ಕಂಟಲಗೆರೆ ಬಹುತೇಕ ಇದು ದುಡಿದು ದುಡಿದು ಬಡವಾಗಿಯೇ ಉಳಿದ ಕುಟುಂಬಗಳಿಂದ ತುಂಬಿದ ಊರಾಗಿದ್ದುದು ನನಗೆ ಗೊತ್ತು. ಇಂಥ ಒಂದು ಊರಿನ ಉರಿಯಿಂದ ಸಿಡಿದ ಬೀಜ ನೀನು. ಅಲ್ಲಿಂದ ಬಚಾವಾಗಿ ಪ್ರೈಮರಿ ಕೊಂಡವನ್ನು ಹಾದು, ಮಿಡ್ಲಿಸ್ಕೂಲ್ ಎಂಬ ಉನ್ನತ ಶಿಕ್ಷಣಕ್ಕೆ ತಿಪಟೂರಿಗೆ ಹೋದದ್ದು, ಊರಿನ ಪುರಾತನ ಬೇರುಗಳನ್ನು ಕಿತ್ತುಕೊಂಡು ಹಾಸ್ಟೆಲ್‌ನಲ್ಲಿ ನೆಲೆಗೊಂಡದ್ದು, ಚಿಕ್ಕಪ್ಪನ ಮತ್ತು ಕುಂದೂರು ತಿಮ್ಮಯ್ಯನವರ ಒತ್ತಾಸೆ ನಿನಗೆ ಸಿಕ್ಕಿದ್ದು ನಿನ್ನಂತ ದಲಿತ ಹುಡುಗರ ಜೀವನದಲ್ಲಿಯ ಬಹುದೊಡ್ಡ ತಿರುವು ಎಂದು ನನಗೆ ಅನಿಸುತ್ತದೆ.
ಗುರುಪ್ರಸಾದ್‌ ಕಂಟಲಗೆರೆ ಅವರ “ಟ್ರಂಕು ತಟ್ಟೆ” ಹಾಸ್ಟೆಲ್‌ ಅನುಭವ ಕಥನದ ಕುರಿತು ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ ಬರಹ

ಪ್ರಿಯ ಕಂಟಲಗೆರೆ,

ನೀನು ಕಳುಹಿಸಿದ ‘ಟ್ರಂಕುತಟ್ಟೆ’ ಓದಿದೆ.

ಈ ಟ್ರಂಕು ಮತ್ತು ತಟ್ಟೆ ನನ್ನ ಮತ್ತು ನಿನ್ನ ತಲಮಾರಿನ ಬಹುದೊಡ್ಡ ರೂಪಕ ಹಾಗು ಪ್ರತಿಮೆ. ಹಾಸ್ಟೆಲ್ ಜೀವನದ ನಿನ್ನ ಬದುಕಿನ ಹೆಜ್ಜೆಗಳನ್ನು ದಾಖಲಿಸಿರುವ ಈ ಬರಹಗಳ ಗುಚ್ಚಕ್ಕೆ ಅಕಳಂಕ ಸೂಕ್ತವಾದ ಹೆಸರಿಟ್ಟಿರುವೆ. ಪ್ರಬಂಧದ ಗುಣಲಕ್ಷಣಗಳಿರುವ ನಿನ್ನ ಬರಹಗಳು ಬಹುತೇಕ ಗಾಯಗೊಂಡಿರುವ ಕಾರಣ ಇವು ಲಹರಿಗಳಲ್ಲ. ಆದರೆ ನಿನ್ನ ಈ ಬರಹಗಳಲ್ಲಿ ನೀನು ಎಲ್ಲಿಯೂ ಕುಂಟುತ್ತಿಲ್ಲ, ನೋವಿನಿಂದ ನರಳುತ್ತಿಲ್ಲ. ನಗುವಿನ ಅಲೆಯ ಮೇಲೆ ನಿನ್ನ ಯಾನ ಸಾಗಿರುವುದು ವಿಶೇಷ.

(ಗುರುಪ್ರಸಾದ್‌ ಕಂಟಲಗೆರೆ)

ನಿನ್ನ ಈ ಬರಹಗಳಲ್ಲಿ ಅವಮಾನದ ದಾಖಲೆಗಳಿವೆ. ಪ್ರತಿರೋಧದ ನೆಲೆಗಳಿವೆ, ಆದರೆ ದ್ವೇಷದ ಪ್ರತೀಕಾರದ ಛಾಯೆಗಳಿಲ್ಲ. ಇದು ನಿನ್ನ ಬರವಣಿಗೆಯನ್ನು ಭಿನ್ನ ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು ಒತ್ತಾಯಿಸುತ್ತದೆ.

ನಿನ್ನ ಈ ಬರಹಗಳಲ್ಲಿ ಬಾಲ್ಯಕಾಲದ ಜೀವನ ಚರಿತ್ರೆ ಅಡಗಿದೆ. ಅವು ಸ್ವವಿಮರ್ಶೆ ಮತ್ತು ಆಪ್ತತೆಯಿಂದ ಓದುಗರನ್ನು ಒಳಗೊಂಡು ಬೆಳೆಯತೊಡಗುತ್ತವೆ. ಚಿಕ್ಕ ಚಿಕ್ಕ ವಿವರಗಳಲ್ಲಿ ದೊಡ್ಡ ನೋವಿನ ಸ್ತರಗಳಿವೆ. ಓದುಗರು ಇವುಗಳನ್ನೆಲ್ಲ ಅನುಭವಿಸುತ್ತಲೇ ಮುಂದೆ ಸಾಗಬೇಕು.
ನನ್ನ ಅವ್ವನ ತವರೂರಾದ ಕಂಗಸನಹಳ್ಳಿಯಿಂದ ನಾಲ್ಕು ಹೊಲಗಳನ್ನು ದಾಟಿದರೆ ನಿಮ್ಮೂರು ಕಂಟಲಗೆರೆ ಸಿಗುತ್ತದೆ. ಬಹುತೇಕ ಇದು ದುಡಿದು ದುಡಿದು ಬಡವಾಗಿಯೇ ಉಳಿದ ಕುಟುಂಬಗಳಿಂದ ತುಂಬಿದ ಊರಾಗಿದ್ದುದು ನನಗೆ ಗೊತ್ತು. ಇಂಥ ಒಂದು ಊರಿನ ಉರಿಯಿಂದ ಸಿಡಿದ ಬೀಜ ನೀನು. ಅಲ್ಲಿಂದ ಬಚಾವಾಗಿ ಪ್ರೈಮರಿ ಕೊಂಡವನ್ನು ಹಾದು, ಮಿಡ್ಲಿಸ್ಕೂಲ್ ಎಂಬ ಉನ್ನತ ಶಿಕ್ಷಣಕ್ಕೆ ತಿಪಟೂರಿಗೆ ಹೋದದ್ದು, ಊರಿನ ಪುರಾತನ ಬೇರುಗಳನ್ನು ಕಿತ್ತುಕೊಂಡು ಹಾಸ್ಟೆಲ್‌ನಲ್ಲಿ ನೆಲೆಗೊಂಡದ್ದು, ಚಿಕ್ಕಪ್ಪನ ಮತ್ತು ಕುಂದೂರು ತಿಮ್ಮಯ್ಯನವರ ಒತ್ತಾಸೆ ನಿನಗೆ ಸಿಕ್ಕಿದ್ದು ನಿನ್ನಂತ ದಲಿತ ಹುಡುಗರ ಜೀವನದಲ್ಲಿಯ ಬಹುದೊಡ್ಡ ತಿರುವು ಎಂದು ನನಗೆ ಅನಿಸುತ್ತದೆ.

ನೀನು ಮತ್ತು ನಿನ್ನ ತಮ್ಮ ಜೇಪಿ ನಿಮ್ಮಪ್ಪನ ಜೊತೆ ತಿಪಟೂರಿನ ಬಸ್ ಸ್ಟಾಂಡ್‍ನಿಂದ ಹಾಸ್ಟೆಲ್‌ವರೆಗೆ ಸಾಗುವ ನಿಮ್ಮ ನಡಿಗೆ ಇದೆಯಲ್ಲ ಅದು ಕಳುವಾಗಿದ್ದ ಅಕ್ಷರಗಳನ್ನು ಹುಡುಕಿಹೊರಟ ದಾಳಿಯಾಗಿತ್ತೆಂದು ನಾನು ತಿಳಿಯುತ್ತೇನೆ.

ನಿನ್ನ ಈ ಪುಸ್ತಕದಲ್ಲಿ ಒಟ್ಟು ಹಾಸ್ಟೆಲ್‍ಗಳ ಚಿತ್ರಗಳನ್ನು ಕೆತ್ತಿದ್ದೀಯ. ವಕ್ರವಾಗಿ ನೇತಾಡುತ್ತಿದ್ದ ಸಮಾಜ ಕಲ್ಯಾಣ ಇಲಾಖೆಯ ಬೋರ್ಡು, ಗವ್‌ಗತ್ತಲು, ಮಾಜಿ ದನದ ಕೊಟ್ಟಿಗೆಯಂತ ಕಟ್ಟಡ, ಹೊಗೆ ಸುತ್ತಿಕೊಂಡ ಆಫೀಸು, ಮಾಸಿ ಚುಮ್ಟವಾಗಿದ್ದ ಕಾರ್ಪೆಟ್ಟು, ಸಾಕಾದವರಂತೆ ಬಿದ್ದಿದ್ದ ಟ್ರಂಕುಗಳು ಎಂಬ ಈ ನಿನ್ನ ವಿವರಗಳು ಅಂದಿನ ಸಾರ್ವಜನಿಕ ಹಾಸ್ಟೆಲ್‌ಗಳ ಸ್ಥಿತಿಗತಿಗಳನ್ನು ಅಧಿಕಾರಿಗಳ ಮತ್ತು ವಾರ್ಡನ್‌ಗಳ ಬೇಜವಾಬ್ದಾರಿತನ ಮತ್ತು ಭ್ರಷ್ಟತೆಯನ್ನು ದಾಖಲಿಸುತ್ತವೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳನ್ನು ಬಡವರ ಮಕ್ಕಳಿಗಾಗಿ ಇರುವ ಹಾಸ್ಟೆಲ್‌ಗಳು ಎಂದು ಕರೆಯಲು ನನಗೆ ಇಷ್ಟವಿಲ್ಲ. ಅದ್ಯಾಕೊ ಬಡವರು ಎಂಬ ಪದವನ್ನು ದುಡಿಯುವ ವರ್ಗಗಳಿಗೆ ಅಂಟಿಸುವುದು ನನ್ನನ್ನು ರೊಚ್ಚಿಗೆಬ್ಬಿಸುತ್ತದೆ. ಇರಲಿ ಇಂಥ ಹಾಸ್ಟೆಲ್‌ಗಳ ಪೂರ್ಣ ಚರಿತ್ರೆಯನ್ನೆ ನೀನು ಅನಾವರಣಗೊಳಿಸಿದ್ದೀಯ. ಅದೂ ಅಲ್ಲಿನ ಎಲ್ಲ ಒಳ್ಳೆ ತನಗಳನ್ನು ಬೆರೆಸಿ. ಇದು ಅಷ್ಟು ಸುಲಭವೆಂದು ನನಗೆ ಅನಿಸುವುದಿಲ್ಲ.

(ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ)

ನಿನ್ನ ಈ ಎಲ್ಲಾ ಬರಹಗಳ ಗುಣಗಳೆಂದರೆ ತಮಾಷೆ, ವಿಷಾದ, ಖುಷಿ, ಸಿಟ್ಟುಗಳನ್ನು ಮಿಶ್ರಣಮಾಡಿ ರೂಪಿಸುವ ವಾಕ್ಯಗಳು ನನಗೆ ಇಷ್ಟವಾದವು. ಅಂದು ಹಾಸ್ಟೆಲ್‍ನಲ್ಲಿ ಕೊಟ್ಟ ಹೊಸ ಸ್ಟೀಲ್ ತಟ್ಟೆಯಲ್ಲಿ ಕಂಡ ನಿನ್ನಮುಖವೂ ಹೊಸದಾಗಿಯೇ ಕಂಡದ್ದು, ನಿಂತ ರೈಲಿನಲ್ಲಿ ಕಕ್ಕಸ್‍ಗೆ ಹೋಗಿ ನೆಗೆಯುವ ಪರಿ, ಮೊಟ್ಟೆಯನ್ನು ಗೆಳೆಯರೊಟ್ಟಿಗೆ ಸೇರಿ ಕಬಳಿಸುವ ವಿವರ, ನಿನ್ನ ಗೆಳೆಯನಂದ ‘ನಾನು ಬಾಳೆಹಣ್ಣಿನ ಸಿಪ್ಪೆಯನ್ನೂ ಬಿಡದೆ ಪೂರ್ತಿ ತಿಂದೆ’ ಎಂಬ ನುಡಿಯನ್ನು ಹಿಡಿದಿರುವ ರೀತಿ, ಇಡ್ಲಿ ಉಪ್ಪಿಟ್ಟಿನ ಶ್ರೀಮಂತಿಕೆ, ಕರೆಂಟು ಹೋದಾಗ ಟ್ರಂಕು ತಟ್ಟೆ ಎಂಬ ವಾದ್ಯಗಳೊಂದಿಗಿನ ಹಾಡುಗಾರಿಕೆ, ಹಾಸ್ಟೆಲ್ ಹುಡುಗರ ಸೆಕೆಂಡ್ ಶೋ ಪಿಚ್ಚರ್, ದುಡ್ಡಿನ ಆಟ ಇತ್ಯಾದಿಗಳು ಮೂಲ ಕೆಡುವ ಸಾದ್ಯತೆಗಳು, ಚಿತ್ರಾನ್ನದಲ್ಲಿ ಕಡ್ಳೆಬೀಜ ಅನ್ವೇಷಣೆ, ಈ ಮಧ್ಯೆ ಊರಿನಲ್ಲಿನ ಕಷ್ಟಗಳು, ಸಣ್ಣಹೊನ್ನಯ್ಯನವರು ಪಾರ್ಟ್ ಟೈಮ್ ಕೆಲಸ ಹುಡುಕಿದ್ದು, ಟಿಸಿಹೆಚ್ ಕಾಲದಲ್ಲಿ ರಂಗಸ್ವಾಮಿಯ ಬೆಂಬಲ, ತುಮಕೂರಿನ ಅಖಿಲ ಬಾರತ ಸಮ್ಮೇಳನದಲ್ಲಿ ಊಟಕ್ಕಾಗಿ ಕಾಂಪೌಂಡ್ ಹಾರಿ ವಿ.ಐ.ಪಿ ಆದದ್ದು, ಹನುಮಂತಪುರದ ಡಿಗ್ರಿ ಕಾಲೇಜಿನ ವೈಭವದ ಜೊತೆಗೆ ಆ ದಾರಿಯಲ್ಲೆ ಇದ್ದ ಸ್ಲಂನ ದಾರುಣ ಪ್ರಸಂಗಗಳು, ಗೆಸ್ಟ್ ಗಂಗಾಧರನ ಕಥೆಗಳು, ಬೆಲ್ಲದ ಮಡು ರಂಗಸ್ವಾಮಿಯವರ ದಲಿತ ವಿದ್ಯಾರ್ಥಿ ಒಕ್ಕೂಟ, ಡಿಎಸ್‍ಎಸ್ ಹಾಸ್ಟೆಲ್‍ಗಳಲ್ಲಿ ಉಂಟು ಮಾಡಿದ ಪರಿಣಾಮಗಳು, ಹಾಡು, ಪಾಂಪ್ಲೆಟ್ ಪ್ರಭಾವಗಳು, ಇತ್ಯಾದಿಯಿಂದ ತುಂಬಿ ತುಳುಕುವ ಟ್ರಂಕು ತಟ್ಟೆ ಅನುಭವಗಳು ಗದ್ಯ ಪದ್ಯಗಳ ಲಯದಿಂದ ಓದುಗರ ಮನೋರಂಗದಲ್ಲಿ ಕುಣಿಯಬಲ್ಲದು, ಕುಣಿಸಬಲ್ಲದು.

(ಕೃತಿ: ಟ್ರಂಕು ತಟ್ಟೆ (ಹಾಸ್ಟೆಲ್‌ ಅನುಭವ ಕಥನ), ಲೇಖಕರು: ಗುರುಪ್ರಸಾದ್‌ ಕಂಟಲಗೆರೆ, ಪ್ರಕಾಶಕರು: ಚೈತನ್ಯ ಪ್ರಕಾಶನ, ಬೆಲೆ: 180/-)