ನೊ ರಿಗ್ರೆಟ್ಸ್ ಫಾರ್ ಅವರ್ ಯೂತ್ ಈ ಎಲ್ಲ ಏಳುಬೀಳುಗಳ ನಡುವೆ ಹುಟ್ಟಿತು. ಈ ಚಿತ್ರದ ಕುರಿತು ನನ್ನಾಳದಲ್ಲಿ ಭಾವನೆಗಳ ಅಲೆಗಳು ಏಳುತ್ತವೆ. ಯುದ್ಧಾನಂತರದಲ್ಲಿ ಸ್ವತಂತ್ರ ವಾತಾವರಣದಲ್ಲಿ ಮಾಡಿದ ಮೊದಲ ಚಿತ್ರ. ಕ್ಯೋಟೊದ ಹಳೆಯ ರಾಜಧಾನಿಯ ಸ್ಥಳಗಳನ್ನು ಚಿತ್ರೀಕರಣಕ್ಕೆ ಬಳಸಿದ್ದೆವು. ಹುಲ್ಲಿನ ಬೆಟ್ಟಗಳು, ಬೀದಿ ಬದಿಯ ಸಾಲು ಹೂಗಳ ರಸ್ತೆಗಳು, ಸೂರ್ಯನ ಕಿರಣಗಳನ್ನು ಪ್ರತಿಫಲಿಸುತ್ತಿದ್ದ ಹೊಳ್ಳಗಳು ಇವೆಲ್ಲವೂ ಇಂದಿನ ಹಲವು ಚಿತ್ರಗಳಲ್ಲಿ ಬಳಸಿದ್ದಾರೆ. ಆದರೆ ಆ ಸಮಯದಲ್ಲಿ ನಮಗದು ವಿಶೇಷವಾಗಿತ್ತು. ನನಗೆ ರೆಕ್ಕೆಗಳು ಮೊಳೆದು ಮೋಡಗಳ ನಡುವೆ ಹಾರುತ್ತಿರುವೆನೆನೋ ಎನ್ನುವ ಹಾಗೆ ಹೃದಯ ಕುಣಿಯುತ್ತಿತ್ತು.
ಹೇಮಾ ಎಸ್. ಅನುವಾದಿಸುವ ಅಕಿರ ಕುರಸೋವ ಆತ್ಮಕತೆಯ ಪುಟ

 

ಯುದ್ಧಾನಂತರದ ನನ್ನ ಚಿತ್ರದ ಹೆಸರು ಜನಪ್ರಿಯ ನುಡಿಗಟ್ಟಾಯಿತು. ಈ ಚಿತ್ರ ಬಿಡುಗಡೆಯಾದ ನಂತರ “….. ಬಗ್ಗೆ ನಮಗೆ ವಿಷಾದವಿಲ್ಲ” ಎನ್ನುವ ನುಡಿಗಟ್ಟನ್ನು ದಿನಪತ್ರಿಕೆಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಕಂಡುಬರುವುದು ಸಾಮಾನ್ಯ ಸಂಗತಿಯಾಗಿತ್ತು. ಆದರೆ ವೈಯುಕ್ತಿಕವಾಗಿ ಇದಕ್ಕೆ ತದ್ವಿರುದ್ಧವಾಗಿ ನನಗನ್ನಿಸುತ್ತಿತ್ತು. ಈ ಚಿತ್ರದ ಬಗ್ಗೆ ನನ್ನಲ್ಲಿ ಹಲವು ಕಾರಣಗಳಿಗಾಗಿ ವಿಷಾದವಿದೆ. ಇದಕ್ಕೆ ಕಾರಣ ಚಿತ್ರಕತೆಯನ್ನು ನನ್ನಿಷ್ಟಕ್ಕೆ ವಿರುದ್ಧವಾಗಿ ಬರೆಸಿದ್ದು.

ಈ ಚಿತ್ರವು ತೊಹೊ ಸ್ಟುಡಿಯೋದಲ್ಲಿನ ಎರಡು ಕಾರ್ಮಿಕ ಮುಷ್ಕರಗಳ ನಡುವೆ ಹುಟ್ಟಿತು. ತೊಹೊದೊಳಗಿನ ಮೊದಲ ವ್ಯಾಜ್ಯವು 1946ರ ಫೆಬ್ರವರಿಯಲ್ಲಿ ನಡೆಯಿತು. ಎರಡನೆಯದು ಅದೇ ವರ್ಷ ಅಕ್ಟೋಬರ್ ನಲ್ಲಿ ನಡೆಯಿತು. ‘ನೊ ರಿಗ್ರೆಟ್ಸ್ ಫಾರ್ ಅವರ್ ಯೂತ್’ ಈ ಎರಡು ಮುಷ್ಕರಗಳ ನಡುವಿನ ಏಳು ತಿಂಗಳಲ್ಲಿ ನಿರ್ಮಾಣಗೊಂಡಿತು. ಮೊದಲ ಮುಷ್ಕರದ ಯಶಸ್ಸಿನಿಂದಾಗಿ ತೊಹೊ ಉದ್ಯೋಗಿಗಳ ಸಂಘಟನೆ ಪ್ರಬಲವಾಯಿತು. ಉದ್ಯೋಗಿಗಳಲ್ಲಿ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರ ಸಂಖ್ಯೆ ಹೆಚ್ಚಾಯಿತು. ಚಿತ್ರ ನಿರ್ಮಾಣದ ವಿಷಯದಲ್ಲಿ ಅವರ ಮಾತುಗಳು ಮೊದಲಿಗಿಂತಲೂ ಹೆಚ್ಚು ಪ್ರಾಮುಖ್ಯತೆ ಪಡೆಯಿತು. ಕಥಾಸಾರಾಂಶ ಪರಾಮರ್ಶನ ಸಮಿತಿಯನ್ನು ರೂಪಿಸಲಾಯಿತು. ಈ ಸಮಿತಿಯು ನೊ ರಿಗ್ರೆಟ್ಸ್ ಫಾರ್ ಅವರ್ ಯೂತ್ ನ ಚಿತ್ರಕತೆಯಲ್ಲಿನ ಬದಲಾವಣೆಗಳನ್ನು ನಿರ್ಧರಿಸಿತು. ಅವರು ಅಳವಡಿಸಿದ ಬದಲಾವಣೆಗಳೊಂದಿಗೆ ಚಿತ್ರವನ್ನು ನಿರ್ಮಿಸಲಾಯಿತು. ಚಿತ್ರಕತೆಯಲ್ಲಿ ನ್ಯೂನತೆಗಳಿದ್ದವು ಎಂದಲ್ಲ ಬದಲಿಗೆ ಅದೇ ವಸ್ತುವನ್ನು ಆಧರಿಸಿದ ಮತ್ತೊಂದು ಚಿತ್ರಕತೆಯನ್ನು ಸಮಿತಿಗೆ ಸಲ್ಲಿಸಲಾಗಿತ್ತೆಂದು ನನ್ನ ಚಿತ್ರಕತೆಯಲ್ಲಿ ಬದಲಾವಣೆಗಳನ್ನು ಮಾಡಿದರು.

ಎರಡು ಚಿತ್ರಕತೆಗಳು ಒಂದೇ ವಸ್ತುವನ್ನು ಆಧರಿಸಿದ್ದರೂ ಎರಡೂ ಬೇರೆಬೇರೆ ಎಂದು ಭಾವಿಸಿದ್ದೆ. ಹಾಗಾಗಿ ಎರಡೂ ಭಿನ್ನ ಚಿತ್ರಗಳಾಗುತ್ತವೆ ಎನ್ನುವ ನಂಬಿಕೆಯಿತ್ತು. ಇದನ್ನೇ ಪರಾಮರ್ಶನ ಸಮಿತಿಯ ಮುಂದೆ ಹೇಳಿದಾಗ ಅವರು ನನ್ನ ಅಭಿಪ್ರಾಯವನ್ನು ತಿರಸ್ಕರಿಸಿದರು.

ಎರಡೂ ಚಿತ್ರಗಳು ಪೂರ್ತಿಯಾದಾಗ ಪರಾಮರ್ಶನ ಸಮಿತಿಯ ಸದಸ್ಯರು “ನೀವು ಹೇಳಿದ್ದು ಸರಿ. ಇದು ಹೀಗೆ ಆಗುತ್ತದೆ ಎಂದು ನಮಗೆ ತಿಳಿದಿದ್ದರೆ ನಿಮ್ಮ ಮೊದಲ ಚಿತ್ರಕತೆಯನ್ನೇ ನಿಮಗೆ ಚಿತ್ರೀಕರಿಸಲು ಬಿಡುತ್ತಿದ್ದೆವು” ಎಂದರು. ಇದು ಬೇಜವಾಬ್ದಾರಿತನದ ಪರಮಾವಧಿ. ನಾಟಕಕಾರ ಹಿಸೈಟಾ ಐಜಿರೊ ನನ್ನ ಚಿತ್ರಕ್ಕಾಗಿ ಬರೆದಿದ್ದ ಚಿತ್ರಕತೆ ಎಷ್ಟು ಅದ್ಭುತವಾಗಿತ್ತು. ಇಂತಹ ಮೂರ್ಖ ಜನರಿಂದಾಗಿ ಅದು ಕಪಾಟು ಸೇರಿ ಧೂಳು ತಿನ್ನುವಂತಾಯಿತು.

ನೊ ರಿಗ್ರೆಟ್ಸ್ ಫಾರ್ ಅವರ್ ಯೂತ್ ನ ಚಿತ್ರಕತೆಯ ಎರಡನೆಯ ಕರಡನ್ನು ಒತ್ತಾಯದಿಂದ ಬರೆಸಲಾಯಿತು. ಹಾಗಾಗಿ ಅದು ಒಂದು ರೀತಿಯಲ್ಲಿ ವಿರೂಪಗೊಂಡಿತು. ಇದನ್ನು ಚಿತ್ರದ ಕಡೆಯ ಇಪ್ಪತ್ತು ನಿಮಿಷಗಳಲ್ಲಿ ಕಾಣಬಹುದು. ಈ ಇಪ್ಪತ್ತು ನಿಮಿಷಗಳನ್ನೇ ನನ್ನ ಉದ್ದೇಶಕ್ಕಾಗಿ ಪಣಕ್ಕೊಡ್ಡಿದೆ. ಆ ಎರಡು ಸಾವಿರ ಅಡಿಯ ಇನ್ನೂರು ಚಿತ್ರಿಕೆಗಳ ಮೇಲೆ ನನ್ನೆಲ್ಲ ಶಕ್ತಿಯನ್ನು ಧಾರೆಯೆರೆದಿದ್ದೆ. ಆ ಪರಾಮಾರ್ಶನ ಸಮಿತಿಯ ಮೇಲಿನ ನನ್ನ ಸಿಟ್ಟೆಲ್ಲವೂ ಆ ಅಂತಿಮ ದೃಶ್ಯಗಳಲ್ಲಿ ಕಾಣಿಸಿಕೊಂಡಿದೆ.

‘ನೊ ರಿಗ್ರೆಟ್ಸ್ ಫಾರ್ ಅವರ್ ಯೂತ್’ ಈ ಎರಡು ಮುಷ್ಕರಗಳ ನಡುವಿನ ಏಳು ತಿಂಗಳಲ್ಲಿ ನಿರ್ಮಾಣಗೊಂಡಿತು. ಮೊದಲ ಮುಷ್ಕರದ ಯಶಸ್ಸಿನಿಂದಾಗಿ ತೊಹೊ ಉದ್ಯೋಗಿಗಳ ಸಂಘಟನೆ ಪ್ರಬಲವಾಯಿತು. ಉದ್ಯೋಗಿಗಳಲ್ಲಿ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರ ಸಂಖ್ಯೆ ಹೆಚ್ಚಾಯಿತು. ಚಿತ್ರ ನಿರ್ಮಾಣದ ವಿಷಯದಲ್ಲಿ ಅವರ ಮಾತುಗಳು ಮೊದಲಿಗಿಂತಲೂ ಹೆಚ್ಚು ಪ್ರಾಮುಖ್ಯತೆ ಪಡೆಯಿತು.

ಚಿತ್ರವನ್ನು ಮುಗಿಸುವ ಹೊತ್ತಿಗೆ ಚೈತನ್ಯವೆಲ್ಲ ಉಡುಗಿಹೋಗಿ ಎಷ್ಟು ಮನಸ್ಸು ಕದಡಿಹೋಗಿತ್ತೆಂದರೆ ಏನನ್ನೂ ತಣ್ಣಗೆ ಕೂತು ವಿಮರ್ಶಿಸಲು ನನ್ನಿಂದ ಸಾಧ್ಯವಿರಲಿಲ್ಲ. ಆದರೆ ವಿಚಿತ್ರವಾದದ್ದೇನನ್ನೋ ಮಾಡಿದ್ದೀನಿ ಅಂತ ಮಾತ್ರ ನಂಬಿಕೆಯಿತ್ತು. ಕಂಪನಿಯು ಅಮೆರಿಕನ್ ಸೆನ್ಸಾರ್ ಮಂದಿಗೆ ಚಿತ್ರದ ಪ್ರದರ್ಶನವನ್ನು ಏರ್ಪಡಿಸಿತು. ಅವರು ತಮ್ಮತಮ್ಮಲ್ಲೇ ಮಾತಾಡುತ್ತಾ ಕೂತಿದ್ದನ್ನು ನೋಡಿ ನಾನು ಸೋತೆ ಎನ್ನಿಸಲಾರಂಭಿಸಿತು. ಆದರೆ ಚಿತ್ರ ಇನ್ನು ಕಡೆಯ ಇಪ್ಪತ್ತು ನಿಮಿಷವಿದೆ ಎನ್ನುವಾಗ ಇಡೀ ಗುಂಪು ಮೌನದೊಳಕ್ಕೆ ಜಾರಿತು. ಪರದೆಯನ್ನೇ ತದೇಕಚಿತ್ತದಿಂದ ನೋಡಲಾರಂಭಿಸಿದರು. ಪರದೆಯ ಮೇಲೆ ಹೆಸರುಗಳು ಕಾಣಿಸಿಕೊಳ್ಳುವವರೆಗೂ ಅವರೆಲ್ಲರೂ ಉಸಿರುಬಿಗಿಹಿಡಿದು ನೋಡುತ್ತಾ ಕೂತಿದ್ದರು. ದೀಪಗಳು ಬೆಳಗಿದ ತಕ್ಷಣ ಎಲ್ಲರೂ ಎದ್ದುನಿಂತು ಕೈಕುಲುಕಲು ನನ್ನತ್ತ ಬಂದರು. ಚಿತ್ರ ಅದ್ಭುತವಾಗಿದೆ ಎಂದು ಹೊಗಳಿಕೆಯ ಮಳೆ ಸುರಿಸಿ ಪ್ರೀತಿಯಿಂದ ಅಭಿನಂದಿಸಿದರು. ಆಶ್ಚರ್ಯಚಕಿತನಾಗಿ ನಿಂತುಬಿಟ್ಟೆ.

ಅವರನ್ನು ಬೀಳ್ಕೊಟ್ಟ ನಂತರ ಚಿತ್ರ ಯಶಸ್ವಿಯಾಯಿತು ಅನ್ನಿಸಲಾರಂಭಿಸಿತು. ನಂತರದಲ್ಲಿ ಈ ಅಮೆರಿಕನ್ ಸೆನ್ಸಾರ್ ಮಂಡಳಿಯವರಲ್ಲಿ ಒಬ್ಬರಾದ ಶ್ರೀ.ಗಾರ್ಕಿಯವರು ಚಿತ್ರದ ಗೌರವಾರ್ಥ ಪಾರ್ಟಿ ಕೊಡಿಸಿದರು. ತೊಹೊದಲ್ಲಿ ಎರಡನೆಯ ವ್ಯಾಜ್ಯ ಶುರುವಾದಾಗ ನೊ ರಿಗ್ರೆಟ್ಸ್ ನಲ್ಲಿ ನಟಿಸಿದ್ದ ನಟರು ಉಳಿದ ನಟರೊಂದಿಗೆ ಸೇರಿ ಫ್ಲಾಗ್ ಗ್ರೂಪ್ ಆಫ್ ಟೆನ್ ರೂಪಿಸಿಕೊಳ್ಳಲು ಮುಂದಾದರು. ಅವರು ಮುಷ್ಕರವನ್ನು ವಿರೋಧಿಸಿ ಶಿನ್ ತೊಹೊವನ್ನು ಸೇರಲು ಹೊರಟರು. ಈ ವಿಷಯ ಕುರಿತಾದ ನಮ್ಮ ಆಲೋಚನೆಗಳನ್ನು ಗಾರ್ಕಿಯವರು ಒಪ್ಪದಿದ್ದರೂ ಕೂಡ ನಮ್ಮನ್ನು ಪಾರ್ಟಿಗೆ ಆಹ್ವಾನಿಸಿದ್ದರು. ನೊ ರಿಗ್ರೆಟ್ಸ್ ಚಿತ್ರಕ್ಕಾಗಿ ನಾವೆಲ್ಲರೂ ಸಹಕಾರ ನೀಡಿದ್ದೆವಲ್ಲ ಹಾಗಾಗಿ ಅದನ್ನು ಆಚರಿಸಲು ಈ ಪಾರ್ಟಿಯಲ್ಲಿ ನಾವೆಲ್ಲರೂ ಸೇರುತ್ತೇವೆ ಎನ್ನುವುದು ಅವರ ಆಸೆಯಾಗಿತ್ತು. ಮತ್ತೆ ನಾವೆಲ್ಲರೂ ಒಂದಾಗಲು ಇದೊಂದು ಅವಕಾಶವಾಗಬಹುದು ಎಂದು ಅವರಂದುಕೊಂಡರು. (ಆದರೆ ಈ ಪಾರ್ಟಿಗೆ ಅವರ್ಯಾರು ಬರಲಿಲ್ಲ. ಸುಮಾರು ಹತ್ತು ವರ್ಷದವರೆಗೆ ಅವರುಗಳು ಹಿಂತಿರುಗಲಿಲ್ಲ. ನಟರು ಮಾತ್ರವಲ್ಲ ಶಿನ್ ತೊಹೊಗೆ ಸೇರಿಕೊಂಡ ಚಿತ್ರದ ತಂತ್ರಜ್ಞರು ಕೂಡ ಬರಲಿಲ್ಲ. ತೊಹೊ ತನ್ನ ಒಂದು ನಡೆಯಿಂದಾಗಿ ತಾನೇ ತರಬೇತಿ ನೀಡಿದ ಮಂದಿಯನ್ನು ಕಳೆದುಕೊಂಡಿದ್ದಲ್ಲದೆ ಉದ್ಯೋಗಿಗಳ ನಡುವಿನ ಸೌಹಾರ್ದತೆಯನ್ನು ಕದಡಿಬಿಟ್ಟಿತು. ಅದಕ್ಕಿಂತ ಹೆಚ್ಚಾಗಿ ಮತ್ತೆ ಹತ್ತು ವರ್ಷಗಳನ್ನು ಹೊಸ ಮಂದಿಗೆ ತರಬೇತಿ ನೀಡುವಲ್ಲಿ ವ್ಯಯಿಸಿತು).

ನೊ ರಿಗ್ರೆಟ್ಸ್ ಫಾರ್ ಅವರ್ ಯೂತ್ ಈ ಎಲ್ಲ ಏಳುಬೀಳುಗಳ ನಡುವೆ ಹುಟ್ಟಿತು. ಈ ಚಿತ್ರದ ಕುರಿತು ನನ್ನಾಳದಲ್ಲಿ ಭಾವನೆಗಳ ಅಲೆಗಳು ಏಳುತ್ತವೆ. ಯುದ್ಧಾನಂತರದಲ್ಲಿ ಸ್ವತಂತ್ರ ವಾತಾವರಣದಲ್ಲಿ ಮಾಡಿದ ಮೊದಲ ಚಿತ್ರ. ಕ್ಯೋಟೊದ ಹಳೆಯ ರಾಜಧಾನಿಯ ಸ್ಥಳಗಳನ್ನು ಚಿತ್ರೀಕರಣಕ್ಕೆ ಬಳಸಿದ್ದೆವು. ಹುಲ್ಲಿನ ಬೆಟ್ಟಗಳು, ಬೀದಿ ಬದಿಯ ಸಾಲು ಹೂಗಳ ರಸ್ತೆಗಳು, ಸೂರ್ಯನ ಕಿರಣಗಳನ್ನು ಪ್ರತಿಫಲಿಸುತ್ತಿದ್ದ ಹೊಳ್ಳಗಳು ಇವೆಲ್ಲವೂ ಇಂದಿನ ಹಲವು ಚಿತ್ರಗಳಲ್ಲಿ ಬಳಸಿದ್ದಾರೆ. ಆದರೆ ಆ ಸಮಯದಲ್ಲಿ ನಮಗದು ವಿಶೇಷವಾಗಿತ್ತು. ನನಗೆ ರೆಕ್ಕೆಗಳು ಮೊಳೆದು ಮೋಡಗಳ ನಡುವೆ ಹಾರುತ್ತಿರುವೆನೆನೋ ಎನ್ನುವ ಹಾಗೆ ಹೃದಯ ಕುಣಿಯುತ್ತಿತ್ತು.

ಯುದ್ಧದ ಸಮಯದಲ್ಲಿ ಅಂತಹ ಪ್ರಕೃತಿ ದೃಶ್ಯಗಳನ್ನು ಸೆರೆಹಿಡಿಯಬೇಕೆಂದರೆ ಬಹಳ ಎಚ್ಚರಿಕೆಯಿಂದ ಇರಬೇಕಿತ್ತು. ಯುದ್ಧದ ಪರಿಸ್ಥಿತಿ ಇರುವಾಗ ಚಿತ್ರದಲ್ಲಿ ಯೌವನವನ್ನು ಪರಿಪೂರ್ಣವಾಗಿ ಹಿಡಿಯಲು ಸಾಧ್ಯವಿರಲಿಲ್ಲ. ಸೆನ್ಸಾರ್ ಮಂಡಳಿಯವರಿಗೆ ಪ್ರೀತಿ ಎನ್ನುವುದು ಅಸಭ್ಯವಾಗಿರುತ್ತಿತ್ತು. ತಾಜಾ ಕುತೂಹಲಭರಿತ ಸಂವೇದನೆಗಳು ಯುವಕರ “ಬ್ರಿಟೀಷ್ ಅಮೆರಿಕನ್” ಮನಸ್ಥಿತಿಯ ದೌರ್ಬಲ್ಯವಾಗಿ ಕಾಣುತ್ತಿತ್ತು. ಆ ದಿನಗಳಲ್ಲಿ ಯೌವನವೆಂದರೆ ನಮ್ಮದೇ ಉಸಿರಿನ ದನಿಯನ್ನು ಕೂಡ ಅಡಗಿಸಿಟ್ಟು ಜೈಲಿನಲ್ಲಿ ಇರುವವರಂತೆ ಇರುವುದು.

ಜಪಾನಿನಲ್ಲಿ ಯುದ್ಧಾನಂತರದಲ್ಲಿ ಯುವಕರು ತಮ್ಮ ಜೀವಚೈತನ್ಯವನ್ನು ಗಳಿಸಿಕೊಳ್ಳಲು ಇನ್ನೂ ಹೆಚ್ಚಿನ ಕಠಿಣ ಸಮಯವನ್ನು ಎದುರಿಸಬೇಕಾಗಿತ್ತು. ಇದೇ ನನ್ನ ಮುಂದಿನ ಚಿತ್ರದ ವಸ್ತುವಾಗಿತ್ತು.