ಹೀಗೆ ಟೊಣೆಯುವಾಗ ಒಳ್ಳೆ ಸಂಗೀತದ ಸ್ವರ ಬರಬೇಕು! ನಾನು ಕೇವಲ ‘ಸಾಕ್ಷಿ ಪ್ರಜ್ಞೆ’. ಆಮೇಲೆ ಸುರುವಾಗುವುದು ನಿಜವಾದ ಚೌಕಾಶಿ. ಅವರು ಕೊಡರು, ಇವರು ಬಿಡರು! ಆದರೆ ಮಾತ್ರ ವ್ಯಾಪಾರ ಎರಡೂ ಕಡೆಯವರಿಗೆ ಬೇಕು. ಹೊರಗಿನಿಂದ ಬರುವವರೆಲ್ಲ ನಮ್ಮನ್ನು ಸೋಲಿಸುತ್ತಾರೆ ಎನ್ನುವುದು ಅಮ್ಮನ ಭಯವಾಗಿತ್ತು. ಇದು ಬಹುಪಾಲಿಗೆ ನಿಜವಾದರೂ, ಈ ಬಡ ಕುಂಬಾರರು ಪಾಪದವರೇ ಎನ್ನುವುದು ನನ್ನ ನಂಬಿಕೆ. ಅವರು ಮಾತಿನಲ್ಲಿ, ನಡತೆಯಲ್ಲಿ ಬಹಳ ಸಜ್ಜನರಿದ್ದರು. ಅದರಲ್ಲೂ ಕುಂಬಾರ ಮಹಿಳೆಯರು ತುಂಬಾ ವಿನಯವಂತರು. ಇಂಥ ಒಬ್ಬ ಕುಂಬಾರಕಿಯಲ್ಲೇ ಸಂತ ಶಿಶುನಾಳ ಶರೀಫ ಸಾಹೇಬರು ಬ್ರಹ್ಮಾಂಡವನ್ನು ಕಂಡಿದ್ದಾರೆ. ನನಗೆ ಇಂಥವರು ಶಾಪಗ್ರಸ್ತ ದೇವತೆಗಳಂತೆ ಕಂಡಿದ್ದಾರೆ.
ಕವಿ ಕೆ.ವಿ ತಿರುಮಲೇಶ್ ಬರಹ

 

‘ಪಾತ್ರೆ ಪಗಡೆಗಳು’ ಎನ್ನುತ್ತೇವೆ. ಆದರೆ ‘ಪಾತ್ರೆ’ ಮತ್ತು ‘ಪಗಡೆ’(ಗಳು) ಯಾಕೆ ಒಟ್ಟೊಟ್ಟಿಗೆ ಹೋಗುತ್ತವೋ ಗೊತ್ತಿಲ್ಲ. ಬಹುಶಃ ಅವುಗಳಲ್ಲಿರುವ ಅನುಪ್ರಾಸದಿಂದಾಗಿ. ‘ಪಾತ್ರೆ ಪಗಡೆಗಳು’ ಒಟ್ಟಾಗಿ ಸೂಚಿಸುವುದು ದೊಡ್ಡ ಸಣ್ಣ ಪಾತ್ರೆಗಳನ್ನಲ್ಲದೆ ಪಗಡೆಯನ್ನಲ್ಲ. ಪಗಡೆ ಎನ್ನುವುದು ಜೂಜಾಟದಲ್ಲಿ ಬಳಸುವ ದಾಳ. ಇದೊಂದು ಮರದ ಪುಟ್ಟ ಘನಾಕೃತಿ. ಇದರ ಆರು ಮೈಗಳಲ್ಲಿ ಒಂದರಿಂದ ಆರರ ತನಕ ಬೊಟ್ಟುಗಳಿರುತ್ತವೆ. ಇದನ್ನು ಕೈಯಲ್ಲಿ ಕುಲುಕಿಸಿ ನೆಲದ ಮೇಲೆ ಚೆಲ್ಲಿದಾಗ ಯಾವ ಮೈ ಮೇಲ್ಮುಖವಾಗುತ್ತದೋ ಅಲ್ಲಿರುವ ಬೊಟ್ಟುಗಳಿಗನುಸಾರ ಕಾಯಿಗಳನ್ನು ಹಾಸಿನ (‘ಹಾಸಂಗಿ’) ಮೇಲೆ ನಡೆಸುವುದು ಒಂದು ಆಟ. ಇದು ಒಬ್ಬನೇ ಆಡುವ ಆಟವಲ್ಲ; ಇದಕ್ಕೆ ಕನಿಷ್ಠ ಇಬ್ಬರಾದರೂ ಬೇಕು. ಮೂರು ನಾಲ್ಕು ಮಂದಿಯಿದ್ದರೆ ಇನ್ನೂ ಚೆನ್ನಾಗಿರುತ್ತದೆ. ಇದೊಂದು ಜಿದ್ದಿನ ಆಟ. ಪಣವಿಟ್ಟು ಆಡಿದರೆ ಇದೇ ಜೂಜಾಟವಾಗುತ್ತದೆ.

ಇದು ಬಹಳ ಪುರಾತನ ಕಾಲದ ಆಟವಿರಬೇಕು. ಪಂಪನ “ವಿಕ್ರಮಾರ್ಜುನ ವಿಜಯ”ದಲ್ಲಿ ಕರ್ಣ ಮತ್ತು ಭಾನುಮತಿ ಆಡುತ್ತಿದ್ದ ‘ನೆತ್ತ’ ಬಹುಶಃ ಇದೇ ಆಟ. ‘ನೆತ್ತ’ವನ್ನು ‘ಲೆತ್ತ’ವೆಂದೂ ಕರೆಯುತ್ತಾರೆ. ಧರ್ಮರಾಯ ಮತ್ತು ದುರ್ಯೋಧನ (ಅವನ ಪರವಾಗಿ ಶಕುನಿ?) ಆಡಿದ್ದೂ ಇದನ್ನೇ. ಧರ್ಮರಾಯನಿಗೆ ಈ ಜೂಜಾಟವೊಂದು ದೌರ್ಬಲ್ಯವಾಗಿತ್ತು ಎನ್ನುತ್ತಾರೆ ಕಾದಂಬರಿಕಾರ ಭೈರಪ್ಪನವರು. ಇಡೀ ಮಹಾಭಾರತ ಕತೆಯ ಕೇಂದ್ರ ಧರ್ಮರಾಯನ ಈ ಜೂಜಾಟದ ದೌರ್ಬಲ್ಯ (ವ್ಯಸನ) ಎನ್ನುವುದು ಅವರ ಮತ. ವಿರಾಟರಾಯನಲ್ಲಿ ಪಾಂಡವರು ಮಾರು ವೇಷದಲ್ಲಿದ್ದಾಗ ಧರ್ಮರಾಯ ಕಂಕಭಟ್ಟ ಎಂಬ ಹೆಸರಿನಲ್ಲಿ ಅರಸನ ಸಹಚರನಾಗಿ ರಾಜಾಸ್ಥಾನದಲ್ಲಿದ್ದ. ಅವನ ಕೆಲಸ ಅರಸನೊಂದಿಗೆ ಪಗಡೆಯಾಡುವುದೇ ಆಗಿತ್ತು! ಈ ಚಟದಿಂದಾಗಿಯೇ ತಮಗೀ ದುಃಸ್ಥಿತಿ ಬಂತು ಎನ್ನುವುದನ್ನು ಅವನು ಮರೆತುಬಿಟ್ಟನೇ ತಿಳಿಯದು. ಬಹುಶಃ ಶಕುನಿಯ ಕುತಂತ್ರ ಅವನಿಗೆ ಗೊತ್ತಾಗಿತ್ತು. ಆಂತೂ ಈ ಆಟಕ್ಕೆ ಸಮಾಜದಲ್ಲಿ ಕಳಂಕವೊಂದು ತಗಲಾಕಿಕೊಂಡು ಬಿಟ್ಟಿದೆ. ಆದರೆ ಕಳಂಕ ಬರುವುದು ಅದೊಂದು ಚಟವಾದಾಗ, ಆಟದಲ್ಲಿ ಪಣವೊಡ್ಡಿದಾಗ ಮಾತ್ರ. ಹಾಗೆ ನೋಡಿದರೆ, “ಮಹಾಭಾರತ” ಕಾವ್ಯವನ್ನೂ ಮನೆಯಲ್ಲಿ ಇಟ್ಟುಕೊಳ್ಳಬಾರದು ಎನ್ನುವ ನಂಬಿಕೆಯಿದೆ: ದಾಯಾದಿ ಕಲಹವಾಗುತ್ತದೆ ಎಂದು! ಅದು ಆಗದಿರುವುದೆಲ್ಲಿ?!

ನಾವು ಮನೆಯಲ್ಲಿ ಮಳೆಗಾಲದ ರಾತ್ರಿಗಳಲ್ಲಿ ಚಿಮಿಣಿ ದೀಪದ ಮಿಣಿ ಮಿಣಿ ಬೆಳಕಿನಲ್ಲಿ ಈ ಆಟವನ್ನು ಕೆಲವೊಮ್ಮೆ ಆಡುತ್ತಿದ್ದುದು ನೆನಪಿಗೆ ಬರುತ್ತಿದೆ. ಎಂದೂ ಪಣವಿಟ್ಟು ಆಡುತ್ತಿರಲಿಲ್ಲ. ಹಾಗೂ ನಾವು ದಾಳದ ಬದಲಿಗೆ ಆರು ಕವಡೆಗಳನ್ನು ಬಳಸುತ್ತಿದ್ದುದೂ ಇತ್ತು. ಈ ಕವಡೆಗಳನ್ನು ಸಪಾಯಿ ಮಾಡಿದ ಗೆರಟೆಯ ತಲೆಮೇಲೆ ಚೆಲ್ಲಿದಾಗ ಕವುಚಿ ಬೀಳುವ ಕವಡೆಗಳು ಲೆಕ್ಕಕ್ಕೆ ಬರುತ್ತವೆ. ಕೆಲವು ಜ್ಯೋತಿಷಿಗಳು ನಮ್ಮ ಗ್ರಹಚಾರ ನೋಡುವುದಕ್ಕೆ ಬಳಸುವುದು ಇಂಥದೇ ಕವಡೆಗಳನ್ನು.

ಚಿಕ್ಕವನಾಗಿದ್ದ ನನಗೆ ಈ ಕವಡೆಗಳೆಂದರೆ ಜೋಪಾನಿಸುವ ವಸ್ತುಗಳು, ತುಂಬಾ ಇಷ್ಟ. ಅವುಗಳ ಆಕಾರಕ್ಕೆ (ಶಂಖದ ಆಕಾರ), ಮೈಬಣ್ಣಕ್ಕೆ, ಬೊಟ್ಟುಗಳಿಗೆ, ವಿನ್ಯಾಸಕ್ಕೆ ಮತ್ತು ನುಣುಪಿಗೆ ನಾನು ಮನಸೋತಿದ್ದೆ. ಈಗಲೂ, ಕವಡೆಗಳ ಕುರಿತು ಸಾಕಷ್ಟು ತಿಳಿದುಕೊಂಡಿರುವ ಮೇಲೂ, ನನಗವು ಆಕರ್ಷಕವೇ. ಕವಡೆಗಳು ಒಂದು ಜಾತಿಯ ಮೃದ್ವಂಗಿ ಜಲಜಂತುಗಳ ಕವಚಗಳು, ಹಾಗೂ ಈ ರೂಪಕ್ಕೆ ಬರಲು ಹಲವಾರು ವರ್ಷಗಳೇ ಬೇಕಾಗುತ್ತವೆ ಎಂದು ತಿಳಿದ ಮೇಲೆ ನನಗಿವುಗಳ ಕುರಿತು ಪ್ರೀತಿ ಹೆಚ್ಚಿದೆ. ವೈಚಾರಿಕವಾಗಿ ನಾನೊಬ್ಬ ಡಾರ್ವೀನಿಸ್ಟ್, ಆದರೂ ಅದರಿಂದ ನಿಸರ್ಗದ ಕುರಿತಾದ ನನ್ನ ಬೆರಗೇನೂ ಕಡಿಮೆಯಾಗಿಲ್ಲ. ಕೇವಲ ಯಾದೃಚ್ಛಿಕ ಸ್ಫೋಟದಿಂದಲೇ (ರ್ಯಾಂಡಮ್ ಮ್ಯುಟೇಶನ್) ಈ ಸುಂದರ ಮತ್ತು ವಿಶಿಷ್ಟವಾದ ಕವಡೆಯ ವಿನ್ಯಾಸ ಹೇಗೆ ಮೂಡಿ ಬಂತು ಎನ್ನುವ ಸೋಜಿಗವೊಂದು ನನಗೆ ಇದ್ದೇ ಇದೆ. ಆದರೆ ನೈಸರ್ಗಿಕತೆಗಿಂತ ಹೆಚ್ಚಿನ ಇನ್ನೊಂದು ‘ಏಜೆನ್ಸಿ’ ಇದೆಯೆಂದು ನನಗೆ ಅನಿಸುವುದೂ ಇಲ್ಲ.

ಇವು ಚಂದದ ವಸ್ತುಗಳಾಗಿದ್ದು ಶ್ರಮದಿಂದ ಸಂಗ್ರಹಿಸಬೇಕಾದ್ದರಿಂದಲೋ ಏನೋ, ಹಿಂದಿನ ಕಾಲದಲ್ಲಿ ಕವಡೆಗಳನ್ನು ನಾಣ್ಯದ ರೀತಿಯಲ್ಲಿ ವ್ಯಾಪಾರದ ಮಾಧ್ಯಮಗಳಾಗಿ ಉಪಯೋಗಿಸುತ್ತಿದ್ದರು. ಆ ಮೇಲೆ ಕವಡೆಗಳು ಧಾರಾಳ ದೊರಕಲು ಸುರುವಾಗಿ ತಮ್ಮ ಬೆಲೆಯನ್ನು ಕಳೆದುಕೊಂಡಿರಬಹುದು. ಆಗ ‘ಕವಡೆ ಕಿಮ್ಮತ್ತು’ ಎಂಬ ತಾತ್ಸಾರದ ಮಾತು ಹುಟ್ಟಿಕೊಂಡಿರಬೇಕು. ಬಹುಶಃ ‘ಪಗಡೆಗಳು’ ಎನ್ನುವ ಪದ (ಕವಡೆಗಳು ಎಂಬ ಅರ್ಥದಲ್ಲಿ) ಒಂದು ಕಾಲದಲ್ಲಿ ಧನ ಎನ್ನುವುದನ್ನು ಸೂಚಿಸುತ್ತಿದ್ದಿರಬಹುದು. ಕವಡೆಗಳು ಅಪಮೌಲ್ಯಗೊಂಡ ನಂತರ ಅವು ಪುಡಿ ಪಾತ್ರೆಗಳನ್ನಷ್ಟೆ ಕೊಳ್ಳಲು ಶಕ್ತ ಎಂದೆನಿಸಿರಬಹುದು. ‘ಪಾತ್ರೆ ಪಗಡೆಗಳು’ ಎಂಬಲ್ಲಿ ಪಗಡೆಗಳು ಪುಡಿ ಪಾತ್ರೆಗಳಿಗೆ ಪರ್ಯಾಯವಾಗಿರುವುದು ಪ್ರಾಯಶಃ ಈ ಕಾರಣಕ್ಕೆ. ಇನ್ನು ಇಂಥ ಆವರ್ತನ ಪದಗಳು (ಹಲವು ರೀತಿಯವು) ಕನ್ನಡದಲ್ಲಿ ಸಾಮಾನ್ಯ.

***************

ಇನ್ನು ನಿಜವಾದ ಪಾತ್ರೆ ಪಗಡೆಗಳ ವಿಷಯಕ್ಕೆ ಬಂದರೆ, ಮಾನವ ನಾಗರಿಕತೆಯ ಇತಿಹಾಸಕಲ್ಲಿನ ಯುಗ, ಕಂಚಿನ ಯುಗ, ಮತ್ತು ಕಬ್ಬಿಣದ ಯುಗಗಳನ್ನು ಹಾದು ಬಂದಿದೆ. ಈ ಪ್ರತಿಯೊಂದು ಯುಗವೂ ಸಹಸ್ರಾರು ವಿಭಿನ್ನ ಶತಮಾನಗಳಷ್ಟು ದೀರ್ಘವಾಗಿದ್ದು ಒಂದೊಂದೂ ವಿವಿಧ ಕಾಲಘಟ್ಟಗಳನ್ನು ಹೊಂದಿದೆ. ಇವನ್ನೆಲ್ಲ ಉಲ್ಲೇಖಿಸುವುದು ನನ್ನ ಉದ್ದೇಶವಲ್ಲ, ಅದಕ್ಕೆ ನಾನು ಸಮರ್ಥನೂ ಅಲ್ಲ. ನನ್ನದೊಂದು ಪುಟ್ಟ ಎಂಪಿರಿಕಲ್ ಕಥನ – ನನ್ನ ಬಾಲ್ಯಕಾಲದ ಬಗ್ಗೆ, ನನಗೆ ಗೊತ್ತಿದ್ದ ಹಾಗೆ, ನನಗೆ ನೆನಪಿರುವ ಹಾಗೆ, ನನ್ನ ಅನುಭವ ವಲಯಕ್ಕೆ ತಕ್ಕಂತೆ. ದಕ್ಷಿಣ ಕನ್ನಡದ ಕೆಳ ಮಧ್ಯಮ ವರ್ಗದ ಒಂದು ಹವ್ಯಕ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ನಮ್ಮ ಮನೆಯಲ್ಲಿದ್ದ ಅಡುಗೆ ಪಾತ್ರೆಗಳು ಹೆಚ್ಚಿನವೂ ಮಣ್ಣ ಮಡಕೆಗಳು (ಗಡಿಗೆಗಳು). ಅಗಲ ಬಾಯಿಯ ಮಾದರಿ ಮಡಕೆಗಳನ್ನು ನಾವು ಅಳಗೆಗಳೆಂದು ಕರೆಯುತ್ತಿದ್ದೆವು. ಇನ್ನು ತರಾವಳಿಗಳಿದ್ದುವು – ಅಗುಳಿ, ಚೆಟ್ಟಿ, ಬಾಯಡೆ, ಉರುಳಿ ಮುಂತಾದುವು…. ಅಳಗೆಯಲ್ಲಿ ಅನ್ನ ಮಾಡುತ್ತಿದ್ದೆವು, ಅನ್ನ ಬೆಂದಾಗ ಅದನ್ನು ‘ಇಳುಗಿಸಿ’ (ಇಳಿಸಿ) ಅಳಗೆಯ ಬಾಯಿಗೆ ‘ಇಶೂಂಚಲು’ ಎಂಬ ಅದಕ್ಕಾಗಿಯೇ ಇರುವ ಮರದ ಡಿಸ್ಕಸ್ನಂಥ ಉರುಟು ಹಲಗೆಯನ್ನು ಮುಚ್ಚಿ ಕೆಳಗೊಂದು ಅದಕ್ಕಾಗಿಯೇ ಇರುವ ಮಣ್ಣಿನ ಪಾತ್ರೆಗೆ ‘ತೆಳಿ’ (ಗಂಜಿ ನೀರು) ಬಸಿಯಲು ಇರಿಸುತ್ತಿದ್ದೆವು.

ಆ ಪಾತ್ರೆಗೂ ಒಂದು ಹೆಸರಿತ್ತು, ನಾನದನ್ನು ಈಗ ಮರೆತು ಬಿಟ್ಟಿದ್ದೇನೆ – ಬಹುಶಃ ಅಡಿಮಂಡಗೆ. ಅನ್ನದ ನೀರು ಬಸಿಯದೆ ಗಂಜಿಯಾಗಿಯೂ ಕೆಲವು ಸಲ, ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಉಣ್ಣುತ್ತಿದ್ದೆವು. ಗಂಜಿಗೆ ನಾವು ನಮ್ಮ ಕಡೆ ‘ಹೆಜ್ಜೆ’ ಎನ್ನುತ್ತಿದ್ದೆವು. ಗಂಜಿ ಅತಿಯಾಗಿ ಬೆಂದರೆ ಅಂಬಲಿ, ಸಣ್ಣ ಮಕ್ಕಳಿಗೆ ಮತ್ತು ಜ್ವರ ಬಂದವರಿಗೆ. ಅಕ್ಕಿ ರೊಟ್ಟಿ ಮಾಡಲು ಮಣ್ಣಿನದೇ ‘ಓಡು’ ಇತ್ತು. ಅಲ್ಲದೆ ಈ ಕಥನದಲ್ಲಿ ನಾನು ನನ್ನನ್ನೂ ಒಬ್ಬ ಕಾರ್ಯಕರ್ತೃವಿನಂತೆ ಸೇರಿಸಿಕೊಳ್ಳುತ್ತಿದ್ದರೂ ಎಲ್ಲ ಕೆಲಸವನ್ನೂ ಮಾಡುತ್ತಿದ್ದುದು ನನ್ನ ಅಮ್ಮ ಮತ್ತು ಅಕ್ಕ. ನಾನು ಕೇವಲ ಫಲಾನುಭವಿ ಮಾತ್ರ.

ಹಾಲು ಕಾಯಿಸುವುದಕ್ಕೆ, ಮೊಸರು ಮಾಡುವುದಕ್ಕೆ, ಮಜ್ಜಿಗೆಗೆ ಬೇರೆ ಬೇರೆ ಪಾತ್ರೆಗಳಿದ್ದುವು; ಅವೂ ಮಣ್ಣಿನವೇ. ಸಾರು ಸಾಂಬಾರು ಇತ್ಯಾದಿ ಪದಾರ್ಥಗಳನ್ನು (ಉಪ್ಪು ಹುಳಿ ಹಾಕಿ) ಮಾಡಿದ ಪಾತ್ರೆಗಳಲ್ಲಿ ಹಾಲನ್ನು ಕಾಯಿಸುವಂತಿಲ್ಲವಲ್ಲ, ಕಾಯಿಸಿದರೆ ಹಾಲು ‘ಒಡೆ’ಯುತ್ತದೆ. ಇಡೀ ಕಲ್ಲಿನಿಂದ ಕೆತ್ತಿ ತೆಗೆದ ‘ಕಲ್ಚೆಟ್ಟಿ’ಗಳಿದ್ದುವು– ಕಡಪಾ ಮೂಲದ ಮಿದು ಕಲ್ಲುಗಳಿವು ಎಂದು ಕೇಳಿದ್ದೇನೆ. ಎತ್ತಣ ಕಡಪಾ ಎತ್ತಣ ದಕ್ಷಿಣ ಕನ್ನಡ ಎಂದೀಗ ಆಶ್ಚರ್ಯವಾಗುತ್ತದೆ. ಯಾವ ಕಲ್ಲುಕುಟಿಗರು ಇವನ್ನು ತಯಾರಿಸಿದರು, ಯಾವ ವ್ಯಾಪಾರಿಗಳು ಇಲ್ಲಿ ತಂದು ಮಾರಿದರು, ಸಂಪರ್ಕವೇ ಕಠಿಣವಾಗಿದ್ದ ಕಾಲದಲ್ಲಿ?! ಈ ಕಲ್ಚೆಟ್ಟಿಗಳ ವಿಶೇಷವೆಂದರೆ, ಇವು ದಪ್ಪವಿರುವುದರಿಂದ ಶಾಖವನ್ನು ಸಮನಾಗಿ ವಿತರಿಸುತ್ತವೆ ಹಾಗೂ ಇವುಗಳಲ್ಲಿಟ್ಟ ಪದಾರ್ಥಗಳು ಬೇಗನೆ ಬಿಸಿ ಕಳೆದುಕೊಳ್ಳುವುದಿಲ್ಲ. ಅನನುಕೂಲತೆಯೆಂದರೆ ಇವುಗಳ ವಜನ. ಸುಲಭವಾಗಿ ಆಚೀಚೆ ಕೈಕಾರ್ಯ ಮಾಡುವುದಕ್ಕೆ ಬರುವುದಿಲ್ಲ. ಕೆಲವು ‘ಬೆಂದಿ’ಗಳನ್ನು (ಯಾವುದು ಬೆಂದಿರುವುದೋ ಅದು ‘ಬೆಂದಿ’ ಅರ್ಥಾತ್ ಊಟದ ಪದಾರ್ಥ ಅರ್ಥಾತ್ ವ್ಯಂಜನಗಳು) ಅವುಗಳಲ್ಲಿ ಮಾಡುತ್ತಿದ್ದೆವು.

ಹೀಗೆ ಮಣ್ಣು ಮತ್ತು ಕಲ್ಲು ಮೂಲದ ಪಾತ್ರೆಗಳಲ್ಲದೆ ಲೋಹದ ಪಾತ್ರೆಗಳೂ ಇದ್ದುವು. ಇವುಗಳಲ್ಲಿ ‘ಚೀಂಚೆಟ್ಟಿ’ ಎಂಬ ಕಬ್ಬಿಣದ ಸಾಧನ ಒಂದು (ಎಲ್ಲಾ ಕಡೆಯೂ ‘ಚೆಟ್ಟಿ’ ಎನ್ನುವುದನ್ನು ‘ಚಟ್ಟಿ’ ಎಂದೂ ಓದಿಕೊಳ್ಳಬಹುದು) – ಕಡಾಯಿಯಷ್ಟು ದೊಡ್ಡದಲ್ಲ, ಆದರೆ ಅದೇ ಅಕಾರದ್ದು; ಇದಕ್ಕೆ ಎತ್ತಲು ಎರಡು ಕಿವಿಗಳಿರುತ್ತವೆ. ಪಲ್ಯಗಳನ್ನು ಮಾಡುವುದಕ್ಕೆ, ಸಾಂಬಾರು ಸಾಮಗ್ರಿಗಳನ್ನು ಹುರಿಯುವುದಕ್ಕೆ ಇದು ಅನುಕೂಲ; ಹಪ್ಪಳ, ಬಾಳಕ ಮುಂತಾದ ತೈಲ ಮಾಧ್ಯಮ ತಿನಿಸುಗಳಿಗಂತೂ ಕಬ್ಬಿಣದ ಚೀಂಚೆಟ್ಟಿ ಬೇಕೇ ಬೇಕು. ನಮ್ಮಲ್ಲಿದ್ದ ಕಬ್ಬಿಣದ ಇನ್ನೊಂದು ಅಡುಗೆ ಸಾಧನವೆಂದರೆ ಕಾವಲಿಗೆ ಹಂಚು. ದೋಸೆ ಪ್ರಿಯರಾದ ನಮಗೆ ಇದಿಲ್ಲದೆ ಆಗುವುದಿಲ್ಲ. ದೋಸೆಯನ್ನು ಎಬ್ಬಿಸುವುದಕ್ಕಿರುವ ಕಾವಲಿಗೆ ಸಟ್ಟು(ಗ) ಕೂಡ ಕಬ್ಬಿಣದ್ದೇ. ಮಕ್ಕಳ ಊಟದ ಪಿಂಗಾಣಿ ಕೂಡ ಒಳಗೆ ಕಬ್ಬಿಣವೇ, ಹೊರಗಿಂದ ಅದಕ್ಕೆ ಎನಾಮೆಲ್ ಲೇಪ(ಬಿಳಿ ನುಣುಪು) ಕೊಟ್ಟಿರುತ್ತಾರೆ. ತಟ್ಟೆ ಹಳತಾಗಿ ಎನಾಮೆಲ್ ಹೋಗಲು ಸುರುವಾದಾಗ ಅದರ ಕಬ್ಬಿಣ ಕಾಣಿಸುತ್ತದೆ. ಈ ಪಿಂಗಾಣಿಗಳು ಜಾತ್ರೆಗೆ ಬರುವ ಸಂತೆಯಲ್ಲಿ ಸಿಗುತ್ತಿದ್ದುವು. ತೊಳೆಯುವುದಕ್ಕೆ, ಬಳಸುವುದಕ್ಕೆ ಸುಲಭವಾದ ಈ ತಟ್ಟೆಗಳು ಎಲ್ಲಿ ತಯಾರಾಗಿ ಬರುತ್ತಿದ್ದುವೋ ನನಗೆ ತಿಳಿಯದು. ಚೈನ ಇಂಥ ವಸ್ತುಗಳಿಗೆ ಪ್ರಸಿದ್ಧವಾದುದು.

ಎನಾಮೆಲ್ ಪಿಂಗಾಣಿಯದೇ ಇನ್ನೊಂದು ರೂಪವಾದ ವಿವಿಧ ‘ಭಾಷೆ’ಯ ಭರಣಿಗಳು ಕೂಡ ನಮ್ಮ ಮನೆಯಲ್ಲಿದ್ದುವು. ಇವು ತುಪ್ಪದ ಕುಡಿಕೆಯಾಗಿ, ಮೊಸರು ಕಡೆವ ಅಗುಳಿಯಾಗಿ, ಉಪ್ಪು, ಉಪ್ಪಿನಕಾಯಿ, ಸಕ್ಕರೆಯ ದಾಸ್ತಾನು ಭರಣಿಯಾಗಿ ಉಪಯೋಗವಾಗುತ್ತಿದ್ದುವು. ಆದರೆ ಇವು ಕಬ್ಬಿಣವಲ್ಲ; ಬಹುಶಃ ಮಣಲಿನ ಮಿಶ್ರಣವನ್ನು ಗಟ್ಟಿಗೊಳಿಸಿ ಎನಾಮೆಲ್ ಲೇಪಿಸಿದ್ದು. ಬಿದ್ದರೆ ಒಡೆಯುವಂಥವು. ಇವಕ್ಕೆ ಇವುಗಳದೇ ಮುಚ್ಚಳಗಳು, ಮುಚ್ಚಳಗಳಿಗೆ ಮಧ್ಯದಲ್ಲಿ ಕೋಟಿನ ಬಟನಿನಂಥ ಉಬ್ಬುಗಳು. ಕೆಲವು ಭರಣಿಗಳಿಗೆ ಹಿಡಿಗಳೂ ಇದ್ದುವು. ತಿರುಗು ಮುಚ್ಚಳವಿರುವ ಭರಣಿಗಳು ‘ತಿರುಗಾಣಿ’ (ತಿರುಗಣೆ) ಭರಣಿಗಳು. ಇವುಗಳಲ್ಲದೆ ನಮ್ಮಲ್ಲಿ ಅತಿ ದೊಡ್ಡ ‘ಮಂಡಗೆ’ಗಳೂ (‘ಮಂಡೆ’ಗಳು) ಇದ್ದುವು. ಇವನ್ನು ಉಪ್ಪುನೀರಿನಲ್ಲಿ ಹಾಕಿದ ಹಲಸಿನ ತೊಳೆ, ಉಪ್ಪಿನ ಮಾವಿನ ಕಾಯಿ ಮುಂತಾದುವುಗಳ ದಾಸ್ತಾನಿಗೆ ಬಳಸುತ್ತಿದ್ದರು. ಇಂಥ ಕೆಲವು ಮಂಡಗೆಗಳಲ್ಲಿ ಅಮ್ಮ ಅಮೂಲ್ಯವಾದ ಪಟ್ಟೆ ಸೀರೆ, ಕುಪ್ಪಸ ಮುಂತಾದ ಬಟ್ಟೆಗಳನ್ನು ಮತ್ತು ಚೂರುಪಾರು ಬಂಗಾರದ ಆಭರಣಗಳನ್ನು ಮತ್ತು ನಾಣ್ಯಗಳನ್ನು (ಮನೆತನದಿಂದ ಬಂದಂಥವು) ಜೋಪಾನವಿಡುತ್ತಿದ್ದರು. ಈ ಮಂಡಗೆಗಳಲ್ಲಿ ಕೆಲವು ಅಡುಗೆ ಕೋಣೆಯ ಅಟ್ಟದಲ್ಲಿರುತ್ತಿದ್ದುವು. ಅವನ್ನು ಕಿರಿದಾದ ಏಣಿ ಹತ್ತಿ ಅಲ್ಲಿಗೆ ಹೇಗೆ ಸಾಗಿಸಿದರೋ ಆಶ್ಚರ್ಯವೇ ಸರಿ.

ಕಬ್ಬಿಣದ ಇನ್ನೊಂದು ಸಾಧನ ನಮಗೆ ನಿತ್ಯವೂ ಬೇಕಾಗಿದ್ದ ಒಗ್ಗರಣೆ ‘ಕರಂಡಿ’. ಇದು ಒಂದಡಿ ಉದ್ದದ ಸಮತಲ (ಹಿಡಿದರೆ ನೆಲಕ್ಕೆ ಸಮಾನಾಂತರವಾದ) ಕೈಯಿರುವ ವಸ್ತು. ಒಂದು ತುದಿಗೆ ಅರ್ಧ ಗೆರಟೆಯಷ್ಟಿರುವ ಕಬ್ಬಿಣದ್ದೇ ಕರಂಡಕ. ಇದರಲ್ಲಿ ಎಣ್ಣೆ, ಒಣಮೆಣಸು, ಬೆಳ್ಳುಳ್ಳಿ ಹಾಕಿ ಬೆಂಕಿಯಲ್ಲಿ ಕಾಯಿಸಿ ಅದಕ್ಕೆ ಸಾಸಿವೆ, ಬೇವಿನ ಸೊಪ್ಪು, ಇಂಗು ಹಾಕಿ, ಸಾಸಿವೆ ಫಟ ಫಟ ಸಿಡಿದ ಮೇಲೆ, ಎಲ್ಲವನ್ನೂ ಈ ಮೊದಲೇ ತಯಾರಿಸಿಟ್ಟ ಸಾರಿಗೋ ಮೇಲೋಗರಕ್ಕೋ ಎರೆಯುವುದು ಒಗ್ಗರಣೆ. ಅದು ಜೊಂಯ್ ಎಂಬ ಸದ್ದು ಮಾಡಬೇಕು; ಪದಾರ್ಥದ ಸ್ವಲ್ಪ ದ್ರವವನ್ನು ಒಗ್ಗರಣೆ ಪಾತ್ರೆಗೆ ಎರೆದು ಕರಂಡಿಕದಲ್ಲಿ ಉಳಿದ ಸತ್ವದ ಪೂರ್ತಿ ಲಾಭವನ್ನು ಪಡೆದುಕೊಂಡು ಮರಳಿ ಪದಾರ್ಥಕ್ಕೆ ಸೇರಿಸಿದರೆ ಮಾತ್ರ ನೀವು ಪರಿಣತ ಒಗ್ಗರಣೆಗಾರರು. ಇಂಥ ಒಗ್ಗರಣೆ ಮನೆಯಲ್ಲೆಲ್ಲ ಹರಡಿ ಕೆಲವರಿಗೆ ಸೀನು ತರಿಸಲೂಬಹುದು. ಹಾಗಿದ್ದರೇನೇ ಒಗ್ಗರಣೆ ಜಯಪ್ರದವಾಯಿತು ಎಂದು ಲೆಕ್ಕ.

ನಮ್ಮ ಅಡುಗೆ ಮನೆಗಳಲ್ಲಿ ‘ಕೆರೆಮಣೆ’ ಎನ್ನುವ, ತೆಂಗಿನ ಕಾಯಿ ಹೆರೆಯುವ ಒಂದು ಸಾಧನವೂ ಇತ್ತು. ಇದರ ಮಣೆ ಮರದ್ದು, ಹರಿತವಾದ ಹಲ್ಲುಗಳಿರುವ ನಾಲಿಗೆಯಾಕಾರದ ಬಾಯಿ ಕಬ್ಬಿಣದ್ದು. ನಮ್ಮ ಕಡೆಯ ಹವ್ಯಕರ ಹಲವು ಅಡಿಗೆಗಳಿಗೆ ಕಾಯಿ ಅಗತ್ಯ; ಇದರ ತುರಿಯನ್ನು ಕಡೆಯುವ ಕಲ್ಲಿನಲ್ಲಿ ಅರೆದು ಬಳಸುತ್ತಾರೆ -ಸಾಂಬಾರು, ಮೇಲೋಗರ, ಅವಿಲು, ಬೆಂದಿ ಇತ್ಯಾದಿಗಳ ತಯಾರಿಯಲ್ಲಿ. ಪಾಯಸ, ರಸಾಯನ ಮುಂತಾದ ಸಾಧನಗಳಿಗೆ ಹವೀಕರು ತೆಂಗಿನ ತುರಿಯನ್ನು ಅರೆದು ಹಿಂಡಿದ ಹಾಲನ್ನು ಹಾಕುತ್ತಾರೆ. ಆದ್ದರಿಂದ ಕೆರೆಮಣೆ ಇಲ್ಲದೆ ಇದು ಯಾವುದೂ ಮುಂದುವರಿಯದು.
ನಮ್ಮಲ್ಲಿ ಆದಿಯಲ್ಲಿ ಗಾಜಿನ ‘ಗ್ಲಾಸು’ಗಳ ಬಳಕೆ ಇರಲೇ ಇಲ್ಲ. ಆದರೂ ಗ್ಲಾಸು ಎಂಬ ಪದವಿತ್ತು: ಹಿತ್ತಾಳೆಯ ಲೋಟಗಳನ್ನೇ ಗ್ಲಾಸು ಎನ್ನುತ್ತಿದ್ದರು, ಹಿತ್ತಾಳೆ, ತಾಮ್ರದ ಬಿಂದಿಗೆಗಳನ್ನು ‘ಚೆಂಬು’ ಎಂದು ನಾವು ಕರೆಯುತ್ತಿದ್ದಂತೆ. ಹಾಲು ಕರೆಯಲು ‘ಚೆಂಬು’ (ಎಂಬ ಬಿಂದಿಗೆ) ಅಗತ್ಯ.

ಇನ್ನು ಕಂಚು, ಹಿತ್ತಾಳೆ, ತಾಮ್ರದ ಇತರ ಪಾತ್ರೆಗಳೂ ನಮ್ಮಲ್ಲಿ ಇದ್ದುವು. ಬಿಸಿನೀರು ಕಾಯಿಸುವುದಕ್ಕೆ ತಾಮ್ರದ ಹಂಡೆಗಳು, ಹಾಗೆಯೇ ಕೊಡಪಾನಗಳು, ಇಡ್ಳಿ ಪಾತ್ರೆಗಳು. ನೀರು, ಕಾಫಿ, ಶರಬತ್ತು, ಕಷಾಯ ಇತ್ಯಾದಿಗೆ ಹಿತ್ತಾಳೆಯ ಲೋಟಗಳು. ಒಂದೊಂದು ಲೋಹಕ್ಕೂ ಒಂದೊಂದು ಗುಣಗಳು, ಕೆಲವು ದೋಷಗಳು. ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳು ಹಿಡಿಯಲು ಹಗುರ, ಆದರೆ ಹಿತ್ತಾಳೆ ಮತ್ತು ತಾಮ್ರಕ್ಕೆ, ಹಿತ್ತಾಳೆಗಿಂತಲೂ ಹೆಚ್ಚು ತಾಮ್ರಕ್ಕೆ, ಕಿಲುಬು (ಹವ್ಯಕದಲ್ಲಿ ‘ಕಿಲುಂಬು’) ಹತ್ತುತ್ತದೆ.

ಕಾಪರ್ ಸಲ್ಫೇಟ್ ಎಂದು ಇಂಗ್ಲಿಷ್ ನಲ್ಲಿ ಮತ್ತು ‘ಮೈಲ್ ತುತ್ತು’ (‘ಮೈಲಿ ತುತ್ತು’) ಎಂದು ನಾವು ಕರೆಯುತ್ತಿದ್ದ ಒಂದು ಬಗೆಯ ತಾಮ್ರದ ಕಿಲುಬು ಮಹಾ ವಿಷಕಾರಿ. ಇದನ್ನು ತಿಂದು ಆತ್ಮಹತ್ಯೆ ಮಾಡಿಕೊಂಡವರಿದ್ದರು ನಮ್ಮ ಊರಲ್ಲಿ. ಮೈಲ್ ತುತ್ತಿನ ಆಕರ್ಷಕ ಕಡು ನೀಲಿ ಗಟ್ಟಿಗಳು ಪೇಟೆಯಲ್ಲಿ ವಾಣಿಜ್ಯ ವಸ್ತುವಾಗಿ ಕೊಂಡುಕೊಳ್ಳಲು ಸಿಗುತ್ತಿದ್ದುವು. ಯಾಕೆಂದರೆ ಅಡಿಕೆ ಮರಗಳಿಗೆ ಕೊಳೆರೋಗ ಬರದಂತೆ ತಡೆಗಟ್ಟಲು ಸಿಂಪಡಿಸುವ ಬೋರ್ಡೋ ಮಿಶ್ರಣದ ತಯಾರಿಕೆಗೆ ಮೈಲ್ ತುತ್ತು ಬೇಕಾಗುತ್ತದೆ. ಈ ಪರಿಸರ ವಿನಾಶಕ ಪೆಸ್ಟಿಸೈಡ್ ಈಗಲೂ ಬಳಕೆಯಲ್ಲಿದೆ.

ಇವು ಚಂದದ ವಸ್ತುಗಳಾಗಿದ್ದು ಶ್ರಮದಿಂದ ಸಂಗ್ರಹಿಸಬೇಕಾದ್ದರಿಂದಲೋ ಏನೋ, ಹಿಂದಿನ ಕಾಲದಲ್ಲಿ ಕವಡೆಗಳನ್ನು ನಾಣ್ಯದ ರೀತಿಯಲ್ಲಿ ವ್ಯಾಪಾರದ ಮಾಧ್ಯಮಗಳಾಗಿ ಉಪಯೋಗಿಸುತ್ತಿದ್ದರು. ಆ ಮೇಲೆ ಕವಡೆಗಳು ಧಾರಾಳ ದೊರಕಲು ಸುರುವಾಗಿ ತಮ್ಮ ಬೆಲೆಯನ್ನು ಕಳೆದುಕೊಂಡಿರಬಹುದು. ಆಗ ‘ಕವಡೆ ಕಿಮ್ಮತ್ತು’ ಎಂಬ ತಾತ್ಸಾರದ ಮಾತು ಹುಟ್ಟಿಕೊಂಡಿರಬೇಕು.

ಈಗ ಈ ತಾಮ್ರದ ಪಾತ್ರೆಗಳಿಗೆ ಮರಳಿದರೆ ಅವುಗಳನ್ನು ಕೈಕಾರ್ಯ ಮಾಡುವುದು ಸುಲಭ. ಕೈಯಿಂದ ಬಿದ್ದರೆ ಹೆಚ್ಚೆಂದರೆ ನಜ್ಜಾಗಬಹುದು ಅಷ್ಟೆ. ಅದನ್ನು ಸರಿಪಡಿಸಬಹುದು. ಕಂಚಿಗೆ ಕಿಲುಬು ಹತ್ತುವುದಿಲ್ಲವಾದರೂ ಅದು ಭಾರವಾದ ಲೋಹ; ಬಿದ್ದರೆ ಒಡೆಯುವಂಥದು. ಇದರಿಂದ ಉರುಳಿ, ಕಡಾಯಿ, ಕೊಪ್ಪರಿಗೆಗಳನ್ನು ಮಾಡುತ್ತಾರೆ. ನಮ್ಮಲ್ಲಿ ಕಂಚಿನ ಚಿಕ್ಕದೊಂದು ಉರುಳಿಯಿತ್ತು, ಆದರೆ ದೊಡ್ಡ ಕಡಾಯಿ, ಕೊಪ್ಪರಿಗೆಗಳು ಇರಲಿಲ್ಲ. ಅವು ದೇವಾಲಯಗಳಲ್ಲಿ ಮತ್ತು ಶ್ರೀಮಂತರ ಮನೆಗಳಲ್ಲಿ ಇರುತ್ತಿದ್ದುವು – ಬಹು ಮಂದಿಗೆ ಅನ್ನ, ಸಾಂಬಾರು ಮಾಡಬೇಕಾದ ಕಡೆ. ಈ ಕಂಚು ಎನ್ನುವುದೊಂದು ತಾಮ್ರ ಮೂಲದ, ತವರ ಮತ್ತಿತರ ಲೋಹಗಳ ಮಿಶ್ರಣವಾಗಿದ್ದು ಇದರ ಪಾತ್ರೆಗಳನ್ನು ಮತ್ತು ಗಂಟೆ, ಗುಟ್ಟದೀಪ, ಗಿಂಡಿ, ಮುಗುಡು ಗಿಂಡಿ (ಗಿಂಡಿಗೆ ಹೊರಭಾಗದಿಂದ ಒಂದು ನಳವಿದ್ದರೆ ಅದು ಮುಗುಡು ಗಿಂಡಿ), ಮಣಿ ಗಂಟೆ ಇತ್ಯಾದಿ ವಸ್ತುಗಳನ್ನು ಎರಕದ ಮೂಲಕ ಮಾಡುತ್ತಾರೆ. ಎತ್ತರದಿಂದ ಬಿದ್ದರೆ ಇವು ಒಡೆದು ಹೋಗುವ ಸಾಧ್ಯತೆ ಇದೆ. ತವರವು ಕಂಚಿನ ಭಾಗವಾದ ಕಾರಣ ಕಂಚಿನ ಪಾತ್ರೆಗಳಿಗೆ ಕಿಲುಬು ಇಲ್ಲ, ಅಥವಾ ಕಡಿಮೆ.

ಕಂಚಿನ ಪಾತ್ರೆಗಳು ಸಾಕಷ್ಟು ಭಾರವಿರುವುದರಿಂದ ಅವುಗಳನ್ನು ಸೂಕ್ಷ್ಮವಾಗಿ ಬಳಸಬೇಕಾಗುತ್ತದೆ. ಬರೇ ತಾಮ್ರವಾದರೆ ಎಷ್ಟು ಎತ್ತರದಿಂದ ಬಿದ್ದರೂ ಒಡೆಯುವುದಿಲ್ಲ, ಅದು ಕಂಚಿಗಿಂತ ಹಗುರವೂ ಹೌದು. ಆದ್ದರಿಂದ ಅಡುಗೆಗೆ ಜನ ಕಂಚಿಗಿಂತ ತಾಮ್ರದ ಪಾತ್ರೆಗಳನ್ನೇ ಹೆಚ್ಚು ಬಯಸುತ್ತಾರೆ. ತಾಮ್ರದ ಪಾತ್ರೆಗಳಲ್ಲಿ ಎಲ್ಲಾ ತರದ ಅಡುಗೆ ಮಾಡಲು ಸಾಧ್ಯವಾಗುವಂತೆ ಆಗಿಸಲು ಅದರ ಒಳಭಾಗವನ್ನು ಕಿಲುಬುಮುಕ್ತವಾಗಿಸುವ ವಿಧಾನವೇ ಕಲಾಯಿ, ಎಂದರೆ ತವರದ ಲೇಪ ಹಾಕುವುದು. ಇದು ಎಂದಾದರೂ ಅಪರೂಪಕ್ಕೆ ನಡೆಯುವ ಸಂಗತಿ. ಮಕ್ಕಳು ಆಸಕ್ತಿಯಿಂದ ಕುಳಿತು ನೋಡುವಂಥ ಒಂದು ಕುಶಲಕ್ರಿಯೆ.

ಕಲಾಯಿ ಹಾಕುವ ಜನರು ಅದೆಲ್ಲೋ ಇದ್ದರು. ಅವರಿಗೆ ಹೇಳಿ ಕಳಿಸಿದರೆ ಅವರು ಇಬ್ಬರು ಮೂವರು ತಮ್ಮ ಸಾಮಾನು ಸರಂಜಾಮುಗಳ ಚೀಲಗಳೊಂದಿಗೆ ಬಂದು ಅಂಗಳದ ಒಂದು ಮೂಲೆಯಲ್ಲಿ ತಳವೂರಿಕೊಳ್ಳುತ್ತಿದ್ದರು. ಆಗ ನಮ್ಮ ಹಳೆಯ ಚೆಂಬಿನ ಅರ್ಥಾತ್ ತಾಮ್ರದ ಪಾತ್ರೆಗಳು ಮನೆಯಿಂದ ಒಂದೊಂದಾಗಿ ಹೊರಬರುತ್ತಿದ್ದುವು. (ಹವ್ಯಕ ಕನ್ನಡದಲ್ಲಿ ತಾಮ್ರಕ್ಕೆ ‘ಚೆಂಬು’ ಎಂದು ಕರೆಯುತ್ತೇವೆ.) ಕಲಾಯಿಯವರು ತಿದಿ ಊರುತ್ತಿದ್ದರು. ತಿದಿ ಎಂದರೆ ಕೆಂಡಕ್ಕೆ ಗಾಳಿ ಹಾಕುವ ಚರ್ಮದ ಅಳ್ಳಕ. ಇದನ್ನು ಮುಂದಕ್ಕೆ ಹಿಂದಕ್ಕೆ ತಳ್ಳುತ್ತ ಎಳೆಯುತ್ತ ಇದ್ದಂತೆ ಇದು ಗಾಳಿ ಹಾಕುತ್ತ ಇರುತ್ತದೆ. ಒಬ್ಬನ ಕೆಲಸ ಇದು. ಈಚೆಗೆ ಇನ್ನೊಬ್ಬ ಹರಿತವಾದ ಚೂರಿಯಂಥ ಸಾಧನದಿಂದ ಪಾತ್ರೆಗಳ ಒಳಗನ್ನು ಕರೆಸಿ ಶುಚಿಮಾಡುತ್ತಲೇ ಇರುತ್ತಾನೆ. ಈ ಕೀಂ ಕೀಂ ಸದ್ದನ್ನು ನಾವು ಸಹಿಸಬೇಕು. ಸಹಿಸದಿರುವ ಪ್ರಶ್ನೆಯೇ ಇಲ್ಲ. ಇದೆಲ್ಲ ಒಟ್ಟಾರೆ ಕಲಾಯಿ ಸಡಗರದ ಭಾಗ. ಹೀಗೆ ಕೊಳೆ ಕೆರೆಸಿ ತೆಗೆದ ಪಾತ್ರೆಯೇ ನಿಗಿನಿಗಿ ಕೆಂಡಗಳ ಮೇಲೇರುವುದು.

ಇದು ಯಾಕೆಂದರೆ ಕಲಾಯಿ ಹಾಕಲು ಪಾತ್ರೆ ಚೆನ್ನಾಗಿ ಕಾಯ್ದಿರಬೇಕು. ಈಗ ಕಲಾಯಿ ಪಂಗಡದ ಮುಖ್ಯಸ್ಥ ಒಂದು ಕೈಯಲ್ಲಿ ಇಕ್ಕಳದಿಂದ ಪಾತ್ರೆಯ ಬಾಯನ್ನು ಹಿಡಿದು ಇನ್ನೊಂದು ಕೈಯಿಂದ ತವರದ ಬಿಳಿ ಕೋಲನ್ನು ಒಳಕ್ಕೆ ಇಳಿಸುತ್ತಾನೆ. ಬಿಸಿ ಪಾತ್ರೆಯನ್ನು ಮುಟ್ಟಿದ್ದೇ ಅದು ಕರಗಿ ನೀರಾಗಿ ಉಂಡುಂಡೆಯ ಗುಳ್ಳೆಗಳು ಆಚೀಚೆ ಓಡಾಡಲು ತೊಡಗುತ್ತವೆ. ಬೇಗನೆ ಅವನು ಕೈ ತೆಗೆದು ಹತ್ತಿಯಲ್ಲಿ ಅದೇನೋ ಪುಡಿಯೊಂದನ್ನು ಎತ್ತಿಕೊಂಡು ಪಾತ್ರೆಯೊಳಗೆ ಹರಿಯುತ್ತಿರುವ ತವರವನ್ನು ತಳಕ್ಕೆ ಉಜ್ಜಲು ಸುರುಮಾಡುತ್ತಾನೆ. ಪಾತ್ರೆಯ ಒಳಭಾಗವೆಲ್ಲ ಹೀಗೆ ತವರದಿಂದ ಲೇಪಿತವಾದಾಗ ಅದು ಬೆಳ್ಳಿಯಂತೆ ಹೊಳೆಯುತ್ತದೆ. ಕಲಾಯಿಯೆಂದರೆ ಇದುವೇ.

ಲೋಹಶಾಸ್ತ್ರ (ಮೆಟಲರ್ಜಿ) ಎಂಬ ಒಂದು ಜ್ಞಾನಶಾಖೆಯೇ ಇದೆ: ಎಷ್ಟು ಬಗೆಯ ಲೋಹಗಳು ಎಲ್ಲಿ ಸಿಗುತ್ತವೆ, ಶುದ್ಧಲೋಹ, ಮಿಶ್ರಲೋಹ ಎಂದರೇನು, ಇವುಗಳ ಸಂಸ್ಕರಣ ಹೇಗೆ, ಗುಣಾವಗುಣಗಳೇನು, ಉಪಯೋಗಗಳೇನು ಎಂಬುದನ್ನ ಅಭ್ಯಸಿಸುವ ಶಾಖೆ ಇದು. ನಮ್ಮ ಪೂರ್ವಜರು ಇದನ್ನೆಲ್ಲ ಕೇವಲ ಅನುಭವದಿಂದ ಕಲಿತಿರಬೇಕು. ಆಗ ಅವರು ಅದೆಷ್ಟು ತಪ್ಪುಗಳನ್ನು ಮಾಡಿರಬೇಡ! ಅವುಗಳಲ್ಲಿ ಕೆಲವು ಮಾರಣಾಂತಿಕವೂ ಆಗಿದ್ದಿರಬಹುದು. ಈ ಮಾತು ನಾಗರಿಕತೆಯ ಎಲ್ಲ ಕ್ಷೇತ್ರಗಳಿಗೂ, ಎಲ್ಲ ಕಾಲಕ್ಕೂ ಸಲ್ಲುವಂಥದು. ನಾಗರಿಕತೆಯ ಪ್ರಗತಿ ಹಲವರ ತ್ಯಾಗಗಳ ಮೇಲೆ ನಿಂತಿದೆ ಎನ್ನುವುದು ಹೊಸ ವಿಷಯವಲ್ಲ. ಈಗ ನಾವು ಬಳಸುವ ಒಲೆಗಳಲ್ಲಿ, ಇಂಧನಗಳಲ್ಲಿ, ಪಾತ್ರೆಗಳಲ್ಲಿ, ತಿಂಡಿ ತೀರ್ಥಗಳಲ್ಲಿ ಈ ನನ್ನ ಕಾಲಾವಧಿಯಲ್ಲೇ ಎಷ್ಟೊಂದು ವ್ಯತ್ಯಾಸವಾಗಿದೆ. ನಾವು ಈ ವ್ಯತ್ಯಾಸದ ಅಂಗವೇ ಆಗಿರುತ್ತ ಇದೆಲ್ಲ ನಮಗೆ ಸಹಜವೇ ಅನಿಸುತ್ತದೆ; ಅಲ್ಲದೆ ಯಾವುದೇ ಕ್ಷೇತ್ರದ ಬದಲಾವಣೆಯೂ ಇತರ ಕ್ಷೇತ್ರಗಳ ಬದಲಾವಣೆಗಳಿಗೆ ಸಂಬಂಧಿಸಿಯೇ ಇರುತ್ತದೆ. ಲೋಹ (ಮತ್ತು ಪ್ಲಾಸ್ಟಿಕ್) ಕ್ಷೇತ್ರದಲ್ಲಿ ಆದ ಪ್ರಗತಿ ನಮ್ಮ ಅಡುಗೆ ಪಾತ್ರೆಗಳನ್ನೂ ಪ್ರಭಾವಿಸಿವೆ. ಮಣ್ಣಿನ ಪಾತ್ರೆಗಳು ಅಲೂಮಿನಿಯಮಿಗೆ ಎಡೆ ಮಾಡಿಕೊಟ್ಟುವು; ಅಲೂಮಿನಿಯಂ ಇಂಡೇಲಿಯಮಿಗೆ; ಇಂಡೇಲಿಯಂ ಸ್ಟೈನ್ಲೆಸ್ ಸ್ಟೀಲಿಗೆ.

ಏನಿದ್ದರೂ ನಾನು ಹೇಳುವ ಕಾಲಘಟ್ಟದಲ್ಲಿ ನಾವು ಅಡುಗೆಗೆ ಹೆಚ್ಚಾಗಿ ಉಪಯೋಗಿಸುತ್ತಿದ್ದುದು ಮಣ್ಣಿನ ಮಡಕೆಗಳನ್ನೇ. ರೂಢಿ ಒಂದು ಕಾರಣವಾದರೆ, ಅವು ಅಗ್ಗ ಎನ್ನುವುದು ಇನ್ನೊಂದು ಕಾರಣ. ಅಡುಗೆ ಮನೆಯಲ್ಲೆಲ್ಲ ಈ ಪಾತ್ರೆಗಳೇ, ಕೆಲವು ಹೊರ ಜಗಲಿಯಲ್ಲಿ ಕೂಡ. ಮಡಕೆಗಳು ಮಾತ್ರ ಸಾಕೇ? ಅವುಗಳನ್ನು ‘ಕುತ್ತ’ (ಲಂಬವಾಗಿ) ಇರಿಸಲು ಚೆರಿಗೆ (ಬಳ್ಳಿಯಿಂದ ಉರುಟಾಗಿ ಹೆಣೆದ ತಳೆಯಂಥ ಅಡಿ) ಬೇಕು, ಸೌಟುಗಳು (‘ಕೈಲುಗಳು’) ಬೇಕು – ಅನ್ನ, ಸಾಂಬಾರು, ಮೇಲೋಗರ ಇತ್ಯಾದಿಗಳ ಸೌಟುಗಳು ಗೆರಟೆಯಿಂದ (‘ಕರಟ’ದಿಂದ) ಮಾಡಿರುತ್ತಿದ್ದುವು. ಕೆರೆದು ನಾಜೂಕುಗೊಳಿಸಿದ ಗೆರಟೆಗೆ ಹದವಾದ ಎರಡು ತೂತುಗಳನ್ನು ಮಾಡಿ ಬಿದಿರಿನ ಕೋಲು ಸಿಕ್ಕಿಸಿದರೆ ಅದುವೇ ಸೌಟು. ಅಪರೂಪಕ್ಕೆ ಮರದ ಮತ್ತು ಕಬ್ಬಿಣದ ಸೌಟುಗಳ ಬಳಕೆಯೂ ಇತ್ತು. ಮೊದಲು ‘ಚಮಚ’ ಎಂಬ ಸಾಧನ ಇರಲಿಲ್ಲ; ಪೂಜಾವಿಧಿಗೆ ಬಳಸುವ ಪುಟ್ಟದಾದ ‘ಸಕ್ಕಣ’ ಇತ್ತು. ಇಂಥದನ್ನೇ ತುಪ್ಪ ಬಡಿಸಲೂ ಉಪಯೋಗಿಸುತ್ತಿದ್ದೆವು. ಆದರೆ ನಮಗೆ ಕ್ರಮೇಣ ಕಾಫಿ, ಚಾಯ (ಮತ್ತು ಇಂಗ್ಲಿಷ್ ಔಷಧಿಗಳ) ಪರಿಚಯವಾಗುತ್ತಿದ್ದಂತೆ ಚಮಚವೂ (ಸ್ಪೂನು) ನಮ್ಮ ಬದುಕಿನಲ್ಲಿ ಪ್ರವೇಶ ಪಡೆಯಿತು. ಮಡಕೆಗಳ ಸಂಪರ್ಕದಲ್ಲೇ ಮಸಿ ಹಿಡಿಸಿಕೊಂಡು ಕತ್ತಲೆ ಅಡಿಗೆ ಕೋಣೆಗಳಲ್ಲಿ ತಮ್ಮ ಜೀವನದ ಬಹು ಭಾಗವನ್ನು ಕಳೆಯುತ್ತಿದ್ದ ನಮ್ಮ ಹೆಣ್ಣು ಮಕ್ಕಳ ಅವಸ್ಥೆಯನ್ನು ಊಹಿಸಿ ನೋಡಿ: ದಾರುಣವಾದುದು. (ಈ ಪಾಪಕ್ಕೆ ಎಲ್ಲಾ ಗಂಡಸರೂ ಭಾಜನರಾಗುತ್ತಾರೆ – ಇದರಲ್ಲಿ ವಾದವಿಲ್ಲ.) ಈ ಹೆಣ್ಣು ಮಕ್ಕಳು ಅಡುಗೆ ಮಾಡಿದರೆ ಸಾಲದು, ಊಟಕ್ಕೆ ಇಕ್ಕಬೇಕು, ಪಾತ್ರೆ ಎತ್ತಬೇಕು, ನಂತರ ಅವನ್ನು ತೊಳೆದಿಡಬೇಕು, ಮುಂದಿನ ಅಡುಗೆಗೆ ಸಿದ್ಧವಾಗಿ.

ಮುಸುರೆ ಪಾತ್ರೆಗಳನ್ನು ನಮ್ಮ ಹೆಣ್ಣುಮಕ್ಕಳು ಒಂದೊಂದು ಕೈಯಲ್ಲಿ ಎರಡು ಮೂರರಂತೆ ಎತ್ತಿಕೊಂಡು ಅಂಗಳದಾಚೆಯ ಪುಟ್ಟದೊಂದು ತೊರೆಯಲ್ಲಿ (‘ತೋಡು’) ತೊಳೆಯುತ್ತಿದ್ದರು. ಒಲೆಯಿಂದ ಬೂದಿ ಹೊಂಡದಲ್ಲಿ ಸಂಗ್ರಹಿಸಿಟ್ಟ ಬೂದಿಯಿಂದ (ವಿಮ್ ಗಿಮ್ ಇಲ್ಲವಲ್ಲ!)ಒಣ ತೆಂಗಿನ ಸೂಂಗಿನಲ್ಲಿ ತಿಕ್ಕುವುದರ ಮೂಲಕ. ಮಡಿಕೆಯ ಒಳಗನ್ನು ಎಷ್ಟು ನಾಜೂಕಾಗಿ ತಿಕ್ಕಿ ತೊಳೆದರೂ ಕೊಳೆ ಲವ ಲೇಶ ಉಳಿಯುವುದಿಲ್ಲ ಎನ್ನುವುದು ಹೇಗೆ? ಅಕ್ಷಯ ಪಾತ್ರೆಯಲ್ಲಿ ಕೂಡ ಒಂದು ಅಗುಳು ಉಳಿದಿತ್ತಲ್ಲ! ಇನ್ನು ಕೈಲು ಗಿಯಿಲುಗಳಲ್ಲಂತೂ ಕಾಯಿ ಸೂಂಗು ಮುಟ್ಟಲಾರದಂಥ ಎಡೆಗಳು ಇದ್ದೇ ಇರುತ್ತವೆ, ಹಲ್ಲಿನ ಎಡೆಗಳ ಹಾಗೆ. ಅವುಗಳನ್ನು ತೊರೆ ನೀರು ತಾನಾಗಿ ಶುಚಿಗೊಳಿಸಬೇಕಷ್ಟೆ. ಇಂಥ ಪರಿಸರದಲ್ಲಿ ಶುಚಿತ್ವಕ್ಕೆ ತನ್ನದೇ ವ್ಯಾಖ್ಯೆಯಿದೆ.

ಹೀಗಿದ್ದೂ ನಾವು ಮಡಕೆ ಮಾರಲು ಬರುವ ಕುಂಬಾರರಿಗೋಸ್ಕರ ಕಾಯುತ್ತಲೇ ಇರುತ್ತೇವೆ. ನಮ್ಮ ಊರಿನ ಪಕ್ಕದಲ್ಲಿ ಹಲವು ಕುಲಾಲ ಅರ್ಥಾತ್ ಕುಂಬಾರರ ಕುಟುಂಬಗಳಿದ್ದುವು. ಅವರು ಮಡಕೆಗಳನ್ನು ತಯಾರಿಸಿ ಮಾರಲು ತಲೆ ಹೊರೆಯಲ್ಲಿ ಮನೆ ಮನೆಗೆ ತರುವುದಿತ್ತು. ಕಲಾಯಿಯಂತೆ ಅದೂ ಚಿಕ್ಕವರಿಗೊಂದು ಸಡಗರದ ಸಂದರ್ಭ. ಪನ್ನೆಪ್ಪಲದಂಥ ಹೊಂಡದ ಮನೆಗೆ ಹೊರಗಿನಿಂದ ಜನ ಬರುವುದೇ ಕಡಿಮೆ. ಅಂಥದರಲ್ಲಿ ಯಾರು ಬಂದರೂ ಮಕ್ಕಳಿಗೆ ಬೆರಗು. ನಾನು ‘ಮಕ್ಕಳು’ ಎಂಬುದಾಗಿ ಬಹುವಚನ ಬಳಸಿದರೂ ಆಗ ಮನೆಯಲ್ಲಿ ಮಗುವಾಗಿ ಇದ್ದುದು ನಾನೊಬ್ಬನೇ. ಈ ಕುಂಬಾರರು ಒಂದು ಗುಂಪಿನಲ್ಲಿ ಬರುತ್ತಿದ್ದರು -ಹೆಂಗಸರು, ಗಂಡಸರು, ಹೆಂಗಸರೇ ಹೆಚ್ಚು. ಅವರು ಬಂದು, ನಮ್ಮ ನಾಯಿಯಿಂದ ಬೊಗಳಿಸಿಕೊಂಡು, ಅಂಗಳದಲ್ಲಿ ತಮ್ಮ ಹೊರೆಗಳನ್ನು ಇಳಿಸುತ್ತಿದ್ದರು. ತಲೆ ಮೇಲಿನ ಮುಟ್ಟಪ್ಪಾಳೆ, ಚೆರಿಗೆಗಳನ್ನು ತೆಗೆದಿಡುತ್ತಿದ್ದರು. ಕುಡಿಯಲು ನೀರು ಕೇಳುತ್ತಿದ್ದರು, ಕೊಡುತ್ತಿದ್ದೆವು.

ಅವರ ತಲೆಹೊರೆಗಳಲ್ಲಿ ಕೆಲವು ಮಡಕೆಗಳನ್ನು ದೊಡ್ಡ ಹೆಡಿಗೆಗಳಲ್ಲಿ ಒಪ್ಪವಾಗಿ ಇರಿಸಿರುತ್ತಿದ್ದರೆ, ಇನ್ನು ಕೆಲವನ್ನು ಅವುಗಳ ಗಾತ್ರಾನುಸಾರ ಅಡ್ಡಕ್ಕೆ ಜೋಡಿಸಿ ಹುರಿ ಹಗ್ಗದಿಂದ ಉದ್ದಗಲಕ್ಕೆ ಕಟ್ಟಿರುತ್ತಿದ್ದರು. ಇಂಥ ನಾಲ್ಕು ಮಾರುದ್ದದ ಕಟ್ಟು ಅಡ್ಡಕೆ ಮಲಗಿಸಿದ ಕುತುಬ್ ಮಿನಾರದಂತೆ ಕಾಣಿಸುತ್ತಿತ್ತು. ಅಮ್ಮ ಔಪಚಾರಿಕವಾಗಿ ಬೇಡ ಬೇಡವೆಂದರೂ -ಇದು ಮುಂದಿನ ಚೌಕಾಶಿಗೆ ತಯಾರಿ! – ಕುಂಬಾರರು ತಮ್ಮ ತಯಾರಿಗಳನ್ನು ಪ್ರದರ್ಶನಕ್ಕೆ ಬಿಚ್ಚಿಡಲು ಸುರು ಮಾಡುತ್ತಿದ್ದರು. ಅಷ್ಟು ದೂರದಿಂದ ಹೊತ್ತು ತಂದ ತಮ್ಮ ತಯಾರಿಗಳು ಮನೆಯವರಿಗೆ ಮೆಚ್ಚುಗೆಯಾಗುತ್ತವೋ ಇಲ್ಲವೋ, ಅಗತ್ಯವೋ ಅನಗತ್ಯವೋ ಎಂಬ ಆತಂಕ ಅವರಲ್ಲಿ ಖಂಡಿತ ಇದ್ದಿರಬಹುದು. ಹೊಸ ಮಡಕೆಗಳು ಯಾವಾಗಲೂ ಕಾಣಲು ಆಕರ್ಷಕ. ಆಗ ತಾನೆ ಸುಟ್ಟು ತೆಗೆದ ಮಣ್ಣಿನ ಕೃತಿಗಳು ಅವು. ಕೆಂಪನೆ ಮಿರುಗುತ್ತಿದ್ದುವು. ಅಲ್ಲಲ್ಲಿ ಸ್ವಲ್ಪ ಕಪ್ಪಿನ ಛಾಯೆಯೂ ಸೇರಿ ಅವುಗಳ ಸೌಂದರ್ಯಕ್ಕೆ ಕುಂದಣವಿಟ್ಟಂತೆ ಕಾಣುತ್ತಿತ್ತು. ಈಗ ಅವುಗಳನ್ನು ಪರೀಕ್ಷಿಸುವುದು ಅಮ್ಮ ಅಕ್ಕನ ಸರದಿ. ಅವರು ತಮಗೆ ಬೇಕೆನಿಸಿದ ಪಾತ್ರೆ ಪಗಡೆಗಳನ್ನು (ಮತ್ತೆ ‘ಪಗಡೆಗಳು’!) ಕೈಯಲ್ಲಿ ಎತ್ತಿ ಸುತ್ತಲು ತಿರುಗಿಸಿ ಮುರುಗಿಸಿ ನೋಡಿ ಬೆರಳುಗಳ ಗೆಂಟುಗಳಿಂದ (ಗೆಣ್ಣುಗಳಿಂದ)ಆಯಾ ಪಾತ್ರೆಗಳಿಗೆ ಟೊಣೆದು ಸ್ವರ ಆಲಿಸುತ್ತಿದ್ದರು, ಎಲ್ಲಾದರೂ ಒಡಕು ಇದೆಯೇ ಎಂದು ಕಂಡುಹಿಡಿಯುವುದಕ್ಕೆ.

ಹೀಗೆ ಟೊಣೆಯುವಾಗ ಒಳ್ಳೆ ಸಂಗೀತದ ಸ್ವರ ಬರಬೇಕು! ಅದು ಏನೆನ್ನುವುದು ಅವರಿಗೇ ಗೊತ್ತು. ನಾನು ಕೇವಲ ‘ಸಾಕ್ಷಿ ಪ್ರಜ್ಞೆ’. ಆಮೇಲೆ ಸುರುವಾಗುವುದು ನಿಜವಾದ ಚೌಕಾಶಿ. ಅವರು ಕೊಡರು, ಇವರು ಬಿಡರು! ಆದರೆ ಮಾತ್ರ ವ್ಯಾಪಾರ ಎರಡೂ ಕಡೆಯವರಿಗೆ ಬೇಕು. ಹೊರಗಿನಿಂದ ಬರುವವರೆಲ್ಲ ನಮ್ಮನ್ನು ಸೋಲಿಸುತ್ತಾರೆ ಎನ್ನುವುದು ಅಮ್ಮನ ಭಯವಾಗಿತ್ತು. ಇದು ಬಹುಪಾಲಿಗೆ ನಿಜವಾದರೂ, ಈ ಬಡ ಕುಂಬಾರರು ಪಾಪದವರೇ ಎನ್ನುವುದು ನನ್ನ ನಂಬಿಕೆ. ಅವರು ಮಾತಿನಲ್ಲಿ, ನಡತೆಯಲ್ಲಿ ಬಹಳ ಸಜ್ಜನರಿದ್ದರು. ಅದರಲ್ಲೂ ಕುಂಬಾರ ಮಹಿಳೆಯರು ತುಂಬಾ ವಿನಯವಂತರು. ಇಂಥ ಒಬ್ಬ ಕುಂಬಾರಕಿಯಲ್ಲೇ ಸಂತ ಶಿಶುನಾಳ ಶರೀಫ ಸಾಹೇಬರು ಬ್ರಹ್ಮಾಂಡವನ್ನು ಕಂಡಿದ್ದಾರೆ. ನನಗೆ ಇಂಥವರು ಶಾಪಗ್ರಸ್ತ ದೇವತೆಗಳಂತೆ ಕಂಡಿದ್ದಾರೆ.

ತಾವು ಶ್ರಮ ವಹಿಸಿ ಮಡಕೆಗಳನ್ನು ತಯಾರಿಸಿ, ನಾಲ್ಕು ಮೈಲು ದೂರದಿಂದ ಹೊತ್ತುಕೊಂಡು (ಗುಡ್ಡ ಏರುವಾಗಲೋ ಇಳಿಯುವಾಗಲೋ ಜಾರಿ ಬಿದ್ದರೆ ಪುಡಿ ಪುಡಿ – ಕುಂಬಾರಗೆ ವರುಷ, ದೊಣ್ಣೆಗೆ ನಿಮಿಷ, ಕೇಳಿಲ್ಲವೇ?)ನಮ್ಮ ಮನೆಗೇ ತಂದುಕೊಡುವ ಇವರಿಗೆ ಅವರು ಕೇಳಿದಷ್ಟು ದುಡ್ಡು ಕೊಡಬೇಕು ಎನ್ನುವುದು ನನ್ನ ಮನಸ್ಸಾಗಿತ್ತು, ಆದರೆ ನಾನು ಮಾತಾಡುವ ಸ್ಥಾನದಲ್ಲಿ ಇರಲಿಲ್ಲ. ಇದೊಂದು ಮಗುವಿನ ಮನೋವ್ಯಾಪಾರ ಅಷ್ಟೆ. ನಿಜವಾದ ವ್ಯವಹಾರ ಬೇರೆಯೇ. ಚೌಕಾಶಿ ನಿಜವಾದ ವ್ಯಾಪಾರದ ಅವಿಭಾಜ್ಯ ಅಂಗವೆನ್ನುವ ಹಾಗೆ ನಡೆಯುತ್ತಲೇ ಇತ್ತು. ಅಂತೂ ಈ ಮುಖ್ಯ ವ್ಯವಹಾರ ಮುಗಿದ ಮೇಲೆ ಸುರುವಾಗುತ್ತಿತ್ತು ಅಮ್ಮನ ‘ಬಾರ್ಟರ್’ (‘ವಸ್ತು ವಿನಿಮಯ’) ಪದ್ಧತಿ. ಉಪ್ಪಿನ ತೊಳೆ, ಉಪ್ಪಿನ ಮಾವಿನ ಕಾಯಿ, ಹಲಸಿನ ಬೇಳೆ (ಮಣ್ಣು ಸವರಿದ್ದು, ಸವರದೆ ಇದ್ದದ್ದು) ಇತ್ಯಾದಿಗಳ ಆಕರ್ಷಣೆ ಒಡ್ಡಿ ಅಮ್ಮ ತಮಗೆ ಬೇಕಾದ ಸಣ್ಣ ಪುಟ್ಟ ಪಾತ್ರೆಗಳನ್ನು ಕೊಂಡುಕೊಳ್ಳುತ್ತಿದ್ದರು. ಕುಂಬಾರರಿಗೂ ಅಮ್ಮ ನೀಡುತ್ತಿದ್ದ ಈ ವಸ್ತುಗಳು ಬೇಕಾಗಿದ್ದುವು. ಯಾಕೆಂದರೆ ಅವರಿಗೆ ಇವೆಲ್ಲ ವಿಶೇಷ, ಅವರು ತಮ್ಮ ಮನೆಗಳಲ್ಲಿ ತಯಾರಿಸುವ ಅಥವಾ ಕಾಪಿಡುವ ವಸ್ತುಗಳಲ್ಲ ಅವು.

ವ್ಯಾಪಾರ ಮುಗಿಸಿ ಅವರು ಉಳಿದ ಮಡಕೆಗಳನ್ನು ಹಿಂದಿನ ರೀತಿಯಲ್ಲೇ ಕಟ್ಟಿಕೊಂಡು ತಲೆ ಮೇಲೆಇರಿಸಿ ಬಯಲ ಕೆಳಗೆ ಹೊರಟು ಹೋಗುತ್ತಿದ್ದರು. ಇದನ್ನೆಲ್ಲ ನೋಡಿದ ನನಗೆ ಈ ಮಂದಿಯ ಜತೆ ಒಂದು ಆತ್ಮೀಯ ಭಾವ ಬಂದುಬಿಟ್ಟಿತ್ತು. ಅವರು ಪಾತ್ರೆಗಳನ್ನು ಬಿಚ್ಚಿಟ್ಟಿದ್ದ ಅಂಗಳ ಈಗ ಶೂನ್ಯವಾಗಿತ್ತು. ಅವರಿನ್ನು ಯಾವಾಗ ಬರುತ್ತಾರೋ ಎಂದು ಹಂಬಲಿಸತೊಡಗಿದೆ.