ಆತ ಹಿಂದಿಯಲ್ಲಿ “ಮಾಲು ಬೇಕಾ, ಪ್ರೆಶ್ ಇದ್ದಾರೆ” ಎಂದ. ಅನಂತ ಇಲ್ಲಾ ನಾವು ಇಲ್ಲಿ ನಮ್ಮೂರಿನ ಹೋಟೇಲಿನವರನ್ನು ಭೆಟ್ಟಿಯಾಗಲಿಕ್ಕೆ ಬಂದಿದ್ದೇವೆ. ಅಂತಹುದೇನೂ ನಮಗೆ ಆಸೆಯಿಲ್ಲ ಎಂದು ಅವನನ್ನು ಸಾಗಹಾಕಲು ನೋಡಿದ. ಆತನೂ ಬಿಡಲಿಲ್ಲ. “ಸಾಬ್ ನೋಡಿ ಹೋಗಿ, ಅದಕ್ಕೆ ಹಣಕೊಡಬೇಕಾಗಿಲ್ಲ.” ಎಂದು ಒತ್ತಾಯ ಮಾಡಲು ತೊಡಗಿದ. “ನಾವು ಅಂತವರಲ್ಲ ಮರಿ…” ಎಂದು ಮೂರ್ತಿ ಹೇಳುತ್ತಿರುವಂತೆ ಆತ ಮತ್ತೆ ತನ್ನ ವರಾತ ಹಚ್ಚಿ “ನೋಡಿ ಹೋಗಿ ಅವರೆಲ್ಲಾ ತನ್ನ ಅಕ್ಕಂದಿರು” ಎಂದ.
ನಾರಾಯಣ ಯಾಜಿ, ಸಾಲೇಬೈಲು ಬರೆದ ಈ ಭಾನುವಾರದ ಕಥೆ “ಬಯಲೊಳಗೊಂದು… ಕಾಡೇ… ಗೂಡೇ…” ಈ ಭಾನುವಾರದ ನಿಮ್ಮ ಓದಿಗೆ

 

ಓರಿಯನ್ ಮಾಲಿನಲ್ಲಿ ಹೆಂಡತಿಯೊಡನೆ ನಗುತ್ತಾ ಎಲಿವೇಟರಿನಲ್ಲಿ ಹತ್ತುತ್ತಿದ್ದ ಕೃಷ್ಣಮೂರ್ತಿಗೆ ಎದುರುಗಡೆ ಇಳಿಯುತ್ತಿದ್ದವಳನ್ನು ನೋಡಿದಕೂಡಲೇ ಥಟ್ಟನೆ ಶಾಕ್ ಹೊಡೆದಂತೆ ಆಯಿತು. ಹೌದು ಎಲ್ಲೋ ನೋಡಿದ ಮುಖ ಅನಿಸಿದರೂ ತನ್ನನ್ನು ಗಮನಿಸಬಾರದೆಂದು ಬಲಗಡೆ ತಿರುಗಿ ಮೊಬೈಲಿನಲ್ಲಿ ಯಾರಿಗೋ ರಿಂಗ್ ಮಾಡಲು ತೊಡಗಿದ. “ಈ ಮಾಲಿಗೆಲ್ಲಾ ಬಂದರೆ ಹೀಗೆ ಮಾಲಿನ ವಿಶಿಷ್ಟ ಘಾಟಿನ ಜೊತೆಗೆ ಇವಳದ್ದೆಂತ ಸೆಂಟಿನ ಘಾಟಿನ ಕೇಡು ಬೇರೆ”  ಎಂದು ನಂದಿನಿ ತನ್ನನ್ನು ಹಾಯುವಂತೆ ಸರಿದು ಹೋದ ಆಕೆಯ ಕುರಿತು ಗೊಣಗುಟ್ಟುತ್ತಾ ಹಿಂಬಾಲಿಸಿದಳು. ಎಲಿವೇಟರಿನ ಮೆಟ್ಟಿಲಿನಿಂದ ಮೇಲೆ ಏರುವಾಗ ಕೆಳಗೆ ಒಮ್ಮೆ ನೋಡಿದರೆ ಆಕೆ ಅಲ್ಲಿಂದಲೇ ಈತನನ್ನು ಗಮನಿಸಿದಂತೆ ಅನಿಸಿತು. ಮುಖಕ್ಕೆ ಅಗಲದ ಕೂಲಿಂಗ್ ಗ್ಲಾಸ್ ಹಾಕಿ ಕೂದಲನ್ನು ಹಾರಿ ಬಿಟ್ಟು ನಗುತ್ತಿದ್ದ ಅವಳೊಟ್ಟಿಗೆ ಮತ್ತಿಬ್ಬರು ಹುಡುಗಿಯರು ಮತ್ತು ಯಾರೋ ಓರ್ವ ಹುಡುಗ ಇದ್ದರು. ಆದರೂ ಆಕೆ ತನ್ನನ್ನೇ ಗಮನಿಸುತ್ತಿದ್ದಾಳೆ ಅನಿಸಿತು. ಮುಖದಲ್ಲಿ ಯಾವ ಭಾವವೂ ಅವಳಲ್ಲಿ ಕಾಣದಿದ್ದರೂ ಏನೋ ಇದೆ ಅನಿಸಿತು. ಮೇಲೆ ಮಾಲಿನ ಒಳಗೆಲ್ಲಾ ತಿರುಗಾಡುವಾಗ ಇದ್ದಕ್ಕಿದ್ದಂತೆ ಅದೇ ಸೆಂಟಿನ ವಾಸನೆ ಮತ್ತೆ ಬಂದಂತೆನಿಸಿದರೆ ಅವಳೆಲ್ಲಿಯೂ ಕಾಣಲಿಲ್ಲ. ಅಲ್ಲೆಲ್ಲೋ ಇರಬೇಕೆನಿಸಿ ತಡಬಡಾಯಿಸತೊಡಗಿದೆ. ಆಚೇ ಈಚೇ ನೋಡುತ್ತಾ ನಿಂತವನನ್ನು “ಬನ್ನಿ ಬೇಗ” ಎಂದು ನಂದಿನಿ ಈತನನ್ನು ಎಳೆದುಕೊಂಡು RmKV ಮಳಿಗೆಗೆ ಎಳೆದುಕೊಂಡು ಹೋದವಳನ್ನು ಸುಮ್ಮನೆ ಹಿಂಬಾಲಿಸಿಹೋದ. ಒಮ್ಮೆಲೇ ಅದೇ ಸೆಂಟಿನ ವಾಸನೆ ಮೂಗಿಗೆ ಬಡಿದಂತಾಯಿತು. ನಂದಿನಿ ಸೀರೆಗಳನ್ನು ಆರಿಸಲು ತೊಡಗಿದಳು. ಆಕೆಗೆ ಸೀರೆಯ ಆಯ್ಕೆಗೆ ಗಂಡ ಇರಲೇ ಬೇಕಿತ್ತು. ಮೊದಲು ಆಕೆಯೇ ಅದು ಇದು ಎಂದು ಎಲ್ಲವನ್ನು ಹುಡುಕಿ ನೋಡುವದು, ಅದನ್ನು ಕೃಷ್ಣಮೂರ್ತಿ ಅಂತಿಮವಾಗಿ ಒಪ್ಪಿಗೆ ಸೂಚಿಸುವದು…ಇದು ಅವರ ಮದುವೆಯಾದಾಗಿಲಿಂದಲೂ ನಡೆದುಕೊಂಡು ಬಂದ ರಿವಾಜಾಗಿತ್ತು.

ಅವಳು ಸೀರೆಯನ್ನು ಎಡ ಭುಜದಮೇಲೆ ಹಾಕಿ ಇದು ಹೇಗಿದೆ ಎಂದು ಕೇಳುತ್ತಿದ್ದರೆ ಮೂರ್ತಿಗೆ ಆ ಕಡೆ ಗಮನವೇ ಇರಲಿಲ್ಲ. ಯಾವುದಾದರೂ ಸರಿ ಎನ್ನುತ್ತಿದ್ದ. “ಮೇಡಂ ಯೇ ಕ್ರೀಮ್ ಚಕ್ಸ್ ಕಲರ್ ಸಾಡಿ ಬಹುತ್ ಬಡಿಯಾ ಹೈ, ಆಪ್ಕೋ ಅಚ್ಛಾ ಲಗೇಗಿ, ದೇಖೋ” ಎನ್ನುವ ಶಬ್ಧ ಕೇಳಿ ಇಬ್ಬರೂ ತಿರುಗಿ ನೋಡಿದರೆ ಇವನಿಗೆ ದಿಗಿಲಾಗಿ ಹೋಗಿತ್ತು. ಅವಳು ಯಾವ ಮಾಯೆಯಲ್ಲಿಯೋ ನಂದಿನಿಯ ಪಕ್ಕದಲ್ಲಿ ನಿಂತು ಅಲ್ಲಿರುವ ಒಂದು ಸೀರೆಯನ್ನು ಬಿಡಿಸಿ ಈಕೆಯನ್ನು ಕರೆದು ತೋರಿಸುತ್ತಿದ್ದಳು. ಸಣ್ಣ ಚಕ್ಸ್ ಇರುವ ತೆಳು ಹಳದೀ ಬಣ್ಣದ ಸೆರಗಿನ ಮೇಲೆ ಮಾವಿನ ಮರಕ್ಕೆ ಹಬ್ಬಿದ ಮಲ್ಲಿಗೆಯ ಬಳ್ಳಿ, ಆ ಬಳ್ಳಿಯನ್ನು ಹರಿಯುತ್ತಿರುವ ಆನೆಯ ಚಿತ್ರವನ್ನು ಬಿಡಿಸಲಾಗಿತ್ತು. ಜರಿಯ ಕುಸುರಿಯ ಕೆಲಸ ಎದ್ದು ಕಾಣುತ್ತಿತ್ತು. ನಂದಿನಿಗೆ ಅದು ಇಷ್ಟವಾಯಿತೆಂದು ತೋರುತ್ತದೆ. ಎರಡು ಮೂರು ಸಾರಿ ಮುಟ್ಟಿ ಮುಟ್ಟಿ ನೋಡಿದಳು. ಇಬ್ಬರೂ ನಗು ನಗುತ್ತಾ ಸೀರೆಯ ಕುರಿತು ಮಾತಾಡಲು ತೊಡಗಿದರು. ಮಾಮೂಲಿನಂತೆ ಕೃಷ್ಣಮೂರ್ತಿಗೆ ಹೇಗಿದೆ ಎನ್ನುವ ಅಭಿಪ್ರಾಯವನ್ನು ಕೇಳಲು ತಿರುಗಿದಳು. ಮೂರ್ತಿ ಯಾಕೋ ಮಾತಾಡಲು ತಡವರಿಸುತ್ತಾ “ಚ…. ಚ… ಹಾಂ ಚನ್ನಾಗಿದೆ” ಎಂದು ತೊದಲತೊಡಗಿದ. “ಭಾಯಿ ಸಾಬ್ ಬಾಬ್ಬಿ ಕಾ ಫಿಗರ್ ಅಚ್ಛಾ ಹೈನ, ಯೆ ಹೀ ಸಾಡೀ ಕೋ ಲೇನಾ,” ಆಕೆ ಮೂರ್ತಿಯನ್ನು ಉದ್ಢೇಶಿಸಿ ಹೇಳಿದವಳೇ ಧಡ ಬಡ ಎಂದು ಹೊರ ನಡದೇ ಬಿಟ್ಟಳು. ನಂದಿನಿಗೂ ಆ ಸಿರೆ ಹಿಡಿಸಿತ್ತು. ಮೂರ್ತಿಗೆ ಅದು ಇಷ್ಟವಾದರೂ ಅದು ಯಾಕೋ ಬೇಡ ಎಂದು ಅನಿಸಿ “ಬೇರೆ ಯಾವುದನ್ನಾದರೂ ನೊಡೋಣವಾ….” ಎಂದು ರಾಗ ತೆಗೆಯಲು ಹೋದರೆ ನಂದಿನಿ “ಯಾಕ್ರಿ ಚನ್ನಾಗಿಲ್ಲವಾ, ನನಗಂತೂ ತುಂಬಾ ಹಿಡಿಸಿದೆ” ಎಂದೇ ಬಿಟ್ಟಳು. ಸೇಲ್ಸ್ ಗರ್ಲ್ ಕೂಡಾ ಅದನ್ನೇ ರೆಕಮಂಡ್ ಮಾಡಿದಳು. ಈತ ಮರು ಮಾತಿಲ್ಲದೇ, “ಆಯಿತು ಮತ್ತೆನಾದರೂ ತೆಕೋ” ಎಂದ. “ಇದನ್ನು ಪ್ಯಾಕ್ ಮಾಡಿಸಿ, ಮತ್ತೊಂದೆರಡು ನೋಡಿಬಿಡುತ್ತೇನೆ” ಎಂದು ಇನ್ನೆರೆಡು ಯಾವ ಯಾವದೋ ಸೀರೆಯನ್ನು ತೋರಿಸಿದ. ಈತ ಅದಕ್ಕೆ ಒಪ್ಪಿಗೆಯನ್ನು ಸೂಚಿಸಿ ಅದನ್ನೂ ಪ್ಯಾಕ್ ಮಾಡಿಸಿ ಬಿಲ್ಲ್ ಕೊಟ್ಟು ಅಲ್ಲಿಂದ ಎಲಿವೇಟರಿನಲ್ಲಿ ಕೆಳಗಿಳಿದು ಹೊರಗಡೆ ಬಂದಾಗ ಅವಳು ಅಲ್ಲೇ ಆ ಹುಡುಗಿ ಮತ್ತು ಹುಡುಗನೊಟ್ಟಿಗೆ ಪಾನೀಪುರಿ ತಿನ್ನುತ್ತಿರುವದು ಕಂಡು ಬಂತು. ನಂದಿನಿ ಆಕೆಯತ್ತ ತಿರುಗಿ “ಥ್ಯಾಂಕ್ಸ್” ಎಂದು ಹೆಬ್ಬರಳನ್ನು ಎತ್ತಿ ಸನ್ನೆ ಮಾಡಿದರೆ ಅವಳೂ ಅದೇ ಪ್ರತಿಯಾಗಿ ವಿಶ್ ಮಾಡಿದಳು. ಆ ಸೆಂಟಿನ ಘಾಟು ಇಡೀ ಮಾಲಿನಲ್ಲಿ ಹರಿಯುತ್ತಿದೆ ಎಂದು ಅನಿಸಿ ಆಕಡೆ ನೋಡಿದರೆ , ಆಕೆಯ ಗಮನ ಮಾತ್ರ ತನ್ನ ಕಡೆಗೇ ಇತ್ತು ಎಂದು ಮೂರ್ತಿಗೆ ಅನಿಸಿತು

*****

“ಇದೆಂತಹ ಕಾನ್ಫ಼ರೆನ್ಸು ಮೂರ್ತಿ, ಒಂದೆ ಸಮನೆ ಕೊರೆತ ಬಿಟ್ರೆ ಮತ್ತೇನು ಇಲ್ಲ. ತುಂಬಾ ಬೋರು ಅಲ್ಲವಾ” ಎಂದು ಅನಂತ ಗೊಣಗುಡುತ್ತಿದ್ದ. ಆತ ಕಾನ್ಫ಼ರೆನ್ಸ್ ನಲ್ಲಿ ಕುಳಿತುಕೊಂಡಿದ್ದೂ ಸಹ ತುಂಬಾ ಕಡಿಮೆಯೇ. ಪ್ರತಿಷ್ಠಿತ ಮ್ಯಾನೇಜ್ಮೆಂಟ್ ಸಂಸ್ಥೆಯವರು ಕಾರ್ಪೋರೇಟ್ ಆಡಳಿತಗಾರಿಕೆಯ ಸಾಮಾಜಿಕ ಜವಾಬುದಾರಿಯ ಅನುಷ್ಠಾನ ಮತ್ತು ಅದರ ಪರಿಣಾಮಗಳು ಎನ್ನುವ ವಿಷಯದ ಮೇಲೆ ಮೂರು ದಿನಗಳ ಗೋಷ್ಠಿಯೊಂದನ್ನು ಮುಂಬೈಯಲ್ಲಿ ಏರ್ಪಡಿಸಿದ್ದರು. ಸಾಮಾನ್ಯವಾಗಿ ಪ್ರತಿಯೊಂದು ಕಾರ್ಪೋರೇಟರಗಳೂ ವರ್ಷಕ್ಕೆ Corporate Social Responsibility ಯಡಿ ವಾರ್ಷಿಕ ಲಾಭದಲ್ಲಿ ಹಣವನ್ನು ಮೀಸಲಿಡಿಸುತ್ತಾರೆ. ಅದನ್ನು ಖರ್ಚುಮಾಡುವ ಹಲವಾರು ಮಾರ್ಗಗಳಲ್ಲಿ ಇಂತಹ ಸೆಮಿನಾರುಗಳು ಒಂದು. ಕಂಪನಿಯವರೂ ಅಷ್ಟೇ, ತಮ್ಮ ಪ್ರತಿಭಾನ್ವಿತ ಉದ್ಯೋಗಿಗಳಿಗೆ ಪ್ರವಾಸದ ನೆಪದಲ್ಲಿ ಇಂತಹ ಸೆಮಿನಾರುಗಳಿಗೆ ಕಳುಹಿಸಿ ಅಲ್ಲಿ ಒಂದೆರಡು ದಿನಗಳ ಕಾಲದ ಸೆಮಿನಾರಿನ ನಂತರ ಸುತ್ತಮುತ್ತ ತಿರುಗಾಡಿಸಿ ನಂತರದ ದಿನಗಳಲ್ಲಿ ಕೈ ಬಾಯಿ ಕಟ್ಟಿಸಿ ದುಡಿಸಿಕೊಳ್ಳುವದು ಸಾಮಾನ್ಯ. ಪಂಚರಾತಾರಾ ಹೋಟೆಲಿನ ವಾಸ, ರಾತ್ರಿಯ ಪಾನಗೋಷ್ಠಿ, ಆರ್ಕೆಷ್ಟ್ರಾ ಹೀಗೆ ಹಲವು ಆಕರ್ಷಣೆಗಳ ಇಂತಹ ಸೆಮಿನಾರುಗಳೆಂದರೆ ಮಧ್ಯಮ ಹಂತದ ಮ್ಯಾನೇಜರಗಳಿಗಂತೂ ಹಬ್ಬ. ಕಂಪನಿಯ ಹಿರಿಯ ಹಂತದ ಮ್ಯಾನೇಜರರುಗಳು ಸದಾ ಮೀಟಿಂಗು ಎಂದು ಜಗತ್ತನ್ನೇ ಸುತ್ತುತ್ತಿರುತ್ತಾರೆ. ಎಲ್ಲೇ ಇದ್ದರೂ ವಾಟ್ಸ್ಸಾಪ್ ಗೂಗಲ್ ಗಳ ಮುಖಾಂತರ ಕೆಳಗಿನವರ ಜೀವ ಹಿಂಡಿ ಕೆಲಸ ತಗೆದುಕೊಳ್ಳುವ ಕಲೆ ಅವರಿಗೆ ಚನ್ನಾಗಿ ಗೊತ್ತು. ಆ ವರ್ಷ ಕೃಷ್ಣಮೂರ್ತಿ ಮತ್ತು ಅನಂತ ಇಬ್ಬರನ್ನೂ ಸೆಮಿನಾರಿಗೆ ಆಯ್ಕೆ ಮಾಡಲಾಗಿತ್ತು. ಮುಂಬೈ ಇಬ್ಬರಿಗೂ ಹೊಸತೇನೂ ಅಲ್ಲ. ಆದರೂ ಇಲ್ಲಿ ಬರುವ ದೇಶದ ಪ್ರತಿಷ್ಠಿತ ಕಂಪನಿಗಳ ಸಿಇಓ ಗಳ ಗಮನ ಸೆಳೆದು ಆ ಕಂಪನಿಯಲ್ಲಿ ಅವಕಾಶ ಗಿಟ್ಟಿಸುವದಕ್ಕೆ ಇದು ಒಂದು ವೇದಿಕೆಯೂ ಹೌದು.

ಕೃಷ್ಣಮೂರ್ತಿಗೆ ಆ ಆಶೆ ಇತ್ತು. ಅನಂತ ಹಾಗಲ್ಲ. ಆತ ಯಾವ ಕಾರಣಕ್ಕೂ ಬೆಂಗಳೂರು ಬಿಟ್ಟು ಹೋಗುವವನಲ್ಲ. ಅವನಿಗೆ ಕಂಪನಿಯ ಉದ್ಯೋಗ ಎನ್ನುವದು ದ್ವಿತೀಯ ಪ್ರಾಶಸ್ತ್ಯ. ಆತನದೇ ಒಂದು ರಿಯಲ್ ಎಸ್ಟೇಟ್ ಉದ್ಯೋಗವೊಂದು ಅವನ ಹೆಂಡತಿಯ ಹೆಸರಿನಲ್ಲಿ ಇದೆ. ಮೇಲಿನವರನ್ನು ಒಲಿಸಿಕೊಳ್ಳುವ ಗುಣ ಅವನಿಗೆ ಚನ್ನಾಗಿ ಗೊತ್ತು. ಆತ ಕೆಲಸಕ್ಕಿಂತಲೂ ಸಿಇಓಗಳ ವೈಯಕ್ತಿಕ ಬೇಡಿಕೆಯನ್ನು ಹೆಚ್ಚಿಗೆ ಪೂರೈಸುತ್ತಿರುವದರಿಂದ ಅವರ ಪ್ರಭಾವದಿಂದ ಯಾವತ್ತಿಗೂ ಯಶಸ್ವಿ ಉದ್ಯೋಗಿ ಎನ್ನುವ ಹೆಸರುಗಳಿಸಿದ್ದ. ಇಂದೂ ಸಹ ಆತ ರಾತ್ರಿ ಊಟಕ್ಕೆ ಹೋಗುವ ಮೊದಲು ರೂಮಿನಲ್ಲಿಯೇ ಒಂದೆರಡು ಪೆಗ್ ಹಾಕಲು ಮೂರ್ತಿಯನ್ನು ಕರೆದಿದ್ದ. ಗ್ಲಾಸ್ ಹಿಡಿದು ಮಾತಾಡುತ್ತಿರುವಂತೆ ವಿಷಯ ಮುಂಬೈಯ ಮಾಯಾ ಬದುಕಿನ ಕಡೆ ತಿರುಗಿತು. ಇದ್ದಕ್ಕಿದ್ದಂತೆ ಮೂರ್ತಿಯೇ ಕಾಮಾಟಿಪುರದ ವಿಷಯ ಎತ್ತಿದ. ಅನಂತನ ಅಂತಃಪ್ರಜ್ಞೆ ಜಾಗೃತವಾಯಿತು. ಆತ ಸಹ ಇಷ್ಟು ಸಾರಿ ಮುಂಬೈಯಿಗೆ ಬಂದಿದ್ದರೂ ಆ ಸ್ಥಳದ ಕುರಿತು ಮಾಹಿತಿ ಅವನಿಗಿರಲಿಲ್ಲ. ಆದರೂ ಕುತೂಹಲ ಖಂಡಿತಾ ಇತ್ತು. “ಹೇಗೂ ನಾಡಿದ್ದು ರಜೆ ಇದೆ. ನಾಳೆ ನಾಲ್ಕು ಗಂಟೆಗೆ ಹೊರಟು ಹೋಗಿ ನೋಡಿ ಬರೋಣವಾ” ಎಂದು ಕೇಳಿದ. ಮೂರ್ತಿಗೋ ಹೆದರಿಕೆ, ಆದರೂ ಕುತೂಹಲ ತಡೆಯಲಾಗಲಿಲ್ಲ.”ಹೋಗಬಹುದಿತ್ತು ಮಹರಾಯ, ಆದರೆ ಡೇಂಜರ್ ಏರಿಯಾ ಅಲ್ಲವಾ, ಯಾವ ಯಾವದೋ ರೋಗಕ್ಕೆ ಹೆದರಬೇಕಾಗಿದೆ. ಇಷ್ಟು ವರ್ಷ ಗಳಿಸಿದ ಮಾನ ಮತ್ತೆ ಬಯಲಾದರೇ ನಾಚಿಕೆ ತಾನೇ” ಎಂದ.

“ಹಾಗೇನಿಲ್ಲ ಹೀಗೆ ಹೋಗಿ ಗ್ರಾಂಟ್ ರೋಡಿನಲ್ಲಿ ಇಳಿದು ಅಲ್ಲಿ ಯಾರನ್ನಾದರೂ ಕೇಳಿ ಓಣಿಯಲ್ಲಿ ಸುಮ್ಮನೆ ರೌಂಡ್ ಹಾಕಿಕೊಂಡು ಬರೋಣಾ” ಎಂದವನಿಗೆ ಮೂರ್ತಿಯೂ ತಲೆಯಲ್ಲಾಡಿಸಿದ. ಪೆಗ್ ಅದಾಗಲೇ ಕೆಲಸ ಮಾಡುತ್ತಿತ್ತು.

ರಾತ್ರಿ ನಿಶೆಯಲ್ಲಿದ್ದರೂ ಮೂರ್ತಿಗೆ ಏನೋ ಒಂದು ಆತಂಕ. ಅತನಿಗೆ ಅಲ್ಲಿಗೆ ಹೋಗುವ ಕುತೂಹಲವಿತ್ತೇ ಹೊರತೂ ಇನ್ನಿತರ ಆಸಕ್ತಿ ಇರಲಿಲ್ಲ. ಆದರೆ ಆ ಕುರಿತು ಪತ್ರಿಕೆಗಳಲ್ಲಿ, ಸಿನೇಮಾಗಳಲ್ಲಿ ಬಂದಿರುವ ವಿಷಯಗಳನ್ನು ಓದಿದ ಮೇಲೆ ಆತನಿಗೆ ಕಾಮಾಟಿಪುರವನ್ನೊಮ್ಮೆ ನೋಡಲೇ ಬೇಕೆಂಬ ಇಚ್ಛೆ ಬಲವಾಗಿತ್ತು. ನಂದಿನಿಯ ಹತ್ತಿರ ಒಮ್ಮೆ ಈ ವಿಷಯ ಎತ್ತಿದಾಗ ಆಕೆ ಕಾಳಿಯೇ ಆಗಿದ್ದಳು. ಈತನೇನಾದರೂ ಅಲ್ಲಿಗೆ ಹಾದು ಬಂದರೂ ಸಾಕು ತಾನು ಜೀವಮಾನವಿಡೀ ಆತನಿಂದ ದೂರ ಉಳಿಯಬೇಕಾಗುತ್ತದೆ ಎಂದು ಹೆದರಿಸಿದ್ದಳು. ಅದೂ ಅಲ್ಲದೇ ಅಲ್ಲಿ ಹೋದರೆ ಸಾಕು ರೋಗ ಬಂದೇ ಬರುತ್ತದೆ ಎನ್ನುವ ಗಾಢವಾದ ನಂಬಿಕೆ ಆತನನ್ನು ಆವರಿಸಿಕೊಂಡಿತ್ತು. ಸಾಮಾನ್ಯವಾಗಿ ಎಲ್ಲಾ ಮನುಷ್ಯರಿಗಿರುವ ಮಾನಸಿಕ ವ್ಯಾಧಿಯಂತೆ ಅನಂತನಿಗೂ ಆ ಪ್ರದೇಶವನ್ನು ನೋಡುವ ಕುತೂಹಲವಿತ್ತು. ಅದು ಇನ್ನೊಬ್ಬರಿಗೆ ಗೊತ್ತಾಗಬಾರದ ಗುಟ್ಟಾಗಿಯೂ ಇರಬೇಕಾದರೆ ಅನಂತನಿಗೆ ಮೂರ್ತಿ, ಮೂರ್ತಿಗೆ ಅನಂತನೇ ಆಗಬೇಕಾಗಿತ್ತು. ಹಾಗಿತ್ತು ಅವರಿಬ್ಬರ ಗೆಳೆತನ.

ಅನಂತ ಮಾರನೆಯ ದಿನವಿಡೀ ಈತನ ಕಾಮಾಟಿಪುರದ ಕುತೂಹಲ ತಣಿಯದಂತೆ ನೋಡಿಕೊಳ್ಳುತ್ತಿದ್ದ. ಸುಮಾರು ಐದು ಗಂಟೆಯ ಹೊತ್ತಿಗೆ ಇಬ್ಬರೂ ಸನಿಹದ ರೇಲ್ವೆ ನಿಲ್ದಾಣದಿಂದ ಗ್ರಾಂಟ್ ರೋಡ್ ರೇಲ್ವೆ ನಿಲ್ದಾಣಕ್ಕೆ ಬಂದಿಳಿದರು. ಅನಂತ ಯಾವುದೋ ಒಂದು ರಿಕ್ಷಾದವನ ಹತ್ತಿರ ಅಲ್ಲೇ ಹತ್ತಿರ ಮಾನಾಜಿ ರಾಜುಜಿ ಮಾರ್ಗದಲ್ಲೆಲ್ಲೋ ತನ್ನ ಸ್ನೇಹಿತರ ಹೋಟೆಲೊಂದು ಇರುವದಾಗಿಯೂ ಅಲ್ಲಿಗೆ ತನ್ನನ್ನು ಅಲ್ಲಿಗೆ ತಮ್ಮನ್ನು ಬಿಡಲು ಕೇಳಿದರೆ ಆತ “ಸಾಬ್ ಸಹಾಯ ಬೇಕೇ” ಎಂದು ಮುಗುಳುನಕ್ಕು ಕೇಳಿದ. ಈತ, ”ಇಲ್ಲ ನಾವು ಸುಮ್ಮನೇ ಸುತ್ತಿ ಹೋಗಲು ಬಂದಿದ್ದೇವೆ. ಸ್ವಲ್ಪ ಹತ್ತಿರ ಇಳಿಸಿಬಿಡಿ” ಎಂದು ಹೇಳಿದ. ಅವ ಸರಿ ಎಂದು ಯಾವುದೋ ಒಂದು ಚೌಕದ ಹತ್ತಿರ ಬಿಟ್ಟು ಇಲ್ಲಿಂದ ಒಳಗೆ ಹೋಗಿ, “ಆಪ್ಕಾ ಖಯಾಲ್ ರಖನಾ” ಎಂದು ಹೇಳಿ ಹೊರಟು ಬಿಟ್ಟ. ನೋಡಿದರೆ ಎಡಗಡೆಗೆ ಸಣ್ಣ ಓಣಿಯಂತಹದು ಕಂಡಿತ್ತು.

ಸಿನೇಮಾಗಳಲ್ಲಿ ನೋಡಿದಂತಹ ಕೋಟೆಯಂತಹ ಮನೆ ಅಲ್ಲಿ ಯಾವುದೂ ಕಂಡು ಬರಲಿಲ್ಲ. ರಸ್ತೆಯ ಮೇಲೆ ಅದಾಗಲೇ ಬೇರೆ ಬೇರೆ ಭಂಗಿಯಲ್ಲಿ ಎಲ್ಲಾ ಪ್ರಾಯದವರು ನೆರೆದಿದ್ದರು. ಇವರನ್ನು ಕರೆಯತೊಡಗಿದರೆ ಇವರಿಬ್ಬರೂ ಆ ಕಡೆ ಲಕ್ಷ ವಹಿಸದೇ ಸುಮ್ಮನೆ ನಡೆಯುತ್ತಿದ್ದರು. ರಸ್ತೆಯಲ್ಲಿ ಓರ್ವ ನಡುವಯಸ್ಸಿನ ಧಡೂತಿಯೊಬ್ಬ ಸ್ಕೂಟಿಯನ್ನು ನಿಲ್ಲಿಸಿ ಇಬ್ಬರೊಂದಿಗೆ ಚೌಕಾಶಿ ನಡೆಸುತ್ತಿದ್ದ. ಮೂರ್ತಿ ಆ ಕಡೆ ಲಕ್ಷಕೊಡಬೇಕೆನ್ನುವಷ್ಟರಲ್ಲಿ ಅನಂತ, ‘ಸುಮ್ಮನೆ ಬಿರಬಿರನೆ ಬನ್ನಿ’ ಎಂದು ಪಿಸುಗುಟ್ಟಿದ. ಮೂರ್ತಿಗೆ ಯಾವ ಅಪ್ಸರೆಯರೂ ಅಲ್ಲಿ ಕಣ್ಣಿಗೆ ಕಂಡುಬರಲಿಲ್ಲ. ಎಲ್ಲ ಹಾವ ಭಾವವನ್ನು ಮಾಡಿವವರನ್ನು ಕಂಡಾಗ ಚುರುಕ್ಕೆನಿಸಿ ಅಯ್ಯೋ ದೇವರೆ ಅನಿಸಿತು. ಇನ್ನೇನು ಆ ಓಣಿಯಿಂದ ಹೊರಗಡೆ ಬಂದು ಶಂಕರ ರಾವ್ ಪಾಪುಲಾ ರಸ್ತೆಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ಸುಮಾರು ಹದಿನಾರು ವರ್ಷದ ಹುಡುಗನೋರ್ವ ಇವರ ಬೆನ್ನ ಹಿಂದೇ ಬಂದು ಹಿಂದಿಯಲ್ಲಿ ಇವರನ್ನು ಮಾತಾಡಿಸಿದ. ಹುಡುಗ ಎಂದು ಆತನ ಹತ್ತಿರ ತಿರುಗಿ ನೋಡಿದರೆ ಆತ ಹಿಂದಿಯಲ್ಲಿ “ಮಾಲು ಬೇಕಾ, ಪ್ರೆಶ್ ಇದ್ದಾರೆ” ಎಂದ. ಅನಂತ ಇಲ್ಲಾ ನಾವು ಇಲ್ಲಿ ನಮ್ಮೂರಿನ ಹೋಟೇಲಿನವರನ್ನು ಭೆಟ್ಟಿಯಾಗಲಿಕ್ಕೆ ಬಂದಿದ್ದೇವೆ. ಅಂತಹುದೇನೂ ನಮಗೆ ಆಸೆಯಿಲ್ಲ ಎಂದು ಅವನನ್ನು ಸಾಗಹಾಕಲು ನೋಡಿದ. ಆತನೂ ಬಿಡಲಿಲ್ಲ. “ಸಾಬ್ ನೋಡಿ ಹೋಗಿ, ಅದಕ್ಕೆ ಹಣಕೊಡಬೇಕಾಗಿಲ್ಲ.” ಎಂದು ಒತ್ತಾಯ ಮಾಡಲು ತೊಡಗಿದ. “ನಾವು ಅಂತವರಲ್ಲ ಮರಿ…” ಎಂದು ಮೂರ್ತಿ ಹೇಳುತ್ತಿರುವಂತೆ ಆತ ಮತ್ತೆ ತನ್ನ ವರಾತ ಹಚ್ಚಿ “ನೋಡಿ ಹೋಗಿ ಅವರೆಲ್ಲಾ ತನ್ನ ಅಕ್ಕಂದಿರು” ಎಂದ. ಅನಂತ ಯಾಕೋ ಹೋಗಿ ಬರೋಣ ಅದರಲ್ಲೇನೂ ಎಂದು ಮೂರ್ತಿಯಲ್ಲಿ ಪಿಸುಗುಟ್ಟಿ ಅವನ ಕೈಹಿಡಿದು ಆ ಹುಡುಗನನ್ನು ಹಿಂಬಾಲಿಸಿದರು.

ಒಂದು ಗೂಡಿನಂತಹ ಬಾಗಿಲಿನ ಒಳಹೊಕ್ಕು ಮಾಳಿಗೆಯನ್ನು ಏರಿದಾಗ ಸ್ವಲ್ಪ ಮಬ್ಬಾಗಿದ್ದ ಕಿರು ಹಜಾರವೊಂದು ಎದುರಾಯಿತು. “ಬೈಟೀಯೇ ಸಾಬ” ಎನ್ನುತ್ತ ಆ ಹುಡುಗ ಯಾರಿಗೋ ಫೋನಿನಲ್ಲಿ ಮಾತಾಡಿದ. ಮರಾಠಿ ಮಿಶ್ರಿತ ಹಿಂದಿ ಎನಿಸಿದರೂ ಅದರ ಉಚ್ಛಾರ ಗ್ರಾಮೀಣ ಶೈಲಿಯಲ್ಲಿದ್ದ ಕಾರಣ ಸರಿಯಾಗಿ ಅರ್ಥ ಆಗಲಿಲ್ಲ. ಎಲ್ಲಿದ್ದರೋ, ಸ್ವಲ್ಪ ಪೀಚಲು ಎನಿಸುವ  ಒಬ್ಬ ವ್ಯಕ್ತಿ, ಹಾಗೂ ಅವನ ಹಿಂಬಾಲಿಸಿ ಓರ್ವ ಧಡೂತಿ ವ್ಯಕ್ತಿ ಒಳ ಬಂದರು. ಆ ಡುಬ್ಬು ಬಲಗೈಗೆ ಇಷ್ಟಗಲದ ಬ್ರೇಸ್ ಲೆಟ್ ಮತ್ತು ಕೊರಳಲ್ಲಿ ಹಗ್ಗದಂತಿರುವ ಚೈನ್ ಹಾಕಿಕೊಂಡಿದ್ದ. ಆ ಧಡೂತಿ ಇವರ ಪಕ್ಕದಲ್ಲಿರುವ ಸೋಫಾದ ಮೇಲೆ ಧಡಕ್ಕನೆ ಕುಳಿತ, ಮಾತಾಡಲಿಲ್ಲ. ಆ ಪೀಚಲಿನವ ಇವರಿಬ್ಬರನ್ನು ಮಾತಾಡಿಸುತ್ತಾ ಶರಬತ್ತು ಬೇಕಾ, ಚಹಾ ತೆಗೆದುಕೊಳ್ಳುತ್ತೀರಾ ಎಂದೆಲ್ಲಾ ಕೇಳತೊಡಗಿದ. ಮೂರ್ತಿ ಒಳಗೊಳಗೇ ಬೆವರತೊಡಗಿದ. ಇದೆಲ್ಲ ಸಾಕು ಎಂದು ಅನಂತನ ಕಡೆ ನೋಡಿದರೆ ಅನಂತನೂ ನರ್ವಸ್ ಆಗಿದ್ದಾನೆನಿಸಿತು. ಅನಂತನೇ “ಏನೂ ಬೇಡ, ಇವತ್ತು ನಮ್ಮಮನೆಯಲ್ಲಿ ಪೂಜೆ ಇದೆ, ಹೋಗಬೇಕು” ಎಂದು ತೊದಲಿದಂತೆ ನುಡಿದ. “ನಹೀ ಸಾಬ್, ಆಪ್ ಹಮಾರ ಗೆಸ್ಟ್ ಹೈ” ಎನ್ನುತ್ತಾ ಪೀಚಲಿನವ ಹುಡುಗನಿಗೆ ಏನೋ ಸನ್ನೆ ಮಾಡಿದ.

ಅದಾಗುವಾಗಲೇ ಒಳಗಡೆಯಿಂದ ಸುಮಾರು ಐವತ್ತು ಐವತ್ತೈದರ ನಡುವಿನ ದಪ್ಪಗಿದ್ದ, ಇಷ್ಟಗಲದ ಕುಂಕುಮ ಹಣೆಯಲ್ಲಿ ಹಚ್ಚಿಕೊಂಡ ಹೆಂಗಸೊಬ್ಬಳನ್ನು ಹಿಂಬಾಲಿಸಿ ಒಂದೈದಾರು ವಿವಿಧ ರೀತಿಯ ಡ್ರೆಸ್ ತೊಟ್ಟ, ಸೀರೆಯಲ್ಲಿಯೂ ಇದ್ದ ಹುಡುಗಿಯರ ಪ್ರವೇಶವಾಯಿತು. ಆ ಹಾಲಿನ ಎದುರುಗಡೆ ಅವರೆಲ್ಲ ಸಾಲಾಗಿ ನಿಂತುಕೊಂಡರು. ಆ ಹೆಂಗಸು ಮತ್ತೊಂದು ಪಕ್ಕದಲ್ಲಿರುವ ಸೋಫಾದಲ್ಲಿ ಕುಳಿತು “ಹೇಗಿದ್ದೀರಿ ಸಾಬ್, ಖುಷಿಯಾಗಿ ಇರಿ” ಎಂದು ನಗುತ್ತಾ ತನ್ನ ಸೆರಗನ್ನು ಹರಡಿ ಇವರಿಬ್ಬರ ತಲೆಯಮೇಲೆ ಕೈಯಾಡಿಸಿದಳು.

ಮೂರ್ತಿಗಂತು ಮುಜುಗರ ತಾಳಲಾಗಲಿಲ್ಲ. ಅನಂತ ಗಂಭೀರವಾಗಿರುವ ಪ್ರಯತ್ನ ನಡೆಸಿದ್ದ. ಡುಬ್ಬುವಿನ ಹೋಲಿಕೆ ಆಕೆಯಲ್ಲಿಯೂ ಇತ್ತು.

“ನೋಡಿ ಇವರೆಲ್ಲಾ ಇಸ್ಪೇಶಲ್ ಮಾಲುಗಳು. ರಸಗುಲ್ಲಾ, ರಸಗುಲ್ಲಾಗಳು…. ಇಲ್ಲಿ ಬಂದವರು ಮತ್ತೆ ನೆನಪಿಟ್ಟುಕೊಂಡು ಪದೇ ಪದೇ ಬರುತ್ತಾರೆ, ಚಿಂತಿಸಬೇಡಿ ನೋಡಿ” ಪೀಚಲಿನವ ವರ್ಣಿಸಲು ಸುರುಹಚ್ಚಿದ. ಆ ಹೆಣ್ಣುಗಳು ಹಚ್ಚಿಕೊಂಡ ಸೆಂಟ್ ಘಮ್ಮನೆಂದು ಹರಡಿಕೊಂಡಿತ್ತು. ಅನಂತ “ಹೌದು, ಎಲ್ಲಾ ಚನ್ನಾಗಿ ಇದ್ದಾರೆ. ನಾವು ನಾಳೆ ಬರುತ್ತೇವೆ, ಇಂದು ನಮ್ಮ ಮನೆಯಲ್ಲಿ ಪೂಜೆ ಇದೆ” ಎನ್ನುತ್ತಿದ್ದಂತೆ ಆ ಪೀಚಲಿನವನ ಮುಖ ಭಾವವೇ ಬದಲಾಗಿ ಹೋಯಿತು. “ಹಾಗೆಲ್ಲಾ ಇಲ್ಲಿ ಬಂದು ಹೋಗುವಂತಿಲ್ಲ, ದಿನದ ಮೊದಲ ಗಿರಾಕಿ ನೀವು, ಯಾರು ಬೇಕು ಆಯ್ಕೆ ಮಾಡಿಕೊಳ್ಳಿ ಎಂದು ಮುಖಗಂಟುಹಾಕಿ ಹೇಳತೊಡಗಿದ. ಮೂರ್ತಿ ಬೆವತೇ ಹೋದ. ಮುಖ ವಿವರ್ಣವಾಯಿತು. ಏನೋ ಹೇಳಲು ಹೋಗಿ ಬ್ಬೆ ಬ್ಬೆಬ್ಬೆ, ಬೆಬ್ಬೆಬ್ಬೆ ಎನ್ನತೊಡಗಿದ. ಅನಂತನೇ “ನಾಳೆ ನಾವು ಖಂಡಿತಾ ಬರುತ್ತೇವೆ, ನಮಗೆ ತುಂಬಾ ಇಷ್ಟವಾಗಿದೆ. ಇಂದು ನಮ್ಮ ಮನೆಯಲ್ಲಿ ಪೂಜೆ ಇರುವ ಕಾರಣ ಹೋಗಲೇ ಬೇಕಾಗಿದೆ” ಎಂದು ಎದ್ದ. ಮೂರ್ತಿಯೂ ಎದ್ದು ನಿಂತ. ಡುಬ್ಬು ಒಮ್ಮೆ ಮುಖ ಕಿವುಚಿ ಪೀಚಲಿನವನನ್ನು ನೋಡಿದ. ಆತ ಒಮ್ಮೆಲೇ “ಎಲ್ಲಿ ಹೋಗ್ತಿರೋ ನೀವು, ಹೋಗಿ ನೋಡೋಣ” ಎಂದು ರೋಪು ಹಾಕತೊಡಿಗಿದ್ದೇ ಆ ಹುಡುಗ ಬಾಗಿಲು ಹಾಕಿಬಿಟ್ಟ. “ಏಕೆ ಸಾಬ್, ನಾವು ಚನ್ನಾಗಿಲ್ಲವೇ” ಎನ್ನುತ್ತಾ ಸಣ್ಣಪ್ರಾಯದ ಓರ್ವಳು ನಗುತ್ತಾ ಉಲಿದಳು. ಅನಂತನೇ “ನೋಡಿ ನೀವು ಹೀಗೆಲ್ಲಾ ಬಲವಂತ ಮಾಡುವಂತಿಲ್ಲ. ನಮಗೂ ಇಲ್ಲಿ ಜನ ಇದ್ದಾರೆ…” ಎನ್ನುತ್ತಿರುವಂತೆ ಆ ಪೀಚಲಿನವ ಮೂರ್ತಿಯ ಎದೆಯ ಕಾಲರ್ ಹಿಡಿದು ಧಡ್ ಎಂದು ಸೋಫಾದ ಮೇಲೆ ದೂಡಿದ. “ಹಾಗೆಲ್ಲಾ ಮಾಡಬೇಡಿ” ಎನ್ನುತ್ತಾ ಅನಂತನೂ ತಣ್ಣಗೆ ಕುಳಿತು ಮಾತನ್ನಾಡದೇ ಮೌನವಾಗಿಬಿಟ್ಟ. ಆ ಹೆಂಗಸು ಆ ಪೀಚಲಿನವನಿಗೆ “ಏಯ್ ಸಾಹೇಬರಿಗೆ ಹಾಗೆಲ್ಲಾ ಗದರಿಸಬಾರದು” ಎಂದು ಗದರಿಸಿದಂತೆ ನಟಿಸಿ ಇವರಿಬ್ಬರ ಹತ್ತಿರ “ನೋಡಿ, ಇಲ್ಲಿಗೆ ಬಂದಮೇಲೆ ವ್ಯವಹಾರ ಕುದುರಿಸಲೇ ಬೇಕು, ಅದಿಲ್ಲದಿದ್ದರೆ ಯಾಕೆ ಬಂದಿರಿ. ನಾವೇನೂ ನಿಮ್ಮನ್ನು ಇಲ್ಲಿಗೆ ಬನ್ನಿ ಎಂದು ಕರೆದಿದ್ದೆವಾ” ಎಂದು ರಮಿಸುವ ಧ್ವನಿಯಲ್ಲಿ ಹೇಳಿದಳು.

ಮೂರ್ತಿಗೆ ಈಗ ಧೈರ್ಯ ಬಂದಂತೆನಿಸಿ “ಮೇಡಂ, ನಾವು ಅಂತವರಲ್ಲ…” ಎಂದು ಹೇಳುವಾಗಲೇ ಡುಬ್ಬು “ಹುಫ಼್” ಎಂದು ಕೆಮ್ಮಿದ. ಆ ಹೆಣ್ಣುಗಳು ಕಿಸಕಿಸನೆ ನಕ್ಕರು. ಪೀಚಲಿನವ ಮತ್ತು ಆ ಚೋಟು ಇಬ್ಬರ ಎದುರು ಬಂದು ನಿಂತದ್ದೇ ಅನಂತ ಮತ್ತೆ ಸಂಬಾಳಿಸುವ ಧ್ವನಿಯಲ್ಲಿ “ಸುಮ್ಮನಿರಿ ಮೂರ್ತಿ” ಎಂದು ಅವರ ಕಡೆ ತಿರುಗಿದ್ದೇ ಆ ಪೀಚಲಿನವ ಗಿರಗಿರನೆ ಕಣ್ಣು ತಿರುಗಿಸತೊಡಗಿದ. ಆ ಯಜಮಾನಿ ಅವರಿಬ್ಬರನ್ನೂ ಮೆತ್ತಗಿರುವಂತೆ ಕಣ್ಸನ್ನೆ ಮಾಡಿ “ಸಾಹೇಬರೆ ಸುಮ್ಮನೆ ಮಜಾ ಮಾಡಿ ಹೋಗಿ, ಇದೋ ನೋಡಿ ಇಂತಾ ಮಾಲುಗಳು ನಿಮಗೆ ಈ ಏರಿಯಾದಲ್ಲಿ ಮತ್ತೆಲ್ಲೂ ಸಿಗುವದಿಲ್ಲ” ಎಂದರೆ ಆ ಪೀಚಲಿನವ ತಣ್ಣನೆಯ ಆದರೆ ಗದರಿಸುವ ದನಿಯಲ್ಲಿ “ಇಲ್ಲಿ ಎರಡು ಗಂಟೆ ಉಳಿದು ಆಮೇಲೆ ಹೋಗಿ, ಒಬ್ಬೊಬ್ಬರಿಗೆ ಐದು ಸಾವಿರ, ಯಾರು ಬೇಕು ಆಯ್ಕೆ ಮಾಡಿಕೊಳ್ಳಿ” ಎಂದ.

“ಹಮಾರೆ ಪಾಸ್ ಉತ್ನಾ ಪೈಸಾ ನಹೀಂ ಹೈ…” ಎನ್ನುತ್ತಿದ್ದಂತೆ ಆ ಚೋಟು ಬಂದು ಮೂರ್ತಿಯನ್ನು ಹಿಡಿದರೆ ಅನಂತನ ಕಿಸೆಗೆ ಪೀಚಲಿನವ ಕೈಹಾಕಿದ. ಅವನ ಪಾಕೇಟಿನಲ್ಲಿ ಒಂದೆರಡು ಸಾವಿರ ಮಾತ್ರ ಇತ್ತು. ಎಲ್ಲವನ್ನೂ ಹೋಟಿಲಿನ ಲಾಕರಿನಲ್ಲಿಯೇ ಇಟ್ಟುಬಂದಿದ್ದ. ತಕ್ಷಣ ಮೂರ್ತಿಯ ಕಿಸಿಗೆ ಕೈ ಹಾಕಿದರೆ ಪಾಕೀಟಿನಲ್ಲಿ ಕೇವಲ ಐದಾರುನೂರು ರೂಪಾಯಿ ಮಾತ್ರ ಇತ್ತು. ಕೊರಳಪಟ್ಟಿಹಿಡಿದು ಪ್ಯಾಂಟಿನ ಬೆಲ್ಟಿನೊಳಗಿನ ವಾಚ್ ಪಾಕೇಟಿನಲ್ಲಿ ಕೈಹಾಕಿ ತೆಗೆದರೆ ಅಲ್ಲಿ ಆತ ತಂದ ಹಣ ಮತ್ತು ಕ್ರೆಡಿಟ್ ಕಾರ್ಡ್ ಎಲ್ಲಾಸಿಕ್ಕಿಬಿಟ್ಟಿತು. ಆತನೇ ಲೆಕ್ಕ ಮಾಡಿದ; ಹದಿನಾರು ಸಾವಿರದ ಸನಿಹ ಇತ್ತು. ಕ್ರೆಡಿಟ್ ಕಾರ್ಡ್ ಮತ್ತು ಹಣವನ್ನೆಲ್ಲಾ ಬಾಚಿಕೊಂಡು “ಈಗ ಹೋಗಿ” ಎಂದ. ಹೆಂಡತಿ, ಮಗಳು ಎಂದೆಲ್ಲಾ ಗಿರಿ ಗಿರಿ ಗುಟ್ಟುತ್ತಾ ಮುಖದ ಎದುರೇ ತಿರುಗುತ್ತಿರುವ ಮೂರ್ತಿಗೆ’ಈ ಹಣ ಕಾರ್ಡ್ ಎಲ್ಲಾ ಹೋದರೆ ಹೋಗಲಿ’ ಎನಿಸಿತು.
ಆಗಲಿ ಎಂದು ಹೇಳಿದ್ದೇ ತಡ ಆ ಹೆಂಗಸು “ಸಾಹೇಬರೆ ನಾವು ನಿಯತ್ತಿನ ಜನ, ಪುಕ್ಕಟೆಹಣ ನಮಗೆ ಬೇಡ, ಎರಡು ತಾಸು ಮಜಾ ಮಾಡಿ, ಆಮೇಲೆ ಹೊರಡಿ…” ಎನ್ನುತ್ತಿರುವಂತೆ ಆ ಪೀಚಲಿನವ ಹತ್ತು ಸಾವಿರ ತೆಗೆದುಕೊಂಡು ಕಾರ್ಡು ಮತ್ತು ಉಳಿಕೆ ಹಣವನ್ನು ಮೂರ್ತಿಯ ಕಿಸೆಗೆ ಹಾಕಿ “ಹುಂ, ಯಾರಾಗಬಹುದು ಹೇಳಿ” ಎಂದ. ಪರಿಸ್ಥಿತಿ ಕೈಮೀರಿ ಹೋಗುತ್ತಿದೆಯೆಂದು ಅನಂತನಿಗೆ ಅರಿವಾಗಿತು. ಕನ್ನಡದಲ್ಲಿ “ಮೂರ್ತಿ, ಇವರೆಂದಂತೆ ಕೇಳೋಣ, ಸುಮ್ಮನಿರಿ” ಎಂದವನೇ ಅಲ್ಲಿದ್ದ ಮೊದಲು ಕಿಸಕ್ಕೆಂದು ನಕ್ಕವಳನ್ನು ತೋರಿಸಿ “ಇವಳಾಗಬಹುದು” ಎಂದ. ಮೂರ್ತಿ ಅಚ್ಚರಿಯಿಂದ ನೋಡುತ್ತಿರುವಂತೆ ಆತನೇ “ನೀವು ಇವಳನ್ನು ಕರೆದುಕೊಳ್ಳಿ” ಎಂದು ಸ್ವಲ್ಪ ದಪ್ಪಗಿರುವಳನ್ನು ಕರೆದ.

ಅವರಿಬ್ಬರೂ ಬಂದು ಇವರ ಪಕ್ಕ ಕುಳಿತದ್ದೇ ಆ ಹೆಂಗಸು “ಬೇಟಿ, ಸಾಹೇಬರಿಗೆ ಚನ್ನಾಗಿ ಖುಷಿಮಾಡಿರಿ” ಎರಡು ತಾಸು ಕಳೆದಮೇಲೆ ಇವರನ್ನು ರಸ್ತೆಯಿಂದ ಆಚೆ ಸುರಕ್ಷಿತವಾಗಿ ಬಿಟ್ಟುಬನ್ನಿ” ಎಂದು ಉಳಿದವನ್ನು ಕರೆದುಕೊಂಡು ಹೊರಟಳು. ನೋಡುವಷ್ಟರಲ್ಲಿ ಡುಬ್ಬು, ಪೀಚಲಿನವ ಚೋಟು ಎಲ್ಲರೂ ಈ ನಾಲ್ಕರನ್ನು ಬಿಟ್ಟು ಹೊರಟೇ ಬಿಟ್ಟರು. “ಇನ್ನೇನೂ ತೊಂದರೆಇಲ್ಲ ಮೂರ್ತಿ, ಎರಡು ಗಂಟೆ ಕಳಿದರೆ ನಾವು ಸುರಕ್ಷಿತವಾಗಿ ಹೋಗಬಹುದು” ಎಂದ. ಯಾರೋ ಒಬ್ಬ ಕೆಲಸದಾಕೆ ಬಂದು “ರೂಮು ಸಿದ್ಧವಾಗಿದೆ ಬನ್ನಿ” ಎಂದು ಹೇಳಿದಾಗ ಹುಡುಗಿಯರು ಎದ್ದು “ಬನ್ನಿ ಸಾಬ್” ಎನ್ನುತ್ತಾ ನಡೆದರು. ಅನಂತನೂ ಹೊರಟಾಗ ಮೂರ್ತಿಗೆ ಹಿಂಬಾಲಿಸದೇ ಗಂತ್ಯವಿರಲಿಲ್ಲ.

*****

ಐದು ಎಂಟಡಿ ಅಗಲದ ರೂಮಿನ ಒಳಗೆ ಅವಳು ಹೋದವಳೇ ವಾಶ್ ರೂಮನ್ನು ಹೊಕ್ಕಳು. ಬಾಗಿಲನ್ನು ಹಾಕಿಕೊಳ್ಳಲಿಲ್ಲ, ಕೇವಲ ಮರೆಮಾಡಿರಬೇಕು ಅನಿಸುತ್ತದೆ. ಅಲ್ಲಿನ ಎಲ್ಲಾ ಸದ್ದು ಹೊರಗಡೆ ಕೇಳಿಸುತ್ತಿತ್ತು. ಈಚೆಗೆ ಗೋಡೆಗೆ ತಾಗಿ ಒಂದು ಕಾಟಿನ ಮೇಲೆ ಬೆಡ್ ಶೀಟ್ ಸ್ವಲ್ಪ ಅಡ್ಡೀಯಿಲ್ಲ ಎನ್ನಿಸುವಂತಹದನ್ನು ಹಾಸಿದ್ದರು. ಅದರ ಕೆಳಗಡೆ ಮೂಲೆಯಲ್ಲಿ ಯಾರೋ ಹರಿದು ಬೀಸಾಡಿದ ನಿರೋಧದ ಹರಿದ ಪ್ಯಾಕೆಟ್ ಬಿದ್ದಿತ್ತು. ಅಲ್ಲೇ ನಿರೋಧದ ಸಣ್ಣ ಪ್ಯಾಕೂ ಸಹ ಕಂಡು ಬಂತು. ಮಾಸಿದ ಬಣ್ಣದ ಆ ಕೋಣೆಯನ್ನು ನೋಡಿದ ಮೂರ್ತಿಗೆ ವಾಂತಿ ಬಂದಂತಾಯಿತು. ನಂದಿನಿ ಹೇಳಿದ ಮಾತಿನ ನೆನಪಾಯಿತು. ಹೊಟ್ಟೆಯೊಳಗೆ ಗುಡುಗುಡು ಎನ್ನುವ ಸದ್ದಾಯಿತು. ಕಣ್ಣಮುಂದೆ ತಾನು ಕೇಳಿದ ರೋಗಗಳ ನೆನಪಾಗಿ ಆ ಹಾಸಿಗೆಯಮೇಲೆ ಕೂರಲೂ ಆಗದೇ ನೆಲದಲ್ಲಿ ನಿಲ್ಲಲೂ ಆಗದೇ ಒದ್ದಾಡಿಬಿಟ್ಟ. ಅಷ್ಟರಲ್ಲೇ ವಾಶ್ ರೂಮಿನಿಂದ ಅವಳು ಹೊರಬಂದಳು. ಅವಳನ್ನು ನೋಡಿದವನೇ “ಬೆಹೆನ್ ಮುಝೆ ಯೇ ಕಾಮ್ ಮತ್ ಕರನೇಕಾ… ನಹೀ ಕರನೇಕಾ… ಮೈ…. ಐಸಾ ಆದ್ಮಿ ನಹೀಂ ಹೂಂ..” ಎಂದೆಲ್ಲಾ ತೊದಲುತ್ತಾ ಅವಳ ಕಾಲ ಮೇಲೆಯೇ ಕುಸಿದು ಕುಳಿತ. ಅವಳಿಗೆ ಏನೆನಿಸಿತೋ “ನನ್ನನ್ನೂ ಬೆಹನ್ ಅಂತ ಕರೆದೆಯಲ್ಲಾ… ಡರೋ ಮತ್” ಎಂದು ಅವನನ್ನು ಎಬ್ಬಿಸಿ ಹಾಸಿಗೆಯ ಮೇಲೆ ಕುಳ್ಳಿರಿಸಿದಳು. ಕಾಟಿನ ಈಚೆಮೂಲೆಯಲ್ಲಿ ಗುಬ್ಬಚ್ಚಿಯಂತೆ ಕೃಷ್ಣಮೂರ್ತಿ ಮುದುಡಿ ಕುಳಿತ. ಎದುರು ಅವಳು ಕಾಲನ್ನು ನೀಟಾಗಿ ಹರಡಿಕೊಂಡು ಕುಳಿತಿದ್ದಳು. ಮೂರ್ತಿಯ ಅವಸ್ಥೆ ಅವಳಿಗೆ ಹೊಸದೆನಿಸಿರಬೇಕು. ಈತನನ್ನು ನೋಡಿ
“ಯಾಕೆ ಹೀಗ್ಮಾಡ್ತೀಯಾ ಒಮ್ಮೆ ಸುಮ್ಮನೆ ಮೇಲೆ ಬಾ… ಏನಾಗುತ್ತೆ.”

“ಅಯ್ಯೋ ನಾನಂತವನಲ್ಲ ಬೆಹೆನ್”

“ನೋಡು ಮಾಯಿಯ ದೃಷ್ಠಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೆಲಸ ಮುಗಿಸಿಬಿಡು”.

“ಅಲ್ಲಾ, ಹಣ, ಹಣ, ಹಣಕೊಟ್ಟಾಯಿತಲ್ಲ, ಇನ್ನೆಂತದು. ನನ್ನನ್ನು ಹೋಗಲು ಬಿಟ್ಟು ಬಿಡು.”

“ಹಾಗಲ್ಲ, ಕೆಲಸಮಾಡದಿದ್ದರೆ ನಾನು ಕಾಮ್ ಚೋರ್ ಆಗುತ್ತೇನೆ. ಮಾಯಿಗೆ ಗೊತ್ತಾದರೆ ನಾಳೆ ನನಗೂ ಗಿರಾಕಿ ಸಿಗಬೇಕಲ್ಲ.”

“ನೀನ್ನನ್ನು ಬೆಹನ್ ಅಂತಾ ಕರೆದಿದ್ದೀನಲ್ಲಾ, ಯಾರಿಗೂ ಏನೂ ಆಗಿಲ್ಲ ಅಂತಾ ಹೇಳುವದಿಲ್ಲ; ಈ ಅಣ್ಣನನ್ನು ಬಿಡಿಸು ತಾಯಿ.”

ಆಕೆಗೆ ಕನಿಕರವೆನಿಸಿರಬೇಕು. “ಆಯಿತು, ನಾನು ನೋಡಿಕೊಳ್ಳುತ್ತೇನೆ. ಆದರೂ ಎರಡು ತಾಸುಗಳ ಕಾಲ ನೀನು ಇಲ್ಲಿರಲೇ ಬೇಕು. ನಿನ್ನ ತಂಗಿಯಾಗಿ ನಾನು ನಿನ್ನನ್ನು ಸುರಕ್ಷಿತವಾಗಿ ಹೋಗಲು ಸಹಾಯಮಾಡುವೆ.”

ಎರಡು ತಾಸು ಕಳೆಯಬೇಕಲ್ಲ ಅನಿಸಿದರೂ ಎಲ್ಲಾ ದೇವರನ್ನು ನೆನಪಿಸಿಕೊಂಡು ಆಯಿತು ಎಂದು ಮುದುರಿ ಕುಳಿತ.
“ಸರಿಯಾಗಿ ಕುಳಿತುಕೋ, ತಂಗಿಯ ಹತ್ತಿರ ಹೀಗಾ ಕುಳಿತುಕೊಳ್ಳುವದು.”

ಮೂರ್ತಿಗೆ ಸಣ್ಣ ಆಸೆ ಬಂತು. ಕಾಲನ್ನು ಕಾಟಿನ ಕೆಳಹಾಕಿ ಕುಳಿತ. ಇಬ್ಬರ ನಡುವೆ ಮೌನ… ಅವಳು ಕಿವಿಗೆ ಇಯರ್ ಫೋನ್ ಹಾಕಿ ಯಾವುದೋ ಹಾಡು ಕೇಳುತ್ತಿದ್ದಳು. ಆಕೆಯ ಕಡೆ ನೋಡಿದ. ಸಡಿಲವಾದ ಮೊಣಕಾಲವರೆಗೆ ಬರುವ ಪ್ಯಾಂಟ್ ಬನಿಯನ್ ತರಹದ ಟೀ ಯನ್ನು ಹಾಕಿಕೊಂಡಿದ್ದಳು. ಉಬ್ಬಿದ ಎದೆಯ ಸೀಳು ಎದ್ದು ಕಾಣುತ್ತಿತ್ತು. ಸ್ವಲ್ಪ ಕಪ್ಪಗಿದ್ದರೂ ತುಂಬಾ ಚನ್ನಾಗಿ ಲಕ್ಷಣವಾಗಿದ್ದಳು.

“ಬೆಹನ್ ನಿನ್ನ ಹೆಸರೇನು ಬೆಹನ್”

ಕಿವಿಯಿಂದ ಇಯರ್ ಫೋನ್ ತೆಗೆದವಳೇ ಈತನೆಡೆ ಏನು ಎಂದು ನೋಡಿದಳು.

“ನಿನಗ್ಯಾವ ಹೆಸರು ಬೇಕು, ಎಲ್ಲಾ ಗಿರಾಕಿಗಳು ಕೇಳುವ ಪ್ರಶ್ನೆ ಇದೇ, ಮತ್ತೇನನ್ನು ಕೇಳದಿದ್ದರೂ… ಆಶಾ, ಆಯೇಶಾ, ಐಶ್ವರ್ಯ, ಕರೀನಾ, ರೀಟಾ ಯಾವುದು ಇಷ್ಟವೋ ಅದು. ಅಂದ ಹಾಗೆ ಬಾಬ್ಬಿಯ ಹೆಸರೇನು”

“. . . .”

ಬಾಯಿ ಕಟ್ಟಿ ಬಂತು “ಕಲ್ಪನಾsss” ಎಂದು ತೊದಲಿದ.

“ತಂಗೀ ಅಂತ ಹೇಳ್ತೀಯಾ, ಬಾಬ್ಬಿಯ ಹೆಸರು ಹೇಳಲು ಹೆದರ್ತೀಯಲ್ಲಾ…. ಬೆಹನ್ ಎನ್ನುವದು ಇಲ್ಲಿಂದ ಪಾರಾಗಲು ಮಾತ್ರ ಅಲ್ಲವಾ…”

“. . . . . . “

“ಹೋಗಲಿ ಬಿಡು, ನನ್ನೊಟ್ಟಿಗೆ ಮಲಗಿದವರು, ‘ನಿನ್ನಷ್ಟು ಚಂದ ಯಾರೂ ಇಲ್ಲ, ನೀನೇ ರಂಭೆ, ಸಿನೇಮಾ ನಟಿ… ಹೀಗೆ ಹಲ ಸುಳ್ಳು ಹೇಳುತ್ತಾರೆ. ಅವರ ಸುಳ್ಳಿಗೆ ನಾವು ಹಾಗೇ ಅವರಿಗೋಸ್ಕರ ಅವರಿಗಿಷ್ಟವಾದ ಹೆಸರು ಹೇಳುತ್ತೇವೆ. ಈ ಕೋಟೆಯೇ ಹಾಗೇ ಅಲ್ಲವೇ. ಇಲ್ಲಿ ಸುಳ್ಳಿದ್ದರೆ ಮಾತ್ರ ಗಿರಾಕಿ ಸಿಗುತ್ತಾರೆ. ತಾಜಾ, ಫ್ರೆಶ್. ಗರತಿ, ನಿಮಗೋಸ್ಕರ ತರಿಸಿದ್ದೇವೆ… ಹೀಗೆಂದು …, ಹೋಗಲಿ, ಸುಳ್ಳಿನ ಸಂತೆಯಲ್ಲಿ ಸತ್ಯವನ್ನು ಹುಡುಕಲೇ ಬಾರದು”

ಮೂರ್ತಿಯ ಮುಖ ವಿವರ್ಣವಾಯಿತು. ಆದರೂ ಸತ್ಯ ಹೇಳುವ ಮನಸ್ಸಾಗಲಿಲ್ಲ. ಎರಡೂ ಮುಷ್ಠಿಯಲ್ಲಿ ಹಾಸಿಗೆಯನ್ನು ಬಿಗಿಯಾಗಿ ಹಿಡಿದುಕೊಂಡ. ಆತನನ್ನು ನೋಡಿ,
“ಏಕ್ ಬಾರ್ ಕರ್ಕೆ ಜಾನೇಸೆ ಕ್ಯಾ ಬಿಗಡೇಗಾ… ರಿಲಾಕ್ಸ್ ಆಗಿಬಿಡುವೆ. ಹೇಗೂ ಕೊಟ್ಟ ಹಣ ಅಂತೂ ವಾಪಾಸು ಸಿಗುವದಿಲ್ಲ”.

ಗ್ಲಾಸ್ ಹಿಡಿದು ಮಾತಾಡುತ್ತಿರುವಂತೆ ವಿಷಯ ಮುಂಬೈಯ ಮಾಯಾ ಬದುಕಿನ ಕಡೆ ತಿರುಗಿತು. ಇದ್ದಕ್ಕಿದ್ದಂತೆ ಮೂರ್ತಿಯೇ ಕಾಮಾಟಿಪುರದ ವಿಷಯ ಎತ್ತಿದ. ಅನಂತನ ಅಂತಃಪ್ರಜ್ಞೆ ಜಾಗೃತವಾಯಿತು.

“ಇಲ್ಲ ಬೆಹನ್… ಹಾಗಲ್ಲಾ, ನಾನು ಹಾಗಿನವನಲ್ಲ”.

“ಹಾಗಿಲ್ಲದಿದ್ದರೆ ಇಲ್ಯಾಕೆ ಬಂದೆ… ಒಳ್ಳೇ ಗ್ರಹಚಾರ ನಿನ್ನದು, ಮಾಯಿಗೆ ಗೊತ್ತಾದರೆ ಗಿರಾಕಿಯನ್ನು ತೃಪ್ತಿಮಾಡಲಿಲ್ಲ ಎಂದು ಬೇರೆ ಗಿರಾಕಿ ಸಿಗದಂತೆ ನೋಡಿಕೊಳ್ಳುತ್ತಾಳೆ ಗೊತ್ತಾ, ಮುಂದಿನ ತಿಂಗಳು ನನ್ನ ಮಗಳ ಬರ್ತಡೇ, ಒಂದು ಬಂಗಾರದ ಚೈನು ಮಾಡಿಸಬೇಕು ಎಂದುಕೊಂಡಿದ್ದೇನೆ.” ಅಸಹನೆಯಿಂದ ಗೊಣಗುಟ್ಟುತ್ತಾ ‘ಬೆಹನ್ ಅಂದಿದ್ದರಿಂದ ಬಿಟ್ಟಿದ್ದೇನೆ ನಿನ್ನ…”

ಸ್ವಲ್ಪ ಧೈರ್ಯ ಬಂತು. ವಿಷಯ ಬದಲಾಯಿಸಬೇಕು ಎಂದು “ನಿನ್ನ ಮಗಳ ಫೋಟೋ ತೋರಿಸು ನೋಡುವಾ, ಹೇಗಿದ್ದಾಳೆ.” ಎಂದ.

“ಯಾಕೇ, ಹುಟ್ಟುಹಬ್ಬಕ್ಕೆ ಉಡುಗೊರೆ ಕೊಡುವೆಯಾ…”

ಕಷ್ಟದಿಂದಲೇ ಮೂರ್ತಿ ಹೂಂ ಅಂದ, ಮುದ್ದಾದ ಫೋಟೋ ತೋರಿಸಿದಳು. ಮಗಳ ಗುಣಗಾನ ಪ್ರಾರಂಭಿಸಿದಳು. ಮೂರ್ತಿಗೂ ವಿಷಯ ಸಿಕ್ಕಿತು. ಎಲ್ಲಿದ್ದಾಳೆ ಅವಳು ಎಂದು ಕೇಳಿದ. ಕಲ್ಕತ್ತಾದಲ್ಲಿ ಎಂದವಳೇ ಇದು ಸುಳ್ಳಲ್ಲ ಮತ್ತೆ ಎಂದಳು. “ಯಾರಿದ್ದಾರೆ.”

“ಇನ್ಯಾರು ನನ್ನ ಗಂಡ… ಅಮ್ಮನ ಮನೆಯಲ್ಲಿ ಬಿದ್ದಿರುತ್ತಾನೆ. ತಂಗಿ ಇದ್ದಾಳೆ. ಮುಂದಿನ ವರುಷ ಅವಳ ಮದುವೆ ಬೇರೆ ಮಾಡಬೇಕು, ಅಮ್ಮ ಗೊಣಗುತ್ತಿರುತ್ತಾಳೆ.”

“ಅವರಿಗೆ ನೀನು ಇಲ್ಲಿ ಇರುವದು ಗೊತ್ತಾ…”

“ಗೊತ್ತಿದ್ದೂ ನಿನ್ನ ಹೆಂಡತಿಯನ್ನು ಈ ಇಂತಹ ಕೆಲಸಕ್ಕೆ ಕಳಿಸ್ತೀಯಾ….”

“… ಸಾರೀ ಬೆಹನ್” ಬದುಕಿನಲ್ಲಿ ಪ್ರಥಮ ಬಾರೀ ‘ಸಾರಿ’ ಎನ್ನುವ ಶಬ್ಧ ಕೇಳಿಸಿತು ಅವಳ ಕಿವಿಗೆ.
ತಲೆ ತಗ್ಗಿಸಿದವನಿಗೆ ಆಕೆಯೇ ಸಮಾಧಾನ ಮಾಡಿದಳು. “ಅಣ್ಣ, ಹೋಗಲಿ ಬಿಡು” ಎಂದವಳು ಮೂರ್ತಿಯನ್ನು ದಿಟ್ಟಿಸಿದರೆ ಆತನ ಕಣ್ಣು ತುಂಬಿತ್ತು. ಹತ್ತಿರ ಬಂದು ಕಣ್ಣೊರೆಸಿದಳು. ಕೆಲ ನಿಮಿಷ ಅಲ್ಲಿ ಮೌನ ಸಾಮ್ರಾಜ್ಯವಾಳುತ್ತಿತ್ತು. ಅವಳು ಕಣ್ಣೊರೆಸುವಾಗ ಅವಳ ಬಿಸಿಯುಸಿರು ಇವನ ಮುಖದ ಮೇಲೆ ಬೀಳುತ್ತಿತ್ತು. ಉಬ್ಬಿದ ಎದೆ ಈತನ ಮೂಗಿಗೆ ತಾಗುತ್ತಿತ್ತು. ಒಮ್ಮೆ ಈತನಿಗೆ ಆಸೆಯಾಗಿ ಹಿಡಿಯಬೇಕೆನಿಸಿತು. ಅವಳಿಗೆ ಈ ವಾಸನೆ ಹೊಡೆದಿರಬೇಕು, ಕಣ್ಣಲ್ಲೇ ಗದರಿಸಿದಂತೆ ನೋಡಿದಳು. ಆಗ ಮೂರ್ತಿಗೆ ಸೆಂಟಿನ ವಾಸನೆ ಗಾಢವಾದಂತೆನಿಸಿ ಕಾಟಿನ ಮೂಲೆಗೆ ಮತ್ತೂ ಸರಿದು ಕೈಯನ್ನು ಹಾಸಿಗೆಗೆ ಮತ್ತೂ ಬಿಗಿಯಾಗಿ ಹಿಡಿದುಕೊಂಡು ಕುಳಿತ. ಆಕೆಯೂ ಸರಿದು ತನ್ನ ಜಾಗಕ್ಕೆ ಹೋಗಿ ಕುಳಿತಳು. ಅವಳೇ ಮೌನ ಮುರಿದು “ಹೋಗಲಿ ಊರಾದರೂ ಎಲ್ಲಿ ಹೇಳು” ಎಂದಳು.

“ಬೆಂಗಳೂರು”

“ಅಚ್ಛಾ ಹೈ ನಾ, ಮುಂಬಯಿಯಂತೆ ಅಲ್ಲ, ಖುಶಿ ಅಗುತ್ತದೆ ನಿಮ್ಮೂರು.”

“ಬೆಂಗಳೂರು ಗೊತ್ತಾ ನಿನಗೆ, ನೋಡಿದ್ದೀಯಾ”

“ನೋಡಿದ್ದೆ, ಈಗಲ್ಲ, ಸುಮಾರು ನಾಲ್ಕು ವರ್ಷಗಳ ಹಿಂದೆ” ತನ್ನ ಮೊಬೈಲಿನಲ್ಲಿ ಏನನ್ನೋ ಹುಡುಕುತ್ತಾ “ಇದೋ ನೋಡು ನಾನು ಆಗ ಹೀಗಿದ್ದೆ. ತೆಳ್ಳಗೆ, ಚನ್ನಾಗಿ ಡಾನ್ಸ್ ಮಾಡುತ್ತಿದ್ದೆ. ನನ್ನ ರೇಟೂ ಸಹ ಆಗ ಜಾಸ್ತಿ ಇತ್ತು. ಇಲ್ಲಿ ಹೀಗೆಲ್ಲಾ ನಾನು ಗಿರಾಕಿಯೊಟ್ಟಿಗೆ ಇರುತ್ತಿರಲಿಲ್ಲ. ಮಾಯಿ ನನ್ನನ್ನು ಆಗೆಲ್ಲಾ ಬೆಂಗಳೂರು, ದಿಲ್ಲಿ, ಪಂಜಾಬ್ ಸಿಂಗಾಪುರ ಹೀಗೆ ಎಸ್ಕಾರ್ಟ್ ಅಂತಾ ಕಳಿಸಿಕೊಡುತ್ತಿದ್ದಳು. ಪಾರ್ಟಿಗಳಿಗೆ, ಎಲ್ಲಾ ರೆಸಾರ್ಟ್‌ಗಳಲ್ಲೇ, ಕರೆಸುವದು ಮಾತ್ರ ಡಾನ್ಸಿಗೆಂದು, ಆದರೆ ಎಲ್ಲಾ ಮಾಡಬೇಕಾಗಿತ್ತು. ಎಲ್ಲಾ ಅಂದರೆ ಗೊತ್ತಾಯಿತಲ್ಲಾ…” ನಕ್ಕಳು.

“ದೊಡ್ಡ ದೊಡ್ಡ ಶ್ರೀಮಂತರು ರಾಜಕಾರಣಿಗಳು ಸಿನೇಮಾ ರಂಗದವರು ಎಲ್ಲಾ ಅಲ್ಲಿರುತ್ತಿದ್ದರು” ಮೂರ್ತಿ ಬಾಯಿ ಅಗಲಿಸಿ ನೋಡುತಿದ್ದ. ಆ ಫೋಟೊ ನೋಡಿದ. ಸ್ಮಾರ್ಟ್‌ ಆಗಿ ಇದ್ದಳು. ಸಿನೇಮಾದಲ್ಲಿ ಮಿಂಚಬಹುದಾಗಿತ್ತು ಅನಿಸಿತು. ಕೇಳಿಯೂ ಬಿಟ್ಟ.

“ನೋಡು ಈ ಸಿನೇಮಾದವರು ಇದ್ದಾರಲ್ಲ, ಅವರು ಸಿನೇಮಾದಲ್ಲಿ ಚಾನ್ಸ್ ಕೊಡ್ತೇನೆ ಎಂದು ಪುಕ್ಕಟೇ ಬಾರಿಸ್ತಾರೆ…” ಮಾಯಿ ಮೊದಲೇ ಹೇಳಿ ಕಳುಹಿಸಿದ್ದಳು. ಆದರೂ ನಾನು ಹಾಗೇ ಮಾಡಿ ಒಂದು ತಿಂಗಳ ದುಡಿತ ಕಳೆದುಕೊಂಡಿದ್ದೆ ಗೊತ್ತಾ. ಮಾಯಿ ಒಳ್ಳೆಯವಳು… ನನ್ನನ್ನು ಕೆಲಸದಿಂದ ತಗೆದು ಹಾಕಿಲ್ಲ” ಈಗ ಸ್ವಲ್ಪ ದಪ್ಪ ಆಗಿದ್ದೇನೆ ಅದಕ್ಕೆ ನನಗೆ ಆ ಪಾರ್ಟಿಗಳಿಗೆ ಅಷ್ಟು ಡಿಮ್ಯಾಂಡ್ ಇಲ್ಲ. ಆದರೂ ವರುಷಕ್ಕೆ ರಾಜಕಾರಣಿಗಳು ಅದೆಂತದಕ್ಕೋ ರೆಸಾರ್ಟಿಗೆ ಬಂದು ಕೆಲ ದಿವಸ ಇರುವಾಗ ನಮಗೆಲ್ಲಾ ಕರೆ ಬರುತ್ತದೆ. ಆಗ ಯಾವ ಸೈಜಾದರೂ ಆದೀತು. ಅವರನ್ನು ಅಲ್ಲಿ ಬಾಕ್ಸರ್ ಗಳ ಕಾವಲಿನಲ್ಲಿ ಕೂಡಿಡುತ್ತಾರೆ. ಈ ರಾಜಕಾರಣಿಗಳು ಇದ್ದಾರಲ್ಲಾ, ನಮ್ಮಂತವರು ಸಿಕ್ಕಿದರೆ ಸಾಕು, ಅಯ್ಯೋ ಅವರ… ವಾಕರಿಕೆ ಬರುತ್ತದೆ… ಸಹಿಸಿಕೊಳ್ಳಬೇಕು. ಆದರೇನು ಕೈತುಂಬಾ ಹಣ ಸಿಗುತ್ತದೆ. ಆದರೆ ಅವರೇ ಅಸಹ್ಯ…. ಆದರೂ ಬಯ್ಯಾ. ಕಾಸಿನ ಮುಂದೆ ಅದೆಲ್ಲಾ ಏನು ಮಹಾ… ನಿನ್ನ ಫ಼್ರೆಂಡ್ಸ್ ಜೊತೆ ಹೋದಳಲ್ಲ… ಅವಳು ಈಗಲೂ ಹೋಗುತ್ತಾಳೆ. ಆದರೆ ಮಾಯಿಗೆ ಅವಳ ಮೇಲೆ ನಂಬಿಕೆ ಇಲ್ಲ. ಹಣದ ವಿಚಾರದಲ್ಲಿ ಸರಿ ಲೆಕ್ಕ ಕೊಡದೇ ತಾನೇ ವ್ಯವಹಾರ ಕುದುರಿಸುತ್ತಾಳೆ. ಈಗ ಅವಳಿಗೆ ಡಿಮ್ಯಾಂಡ್ ಇದೆ ಮಾಯಿ ಇಟ್ಟುಕೊಂಡಿದ್ದಾಳೆ. ನಾಳೆ ನನ್ನ ಹಾಗೆ ದಪ್ಪ ಆದರೆ ಮಾಯಿ ಅವಳನ್ನು ಇಲ್ಲಿಂದ ಲೋ ಲೆವಲ್ಲಿನ ಕೋಟೆಗೆ ದಾಟಿಸಿಬಿಡುತ್ತಾಳೆ” ಆಕೆಗೆ ಯಾಕೋ ಸ್ವಲ್ಪ ವಿರಾಮಬೇಕು ಅನಿಸಿತು. ಚಾಚಿಕೊಂಡಿದ್ದ ಕಾಲನ್ನೊಮ್ಮೆ ಮಡಿಸಿ ಆಕಳಿಕೆ ತೆಗೆದು “ಯಾ ಅಲ್ಲಾ…” ಎಂದಳು. ತನ್ನ ಮಗಳ ಫೋಟೋ ತೆಗೆದುನೋಡತೊಡಗಿದಳು. ಒಂದು ಸಿಹಿ ಮುತ್ತನ್ನಿತ್ತು ಮೂರ್ತಿಗೆ ತೋರಿಸಿ ನಕ್ಕಳು. ‘ಆಸ್ಮಾ. . ಈಕೆಯ ಹೆಸರು. ಹಾಗೆಂದರೆ ಚೆಲುವೆ ಅಂತ. ನನ್ನ ರಾಣಿ ಈಕೆ. ಇದು ನಿಜವಾದ ಹೆಸರು ಸುಳ್ಳು ಪಳ್ಳು ಏನಲ್ಲ. ಬರ್ತಡೆಗೆ ಮಾಯಿ ಊರಿಗೆ ಕಳಿಸುತ್ತೇನೆ ಎಂದಿದ್ದಾಳೆ. ಉಡುಗೊರೆಯನ್ನೂ ಕೊಟ್ಟುಕಳಿಸುತ್ತಾಳೆ” ಎಂದವಳೇ ಮಗಳ ಫೋಟೋದ ಮೇಲೆ ಲೊಚ ಲೊಚ ಎಂದು ಮುತ್ತಿಟ್ಟಳು.

ಮೂರ್ತಿಗೆ ಧೈರ್ಯ ಸ್ವಲ್ಪ ಬಂತು, ವಿಷಯ ಆಸಕ್ತಿ ದಾಯಕವಾಗಿತ್ತು. ಹಾಗೇ ಆಕೆಯ ಕುರಿತು ಕನಿಕರವೂ ಬಂತು. ಕಿಸೆಗೆ ಕೈ ಹಾಕಿದವನೇ ಎರಡು ಸಾವಿರ ರೂಪಾಯಿಯ ನೋಟನ್ನು ತೆಗೆದು “ತಗೋ ನನ್ನ ಪಾಲಿನ ಉಡುಗೊರೆ ನಿನ್ನ ಮಗಳಿಗೆ” ಎಂದ. “ಥಾಂಕ್ಸ್ ಬಯ್ಯಾ, ಒಂದು ಚಂದದ ಫ್ರಾಕ್ ತೆಗೆದುಕೊಂಡು ಹೋಗುತ್ತೇನೆ. ಅಂಕಲ್ ಕೊಟ್ರೂ ಅನ್ನುತ್ತೇನೆ…. ಗಾಬರಿ ಬೇಡ, ನಿನ್ನ ಹೆಸರು ಕೇಳುವದಿಲ್ಲ…. ಬಯ್ಯಾ ಎನ್ನುವದೇ ಚಂದ; ಅದಕ್ಕೊಂದು ಹೆಸರಿನ ಮುಸುಕೇಕೆ” ಹಣವನ್ನು ತೆಗೆದು ಬ್ರಾದೊಳಗೆ ಸೇರಿಸಿಟ್ಟಳು. ಮೂರ್ತಿಗೆ ಏನೆನಿಸಿತೋ ಎದ್ದವನೇ ಆಕೆಯ ಸಮೀಪ ಹೋಗಿ ಮುಖವನ್ನು ತನ್ನ ಎದೆಗೆ ಆನಿಸಿ ತಲೆಗೆ ಒಂದು ಹೂ ಮುತ್ತನ್ನಿಟ್ಟ, ಕಣ್ಣಾಲಿಗಳು ತುಂಬಿ ಬಂದಿದ್ದವು. ಆಕೆ ಸುಮ್ಮನಿದ್ದವಳು ಈತನ ಕೈಹಿಡಿದು ತಾನೂ ಏನೋ ಒಂದು ಆನಂದ ಅನುಭವವಾದಂತೆನಿಸಿತು; ತನ್ನ ಪಕ್ಕ ಸೆಳೆದು ಕೂಡ್ರಿಸಿಕೊಂಡಳು. ಅಪ್ಪುಗೆಯಲ್ಲಿಯೂ ಆನಂದ ಸಿಗುವದು ಆಕೆಗೆ ಹೊಸತು. ಕೆಲಹೊತ್ತು ಹೀಗೆ ಇದ್ದು ಮೂರ್ತಿ ಸರಿದು ಅಲ್ಲೇ ಪಕ್ಕದಲ್ಲಿ ಕುಳಿತು ಆಕೆಯ ಕೈಯನ್ನು ಹಿಡಿದು ಕೇಳಿದ.

‘ನೀನೇಕೆ ಈ ದಂಧೆ ಬಿಟ್ಟು ಬೇರೆ ಹುಡುಕಬಾರದು ಬೆಹನ್ʼ

“ಏಯ್, ನೀನೇನು, ನಿಮ್ಮ ಮನೆಗೆ ಕರೆದುಕೊಂಡು ಹೋಗ್ತೀಯಾ… ನಿನ್ನಪ್ಪ ಊಟ ಕೊಡ್ತಾನಾ, ಮನೆ, ಮನೆss ಮತ್ತೆ ಜಾಗ ತಕೊಳ್ಬೇಕು ಗೊತ್ತಾ…. ಹುಚ್ಚಾಟ ಆಡಬೇಡ, ಮಾಯಿ ನನ್ನನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದಾಳೆ. ಅವಳಿಗೆ ಕಾಲು ಒತ್ತುವದು ನಾನು ಮಾತ್ರ. ಮಾತ್ರೆ ಆಸ್ಪತ್ರೆ ಎಲ್ಲಿಗೆ ಬೇಕಾದರೂ ನಾನೇ ಆಗಬೇಕು. ಆಕೆಯ ಮಗ ಇದ್ದಾನಲ್ಲ, ಹಜಾರದಲ್ಲಿ ನಿನ್ನಪಕ್ಕದಲ್ಲಿ ಆ ಡುಬ್ಬು ಸುಮ್ಮನೆ ಕುಳಿತಿದ್ದನಲ್ಲ. ಅವ ಮಾತ್ರ ಸಿಟ್ಟು ಬಂದರೆ ಮಾಯಿಗೆ ಹೊಡೆಯುತ್ತಾನೆ. ಆಗೆಲ್ಲ ಅವನನ್ನು ಸಮಾಧಾನ ಮಾಡಲಿಕ್ಕೆ ನಾನೇ ಹೋಗಬೇಕು. ನನಗೆ ಗೊತ್ತು ಅವನನ್ನು ಸಮಾಧಾನ ಮಾಡುವದು ಹೇsssಗೆಂssದು”.

“ಆಗ ಎಸ್ಕಾರ್ಟ್‌ ಸರ್ವಿಸ್ ಅಂತ ಬೆಂಗಳೂರಿನ ವಿಷಯ ಹೇಳಿದೆನಲ್ಲಾ, ಮಾಯಿ ಹೇಳಿದ್ದಾಳೆ, ಇನ್ನೊಂದೆರಡು ವರ್ಷಗಳಲ್ಲಿ ನನಗೂ ಒಂದು ಸಣ್ಣ ಬಿಸಿನೆಸ್ ಹಾಕಿ ಕೊಡ್ತಾಳಂತೆ, ನಾನೇ ಈ ಮಾಲನ್ನು ಕರೆದುಕೊಂಡು ಅಲ್ಲೆಲ್ಲಾ ಹೋಗಬೇಕಂತೆ. ಊರಲ್ಲಿ ಒಂದು ಬಿಘಾ ಜಮೀನು ಖರೀದಿಸಿ ಗಂಡನಿಗೆ ಒಂದು ಮನೆ ಕಟ್ಟಿಸಿ ತೋಟ ಹಾಕಿಸುತ್ತೇನೆ. ಮಾ ಗಂಗಾ ನಮ್ಮೂರಿನಲ್ಲಿಯೇ ಹರೀತಾಳೆ…. ಒಳ್ಳೇ ಕಮಿಷನ್ನು ಮತ್ತು ಈಗಿನ ಹಾಗೆ ಆಗೆಲ್ಲಾ ನಾನೇ ದುಡಿಯಬೇಕಿಲ್ಲ. ಮಾಲನ್ನು ನೋಡಿಕೊಂಡರೆ ಸಾಕು…. ಮಗಳನ್ನು ಓದಿಸಿ ಒಳ್ಳೇ ಕಡೆ ಮದುವೆ ಮಾಡಿಸಿಕೊಡ್ತೇನೆ. ಹಣ ಒಟ್ಟು ಮಾಡಬೇಕಾಗಿದೆ ಅದಕ್ಕೆಲ್ಲಾ…” ತನ್ನದೇ ಲಹರಿಯಲ್ಲಿ ಮೂರ್ತಿಯು ಎರಡೂ ಬುಜ ಹಿಡಿದು ನಗತೊಡಗಿದಳು. ಮೂರ್ತಿಗೂ ಕನಿಕರ ಬಂತು ‘ಖಂಡಿತಾ ಹಾಗೇ ಆಗಲಿ ಬೆಹನ್… ನಿನಗೆ ಒಳ್ಳೆಯದೇ ಆಗುತ್ತದೆ.ʼ

“ಬಯ್ಯಾ, ನಿನ್ನ ಫೋನ್ ನಂಬರ್ ಕೊಡ್ತಿಯಾ”

ಮೂರ್ತಿಗೆ ಮತ್ತೆ ದಿಗಿಲಾಯಿತು. ವಾಸ್ತವಕ್ಕೆ ಬಂದ, ಏನೋ ತಪ್ಪಿಸಿಕೊಳ್ಳ ಬೇಕೆಂದವನಿಗೆ ಭಾವನೆಯ ಪಾಶದಲ್ಲಿ ಸಿಕ್ಕರೆ ಎನಿಸಿತು ಸುಮ್ಮನಾದ. ಅವಳೇ “ತೊಂದರೆ ಮಾಡುವುದಿಲ್ಲ ಬಯ್ಯಾ, ರಾಖೀ ಹಬ್ಬದ ದಿನ ನಿನಗೆ ವಿಶ್ ಮಾಡುತ್ತೇನೆ. ನನಗ್ಯಾರೂ ಸೋದರರಿಲ್ಲ. ರಂಡಿಯರಿಗೆಲ್ಲಿ ಬಯ್ಯಾ ಸಿಗಬೇಕು ಹೇಳು”.

ಮೂರ್ತಿಯ ಎದೆ ಭಾರವಾಯಿತು. ಆಕೆಯ ನಂಬರಿಗೆ ರಿಂಗ್ ಮಾಡಿದ. ಹೆಸರು ಏನೆಂದು ಸೇವ್ ಮಾಡಲಿ ಎಂದ. “ಬೆಹನ್ ಅಂತಾ ಇಟ್ಕೋ. ನಿನ್ನ ಹೆಸರೂ ಕೇಳುವದಿಲ್ಲ. ಬಯ್ಯಾ ಎಂತಲೇ ಸೇವ್ ಮಾಡ್ತೀನಿ. ಮರೀಬೇಡ. ಅದೂ ರಾಖೀ ಹಬ್ಬದಂದು. ಹೊರಗೆಲ್ಲಾದರೂ ಸಿಕ್ಕಿದೆ ಅಂತಿಟ್ಕೋ ನನ್ನನ್ನು ಮಾತಾಡ್ಸಿತೀಯಾ ಬಯ್ಯಾ , ಹೋದ ನನ್ನನ್ನು ಮರೆಯುವುದಿಲ್ಲ ಅಲ್ಲವೇ”.

ಇಲ್ಲಾ ಎಂದು ತಲೆ ಆಡಿಸುವಷ್ಟರಲ್ಲಿ ಅನಂತನಿಂದ ರಿಂಗ್ ಬಂತು. ಆಯ್ತಾ ಕೇಳಿದ. ಈಕೆಯ ಮುಖ ನೋಡಿದ. ತಡೀ ಎಂದವಳೇ ಯಾರಿಗೋ ಫೋನ್ ಮಾಡಿದಳು. “ಆಗಿದೆ ಇನ್ನು ಅವನಿಂದ ಆಗ್ತಾ ಇಲ್ಲ” ಎಂದಳು, ಅಲ್ಲಿಂದ ಏನೋ ಉತ್ತರ ಬಂತು. ಹೆಬ್ಬೆರಳನ್ನು ಎತ್ತಿ ಆಯಿತು ಎಂದು ಸನ್ನೆ ಮಾಡಿ ಅವನಿಗೆ ಬರಲಿಕ್ಕೆ ಹೇಳು ಎಂದಳು. ಹಾಗೇ ಎದ್ದವಳೇ ಈತನನ್ನೂ ಎಬ್ಬಿಸಿ ಹಾಸಿಗೆಯನ್ನು ಅಸ್ತವ್ಯಸ್ತ ಮಾಡಿ ತನ್ನ ಕೂದಲನ್ನೂ ಕೆದರಿಕೊಂಡಳು, ಇವನ ತಲೆಯನ್ನೂ ಕೆದರಿದಳು. “ಆಯಾ ಬರುತ್ತಾಳೆ. ಎರಡುನೂರು ರೂಪಾಯಿ ಬಕ್ಷೀಸು ಕೊಡು. ಅವಳಿಗೆ ಅನುಮಾನ ಬಂದರೆ ಮಾಯಿಗೆ ಹೇಳಿಬಿಡುತ್ತಾಳೆ. ನಿಜ ಸಂಗತಿ ಗೊತ್ತಾದರೆ ನನಗೇ ತೊಂದರೆ. ಮನೆ ಜಮೀನು ಮಗಳ ಹುಟ್ಟುಹಬ್ಬ ಎಲ್ಲಾ ಮರೆತು ಬಿಡಬೇಕು. ಇಲ್ಲಿ ಕೆಲಸದಲ್ಲಿ ನಿಷ್ಠೆ ಬಹು ಮುಖ್ಯ.

ಬಾಗಿಲು ತಟ್ಟಿದ ಶಬ್ಧವಾಯಿತು. ಆಕೆಯೇ ಬಾಗಿಲು ತೆರೆದಳು. ಅನಂತ ಮತ್ತು ಆ ಹುಡುಗಿ ಒಳ ಬಂದರು. ಆಕೆ ಇವಳ ಹತ್ತಿರ ಏನೋ ಕೇಳಿದಳು. ಇವಳೂ ಬಂಗಾಲಿಯಲ್ಲಿ ಏನೋ ಹೇಳಿದಳು. ಇಬ್ಬರೂ ನಗೆಯಾಡಿದರು. ಆಕೆ ಕೈಯನ್ನು ಏನೇನೋ ಮಾಡಿ ಅನಂತನೆಡೆಗೆ ನೋಡಿದಳು. ಅನಂತ ಇವರಿಬ್ಬರನ್ನೂ ನಖಶಿಖಾಂತ ನೋಡಿ ಮುಗುಳು ನಕ್ಕ. ಆಯಾ ಒಳ ಬಂದಳು. ಈಕೆಯ ಧ್ವನಿ ಬದಲಾಯಿತು. “ಆಯಾಳಿಗೆ ಭಕ್ಷೀಸು ಕೊಡಿ ಸಾಬ್” ಎಂದಳು. ಕೊಟ್ಟಾಗ ತನಗೆ ಎಂದು ಕೈಜೋಡಿಸಿದಳು. ಮೂರ್ತಿಗೆ ಅಚ್ಚರಿಯಾದರೂ ಅರ್ಥವಾಯಿತು. ಐದುನೂರರ ನೋಟನ್ನು ತೆಗೆದು ಕೊಟ್ಟ. ಅನಂತನ ಹತ್ತಿರವೂ ಆ ಪೋರಿ ವಸೂಲಿ ಮಾಡಿ ಕಿಸಕ್ಕಂತ ನಕ್ಕಳು.

ಕೆಳಗಿಳಿದು ಬರುವಾಗ ಯಾರೂ ಕಾಣಲಿಲ್ಲ. ಅವರೆಲ್ಲಾ ಅಲ್ಲೇ ಒಳಗೆ ಕತ್ತಲಲ್ಲಿ ಇದ್ದಾರೆ ಎನಿಸಿತು. ಸರ ಸರನೆ ಅವರಿಬ್ಬರೂ ಕೆಳಗಿಳಿದು ಬಂದರು. ಅಲ್ಲಿಂದ ಬಂದ ಹಾದಿಯಲ್ಲಿಯೇ ರಿಕ್ಷಾ ಇಳಿದಲ್ಲಿಗೆ ಬಂದರೆ ಅಲ್ಲಿ ಅದೇ ರಿಕ್ಷಾದವ ಕಾಣ ಸಿಕ್ಕ. ಇವರನ್ನು ಬನ್ನಿ ಅಂತ ಕರೆದ. ಆಶ್ಚರ್ಯ ಮತ್ತು ಅನುಮಾನ ಬಂದರೂ ಅನಂತ “ಇನ್ನೇನೂ ತೊಂದರೆ ಇಲ್ಲ. ಆ ಮಟ್ಟಿಗೆ ನಿಯತ್ತು ಇವರಲ್ಲಿರುತ್ತದೆ. ಒಟ್ಟಾರೆ ಅವರ ಪಾಲು ಅವರಿಗೆ ಸಂದರೆ ಸರಿ” ಎಂದು ಇವನನ್ನು ಎಳೆದುಕೊಂಡು ರಿಕ್ಷಾದೊಳಗೆ ನುಗ್ಗಿದ. ಗ್ರಾಂಟ್ ರೋಡ್ ಸ್ಟೇಷನ್ನಿನಲ್ಲಿ ಇಳಿದು ಟ್ರೇನಿಗೆ ಕಾಯುವಾಗ ಮೂರ್ತಿಯು ಎದೆ ಬಡಿತ ನಿಂತಿರಲಿಲ್ಲ.

ಯಾವುದೋ ಟ್ರೇನಿನೊಳಗೆ ಇಬ್ಬರೂ ನುಗ್ಗಿದರು. ರಶ್ಶಿನಲ್ಲಿ ಕಂಬಿ ಹಿಡಿದು ಜೋತಾಡುತ್ತಿದ್ದರೂ ಮೂರ್ತಿಯ ಎದೆ ಬಡಿತ ಜೋರಾಗಿಯೇ ಇತ್ತು. “ಅಂತೂ ನಾವು ಬಚಾವಾದೆವು. ಅಯ್ಯಪ್ಪ್ಪಾsss; ತಂಗೀ ಎಂದು ನಂಬಿಸಿ ನಾನು ಅವಳಿಂದ ಪಾರಾದೇ” ಎಂದು ಅನಂತನೊಡನೆಂದ. ಅವ ಇವನ ಮುಖವನ್ನೊಮ್ಮೆ ನೋಡಿ ನಸು ನಕ್ಕು “ನಾನೂ ಹಾಗೇ, ಇವತ್ತು ನನಗೆ ದೇವರ ಪೂಜೆಯ ದಿನ ಎಂದು ಹೇಳಿ ಅವಳಿಂದ ಪಾರಾದೆ. ಏನೇನೂ ಮಾಡಲಿಲ್ಲ” ಅನಂತನ ಮುದ್ದೆಯಾದ ಪ್ಯಾಂಟಿನ ಮೇಲೆ ಕಂಡೂ ಕಾಣದಂತಿರುವ ಕಲೆಯನ್ನು ನೋಡಿಯೂ ಗಮನಿಸದವನಂತೆ ನಿಂತ. ಅಷ್ಟರಲ್ಲಿ ಯಾವುದೋ ಸ್ಟೇಷನ್ನಿನಲ್ಲಿ ಕೆಲವರು ಇಳಿದಾಗ ಸೀಟೊಂದು ಖಾಲಿಯಾಯಿತು. “ನೀವು ಕುಳಿತುಕೊಳ್ಳಿ” ಎಂದು ಅನಂತ ಇವನನ್ನು ಕುಳ್ಳಿರಿಸಿ ತಾನೂ ಜೋತಾಡುತ್ತಾ ಏನೂ ಆಗದವನ ಹಾಗೆ ಇದ್ದ. ಹೋಟೇಲಿಗೆ ಹೋಗುವಾಗ ಇದನ್ನು ಇಲ್ಲೇ ಮರೆಯೋಣ ಎಂದವನೇ ಮೂರ್ತಿಯನ್ನೂ ರೂಮಿಗೆ ಎಳೆದು ಎರಡು ಪೆಗ್ ಹಾಕಿಸಿ ರೂಮಿಗೆ ಬಿಟ್ಟ.

ದೇವರೇ ತನ್ನನ್ನು ಇಂದು ಕಾಪಾಡಿದ ಎನಿಸಿ ಮೂರ್ತಿ ಮೇಲೆ ನೋಡಿ ಕೈ ಮುಗಿದ. ನಂದಿನಿಯ ಕಾಲ್ ಬಂತು. ಮಾತಾಡಿದರೂ ಧ್ವನಿ ತಡವರಿಸುತ್ತಿತ್ತು. ಆರಾಮಿದ್ದೀರಾ ಎಂದು ಕೇಳಿದವಳಿಗೆ ಏನೋ ಉತ್ತರ ಕೊಟ್ಟ. “ಸರಿ ಹೋಯಿತು, ಆ ಅನಂತ ಇದ್ದಾನೆ, ಪೆಗ್ ಜಾಸ್ತಿಯಾಗಿರಬೇಕು ಎಂದು ಕಟ್ ಮಾಡಿದಳು. ಇವನೆದುರು ಆ ಮಾಯಿ, ಪೀಚಲಿನವ, ಡುಬ್ಬ, ಅವಳು ಮತ್ತೆ ಆ ಕಿಸಕ್ಕನೆ ನಕ್ಕವಳು ಎಲ್ಲಾ ಕಣ್ಣೆದುರು ಬಂದು ನಂದಿನಿಯ ಮುಖ ನೋಡುವ ಯೋಗ ಇತ್ತೆಂದುಕೊಂಡು ಮತ್ತೆ ಅವಳಿಗೆ ಕಾಲ್ ಮಾಡಿದರೆ ಕಾಲ್ ಕಟ್ ಮಾಡಿದಳು. ಸಿಟ್ಟಿರಬೇಕು ಎಂದು ಬೆಳಿಗ್ಗೆ ಮಾತಾಡೋಣ ಎಂದವನಿಗೆ ಅವಳ ನಂಬರ ನೆನಪಿಗೆ ಬಂತು ತೆರೆದು ನೋಡಿದವನಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಆ ನಂಬರನ್ನು ಬ್ಲಾಕ್ ಲಿಸ್ಟಿಗೆ ಸೇರಿಸಿ ಊಟಕ್ಕೆ ಅನಂತನೊಡನೆ ಹೊರಟ..

*****

“ಸೀರೆ ಹೇಗಿದೆ ನೋಡಿ”, ನಂದಿನಿ ತಾನು ತೆಗೆಸಿಕೊಟ್ಟ ಸೀರೆಗೆ ಡಿಸೈನ್ ಬ್ಲೌಸೊಂದನ್ನು ಧರಿಸಿ ಈತನೆದುರಿಗೆ ಬಂದು ನಿಂತಳು.


“ಚನ್ನಾಗಿದೆಯಲ್ಲವಾ, ಅವಳ್ಯಾರೋ ಏನೋ, ತೋರಿಸಿಕೊಡದಿದ್ದರೆ ಈ ಲೇಟೆಸ್ಟ್ ಫ್ಯಾಶನ್ ನನಗೆ ಸಿಗುವುದಿಲ್ಲವಾಗಿತ್ತು. ಈ ವಯಸ್ಸಿನಲ್ಲೂ ನನ್ನ ಫಿಗರ್ ಹೇಗಿಟ್ಟುಕೊಂಡಿದ್ದೇನೆ ನೋಡಿ, ಇದೇ ಅವಳನ್ನು ಆಕರ್ಷಿಸಿತು. ಆಕೆಯೂ ಚನ್ನಾಗಿದ್ದಾಳೆ, ಏನಾದರೂ ಅವಳು ತೆಳ್ಳಗಿದ್ದರೆ ಫಿಲ್ಮ್ ಹೀರೋಯಿನ್ ತರ ಇರುತ್ತಿದ್ದಳು. ಅವಳೊಟ್ಟಿಗಿರುವ ಹುಡುಗಿಯರಿಗಿಂತ ಆಕೆಯೇ ಚಂದ ಅಲ್ಲವಾsss” ನಂದಿನಿ ತನಗಿಷ್ಟವಾದ ಸೀರೆ ಸಿಕ್ಕಿದ ಸಂಭ್ರಮದಿಂದ ಕನ್ನಡಿ ಮುಂದೆ ನಿಂತು ಮಾತಾಡುತ್ತಿದ್ದಳು. ಈತನೆಡೆ ತಿರುಗಿ “ಹಾಂ ಹೌದೂsss, ಅವಳು ಪುನಃ ಬಂದದ್ಯಾಕೆ, ನಿಮಗೇನಾದರೂ ಪರಿಚಯವಾsss” ಎನ್ನುತ್ತಿದ್ದಂತೆ ಮೈಮೇಲೆ ಹಲ್ಲಿ ಬಿದ್ದಂತೆ ಗಾಬರಿಯಾದ ಮೂರ್ತಿ “ಹೌದು, ಹೌದು ನನಗೆ ಹುಡುಗಿಯರನ್ನು ನೋಡುವದೇ ಚಟ ನೋಡು” ಎನ್ನುತ್ತಲೇ ಹಾಲಿನಲ್ಲಿ ಬಂದು ಯಾವುದೋ ಟೀವಿ ಚಾನಲ್ಲಿಗಾಗಿ ತಡಕಾಡತೊಡಗಿದ