆಶ್ರಮ ಆರಂಭವಾಗಿದೆ. ಜನ ಬರುತ್ತಾರೆ. ನನಗೂ ಜೀವನಕ್ಕೆ ಆಧಾರವಾಗಿದೆ.” “ಮಾತಾಜೀಯನ್ನು ನೋಡಿದ್ದೀಯಾ? ಎಂದೆ.” ನೋಡದೇ ಹೇಗೆ? ಅವರು ಎಲ್ಲಿಗೇ ಹೋಗುವುದಿದ್ದರೂ ಈ ನದಿ ದಾಟಿಯೇ ಹೋಗಬೇಕಲ್ಲವೇ? ” ಎಂದ. ‘ಹೇಗಿದ್ದಾರೆ?’ ಎಂದು ಕೇಳಿದ್ದಕ್ಕೆ ಅವನೇನು ಉತ್ತರಿಸಿದನೋ, ನನಗರ್ಥವಾಗಲಿಲ್ಲ.
ಹತ್ತು ನಿಮಿಷಗಳಲ್ಲಿ ನಾನು ಆಚೆ ದಡದಲ್ಲಿದ್ದೆ. ಆಶ್ರಮದಲ್ಲಿ ಮೊದಲು ಸಿಕ್ಕವರು ದ್ವಿವೇದಿ. ನಮಸ್ಕರಿಸಿ ‘ಮಾತೆಯವರನ್ನು ನೋಡಬೇಕು’ ಎಂದೆ. ‘ಅದೆಲ್ಲ ಆಮೇಲೆ, ಮೊದಲು ಉಪಹಾರ ಮಾಡಿ’ ಎಂದರು. ಉದ್ದೇಶಪೂರ್ವಕವಾಗಿಯೇ ನಾನು ಈ ಹಿಂದೆ ಬರೆದ ಪತ್ರಗಳ ವಿಷಯ ಪ್ರಸ್ತಾಪಿಸಲಿಲ್ಲ. ಆ ಕುರಿತು ದ್ವಿವೇದಿಯವರಿಗೆ ಅನುಮಾನ ಹುಟ್ಟದಂತೆ ನಡೆದುಕೊಳ್ಳಬೇಕೆಂದು ಇಲ್ಲಿಗೆ ಬರುವ ಮೊದಲೇ ಯೋಚಿಸಿದ್ದೆ. ಈ ಹಿಂದೆ ಪತ್ರ ಬರೆದು ಮಾತೆಯವರ ಬಗೆಗೆ ತಿಳಿಯಬಯಸಿದವನೇ ಈಗ ಬಂದಿರುವವನು ಎಂದು ತಿಳಿದರೆ ದ್ವಿವೇದಿ ದರ್ಶನವನ್ನೆ ಕೊಡಿಸಲಿಕ್ಕಿಲ್ಲ ಎಂಬುದು ನನ್ನ ಭಯ. ಬೆಳಗಿನ ತಿಂಡಿಗೆ ತಯಾರಿಸಿದ್ದ ರೋಟಿ, ಸಬ್ಜಿ ಸ್ವೀಕರಿಸಿ ಹಾಲು ಕುಡಿದೆ. ಆಮೇಲೆ ದ್ವಿವೇದಿ ರೂಮಿಗೆ ಕರೆದುಕೊಂಡು ಹೋದರು. ‘ಎಲ್ಲಿಂದ ಬಂದಿದ್ದೀರಿ? ಎಂದು ವಿಚಾರಿಸಿದರು. ಈ ಬಗೆಯ ಪ್ರಶ್ನೆಗಳಿಗೆಲ್ಲ ಸಿದ್ಧಪಡಿಸಿಕೊಂಡು ಬಂದ ಉತ್ತರ ನೀಡಿದೆ. ಎಲ್ಲ ಕೇಳಿಸಿಕೊಂಡ ದ್ವಿವೇದಿ ಹೇಳಿದರು: “ನೋಡಿ, ಮಾತೆಯವರು ಈ ಕೆಲದಿನಗಳಿಂದ ಗಾಢಧ್ಯಾನದಲ್ಲಿದ್ದಾರೆ. ಆದ್ದರಿಂದ ತಾವು ಈ ತಕ್ಷಣವೇ ದರ್ಶನ ಮಾಡಬೇಕೆಂದರೆ ಸಾಧ್ಯವಾಗಲಾರದು. ಕೆಲದಿನಗಳು ಹೀಗೆ ಧ್ಯಾನಮಾಡಿ ಒಂದೆರಡು ದಿನ ಹೊರ ಪ್ರಪಂಚಕ್ಕೆ ಅವರು ಬರುವುದಿದೆ. ಅದು ಇಂದೇ ಆದೀತು, ನಾಳೆ ಆದೀತು, ಒಂದೆರಡು ದಿನ ಬಿಟ್ಟೂ ಆದೀತು-ಸ್ಪಷ್ಟವಾಗಿ ಹೀಗೆ ಅಂತ ಹೇಳಲಾರೆವು. ನಿಮಗೆ ಇಲ್ಲಿ ಉಳಿಯುವಷ್ಟು ಸಮಯ ಇದೆಯೋ, ಇಲ್ಲವೊ ನನಗೆ ತಿಳಿಯದು. ನೀವು ಇರುವುದಾದರೆ ಅಗತ್ಯ ವ್ಯವಸ್ಥೆ ಮಾಡಿಕೊಡುವೆ.” ’ಸ್ವಲ್ಪ ಯೋಚಿಸಿ ಬಳಿಕ ಹೇಳುವೆ’ ಎಂದೆ. ಈ ಸಮಸ್ಯೆಯ ಕಲ್ಪನೆ ನನಗಿರಲಿಲ್ಲ.

ಆಶ್ರಮ ತೀರ ದೊಡ್ಡದಲ್ಲ, ವೈಭವದ ಪ್ರದರ್ಶನವೂ ಇಲ್ಲ. ವಿಶೇಷವೆಂದರೆ ಶಿವ, ಪಾರ್ವತಿಯರ ಚಿತ್ರಗಳನ್ನು ಬಿಟ್ಟರೆ ಇನ್ನಾವ ಚಿತ್ರವೂ ಇಲ್ಲ. ಉಷಾಂಬಿಕೆಯವರದೂ ಒಂದೇ ಒಂದು ಚಿತ್ರವಿಲ್ಲವೆಂದು ಗಮನಿಸಿ ಅಚ್ಚರಿಯಾಯಿತು. ದ್ವಿವೇದಿ ಆಶ್ರಮದಲ್ಲಿರುವ ದೇವೀಮೂರ್ತಿಗೆ ವಿಧಿವತ್ತಾಗಿ ಪೂಜೆ ಮಾಡುವವರು. ಜೊತೆಗೆ ಆಶ್ರಮದ ಆಡಳಿತಕಾರ್ಯವೂ ಅವರಿಗೇ ಸೇರಿದೆ. ಇಬ್ಬರು ಮೂವರು ಕೆಲಸಗಾರರನ್ನು ಬಿಟ್ಟರೆ ಆಶ್ರಮದಲ್ಲಿ ಇನ್ನಾವ ಸಿಬ್ಬಂದಿಯೂ ಇಲ್ಲ. ತೀರ ಅಗತ್ಯವಾದರೆ ಮಾತ್ರ ಯಾವುದಾದರೂ ವ್ಯಾವಹಾರಿಕ ಸಂಗತಿ ಕುರಿತು ಮಾತೆಯವರ ಜೊತೆ ಚರ್ಚಿಸಲಾಗುತ್ತದೆ. ಮಾತೆ ಸದಾ ಧ್ಯಾನನಿರತರು. ಉಳಿದ ಸಮಯಗಳಲ್ಲೂ ಬಹುತೇಕ ಮೌನಿ. ವೈಯಕ್ತಿಕ ವಿಚಾರಗಳ ಕುರಿತು ಯಾರಿಗೂ ಏನೂ ಹೇಳಿಲ್ಲ. ಆ ರಹಸ್ಯ ರಕ್ಷಣೆ ವ್ಯಕ್ತಿಯ ಆಯ್ಕೆ ಎಂದು ಅವರು ತಿಳಿಯುತ್ತಾರೆ. ದ್ವಿವೇದಿಯರೊಡನೆ ಮಾತನಾಡುತ್ತಿದ್ದಂತೆ ಈತ ಬಲು ತೂಕದವ್ಯಕ್ತಿ ಅನ್ನಿಸಿತು. ಬೆಳಿಗ್ಗೆ ಸೂರ್ಯೋದಯದ ಸುಮಾರಿಗೊಮ್ಮೆ ಪೂಜೆ ಮುಗಿಸಿದ್ದ ಅವರು ಈಗ ಮಧ್ಯಾಹ್ನದ ಪೂಜೆಗಾಗಿಯೂ ಕಾಡೆಲ್ಲ ಅಲೆದು ಅನೇಕ ಹೂಗಳನ್ನು ಬುಟ್ಟಿ ತುಂಬ ಸಂಗ್ರಹಿಸಿದ್ದರು. ಆಶ್ರಮದ ಮುಂದೆ ಇವರೇ ಬೆಳೆಸಿದ ಗಿಡಗಳಿದ್ದವು. ಬುಟ್ಟಿ ತುಂಬ ಬಣ್ಣ ಬಣ್ಣದ ಹೂಗಳನ್ನು ನೋಡುವುದೇ ಒಂದು ಖುಷಿಯ ಅನುಭವ. ಮಾತಾಡುತ್ತಿದ್ದವರು ‘ಇನ್ನು ಸಮಯವಾಯಿತು, ನಾನು ಪೂಜೆಗೆ ಅಣಿಯಾಗಬೇಕು’ ಎಂದು ಎದ್ದರು. ‘ನೀವೇನು ತೀರ್ಮಾನ ಮಾಡಿದಿರಿ’ ಎಂದರು . ‘ಸೋಮವಾರ ಬೆಳಿಗ್ಗೆಯವರೆಗೂ ನನಗೆ ಇಲ್ಲಿರಲು ಅವಕಾಶವಿದೆ. ನನ್ನ ಪ್ರಯತ್ನ ಮಾಡುತ್ತೇನೆ’ ಎಂದೆ. ‘ಒಳ್ಳೆಯದಾಯಿತು’ ಎಂದು ಅವರು ಸ್ನಾನಕ್ಕೆ ಹೊರಟರು. ಸೆಲ್‌ನಿಂದ ಡ್ರೈವರನಿಗೆ ಮಾತನಾಡಿ ಸೋಮವಾರ ಬೆಳಿಗ್ಗೆ ಏಳಕ್ಕೆಲ್ಲ ವಾಪಸು ಬರಲು ಸೂಚಿಸಿದೆ. ನಾನು ಸ್ನಾನ ಪೂರೈಸಿ ದೇವೀ ಆಲಯದಲ್ಲಿ ಒಂದೆಡೆ ಕುಳಿತುಕೊಂಡೆ. ದ್ವಿವೇದಿ ಮೈಮರೆತಿದ್ದರು.

ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ಯಾ ದೇವೀ ಸರ್ವಭೂತೇಷು ತೃಷ್ಣಾರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ಯಾ ದೇವೀ ಸರ್ವಭೂತೇಷು ಕಾಂತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ಯಾ ದೇವೀ ಸರ್ವಭೂತೇಷು ಶಾಂತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ಯಾ ದೇವೀ ಸರ್ವಭೂತೇಷು ಶ್ರದ್ಧಾರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ಕಾಡಿನ ಹೂಗಳು ದೇವಿಯ ಶರೀರವನ್ನು ಅಲಂಕರಿಸಿದ್ದವು. ಕುಂಕುಮರಂಜಿತೆಯಾದ ದೇವಿ ಆಗ ತಾನೇ ಮಿಂದು ಮಡಿಯುಟ್ಟಷ್ಟು ಪರಿಶುಭ್ರವಾಗಿ ಕಾಣುತ್ತಿದ್ದಳು. ದ್ವಿವೇದಿಯವರ ಸ್ಫೂರ್ತಿಯುತ ಮಂತ್ರೋಚ್ಚಾರಣೆ ದೇವೀಮೂರ್ತಿಯನ್ನು ಸಚೇತನಗೊಳಿಸುತ್ತಿದ್ದಿತೋ, ಅಥವಾ ಅವಳ ಸಾನ್ನಿಧ್ಯ ದ್ವಿವೇದಿಯವರ ಭಕ್ತಿಭಾವವನ್ನು ತೀವ್ರಗೊಳಿಸುತಿದ್ದಿತೋ- ನಮಗೆ ಸದಾ ಅನುಮಾನವೇ! ಒಂದು ಹೂಬುಟ್ಟಿಯನ್ನು ನನ್ನತ್ತ ತಳ್ಳಿ ‘ನಮಸ್ತಸ್ಯೇ’ ಎಂದಾಗಲೆಲ್ಲ ಒಂದೊಂದು ಹೂ ದೇವಿಗರ್ಪಿಸಲು ಸೂಚಿಸಿದರು. ದೇವೀ ಸಹಸ್ರನಾಮ ಪಾರಾಯಣ ಆರಂಭಿಸಿದರು. ಬಳಿಕ ನೃತ್ಯಸೇವೆ. ದ್ವಿವೇದಿ ಸ್ವತಃ ನರ್ತಿಸಲಾರಂಭಿಸಿದರು. ಸಂಕೋಚದಿಂದ ಮೂಲೆ ಸೇರಿದ್ದ ನನ್ನನ್ನೂ ಎಳೆದು ನೃತ್ಯಕ್ಕೆ ತೊಡಗಿಸಿದರು. ದ್ವಿವೇದಿಯವರ ಮೈಯೆಲ್ಲ ಕಂಪಿಸುತ್ತಿತ್ತು. ಅವರು ಭಾವೋದ್ವೇಗಗೊಂಡಿದ್ದರು. ದೈವ ಭಕ್ತಿಯ ಈ ಅಪ್ಪಟ ಸ್ವರೂಪ ನನಗೆ ಪರಿಚಿತವಲ್ಲ. ಅರ್ಧಗಂಟೆಗೂ ಹೆಚ್ಚು ಕಾಲ ನರ್ತನ ನಡೆದ ಬಳಿಕ ಪುನಃ ದೇವೀಸ್ತುತಿ ಆರಂಭಿಸಿದರು. ಮಂಗಳಾರತಿ ಮುಗಿದ ಬಳಿಕ ಹೇಳಿದರು “ಈ ದೇವಿ, ಆ ದೇವಿ ಬೇರೆ ಅಲ್ಲ, ಎರಡೂ ಒಂದೇ’. ‘ಯಾ ದೇವಿ?’ ಎಂದು ಕೇಳೋಣವೆನ್ನಿಸಿತು. ಪ್ರಾಯಶಃ ಉಷಾಂಬಿಕಾರನ್ನು ಸೂಚಿಸುತ್ತಿದ್ದಾರೆ ಎಂದು ತಿಳಿದೆ. ‘ಇವಳನ್ನು ನೋಡಿದರೆ ಅವಳನ್ನು ನೋಡಿದಂತೆಯೇ. ವ್ಯಕ್ತಿ ಬೇರೆ ಅಲ್ಲ, ನೆರಳು ಬೇರೆ ಅಲ್ಲ. ಆದರೆ ವ್ಯಕ್ತಿಯಿರದಿದ್ದರೆ ನೆರಳೂ ಇಲ್ಲ. ಹಾಗೆಯೇ ಈ ದೇವಿ ಇಲ್ಲದಿದ್ದರೆ ನಾವೂ ಇಲ್ಲ’ ಎಂದರು. ಕೆಂಪು ತಿಲಕವನ್ನು ನನ್ನ ಹಣೆಗೆ ಹಚ್ಚಿ ದೇವಿಗೆ ನಮಸ್ಕರಿಸಲು ಹೇಳಿ, ಬಾಗಿಲು ಓರೆ ಮಾಡಿ ಹೊರ ಹೋಗುವಂತೆ ಸೂಚಿಸಿದರು.

ಅಂದು ಸಂಜೆ ನನಗೆ ಇನ್ನೇನೂ ಕೆಲಸವಿರಲಿಲ್ಲ. ಅಷ್ಟು ಹೊತ್ತು ಗಂಗಾನದಿಯ ದಡಕ್ಕೆ ಹೋಗಿ ಕಲ್ಲೆಸೆಯುತ್ತ ಕುಳಿತೆ. ಕಲ್ಲಿನಿಂದ ನೀರಲ್ಲಿ ಕಪ್ಪೆಯೋಟ ಸೃಷ್ಟಿಸುತ್ತಾ ಚಿಕ್ಕ ಮಗುವಿನಂತಾದೆ. ಹಾಗೆಯೇ ಆಶ್ರಮವನ್ನು ಮಡಿಲಲ್ಲಿಟ್ಟು ಸಾಕಿಕೊಂಡಂತೆ ತೋರುವ ಅಡವಿ ಪ್ರದೇಶದಲ್ಲಿ ಓಡಾಡಿ ಬರೋಣವೆಂದು ಹೊರಟೆ. ಸಂಜೆಯಾದರೂ ಬೆಳಕು ಸಾಕಷ್ಟಿತ್ತು. ನಡೆಯುತ್ತಿರುವವನಿಗೆ ಯಾವುದೋ ಕೆಲಸಕ್ಕೆ ಬಂದು ಇನ್ನೇನೇನೋ ಮಾಡಲು ತೊಡಗಿದ್ದೇನಲ್ಲ ಎಂಬ ಭಾವನೆ ಉಂಟಾಯಿತು. ಕಾಲಿಗೆ ಚುಚ್ಚಿದ ಮುಳ್ಳನ್ನು ಎಚ್ಚರದಿಂದ ಬಿಡಿಸಿ ಆಚೆ ಎಸೆದೆ. ಮೂರು ನಾಲ್ಕು ನಿಮಿಷ ದಾರಿ ಕ್ರಮಿಸುತ್ತಿದ್ದಂತೆ ಕಾಡು ದಟ್ಟವಾಗತೊಡಗಿತು. ವನ್ಯಪ್ರಾಣಿಗಳೂ ಇರಬಹುದೇನೋ ಅಂದುಕೊಳ್ಳುತ್ತಿದ್ದಂತೆ ಜಿಂಕೆ, ಸಾರಂಗಗಳನ್ನು ಹೋಲುವ ಪಟ್ಟೆ ಪಟ್ಟೆ ಮೈಚರ್ಮದ ಪ್ರಾಣಿಗಳು ಎದುರಾದವು. ನನ್ನ ಕಂಡಿದ್ದೆ ಚಲ್ಲಾಪಿಲ್ಲಿಯಾಗಿ ಓಡಿದವು. ಅವುಗಳಲ್ಲಿ ಒಂದಂತೂ ಅಷ್ಟು ದೂರ ಓಡಿ ನನ್ನನ್ನೇ ನಿಟ್ಟಿಸುತ್ತಿದ್ದು, ನಾನು ಅದರ ಕಣ್ಣಲ್ಲಿ ಕಣ್ಣಿಟ್ಟುನಿಂತ ಕೂತಲೇ ‘ಸತ್ತೆನೋ, ಕೆಟ್ಟೆನೋ’ ಎಂಬಂತೆ ಓಡತೊಡಗಿತು.

ಇನ್ನಷ್ಟು ದೂರ ಹೋದರೆ ಒಂದೆಡೆ ಬಿಳಿಯಬಣ್ಣದ ಪುಟ್ಟ ಶಿವಲಿಂಗ ಗೋಚರಿಸಿತು. ಅದಕ್ಕೆ ಪೂಜೆಯೂ ನಡೆದಿತ್ತು. ಸಾಕ್ಷಿಯಾಗಿ ಅಲ್ಲಿದ್ದ ಹೂಗಳು . ಅಭಿಷೇಕದ ಕುರುಹು. ದುಂಬಿಗಳು ಶಿವಲಿಂಗವನ್ನು ಮುದ್ದಿಸುತ್ತಿದ್ದ ಬಗೆ ಮನೋಹರವಾಗಿತ್ತು. ಯಾರೋ ಪಂಚಾಮೃತದ ಅಭಿಷೇಕ ಮಾಡಿರಬೇಕು, ಅದರ ಆಸೆಗೆ ದುಂಬಿಗಳು ಶಿವಲಿಂಗವನ್ನು ಸುತ್ತುವರಿದಿವೆ ಎಂದು ಊಹಿಸಿದೆ. ಕೊಂಚ ತಗ್ಗಿನಲ್ಲಿದ್ದ ಆ ಶಿವಲಿಂಗಕ್ಕೆ ಸುತ್ತಲೂ ಬೆಳೆದಿದ್ದ ಕಾಡುಗಿಡಗಳಿಂದ ತಾನಾಗಿಯೇ ಹೂಗಳ ಸುರಿಮಳೆಯಾಗುವಂತಿತ್ತು. ಸಂಜೆ ಸೂರ್ಯನ ಕೆಂಬಣ್ಣದ ಬೆಳಕು ಈ ನಿಸರ್ಗಾಲಯಕ್ಕೆ ಹೊಸ ಸೊಬಗು ತಂದಿತ್ತು. ಕಲ್ಲು ಕಟ್ಟಡಗಳು ಬೇಸರವಾಗಿ ಶಿವ ಅಡವಿಗೆ ಬಂದು ಕುಳಿತುಬಿಟ್ಟನೇ ಅನ್ನಿಸಿ ನಗು ಬಂತು. ದ್ವಿವೇದಿ ಈ ಲಿಂಗದ ಬಗೆಗೆ ಏನೂ ಹೇಳಲಿಲ್ಲವಲ್ಲ ಎಂದು ಅಚ್ಚರಿಗೊಂಡೆ. ಅಲ್ಲಿಯ ಪರಿಸರವೇ ಧ್ಯಾನಕ್ಕೆ ಎಳಸುವಂತಿತ್ತು. ಯಾರಾದರೊಬ್ಬ ಹಿರಿಯ ಯೋಗಿ ಬಹು ಹಿಂದೆ ತಪಸ್ಸು ಮಾಡಿದ್ದ ತಾಣವಾಗಿರಬಹುದೇ? ಅಂಥ ಸೂಕ್ಷ್ಮ ಸ್ಥಳಗಳಲ್ಲಿ ಮನಸನ್ನು ಅಲೌಕಿಕ ನೆಲೆಗಳಿಗೆಳಸಬಲ್ಲ ಶಕ್ತಿಯು ತಾನೇ ತಾನಾಗಿ ಇರುವುದಂತೆ. ಅದನ್ನು ಗ್ರಹಿಸಬಲ್ಲ ಸಂವೇದನಾಶೀಲರಾಗಿದ್ದರೆ ನಾವು ಆ ಅನುಭವವನ್ನು ಇಡಿಯಾಗಿ ಪಡೆಯಬಹುದಂತೆ. ನನಗೆ ತಿಳಿದ ಬಗೆಯಲ್ಲಿ ಧ್ಯಾನಕ್ಕೆ ತೊಡಗೋಣವೆಂದರೆ ಅದೆಲ್ಲವನ್ನೂ ನಿರಾಕರಿಸಿ ಮನಸು ಒಳಮುಖವಾಗಿ ಅದೆಲ್ಲೋ ಜಗ್ಗುತ್ತಲೇ ಇತ್ತು. ನಿಗ್ರಹ ಕಳೆದುಕೊಂಡು ಆ ಅಂತರ್ಮುಖೀ ಯಾತ್ರೆಯಲ್ಲಿ ಮನಸನ್ನು ಹಿಂಬಾಲಿಸಿ ಹೋಗುತ್ತಿದ್ದಂತೆ ಒಂದು ಹಂತದಲ್ಲಿ ಮನಸೇ ಅದೃಶ್ಯವಾದಂತೆನಿಸಿತು. ಮನಸೇ ಇಲ್ಲವಾದ ಮೇಲೆ ಉಳಿದಿದ್ದೇನು?

ಎಚ್ಚರ ಬಂದಾಗ ನಾನು ಶಿವಲಿಂಗಕ್ಕೆ ಸಾಷ್ಟಾಂಗ ನಮಸ್ಕರಿಸಿದ್ದೆ. ಎದ್ದು ಕಣ್ಣು ಬಿಟ್ಟರೆ ದೇವಿ ನಗುತ್ತ ನಿಂತಿದ್ದಾರೆ. ಸಂಶಯವೇ ಇಲ್ಲ: ನನ್ನ ಉಷಾ! ನನ್ನ ಉಷಾ!

‘ಉಷಾ’ ಎನ್ನುತ ಎದ್ದು ನಿಂತು ಅಳಲಾರಂಭಿಸಿದೆ. ನನ್ನ ನಿಯಂತ್ರಣ ಮೀರಿ ಕಣ್ಣೀರು ಸುರಿಯುತ್ತಲೇ ಇತ್ತು.

‘ಉಷಾ, ನಿನ್ನನ್ನು ಹುಡುಕಿ ನಾನು ಎಲ್ಲೆಲ್ಲಿ ಅಲೆದೆ! ನಿನ್ನ ಬಗೆಗೆ ಏನೆಲ್ಲ ಕಥೆ ಕೇಳಿದೆ! ಕೇಳಿದ ಯಾವ ಕಥೆಯಲ್ಲೂ ನೀನು ಸುಖಿಯಾಗಿರಲಿಲ್ಲ. ಹೇಳು ಉಷಾ, ನನಗೆ ನಿನ್ನನ್ನು ಹುಡುಕಬೇಕು ಎನ್ನಿಸಿದಂತೆ ನಿನಗೂ ನನ್ನನ್ನು ಹುಡುಕಬೇಕು ಎನ್ನಿಸಲಿಲ್ಲವೆ?’

‘ಉಷಾ, ನಾನು ನಿನ್ನಿಂದ ಏನನ್ನೂ ಬಯಸಿ ಬಂದವನಲ್ಲ. ನಿನ್ನ ಈ ವೇಷ, ಈ ತಪಗಳಲ್ಲಿ ನನಗಂಥ ಆಸಕ್ತಿಯೂ ಇಲ್ಲ. ನಂಬು ಉಷಾ, ನೀನು ಎಲ್ಲೇ ಇರು, ಹೇಗೇ ಇರು, ನೀನು ಸದಾ ನಗುತ್ತಿರಬೇಕೆಂದು, ನಿನಗೆ ಸದಾ ಒಳ್ಳೆಯದಾಗಬೇಕೆಂದು ಹಂಬಲಿಸುವವನು ನಾನು. ಬದುಕು ಧಕ್ಕೆ ಕೊಡುತ್ತಲೇ ಹೋದಾಗ ಒಮ್ಮೆಯೂ ನಿನಗೆ ನನ್ನ ನೆನಪಾಗಲಿಲ್ಲವೇ? ಬಾಲ್ಯದ ಗೆಳೆಯನ ಸಹವಾಸ ಬೇಕೆನಿಸಲಿಲ್ಲವೆ?’

ಉಷಾ ಮಾತಾಡಲಿಲ್ಲ. ನನಗೆ ಬೆನ್ನು ತಿರುವಿ ನಿಂತಿದ್ದಳು. ನನಗಿನ್ನೂ ಮಾತನಾಡುವುದು ಮುಗಿದಿರಲಿಲ್ಲ. “ಯಾರೋ ಹೇಳಿದರು, ನಿನ್ನ ಗಂಡ ಮಹೇಶ್ವರ ತೀರಿಕೊಂಡರೆಂದು. ಇನ್ನಾರೋ ಹೇಳಿದರು ನೀನು ಇನ್ನೊಂದು ಮದುವೆ ಆಗಿದ್ದೀ ಎಂದು. ನೀನು ಸತ್ತಿರುವೆಯೆಂದು ಸುದ್ದಿ ಕೊಟ್ಟವರೂ ಇದ್ದಾರೆ. ಸತ್ಯ ತಿಳಿಯದಾದಾಗ ಜಗತ್ತು ಊಹೆಗಳನ್ನು ಕಟ್ಟಿಕೊಳ್ಳುತ್ತದೆ. ಸೂರ್ಯಕಿರಣಗಳಷ್ಟು ಬೆಳ್ಳಗಿನ ಪರಿಶುಭ್ರ ಮನಸಿನ ನನ್ನಬಾಲ್ಯದ ಗೆಳತಿ ಉಷಾದೇವಿಯೇ ಹೇಳು-ನೀನೇಕೆ ಹೀಗೆ ಕಗ್ಗಂಟಾದೆ?” ಉಷಾ ಮಾತಾಡಲಿಲ್ಲ.

“ನಾನು ನಿನಗೆ ಪತ್ರ ಬರೆದೆ. ನಿನ್ನಿಂದ ಉತ್ತರವಿಲ್ಲ. ಹಿಂದಿನ ಜೀವನದ ಕುರಿತು ನೀನೇನೂ ಹೇಳುವುದಿಲ್ಲ ಎಂದೂ, ಅದನ್ನು ಕೇಳಿ ತಮ್ಮೆಲ್ಲರನ್ನೂ ಇಕ್ಕಟ್ಟಿಗೆ ಸಿಲುಕಿಸಬಾರದೆಂದೂ ದ್ವಿವೇದಿ ಉತ್ತರ ಬರೆದರು. ಹೇಳು ಉಷಾ, ಅಂಥದ್ದೇನಾಯಿತು? ನೀನು ನಿರಾಕರಿಸುವ ನಿನ್ನ ಜೀವನದ ಪೂರ್ವಭಾಗದಲ್ಲಿ ನಮ್ಮ ಬಾಲ್ಯವೂ ಇದೆಯಲ್ಲವೇ? ನಿನ್ನ ಬಾಲ್ಯದ ಗೆಳೆಯ ಅತ್ಯಂತ ನಿಷ್ಕಲ್ಮಷ ಹೃದಯದಿಂದ ವಾಪಸು ಬಂದು ಮಂಡಿಯೂರಿ ಕುಳಿತು ಕೈಮುಗಿದು ಕೇಳುತ್ತೇನೆ. ನನಗೆ ನಿನ್ನ ಜಪ ಬೇಡ, ತಪ ಬೇಡ, ಜೀವದ ಗೆಳತಿಯಾಗಿ ನೀನು ಕೊಟ್ಟ ಅಪ್ಪಟ ಪ್ರೀತಿ, ಆ ಪ್ರೀತಿಯೇ ಜೀವ ತಳೆದಂತಿದ್ದ ಕುಸುಮಾಲೆ ಹಣ್ಣುಗಳ ಅನುಗ್ರಹ-ನನಗಷ್ಟೆ ಸಾಕು. ಉಳಿದದ್ದನ್ನು ಪಡೆಯಲು ನಿನಗೆ ಭಕ್ತಿಕೋಟಿ ಇದ್ದೇ ಇದೆ.”

ಉಷಾ ನನ್ನ ಕಡೆ ತಿರುಗಿದಳು. ಅವಳ ಕಣ್ಣುಗಳಲ್ಲೂ ನೀರು. ‘ಕೇಶವ’ ಎನ್ನುತ್ತ ತಬ್ಬಿಕೊಂಡಳು. ನಾನು ಅವಳ ಮಡಿಲಲ್ಲಿ ಅತ್ತೆನೋ, ಅವಳು ನನ್ನ ಮಡಿಲಲ್ಲಿ ಅತ್ತಳೋ-ನಾನು ಹೇಳಲಾರೆ. ಕಾಲ ದೇಶಗಳ ಹಂಗಿಲ್ಲದ ಆ ಕಂಬನಿಯ ಕೋಡಿಯಲ್ಲಿ ಎರಡು ಜೀವಿಗಳು ಜಗದ ಆದಿಸ್ಥಿತಿಯಲ್ಲಿ ಒಂದಾದವು. ಬಾಳೆಹಣ್ಣುಗಳನ್ನು ಒಂದೊಂದಾಗಿ ಬಿಡಿಸಿ ತಿನಿಸುತ್ತ ಹೋದಳು. ‘ನನ್ನನ್ನು ಹುಡುಕಿ ಇಲ್ಲಿಯವರೆಗೂ ಬಂದೆಯಾ?’ ಎಂದಳು. ‘ತಾಯಿ ಹಸುವನ್ನು ಅರಸಿ ಕರು ಬಂದಂತೆ’ ಎಂದೆ. ಗಂಭೀರಳಾದಳು. ಎದ್ದು ನಿಂತಳು.

‘ಕೇಶವ, ಇದು ನನ್ನ ನಿನ್ನ ಕೊನೆಯ ಭೆಟ್ಟಿಯಾಗಬೇಕು. ನನ್ನಿಂದ ನೀನು ನನ್ನ ಜೀವನದ ಯಾವ ಹಂತದ ಕಥೆಯನ್ನೂ ತಿಳಿಯಲಾರೆ. ತಿಳಿಯಬಯಸಲೂಬೇಡ. ಎಲ್ಲಾ ಕಥೆಗಳೂ ಊಹೆಗಳೆಂದು ನೀನು ತಿಳಿದೇ ಇದ್ದೀಯೆ. ಅಷ್ಟೇ ಅಲ್ಲ, ಅದು ಮುಗಿದು ಹೋದದ್ದರ ಬೆನ್ನು ಹತ್ತಿ ಹಿಂದಕ್ಕೆ ಹೋಗುತ್ತದೆ ಎಂಬುದನ್ನೂ ನೆನಪಿಡು. ಅದರ ಅವಶ್ಯಕತೆ ಉಳ್ಳವರು ಅದರ ಬೆನ್ನು ಹತ್ತಿ ಹಿಂದೆ ಹೋಗಲೂ, ಮುಂದೆ ಹೋದೆವೆಂದು ತಿಳಿಯಲೂ ಸ್ವತಂತ್ರರಿದ್ದಾರೆ. ನಾನು ಅವರ ಹಾದಿಯಲ್ಲಿ ಇಲ್ಲ. ಅದೆಲ್ಲವನ್ನೂ ತೊರೆದು ಕಥೆಗಳಿಲ್ಲದ ಹಾದಿಯಲ್ಲಿ ನಾನು ಹೊರಟಿದ್ದೇನೆ. ನನಗೆ ಭೂತವಿಲ್ಲ, ಆದ್ದರಿಂದ ಭವಿಷ್ಯವೂ ಇಲ್ಲ. ಇದು ಜಗತ್ತನ್ನು ಕಟ್ಟುವ ಹಾದಿ ಹೌದೋ, ಅಲ್ಲವೋ-ನನಗೆ ತಿಳಿಯದು. ನನಗೆ ನನ್ನನ್ನು ಕಟ್ಟಿಕೊಳ್ಳುವುದು ಅನಿವಾರ್ಯವಾಗಿದೆ. ಜಗತ್ತಿನ ಸುಖ ದುಃಖ ನೋಡಿಕೊಳ್ಳಲು ನೀನಿದ್ದೀ, ನಿನ್ನಂಥವರಿದ್ದಾರೆ. ನನ್ನಂಥವರು ಇದೆಲ್ಲವನ್ನೂ, ಇಂಥ ಎಲ್ಲ ಪ್ರಾಮಾಣಿಕ ಪ್ರಯತ್ನಗಳನ್ನೂ ಗೌರವಿಸುತ್ತಲೇ ಗೌರವಪೂರ್ಣ ದೂರವನ್ನು ಕಾಯ್ದುಕೊಳ್ಳಲೂ ಬಯಸುತ್ತೇವೆ. ನಿನಗಿದರಲ್ಲಿ ಆಸಕ್ತಿ ಇಲ್ಲ. ಅದು ಸಹಜ.ಆಸಕ್ತಿಗಳು ಕಳೆದುಹೋದಾಗಲೇ ಈ ಹಾದಿ ತೆರೆದುಕೊಳ್ಳುತ್ತದೆ. ತನ್ನ ಜೀವನದ ದಿಕ್ಕನ್ನೇ ಬೇರೆಡೆ ಹೊರಳಿಸಿಕೊಂಡು ಸಾಗುತ್ತಿರುವ ನನ್ನ ಮೇಲೆ ಬಾಲ್ಯದ ಗೆಳತಿ ಎಂಬ ಕಾರಣದಿಂದ ನೀನು ಹಕ್ಕು ಚಲಾಯಿಸಲು ನಾನು ಬಿಡಲಾರೆ. ನನ್ನನ್ನು ಮತ್ತೆ ಸಂಬಂಧಗಳ ಸುಳಿಯಲ್ಲಿ ಸಿಲುಕಿಸಬೇಡ.” ಎಂದು ಕೈಮುಗಿದಳು. ಥಟ್ಟನೆ ನಿಷ್ಠುರವಾಗಿ “ಇಂದು, ನಾಳೆ, ನಾಡಿದ್ದು-ಯಾವತ್ತು ಬೇಕಾದರೂ ನೀನು ಇಲ್ಲಿಂದ ಹೊರಡಬಹುದು. ನೀನು ಬಂದ ಕೆಲಸ ಮುಗಿದಿದೆ. ಅದನ್ನು ಅರ್ಥ ಮಾಡಿಕೊಳ್ಳುವುದಷ್ಟೇ ಉಳಿದಿದೆ.” ಎಂದು ಹೇಳಿ ಬಂದಷ್ಟೇ ಆಶ್ಚರ್ಯಕರವಾಗಿ ಮರೆಯಾಗಿ ಹೋದಳು. ಅವಳ ಹಾದಿ ತಿಳಿಯುವುದು ಸುಲಭವಾಗಿರಲಿಲ್ಲ. ಗಿಡಗಂಟೆಗಳ ಪೊದೆಯಲ್ಲಿ ಅವಳು ಮರೆಯಾದ ಬಗೆ ವಿದಾಯ ಸೂಚಿಸುವಂತಿತ್ತು, ಮುಂದಿನ ಮಾತುಕತೆಗಳನ್ನು ನಿರಾಕರಿಸುವಂತಿತ್ತು.

ನಿಧಾನವಾಗಿ ಹೆಜ್ಜೆಗಳನ್ನಿಡುತ್ತಾ ಆಶ್ರಮಕ್ಕೆ ಮರಳಿದೆ. ದ್ವಿವೇದಿಯವರು ಉದ್ವೇಗದಿಂದ ಉತ್ಕಂಠಿತ ಕಂಠದಲ್ಲಿ ದೇವೀ ಪೂಜೆ ಮಾಡತೊಡಗಿದ್ದರು.
ಯಾ ದೇವೀ ಸರ್ವಭೂತೇಷು ಪ್ರಜ್ಞಾರೂಪೇಣ ಸಂಸ್ಥಿತಾ
ನಮಸ್ತಸ್ಯೇ ನಮಸ್ತಸ್ಯೇ ನಮಸ್ತಸ್ಯೇ ನಮೋನಮಃ
ಯಾ ದೇವೀ ಸರ್ವಭೂತೇಷು ಶಾಂತಿರೂಪೇಣ ಸಂಸ್ಥಿತಾ
ನಮಸ್ತಸ್ಯೇ ನಮಸ್ತಸ್ಯೇ ನಮಸ್ತಸ್ಯೇ ನಮೋನಮಃ

*

ಚಿಂತಾಮಣಿ ಕೊಡ್ಲೆಕೆರೆ
ಈ ಕಥೆ ಬರೆದು ಹತ್ತು ವರ್ಷಗಳೇ ಆಗಿ ಹೋಗಿವೆ. ಅಧ್ಯಾತ್ಮದ ಅನ್ವೇಷಣೆಯ ಮಾರ್ಗ-ರಮಣರ ‘ನಾನು ಯಾರು?’ ಎಂಬ ಪುಸ್ತಿಕೆ ತೋರುವ ಪ್ರಶ್ನೆಗಳ ಹಾದಿಯಾಗಿಯೂ, ಪರಮಹಂಸರಂಥ ಮಹಾತ್ಮರು ತಮ್ಮನ್ನು ತಾವೇ ಅನೇಕ ಪ್ರಯೋಗಗಳಿಗೆ ಒಡ್ಡಿಕೊಂಡ ಪಥವಾಗಿಯೂ ಆಕರ್ಷಕ ಆಹ್ವಾನವಾಗಿ ಕಾಣತೊಡಗಿತ್ತು. ಸಂತರ ಜೀವನ, ಅವರ ದರ್ಶನ, ಮಾತುಗಳು ಅದಮ್ಯವಾಗಿ ಸೆಳೆಯತೊಡಗಿದವು. ಸಾಹಿತ್ಯ ಸೃಷ್ಟಿಯ ನನ್ನ ಹುರುಪಿನ ಆವರಣಕ್ಕೂ ಈ ಅಂತರಂಗದ ತುಡಿತಕ್ಕೂ ಭೇದ ಉಳಿಯಲಿಲ್ಲ. ಅದು ಇರಬೇಕಾದುದೇ ಹಾಗೆ ಎಂದು ಸಾಧನಾಪಥದಲ್ಲಿರುವ ಗೆಳೆಯರೊಬ್ಬರು ನನ್ನ ಸಂದೇಹ ಪರಿಹರಿಸಿದರು.
‘ಯಾದೇವಿ….’ ಬರೆದುದು ಈ ಹಂತದಲ್ಲಿ. ನನ್ನ ಕವಿತೆಗಳು ದೇವರೊಡನೆ ಸಂಬಂಧ ಬೆಳೆಸಿಕೊಂಡು ಕೈ ಹಿಡಿದು ಓಡಾಡತೊಡಗಿದ್ದು ಇನ್ನೂ ಪೂರ್ವದಲ್ಲೇ. ಕಥೆಗಳ ಜಗತ್ತಿನಲ್ಲೂ ಈ ಹುಡುಕಾಟ ಮುಂದುವರಿಯಿತು. ಖರೆ ಎಂದರೆ ಇವೆಲ್ಲವೂ ಅಭಿನ್ನ, ಒಳಗಿನಿಂದ ನಾವು ಏನನ್ನು ಹುಡುಕ ಹೊರಡಿದ್ದೇವೆಯೋ, ಹೇಳಹೊರಡಿದ್ದೇವೆಯೋ – ಅದಕ್ಕೆ ಗದ್ಯ, ಪದ್ಯ ಎಂಬ ಭೇದವಿಲ್ಲ. ಆದರೆ ಆಟಕ್ಕೆ ಕೆಲವು ನಿಯಮಗಳಿರುತ್ತವೆ, ಅಷ್ಟೆ.
ಹೆಣ್ಣು ಮಕ್ಕಳ ಜೀವ, ಜೀವನ ಎಂದಿಗೂ ನನ್ನನ್ನು ಕಾಡುವಂಥದು. ಇರುವಲ್ಲೇ ಕಥೆಯಾಗಿಬಿಡುವ ಪಾಡು ಹೆಣ್ಣಿನ ಬಾಳು. ನನ್ನ ಜೊತೆಯಲ್ಲೇ ಓದಿದವರು, ದುಡಿದವರು ನಾನು ಚಿಕ್ಕಂದಿನಿಂದ ಕಂಡವರು….. ಹೆಣ್ಣುಮಕ್ಕಳ ಜೀವನದಲ್ಲಿ ಏನೆಲ್ಲಾ ಆಗಿ ಹೋಗಿದೆ, ಸದಾ ಆಕಸ್ಮಿಕಗಳಿಗೆ ಒಡ್ಡಿಕೊಂಡೇ ಹೆಣ್ಣಿನ ಬಾಳು ಸಾಗಿದೆ. ಇವತ್ತಿಗೂ ಬಹುಪಾಲು ಸ್ತ್ರೀಯರ ಬಾಳು ಅಬಲೆ ಎಂಬ ಪದಕ್ಕೇ ಹೊಂದುವಂಥದು. ಅಸಹಾಯಕತೆಯ ತೀವ್ರತೆಯಲ್ಲೇ ಅಧ್ಯಾತ್ಮದ ಬಲದಿಂದ ಎದ್ದು ನಿಂತ ಸಂತಸ್ತಿಯರ ಕಥೆೆಗಳು ಈ ದೇಶದಲ್ಲಿವೆ. ನನ್ನ ಕಥೆಯ ಉಷಾಂಬಿಕೆ ಅಂಥವಳು. ಅವಳು ನನ್ನ ಜೊತೆ ಶಾಲೆಯಲ್ಲಿ ಓದಿದವಳು. ಮುಂದೆ ಅವಳ ಜೀವನದಲ್ಲಿ ಏನಾಯಿತೋ, ಖಚಿತವಾಗಿ ಗೊತ್ತಿಲ್ಲ. ಇಂದು ಅವಳು ನಾಡು ಪೂಜಿಸುವ ಆಧ್ಯಾತ್ಮಿಕ ವರ್ಚಸ್ಸಿನ ಮಾತೆ. ಅಂಥ ಅನೇಕರಿಗೆ ತಮ್ಮ ಪೂರ್ವ ಜೀವಿತದ ಬಗೆಗೆ ಯಾಕೆ ನಿರ್ಲಕ್ಷ್ಯ ಇರುತ್ತದೆ, ತಿಳಿಯದು. ಅದು ನಿರ್ಲಕ್ಷ್ಯವೇ ಹೌದು ಎಂತಲೂ ಹೇಳಲಾಗದು. ಏನೇ ಇರಲಿ, ಜಗತ್ತು ಕುತೂಹಲದಿಂದ ಕಥೆಗಳನ್ನು ಕಟ್ಟಿಕೊಳ್ಳುತ್ತದೆ. ಅಂತಿಮವಾಗಿ ತಾನು ಏನೂ ಪಡೆದುಕೊಂಡೆನೋ ಅದು ಮುಖ್ಯ ಎಂದು ಒಬ್ಬ ಸಂತ ತಿಳಿಯುವನಾದರೆ, ಅವನ ಪಥಕ್ರಮಣದ ಕುತೂಹಲ- ಜಗತ್ತಿನ ಹಸಿವೆ!
ನನ್ನೀ ಕಥೆಯ ಹಿಂದೆ ಇವೆಲ್ಲ ಇವೆ. ಅನೇಕ ಪದರಗಳ ರಚನೆ ಎಂದೂ ಈಗ ಓದಿದಾಗ ಅನಿಸುತ್ತದೆ.