ಅಕ್ಬರ್ ಅರಮನೆಗೆ ಮರಳಿ ಹಲವಾರು ದಿನಗಳಾದರೂ ಹರಿದಾಸರು ಅವರ ಸ್ಮೃತಿಯಿಂದ ದೂರವಾಗುವುದೇ ಇಲ್ಲ… ಕೂತರೂ ನಿಂತರೂ ಹರಿದಾಸರೇ… ಒಂದು ದಿನ ಅಕ್ಬರ್ “ತಾನಸೇನ್ ಅಂತಹಾ ಗುರುಗಳಿಂದ ಪಾಠ ಕಲಿತ ನಿಮ್ಮ ಗಾಯನವೇಕೆ ಆ ಮಟ್ಟಕ್ಕಿಲ್ಲ” ಎಂದು ಕೇಳುತ್ತಾರೆ. ಆಗ ತಾನಸೇನ್ ಹೇಳುತ್ತಾರೆ “ಜಹಾಪನಾ ನಾನು ನಿಮ್ಮನ್ನು ಮೆಚ್ಚಿಸಲಿಕ್ಕಾಗಿ ಹಾಡುತ್ತೇನೆ, ಹಾಗಾಗಿ ನನ್ನ ಕಲೆಗಾರಿಕೆ ಆ ದೈವತ್ವಕ್ಕೆ ಏರಲಿಲ್ಲ. ಆದರೆ ನನ್ನ ಗುರುಗಳು ತಮ್ಮ ಆತ್ಮತೃಪ್ತಿಗಾಗಿ, ದೈವ ಭಕ್ತಿಗಾಗಿ ಹಾಡುತ್ತಾರೇ ವಿನಾ ಇನ್ಯಾರನ್ನೋ ಮೆಚ್ಚಿಸಲಿಕ್ಕಾಗಿ ಅಲ್ಲ. ಹಾಗಾಗಿ ಅವರ ಗಾಯನ ದೈವೀಕವಾಗಿದೆ….” ಎನ್ನುತ್ತಾರೆ. ಅಕ್ಬರ್ ಮೌನಕ್ಕೆ ಜಾರುತ್ತಾರೆ.
ಆಶಾ ಜಗದೀಶ್ ಅಂಕಣ

 

ತಾನ್ಪುರ ಡ್ರಾಯ್ಡ್ ನಲ್ಲಿ ತಂಬೂರ ಶ್ರುತಿ ಹಚ್ಚಿದ ಕೂಡಲೆ ನನ್ನ ಒಂದೂ ಮುಕ್ಕಾಲು ವರ್ಷದ ಪುಟ್ಟ ಮಗಳು ಮೊಬೈಲ್ ಹಿಡಿದುಕೊಂಡು ಚಪ್ಪಾಳೆ ಹೊಡೆಯುತ್ತಾ ಆ… ಎನ್ನುವ ಆಲಾಪ ಶುರುಮಾಡುತ್ತದೆ. ಈ ಅದ್ಭುತವನ್ನು ತೋರಿಸಲಿಕ್ಕಾಗಿ ಗಂಡನನ್ನು ಎಳೆತಂದು ನಿಲ್ಲಿಸಿದಾಗ ಅವನ ಪಾರವಿಲ್ಲದ ಸಂತಸದ ನಗುವಿನಲ್ಲಿ ನನ್ನ ಭಗ್ನ ಕನಸೊಂದು ಜೀವಂತವಾದಂತೆನಿಸುತ್ತದೆ…. ಅದು ಭರವಸೆ. ಮತ್ತದೇ ನಮ್ಮನ್ನು ನಡೆಸುತ್ತದೆ. ಸಾವಿರ ಸೋಲುಗಳ ನಂತರದ ಸಾವಿರದೊಂದನೆ ಸೋಲಿಗೆ ಧೈರ್ಯಗುಂದದೆ ಎದೆಯೊಡ್ಡುವ ಛಲ ತುಂಬುತ್ತದೆ…. ಇದಕ್ಕೆ ವ್ಯತಿರಿಕ್ತ ಅಂದರೆ ನನ್ನ ಮಗ ಚಿಕ್ಕವನಿದ್ದಾಗ ಅದ್ಯಾಕೋ ಗೊತ್ತಿಲ್ಲ, ನಾ ಹಾಡಲು ಶುರು ಮಾಡಿದರೆ ಸಾಕು, ಅವ ಅಳಲು ಶುರು ಮಾಡಿಬಿಡುತ್ತಿದ್ದ. ಅವನ ಕಾಟಕ್ಕೆ ನಾ ಜೋಗುಳ ಹಾಡೋದನ್ನೂ ಬಿಟ್ಟುಬಿಟ್ಟಿದ್ದೆ. ಮತ್ತೆ ಅವ ದೊಡ್ಡೋನಾದ ಮೇಲೆಯೇ ನಾ ಹಾಡಲು ಶುರು ಮಾಡಿದ್ದು… ಈಗ ನೆನೆಸಿಕೊಂಡರೆ ನಗು ಬರುತ್ತದೆ. ಆದರೆ ಪವಾಡದ ವಿಷಯವೆಂದರೆ ಮೊನ್ನೆ ಅವನ ಮ್ಯಾಮ್ ಹೇಳಿದಾರೆ ಅಂತ “ಅಮ್ಮ ನಿನ್ನ ಎದೆಯಾಳದಲ್ಲಿ…” ಭಾವಗೀತೆಯನ್ನು ದುಂಬಾಲು ಬಿದ್ದು ಕಲಿಸಿಕೊಂಡು ಹೋಗಿದ್ದ…. ಮತ್ತೆ ನಗು.. ಈ ಎಲ್ಲ ಪುಟ್ಟ ಪುಟ್ಟ ಸಿಹಿ ಕಹಿ ಅನುಭವಗಳು ಅದೆಷ್ಟು ಚಂದ.. ಬದುಕಿಗೆ ಇವು ಅಗತ್ಯ ಅಂತಲೂ ಅನಿಸುತ್ತದೆ.

ಸಂಗೀತದ ಸಪ್ತಸ್ವರಗಳ ಬಗ್ಗೆ ಮೊಟ್ಟ ಮೊದಲು ತಿಳಿದಾಗ ಬಹಳ ಅಚ್ಚರಿಯಾಗಿತ್ತು. ಕಾರಣ ಸಪ್ತಸ್ವರಗಳು ಎನ್ನುವ ಆ ಏಳು ಸ್ವರಗಳು ಮನುಷ್ಯನ ಆವಿಷ್ಕಾರವಲ್ಲ, ಬದಲಾಗಿ ಅದು ಅದಾಗಲೇ ಪ್ರಕೃತಿಯಲ್ಲಿದ್ದದ್ದು ಮತ್ತು ಮನುಷ್ಯ ಅದನ್ನು ಕಾಣುವ ತದಾತ್ಮ್ಯ ತಪೋ ಕಣ್ಣುಗಳಿಂದ ಕಂಡುಕೊಂಡಿದ್ದಾನೆ ಅಷ್ಟೇ ಎನ್ನುವ ವಿಷಯ ತಿಳಿದು. ಸಪ್ತಸ್ವರಗಳೆಂಬ ಸ್ವರಗಳಲ್ಲಿ ಮೊದಲಿಗೆ ಬರುವ ಷಡ್ಜ (ಸ) ವನ್ನು ನವಿಲಿನಿಂದ, ರಿಷಭ (ರಿ) ವನ್ನು ಕುರಿಯ ಒದರುವಿಕೆಯಿಂದ, ಗಾಂಧಾರ (ಗ) ವನ್ನು ಅಜಧ್ವನಿ(ಆಡಿನ ಕೂಗು)ಯಿಂದ, ಮಧ್ಯಮ (ಮ) ವನ್ನು ಕ್ರೌಂಚ ಸ್ವರದಿಂದ, ಪಂಚಮ (ಪ) ವನ್ನು ಕೋಗಿಲೆಯ ದನಿಯಿಂದ, ದೈವತ (ದ) ವನ್ನು ಕುದುರೆಯ ಹೂಂಕರಿಸುವಿಕೆಯಿಂದ ಮತ್ತು ನಿಷಾದ (ನಿ) ವನ್ನು ಮದಗಜದ ಒದರುವಿಕೆಯಿಂದ ಕಂಡುಕೊಳ್ಳಲಾಗಿದೆಯಂತೆ. ಶಬ್ದದ ಬಗ್ಗೆ ಹೈಸ್ಕೂಲಿನಲ್ಲಿ ಕಲಿಯುವಾಗ ಶಬ್ದ, ಗದ್ದಲ ಮತ್ತು ಸಂಗೀತದ ನಡುವಿನ ಅರ್ಥ ವ್ಯತ್ಯಾಸಗಳನ್ನು ಭೌತಶಾಸ್ತ್ರದ ಪಾಠ ತಿಳಿಸಿಕೊಟ್ಟಿತ್ತು. ಅದು ಸಂಗೀತವನ್ನು ಕಲಿಯುವಾಗ ಮನದಟ್ಟು ಮಾಡಿಕೊಳ್ಳಲು ಅನುವಾಯಿತು.

ಗದ್ದಲದಲ್ಲಿ ಶಬ್ದ ತರಂಗಗಳು ಯಾವುದೇ ಶಿಸ್ತಿಲ್ಲದೆ ಚಲಿಸಿ ಕಿರಿಕಿರಿ ಉಂಟುಮಾಡಿದರೆ ಸಂಗೀತ ತನ್ನ ಶಿಸ್ತುಬದ್ಧ ತರಂಗ ಚಲನೆಯಿಂದಾಗಿ ಕಿವಿಗೆ ಇಂಪಾಗಿ ತಂಪಾಗಿ ಕೇಳಿಸುತ್ತದೆ. ಅಷ್ಟೇ ಅಲ್ಲದೆ ಶ್ರುತಿ ಮತ್ತು ತಾಳ ಎನ್ನುವ ತಂದೆತಾಯಿಯರ ಅಂಕೆಯಲ್ಲಿ ಬೆಳೆದ ಸಂಗೀತ ಸುಸಂಸ್ಕೃತ ಮತ್ತು ಸಂಸ್ಕಾರವಂತ ಸಹ… (ಶ್ರುತಿ ಮಾತಾ, ಲಯ ಪಿತ) ಪುರಂದರದಾಸರು “ರಾಗವಿಲ್ಲದ ತಾಳವಿಲ್ಲದ ಹಾಡನ್ನು ಹರಿ ಕೇಳನೋ… ತಾಳನೋ…” ಎಂದು ಹೇಳುವುದರೊಂದಿಗೆ ರಾಗ ತಾಳಗಳ ಪ್ರಾಮುಖ್ಯತೆ ಮತ್ತು ಗಾಯನಕ್ಕೆ ರಾಗ ತಾಳಗಳ ಅನಿವಾರ್ಯತೆಯ ಬಗ್ಗೆ ಬಹಳ ಸೂಚ್ಯವಾಗಿ ಹೇಳಿದ್ದಾರೆ.

ಒಮ್ಮೆ ತಾನಸೇನರು ಆಸ್ಥಾನದಲ್ಲಿ ಸುಶ್ರಾವ್ಯವಾಗಿ ಹಾಡುತ್ತಾ ಕುಳಿತಿದ್ದಾರೆ. ಅಕ್ಬರ್ ತನ್ನ ಬೇಗಮ್ ರೊಂದಿಗೆ ತಲ್ಲೀನರಾಗಿ ಕುಳಿತು ಕೇಳುತ್ತಿದ್ದಾರೆ. ಗಾಯನ ಮುಗಿದಾಗ ಎಲ್ಲರ ಕಣ್ಣಲ್ಲೂ ಸಣ್ಣದೊಂದು ನೀರಿನ ಪೊರೆ. ಅಕ್ಬರರ ರಾಣಿ ಇನಾಮನ್ನು ನೀಡಿ “ತಾನಸೇನ್ ನಿಮ್ಮಂತಹ ಅದ್ಭುತ ಗಾಯಕ ಈ ಪ್ರಪಂಚದಲ್ಲಿ ಮತ್ತೊಬ್ಬರಿರಲಿಕ್ಕೆ ಸಾಧ್ಯವೇ ಇಲ್ಲ” ಎನ್ನುತ್ತಾರೆ. ಆಗ ತಾನಸೇನ್ “ಹಾಗನ್ನದಿರಿ ಮಹಾರಾಣಿ… ನಾನೊಬ್ಬ ಸಾಧಾರಣ ಗಾಯಕನಷ್ಟೇ… ನಿಜವಾದ ಅದ್ಭುತ ಗಾಯಕರೆಂದರೆ ಅದು ನನ್ನ ಗುರು ಹರಿದಾಸರು..” ಎನ್ನುತ್ತಾರೆ. ಅಕ್ಬರ್ ಮತ್ತು ಅವರ ರಾಣಿಯವರಿಗೆ ನಂಬಿಕೆಯೇ ಬರುತ್ತಿಲ್ಲ! ಕೊನೆಗೆ ಅಕ್ಬರ್ “ಇದನ್ನು ಪರೀಕ್ಷಿಸಲೇಬೇಕು, ನಿಮಗಿಂತಲೂ ಚಂದ ಹಾಡುತ್ತಾರೆಂದರೆ ಅದಿನ್ನೆಂತಹ ಗಾಯನವಿರಬಹುದು ಅವರದು…. ಅದನ್ನು ನಾನು ಕೇಳಲೇಬೇಕು…” ಎಂದು ತಾನಸೇನರನ್ನು ಹೊರಡಿಸಿಕೊಂಡು ಎದ್ದೇ ಬಿಟ್ಟರು. ಆಗ ತಾನಸೇನರು “ಜಹಾಪನಾ ಅವರು ಹಾಗೆಲ್ಲ ಯಾರೆಂದರೆ ಅವರ ಮುಂದೆ ಹಾಡುವುದಿಲ್ಲ” ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಾರೆ. ಅಕ್ಬರ್ ಒಪ್ಪುವುದಿಲ್ಲ. ಕೊನೆಗೆ ನಡೆಯಿರಿ ಒಮ್ಮೆ ಪ್ರಯತ್ನಿಸೋಣ ಎಂದು ಇಬ್ಬರೂ ಹೊರಡುತ್ತಾರೆ.

ಹರಿದಾಸರು ತಮ್ಮ ಕುಟೀರದಲ್ಲಿ ನೆಮ್ಮದಿಯಾಗಿ ಓಡಾಡಿಕೊಂಡಿದ್ದಾರೆ. ಅಕ್ಬರರೊಂದಿಗೆ ಆಗಮಿಸಿದ ತಾನಸೇನರು ಗುರುವಿಗೆ ನಮಸ್ಕರಿಸಿ ಅಕ್ಬರರ ಪರಿಚಯ ಮಾಡಿಕೊಡುತ್ತಾರೆ. ಅದು ಹರಿದಾಸರ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡುವುದಿಲ್ಲ. ಅಕ್ಬರ್ “ನಾನು ನಿಮ್ಮ ಗಾಯನವನ್ನು ಕೇಳಬೇಕು ದಯಮಾಡಿ ಹಾಡಿ..” ಎಂದು ಕೇಳಿಕೊಳ್ಳುತ್ತಾರೆ, “ನಾನು ಈ ಸಾಮ್ರಾಜ್ಯದ ಚಕ್ರವರ್ತಿ, ನನ್ನ ಮುಂದೆ ಹಾಡುವುದಿಲ್ಲ ಎನ್ನುತ್ತೀರಾ..” ಎಂದು ದರ್ಪದಿಂದಲೂ ಕೇಳಿ ನೋಡುತ್ತಾರೆ… ಆದರೆ ಹರಿದಾಸರು ಅವರ ಯಾವ ಮಾತಿಗೂ ಸೊಪ್ಪು ಹಾಕುವುದಿಲ್ಲ. ಬದಲಾಗಿ ತಾವೇ ಅವರನ್ನು ಕೋಪದಿಂದ ಬೈದು ಹೊರಗಟ್ಟುತ್ತಾರೆ. ಅಕ್ಬರರಿಗೆ ಬೈಸಿಕೊಂಡ ನೋವಿಗಿಂತಲೂ ಗಾಯನವನ್ನು ಕೇಳಲಾಗಲಿಲ್ಲವಲ್ಲ ಎನ್ನುವ ನೋವೇ ಹೆಚ್ಚಿನ ಪಾಲಿನದ್ದು.

(ತಾನಸೇನರು)

ತಾನಸೇನರು ಸಂತೈಸುತ್ತಾರೆ. ನಂತರ “ನಾವಿಬ್ಬರೂ ಇಲ್ಲೇ ಎಲ್ಲಾದರೂ ಅಡಗಿ ಕೂರೋಣ.. ಗುರುಗಳಿಗೆ ಮನಸಾದಾಗ ಅವರು ಹಾಡುತ್ತಾರೆ… ಆಗ ಕೇಳಿಕೊಂಡು ಹೊರಡೋಣ…” ಎಂದು ತಾನಸೇನ್ ಸೂಚಿಸುತ್ತಾರೆ. ಅಕ್ಬರರಿಗೂ ಅದು ಸರಿ ಅನಿಸುತ್ತದೆ. ಇಬ್ಬರೂ ಮರವೊಂದರ ಕೆಳಗೆ ಬಚ್ಚಿಟ್ಟುಕೊಳ್ಳುತ್ತಾರೆ. ಬಹಳಷ್ಟು ಸಮಯದ ನಂತರ ಇದ್ದಕ್ಕಿದ್ದಂತೆ ಪ್ರಕೃತಿ ಬದಲಾಗತೊಡಗುತ್ತದೆ. ಅರೆ ಕ್ಷಣದ ಹಿಂದಿದ್ದ ವಾತಾವರಣ ಸಂಪೂರ್ಣ ಬದಲಾಗಿಬಿಡುತ್ತದೆ.

ಗಾಳಿ ತಣ್ಣಗೆ ಶ್ರುತಿ ಹಿಡಿದಂತೆ ತೀಡುತ್ತಿದೆ, ಹರಿವ ನದಿಯ ಝುಳು ಝುಳುವಿನಲ್ಲೂ ಎಂಥದೋ ಲಯಗಾರಿಕೆ… ಮುಗಿಲು ಚಲಿಸುವುದನ್ನು ಮರೆತು ನಿಂತಿದೆ…. ಉರಿವ ಸೂರ್ಯನ ಕಣ್ಣೂ ತಪಸ್ಸಿಗೆ ಕುಳಿತಂತೆ ಅರೆನಿಮೀಲಿತವಾಗಿದೆ…. ಇಡೀ ಪ್ರಕೃತಿಯೇ ಕರುಣಾ ರಸದಲ್ಲಿ ಮಿಂದು ಭಕ್ತಿ ರಸದಲ್ಲಿ ತೋಯ್ದಂತೆ ಕಾಣಿಸಲು ಶುರುವಾಗುತ್ತದೆ…. ಅಕ್ಬರರ ಕಣ್ಣುಗಳಿಂದ ಅನಾಯಾಚಿತ ಅಶ್ರುಧಾರೆ… ಅದೆಷ್ಟು ಹೊತ್ತು ಹೀಗೆ ಲೋಕದ ಪರಿವೆ ಕಳೆದುಕೊಂಡು ಕೂತಿದ್ದರೋ…

ಹರಿದಾಸರು ಅವರಿಬ್ಬರು ತಮ್ಮ ಅನುಮತಿಯಿಲ್ಲದೇ ಅಡಗಿ ಕುಳಿತು ತಮ್ಮ ಗಾಯನವನ್ನು ಕೇಳುತ್ತಿರುವುದನ್ನು ಕಂಡು ಕೆಂಡಾಮಂಡಲವಾಗಿಬಿಡುತ್ತಾರೆ. ಆದರೆ ದೈತ್ಯ ಕಾಯುವ ಶಕ್ತಿಯ ಮುಂದೆ ಮಡಿಲ ಶಿಶುವಿನಂತೆ ಅಕ್ಬರ್, ಹರಿದಾಸರಿಗೆ ಶರಣಾಗಿಬಿಡುತ್ತಾರೆ. ಅದೆಂತಹ ಶರಣಾಗತಿ!? ಅವರಿನ್ನೆಂಥಹ ಗಾಯಕರು?! ಗಾಯಕರು ಎಂದರೆ ಸರಿಹೋದೀತಾ?! ಆ ಗಂಧರ್ವ ಗಾಯನ ಅವರ ತಪಸ್ಸಿನ ಫಲ… ಆ ಯೋಗಿಯನ್ನು ಬರಿದೆ ಗಾಯಕನೆನ್ನಲು ಸಾಧ್ಯವಾ….

ಅಕ್ಬರ್ ಅರಮನೆಗೆ ಮರಳಿ ಹಲವಾರು ದಿನಗಳಾದರೂ ಹರಿದಾಸರು ಅವರ ಸ್ಮೃತಿಯಿಂದ ದೂರವಾಗುವುದೇ ಇಲ್ಲ… ಕೂತರೂ ನಿಂತರೂ ಹರಿದಾಸರೇ… ಒಂದು ದಿನ ಅಕ್ಬರ್ “ತಾನಸೇನ್ ಅಂತಹಾ ಗುರುಗಳಿಂದ ಪಾಠ ಕಲಿತ ನಿಮ್ಮ ಗಾಯನವೇಕೆ ಆ ಮಟ್ಟಕ್ಕಿಲ್ಲ” ಎಂದು ಕೇಳುತ್ತಾರೆ. ಆಗ ತಾನಸೇನ್ ಹೇಳುತ್ತಾರೆ “ಜಹಾಪನಾ ನಾನು ನಿಮ್ಮನ್ನು ಮೆಚ್ಚಿಸಲಿಕ್ಕಾಗಿ ಹಾಡುತ್ತೇನೆ, ಹಾಗಾಗಿ ನನ್ನ ಕಲೆಗಾರಿಕೆ ಆ ದೈವತ್ವಕ್ಕೆ ಏರಲಿಲ್ಲ. ಆದರೆ ನನ್ನ ಗುರುಗಳು ತಮ್ಮ ಆತ್ಮತೃಪ್ತಿಗಾಗಿ, ದೈವ ಭಕ್ತಿಗಾಗಿ ಹಾಡುತ್ತಾರೇ ವಿನಾ ಇನ್ಯಾರನ್ನೋ ಮೆಚ್ಚಿಸಲಿಕ್ಕಾಗಿ ಅಲ್ಲ. ಹಾಗಾಗಿ ಅವರ ಗಾಯನ ದೈವೀಕವಾಗಿದೆ….” ಎನ್ನುತ್ತಾರೆ. ಅಕ್ಬರ್ ಮೌನಕ್ಕೆ ಜಾರುತ್ತಾರೆ.

(ಸವಾಯಿ ಗಂಧರ್ವರು)

ಈ ಕತೆ ನನ್ನನ್ನು ಬಹಳಷ್ಟು ಸಾರಿ ಬಹಳ ತೀವ್ರವಾಗಿ ಕಾಡಿದೆ. ಯಾಕೆ ನಾವು ಯಾವಾಗಲೂ ಇತರರನ್ನು ಮೆಚ್ಚಿಸಲಿಕ್ಕಾಗಿ ಏನನ್ನಾದರೂ ಸರಿ ಮಾಡಲು ಹೊರಡುತ್ತೇವೆ… ಹೊರಡಬೇಕಾದರೂ ಏಕೆ… ಯಾವಾಗ ನಾವು ಯಾವುದೇ ಒಂದು ಕೆಲಸವನ್ನು ನಮಗೋಸ್ಕರ ಮಾಡುತ್ತೇವೋ, ಯಾವಾಗ ನಾವು ನಮ್ಮೊಂದಿಗೆ ನಾವೇ ಸ್ಪರ್ಧೆಗಿಳಿದು ನಮ್ಮನ್ನು ನಾವು ಗೆಲ್ಲಲು ಹೊರಡುತ್ತೇವೋ ಅದು ಮಾತ್ರ ಸ್ನಿಗ್ಧತೆಯನ್ನು ಮತ್ತು ತಟ್ಟುವ ಗುಣವನ್ನು ಪಡೆದುಕೊಳ್ಳುತ್ತದೆ. ಅದು ಸಾಧನೆಯ ಗುರಿಯಾಗಬೇಕು.

ನಮಗೆಲ್ಲ ಗೊತ್ತಿರುವ ಹಾಗೆ ತಾನಸೇನರು ಅಕ್ಬರರ ಆಸ್ಥಾನದ ನವಮಣಿಗಳಲ್ಲಿ ಒಬ್ಬರಾಗಿದ್ದವರು. ಒಮ್ಮೆ ತಾನಸೇನರ ಸಮಕಾಲೀನರಾದ ಬೈಜೂಬಾವರಾ ಮತ್ತು ತಾನಸೇನರ ನಡುವೆ ಸ್ಪರ್ಧೆ ನಡೆಯಿತಂತೆ. ಸ್ಪರ್ಧೆಯಲ್ಲಿ ಸೋತವರಿಗೆ ಮರಣದಂಡನೆಯ ಶಿಕ್ಷೆ ಎಂಬುದಾಗಿ ಖುದ್ದು ತಾನಸೇನರೇ ಘೋಷಿಸಿದ್ದರಂತೆ. ಆದರೆ ದುರದೃಷ್ಟವಶಾತ್ ಆ ಸ್ಪರ್ಧೆಯಲ್ಲಿ ತಾನಸೇನರೇ ಬೈಜೂಬಾವರಾ ಅವರ ಮುಂದೆ ಏನೂ ಮಾಡಲಾಗದೆ ಸೊಲೊಪ್ಪಿಕೊಳ್ಳಬೇಕಾಗಿ ಬಂತಂತೆ. ಆದರೆ ಬೈಜೂಬಾವರಾ ಬಾದಶಹಾರಲ್ಲಿ ಬೇಡಿಕೊಂಡು ಅವರಿಗೆ ವಿಧಿಸಬೇಕಿದ್ದ ಮರಣದಂಡನೆಯಿಂದ ಅವರನ್ನು ಪಾರು ಮಾಡಿ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡಿದ್ದರಂತೆ.

ಈ ಕತೆ ಈಗ ನೆನಪಾದದ್ದು “ಕಟ್ಯಾರ್ ಕಲ್ಜಾತ್ ಘುಸ್ಲೀ” ಎನ್ನುವ ಮರಾಠಿ ಚಿತ್ರದಿಂದಾಗಿ. ಈ ಚಲನಚಿತ್ರ ಚಿತ್ರೋದ್ಯಮದ ಇತಿಹಾಸದಲ್ಲಿಯೇ ಬಹುದೊಡ್ಡ ಸಂಚಲನ ಮೂಡಿಸಿದ್ದ ಚಿತ್ರ. ನಾಟಕವಾಗಿ ಬಹಳ ಪ್ರಸಿದ್ಧಿ ಪಡೆದಿದ್ದ ಈ ಕತೆ ಸುಬೋಧ್ ಭಾವೆಯವರನ್ನೂ ದಶಕಗಳ ಕಾಲ ಕಾಡಿತ್ತು. ನಂತರ ಅವರು ಇದನ್ನು ತೆರೆಯ ಮೇಲೆ ತರಲೆಬೇಕೆನ್ನುವ ನಿರ್ಧಾರಕ್ಕೆ ಬಂದರು.

ಗದ್ದಲದಲ್ಲಿ ಶಬ್ದ ತರಂಗಗಳು ಯಾವುದೇ ಶಿಸ್ತಿಲ್ಲದೆ ಚಲಿಸಿ ಕಿರಿಕಿರಿ ಉಂಟುಮಾಡಿದರೆ ಸಂಗೀತ ತನ್ನ ಶಿಸ್ತುಬದ್ಧ ತರಂಗ ಚಲನೆಯಿಂದಾಗಿ ಕಿವಿಗೆ ಇಂಪಾಗಿ ತಂಪಾಗಿ ಕೇಳಿಸುತ್ತದೆ. ಅಷ್ಟೇ ಅಲ್ಲದೆ ಶ್ರುತಿ ಮತ್ತು ತಾಳ ಎನ್ನುವ ತಂದೆತಾಯಿಯರ ಅಂಕೆಯಲ್ಲಿ ಬೆಳೆದ ಸಂಗೀತ ಸುಸಂಸ್ಕೃತ ಮತ್ತು ಸಂಸ್ಕಾರವಂತ ಸಹ…

ವಿಶ್ರಾಮಪುರದ ರಾಜ ತನ್ನ ಆಸ್ಥಾನದಲ್ಲಿ ಸಂಗೀತದ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಒಂದು ಪ್ರತಿಷ್ಠಿತ ಕತ್ತಿಯನ್ನು, ದೊಡ್ಡ ಅಂದವಾದ ಸುಸಜ್ಜಿತ ಮನೆಯನ್ನು ಮತ್ತು ಬಿರುದು ಸನ್ಮಾನಗಳನ್ನೂ ನೀಡಲಾಗುತ್ತಿತ್ತು. ಹಾಗೆ ಗೆದ್ದವನಿಗೆ ಒಂದು ಕೊಲೆಯ ಮಾಫಿ ಸಹ ಇರುತ್ತಿತ್ತು. ಪಂಡಿತ್ ಭಾನುಶಂಕರ್ ಶಾಸ್ತ್ರಿ (ಶಂಕರ್ ಮಹದೇವನ್) ಮತ್ತು ಖಾನ್ ಸಾಹಬ್ ಅಫ್ತಾಬ್ ಹುಸೇನ್ ಬರೇಲೀವಾಲೆ (ಸಚಿನ್ ಪಿಳಗಾವ್ಕರ್) ಎಂಬ ಒಬ್ಬ ಮಹಾನ್ ಗಾಯಕರು. ಭಾನುಶಂಕರ್ ಎಲ್ಲರನ್ನು ಎಲ್ಲವನ್ನು ಪ್ರೀತಿಯಿಂದ ಕಾಣುವವರು. ಆದರೆ ತನಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ ಎನ್ನುವ ಅಸಮಾಧಾನದಲ್ಲಿರುವ ಖಾನ್ ಸಾಹಬರು ಬಹಳ ಈಗೋಇಸ್ಟಿಕ್ ಮತ್ತು ತಮ್ಮ ಸ್ಥಾನಮಾನಕ್ಕಾಗಿ ಏನನ್ನಾದರೂ ಮಾಡುವಂತವರು. ಇದು ಅವರನ್ನು ಪ್ರತಿಸ್ಪರ್ಧಿಯ ಅಂತ್ಯವನ್ನು ಕಾಣುವ ಮಟ್ಟಕ್ಕೆ ತಂದು ನಿಲ್ಲಿಸಿಬಿಡುತ್ತದೆ.

ಭಾನುಶಂಕರ್ ಶಾಸ್ತ್ರಿ ಖಾನ್ ಸಾಹಬರ ಪಾಂಡಿತ್ಯಕ್ಕೆ ಬೆಲೆಕೊಟ್ಟು ಸ್ನೇಹಿತನಂತೆ ಕಂಡರೆ, ಖಾನ್ ಸಾಹೇಬರು ಮಾತ್ರ ಪ್ರತಿಸ್ಪರ್ಧಿಯಂತೇ ಕಾಣುತ್ತಾರೆ. ತನ್ನ ಗಂಡನ ಉನ್ನತಿಗಾಗಿ ಖಾನ್ ಸಾಹಬರ ಹೆಂಡತಿ ಅಣ್ಣನಂತ ಭಾನುಶಂಕರರಿಗೆ ಮದ್ದು ಹಾಕಿ ಅವರ ಕಂಡವರು ಹಾಳಾಗುವಂತೆ ಮಾಡುತ್ತಾಳೆ. ಅವಳ ತಪ್ಪಿಗಾಗಿ ಅವಳನ್ನು ತಲಾಖ್ ಮಾಡುವ ಖಾನ್ ಸಾಹೇಬರು ತಮಗೊಲಿದು ಬಂದ ಮಿಥ್ಯ ಪದವಿ ಸಮ್ಮಾನಗಳನ್ನು ಮಾತ್ರ ಸತ್ಯವೆಂದೇ ನಂಬುತ್ತಾರೆ. ಆದರೂ ಕೊನೆಗೆ ಸತ್ಯವೇ ಗೆಲ್ಲುತ್ತದೆ. ಖಾನ್ ಸಾಹಬರು ಸೋಲುತ್ತಾರೆ. “ಕಟ್ಯಾರ್” ಕೊನೆಗೂ ಅವರ ಅಹಂಕಾರವನ್ನು ಕೊಚ್ಚಿ ಹಾಕುತ್ತದೆ. ಅವರು ನಿಜದ ಸಂಗೀತದೆದುರು, ಮುಖವಿಲ್ಲದ ಸಂಗೀತದೆದುರು, ನಿರಾಕಾರ ಸಂಗೀತದೆದುರು, ದೇಹದ ಹೊರತಾದ ಸಂಗೀತದೆದುರು ತನ್ನನ್ನು ತಾನು ನಿಲ್ಲಿಸಿಕೊಂಡು ಎದುರಿಸಲಾಗದೆ ಸೋತು ಹೋಗುತ್ತಾರೆ. ಇದು ಖಾನ್ ಸಾಹೇಬರ ಸೋಲೂ ಅಲ್ಲ, ಭಾನುಶಂಕರರ ಗೆಲುವೂ ಅಲ್ಲ. ಸಂಗೀತವೆಂಬ ಶಕ್ತಿಯೆದುರು ಕೃತಾರ್ಥರಾಗಿಬಿಡುವುದು ಅಷ್ಟೇ.

(‘ಕಟ್ಯಾರ್ ಕಲ್ಜಾತ್ ಘುಸ್ಲೀ’ ಚಿತ್ರದ ದೃಶ್ಯ)

ಈ ಚಿತ್ರ ಯಾರಿಂದಾದರೂ ಕಣ್ಣೀರು ತರಿಸಲಿಲ್ಲವೆಂದರೆ ಕೇಳಿ…. ಬಹಳಾ ಭಾವುಕರಾಗುತ್ತೇವೆ… ಅಷ್ಟು ಸುಂದರ ಈ ಚಿತ್ರ. ಸಂಗೀತ, ಅಭಿನಯ, ಛಾಯಾಗ್ರಾಹಣ…. ಎಲ್ಲವೂ ಅದ್ಭುತ.

ಸಾಹಿತ್ಯ ಮತ್ತು ಸಂಗೀತದ ನಡುವೆ ಒಂದು ಅವಿನಾಭಾವ ಸಂಬಂಧವಿರಬೇಕು ಎಂದು ನನಗೆ ಬಹಳಷ್ಟು ಬಾರಿ ಅನಿಸುತ್ತಿರುತ್ತದೆ. ಕಾರಣ ಬರಹಗಾರರಲ್ಲೂ ಬಹಳಷ್ಟು ಮಂದಿ ಚಂದ ಹಾಡುವವರನ್ನು ನಾನು ನೋಡಿದ್ದೇನೆ. ಮತ್ತೆ ಸಂಗೀತದ ಬಗ್ಗೆ ಕರಾರುವಕ್ಕಾಗಿ ಹೇಗಿರಬೇಕೆಂಬುದನ್ನು ವ್ಯಾಖ್ಯಾನಿಸಿದ ಅದೆಷ್ಟೋ ಕವಿವರ್ಯರೂ ಆಗಿಹೋಗಿದ್ದಾರೆ. ಕವಿ ರತ್ನಾಕರವರ್ಣಿ ತಮ್ಮ “ಭರತೇಶ ವೈಭವ” ದಲ್ಲಿ ಹೀಗೆ ತಿಳಿಸಿರುತ್ತಾರೆ,

“ಒಳಗುಣ್ಮೀದಾನಂದರಸ ತನ್ನ ತನು ತುಂಬಿ
ಒಳಗುಣ್ಮೀದಾನಂದರಸ ತನ್ನ ತನು ತುಂಬಿ
ತುಳುಕಿ ಹೊರಗೆ ಸೂಸುವಂತೆ
ತೆಳುವಸುರಿಂದ ಬಾಯ್ದೆರೆಯೊಳು ಸುಸ್ವರ
ಹೊಳೆದು ಮೋಹಿಸುತಿದ್ದುದಾಗ

ಸುಳಿನಾಭಿಯೊಳು ಪುಟ್ಟಿಮೆಲ್ಲೆದೆಯೊಳು ಬೆಳೆ
ದೊಳುಗೊರಗಲೊಳು ಪ್ರಾಯವಡೆದು
ಎಳೆಯರು ಬ್ರಹ್ಮ ರಂಧ್ರವನೇರಿ ಬಾಯ್ದೆರೆ
ತಿಳಿದು ಮೋಹಿಸಿದುದಾಳಾಪ

ಉಕ್ಕಂದವಾಗಿ ತುಂಬಿದ ಗಾನರಸವನು
ದಿಕ್ಕು ದಿಕ್ಕಿಗೆ ಚಿಮ್ಮುವಂತೆ
ಚೊಕ್ಕ ಚೊಕ್ಕನೆ ತಾನಗಳ ತಂದು ಕೊರಳಲಿ
ಜಕ್ಕುಲಿಸಿದರು ಜಾಣೆಯರು

ಚೀರದೆ ಬತ್ತದೆ ಜಾತಿಯ ಕಟ್ಟಣೆ
ಜಾರದೊಡಲು ದಂಡಿಸದೆ
ಏರಲಿಳಿಯಲಹುದಹುದು ಲೇಸನೆ ಸರಿ
ದೋರೆ ಹಾಡಿದರು ಗಾಯಕರು”

ಗಾಯಕನಾದವನಿಗೆ ಶಾರೀರವಿರಲೇಬೇಕು. ಶಾರೀರವಿಲ್ಲದವನು ಸಂಗೀತ ಶಾಸ್ತ್ರ ನಿಪುಣನಾದರೂ ಶ್ರೋತೃಗಳಿಗೆ ಹಿತವೆನಿಸುವಂತೆ ಹಾಡಲಾಗುವುದಿಲ್ಲ ಎನ್ನುವುದನ್ನು ಕವಿ ರತ್ನಾಕರವರ್ಣಿ ಸಮಯೋಚಿತ ರೂಪಕಗಳನ್ನು ಬಳಸಿ ಸ್ಪಷ್ಟಪಡಿಸುತ್ತಾರೆ.

(ಪಂ.ಪಂಚಾಕ್ಷರಿ ಗವಾಯಿಗಳು)

ನಾದೋಪಾಸನೆ ನಮ್ಮ ವ್ಯಾವಹಾರಿಕ ಜೀವನವನ್ನು ಮೀರಿದ್ದು. ನನಗೆ ಶಾಸ್ತ್ರೀಯ ಸಂಗೀತ (ಹಿಂದೂಸ್ಥಾನಿ) ಪಾಠ ಮಾಡುತ್ತಿದ್ದ ಗುರುಗಳು ಸಂಗೀತ ಮತ್ತು ಸಂಗೀತ ಉಪಕರಣಗಳ ಬಗ್ಗೆ ಅದೆಷ್ಟು ಪೂಜ್ಯ ಭಾವನೆ ಮೂಡಿಸಿದ್ದರು ಎಂದರೆ ಸಾಕ್ಷಾತ್ ಶಾರದೆಯನ್ನೇ ಎದುರು ಕೂರಿಸಿಕೊಂಡು ಹಾಡುತ್ತಿದ್ದೇವೆ ಎನಿಸಿಬಿಡುವಷ್ಟು. ಅಷ್ಟಕ್ಕೂ ಸಂಗೀತ ಹುಟ್ಟಿದ್ದೂ ಸಹ ದೇವರನ್ನು ಒಲಿಸಿಕೊಳ್ಳಲಿಕ್ಕಾಗಿ, ಮೋಕ್ಷ ಸಾಧನೆಗಾಗಿ, ಸಮಾಜದ ಸುಧಾರಣೆಗಾಗಿ… ಎಂಬಿತ್ಯಾದಿ ಕಾರಣಗಳಿಂದ. ಆದರೆ ಸಂಗೀತ ಮನರಂಜನೆಗಾಗಿ ಎನ್ನುವ ಧೋರಣೆ ತೀರಾ ಇತ್ತೀಚಿನದ್ದು. ದಕ್ಷಿಣಾದಿ ಸಂಗೀತ (ಕರ್ನಾಟಕ ಸಮಗೀತ) ದಲ್ಲಿ ಭಕ್ತಿ ರಸ ಪ್ರಧಾನವಾಗಿರುವುದನ್ನು ಗಮನಿಸಬಹುದು. ಉತ್ತರಾದಿ ಸಂಗೀತ(ಹಿಂದೂಸ್ಥಾನಿ)ದಲ್ಲಿ ನವರಸಗಳಿಗೂ ಪ್ರಾಧಾನ್ಯತೆ ಇದೆ. ಆದರೆ ಈವೆರೆಡೂ ಪದ್ಧತಿಯಲ್ಲೂ ಸಾಮಾನ್ಯವಾಗಿ ಕಂಡುಬರುವ ಹಲವಾರು ರಾಗಗಳನ್ನು ಕಾಣುತ್ತೇವೆ. ಉದಾಹರಣೆಗೆ ಉತ್ತರಾದಿಯ ಮಾಲಕೌಂಸ್ ದಕ್ಷಿಣಾದಿಯ ಹಿಂದೋಳ, ಉತ್ತರಾದಿಯ ಕಾಫಿ ದಕ್ಷಿಣಾದಿಯ ಖರಹರಪ್ರಿಯ, ಉತ್ತರಾದಿಯ ಭೂಪ ದಕ್ಕಿಣಾದಿಯ ಮೋಹನ…. ಹೀಗೆ. ಆದರೂ ಅವುಗಳ ಭಿನ್ನತೆ ಮತ್ತು ಅನನ್ಯತೆಯ ಘನತೆ ಬಹಳ ದೊಡ್ಡದು.

ಕಣ್ಣು ಕಾಣದಾಗ್ಯೂ ಸಂಗೀತ ಸಾಧನೆಯಲ್ಲಿ ಮೇರು ಎನಿಸಿದ, ನಡೆದಾಡುವ ದೇವರೆಂದು ಪೂಜಿಸಲ್ಪಡುತ್ತಿದ್ದ ಪುಟ್ಟರಾಜ ಗವಾಯಿಗಳು ಉಭಯಗಾನ ವಿಶಾರದರೆನ್ನಿಸಿಕೊಂಡಿದ್ದವರು. ಶ್ಯಾಮಲಾ ಭಾವೆಯವರನ್ನು ಹೊರತು ಪಡಿಸಿದರೆ ಎರೆಡೂ ಶೈಲಿಯಲ್ಲೂ ಒಡೆದು ತೋರಿಸುವಷ್ಟು ನಿಚ್ಚಳವಾಗಿ ಹಾಡಿದವರ ಸಂಖ್ಯೆಯೇ ವಿರಳ. ಇನ್ನು ಗದುಗಿನ ಪಂಚಾಕ್ಷರೀ ಮಠದ ಮೂಲ ದೇವರೆನಿಸಿದ ಪಂಚಾಕ್ಷರೀ ಗವಾಯಿಗಳು ಜಾತಿ ಮತ ಭೇದವಿರದೆ ಹಸಿದು ಬಂದವರಿಗೆ ಅನ್ನ ಮತ್ತು ಸಂಗೀತವನ್ನು ಧಾರೆ ಎರೆದವರು. ಮತ್ತು ಆ ಧಾರೆ ಎಂದೂ ಬತ್ತದಂತೆ ಒರತೆ ಚಿಮ್ಮುತ್ತಲೇ ಇರುವಂತೆ ಮಾಡಿ ಹೋದವರು.

(ಬೇಗಮ್ ಪರ್ವೀನ್ ಸುಲ್ತಾನಾ)

ಒಮ್ಮೆ ಪಂಚಾಕ್ಷರೀ ಗವಾಯಿಯವರ ತಂಬಿಗೆಯೊಂದನ್ನು ಬಡ ಮಹಿಳೆಯೊಬ್ಬಳು ಕದ್ದುಬಿಟ್ಟಳಂತೆ. ಆದರೆ ಅದು ಪಂಚಾಕ್ಷರಿ ಗವಾಯಿಗಳ ಬಹಳ ಇಷ್ಟದ ತಂಬಿಗೆಯಾಗಿತ್ತು. ಇಡೀ ಮಠವನ್ನೇ ಬೆದಕಿದರೂ ಎಲ್ಲೂ ಸಿಗಲಿಲ್ಲ. ಇನ್ನು ಅದು ಸಿಗುವುದಿಲ್ಲ, ಯಾರೋ ಕದ್ದಿದ್ದಾರೆ ಎಂದು ತೀರ್ಮಾನಿಸಿ ಎಲ್ಲರೂ ಕೈಚೆಲ್ಲಿದರಂತೆ. ಪಂಚಾಕ್ಷರೀ ಗವಾಯಿಯವರಿಗೆ ಪ್ರತಿದಿನ ಬೆಳಗಿನ ನಡಿಗೆ ಮಾಡುವ ರೂಢಿ. ಒಮ್ಮೆ ಹೀಗೆ ವಾಕ್ ಮುಗಿಸಿ ಬರುವಾಗ ದಾರಿಯಲ್ಲಿ ಯಾವುದೋ ಒಂದು ಮನೆಯೆದುರು ಗಕ್ಕನೆ ನಿಂತುಬಿಟ್ಟರಂತೆ. ಅಲ್ಲಿ ಒಬ್ಬ ಮಹಿಳೆ ಪಾತ್ರೆ ತೊಳೆಯುತ್ತಿದ್ದಳಂತೆ. ಆಗ ಅವರ ಶಿಷ್ಯಂದಿರು “ಏಕೆ ನಿಂತಿರಿ ಗುರುಗಳೇ…” ಎಂದು ಕೇಳಿದಾಗ “ಅಲ್ಲಿ ಆಕೆ ತೊಳಿತಿರೋ ಪಾತ್ರೆಗಳಲ್ಲಿ ನನ್ನ ತಂಬಿಗೆ ಇದೆ, ತೆಗೆದುಕೊಂಡು ಬಾ” ಅಂದರಂತೆ. ಶಿಷ್ಯನಿಗೆ ಗಾಬರಿ. ಅಂಜುತ್ತಲೇ ಹೋಗಿ ಆ ಮಹಿಳೆಯನ್ನು ಕೇಳಿದರಂತೆ. “ಈ ಪಾತ್ರೆ ಒಳಗೆ ಗುರುಗಳ ತಂಬಿಗೆ ಐತಂತಲ್ಲ… ಕೊಡ್ಬೇಕಂತೆ. ಗುರುಗಳು ಕೇಳ್ತಾ ಇದಾರೆ..” ಅಂದನಂತೆ ಶಿಷ್ಯ. ಅವನಿಗೆ ‘ಗುರುಗಳಿಗೆ ಅರುಳು ಮರುಳು, ನಾ ಎಲ್ಲಿ ಅವಳ ಕೈಲಿ ಒದೆ ತಿನ್ಬೇಕಾಗ್ತದೋ’ ಎನ್ನುವ ಗಾಬರಿ.

ಅವನು ಹಾಗೆ ಕೇಳಿದ ಕೂಡಲೇ ತಲೆ ಎತ್ತಿ ಗುರುಗಳನ್ನು ನೋಡಿದ ಆ ಮಹಿಳೆ ಯಪ್ಪೋ ಎಂದು ಓಡಿಬಂದವಳೇ ಗುರುಗಳ ಕಾಲ ಮೇಲೆ ಬಿದ್ದು ತಪ್ಪೊಪ್ಪಿಕೊಂಡು ಕ್ಷಮೆ ಕೇಳಿ ತಂಬಿಗೆಯನ್ನು ಮರಳಿಸಿದಳಂತೆ. ಆಗ ಗುರುಗಳು “ಅಮ್ಮ ತಂಬಿಗೆ ಕದ್ದಿದಿ ಅಂದರೆ ನಿನ್ನ ಕಷ್ಟ ಇನ್ನೆಂಥದ್ದಿದ್ದಿರಬಹುದು, ಇರಲಿ ಇದನ್ನು ನೀನೇ ಇಟ್ಕೊ ತಾಯಿ…” ಅಂತ ಹೇಳಿ ಮುನ್ನಡೆದರಂತೆ. ಇದು ಅವರ ಶ್ರವಣ ಜ್ಞಾನಕ್ಕೆ ನಿದರ್ಶನ. ಎರೆಡು ಕಣ್ಣಿದ್ದೂ ಕುರುಡರಂತಾಡುವ ನಮಗೆ ಇದೊಂದು ಪಾಠ.

ಎಲ್ಲಿಂದಲೋ ತಂಬೂರಿಯ ಶ್ರುತಿಯ ಜೊತೆಗೆ ತಬಲಾ ಸಾಥ್ ಸಂಗತ್ ಮಾರ್ದನಿಸುತ್ತಿದೆ. ಸುಮ್ಮನೆ ಉಳಿಯಲಾಗದೆ ಧ್ವನಿ ಬಂದತ್ತ ನಡೆದಿದೆ ಮನ. ಅತ್ತಲಿಂದ ಪರ್ವೀನ್ ಸುಲ್ತಾನಾ ಮೀಂಡ್ ಗಳ ಮೇಲೆ ಮೀಂಡ್ ಬಳಸುತ್ತಾ ಪಹಾಡಿಯಲ್ಲಿ ಲೀಲಾಜಾಲವಾಗಿ ಈಜಾಡುತ್ತಿದ್ದಾರೆ. ನಾ ಮತ್ತೆ ನಾದೋಪಾಸನೆಯಲ್ಲಿ…..

*ಸವಾಯಿ ಗಂಧರ್ವರ ನಿಜನಾಮ ರಾಮಚಂದ್ರ ಗಣೇಶ ಕುಂದಗೋಳ್ಕರ್