ಬೇಟೆಯ ಕತೆ

ಸತ್ತ ಇಲಿಗಳನ್ನು
ಕುಕ್ಕಿ ತಿನ್ನುವ ಬೆಕ್ಕು
ಶ್ರೀರಂಗಪಟ್ಟಣದ ಕೋಟೆ-ಕಾನನದಲಿ
ಹಾಡ ಹಗಲೇ ಹುಲಿಯೊಂದಿಗೆ ಜಿದ್ದಿಗೆ
ಬಿದ್ದಿರುವ ಬೀರನನ್ನು ಕಂಡು ಬೆವತು ಹೋಯಿತು.

ತನ್ನ ಬಿಳಿ ಮೀಸೆಯ ಮುಂದೆ
ಕಪ್ಪು ಮೀಸೆ ಇಲಿಯದು ಏನು ಮಹಾ!
ಎಂದು ಬೀಗಿದ್ದ ಬಿಳಿ ಬೆಕ್ಕಿನ ಬಾಲ ಮುದುರಿದಾಗ
‘ಜೇಮ್ಸ್ ಗಿಲ್ ರೇ’* ಗೆ ಅನಿಸಿರಬೇಕು
“ದಿ ಕಮಿಂಗ್ ಆನ್ ಆಫ್ ದಿ ಮಾನ್ಸೂನ್
ಆರ್ ದಿ ರಿಟ್ರೀಟ್ ಫ್ರಂ ಸೆರಿಂಗಪಟಂ” ಎಂದು

ಪಾಪ ಈ ಕೋಟೆಯ ಬಿಸಿ ಮಾರುತಗಳು
ಇಂಗ್ಲೆಂಡಿನ ಮಹಲಿನ ವರೆಗೂ ರಾಚುತ್ತವೆಂದು
ಯಾರು ಬಗೆದಿದ್ದರು?

ತನ್ನ ಖಡ್ಗದ ಪಿಸು ನುಡಿ
ರಾಣಿಯ ಗದ್ದಿಗೆ ತುಂಡರಿಸುವಷ್ಟು
ಹರಿತವಿದೆ ಎಂದು ಅರಿವಾಗಿರಬೇಕು
ಹುಲಿಯನ್ನು ಹರಿದ ಹುಲಿಯ ಬೇಟೆಗೆ
ಉಪ್ಪು ತಿಂದವರೇ ಆಗಿರಬೇಕೆಂದು
ಚಾಣಕ್ಯ ನಿಯಮ!

ಮನೆಯಲ್ಲಿ ಸಾಕಿದ ನಾಯಿಗೆ
ನಿಯತ್ತಿರುವುದು ಲೋಕ ರೂಢಿ ಮಾತು
ಸಾಕಿದ ಮೃಗಕ್ಕೆ ಇದ್ದೀತೆ?
ಕೋರೆ ಹಲ್ಲು ತೆರೆದು ನಿಂತವು
ಕೊನೆಗಾಲದಲಿ; ಹಾಗಾಗಿ,
ವಿಷವಿಳಿದ ಈ ಮಣ್ಣಲಿ
ದೇಹ ಮನಸ್ಸು ನಂಜಾಗುತ್ತಲೇ ಇದೆ
ಮಣ್ಣ ಪ್ರೀತಿಸಿದವರು ಮಣ್ಣಾಗುತ್ತಲೇ ಇದ್ದಾರೆ.

*ಜೇಮ್ಸ್ ಗಿಲ್ ರೇ= ಟಿಪ್ಪು ಕಾಲದ ಇಂಗ್ಲೆಂಡಿನ ಖ್ಯಾತ ವ್ಯಂಗ್ಯ ಚಿತ್ರ ಕಲಾವಿದ, 1791ರಲ್ಲಿ ಇಂಗ್ಲೆಂಡಿನಲ್ಲಿ ಆತ ಪ್ರಕಟಿಸಿದ ಟಿಪ್ಪುವಿನ ಕುರಿತ “ದಿ ಕಮಿಂಗ್ ಆನ್ ಆಫ್ ದಿ ಮಾನ್ಸೂನ್ ಆರ್ ದಿ ರಿಟ್ರೀಟ್ ಫ್ರಂ ಸೆರಿಂಗಪಟಂ” ಅಂದಿನ ಜಗತ್ತಿನ ಮೊತ್ತ ಮೊದಲ ವ್ಯಂಗ್ಯ ಚಿತ್ರ.

 

ನೂರುಲ್ಲಾ ತ್ಯಾಮಗೊಂಡ್ಲು ಬೆಂಗಳೂರು ಸಿವಿಲ್ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
‘ಬೆಳಕಿನ ಬುಗ್ಗೆ’ ಮತ್ತು ‘ನನ್ನಪ್ಪ ಒಂದು ಗ್ಯಾಲಕ್ಸಿ’ ಪ್ರಕಟಿತ ಕವನ ಸಂಕಲನಗಳು
ಹಲವು ಪತ್ರಿಕೆಗಳಲ್ಲಿ ಇವರ ಕಥೆಗಳು ಮತ್ತು ಕವಿತೆಗಳು ಪ್ರಕಟವಾಗಿವೆ