ಕೆಂಡಸಂಪಿಗೆಯ ಓದುಗರಿಗೆ ನಮಸ್ಕಾರಗಳು. ಛಲಬಿಡದ ತ್ರಿವಿಕ್ರಮನಂತೆ ತನ್ನ ತ್ರಿಚಕ್ರಿಯನ್ನು ಕನ್ಯಾಕುಮಾರಿ ಭೂಶಿರದಿಂದ ಹಿಮಾಲಯದ ಕಡೆ ಓಡಿಸುತ್ತಾ ಇರುವ ನೆಲ್ಯಾರು ಗೋವಿಂದ ಭಟ್ಟರ ಬ್ಲಾಗ್ ಗಳಾದ  ಹಳ್ಳಿಯಿಂದ  ಮತ್ತು ಇಂಗ್ಲಿಷ್ ಭಾಷೆಯ ಬ್ಲಾಗ್ ಗಳ ಜಾಡನ್ನು  ಬೆಂಬಿಡದ ಬೇತಾಳನಂತೆ ಹಿಡಿದು ಸಾಗುತ್ತಾ ಇದ್ದೇನೆ. ಯಾಕೇ? ಎನ್ನುವ ಪ್ರಶ್ನೆ  ಬಂದರೆ ನನ್ನ ಉತ್ತರ ಹೀಗಿದೆ. ಒಬ್ಬ ಆರೋಗ್ಯವಂತ ಯುವಕನೂ ಕೈಹಾಕಲು  ಹೆದರುವ ಸಾಹಸಕ್ಕೆ  ಗೋವಿಂದ ಭಟ್ಟರು ಧುಮುಕಿದ್ದಾರೆ. ಮೊದಲು ಅವರ ಇಂದಿನ ದೈಹಿಕ ಸ್ಥಿತಿಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಅವರದೇ ಆದ  “ ಹಳ್ಳಿಯಿಂದ ” ಕನ್ನಡ ಬ್ಲಾಗ್ನಲ್ಲಿ  ಅವರು ಹೀಗೆ ಹೇಳುತ್ತಾರೆ. “ಈಗೊಂದು ವಿಶಿಷ್ಟವಾದ  ಪ್ರವಾಸ  ಕೈಗೊಂಡಿದ್ದೇನೆ.  ಸೈಕಲಿನಲ್ಲಿ  ರಿಕಂಬಂಟ್  ಅರ್ಥಾತ್  ಮಲಗಿ  ಬಿಡುವುದು ಒಂದು  ಬೆಳಕು ಕಾಣದ  ಮಾದರಿ.  ನನಗೋ  ಮೈಮಾಲುವ  ಕಾರಣ   ದ್ವಿಚಕ್ರ ಪರವಾನಿಗೆ  ರದ್ದಾಗಿದೆ. ಹಾಗೆ  ಈಗ  ತ್ರಿಚಕ್ರಕ್ಕೆ  ಮೊರೆ ಹೋಗಿದ್ದೇನೆ.  ಸೈಕಲಿನ  ಅವಿಶ್ಕಾರದಲ್ಲಿ  ಗೇರುಗಳ  ಅನಂತರ  ಗಮನಾರ್ಹ  ಬೆಳವಣಿಕೆ  ಎಂದರೆ ಈ  ವಿದ್ಯುತ್  ಸಹಾಯಕ  ವ್ಯವಸ್ಥೆ. ಅದರಿಂದ  ದುರ್ಬಲರು  ಅಥವಾ  ಕಾರಣಾಂತರ  ಸೈಕಲ್  ಉಪಯೋಗಿಸದವರೂ  ಉಪಯೋಗಿಸಬಹುದಾದ  ಅನುಕೂಲಕರ  ವ್ಯವಸ್ಥೆ.” ಅವರ ತ್ರಿಚಕ್ರಿಯ ಪಯಣದ ದಿನವಹಿ ವಿವರ ನೀಡುವ ಇಂಗ್ಲಿಷ್ ಬ್ಲಾಗ್ ಓದುತ್ತಿದ್ದಂತೆಯೇ  ಗೋವಿಂದ  ಭಟ್ಟರ ದೈಹಿಕ ತೊಂದರೆಗಳ ಬಗ್ಗೆ   ಅವರೇ ನೀಡಿದ  ಅಲ್ಪ   ಸ್ವಲ್ಪ   ಮಾಹಿತಿ  ನನಗೆ   ಸಿಕ್ಕಿತು. ಈಗ  ಈ ಲೇಖನದಲ್ಲಿ     ಅವುಗಳಬಗ್ಗೆ    ಪ್ರಸ್ಯಾಪಿಸುತ್ತಾ ಇದ್ದೇನೆ.
ಎಲ್ಲರೂ ಓದಿ ನೋಡ ಬಹುದಾದ ಬ್ಲಾಗ್ ಬರಹದಲ್ಲಿ  ಗೋವಿಂದ ಭಟ್ಟರೇ  ನಮೂದಿಸಿದ  ಅವರ ದೈಹಿಕ ತೊಂದರೆಗಳ ಬಗ್ಗೆ  ನಾನು  ಪ್ರಸ್ತಾಪಿಸಿರುವುದಕ್ಕೆ   ಗೋವಿಂದ ಭಟ್ಟರ  ಉದಾರ  ಕ್ಷಮೆ ಇರಲಿ.
ಇಂಜಿನ್ ಹೊಂದಿಸಿದ  ಪವರ್ ಗ್ಲೈಡರ್  ಧರಾಶಾಯಿಯಾಗಿ ಅವರ ಬೆನ್ನು ಮೂಳೆ  ಡಮಾರ್ ಆಯಿತಂತೆ. ಹಲವಾರು ಶಸ್ತ್ರ ಚಿಕಿತ್ಸೆಗಳು ನಿರೀಕ್ಷಿತ ಫಲ ನೀಡಲಿಲ್ಲ.
ಇಂದು ಅವರ  ಮೂತ್ರ ಕೋಶ ದ ಭದ್ರತೆಯು ಸಂಶಯಾಸ್ಪದ ಆಗಿದೆ.
ತಲೆ ಸುತ್ತುವಿಕೆ ಮತ್ತು  ನೋವಿನ ಕಾರಣ  ಎರಡು ಚಕ್ರದ ವಾಹನ ಬಿಡಿ! ಅವರಿಗೆ  ಸ್ವಲ್ಪ  ದೂರ ನಡೆಯಲು  ಕೂಡಾ ತೊಂದರೆ ಆಗುತ್ತಾ ಇದೆ.
ಅವರ ಕೈ ಬೆಟ್ಟುಗಳಲ್ಲಿ ನಡುಕ ಇದೆ.
ಅವರ ಕಿವಿಗಳ ಶ್ರವಣ ಶಕ್ತಿ ಕೂಡಾ ಕುಂದಿದೆ.
ಆದರೆ, ಹಿಂದೊಮ್ಮೆ  ಆರೋಗ್ಯವಂತ  ಯುವಕನಾಗಿದಾಗ ಸೈಕಲ್ ಬಳಸಿ ಜಗ ಸುತ್ತಿದ ಛಲ ಅವರನ್ನು ಬಿಟ್ಟು ಹೋಗಿಲ್ಲ.
ಕನ್ಯಾಕುಮಾರಿಯ ವಿವೇಕಾನಂದರ ಶಿಲೆಯ ಮೇಲೆ  ಕುಳಿತಾಗಲೂ  ಅವರ ದೃಷ್ಟಿ   ದೂರದ ಹಿಮಾಲಯದ ಮೇಲೆ!
ಗೋವಿಂದರು  ಇಂದಿಗೆ ತನ್ನ  ಏಳುದಿನಗಳ  ಸತತ ಪೆಡಲಿಂಗ್ ಸಾಹಸದ ನಂತರ ಹಾಸನವನ್ನು ಸಮೀಪಿಸಿದ್ದಾರೆ.
ಅವರು ಪ್ರತೀ ದಿನ  ೯೮ ರಿಂದ  ೧೫೦ ಕಿ. ಮೀ. ದೂರ  ಪೆಡಲ್ ಹೊಡೆಯುತ್ತಿದ್ದಾರೆ.ಒಂಟಿದಾರಿಯ ಮಿಂಚುಗನಸುಮಳೆಯ ವಾತಾವರಣ ಕಾಡುತ್ತಾ ಇದ್ದರೂ, ಹಿಂಜರಿಯದೇ, ಸತತವಾಗಿ ಪೆಡಲ್ ತುಳಿಯುತ್ತಾ ಇಂಧನ ಉರಿಸುವ ವಾಹನಗಳಿಗೇ  ‘ಕಠಿಣ ’  ಅನ್ನಿಸುವ  ವೀರಪ್ಪನ್  ಖ್ಯಾತಿಯ ದಿಂಬಮ್ ಘಾಟಿಯನ್ನು  ಪೆಡಲ್ ತುಳಿದು ಹತ್ತಿದ ದಿನಮಾತ್ರ ಅವರು ೯೮ ಕಿ. ಮೀ. ಕ್ರಮಿಸಿದ್ದಾರೆ.
ಕಾಡಿನ ದಾರಿಯಲ್ಲಿ ವಸತಿ ಸಮಸ್ಯೆ  ತಲೆದೋರಿದಾಗ  ಕಾವಲಾಂದೆಯ ಪೋಲಿಸ್ ಠಾಣೆಯ ಸಹೃದಯೀ ಪೋಲೀಸರ ಅತಿಥಿಯಾಗಿ ಒಂದು ರಾತ್ರಿ ಯನ್ನು ಆ ಠಾಣೆಯ  ರೆಕಾರ್ಡ್ ರೂಮಿನಲ್ಲಿ  ಕಳೆದಿದ್ದಾರೆ.
ಪವರ್ ಕಟ್ ಕಾರಣ  ತನ್ನ  ವಾಹನದ  ಮತ್ತು ಇಲೆಕ್ಟ್ರಾನಿಕ್ ಸಲಕರಣೆಗಳ ಬ್ಯಾಟರಿಗಳನ್ನು   ರಿಚಾರ್ಜ್  ಮಾಡಿಕೊಳ್ಳುವಲ್ಲಿ  ಕೆಲವುಕಡೆ ತುಂಬಾ ವಿಳಂಬ ಅನುಭವಿಸಿದೆ! – ಅನ್ನುತ್ತಾರೆ.
ಅವರ ಬ್ಲಾಗಿನ ಸ್ವಾರಸ್ಯವಾದ ವಿಷಯಗಳನ್ನು   ನಾನು ಇಂದು  ವಿವರಿಸಿ ಬರೆಯಲು ಹೊರಟಿಲ್ಲ.
ಗೋವಿಂದ ಭಟ್ಟರ  ಒಂಟಿ   ತ್ರಿಚಕ್ರಿ  ಪ್ರಯಾಣದ  ಬ್ಲಾಗ್ಗಳನ್ನು  ಪ್ರತೀದಿನ ಓದುತ್ತಾ  ಪರವಶನಾದ ನಾನು ಈ ಬಗ್ಗೆ ಬರೆಯಲೇ ಬೇಕು ಅನ್ನಿಸಿತು.
ಬರೆದಿದ್ದೇನೆ.
ವಂದನೆಗಳು
ಪೆಜತ್ತಾಯ   ಎಸ್. ಎಮ್.