ಇಂತಹ ಅದ್ಭುತ ಕವನಗಳನ್ನು ನಮಗಾಗಿ, ನಮ್ಮ ಓದಿಗಾಗಿ, ನಮ್ಮ ಹಾದಿಗೆ ಕಂದೀಲಾಗಿ ಉಳಿಸಿಟ್ಟು ಹೋಗಿದ್ದಾರೆ ನಿಸಾರರು. ಯಾಕೆ ಒಬ್ಬ ಕವಿ ನಮಗೆ ಮುಖ್ಯವಾಗುತ್ತಾರೆ? ಮತ್ತೆ ಮುಖ್ಯವಾಗಬೇಕು? ಎನ್ನುವ ಪ್ರಶ್ನೆಗಳಿಗೆ ಇಂತಹ ಬರಹ ಮತ್ತು ಸಂದರ್ಭಗಳು ನಮಗೆ ಉತ್ತರ ಕೊಡುತ್ತವೆ. ಒಬ್ಬ ಕವಿ ನೇರ ಪರಿಚಯವೇ ಇಲ್ಲದ ಅದೆಷ್ಟೋ ಹೃದಯಗಳನ್ನು ತನ್ನ ಅಮೂರ್ತ ಕೈಗಳಿಂದ ಸೋಕಬಲ್ಲ. ತನ್ನ ಅಷ್ಟೂ ಭಾವ ಲೋಕವನ್ನು ಪರಿಚಯಿಸಿ ನಮ್ಮನ್ನು ಹನಿಗಣ್ಣಾಗಿಸಬಲ್ಲ. ಅವನ ಬೌದ್ಧಿಕ ಇರುವಿಕೆ ಅಳಿದರೂ ಓದುಗರ ಹೃದಯದಲ್ಲಿ ಅವ ಸಾಮ್ರಾಟನೇ. ಅಂತಹ ಸಾಮ್ರಾಟರಾಗಿದ್ದ ನಿಸಾರರು ಪದವಿ ತ್ಯಾಗ ಮಾಡಿ ಅನಂತಲೋಕಕ್ಕೆ ಪ್ರಯಾಣಿಸಿದ್ದಾರೆ.
ಆಶಾ ಜಗದೀಶ್ ಅಂಕಣ

 

“ಹಲವೆನ್ನದ ಹಿರಿಮೆಯೇ ಕುಲವೆನ್ನದ ಗರಿಮೆಯೇ
ಸದ್ವಿಕಾಸ ಶೀಲ ನುಡಿಯ ಲೋಕಾಮೃತ ಸೀಮೆಯೇ
ಈ ವತ್ಸರ ನಿರ್ಮತ್ಸರ ಮನುದುದಾರ ಮಹಿಮೆಯೆ
ನಿತ್ಯೋತ್ಸವ ತಾಯಿ ನಿತ್ಯೋತ್ಸವ”
-ಕೆ. ಎಸ್. ನಿಸಾರ್ ಅಹ್ಮದ್

ಬಹುಶಃ ನಾನು ನಿಸಾರರ ಬಗ್ಗೆ ಕೇಳಿದ್ದು ಬಾಲ್ಯದಲ್ಲಿ. ನಿತ್ಯೋತ್ಸವ ಎನ್ನುವ ಆ ಸುಂದರ ಗೀತೆ ಮನೆಮನೆಯಲ್ಲೂ ಅನುರಣಿಸುತ್ತಿದ್ದ ಕಾಲ ಅದು(ಈಗಲೂ ಆ ಪ್ರಭಾವ ಕಮ್ಮೀ ಏನೂ ಆಗಿಲ್ಲ). ಆ ಕಾಲದಲ್ಲಿ ಆ ಹಾಡನ್ನು ಹಾಡದ ಯಾವ ಶಾಲೆಯಾಗಲಿ ಯಾವ ಮಕ್ಕಳಾಗಲಿ ಇರಲೇ ಇಲ್ಲವೇನೋ ಅನಿಸುತ್ತದೆ. ಅದೆಷ್ಟು ಚಂದ ಆ ಗೀತೆ. ಆಗ ನಾವು ಸೊರಬದಲ್ಲಿ ಇದ್ದೆವು. ಅಲ್ಲಿಂದ ಜೋಗ ಬಹಳ ಹತ್ತಿರ. ನಾನು ಚಿಕ್ಕಂದಿನಲ್ಲೇ ಬಹಳಷ್ಟು ಸರ್ತಿ ನೋಡಿದ್ದ ಜಾಗವದು. ಸಹ್ಯಾದ್ರಿಯ ಕಾಡು, ತುಂಗಾ ನದಿ, ನಿತ್ಯಹರಿದ್ವರ್ಣ ಕಾಡುಗಳು, ತೇಗ, ಗಂಧ… ಎಲ್ಲವೂ ನನಗೆ ಚಿರಪರಿಚಿತ. ಹಾಗಾಗಿಯೇ ಕಾಣುತ್ತದೆ ಈ ಗೀತೆ ಹೃದಯದೊಳಕ್ಕೇ ಇಳಿದದ್ದು ಮತ್ತು ಇಲ್ಲಿಯವರೆಗೂ ಉಳಿದು ಬಂದದ್ದು. ಇವತ್ತಿಗೂ ಆ ಹಾಡಿನ ಪ್ರತಿ ಸಾಲೂ, ಪ್ರತಿ ಪದವೂ ಬಾಯಿಪಾಠ ನನಗೆ. ಕನಸಿನಲ್ಲೂ ಉಸುರಬಲ್ಲಷ್ಟು.

ಇತ್ತೀಚೆಗೆ ಕವಿ, ಕಥೆಗಾರರಾದ ಸ.ರಘುನಾಥರು ಪದೇ ಪದೇ ನಿಸಾರರನ್ನು ನೆನೆಯುತ್ತಿದ್ದರು. ನಿಸಾರರ ಕವಿತೆಗಳನ್ನು ತೆಲುಗಿಗೆ ಅನುವಾದಿಸುತ್ತಿದ್ದೇನೆಂದು ಹೇಳುತ್ತಿದ್ದರು. ಇದನ್ನು ಕೇಳುವಾಗಲೆಲ್ಲಾ ನಿಸಾರರನ್ನು ನೋಡಬೇಕೆಂಬ ಹಂಬಲ ಹೆಚ್ಚಾಗುತ್ತಿತ್ತು. ಆದರೆ ಹೇಗೆ ಎಲ್ಲಿ ಗೊತ್ತಿಲ್ಲ. ನನಗದೇನೋ ಅವರೊಬ್ಬ ಚಿರಯುವಕನಂತೆ. ಒಂದಿನ ಖಂಡಿತ ಅವಕಾಶ ಸಿಕ್ಕೇ ಸಿಗುತ್ತದೆ ಎನ್ನುವ ಎಂಥದೋ ಭರವಸೆ. ಆದರೆ ಕವಿತೆಗಳನ್ನು ಕೈಮೇಲಿಟ್ಟು ಕಣ್ಮುಚ್ಚಿ ಚೇರಿನ ಹಿಂದಕ್ಕೆ ಒರಗಿಬಿಡುತ್ತಾರೆ ಮತ್ತೆ ತೆರೆಯದೆ ಎನ್ನುವ ಅನುಮಾನವೇ ಇರಲಿಲ್ಲ. ಹೊರಟರು. ಹೋಗೇ ಬಿಟ್ಟರು. ನೋಡಲೇಬೇಕೆನ್ನುವ ಹಂಬಲ ತೀವ್ರವಾಗುತ್ತಿದೆ. ಇನ್ನೆಲ್ಲಿಯ ನಿಸಾರರು! ಅನಂತ ಸಾಗರದ ಮೇಲೆ ತಮ್ಮ ಹಡಗಿನ ಲಂಗರು ಬಿಚ್ಚಿ ಹೊರಟೇ ಬಿಟ್ಟಿದ್ದಾರೆ. ತೀರವನ್ನು ತೀರದ ದಾಹದಿಂದ ನೋಡುತ್ತಿರುವ ನನಗೆ ಅವರನ್ನು ಸೇರುವ ದಾರಿಯಾಗಲೀ ವಿಳಾಸವಾಗಲೀ ಗೊತ್ತಿಲ್ಲ. ಅವರನ್ನು ತಲುಪಲಾಗದ ಅಕ್ಷರಗಳನ್ನು ಕಣ್ಣ ಹನಿಗಳಿಂದ ಬರಿದೆ ತೋಯಿಸುತ್ತಿದ್ದೇನಷ್ಟೇ.

“ಹೊತ್ತು ಉರಿದ ಹಿರಿಯಾಸೆ ನಂದಿತೋ
ಹಣತೆ ಹಿಡಿದ ದೀನ
ಸಂಗವಿರದೆ ಕಂಗೆಡುತಲಿರುವೆ
ನಡೆ ಹುಡುಕಿ ನಿಜದ ತಾಣ”
-(ಹಿರಿಯಾಸೆ) ಕೆ.ಎಸ್.ನಿಸಾರ್ ಅಹ್ಮದ್

ಈ ಕ್ಷಣಕ್ಕೆ ರೂಪಕವಾಗುತ್ತಿವೆ ಅವರದೇ ಈ ಸಾಲುಗಳು. ಈ ಕವಿತೆಗಳಾದರೂ ಏಕಿಷ್ಟು ನಿಷ್ಠುರ! ಅವರ ಸೌಮ್ಯ ಮೂರ್ತಿ, ನಿಷ್ಕಲ್ಮಷ ನೋಟ, ತೊಡುತ್ತಿದ್ದ ಸೂಟು… ಎಲ್ಲದರಲ್ಲು ಬಹಳ ಅಚ್ಚುಕಟ್ಟು ಅವರು. ಶಿಸ್ತಿನ ಸಿಪಾಯಿಯಂತಿದ್ದವರು. ತಮ್ಮ ಓರಗೆಯ ಮತ್ತು ಸಣ್ಣವರನ್ನು ಪ್ರಭಾವಿಸಿತ್ತಾ ಹುರಿದುಂಬಿಸುತ್ತಾ ನಡೆದವರು. ತಮ್ಮ ಆತ್ಮೀಯ ಮಾತುಗಳಿಂದ ಎಲ್ಲರ ಮನಸುಗಳಲ್ಲಿ ಉಳಿದುಬಿಟ್ಟವರು.

ನಿಸಾರರು ನವೋದಯ ಮತ್ತು ನವ್ಯದ ಸಂಧಿಕಾಲದಲ್ಲಿ ಬರೆಯುವಾಗ ಅವರ ಮುಂದೆ ಹಲವಾರು ಸವಾಲುಗಳಿದ್ದವು. ಅವನ್ನೆಲ್ಲಾ ತಮ್ಮ ಸರಳ ಮತ್ತು ಭಾಷೆಯ ವಿಶಿಷ್ಟ ಆಕೃತಿಗಳಿಂದ ಮೀರಿ ಮುಂದೆ ನಡೆದವರು ನಿಸಾರರು.

“ನಿಸಾರರ ಹೆಚ್ಚು ಕವನಗಳು ನವ್ಯದ ಸಂದರ್ಭದಲ್ಲೇ ಮೂಡಿಬಂದರೂ, ನವೋದಯದ ಶಬ್ದ ಲಾಲಿತ್ಯವನ್ನು, ನವ್ಯದ ಆತ್ಮಗತ ಅನುಭವದ ಅನ್ವೇಷಣೆಯ ಸಾಂದ್ರ ಪ್ರತಿಮೆ ಸಂಕೇತಗಳನ್ನು ಮೈಗೂಡಿಸಿಕೊಂಡು ಅರ್ಥವತ್ತಾದ ಆಕಾರಗಳನ್ನು ಪಡೆದುಕೊಂಡಿರುವುದರಿಂದ ಸಾಹಿತ್ಯದ ಸಂದರ್ಭದಲ್ಲಿ ಎದ್ದು ಕಾಣುವ ರಚನೆಗಳಾಗಿವೆ” ಎನ್ನುತ್ತಾರೆ ಬಿ.ಎನ್. ನಾಗರಾಜಭಟ್ ರವರು(ಪ್ರಬುದ್ಧ ಕರ್ನಾಟಕ, ಸಂಪುಟ 62, ಸಂಚಿಕೆ 2, ಪುಟ 40). ಮತ್ತೆ ಅವರ ಕಾವ್ಯದ ಕುರಿತು,

“ಭಾವ ವ್ಯಂಜನವನ್ನು ವಿಡಂಬನ ಚತುರೋಕ್ತಿಗಳಿಂದ ರುಚಿಕರಗೊಳಿಸುವ ಇವರ ಶೈಲಿ ಸಾಮಾನ್ಯ ವಾಚಕರ ಮನಸ್ಸನ್ನೂ ತಟ್ಟಿ ಎಬ್ಬಿಸಬಲ್ಲದು. ಈ ಮಟ್ಟದಲ್ಲಿ ಇವರಷ್ಟು ಕೃತಾರ್ಥರಾದ ಕವಿಗಳು ಬೇರೆ ಇಲ್ಲ. ಅಭಿವ್ಯಕ್ತಿಗಾಗಿ ಭಾಷೆಯನ್ನು ಸಂಶೋಧಿಸುವ ಇವರ ರೀತಿ ಕಾವ್ಯಕ್ಕೆ ಸಹಜವಾಗಿಯೇ ಹೊಸ ಆಯಾಮವನ್ನು ತಂದುಕೊಡುತ್ತದೆ.

ಭಾಷಾ ಪ್ರಯೋಗದಲ್ಲಿ ನಿಸಾರರು ತೋರುವ ಎಚ್ಚರ, ತೂಕ, ಶುದ್ಧಿ- ಇವು ಅವರ ಕಾವ್ಯದ ವಿಶಿಷ್ಟ ಗುಣ. ಭಾಷೆಯಲ್ಲಿ ಅವರು ತೋರುವ ಈ ಕಾಳಜಿ ಅನುಭವದ ಬಗ್ಗೆ, ಬದುಕಿನ ಬಗ್ಗೆ ಅವರಿಗಿರುವ ಗಾಂಭೀರ್ಯವನ್ನು ಸೂಚಿಸುತ್ತದೆ.”
-ಪ್ರೊ.ಎಮ್.ಗೋಪಾಲಕೃಷ್ಣ ಅಡಿಗ

ಎಂದು ಅಡಿಗರು ನಿಸಾರರ ಕಾವ್ಯದ ಬಗ್ಗೆ ಹೀಗೆ ಎಷ್ಟು ಒಳ್ಳೆಯ ಮಾತನ್ನು ಆಡುತ್ತಾರೆ. ಅವರು ಗುರುತಿಸಿದ ಅಂಶಗಳ ಅಧ್ಯನಕ್ಕಾಗಿ ನಾವು ನಿಸಾರರ ಕಾವ್ಯದ ಒಳ ಹೊಕ್ಕಬೇಕು. ನಾವು ಏನನ್ನು ಅಧ್ಯಯನ ಮಾಡಬೇಕಿದೆ, ಏನನ್ನು ಧ್ಯಾನಿಸಬೇಕಿದೆ ಎಂಬುದು ನಮಗೆ ಇದರಿಂದ ತಿಳಿಯುತ್ತದೆ. ಪದಗಳನ್ನು, ವಾಕ್ಯಗಳನ್ನು ಶ್ರದ್ಧೆಯಿಂದ ಜವಾಬ್ದಾರಿಯಿಂದ ಬಳಸಬೇಕೆನ್ನುವುದೂ ಅರ್ಥವಾಗುತ್ತದೆ. ಮತ್ತೆ ನಿಸಾರರ ಕಾವ್ಯದ ಕುರಿತು ಪ್ರೊ.ಎಮ್.ವಿ. ಸೀತಾರಾಮಯ್ಯನವರು ಹೀಗೆ ಹೇಳುತ್ತಾರೆ ನೋಡಿ,

“ಆಧುನಿಕ ಕಾವ್ಯ ಪ್ರಪಂಚದಲ್ಲಿ ವಸ್ತು, ಶೈಲಿ, ಭಾಷೆ, ಅಭಿವ್ಯಕ್ತಿ- ಈ ಯಾವ ದೃಷ್ಟಿಯಿಂದ ನೋಡಿದರೂ ನಿಮ್ಮ ಕಾವ್ಯಕ್ಕೆ ನಿಮ್ಮದೇ ಆದ ಎರೆಡು ಸಂಸ್ಕೃತಿಗಳ ಜೀವಂತ ಸಮ್ಮಿಲನದ ಮುದ್ರೆಯಿದೆ. ಕನ್ನಡ ಕಾವ್ಯದ ಇತಿಹಾಸದಲ್ಲಿ ನಿಮ್ಮ ಕಾವ್ಯಕ್ಕೆ ವಿಶಿಷ್ಟ ಸ್ಥಾನವಿದೆ. ಬೇಂದ್ರೆಯವರ ಕಾವ್ಯದ ಹಾಗೆ ಒಮ್ಮೆಯೂ ಅನನುಕರಣೀಯ.”
-ಪ್ರೊ.ಎಮ್.ವಿ.ಸೀತಾರಾಮಯ್ಯ

ನಿಜ, ನಿಸಾರರು ಧರ್ಮದ ಕಟ್ಟಳೆ ಮೀರಿದವರು. ಹಾಗಾಗಿಯೇ ಅವರು ಎಲ್ಲರಿಗೂ ಸೇರಿದವರು. ಇಲ್ಲಿ ಸೀತಾರಾಮಯ್ಯನವರು ಅವರ ಕಾವ್ಯದ ಮೇಲೆ “ಎರೆಡು ಸಂಸ್ಕೃತಿಗಳ ಜೀವಂತ ಸಂಮಿಲನದ ಮುದ್ರೆಯಿದೆ” ಎಂದದ್ದು ಬಹಳವಾಗಿ ಹೊಂದುತ್ತದೆ. ಅವರ “ಬೆಣ್ಣೆ ಕದ್ದ ನಮ್ಮ ಕೃಷ್ಣ” ಹಾಡನ್ನು ಕನ್ನಡಿಗರು ಮರೆಯಲು ಸಾಧ್ಯವೇ. ನವ್ಯದ ಸಂದರ್ಭದಲ್ಲಿ ಬರೆದ ನಿಸಾರರು ಯಾವ ಪಂಥಕ್ಕೂ ಅಂಟಿಕೊಳ್ಳದೆ ತಮ್ಮದೇ ಹಾದಿಯಲ್ಲಿ ಬರೆಯುತ್ತಾ ಹೋದವರು. ಹಾಗಾಗಿಯೇ ಇಂದಿಗೂ ಅವರ ಕವಿತೆಗಳು ಈ ಹೊತ್ತಿನ ಪದ್ಯಗಳು ಅಂತಲೇ ಅನಿಸುತ್ತವೆ.

ನಿಸಾರರ “ಅಮ್ಮ, ಆಚಾರ, ನಾನು” ಎನ್ನುವ ಕವಿತೆ ಒಂದು ಸುಂದರವಾದ ಕವಿತೆ. ವ್ಯಂಗ್ಯವನ್ನು ಅದೆಷ್ಟು ಹದವಾಗಿ ಬೆರೆಸಿದ್ದಾರೆಂದರೆ ಓದಿದ ಮೇಲೆ ಅದು ಉಂಟುಮಾಡುವ ಅನುಭೂತಿಯೇ ವಿಶಿಷ್ಟ. ಬುರ್ಖಾ ತೊಡುವ ಸಂಪ್ರದಾಯಸ್ಥ ಹುಡುಗಿಯನ್ನು ತಂದು ಮಗನಿಗೆ ಮದುವೆ ಮಾಡುತ್ತೇನೆ ಎನ್ನುವ ಅಮ್ಮನ ಹಟ, ಮಗನ ಆಧುನಿಕಳೂ, ವಿದ್ಯಾವಂತಳೂ ಆದವಳನ್ನೇ ಮದುವೆಯಾಗುತ್ತೇನೆ ಎನ್ನುವ ಹಟದ ಮುಂದೆ ಅದೂ ಕೊನೆಯಲ್ಲಿ ಸೋಲುತ್ತದೆ. ಅಷ್ಟೊತ್ತಿಗಾಗಲೇ ಕವಿಗೆ ತಾಯಿಯ ಬಗ್ಗೆ ಜಿಗುಪ್ಸೆ ಹುಟ್ಟಿರುತ್ತದೆ, ತಾನಿನ್ನೂ ಅವಿವಾಹಿತನಾಗಿ ಉಳಿದಿರುವುದಕ್ಕೆ ಅವಳೇ ಕಾರಣ ಎನ್ನುವ ಕಾರಣಕ್ಕೆ. ಕೊನೆಗೆ ತಾಯಿ ಯಾವಾಗ ಮಗನ ಜಾಡಿಗೆ ಬರುತ್ತಾಳೋ, ಈ ಮಗನಿಗೆ ಭರ್ತಿ ಖುಷಿ. ತಾಯಿಯ ಅನುಮತಿ ಪಡೆದು, ವಿದ್ಯಾವಂತ ಹುಡುಗಿಯ ನೋಡಿ, ಒಪ್ಪಿ, ಮದುವೆಯನ್ನೂ ಆಗುತ್ತಾನೆ. ಆದರೆ ಕೊನೆಗೆ… ನೀವೇ ಓದಿ…

“ಮೊದಲ ಸಲ ತಿರುಗಾಡಲು ಹೊರಟಾಗ
ನನ್ನಾಕೆ ತೋಳಿಲ್ಲದ ರವಿಕೆಯುಟ್ಟು
ಭಾರೀ ಸೀರೆಯನ್ನು ಸೊಂಟದ ಕೆಳಗೆ ನಾಜೂಕಾಗಿ ಕಟ್ಟಿ
ಕಾಲಿಗೆ ಹೈಹೀಲ್ಡು ಕೆರ
ಕೊರಳಿಗೆ ಚಿನ್ನದ ಸರ
ಕಿವಿಗೆ ಬೆರಳಿಗೆ ಉಂಗುರ ತೊಟ್ಟು
ಲಿಪ್ ಸ್ಟಿಕ್ಕು ಪೌಡರು ರೋಜು ಬಳಿದು ದೃಷ್ಟಿಬೊಟ್ಟಿಟ್ಟು
ಹೆರಳ ಗೋಪುರದಲ್ಲಿ ಕೂದಲ ಬಿಗಿದು
ಎಡಬೈತಲೆ ತೆಗೆದು
ಇವೆಲ್ಲವನ್ನೂ ಮೀರಿಸುವ ಮುಗುಳ್ನಗೆ ತೀಡಿ
ಹೊಸಿಲ ಇನ್ನೇನು ದಾಟಬೇಕು- ಆಗ
“ಬಂದೆ ತಡೆಯಿರಿ” ಎಂದು ಒಳಗೋಡಿ
ಬಂದು “ನಡೆಯಿರಿ” ಎಂದಾಗ
ತಲೆಸುತ್ತಿ ನಾಲಗೆಬತ್ತಿ ನಾನಾದೆ ಮೂಕ
ನೋಡಿದರೆ

ಉಟ್ಟಿದ್ದಳು ನಮ್ಮಮ್ಮನ ಬುರ್ಖಾ”

ಎಂದು ಕವಿತೆ ಮುಗಿದಾಗ ಪಕ ಪಕ ನಗುವೊಂದು ಹುಟ್ಟದಿದ್ದರೆ ಕೇಳಿ. ತಾನು ಮಾಡ್ರನ್ ಹುಡುಗಿಯನ್ನು ಮದುವೆಯಾಗಬೇಕೆಂದು ಬಯಸುವ ಮಗನಿಗೆ ಹೆಂಡತಿ ಬುರ್ಖಾ ಧರಿಸಲಿ ಎನ್ನುವ ಅಪೇಕ್ಷೆ ಇಲ್ಲ. ಆದರೂ ಆಧುನಿಕಳಾದ ಅವನ ಹೆಂಡತಿ ಮಾಡ್ರನ್ ಆಗಿ ರೆಡಿಯಾದ ಮೇಲೆ ಅದೊಂದು ಕಾಣದಂತೆ ಬುರ್ಖಾ ತೊಟ್ಟುಬಿಡುವುದರಿಂದ ಮಗನ ಆಶಾಭಂಗವಾಗುತ್ತದೆ. ಆದರೆ ಮಗನೇ ಆರಿಸಿಕೊಂಡ ಹೆಣ್ಣಾದರೂ ಅಮ್ಮನ ಆಸೆಯೇ ನಿಜವಾಯ್ತಲ್ಲ ಎಂದು ನಗು ಬರುತ್ತದೆ.

ಆದರೆ ಕವಿತೆಗಳನ್ನು ಕೈಮೇಲಿಟ್ಟು ಕಣ್ಮುಚ್ಚಿ ಚೇರಿನ ಹಿಂದಕ್ಕೆ ಒರಗಿಬಿಡುತ್ತಾರೆ ಮತ್ತೆ ತೆರೆಯದೆ ಎನ್ನುವ ಅನುಮಾನವೇ ಇರಲಿಲ್ಲ. ಹೊರಟರು. ಹೋಗೇ ಬಿಟ್ಟರು. ನೋಡಲೇಬೇಕೆನ್ನುವ ಹಂಬಲ ತೀವ್ರವಾಗುತ್ತಿದೆ. ಇನ್ನೆಲ್ಲಿಯ ನಿಸಾರರು! ಅನಂತ ಸಾಗರದ ಮೇಲೆ ತಮ್ಮ ಹಡಗಿನ ಲಂಗರು ಬಿಚ್ಚಿ ಹೊರಟೇ ಬಿಟ್ಟಿದ್ದಾರೆ.

ನಿಸಾರರ ಕವಿತೆಗಳಲ್ಲಿ ವಸ್ತು ಸಮೃದ್ಧತೆ, ಸಂವೇದನಾಶೀಲತೆ, ಮಾತುಗಾರಿಕೆಯ ಮೋಹಕತೆ ಮತ್ತು ಸಂವಹನದ ಸುಭಗತೆ ಎಲ್ಲವೂ ಕೂಡಿಬಂದು ಬಹಳ ಕಾಲ ಓದುಗರ ಮನಸಿನಲ್ಲಿ ಉಳಿದುಬಿಡುತ್ತವೆ.

ಅವರ “ಖಾಲಿ ಸೈಟುಗಳು” ಕವಿತೆಯನ್ನು ಓದುವಾಗ ಹೀಗೂ ಬರೆಯಬಹುದಾ ಅನಿಸಿಬಿಟ್ಟಿತ್ತು ನನಗೆ. ಖಾಲೀ ಸೈಟುಗಳನ್ನೇ ಅದೆಷ್ಟು ಚಂದಾಗಿ ಕವಿತೆಯಾಗಿಸಿದ್ದಾರೆ ನಿಸಾರರು. ಮನೆ ಕಟ್ಟಿದ ಸೈಟುಗಳ ನಡುವೆ, ಅಲ್ಲಲ್ಲಿ ಉದುರಿದ ಹಲ್ಲಿನಂತೆ ಕಾಣುತ್ತಾ, ಇನ್ನೂ ಮನೆ ಕಟ್ಟಿಸಿಕೊಳ್ಳಲಾಗದ ತನ್ನ ಮೇಲೆ ತನಗೇ ಜಿಗುಪ್ಸೆ ಮೂಡುತ್ತಿರುವಂತೆ ಕವನ ಬರೆಯುತ್ತಾ ಹೋಗುತ್ತಾರೆ ನಿಸಾರರು. ಇದೊಂದು ಉದ್ದದ ಆಕರ್ಷಕ ವಿವರಣೆಯುಳ್ಳ ಚಂದದ ಕವಿತೆ. ಹಾಸ್ಯ, ವಿಡಂಬನೆ, ವಿಷಾದ ಹದವಾಗಿ ಬೆರೆತ ಕವಿತೆ ಇದು. ಕೊನೆಯ ಸಾಲುಗಳಂತೂ ಬಹಳ ಚಂದ ಇವೆ,

“ನಮ್ಮಂತರಾಳಗಳ ಲೇಔಟುಗಳಲ್ಲು ಇವೆ
ಖಾಲಿ ಸೈಟುಗಳು
ಅಲ್ಲಿ ಅಕ್ರಮವಾಗಿ ತಳವೂರಿವೆ
ಅಟ್ಟಲಾಗದ ಕಠೋರ ನೆನಹುಗಳು
ಗಿಜಿಗುಡುವ ಬಡ ಕುಟೀರಗಳು
ಹಳೆ ಹತಾಶೆಗಳ ಗಟಾರದಂಚಿನ ನಾರು?ವ ವಠಾರಗಳು
ವಿಷಾದದ ಆಗುಹೋಗುಗಳು
ನಿಷಾದದ ವ್ಯರ್ಥ ಕೂಗುಗಳು”
-(ಖಾಲಿ ಸೈಟುಗಳು) ಕೆ.ಎಸ್.ನಿಸಾರ್ ಅಹಮದ್

ನಗರ ಜೀವನದ ಅತಿ ಮುಖ್ಯ ಕಾಳಜಿಗಳಲ್ಲೊಂದಾದ ನಿವೇಶನಗಳ ಬಗ್ಗೆ ಬರೆದಿರುವ ಈ ಕವನದಲ್ಲಿ ಮಧ್ಯಮ ವರ್ಗದ ಅಸಹಾಯಕ ಸ್ಥಿತಿಯನ್ನು ಮಾರ್ಮಿಕವಾಗಿ ಚಿತ್ರಿಸಲಾಗಿದೆ. ನೀವೇಶನಗಳನ್ನು ನೀಡುವ ಪ್ರಾಧಿಕಾರ, ಅದರ ಸುತ್ತಾ ಅಲೆದಲೆದು ಸೋಲಬೇಕಾದ ಪರಿಸ್ಥಿತಿ, ಒಬ್ಬರಿಂದ ಒಬ್ಬರಿಗೆ ಮಾರಲ್ಪಡುವ ಸೈಟುಗಳು, ಸೈಟುಗಳು ಕಾಗದದ ರೂಪದಲ್ಲಿ ಓಡಾಡುವುದು ಹೀಗೆ ಹತ್ತು ಹಲವು ವಿದ್ಯಮಾನಗಳನ್ನು ವ್ಯಂಗ್ಯ ಧಾಟಿಯಲ್ಲಿ ಬಹಳ ಚಂದ ಅಭಿವ್ಯಕ್ತಿಸುತ್ತದೆ ಈ ಕವಿತೆ. ಕೊನೆಯಲ್ಲಿ ನಮ್ಮ ಅಂತರಾಳದ ಲೇಔಟುಗಳಲ್ಲಿನ ಖಾಲಿ ಸೈಟುಗಳ ಬಗ್ಗೆ ಹೇಳುತ್ತಾ ಹೋಗುವುದು ಸತ್ಯ ಅನ್ನಿಸಿ ಮನಸಿಗೆ ಖೇದ ಉಂಟಾಗುತ್ತದೆ.

ಅವರ ಮತ್ತೊಂದು ಕವಿತೆಯ ಬಗ್ಗೆ ಹೇಳುವೆ. “ನಗ್ತೀರ ನನ್ ಹಿಂದೆ?” ಎನ್ನುವ ಕವಿತೆ. ಈ ಕವಿತೆ ಅವರ ಪ್ರಯೋಗಶೀಲತೆಗೆ ಹಿಡಿದ ಕನ್ನಡಿ. ಈ ಕವಿತೆಯಲ್ಲಿ ವ್ಯಂಗ್ಯ, ವಿಡಂಬನೆ ಮತ್ತು ಹಾಸ್ಯ ಪ್ರಜ್ಞೆ ಮೇರೆ ಮೀರಿದೆ ಅಂತಲೇ ಹೇಳಬೇಕು. ಮತ್ತು ಬಳಸಿರುವ ಭಾಷೆಯೂ ಖುಷಿ ಕೊಡುತ್ತದೆ.

“ನಗ್ತೀರ ನನ್ ಹಿಂದೆ? ನಗ್ರಯ್ಯಾ ನಗ್ರಿ
ಸುಮ್ನೆ ಸಿಕ್ಕಿಲ್ಲ ಹೆಸ್ರ್ ಹಿಂದಿನ್ ಡಿಗ್ರಿ
ಮೂರ್ ವರ್ಷ ಪ್ರೊಫೆಸರ್ರ ನಾಯಿಗೆ ಸ್ನಾನ
ಹಿರೀ ಮಗನ್ ಚೌಲಕ್ಕೆ ಮಖ್ಮಲ್ ಜಮ್ಖಾನ
ಇನ್ನವರ ಮೈದುನನ್ಗೆ ಸಿನಿಮಾ ಗಾನಾ
ಪ್ರತಿ ದಿನ ಒಪ್ಸಿದೀನಿ ಅಮ್ಮಾವ್ರಿಗೆ ಸ್ನೋನ
ನಗ್ತೀರಾ ನನ್ ಹಿಂದೆ? ನಗ್ರಯ್ಯಾ ನಗ್ರಿ
ಸುಮ್ನೆ ಸಿಕ್ಲಿಲ್ಲ ಹೆಸ್ರ್ ಹಿಂದಿನ್ ಡಿಗ್ರಿ”

ಹೀಗೆ ಪ್ರಾರಂಭವಾಗುವ ಕವಿತೆ ವ್ಯವಸ್ಥೆಯ ಕರಾಳ ಮುಖವನ್ನು ಬಿಚ್ಚಿಡುತ್ತಾ ಹೋಗುತ್ತದೆ. ಇದು ವಸ್ತುವೊಂದನ್ನು ಸೃಜನಾತ್ಮಕವಾಗಿ ಬಳಸುವ ನಿಸಾರರ ಕೌಶಲ್ಯಕ್ಕೆ ಸಾಕ್ಷಿ.

ಇಂತಹ ಅದ್ಭುತ ಕವನಗಳನ್ನು ನಮಗಾಗಿ, ನಮ್ಮ ಓದಿಗಾಗಿ, ನಮ್ಮ ಹಾದಿಗೆ ಕಂದೀಲಾಗಿ ಉಳಿಸಿಟ್ಟು ಹೋಗಿದ್ದಾರೆ ನಿಸಾರರು. ಯಾಕೆ ಒಬ್ಬ ಕವಿ ನಮಗೆ ಮುಖ್ಯವಾಗುತ್ತಾರೆ? ಮತ್ತೆ ಮುಖ್ಯವಾಗಬೇಕು? ಎನ್ನುವ ಪ್ರಶ್ನೆಗಳಿಗೆ ಇಂತಹ ಬರಹ ಮತ್ತು ಸಂದರ್ಭಗಳು ನಮಗೆ ಉತ್ತರ ಕೊಡುತ್ತವೆ. ಒಬ್ಬ ಕವಿ ನೇರ ಪರಿಚಯವೇ ಇಲ್ಲದ ಅದೆಷ್ಟೋ ಹೃದಯಗಳನ್ನು ತನ್ನ ಅಮೂರ್ತ ಕೈಗಳಿಂದ ಸೋಕಬಲ್ಲ. ತನ್ನ ಅಷ್ಟೂ ಭಾವ ಲೋಕವನ್ನು ಪರಿಚಯಿಸಿ ನಮ್ಮನ್ನು ಹನಿಗಣ್ಣಾಗಿಸಬಲ್ಲ. ಅವನ ಬೌದ್ಧಿಕ ಇರುವಿಕೆ ಅಳಿದರೂ ಓದುಗರ ಹೃದಯದಲ್ಲಿ ಅವ ಸಾಮ್ರಾಟನೇ. ಅಂತಹ ಸಾಮ್ರಾಟರಾಗಿದ್ದ ನಿಸಾರರು ಪದವಿ ತ್ಯಾಗ ಮಾಡಿ ಅನಂತಲೋಕಕ್ಕೆ ಪ್ರಯಾಣಿಸಿದ್ದಾರೆ. ನಾವು ಹಿಡಿದಿದ್ದ ಕಿರುಬೆರಳನ್ನು ಮೆಲ್ಲಗೆ ಬಿಡಿಸಿಕೊಂಡು ಹೊರಟೇ ಹೋಗಿದ್ದಾರೆ. ನಮಗೆ ಕಂಗಾಲಾಗಿ ಅಳುವುದಲ್ಲದೆ ಬೇರೇನೋ ಉಳಿದಿಲ್ಲ.

“ಬೇಸರವಾಗಿದೆ ಮಾತು, ಭಾರವಾಗಿದೆ ಮೌನ
ನೋವು ಕರಗಿದೆ ಕಣ್ಣಲಿ
ಅಡಿಗೆ ಚುಚ್ಚಿದ ಮುಳ್ಳು ಒಳಗಡೆಯೆ ಮುರಿದಂತೆ
ಭಾವ ಕುಟುಕಿದೆ ಮನದಲಿ”
-ಕೆ.ಎಸ್. ನಿಸಾರ್ ಅಹ್ಮದ್

ಎನ್ನುವ ಅವರದೇ ಸಾಲುಗಳಂತೆ… ಅಂಧಕಾರದಲ್ಲಿ ತೊಯ್ದ ದಾರಿಗಳನ್ನು ಅವರ ಕವಿತೆಗಳೇ ಬೆಳಗುತ್ತವೆ, ನಮ್ಮನ್ನು ಗುರಿ ಮುಟ್ಟಿಸುತ್ತವೆ ಎನ್ನುವ ನಂಬಿಕೆಯೀಗ ಅವರ ಮೂರ್ತಿಯ ಮುಂದೆ ಹಚ್ಚಿಟ್ಟ ದೀಪ.

“ಆದಿಯನರಿಯದ ಕತ್ತಲ ಪಯಣಕೆ
ಅಂತ್ಯದ ಗುರಿಯಿಲ್ಲ
ಅಗಣಿತ ದೇಹವ ತೊಡುತಿಹ ಪ್ರಾಣಕೆ
ಲೋಕದ ತೆರವಿಲ್ಲ”
-(ಆದಿಯನರಿಯದ ಪಯಣ) ಕೆ.ಎಸ್.ನಿಸಾರ್ ಅಹ್ಮದ್

ಎನ್ನುವ ಸಾಲುಗಳಂತೆ ದೇಹದ ಹಂಗು ತೊರೆದು ಅವರೀಗ ಆದಿ ಅಂತ್ಯಗಳಿರದ ಹಾದಿಯನಿಡಿದು ಹೊರಟುಬಿಟ್ಟಿದ್ದಾರೆ. ನಮ್ಮ ಕಂಬನಿ ಕಣ್ಣಲ್ಲಿ ಇಂಗುತ್ತಿಲ್ಲ… ಎಲ್ಲರಿಗೂ ಪ್ರತ್ಯೇಕ ದಾರಿಗಳಿವೆ ಈ ವಿಶ್ವದಲ್ಲಿ. ಕಾಯಬೇಕು ಹೊರಡುವ ಕ್ಷಣಕ್ಕಾಗಿ. ಯಾರೂ ಶಾಶ್ವತ ಅಲ್ಲವಿಲ್ಲಿ ಎನ್ನುವ ಸತ್ಯ ತಿಳಿದೂ ಹುಟ್ಟಿಗೆ ಸಂಭ್ರಮಿಸುವುದು, ಸಾವಿಗೆ ಕಂಬನಿಸುವುದು ಬದುಕಿರುವವರಿಗೆ ತಪ್ಪಿದ್ದಲ್ಲ. ಆದರೂ ನಿಸಾರ್ ಸರ್ ನೀವಿರಬೇಕಿತ್ತು…