ಪತ್ರಿಕೆಯೊಂದರಲ್ಲಿ ಕೆಲಸ ಮಾಡುವಾಗ, ಸಾಹಿತ್ಯಾಸಕ್ತಿ ಹೊಂದಿರುವ ವ್ಯಕ್ತಿಗೆ, ತಾನು ಬರೆದ ಸೃಜನಶೀಲ ಬರಹಗಳನ್ನು ಇತರ ಪತ್ರಿಕೆಗಳಿಗೆ ಕಳುಹಿಸಿ, ಪ್ರಕಟಿಸುವ, ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಸಾಮಾನ್ಯವಾಗಿ ಇರುವುದಿಲ್ಲ. ಕೆಲಸ ಮಾಡುತ್ತಿರುವ ಪತ್ರಿಕೆಗಳಲ್ಲಿಯೂ ಅವಕಾಶಗಳು ಬಹಳ ಸೀಮಿತ. ಡಿಜಿಟಲ್ ಲೋಕದತ್ತ ದಾಪುಗಾಲಿಡುತ್ತಿರುವ ಮಾಧ್ಯಮ ಕ್ಷೇತ್ರವು, ಈ ಕುರಿತ ನಿಯಮಗಳನ್ನು ಬದಲಾಯಿಸುವುದಿಲ್ಲವೇ..
ಕೋಡಿಬೆಟ್ಟು ರಾಜಲಕ್ಷ್ಮಿ  ಬರಹ ಇಲ್ಲಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತೀಕವೆಂಬಂತೆ ನಿಲ್ಲುವ ವೃತ್ತ ಪತ್ರಿಕೆಗಳು, ತಮ್ಮ ಸಂಪಾದಕೀಯ ಬಳಗದಲ್ಲಿರುವ ಬರಹಗಾರರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎಷ್ಟು ಮಹತ್ವ ಕೊಡುತ್ತವೆ ಎನ್ನುವ ಪ್ರಶ್ನೆ ಹಳೆಯದಾದರೂ, ಬಗೆಹರಿಯದ್ದು. ಕಥೆ, ಕವನ, ಪ್ರಬಂಧ ಮುಂತಾದ ಸೃಜನಶೀಲ ಬರವಣಿಗೆಗಳಿಗೆ ಪೂರ್ಣವಿರಾಮ ಹಾಕಿಯೇ ಪತ್ರಿಕೋದ್ಯಮವನ್ನು ಪ್ರವೇಶಿಸುವುದು ಅನಿವಾರ್ಯ ಎಂಬ ಪರಿಸ್ಥಿತಿ ಇನ್ನೂ ಹಾಗೆಯೇ ಇದೆ. ಅಷ್ಟರಮಟ್ಟಿಗೆ ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಂಡಂತೆ.

ಉತ್ತಮ ಸಾಹಿತ್ಯ ಕೃತಿಗಳನ್ನು ತರಬಲ್ಲ ಉದಯೋನ್ಮುಖ ಪ್ರತಿಭೆಗಳು ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡದ್ದರಿಂದ ಸಾಹಿತ್ಯ ಕ್ಷೇತ್ರಕ್ಕೆ ನಷ್ಟವಾಯಿತು ಎಂಬರ್ಥದಲ್ಲಿ ಅನೇಕ ಚರ್ಚೆಗಳನ್ನು ಕೇಳಿದ್ದೇವೆ. ಇತ್ತ ಮಾಧ್ಯಮ ಕ್ಷೇತ್ರದಲ್ಲಿ ಎಷ್ಟೆಲ್ಲ ಬದಲಾವಣೆಗಳಾದರೂ, ಸೃಜನಶೀಲ ಬರಹಗಳಿಗೆ ಮುಕ್ತವಾದ ಅವಕಾಶಗಳನ್ನು ಒದಗಿಸುವ ವಿಚಾರದಲ್ಲಿ ಅವು ಬದಲಾವಣೆಗೆ ತೆರೆದುಕೊಳ್ಳುವುದು ಸಾಧ್ಯವಾಗಿಲ್ಲ. ಇದೇಕೆ ಹೀಗೇ.. ಪತ್ರಿಕೆಗಳು ಬದಲಾವಣೆಗೆ ತೆರೆದುಕೊಳ್ಳಬಾರದೇಕೆ ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯಬೇಕಾಗಿದೆ ಅನಿಸುತ್ತದೆ.

ಸಾಹಿತ್ಯ ಕ್ಷೇತ್ರಕ್ಕೆ ಪತ್ರಿಕೆಗಳ ಕೊಡುಗೆ ಅಪಾರವಾದುದು ಎಂಬುದರಲ್ಲಿ ಎರಡು ಮಾತಿಲ್ಲ. ಪುರವಣಿಗಳು, ಸ್ಪರ್ಧೆಗಳು, ಬರಹಗಾರರಲ್ಲಿ ಆತ್ಮವಿಶ್ವಾಸವನ್ನು ತುಂಬುವಲ್ಲಿ, ಉದಯೋನ್ಮುಖರು ಸದಾ ಪ್ರಯತ್ನಶೀಲರಾಗುವಂತೆ ಮಾಡುವಲ್ಲಿ ಅವು ಪ್ರಮುಖ ಪಾತ್ರ ವಹಿಸಿವೆ. ಆದರೆ ಪತ್ರಿಕೆಯೊಂದರಲ್ಲಿ ಕೆಲಸ ಮಾಡುವಾಗ, ಸಾಹಿತ್ಯಾಸಕ್ತಿ ಹೊಂದಿರುವ ವ್ಯಕ್ತಿಗೆ, ತಾನು ಬರೆದ ಸೃಜನಶೀಲ ಬರಹಗಳನ್ನು ಇತರ ಪತ್ರಿಕೆಗಳಿಗೆ ಕಳುಹಿಸಿ, ಪ್ರಕಟಿಸುವ, ಕಥೆ, ಕವನ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಸಾಮಾನ್ಯವಾಗಿ ಇರುವುದಿಲ್ಲ. ಅಪವಾದಗಳಿರಬಹುದು. ತಾವು ಕೆಲಸ ಮಾಡುತ್ತಿರುವ ಪತ್ರಿಕೆಯಲ್ಲಿಯೂ, ಅಂತಹ ಬರಹಗಳನ್ನು ಪ್ರಕಟಿಸುವುದಕ್ಕೆ ಅವಕಾಶವಿರುವುದಿಲ್ಲ. ಹಾಗಾಗಿ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಲು, ಪ್ರಯತ್ನಶೀಲರಾಗಲು ಇರುವ ಲಭ್ಯ ವೇದಿಕೆಗಳಿಂದ ಅವರು ವಂಚಿತರಾಗಿರುತ್ತಾರೆ.

ಪತ್ರಿಕೆಯೊಳಗಿನ ಕೆಲಸಗಳು, ಸೃಜನಶೀಲ ಬರಹದ ಹಾದಿಗೆ ತೊಡಕಾಗುವುದು ನಿಜವೆಂದು ಅನೇಕರು ಒಪ್ಪಿಕೊಳ್ಳುತ್ತಾರೆ. ‘ಪತ್ರಿಕೆಯ ಕೆಲಸಕ್ಕೆ ಸೇರಿದ ನಂತರ ಕಥೆ, ಕವನಗಳ ಉಸಾಬರಿಯನ್ನೇ ಕೈಬಿಟ್ಟ ಅನೇಕರನ್ನು ನೋಡಿದ್ದೇನೆ. ಅವಕಾಶ ಮತ್ತು ಪ್ರೋತ್ಸಾಹಗಳ ಕೊರತೆ ಒಂದು ಕಾರಣವಷ್ಟೇ ಇರಬಹುದು’ ಎಂಬುದನ್ನು ಪತ್ರಕರ್ತೆಯಾಗಿ ಕೆಲಸ ಮಾಡಿರುವ ಹಿರಿಯ ಲೇಖಕಿ ಆರ್. ಪೂರ್ಣಿಮಾ ಹೇಳುತ್ತಾರೆ.

ಆದರೆ ಹೀಗೆ ಸೃಜನಶೀಲ ಬರವಣಿಗೆಯನ್ನು ಪ್ರತಿಬಂಧಿಸುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಒಪ್ಪುವ ಲೇಖಕ ಕನ್ನಡಪ್ರಭ ಪುರವಣಿಯ ಪ್ರಧಾನ ಸಂಪಾದಕ ಜೋಗಿ ಅವರು, ‘ಈ ನಿಯಮಗಳನ್ನು ದಾಟಿ ಮುಕ್ತವಾಗಿದ್ದ ಸಂಪಾದಕರ ಜೊತೆಯೂ ನಾನು ಕೆಲಸ ಮಾಡಿದ್ದೇನೆ. ವಿಶ್ವೇಶ್ವರ ಭಟ್ ಅವರು ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದಾಗ, ನಾನು ಬೇರೆ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ವಿಜಯಕರ್ನಾಟಕ ಪತ್ರಿಕೆಯಲ್ಲಿ ಅಂಕಣವೊಂದನ್ನು ಬರೆಯುವ ಅವಕಾಶ ದೊರೆತಿತ್ತು. ವಿಶ್ವೇಶ್ವರ ಭಟ್ ಅವರು ತಮ್ಮ ಸಂಪಾದಕೀಯ ಬಳಗದಲ್ಲಿದ್ದ ಅನೇಕರಿಗೆ ಸೃಜನಶೀಲ ಬರವಣಿಗೆಯನ್ನು ಮುಕ್ತವಾಗಿ ಮುಂದುವರೆಸುವ ಅವಕಾಶಗಳನ್ನು ಕಲ್ಪಿಸಿದ್ದು ನೆನಪಿದೆ. ಕನ್ನಡಪ್ರಭ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ, ‘ಹಾಯ್ ಬೆಂಗಳೂರು’ ಪತ್ರಿಕೆಗೆ ‘ಜಾನಕಿ ಕಾಲಂ’ ಬರೆಯುವ ಅವಕಾಶವೂ ನನಗೆ ದೊರೆತಿತ್ತು’ ಎಂದು ಹೇಳುತ್ತಾರೆ.

ತಾನು ಕೆಲಸ ಮಾಡುವ ಪತ್ರಿಕೆಯಲ್ಲಿ ಸೃಜನಶೀಲ ಬರಹಗಳನ್ನು ಪ್ರಕಟ ಮಾಡುವ ಅವಕಾಶವಿಲ್ಲದೇ ಇದ್ದಾಗ, ಇತರ ಪತ್ರಿಕೆಗಳಿಗೆ ಬರಹಗಳನ್ನು ಬರೆಯುವುದರಲ್ಲಿ ತಪ್ಪೇನು ಎಂದು ಪತ್ರಕರ್ತರೊಬ್ಬರು ಪ್ರಶ್ನಿಸುತ್ತ, ‘ಕತೆ, ಕವನಗಳನ್ನು ಇತರ ಪತ್ರಿಕೆಗೆ ಕಳುಹಿಸಿದರೆ ತಪ್ಪೇನೂ ಇಲ್ಲ. ಪ್ರಸ್ತುತ ವೃತ್ತ ಪತ್ರಿಕೆಗಳ ಸಂಪಾದಕೀಯ ಬಳಗಕ್ಕಷ್ಟೇ ಈ ನಿಷೇಧಾಜ್ಞೆ ಇದೆ. ಜಾಹೀರಾತು, ಪ್ರಸರಣ ವಿಭಾಗದಲ್ಲಿ ಇರುವವರಿಗೆ ಇಂತಹ ನಿಷೇಧಾಜ್ಞೆಗಳು ಇಲ್ಲವಲ್ಲ. ಅಲ್ಲದೆ ಪತ್ರಕರ್ತರು ತಾವು ಬರೆದ ಕತೆ, ಕವನ ಪ್ರಬಂಧವನ್ನು ಮೊದಲು ತಾವು ಕೆಲಸ ಮಾಡುತ್ತಿರುವ ಪತ್ರಿಕೆಯಲ್ಲಿಯೇ ಪ್ರಕಟಿಸಲು ಅವಕಾಶವಿದೆಯೇ ಎಂಬುದನ್ನೂ ಗಮನಿಸಬೇಕು. ಅಂತಹ ಬರವಣಿಗೆ ವೃತ್ತಿ ನಿರ್ವಹಿಸುತ್ತಿರುವ ಪತ್ರಿಕೆಯ ಕೆಲಸಕ್ಕೆ ಧಕ್ಕೆ ಉಂಟು ಮಾಡದಂತೆ ಪತ್ರಕರ್ತರಾದವರು ಪ್ರಾಮಾಣಿಕವಾಗಿ ಗಮನಿಸಿಕೊಳ್ಳಬೇಕು. ಆ ಮಟ್ಟಿಗಿನ ನೈತಿಕತೆ ಇದ್ದಾಗ, ಅದರಿಂದ ಪತ್ರಿಕೆಗೂ ತೊಡಕಾಗದು. ಲೇಖಕನಿಗೂ ತೊಡಕಾಗದು’ ಎಂದು ಹೇಳುತ್ತಾರೆ.

ಸೃಜನಶೀಲ ಬರಹಗಳಿಗೆ ಮುಕ್ತವಾದ ಅವಕಾಶಗಳನ್ನು ಒದಗಿಸುವ ವಿಚಾರದಲ್ಲಿ ಅವು ಬದಲಾವಣೆಗೆ ತೆರೆದುಕೊಳ್ಳುವುದು ಸಾಧ್ಯವಾಗಿಲ್ಲ. ಇದೇಕೆ ಹೀಗೇ.. ಪತ್ರಿಕೆಗಳು ಬದಲಾವಣೆಗೆ ತೆರೆದುಕೊಳ್ಳಬಾರದೇಕೆ ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯಬೇಕಾಗಿದೆ ಅನಿಸುತ್ತದೆ.

ಸಂಸ್ಥೆಯೊಳಗೆ ಕೆಲಸ ಮಾಡುವ ವ್ಯಕ್ತಿಯೊಬ್ಬ ಕ್ರೀಡಾಚಟುವಟಿಕೆಯೊಂದರಲ್ಲಿ ಭಾಗವಹಿಸಿ, ಪದಕಗಳನ್ನು ಗೆದ್ದಾಗ ಪತ್ರಿಕಾ ಕಚೇರಿಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ಸಿಹಿ ಹಂಚಿ, ಚಹಾ ಕುಡಿಯುವ ಖುಷಿ ಇರುತ್ತದೆ. ಆದರೆ ಕಥಾ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ಬಹುಮಾನ ಗೆದ್ದುಕೊಂಡರೆ, ಈ ವಿಷಯ ಗೊತ್ತಾಗದಿರಲಪ್ಪಾ.. ಎಂದು ಆ ಪತ್ರಕರ್ತರು ಆತಂಕದಲ್ಲಿ ಇರುತ್ತಾರೆ.

ಈ ನಡುವೆ ಜೋಗಿ ಅವರು ಇನ್ನೊಂದು ಮಾತನ್ನು ಹೇಳುತ್ತಾರೆ. ‘ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂದರೆ, ಪ್ರಶಸ್ತಿಯೊಂದನ್ನು ಪ್ರಕಟಿಸುವಾಗಲೂ, ಸಂಸ್ಥೆಗಳು, ಸಂಘಟನೆಗಳಲ್ಲಿ ಎಷ್ಟೋ ಮಂದಿ ತೀರ್ಪುಗಾರರು ಅಥವಾ ಸಂಘಟಕರು ಸಾಹಿತಿಯು ಪತ್ರಕರ್ತನೇ ಎಂಬುದನ್ನು ಗಮನಿಸುತ್ತಾರೆ. ಪತ್ರಿಕೆಯಲ್ಲಿರುವ ಒಬ್ಬರು ಲೇಖಕರಿಗೆ ಅದಾಗಲೇ ಒಂದು ಪ್ರಶಸ್ತಿ ನೀಡಿಯಾಗಿದೆ. ಮತ್ತೊಂದು ಪತ್ರಿಕೆಯಲ್ಲಿ ಇರುವವರಿಗೆ ಪ್ರಶಸ್ತಿ ಬೇಡ.. ಎನ್ನುತ್ತ ಕೃತಿಯನ್ನು ಪಕ್ಕಕ್ಕಿಡುತ್ತಾರೆ. ಕೃತಿಯ ಅರ್ಹತೆಯೇ ಪಕ್ಕಕ್ಕೆ ಸರಿದು ನಿಲ್ಲುತ್ತದೆ. ಅಲ್ಲದೆ ಒಂದು ಪತ್ರಿಕೆಯಲ್ಲಿರುವ ಸಾಹಿತಿಗೆ ಪ್ರಶಸ್ತಿ ಕೊಟ್ಟರೆ ಅದಕ್ಕೆ ಸಂಬಂಧಿಸಿದ ಸುದ್ದಿಯನ್ನುಇನ್ನೊಂದು ಪತ್ರಿಕೆ ಪ್ರಕಟಿಸುವುದಿಲ್ಲ ಎಂಬ ಕಾರಣಕ್ಕೆ ಅಂತಹ ಸಾಹಿತಿಗಳ ಹೆಸರನ್ನೇ ಪಕ್ಕಕ್ಕೆ ಇಡುವ ಉದಾಹರಣೆಗಳೂ ಉಂಟು. ಪತ್ರಿಕೆಗಳ ನಡುವೆ ಇರುವ ಮಡಿವಂತಿಕೆಗಳೇ, ಸಂಘಟಕರ ನಡೆಗೆ ಕಾರಣವಾಗಿರುತ್ತದೆ’ ಎಂದು ಜೋಗಿ ವಿಶ್ಲೇಷಿಸುತ್ತಾರೆ.

‘ಈ ಕ್ಷೇತ್ರವನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ?’ ಎಂಬೊಂದು ಪ್ರಶ್ನೆಗೆ ಹೆಚ್ಚಿನ ಪತ್ರಕರ್ತರು ನೀಡುವ ಸಾಮಾನ್ಯ ಉತ್ತರ ಹೀಗಿರುತ್ತದೆ: ‘ಕಾಲೇಜು ಮ್ಯಾಗಸೀನ್ ಗೆ, ಕಥೆ ಕವನ, ಲೇಖನಗಳನ್ನು ಬರೆಯುತ್ತಿದ್ದೆ. ಬರವಣಿಗೆ ನನಗೆ ಇಷ್ಟ. ಹಾಗಾಗಿ ಪತ್ರಿಕೋದ್ಯಮವೇ ನನಗೆ ಸೂಕ್ತವೆನಿಸಿತು…’ ಆದರೆ ಪತ್ರಿಕೋದ್ಯಮವನ್ನು ಪ್ರವೇಶಿಸಿದ ಮೇಲೆ ಈ ಕಥೆ ಕವನಗಳಿಗೆ ಸಂಬಂಧಿಸಿದ ಆಸಕ್ತಿಯು ನೀರುಗೊಬ್ಬರವಿಲ್ಲದ ಬಳ್ಳಿಯಂತಾಗಿಬಿಡುವುದುಂಟು. ಎಲ್ಲ ಬರಹಗಾರರಿಗೂ ತಮ್ಮ ಸೃಜನಶೀಲ ಬರಹಗಳನ್ನು ಪುಸ್ತಕಗಳ ರೂಪದಲ್ಲಿ ಪ್ರಕಟಿಸುವ ಅವಕಾಶಗಳಿರುವುದಿಲ್ಲವಲ್ಲ.

(ಜೋಗಿ)

ಸೃಜನಶೀಲ ಬರಹವನ್ನು ಬೇರೊಂದು ಪತ್ರಿಕೆಗೆ ಕಳುಹಿಸುವ ಅವಕಾಶ ಹಾಗಿರಲಿ, ಸಾಹಿತ್ಯದ ನಿಯತಕಾಲಿಕೆಗಳಿಗೆ ಕತೆ ಕವನಗಳನ್ನು ಕಳುಹಿಸುವ, ಸ್ಪರ್ಧೆಯಲ್ಲಿ ಭಾಗವಹಿಸುವ, ಕನಿಷ್ಠ ಉಪನ್ಯಾಸಗಳನ್ನು ನೀಡುವ ಅವಕಾಶಗಳನ್ನೂ ಪೂರ್ಣವಾಗಿ ನಿರಾಕರಿಸಲಾಗುತ್ತದೆ. ಬೆಂಗಳೂರಿನಲ್ಲಿ ಪತ್ರಕರ್ತೆಯೊಬ್ಬರು ಸಾಹಿತ್ಯ ಕುರಿತಾದ ಸಭೆಯಲ್ಲಿ ಉಪನ್ಯಾಸ ಮಾಡಲು ತೆರಳಿದ್ದರು. ಉಪನ್ಯಾಸ ಮುಗಿಸಿ ಸಂಜೆ ಕಚೇರಿಗೆ ಬರುವಾಗ, ಅವರಿಗೆ ಇನ್ನು ಮುಂದೆ ಇಂತಹ ಭಾಷಣಗಳಿಗೆ ತೆರಳದಂತೆ ಕಡಕ್ ಸೂಚನೆ ನೀಡಲಾಗಿತ್ತು. ಇನ್ನೊಬ್ಬರು ಹಿರಿಯ ಪತ್ರಕರ್ತೆ ಮಾತನಾಡುತ್ತ, ‘ದೃಶ್ಯಮಾಧ್ಯಮದಲ್ಲಿ ನಾನು ಸಂದರ್ಶನಗಳನ್ನು ಮಾಡುತ್ತಿದ್ದೆ. ಅದು ಬಹಳ ಜನಪ್ರಿಯವೂ ಆಗಿತ್ತು. ಕಚೇರಿಯಲ್ಲಿ ಮುಖ್ಯಸ್ಥರಿಗೆ ಗೊತ್ತಾದ ಕೂಡಲೇ, ಸಂದರ್ಶನ ಮಾಡುವುದನ್ನು ನಿಲ್ಲಿಸಿಬಿಡಿ ಎಂದು ಸೂಚನೆ ನೀಡಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ.

ಇತರ ಪತ್ರಿಕೆಗಳಿಗೆ ಬರಹಗಳನ್ನು ನೀಡದೇ, ಕೆಲಸ ಮಾಡುತ್ತಿರುವ ಪತ್ರಿಕೆಗೆ ನಿಷ್ಟೆಯಿಂದ ಇದ್ದ ಪತ್ರಕರ್ತರೊಬ್ಬರು, ಒಂದು ಕಾದಂಬರಿಯನ್ನು ಬರೆದರು. ಅದನ್ನು ಅಚ್ಚು ಹಾಕಿಸಿ, ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಿದ್ದರು. ಹಿರಿಯ ಸಾಹಿತಿಯೊಬ್ಬರನ್ನು ಪುಸ್ತಕ ಬಿಡುಗಡೆಗೆ ಆಹ್ವಾನಿಸಿ, ಸುಂದರ ಸಮಾರಂಭ ನಡೆಯಿತು. ಆದರೆ ಮರುದಿನ, ಯಾವುದೇ ಪತ್ರಿಕೆಯಲ್ಲಿ ಅದರ ಸುದ್ದಿ ಪ್ರಕಟವಾಗಲಿಲ್ಲ. ತಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುವ ಉದ್ಯೋಗಿಯ ಸುದ್ದಿ ಹಾಕುವುದಿಲ್ಲ ಎಂಬ ನಿಯಮವನ್ನು ಅವರು ಕೆಲಸ ಮಾಡುತ್ತಿರುವ ಪತ್ರಿಕೆ ಅನುಸರಿಸಿದರೆ, ‘ಮತ್ತೊಂದು ಪತ್ರಿಕೆಯ ಸಿಬ್ಬಂದಿಗೆ ಸಂಬಂಧಿಸಿದ ಸುದ್ದಿ ನಾವೇಕೆ ಪ್ರಕಟಿಸಬೇಕು’ ಎಂಬ ಧೋರಣೆ ಇತರ ಪತ್ರಿಕೆಗಳದ್ದಾಗಿತ್ತು.

ಮರುದಿನ ಪತ್ರಕರ್ತ ಸಾಹಿತಿಗೆ ಫೋನ್ ಮಾಡಿದ ಆ ಹಿರಿಯ ಸಾಹಿತಿಗಳು, ’ನಿಮ್ಮ ಕಾರ್ಯಕ್ರಮಕ್ಕೆ 250ಕ್ಕೂ ಹೆಚ್ಚು ಜನರು ಬಂದಿದ್ದು ನೋಡಿ ಸಂತೋಷವಾಯಿತು. ಆದರೆ ಪತ್ರಿಕೆಗಳ ನಡುವಿನ ಜಟಾಪಟಿಯಲ್ಲಿ ನನ್ನ ಭಾಷಣದ ಒಂದು ತುಣುಕೂ ಪ್ರಕಟವಾಗಲಿಲ್ಲವಲ್ಲ’ ಎಂದು ನಕ್ಕರು. ಸಂಘಟಕರು ಒಂದು ನಿರ್ಣಯ ಮಾಡಿದ್ದರು, ‘ಏನೇ ಆಗಲಿ, ಪತ್ರಕರ್ತ ಸಾಹಿತಿಗಳ ಪುಸ್ತಕ ಬಿಡುಗಡೆ ಸಮಾರಂಭ ಇಟ್ಟುಕೊಳ್ಳಬಾರದು. ಪ್ರಚಾರವೇ ಇಲ್ಲವೆಂದ ಮೇಲೆ, ಮುಂದಿನ ಕಾರ್ಯಕ್ರಮ ಆಯೋಜಿಸುವುದಾದರೂ ಹೇಗೇ?’ .

ಸಾಹಿತ್ಯದ ಹಿನ್ನೆಲೆ ಇರುವ, ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡವರನ್ನು ಪತ್ರಿಕಾವಲಯದಲ್ಲಿಯೂ ‘ಪತ್ರಕರ್ತ’ ಎಂಬ ಪೂರ್ಣತೆಯೊಂದಿಗೆ ಗುರುತಿಸುವುದಿಲ್ಲ. ಇತ್ತ ಸಾಹಿತ್ಯ ವಲಯದಲ್ಲಿಯೂ ಅವರನ್ನು ‘ಸಾಹಿತಿ’ ಎಂದೂ ಪೂರ್ಣವಾಗಿ ಗುರುತಿಸುವುದಿಲ್ಲ ಎಂಬುದು ವಾಸ್ತವ.

ಇದು ಪತ್ರಿಕೆಗಳಿಗೆ ಸಂಬಂಧಿಸಿದ ವಿಚಾರವಾದ್ದರಿಂದ ಕನ್ನಡ ಸಾಹಿತ್ಯ ಕ್ಷೇತ್ರವೂ ಈ ಕುರಿತು ನಿರ್ಣಯಾತ್ಮಕ ಚರ್ಚೆಗೆ ಹೋಗಿಲ್ಲವೆನಿಸುತ್ತದೆ. ಮುಕ್ತ ಅಭಿಪ್ರಾಯಗಳಿಗೆ ಇಲ್ಲಿ ಸ್ವಾಗತವಿದೆ.