ತಿರುಪತಿಯದೇ ನಕಲೆನ್ನುವ ಹಾಗೆ ‘ವರಪ್ರದ’ನೆಂದು ಕರೆಸಿಕೊಳ್ಳುವ ದೇವರು ಈ ಊರಿನಲ್ಲಿ ನಾನಿರುವ ಆಸುಪಾಸಿನಲ್ಲಿದೆ. ಎಂಟಡಿ ಎತ್ತರಕ್ಕೆ ಕಪ್ಪು ಶಿಲೆಯಲ್ಲಿ ಕಟೆದ ಮುದ್ದಾದ ಪುತ್ಥಳಿ ಅದು. ಗಾರೆ ಹಚ್ಚಿದ ಗೋಡೆಗಳು, ಮೇಲಿನ ಕಾಂಕ್ರೀಟು ಸೂರು ಸುತ್ತಲೂ ಚಾಚಿಕೊಳ್ಳುವ ಛತ್ರಿಗಳು, ಕಂಬಗಳಲ್ಲಿ ಪ್ಲಾಸ್ಟರು ಕೊರೆದ ಕುಸುರಿಗಳು, ಜತೆಗೊಂದಿಷ್ಟು ಬಣ್ಣ ಹಚ್ಚಿದ ಗೊಂಬೆಗಣ… -ಇವಷ್ಟೇ ಅಲ್ಲದೆ ಉಕ್ಕು ಜಂತಿಗಳ ಮೇಲೆ ಅಗ್ಗದ ಫೈಬರು ಗಾಜು ಹೊಚ್ಚಿಕೊಂಡು ಥರಾವರಿ ಕಲರು ಕಲಸುಗಳ ವಿಚಿತ್ರ ಚಿತ್ರಣವೇ ಆದ ಆಧುನಿಕ ಗುಡಿಯೊಂದು ಈ ಮೂರ್ತಿಯನ್ನೊಳಗೊಂಡಿದೆ. ಹೀಗೆ ಬೆಟ್ಟವೂ ಅಲ್ಲದ, ಹಾಗೆ ದಿಬ್ಬವೂ ಅಲ್ಲದ ಒಂದು ಪ್ರಶಸ್ತ ಎತ್ತರದಲ್ಲಿ ನೆಟ್ಟುಕೊಂಡಿರುವ ಈ ದೇವರು ಮುಳುಗುವ ಸೂರ್ಯನನ್ನು ಎದುರುಗೊಂಡು ನಿಂತಿದೆ. ಅದರೆದುರಿಗೇ ನೇರವೆಂಬಂತೆ, ತಪ್ಪಲಿನಿಂದ ಎದ್ದುಕೊಳ್ಳುವ ಗೋಪುರವೊಂದು ಸುಮಾರು ನೂರಡಿಗೂ ಮಿಗಿಲು ನಿಂತು ಎತ್ತರವೇ ತಾನೆನ್ನುವಂತಿದೆ. ಆದರೆ ಈ ಗೋಪುರವೂ, ಅದರಲ್ಲಿನ ಗೊಂಬೆಗಳೂ ಇನಾಮೆಲಿನ ಮೇಕಪ್ಪು ತಳೆದಿಲ್ಲವೆಂಬುದೇ ಈ ಬಡಾವಣೆಯಲ್ಲಿರುವ ನನ್ನಂಥವರ ಪುಣ್ಯ!

ಈ ದೇವಾಲಯದ ಉತ್ತರಕ್ಕೆ ಏರಿಕೊಂಡು ಸಾಗುವ ರಸ್ತೆಯಲ್ಲಿ ಕೊನೆಗೆ ನಾನಿರುವ ಮನೆಯಿದೆ. ‘ವಸ್ತಾರೆ’ಯೆಂತಲೇ ನನ್ನಪ್ಪ ಇಟ್ಟ ಹೆಸರು ಅದಕ್ಕೆ… ನೀವೇನೇ ಅನ್ನಿ, ಈ ಮಹಾನಗರದಲ್ಲಿ ಗುಡಿಯ ಬದಿಗೆ ಮನೆ ಮಾಡಬಾರದು. ಇದ್ದರೆ ದೇವಸ್ಥಾನದ ವಹಿವಾಟುಗಳೆಲ್ಲ ಒಳಹದಿಯವರೆಗೆ ಒದಗಿ, ಒಲ್ಲೆ ಒಲ್ಲೆ ಅಂತಲೇ ಈ ಸಲ್ಲದ ‘ಗುಡಿ’ಗಾರಿಕೆಯ ಜತೆ ಮನೆ ಸ್ವಯಂ ಬೆಸೆದುಕೊಂಡುಬಿಡುತ್ತದೆ. ಹಾಗೆ ನೋಡಿದರೆ ಈ ನಮ್ಮ ಮನೆ ‘ಸಾಕ್ಷಾತ್’ ವೈಕುಂಠದ ಹಿತ್ತಲೇ ಆಗಿದೆ. ನಿತ್ಯವೂ ಗುಡಿಯ ತ್ಯಾಜ್ಯವೆಲ್ಲ ಗುಡ್ಡೆಗೊಳ್ಳುವುದು ಅದರೆದುರಿಗೇ. ಊರು ಪಾಲಿಸುವ ಮಂದಿ ಒಂದು ದಿನ ಸುಸ್ತೆಂದು ಕೈಯಾಡಿಸಿತೆಂದರೆ ಈ ‘ವಸ್ತಾರೆ’ಯೆನ್ನುವುದು ಮನೆಯೋ, ತಿಪ್ಪೆಯೋ ಅಂತ ಎಣಿಸುವುದು ಖಾತ್ರಿ!! ಶ್ರಾವಣದ ಶನಿವಾರಗಳು, ಧನುರ್ಮಾಸದ ನಸುಕುಗಳು, ಸಾರ್ವತ್ರಿಕ ಪೂಜಾದಿವಸಗಳು ನಮ್ಮ ಮಟ್ಟಿಗೆ ಶಿಕ್ಷೆಯೇ ಸರಿ. ಇನ್ನು ಸಂಕಷ್ಟಿಯೆಂದರೆ ಖುದ್ದು ನಮಗೇ ಸಂಕಷ್ಟ! ಜನವೋ, ವಾಹನವೋ ಒಟ್ಟಾರೆ ಸದಾ ಜಂಗುಳಿಯೇ ನಮ್ಮ ಸುತ್ತಲಿನ ಸದ್ಯ ಮತ್ತು ಇರವುಗಳ ಸತ್ಯ.

ಆದರೆ ವಿಷಯ ಇದಲ್ಲ. ನಿನ್ನೆ ಅದೇನೋ ವೈಕುಂಠ ಏಕಾದಶಿಯಂತಲ್ಲ- ಎಲ್ಲ ‘ವಿಷ್ಣು’ಸಂಸಾರಗಳಲ್ಲಿ ಗಮ್ಮತ್ತಿನ ದಿವಸ, ಮನೆಯೆದುರಿನ ದೇವಸ್ಥಾನದಲ್ಲೂ ಭಾರೀ ದಂಧೆ. ಬೆಳಗಿನ ನಾಲ್ಕೂವರೆಗೆ ಸುರುಗೊಂಡ ಧಂಡಿ ಮಂದಿಯ ದಂಡು ದಾಳಿ ಕೊನೆಗೊಂಡಿದ್ದು ರಾತ್ರಿ ಒಂದೂವರೆಯ ಸುಮಾರಿಗೆ. ಗಂಟೆಗಟ್ಟಲೆ ಸರತಿ ನಿಂತವರು ಉಯ್ಯಾಲೆಯ ಮೇಲೆ ತೂಗುವ ಸಾಲಂಕೃತ ಕೇಶವನನ್ನು ಬರೇ ಒಮ್ಮೆ ಎವೆಯಿಕ್ಕುವ ಹೊತ್ತಿನಷ್ಟು ಕಂಡು ಕೃತಾರ್ಥರಾದರಂತೆ. ಲಕ್ಷಕ್ಕೂ ಮಿಕ್ಕು ನೆರೆದ ಜನ ಒಂದೇ ದಿವಸ ಗುಡಿಗೆ ಒಂದೆರಡು ಮೂರು ಕೋಟಿ ಆದಾಯವಾಗಿರಬಹುದೆಂದು ಅಂದಾಜು. ಕಡಿಮೆಯೆಂದರೂ ಸಾವಿರ ದುಡ್ಡಿಗೊಂದರಂತೆ ಐದು ಸಾವಿರ ಟಿಕೆಟುಗಳು ಬಿಕರಿಗೊಂಡವಂತೆ. ಬರೇ ಚಪ್ಪಲಿ ಕಾಯುವವರಿಗೆ ಐವತ್ತು ಸಾವಿರ ವಹಿವಾಟಾಯಿತಂತೆ. ಎರಡು ಲಕ್ಷ ಲಡ್ಡುಗಳ ವಿಲೇವಾರಿಯಾಯಿತಂತೆ… ಇವೆಲ್ಲ ಊಹಾಪೋಹವೆನ್ನದ ಹಾಗೆ ಪ್ರತ್ಯಕ್ಷ ಕಂಡ ಸಬೂತು ಇಂದು ಒಳಮನೆಯಲ್ಲಿ ಆಪ್ತ ಸಮಾಲೋಚನೆಗೆ ತೊಡಗಿತ್ತು. ಕಳೆದ ಇಪ್ಪತ್ತು ವರ್ಷಗಳಿಂದ ನನ್ನ ಅಮ್ಮ ಮತ್ತು ಅಕ್ಕ-ತಂಗಿಯರು ಈ ಶ್ರೀನಿವಾಸನ ಅಂತರಂಗದ ಸೇವೆಯಲ್ಲಿ ತೊಡಗಿದ್ದಾರೆಂಬುದೂ ಇದರೊಟ್ಟಿಗೆ ತಾಳೆಯಾಗುವ ಸತ್ಯ! ಇವೆಲ್ಲ ಒಟ್ಟಾರೆ ಈ ಬೆಳಿಗ್ಗೆ ನನ್ನೆದುರೇ ಜರುಗಿದ ಮಾತುಕತೆಗಳ ಅಂತೆಕಂತೆ! ವರ್ಷದಿಂದ ವರ್ಷಕ್ಕೆ ದೇವಸ್ಥಾನ ಭಾರೀ ಇಂಪ್ರೂಮೆಂಟಾಗುತ್ತಿದೆಯೆಂದು ಅಮ್ಮ ಮಾತಿನ ನಡುವೆ ಗುಸುಗುಟ್ಟಿದ್ದೇ ಸರಿ- ಇದು ಭಾರೀ ‘ಸತ್ಯ’ದ ದೇವರೆಂದು ಮೂವರೂ ಕೊಂಡಾಡಿ ನವಿರೆದ್ದುಕೊಂಡರು.

ಮೈಯೆಲ್ಲ ಜಗ್ಗುವಷ್ಟು ತೊಟ್ಟು ಝಗಮಗಿಸುವ ಈ ಕಲ್ಲು ಗೊಂಬೆಯ ಮಹಿಮೆಯೂ, ‘ಸತ್ಯ’ವೂ ಎಂಥದೆಂದು ಒಮ್ಮೊಮ್ಮೆ ಯೋಚನೆಯಾಗಿದ್ದಿದೆ. ಇಷ್ಟು ಮಂದಿಯನ್ನು ಕಲೆ ಹಾಕುವ ಗುರುತ್ವವನ್ನು ಅದರಲ್ಲಿ ಆವಾಹಿಸಿದ್ದು ಯಾರು? ಮತ್ತು ಹೇಗೆ? ಉತ್ತರ ಅಷ್ಟು ಸರಳವಿಲ್ಲ. ಮೈಯೆಲ್ಲ ಹೇರಿಕೊಂಡು ನಿಂತಿರುವ ಈ ಕರಿಗಲ್ಲು ದೈವದ ಪಟವನ್ನು ನೋಡಿ ನನ್ನೊಬ್ಬ ಪರದೇಸೀ ಗೆಳೆಯ ಕಳೆದ ಸಲ, ‘Is this an African tribal art?’ ಅಂತ ಕೇಳಿ ಅಮ್ಮನನ್ನು ಪೆಚ್ಚು ಮಾಡಿದ್ದ. ಇಂತಹ ಪರಮ ಮಹಾತ್ಮೆಯಿರುವ ಈ ದೇವಸ್ಥಾನವನ್ನು ಕೇವಲ ‘ದಂಧೆ’ ಅಂದರೆ ಆಸ್ತಿಕ ಮಹಾಶಯರಿಗೆ ಘಾಸಿಯಾಗಬಹುದೆಂದು ಚೆನ್ನಾಗಿ ಗೊತ್ತು. ಭಕ್ತಿ ಮತ್ತು ಶ್ರದ್ಧೆಯನ್ನು ಹೀಗೆ ಪ್ಯಾಕೇಜಿಸಿ ಕ್ರಯಕ್ಕಿಡುವುದನ್ನು ಇನ್ನೇನು ತಾನೇ ಅನ್ನುವುದು? ಅಥವಾ ಅದು ಅವರ ಪಾಲಿನ ‘ಸತ್ಯ’ದ ಭಾಗವೇ ಇರಬಹುದೆ?!

ನಾನು ಆಗಿಕೊಂಡಿರುವ ಈ ಕಾಲದಲ್ಲಿ ಪರಮ‘ಸತ್ಯ’ ಅನ್ನುವುದೇ ಉಟೋಪಿಯನ್ ಇದ್ದೀತು. ಅಂಥದೊಂದು ಇಲ್ಲವೆಂತಲೇ ನಾನು ನಂಬಿದ್ದೇನೆ. ಒಬ್ಬನ ಸತ್ಯ ಇನ್ನೊಬ್ಬನ ಪಾಲಿನ ಮಿಥ್ಯೆಯೇ ಇರಬಹುದು. ಕಣ್ಣಾರೆ ಎನ್ನುವುದು ಭ್ರಾಂತೇ ಇರಬಹುದು. ಹಾಗೆ ನೋಡಿದರೆ ನಮ್ಮೆದುರು ಸಾರ್ವತ್ರಿಕವಾಗಿ ತಥ್ಯವೆನಿಸುವಂಥವೇ ಇಲ್ಲವೇನೋ. ಅಲ್ಲದೆ ನನಗೆ ದಕ್ಕಿದ- ನನ್ನದೇ ಪಾಲಿನ ಸತ್ಯ ಸಹ ಯಾವತ್ತೂ ಹಾಗೆನ್ನುವಂತಿಲ್ಲ. ಇವತ್ತಿನ ಸತ್ಯ ಇವತ್ತಿಗೆ ಮಾತ್ರ ಸತ್ಯ. ಅಂದರೆ ಅದು ನಮ್ಮ ಸದ್ಯಗಳ ತತ್ಕಾಲೀನ ಸೆಳಕು ಮಾತ್ರ! ನಾವು ಮಾಡಿಕೊಂಡಿರುವ ಫಿಸಿಕ್ಸು ಕೂಡ ಈ ತರಹದ್ದೇ. ಒಂದನ್ನು ಅಲ್ಲಗಳೆದೇ ಇನ್ನೊಂದು ಪ್ರತಿಪಾದಿಸುವಂಥದು. ನ್ಯೂಟನ್ ಐನ್‍ಸ್ಟೀನುಗಳ ನಡುವೆ ಮತ್ತು ಇವತ್ತಿನ ಹಾಕಿಂಗಿನವರೆಗೆ ನಾವು ಕಟ್ಟಿದ್ದೆಷ್ಟು? ಕೆಡಹಿದ್ದೆಷ್ಟು? ನಂಬಿದ್ದೆಷ್ಟು? ಅಲ್ಲವೆಂದಿದ್ದೆಷ್ಟು? ನಾವು ಕಟ್ಟುತ್ತಿರುವ ಲೋಕವೂ ಇಂಥದೇ… ಮಾಧ್ಯಮಗಳು ಫಳಿಸುತ್ತಲೇ ಇರುವ ಆಝಮ್ ಅಮಿರ್ ಕಸಬ್ ಎನ್ನುವ ‘ಸೈಡುಪೋಸು’ ನಮ್ಮೆದುರಿನ ಪುರಾವೆಯೇ ಆದರೂ ಎದುರಿನವರು ಅಲ್ಲಗಳೆಯುತ್ತಿರುವ ಸತ್ಯವೆಷ್ಟು? ಅಲ್ಲದೆ ಇಂತಹ ಸತ್ಯಕ್ಕಿರುವ ಸಾಪೇಕ್ಷತೆಯೆಷ್ಟು? ನಾವೇ ಒಡೆದು ಕಟ್ಟಿದ ನಾಡುಗಳ ನಡುವೆ ನಾವೇ ಎಳೆದ ಗಡಿಯ ಗೋಡೆ; ಎರಡು ಸತ್ಯಗಳ ನಡುವೆ ಎಷ್ಟೆಲ್ಲ ಗಡುವು!

ಇದನ್ನೆಲ್ಲ ಅಮ್ಮನಿಗಾಗಲಿ, ನನ್ನಿಬ್ಬರು ಸೋದರಿಯರಿಗಾಗಲೀ ಹೇಳಿಕೊಂಡರೆ ನಕ್ಕುಬಿಟ್ಟಾರು. ಸಾಲದುದಕ್ಕೆ ಅಮ್ಮನಿಗೂ ನನಗೂ ಎದುರಿಗಿರುವ ಒಂದೇ ಸತ್ಯಕ್ಕೆ ತಲೆಮಾರಿನ ಅಂತರವಿದೆ. ಅಮ್ಮ ಇರಲಿ, ನನ್ನೊಟ್ಟಿಗೆ ಕೆಲಸಕ್ಕಿರುವ ನನ್ನದೇ ಸಿಬ್ಬಂದಿ ಸಹಿತ ನಾನು ನಂಬುವುದನ್ನು ಮನಸಾ ನಂಬುವುದಿಲ್ಲ. ಸಂಬಳ ಕೊಟ್ಟು ನನ್ನ ನಂಬಿಕೆಯನ್ನು ಅವರಿಂದ ನಂಬಿಸಬೇಕು. ಈ ಕಂಪ್ಯೂಟರು ಹತ್ತು ರೂಪಾಯಿಗೆ ಬರುವ ‘ಅಪ್ಸರಾ’ ಪೆನ್ಸಿಲಿಗೆ ಸಮಾ ಅಷ್ಟೇ, ಮಕ್ಕಳೇ -ಅಂತ ಅವರೆದುರು ದಿನಾಲು ಬಾಯಿ ಹರಿಯಬೇಕು. ಕೆಲಸಕ್ಕೆ ಸಿಗುವ ಇವತ್ತಿನ ಮುಕ್ಕಾಲು ಹುಡುಗರಿಗೆ ‘ಕೈಯಾರೆ’ ಗೆರೆಯೆಳೆದು ಅಭ್ಯಾಸವಿಲ್ಲ. ಮೌಸು, ಮಾನಿಟರು ಜತೆಗೊಂದು ಕೀಲಿಮಣೆಯಿಲ್ಲದೆ ಗೀಟುಗಳಾಗುವುದೇ ಸಲ್ಲ! ಇದು ಅವರ ಪಾಲಿನ ಸತ್ಯ. ಹೀಗಿರುವಾಗ ನನಗಿಂತ ಮೂವತ್ತು ವಯಸ್ಸು ಹೆಚ್ಚಿರುವ ಈ ಅಮ್ಮನನ್ನು ಸರಿದೂಗಿಸುವುದೇನು ಬಂತು? ಯಕಃಶ್ಚಿತ್ ಪಾಲಿಥೀನು ಕೊಟ್ಟೆಗೇ ಆಗಾಗ ಮನೆಯಲ್ಲಿ  ರಾದ್ಧಾಂತವಾಗುವುದಿದೆ. ಪರಪರವೆಂದು ಒಂದೇ ಸಮ ಹರಿದುಕೊಳ್ಳುವ ಈರುಳ್ಳಿ ಸಿಪ್ಪೆ ಹಾಗಿರುವ ಈ ಚೀಲವನ್ನು ಹುಟ್ಟುತ್ತಲೇ ತಂದಿದ್ದೆಯೇನಮ್ಮ ಅಂದರೆ ಸಿಟ್ಟಾಗುತ್ತಾಳೆ. ಗಾಡಿಯವನಿಂದ ತರಕಾರಿ ಕೊಳ್ಳಲಿಕ್ಕೂ ಅವಳಿಗೆ ಈ ತತ್ಕಾಲದ ಚೀಲವೇ ಆಗಬೇಕು! ಇನ್ನು ಉಪ್ಪಿನಕಾಯಿ, ಸಾರಿನಪುಡಿಯನ್ನೂ ಫ್ರೀಝರಿನಲ್ಲಿಟ್ಟು ಸಂಭಾಳಿಸುತ್ತಾಳೆ. ರೆಫ್ರಿಜರೇಟರಿನ ಕೊರೆತ ತಿಂಗಳುಗಟ್ಟಲೆ ಅವುಗಳ ಘಮವನ್ನೂ ತಾಜಾ ಇಡುತ್ತದೆಂದು ಅವಳ ನಂಬಿಕೆ!! ಇದು ಅವಳ ಪಾಲಿನ ಸತ್ಯ. ಅಂದರೆ ಒಂದೇ ಸತ್ಯಕ್ಕೆ ಎರಡು ಮಗ್ಗುಲುಗಳಿವೆ ಅಂತಾಯಿತು. ಎರಡು ವಿಪರೀತಗಳ ನಡುವೆ ಎಷ್ಟು ಬಿಡಿ ಬಿಡಿ ಗ್ರಹಿಕೆಗಳು. ಕಪ್ಪು, ಬಿಳುಪುಗಳ ನಡುವೆ ಎಷ್ಟೆಲ್ಲ ಊದಾ! ಹಾಗಾಗಿಯೇ ಸತ್ಯವೆನ್ನುವುದು ಆ ಕ್ಷಣದ ಅನುಭವ ಮಾತ್ರ. ಬೇಶಕ್ ತಾತ್ಕಾಲಿಕವೆನ್ನುವ ಸೆಳಕು.

ನಿನ್ನೆ ಏಕಾದಶಿಯ ನಿಮಿತ್ತ ಹೊರಜಗತ್ತಿನ ಸಂಪರ್ಕವೇ ಕಡಿದುಹೋಗಿತ್ತು. ಹಾಲಿನವನು ಮನೆಗೆ ಬರಲಿಲ್ಲ. ಗೇಟೆದುರು ಪೇಪರಿನ ಮಡಿಕೆ ಬೀಳಲಿಲ್ಲ. ಫೋನಿನ ರಿಂಗು ಕೇಳಲಿಲ್ಲ. ಟೀವಿ ನೋಡಲಾಗಲಿಲ್ಲ. ಹೊರಗೆ ಮೈಯಲ್ಲಿ ದೇವರು ಬಂದಂತಿದ್ದ ಎಡೆಬಿಡದ ಜಂಗುಳಿಯಲ್ಲಿ ಮನೆ ದ್ವೀಪದಂತಾಗಿತ್ತು. ಬೆಳಿಗ್ಗೆ ಎದ್ದು ಬಂದರೆ ದೊಡ್ಡ ದೊಡ್ಡ ಸಾಲುಗಳಲ್ಲಿ ‘ಸತ್ಯಂ’ ಸುದ್ದಿ. ಇದೀಗ ಹೊರಬಿದ್ದ ಸತ್ಯದ ಹಿಂದೆ ಏಳೆಂಟು ಸಾವಿರ ಕೋಟಿ ಪೋಲಂತೆ. ಇನ್ನು ನಾವು ಹೂಡಿರುವ ಷೇರುಕಟ್ಟೆಗಳಲ್ಲಿ ಸದ್ಯ ಮತ್ತು ಸತ್ಯಗಳ ಬೆಲೆಯೆಷ್ಟು ಅಂತ ಯೋಚಿಸುವಾಗಲೇ ಗುಡಿಯಿಂದ- ‘ಸತ್ಯಂ ವದ ಧರ್ಮಂ ಚರ’ ಮೊಳಗುತ್ತಿತ್ತು. ಯಾವ ಸತ್ಯವನ್ನು ಮತ್ತು ಯಾವ ಧರ್ಮವನ್ನು ಪಾಲಿಸುವುದೆಂದು ಗೊಂದಲ ಪಡುವಾಗ ನಿನ್ನೆ ತೆರೆದ ‘ಸ್ವರ್ಗದ ಬಾಗಿಲು’ ಈ ತನಕ ಮುಚ್ಚಿಲ್ಲವೆಂಬುದು ಗಮನಕ್ಕೆ ಬಂತು.