ಉಪ್ಪಿಟ್ಟನ್ನು ಕಾಂಕ್ರೀಟೆನ್ನುತ್ತ ಮೋರೆ ಸಿಂಡರಿಸುವ ನಮ್ಮ ಸಸಾರ ಸಾಂಸಾರಿಕ ರಿವಾಜಿದೆಯಲ್ಲ, ಯೋಚಿಸಿದರೆ ಪಾಪ- ಎರಡರ ಮೇಲೂ ಕನಿಕರ ಹುಟ್ಟುತ್ತದೆ. ಉಪ್ಪಿಟ್ಟನ್ನು ಕಾಂಕ್ರೀಟಿನಂತೆ ತೋರದ ಹಾಗೆ ಮಾಡುವುದು ಒಂದು ಕಲೆಯೇ ಸರಿ. ಕಾಂಕ್ರೀಟನ್ನೂ ಉಪ್ಪಿಟ್ಟಿನಂತೆ ತರಬರಕಲಾಗಿ ಉದುರುದುರಿರದ ಹಾಗೆ ಮಾಡುವುದೂ ಕುಶಲ ‘ಕೈ’ಕೆಲಸವೂ ಹೌದು. ಈ ಉಪ್ಪಿಟ್ಟಿನ ಆವಿಷ್ಕಾರದ ಕಾಲ ನಮಗೆ ಗೊತ್ತಿಲ್ಲವೇನೋ. ಆದರೆ ಕಾಂಕ್ರೀಟು ತಂತ್ರಜ್ಞಾನದ ವಯಸ್ಸು ನಮಗೆ ಗೊತ್ತಿದೆ. ಅಂದರೆ ಉಪ್ಪಿಟ್ಟನ್ನು ಕಾಂಕ್ರೀಟಿನೊಟ್ಟಿಗೆ ತಾಳೆ ಹಾಕುವ ಈ ನುಡಿಗಟ್ಟಿಗೆ ಸುಮಾರು ಐವತ್ತು, ಅರವತ್ತು ವಯಸ್ಸಿದ್ದೀತು… ಹಾಗೆ ನೋಡಿದರೆ ಮಾಡುವ ರೀತಿಯಲ್ಲೂ ಇವೆರಡರಲ್ಲಿ ಕೊಂಚ ಸಾಮ್ಯವಿದೆ. ಮಾಡುವಾಗ ಇವುಗಳ ಆಯಾ ಪರಿಕರಗಳನ್ನು ನೀರಿನೊಟ್ಟಿಗೆ ‘ಹದ’ವಾಗಿ ಬೆರೆಸಿ ಚನ್ನಾಗಿ ‘ಗೊಟಾಯಿಸಿದರೆ’ ಆಯಿತು! ಅಂದರೆ ಹದವಾದ ಉಪ್ಪಿಟ್ಟಿಗೆ ಹದವಾದ ಬೆರಕೆ ಮತ್ತು ಹದವಾದ ಗೊಟಾವಣೆ ಆಗಬೇಕು. ಈ ಕಾಂಕ್ರೀಟಿನ ಸಮಾಚಾರವೂ ಅಷ್ಟೆ. ನೀವು ಕಾಂಕ್ರೀಟನ್ನು ಗೊಟಾಯಿಸುವ ಮೆಷಿನ್ನು ನೋಡಿರಬಹುದು. ಹಾಗೇ ಬೆಂಗಳೂರಿನಲ್ಲಿ ‘ರೆಡಿ ಮಿಕ್ಸ್ ಕಾಂಕ್ರೀಟ್’ ಅಂದರೆ ಪೂರ್ವಮಿಶ್ರಿತ ಕಾಂಕ್ರೀಟನ್ನು ತನ್ನ ಅಂಡಿಗಂಟಿದ ಅಂಡದಲ್ಲಿಟ್ಟುಕೊಂಡು, ಗೊಟಾಯಿಸುತ್ತ ಅಂಡಲೆಯುವ ಕಾಂಕ್ರೀಟು ಲಾರಿಗಳನ್ನೂ ನೋಡಿರಬಹುದು… ಹೀಗೆ ಹದವಾಗಿ ಬೆರಕೆಗೊಂಡು ಕಡೆದ ಕಾಂಕ್ರೀಟು ನೊರೆಯ ಹಾಗೆ ಬುರುಗುತ್ತದೆ. ಇಂತಹ ಹಸೀ ಕಾಂಕ್ರೀಟನ್ನೆರೆದು ತೆಗೆದ ಗಟ್ಟಿಯ ಮೇಲ್ಮೈ ನೋಡಲಿಕ್ಕೇ ಮುದ ತರುತ್ತದೆ. ಹದದ ಪಾಕವನ್ನೆರೆದು ತೆಗೆಯುವ ಸಕ್ಕರೆಯಚ್ಚಿನ ಹಾಗೆ ಕಾಂಕ್ರೀಟಿನ ಎರಕ ತೆಗೆಯಬಹುದು. ಹೀಗೆ ಅಂದುಕೊಂಡಿದ್ದನ್ನೆಲ್ಲ ‘ಮಾಡಿ’ಯೂ ಇಡಬಹುದು.

ಆದರೂ ಬರೇ ಕಾಂಕ್ರೀಟಿಗೆ ಕೆಲವು ಇತಿಮಿತಿಗಳಿವೆ. ಅದನ್ನು ಹಪ್ಪಳದ ಹಾಗೆ ಹರವಬಹುದಾದರೂ ಆ ಹರವಿನ ಉದ್ದ ಮತ್ತು ಅಗಲಗಳಿಗೊಂದು ಮಿತಿಯಿದೆ. ಚಪಾತಿಯ ಹಿಟ್ಟನ್ನು ಲಟ್ಟಿಸುವ ಹಾಗೆ ಅಕ್ಕಿಯ ರೊಟ್ಟಿಯನ್ನು ಮಾಡಲಾದೀತೆ? -ಯೋಚಿಸಿ. ರೊಟ್ಟಿಯಾಗುವ ಹಿಟ್ಟು ತಟ್ಟಿಸಿಕೊಳ್ಳುತ್ತದೆ. ಬಕರಿ ಬಡಿಸಿಕೊಳ್ಳುತ್ತದೆ. ಉಕ್ಕರಿಸಿದ ಅಕ್ಕಿಯ ಹಿಟ್ಟಿನ ಗುಣವೇ ಬೇರೆಯಿದೆ. ಹೀಗೆ ಒಂದೊಂದು ಹಿಟ್ಟಿಗೂ ತನ್ನದೇ ವಸ್ತುಗುಣವಿದೆಯಲ್ಲವೆ? ಹಾಗೆಯೇ ಕಾಂಕ್ರೀಟೂ ಕೂಡ. ಆದರೆ ಕಾಂಕ್ರೀಟಿನ ಹರವನ್ನು ಹಿಗ್ಗಿಸಬೇಕೆಂದರೆ, ಅದರ ಗಟ್ಟಿಯೊಳಗೆ ಟೊಳ್ಳು ಹುದುಗಿ ವಜೆಯನ್ನು ತಗ್ಗಿಸಬೇಕೆಂದರೆ, ಅದನ್ನು ಕಮಾನಾಗಿ ಬಗ್ಗಿಸಬೇಕೆಂದರೆ, ಬೋಗುಣಿಯ ಹಾಗೆ ಕವಿಯಬೇಕೆಂದರೆ… ಇಂತಹ ಸಾಧ್ಯತೆಗಳನ್ನು ಆಗಿಸಲಿಕ್ಕೆ ಅದರ ದಪ್ಪದೊಳಕ್ಕೆ ಉಕ್ಕಿನ ಕಂಬಿಗಳ ತಡಿಕೆಯನ್ನು ಹೂಡಿದರೆ ಆಯಿತು. ಹೀಗೆ ಮಾಡಿ ಕಾಂಕ್ರೀಟಿನ ಸ್ವೈರವನ್ನು ಅಡೆಯಿರದೆ ಹಿಗ್ಗಿಸಬಹುದೇನೋ… ಗಣೇಶನ ಹೊಟ್ಟೆಯನ್ನು ಮಾಡುವಾಗ ಬಿದಿರಿನ ಹೆಣಿಗೆಯ ಮೇಲಕ್ಕೆ ಮಣ್ಣು ಮೆತ್ತಿ ಟೊಳ್ಳು ಹೂಡುವುದಿಲ್ಲವೆ- ಹಾಗೆ… ಬರೇ ಕಾಂಕ್ರೀಟು ತಂತಾನೇ ಇವೆಲ್ಲ ಆಗಲು ಶಕ್ಯವಲ್ಲ. ಅದರ ಶಕ್ತಿಯೇನಿದ್ದರೂ ಒಳಗಿರುವ ಉಕ್ಕೆಂಬ ‘ಆತ್ಮ’ದಿಂದ ಅಷ್ಟೆ. ಯಾವುದೇ ಕಟ್ಟಡದ ಒಟ್ಟು ವಸ್ತುರಾಶಿಯನ್ನು ತಗ್ಗಿಸಬೇಕೆಂದರೆ ಅದರ ದ್ರವ್ಯದಲ್ಲಿ ಉಕ್ಕನ್ನು ಹೂಡಿದರೆ ಆಯಿತು! ಹಾಗೆ ನೋಡಿದರೆ ರೆನಸ್ಸಾನ್ಸ್ ಬಳಿಕದ ಕಟ್ಟಡ ಪರಂಪರೆಯ ವಿಕಾಸವನ್ನು ಗುರುತಿಸುವುದೇ ಆ ಮುಂದಿನ ಪ್ರತಿ ಪೀಳಿಗೆಯೂ ಅಳವಡಿಸಿಕೊಂಡ ಈ ಕಬ್ಬಿಣಾಂಶದಿಂದಲೇ. ಯೂರೋಪಿನಲ್ಲಿ ಗುಂಬಜಿನ ಭಾರಕ್ಕೆ ಅದನ್ನು ಹೊರುವ ಕೆಳಗಿನ ಇಟ್ಟಿಗೆಯ ಸಿಂಬೆ ಸೀಳಿಕೊಳ್ಳದ ಹಾಗೆ ಗೋಡೆಯ ವರ್ತುಲದ ಸುತ್ತ ಕಬ್ಬಿಣದ ಪಟ್ಟಿಯನ್ನು ಕಟ್ಟಲಾಗುತ್ತಿತ್ತಂತೆ. ಅಲ್ಲಿನ ಕೆಲವು ಗುಂಭಗಳಿಗೆ ನಮ್ಮ ಬಿಜಾಪುರದ ಗುಮ್ಮಟಕ್ಕಿಂತ ಒಂದೂವರೆ ಪಟ್ಟು ಗಾತ್ರವಿದೆ!

ಶುದ್ಧ ಕಬ್ಬಿಣಕ್ಕೆ ತೇವ ತಗುಲಿದರೆ ತುಕ್ಕು ಹಿಡಿಯುತ್ತದೆ. ಎಲ್ಲಕ್ಕಿಂತ ಅದು ಶುದ್ಧವಿದ್ದಷ್ಟೂ ಹೆಚ್ಚು ಭಿದುರ ಅಂದರೆ brittle ಆಗಿರುತ್ತದೆ. ಹಾಗಾಗಿಯೇ ಕಬ್ಬಿಣದೊಟ್ಟಿಗೆ ಹಾಳುಮೂಳು ಬೆರೆಸಿ ಉಕ್ಕನ್ನು ಕಂಡುಹಿಡಿಯಲಾಯಿತು. ಈ ಕಲಬೆರಕೆ ಉಕ್ಕಿಗೆ ಅದಮ್ಯ ಶಕ್ತಿಯಿದ್ದರೂ ಅದಕ್ಕೂ ತುಕ್ಕು ಹಿಡಿದು ಶಿಥಿಲಗೊಳ್ಳುತ್ತದೆ. ಹೀಗಿರುವುದನ್ನು ಕಾಂಕ್ರೀಟಿನೊಳಕ್ಕೆ ಹುದುಗಿಸಿಟ್ಟುಬಿಟ್ಟರೆ…? ಹೀಗೆ ಸುರುಗೊಂಡಿದ್ದು ನೋಡಿ ಹೊಸ ಕಾಲದ ಚಮತ್ಕಾರ. ಎರಡೂ ಒಂದರಲ್ಲೊಂದು ಬೆರೆತು ಪರಸ್ಪರ ದೌರ್ಬಲ್ಯಗಳನ್ನು ನಿವಾರಿಸಿಕೊಂಡುಬಿಡುತ್ತವೆ! ಕಾಂಕ್ರೀಟು ಉಕ್ಕನ್ನು ಪಸೆಯ ಉಸಿರಿನೊಟ್ಟಿಗೆ ಬೆರೆಯದಂತೆ ನಿಗಾ ವಹಿಸುತ್ತದೆ. ಉಕ್ಕು ಕಾಂಕ್ರೀಟಿಗೆ ಗಟ್ಟಿತನವನ್ನು ಅರೋಪಿಸುತ್ತದೆ. ಒಟ್ಟಾರೆ ಈಗ ಎರಡೂ ಗಟ್ಟಿ ಮತ್ತು ಸಬಲ! ಹೀಗೆ ಬೆರೆತು ‘ನಿಂತ’ ಸರಕನ್ನೇ ನಾವು RCC ಅಂದರೆ ‘ರೀಇನ್‍ಫೋರ್ಸ್‍ಡ್ ಸಿಮೆಂಟ್ ಕಾಂಕ್ರೀಟ್’ ಎನ್ನುವುದು. ತನ್ನೊಳಕ್ಕೆ ಉಕ್ಕಿನಿಂದ ಮಾಡಿದ ಎಲುವಿನ ಹಂದರವನ್ನು ಕಟ್ಟಿಟ್ಟುಕೊಂಡ ಕಾಂಕ್ರೀಟು ಕಂಭವಾಗುತ್ತದೆ, ತೊಲೆಯಾಗುತ್ತದೆ. ಪಾಯವಾಗುತ್ತದೆ. ಹಾಸಿಕೊಂಡು ಸೂರಾಗುತ್ತದೆ. ಮೇಲಿನ ಮಹಡಿಗೆ ನೆಲವಾಗುತ್ತದೆ. ಹೆಂಚು ಹೊದೆಯಲು ಇಳಿಜಾರಾಗುತ್ತದೆ. ಕಮಾನಿನ ಛಾವಣಿಯೂ ಆಗುತ್ತದೆ. ಛೂ ಮಂತ್ರಂ ಕಾಳೀ! -ಅಂದರೆ ಹೇಳಿದ್ದೆಲ್ಲ ಆಗಿಯೇ ಬಿಡುತ್ತದೆ! ಇದು ಚಮತ್ಕಾರವಲ್ಲದೆ ಮತ್ತಿನ್ನೇನು?

ಒಟ್ಟಿನಲ್ಲಿ ಈ ಕಾಲದ ಮನೆಯೆಂಬ ಕನಸನ್ನು ಸಾಕಾರಗೊಳಿಸುತ್ತಿರುವುದು ಈ ಕಾಂಕ್ರೀಟು ಮತ್ತು ಉಕ್ಕುಗಳ ಜಂಟಿವರಸೆಯೇ ಹೌದು. ಉಕ್ಕನ್ನು ಹೇಗೆ, ಎಷ್ಟು ಮತ್ತು ಎಲ್ಲಿ ಹೂಡಿಡಬೇಕೆಂದು ಸಿವಿಲ್ ಇಂಜಿನಿಯರಿಕೆ ಹೇಳಿಕೊಡುತ್ತದೆ. ಅಂದರೆ ನಾವು ಆರ್ಕಿಟೆಕ್ಟುಗಳು ನಿಮ್ಮ ಮನೆಯ ಕನಸನ್ನು ಕಾಣುತ್ತೇವೆ. ಇಂಜಿನಿಯರುಗಳು ಅದನ್ನು ನನಸಾಗಿ ನಿಲ್ಲಿಸುತ್ತಾರೆ. ಹಾಗಾಗಿ ಮನೆಯೆಂಬ ಸ್ವಪ್ನಸದೃಶ ಸಾಕೃತಿ ಉಕ್ಕು-ಕಾಂಕ್ರೀಟುಗಳ ಒಟ್ಟುವರಸೆಯೆನ್ನುವಷ್ಟೇ ಆರ್ಕಿಟೆಕ್ಟ್ ಮತ್ತು ಇಂಜಿನಿಯರುಗಳ ಜುಗಲ್‍ಬಂದಿಯೂ ಹೌದು.

ಈಗ ಉಪ್ಪಿಟ್ಟಿನ ಅಡುಗೆಯನ್ನು ನೆನಪಿಸಿಕೊಳ್ಳಿ. ಹಾಗೇ ಕಾಂಕ್ರೀಟಿನದನ್ನೂ… ನಿಗದಿತ ಪರಿಮಾಣದಲ್ಲಿ ಸಿಮೆಂಟು, ಜಲ್ಲಿ ಮತ್ತು ಮರಳನ್ನು ಹದವಾಗಿ ನೀರಿನೊಟ್ಟಿಗೆ ಬೆರೆಸಿ. (ಈ ಪ್ರಮಾಣದ ಫಾರ್ಮ್ಯುಲಾವನ್ನು ಇಂಜಿನಿಯರು ದುಡ್ಡು ಕೊಟ್ಟರೆ ಮಾರುತ್ತಾರೆ.) ಈಗ ಈ ಬೆರಕೆಯನ್ನು ಬುರುಗುವಷ್ಟು ಗೊಟಾಯಿಸಿ. ಈ ಮೊದಲೇ ಮಾಡಿಕೊಂಡಿರುವ ತಗಡಿನ ಹಾಸುಗಳ ಮೇಲೆ ಒಂದಷ್ಟು ಗ್ರೀಸೋ ಇಲ್ಲ ಡೀಸಲ್ಲೋ ಸವರಿ- ದೋಸೆ ಹೊಯ್ಯುವ ಮೊದಲು ಜುಂಗಿನಿಂದ ಕಾದ ಹೆಂಚಿಗೆ ಎಣ್ಣೆ ಸವರುವ ಹಾಗೆ. ಕೆಳಗೆ ಅಡವಿಯೋಪಾದಿ ಆಯವಿಟ್ಟು ಎತ್ತಿ ನಿಲ್ಲಿಸಿರುವ ತಗಡು ಹರವಿನ ಮೇಲಕ್ಕೆ ಕಂಬಿಗಳನ್ನು ಅಡ್ಡಡ್ಡ ಮತ್ತು ಉದ್ದುದ್ದ ಹಾಸುಹೊಕ್ಕು ಕಟ್ಟಿಟ್ಟುಕೊಂಡಿರಿ. ಈಗ ಚೆನ್ನಾಗಿ ಗೊಟಾಯಿಸಿದ ಕಾಂಕ್ರೀಟನ್ನು ಕಂಬಿಗಳ ಮೇಲೆ ಮತ್ತು ನಡುವೆ ಟೊಳ್ಳುಗಳಿರದ ಹಾಗೆ ಸುರಿದು ಹರಡಿ. ಕಂಬಿಗಳ ನಡುವೆ ಸಂದು ಸಂದುಗಳಿಗೂ ಅದು ಹರಿದು ತುಂಬಿಕೊಳ್ಳುವ ಹಾಗೆ ಕುಲುಕಿ. ಇದಾದ ಮರುಮುಂಜಾವಿನಿಂದ ಇಪ್ಪತ್ತೊಂದು ದಿವಸ ಅದು ಒಣಗದ ಹಾಗೆ ನೀರೂಡಿ. ಸಲಹಿ ಸಂತೈಸಿ. ನಾಲ್ಕನೇ ವಾರಕ್ಕೆ ಕೆಳಗಿನ ಆಧಾರವನ್ನೂ, ತಗಡುಗಳನ್ನೂ ಕ್ರಮೇಣ ಬಿಚ್ಚಿಬಿಡಿ. ಈಗ ತಲೆಯ ಮೇಲೆಂದು ಬೀಗಲಿಕ್ಕೆ, ಕೆಳಗೆ ನಿರುಮ್ಮಳ ಅರಾಮಕ್ಕೆ ನಿಮಗೊಂದು ಸೂರು ರೆಡಿ!

ಒಳ್ಳೆಯ ಕಾಂಕ್ರೀಟನ್ನು ಮಾಡಿ ನೋಡಿದ್ದಲ್ಲಿ ನೀವು ಅದನ್ನು ಉಪ್ಪಿಟ್ಟಿಗೆ ಈ ಮುಂದೆ ಹೋಲಿಸಲಿಕ್ಕಿಲ್ಲ. ಅಷ್ಟೇ ವೈಸ್ ವರ್‍ಸಾ ಉಪ್ಪಿಟ್ಟನ್ನು ಕಾಂಕ್ರೀಟಿಗೂ.