ನಾನು ಕಾಣದ ನನ್ನ ಅಜ್ಜಿಯಂದಿರು ನನ್ನೊಳಗೆ ನನ್ನೊಂದಿಗೇ ಬೆಳೆದು ಬಂದಿದ್ದಾರೆ. ಹೆಣ್ಣುಲೋಕದ ಎಲ್ಲ ತಲ್ಲಣಗಳನ್ನು ನನ್ನೊಳಗೆ ಬೀಜರೂಪಿಯಾಗಿ ಮೊಳೆಯಿಸಿದ್ದಾರೆ. ಆದರೂ ನನ್ನನ್ನು ಅಜ್ಜಿಯ ವಾತ್ಸಲ್ಯದಿಂದ ಪೊರೆದಿದ್ದು ಮಾತ್ರ ನಮ್ಮೂರಿನ ಬಡ್ಕಜ್ಜಿ. ತನ್ನ ಐದನೆಯ ವಯಸ್ಸಿಗೆ ಗಂಡನನ್ನು ಕಳಕೊಂಡು ಜೀವನಪೂರ್ತಿ ಒಂಟಿಯಾಗಿಯೇ ಬದುಕಿದ ಅವಳಿಗೆ ನನ್ನನ್ನೂ ಸೇರಿಸಿದಂತೆ ನೂರಾರು ಮೊಮ್ಮಕ್ಕಳು. ಅರವತ್ತು ದಾಟಿದ ತನ್ನ ಗಂಡ ಮೂರನೆಯಹೆಂಡತಿಯಾದ ತನ್ನನ್ನು ಹೆಗಲಮೇಲೆ ಕೂರಿಸಿಕೊಂಡು ಹೊಳೆದಾಟಿಸಿದ ನೆನಪು ಮಾತ್ರ ಅವಳಿಗಿತ್ತು, ಅವಳ ಮದುವೆಯ ಕಥೆಯನ್ನೂ ಹಾಸ್ಯವಾಗಿ ಹೇಳಿ ನಗಿಸಬಲ್ಲಷ್ಟು ಸ್ಥಿತಪ್ರಜ್ಞತೆ ಅವಳಿಗೆ ಅದೆಲ್ಲಿಂದ ಬಂದಿತ್ತೋ. ಅಜ್ಜಿಯರ ಲೋಕದ ಸಂವೇದನೆಗಳನ್ನು ಸೂಕ್ಷ್ಮವಾಗಿ ಹೆಣೆದಿದ್ದಾರೆ ಸುಧಾ ಆಡುಕಳ

ನನಗೆ ತಿಳಿವಳಿಕೆ ಬರುವ ಹೊತ್ತಿಗೆ ನಮ್ಮ ಮನೆಯಲ್ಲಾಗಲೀ, ಅಜ್ಜನ ಮನೆಯಲ್ಲಾಗಲೀ ಅಜ್ಜಿಯರೆಂಬ ಜೀವಗಳು ಇರಲೇ ಇಲ್ಲ. ಅವರಿವರೆಲ್ಲ ತಮ್ಮ ಅಜ್ಜಿಯಂದಿರ ಬಗ್ಗೆ ಹೇಳುವಾಗಲೆಲ್ಲ ನನಗೆ ಅಜ್ಜಿಯಂದಿರು ಯಾಕಿಲ್ಲ? ಎನಿಸಿ, ಅಪ್ಪನಲ್ಲಿ ಒಮ್ಮೆ ಕೇಳಿದ್ದೆ. ಆಗಷ್ಟೇ ಲೋಕದ ತಿಳುವಳಿಕೆ ಮೂಡುತ್ತಿದ್ದ ನಾನು ಅಪ್ಪನೊಂದಿಗೆ ನಡೆಸಿದ ಸಂಭಾಷಣೆಯ ವಿವರಗಳು ಇನ್ನೂ ಮನದಲ್ಲಿ ಹಾಗೆಯೇ ಉಳಿದಿವೆ.

ನಾನು: ಅಪ್ಪಾ, ನನಗೆ ಅಜ್ಜಿ ಯಾಕಿಲ್ಲ?
ಅಪ್ಪ: ನಿನ್ನಜ್ಜಿ ನೀನು ಹುಟ್ಟುವ ತುಂಬಾ ವರ್ಷಗಳ ಮೊದಲೇ ತೀರಿಕೊಂಡರು.
ನಾನು: ಅಜ್ಜಿಯಾಗುವ ಮೊದಲು ಅಜ್ಜಿ ಹೇಗೆ ತೀರಿಕೊಳ್ಳುತ್ತಾರೆ? ಏನಾಗಿತ್ತು ಅವರಿಗೆ?
ಅಪ್ಪ: ಅಜ್ಜಿಗೆ ಮಳ್ಳು ಹಿಡಿದಿತ್ತು. ಹಾಗೆ ಬೇಗ ತೀರಿಕೊಂಡಳು.
ನಾನು: ಮಳ್ಳು ಯಾಕೆ ಹಿಡಿಯಿತು?
ಅಪ್ಪ: ಅದೊಂದು ದೊಡ್ಡ ಕತೆ ಮಗಾ. ನಿನ್ನ ಕೊನೆಯ ಅತ್ತೆ ಹುಟ್ಟಿ ಮೂರು ತಿಂಗಳಾಗಿತ್ತು ಅಷ್ಟೆ. ಬಾಣಂತನ ಅಂತಲೂ ಮಲಗುವವಳಲ್ಲ ನನ್ನಮ್ಮ. ಹೊಳೆಯ ಬದಿತುಂಬಾ ಬದನೆ ಗಿಡ ನೆಟ್ಟಿದ್ದಳು. ಅದಕ್ಕೆ ನೀರು ಹಾಕಲೆಂದು ಮೂರುಸಂಜೆಯಲ್ಲಿ ಹೋದಳು. ಕೇಳಬೇಕಾ? ಹೊಳೆಯ ಬದಿಯಲ್ಲಿರುವ ಕೀಳುದೆವ್ವ ಕಾಲಲ್ಲಿ ಮುಳ್ಳಿಟ್ಟುಬಿಟ್ಟಿತು. ಅದೇ ನೆವವಾಗಿ ಮಳ್ಳುಹಿಡಿಯಿತು.

ನಾನು: ಹೊಳೆದಂಡೆಯಲ್ಲಿ ದೆವ್ವ ಇತ್ತಾ? ಮತ್ತೆ ಈಗ ನಾವೆಲ್ಲಾ ಓಡಾಡ್ತೇವೆ. ದೆವ್ವ ಕಾಣೋದೇ ಇಲ್ಲ.
ಅಪ್ಪ: ದೆವ್ವ ಹಾಗೆಲ್ಲ ಯಾರಿಗೂ ಕಾಣೋದಿಲ್ಲ. ಬಾಣಂತಿಯರು, ಬಸುರಿಯರು ಮೂರುಸಂಜೆಯ ಹೊತ್ತಿಗೆ ಓಡಾಡಿದರೆ ಹಿಡಿದುಕೊಳ್ಳುತ್ತವೆ. ಏನೋ ಅವಳ ಗ್ರಹಚಾರ ಹಾಗಿತ್ತು. ಮುಳ್ಳಿನ ರೂಪದಲ್ಲಿ ಮನೆಗೆ ಬಂತು.

ನಾನು: ಅದು ದೆವ್ವ ಇಟ್ಟ ಮುಳ್ಳು ಅಂತ ಹೇಗೆ ತಿಳೀತು? ನಿನ್ನ ಕಾಲಿಗೆಲ್ಲ ಮುಳ್ಳು ಹೊಕ್ಕಿದರೆ ತೆಗೀತೀರಲ್ವಾ? ಹಾಗೆ ಸೂಜಿಯಿಂದ ಚುಚ್ಚಿ ತೆಗೆದುಬಿಡಬೇಕಿತ್ತು.

ಅಪ್ಪ: ತೆಗೀಲಿಕ್ಕೆ ಬಂದರೆ ದೆವ್ವ ಅಂತಾರೇನೆ ಮಳ್ಳಿ? ಎಷ್ಟು ಚುಚ್ಚಿದರೂ ಒಳಗೇ ಹೋಗುತ್ತಿತ್ತು. ಹಗಲಿಡೀ ಕುಂಟುಗಾಲಿನಲ್ಲಿ ತಿರುಗುತ್ತಾ ಕೆಲಸ ಮಾಡುವ ಅಮ್ಮ, ರಾತ್ರಿಯಾದರೆ ನೋವು ತಾಳಲಾರದೇ ಒದ್ದೆಬಟ್ಟೆ ಕಟ್ಟಿ ಮಲಗುತ್ತಿದ್ದಳು. ನೋಟಗಾರರನ್ನು ಕರೆಸಿದ್ದಾಯ್ತು, ಪ್ರಸಾದ ಕೇಳಿದ್ದಾಯ್ತು, ಹೋರೆ ಮಂಡಲವನ್ನೂ ಮಾಡಿಸಿದ್ದಾಯ್ತು. ಮುಳ್ಳು ಮಾತ್ರ ಕಮಕ್ ಕಿಮಕ್ ಅನ್ನಲಿಲ್ಲ ನೋಡು.

ನಾನು: ಮತ್ತೆ? ಮುಳ್ಳು ಹಾಗೇ ಇದ್ದರೆ ಮಳ್ಳು ಹಿಡಿಯತ್ತಾ?

ಅಪ್ಪ: ಹೀಗೆ ಒಂದೆರಡು ತಿಂಗಳಾದ ಮೇಲೆ ಒಂದಿನ ಅಮ್ಮ ಮಲಗಿದ್ಲು. ನಿದ್ದೆಯ ಮಂಪರಿನಲ್ಲಿ ಯಾರೋ ಕಾಲಿನ ಮುಳ್ಳನ್ನು ಎಳೆದಂತಾಯಿತಂತೆ. ಅಲ್ಲಿಗೆ ನೋವೆಲ್ಲ ಮಾಯವಾಗಿ ದೇಹವೆಲ್ಲ ಹಗುರಾದಂತೆ ಅನಿಸಿ, ಎದ್ದು ಕುಳಿತಳಂತೆ. ಅವಳ ಕಾಲ ಬಳಿಗೆ ಒಂದು ಕಪ್ಪು ಬೆಕ್ಕು ಕುಳಿತಿತ್ತಂತೆ. ಆಗ ಕಿರುಚಿದ ಅಮ್ಮ ಮತ್ತೆ ಸರಿಯಾಗಲೇ ಇಲ್ಲ.

ನಾನು: ಅಂದರೆ…. ? ಕಾಲಿನ ಮುಳ್ಳನ್ನು ಯಾರು ತೆಗೆದದ್ದು? ನೋವು ಹೋದರೆ ಸರಿಯಾಗಬೇಕಲ್ವಾ? ಮಳ್ಳು ಯಾಕೆ ಹಿಡಿಯಿತು?

ಅಪ್ಪ: ಅದು ಬೆಕ್ಕಲ್ಲ ಮಾರಾಯ್ತಿ, ಕೀಳುದೆವ್ವ. ಅದನ್ನು ನೋಡಿ ಅವಳ ಸಾಯದ ದೆವ್ವ (ದೇಹದೊಳಗಿರುವ ಚೈತನ್ಯವನ್ನು ಹಳ್ಳಿಯ ಭಾಷೆಯಲ್ಲಿ ಸಾಯದ ದೆವ್ವ ಎನ್ನುತ್ತಾರೆ) ಬಿಟ್ಟೇಹೋಯ್ತು. ಮಳ್ಳು ಹಿಡಿದು ಊರೂರು ತಿರುಗಲು ಶುರುಮಾಡಿದಳು.

ನಾನು: ಮಳ್ಳು ಹಿಡೀತು ಅಂತ ಹೇಗೆ ಗೊತ್ತಾಗತ್ತೆ?
ಅಪ್ಪ: ಏನೇನೋ ಮಾತಾಡ್ತಿತ್ತು. ಅಡುಗೆ ಮಾಡುವುದನ್ನು ನಿಲ್ಲಿಸಿದ್ಲು. ಮಕ್ಕಳ ಮೇಲೆ ನಿಗಾ ಇರಲಿಲ್ಲ. ಒಂದ್ಸಲ ನಿನ್ನ ಅತ್ತೆಯನ್ನ ಸೀಗೆ ಹಿಂಡಿನಲ್ಲಿ ಎಸೆದು ಬಂದಳು. ಅದರೊಳಗೆ ಮನುಷ್ಯ ಮಾತ್ರದವರು ಹೋಗಲು ಸಾಧ್ಯವೆ? ಮಗು ಕೂಗುವುದು ಕೇಳುತ್ತದೆ, ಒಳಗೆ ಹೋಗಲು ಆಗುತ್ತಿಲ್ಲ. ಅಂತೂ ನಿನ್ನ ದೊಡ್ಡಪ್ಪ ಜೀವದ ಗೊಡವೆ ಬಿಟ್ಟು ದಾರಿ ಮಾಡಿಕೊಂಡು ಹೋಗಿ ಶಿಶುವನ್ನು ಹೆಕ್ಕಿಕೊಂಡು ಬಂದ. ಅವನ ಮೈಗೆ ಆದ ಮುಳ್ಳಿನ ಗೀರುಗಾಯ ಗುಣವಾಗಲು
ತಿಂಗಳೇ ಹಿಡಿಯಿತು.

ನಾನು: ಓ… ಅದಕ್ಕೇ ಸಣ್ಣ ಅತ್ತೆಯ ಮುಖದ ಮೇಲೆಲ್ಲಾ ಕಲೆಗಳಿರೋದಾ?

ಅಪ್ಪ: ಅದು ಬೇರೆಯೇ ಕಥೆ. ಮನೆಯ ಚಾವಡಿಯ ಕೆಳಗೇ ಅವಲಕ್ಕಿ ಭತ್ತ ಹುರಿಯುವ ಒಲೆಯಿತ್ತು. ಅಮ್ಮನ ಕೈಲಿದ್ದ ಮಗು ಅಂಬೆಗಾಲಿಟ್ಟುಕೊಂಡು ಚಾವಡಿಯ ಬದಿಗೆ ಹೋಗಿ ಉರುಳಿ ಬೆಂಕಿಯಿರುವ ಒಲೆಯಲ್ಲಿ ಬಿತ್ತು. ಆದರೂ ಇವಳು ಕಲ್ಲಿನಂತೆಯೇ ಕುಳಿತೇ ಇದ್ದಳು. ಸುಟ್ಟ ಕಲೆ ಮುಖದ ಮೇಲೆ ಶಾಶ್ವತವಾಗಿ ಉಳಿದುಹೋಯಿತು. ಅದರ ಮೇಲೆ ಅವಳ ಕೈಗೆ ಮಗುವನ್ನು ಕೊಡುವುದನ್ನೇ ನಿಲ್ಲಿಸಿದೆವು.

ನಾನು: ಅಮ್ಮನಿಗೆ ಮಳ್ಳುಹಿಡಿದರೆ ಎಷ್ಟು ಕಷ್ಟ ಅಲ್ಲವಾ?

ಅಪ್ಪ: ಕಷ್ಟ? ಅದು ಹೇಳಿ ಮುಗಿಸುವುದಲ್ಲ ಮಗಾ. ಒಂದಿನ ಏನು ಮಾಡಿದ್ದಳು ಗೊತ್ತಾ? ದೇವರ ಕೋಣೆಯಲ್ಲಿ ಬಾಗಿಲು ಮುಚ್ಚಿಕೊಂಡು ಶಿಶುವಿಗೆ ದೇವರ ಚಂಬಿನಲ್ಲಿದ್ದ ಅಷ್ಟೂ ನೀರನ್ನು ಮೂಗು ಹಿಡಿದು ಬಾಯಿತೆಗೆಸಿ ಕುಡಿಸಿದ್ದಳು. ಬಾಗಿಲು ಒಡೆದು ತೆಗೆಯುವಾಗ ಮಗುವಿನ ಹೊಟ್ಟೆಮೂಗು ನೋಡುತ್ತಿತ್ತು. ಈರಮ್ಮ ಬಂದು ಮಗುವನ್ನು ಕವುಚಿ ಹಾಕಿ ನೀರು ಕಾರಿಸಿ, ಮಗುವನ್ನು ಬದುಕಿಸಿದಳು. ಅಂತೂ ನಿನ್ನ ಅತ್ತೆಗೆ ಆಯುಷ್ಯವಿತ್ತು, ಬದುಕಿದಳು.
ನಾನು: ಅಜ್ಜ ಏನು ಮಾಡ್ತಿದ್ದ? ಅವನು ಹೇಳಿದರೂ ಕೇಳ್ತಿರಲಿಲ್ಲವಾ?

ಮನೆಯ ಚಾವಡಿಯ ಕೆಳಗೇ ಅವಲಕ್ಕಿ ಭತ್ತ ಹುರಿಯುವ ಒಲೆಯಿತ್ತು. ಅಮ್ಮನ ಕೈಲಿದ್ದ
ಮಗು ಅಂಬೆಗಾಲಿಟ್ಟುಕೊಂಡು ಚಾವಡಿಯ ಬದಿಗೆ ಹೋಗಿ ಉರುಳಿ ಬೆಂಕಿಯಿರುವ ಒಲೆಯಲ್ಲಿ ಬಿತ್ತು. ಆದರೂ ಇವಳು ಕಲ್ಲಿನಂತೆಯೇ ಕುಳಿತೇ ಇದ್ದಳು. ಸುಟ್ಟ ಕಲೆ ಮುಖದ ಮೇಲೆ ಶಾಶ್ವತವಾಗಿ ಉಳಿದುಹೋಯಿತು.

ಅಪ್ಪ: ನಿನ್ನಜ್ಜನನ್ನು ನೀನೇ ನೋಡುತ್ತಿರುವಿಯಲ್ಲ ಈಗ. ಹೊತ್ತುಹೊತ್ತಿಗೆ ತನ್ನ ಹೊಟ್ಟೆಗಾದರೆ ಆಯ್ತು. ಬೇರೆಯವರ ಉಸಾಬರಿ ಅವನಿಗೆ ಬೇಡ. ಮೊದಮೊದಲು ಅಮ್ಮನ ಹುಚ್ಚು ಬಿಡಿಸುವೆನೆಂದು ನಾಗರಬೆತ್ತದಿಂದ ಮೈಮುರಿಯುವಂತೆ ಬಾರಿಸುತ್ತಿದ್ದ. ಮತ್ತೆ ಅವಳು ಹೆದರ‍್ತಾಳಾ? ಬಾಯಗತ್ತಿ ಹಿಡಿದುಕೊಂಡು ಅಜ್ಜನನ್ನು ಕಡಿಯಲಿಕ್ಕೇ ಹೋಗುತ್ತಿದ್ದಳು. ಅಜ್ಜ ಅವಳ ಕಣ್ಣುತಪ್ಪಿಸಿ ತಿರುಗುತ್ತಿದ್ದ.

ನಾನು: ಮತ್ತೆ? ಹಾಗೆ ಸತ್ತು ಹೋದಳಾ?

ಅಪ್ಪ: ಆರು ವರ್ಷ ಇದ್ದಳು. ಮತ್ತೆ, ಮತ್ತೆ ಮನಸ್ಸು ಬಂದಲ್ಲಿಗೆ ಓಡಿಹೋಗ್ತಿದ್ದಳು. ಕಂಡವರೆಲ್ಲ ಕಾಲಿಗೆ ಕೋಳ ಹಾಕಿ ಮನೆಯಲ್ಲಿ ಕೂರಿಸಿ ಎನ್ನುತ್ತಿದ್ದರು. ಹೆತ್ತಬ್ಬೆಗೆ ಹಾಗೆ ಮಾಡಬಹುದೆ ಹೇಳು? ನಾವೇ ಅವಳನ್ನು ಹಗಲುರಾತ್ರಿ ಕಾಯ್ತಿದ್ದೆವು. ದೊಡ್ಡತ್ತೆಯರೆಲ್ಲ ಮದುವೆಯಾಗಿ ಹೋಗಿದ್ದರು. ಇರುವ ಹೆಣ್ಣುಮಕ್ಕಳು ತೀರ ಚಿಕ್ಕವರು. ಅಡುಗೆ ಮಾಡಲೂ ಹೆಣ್ಣು ಜೀವವಿರಲಿಲ್ಲ. ಆಗಿನ ಪರಿಸ್ಥಿತಿಯನ್ನು ಈಗ ನೆನೆದರೂ ಹೆದರಿಕೆಯಾಗುತ್ತದೆ. (ಅಪ್ಪನ ಗಡಸು ದನಿ ಈಗ ಮೃದುವಾಗುತ್ತ ಬಂದಿತ್ತು) ಅದೊಂದಿನ ಅಮ್ಮ ಎಲ್ಲೂ ಕಾಣಲಿಲ್ಲ. ಮೂರು ದಿನ ಹುಡುಕಿದರೂ ಪತ್ತೆಯಿಲ್ಲ. ಅಂತೂ ಮೂರನೇ ದಿನದ ಕೊನೆಯಲ್ಲಿ ಪಕ್ಕದೂರಿನ ಗುಡ್ಡದ ಮೇಲೆ ಮೈಮೇಲೊಂದು ತುಂಡುಬಟ್ಟೆಯೂ ಇಲ್ಲದೇ ಮಲಗಿದ್ದಳು. ನೋಡಿ ದಂಗಾದ ನಾನು ನನ್ನ ಬಟ್ಟೆಯನ್ನು ಬಿಚ್ಚಿ ಹೊದೆಸಿ, ಮನೆಗೆ ಕರೆತರಲು ನೋಡಿದೆ. ಬರಲು
ಒಪ್ಪಲೇ ಇಲ್ಲ. ರಾತ್ರಿ ಬೇರೆ ಆಗ್ತಿತ್ತು. ಬಾ ಎಂದು ಕೈಹಿಡಿದು ಎಳೆದೆ. ಸಿಟ್ಟಿನಲ್ಲಿನನ್ನ ಕೈ ಕಚ್ಚಿಬಿಟ್ಟಳು. ಪ್ರಾಯದ ಉರಾಬು ನನಗೆ. ತೆಗೆದು ನಾಲ್ಕೇಟು ಬಿಟ್ಟೆ. (ಅಪ್ಪನ ದನಿಯಲ್ಲಿ ದುಃಖ ಮಡುಗಟ್ಟಿತ್ತು)  ʻತಮಾ, ನೀನೂ ಹೊಡೆತ್ಯೇನೊ? ಆತುಬಿಡುʼ ಎಂದವಳೇ ಮರುಮಾತಿಲ್ಲದೇ ನನ್ನ ಹಿಂದೆ ಬಂದಳು. ಅವತ್ತು ಊಟಮಾಡಿ
ಮಲಗಿದವಳು ಮರುದಿನ ಏಳಲೇ ಇಲ್ಲ. ಅಷ್ಟು ವರ್ಷ ನೋಡಿಕೊಂಡು ಕೊನೆಯಲ್ಲಿ ಹೊಡೆದುಬಿಟ್ಟೆ ನೋಡು……

ಅಪ್ಪನ ಅಳುವನ್ನು ಅದೇ ಮೊದಲ ಬಾರಿಗೆ ನೋಡಿದ್ದು ನಾನು. ಅಜ್ಜಿಯ ಹೆಸರು ತೆಗೆದರೆ ಸಾಕು, ಅಪ್ಪ ಯಾವಾಗಲೂ ಮೃದುವಾಗುತ್ತಿದ್ದರು. ರುಚಿಯಾದ ಅಡುಗೆಯನ್ನೋ, ಚಂದದ ಸೀರೆಯನ್ನೋ, ಉದ್ದವಾದ ಜಡೆಯನ್ನೋ, ಘಮಘಮಿಸುವ ಹಲಸಿನ ಹಣ್ಣನ್ನೋ ಕಂಡಾಗಲೆಲ್ಲ ತನ್ನಮ್ಮನನ್ನು ನೆನಪಿಸಿಕೊಳ್ಳುತ್ತಿದ್ದರು.
ಈ ಘಟನೆ ನಡೆದು ಸುಮಾರು ವರ್ಷಗಳವರೆಗೆ ನಾನು ಅಜ್ಜಿಯ ಬಗ್ಗೆ ಮತ್ತೆ ವಿಚಾರಿಸಿರಲೇ ಇಲ್ಲ. ಸ್ವಲ್ಪ ದೊಡ್ಡವಳಾದ ಮೇಲೆ ಅಮ್ಮನಲ್ಲಿ ಅಜ್ಜಿಯ ಮಳ್ಳಿನ ಬಗ್ಗೆ ಮತ್ತೆ ಕೇಳಿದ್ದೆ. ಕಡೆಯುವ ಕಲ್ಲಿನಲ್ಲಿ ದೋಸೆಗೆ ಹಿಟ್ಟು ರುಬ್ಬುತ್ತಿದ್ದ ಅಮ್ಮ ಇದ್ದಕ್ಕಿದ್ದಂತೆ ಕಲ್ಲನ್ನು ಜೋರಾಗಿ ತಿರುಗಿಸುತ್ತ, “ಮಳ್ಳು ಹಿಡೀದೆ ಇರ್ತಾ ಮತ್ತೆ. ವರ್ಷಕ್ಕೊಂದರಂತೆ ಹದಿನೆಂಟು ಮಕ್ಕಳು, ಮನೆ ತುಂಬಾ ಆಳುಕಾಳುಗಳು, ಕೊಟ್ಟಿಗೆಯಲ್ಲಿ ತುಂಬಿರುವ ದನಕರುಗಳು, ಆ ಕಾಲದಲ್ಲಿ ಎರಡೆರಡು ಎಮ್ಮೆ
ಬೇರೆ ಇತ್ತಂತೆ. ಜತೆಯಲ್ಲಿ ಮನೆಗೆ ಬಂದು ಹೋಗುವವರು… ಎಲ್ಲರನ್ನೂ ಸುಧಾರಿಸಬೇಕು. ಯಾರನ್ನು ಬೇಕಾದರೂ ಸುಧಾರಿಸಬಹುದು, ಈ ನಿನ್ನ ಅಜ್ಜನನ್ನು? ಗೊಜ್ಜಿಗೆ ಮೂರು ಮೆಣಸು ಹಾಕಿದರೆ ಚಪ್ಪೆ, ನಾಲ್ಕು ಹಾಕಿದರೆ ಖಾರ!

ಬಾಯಂತೂ ಬಂಬಾಯಿ ನೋಡು. ಇಡೀ ಊರಿಗೆ ಕೇಳುವಂತೆ ಬೈಯ್ಯುವುದೆ. ಇವರೆಲ್ಲರ ನಡುವೆ ಅಷ್ಟು ವರ್ಷ ಮಳ್ಳು ಹಿಡಿಯದೇ ಇದ್ದದ್ದೇ ದೊಡ್ಡ ಪುಣ್ಯ” ಎನ್ನುತ್ತಾ ಮತ್ತಿಷ್ಟು ಜೋರಾಗಿ ಕಲ್ಲನ್ನು ತಿರುಗಿಸಿದಳು.

ನಾನು ತೊದಲುತ್ತಾ, “ಮತ್ತೆ ಕೀಳುದೆವ್ವ? ಕಾಲಿಗೆ ಮುಳ್ಳು?” ಎಂದೆ. ಅಮ್ಮ ಚೂರು ಸಮಾಧಾನದಿಂದ ಹೇಳಿದಳು, “ಅದೆಲ್ಲ ಆ ಕಾಲದಲ್ಲಿ ಜನರು ಕಟ್ಟುತ್ತಿದ್ದ ಕತೆಗಳು ಮಗಾ. ಮೊದಲು ಇಡಿಯ ಈ ಊರೇ ನಿನ್ನ ಅಜ್ಜನದಾಗಿತ್ತಂತೆ. ಕುಳಿತಲ್ಲೇ ದರಬಾರು ನಡೆಸಿ ರೂಢಿ ಅವರಿಗೆ. ಅದೇನೋ ಕಾನೂನು ಬಂದು ಜಮೀನೆಲ್ಲ ಕೃಷಿಮಾಡುವವರ ಪಾಲಾಯಿತು. ಉಳಿದವರೆಲ್ಲ ಗೇಣಿ ಬಿಡಿಸಿ ಬಚಾವಾದರು. ನಿನ್ನಜ್ಜ ಮಾತ್ರ ನನ್ನ ಜಮೀನು ತಿಂದರೆ ದೇವರು ನೋಡಿಕೊಳ್ತಾನೆ ಅಂತ ತಿರುಗಿದ.
ಇದ್ದಕ್ಕಿದ್ದಂತೆ ಬಂದ ಬಡತನ, ಕಾಡುವ ಬಾಣಂತನ, ನೂರಾರು ಕೆಲಸಗಳು ಇವೆಲ್ಲ ಸೇರಿ ಅಜ್ಜಿಗೆ ಮಾನಸಿಕ ರೋಗ ಬಂದಿರಬಹುದು ಮಗಾ. ಸರಿಯಿದ್ದಾಗ ಗಂಡಾಳುಗಳು ಹೊರಲಾಗದಂತಹ ಹುಲ್ಲಿನ ಹೊರೆ ತರುತ್ತಿದ್ದಳಂತೆ ನಿನ್ನ ಅಜ್ಜಿ.

ಕಾಲಿಗೆ ಮುಳ್ಳು ಚುಚ್ಚಿ ನಡೆಯಲಾಗದಾಗ ಕೆಲಸದ ಹೊರೆ, ನೋವಿನ ಬರೆ ಎಲ್ಲ ಕಾಡಿ ಮಳ್ಳಿಯೇ ಆಗಿಹೋದಳೇನೊ?” ಎಂದಳು.

ಅಜ್ಜಿಗೆ ಹನ್ನೆರಡು ಮಕ್ಕಳು ಇದ್ದುದು ನನಗೆ ಗೊತ್ತಿತ್ತಾದರೂ ಹದಿನೆಂಟು ಮಕ್ಕಳೆಂಬ ಸತ್ಯ ಅಂದೇ ತಿಳಿದದ್ದು. ಅಮ್ಮನಲ್ಲಿ ಕೇಳಿದಾಗ ಅಮ್ಮ ಹೇಳಿದ್ದಳು, “ಆಗೆಲ್ಲ ಹುಟ್ಟಿದವರೆಲ್ಲ ಎಲ್ಲಿ ಬದುಕುತ್ತಿದ್ದರು ಮಗಾ? ಅವಳಿ-ಜವಳಿ ಮಕ್ಕಳಿಂದ ಹಿಡಿದು ಬೀಸುವ ಕಲ್ಲಿನವರೆಗೂ ಹುಟ್ಟಿದ್ದರು ಅಂತ ಇವರೆಲ್ಲ ಕಥೆ ಹೇಳ್ತಾರಪ್ಪಾ. ಮನುಷ್ಯರಿಗೆಲ್ಲಿಯಾದರೂ ಬೀಸುವ ಕಲ್ಲು ಹುಟ್ತದಾ? ವರ್ಷ, ವರ್ಷ ಹೆತ್ತು ಮಾಂಸದ ಮುದ್ದೆಯಂತಹ ಮಗು ಹುಟ್ಟಿರಬಹುದೇನೊ? ಇವರು ಬಸುರಿಯಿದ್ದಾಗ ಬೀಸುವ ಕಲ್ಲಿನ ಮೇಲೆ ಕುಳಿತಿದ್ದಕ್ಕೆ ಬೀಸುವ ಕಲ್ಲು ಹುಟ್ಟಿತ್ತು ಅಂತಾರೆ. ಹಿರಿಮನೆಯಲ್ಲಿ ನೀನೇ ನೋಡಿರುವೆಯಲ್ಲ, ಚಾವಡಿಯಲ್ಲಿಯೇ ಬೀಸುವ ಕಲ್ಲಿದೆ. ಅದರ ಮೇಲೆ ಕುಳಿತು ನಿನ್ನಜ್ಜಿ ಮಜ್ಜಿಗೆ ಕುಡಿಯುತ್ತಿದ್ದಳಂತೆ. ಇವೆಲ್ಲಕ್ಕಿಂತ ಅವಳನ್ನು ಕಾಡಿದ್ದು ನಿನ್ನ ದೊಡ್ಡಪ್ಪನ ಸಾವು. ಮದುವೆಗೆ ಬಂದಿದ್ದ ಮಗ ಸೌದೆ
ತರಲೆಂದು ಕಾಡಿಗೆ ಹೋದವನು ಕಾಲುಜಾರಿ ಬಿದ್ದು ಸತ್ತುಹೋದ. ಅದು ಅವರಿಗೆ ಬಹಳ ನೋವುಂಟುಮಾಡಿತ್ತು ಅನಿಸ್ತದೆ. ಎಲ್ಲ ಸೇರಿ ಮಳ್ಳು ಅಂತಾಗಿ ತನ್ನ ಜೀವನ ಮುಗಿಸಿದಳು.”

ದೊಡ್ಡಪ್ಪನ ಸಾವಿನ ವಿಷಯದಲ್ಲೂ ಹಾಗೆ, ಅಮ್ಮ ಮತ್ತು ಅಪ್ಪ ಹೇಳುತ್ತಿದ್ದ ಕತೆಗೆ ಹೋಲಿಕೆಯೇ ಇರಲಿಲ್ಲ. ಅಪ್ಪ ಹೇಳುವ ಪ್ರಕಾರ ದೊಡ್ಡಪ್ಪನಿಗೆ ಕಾಡಿನಿಂದ ಬರುವಾಗ ಮೃತ್ಯು ಹೊಡೆದಿತ್ತು. ಮೃತ್ಯು ಹೊಡೆದು ಬಿದ್ದವರು ಮತ್ತೆ ಏಳುವ ಪ್ರಮೇಯವೇ ಇರಲಿಲ್ಲ. ಮಲಗಿದಲ್ಲಿಯೇ ಮಲಗಿ, ಹಾಸಿಗೆ ಹುಣ್ಣಾಗಿ ತಿಂಗಳೆರಡರಲ್ಲಿ ತೀರಿಕೊಂಡಿದ್ದರು. ತನ್ನ ಹಾಸಿಗೆಯ ಸುತ್ತಲೂ ಕುಳಿತು ಅಳುವ ಅಣ್ಣ, ತಂಗಿಯರಿಗೆ “ಹೆದರಬೇಡಿ, ದೇವರಿದ್ದಾನೆ. ಬೇಗ ನನ್ನನ್ನು ಕರೆದುಕೊಂಡು ಹೋಗುವಂತೆ ಬೇಡಿಕೊಳ್ಳಿ” ಎನ್ನುತ್ತಿದ್ದರಂತೆ. ಅಮ್ಮ ಹೇಳುವ ಪ್ರಕಾರ, ಸೌದೆಯ ಭಾರ ಹೊತ್ತು ಕಾಲು ಜಾರಿದಾಗ ಕುತ್ತಿಗೆ ಮತ್ತು ಬೆನ್ನಿನ ಎಲುಬುಗಳು ಜಾರಿಹೋಗಿದ್ದವು. ಹಾಗಾಗಿ ಅವರಿಗೆ ಮತ್ತೆ ಏಳಲಾಗಲಿಲ್ಲ. ಡಾಕ್ಟರಿಗೆ ತೋರಿಸಬೇಕಿತ್ತು ಎಂದು ಅಪ್ಪನಲ್ಲಿ ನಾನೇನಾದರೂ ಹೇಳಿದರೆ ಅಪ್ಪ ಆ ಸಮಯದಲ್ಲಿ ಇಡಿಯ ಭೂಮಂಡಲದಲ್ಲಿಯೇ ಡಾಕ್ಟರ್” ಎನ್ನುವ ಮನುಷ್ಯರಿರಲಿಲ್ಲ ಎನ್ನುತ್ತಾರೆ! ಇವೆಲ್ಲದರ ನಡುವೆ ನಾನು ಮರೆತ ವಿಷಯವೆಂದರೆ ಅಪ್ಪನ ತಮ್ಮಂದಿರಲ್ಲಿ ಒಬ್ಬರು ಮಾತು ಬಾರದ ಮೂಕರಾಗಿದ್ದರು. ಅಜ್ಜಿಯನ್ನು ಎಲ್ಲರಿಗಿಂತ ಗಾಢವಾಗಿ ಪ್ರೀತಿಸುತ್ತಿದ್ದ ಆ ಚಿಕ್ಕಪ್ಪನಿಗೆ ಅಮ್ಮನ ಸಾವು ತಂದ ಆಘಾತ ಅದೆಂಥದ್ದೊ? ವಾಸನೆಯಿಂದಲೇ ಅಮ್ಮನ ಸೀರೆ ಯಾವುದು? ಎಂಬುದನ್ನವರು ಪತ್ತೆ ಹಚ್ಚಿ ಅದನ್ನೇ ಹೊದ್ದು ಮಲಗುತ್ತಿದ್ದರಂತೆ!

ಇವೆಲ್ಲವೂ ನನ್ನ ಮನೆಯ ಅಜ್ಜಿಯ ಬಗ್ಗೆ ನನಗೆ ತಿಳಿದ ವಿಷಯಗಳು. ಇದರಾಚೆಗೆ ಹೇಳಲು ಇನ್ನೇನು ಉಳಿದಿದೆ? ತೀರ ಅಗತ್ಯವಾದ ಕಾಲದಲ್ಲಿ ತಾಯಿಯನ್ನು ಕಳಕೊಂಡು ಅನುಭವಿಸಿದ ಮಕ್ಕಳ ಪಾಡು ಅವರ ಬದುಕಿನುದ್ದಕ್ಕೂ ತನ್ನ ಹೆಜ್ಜೆಗುರುತುಗಳನ್ನು ಮೂಡಿಸುತ್ತಲೇ ಇತ್ತು. ಎಲ್ಲರ ಮನಸ್ಸುಗಳನ್ನು ಹೆಣೆಯುವ ವಾತ್ಸಲ್ಯದ ದಾರವೊಂದು ತುಂಡಾಗಿ ಇಡಿಯ ಸಂಸಾರ ಒಡೆದು ಚೂರಾಗಿತ್ತು. ನನ್ನಜ್ಜಿಯ ಹೆಣ್ಣುಮಕ್ಕಳೆಲ್ಲರೂ ಮುಂದೆ ಬಂಡಾಯಗಾರರಾಗಿ, ಜಗದ ಕಣ್ಣುಗಳಿಗೆ ಕೆಂಡದುಂಡೆಗಳಾಗಿ, ತಮ್ಮನ್ನೇ ದಹಿಸಿಕೊಳ್ಳುತ್ತಾ, ಸುಟ್ಟಷ್ಟು ಗಟ್ಟಿಯಾಗುತ್ತ, ಬದುಕು ಕಟ್ಟಿಕೊಳ್ಳುವಲ್ಲಿ ಅಜ್ಜಿಯ ಬದುಕಿನ ವಿಷಾದದ ಕಿಡಿಗಳು ಸದ್ದಿಲ್ಲದೇ ತಮ್ಮ ಕೊಡುಗೆಯನ್ನು ನೀಡಿವೆ. ಇಂದಿಗೂ ನನಗೆ ಅಜ್ಜಿಯೆಂದರೆ ಮೈಯ್ಯ ಅರಿವೆಯ ಹಂಗು ತೊರೆದು, ದೂರದ ಗುಡ್ಡದ ಮೇಲೆ ಅಂಗಾತ ಮಲಗಿದ ತುಂಬಿದ ಮೈಯ್ಯ ಹೆಣ್ಣು ರೂಪವೊಂದು ನೆನಪಿಗೆ ಬರುತ್ತದೆ!

ನನ್ನ ಅಮ್ಮನ ಅಮ್ಮ ನಾನು ಹುಟ್ಟುವಾಗ ಇದ್ದರಾದರೂ ನನಗೆ ತಿಳುವಳಿಕೆ ಬರುವ ಮೊದಲೇ ಮರಣಿಸಿದ್ದರು. ಅಪ್ಪನ ಊರಿಗೆ ಹೋಲಿಸಿದರೆ ತೀರ ನಗರ ಪ್ರದೇಶವೆನ್ನಬಹುದಾದ ಅಮ್ಮನ ತವರಿನಲ್ಲಿ ಅಷ್ಟೇನೂ ಕಷ್ಟದ ಪರಿಸ್ಥಿತಿಯಿರಲಿಲ್ಲ. ಅಲ್ಲಿಯೂ ಭೂಮಿಯನ್ನು ಕಳಕೊಂಡ ಭೂಮಾಲಿಕನಾದ ಅಜ್ಜ ಮನೆಯ ಎಲ್ಲ ವಿಶೇಷ ಕಾರ್ಯಗಳಿಗೂ ಅಜ್ಜಿಯ ಒಡವೆಗಳನ್ನು ಕರಗಿಸುತ್ತಲೇ ಹೋದನಂತೆ. ಸಾಲಲ್ಲಿ ನಾಲ್ಕು ಗಂಡು, ನಾಲ್ಕು ಹೆಣ್ಣು ಹೆತ್ತಮೇಲೆ ನನ್ನಜ್ಜಿ ಕೋಣೆಗೆ ಕದವಿಕ್ಕಿ ಮಲಗಿ ಮತ್ತೆ ಮಕ್ಕಳಾಗದಂತೆ ನೋಡಿಕೊಂಡಳಂತೆ. ಶ್ರೀರಾಮನಂತಹ ಅಜ್ಜ ಇವೆಲ್ಲವನ್ನೂ ಮೌನವಾಗಿ ಸಹಿಸಿಕೊಂಡಿರಲು ಮದುವೆಯಾಗುವಾಗ ಅಜ್ಜಿ ತಂದ ಮಣಭಾರದ ಒಡವೆಗಳೇ ಕಾರಣವೇನೋ ಎಂಬುದು ನನ್ನ ಗುಮಾನಿ! ಸಿಟ್ಟು ಬಂದಾಗಲೆಲ್ಲ ತನ್ನ ಮಕ್ಕಳ ತಲೆಯನ್ನು ಗೋಡೆಗೆ ಚಚ್ಚುತ್ತಿದ್ದ ಅಜ್ಜಿ ಅಷ್ಟೇನೂ ದಯಾಮಯಿಯಲ್ಲದಿದ್ದರೂ, ಹೆಣ್ಣು ಮಕ್ಕಳಿಗೆ ಹೊಟ್ಟೆತುಂಬಾ ಊಟ ಹಾಕಿದರೆ ಹಾದರಕ್ಕಿಳಿಯುತ್ತಾರೆಂದು ಅರೆಹೊಟ್ಟೆಯಲ್ಲಿ ಬೆಳೆಸುವ ಅಂದಿನ ತಾಯಂದಿರಷ್ಟು ಕ್ರೂರಿಯಾಗಿರಲಿಲ್ಲವೆಂಬುದು ಅಮ್ಮನ ಅಂಬೋಣ. ಇಂತಹ ಅಜ್ಜಿ, ತನ್ನ ದೊಡ್ಡ ಮಗಳ ಉಬ್ಬಸಕ್ಕೆ ಮದ್ದಿನ ಗಿಡ ಹುಡುಕಲು ಕಾಡಿಗೆ ಹೋಗಿ, ಅಲ್ಲಿ ದಾರಿತಪ್ಪಿ ಅಲೆದು ನಡುರಾತ್ರಿಯಲಿ ಮನೆಸೇರಿದ ಘಟನೆಯನ್ನು ಅಮ್ಮ ಕೊನೆಯವರೆಗೂ ನೆನಪಿಸಿಕೊಳ್ಳುತ್ತಿದ್ದರು. ಆಗೆಲ್ಲ ಹೀಗೆ ಕಾಡುಪಾಲಾದವರಲ್ಲಿ ಹೆಚ್ಚಿನವರು ಕಾಡುಮೃಗಗಳ ಬಾಯಿಗೆ ತುತ್ತಾಗುತ್ತಿದ್ದರು. ಅಜ್ಜಿಬದುಕಿ ಬಂದದ್ದು, ತನ್ನ ಮೂರೂ ಬಾಣಂತನವನ್ನು ಅವಳೇ ಮಾಡಿದ್ದು ಎಲ್ಲವನ್ನೂ ಅಮ್ಮ ಸದಾ ನೆನಪಿಸಿಕೊಳ್ಳುತ್ತಿದ್ದರು. ಬಾಣಂತಿಯನ್ನು ಹನ್ನೆರಡು ದಿನ ಮೈಲಿಗೆಯೆಂದು ಬಚ್ಚಲಿನಲ್ಲಿ ಮಲಗಿಸುತ್ತಿದ್ದ ನಮ್ಮೂರಿನಲ್ಲಿ ಮಕ್ಕಳನ್ನು ಹೆತ್ತಿದ್ದರೆ ತಾನು ಬದುಕುಳಿಯುವ ಭರವಸೆ ಅಮ್ಮನಿಗೆ ಇರಲಿಲ್ಲವೆಂದು ಅನಿಸುತ್ತದೆ.

ಮಕ್ಕಳನ್ನು ಕಳಕೊಳ್ಳುವ ನೋವನ್ನು ಅಂದಿನ ತಾಯಂದಿರು ಸೆರಗಿನಲ್ಲಿ ಕಟ್ಟಿಕೊಂಡೇ ಬರುತ್ತಿದ್ದರೆಂದು ಕಾಣುತ್ತದೆ. ಅಮ್ಮನ ಅಣ್ಣನೊಬ್ಬ ಹೀಗೆಯೇ ದುರಂತ ಮರಣವನ್ನು ಕಂಡಿದ್ದ. ಮೆಟ್ರಿಕ್ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿಯೇ ಹೆಚ್ಚು ಅಂಕ ಪಡೆದ ಅವನ ಸಂದರ್ಶನ ಆಕಾಶವಾಣಿಯಲ್ಲಿ ಬಂದಿತ್ತಂತೆ. ಅದರಲ್ಲಿ ಮಾವ ತಾನು ವೈದ್ಯನಾಗುವ ಆಸೆಯನ್ನು ವ್ಯಕ್ತಪಡಿಸಿದ್ದರಂತೆ. ಇದನ್ನು ಕೇಳಿದ ದೂರದೂರಿನ ಗಂಡುಮಕ್ಕಳಿಲ್ಲದ ಸಿರಿವಂತರೊಬ್ಬರು ಅವರನ್ನು ಓದಿಸಲು ಮುಂದೆ ಬಂದರಂತೆ. ಮಾವನನ್ನು ತನ್ನ ಮನೆಯಳಿಯನನ್ನಾಗಿ ಮಾಡಿಕೊಳ್ಳುವ ಬಯಕೆ ಅವರದ್ದು. ಅದರಂತೆ ಮಾವ ವಿಜ್ಞಾನ ವಿಭಾಗದಲ್ಲಿ ಓದಲು ಧಾರವಾಡವನ್ನು ಸೇರಿದರು. ಅಲ್ಲಿನ ಹವೆ ಒಗ್ಗದೇ ಜ್ವರ ಬಂದು, ಜಡ್ಡಾಗಿ ಟೈಪಾಯಿಡ್ ರೋಗಕ್ಕೆ ಬಲಿಯಾದರಂತೆ. ಅಲ್ಲಿಂದ ಕಾಗದ ಬಂದು ಮಾವನನ್ನು ಕರೆತರಲು ಹೋಗುವಾಗಲೇ ಅವರು ಬಹಳ ಬಳಲಿದ್ದರಂತೆ. ಆಗೆಲ್ಲ ಓಡಾಡಲು ಬಸ್ಸುಗಳು ಹೇರಳವಾಗಿರಲಿಲ್ಲವಾಗಿ ನಡುರಾತ್ರಿಯಲ್ಲಿ ಧಾರವಾಡದಿಂದ ಗೋಕರ್ಣಕ್ಕೆ ತಲುಪಿದರಂತೆ. ನೀರಿನ ಬಾಟಲ್ಲುಗಳು ಚಾಲ್ತಿಯಿಲ್ಲದ ಆ ಕಾಲದಲ್ಲಿ ಬಾಯಾರಿಕೆಯಿಂದ ಬಳಲಿದ ಮಾವನಿಗೆ ಕಾಯಿಸಿದ ನೀರು ಬೇಕೆಂದು ಗೋಕರ್ಣದ ಎಷ್ಟೋ ಮನೆಗಳ ಬಾಗಿಲು ತಟ್ಟಿದರೂ ಸಿಗದೇ, ಕೆರೆಯ ನೀರನ್ನೇ ಕುಡಿಸಬೇಕಾಯಿತಂತೆ. ಇದರಿಂದ ರೋಗ ಉಲ್ಭಣಿಸಿ ಮಾವ ತೀರಿಕೊಂಡರೆಂದು ನನ್ನ ಇನ್ನೊಬ್ಬ ಮಾವ ನೆನಪಿಸಿಕೊಳ್ಳುತ್ತಿದ್ದರು.

ತನ್ನ ತಮ್ಮನಿಗೆ ಬಿಸಿನೀರು ಕೊಡದ ಆ ಊರಿಗೆಂದಿಗೂ ಕಾಲಿಡುವುದಿಲ್ಲವೆಂದು ಅವರು ಪ್ರತಿಜ್ಞೆಯನ್ನೂ ಮಾಡಿದ್ದರು. ಜ್ವರದ ಸನ್ನಿಯಲ್ಲಿತನ್ನ ಮಗ ಹತ್ತಿರಕ್ಕೆ ಬಂದವರ ನಾಡಿಯನ್ನು ಪರೀಕ್ಷಿಸುತ್ತಾ, ಔಷಧಗಳನ್ನು ಬರೆದುಕೊಡುವಂತೆ ನಟಿಸುತ್ತಿದ್ದುದನ್ನು ಅಜ್ಜಿ ತನ್ನ ಕೊನೆಯ ದಿನಗಳವರೆಗೂ ಹನಿಗಣ್ಣಾಗಿ ನೆನಪಿಸಿಕೊಳ್ಳುತ್ತಿದ್ದರಂತೆ. ನನ್ನ ಅಜ್ಜನ ಮನೆಯಲ್ಲಿ ಉಳಿದ ಮಾವಂದಿರೆಲ್ಲಮೆಟ್ರಿಕ್ ದಾಟಲಾರದೇ ವಿದ್ಯಾಭ್ಯಾಸ ಕೊನೆಗೊಳಿಸಿದ್ದರು. ಯಮರಾಜ ಬರುವಾಗ ದೊಡ್ಡ ಕೊಡಲಿಯ ತಂದು ದೊಡ್ಡ ದೊಡ್ಡ ಮರವ ಕಡೀತಾನೆ‟ ಎಂದು ಅಮ್ಮ ಜಿಲ್ಲೆಗೇ ಮೊದಲ ಸ್ಥಾನಿಯಾದ ತನ್ನ ಅಣ್ಣನನ್ನು ನೆನಪಿಸಿಕೊಳ್ಳುತ್ತಿದ್ದಳು. ಎಲ್ಲ ತಂಗಿಯರನ್ನೂ ಶಾಲೆಗೆ ಕಳಿಸು ಎಂದು ಪ್ರತಿಸಲವೂ ತನ್ನಮ್ಮನಿಗೆ ಅವನು ಬರೆಯುತ್ತಿದ್ದ ಪತ್ರವನ್ನು ನೆನಪಿಸಿಕೊಂಡು ಕಣ್ಣಂಚನ್ನು ಒದ್ದೆ ಮಾಡಿಕೊಳ್ಳುತ್ತಿದ್ದಳು. ಅಣ್ಣನ ಮರಣದ ನಂತರ ಬಡತನ ಮತ್ತು ಮನೆಯವರ ನಿರ್ಲಕ್ಷದಿಂದಾಗಿ ಹೈಸ್ಕೂಲು ಮೆಟ್ಟಿಲು ಹತ್ತಲಾರದ ನನ್ನಮ್ಮತಾನೂ ಆ ಮಾವನಂತೆಯೇ ಬುದ್ಧಿವಂತೆಯಾಗಿದ್ದೆಎಂದು ಹೇಳುವುದಷ್ಟೇ ಅಲ್ಲ, ಆಗಾಗ ಅದನ್ನು ಸಾಬೀತುಪಡಿಸುತ್ತಲೂ ಇದ್ದಳು.

ವರದಕ್ಷಿಣೆಯೆಂಬ ಪೆಡಂಭೂತ ಗಹಗಹಿಸಿ ನಗುತ್ತಿದ್ದ ಆ ಕಾಲದಲ್ಲಿ ನಾಲ್ಕು ಹೆಣ್ಣುಮಕ್ಕಳ ಮದುವೆ ಮಾಡಲು ನನ್ನಜ್ಜಿ ತೀರ ಕಷ್ಟಪಟ್ಟಿದ್ದಳಂತೆ. ಅಜ್ಜ ಅವರೆಲ್ಲರ ಮದುವೆಗೆ ಮೊದಲೇ ಕಾಲವಾಗಿದ್ದರಿಂದ ಎಲ್ಲ ಜವಾಬ್ದಾರಿ ಅಜ್ಜಿಯ ಮೇಲಿತ್ತು. ಆದರೂ ಸರಕಾರಿ ನೌಕರಿಯನ್ನು ಹಿಡಿದಿದ್ದ ಗಂಡುಮಕ್ಕಳು ಅಜ್ಜಿಯನ್ನು ಕೊನೆಯವರೆಗೂ ಗೌರವದಿಂದ ಕಾಣುತ್ತಿದ್ದರು. ಹಾಗಾಗಿ ಅಪ್ಪನ ಅಮ್ಮನಿಗೆ ಬಂದ ದುರಂತ ಅಂತ್ಯ ಅಮ್ಮನ ಅಮ್ಮನದಾಗಿರಲಿಲ್ಲ.

ಹೀಗೆ ನಾನು ಕಾಣದ ನನ್ನ ಅಜ್ಜಿಯಂದಿರು ನನ್ನೊಳಗೆ ನನ್ನೊಂದಿಗೇ ಬೆಳೆದು ಬಂದಿದ್ದಾರೆ. ಹೆಣ್ಣುಲೋಕದ ಎಲ್ಲ ತಲ್ಲಣಗಳನ್ನು ನನ್ನೊಳಗೆ ಬೀಜರೂಪಿಯಾಗಿ ಮೊಳೆಯಿಸಿದ್ದಾರೆ. ಆದರೂ ನನ್ನನ್ನು ಅಜ್ಜಿಯ ವಾತ್ಸಲ್ಯದಿಂದ ಪೊರೆದಿದ್ದು ಮಾತ್ರ ನಮ್ಮೂರಿನ ಬಡ್ಕಜ್ಜಿ. ತನ್ನ ಐದನೆಯ ವಯಸ್ಸಿಗೆ ಗಂಡನನ್ನು ಕಳಕೊಂಡು ಜೀವನಪೂರ್ತಿ ಒಂಟಿಯಾಗಿಯೇ ಬದುಕಿದ ಅವಳಿಗೆ ನನ್ನನ್ನೂ ಸೇರಿಸಿದಂತೆ ನೂರಾರು ಮೊಮ್ಮಕ್ಕಳು. ಅರವತ್ತು ದಾಟಿದ ತನ್ನ ಗಂಡ ಮೂರನೆಯ
ಹೆಂಡತಿಯಾದ ತನ್ನನ್ನು ಹೆಗಲಮೇಲೆ ಕೂರಿಸಿಕೊಂಡು ಹೊಳೆದಾಟಿಸಿದ ನೆನಪು ಮಾತ್ರ ಅವಳಿಗಿತ್ತು, ಅವಳ ಮದುವೆಯ ಕಥೆಯನ್ನೂ ಹಾಸ್ಯವಾಗಿ ಹೇಳಿ ನಗಿಸಬಲ್ಲಷ್ಟು ಸ್ಥಿತಪ್ರಜ್ಞತೆ ಅವಳಿಗೆ ಅದೆಲ್ಲಿಂದ ಬಂದಿತ್ತೊ? ಅವಳ ಬದುಕಿನ ರೀತಿಗೆ ಊರಿನವರೆಲ್ಲರೂ ಶರಣೆನ್ನುತ್ತಿದ್ದರು. ನಾನು ತೀರ ಚಿಕ್ಕವಳಿರುವಾಗ ಅಮ್ಮ, ಅಪ್ಪ ಅವಳ ಮಡಿಲಿಗೆ ನನ್ನನ್ನು ಒಪ್ಪಿಸಿ, ಸೌದೆಗೆಂದು ಕಾಡಿಗೆ ಹೋದರೆ ಅಳುವ ನನ್ನ ಬಾಯಿಗೆ ಅವಳ ಬರಡು ಮೊಲೆಗಳನ್ನಿಟ್ಟು ಚೀಪಿಸುತ್ತಿದ್ದಳಂತೆ. ಅಪ್ಪನಿಲ್ಲದ ರಾತ್ರಿಗಳಲ್ಲಿ ನಮ್ಮ  ಅಮ್ಮನ ಧೈರ್ಯಕ್ಕೆಂದು ನಮ್ಮ ಮನೆಗೆ ಬರುವ ಅವಳು ಹೇಳಿದ ಕಥೆಗಳೇ ಇಂದಿಗೂ ನನ್ನನ್ನು ಕೈಹಿಡಿದು ಬರೆಸುತ್ತಿವೆ. ತನ್ನ ಮುಪ್ಪಿನಲ್ಲಿಯೂ ಬಂಧುವೊಬ್ಬರ ಅನಾಥಳಾದ ಮಗುವನ್ನು ಮನೆಗೆ ತಂದು ಬೆಳೆಸಿದ ಅವಳ ಅಂತಃಕರಣ ದೊಡ್ಡದು.

ತಾನು ಸಾಕಿ, ಬೆಳೆಸಿದ ಅಣ್ಣನ ಮಕ್ಕಳೆಲ್ಲ ತನ್ನನ್ನು ದೂರಮಾಡಿದರೂ,  ಯಾರನ್ನೂ ದೂರದೇ ಕೊನೆಯವರೆಗೂ ಸರಕಾರ ತನಗೆಂದು ಕೊಡುತ್ತಿದ್ದ ವೃದ್ಧಾಪ್ಯವೇತನದಲ್ಲಿಯೇ ಬದುಕಿದವಳು ಬಡ್ಕಜ್ಜಿ. ನೂರಾರು ಕತೆಗಳ ಮೂಲಕ ನನ್ನ ಭಾವಲೋಕವನ್ನು ಬೆಳಗಿದವಳು, ಸಾವಿರಾರು ಹಾಡುಗಳನ್ನು ದಣಿವಿರದೇ ಹಾಡುತ್ತಿದ್ದವಳು. ನಾನು ಹುಟ್ಟುವಾಗಲೂ, ಬೆಳೆಯುವಾಗಲೂ, ಹರೆಯದಲ್ಲಿಯೂ ಅಜ್ಜಿಯಾಗಿಯೇ ಇದ್ದು, ವಯಸ್ಸಿನ ಹಂಗುಮೀರಿ ಅದೆಷ್ಟೋ ವರ್ಷ ಬದುಕಿದವಳು. ಅಜ್ಜಿಯೆಂದರೆ ನನಗೆ ಬಡ್ಕಜ್ಜಿಯದೇ ನೆನಪು. ಅಜ್ಜಿಯಂದಿರ ಕತೆಯೆಂದರೆ ಅದು ಆ ಕಾಲದ ಕಥೆಯೂ ಹೌದು. ಜೀವವನು ಗಂಧದಂತೆಯೇ ತೇಯ್ದು ಬದುಕ ಕಟ್ಟಿದವರ ಕಥೆಯೂ ಹೌದು. ಇಂದು ನಿಂತು ನೋಡಿದರೆ ಅದೆಲ್ಲೋ ಘಟಿಸಿದ ಚಂದಮಾಮದ ಕಥೆಯಂತೆ ಕಾಣುವ ನನ್ನಜ್ಜಿಯರ ಕಥೆಗಳನ್ನು ನಿಜವೆಂದು ನಂಬಲು ಕಾಲ, ದೇಶಗಳ ಗಡಿಯನ್ನು ದಾಟಬೇಕು ನಾನು. ಅಂಥದೊಂದು ಯಾನದ ಗುರುತುಗಳು ಇವು.