ಹೀಗೆ ಕಾಯುತ್ತಿದ್ದ ಮೂರನೆ ದಿನ ನಮ್ಮ ದೋಣಿ ತಳ ಮುರಿದು ಮುಳುಗತೊಡಗಿತು. ನಾವು ಅಷ್ಟರೊಳಗೆ ಅಪಾಯದ ಗಂಟೆ ಮೊಳಗಿಸಿ ಸಮುದ್ರಕ್ಕೆ ಹಾರಿಕೊಂಡೆವು. ನಮ್ಮ ಕರೆಯನ್ನು ಕೇಳಿದ ಮಿಲಿಟರಿ ದೋಣಿಯೊಂದು ಬಂದು ನಮ್ಮಲ್ಲಿ ಸಾಧ್ಯವಾದವರನ್ನೆಲ್ಲ ರಕ್ಷಿಸಿತು. ಹೊರಬಂದು ಎಣಿಸಿಕೊಂಡು ನೋಡಿದಾಗ ಹನ್ನೆರಡು ಜನ ಮುಳುಗಿಹೋಗಿದ್ದಾರೆ ಅಂತ ತಿಳಿಯಿತು. ನಮ್ಮ ಹಾಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಬರುವ ಜನರಲ್ಲಿ ಒಂದು ಪಾಲನ್ನು ತನ್ನ ಬಲಿಯಾಗಿ ಪಡೆದುಕೊಳ್ಳುವ ಕ್ರಿಶ್ಚಿಯನ್ ದ್ವೀಪದ ಸಮುದ್ರದಂಡೆ ಒಂದು ದ್ರವರೂಪದ ಸ್ಮಶಾನ!” ಅಂತ ಹೇಳಿ ಒಮ್ಮೆ ಉಸಿರೆಳೆದುಕೊಂಡ. ಮತ್ತೆ ಅದೇ ಕುಗ್ಗಿ ಹೋದ ಕಣ್ಣುಗಳಿಂದ ನಿರ್ಲಿಪ್ತ ನೋಟವನ್ನು ನನ್ನೆಡೆಗೆ ಬೀರಿದ.
ಶ್ರೀಹರ್ಷ ಸಾಲೀಮಠ ಬರೆದ ಈ ವಾರದ ಕತೆ ನಿಮ್ಮ ಓದಿಗೆ

 

ಕಂಪನಿ ಲಾಕೌಟ್ ಆಗಲಿದೆ ಅಂತ ಪದೇ ಪದೇ ಸುದ್ದಿಗಳು ಕೇಳಿಬರುತ್ತಿದ್ದವು. ಅದಾಗಲೇ ಕೆಲವರು ಹೊಸ ಕೆಲಸವನ್ನು ಹುಡುಕಲು ಮೊದಲು ಮಾಡಿದ್ದರೆ ಇನ್ನು ಕೆಲವರು ತಮಗೆ ಸಿಗಬಹುದಾದ ಪರಿಹಾರ ಮೊತ್ತವನ್ನು ಲೆಕ್ಕ ಹಾಕುತ್ತಿದ್ದರು. ನನಗೆ ಹಿಂದೆ ಇಂತಹ ಅಭದ್ರತೆ ಕಾಡಿರಲಿಲ್ಲ. ಹತ್ತು ವರ್ಷಗಳಿಂದ ಒಂದೇ ಕಂಪನಿಯಲ್ಲಿ ದುಡಿದು ಇಲ್ಲಿಯವರೆಗೆ ನಿರಾತಂಕವಾಗಿ ಯವ್ವನವನ್ನು ಕಳೆದಿದ್ದ ನನಗೆ ಒಮ್ಮಿಂದೊಮ್ಮೆಲೆ ಕಂಪನಿಯ ಲಾಕೌಟ್ ಸುದ್ದಿ ಅಲ್ಲಾಡಿಸಿಬಿಟ್ಟಿತ್ತು.

ಪ್ರತಿದಿನ ಭವಿಷ್ಯದ ಚಿಂತೆ ಕಾಡುತ್ತಿತ್ತು. ಇದ್ದಕ್ಕಿದ್ದಂತೆ ಬೆಳಕು ಕೊನೆಗೊಂಡು ಕತ್ತಲು ಕವಿದಂತೆ ಭಾಸವಾಗುತ್ತಿತ್ತು. ಪ್ರತಿದಿನ ಮಲಗುವ ಮುಂಚೆ ಡಿವಿಜಿಯ “ಬದುಕು ಜಟಕಾ ಬಂಡಿ” ಕಗ್ಗವನ್ನು ಹೇಳಿಕೊಳ್ಳುತ್ತಾ “ಪದಕುಸಿಯೆ ನೆಲವಿಹುದು ಮಂಕುತಿಮ್ಮ” ಎಂಬುದನ್ನು ಪದೇ ಪದೇ ಹೇಳಿಕೊಳ್ಳುತ್ತಿದ್ದೆ. ಆ “ನೆಲ” ಯಾವುದು ಎಂಬುದರ ಬಗ್ಗೆ ಸ್ಪಷ್ಟತೆಯಿರಲಿಲ್ಲ. ಈಗ ಮಾಡಿರುವ ಉಳಿತಾಯ ಆರು ತಿಂಗಳಿಗೆ ಸಾಕು. ಅದರಲ್ಲಿ ತಿಂಗಳ ಮನೆ ಸಾಲ, ಕಾರು ಸಾಲ, ಎರಡನೆಯ ಮನೆ ಸಾಲ, ಟೂರಿಗಂತ ಕೊಂಡಿದ್ದ ಪರ್ಸನಲ್ ಲೋನುಗಳು ಇವೆಲ್ಲವನ್ನು ನಿಭಾಯಿಸಬೇಕು. ಒಂದೆರಡು ತಿಂಗಳು ಕೆಲಸ ಸಿಗುವವರೆಗೆ ಈ ಸಾಲಗಳನ್ನು ಮುಂದೂಡಲು ಅರ್ಜಿ ಹಾಕಿಕೊಳ್ಳಬಹುದು. ನಿರುದ್ಯೋಗಿ ಭತ್ಯೆಗೆ ಅರ್ಜಿ ಹಾಕಬಹುದು. ಮಕ್ಕಳನ್ನು ಸಾಕಲು ಸರಕಾರ ಕೊಡುವ ದುಡ್ಡು ಒಂದಷ್ಟು ಹೆಚ್ಚಾಗಬಹುದು. ಎಲ್ಲಾ ಲೆಕ್ಕ ಹಾಕಿದರೂ ಕೈಯಲ್ಲಿ ಕೆಲಸವಿಲ್ಲದೆ ಎಷ್ಟು ದಿನ ಬದುಕಬಹುದು ಎಂಬುದರ ಲೆಕ್ಕದಲ್ಲೇ ಪ್ರತಿ ರಾತ್ರಿಗಳು ಅರ್ಧಕ್ಕರ್ಧ ಸರಿದು ಹೋಗುತ್ತಿದ್ದವು. ಇಷ್ಟರ ನಡುವೆ ಹೊಸದೊಂದು ಇಷ್ಟೇ ಸಂಬಳ ತರುವ ಇಷ್ಟೇ ಭದ್ರತೆ ಕೊಡುವ ಕೆಲಸವೊಂದು ಗಿಟ್ಟಿಬಿಟ್ಟರೆ “ನೆಲ” ಮತ್ತು ನೆಲೆ ಎರಡೂ ಸಿಕ್ಕಂತಾಗುತ್ತದೆ ಎನಿಸುತ್ತಿತ್ತು.

ಈ ಮಧ್ಯೆ ನಮ್ಮ ಕಂಪನಿ ವಹಿಸಿದ ಅದಾವುದೋ ಚಿಕ್ಕ ಅಸೈನ್ ಮೆಂಟ್ ಮೇಲೆ ಕ್ರಿಸ್ಮಸ್ ಐಲ್ಯಾಂಡಿಗೆ ಹೋಗಬೇಕಾಗಿ ಬಂತು. ಕ್ರಿಸ್ಮಸ್ ಐಲ್ಯಾಂಡ್ ಇಡೀ ಪ್ರಕೃತಿಯೇ ಹಂಬಲಿಸಿ ತನ್ನ ಎಲ್ಲಾ ಚೆಲುವನ್ನು ಒಂದೆಡೆ ಕಲೆಹಾಕಿ ತಾನೇ ಮರುಳಾಗಿ ನೋಡುತ್ತಾ ಕುಳಿತಿರುವಂತಿರುವ ಹಚ್ಚಹಸಿರು ನಡುಗಡ್ಡೆ. ನನಗೆ ಯಾವತ್ತೂ ಈ ನಡುಗಡ್ಡೆಗೆ ಹೋಗಲು ಬೇಸರವೇ ಬರುವುದಿಲ್ಲ. ಅವತ್ತು ಕೆಲಸ ಮುಗಿಸಿ ನಮ್ಮ ಕ್ಲೈಂಟ್ ಆಫೀಸಿನಿಂದ ಗೆಸ್ಟ್ ಹೌಸ್ ಗೆ ತೆರಳಲು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ. ನನ್ನ ಪಕ್ಕದಲ್ಲಿ ಮುಖ ಒಣಗಿ ಹೋಗಿದ್ದ ಚರ್ಮಗಳೆಲ್ಲ ಮೂಳೆಗೆ ಅಂಟಿಕೊಂಡಂತಿದ್ದ ಎಣ್ಣೆಗೆಂಪು ಬಣ್ಣದ ವ್ಯಕ್ತಿಯೋರ್ವ ಬಂದು ಕುಳಿತ. ಅವನ ಬಟ್ಟೆ ಕೊಳೆಯಾಗಿತ್ತು. ತೊಡೆಯ ಮೆಲೆ ತನ್ನ ಎರಡೂ ಮೊಳಕೈಗಳನ್ನು ಆಸರೆಯಾಗಿಸಿ ಬಗ್ಗಿ ಕುಳಿತು ಒಂದಷ್ಟು ಹೊತ್ತು ಕಾಂಕ್ರೀಟ್ ನೆಲವನ್ನು ದಿಟ್ಟಿಸಿದ. ನಿಧಾನಕ್ಕೆ ನನ್ನೆಡೆಗೆ ತಿರುಗಿ,
“ಒಂದು ಸಿಗರೇಟ್ ಇದೆಯೇ?” ಅಂತ ಕೇಳಿದ.

“ನನಗೆ ಅಭ್ಯಾಸ ಇಲ್ಲ.” ಅಂದೆ.

“ಆ ಅಂಗಡಿಯಿಂದ ಕೊಂಡುಕೊಂಡು ಬಂದು ನನಗೆ ದಾನ ಮಾಡುತ್ತೀಯಾ?” ಅಂತ ಕೇಳಿದ.
ನನ್ನಿಂದ ದಾನ ಪಡೆಯುವುದು ತನ್ನ ಹಕ್ಕು ಅಂತ ಅಂದುಕೊಂಡಂತಿತ್ತು ಆತನ ಮಾತಿನ ಶೈಲಿ.

“ನಿನಗೆ ಊಟ ಬೇಕಿದ್ದರೆ ಕೊಡಿಸುತ್ತೇನೆ. ಸಿಗರೇಟು ಕೊಡಿಸುವುದು ನನ್ನ ತತ್ವಗಳಿಗೆ ವಿರುದ್ಧ” ಅಂದೆ.
ಇಂತಹ ಚಿಲ್ಲರೆ ವಿಷಯಗಳಿಗೆಲ್ಲ ತತ್ವವನ್ನ ಎಳೆದುತರುತ್ತೀಯಲ್ಲ ಎಂಬಂತೆ ನನ್ನ ಕಡೆಗೆ ವ್ಯಂಗ್ಯವಾಗಿ ನಕ್ಕ.

“ಸಿಗರೇಟಾದರೆ ಎರಡು ಮೂರು ದಿನ ಉಪಯೋಗಕ್ಕೆ ಬರುತ್ತದೆ. ಊಟವಾದರೆ ಒಂದೇ ಹೊತ್ತು. ಬೆಳಿಗ್ಗೆಗೆ ದೇಹದಿಂದ ಖಾಲಿಯಾಗಿ ಬಿಡುತ್ತದೆ. ಆದರೆ ನೀನಾಗಿ ಕೇಳುತ್ತಿರುವುದರಿಂದ ನಾನು ಊಟ ಮಾಡುತ್ತೇನೆ. ಸಾಧ್ಯವಾದರೆ ನನಗೆ ಪಿಝಾ ಕೊಡಿಸು. ಪ್ರತಿದಿನ ಈ ಚರ್ಚ್ ನವರು ಕೊಡುವ ಬೀಫ್ ಸ್ಯಾಂಡ್ ವಿಚ್ ತಿಂದು ಬೇಸರವಾಗಿದೆ” ಅಂದ, ನಾನು ಕೊಡಿಸುವ ಬಿಟ್ಟಿ ಊಟವನ್ನು ತಿನ್ನುವುದೇ ನನಗೆ ಆತ ಮಾಡಲಿರುವ ಮಹದುಪಕಾರ ಎಂಬಂತೆ!
ಒಂದು ಎಕ್ಸ್ಟ್ರಾ ಹ್ಯಾಮ್ ಚೀಜ್ ಹಾಕಿದ ಮೆಕ್ಸಿಕನ್ ಪಿಝಾಗೆ ಆರ್ಡರ್ ಮಾಡಿ ಇಬ್ಬರಿಗೂ ಒಂದೊಂದು ಕಾಫಿ ತೆಗೆದುಕೊಂಡು ಬಂದು ಅವನಿಗೊಂದು ಲೋಟ ಕೊಟ್ಟು ನಾನು ಕಾಫೀ ಹೀರುತ್ತಾ ಕುಳಿತೆ.

“ನೀನೆಲ್ಲಿಯವನು? ಇಂಡಿಯಾ, ಪಾಕಿಸ್ತಾನ್, ಬಾಂಗ್ಲಾದೇಶ್?” ಅಂಥ ಕೇಳಿದ. ಕಾಫಿ ಕಪ್ ನ ಮುಚ್ಚಳವನ್ನು ತೆರೆಯುತ್ತಾ.

“ಇಂಡಿಯಾ” ಅಂದೆ.

“ಹಾಗಾದರೆ ನಿನಗೆ ಮಂಗಳೂರು, ಚೆನೈ, ಪಾಂಡಿಚೆರಿ, ಕೊಚ್ಚಿ ಈ ಊರುಗಳೆಲ್ಲಾ ಗೊತ್ತಾ?”

“ಗೊತ್ತು ಎಲ್ಲಾ ಕಡಲ ತಡಿಯ ಊರುಗಳು. ಮಂಗಳೂರು ನಮ್ಮ ರಾಜ್ಯದಲ್ಲೇ ಇದೆ. ನಿನಗೆ ಇವೆಲ್ಲ ಹೇಗೆ ಗೊತ್ತು?”

“ಪ್ರತಿ ಶ್ರೀಲಂಕನ್ನರಿಗೂ ಅಕ್ರಮವಾಗಿ ಹೊರದೇಶಕ್ಕೆ ತಪ್ಪಿಸಿಕೊಂಡು ಹೋಗಲು ಮುಖ್ಯ ಕಳ್ಳದಾರಿಗಳಿವು. ಏಷಿಯಾದ ಒಬ್ಬೊಬ್ಬ ಯುದ್ಧಪೀಡಿತನಿಗೂ ಈ ಊರುಗಳು ಬಾಯಿಪಾಠವಾಗಿ ಹೋಗಿವೆ. ಒಂಥರಾ ಡ್ರೀಮ್ ಡೆಸ್ಟಿನೇಶನ್ ಅಂತಾರಲ್ಲ ಹಾಗೆ. ಈ ಊರುಗಳಿಗೆ ತಲುಪಿಬಿಟ್ಟರೆ ನಮ್ಮ ಜೀವನ ದಡ ತಲುಪುತ್ತದೆ ಎನ್ನುವ ನಂಬಿಕೆ ಎಲ್ಲರದು. ನಿಮ್ಮ ದೇಶದ ಭ್ರಷ್ಟಾಚಾರ, ಯುದ್ಧ ಪೀಡಿತರಿಗೆ ವರದಾನ. ಭ್ರಷ್ಠ ಅಧಿಕಾರಿಗಳಿರದಿದ್ದರೆ ನಮ್ಮಂತಹ ಜನರನ್ನು ಕಳ್ಳಸಾಗಣೆಯಿಂದ ದೇಶದಿಂದ ದೇಶಕ್ಕೆ ಸಾಗಿಸಲು ಸಾಧ್ಯವಾದರೂ ಉಂಟೇ? ಅದೂ ಪ್ರತಿದಿನ ಸಾವಿರ ಜನಗಳ ಲೆಕ್ಕದಲ್ಲಿ?”

ನಾನು ಮಾನವ ಕಳ್ಳಸಾಗಾಣಿಕೆಯ ಬಗ್ಗೆ ಅಲ್ಲಿಲ್ಲಿ ಕೇಳಿದ್ದೆನಾದರೂ ಇವನು ಆ ಸುದ್ದಿಗೆ ಹೊಸ ಆಯಾಮವನ್ನೇ ಕೊಟ್ಟಂತಿತ್ತು. ಕಿವಿಯಿಟ್ಟು ಕೇಳಿ ಮತ್ತೆ ಅರ್ಥಮಾಡಿಕೊಳ್ಳಲು ಯತ್ನಿಸಿದೆ. ಅಷ್ಟರಲ್ಲಿ ಪಿಝಾದ ಹುಡುಗ ಬಂದು ನಮ್ಮೆದುರಿಗೆ ಪಿಝಾ ಇಟ್ಟು ಒಂದು ಮುಗುಳುನಗೆ ಕೊಟ್ಟು ಹೊರಟುಹೋದ. ಪಿಝಾವನ್ನು ಬಿಡುಗಣ್ಣಿನಿಂದ ನೋಡಿದ ಅವನು ಜೊಲ್ಲು ನುಂಗಿಕೊಳ್ಳುತ್ತಾ,
“ಮೊದಲ ಬಾರಿಗೆ ಇಂಡಿಯನ್ನನೊಬ್ಬನಿಂದ ನನಗೆ ಉಪಕಾರವಾಗಿದೆ, ಇಲ್ಲವಾದರೆ ನೀವು ನಮ್ಮಂತಹ ದೇಶಗಳಿಗೆ ಕೊಟ್ಟಿರುವ ಕಾಟ ಅಷ್ಟಿಷ್ಟಲ್ಲ.” ಅಂದ.

“ನಿನಗೆ ನಮ್ಮ ದೇಶದ ಬಗ್ಗೆ ಬಹಳವೇ ದೂರುಗಳು ಇದ್ದಂತಿವೆ” ಅಂದೆ.

“ಇಲ್ಲ. ನನಗೆ ದೇಶದ ಬಗ್ಗೆ ದೂರುಗಳಿಲ್ಲ. ನನಗೆ ಬಡತನಗಳ ಬಗ್ಗೆ ದೂರುಗಳಿವೆ. ಬಡದೇಶದ ಜನಗಳು ಅಡಕತ್ತರಿಯಲ್ಲಿ ಸಿಕ್ಕಿಕೊಂಡದ್ದನ್ನು ಬಳಸಿಕೊಳ್ಳುವ ಸಿರಿವಂತ ದೇಶಗಳ ಕ್ರೌರ್ಯದ ಬಗ್ಗೆ ದೂರುಗಳಿವೆ. ನಮ್ಮನ್ನು ಕಳ್ಳ ಸಾಗಣೆ ಮಾಡುವವರೂ ನಿಮ್ಮ ದೇಶದ ಬಡಜನರೇ! ದೊಡ್ಡ ಮೀನು ಸಣ್ಣ ಮೀನನ್ನು ತಿನ್ನುತ್ತದೆ.”

“ಸರಿ. ನೀನಾರು? ಹೀಗೇಕೆ ನಿರ್ಗತಿಕನಂತೆ ಓಡಾಡುತ್ತಿದ್ದೀಯಾ? ಎಲ್ಲಿಂದ ಬಂದಿರುವೆ?”

ಆತ ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಯಾವ ಅವಸರವನ್ನೂ ತೋರದೇ ನಿಧಾನಕ್ಕೆ ಬಾಯಲ್ಲಿದ್ದ ಪಿಝಾವನ್ನು ನಾಲಗೆ ಮತ್ತು ಹಲ್ಲುಗಳ ನಡುವೆ ಹೊಯ್ದಾಡಿಸುತ್ತಾ ಚೀಝ್ ಮತ್ತು ಹಂದಿ ಮಾಂಸಗಳ ರಸ ಮಿಶ್ರಣ ನಿಧಾನಕ್ಕೆ ಗಂಟಲಿನ ಮೂಲಕ ಇಳಿಸುತ್ತಾ ಪಾಕಸ್ವರ್ಗ ವನ್ನು ಅನುಭವಿಸುವುದನ್ನು ಮುಗಿಸಿ ಮಾತನಾಡತೊಡಗಿದ.

“ನಾನು ಮಗೆಂದ್ರನ್. ಶ್ರೀಲಂಕಾದ ಜಾಫ್ನಾ ಭಾಗದಲ್ಲಿರುವ ಒಂದು ಸಣ್ಣ ಹಳ್ಳಿ ನನ್ನೂರು.” ಅಂತ ಹೇಳಿ ತನ್ನ ಜೇಬಿನಿಂದ ಮಡಚಿ ಮುದ್ದೆಯಾಗಿದ್ದ ಸುದ್ದಿಹಾಳೆಯ ತುಣುಕೊಂದನ್ನು ನನ್ನ ಕೈಗಿಟ್ಟ. ತೆರೆದು ನೋಡಿದೆ. ಅದು ಒಂದು ಸ್ಥಳೀಯ ಸೆನೆಟರ್ ಒಬ್ಬನ ಲೇಖನ. ಲೇಖನದ ಸಾರಾಂಶ “ಶ್ರೀಲಂಕಾದಲ್ಲಿ ಯುದ್ಧ ಮುಗಿದಿದೆ. ಆದರೂ ತಮಿಳು ಜನರನ್ನು ರಫ್ಯೂಜಿಗಳೆಂದು ಪರಿಗಣಿಸಿ ಒಳಬರಮಾಡಿಕೊಳ್ಳಲಾಗುತ್ತಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಇದು ನಮ್ಮ ಆರ್ಥಿಕತೆಗೆ ಹೊರೆಯಾಗುವುದು” ಅಂತ ಇತ್ತು.

ಆತ ನಿರ್ಲಿಪ್ತ ಮುದ್ರೆಯಲ್ಲಿ ಟಿಶ್ಯೂ ಪೇಪರ್ ನಿಂದ ತನ್ನ ತುಟಿಗಳನ್ನು ಒರೆಸಿಕೊಂಡ. ಸೀದಾ ನನ್ನ ಕಣ್ಣುಗಳಲ್ಲಿ ತನ್ನ ಒಣಗಿಹೋದ ಕಣ್ಣುಗಳನ್ನು ನೆಟ್ಟ. ಆತನ ಕಣ್ಣು ಎಷ್ಟು ಒಣಗಿ ಹೋಗಿತ್ತೆಂದರೆ ಅವನಿಗೆದುರಾಗಿ ಕುಳಿತಿದ್ದ ನನ್ನ ಬಿಂಬ, ಪಕ್ಕದಲ್ಲಿದ್ದ ಕಿಟಕಿಯ ಬಿಂಬ, ನನ್ನ ಹಿಂದೆ ಹಿಂದೆ ಇದ್ದ ಬಾಗಿಲ ಬಿಂಬ ಯಾವುದೂ ಕಾಣುತ್ತಿರಲಿಲ್ಲ. ನಾನು ಆತನಿಂದ ಯಾವುದಾದರೂ ಮಾತು ಬರುತ್ತದೇನೋ ಅಂತ ಕಿವಿಗಳನ್ನು ಆತನ ಕಡೆಗೆ ನಿಮಿರಿಸಿ ಕೂತೆ.

ಇಡಿ ಜಗತ್ತಿನ ಸಾವಧಾನವೇ ಆತನಲ್ಲಿ ಮೈವೆತ್ತಂತೆ ಆತ ಮುಂದಿನ ಮಾತುಕತೆಗೆ ಅವಸರವನ್ನೇ ತೋರಲಿಲ್ಲ. ನಿಧಾನಕ್ಕೆ ಹೇಳತೊಡಗಿದ,

“ಶ್ರೀಲಂಕಾದಲ್ಲಿ ತಮಿಳು ಮತ್ತು ಸಿಂಗಳೀಯರ ನಡುವಿನ ಆಂತರಿಕ ಯುದ್ಧ ಹತ್ತು ವರ್ಷಗಳ ಹಿಂದೆಯೇ ಮುಗಿದುಹೋಗಿತ್ತು. ಆದರೆ ನಮ್ಮ ತಮಿಳರ ಗೋಳು ಅಷ್ಟು ಸುಲಭಕ್ಕೆ ಮುಗಿಯಲಿಲ್ಲ. ನಾನು ಅಲ್ಲಿ ಸರಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದೆ. ನನ್ನ ಹೆಂಡತಿ ಮನೆ ನೋಡಿಕೊಳ್ಳುತ್ತಿದ್ದಳು. ಯುದ್ಧ ಮುಗಿಯುವ ಎರಡು ವರ್ಷ ಮುಂಚೆ ನನ್ನ ಮದುವೆಯಾಯಿತು. ಒಂದು ವರ್ಷಕ್ಕೆ ಒಂದು ಗಂಡುಮಗು. ಯುದ್ಧ ಮುಗಿದಾಗ ನನ್ನ ಮಗನಿಗೆ ಒಂದು ವರ್ಷ. ಪ್ರಭಾಕರನ್ ಸತ್ತ. ನೂರಾರು ಜನ ನಮ್ಮ ಸುತ್ತಮುತ್ತಲಿನ ಊರವರು ಸತ್ತರು. ಅನೇಕರನ್ನು ಊರೂರುಗಳಲ್ಲಿ ಅಟ್ಟಾಡಿಸಿಕೊಂಡು ಕೊಲೆ ಮಾಡಲಾಯಿತು. ಮತ್ತೆ ದಂಗೆಗಳು ಶುರುವಾಗಬಾರದು ಅಂತ ಶ್ರೀಲಂಕಾ ಸರಕಾರ ಕೆಲವು ಕ್ರಮಗಳನ್ನು ಕೈಗೊಂಡಿತು. ವಾರದಲ್ಲಿ ಎರಡು ದಿನ ಇದ್ದಕ್ಕಿದ್ದಂತೆ ಬೆಳಿಗೆ ಆರು ಗಂಟೆಗೆ ಸೈನಿಕರು ತಮ್ಮ ಸೈನಿಕ ಲಾರಿಗಳಲ್ಲಿ ಭಯಂಕರವಾದ ಹಾರ್ನ್ ಮಾಡುತ್ತಾ ಬಂದು ನಮ್ಮ ಹಳ್ಳಿಗಳನ್ನು ಸುತ್ತುವರಿಯುವರು. ಎಲ್ಲಾ ಜನರನ್ನು ಹೊರ ಬರುವಂತೆ ಕರೆಯುವರು. ಬಂದವರನ್ನು ಗಂಡಸರು, ಹೆಂಗಸರು, ಮುದುಕರು, ಮಕ್ಕಳು ಅಂತ ಬೇರೆ ಬೇರೆ ಭಾಗಗಳಾಗಿ ವಿಂಗಡಿಸುವರು. ನಂತರ ನಮ್ಮಂತಹ ಕಿರಿವಯಸ್ಸಿನ ಗಂಡಸರಿಗೆ ಲಾರಿಗಳ ಅಕ್ಕಪಕ್ಕದಲ್ಲಿ ರಸ್ತೆಗುಂಟ ನಡೆಯಲು ಹೇಳುವರು. ಹೀಗೆ ಬೇರೆ ಬೇರೆ ಊರಿನಿಂದ ಬಂದವರನ್ನೆಲ್ಲ ಊರಾಚೆಗೆ ಕರೆದುಕೊಂಡು ಹೋಗುವರು.

ದಾರಿಯುದ್ದಕ್ಕೂ ಸಾಕಷ್ಟು ಆಯುಧಗಳನ್ನು ಹೇರಿಕೊಂಡಿದ್ದ ಮಿಲಿಟರಿ ಟ್ರಕ್ಕುಗಳು, ನಮ್ಮ ಕಿವಿಗಳೆಲ್ಲ ಕಿತ್ತುಹೋಗುವಂತೆ ಹಾರ್ನ್ ಮಾಡುತ್ತಿದ್ದರು. ನಂತರ ಎಲ್ಲರನ್ನೂ ಸಾಲಾಗಿ ನಿಲ್ಲಿಸಿ, ಕೆಲವರಿಗೆ ಕೈಕೋಳ ತೊಡಿಸಿ ತಲೆಗೆ ಮುಸುಕು ಹಾಕಿ ಲಾರಿಯೊಳಗೆ ತುಂಬಿಕೊಂಡು ಕರೆದುಕೊಂಡು ಹೋಗುತ್ತಿದ್ದರು. ಪ್ರತಿ ವಾರ ಕನಿಷ್ಟ ಒಮ್ಮೆ ಅಥವಾ ಎರಡು ಬಾರಿ ಇದು ನಡೆಯುತ್ತಿತ್ತು. ವಾರಕ್ಕೆ ಹತ್ತರಿಂದ ಇಪ್ಪತ್ತು ಜನರನ್ನು ಈ ರೀತಿ ಒಯ್ಯುತ್ತಿದ್ದರು. ಹೀಗೆ ಲಾರಿಯೊಳಗೆ ಹೋದವರಲ್ಲಿ ಕೆಲವರು ಕೊಲೆಯಾದರು, ಕೆಲವರು ಚಿತ್ರಹಿಂಸೆಗೊಳಗಾದರು ಕೆಲವರು ಕಾಣೆಯಾದರು. ಹೀಗೆ ಲಾರಿಯಲ್ಲಿ ಒಯ್ಯಲ್ಪಟ್ಟವರ ಸಂಬಂಧಿಕರು ಪೋಲೀಸರಲ್ಲಿ ವಿಚಾರಿಸಿದರೆ, ಇದರ ಬಗ್ಗೆ ಆರ್ಮಿಯನ್ನು ಕೇಳಿ ಎನ್ನುವರು, ಆರ್ಮಿಯವರನ್ನು ಕೇಳಿದರೆ ಅವರು ಇದು ನಮ್ಮ ಕೆಲಸವಲ್ಲ ನೌಕಾದಳವನ್ನು ಕೇಳಿ ಎನ್ನುವರು, ನೌಕಾದಳದವರ ಬಳಿ ವಿಚಾರಿಸಿದರೆ ಅವರು ಪೋಲೀಸರೆಡೆಗೆ ಬೊಟ್ಟುಮಾಡುವರು.

ಹೀಗೆ ದಿನಗಳೆದಂತೆ ಊರಲ್ಲಿ ಗಂಡಸರ ಸಂಖ್ಯೆ ಕಡಿಮೆಯಾಗುತ್ತಾ ಬಂದಂತೆ ನನ್ನ ಹೆಂಡತಿಗೆ ದಿಗಿಲು ಹತ್ತಲು ಶುರುವಾಯಿತು. ಅದೃಷ್ಟವಶಾತ್ ಇಷ್ಟು ದಿನಗಳವರೆಗೆ ನನ್ನನ್ನು ಕರೆದೊಯ್ದಿರಲಿಲ್ಲ. ಆದರೆ ಯಾವ ಭೇಟಿಯಲ್ಲಾದರೂ ನನ್ನನ್ನು ಕರೆದೊಯ್ಯುವ ಸಾಧ್ಯತೆಯಿತ್ತು. ನಾವು ರಾತ್ರೋ ರಾತ್ರಿ ಒಂದು ನೀರಿನ ಬಾಟಲಿ, ಮಗುವಿಗೆ ಒಂದೆರಡು ಹಾಲಿನ ಬಾಟಲಿ ತೆಗೆದುಕೊಂಡು ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಬೈಕ್ ಮೇಲೆ ಊರು ಬಿಟ್ಟೆವು. ಸೀದಾ ನನ್ನ ಹೆಂಡತಿಯ ಊರಿಗೆ ಬಂದು ತಂಗಿದೆವು. ಕೆಲದಿನಗಳ ಮಟ್ಟಿಗೆ ಅಲ್ಲಿ ಸುರಕ್ಷಿತವಾಗಿಯೇನೋ ಇದ್ದೆವು. ಆದರೆ ಅಲ್ಲಿಯೂ ಪೋಲೀಸರು ಬಂದು ಕಿರುಕುಳ ನೀಡತೊಡಗಿದರು. ಯುದ್ಧ ಮುಗಿದಿದ್ದರಿಂದ ವಾಪಸು ಊರಿಗೆ ಹೋಗಬೇಕೆಂದು ತಾಕೀತು ಮಾಡತೊಡಗಿದರು. ಪ್ರತಿದಿನ ಬೆಳಿಗ್ಗೆ ನಾನು ಹತ್ತಿರದ ಠಾಣೆಗೆ ಹೋಗಿ ಸಹಿ ಹಾಕಬೇಕಿತ್ತು. ಯಾವುದೇ ಕ್ಷಣದಲ್ಲಾದರೂ ಅವರು ಮತ್ತೆ ನಮ್ಮನ್ನು ಊರಿಗೆ ದಬ್ಬಿಬಿಡುವ ಸಾಧ್ಯತೆಯಿತ್ತು. ಎಲ್ಲೂ ನನಗೆ ಸುರಕ್ಷತೆಯಿರಲಿಲ್ಲ. ಜೀವಭಯದಲ್ಲೇ ದಿನಗಳನ್ನು ಕಳೆಯಬೇಕಾಗಿತ್ತು.”

ನನಗೆ ಕುತೂಹಲ ತಡೆಯಲಾಗಲಿಲ್ಲ. “ಮುಂದೆ?” ಅಂತ ಕೇಳಿದೆ.

ಆತ ಎಂದಿನಂತೆ ಹೆಚ್ಚಿನ ಅವಸರವನ್ನೇನೂ ತೋರಲಿಲ್ಲ. ಆತ ಎರಡನೆಯ ತುಂಡು ಪಿಝಾವನ್ನು ಎತ್ತಿ ಬಾಯಲ್ಲಿಟ್ಟು ಅದು ನಿಧಾನವಾಗಿ ಆತನ ಹಲ್ಲಿನ ಸಾಲುಗಳ ನಡುವೆ ನುಜ್ಜುಗುಜ್ಜಾಗಿ, ಕಣಕಣವೆಲ್ಲ ನಾಲಗೆಯ ಮೇಲೆಲ್ಲ ಹರಿದಾಡಿ ನಿಧಾನಕ್ಕೆ ಗಂಟಲಿನ ಇಳಿಜಾರಿನಲ್ಲಿ ಕಾಣೆಯಾಗುವವರೆಗೂ ನಾನು ಕಾಯಬೇಕಾಯಿತು.

“ಆ ಊರಲ್ಲಿ ಬೇರೆ ದೇಶಕ್ಕೆ ನಮ್ಮನ್ನು ರವಾನೆ ಮಾಡುವ ಏಜೆಂಟ್ ಒಬ್ಬನನ್ನು ಸಂಪರ್ಕಿಸಿದೆ. ಆತ ಹದಿನೈದು ಸಾವಿರ ಡಾಲರುಗಳಾಗುತ್ತವೆ ಎಂದ. ಹದಿನೈದು ಸಾವಿರ ಡಾಲರುಗಳೆಂದರೆ ನಮ್ಮಲ್ಲಿ ಮಧ್ಯಮವರ್ಗದವನ ಜೀವಮಾನದ ಗಳಿಕೆ. ನನ್ನ ಹೆಂಡತಿಯ ಬಂಗಾರವನ್ನು ಅಡವಿಟ್ಟು ಒಂದಷ್ಟು ಜಮೀನನ್ನು ಮಾರಿ ಅಷ್ಟು ಹಣ ಹೊಂದಿಸಿದ್ದಾಯಿತು. ಆತ ನನಗೆ ಸಿಂಗಾಪೂರಿನ ವೀಸಾ ಕೊಡಿಸಿದ. ಅಲ್ಲಿಂದ ಮುಂದೆ ಹೇಗೆ ಹೋಗಬೇಕು ಎಲ್ಲಿ ಹೋಗಬೇಕು ಅಂಬುದರ ವಿವರ ಕೊಟ್ಟ. ಕೊಲಂಬೊದಿಂದ ಸಿಂಗಪೂರಿಗೆ ವಿಮಾನದಲ್ಲಿ ಪ್ರಯಾಣಿಸಬೇಕು. ನನ್ನನ್ನು ಕಳಿಸಲು ಬಂದ ಹೆಂಡತಿಯ ಕಣ್ಣುಗಳು ಕೋಡಿಬಿದ್ದ ಕೆರೆಗಳ ಪಾತ್ರಗಳಾಗಿವೆ. ಆಕೆಯ ಅಳು ನಿಲ್ಲಲೊಲ್ಲದು. ನನ್ನ ಮಗನಿಗೆ ಇದೆಲ್ಲ ಗೊತ್ತಾಗದು. ಅಪ್ಪ ಎಲ್ಲೋ ಹೊರಗೆ ಹೋಗುತ್ತಿದ್ದಾನೆ, ನನ್ನನ್ನೂ ಕರೆದುಕೊಂಡು ಹೋಗು ಎಂಬುದಷ್ಟೇ ಆತನ ಬೇಡಿಕೆ. ಕಾಲ ಅದೆಷ್ಟ ಕ್ರೂರ ಅಂದರೆ ಅದು ನನಗಾಗಿ ಒಂದು ಕ್ಷಣವೂ ಹೆಪ್ಪುಗಟ್ಟಲು ಸಿದ್ಧವಿರಲಿಲ್ಲ. ದೊಡ್ಡ ದೇಶಕ್ಕೆ ಹೋಗುತ್ತೇನೆ ಅಲ್ಲಿ ನೆಲೆ ನಿಲ್ಲುತ್ತೇನೆ ನಿಮ್ಮನ್ನು ಕರೆಸಿಕೊಳ್ಳುತ್ತೇನೆ ಅಂತ ಪದೇ ಪದೇ ಹೇಳಿದೆ. ಚೆಕಿನ್ ಡೆಸ್ಕಿಗೆ ಬರುವವರೆಗೂ ಅವರನ್ನೇ ನೋಡುತ್ತಲಿದ್ದೆ. ಅವರನ್ನು ನಾನು ನೋಡುವುದು ಅದೇ ಕಡೆಯ ಬಾರಿ ಅಂತ ನನಗೆ ಆಗ ಗೊತ್ತಿರಲಿಲ್ಲ.

ಆತ ನಿರ್ಲಿಪ್ತ ಮುದ್ರೆಯಲ್ಲಿ ಟಿಶ್ಯೂ ಪೇಪರ್ ನಿಂದ ತನ್ನ ತುಟಿಗಳನ್ನು ಒರೆಸಿಕೊಂಡ. ಸೀದಾ ನನ್ನ ಕಣ್ಣುಗಳಲ್ಲಿ ತನ್ನ ಒಣಗಿಹೋದ ಕಣ್ಣುಗಳನ್ನು ನೆಟ್ಟ. ಆತನ ಕಣ್ಣು ಎಷ್ಟು ಒಣಗಿ ಹೋಗಿತ್ತೆಂದರೆ ಅವನಿಗೆದುರಾಗಿ ಕುಳಿತಿದ್ದ ನನ್ನ ಬಿಂಬ, ಪಕ್ಕದಲ್ಲಿದ್ದ ಕಿಟಕಿಯ ಬಿಂಬ, ನನ್ನ ಹಿಂದೆ ಹಿಂದೆ ಇದ್ದ ಬಾಗಿಲ ಬಿಂಬ ಯಾವುದೂ ಕಾಣುತ್ತಿರಲಿಲ್ಲ.

ಸಿಂಗಾಪೂರದಿಂದ ಒಂದು ಕಾರು ಬಾಡಿಗೆ ಪಡೆದು ಮಲೇಶಿಯಾಗೆ ಬಸ್ ನಲ್ಲಿ ಹೋದೆ. ಮಲೆಶಿಯಾದಲ್ಲಿ ನಮ್ಮ ಏಜೆಂಟ್ ಹೇಳಿದ ಮನುಷ್ಯ ಸಿಕ್ಕಿದ. ಕರಾವಳಿಯ ಊರೊಂದರ ಜೆಟ್ಟಿಯಲ್ಲಿ ಒಂದು ಹಿರಿದಾದ ದೋಣಿಗೆ ಹತ್ತಿಸಿದ. ತನ್ನ ಕಡೆಯ ದಿನಗಳನ್ನು ಎಣಿಸುತ್ತಿದ್ದ ಮುದಿ ದೋಣಿಯದು. ಒಂದು ಕಾಲದಲ್ಲಿ ಸರಕು ಸಾಗಣೆ ಮಾಡುತ್ತಿತ್ತೆಂದು ತೋರುತ್ತದೆ. ವಸ್ತುಗಳನ್ನಿಡುವ ಕಪಾಟುಗಳೇ ನಮಗೆ ಹಾಸಿಗೆಗಳಾಗಿದ್ದವು. ದೋಣಿಯಲ್ಲಿ ನನ್ನಂತೆ ಬೇರೆಬೇರೆಡೆಯಿಂದ ಬಂದ ಸುಮಾರು ಇನ್ನೂರು ಜನರಿದ್ದೆವು. ನಾಲ್ಕೈದು ದಿನಗಳ ಪ್ರಯಾಣದ ನಂತರ ನಮ್ಮ ದೋಣಿಯ ಇಂಜಿನ್ ಕೆಟ್ಟು ನಿಂತಿತು. ರಿಪೇರಿ ಮಾಡುವ ತಜ್ಞರಾರೂ ಇರಲಿಲ್ಲ. ಒಂದಿಡೀ ಮಹಾಸಾಗರವನ್ನು ಅಂತಹ ಶಿಥಿಲ ದೋಣಿಯಲ್ಲಿ ಯಾವುದೇ ಸಮಯದಲ್ಲಾದರೂ ಮರಿದು ಬೀಳಬಹುದಾದ ತುಕ್ಕು ಹಿಡಿದ ಇಂಜಿನ್ ನೊಂದಿಗೆ ದಾಟುವ ಆ ಹುಂಬತನವನ್ನು ಜೀವನದ ಅನಿವಾರ್ಯತೆ ಎನ್ನಬೇಕೊ ಅಥವಾ ಅತಿಯಾದ ಆತ್ಮವಿಶ್ವಾಸ ಎನ್ನಬೇಕೊ! ಚಿಲ್ಲರೆ ಕಾಸಿಗೆ ಆ ದೋಣಿಯನ್ನು ನಡೆಸುವ ಬಡಜನರೂ ನಮ್ಮಷ್ಟೇ ತಮ್ಮ ಪ್ರಾಣವನ್ನು ಅಪಾಯಕ್ಕೆ ಒಡ್ಡಿರುತ್ತಾರೆ. ಆದರೆ ನಮಗೆ ಸಿಗುವ ಸಹಾನುಭೂತಿ ಅವರಿಗೆ ಸಿಗುವುದಿಲ್ಲ. ಯಾಕೆಂದರೆ ನಾವು ರಫ್ಯೂಜಿಗಳು ಮತ್ತು ಅವರು ನಮ್ಮನ್ನು ಸಾಗಿಸಿದ ಮಾನವ ಕಳ್ಳಸಾಗಣಿಕೆ ಗುಂಪಿನ ಸದಸ್ಯರು!

ಹೀಗೆ ಕೆಟ್ಟು ನಿಂತ ನಮ್ಮ ದೋಣಿ ಸುಮಾರು ಇಪ್ಪತ್ತು ದಿನಗಳು ವಿಶಾಲ ಸಾಗರದಲ್ಲಿ ದಿಕ್ಕಿಲ್ಲದೆ ಜಾತ್ರೆಯಲ್ಲಿ ಕಳೆದುಹೋದ ಮಗುವಿನಂತೆ ಅನಾಥವಾಗಿ ನಿಂತಿತ್ತು. ಅದೃಷ್ಟವಷಾತ್ ಸಾಗರದ ತೆರೆಗಳು ಗಾಳಿ ಪ್ರವಾಹಗಳು ನಮ್ಮ ದೋಣಿಯನ್ನು ಇಂಡೋನೇಷಿಯಾದ ಯಾವುದೋ ಊರಿನ ದಡವೊಂದಕ್ಕೆ ತೇಲಿಸಿಕೊಂಡು ಬಂದು ಸೇರಿಸಿದ್ದವು. ಈ ಕಳ್ಳಸಾಗಣೆದಾರರ ಸಂಪರ್ಕಜಾಲ ಎಷ್ಟು ಬಲವಾಗಿರುತ್ತದೆ ಎಂಬುದು ಅಂದೇ ನನಗೆ ಗೊತ್ತಾಗಿದ್ದು!

ಇಂಡೋನೇಷಿಯಾದಲ್ಲಿ ಮತ್ತೊಬ್ಬ ಈ ಸಾಗಣಿಕೆ ಜಾಲದ ಮನುಷ್ಯ ನಮ್ಮನ್ನು ಮತ್ತೊಂದು ದೋಣಿಯೊಳಗೆ ಸೇರಿಸಿದ. ಈ ದೋಣಿಯೊಳಗೆ ನಾವು ಇನ್ನೂರು ಜನ ಸೇರಿಸಿ ಒಟ್ಟು ಐನೂರು ಜನರಾದರೂ ಇದ್ದರು ಎನ್ನಬಹುದು. ನಿಜ ಎಂದರೆ ಆ ಹಡಗಿನ ಸಾಮರ್ಥ್ಯ ಹೆಚ್ಚೆಂದರೆ ನೂರೈವತ್ತು ಜನರನ್ನು ಹಿಡಿಸುವಷ್ಟಿರಬಹುದು. ಸಾಲದೆಂಬಂತೆ ಈ ಹಡಗೂ ತುಕ್ಕು ಹಿಡಿದು ತನ್ನ ಮೈಯಲ್ಲಿ ಅನೇಕ ಕಡೆ ಬಿಲಗಳನ್ನು ಕೊರೆದುಕೊಂಡಿತ್ತು. ನಮಗೆ ಆ ಹಡಗಲ್ಲಿ ಕೂರಲು ಹೆದರಿಕೆಯಾಯಿತಾದರೂ ಬೇರೆ ದಾರಿ ಇರಲಿಲ್ಲ. ವಾಪಸು ಹೋಗುವಂತಿರಲಿಲ್ಲ.

ಸುಮಾರು ಒಂದು ತಿಂಗಳು ಪಯಣಿಸಿದೆವು. ನಮ್ಮಲ್ಲಿ ಸಾಕಷ್ಟು ಆಹಾರ ನೀರು ಇರಲಿಲ್ಲ. ದಿನಕ್ಕೊಂದು ಹೊತ್ತು ಲೆಕ್ಕ ಹಾಕಿ ಊಟ ಮಾಡುತ್ತಿದ್ದೆವು. ಲೆಕ್ಕ ಹಾಕಿ ನೀರು ಕುಡಿಯುತ್ತಿದ್ದೆವು. ಎರಡು ಮೂರು ದಿನಕ್ಕೊಬ್ಬರು ಸಾಯುತ್ತಿದ್ದರು. ಸತ್ತವರನ್ನು ಸಮುದ್ರಕ್ಕೆ ಎಸೆಯುತ್ತಿದ್ದರು. ಒಮ್ಮೊಮ್ಮೆ ನಮ್ಮ ಕಣ್ಣೆದುರಿಗೇ ಮೀನುಗಳು ಹೆಣಗಳನ್ನು ಎಳೆದುಕೊಂಡು ಹೋಗುತ್ತಿದ್ದವು. ಎಲ್ಲಿ ಹುಟ್ಟಿದ್ದರೋ ಹೇಗೆ ಬದುಕಿದರೋ, ಅದೆಂತಹ ವೈಭವಗಳನ್ನು ಕಂಡಿದ್ದರೋ, ಅವರ ಸಾವು ಮಾತ್ರ ಘೋರವಾಗಿತ್ತು! ಕನಿಷ್ಟ ಸಂಸ್ಕಾರವೂ ಇಲ್ಲದಂತೆ ವಿಲೇವಾರಿಯಾದ ಕಳೇಬರಗಳ ಬಗ್ಗೆ ಇನ್ನೊಂದು ಜೀವಕ್ಕೆ ಆಹಾರ ಒದಗಿಸಿದ ತೃಪ್ತಿಯೊಂದೇ ದಕ್ಕುತ್ತಿದ್ದುದು. ಇದರ ನಡುವೆ ಓವರ್ ಲೋಡ್ ಆಗಿದ್ದ ನಮ್ಮ ದೋಣಿಯ ಭಾರ ಕೊಂಚ ಕಡಿಮೆಯಾಯಿತು ಅಂತ ಸಂತೋಷಪಡುವವರೂ ಇದ್ದರು! ಬಹುಷಃ ಇದು ತಾನು ಸಾಯದಿರಲು ಮತ್ತೊಂದು ಪ್ರಾಣಿಯನ್ನು ಕೊಂದು ತಿನ್ನುವ ಬೇಟೆಗಾರ ಪ್ರಾಣಿಗಳ ಪ್ರಾಕೃತಿಕ ಕ್ರೌರ್ಯದ ಮನುಷ್ಯ ರೂಪ ಇರಬಹುದು.

ಆಸ್ಟ್ರೇಲಿಯಾ ಮುಟ್ಟಲು ಇನ್ನೇನು ಒಂದೆರಡು ನೂರು ನಾಟಿಕಲ್ ಮೈಲಿಗಳಿವೆ ಅಂದಾಗ ನಮ್ಮ ಹಡಗಿನ ನೀರನ್ನು ಹೊರಹಾಕುವ ಪಂಪು ಕೆಟ್ಟು ಹೊಯಿತು. ಹಡಗಿನಲ್ಲಿ ನೀರು ಹೊರಹಾಕಲು ನಾವೇ ಮುಂದಾದೆವು. ಏಳು ತಂಡಗಳನ್ನಾಗಿ ವಿಂಗಡಿಸಿಕೊಂಡು ಹಗಲು ರಾತ್ರಿ ಎನ್ನದೇ ಸರದಿಯಂತೆ ನೀರನ್ನು ಬಕೆಟ್ ಮೂಲಕ ಎತ್ತಿ ನೀರನ್ನು ಹೊರಗೆ ಚೆಲ್ಲುತ್ತಿದ್ದೆವು. ಹಸಿವು ನೀರಡಿಕೆ ದುಡಿತದ ದಣಿವುಗಳು ಸಾವಿನ ಹೆದರಿಕೆಯ ಮುಂದೆ ಬಾಲ ಮುದುರಿಕೊಂಡು ಮೂಲೆ ಸೇರಿದ್ದವು.

ಈ ದುಡಿತದ ನಡುವೆ ನಡೆದ ವಿಶಾಲ ಸಾಗರದ ನಡುವೆ ಪ್ರಯಾಣ ಸಾಗುತ್ತಿತ್ತು. ಸುತ್ತಲಿನ ಕಡಲು ನಮ್ಮನ್ನು ನುಂಗಲಿರುವ ಸಾವಿನಂತೆ ಭಾಸವಾದರೆ, ನಮ್ಮ ದೋಣಿ ತಿಣುಕುತ್ತಿರುವ ಬದುಕಿನಂತೆ ಭಾಸವಾಗುತ್ತಿತ್ತು. ಅಷ್ಟಕ್ಕೂ ಬದುಕು ಎಂದರೇನು? ಅಪರಿಮಿತ ಶೂನ್ಯದ ನಡುವೆ ಒಮ್ಮೆ ಹೊಳೆದು ಮಾಯವಾಗುವ ಸಣ್ಣ ಕಂಪನ ತಾನೆ? ಬಹುಷಃ ನಮಗೆ ಅರ್ಥವಾದ ಬದುಕಿನ ಈ ಒಳಗುಟ್ಟು ಜಗತ್ತಿನ ಯಾವ ಸಾಧು ಸನ್ಯಾಸಿ ತಪಸ್ವಿಗೂ ಅರ್ಥವಾಗಿರಲಿಕ್ಕಿಲ್ಲ! ಒಂದು ದಿನ ನಮಗೆ ಕ್ರಿಶ್ಚಿಯನ್ ಐಲ್ಯಾಂಡಿನ ನೆಲ ಕಾಣಿಸುತ್ತಿತ್ತು. ನಮ್ಮ ದೋಣಿಯವರು ಅದೇ ಆಸ್ಟ್ರೇಲಿಯಾದ ನೆಲ ಅಂತ ತೋರಿಸಿದರು. ನಮ್ಮ ಕನಸಿನ ನೆಲ ನಮ್ಮ ಕಣ್ಣೆದುರಿಗೇ ಇತ್ತು! ಆದರೆ ತಕ್ಷಣ ಹೋಗುವಂತಿರಲಿಲ್ಲ. ಒಂದೆರಡು ಮಿಲಿಟರಿ ಹಡಗುಗಳು ಲಂಗರು ಹಾಕಿದ್ದವು. ಅವುಗಳ ಕಣ್ಣು ತಪ್ಪಿಸಿ ನಾವುಗಳು ನೆಲದ ಮೇಲೆ ಕಾಲಿಡಲು ಸಾಧ್ಯವೇ ಇರಲಿಲ್ಲ. ಅವುಗಳು ಚೆದುರಿ ಹೋಗುವವರೆಗೆ ಕಾಯಬೇಕು. ಅವು ಚದುರಿ ಹೋಗಲು ಒಂದೆರಡು ದಿನಗಳಾಗಬಹುದು, ವಾರಗಳಾಗಬಹುದು ಅಥವಾ ತಿಂಗಳುಗಳೇ ಆಗಬಹುದು. ನಮಗೆ ಕ್ಷಣಗಳೂ ಭಾರವಾಗತೊಡಗಿದ್ದವು. ಇದರ ನಡುವೆಯೇ ಸತತವಾಗಿ ನಾವು ನೀರನ್ನು ಹೊರಹಾಕುತ್ತಿದ್ದೆವು.

ಹೀಗೆ ಕಾಯುತ್ತಿದ್ದ ಮೂರನೆ ದಿನ ನಮ್ಮ ದೋಣಿ ತಳ ಮುರಿದು ಮುಳುಗತೊಡಗಿತು. ನಾವು ಅಷ್ಟರೊಳಗೆ ಅಪಾಯದ ಗಂಟೆ ಮೊಳಗಿಸಿ ಸಮುದ್ರಕ್ಕೆ ಹಾರಿಕೊಂಡೆವು. ನಮ್ಮ ಕರೆಯನ್ನು ಕೇಳಿದ ಮಿಲಿಟರಿ ದೋಣಿಯೊಂದು ಬಂದು ನಮ್ಮಲ್ಲಿ ಸಾಧ್ಯವಾದವರನ್ನೆಲ್ಲ ರಕ್ಷಿಸಿತು. ಹೊರಬಂದು ಎಣಿಸಿಕೊಂಡು ನೋಡಿದಾಗ ಹನ್ನೆರಡು ಜನ ಮುಳುಗಿಹೋಗಿದ್ದಾರೆ ಅಂತ ತಿಳಿಯಿತು. ನಮ್ಮ ಹಾಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಬರುವ ಜನರಲ್ಲಿ ಒಂದು ಪಾಲನ್ನು ತನ್ನ ಬಲಿಯಾಗಿ ಪಡೆದುಕೊಳ್ಳುವ ಕ್ರಿಶ್ಚಿಯನ್ ದ್ವೀಪದ ಸಮುದ್ರದಂಡೆ ಒಂದು ದ್ರವರೂಪದ ಸ್ಮಶಾನ!” ಅಂತ ಹೇಳಿ ಒಮ್ಮೆ ಉಸಿರೆಳೆದುಕೊಂಡ. ಮತ್ತೆ ಅದೇ ಕುಗ್ಗಿ ಹೋದ ಕಣ್ಣುಗಳಿಂದ ನಿರ್ಲಿಪ್ತ ನೋಟವನ್ನು ನನ್ನೆಡೆಗೆ ಬೀರಿದ.

“ನೀನು ಇಂಡಿಯನ್ ಎಂದೆ ಅಲ್ಲವಾ?” ಅಂತ ಕೇಳಿದ.

ನಾನು ಅಹುದೆಂಬಂತೆ ತಲೆಯಾಡಿಸಿದೆ.

“ನಮ್ಮ ಜೊತೆಗೆ ನಿಮ್ಮ ಕಡೆಯ ಗುಜರಾತಿ ಕುಟುಂಬವೊಂದು ಬಂದಿತ್ತು. ನಿಮ್ಮ ಕಡೆ ಮುಟ್ಟಿಸಿಕೊಳ್ಳಬಾರದ ಜನ ಇದ್ದಾರಂತಲ್ಲ ಆ ಜನ ಅವರು. ನಮ್ಮ ಶ್ರೀಲಂಕಾದಿಂದ ಕೆಲಸ ಹುಡುಕಿಕೊಂಡು ವಲಸೆ ಹೋಗಿದ್ದ ಕುಟುಂಬವೊಂದು ಈ ಗುಜರಾತಿ ಕುಟುಂಬದ ಜೊತೆ ಗೆಳೆತನ ಬೆಳೆಸಿಕೊಂಡಿತ್ತು. ನಾನು ಸಿಂಗಪೂರ ಕಡೆಯಿಂದ ಬಂದ ಹಾಗೆ ಕೆಲವರು ಮೀನುಗಾರಿಕೆ ದೋಣಿಯ ಮೂಲಕ ಇಂಡಿಯಾಕ್ಕೆ ಹೋಗಿ ಅಲ್ಲಿ ಪಾಂಡಿಚೆರಿ, ಚೆನೈ, ಮಂಗಳೂರು ಕಡೆಯಿಂದ ಬೇರೆ ಬೇರೆ ದೇಶಗಳಿಗೆ ದೋಣಿಗಳಲ್ಲಿ ಸಾಗುತ್ತಾರೆ. ಈ ದೋಣಿಗಳು ಪ್ರತಿದಿನ ಇರುವುದಿಲ್ಲ. ತುಂಬಲು ಸಾಕಾಗುವಷ್ಟು ಜನ ಕೂಡುವಷ್ಟು ದಿನ ದೋಣಿಗಳು ಕಾಯುತ್ತಿರುತ್ತವೆ. ಹೀಗೆ ಕಾಯುವಿಕೆ ಕೆಲವೊಮ್ಮೆ ವಾರ ತಿಂಗಳುಗಳು ಹಾಗೆಯೇ ಕಾಯುತ್ತಿರುತ್ತವೆ. ನಮ್ಮ ಕಡೆಯ ಕುಟುಂಬವೊಂದಕ್ಕೆ ದೋಣಿ ಹತ್ತಲು ಕೆಲ ದಿನಗಳು ಬಾಕಿ ಇದ್ದದ್ದರಿಂದ ಕೊಂಚ ಹಣ ಸಂಪಾದಿಸಿಬಿಡೋಣ ಅಂತ ಕೂಲಿಗೆ ಸೇರಿದ್ದಾಗ ಪರಿಚಯವಾದ ಕುಟುಂಬವದು. ಅಲ್ಲಿ ಆ ಜನರ ಮೇಲೆ ಅವರು ಬೀಫ್ ತಿನ್ನುತ್ತಾರೆ ಎನ್ನುವ ಕಾರಣಕ್ಕಾಗಿ ದಾಳಿಗಳಾಗುತ್ತಿದ್ದವಂತೆ! ಪದೇ ಪದೇ ಜೀವಕ್ಕೆ ಬೆದರಿಕೆ ಬರುತ್ತಿದ್ದವಂತೆ. ಹಾಗಾಗಿ ಅವರೂ ತಮ್ಮ ಇದ್ದ ಬದ್ದ ಹರುಕು ಮುರುಕು ಬರಡು ಜಮೀನನ್ನು ಮಾರಿಕೊಂಡು ಒಂದು ದೋಣಿಯನ್ನು ಹತ್ತಿಕೊಂಡು ಇಲ್ಲಿಯವರೆಗೂ ಬಂದಿದ್ದರು.

ಅವರಿಗೆ ದೋಣಿಯವನೂ ಏಜೆಂಟರುಗಳೆಲ್ಲರೂ ಯಾವುದೇ ಕಾರಣಕ್ಕೂ ಹಿಂದಿಯಲ್ಲಿ ಮಾತನಾಡಬೇಡಿ ಅಂತ ಪದೇ ಪದೇ ತಾಕೀತು ಮಾಡಿದ್ದರು. ಅವರ ದುರಾದೃಷ್ಟ ನೋಡು. ನಾವೆಲ್ಲಾ ಸಾಲಾಗಿ ನಿಂತು ರಫ್ಯೂಜಿ ಸ್ಟೇಟಸ್ ಗಾಗಿ ಸಂದರ್ಶನ ನೀಡುತ್ತಿದ್ದೆವು. ಅವರಿಗೆ ಇಂಡಿಯಾ ಮೂಲದ ಅಧಿಕಾರಿಯೇ ಸಂದರ್ಶನದ ಸರದಿಯಲ್ಲಿ ಬಂದ. ಇವರ ಹರಕು ಮುರುಕು ತಮಿಳನ್ನು ನೋಡಿ ನೀವು ಇಂಡಿಯಾದಿಂದ ಬಂದಿದ್ದೀರಾ? ಏನೂ ಚಿಂತೆ ಮಾಡಬೇಡಿ ನಾನೂ ನಿಮ್ಮವನೇ! ನಿಮಗೆ ಎಲ್ಲಾ ಸಹಾಯ ಮಾಡುತ್ತೇನೆ, ಸಂಕೋಚವಿಲ್ಲದೇ ಹೇಳಿ ಅಂತ ಹಿಂದಿಯಲ್ಲಿ ಕೇಳಿದ. ಈ ಮೂರ್ಖರು ನಮ್ಮ ದೇಶದ ಬಾಂಧವ ಸಿಕ್ಕಿದ, ನಾವು ಅನಾಥರಲ್ಲ ಎಂದು ಹಿಗ್ಗಿ ಹಿಂದಿಯಲ್ಲಿ ಮಾತನಾಡಲು ಶುರುವಿಟ್ಟುಕೊಂಡರು. ಆತ ತಕ್ಷಣ ತನ್ನ ಮೇಲಾಧಿಕಾರಿಗಳನ್ನು ಕರೆಕಳಿಸಿ ಇವರನ್ನು ಹಿಡಿದುಕೊಟ್ಟ. ರೆಫ್ಯೂಜಿ ಸ್ಟೇಟಸ್ ಬೇಕೆಂದರೆ ಯುದ್ಧ ಪೀಡಿತ ಪ್ರದೇಶದಿಂದ ಬಂದಿರಬೇಕು.”

ಮತ್ತೊಂದು ತುತ್ತು ಪಿಜ್ಜಾವನ್ನು ಬಾಯಲ್ಲಿಟ್ಟುಕೊಂಡು ನಿಧಾನವಾಗಿ ಜಗಿಯುತ್ತಾ…
“ನಿಮ್ಮ ದೇಶದಲ್ಲಿ ಕಾಶ್ಮೀರ ಅಂತ ರಾಜ್ಯವಿದೆಯಂತೆ ಹೌದಾ?” ಅಂದ.

“ಹೌದು. ಬಡಗು ತುದಿಯಲ್ಲಿದೆ” ಅಂದೆ.

“ತಾಂತ್ರಿಕವಾಗಿ ನೋಡುವುದಾದರೆ ಅದು ಯುದ್ಧ ಪೀಡಿತ ಪ್ರದೇಶ. ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಿಡಿಯುವಷ್ಟು ಬಾಂಬುಗಳು ಗುಂಡುಗಳು ಅಲ್ಲಿ ಸಿಡಿಯುತ್ತವೆ. ಅಷ್ಟೇ ಸೈನಿಕರೂ ಇದ್ದಾರೆ. ಆದರೆ ಆ ಪ್ರದೇಶದ ಜನರಿಗೆ ಯಾವ ದೇಶದಲ್ಲೂ ನಿರಾಶ್ರಿತ ಅಂದರೆ ರೆಫ್ಯೂಜಿ ನೆಲೆಗಳು ಸಿಗುವುದಿಲ್ಲ. ಯಾಕೆಂದರೆ ಅದು ಇಂಡಿಯಾದೊಳಗೆ ಬರುತ್ತದೆ ಮತ್ತು ಇಂಡಿಯಾ ಯುದ್ಧಪೀಡಿತ ದೇಶವಲ್ಲ! ನಮಗಿರುವಷ್ಟೂ ಸೌಲಭ್ಯ ಅವರಿಗಿಲ್ಲ.”

ತನ್ನದೇ ಬದುಕು ಮುಳುಗಿರುವ ಸಂದರ್ಭದಲ್ಲೂ ಈ ಮನುಷ್ಯ ತನಗೆ ಸಂಬಂಧವೇ ಇಲ್ಲದವರ ಬಗ್ಗೆ ಚಿಂತಿಸುತ್ತಿದ್ದಾನಲ್ಲ. ಸಾಕಷ್ಟು ಜನರಿಗೆ ಹೋಲಿಸಿಕೊಂಡು ತನ್ನ ಬದುಕನ್ನು ಇಷ್ಟು ಮೆಚ್ಚುತ್ತಿದ್ದಾನಲ್ಲ ಎಂದೆನಿಸಿತು. “ಆ ಗುಜರಾತಿ ಕುಟುಂಬ ಏನಾಯಿತು?” ಅಂತ ಕೇಳಿದೆ.

“ಆಗುವುದೇನಿದೆ? ಅಧಿಕಾರಿಗಳು ಅವರನ್ನು ವಾಪಸ್ಸು ಭಾರತಕ್ಕೆ ಕಳಿಸಿದರು. ಸತತವಾಗಿ ಸಾವಿನೊಡನೆ ಹೋರಾಡಿ ಹೊಸ ಬದುಕು ಕಟ್ಟಿಕೊಳ್ಳಲು ಬಂದವರಿಗೆ ತಮ್ಮದೇ ದೇಶದ ಮನುಷ್ಯ ಬೆನ್ನಿಗೆ ಚೂರಿ ಹಾಕಿಬಿಟ್ಟ. ನಾನು ಖಂಡಿತಾ ಆ ಅಧಿಕಾರಿಯದ್ದು ಕರ್ತವ್ಯ ನಿಷ್ಠೆ ಎನ್ನಲಾರೆ. ಅದು ಭ್ರಷ್ಠಾಚಾರ. ನಿಮ್ಮ ದೇಶದ ಜನ ಎಲ್ಲಿದ್ದರೂ ಭ್ರಷ್ಠರೇ! ಎಲ್ಲಕ್ಕಿಂತ ಗಾಬರಿ ಪಡಬೇಕಾದದ್ದು ಏನು ಗೊತ್ತಾ? ವಾಪಸು ಹೋದರಲ್ಲ ಆ ಗುಜರಾತಿ ಕುಟುಂಬದವರು ಅವರ ಬಳಿ ಪಾಸ್ ಪೋರ್ಟ್ ಇರಲಿಲ್ಲ. ಅನಧಿಕೃ ಬಾಗಿಲ ಮೂಲಕ ದೇಶದ ಹೊರ ಹೋದದ್ದರಿಂದ ಅವರು ಮಾಡಿದ್ದು ಅಪರಾಧ. ಅವರ ಹುಟ್ಟಿನ ಬಗ್ಗೆ ನಿರ್ಧಾರವಾಗುವವರೆಗೂ, ಹೊರದೇಶಕ್ಕೆ ಅನಧಿಕೃತವಾಗಿ ಹೋಗಿ ಬಂದಿದ್ದರ ಶಿಕ್ಷೆಯೂ ಸೇರಿದಂತೆ ಅವರು ಜೈಲಿನಲ್ಲಿ ಕೊಳೆಯಬೇಕು.

ಕಾನೂನು ಹೋರಾಟಕ್ಕೆ ಅವರ ಬಳಿ ಹಣ ಇಲ್ಲ. ಇದ್ದಬದ್ದ ಜಮೀನು ಮಾರಿಕೊಂಡದ್ದರಿಂದ ಬದುಕೂ ಇಲ್ಲ. ಅಪರಾಧಿಗಳೆಂಬ ಹಣೆ ಪಟ್ಟಿ ಕಟ್ಟಿಕೊಂಡು ಬದುಕಬೇಕು. ಅಪರಾಧಿಗಳಿಗೆ ಕೆಲಸ ಯಾರು ಕೊಡುತ್ತಾರೆ? ಜೈಲಿನಲ್ಲಿ ಕೊಳೆಯುತ್ತಿರುವವರೆಗೂ ನಿಮ್ಮ ನಾಗರಿಕ ಸಮಾಜದಿಂದ ಜೀವಭಯ ಇಲ್ಲ ಎಂಬುದೊಂದೇ ಅವರು ಸಮಾಧಾನ ಪಟ್ಟಿಕೊಳ್ಳಬೇಕಾದ ವಿಷಯ! ಆರು ವರ್ಷದ ಹಿಂದಿನ ಕತೆ. ನಿನ್ನೆ ಮೊನ್ನೆ ನಡೆದಂತಿದೆ.” ಅಂತ ಹೇಳಿ ಮತ್ತೊಂದು ಹೊಸ ತುಣುಕನ್ನು ಕೈಗೆತ್ತಿಕೊಂಡ.

“ನಿನ್ನ ಕತೆ ಮುಂದೇನಾಯಿತು?” ಅಂತ ಕೇಳಿದೆ.

“ನನ್ನನ್ನು ಮತ್ತು ಎಲ್ಲರನ್ನೂ ದಾಖಲೆಗಳಿಲ್ಲದೇ ಮತ್ತು ಅಧಿಕೃತವಲ್ಲದ ಬಾಗಿಲುಗಳಿಂದ ದೇಶದೊಳಕ್ಕೆ ಬಂದಿರುವ ಕಾರಣಕ್ಕಾಗಿ ಸೆರೆಮನೆಯಲ್ಲಿಡಲಾಯಿತು. ಸಮಯಕ್ಕೆ ಊಟ ಕೊಡುತ್ತಿದ್ದರು.ನಿದ್ದೆ ಆಗುತ್ತಿತ್ತು. ಜೀವಭಯ ಇರಲಿಲ್ಲ. ಎಷ್ಟೋ ವರ್ಷಗಳ ನಂತರ ಸಾಯುತ್ತೇನೆ ಎಂಬ ಭಯವಿಲ್ಲದೇ ಜೈಲಿನಲ್ಲಿ ದಿನ ಕಳೆದಿದ್ದೆ. ಸೆರೆವಾಸ ಎಷ್ಟು ಅಂತ ಗೊತ್ತಿರಲಿಲ್ಲ. ಬೇರೆ ಬೇರೆ ಊರುಗಳಿಗೆ ನಮ್ಮನ್ನು ಸ್ಥಳಾಂತರಿಸುತ್ತಿದ್ದರು. ಆರು ವರ್ಷಗಳ ಕಾಲ ಹೀಗೆ ಬೇರೆ ಬೇರೆ ಊರುಗಳಿಗೆ ಸ್ಥಳಾಂತರ ನಡೆಯುತ್ತಿತ್ತು. ಈ ನಡುವೆ ಇಂಗ್ಲೀಷ್ ಕಲಿಸಿದರು, ಕೆಲವು ಅಡುಗೆಗಳನ್ನು ಕಲಿಸಿದರು. ಇಲ್ಲಿ ಬದುಕಲು ಬೇಕಾದ ಕೆಲವು ಕುಶಲ ಕಲೆಗಳನ್ನು ಹೇಳಿಕೊಟ್ಟರು. ಆದರೆ ನನಗೆ ಹೊರ ಜಗತ್ತಿನೊಡನೆ ಸಂಪರ್ಕವಿರಲಿಲ್ಲ. ಫೋನ್ ಮಾಡುವ ಅವಕಾಶವಿರಲಿಲ್ಲ.

ಒಂದು ವಾರದ ಹಿಂದೆ ನನ್ನನ್ನು ಬಿಡುಗಡೆ ಮಾಡಿ ಟೆಂಪರರಿ ರೆಸಿಡೆಂಟ್ ಅಂದರೆ ತಾತ್ಕಾಲಿಕ ನಿವಾಸಿ ಅಂತ ವಿಸಾ ಕೊಟ್ಟಿದ್ದಾರೆ. ಅಂದರೆ ನಾನು ಯಾವಾಗ ಬೇಕಾದರೂ ಈ ದೇಶದಿಂದ ಹೊರ ನೂಕಲ್ಪಡಬಹುದು. ಆದರೆ ಇಲ್ಲಿ ಇರುವವರೆಗೆ ನನಗೆ ದುಡಿಯುವ ಹಕ್ಕಿದೆ. ಕಳೆದೊಂದು ವಾರದಿಂದ ನನ್ನ ಹೆಂಡತಿ ಮತ್ತು ಮಗುವನ್ನು ಸಂಪರ್ಕಿಸಲು ಯತ್ನಿಸುತ್ತಿದ್ದೇನೆ. ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ದೊಡ್ಡ ದೇಶಗಳಲ್ಲಿ ಕೂಲಿ ಕೆಲಸ ಸಿಗುವುದಕ್ಕೂ ತತ್ವಾರ. ಅಲ್ಲೂ ಮೊದಲು ಬಿಳಿಯರಾರಾದರೂ ಸಿಗುತ್ತಾರೆಯೇ ಅಂತ ಕಾದು ನೋಡಿ ಇಲ್ಲವಾದರೆ ಮಾತ್ರ ನಮ್ಮಂಥವರಿಗೆ ಕೊಡುತ್ತಾರೆ. ಒಂದೆರಡು ಹೋಟೆಲ್ಲುಗಳಿಗೆ ತೊಳೆಯುವ ಬಳಿಯುವ ಕೆಲಸಕ್ಕಾಗಿ ಬೇಡಿಕೊಂಡು ದಿನವೂ ಅಲೆಯುತ್ತಿದ್ದೇನೆ. ಕಕ್ಕಸು ತೊಳೆಯುವ ಕೆಲಸಕ್ಕೆ ಹೋದರೂ ಅಲ್ಲಿ ಇಂಟರ್ ವ್ಯೂ ಕೊಡಬೇಕು. ಯಾವ ರೀತಿಯ ಕಲೆಗೆ ಯಾವ ಕೆಮಿಕಲ್ಸ್ ಹಾಕಬೇಕು, ನೆಲಕ್ಕೆ ಹಾಕುವ ಕೆಮಿಕಲ್ ಗೂ ಬೇಸಿನ್ ಗೆ ಹಾಕುವ ಕೆಮಿಕಲ್ ಗೂ ಏನು ವ್ಯತ್ಯಾಸ ಎಂಬಂತ ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ. ಇದೊಂದು ದಿನಚರಿ ನನಗೆ!

ಚರ್ಚ್ ನವರು ದಿನಕ್ಕೆ ಮೂರು ಬಾರಿ ಕೊಡುವ ಊಟ ಮಾಡಿಕೊಂಡು ಯಾರೋ ಪುಣ್ಯಾತ್ಮರು ಕೊಟ್ಟ ಸ್ಲೀಪಿಂಗ್ ಬ್ಯಾಗ್ ಹೊದ್ದುಕೊಂಡು ಫುಟ್ ಪಾತ್ ಮೇಲೆ ಮಲಗುತ್ತೇನೆ. ಒಮ್ಮೊಮ್ಮೆ ನನ್ನ ಮುಂದೆ ಕೆಲವು ಕರುಣಾಳುಗಳು ಒಂದಷ್ಟು ಚಿಲ್ಲರೆ ಎಸೆದು ಹೋಗುತ್ತಾರೆ. ಅದನ್ನೆಲ್ಲ ಒಟ್ಟುಗೂಡಿಸಿ ನನ್ನ ಮನೆಗೆ, ಬಂಧುಗಳಿಗೆ ಫೋನ್ ಮಾಡಲು ಯತ್ನಿಸುತ್ತೇನೆ. ನನ್ನ ಕುಟುಂಬದ ಸ್ಥಿತಿಗತಿಯನ್ನು ತಿಳಿಯಲು ಪ್ರಯತ್ನಿಸುತ್ತೇನೆ. ಇವತ್ತಲ್ಲ ನಾಳೆ ಒಬ್ಬ ನನಗೆ ಕೂಲಿಯ ಕೆಲಸವನ್ನೋ, ಅಡುಗೆಯ ಕೆಲಸವನ್ನೋ ಕೊಡಬಹುದು. ಅಡುಗೆಯ ಕೆಲಸ ಸಿಕ್ಕರೆ ಒಳ್ಳೆಯ ಸಂಬಳ ಬರುತ್ತದೆ. ಆಗ ಹೆಂಡತಿ ಮಕ್ಕಳನ್ನು ಕರೆಸಿಕೊಳ್ಳಬಹುದು. ಈಗ ನನ್ನ ಮಗನಿಗೆ ಏಳು ವರ್ಷವಾಗಿರಬಹುದು, ಆತ ಶಾಲೆಗೆ ಹೋಗುತ್ತಿರಬಹುದು. ಆತ ಒಮ್ಮೆ ನನ್ನನ್ನು ‘ಅಪ್ಪಾ..’ ಅಂತ ಕೂಗುವುದನ್ನು ಕೇಳಲು ನನ್ನ ಕಿವಿಗಳು ಕಾತರಿಸುತ್ತಿವೆ. ನನ್ನ ಹೆಂಡತಿ ಇಷ್ಟು ವರ್ಷದ ಸಂಪರ್ಕ ಸಿಗದ ಕಾರಣ ನಾನು ಕಾಣೆಯಾಗಿದ್ದೇನೆ ಅಥವಾ ಸತ್ತು ಹೋಗಿದ್ದೇನೆ ಅಂದುಕೊಂಡಿರಬಹುದು. ಪುರಾಣಗಳ ಪ್ರಕಾರ ಏಳು ವರ್ಷಗಳ ಕಾಲ ಕಾಣದಿದ್ದರೆ ಅವನು ಸತ್ತಿರುವನು ಅಂತ ಪರಿಗಣಿಸ್ತಾರಲ್ವೇ? ನಮ್ಮ ಕಾನೂನೂ ಹಂಗೇ ಪರಿಗಣಿಸುತ್ತೆ! ಅವಳು ನಾನು ಸತ್ತೇನೆಂದುಕೊಂಡು ಮತ್ತೊಬ್ಬನನ್ನು ಮದುವೆಯಾಗಿಬಿಟ್ಟರೆ ಏನು ಗತಿ? ಆದಷ್ಟು ಬೇಗ ಆಕೆಯನ್ನು ಸಂಪರ್ಕಿಸಬೇಕು.” ಅಂತ ಹೇಳಿದ.

ಬತ್ತಿಹೋದ ನದಿಪಾತ್ರದ ಆಳಕ್ಕೆ ತೋಡಿದ ಒರತೆಯಲ್ಲಿ ನಿಧಾನವಾಗಿ ನೀರಿನ ಪಸೆ ಕಟ್ಟಿಕೊಳ್ಳುವಂತೆ ಆತನ ಕಣ್ಣುಗಳು ಹನಿಗಟ್ಟಲು ಯತ್ನಿಸುತ್ತಿದ್ದವು.

ಈಗಾಗಲೇ ಇವನಿಗಾಗಿ ಒಂದು ಬಸ್ಸನ್ನು ಕಳೆದುಕೊಂಡಿದ್ದೆ. ಜನರೇ ಇಲ್ಲದ ಈ ದೇಶಗಳಲ್ಲಿ ಸಾರಿಗೆ ಬಸ್ಸುಗಳು ವಿರಳ. ಮುಂದೆ ಬರಲಿರುವುದು ಕಡೆಯ ಬಸ್ಸು. ಅದನ್ನೂ ತಪ್ಪಿಸಿಕೊಂಡರೆ ದುಬಾರಿ ಟ್ಯಾಕ್ಸಿಗಾಗಿ ಮತ್ತೆ ಹಣ ತೆರಬೇಕು. ನಿಧಾನಕ್ಕೆ ಎದ್ದು ಆತನ ಹೆಗಲ ಮೇಲೆ ಕೈ ಇಟ್ಟು,
“ನಿಧಾನಕ್ಕೆ ಪಿಜ್ಜಾ ಮುಗಿಸು. ನೈಸ್ ಮೀಟಿಂಗ್ ಯೂ. ಮತ್ತೆ ಸಿಗೋಣ. ನನಗೆ ಬಸ್ಸು ಬರುವ ಹೊತ್ತಾಯಿತು” ಎಂದೆ.

ಆತ ನನ್ನೆಡೆಗೆ ನೋಡಿ ಎರಡೇ ಎರಡು ಸಾರಿ ತಲೆಯಾಡಿಸಿ ಮತ್ತೆ ಪಿಜ್ಜಾ ಲೋಕದಲ್ಲಿ ತೂರಿಹೋದ. ನಾನು ಹೊರಬಂದು ನನ್ನ ಹೆಂಡತಿಗೆ ಫೋನಾಯಿಸಿದೆ.

“ಪದಪಕುಸಿಯೆ ನಮಗೆ ನೆಲವಾದರೂ ಇದೆ. ಆದರೆ ನೆಲವೇ ಇಲ್ಲದಂತಹ ಜನರು ಈ ಜಗತ್ತಿನಲ್ಲಿದ್ದಾರೆ! ನಾವು ಭಯಂಕರ ಸುಖವಾಗಿದ್ದೇವೆ” ಅಂತ ಹೇಳಿದೆ!