”ಆಫ್ರಿಕಾದ ಕೆಲವೊಂದು ಪ್ರದೇಶಗಳಲ್ಲಿ ಮಣ್ಣಿನೊಳಗೆ ಇಂತಹ ಮೀನುಗಳು ಹುದುಗಿರುತ್ತವೆ. ಆ ಮಣ್ಣನ್ನು ಇಟ್ಟಿಗೆ ಮಾಡಿ ಮನೆ ಕಟ್ಟುತ್ತಾರೆ. ಅಲ್ಲಿ ಮಳೆ ಬರಲು ಕೆಲವೊಮ್ಮೆ ಎಂಟು ಹತ್ತು ವರ್ಷಗಳಾಗಿದ್ದೂ ಉಂಟು. ಮೊದಲ ಮಳೆಗೆ ನೀರಿನ ತೇವ ಅನುಭವವಾದ ಕೂಡಲೇ ಮಣ್ಣಿನ ಇಟ್ಟಿಗೆಯಲ್ಲಿ ಹುದುಗಿರುವ ಮೀನುಗಳು ಹೊರ ಬಂದು ಮಳೆಯ ನೀರಿನಲ್ಲಿ ಈಜಿ ಮತ್ತೆ ಮಣ್ಣೊಳಗೆ ಹುದುಗಿ ಹೋಗುತ್ತವೆ. ಮತ್ತೆ ಮುಂದಿನ ಮಳೆಯವರೆಗೂ ಕಾಯುತ್ತವೆ”
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರದ ಕಥೆಗಳ ಮೂರನೆಯ ಕಂತು.

 

ಮೀನು ಹಿಡಿಯುವ ಕಥೆ ಮೊದಲೇ ಹೇಳಿದ್ದೆ. ಮಳೆಗಾಲ ಬಂದಾಗ ಬಹುತೇಕ ಊರಿನ ಎಲ್ಲಾ ನೀರ ಗುಂಡಿಗಳಲ್ಲಿ ಕಾದು ಕುಳಿತು ಸಣ್ಣ ಮೀನು ಹಿಡಿಯುವುದು ನನಗೆ ಚಟವಾಗಿ ಬೆಳೆದಿತ್ತು. ಕೆಲವರಂತೂ ಮಸೀದಿ ಬಳಿ ಇರುವ ಕೆರೆಗೆ ಗಾಳ ಹಾಕಿ ಮೀನು ಹಿಡಿಯುತ್ತಿದ್ದರು. ನಾವು ಹಾಕುತ್ತಿದ್ದುದ್ದು ಪುಟ್ಟ ಗಾಳ. ಒಂದು ಕೇಜಿ ಭಾರವನ್ನು ಸರಿಯಾಗಿ ಹೊರಲಾರದಂಥವು. ಅಂತಹ ಗಾಳದಲ್ಲಿ ಮೀನು ಏನೋ ಸಿಗುತ್ತಿತ್ತು. ಆದರೆ ಅದನ್ನು ಜೀವಂತ ಹಿಡಿಯುವುದು ಅಸಾಧ್ಯವಿತ್ತು. ಸಣ್ಣಗಾಳಕ್ಕೆ ಕಿವಿರು ಸಿಗಿದು ಹೊರ ಬರುವ ಮೀನಿನ ದಾರುಣ ಸಾವನ್ನು ನನಗಂತೂ ಅರಗಿಸಿಕೊಳ್ಳಲಾಗುತ್ತಿರಲಿಲ್ಲ. ಜೀವಂತ ಮೀನಿನ ಆಟೋಪಾಟಗಳನ್ನು ನೋಡುವುದರ ಖುಷಿ ಕೊಲ್ಲುವುದರಿಂದ ಎಲ್ಲಿಂದ ಸಿಕ್ಕೀತು? ತಿನ್ನಲು ಯೋಗ್ಯವಾದರೆ ಗಾಳ ಹಾಕಿ ಮೀನು ಹಿಡಿಯುವುದಕ್ಕೊಂದು ಅರ್ಥಬರುತ್ತದೆ. ಬರೇ ಮನೋರಂಜನೆಗೋಸ್ಕರ ಕೊಲ್ಲುವುದು ನನ್ನ ಪಾಡಿಗೆ ನೋವಿನ ಸಂಗತಿ. ಹುಚ್ಚು ಪ್ರವೃತ್ತಿಗೆ ಗಾಳ ಹಾಕಿ ಮೀನನ್ನು ಕೊಲ್ಲುವವರನ್ನು ಕಂಡರೆ ನಾನು ವಿರೋಧಿಸುತ್ತಿದ್ದೆ. ಕೊನೆಗೆ ಹೊಡೆದಾಟದ ಮಟ್ಟಕ್ಕೆ ಬಂದರೆ ನನ್ನ ಬಡಕಲು ದೇಹದಿಂದ ಏನೂ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿ ಮನದಲ್ಲೇ ಶಪಿಸುತ್ತಾ ಸುಮ್ಮನೆ ಗಾಳ ಹಾಕುವವರನ್ನೇ ದಿಟ್ಟಿಸುತ್ತಿದ್ದೆ. ಹಿಡಿದ ಮೀನನ್ನು ತೊಳೆಯಲು ಕುಳಿತರೆ ನೀರಿನಲ್ಲೇ ಕರಗಿ ಹೋಗುವಷ್ಟು ಸಣ್ಣದಾದ ತೊರೆಯ ಮೀನುಗಳನ್ನು ಸಾರಿನಲ್ಲಿ ನೋಡಲು ಸಾಧ್ಯವೇ?

ಒಂದೆರಡು ಬಾರಿ ಗಾಳ ಹಾಕುವ ಅನುಭವನ್ನು ನಾನೂ ಪಡೆದಿದ್ದೆ. ನಾವು ಆಗ ಬಳಸುತ್ತಿದ್ದುದ್ದು ೫೦ ಪೈಸೆಯ ಗಾಳ. ದೊಡ್ಡದೆಂದರೆ ೨ ರೂಪಾಯಿಯದ್ದೇನೋ? ಅಂತಹ ಸಣ್ಣ ಗಾಳಕ್ಕೆ ಎರೆಹುಳು ಸಿಕ್ಕಿಸುವ ಪ್ರಹಸನ ಹೇಳ ತೀರದು. ಮಳೆಗಾಲದಲ್ಲಿ ಹೇರಳವಾಗಿ ಕಾಣ ಸಿಗುವ ಎರೆಹುಳುಗಳು ಗಾಳ ಕೊಂಡು ಬಂದ ದಿನ ಅದೆಲ್ಲಿ ಅಂತರ್ಧಾನವಾಗಿರುತ್ತವೆಯೊ? ಆದರೆ ಹುಡುಕಿ ಸಿಗದ ಎರೆಹುಳುಗಳಿಗೆ ಹೆಚ್ಚೇನು ತಲೆಕೆಡಿಸಿಕೊಳ್ಳಬೇಕಿರಲಿಲ್ಲ. ಸ್ವಲ್ಪ ಹಸಿಮಣ್ಣು ಅಗೆದರೆ ರಾಶಿ ರಾಶಿ ಸಿಗುತ್ತಿತ್ತು. ನಾನು ಸಣ್ಣವನಿದ್ದ ಕಾರಣ ನನಗೆ ಎರೆಹುಳು ಸಿಕ್ಕಿಸೋ ಕೆಲಸವೇ ಸಿಗುತ್ತಿತ್ತು. ಕೆಲವೊಮ್ಮೆ ಗಾಳ ಹಾಕಲು ಅವಕಾಶ ಸಿಕ್ಕಿದರೆ; ಇನ್ನೇನು ಮೀನು ಗಾಳಕ್ಕೆ ಸಿಕ್ಕಿಸಿದ್ದ ಹುಳ ತಿನ್ನುತ್ತಿದೆ ಎಂದು ಅನಿಸುತ್ತಿರುವಾಗಲೇ ತುರ್ತಿನಲ್ಲಿ ಎಳೆದು ಮೀನು ತಪ್ಪಿಸಿ ಜತೆಗಿದ್ದವರಿಂದ ಉಗಿಸಿಕೊಂಡದ್ದೇ ಅಧಿಕ.

ನಾವು ಗಾಳಕ್ಕಿಂತ ಹೆಚ್ಚಾಗಿ ಮೀನು ಹಿಡಿಯುತ್ತಿದ್ದುದು ಬಟ್ಟೆಯಿಂದಲೇ. ಸಿಕ್ಕ ಮೀನುಗಳನ್ನೆಲ್ಲಾ ಪ್ಲಾಸ್ಟಿಕ್ ಲಕೋಟೆಯಲ್ಲಿ ನೀರು ತುಂಬಿ ತಿಳಿ ನೀರಲ್ಲಿ ಈಜಾಡುವ ಮೀನನ್ನು ನೋಡಿ ಸಂತೋಷ ಪಡುತ್ತಿದ್ದೆವು. ಮಧ್ಯಾಹ್ನದ ಹೊತ್ತಿಗೆ ಊಟಕ್ಕೆಂದು ಮನೆಗೆ ಬರುವಾಗ ನಮ್ಮ ಕೈಯಲ್ಲಿ ಮೀನು ಕಂಡರೆ ಅಮ್ಮನ ಕೈಯಲ್ಲಿ ಹೊಡೆತ ತಿನ್ನಬೇಕಿತ್ತು. ಅಮ್ಮ ಬೈಯ್ದರೂ ನಾವು ಎಂದೂ ಮೀನು ಹಿಡಿದು ಮನೆಗೆ ಹೋಗುವ ಚಾಳಿ ಬಿಟ್ಟಿರಲಿಲ್ಲ. ಮನೆಯ ಹತ್ತಿರ ಸಣ್ಣ ‘ಕಲ್ಲು ಕಂಪೌಂಡ್ ‘ ( ಸಿಮೆಂಟ್, ಹೊಯ್ಗೆ ಬಳಸದೆ ಕಲ್ಲುಗಳಿಂದ ಕಟ್ಟುತ್ತಿದ್ದ ಬೇಲಿ) ಇತ್ತು. ಆಸ್ಪತ್ರೆಯಿಂದ ಅಜ್ಜನಿಗೆಂದು ತರುವ ಅಥವಾ ಮನೆಯಲ್ಲಿ ಶೀತ ನೆಗಡಿ ಜ್ವರದಂತಹ ಮಾಮೂಲಿ ರೋಗಗಳಿಗಾಗಿ ತರುತ್ತಿದ್ದ ದಶಮೂಲಾರಿಷ್ಟದ ಖಾಲಿ ಗಾಜಿನ ಬಿರಡೆಗಳು ಆಗ ಈ ಕಲ್ಲಿನ ಸಂದುಗಳಲ್ಲಿ ಹೇರಳವಾಗಿ ಸಿಗುತ್ತಿದ್ದವು. ಅವುಗಳನ್ನು ಅಲ್ಲಿಂದ ಎಗರಿಸಿ ಚೆನ್ನಾಗಿ ತೊಳೆದು ಅದರೊಳಗೆ ನೀರು ತುಂಬಿ ತೊರೆಯಿಂದ ಹಿಡಿದ ಮೀನುಗಳನ್ನು ಬಿಟ್ಟರೆ ನಮ್ಮ ಬಹುತೇಕ ಕೆಲಸಗಳು ಮುಗಿದಂತೆಯೇ. ಮತ್ತೆ ಊಟ ಮುಗಿಸಿ ಆಟಕ್ಕೆ ನಿಂತರೆ ಯಾವ ನೆನಪು ಹತ್ತಿರ ಸುಳಿಯದು.

ಆಗ ಕ್ರಿಕೆಟ್ಟಿನ ಹುಚ್ಚು ಬಹಳ. ಬಹುಶಃ ೨೦೦೩ ರ ವಿಶ್ವಕಪ್ ನ ಸಂದರ್ಭವದು. ಅವರ ಆಟ ನೋಡಿ ಮನೆಯ ಅಂಗಳದಲ್ಲಿ ಆಡುವ ನಮಗೆ ಹೊಸ ಉಮೇದು. ಪ್ಯಾಡ್ ಗೆ ಬದಲಾಗಿ ಅಡಕೆ ಸೋಗೆಯನ್ನು ಕತ್ತರಿಸಿ ಕಾಲಿಗೆ ಕಟ್ಟುತ್ತಿದ್ದೆವು. ಕೈಗವಚವಂತೂ ಇರಲಿಲ್ಲ. ಮನೆಯಲ್ಲಿ ಅಕ್ಕ ಹೊಲೆದಿಟ್ಟ ಡಸ್ಟರ್ ಕವಚವನ್ನೂ ಬಿಡದೆ ಕೈಗೆ ಸುತ್ತಿಕೊಂಡು ದಾರಿಯಲ್ಲಿ ಬರುವ ಬಸ್ಸಿನವರಿಗೆಲ್ಲಾ ಶತಕ ಬಾರಿಸಿದವರಂತೆ ಬೀಸುವ ಮಜಾನೇ ಬೇರೆ. ಹಾಗೆ ಆಡುತ್ತಿದ್ದಾಗ ಮಧ್ಯೆ ಚೆಂಡು ಮೀನು ಹಾಕಿಟ್ಟ ಕಡೆ ಹೋದರೆ ಒಮ್ಮೆ ಬಾಟಲಿಯನ್ನು ಎತ್ತಿ ಮೀನಿರುವುದು ನೋಡಿ ಸಂಭ್ರಮಿಸುವುದು ನಡೆಯುತ್ತಲಿತ್ತು. ಆ ಸಂಭ್ರಮ ಹೆಚ್ಚು ಹೊತ್ತು ಉಳಿಯುತ್ತಿರಲಿಲ್ಲ. ಮರು ದಿನ ಎರಡೋ ಮೂರು ಮೀನುಗಳಿದ್ದ ಬಿರಡೆಯಲ್ಲಿ ಒಂದೇ ಮೀನು ಅಂಗಾತ ಸತ್ತು ತೇಲುತ್ತಾ, ಉಳಿದೆರಡು ಬಾಟಲಿಯ ಹೊರಕ್ಕೂ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದವು. ನಾಲ್ಕಾರು ಬಾರಿ ಹಿಡಿದು ತಂದಾಗಲೂ ಇದೇ ರೀತಿ ಆಯಿತು. ಮತ್ತೆ ಅವುಗಳ ಸಾವನ್ನು ಕಣ್ಮುಂದೆ ನೋಡುವುದನ್ನು ಸಹಿಸಿಕೊಳ್ಳುವುದೇ ಕಷ್ಟವಾಗತೊಡಗಿದ ಬಳಿಕ ಹಿಡಿದ ಮೀನನ್ನೆಲ್ಲಾ ಮಸೀದಿಯ ಟ್ಯಾಂಕಿಗೆ ಬಿಡತೊಡಗಿದೆವು. ವಾರಕ್ಕೊಮ್ಮೆ ತೊಳೆಯುವಾಗ ಹಾಕುತ್ತಿದ್ದ ಔಷದಿಯ ಘಾಟಿಗೋ ಅಥವಾ ಪುಟ್ಟ ಸ್ಥಳವಾದ್ದರಿಂದ ಸ್ವಾತಂತ್ರ್ಯದ ಕೊರತೆಯೋ ಅಂತೂ ನಮ್ಮ ಮೀನುಗಳು ಮಸೀದಿಯ ಟ್ಯಾಂಕಿನಲ್ಲೂ ಹೆಚ್ಚು ಕಾಲ ಬದುಕುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಗಾಗಿ ಮೀನು ಹಿಡಿದು ಸಾಕುವ ಕೆಲಸಕ್ಕೆ ರಾಜೀನಾಮೆ ಹಾಕಬೇಕಾಯಿತು.

ನಾನು ಸಣ್ಣವನಿದ್ದ ಕಾರಣ ನನಗೆ ಎರೆಹುಳು ಸಿಕ್ಕಿಸೋ ಕೆಲಸವೇ ಸಿಗುತ್ತಿತ್ತು. ಕೆಲವೊಮ್ಮೆ ಗಾಳ ಹಾಕಲು ಅವಕಾಶ ಸಿಕ್ಕಿದರೆ; ಇನ್ನೇನು ಮೀನು ಗಾಳಕ್ಕೆ ಸಿಕ್ಕಿಸಿದ್ದ ಹುಳ ತಿನ್ನುತ್ತಿದೆ ಎಂದು ಅನಿಸುತ್ತಿರುವಾಗಲೇ ತುರ್ತಿನಲ್ಲಿ ಎಳೆದು ಮೀನು ತಪ್ಪಿಸಿ ಜತೆಗಿದ್ದವರಿಂದ ಉಗಿಸಿಕೊಂಡದ್ದೇ ಅಧಿಕ.

ಇತ್ತೀಚೆಗೆ ಯೂಟ್ಯೂಬ್ ನಲ್ಲೊಂದು ವಿಡಿಯೋ ನೋಡಿದ್ದೆ. ಆಫ್ರೀಕಾದ ಕೆಲವರು ಮಣ್ಣು ಅಗೆದು ನೆಲದಿಂದ ಮೀನು ಹಿಡಿಯುತ್ತಿದ್ದರು. ಮರಗೆಣಸಿನಂತೆ ಮಣ್ಣಿನಿಂದ ಮೀನನ್ನು ಹೇಗೆ ಅಗೆಯುತ್ತಾರೆ? ನೀರಿಲ್ಲದೆ ಮಣ್ಣಲ್ಲಿ ಅದು ಹೇಗೆ ಮೀನುಗಳು ಬದುಕುಳಿಯುತ್ತವೆ? ಎಂಬ ವಿಚಿತ್ರ ಪ್ರಶ್ನೆಗಳು ನನ್ನನ್ನು ವಿಪರೀತ ಕಾಡಿತು. ಗೆಳೆಯರಾದ ಡಾ. ಹನೀಫ್ ಬೆಳ್ಳಾರೆಗೆ ಕರೆ ಮಾಡಿ “ನೀರಿಲ್ಲದೆ, ಮೀನುಗಳ ಬದುಕುವುದೇ?” ಎಂಬ ಕುತೂಹಲ ಬಿಚ್ಚಿಟ್ಟೆ. ಅದಕ್ಕಿರುವ ವಿವರಗಳನ್ನು ಸ್ಥೂಲವಾಗಿ ಹೇಳಿಕೊಟ್ಟ ಅವರು ಪೂರಕವಾಗಿ ಅವರಿಗಾದ ಜೀವ ಪ್ರಪಂಚದ ಅನುಭವವೊಂದನ್ನು ತೆರೆದಿಟ್ಟರು. ಅವರ ಮಾತಿನಲ್ಲೇ ಹೇಳುತ್ತೇನೆ ಕೇಳಿ.

“ವರ್ಷಗಳ ಹಿಂದೆ ಒಂದು ಮಳೆಗಾಲದಲ್ಲಿ, ಮನೆಯ ಚಾವಡಿಯ ಎತ್ತರದ ತಿಟ್ಟೆಯಲ್ಲಿ ಮಲಗಿದ್ದೆ. ಬೆಳಗಿನ ಜಾವ ಮೂರು ಗಂಟೆ ಸಮಯ. ಹೊರಗೆ ಮಳೆಯ ಶಬ್ದ ಬಿಟ್ಟರೆ ಬೇರೆ ಯಾವ ಗದ್ದಲವೂ ಇಲ್ಲದೆ ನಿಶ್ಯಬ್ದವಾಗಿತ್ತು. ಸಣ್ಣಗೆ ‘ಪಟ್…ಪಟ್’ ಎಂಬ ಶಬ್ದಕ್ಕೆ ನನಗೆ ಎಚ್ಚರವಾಯಿತು. ಯಾವುದೋ ಕೀಟ ರಾತ್ರಿ ಬೆಳಕಿಗೆ ಬಿದ್ದಿದ್ದು ಈಗ ಕತ್ತಲೆಯಲ್ಲಿ ತಡಕಾಡುತ್ತಿರಬಹುದು ಎಂದುಕೊಂಡು ಮಗ್ಗುಲು ಬದಲಿಸಿದೆ. ಸ್ವಲ್ಪ ಹೊತ್ತಿನಲ್ಲಿ ಮತ್ತದೇ ಸದ್ದು. ನನಗೆ ಯಾಕೋ ಕುತೂಹಲ ಹುಟ್ಟುತ್ತಿತ್ತು. ಎದ್ದೇಳುವ ಮನಸ್ಸಂತೂ ಆಗಲಿಲ್ಲ. ಕುತೂಹಲ ಗರಿಗೆದರಿತ್ತು. ಮತ್ತೆ ಸ್ವಲ್ಪ ಹೊತ್ತಿನಲ್ಲೇ ಅದೇ ಸದ್ದು. ಹಾವುಗಳೇನಾದರೂ ಆಗಿರಬಹುದೇ? ಸಣ್ಣ ಹಾವುಗಳು ಹಲ್ಲಿಯನ್ನು ಹಿಡಿದಿರಬಹುದೇ? ಕುತೂಹಲ ಮತ್ತಷ್ಟು ಮನೆ ಮಾಡಿತು. ಮತ್ತೆ ನಿಶ್ಯಬ್ಧ, ಸ್ವಲ್ಪ ಸಮಯದ ತರುವಾಯ ಮತ್ತದೇ ಸದ್ದು. ಈ ಸಲ ಮೆಲ್ಲಗೆ ಲೈಟ್ ಉರಿಸಿದೆ. ಅರೇ! ಏನೂ ಕಾಣುತ್ತಿಲ್ಲ, ಎಲ್ಲ ಕಡೆ ನೋಡಿದರೂ ಒಂದೇ ಒಂದು ಚಿಟ್ಟೆಯೋ ದುಂಬಿಯೋ ಹಲ್ಲಿಯೋ ಹಾವೋ ಕಾಣಿಸಲಿಲ್ಲ. ಬೆಳಕು ನಂದಿಸದೆ ಹಾಗೆಯೇ ಮಲಗಿಕೊಂಡೆ. ಕೊಂಚ ಹೊತ್ತಿಗೆ ಮತ್ತೆ ಪಟ್ ಪಟ್ ಸದ್ದು ಕೇಳಿ ದಿಗಿಲಾಯಿತು. ಸದ್ದು ಕೇಳುತ್ತಿದೆ; ಆದರೆ ಏನೊಂದೂ ಕಾಣುತ್ತಿಲ್ಲವೆಂದರೆ ಭೂತದ ಚೇಷ್ಟೆ ಇರಬಹುದೇ ಎಂದು ಭಯವಾಯಿತು. ಈ ಸಲ ಸದ್ದು ಬರುವವರೆಗೂ ಕಾದು ಸೂಕ್ಷ್ಮವಾಗಿ ನೋಡಿದೆ. ನೋಡುವುದೇನು, ಕಿರು ಬೆರಳು ಗಾತ್ರದ ಮೀನೊಂದು ಜಿಗಿದು ಜಿಗಿದು ನೆಲಕ್ಕೆ ಹಾರಿ ಬೀಳುತ್ತಿತ್ತು.

ಹತ್ತಿರ ಹೋಗಿ ನೋಡಿದಾಗಲೇ ನೆನಪಾಗಿದ್ದು, ಅದೇ ದಿನ ಮಧ್ಯಾಹ್ನ ತಮ್ಮ ತೋಡಿನಿಂದ ಮೀನು ಹಿಡಿದು ಬಾಟಲಿಯೊಳಗೆ ಹಾಕಿದ್ದ. ಆದರೆ ಬಾಟಲಿಗಿಂತ ಸುಮಾರು ಇಪ್ಪತ್ತು ಅಡಿ ದೂರ ನೀರಿಲ್ಲದೆ ಹಾರಿತ್ತು. ನಾನು ಕೈಯಿಂದ ಹಿಡಿಯಲು ಹೋದರೆ ತಪ್ಪಿಸಿಕೊಂಡು ಮತ್ತಷ್ಟು ದೂರ ಹಾರಿತ್ತು. ಅಷ್ಟೂ ದೂರ ಹಾರಿ ತಲುಪಬೇಕಾದರೆ ಅದರಲ್ಲಿ ನೀರಿಲ್ಲದೆ ಬದುಕಬಲ್ಲ ಸಾಮರ್ಥ್ಯವೆಷ್ಟಿರಬೇಕು?” ಪ್ರಶ್ನೆ ಹಾಕಿ ನನ್ನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದರು. ಆ ಬಳಿಕ ತೇಜಸ್ವಿಯವರ “ಏರೋಪ್ಲೇನ್ ಚಿಟ್ಟೆ” ಪುಸ್ತಕದಲ್ಲಿ ಬರುವ ಮೀನುಗಳು, ಚೀಂಕ್ರ ಮೇಸ್ತ್ರಿ ಹೇಳುವ ಕಥೆಗೆ ತಳುಕು ಹಾಕಿದೆ. ಸಣ್ಣ ಮೀನಿಗೆ ಅಷ್ಟೂ ನೀರಿಲ್ಲದೆ ಬದುಕುವ ತ್ರಾಣವಿದ್ದರೆ ದೊಡ್ಡ ಮೀನುಗಳೇನು ಮಹಾ ಎಂದು ನನ್ನನ್ನೇ ಸಮರ್ಥಿಸಿಕೊಂಡೆ. ಅದಕ್ಕೆ ಇಂಬು ನೀಡುವಂತೆ ನನ್ನಜ್ಜಿ( ಚಿಕ್ಕಪ್ಪನ ಅಮ್ಮ) ಹೇಳುತ್ತಿದ್ದಂತೆ ಮಡಿಕೇರಿಯಲ್ಲಿ ಇದೇ ಥರದ ಹೊಳೆಯ ಮೀನು ನಾಡಿಗೆ ಬರುತ್ತಿದ್ದುದೂ, ಕೋಳಿ, ಆಡುಗಳನ್ನು ಗೂಡಿಗೆ ನುಗ್ಗಿ ತಿಂದು ಹಾಕುತ್ತಿದ್ದ ಕತೆಗಳು ನೆನಪಾದವು. ಅವುಗಳನ್ನು ಹಿಡಿಯಲು ಕೋಳಿ ಗೂಡಿಗೆ ಅವರು ಬೂದಿ ಹಾಕಿ ಮುಂದುವರಿಯಲಾಗದೆ ಅಲ್ಲೇ ಬೂದಿಯಲ್ಲಿ ಹೊರಳಾಡುತ್ತಿದ್ದುದನ್ನು ಅಜಕ್ಕಳ ಮಾಡಿ ಮಾಂಸವನ್ನು ಊರಿಗೇ ಹಂಚಿದ ಘಟನೆಯನ್ನೂ ಹೇಳುತ್ತಿದ್ದರು.

ಇದನ್ನೆಲ್ಲ ನೆನಪಿಸಿಕೊಳ್ಳುತ್ತ ಬರೆಯುವಾಗ ಸ್ವಲ್ಪ ಮಾಹಿತಿ ಕಲೆ ಹಾಕಬೇಕೆನಿಸಿತು. ತೇಜಸ್ವಿಯವರ ಜೀವವೈವಿಧ್ಯ ನಮ್ಮಲ್ಲಿ ಹಾಸು ಹೊಕ್ಕಾಗಿರುವುದರಿಂದಲೇ ಈ ಕುತೂಹಲವೂ ವಿಶೇಷ ಅನುಭೂತಿ ನೀಡುತ್ತಲೇ ಇರುತ್ತದೆ. ನೀರಿಲ್ಲದೆ ವಾಸಿಸುವ ಮೀನುಗಳಲ್ಲಿ ಭಾರತದಲ್ಲಿರುವ ಮೀಸೆ ಮೀನು(ಕ್ಯಾಟ್ ಫಿಶ್) ಕೂಡಾ ಒಂದು. ನೀರು ಬತ್ತಿದಾಗ ಕೆಸರಿನಲ್ಲಿ ಹುದುಗಿ ಬದುಕುವ ಅದ್ಭುತ ಸಿದ್ಧಿ ಈ ಮೀನಿಗೆ ಒಲಿದಿದೆ. ತನ್ನ ಸುತ್ತ ತೇವಾಂಶ ಹಿಡಿದಿಡುವಂತಹ ಅನುಕೂಲ ವಾತಾವರಣ ನಿರ್ಮಿಸಿ ಅವು ನೀರಿಲ್ಲದೆಯೇ ತೇವಾಂಶದಿಂದ ಮಣ್ಣಿನಿಂದ ಆಮ್ಲಜನಕ ಹೀರಿ ಬದುಕುತ್ತವೆ. ಇಂತಹದ್ದೇ ಮೀನು ಆಫ್ರಿಕಾ, ಅಮೇರಿಕಾ, ಆಸ್ಟ್ರೇಲಿಯಾಗಳಲ್ಲಿ ವಿವಿಧ ಜಾತಿಗಳಲ್ಲಿ ಕಾಣ ಸಿಗುತ್ತದೆ.

ಹತ್ತಿರ ಹೋಗಿ ನೋಡಿದಾಗಲೇ ನೆನಪಾಗಿದ್ದು, ಅದೇ ದಿನ ಮಧ್ಯಾಹ್ನ ತಮ್ಮ ತೋಡಿನಿಂದ ಮೀನು ಹಿಡಿದು ಬಾಟಲಿಯೊಳಗೆ ಹಾಕಿದ್ದ. ಆದರೆ ಬಾಟಲಿಗಿಂತ ಸುಮಾರು ಇಪ್ಪತ್ತು ಅಡಿ ದೂರ ನೀರಿಲ್ಲದೆ ಹಾರಿತ್ತು. ನಾನು ಕೈಯಿಂದ ಹಿಡಿಯಲು ಹೋದರೆ ತಪ್ಪಿಸಿಕೊಂಡು ಮತ್ತಷ್ಟು ದೂರ ಹಾರಿತ್ತು. ಅಷ್ಟೂ ದೂರ ಹಾರಿ ತಲುಪಬೇಕಾದರೆ ಅದರಲ್ಲಿ ನೀರಿಲ್ಲದೆ ಬದುಕಬಲ್ಲ ಸಾಮರ್ಥ್ಯವೆಷ್ಟಿರಬೇಕು?

ಆಫ್ರಿಕಾದಲ್ಲಿ ಇಂತಹ ಮೀನುಗಳ ಸ್ವಾರಸ್ಯಕರ ವೃತ್ತಾಂತಗಳಿವೆ. ಅಲ್ಲಿನ ಕೆಲವೊಂದು ಪ್ರದೇಶಗಳಲ್ಲಿ ಮಣ್ಣಿನೊಳಗೆ ಇಂತಹ ಮೀನುಗಳು ಹುದುಗಿರುತ್ತವೆ. ಆ ಮಣ್ಣುಗಳನ್ನು ಇಟ್ಟಿಗೆ ಮಾಡಿ ಮನೆಗೆ ಕಟ್ಟುತ್ತಾರೆ. ಅಲ್ಲಿ ಮಳೆ ಬರಲು ೪- ೫ ವರ್ಷಗಳೇ ಬೇಕು. ಕೆಲವೊಮ್ಮೆ ೮ ವರ್ಷಗಳಾಗಿದ್ದೂ ಉಂಟು. ಮೊದಲ ಮಳೆಗೆ ನೀರಿನ ತೇವ ಅನುಭವವಾದ ಕೂಡಲೇ ಮಣ್ಣಿನ ಇಟ್ಟಿಗೆಯಲ್ಲಿ ಹುದುಗಿರುವ ಮೀನುಗಳು ಹೊರ ಬಂದು ಮಳೆಯ ನೀರಿನಲ್ಲಿ ಈಜಿ ಮತ್ತೆ ಮಣ್ಣೊಳಗೆ ಹುದುಗಿ ಹೋಗುತ್ತವೆ. ಮತ್ತೆ ಮುಂದಿನ ಮಳೆಯವರೆಗೂ ಕಾಯುತ್ತವೆ. ಅಷ್ಟೂ ವರ್ಷ ಬದುಕು ಬಲ್ಲ ಸಾಮರ್ಥ್ಯಕ್ಕೆ ಲಂಗ್ಸ್ ಮೀನುಗಳು ಹೊಂದಿಕೊಂಡದ್ದು ಸೋಜಿಗವಲ್ಲವೇ? ಈ ಮೀನುಗಳು ಮಿಶ್ರಾಹಾರಿಗಳು. ಜೀವ ಶಾಸ್ತ್ರ ವಿಜ್ಞಾನಿಗಳು ಇದಕ್ಕೆ ೪೯೦ ಮಿಲಿಯನ್ ವರ್ಷಗಳ ಇತಿಹಾಸವಿದೆಯೆಂದು ನಂಬುತ್ತಾರೆ.

ಇಂತಹುದೇ ಸ್ವಭಾವದ ವಿಶಿಷ್ಟವಾದ ಮಾಂಗ್ರೋ ಕಿಲ್ ಫಿಶ್ ಎಂಬ ಜಾತಿಯ ಮೀನಿದೆ. ದಕ್ಷಿಣ ಅಮೆರಿಕದ ನದಿಗಳಲ್ಲಿರುವ ಮಾಂಗ್ರೋವ್ ಕಾಡುಗಳಲ್ಲಿ ಕಾಣಸಿಗುವ ಈ ಮೀನುಗಳು ನದಿ ಬತ್ತಿದಾಗ ವರ್ಷಗಳಷ್ಟು ಕಾಲ ಮರದ ಕೊಳೆತ ಪೊಟರೆಗಳಲ್ಲಿ ವಾಸ ಹೂಡುತ್ತದೆ. ಅಷ್ಟು ಕಾಲ ಬದುಕಲು ಬೇಕಾದ ಮೈಕವಚವನ್ನೂ ಅವು ಮಾಡಿಕೊಂಡಿರುತ್ತವೆ.

ಸಮುದ್ರದ ಮೀನುಗಳ ಲೋಕ ಬಹಳ ವಿಶಾಲವಾದದ್ದು. ಭೂಮಿಯಲ್ಲಿ ನೀರು ಹೆಚ್ಚು ನೆಲ ಕಡಿಮೆ ಅಲ್ಲವೆ. ನೆಲದ ನಡುವೆ ಇರುವ ಸಿಹಿನೀರಿನ ಮೀನುಗಳದ್ದೇ ರೋಚಕ ಬದುಕು. ಇನ್ನು ಸಾಗರ ಸಮುದ್ರ ಸರೋವರಗಳ ಮೀನು ಹೇಗಿರಬಹುದು. ಸಮುದ್ರದಲ್ಲಿ ಮನುಷ್ಯ ಮೀನುಗಳೂ ಇವೆಯಂತೆ. ಅವುಗಳಿಗೆ ಮನುಷ್ಯನ ಮುಖ ಮೀನಿನ ಬಾಲವಂತೆ. ಹೊಸ ಸಂಶೋಧನೆಯ ಫಲವಾಗಿ ನೀರಿನಲ್ಲಿ ಇನ್ನಷ್ಟು ಕುತೂಹಲಕಾರಿ ವಿಚಾರಗಳು ಹೊರ ಬರುತ್ತಲೇ ಇರುತ್ತವೆ. 1861 ರಲ್ಲಿ ಸಿಂಗಾಪುರದಲ್ಲಿ ಮೀನಿನ ಮಳೆಯಾಯಿತು. ಜನರು ದಿಗ್ಪ್ರಾಂತರಾದರು. ಮಳೆಯ ಜೊತೆ ಮೀನುಗಳುದುರುವುದೆಂದರೆ ಅಚ್ಚರಿಪಡದವರಾರು. ಕೊನೆಗೆ ಹವಾಮಾನ ವರದಿ ಇಲಾಖೆ ಟಾರ್ನಡೋ( ಸುಳಿಗಾಳಿ) ಎತ್ತಿ ತಂದ ಮೀನುಗಳು ಮೋಡದೊಂದಿಗೆ ಹೆಪ್ಪುಗಟ್ಟಿ ಮಳೆಯಾಗಿದೆಯೆಂದು ತೀರ್ಪು ಕೊಟ್ಟರು. ಇನ್ನೂ ಮತ್ಸಲೋಕದಲ್ಲಿ ಅದೆಷ್ಟೋ ಅದ್ಬುತಗಳಿವೆ. ಸಮಯ ಸಿಕ್ಕಾಗ ಮತ್ತೊಂದು ಕಥೆಯೊಂದಿಗೆ ಬರುತ್ತೇನೆ.