ರೂಪ ಆಕಾರ ಅಸ್ತಿತ್ವಗಳ ಗೆರೆ ಅಳಿಸಿ
ಕಾಲ ಕರಗಿ ನಿಲ್ಲುವೆಡೆ
ಪ್ರೀತಿ ಆವಿರ್ಭವಿಸುತ್ತದೆ
ಕಣ್ಣರಿಯದ ಬ್ರಹ್ಮಾಂಡದ ತಂತು
ಪವಿತ್ರ ಆತ್ಮಗಳ ಬೆಸೆಯುತ್ತದೆ

ನಿನ್ನಲ್ಲಿ ಗುರುತಿಸಿದೆ ಆತ್ಮಸಖ್ಯವನು
ನನ್ನ ಪ್ರತಿಬಿಂಬಿಸುವ ಖಚಿತ ಕನ್ನಡಿಯನು
ಒಲವು ಮಾಸದ ಸಾಮ್ರಾಜ್ಯದ ದ್ವಾರವೆಲ್ಲಿದೆ
ಹುಡುಕಬೇಕು ನಾವು ಒಡಗೂಡಿ

ನಮ್ಮ ಮಿಲನ ದೈವೀಕ
ಮನವನರಳಿಸುವ ಬೆಳಕ ಬಳುಕು
ಮಿಡಿತಗಳೆರಡು ಒಂದಾಗುವತನಕ
ಅವಿರತವಾಗಿ ಬೆಳೆವ ಬಂಧ

ಓಹ್‌ ನನ್ನಾತ್ಮವೇ
ನಿನ್ನೊಂದಿಗೆ
ದಿಗಂತಗಳ ದಾಟಬೇಕು
ಮೇರೆಗಳ ಮೀರಬೇಕು
ಜೀವಭಾವಗಳೈಕ್ಯವಾಗಬೇಕು
ಆಕಾಶ ನಮ್ಮದಾಗಬೇಕು…

ನಿವೇದಿತಾ ಎಚ್‌. ಯುವರಾಜ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡೇನಿಯಲ್ ಗ್ರೀನ್ಬರ್ಗ್ ನ Free At Last ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕವನಗಳನ್ನು ಬರೆಯುವ ಹವ್ಯಾಸದ ಜೊತೆ ಆಯ್ದ ಒಂದಷ್ಟು ಇಂಗ್ಲಿಷ್ ಕವನಗಳನ್ನು ಅಕನ್ನಡಕ್ಕೆ ಅನುವಾದಿಸಿದ್ದು, ಇವರ ಲೇಖನಗಳು ಮತ್ತು ಪ್ರಬಂಧಗಳು ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.