ಮನೆಯನ್ನು ಸಮೀಪಿಸುತ್ತಲೇ ನಾನು ಮಾಡಿದ ಆಲೋಚನೆಗಳೆಲ್ಲವು ಸರಿಯಾದುವೆಂದು ತೋರಿದುವು. ನನ್ನ ಹೆಂಡತಿಯು ತನ್ನ ಸುಲಭನಿದ್ರೆಯನ್ನು ಬಡಾಯಿ ಹೇಳಿಕೊಳ್ಳುವುದನ್ನು ನಾನು ಕೇಳಿಕೇಳಿ, ಅವಳ ಎಚ್ಚರಿಕೆಯನ್ನು ಪರೀಕ್ಷಿಸಿ, ಅವಳನ್ನು ಅಪಹಾಸ್ಯಕ್ಕೆ ಗುರಿಮಾಡುವುದು ಯೋಗ್ಯವೆಂದು ತಿಳಿದುಕೊಂಡೆನು. ಮನೆಯ ಬಾಗಿಲಿಗೆ ಅಗುಣಿ ಹಾಕಿದರೂ, ಕಿಟಕಿಯ ಕಡೆಯಿಂದ ಒಳನುಗ್ಗಬಹುದೆಂದು ನನಗೆ ಚೆನ್ನಾಗಿ ಗೊತ್ತಿತ್ತು. ಚಿಕ್ಕ ಮನೆಗೆ ಬಂದು, ಅಲ್ಲಿಂದ ಬೀಗದ ಕೈಗಳನ್ನು ಕಳುವು ಮಾಡಿ, ಪೆಟ್ಟಿಗೆಯಲ್ಲಿರುವ ಒಡವೆ ಗಂಟನ್ನು ಮೆಲ್ಲಗೆ ಎತ್ತಿಕೊಂಡು ಅಡಗಿಸಿಟ್ಟು, ಬಳಿಕ ಹೆಂಡತಿಯನ್ನು ಎಚ್ಚರಿಸಿದರೆ, ಈ ಚೇಷ್ಟೆಯು ಬಹಳ ಸಂತೋಷಕರವಾಗುವುದೆಂದು ನಿಶ್ಚಯಿಸಿದೆನು.
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು’ ಸರಣಿಯಲ್ಲಿ ಪಂಜೆ ಮಂಗೇಶರಾವ್  ಬರೆದ ಕತೆ “ನನ್ನ ಹೆಂಡತಿ” ಈ ಭಾನುವಾರದ ನಿಮ್ಮ ಓದಿಗೆ.

 

ನನ್ನ ಚಿಕ್ಕತಾಯಿ ಜೈಲಿನ ಬಾಯಿಗೆ ಬೀಳಲಿಕ್ಕಾದ ನನ್ನನ್ನು ಹೇಗೂ ಬಿಡುಗಡೆ ಮಾಡಿದಳು. ನಾನು ಮಾಡಿದ ತಪ್ಪಿಗೆ ನಾನೇ ಬಹಳ ನಾಚಿಕೆಪಟ್ಟು, ಅವಳ ಮೋರೆ ನೋಡುತ್ತಿರಲಿಲ್ಲ. ಅವಳೂ ನನ್ನ ಮೋರೆಯನ್ನು ಚಿರಕಾಲ ನೋಡಲಿಲ್ಲ. ಒಂದು ವರ್ಷದ ಮೇಲೆ ಅವಳು ತನ್ನ ಮುತ್ತೈದೆತನದ ಮೋರೆಯನ್ನು ಈ ಲೋಕದಿಂದ ತಿರುಗಿಸಿಬಿಟ್ಟಳು. ಹೋಗುವಾಗ ತನ್ನ ಒಡವೆಗಂಟನ್ನೂ ಮನೆಯನ್ನೂ ತನ್ನೊಡನೆ ಕೊಂಡು ಹೋಗಲಿಕ್ಕೆ ಮರೆತುಬಿಟ್ಟಳೆಂದು ತೋರುತ್ತಿದೆ. ಮದುವೆಯಾಗಲು ಸಂಭವವಿಲ್ಲದ ನನಗೆ ಅಂದಿನಿಂದ ಹೆಣ್ಣು ಕೊಡಲು ಕೆಲವರು ಮೊದಲು ಮಾಡಿದರು. ಒಬ್ಬಿಬ್ಬರು ನನ್ನನ್ನೇ ಅಳಿಯನಾಗಿ ಮಾಡಿಕೊಳ್ಳಬೇಕೆಂದಿದ್ದರು; ಹಲವರು ನನ್ನ ಪಾಲಿಗೆ ಬಂದ ಚಿನ್ನದ ಗಂಟನ್ನು ಅಳಿಯನಾಗಿ ಮಾಡಿಕೊಳ್ಳಬೇಕೆಂದಿದ್ದರು. ಇದನ್ನೆಲ್ಲಾ ಯೋಚಿಸಿ, ಹೊಸಪೇಟೆ ರಾಜಣ್ಣನವರು ಸ………ತಿ, (ಮದುವೆಯಾದುದರಿಂದ ಹೆಂಡತಿಯ ಹೆಸರನ್ನು ಬಹಿರಂಗವಾಗಿ ಹೇಳಲಿಕ್ಕೆ ಸ್ವಲ್ಪ ಶಂಕೆ) ಎಂಬ ತನ್ನ ಮಗಳನ್ನು ನನಗೆ ಕೊಟ್ಟು ಮದುವೆ ಮಾಡಿದರು. ಮದುವೆಯಾದ ಎರಡು ವರ್ಷಗಳವರೆಗೆ, ನನ್ನ ಹೆಂಡತಿಯನ್ನು ನಾನು ಪ್ರೀತಿಸುತ್ತಿರಲಿಲ್ಲ. ಈ ರೀತಿಯ ವೈಮನಸ್ಸಾಗಲಿಕ್ಕೆ ಅನೇಕ ಕಾರಣಗಳಿದ್ದುವು. ಪತ್ನೀಪರಿತ್ಯಾಗವು ನಮಗೆ ಕುಲಪರಂಪರೆಯಾದ ಧರ್ಮವು. ನಮ್ಮ ತಂದೆಯು ನಾನು ಹುಟ್ಟಿದ ಬಳಿಕ ಸಂಸಾರ ಜ್ಞಾನೋದಯವುಳ್ಳವರಾಗಿ, ನನ್ನ ತಾಯಿಯನ್ನು ಬಿಟ್ಟುಬಿಟ್ಟು, ಸಂತಧರ್ಮವನ್ನು ಅವಲಂಬಿಸಿದರು. ನಮ್ಮ ಚಿಕ್ಕತಂದೆಯು ಪ್ರಾಯಭರಿತರಾದುದರಿಂದ, ಪರದೇಶಗಳಲ್ಲಿ ಸುಖವೇ ಹೆಚ್ಚೆಂದು ತಿಳಿದುಕೊಂಡು, ನನ್ನ ಚಿಕ್ಕತಾಯಿಯನ್ನು ಬಿಟ್ಟು ಓಡಿಹೋದರು. ನನಗಾದರೊ, ನನ್ನ ಮಾವನು ಚಿನ್ನದ ಉಡಿದಾರವನ್ನೂ, ವಜ್ರದ ಉಂಗುರವನ್ನೂ ಕೊಟ್ಟಿರಲಿಲ್ಲ. ಇಂತಹ ಪ್ರೀತಿಬಂಧಕಗಳು ಇಲ್ಲದೆ, ಹೆಂಡತಿಯನ್ನು ಪ್ರೀತಿಸುವ ಬಗೆ ಹೇಗೆ? ವಾಚಕರೇ ಹೇಳಿರಿ! ನಿಮ್ಮ ಪತ್ನಿಯರ ತವರುಮನೆಯಿಂದ ನಿಮಗೆ ಉಂಗುರ ಉಡಿದಾರ ಬರುವ ಸಂಭವವಿದ್ದರೆ, ನಿಮ್ಮ ಪ್ರೀತಿ ಇನ್ನೂ ಅಧಿಕವಾಗಲಾರದೇ? ನಾನು ನನ್ನ ಹೆಂಡತಿಯನ್ನು ಅಲಕ್ಷಿಸಲಿಕ್ಕೆ ಮೂರನೆಯ ಕಾರಣವು ಅವಳ ರೂಪಲಾವಣ್ಯವಾಗಿತ್ತು. ಹುಡುಗಿಯು ಎರಡು ವರ್ಷಗಳವರೆಗೆ ನೋಡಲಿಕ್ಕೆ ಅಷ್ಟೊಂದು ರುಚಿಯಾಗಿರಲಿಲ್ಲ. ಅವಳ ಕಣ್ಣು, ಮೂಗು, ಹಣೆ ಆಕರ್ಷಿಸುವಷ್ಟು ಸುಂದರವಾಗದೆ ಇದ್ದರೂ, ಹುಬ್ಬುಗಳು ಮಾತ್ರ ಎಲ್ಲರ ಕಣ್ಣುಗಳನ್ನೂ ಎಳೆಯುತ್ತಿದ್ದವು. ಈ ಹುಬ್ಬುಗಳು ಕಣ್ಣಿನ ಮೇಲ್ಗಡೆಯಲ್ಲಿಟ್ಟ ಸಣ್ಣ ಮೀಸೆಗಳಂತಿದ್ದುವು. ಇದರಿಂದ ಸಂಪೂರ್ಣ ರೂಪಕ್ಕೆ ಒಂದು ಬಗೆಯ ಆಕಾರವೋ ವಿಕಾರವೋ ಉಂಟಾಗುತ್ತಿತ್ತು. ಈ ವಿಚಿತ್ರ ಭ್ರೂಯುಗ್ಮವು ಅವಳನ್ನು ಮತ್ತೊಂದು ಅಪಾಯಕ್ಕೆ ಗುರಿಮಾಡಿತು.

ಕೆಲವು ಗೃಹಸ್ಥರು ಅವಳನ್ನು ಹುಬ್ಬಿನ ಹುಡುಗಿ ಎಂದೂ, ಅಯ್ಗಳರ ಮಗಳೆಂದೂ, ನಾನು ಕೇಳುವ ಹಾಗೆ ಕರೆಯುತ್ತಿದ್ದರು. ಒಬ್ಬಿಬ್ಬರು ಇದಕ್ಕೆ ಬದಲಾಗಿ ಇತಿಹಾಸದ ಹೆಸರಿನಿಂದ ಅವಳನ್ನು ಸಂಬೋಧಿಸುತ್ತಿದ್ದರು. ‘ಆಟದ ಸೀತೆ’ ‘ಆಟದ ಸೀತೆ’ ಎಂದು ಪುನಃ ಪುನಃ ಈ ಪುಣ್ಯಾತ್ಮರು ಹೇಳಿರುವುದು ನನ್ನ ಕಿವಿಗೆ ಬಿದ್ದಿದೆ. ಇದರ ಕಾರಣವನ್ನು ತಿಳಿದುಕೊಳ್ಳುವಷ್ಟು ಶ್ರಮವನ್ನು ನಾನು ತೆಗೆದುಕೊಳ್ಳಬೇಕಾಗಲಿಲ್ಲ.

ಮೇಲೆ ಹೇಳಿದ ಕಾರಣಗಳಿಂದ ಅವಳನ್ನು ಎಲ್ಲಿ ನೋಡಿದರೂ ನಾನು ಅಲಕ್ಷಿಸುತ್ತಿದ್ದೆನು. ಅವಳು ಮಾತ್ರ ನನ್ನನ್ನು ನೋಡಿ ಹುಬ್ಬುಗಂಟು ಕೂಡಾ ಹಾಕುತ್ತಿರಲಿಲ್ಲ; ಅಥವಾ ಹಾಕಿಕೊಂಡರೂ ಆ ಹುಬ್ಬು ಗಂಟು ನನಗೆ ಚೆನ್ನಾಗಿ ತೋರುತ್ತಿರಲಿಲ್ಲ. ಈ ರೀತಿಯಲ್ಲಿ ಎರಡು ವರ್ಷಗಳು – ಪ್ರಣಯ ರಹಿತವಾದ 720 ದಿವಸಗಳು – ಕಳೆದುವು. ಆದರೂ ನಾನು ಸ್ಥಿರಚಿತ್ತನಾಗಿಯೇ ಇದ್ದು, ಬಂದ ಸಂಕಷ್ಟಗಳನ್ನೆಲ್ಲಾ ತಾಳಿಕೊಂಡೆನು. ಕಾಲವು ಇದ್ದಂತೆ ಇರುವುದಿಲ್ಲ. ಕಾಲಚಕ್ರವು ತಿರುಗುತ್ತಿರುವಾಗ ಅದರೊಂದಿಗೆ ಮನುಷ್ಯನ ಚರ್ಯೆಚೇಷ್ಟೆಗಳೂ, ಬುದ್ಧಿಜ್ಞಾನವೂ, ರೂಪಲಾವಣ್ಯವೂ ಬದಲಾಗುತ್ತ ಬರುವುವು. ಬಾಲ್ಯದಲ್ಲಿ ಕಳವು ಮಾಡಿ ದಿವಸ ಕಳೆಯುವ ಹುಡುಗನು ಯೌವನದಲ್ಲಿ ಪೋಲೀಸ್ ಇಲಾಖೆಯ ಇನ್ಸ್ಪೆಕ್ಟರಾಗುತ್ತಾನೆ; ಆನೆಯ ಮರಿಯೆಂದು ಲಾಯದಲ್ಲಿ ಸಾಕಿದ ಮೃಗವು ಕಾಲಾನುಕಾಲದಲ್ಲಿ ಕತ್ತೆಯ ಮರಿಯಾಗಿ ಹೋಗುವುದುಂಟು; ಕಾಗೆಯ ಗೂಡಿನಲ್ಲಿ ಬೆಳೆದ ಹಕ್ಕಿಯು ಗರಿಗಳು ಬರುತ್ತಲೆ, ಕೋಗಿಲೆಯಾಗಿ ಹಾರಿಹೋಗುವುದು. ಹೀಗಿರುವಾಗ ನನ್ನ ಹೆಂಡತಿ, ಸ್ವಲ್ಪ ಕಾಲದ ಮೇಲೆ ನನಗೆ ಅತ್ಯಂತ ರೂಪವತಿಯೆಂದು ತೋರಿದುರಲ್ಲಾಗಲಿ ನಾನು ಅವಳನ್ನು ಪ್ರೀತಿಸಿದುದರಲ್ಲಾಗಲಿ ನನ್ನ ದೋಷವೇನೂ ಇಲ್ಲ.

ಮುಖವು ದಿನೇದಿನೇ ಪ್ರಫುಲ್ಲವಾಗುತ್ತ ಯೌವನ ಸಂಚಾರ ಸೂಚಕವಾಗುತ್ತಲೇ, ನನ್ನ ಹೃದಯದಲ್ಲಿ ಇಲ್ಲದ ಪ್ರೀತಿಯು ನನಗೆ ತಿಳಿಯದಂತೆ ಅಂಕುರಿಸಿತು. ಚಕ್ಷುಗಳನ್ನು ಕತ್ತಲಿಸುತ್ತಿದ್ದ ಭ್ರೂಯುಗ್ಮವು ಲಲಾಟಪ್ರದೇಶವು ಅಗಲವಾಗಿ ಹಿಡಿಯಲಾರದಷ್ಟು ಉಕ್ಕಿ ಉಕ್ಕಿ ಬರುತ್ತಿರಲು, ನನ್ನ ಮನಸ್ಸಿನ ಲವಲವಿಕೆಯು ಉನ್ನತವಾಗುತ್ತ ಬಂದು, ನನ್ನನ್ನು ಒಂದು ಪ್ರಕಾರವಾಗಿ ಹುಚ್ಚುಗೊಳಿಸಿತು. ಅವಳನ್ನು ನೋಡಿದರೆ, ಹುಬ್ಬಿನ ಹುಡುಗಿ ಎಂದಾಗಲೀ ಗಂಡುಹುಡುಗಿ ಎಂದಾಗಲೀ, ಯಾರೂ ಸದ್ವಿಚಾರಮಾಡುವಷ್ಟು ಅವಕಾಶವಿರಲಿಲ್ಲ.

ಪತ್ನಿಯು ಪಾರಮಾರ್ಥಿಕ ವಸ್ತುವೆಂದು ಕೆಲವು ಗ್ರಂಥಕಾರರು ಹೇಳುವರು. ನನ್ನ ಹೆಂಡತಿಯು ಈ ತರಗತಿಗೆ ಬರುವಳೋ ಇಲ್ಲವೋ ನನಗೆ ಹೇಳಲು ಸಾಮರ್ಥ್ಯವಿಲ್ಲ. ‘ಅಪುತ್ರಸ್ಯ ಲೋಕೋ ನಾಸ್ತಿ’ ಎಂಬ ಮಾತು ಸುಳ್ಳಾದರೆ, ನನ್ನ ಹೆಂಡತಿಯು ಪಾರಮಾರ್ಥಿಕ ಸಂಬಂಧದವಳೆಂದು ಹೇಳಬಲ್ಲೆನು. ನನ್ನ ಹೆಂಡತಿಯು ಹೇಗಿದ್ದರೂ, ನನ್ನ ಪ್ರೀತಿಯು (ನಾವು ಈ ಲೋಕದಲ್ಲಿಯೇ ಇದ್ದುದರಿಂದ) ಇಹಲೋಕ ಸಂಬಂಧವಾದುದಾಗಿತ್ತು. ಆದರೆ ಆ ಪ್ರಣಯವೇ ನನ್ನನ್ನು ಈ ಅನರ್ಥಕ್ಕೆ ತಂದಿಳಿಸಿತು; ಆ ಪ್ರೀತಿಯೇ ನನ್ನನ್ನು ಪುನಃ ಜೈಲಿನಲ್ಲಿ ಮಲಗಿಸಿತು; ಆ ಸುಖಸಂಭಾಷಣೆಯೇ ನನ್ನ ಸರ್ವ ಸುಖಕ್ಕೂ ನಾಶಕಾರಕವಾಯಿತು.

ಯಥಾರ್ಥ ಪ್ರಣಯವು ಮನುಷ್ಯನನ್ನು ದುಃಖಕ್ಕೆ ಹೇಗೆ ಗುರಿ ಮಾಡಬಹುದು ಎಂದು ಪಾಠಕ ಮಹಾಶಯರಲ್ಲಿ ಕೆಲವರು ಆಕ್ಷೇಪಿಸುವರು. ನಮ್ಮ ಪ್ರಣಯವು ಪ್ರಾಚೀನ ಮಾರ್ಗವನ್ನಾಗಲೀ, ನವೀನ ಮಾರ್ಗವನ್ನಾಗಲೀ ಅನುಸರಿಸಿಕೊಂಡು ಹೋಗಿರಲಿಲ್ಲ. ಅದು ಇವೆರಡರ ಮಧ್ಯಸ್ಥವಾಗಿ ಹರಿದು ಹೋಗುತ್ತಿತ್ತು. ನಾನು ಎಲ್ಲರ ಇದಿರಿನಲ್ಲಿ ಅವಳ ಹೆಸರನ್ನೆತ್ತಿ ಸಕಲಾವತಿ! ಸಕಲಾವತಿ! ಎಂದು ಕರೆಯುತ್ತಿರಲಿಲ್ಲ. ಆದರೆ ನಾವಿಬ್ಬರೂ ಏಕಾಂತದಲ್ಲಿದ್ದಾಗ, “ನನ್ನ ಜೀವನ ಸರ್ವಸ್ವವೇ….” ಎಂದು ಏನೋ ಏನೋ ಭ್ರಮೆಯಿಂದ ಹೇಳುತ್ತಿದ್ದೆನು. ಇದರಂತೆಯೇ ನಮ್ಮ ಕಾರ್ಯಕೆಲಸಗಳು ಅಷ್ಟೊಂದು ವಿಪರೀತಕ್ಕೆ ಹೋಗಿರಲಿಲ್ಲ. ನಾನು ‘ಚಾ’ ಕುಡಿಯುವಾಗ, ನನ್ನ ‘ಕಪ್’ನ್ನು ತುಟಿಯ ಬಳಿಗೆ ಅವಳು ಹಿಡಿಯಲೇಬೇಕೆಂಬ ನಿರ್ಬಂಧವಿರಲಿಲ್ಲ. ನಾನು ‘ಚುಟ್ಟಾ’ ಸೇದುವಾಗ, ಅವಳೇ ಅದಕ್ಕೆ ಬೆಂಕಿ ಹಚ್ಚಬೇಕೆಂಬ ಬಲಾತ್ಕಾರವಿರಲಿಲ್ಲ. ನಾನು ‘ಆಫೀಸಿಗೆ’ ಹೊರಡುವಾಗ, ಅವಳು ಇದಿರಾಗಿ ಬಂದು, ನನ್ನ ತಲೆಯನ್ನು ಹಿಡಿದುಕೊಂಡು ಬೊಟ್ಟನ್ನಿಡಬೇಕೆಂಬ ನನ್ನ ಕಾನೂನು ಇರಲಿಲ್ಲ. ಇವೆಲ್ಲವನ್ನು ಆಚರಣೆಗೆ ತರುವಷ್ಟು ಧೈರ್ಯ ನನಗೆ ಇರಲಿಲ್ಲ. ಆದರೂ ದಾಂಪತ್ಯಸುಖವು ಎಷ್ಟು ಮಧುರವಾಗಿರಬಹುದೋ ಅಷ್ಟು ಸುಖವು ನಮ್ಮಿಬ್ಬರ ಸಂಸಾರದಲ್ಲಿತ್ತು. ಅಷ್ಟೇಕೆ? ನನಗೆ ಬೇರೆ ಕೆಲಸವಿಲ್ಲದಿದ್ದರೆ ಹೆಂಡತಿಯೊಡನೆ ಸರಸ ಸಂಭಾಷಣೆಯನ್ನಾಡುತ್ತ ಕಾಲಕಳೆಯುವುದೇ ಪುಣ್ಯಸಾಧನೆಯೆಂದು ಭಾವಿಸುತ್ತಿದ್ದೆನು.

ಎರಡು ತಿಂಗಳುಗಳಿಂದೀಚೆಗೆ ಕಳ್ಳರ ಕಾಟವು ನಮ್ಮ ಕೇರಿಯಲ್ಲಿ ಕೇಳಿಸುತ್ತಿತ್ತು. ಕಳವು ಗೊತ್ತು ಹಚ್ಚದಿದ್ದರೂ ಒಬ್ಬಿಬ್ಬರು ಪೋಲೀಸಿನವರು ಜೈಲಿಗೆ ಹೋದರು. ನನ್ನ ಹೆಂಡತಿಯು ನನ್ನ ಚಿಕ್ಕತಾಯಿಯ ಒಡವೆಗಂಟಿನ ವಿಷಯವಾಗಿ ಬಹಳ ಎಚ್ಚರಿಕೆಯುಳ್ಳವಳಾಗಿದ್ದಳು. ಮನೆಯನ್ನು ಬಿಟ್ಟು ಎಲ್ಲಿಯೂ ಹೋಗುತ್ತಿದ್ದಿಲ್ಲ. ಮನೆಯ ಸುತ್ತಲೂ ಸದ್ದಾದರೆ, ತನ್ನ ಎಚ್ಚರಿಕೆಯನ್ನು ನನಗೆ ತೋರಿಸುವಂತೆ ಅತ್ತಿತ್ತ ನೋಡುತ್ತಿದ್ದಳು. ಅವಳಿಗೆ ನಿದ್ದೆ ಹತ್ತಿದಾಗ ಅವಳು ಎಷ್ಟು ಜಾಗರೂಕಳಾಗಿರುವಳೋ ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ಆದರೂ ಹೆಂಗಸರಲ್ಲಿ ತಾನೇ ಜಾಗರೂಕಳೆಂದೂ, ಗಂಡಸರಲ್ಲಿ ನಾನೇ ಕುಂಭಕರ್ಣನೆಂದೂ, ನನ್ನೊಡನೆ ಒಂದು ಪ್ರಕಾರವಾದ ಅಹಂಕಾರದಿಂದ ಮಾತನಾಡುವಳು.

ಕೆಲವು ಸಂಗತಿಗಳಲ್ಲಿ ಹೆಂಗಸರು ನುಡಿಯುವ ಮಾತು ನಮಗೆ ವಿರುದ್ಧವಾದರೂ, ಅದನ್ನು ನಾವು ನಗಾಡುತ್ತಲೇ ಒಪ್ಪಬೇಕಾಗುತ್ತದೆ; ಅಥವಾ ಅದರ ತಪ್ಪು ಗ್ರಹಿಕೆಯನ್ನು ನಮ್ಮ ಕೃತ್ಯಗಳಿಂದ ತೋರಿಸಬೇಕಲ್ಲದೆ ಬೇರೆ ಉಪಾಯವಿಲ್ಲ. ಅವರೊಡನೆ ಪ್ರತ್ಯುತ್ತರ ಕೊಡುವುದು ತರ್ಕವಿತರ್ಕಗಳಿಗೆ ಮಾರ್ಗವಾಗುವುದು; ಅವರನ್ನು ಸಮಾಧಾನಗೊಳಿಸುವುದು ಒರಟುತನವಾಗುವುದು. ಒಂದು ದಿನ ರಾತ್ರಿ ಊಟವಾದನಂತರ ನಾನು “ನಮ್ಮ ಒಡವೆಗಂಟನ್ನು ಕೋಣೆಯ ಪೆಟ್ಟಿಗೆಯಲ್ಲಿಡುವುದಕ್ಕೆ ಬದಲಾಗಿ, ನಾವು ಮಲಗುವ ಚಿಕ್ಕಮನೆಗೆ ತಂದಿಟ್ಟುಕೊಂಡರೆ ಒಳ್ಳೆಯದಲ್ಲವೇ? ಈ ಕಳ್ಳರು ಮನೆಯ ಹತ್ತಿರ ಹತ್ತಿರವಾಗಿ ಬರುತ್ತಾರೆ” ಎಂದು ಹೇಳಿದೆನು.

“ಇದ್ದ ಕಡೆಯಿಂದ ಅದನ್ನು ತೆಗೆಯುವುದು ಬೇಡ; ನನ್ನನ್ನು ಎಚ್ಚರಿಸದೆ ಕಳ್ಳರು ಹೇಗೆ ನುಗ್ಗಬಹುದು” ಎಂದು ಅವಳು ಉತ್ತರ ಕೊಟ್ಟಳು.

“ಕಳ್ಳರು ಎಷ್ಟು ಬುದ್ಧಿವಂತರೆಂದು ನೀನರಿಯೆ. ಅತ್ತೆಗೆ ತಿಳಿಯದೆ ಕಳ್ಳತನ ಮಾಡುವ ಸೊಸೆಯರಿಗಿಂತ ಜಾಣರು. ನಿನಗೆ ಸುಲಭ ನಿದ್ರೆಯಾದರೂ ಹೆಣ್ಣು ಹೆಂಗಸರನ್ನು ಮೋಸಗೊಳಿಸುವುದು ಒಂದು ವಿಷಯವಲ್ಲ.”

“ನನ್ನನ್ನು ಮೋಸಗೊಳಿಸುವರೇ? ನಿನ್ನೆ ನೆರೆಯ ಮನೆಯಲ್ಲಿ ಕಳ್ಳರು ನುಗ್ಗಿದ್ದಾಗ, ಅದನ್ನು ಮೊದಲು ತಿಳಿದು ಎಚ್ಚರಿಸಿದುದು ನಾನಲ್ಲವೇ? ನನ್ನ ಮನೆಯಲ್ಲಿ ಕನ್ನವಿಕ್ಕಿದರೆ, ನಾನು ಗಾಢನಿದ್ರೆಯಲ್ಲಿಯೂ ತಿಳಿಯದೆ ಇರುವೆನೇ?”

“ಅದಕ್ಕೆ ಕಾರಣವಿತ್ತು. ನಿನ್ನೆ ನಿನಗೆ ಹೊಟ್ಟೆನೋವು ಬಲವಾದುದರಿಂದ ನೀನು ನಿದ್ದೆ ಹೋಗದೆ ಎಚ್ಚರವಾಗಿದ್ದೆ. ಆದರೂ ನೀನು ಎಷ್ಟೋ ಸಲ ನಿದ್ದೆ ಹೋದುದು ನನ್ನ ಅನುಭವದಲ್ಲಿ ಇದೆ.”

“ನನ್ನ ಎಚ್ಚರವನ್ನು ಕುರಿತು ಮಾತೇ? ಮನೆಯಲ್ಲಿ ಒಂದು ಇಲಿಯು ಬಟ್ಟೆಯನ್ನು ಕಡಿಯುತ್ತಿದ್ದರೂ ನಾನು ಎಚ್ಚರವಾಗುವೆನು. ಅಷ್ಟೇಕೆ ಇರುವೆ ಹರಿದು ಹೋದರೆ ಆ ಶಬ್ದವು ನನಗೆ ಗುಡುಗಿನಂತೆ ಕೇಳಿಸುವುದು.”

“ಇರುವೆ ಮುಂದೆ ಹೋಗದವರಿಗೆ ಆನೆ ಹಿಂದುಗಡೆಯಿಂದ ಹೋಗಬಹುದು. ನಿನ್ನೊಡನೆ ಮುದ್ದು ತರ್ಕಗಳನ್ನು ಮಾತನಾಡಲಿಕ್ಕೆ ನನಗೆ ಸಮಯವಿಲ್ಲ. ಎಂಟು ಗಂಟೆಯಾಗಿ ಹೋಯಿತು; ನನ್ನ ಮಿತ್ರರೆಲ್ಲರೂ ನನ್ನನ್ನು ಒಂದು “ಪಾರ್ಟಿ” ಗೋಸ್ಕರ ಕಾದಿರುವರು. ನಾನು 9 ಗಂಟೆಯೊಳಗೆ ಹಿಂತಿರುಗಿ ಬರುವೆನು, ಮನೆಯ ಹತ್ತಿರ ಜೋಕೆಯಿಂದ ಇರು.”

ಈ ಮಾತಿಗೆ ಉತ್ತರವಾಗಿ ನನ್ನ ಹೆಂಡತಿಯು ಏನೋ ಕೋಪದಿಂದ ಮಾತನಾಡಿದಳು. ಅದು ನನ್ನ ಮಾತುಗಳ ಮೇಲೆ ಕೋಪವಾಗಿರಲಿಲ್ಲ. ಕೋಪವು ನನ್ನ ಗಮನದ ವಿಷಯವಾಗಿತ್ತು. ನನ್ನ “ಪಾರ್ಟಿಯ” ಉತ್ಸಾಹದ ಪ್ರವಾಹದಲ್ಲಿ ಅವಳ ಕೋಪದ ಮಾತುಗಳು ನನ್ನಮೇಲೆ ತೇಲಿಹೋದುವು.

ಆ ರಾತ್ರಿ ವಿಶೇಷ ತೆರದ “ಪಾರ್ಟಿ” ಇತ್ತು. ಸಂಗೀತದಲ್ಲಿಯೂ ಗಾಯನದಲ್ಲಿಯೂ ಸಮಯ ಹೋದುದು ತಿಳಿಯಲೇ ಇಲ್ಲ. ನಾನು ಮನೆಗೆ ಹಿಂತಿರುಗಿ ಬಂದಾಗ ಮಧ್ಯರಾತ್ರಿ ಕಳೆದಿತ್ತು. ಈ “ಪಾರ್ಟಿ”ಗಳ ದೆಸೆಯಿಂದ ನಾನು ಮಧ್ಯರಾತ್ರಿ ಮನೆಯನ್ನು ಸೇರುವುದು ಅಪರೂಪವಾದ ವಿಷಯವಾಗಿರಲಿಲ್ಲ. ಆದರೆ ನನ್ನ ಹೆಂಡತಿಯು ನನ್ನ ಜಾಗ್ರತೆಯನ್ನು ತೆಗೆದುಕೊಳ್ಳುವುದಕ್ಕೋಸ್ಕರ ನನಗೆ ದುಃಖಕರವಾಗುವ ರೀತಿಯಲ್ಲಿ ಎಚ್ಚರವಿರುತ್ತಿರಲಿಲ್ಲ. ನಾನು ದಾರಿಯಲ್ಲಿ ಬರುತ್ತಿದ್ದಾಗ ನವಮಿಯ ಚಂದ್ರನು ನಗಾಡುತ್ತ ಅಸ್ತಮಿಸುತ್ತಲಿದ್ದನು. “ಮುನಿಸಿಪಾಲಿಟಿಯವರು” ಬೀದಿಯ ಬೆಳಕಿನ ವಿಷಯ ಅಥವಾ ಅದರ ವೆಚ್ಚದ ವಿಷಯದಲ್ಲಿ ಹೆಚ್ಚಾದ ಜಾಗರೂಕತೆ ತೆಗೆದುಕೊಳ್ಳುವುದರಿಂದ ಎಲ್ಲಾ ಕಡೆಯಲ್ಲಿಯೂ ಕತ್ತಲಾಗಿತ್ತು. ದೂರವಿರುವ ಮನೆಗಳು ಆ ಅಂಧಕಾರದಲ್ಲಿ ಭಯಂಕರವಾಗಿ ಎದ್ದು ನಿಂತಿದ್ದವು. ನಾನು ಯಾವುದನ್ನೂ ಲಕ್ಷಿಸದೆ ಬೇಗಬೇಗನೆ ಕಾಲುಹಾಕುತ್ತಿದ್ದೆನು. ಅಂಧಕಾರದಲ್ಲಿ ಮನಸ್ಸಿಗೆ ಸ್ವಾಭಾವಿಕವಾದ ಭೂತ ಪಿಶಾಚಿಗಳ ಭಯವೂ ಕಳ್ಳರ ಅಂಜಿಕೆಯೂ ನನ್ನ ಮನಸ್ಸಿಗೆ ಹೊಳೆದುವು. “ಕಳ್ಳನಿಗೆ ಒಳ್ಳೆಯರಾತ್ರಿ” ಎಂದು ಎಣಿಸುತ್ತ ನಾನು ಮುಂದರಿಸುತ್ತಿದ್ದೆನು. ಆಗ ಹಠಾತ್ತಾಗಿ ನಾನು ಹೆಂಡತಿಯೊಡನೆ ಕಳ್ಳರ ಕಾಟವನ್ನು ಕುರಿತು ಮಾತನಾಡಿದುದು ಮನಸ್ಸಿಗೆ ಒತ್ತೊತ್ತಿ ಬಂತು. ನನ್ನ ಹೆಂಡತಿಯನ್ನು ಮೋಸಗೊಳಿಸುವ ಸರಸ ಚೇಷ್ಟೆಯನ್ನು ನಾನು ಮಾಡಬೇಕೆಂದು ಯೋಚಿಸಿದೆನು. ಇದೇ ರೀತಿಯಲ್ಲಿ ಪತಂಗವು ದೀಪದ ಸುತ್ತಲೂ ಮಂಡಳಿಸುತ್ತ, ಅದರ ಜ್ವಾಲೆಯಲ್ಲಿ ಬಿದ್ದು ಹತವಾಗುವುದು.

ಮನೆಯನ್ನು ಸಮೀಪಿಸುತ್ತಲೇ ನಾನು ಮಾಡಿದ ಆಲೋಚನೆಗಳೆಲ್ಲವು ಸರಿಯಾದುವೆಂದು ತೋರಿದುವು. ನನ್ನ ಹೆಂಡತಿಯು ತನ್ನ ಸುಲಭನಿದ್ರೆಯನ್ನು ಬಡಾಯಿ ಹೇಳಿಕೊಳ್ಳುವುದನ್ನು ನಾನು ಕೇಳಿಕೇಳಿ, ಅವಳ ಎಚ್ಚರಿಕೆಯನ್ನು ಪರೀಕ್ಷಿಸಿ, ಅವಳನ್ನು ಅಪಹಾಸ್ಯಕ್ಕೆ ಗುರಿಮಾಡುವುದು ಯೋಗ್ಯವೆಂದು ತಿಳಿದುಕೊಂಡೆನು. ಮನೆಯ ಬಾಗಿಲಿಗೆ ಅಗುಣಿ ಹಾಕಿದರೂ, ಕಿಟಕಿಯ ಕಡೆಯಿಂದ ಒಳನುಗ್ಗಬಹುದೆಂದು ನನಗೆ ಚೆನ್ನಾಗಿ ಗೊತ್ತಿತ್ತು. ಚಿಕ್ಕ ಮನೆಗೆ ಬಂದು, ಅಲ್ಲಿಂದ ಬೀಗದ ಕೈಗಳನ್ನು ಕಳುವು ಮಾಡಿ, ಪೆಟ್ಟಿಗೆಯಲ್ಲಿರುವ ಒಡವೆ ಗಂಟನ್ನು ಮೆಲ್ಲಗೆ ಎತ್ತಿಕೊಂಡು ಅಡಗಿಸಿಟ್ಟು, ಬಳಿಕ ಹೆಂಡತಿಯನ್ನು ಎಚ್ಚರಿಸಿದರೆ, ಈ ಚೇಷ್ಟೆಯು ಬಹಳ ಸಂತೋಷಕರವಾಗುವುದೆಂದು ನಿಶ್ಚಯಿಸಿದೆನು. ಅವಳು ತನ್ನ ಬಾಯಿಯಿಂದಲೇ ತಾನು ನಿದ್ದೆಹೋಗಿ ಮೋಸ ಹೋದೆನೆಂದು ಹೇಳಿದ ಮೇಲೆ, ಇದ್ದ ಸಂಗತಿಯನ್ನು ಬಿಚ್ಚಿ ಹೇಳಿ, ಎಲ್ಲವನ್ನು ಸರಿಗೊಳಿಸಬೇಕು. ಇಷ್ಟೆಲ್ಲಾ ಮಾಡುವಾಗ ಅವಳ ನಿದ್ರಾಭಂಗವಾಗುವುದೆಂಬ ಸಂಶಯವಿಲ್ಲದಿದ್ದರೂ ಸಂಶಯದ ಛಾಯೆಯಿತ್ತು. ಪೂರ್ವಾಪರವನ್ನು ಯೋಚಿಸುತ್ತ ಬರುವಷ್ಟಕ್ಕೆ ಈ ಚೇಷ್ಟೆಯಲ್ಲಿ ಹೆಂಡತಿಗಿಂತ ಗಂಡನೇ ಗೆಲ್ಲುವುದು ಸಾಧ್ಯವೆಂದು ನನಗೆ ಕಂಡುಬಂತು.

ನಾನು ಮನೆಯನ್ನು ಸೇರಿದಾಗ, ಎಲ್ಲವೂ ಶಾಂತವಾಗಿತ್ತು. ಕಿಟಕಿಗಳಿಂದ ಒಳಗಿನ ದೀಪದ ಬೆಳಕು ತೋರುತ್ತಿರಲಿಲ್ಲ. ನನ್ನ ದುಶ್ಚೇಷ್ಟೆಗೆ ದೈವವೇ ಸಹಾಯಕವಾಗಿದೆ ಎಂದು ತಿಳಿದು, ನಡುಮನೆಯ ಕಿಟಕಿಯ ಬಳಿಯಲ್ಲಿ ಬಂದೆನು. ಕಿಟಿಕಿಯ ಬಾಗಿಲುಗಳು ತೆರೆದಿದ್ದುವು. ಕಿಟಕಿಯನ್ನು ಹತ್ತುವಾಗ ನನ್ನ ಮೈಯಲ್ಲೆಲ್ಲಾ ಒಂದು ಬಗೆಯ ಭೀತಿಯು ನಡುಗುತ್ತಿತ್ತು. ಬಾಲ್ಯದಲ್ಲಿ ಗೇರುಹಣ್ಣುಗಳಿಗೋಸ್ಕರ ಮರವನ್ನು ಹತ್ತಿದಾಗ, ದೂರದಿಂದ ಕೋಲು ಹಿಡಿದುಕೊಂಡು ಬರುವ ಮುದುಕನನ್ನು ನೋಡಿದಾಗ, ಯಾವ ಪ್ರಕಾರವಾಗಿ ಎದೆಯು ದಡದಡಿಸುತ್ತಲಿತ್ತೋ, ಅದಕ್ಕಿಂತಲೂ ನೂರುಪಾಲು ಈಗ ಅದು ಬಡಿಯುತ್ತಲಿತ್ತು – ಎಂದು ಹೇಳಿದರೆ ಒಂದು ದೊಡ್ಡ ಮಾತು ಆಗಲಾರದು. ನಡುಮನೆಗೆ ಧುಮುಕಿ ಬರುತ್ತಲೇ ಒಳಗಿನಿಂದ ಯಾರೋ ಕಾಳಪುರುಷನು ನನಗೆ ಇದಿರಾಗಿ ಸಮೀಪಿಸಿದುದನ್ನು ನೋಡಿ, ನನ್ನ ಮೈಯೆಲ್ಲಾ ತಣ್ಣಗಾಗಿ ನಾನು ಸ್ತಬ್ಧನಾದೆನು. ವ್ಯಕ್ತಿಯ ರೂಪು ಕತ್ತಲಲ್ಲಿ ಚೆನ್ನಾಗಿ ಕಾಣಿಸದಿದ್ದರೂ, ಕಣ್ಣುಗಳ ಗೊಂಬೆಗಳು ಗೂಗೆಯ ಕಣ್ಣುಗಳಂತೆ ಮಿನುಗುತ್ತಿದ್ದವು. ಅವನನ್ನು ನೋಡುತ್ತ ಬರುವಷ್ಟಕ್ಕೆ ನನ್ನ ಭೀತಿಯು ಹೆಚ್ಚು ಹೆಚ್ಚಾಗುತ್ತ ಬಂತು. ಅಷ್ಟರೊಳಗೆ ಆ ಕಾಳಪುರುಷನು ಏನು ಮಾಡಿದನೋ ನನಗೆ ತಿಳಿಯದು. ಫಕ್ಕನೆ ನನ್ನ ಎರಡು ಕೈಗಳನ್ನು ತನ್ನ ಕಠಿನಹಸ್ತದಲ್ಲಿ ಬಿಗಿದು ಹಿಡಿದುಕೊಂಡು, ಇನ್ನೊಂದು ಕೈಯಲ್ಲಿದ್ದ ಕತ್ತಿಯನ್ನು ನನ್ನ ಕೊರಳಿಗೆ ತೋರಿಸಿದನು.

ವ್ಯಕ್ತಿ : “ನೀನು ಬೇರೆ ಮನೆಯನ್ನು ನೋಡಬಾರದಾಗಿತ್ತೇ? ಇದು ನನ್ನ ಊಟ. ಇಲ್ಲಿ ತಿನ್ನಲಿಕ್ಕೆ ಬಂದೆಯಾ? ನಡೆ! ಬೇರೆ ಕಡೆಗೆ ನಡೆ! ಇಲ್ಲವಾದರೆ….”

ನನ್ನ ಹೆಂಡತಿಯು ನನ್ನ ಚಿಕ್ಕತಾಯಿಯ ಒಡವೆಗಂಟಿನ ವಿಷಯವಾಗಿ ಬಹಳ ಎಚ್ಚರಿಕೆಯುಳ್ಳವಳಾಗಿದ್ದಳು. ಮನೆಯನ್ನು ಬಿಟ್ಟು ಎಲ್ಲಿಯೂ ಹೋಗುತ್ತಿದ್ದಿಲ್ಲ. ಮನೆಯ ಸುತ್ತಲೂ ಸದ್ದಾದರೆ, ತನ್ನ ಎಚ್ಚರಿಕೆಯನ್ನು ನನಗೆ ತೋರಿಸುವಂತೆ ಅತ್ತಿತ್ತ ನೋಡುತ್ತಿದ್ದಳು. ಅವಳಿಗೆ ನಿದ್ದೆ ಹತ್ತಿದಾಗ ಅವಳು ಎಷ್ಟು ಜಾಗರೂಕಳಾಗಿರುವಳೋ ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು.

ಮಾತನ್ನು ಪೂರೈಸದೆ ಅದರ ಅರ್ಥವನ್ನು ಕತ್ತಿಯಿಂದ ಸೂಚಿಸಿದನು. ವ್ಯಕ್ತಿಯು ಕಳ್ಳನೆಂದು ತಿಳಿದುಕೊಳ್ಳಲಿಕ್ಕೆ ಇನ್ನು ನನಗೆ ಕಷ್ಟವಿರಲಿಲ್ಲ. ಆದರೆ ನಾನೂ ಇವನ ಸಹಪಂಕ್ತಿಯವನೇ ಎಂದು ಅವನು ತಿಳಿದುದನ್ನು ನಂಬಲಿಕ್ಕೆ ನನಗೆ ಸ್ವಲ್ಪ ಕಷ್ಟವಿತ್ತು. ಈ ಸಂದರ್ಭದಲ್ಲಿ ನನ್ನ ಯಥಾರ್ಥ ಸ್ಥಿತಿಯು ತಿಳಿದುಬಂದರೆ, ನನ್ನ ಹೆಂಡತಿಯ ಕುಂಕುಮ ಉಳಿಯುವುದು ಕಷ್ಟ. ಓಡಿಹೋಗಿ ‘ಪೋಲೀಸ್ ಸ್ಟೇಶನ್ನಿಗೆ’ ತಿಳಿಸುವಷ್ಟರಲ್ಲಿ ಕಳ್ಳನು ಇದ್ದುದನ್ನೆಲ್ಲಾ ದೋಚಿಕೊಂಡು ಹೋದರೆ, ಲೋಕದಲ್ಲಿ ನನಗೆ ಹೆಂಡತಿಯಲ್ಲದೆ ಮತ್ತೇನೂ ಉಳಿಯದು. ಉಪಾಯಾಂತರದಿಂದ ಕಳ್ಳನನ್ನು ಬಂಧಿಸಿಕೊಂಡು, ಆಮೇಲೆ ಸಕಲಾವತಿಯನ್ನು ಎಚ್ಚರಿಸಿದರೆ, ಒಂದೇ ಕಲ್ಲಿನಿಂದ ಎರಡು ಹಣ್ಣುಗಳನ್ನು ಉದುರಿಸಬಹುದು. ಹೀಗೆ ಮಾಡುವುದಕ್ಕೆ ನಾನು ಕಳ್ಳನ ಹಾಗೆಯೇ ನಟಿಸುವುದೂ, ಬಂದ ಸಂಗತಿಗಳನ್ನೆಲ್ಲಾ ನನಗೆ ಸಹಾಯಕವಾಗುವ ಹಾಗೆ ಪ್ರಯತ್ನಿಸುವುದೂ, ಅವಶ್ಯವೆಂದು ನನ್ನ ಮನಸ್ಸಿಗೆ ಹತ್ತಿತು. ಆಪತ್ಕಾಲದಲ್ಲಿ ನನ್ನ ಮನಸ್ಸು ಈ ಪ್ರಕಾರವಾದ ಆಲೋಚನೆಗಳನ್ನು ಯಾವಾಗಲೂ ಮಾಡಿಲ್ಲ. ಹೀಗೆಯೇ ಕಳ್ಳನು ಕನ್ನವನ್ನು ಕೊರೆಯುವಾಗ, ತನ್ನಷ್ಟು ಭಾಗ್ಯಶಾಲಿ ಯಾರೂ ಆಗಲಾರನು ಎಂದು ತಿಳಿಯುವನು.

“ಇಗೋ! ಚಿನ್ನದ ಪೆಟ್ಟಿಗೆಯನ್ನು ನಾನು ತೋರಿಸಿಕೊಟ್ಟರೆ, ನನಗೂ ನಿನಗೂ ಪಾಲಾಗಬಹುದೇ?” ಎಂದು ಕೇಳಿದೆನು.
ಕಳ್ಳನ ಮನಸ್ಸಿಗೆ ಏನು ಹೊಳೆಯಿತೋ ನನಗೆ ತಿಳಿಯದು. ಅವನು ಅಸ್ಫುಟಸ್ವರದಿಂದ “ಎಲಾ! ಗುಲ್ಲು ಮಾಡಬೇಡ! ಮೆಲ್ಲಗೆ, ಇಬ್ಬರಿಗೆ…. ಒಳ್ಳೆಯದು” ಎಂದು ಹೇಳಿದನು.

ನನ್ನ ಜೀವವು ಖಡ್ಗಧಾರೆಯ ಮೇಲೆ ಇತ್ತು. ನಾನು ಕಳ್ಳನೆಂದು ತೋರಿಸಿದುದರಲ್ಲಿ ತುಸುತಪ್ಪಿ ಬಿದ್ದು, ಅವನಿಗೆ ಶಂಕೆಹುಟ್ಟಿದರೆ, ನನ್ನನ್ನು ಪರಲೋಕಕ್ಕೆ ಕಳುಹಿಸಿದ ಪುಣ್ಯವು ಕಳ್ಳನಿಗೆ ಬರುವುದೆಂದು ನನಗೆ ಚೆನ್ನಾಗಿ ಗೊತ್ತಿತ್ತು. ಆದುದರಿಂದ ನಾನು ಆದಷ್ಟು ಪ್ರಯತ್ನದಿಂದ ಅತ್ತಿತ್ತ ಹುಡುಕಿದವನಂತೆ ತೋರಿಸಿದೆನು.

“ಎಷ್ಟು ಹುಡುಕಿದರೂ ಸಿಕ್ಕಲಾರದು. ಇವರು ಬಡವರು. ನಾವು ಬೇರೆ ಮನೆಗೆ ನಡೆಯುವ!” ಎಂದು ಅವನೊಡನೆ ಆಲೋಚನೆ ಮಾಡಿದೆನು.
ಕಳ್ಳನು ತನ್ನಮುಖದ ಬಳಿಯಲ್ಲಿ ಕೈ ಹಿಡಿದುಕೊಂಡು “ಛೀ! ಛೀ! ಈ ಮನೆಯಲ್ಲಿ ಹಣವಿದೆ ಎಂಬುದನ್ನು ನೀನರಿಯೆ. ಸತ್ತು ಹೋದ ಮುದುಕಿಯ ಹಣವು ಈ ಪಾಪಿಗಳ ಪಾಲಿಗೆ ಬಂದಿದೆ” ಎಂದು ಹೇಳಿದನು.

ಒಂದೆರಡು ನಿಮಿಷದವರೆಗೆ ಮಾತನಾಡಲಿಕ್ಕೆ ನನಗೆ ಬಾಯಿ ಬರಲಿಲ್ಲ. ಆದರೂ ಬಲಾತ್ಕಾರದಿಂದ, “ಹಣವನ್ನು ಎಲ್ಲಿ ಹೂಳಿಟ್ಟಿರುವರೋ ನಮಗೆ ತಿಳಿಯದು. ಮಾಳಿಗೆಯಲ್ಲಿ ಇರಬಹುದೇ” ಎಂದು ಹೇಳಿದೆನು.

ನಾನು ಮುಳ್ಳಿನ ಮರವನ್ನು ಏರಿದ್ದೆನು. ಆದರೂ ನನ್ನ ಮಾತು ಸಾರ್ಥಕವಾಯಿತು. ಗೃಹಸ್ಥನು ಒಪ್ಪಿಕೊಂಡು, ಮಾಳಿಗೆಯನ್ನು ಹತ್ತಲಿಕ್ಕೆ ಸಮ್ಮತಿಸಿದನು. ಮಾಳಿಗೆಯ ಹೊರಗೆ ತಾನು ಕಾದುಕೊಂಡಿದ್ದು, ನಾನು ಒಳಕ್ಕೆ ಹೋಗಿ ಹುಡುಕಬೇಕೆಂದು ಅಪ್ಪಣೆ ಮಾಡಿದನು. ನನಗೆ ಈ ಮಾತು ಯೋಗ್ಯವಾಗಿ ತೋರದಿದ್ದರೂ, ನಾನು ಒಳಗೆ ಪ್ರವೇಶಿಸಲೇಬೇಕಾಯಿತು. ಅಷ್ಟರಲ್ಲಿ ಕಳ್ಳನು ಪುನಃ ಬಂದು, “ಈ ಕಾರ್ಯವು ನಿನ್ನಿಂದ ಸಾಗದು. ನನ್ನ ಕೆಲಸವನ್ನು ನೀನು ಮಾಡು. ನಾನು ಒಂದು ನಿಮಿಷದಲ್ಲಿ ಹುಡುಕಿಬಿಡುತ್ತೇನೆ” ಎಂದು ಹೇಳಿದನು.

ಕಳ್ಳನು ನನಗಿಂತಲೂ ಜಾಣನಾಗಿದ್ದನು. ಒಳಕ್ಕೆ ಹೋಗಿ ಒಂದೆರಡು ನಿಮಿಷಗಳಲ್ಲಿಯೇ ಹೊರಗೆ ಬಂದು ನಾನು ಕಾದುಕೊಂಡಿರುವೆನೋ ಇಲ್ಲವೋ ಎಂದು ನಿಶ್ಚಯ ಮಾಡಿಕೊಂಡನು. ನಾನು ಬಾಗಿಲು ಬಿಡದೆ ಇದ್ದುದರಿಂದ, ನನ್ನಲ್ಲಿ ಪೂರ್ಣ ನಂಬುಗೆಯಿಟ್ಟು, ತನ್ನ ಕೆಲಸಕ್ಕೆ ಹೋದನು.

ನಾನು ಇನ್ನು ಅಲ್ಲಿ ತಡೆಯಲಿಲ್ಲ. ಪೋಲೀಸಿನವರನ್ನು ನಿದ್ದೆಯಿಂದ ಎಚ್ಚರಿಸುವುದಕ್ಕೆ ನನಗೆ ವಿಳಂಬವಾದರೂ, ಅವರನ್ನು ಕರೆತರುವುದಕ್ಕೆ ನನಗೆ ವಿಳಂಬವಾಗಲಿಲ್ಲ. ಕತ್ತಲು ಬಲವಾದುದರಿಂದಲೋ ಮಾಳಿಗೆಯ ಬಾಗಿಲನ್ನು ನಾನು ಎಳೆಯದೆ ಬಿಟ್ಟುದರಿಂದಲೋ, ಪೋಲೀಸಿನವರು ಒಳಕ್ಕೆ ಹೋಗಲು ಸಮ್ಮತಿಸಲಿಲ್ಲ. ಪೋಲೀಸಿನವರನ್ನು ಮಾಳಿಗೆಯ ಹೊಸ್ತಿಲಿನ ಬಳಿಯಲ್ಲಿರಿಸಿ, ನಾನು ಪುನಃ ಒಳಕ್ಕೆ ಹೋದೆನು. ಹೊರಗೆ ನಡೆದ ಸಂಗತಿ ಕಳ್ಳನಿಗೆ ಬೋಧೆಯಾಗಿತ್ತೋ ಇಲ್ಲವೋ ನನಗೆ ತಿಳಿಯದು. ಅವನು ಹಣದ ಗಂಟು ಸಿಕ್ಕಲಿಲ್ಲವೆಂದು ವ್ಯಸನಪಟ್ಟು, ಚಿಕ್ಕಮನೆಯನ್ನು ಹುಡುಕಲು ಕೆಳಗೆ ಇಳಿಯಲಿಕ್ಕೆ ಸಿದ್ಧನಾಗಿದ್ದನು. ನಾನು ಹಿಂದೆಯೇ ಬರುವೆನೆಂದು ಹೇಳಿ, ಅವನನ್ನು ಕೆಳಗೆ ಕಳುಹಿಸಿದೆನು. ಅವನು ಕೆಳಗೆ ಇಳಿಯುತ್ತಲೇ ಅಲ್ಲಿದ್ದವರು “ಏನು ಕಳ್ಳನು ಓಡಿಹೋದನೇ” ಎಂದು ಅವನೊಡನೆ ಕೇಳಿದರು.

“ಅವನು ಮೇಲಿರುವನು. ನೀವು ಬೇಗನೆ ಹೋಗಿ ಹಿಡಿದರೆ ಈಗ ತಾನೇ ಸಿಕ್ಕುವನು. ಇಲ್ಲವಾದರೆ ಮೇಲಿನಿಂದಲೇ ಹಾರಿ ಹೋಗುವನು” ಎಂದು ಹೇಳಿ ಕಳ್ಳನು ಕತ್ತಲಲ್ಲಿ ಅದೃಶ್ಯನಾದನು.

ಪೋಲೀಸಿನವರು “ಬಿಗಿಲ್” ಮಾಡಿದರು. ಕೂಡಲೇ ಮೂರು ನಾಲ್ಕು ಮಂದಿ ಬಂದು ಮೇಲಕ್ಕೆ ನುಗ್ಗಿ ನಿರಪರಾಧಿಯಾದ ನನ್ನನ್ನು ಬಂಧಿಸಿದರು.

“ಇದೇನು ಹುಚ್ಚುತನ! ನಾನು ಕಳ್ಳನಲ್ಲ! ನಾನು ಮನೆಯ ಯಜಮಾನ! ಕಳ್ಳನನ್ನು ಹಿಡಿಯದೆ ನನ್ನನ್ನು ಏತಕ್ಕೆ ಬಂಧಿಸಿದಿರಿ?” ಎಂದು ನಾನು ಆಶ್ಚರ್ಯದಿಂದಲೂ ಭಯದಿಂದಲೂ ಕೇಳಿದೆನು.

ಕೆಂಪು ಮುಂಡಾಸಿನವರು ಅವರ ಸ್ವಭಾವಕ್ಕನುಸಾರವಾಗಿ ನನ್ನ ಮಾತು ಪೂರೈಸಗೊಡಿಸದೆ, “ಹೆಚ್ಚು ಮಾತುಬೇಡ! ನಿನ್ನ ಸಂಗಡ ಇದ್ದವನನ್ನೂ ಬಂಧಿಸದೆ ಇರಲಾರೆವು; ಅವನು ಎಲ್ಲಿ ಹೋಗುವನು? ಅವನ, ಅಪ್ಪನ ಮನೆಗೆ?” ಎಂದು ಹೇಳಿ, ನನ್ನ ಕೈಗೆ ಕೋಳ ಹಾಕಿ, ಅಂಗಳಕ್ಕೆ ಬಲಾತ್ಕಾರದಿಂದ ತಂದರು.

ಸಮಯಕ್ಕೆ ಸರಿಯಾಗಿ ಸಕಲಾವತಿ ಎಚ್ಚತ್ತು, ಚಿಕ್ಕಮನೆಯ ಬಾಗಿಲು ತೆರೆದು ಮೆಲ್ಲಗೆ ಚಾವಡಿಗೆ ಬಂದಳು. ನಾನು ಉಪಾಯವಿಲ್ಲದವನಾಗಿ, ಹೆಂಡತಿಯನ್ನು ಕರೆದು “ಬಂದ ಕಳ್ಳನನ್ನು ಹಾಳುಮಕ್ಕಳು ಸಡಿಲುಬಿಟ್ಟು, ನನ್ನನ್ನು ಕಟ್ಟಿ ತೆಗೆದುಕೊಂಡು ಹೋಗುತ್ತಿದ್ದಾರೆ. ನೀನಾದರೂ ನನ್ನನ್ನು ಗುರುತಿಸಿ, ಬಿಡುಗಡೆ ಮಾಡು” ಎಂದು ಮೊರೆಯಿಟ್ಟೆನು.

“ಅಮ್ಮ ! ಒಬ್ಬ ಕಳ್ಳನು ನಮ್ಮನ್ನು ಮೋಸಪಡಿಸಿ ತಪ್ಪಿಸಿಕೊಂಡನು. ಈ ಕಳ್ಳರ ಜಾಣತನ ನೀನರಿಯೆ. ನೀನು ಇವನನ್ನು ಗುರುತಿಸಿದರೂ ಗುರುತಿಸದಿದ್ದರೂ, ನಾವು ಇವನನ್ನು ಕೊಂಡುಹೋಗದೆ ಬಿಡೆವು” ಎಂದು ಪೋಲೀಸಿನವನು ಹೇಳಿ, ನನ್ನನ್ನು – ನಿರಪರಾಧಿಯಾದ ಪ್ರಾಣಿಯನ್ನು – ಒಯ್ದುಕೊಂಡು ಹೋದರು. ಆಗ ನನ್ನ ಹೆಂಡತಿ ಬಿಕ್ಕಿ ಬಿಕ್ಕಿ ಅಳುತ್ತಿರುವುದು ನನಗೆ ಕೇಳಿಸುತ್ತಿತ್ತು.

ನನ್ನನ್ನು ಸ್ಟೇಶನ್ನಿಗೆ ತಂದ ಕೂಡಲೇ ಇದ್ದ ಸಂಗತಿಯನ್ನೆಲ್ಲಾ ನಾನು ಯಥಾರ್ಥವಾಗಿ ಹೇಳಿದೆನು. ನನ್ನ ಹೆಂಡತಿಯನ್ನು ನಾನು ಹೇಗೆ ಪ್ರೀತಿಸುತ್ತಿದ್ದೆನೆಂದೂ ನನ್ನ ಹೆಂಡತಿಯ ಮೇಲಿನ ಪ್ರೀತಿಗೋಸ್ಕರವಾಗಿ ನಾನು ಮಾಡಿದ ದುಶ್ಚೇಷ್ಟೆಯು ನನ್ನನ್ನು ಹೇಗೆ ಆಪತ್ತಿಗೆ ತಗುಲಿಸಿತೆಂದೂ, ನನ್ನ ಹೆಂಡತಿಯು ನನ್ನನ್ನು ಬಿಡುಗಡೆ ಮಾಡದೆ ಇರಲಾರಳೆಂದೂ ನಾನು ಪೋಲೀಸಿನವರಿಗೆ ತಿಳಿಸಿದೆನು. ಅವರು ನನ್ನ ಮಾತಿಗೆ ಕಿವಿಗೊಟ್ಟರೋ ಇಲ್ಲವೋ ನನಗೆ ತಿಳಿಯದು. ನನ್ನನ್ನು ಆಗತಾನೇ ಬಿಡುಗಡೆ ಮಾಡಲಿಕ್ಕೆ ಬಲವಾದ ಕಾರಣವಿರಲಿಲ್ಲ. ಏಕೆಂದರೆ ನನ್ನ ಕೈಯಲ್ಲಿ ಹಣವಿರಲಿಲ್ಲ. ಆದರೂ ನಾನು ಒಂದು ರಾತ್ರಿ ಜೈಲಿನಲ್ಲಿ ಮಲಗಬೇಕಾಯಿತು ಎಂದು ಹೇಳಲಿಕ್ಕೆ ನಾಚಿಕೆ ಇಲ್ಲ. ನನ್ನ ಹೆಂಡತಿ ಸಕಲಾವತಿ ಮರುದಿನ ಬೆಳಿಗ್ಗೆ ನನ್ನನ್ನು ಬಿಡುಗಡೆ ಮಾಡಿದಳೆಂದೂ, ಅಂದಿನಿಂದ ನನ್ನ ಹೆಂಡತಿಯೊಡನೆ ದುಶ್ಚೇಷ್ಟೆ ಮಾಡುವುದು ನಿಂತುಹೋಯಿತೆಂದೂ, ಹೇಳಲಿಕ್ಕೆ ನನಗೆ ನಾಚಿಕೆ ಇಲ್ಲ.

ಟಿಪ್ಪಣಿ : ಪಂಜೆ ಮಂಗೇಶರಾಯರು ‘ನನ್ನ ಚಿಕ್ಕತಾಯಿ’ ಕತೆಗೆ ಪೂರಕವಾಗಿ ಮತ್ತೆ ಮೂರು ಕತೆಗಳನ್ನು ಬರೆದರು. ಅವುಗಳೆಂದರೆ ‘ನನ್ನ ಹೆಂಡತಿ’, ‘ನನ್ನ ಚಿಕ್ಕತಂದೆ’ ಮತ್ತು ‘ನನ್ನ ಚಿಕ್ಕತಂದೆಯವರ ಉಯಿಲ್’ – ಇವುಗಳು. ಇವುಗಳು ಒಂದರ ಮುಂದುವರಿಕೆಯಂತೆ ಇನ್ನೊಂದಿವೆ. ಇವುಗಳನ್ನು ‘ಉಯಿಲು’ ಎಂಬ ಶೀರ್ಷಿಕೆಯಡಿ ಒಂದೇ ನೀಳ್ಗತೆಯ ನಾಲ್ಕು ಭಾಗಗಳಂತೆ ಓದಬಹುದು. ಇದು ಎರಡನೆಯ ಕತೆ. ಮುಂದಿನ ಕತೆಗಳ ಓದಿನ ನಂತರ ಒಟ್ಟಾಗಿ ಇದರ ಬಗ್ಗೆ ಚರ್ಚಿಸಬಹುದು.