ಕಾಲ ನಿಗೂಢ ವಿಸ್ಮಯವಾಗಿರುವಂತೆಯೇ ನಿರ್ದಯವೂ ಆಗಿದೆ. ಅದು ಯಾರನ್ನು, ಯಾವಾಗ ಅಪ್ಪಳಿಸುತ್ತದೊ ಯಾರೂ ಅರಿಯರು. ಅನೇಕ ಸಾಕ್ಷ್ಯಚಿತ್ರಗಳ ರಫ್ ಕಟ್ ಗಳ ರಾಶಿಯನ್ನು ಹೊಂದಿದ್ದ, ತಮ್ಮ ನೋಟ್ ಪುಸ್ತಕದಲ್ಲಿ ಅಸಂಖ್ಯ ಅಪೂರ್ಣ ಕವಿತೆಗಳನ್ನು ಪೂರ್ಣಗೊಳಿಸಬೇಕಿದ್ದ, ತಾವು ಕನಸಿದ್ದ ಗೋಹರ ಜಾನ್ ಳ ಕುರಿತು ಚಲನಚಿತ್ರವನ್ನು ಮಾಡಬೇಕಿದ್ದ ಚಲಂ ಕಳೆದ ವರ್ಷ ಹಠಾತ್ತಾಗಿ ನಿರ್ಗಮಿಸಿಬಿಟ್ಟರು. ಭಾವಜೀವಿಯಾಗಿದ್ದ, ಗೆಳೆತನವನ್ನು ಅಪಾರವಾಗಿ ಪ್ರೀತಿಸುತ್ತಿದ್ದ, ಸದಾ ಒಳಿತನ್ನು ಬಯಸುತ್ತಿದ್ದ, ತನ್ನೊಳಗೆ ಯಾರಿಗೂ ಕಾಣದಂತೆ ಕವಿಯನ್ನು ಬಚ್ಚಿಟ್ಟುಕೊಂಡಿದ್ದ ಚಲಂರ ಸಾವು ಅನೇಕರಲ್ಲಿ ಶೂನ್ಯವನ್ನು ಸೃಷ್ಟಿಸಿತು.
ಚಲಂ ಬೆನ್ನೂರಕರ್ ಅವರ ನೆನಪಿನ “ಬೆಟ್ಟದ ನವಿಲುಗಳು” ಪುಸ್ತಕಕ್ಕೆ ಚಂದ್ರಶೇಖರ ತಾಳ್ಯ ಮತ್ತು ಕೇಶವ ಮಳಗಿ ಬರೆದ ಮುನ್ನುಡಿ

 

ನಮ್ಮ ದೇಶದ ಎಪ್ಪತ್ತರ ದಶಕ ಅನೇಕ ಕಾರಣಗಳಿಂದ ಮಹತ್ವವಾದುದು. ಸ್ವಾತಂತ್ರ್ಯದ ನಂತರದ ದಶಕದಲ್ಲಿ ಹುಟ್ಟಿದವರು ತರುಣರಾಗಿ ತಮ್ಮ ಭವ್ಯ ಭವಿಷ್ಯದ ಕನಸುಗಳೊಂದಿಗೆ ಸಮಾಜಕ್ಕೆ ಸೇರ್ಪಡೆಗೊಂಡ ಸಮಯ. ಇದು ಅಲಕ್ಷಿತ ಸಮುದಾಯಗಳ ಮೊದಲ ತಲೆಮಾರಿನ ಯುವ ಸಮೂಹ ಅಕ್ಷರಲೋಕಕ್ಕೆ ತೆರೆದುಕೊಂಡ ಪರ್ವಕಾಲವೂ ಹೌದು. ಆದರೆ ಸಮಾಜದಲ್ಲಿ ನಗ್ನನೃತ್ಯದಲ್ಲಿ ತೊಡಗಿದ್ದ ಅಸಮಾನತೆ, ತರತಮ ನೀತಿ, ರಾಜಕೀಯ ಭ್ರಷ್ಟಾಚಾರ, ಜಾತಿವರ್ಗಗಳ ಶೋಷಣೆಯ ಕೂಪ ಇಂಥ ತರುಣರ ಆಶೋತ್ತರ, ಮನೋಕಾಮನೆಗಳನ್ನು ಸುಟ್ಟು ಕರಕಾಗಿಸತೊಡಗಿತ್ತು. ಆ ತಲೆಮಾರಿನ ಯುವಕರು ಈ ಬಗೆಯ ಎಲ್ಲ ದುಷ್ಟಶಕ್ತಿಗಳ ವಿರುದ್ಧ ಬಂಡೇಳುವುದನ್ನು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ. ಆ ದೆಸೆಯಲ್ಲಿಯೇ ದೇಶಾದ್ಯಂತ ಸಾಮಾಜಿಕ-ರಾಜಕೀಯ ಹೋರಾಟಗಳು ರೂಪುಗೊಂಡವು.

(ಚಲಂ ಬೆನ್ನೂರಕರ್)

ಸಂಸ್ಕೃತಿಯು ತನ್ನನ್ನು ತಾನೇ ಪುನಾವ್ಯಾಖ್ಯಾನಿಸಿಕೊಂಡಿದ್ದರಿಂದ ಅದರ ಅಕ್ಕರೆಯ ಕೂಸುಗಳಾದ ಭಾಷೆ, ಕಲೆಗಳು ಹೊಸ ಅವತಾರದಲ್ಲಿ ಮರುಹುಟ್ಟು ಪಡೆದವು. ಆವರೆಗೆ ಒಡಲಲ್ಲಿ ಬಿಗಿಯಾಗಿ ಹಿಡಿದಿಟ್ಟಿದ್ದ ಆಕ್ರೋಶ, ಅವಮಾನ, ನಿಂದನೆಗಳು ಕಲಾಭಿವ್ಯಕ್ತಿಯಾಗಿ ಹೊರಹೊಮ್ಮತೊಡಗಿದವು. ಎಲ್ಲವೂ ಅಸ್ತವ್ಯಸ್ತಗೊಂಡಿದ್ದ ದೇಶದಲ್ಲಿ ತಮ್ಮ ಅಸ್ತಿತ್ವಕ್ಕೆ ಹೊಸ ಅರ್ಥವಿದೆ ಎಂದು ಒತ್ತಿ ಹೇಳಿದವು. ಈ ಹಿನ್ನೆಲೆಯಲ್ಲಿಯೇ, ಸಾಹಿತ್ಯ, ರಂಗಭೂಮಿ, ಸಿನೆಮಾ, ಕಲೆ, ಪಾರಂಪರಿಕ ಕುಶಲತೆಗಳು ಆವರೆಗೆ ತಾವು ನಿಭಾಯಿಸುತ್ತಿದ್ದ ಪಾತ್ರಕ್ಕೆ ವಿದಾಯ ಹೇಳಿ ಹೊಸಕಾಲದ, ಹೊಸ ಆಶೋತ್ತರಗಳಿಗೆ ಅಗತ್ಯವಾದ ಭೂಮಿಕೆಗೆ ತಕ್ಕಂತೆ ಪರಿವರ್ತನೆಗೊಂಡವು. ದೇಶದ ಎಲ್ಲ ಕ್ಷೇತ್ರಗಳಲ್ಲೂ ಹೊಸ ದನಿ, ಹೊಸ ಮಾತು, ಹೊಸ ನೋಟಗಳು ಪ್ರಸ್ತಾವನೆಗೊಂಡವು.

ಚಿತ್ರದುರ್ಗ ಜಿಲ್ಲೆಯ ಪುಟ್ಟ ಪಟ್ಟಣವಾದ ಸಂತೆಬೆನ್ನೂರಿನ ಚಲಂ ಕೂಡ ಈ ಯುಗಧರ್ಮದ ತರುಣ. ಐವತ್ತರ ದಶಕದ ಮಧ್ಯಭಾಗದಲ್ಲಿ ಹುಟ್ಟಿದ ಬಹುಪಾಲು ಜನರಂತೆ ಕ್ರಾಂತಿ, ಹೊಸ ಸಮಸಮಾಜ, ಶೋಷಣೆಯಿಲ್ಲದ, ಸಂಪೂರ್ಣ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವ ಹೊಸ ಸ್ವಾತಂತ್ರ್ಯದ ಕನಸಿನಲ್ಲಿ ತಾರುಣ್ಯದಲ್ಲಿಯೇ ರಾಜಕೀಯ-ಸಾಹಿತ್ಯ ಚರ್ಚೆ, ಚಟುವಟಿಕೆಗಳಲ್ಲಿ ತೊಡಗಿಕೊಂಡು, ಸಣ್ಣ ಪತ್ರಿಕೆ ನಡೆಸುತ್ತ, ಹೊಸ ವಿಚಾರಗಳನ್ನು ಹೊರ ಹಾಕುವ ಲೇಖನ, ಕವಿತೆ, ಕಥೆಗಳನ್ನು ಬರೆಯುತ್ತ ಮಹಾನಗರ ಬೆಂಗಳೂರನ್ನು ತಲುಪಿದವರು. ಆ ಕಾಲದ ಹೊಸ ಬಗೆಯ ಸಿನಿಮಾ, ಸಾಮಾಜಿಕ ಹೋರಾಟ, ಸಾಹಿತ್ಯ ಸೃಷ್ಟಿಯಲ್ಲಿ ತುಂಬು ಹುಮ್ಮಸ್ಸಿನಲ್ಲಿ ಪಾಲ್ಗೊಳ್ಳುತ್ತ ವಯಸ್ಸಿನ ಅಂತರವೇ ಇಲ್ಲದೆ ನೂರಾರು ಗೆಳೆಯರು, ಹಿತೈಷಿಗಳು, ಸಮಾನ ಮನಸ್ಕರನ್ನು ಗಳಿಸಿದವರು. ಆಗ ಪ್ರಚಲಿತವಿದ್ದ ಎಲ್ಲ ಬಗೆಯ ಎಡಪಂಥೀಯ ಮತ್ತು ಪ್ರಗತಿಪರ ಚಳವಳಿಯಲ್ಲಿ ಭಾಗವಹಿಸಿಯೂ ಒಂದು ಸಂಘಟನೆಯೊಂದಿಗೆ ಗುರುತಿಸಿಕೊಳ್ಳದೆ, ಎಲ್ಲರೊಂದಿಗೂ ನವಿರಾದ, ಮುಕ್ತ ಸಂಬಂಧವನ್ನು ಚಲಂ ಉಳಿಸಿಕೊಂಡರು.

ಪ್ರಚಲಿತ ಸಂಘಟನೆಗಳನ್ನು ಬಿಟ್ಟುಕೊಟ್ಟು ಅದಾಗ ತಾನೇ ಭಾರತದಲ್ಲಿ ಕಾಲೂರಲು ಯತ್ನಿಸುತ್ತಿದ್ದ ಸ್ವಯಂಸೇವಾ ಸಂಸ್ಥೆಗಳ ಪರಿಕಲ್ಪನೆಗೆ ಚಲಂ ಒಲಿದಿದ್ದು ಬಹುಶಃ ತಾವು ಅಂದುಕೊಂಡಿರುವ ಕೆಲಸ ಮಾಡಲು, ಹೊಸ ಬಗೆಯದನ್ನು ಸಾಧಿಸಲು ಅಂಥಲ್ಲಿ ಅನುವಾದೀತು ಎಂದಿರಬೇಕು. ಸ್ವಯಂಸೇವಾ ಸಂಸ್ಥೆಗಳನ್ನು ಅನುಮಾನ, ಅಪನಂಬಿಕೆಗಳ ಕಣ್ಣುಕಿವಿಯುಸಿರುಗಳಿಂದ ನೋಡುತ್ತಿದ್ದ ಸಂಗಾತಿಗಳು ಕೂಡ ಚಲಂರಂಥವರನ್ನು ಮುಕ್ತತೆ ಸ್ವೀಕರಿಸಿದ್ದು ಚಲಂರಲ್ಲಿದ್ದ ಗೆಳೆತನದ ಅಯಸ್ಕಾಂತೀಯ ಗುಣದಿಂದಲೇ ಇರಬೇಕು.

ಚಲಂ ಸಾಮಾಜಿಕ ಹೋರಾಟ, ಸಣ್ಣ ಪತ್ರಿಕೆ ಪ್ರಕಟಣೆ, ಸಾಕ್ಷ್ಯಚಿತ್ರ ನಿರ್ಮಾಣ, ಹೊಸ ಬಗೆಯ ಸಿನೆಮಾ ಉತ್ಸವಗಳ ಸಂಘಟನೆ, ಬ್ಯಾನರ್-ಪೋಸ್ಟರ್ ಸೃಷ್ಟಿ, ಕಥೆ, ಕವಿತೆಗಳ ರಚನೆ ಹೀಗೆ ಅನೇಕ ಮಾಧ್ಯಮಗಳಲ್ಲಿ ತೊಡಗಿಸಿಕೊಂಡು ಸುಮಾರು ಮೂರು ದಶಕಗಳ ಕಾಲ ಕ್ರಿಯಾಶೀಲರಾಗಿದ್ದರು. ಅವರ ಒಂದೆರಡು ಸಾಕ್ಷ್ಯಚಿತ್ರಗಳು ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆದಿದ್ದವು. ಆದಾಗ್ಯೂ, ಚಲಂ ಅವರ ಜಾಯಮಾನ ಗಮನಿಸಿದರೆ ಅವರು ಮೂಲತಃ ಕವಿಯಾಗಿದ್ದರು ಎಂದೆನ್ನಿಸುತ್ತದೆ. ಚಲಂ ಬರೆದ ಕವಿತೆಗಳ ಸಂಖ್ಯೆ ನೂರನ್ನು ಮೀರುತ್ತದೆ. ಅನೇಕ ಕವನಗಳ ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಬೆಳಕನ್ನೂ ಕಂಡಿದ್ದವು. ಆದರೂ, ಅವರು ಕಾವ್ಯ ಪ್ರಕಾರವನ್ನು ತುಂಬ ಗಂಭೀರವಾಗಿ, ಇದೇ ನನ್ನ ಅಭಿವ್ಯಕ್ತಿ ಮಾಧ್ಯಮವೆಂದು ತೆಗೆದುಕೊಂಡಂತೆ ಕಾಣುವುದಿಲ್ಲ. ಅಷ್ಟೇಕೆ, ನೂರಾರು ಗೆಳೆಯರನ್ನು ಪಡೆದಿದ್ದ, ಅನೇಕ ಪ್ರಕಾಶಕರು ಪರಿಚಯವಿದ್ದ, ಸ್ವತಃ ಪ್ರಕಾಶಕರೂ, ಕಲಾವಿದರೂ ಆಗಿದ್ದ ಚಲಂ ಕಾವ್ಯ ಸಂಕಲನವನ್ನು ಏಕೆ ಪ್ರಕಟಿಸಲಿಲ್ಲವೆನ್ನುವುದು ಅಚ್ಚರಿಯ ವಿಷಯವೇ.

ಸ್ವಯಂಸೇವಾ ಸಂಸ್ಥೆಗಳನ್ನು ಅನುಮಾನ, ಅಪನಂಬಿಕೆಗಳ ಕಣ್ಣುಕಿವಿಯುಸಿರುಗಳಿಂದ ನೋಡುತ್ತಿದ್ದ ಸಂಗಾತಿಗಳು ಕೂಡ ಚಲಂರಂಥವರನ್ನು ಮುಕ್ತತೆ ಸ್ವೀಕರಿಸಿದ್ದು ಚಲಂರಲ್ಲಿದ್ದ ಗೆಳೆತನದ ಅಯಸ್ಕಾಂತೀಯ ಗುಣದಿಂದಲೇ ಇರಬೇಕು.

ಕಾಲ ನಿಗೂಢ ವಿಸ್ಮಯವಾಗಿರುವಂತೆಯೇ ನಿರ್ದಯವೂ ಆಗಿದೆ. ಅದು ಯಾರನ್ನು, ಯಾವಾಗ ಅಪ್ಪಳಿಸುತ್ತದೊ ಯಾರೂ ಅರಿಯರು. ಅನೇಕ ಸಾಕ್ಷ್ಯಚಿತ್ರಗಳ ರಫ್ ಕಟ್ ಗಳ ರಾಶಿಯನ್ನು ಹೊಂದಿದ್ದ, ತಮ್ಮ ನೋಟ್ ಪುಸ್ತಕದಲ್ಲಿ ಅಸಂಖ್ಯ ಅಪೂರ್ಣ ಕವಿತೆಗಳನ್ನು ಪೂರ್ಣಗೊಳಿಸಬೇಕಿದ್ದ, ತಾವು ಕನಸಿದ್ದ ಗೋಹರ ಜಾನ್ ಳ ಕುರಿತು ಚಲನಚಿತ್ರವನ್ನು ಮಾಡಬೇಕಿದ್ದ ಚಲಂ ಕಳೆದ ವರ್ಷ ಹಠಾತ್ತಾಗಿ ನಿರ್ಗಮಿಸಿಬಿಟ್ಟರು. ಭಾವಜೀವಿಯಾಗಿದ್ದ, ಗೆಳೆತನವನ್ನು ಅಪಾರವಾಗಿ ಪ್ರೀತಿಸುತ್ತಿದ್ದ, ಸದಾ ಒಳಿತನ್ನು ಬಯಸುತ್ತಿದ್ದ, ತನ್ನೊಳಗೆ ಯಾರಿಗೂ ಕಾಣದಂತೆ ಕವಿಯನ್ನು ಬಚ್ಚಿಟ್ಟುಕೊಂಡಿದ್ದ ಚಲಂರ ಸಾವು ಅನೇಕರಲ್ಲಿ ಶೂನ್ಯವನ್ನು ಸೃಷ್ಟಿಸಿದೆ. ಅಂಥ ಶೂನ್ಯವನ್ನು ತುಸುವಾದರೂ ತುಂಬಬಹುದೇನೊ ಎಂಬ ಭರವಸೆಯಲ್ಲಿ ಚಲಂ ಸಂಸ್ಮರಣೆಯಾಗಿ ಅವರು ಬರೆದ ಕವಿತೆ, ಕಥೆ, ಲೇಖನ ಇತ್ಯಾದಿಗಳನ್ನು ಒಗ್ಗೂಡಿಸಿ ಈ ಕನ್ನಡ ಪುಸ್ತಕವನ್ನು ಸಿದ್ಧಪಡಿಸಿದ್ದೇವೆ. ಇದು ಚಲಂರ ವ್ಯಕ್ತಿತ್ವದ ಒಂದು ಬದಿಯನ್ನಾದರೂ ಅರ್ಥ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂಬ ನಂಬಿಕೆ ನಮ್ಮದು.

ಕನ್ನಡ ಪುಸ್ತಕವನ್ನು ಸಂಸ್ಮರಣೆ ಎಂದು ಕರೆದಿದ್ದರೂ ಅವರ ಕುರಿತ ಬೇರೆಯವರು ಬರೆದ ಲೇಖನಗಳು ಇಲ್ಲಿಲ್ಲ. ಚಲಂ ಬರೆದಿರುವುದಷ್ಟೇ ಇಲ್ಲಿದೆ. ಚಲಂರ ಚೂರುಪಾರು ಬರಹವನ್ನು ಓದುವುದು ಕೂಡ ಅವರನ್ನು ನೆನಪಿಸಿಕೊಂಡಂತೆಯೇ ಎಂಬ ಅರ್ಥದಲ್ಲಿ ಇದು ಸ್ಮರಣೆ. ಇದರ ಜತೆಗೇ ಇಂಗ್ಲಿಶ್ ನಲ್ಲಿಯೂ ಬೇರೊಂದು ಕೃತಿ ಪ್ರಕಟವಾಗುತ್ತಿದ್ದು ಅದರಲ್ಲಿ, ಬೇರೆ ಬೇರೆ ಕ್ಷೇತ್ರಗಳಲ್ಲಿ ಚಲಂರೊಂದಿಗೆ ಕೆಲಸ ಮಾಡಿದವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಇಂಥ ಕೆಲಸವನ್ನು ಮಾಡುವುದು ಯಾತನಾಮಯ ಮತ್ತು ಪರಿಶ್ರಮದಾಯಕ. ತಮಗೆ ಬೇಕಾದವರನ್ನು ಕಳೆದುಕೊಂಡ ನೋವು ಒಂದೆಡೆ ಇದ್ದರೆ, ಎಲ್ಲವನ್ನೂ ಹುಡುಕಿತಡಕಿ ಒಂದೆಡೆ ಸೇರಿಸುವುದು ಪರಿಶ್ರಮದಾಯಕ. ಅದರಲ್ಲಿ ಕೊಂಚಮಾತ್ರ ಯಶಸ್ವಿಯಾಗಿದ್ದೇವೆ ಎಂದಷ್ಟೇ ಹೇಳಬಹುದು. ಸತತ ಪ್ರಯತ್ನಗಳ ಬಳಿಕವೂ ಚಲಂರ ಒಂದೆರಡು ಕಥೆ ಮತ್ತು ಆರಂಭಿಕ ಕಾಲದಲ್ಲಿ ಬರೆದ ಲೇಖನಗಳು ನಮಗೆ ದೊರಕಿಲ್ಲ. ಏನೇ ಇದ್ದರೂ, ನಿರ್ಗಮಿಸಿದ ಗೆಳೆಯನ್ನು ನೆನಪಿಸಿಕೊಳ್ಳಲು ಇಷ್ಟಾದರೂ ಸಿಕ್ಕಿವೆಯಲ್ಲ ಎನ್ನುವುದೇ ಸಮಾಧಾನ. ಉಳಿದವರು ಈ ಕೆಲಸವನ್ನು ನಮಗಿಂತಲೂ ದಕ್ಷತೆಯಿಂದ ಮಾಡಬಹುದಾಗಿದ್ದರೂ ಚಲಂ ನಮಗೆ ಪರಿಚಯವಿದ್ದರು ಎನ್ನುವುದೇ ಇದನ್ನು ಸಂಪಾದಿಸಲು ನಮಗಿರುವ ಅರ್ಹತೆಯಾಗಿದೆ.

ಚಂದ್ರಶೇಖರ ತಾಳ್ಯ
ಕೇಶವ ಮಳಗಿ

ಚಲಂ ಬೆನ್ನೂರಕರ್ ಬರೆದ ಒಂದಷ್ಟು ಕವಿತೆಗಳು

ನಾವು ನವಿಲುಗಳಲ್ಲ

ಒಂದು

ಬಿಳಿಗಿರಿ ರಂಗನ ಬೆಟ್ಟದಲ್ಲಿ
ನವಿಲುಗಳು
ನನ್ನ ನಿನ್ನ ಹಾಗಲ್ಲ ಕಣೇ
ನನ್ನ ಹುಡುಗಿ

ನೀಲಿಯಾಗಸಕ್ಕೆ
ಮೋಡ ಕವಿದಾಗ
ಮಲ್ಲಿಗೆಗಳರಳುತ್ತವೆ
ಅವುಗಳ
ಮೈಯ ತುಂಬಾ

ಆಷಾಢದ ಗಾಳಿ
ಗೂಳಿಯ ಹಾಗೆ
ಮುಸುಗುಡುವ ಹೊತ್ತು
ಗರಿಬಿಚ್ಚಿ ಕುಣಿತ
ಮನಬಿಚ್ಚಿ ಮೊರೆತ
ಅವಕ್ಕೆ

ಮುಗಿಲಿನೊಡಲಿಂದ
ಚಿಮ್ಮಿ ಚೆಲ್ಲುವ
ಜೀವ ಜಲರಾಶಿಗೆ
ಮೈಯೊಡ್ಡಿ ಆಡುತ್ತವೆ
ಆ ನಮ್ಮ ನವಿಲುಗಳು

ಯಾಕಂದರೆ
ಈ ದಿನಗಳಲ್ಲಿ
ಅವಕ್ಕೆ ಮಾತ್ರ ಗೊತ್ತು

ಆ ಬೆಟ್ಟದಲ್ಲಿ
ಆ ಮೌನದಲ್ಲಿ
ಸುಮ್ಮನೆ ಸುರಿಯುವ ಮಳೆ
ಮಾಗಿಯಲ್ಲುದುರುವ ಎಲೆ
ವರ್ಷದುದ್ದಕ್ಕೂ ಚೆಲ್ಲುವ
ಮುಂಜಾವಿನ ಕೆಂಪುರಂಗೋಲಿ
ಬಯಕೆಯ ಕಾವು
ವಿರಹದ ನೋವು
ಗರಿಬಿಚ್ಚಿ ಕುಣಿವಾಗ
ನೀಲಿ ಹಸಿರು ರೇಶಿಮೆಯ
ನಲಿವು
ಇತ್ಯಾದಿ
ಚಿಲ್ಲರೆ ಸಂಗತಿಗಳ
ನಿಗೂಢ ಭಾವನೆಗಳು

ಬಿಳಿಗಿರಿರಂಗನ ಬೆಟ್ಟದಲ್ಲಿ
ನವಿಲುಗಳ ರಕ್ತದಲ್ಲಿ
ಇನ್ನೂ ಹರಿಯುತ್ತಿದೆ
ಋತುಗಳೊಂದಿಗಿನ ಬಂಧ
ಶತಶತಮಾನಗಳ ಸಂಬಂಧ

ನವಿಲುಗಳು
ನನ್ನ ನಿನ್ನ ಹಾಗಲ್ಲ ಕಣೇ
ನನ್ನ ಹುಡುಗಿ

ಎರಡು

ನಾನು ನೀನು
ಬೆಟ್ಟದ ನವಿಲುಗಳಲ್ಲ ಕಣೇ
ನನ್ನ ಹುಡುಗಿ

ನಾವೆಲ್ಲ
ನೆಹರೂ ತಾತನ
ಮುದ್ದಿನ ಮೊಮ್ಮಕ್ಕಳು
ವಿಜ್ಞಾನ ದೇವತೆಯ
ನಿತ್ಯ ಆರಾಧಕರು
ಇಪ್ಪತ್ತೊಂದನೆಯ ಶತಮಾನಕ್ಕೆ ಇಡೀ ನಾಡನ್ನು
ಕೊಂಡೊಯ್ಯಲು ಪಣತೊಟ್ಟ ಪರಮವೀರರು

ನಮಗೆ
ಓದಲು ಪುಸ್ತಕಗಳಿವೆ
ಘೋಷಣೆಗಳಿಗೆ ಬೀದಿಗಳಿವೆ
ಪೋಸ್ಟರುಗಳಿಗೆ ಗೋಡೆಗಳಿವೆ
ಬಾವುಟಗಳು
ನಮ್ಮ
ಬದುಕಿನಂಗಳದ ರಂಗೋಲೆಗಳು

ನನಗೆ ನಿನಗೆ ಮತ್ತು
ನಮ್ಮೆಲ್ಲರಿಗೆ ಇವೆ
ಮಿದುಳನ್ನು ಹಿಂಡುವ
ನೂರೊಂದು ನೋವುಗಳು
ನೋವುಗಳಿಗೊಂದಿಷ್ಟು
ಸೈದ್ದಾಂತಿಕ ಅರ್ಥಗಳು
ನಗುತ್ತೇವೆ ಅಳುತ್ತೇವೆ
ಕೂಗುತ್ತೇವೆ ಕುಣಿಯುತ್ತೇವೆ
ಒಮ್ಮೊಮ್ಮೆ ಅಪರೂಪಕ್ಕೆ
ಎದೆಬಿಚ್ಚಿ ಹಾಡುತ್ತೇವೆ

ಉರಿಯುವ ಸೂರ್ಯನ
ಬೆಳಕಲ್ಲೇ ತಡಕಾಡುತ್ತೇವೆ
ನಮ್ಮೊಳಗಿನ ಭಾವನೆಗಳಿಗೆ
ಕತ್ತಲಕೋಣೆಯ ಖೈದಿಗಳ ಹಾಗೆ

ನಮಗೆ ಗೊತ್ತಿಲ್ಲ
ಚೈತ್ರದುಲ್ಲಾಸ
ಮಾಗಿಯ ರಾತ್ರಿಯಲ್ಲಿ
ಕಂಬಳಿಯೊಡನಸರಸ

ಮೂರು

ನವಿಲುಗಳು ನಮ್ಮ ಹಾಗಲ್ಲ ಕಣೇ
ನನ್ನ ಹುಡುಗಿ
ನಾವು ನವಿಲುಗಳಲ್ಲ.

ಕಂಡದ್ದನಾಡುವುದು

 

 

 

 

 

 

 

 

ಇರುಳ ಪ್ರಸ್ತದಲ್ಲಿ ಹರಿದು ಸುರಿಯುವುದೊಂದೆ ಗೊತ್ತು
ಅಂಡವೇ ಪಿಂಡವನ್ನರಸಿ ಬರಬೇಕು
ಗರ್ಭಕೋಶಕ್ಕೆ ಸರಿಯಬೇಕು ಭ್ರೂಣ ಬಲಿಯಬೇಕು
ಘಂಟಾಕರ್ಣನ ಅರಸೊತ್ತಿಗೆಯಲ್ಲಿ
ಹಾಸಿಗೆಯುದ್ದಕ್ಕೂ ಗೊರಕೆಯ ಹತ್ತಿ

ಮನೆಯ ಮುಂದಿನ ಬೇವು ಹೋಳು ಹೋಳಾಗಿ
ಹಿತ್ತಿಲನು ಸೇರಬೇಕು ತನ್ನಷ್ಟಕ್ಕೆ ತಾನೇ ಒಲೆಗೆ ತೂರಬೇಕು ನಾವು
ಕೊಡಲಿ ಹಿಡಿಯುವುದಿಲ್ಲ
ಘಂಟಾಕರ್ಣನ ಅರಸೊತ್ತಿಗೆಯಲ್ಲಿ
ರಸ್ತೆಗಳೆಲ್ಲ ಕಪ್ಪು ಕಪ್ಪು ಮೊಲಗಳೋಡುವುದಿಲ್ಲ
ಆಮೆ ನಿಲ್ಲುವುದಿಲ್ಲ

ನಮಗೆ ಮೈತುಂಬಾ ಗುಳ್ಳೆಗಳು
ಗುಳ್ಳೆಗಳ ತುಂಬಾ ಹಸಿರು ಕೀವು ತುರಿಸಿಕೊಳ್ಳಲು ಉಗುರೇ ಇಲ್ಲ
ಇಲ್ಲಿ
ಕೊಡಲಿ ಹಿಡಿಯುವುದಿಲ್ಲ ಖಂಡಿತಕ್ಕೂ
ತನ್ನಷ್ಟಕ್ಕೆ ತಾನೆ
ಘಂಟಾಕರ್ಣನ ಅರಸೊತ್ತಿಗೆಯಲ್ಲಿ
ಮರ ಉರಿಯಬೇಕು ಗುಳ್ಳೆ ಒಡೆಯಬೇಕು
ಕೀವು ಸುರಿಯಬೇಕು ಅಂಡ ಸರಿಯಬೇಕು
ಅರಸನ ಪ್ರಸ್ತದಲ್ಲಿ ಮಾತ್ರ ಹಾಸಿಗೆಯುದ್ದಕ್ಕೂ ಗೊರಕೆಯ ಹತ್ತಿ
ಕಿವಿಯ ತುಂಬಾ ಲೊಚಗುಟ್ಟುವ ಹಲ್ಲಿಗಳು
ಆಕಳಿಸುವ ಬೆಕ್ಕುಗಳು

ಹೀಗೊಂದು ಹೇಳಿಕೆ

ಗಾಂಧಿಬಜಾರು
ಬಸವನಗುಡಿ
ಹೊಸಬಡಾವಣೆಗಳ
ಹೈಕಳುಗಳಲ್ಲ ನಾವು
ಬತ್ತಲನುಟ್ಟು
ಗಾಳಿಯನುಂಡು
ಕನಸುಗಳ ತೇಗಿದ
ಕೂಸುಗಳು ನಾವು

ಅಂತರಗಂಗೆಯ
ಸಂತರಿಗೆ
ಸರಣು ಎಂದವರು

ಚಿಂದಿ ಚೂರುಗಳ
ಕೌದಿಯ ಹೊದ್ದು
ನಾಳೆಗಳೆಂಬ
ಸಂಭ್ರಮದಲ್ಲಿ
ಎದೆಯಾಳದ
ಹಾಡುಗಳ ಹೊಸೆದವರ
ಒಕ್ಕಲು ನಾವು

ಹಳ್ಳಿ ದಿಲ್ಲಿ
ಗಲ್ಲಿ ಗಲ್ಲಿಗಳಲ್ಲಿ
ನಮ್ಮ ಕಳ್ಳುಬಳ್ಳಿಗಳು

ಎಲ್ಲೆಡೆ ಇರುವ
ಎಲ್ಲರನು ಸಲಹುವ
ದೇವಿಗೆ
ದೇಗುಲ
ನಮ್ಮ ನೆನಪುಗಳು
ಹಸಿದ ಕಂದನ
ಕಣ್ಣಂಚಿನಲಿ
ಸುಳಿವ ಮಿಂಚು
ಕರ್ಪೂರದಾರತಿ
ಇರುವುದಷ್ಟನು
ಹಂಚಿ ತಿಂಬುವುದು
ನಮ್ಮ ನಿತ್ಯದಾಸೋಹ

ಅಲ್ಲಿ ಇಲ್ಲಿ ಎಲ್ಲೆಡೆಯಲ್ಲಿ
ಮೂಸುತಿವೆ ಹೆಜ್ಜೆ ಗುರುತು
ಕವಿದು ಕೆಂಧೂಳು

ಹರಿವ ನದಿಗಳು ಇಂಗಿ
ಕಾದ ಮರಳು
ಕಾಲನರಮನೆಯಲ್ಲಿ
ಕವಿಗಳೆಲ್ಲರು
ಕಿಕ್ಕಿರಿದು
ಕಾವ್ಯದೇವಿಯ
ಉಸಿರುಗಟ್ಟಿ
ನಿಟ್ಟುಸಿರ ಬಿಟ್ಟಂತೆ
ನಮ್ಮ ಹಾಡು

ಬಲ್ಲವರ ಎದೆಯಲ್ಲಿ
ಸಿಡಿವ
ಒಡಲಕಿಚ್ಚು

ಜವರಾಯನಿಗೆ

 

 

 

 

 

 

 

ಹೆದರದಿರು ಗೆಳೆಯ
ಕಾಡುವುದಿಲ್ಲ ನಾನಿನ್ನ
ಸಾವಿತ್ರಿಯಂತೆ
ಹೆಪ್ಪುಗಟ್ಟಿರುವ ಎದೆಯಿಂದ
ಎಲ್ಲ ನೆನಪುಗಳ ಕಡೆದು
ಎದ್ದ ಬೆಣ್ಣೆಯ ಕಾಸಿ
ಸಿದ್ಧರ ಗದ್ದುಗೆಗೆ
ಎಡೆಯಿಟ್ಟು ಸಣಮಾಡಿ ಬಂದೇನು
ಕಾದು ನಿಲ್ಲುವೆಯ ಗೆಳೆಯ
ಒಂದು ಗಳಿಗೆ

ಸತ್ಯವಾನನು ನಾನಲ್ಲ
ಸಾವಿತ್ರಿ ನನ್ನ ಹೆಂಡತಿಯಲ್ಲ
ಪುರಾಣ ಪುಣ್ಯಕಥೆಯಲ್ಲ
ನನ್ನ ಬದುಕು

ನಿತ್ಯ ಜಂಜಡದಾಚೆ
ಮತ್ತೆ ದೀವಳಿಗೆ
ಹೊಸಲ ಬೆನಕನಿಗಿಷ್ಟು
ಚೆಂಡು ಹೂವುಗಳನಿಟ್ಟು
ಹಚ್ಚಿ ಹಣತೆಯ ಬತ್ತಿ
ಬಂದೇನು ಗೆಳೆಯ
ನಿಲ್ಲು ಒಂದು ಗಳಿಗೆ

ಹೆದರದಿರು ಗೆಳೆಯ
ಇದೆ ಹುಲ್ಲು ಕಲಗಚ್ಚು
ಕಾಯಿ ಹೊಸ ಬೆಲ್ಲದಚ್ಚು
ನಿನ್ನ ಎಮ್ಮೆಗೆ ಫಲಹಾರ

ಚಿತ್ರಗುಪ್ತನಿಗೆ ಕೋಸಂಬರಿ
ಪಾನಕ ಪನಿವಾರ
ಕೂಡಿ ಕಳೆಯಲು ನೂರು
ಪಾಪ ಪುಣ್ಯಗಳಂಥ
ನೆನಪು ನೆನೆದಷ್ಟು

ಹಸಿದ ಹೊಟ್ಟೆಗೆ
ಕುಣಿದ ಕಾಲಿಗೆ
ಕುಂತು ಎಲ್ಲವ
ಕಂಡ ಕೇರಿಗೆ
ನಿತ್ಯ ಗೆಳೆಯನು ನೀನು
ನಿಲ್ಲು ಅರೆಗಳಿಗೆ
ಬರುವೆ ನಿನ್ನ ಬಳಿಗೆ

ಮಿಂಚು ಗುಡುಗುಗಳ
ಹಿಡಿದು ತರಲೆಂದು
ಸಂಚುಗಾರರ ಚರಗ
ಚೆಲ್ಲಿ ಬರಲೆಂದು
ಹೋದ ಮೆರವಣಿಗೆಗಿಂದು
ಕಾದು ಕುಂತಿದೆ ಗೆಳೆಯ
ನನ್ನ ಕಳ್ಳುಬಳ್ಳಿ

ಬರಲಿ ಮೊದಲೀ ಕೇರಿಗೆ
ಎಲ್ಲರುಣ್ಣುವ ಹೋಳಿಗೆ
ಉಂಡ ಎಲೆಗಳನ್ನೆತ್ತಿ
ಹಿರಿಯರೆಲ್ಲರ ನೆನೆದು
ಹೊರಟೇನು ನಿನ್ನ ಬೆನ್ನ ಹಿಂದೆ