ನೆಮ್ಮದಿಯ ಬದುಕು ಎಲ್ಲರ ಕನಸೂ ಹೌದು. ಆದರೆ ನಾವು ಕಟ್ಟಿಕೊಂಡಿರುವ ಆಸೆಯ ಸೌಧದ ನಿರ್ಮಾಣ ಕಾರ್ಯ ಮುಗಿಯುವುದೇ ಇಲ್ಲ. ದಿನ ದಿನಕ್ಕೋ, ಇಲ್ಲ ಕ್ಷಣ ಕ್ಷಣಕ್ಕೋ ಅದರ ಗೋಡೆಗೆ ಇಟ್ಟಿಗೆ ಜೋಡಿಸುತ್ತಲೇ ಹೋಗುವವರು ನಾವು. ನಮ್ಮನೆಗೆ ಎರಡು ರೂಮು ಸಾಕೆನ್ನಿಸಿದರೂ, ಯಾವತ್ತೋ ಬಂದು ಹೋಗುವ ನೆಂಟರಿಗೊಂದು ಪ್ರತ್ಯೇಕ ಕೋಣೆ ಬೇಡವಾ ಎನ್ನುತ್ತದೆ ಮನಸ್ಸು. ಇಷ್ಟು ಸಾಕು ಎಂದು ನಿರ್ಧರಿಸಿದ ದಿನ, ನಮ್ಮ ಕೆಲಸ ಮುಗಿದು, ಅಲ್ಲಿನ್ನು ಅಷ್ಟರವರೆಗೆ ಪಟ್ಟ ಕಷ್ಟಗಳನ್ನು ಬೆನ್ನ ಹಿಂದೆ ಹಾಕಿ ನೆಮ್ಮದಿಯಾಗಿ ಇದ್ದುಬಿಡಬಹುದು. ಆದರೆ, ನಾವು ಬೆಳೆದು ಬಂದ, ಮತ್ತು ಬದುಕುತ್ತಿರುವ ವಾತಾವರಣಗಳು ನಮ್ಮನ್ನು ಅಷ್ಟು ಸುಲಭಕ್ಕೆ ಆಸೆಗಳ ಪಾಶದಿಂದ ಬಿಡುಗಡೆಗೊಳಿಸುವುದೇ ಇಲ್ಲ.
ರೂಪಶ್ರೀ ಕಲ್ಲಿಗನೂರ್‌ ಬರಹ

ಐಟಿಯಲ್ಲಿ ಕೆಲಸ ಮಾಡುತ್ತಿರುವ ನನ್ನ ಸ್ನೇಹಿತರೊಬ್ಬರು ಆಗಾಗ ಹೇಳುತ್ತಿರುತ್ತಾರೆ. “ನನ್‌ ಆಫೀಸಿರೋದು ಬೆಂಗ್ಳೂರಿಂದ ಆಚೆ. ನಮ್‌ ಕಂಪನಿ ಎದುರುಗಡೆ, ಅದ್ಹೇಗೋ ಒಂದಷ್ಟು ಜಾಗ ಸೈಟು, ಅಪಾರ್ಟ್‌ಮೆಂಟು ಆಗದೇ ಹೊಲ ಆಗಿ ಹಾಗೇ ಉಳ್ಕೊಂಡಿದೆ. ದಿನಾ ಮಧ್ಯಾಹ್ನ, ನಾವು ಸಹೊದ್ಯೋಗಿಗಳು ಊಟ ಮುಗ್ಸಿ, ಹೊರಗೆ ಸುತ್ತಾಡುವಾಗ, ಈ ಹೊಲದ ಆಚೆಯಲ್ಲಿರೊ ಗುಡ್ಡದ ಮೇಲೆ ಓಡಾಡೋ ಒಬ್ಬ ಕುರಿ ಕಾಯೋವ್ನು ಕಾಣಸ್ತಾನೆ. ನಮ್‌ ಊಟ ಮುಗ್ದಿರೋ ಹೊತ್ತಿಗೆ, ಅವನ ಊಟ… ಅಲ್ಲೇ ಒಂದು ಮರ ಇದೆ, ಆ ಮರದ ಕೆಳಗೆ ಮೇಯೋ ಕುರಿಗಳನ್ನ ಆ ಕಡೆ ಓಡ್ಸಿ, ಟವಲ್ಲು ಹಾಸ್ಕೊಂಡು ಅದೆಷ್ಟು ನೆಮ್ಮದಿಯಿಂದ ಊಟ ಮಾಡ್ತಾನೆ… ಸುತ್ತ ಮುತ್ತ ಒಂದಷ್ಟು ಕುರಿಗಳನ್ನ ಬಿಟ್ಟರೆ ಯಾರಂದ್ರೆ ಯಾರೂ ಅಲ್ಲಿ ಅವನ ಜೊತೆ ಇರಲ್ಲ. ಅವನು ಆ ಕಡೆ ಈ ಕಡೆ ನೋಡ್ಕೊಂಡು, ಕೆಲವು ಸಲ, ನಮ್ಮ ಬಿಲ್ಡಿಂಗ್‌ ಕಡೆನೂ ಕಣ್ಣು ಹಾಯಿಸ್ಕೊಂಡು, ತಂದಿರೋ ಬುತ್ತಿ ಬಿಚ್ಚಿ, ಅರಾಮಾಗಿ ಊಟ ಮಾಡ್ತಾನೆ… ಆಮೇಲಂತೂ ಅದೇ ಜಾಗದಲ್ಲೇ, ರಣರಣ ಬಿಸಲಿರ್ಲಿ, ತಂಪಿರ್ಲಿ… ದೇವ್ರಹಾಗೆ ಮಲ್ಕೊಂಡುಬಿಡ್ತಾನೆ… ಎಷ್ಟು ಸುಖದ ಜೀವನ ಅವಂದು! ನಂಗೂ ಹಾಗೆ ಯಾರ್ದೂ ಕಾಟ ಇಲ್ಲದೇ, ನೆಮ್ಮದಿಯಿಂದ ಊಟ ಮಾಡಿ, ಯಾರಾದ್ರೂ ಬರ್ತಾರಾ ಇಲ್ವಾ ಅನ್ನೋ ಅನುಮಾನ ಇಲ್ದೇ ನಿದ್ದೆ ಮಾಡ್ಬೇಕು ಅನ್ನೋದು ಕನಸು… ಅದಕ್ಕಾದ್ರೂ ನಾನೂ ಕುರಿ ಕಾಯೋವ್ನು ಆಗಬೇಕು” ಅಂತ. ಅವನು ಹಾಗೆಲ್ಲ ಹೇಳುವಾಗ ನನಗೆ ನಗು ಬಂದು, ಅದು ಅವನಿಗೆ ಅಸಾಧ್ಯವೆಂದು ಗೊತ್ತಿದ್ದರೂ, ನಮಗೆ ಅಷ್ಟಕ್ಕೂ ಕೊನೆಗೆ ಬೇಕಿರುವುದು ಅಂಥ ನೆಮ್ಮದಿ ಮಾತ್ರವೇ ಅಲ್ಲವೇ ಅಂತಲೂ ಅನ್ನಿಸುತ್ತೆ.

ಆಸೆ ಎಂಬ ತಳವೊಡೆದ ದೋಣಿಯಲಿ ದೂರ ತೀರ ಯಾನ
ಯಾರ ಲೀಲೆಗೋ ಯಾರೋ ಏನೋ ಗುರಿ ಇರದೆ ಬಿಟ್ಟ ಬಾಣ
ಇದು ಬಾಳು ನೋಡು ಇದು ತಿಳಿದೆನೆಂದರೂ ತಿಳಿದ ಧೀರನಿಲ್ಲ
ಹಲವುತನದ ಮೈ ಮರೆಸುವಾಟವಿದು ನಿಜವು ತೋರದಲ್ಲ
ಗೋಪಾಲಕೃಷ್ಣ ಅಡಿಗ

ನೆಮ್ಮದಿಯ ಬದುಕು ಎಲ್ಲರ ಕನಸೂ ಹೌದು. ಆದರೆ ನಾವು ಕಟ್ಟಿಕೊಂಡಿರುವ ಆಸೆಯ ಸೌಧದ ನಿರ್ಮಾಣ ಕಾರ್ಯ ಮುಗಿಯುವುದೇ ಇಲ್ಲ. ದಿನ ದಿನಕ್ಕೋ, ಇಲ್ಲ ಕ್ಷಣ ಕ್ಷಣಕ್ಕೋ ಅದರ ಗೋಡೆಗೆ ಇಟ್ಟಿಗೆ ಜೋಡಿಸುತ್ತಲೇ ಹೋಗುವವರು ನಾವು. ನಮ್ಮನೆಗೆ ಎರಡು ರೂಮು ಸಾಕೆನ್ನಿಸಿದರೂ, ಯಾವತ್ತೋ ಬಂದು ಹೋಗುವ ನೆಂಟರಿಗೊಂದು ಪ್ರತ್ಯೇಕ ಕೋಣೆ ಬೇಡವಾ ಎನ್ನುತ್ತದೆ ಮನಸ್ಸು. ಇಷ್ಟು ಸಾಕು ಎಂದು ನಿರ್ಧರಿಸಿದ ದಿನ, ನಮ್ಮ ಕೆಲಸ ಮುಗಿದು, ಅಲ್ಲಿನ್ನು ಅಷ್ಟರವರೆಗೆ ಪಟ್ಟ ಕಷ್ಟಗಳನ್ನು ಬೆನ್ನ ಹಿಂದೆ ಹಾಕಿ ನೆಮ್ಮದಿಯಾಗಿ ಇದ್ದುಬಿಡಬಹುದು. ಆದರೆ, ನಾವು ಬೆಳೆದು ಬಂದ, ಮತ್ತು ಬದುಕುತ್ತಿರುವ ವಾತಾವರಣಗಳು ನಮ್ಮನ್ನು ಅಷ್ಟು ಸುಲಭಕ್ಕೆ ಆಸೆಗಳ ಪಾಶದಿಂದ ಬಿಡುಗಡೆಗೊಳಿಸುವುದೇ ಇಲ್ಲ. ಒಂದರ ಮೇಲೊಂದು ಇಟ್ಟಿಗೆಗಳನ್ನು ಜೋಡಿಸಿ ಇಡುತ್ತಾ ಹೋದಂತೆ, ಪಾಯಕ್ಕೆ ಭಾರ ಹೆಚ್ಚುತ್ತಾ ಹೋಗುತ್ತದೆ. ಅದಕ್ಕೆ ಸರಿಯಾದ ಗಾರೆ ಬಿದ್ದರೆ ಸರಿ, ಅಲ್ಲದೇ ಇನ್ಯಾವುದೋ ಲೋಕದಲ್ಲಿ ಒಂಚೂರು ಮೈಮರೆತರೆ ಸಾಕು, ಇಷ್ಟು ವರ್ಷಗಳ ಕಾಲ ದುಡಿದ ದುಡಿತವೆಲ್ಲ, ಪಟಪಟನೇ ನಮ್ಮ ಮೇಲೇ ಬಿದ್ದು, ನಾವು ಮಣ್ಣು ಮುಕ್ಕುವುದು ಗ್ಯಾರಂಟಿ. ಬದುಕು ಯಾವತ್ತೂ ಅಷ್ಟು ಸುಲಭ ಅಲ್ಲ.

ಜಗತ್ತಿನ ಮೇಲೆ ಕೋವಿಡ್‌ ಕಾಲದ ಆಕ್ರಮಣದ ಸಮಯವೆಲ್ಲ ಮುಗಿದು, ಈಗ, ಇದೀಗ ಎಲ್ಲವೂ ತಣ್ಣಗಾಯಿತು ಎನ್ನುವ ಹೊತ್ತಿನಲ್ಲೂ ನಮ್ಮ ಸುತ್ತಮುತ್ತಲೇ ಸಾವು ಹಾವಿನಂತೆ ಆಗೀಗ ಹರಿದಾಡುತ್ತಲೇ ಇದೆ. ಅಲ್ಲಿ, ಇಲ್ಲೆ, ಮತ್ತೆ ಇನ್ನೆಲ್ಲೋ… ನೆನ್ನೆಯಷ್ಟೇ “ಹಾಯ್‌, ಆರಾಮಾಗಿದ್ದೀರಲ್ಲ…” ಅಂತ ನಮ್ಮನ್ನು ಕೇಳಿದವರು, ಇನ್ನಷ್ಟು ಹೊತ್ತಿಗೆ ನಮ್ಮ ಜೊತೆ ಶಾಶ್ವತವಾಗಿ ಮಾತು ಮುರಿದುಕೊಂಡು ಬಾರದ ಲೋಕಕ್ಕೆ ಹೋಗಿರುತ್ತಾರೆ. ಜಗಳಕ್ಕಾದರೂ ಸಿಕ್ಕುಬಿಡಿ ಒಮ್ಮೆ ಎಂದು ಕೈಕೈ ಹಿಸುಕಿಕೊಂಡರೂ ಏನೂ ಪ್ರಯೋಜನವಿಲ್ಲ… ಬದುಕೆಂದರೆ ಇಷ್ಟೇನ? ನಿಜಕ್ಕೂ ಇಷ್ಟೇನಾ? ನಾವೆಲ್ಲ ಸಾವಿರ ವರ್ಷಗಳಷ್ಟು ಆಯಸ್ಸನ್ನು ಕಡ ಪಡೆದುಕೊಂಡು ಬಂದ ಕಿನ್ನರರಂತೆ ಸದಾ ಕನಸು ಕಾಣುತ್ತಾ, ನಾಳೆಗೆ, ನಾಡಿದ್ದಿಗೆ ಎಂದು ಈ ಕ್ಷಣಗಳನ್ನು ತ್ಯಾಗ ಮಾಡಿ ದುಡಿಯುತ್ತಾ, ನಮ್ಮ ಕುಟುಂಬವನ್ನು ವಿಸ್ತರಿಸಿಕೊಳ್ಳುತ್ತಾ, ಅಜರಾಮರರಂತೆ ಎದೆಯುಬ್ಬಿಸಿಕೊಂಡು ನಡೆದುಹೋಗುತ್ತಿರುವಾಗ ಹತ್ತಿರ ಹತ್ತಿರದಲ್ಲೇ, ಸಾವೊಂದು ಹಠಾತ್ತನೆ ಸಂಭವಿಸಿ, ಎದೆ, ಮೈಯೆಲ್ಲ ತಣ್ಣಗಾಗಿ ಸಣ್ಣಗೆ ನಡುಗಿಬಿಡುತ್ತೇವೆ…

ಆಗೆಲ್ಲ ಮತ್ತೆ ಮತ್ತೆ ಈ ಪ್ರಶ್ನೆ ಧುತ್ತನೆ ಎದೆಗೊದ್ದು ಬದುಕಂದ್ರೆ ಇಷ್ಟೇನಾ…? ನಾವು ಸತ್ತು ಹೋದ ಮೇಲೆ, ಇಷ್ಟು ವರ್ಷ ನಾವು ದುಡಿದದ್ದಕ್ಕೆ, ಯಾವುದಕ್ಕೋ ಜಗಳವಾಡಿಕೊಂಡದ್ದಕ್ಕೆ, ಏನನ್ನೋ ಎದೆ ತುಂಬಿ ಸಂಭ್ರಮಿಸಿದ್ದಕ್ಕೆ ಏನಾದರೂ ಅರ್ಥ ಉಳಿಯುತ್ತದ? ನಾನು ನಾನೆಂದು ಬದುಕಿದ ನನ್ನ ಬದುಕು ಎಲ್ಲಿ ಹೋಗುತ್ತದೆ… ಸಿಟ್ಟಿಗೆ, ಸಂತೋಷಕ್ಕೆ, ತ್ಯಾಗಕ್ಕೆ, ಭೋಗಕ್ಕೆ… ಏನಾದರೂ ಅರ್ಥ ಉಳಿಯಬಹುದ? ಕೆಟ್ಟವನಾಗಿದ್ದರೆ ನಾಲ್ಕು ಜನರೊಂದಿಗೆ ಸಿಟ್ಟು, ಒಳ್ಳೆಯವನಾಗಿದ್ದರೆ ಅದೇ ನಾಲ್ಕು ಜನರೊಂದಿಗೆ ಪ್ರೀತಿ… ಅಷ್ಟೇ… ಇಷ್ಟು ಬದುಕಿನಲ್ಲಿ ನಮಗಾಗಿ ನಾವು ಏನು ಮಾಡಿಕೊಂಡರೂ, ಅದೂ ನಮ್ಮ ಜೀವಿತಾವಧಿಯ ನೆಮ್ಮದಿಗಾಗಿ ಅಷ್ಟೇ ಅಲ್ಲದೇ ಬೇರೇನೂ ಅಲ್ಲ. ಅದೇ ನಾಲ್ಕು ಜನಕ್ಕೆ ಸಹಾಯವಾಗುವ ಹಾಗೆ ಒಂದಷ್ಟು ಕೆಲಸ ಮಾಡಿದ್ದರೆ, ಅಷ್ಟು ಮಾತ್ರದ ನಮ್ಮ ಅಸ್ಮಿತೆ ಉಳಿದುಕೊಳ್ಳಬಹುದೇನೋ.. ಹಾಗಂತ ಎಲ್ಲಿರಿಗೂ ಆಗುವಂಥ ಬದುಕನ್ನೇ ನಾವು ಬದುಕಬೇಕೆಂದ ಯಾವ ನಿಯಮಗಳೂ ಇಲ್ಲಿಲ್ಲ. ನಾವು ಭೇಟಿಯಾಗುವ ಎಲ್ಲರೊಟ್ಟಿಗೂ ಚಂದವಾಗಿರಲು ತುಸು ಕಷ್ಟವೇ ಆದರೂ ಯಾರನ್ನೂ ನೋಯಿಸದ ಹಾದಿಯಲ್ಲಿ ನಡೆಯುವುದು ನಮಗೇ ನೆಮ್ಮದಿ ಕೊಡುವಂಥದ್ದು.

ಕೆಲವು ದಾರ್ಶನಿಕರನ್ನು ಕಂಡಾಗಲೋ ಅಥವಾ ನಮ್ಮ ಸುತ್ತಮುತ್ತಲೇ ಇರುವ ಕೆಲ ಅಪರೂಪದ ಜನರನ್ನು ಭೇಟಿಯಾದಾಗ, ಅವರ ಪ್ರಾಂಜಲ ಮನಸ್ಸು, ಸುತ್ತಲಿರುವುದಕ್ಕೆ ತಟಸ್ಥವಾಗಿರುವ ಅವರ ಭಾವ ನಮ್ಮನ್ನು ಕೆಣಕುತ್ತದೆ. ಅರೇ… ಇವರೆಲ್ಲ ಎಲ್ಲರೊಟ್ಟಿಗಿದ್ದೂ ಯಾರಿಗೂ ಯಾವುದಕ್ಕೂ ಅಂಟಿಕೊಳ್ಳದೆ ಹೇಗೆ ನೆಮ್ಮದಿಯಿಂದ ಇದ್ದಾರಲ್ಲ… ತಮ್ಮ ಸುತ್ತಮುತ್ತಲ ಜಗತ್ತು ಧಿಧಿತೈ ಅಂತ ಕುಣಿದು ಕುಪ್ಪಳಿಸುವಾಗ, ಇವರು ಮಲ್ಲಿಗೆಯಂಥಾ ತಿಳು ನಗೆ ಸೂಸುತ್ತಾ, ಸರಳವಾಗಿ, ಸಂಪನ್ನರಾಗಿ ಇದ್ದಾರಲ್ಲ… ನಮಗೇಕೆ ಇದೆಲ್ಲ ಸಾಧ್ಯವಿಲ್ಲ.. ಸಿಟ್ಟು-ಸೆಡವು, ಹೊಟ್ಟೆಕಿಚ್ಚು, ಆಸೆ, ದುಃಖ ಯಾವುವೂ ಬಾಧಿಸದೇ ಇರಲು ಹೇಗೆ ಸಾಧ್ಯ? ನಾವು ಹಾಗೆ ಬದುಕಿನ ಅತಿರೇಕಗಳಿಂದ ಮುಕ್ತವಾಗಿ, ಒಂದು ಪುಟ್ಟ ಊರಿನಲ್ಲಿ ಹೊಲ-ಮನೆ ನೋಡಿಕೊಂಡು ಇದ್ದುಬಿಡೋದು ಎಷ್ಟು ನೆಮ್ಮದಿ ಅನ್ನಿಸುತ್ತದೆಯಾದರೂ ಆ ಭಾವ ಒಂದು ರೀತಿ ಸ್ಮಶಾನ ವೈರಾಗ್ಯದಂತೆಯೇ…! ಬದುಕು ನೀರ ಮೇಲಣ ಗುಳ್ಳೆ ಅನ್ನುವ ದಾಸರ ಪದವನ್ನು ಕೇಳದ ಕಿವಿಗಳೇನಲ್ಲ ನಮ್ಮವು. ಆದರೆ ಅದು ಎದೆಗಿಳಿದು ಅರ್ಥವಾಗಿ, ನಮ್ಮ ಬದುಕನ್ನ ತಿದ್ದಿಕೊಳ್ಳುವುದು ಸುಲಭದ ಮಾತೇ ಅಲ್ಲ. ಮನುಷ್ಯನಷ್ಟು ಲೋಭಿ ಜಗತ್ತಿನ ಯಾವ ಪ್ರಾಣಿಯೂ ಇಲ್ಲ. ಅವನಿಗೆ ಎಲ್ಲ ಎಲ್ಲ ಬೇಕು.

ಮನೆ, ಕಾರು, ಚಿನ್ನಾಭರಣ ಎಂಬ ಬೇಕುಗಳನ್ನೆಲ್ಲ ಹಗಲೂ ರಾತ್ರಿ ದುಡಿದು ಗಳಿಸಿಕೊಂಡುಬಿಡಬಹುದು. ಆದರೆ ನೆಮ್ಮದಿಯನ್ನು ಗಳಿಸುವುದು ಸುಲಭವೇ.. ಬೇಕುಗಳಿಗೆ ಒಂದಷ್ಟು ಕತ್ತರಿಯಾಡಿಸಿದಾಗ ಒಂದಷ್ಟು ನೆಮ್ಮದಿ ಸಿಕ್ಕಬಹುದು. ಆದರೆ ಎಂಥ ಬೇಕುಗಳಿಗೆ ಕತ್ತರಿಯಾಡಿಸಬೇಕು? ಎಷ್ಟು ಬೇಕು? ಎಷ್ಟು ಸಾಕು? ಇವು ಬಿಡಿಸಲಾಗದ ಲೆಕ್ಕಗಳು. ಬದುಕೂ ಗಣಿತದ ಹಾಗಿದ್ದಿದ್ದಲ್ಲಿ ಕೂತು ಕಲಿಯಬಹುದಿತ್ತೇನೋ… ಆದರೆ ಪ್ರತಿ ಕ್ಷಣವೂ ಅನನ್ಯ. ಹಾಗಾಗಿ ನಮಗೇನು ಬೇಕು ಅದು ಹಾಗೆ ಸುಲಭದಲ್ಲಿ ಸಿಕ್ಕಿಬಿಡುವುದೂ ಕಷ್ಟ. ಸಿಕ್ಕದ್ದನ್ನು ಉಳಿಸಿಕೊಳ್ಳುವುದು ಇನ್ನೂ ಕಷ್ಟ…