ವಿವೇಕಾನಂದರು ನೀಡಿದ ಅನೇಕ ಉಪನ್ಯಾಸಗಳು  1896ರಲ್ಲಿ ಪ್ರಕಟವಾಗಿವೆ. ಪಶ್ಚಿಮದ ಅಧ್ಯಾತ್ಮ ಓದುಗರ ಕುತೂಹಲ ಆಸಕ್ತಿಗಳನ್ನು ಹೆಚ್ಚಿಸಿವೆ. ಹಿಂದೂ ನಂಬಿಕೆಗಳಲ್ಲಿ ಅಂತರ್ಗತವಾಗಿರುವ ದೇವರ ಕಲ್ಪನೆಯ ಪ್ರಚಾರಕನಾಗಿ ಬ್ರಿಟನ್ನಿಗೆ ಬಂದರು , ಎಲ್ಲ ಧರ್ಮಗಳ ಅರಿವಿನ ಪರಿಧಿಯನ್ನು ಹೆಚ್ಚಿಸಿ ಹೋದರು. ಎಂದೂ ಧರ್ಮಗಳ ವಿಶೇಷ ರೂಪದ ಪಕ್ಷಪಾತಿಯಾಗಿ ಮಾತನಾಡಲಿಲ್ಲ. ಭಾರತದಲ್ಲಿ ಜನಪ್ರಿಯವಾಗಿರುವ ವಿವಿಧ ನಂಬಿಕೆಗಳಿಂದ ನೇರ ಉದಾಹರಣೆಗಳನ್ನು ಆಧಾರವಾಗಿಸಿ ವಿವರಿಸುತ್ತಿದ್ದರು.ಎಲ್ಲ ನಂಬಿಕೆಗಳ ಒಳಹರಿವಾಗಿ , ಭಾರತೀಯ ಯೋಚನಾಕ್ರಮವನ್ನು ಆಧರಿಸಿದ ತತ್ವಶಾಸ್ತ್ರವನ್ನು ಬೋಧಿಸಿದರು. ವೇದ ಉಪನಿಷತ್ತು ಭಗವದ್ಗೀತೆಗಳನ್ನು ಉಲ್ಲೇಖಿಸಿದರು. ಸಾರ್ವಜನಿಕ ಸಭೆಗಳಲ್ಲಿ ತನ್ನ ಗುರುವಿನ ಬಗ್ಗೆ, ಪುರಾಣಗಳ ಬಗ್ಗೆ ಉಲ್ಲೇಖ ಮಾಡಲಿಲ್ಲ.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಯೋಗೀಂದ್ರ ಮರವಂತೆ ಬರಹ ಇಲ್ಲಿದೆ. 

“ಆ ಸಮಯ ನವೆಂಬರ್ ನ ಚಳಿಯ ಆದಿತ್ಯವಾರ, ಮತ್ತೆ ಸ್ಥಳ ಲಂಡನ್ ನ ಮನೆಯೊಂದರ ಪಶ್ಚಿಮಾಭಿಮುಖ ಕೋಣೆ. ಅರ್ಧ ವೃತ್ತಾಕಾರದಲ್ಲಿ ಕುಳಿತು ಆಲಿಸುವವರ ಎದುರು ಅವರು ಕುಳಿತಿದ್ದಾರೆ. ಹಿಂದೆ ಉರಿಯುತ್ತಿರುವ ಅಗ್ಗಿಷ್ಟಿಕೆ ರೂಮನ್ನು ಬೆಚ್ಚಗಿಡುವ ಕೆಲಸದಲ್ಲಿದೆ. ಒಂದರ ನಂತರ ಇನ್ನೊಂದು ಪ್ರಶ್ನೆ. ಎಲ್ಲವಕ್ಕೂ ಇದೆ ಉತ್ತರ ಅವರಲ್ಲಿ. ನಡುನಡುವೆ ಸಂಸ್ಕೃತದ ಸಾಲುಗಳನ್ನು ವಿವರಣೆಗೆ ಬಳಸುತ್ತಿದ್ದಾರೆ, ಮುಸ್ಸಂಜೆ ರಾತ್ರಿಯಾಗುತ್ತಿದೆ ಇಡೀ ದೃಶ್ಯ, ಭಾರತದ ಹಳ್ಳಿಸೀಮೆಯಲ್ಲಿ ಬಯಲು, ತೋಟ ಅಥವಾ ಬಾವಿಕಟ್ಟೆಯ ಬಳಿ ಕುಳಿತು ಆಲಿಸುವವರನ್ನು ಉದ್ದೇಶಿಸಿ ಸಂಧ್ಯಾಕಾಲದಲ್ಲಿ ನಡೆಸುವ ಸತ್ಸಂಗದಂತೆ ಕಾಣುತ್ತಿದೆ. ಮುಂದೆಂದೂ ಇಂಗ್ಲೆಂಡ್ ಅಲ್ಲಿ ನಾನು ಸ್ವಾಮಿಯನ್ನು ಅಷ್ಟು ಸರಳ ಬೋಧಕನಾಗಿ ಕಂಡದ್ದಿಲ್ಲ. ಮುಂದಿನ ಸಂದರ್ಭಗಳಲ್ಲಿ ಅವರು ಉಪನ್ಯಾಸ ನೀಡುತ್ತಾ, ದೊಡ್ಡ ಸಭೆಯ ಔಪಚಾರಿಕ ಪ್ರಶ್ನೋತ್ತರಗಳಲ್ಲಿ ಭಾಗವಹಿಸಿದ್ದರು. ಅಂದಿನಂತೆ ಕಾವಿ ತೊಟ್ಟು ನಡುನಡುವೆ ಶಿವ ಶಿವ ಎನ್ನುತ್ತ, ಧ್ಯಾನ ಮುದ್ರೆಯ ಮುಗ್ಧ ನೋಟವನ್ನು ಧರಿಸಿ, ಆಪ್ತ ಹದಿನೈದು ಹದಿನಾರು ಜನರಿಗೆ ದೂರದ ನಾಡಿನಿಂದ ತಂದ ಹೊಳಹನ್ನು ಆತ್ಮೀಯವಾಗಿ ಪಾಠ ಮಾಡುವ ಸಂದರ್ಭ ಸನ್ನಿವೇಶ ಮತ್ತೆಂದೂ ನೋಡಸಿಗಲಿಲ್ಲ”. “ಅವರು ವೈಯಕ್ತಿಕ ಪ್ರಶ್ನೆಗಳನ್ನು ಉತ್ತರಿಸಲು ತಯಾರಿದ್ದರು”. ಯಾರೋ ವಿಚಾರಿಸಿದ್ದಕ್ಕೆ ಹೇಳುತ್ತಾ, “ಈಗಾಗಲೇ ಸರಕುಗಳ ವ್ಯಾಪಾರ ವಿನಿಮಯದಲ್ಲಿ ತೊಡಗಿರುವ ದೇಶಗಳು ತಮ್ಮ ಕಲ್ಪನೆಗಳನ್ನೂ ಯೋಚನೆಗಳನ್ನೂ ವಿನಿಮಯ ಮಾಡಿಕೊಳ್ಳುವ ಸಮಯ ಬಂದಿದೆ” ಎಂದರು.

“ಅಲ್ಲಿಂದ ಮುಂದೆ ಭಾಷಣವನ್ನು ಅರ್ಥಮಾಡಿಕೊಳ್ಳುವುದು ಸುಲಭವಾಯ್ತು. ಗೀತೆಯ ಮೂಲಕ ಒಂದು ಅಥವಾ ಅದ್ವೈತದ ಹಲವು ಆಯಾಮಗಳನ್ನು ಚಿತ್ರಿಸಿದರು. ಅವರೇ ಹೇಳಿದ ವೇದಾಂತ ತತ್ವದಂತೆ “ಎಲ್ಲರೊಳಗೂ ಇರುವವ ಒಬ್ಬ ಪರಮ ದೇವ” ಎಂದರು. ಕ್ರೈಸ್ತ ಹಾಗು ಹಿಂದೂ ಮತಗಳಲ್ಲಿ ಪ್ರೀತಿಯೇ ಆತ್ಯಂತಿಕ ಧಾರ್ಮಿಕ ಭಾವ ಎಂದರು. ಬೌದ್ಧ ಮತ್ತು ಹಿಂದೂ ಧರ್ಮಗಳ ವ್ಯತ್ಯಾಸ ತಿಳಿಸಿದರು. ದೇಹ ಮತ್ತು ಮನಸ್ಸುಗಳು ಚಲಿಸುವುದು ಹತೋಟಿಯಲ್ಲಿರುವುದು ಮೂರನೆಯದಾದ “ನಾನು” ವಿನಿಂದ ಎಂದರು. “ನಂಬಿಕೆ” ಎನ್ನುವ ಶಬ್ದದ ಬಗ್ಗೆ ಅವರ ಆಕ್ಷೇಪ ಇತ್ತು, ಬದಲಿಗೆ “ಸಾಕ್ಷಾತ್ಕಾರ” ಎಂದು ಬಳಸಿ ಅಂದರು.

ಆಲಿಸುವವರಲ್ಲೊಬ್ಬರು “ನೀವ್ಯಾರು, ನಿಮ್ಮ ಗುರುತು ಏನು” ಎಂದು ಕೇಳಿದ ಪ್ರಶ್ನೆಗೆ “ಅಲೆದಾಡುವ ಬೋಧಕ” ಎನ್ನುವ ಉತ್ತರ ಬಂತು. “ನಮ್ಮೆಲ್ಲರ ಚಿಂತನೆಗಳನ್ನು ಪ್ರಭಾವಿಸಿದರು. ನಾನು ಯಾವತ್ತೂ ನೆನಪು ಮಾಡುವ ಮತ್ತು ಸದ್ಯಕ್ಕೆ ಮರೆತು ಹೋದ ಇನ್ನೆಷ್ಟೋ ವಿಷಯಗಳನ್ನು ವಾದಗಳನ್ನು ನಮ್ಮೊಳಗೇ ಇಟ್ಟರು. ಅದೇ ಚಳಿಗಾಲದಲ್ಲಿ ಸ್ವಾಮಿ ಅಮೆರಿಕಕ್ಕೆ ತೆರಳಿದರು. ಧಾರ್ಮಿಕ ಸಂಸ್ಕೃತಿಯ ವಿಸ್ತಾರ, ನವೀನ ಬೌದ್ಧಿಕ ಚಿಂತನೆ ಹಾಗು ಕುತೂಹಲ ಆಮೇಲೆ ಅವರ ಕರೆ, ಬಲಿಷ್ಠವೂ ಸೂಕ್ಷ್ಮವೂ ಅನಿಸಿತ್ತು, ಯಾವ ನಿಟ್ಟಿನಲ್ಲೂ ಮನುಷ್ಯನ ದುರುದ್ದೇಶದ ಬೂಟಾಟಿಕೆಯ ಅಂಶವಾಗಿ ಕಾಣಿಸಲಿಲ್ಲ” ಹೀಗೆಂದು, ಸ್ವಾಮಿ ವಿವೇಕಾನಂದರ ಮೊದಲ ಲಂಡನ್ ಭೇಟಿಯ ನೆನಪಿನ ಬುತ್ತಿಯನ್ನು ಸಹೋದರಿ ನಿವೇದಿತಾ ಹತ್ತು ವರ್ಷಗಳ ನಂತರ ಬಿಚ್ಚುತ್ತಾರೆ.

ವಿವೇಕಾನಂದರು ಸೆಪ್ಟೆಂಬರ್ 1895ರಲ್ಲಿ ಅಮೆರಿಕದಿಂದ ಲಂಡನ್ ಗೆ ಬಂದಿದ್ದರು. ಲಂಡನ್ ನ ಹಲವು ವಿಳಾಸಗಳಲ್ಲಿ ಇದ್ದರು, ಸಂತ ಜಾರ್ಜ್ ರಸ್ತೆಯ 63 ನಂಬ್ರದ ಮನೆಯನ್ನೂ ಸೇರಿಸಿ. ಅವರಿಗೆ ಬಾಡಿಗೆ ನೀಡಲಾಗಿದ್ದ ಮನೆಯನ್ನು ಅಣಿಗೊಳಿಸದವರು ಮಾರ್ಟಿಮರ್ ರೇಗಿನ್ಲ್ಯಾಂಡ್ ಮಾರ್ಗೇಸನ್ ಮತ್ತು ಇಸಬೆಲ್ ದಂಪತಿಗಳು. ಅವರು  ವಿವೇಕಾನಂದರ ಬೋಧನೆಗಳಲ್ಲಿ ಆಸಕ್ತಿ ಇದ್ದವರು. ವಿವೇಕಾನಂದರು ನಿರಂತರವಾಗಿ ಮೊದಲ ಉಪ್ಪರಿಗೆಯ ಕೋಣೆಯಲ್ಲಿ ಬೋಧನೆ ಮಾಡಿದರು. ಅಲ್ಲಿ ನೂರು ಜನರು ಕೂರುವಷ್ಟು ಸ್ಥಳ ಇತ್ತಂತೆ. ಮನೆಯ ಕೆಳಗಡೆ ರಸ್ತೆಗೆ ಮುಖ ಮಾಡಿ ದೈನಂದಿನ ಜೀವಂತಿಕೆಯ ಕೇಂದ್ರವಾದ ಅಂಗಡಿ ಇತ್ತು, ಅದೇ ಮಾಳಿಗೆಯ ಹಿಂದಿನ ಭಾಗದ ಕಿಟಕಿ ಇಲ್ಲದ ಕೊಠಡಿಯಲ್ಲಿ ಮಲಗುತ್ತಿದ್ದರು. ಮನೆಯ ಬೇರೆ ಭಾಗಗಗಳನ್ನು ಸ್ವಾಮಿಗಳ ಪರಿವಾರಕ್ಕೆ ಬಿಟ್ಟುಕೊಡಲಾಗಿತ್ತು. ಅವರಲ್ಲಿ ಜೋಸಿಯಾ ಗೋಡ್ವಿನ್ ಎನ್ನುವ ಟೈಪಿಸ್ಟ್, ಹೆನ್ರಿಟಾ ಮುಲ್ಲರ್ ಎನ್ನುವ ಜ್ಞಾನಿ ಹಾಗು ಸ್ವಾಮಿ ಸರದಾನಂದ ಎನ್ನುವ ಶಿಷ್ಯ ಇದ್ದರು.

ಆ ಮನೆಯಲ್ಲಿ ವಿವೇಕಾನಂದರ ವಾಸ ಸಣ್ಣ ಅವಧಿಯದ್ದಾಗಿದ್ದರೂ, ಅವರ ಹಾಗು ಗುರು ರಾಮಕೃಷ್ಣರ ಚಿಂತನೆಗಳನ್ನು ಪಾಶ್ಚಿಮಾತ್ಯ ದೇಶಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ, ಪೂರ್ವದ ಹಲವು ಪ್ರತಿಪಾದಕರು ವಿವೇಕಾನಂದರು ಹರಿಯ ಬಿಟ್ಟ ಚಿಂತನೆಗಳನ್ನು ಹಿಂಬಾಲಿಸುವ ನಿಟ್ಟಿನಲ್ಲಿ ಮಹತ್ವಪೂರ್ಣವಾದದ್ದು. “ಲಂಡನ್ ನಗರ ಮನುಷ್ಯ ತಲೆಗಳ ಸಾಗರ ,ಹತ್ತು ಹದಿನೈದು ಕೋಲ್ಕತ್ತಾಗಳನ್ನು ಒಟ್ಟುಕೂಡಿಸಿದಷ್ಟು. ಇಲ್ಲಿಗೆ ಬಂದು ಇಳಿಯುವವರು ತಮ್ಮನ್ನು ಕರೆದೊಯ್ಯುವ ಜನರನ್ನು ಯೋಜಿಸಿಕೊಳ್ಳದಿದ್ದರೆ ನಗರ ಜಾಲದಲ್ಲಿ ಕಳೆದೇ ಹೋಗಬಹುದು” ಎಂದು ಲಂಡನ್ ನ ಮೊದಲ ಅನುಭವವನ್ನು ವಿವೇಕಾನಂದರು ಹಂಚಿಕೊಂಡಿದ್ದರು . ಅದೇ ವಾರ ಯೋಗದ ಬಗ್ಗೆ ಆದಿತ್ಯವಾರದ ಸರಣಿ ಉಪನ್ಯಾಸಗಳನ್ನು ಚಿತ್ರಕಾರರ ಸಂಘದ ಭವನದಲ್ಲಿ ಉದ್ಘಾಟಿಸಿದರು .ಮುಂದಿನ ತಿಂಗಳು ಸಹವರ್ತಿಗೆ ಬರೆದ ಪತ್ರದಲ್ಲಿ “ಲಂಡನ್ ಅಲ್ಲಿ ನಮ್ಮದೇ ಕೇಂದ್ರವನ್ನು ಆರಂಭಿಸಲು ಅನುದಾನ ದೊರೆತಿದೆ. ನಾನು ಮರಳಿ ಮನೆಗೆ ಹೋಗುವುದರಿಂದ ಏನಾಗುವುದಿದೆ, ಈ ಲಂಡನ್ ಜಗತ್ತಿನ ಕೇಂದ್ರ. ಭಾರತದ ಹೃದಯ ಇಲ್ಲಿದೆ” ಎಂದು ಬರೆದಿದ್ದರು. ಹಾಗಂತ ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಕಡುಶೋಷಣೆ ಎಂದೂ ಕರೆದರು, ಅವರ ಬರವಣಿಗೆ ಸ್ವಾತಂತ್ಯ್ರ ಚಳವಳಿಯನ್ನು ಪ್ರಭಾವಿಸಿದವು. ವಿವೇಕಾನಂದರನ್ನು ಓದಿದ ಗಾಂಧೀ 1921ರಲ್ಲಿ “ನನ್ನ ದೇಶದ ಬಗೆಗಿನ ಪ್ರೇಮ ಸಾವಿರ ಪಟ್ಟು ಹೆಚ್ಚಾಯಿತು” ಎಂದಿದ್ದರು.

1896ರ ಏಪ್ರಿಲ್ ನಲ್ಲಿ ವಿವೇಕಾನಂದರು ಮತ್ತೆ ಲಂಡನ್ ಗೆ ಬಂದರು, ತಮ್ಮ ಆಂಗ್ಲ ಸ್ನೇಹಿತರ ಜೊತೆಗೆ ವಾಸಿಸಿದರು. ಬೇಸಿಗೆ ರಜೆ ಮುಗಿದ ನಂತರ ವಿಕ್ಟೋರಿಯಾ ರಸ್ತೆಯ ದೊಡ್ಡ ತರಗತಿಯಲ್ಲಿ ಬೋಧನೆ ಮುಂದುವರಿಸಿದರು . ಜುಲೈ ಹಾಗು ಆಗಸ್ಟ್ ಅಲ್ಲಿ ಸ್ನೇಹಿತರ ಜೊತೆ ಫ್ರಾನ್ಸ್ ಜರ್ಮನಿ ಸ್ವಿಟ್ಜರ್ಲ್ಯಾಂಡ್ ಸುತ್ತಿದರು. ಡಿಸೆಂಬರ್ ನಲ್ಲಿ ರೋಮ್ ಗೆ ಭೇಟಿ ನೀಡಿ ಅಲ್ಲಿಂದ ಕೊಲಂಬೊ ತಲುಪಿ 1897ರ ಜನವರಿಯಲ್ಲಿ ಭಾರತ ತಲುಪಿದರು. 1896ರಲ್ಲಿ ಅವರು ನೀಡಿದ ಅನೇಕ ಉಪನ್ಯಾಸಗಳು ಪ್ರಕಟವಾಗಿವೆ. ಪಶ್ಚಿಮದ ಅಧ್ಯಾತ್ಮ ಓದುಗರ ಕುತೂಹಲ ಆಸಕ್ತಿಗಳನ್ನು ಹೆಚ್ಚಿಸಿವೆ. ಹಿಂದೂ ನಂಬಿಕೆಗಳಲ್ಲಿ ಅಂತರ್ಗವವಾಗಿರುವ ದೇವರ ಕಲ್ಪನೆಯ ಪ್ರಚಾರಕನಾಗಿ ಬ್ರಿಟನ್ನಿಗೆ ಬಂದರು, ಎಲ್ಲ ಧರ್ಮಗಳ ಅರಿವಿನ ಪರಿಧಿಯನ್ನು ಹೆಚ್ಚಿಸಿ ಹೋದರು. ಎಂದೂ ಧರ್ಮಗಳ ವಿಶೇಷ ರೂಪದ ಪಕ್ಷಪಾತಿಯಾಗಿ ಮಾತನಾಡಲಿಲ್ಲ. ಭಾರತದಲ್ಲಿ ಜನಪ್ರಿಯವಾಗಿರುವ ವಿವಿಧ ನಂಬಿಕೆಗಳಿಂದ ನೇರ ಉದಾಹರಣೆಗಳನ್ನು ಆಧಾರವಾಗಿಸಿ ವಿವರಿಸುತ್ತಿದ್ದರು.ಎಲ್ಲ ನಂಬಿಕೆಗಳ ಒಳಹರಿವಾಗಿ, ಭಾರತೀಯ ಯೋಚನಾಕ್ರಮವನ್ನು ಆಧರಿಸಿದ ತತ್ವಶಾಸ್ತ್ರವನ್ನು ಬೋಧಿಸಿದರು. ವೇದ ಉಪನಿಷತ್ತು ಭಗವದ್ಗೀತೆಗಳನ್ನು ಉಲ್ಲೇಖಿಸಿದರು. ಸಾರ್ವಜನಿಕ ಸಭೆಗಳಲ್ಲಿ ತನ್ನ ಗುರುವಿನ ಬಗ್ಗೆ, ಪುರಾಣಗಳ ಉಲ್ಲೇಖ ಮಾಡಲಿಲ್ಲ.

ನಾನು ಯಾವತ್ತೂ ನೆನಪು ಮಾಡುವ ಮತ್ತು ಸದ್ಯಕ್ಕೆ ಮರೆತು ಹೋದ ಇನ್ನೆಷ್ಟೋ ವಿಷಯಗಳನ್ನು ವಾದಗಳನ್ನು ನಮ್ಮೊಳಗೇ ಇಟ್ಟರು. ಅದೇ ಚಳಿಗಾಲದಲ್ಲಿ ಸ್ವಾಮಿ ಅಮೆರಿಕಕ್ಕೆ ತೆರಳಿದರು. ಧಾರ್ಮಿಕ ಸಂಸ್ಕೃತಿಯ ವಿಸ್ತಾರ, ನವೀನ ಬೌದ್ಧಿಕ ಚಿಂತನೆ ಹಾಗು ಕುತೂಹಲ ಆಮೇಲೆ ಅವರ ಕರೆ, ಬಲಿಷ್ಠವೂ ಸೂಕ್ಷ್ಮವೂ ಅನಿಸಿತ್ತು.

1895 ಹಾಗು 1899ರ ನಡುವೆ ಹಲವು ಬಾರಿ ಇಂಗ್ಲೆಂಡ್ ಗೆ ಭೇಟಿ ನೀಡಿದರು. ಅವರ ಲಂಡನ್ ಸಮಯ ಎಂದಿನಂತೆ ಮಹತ್ವಪೂರ್ಣ ಮತ್ತು ವಿಶೇಷ ಆಗಿದ್ದವು. ಲಂಡನ್ ಗೂ ಅಷ್ಟರಲ್ಲೇ ಕೆಲವು ಭಾರತೀಯ ಆಗಂತುಕರ ಪರಿಚಯ ರುಚಿ ಹತ್ತಿತ್ತು. ದಾದಾಭಾಯಿ ನವರೋಜಿ ,ಮುಂಚೆರ್ಜಿ ಬಹೌನಗ್ರೀ ರಾಜಕೀಯ ಕಾರಣಗಳಿಗೆ ಪರಿಚಿತರು. ಇನ್ನು ರಾಜಾರಾಮ ಮೋಹನ ರಾಯ್, ದ್ವಾರಕಾನಾಥ್ ಟ್ಯಾಗೋರ್, ಕೇಶಬ್ ಚಂದರ್ ಸೇನರ ಇಂಗ್ಲೆಂಡ್ ಭೇಟಿಯೂ ಭಾರತೀಯ ಸಂಸ್ಕೃತಿಯ ಬಗೆಗಿನ ಕುತೂಹಲವನ್ನು ಹೆಚ್ಚಿಸಿತ್ತು. ಲಂಡನ್ ಅಲ್ಲಿ ವಿವೇಕಾನಂದರು ಕಳೆದ ದಿನಗಳಲ್ಲಿ ಅವರ ಮಾತುಗಳಿಗೆ ಬೋಧನೆಗೆ ಬೇಡಿಕೆ ಶುರು ಆಯಿತು. ವಿವಿಧ ಕ್ಲಬ್ ಗಳು, ಸಮಾಜಗಳು, ಮನೆಯ ಹಾಲ್ ಗಳು ಕದ ತೆರೆದು  ಆಧ್ಯಾತ್ಮಿಕ ಸನ್ಯಾಸಿಯನ್ನು ಸ್ವಾಗತಿಸಿದವು. ಲಂಡನ್ ಅಲ್ಲಿ ವಾಸಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ಮಾರ್ಗದರ್ಶನಕ್ಕಾಗಿ ಸಂದರ್ಶಿಸಿದರು. ನವೆಂಬರ್ 1895ರ ಭೇಟಿಯ ಕಾರಣದಿಂದಲೇ ಮುಂದೆ ಸಹೋದರಿ ನಿವೇದಿತಾ ಆಗಿ “ರೂಪಾಂತರ” ಆದವರು ಮಾರ್ಗರೆಟ್ ಎಲಿಜಬೆತ್ ನೊಬೆಲ್. ಇಂಗ್ಲೆಂಡ್ ಅಲ್ಲಿ ಶಾಲಾ ಶಿಕ್ಷಕಿಯಾಗಿದ್ದ ಮಾರ್ಗರೆಟ್” ಒಂದು ವೇಳೆ ಅವರು ಲಂಡನ್ ಗೆ ಆವಾಗ ಬಂದಿರದಿದ್ದರೆ, ನನ್ನ ಜೀವನ ಒಂದು ಗುರಿ ಇಲ್ಲದ ಕನಸಾಗಿರುತ್ತಿತ್ತು” ಎಂದಿದ್ದರು. ವಿವೇಕಾನಂದರ ಮುಂದಿನ ಭೇಟಿಯ ಸಂದರ್ಭ, ಹಲವು ಸಂಕಿರಣಗಳು ಮಾರ್ಗರೆಟ್ ರ ಆಯೋಜನೆಯಲ್ಲಿ ನಡೆಯಿತು. ಲಂಡನ್ ಅಲ್ಲಿದ್ದ ಸಾವಿರಾರು ಭಾರತೀಯರಿಗೆ ಅಧ್ಯಾತ್ಮದ ಕಡೆಗಿನ ಹಾದಿ ಸ್ವಾತಂತ್ಯ್ರ ಹೋರಾಟದಲ್ಲಿದೆ ಎಂದು ವಿವೇಕಾನಂದರು ಬೇಗ ಕಂಡುಕೊಂಡರು. ಅವರು ಮಾತಾಡುವಲ್ಲೆಲ್ಲ ಜನರು ತುಂಬುತ್ತಿದ್ದರು, ಲಂಡನ್ ತನ್ನ ಮಾಯಾ ಬಂಧನದಿಂದ ಹೊರಬರುತ್ತಿತ್ತು. “ಲಂಡನ್ ನಲ್ಲಿ ನಡೆಯುತ್ತಿರುವ ಕೆಲಸಗಳು ದೊಡ್ಡ ಯಶಸ್ಸನ್ನು ಕಾಣುತ್ತಿವೆ” ಎಂದ ವಿವೇಕಾನಂದರು ನಂತರ “ಇಂಗ್ಲಿಷರು ಅಮೆರಿಕನ್ನರಷ್ಟು ಚುರುಕಲ್ಲ ಆದರೆ ಒಮ್ಮೆ ಅವರ ಹೃದಯವನ್ನು ಮುಟ್ಟಿದ ಮೇಲೆ ಅದು ಶಾಶ್ವತವಾಗಿ ನಿಮ್ಮದು” ಎಂದು ಬರೆದಿದ್ದರು. ಸಂಡೆ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ “ಇಂಗ್ಲೆಂಡ್ ಇನ್ಯಾರದೋ ವಶವಾಗುವ ಸರತಿ ಬರುತ್ತದೆ. ಇಂದು ಅವರ ಬಳಿ ಖಡ್ಗ ಇದೆ, ಆದರೆ ಹೊಳಹುಗಳ ಲೋಕದಲ್ಲಿ ಅದು ನಿಷ್ಪ್ರಯೋಜಕಕ್ಕಿಂತಲೂ ಕನಿಷ್ಠವಾದುದು” ಎಂದಿದ್ದರು. ಇಂಡಿಯನ್ ಮಿರರ್ ಪತ್ರಿಕೆ ಸ್ವಾಮಿಯ ಬೋಧನೆ ಸರಣಿಗಳ ಯಶಸ್ಸಿನ ಬಗ್ಗೆ ಹಲವು ವರದಿಗಳನ್ನು ಪ್ರಕಟಿಸಿತ್ತು. ಭಾಷಾ ಶಾಸ್ತ್ರಜ್ಞ ಮ್ಯಾಕ್ಸ್ ಮುಲ್ಲರ್, ಆಕ್ಸ್ಫರ್ಡ್ ಅಲ್ಲಿ ಹಲವು ಭಾಷಣಗಳನ್ನು ಸಂಘಟಿಸಿದರು. ವೇದಾಂತ ತತ್ವ, ಗುರು ರಾಮಕೃಷ್ಣ ಹಾಗು ಭಾರತ ಇವೆಲ್ಲವನ್ನೂ ಮುಲ್ಲರ್ ತೀವ್ರವಾಗಿ ಇಷ್ಟ ಪಟ್ಟವರು. ವಿವೇಕಾನಂದರ ಸಹೋದರ ಮಹೇಂದ್ರನಾಥ 1895 ಹಾಗು 96 ರಲ್ಲಿ ಇಂಗ್ಲೆಂಡ್ ಅಲ್ಲಿ ಜೊತೆಗೆ ಉಳಿದವರು. ಆಗಿನ ಘಟನೆಗಳನ್ನು ಅವರ ಸಹವರ್ತಿಗಳ ಕುರಿತಾದ ಮಾಹಿತಿಯನ್ನು ಪುಸ್ತಕದಲ್ಲಿ ದಾಖಲಿಸಿದ್ದರು. ಬೆಂಗಾಲಿಯಲ್ಲಿ 1937ರಲ್ಲಿ ಪ್ರಕಾಶನಗೊಂಡ ಪುಸ್ತಕ ಸ್ವಾಮೀಜಿಯ ದೈನಂದಿನ ಬದುಕು, ಸ್ವಾಮಿ ಸರದಾನಂದರ ಹಾಗು ಜೆ ಗೋಡ್ವಿನ್ ರ ಬದುಕಿನ ಮೇಲಿನ ಪರಿಣಾಮದ ಬಗ್ಗೆ ತಿಳಿದುಕೊಳ್ಳಲು ಸಹಕಾರಿ ಆಗಿದೆ.

ಸ್ವಾಮಿ ವಿವೇಕಾನಂದರನ್ನು ವರ್ಚಸ್ವಿ ಭಾರತೀಯ ಆಧ್ಯಾತ್ಮಿಕ ಗುರು, ಕೋಲ್ಕತ್ತಾದ ರಾಮಕೃಷ್ಣ ಮಿಷನ್ ನ ಸ್ಥಾಪಕ ಹಾಗು ವೇದಾಂತ ತತ್ವದ ಪ್ರಾಥಮಿಕ ವ್ಯಾಖ್ಯಾನಕಾರ ಎಂದು ಆಂಗ್ಲ ಸಂಶೋಧಕರು ಗುರುತಿಸುತ್ತಾರೆ. ಅವರ ಪರ್ಯಟನೆ ಹಾಗು ಉಪನ್ಯಾಸಗಳ ಪ್ರಾಥಮಿಕ ಉದ್ದೇಶ ಆಗಿರದಿದ್ದರೂ, ಬ್ರಿಟನ್ ಹಾಗು ಭಾರತದ ಮಧ್ಯೆ ಆಧ್ಯಾತ್ಮಿಕ ಸಂವಾದ ಸೇತುವೆಯನ್ನು ತೆರೆಯುವುದರಲ್ಲಿ ಮಂಚೂಣಿಯ ಪಾತ್ರ ವಹಿಸಿದರು. ಪರಿಣಾಮವಾಗಿ ಎರಡೂ ದಿಕ್ಕಿನಿಂದ ಶಿಷ್ಯರು ಅನುಯಾಯಿಗಳು ಸೆಳೆಯಲ್ಪಟ್ಟರು, ಧಾರ್ಮಿಕ ಓದು, ಚರ್ಚೆ, ಯಾತ್ರೆಗಳು ಹೆಚ್ಚಿದವು, ಗುರು ಪರಮಹಂಸರ ವಿಚಾರಧಾರೆಗಳು ಪ್ರಚಾರ ಪಡೆದವು. ವಿವೇಕಾನಂದರ ಜೀವನ ಕಾಲದಲ್ಲಿ ಹಲವು ಪ್ರಭಾವಿ ಪಾಶ್ಚಿಮಾತ್ಯ ಬುದ್ಧಿಜೀವಿಗಳು ಸಾಮಾಜಿಕ ಕಾರ್ಯಕರ್ತರು ಭಾರತೀಯ ಆಧ್ಯಾತ್ಮಿಕ ಚಿಂತನೆಯ ಕಡೆಗೆ ಆಕರ್ಷಿತರಾದರು. ಅಗ್ರಗಣ್ಯ ಅನುಯಾಯಿಗಳಲ್ಲಿ ಸಹೋದರಿ ನಿವೇದಿತಾ ಅಲ್ಲದೇ ಅಮೆರಿಕದ ಆ ಕಾಲದ ಹೆಸರಾಂತ ವ್ಯಕ್ತಿಗಳು ಕೂಡ ಇದ್ದರು. ವಿವೇಕಾನಂದರ ಚಿಂತನೆಯಲ್ಲಿ ಜಾತಿ ಶೋಷಣೆಯ ಕಡು ವಿರೋಧ ಗಾಂಧೀಜಿಯವರ ಯೋಚನೆಯ ಮೇಲೂ ಪ್ರಭಾವ ಬೀರಿತ್ತು.

ಮಧ್ಯಮ ವರ್ಗದ ಬಂಗಾಳಿ ಕುಟುಂಬದಲ್ಲಿ ಹುಟ್ಟಿದ ಸ್ವಾಮಿ ವಿವೇಕಾನಂದ ಎಳೆಯ ಪ್ರಾಯದಲ್ಲಿಯೇ ಸಂಪ್ರದಾಯ ವಿರೋಧಿಯಾಗಿದ್ದರು. ಕೋಲ್ಕತ್ತಾದ ಕಾಲೇಜು ದಿನಗಳಲ್ಲಿಯೇ ಆಧ್ಯಾತ್ಮಿಕ ಅನ್ವೇಷಕರಾಗಿದ್ದೂ ಪಾಶ್ಚಾತ್ಯ ತತ್ವಶಾಸ್ತ್ರ, ಯೂರೋಪಿನ ಚರಿತ್ರೆಯನ್ನು ಓದಿದವರು. ಭಾರತ ಸ್ವಾವಲಂಬಿಯಾಗಲು, ಶತಮಾನಗಳ ಸಾಮಾಜಿಕ ನಿಶ್ಚಲತೆಯನ್ನು ಹೋಗಲಾಡಿಸಲು ವೈಜ್ಞಾನಿಕ ಹಾಗು ತಂತ್ರಜ್ಞಾನಗಳ ಆಧುನೀಕರಣ ಅಗತ್ಯ ಎಂದು ನಂಬಿದ್ದವರು. ಆಧುನೀಕರಣದ ವಿಚಾರಧಾರೆ ಮುಂದೆ ಭಾರತೀಯ ಆತ್ಮದ ಸಂಪೂರ್ಣ ಮರುಶೋಧನೆಯನ್ನೂ ಒಳಗೊಂಡಿತು. ವಿದ್ಯಾರ್ಥಿ ದೆಸೆಯಲ್ಲಿ ಕೇಶಬ್ ಚಂದರ್ ಸೇನರ “ಬ್ರಹ್ಮ ಸಮಾಜ”ದ ಕಡೆಗೆ ಒಲವು ತೋರಿಸಿದರೂ, 1881ರ ನಂತರ ಸ್ವಾಮಿ ರಾಮಕೃಷ್ಣ ಪರಮಹಂಸರ ತೀವ್ರ ಪ್ರಭಾವಕ್ಕೆ ಒಳಗಾದರು. 1886ರಲ್ಲಿ ತಮ್ಮ ಗುರುಗಳ ಮರಣಾನಂತರ ಉತ್ತರಾಧಿಕಾರಿಯೆನಿಸಿದರು. 1890ರಲ್ಲಿ ದೇಶದ ಪರಿಚಯ ಮಾಡಿಕೊಳ್ಳಲು ಭಾರತದಾದ್ಯಂತ ತಿರುಗಾಡಿದರು , ವಿವೇಕಾನಂದ ಎನ್ನುವ ಹೆಸರು ಪಡೆದರು. 1893ರ ಜಾಗತಿಕ ಧರ್ಮ ಸಂಸತ್ತಿನಲ್ಲಿ ಸಂಚಲನ ಹುಟ್ಟಿಸಿದ್ದ ಉಪನ್ಯಾಸದ ಮೂಲಕ ಅಮೆರಿಕದಲ್ಲಿಯೂ ಇತರ ದೇಶಗಳಲ್ಲಿಯೂ ಗುರುತು ಮನ್ನಣೆ ಪಡೆದರು. ಈ ಕಾಲದಲ್ಲಿ ಬಳಸಲ್ಪಡುವ “ವಿಶ್ವ ಧರ್ಮ” ಚಿಂತನೆಯಂತೆ , “ದೇವತ್ವ ಒಂದು” ಎನ್ನುವ ವಿವೇಕಾನಂದರ ಕಲ್ಪನೆಯ ಬಗ್ಗೆ ಪಶ್ಚಿಮದವರ ಆಸಕ್ತಿ ಹೆಚ್ಚಿಸಿತ್ತು. 1895-96ರ ಸಮಯದಲ್ಲಿ ಅಮೆರಿಕ ಇಂಗ್ಲೆಂಡ್ ಗಳಲ್ಲಿ ನೀಡಿದ ಭಾಷಣ ಉಪನ್ಯಾಸ ಸರಣಿಗಳು, ವಸಾಹತುಶಾಹಿ ಆ ಕಾಲದಲ್ಲಿ ಆರೋಪಿಸಿದ್ದ ಸಾಮಾಜಿಕ ಹಾಗು ಸಾಂಸ್ಕೃತಿಕ ಗಡಿಗಳನ್ನು ಮೀರಿ ಯೋಚಿಸುವಲ್ಲಿ ಸಹಕಾರಿಯಾಯಿತು. ವಿವೇಕಾನಂದರು ಬ್ರಿಟನ್ ಸೇರಿದಂತೆ ಪಶ್ಚಿಮದ ದೇಶಗಳಿಗೆ “ಆಧುನಿಕ ಹಿಂದೂಯಿಸಂ” ವಕ್ತಾರರಾಗಿದ್ದರು. ಅತ್ಯತ್ತಮ ವಾಗ್ಮಿಯಾಗಿ 1893-95ರ ನಡುವಿನ ಮೊದಮೊದಲ ಪಾಶ್ಚಿಮಾತ್ಯ ಭೇಟಿಗಳಿಂದ ಹಲವು ಹಿಂಬಾಲಕರನ್ನು ಪಡೆದರು. ಹಿಂದೂ ನಂಬಿಕೆಗಳ ಸಾರವನ್ನು ವೇದಾಂತ ಆಧ್ಯಾತ್ಮಿಕ ಶಾಲೆಯ ಪ್ರಚಾರಕ್ಕೆ ತಂದರು. ಗುರು ರಾಮಕೃಷ್ಣರ ಹಾಗು ಯುವ ಸನ್ಯಾಸಿ ವಿವೇಕಾನಂದರ ಬೋಧನೆಯ ಸಾರದ ಮೂಲಕ ಬೆಳೆದ, ಜನಪ್ರಿಯಗೊಂಡ ವೇದಾಂತ ತತ್ವವನ್ನು ಪ್ರಚಾರ ಮಾಡುವ 21 ಕೇಂದ್ರಗಳು ಆಮೆರಿಕದಲ್ಲಿ, ಇನ್ನೂ 125 ಜಗತ್ತಿನ ಬೇರೆಬೇರೆ ಭಾಗಗಳಲ್ಲಿ ಇವೆ. ಇವು, ಆಧ್ಯಾತ್ಮಿಕ ಅಭ್ಯಾಸಗಳನ್ನು ನಿತ್ಯದ ಸಮಸ್ಯೆಗಳಿಗೆ ಬಳಸಿಕೊಳ್ಳುವ, ಸಾಮಾಜಿಕ ಕ್ರಿಯಾಶೀಲತೆಯ ಮಹತ್ವವನ್ನು ಸಾರುವ ವಿವೇಕಾನಂದರ ಚಿಂತನೆಗಳ ಕೂಸಾಗಿ ಈಗಲೂ ಉಳಿದಿವೆ.

1899ರಲ್ಲಿ ಅಮೇರಿಕ ಪ್ರವಾಸ ಕೈಗೊಳ್ಳುವಾಗ ಕೊನೆಯ ಬಾರಿ ಲಂಡನ್ ಗೆ ಭೇಟಿ ನೀಡಿದರು, 1900ರ ಯೂರೋಪ್ ಯಾತ್ರೆ ಅವರ ಕೊನೆಯ ಪಶ್ಚಿಮದ ಯಾತ್ರೆಯಾಗಿತ್ತು. ವಿವೇಕಾನಂದರು 1895ರಲ್ಲಿ ವಾಸವಾಗಿದ್ದ, ಬೋಧನೆ ನಡೆಸುತ್ತಿದ್ದ, ಬೋಧನೆಯನ್ನು ಕೇಳಿ ಮಾರ್ಗರೆಟ್, ಸಹೋದರಿ ನಿವೇದಿತಾ ಆಗಿ ಬದಲಾಗಲು ಮೂಲ ಕಾರಣವಾದ ಲಂಡನ್ ನ ಕೇಂದ್ರದಲ್ಲಿರುವ ಸಂತ ಜಾರ್ಜ್ ರಸ್ತೆಯ 63 ನಂಬ್ರದ ಮನೆಯಲ್ಲಿ ನೆನಪಿನ ನೀಲಿ ಫಲಕವನ್ನು ನೆಡಲಾಯಿತು.