‘ಈ ತಿಂಗಳು ಮುಟ್ಟಾಯ್ದಿಲ್ಯಾ …’
ಇಲ್ಲವೆಂದು ತಲೆ ಅಲ್ಲಾಡಿಸಿದಳು ಪದ್ಮಾವತಿ. ಅತ್ತೆಗೆ ಭಯ, ಸಿಟ್ಟು, ಎಲ್ಲವೂ ಒಟ್ಟಿಗೇ ಆಗಿ, ಯಾರು ಇದಕ್ಕೆ ಕಾರಣ.. ಯಾರಿಂದ ಇದು ಎಂದು ಜೋರುಮಾಡಿ ಕೇಳಿದಳು.
ಅದಕ್ಕೆ ಪದ್ಮಾವತಿ ನಸುನಕ್ಕು ‘ಅತ್ತೇರೇ… ಯಾರು ಉಂಗುರ ಕೊಟ್ರೋ ಅವ್ರೇಯ… ಅವರನ್ನೇ ಕೇಳಿ ನೀವು’ ಎಂದಳು ಹೊಟ್ಟೆ ಹಿಡಿದುಕೊಂಡು.
ಅತ್ತೆಗೆ ತಲೆತಿರುಗಿದಂತಾಗಿ ಸ್ವಲ್ಪ ಹೊತ್ತು ಅಲ್ಲೇ ಕುಳಿತಳು.
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕಥೆಗಳ ಎಂಟನೆಯ ಕಂತು.

 

ಅವತ್ತು ಬೆಳಗ್ಗೆ ಏಳುತ್ತಿದ್ದ ಹಾಗೆಯೇ ಸಾವಿತ್ರಕ್ಕ ರಂಪ ಮಾಡುವುದಕ್ಕೆ ಕಾರಣಗಳಿದ್ದವು. ಅಂದು ಬೆಳಿಗ್ಗೆನೇ ಅವಳು ಬೇಗ ಕೆಲಸ ಮುಗಿಸಿ ನೆಂಟರ ಮನೆಗೆ ಹೋಗುವವಳಿದ್ದಳು. ಅವತ್ತು ಏಕಾದಶಿ. ಅದು ಮರೆತೇ ಹೋಗಿ ಎಲ್ಲರಿಗೂ ತೆಳ್ಳವು ಮಾಡಲು ತಯಾರಿ ಮಾಡಿಕೊಂಡಿದ್ದಳು. ಬೇಗ ತಿಂಡಿ ಮಾಡಿಕೊಟ್ಟು ಅವಳು 10 ಗಂಟೆ ಬಸ್ಸಿಗೆ ಹೊರಟುಬಿಡಬೇಕಿತ್ತು. ಆದರೆ ಮಡಿಮುದುಕಿ ಏಳುತ್ತಿದ್ದ ಹಾಗೇ ‘ಏ..ಸಾವಿತ್ರೀ ಇವತ್ತು ಏಕಾದಶಿ. ಆ ಮುಸುರೆ ತಿಂತ್ನಿಲ್ಲೆ. ಸ್ವಲ್ಪ ಉಪ್ಪಿಟ್ಟು, ಸಜ್ಜಿಗೆ ಕಾಯಿಸು’ ಎಂದು ಆದೇಶಮಾಡಿದಳು. ಇದನ್ನು ಕೇಳಿಯೇ ಉರಿದುಹೋಯಿತು ಸಾವಿತ್ರಿಗೆ. ಮೊದಲೇ ಎದ್ದದ್ದು ತಡವಾಗಿಹೋಗಿದೆ. ಈಗ ಇವೆಲ್ಲ ಮಾಡುತ್ತ ಕೂತರೆ ಆಗುವುದಿಲ್ಲವೆಂದು ‘ಅದೆಲ್ಲ ಮಾಡಲೆ ಆಗ್ತಿಲ್ಲೆ ಇವತ್ತು. ಅವಲಕ್ಕಿ ಕಲಸಿಕೊಡ್ತಿ ತಿನ್ನು’ ಎಂದ ಸಾವಿತ್ರಿಯ ಮಾತಿಗೆ ಮಡಿಮುದುಕಿಗೆ ಸಿಟ್ಟು ಏರಿ, ‘ಏನೇ.. ಎಂಗೆ ತಿರುಗಿ ಹೇಳತ್ಯನೇ. ಎಂಗ್ಳ ದಿಕ್ಕಲ್ಲಿ ಹೀಂಗೆಲ್ಲ ತಿರುಗಿ ಹೇಳಿದ್ದಿದ್ದರೆ ಅವರ ಕತೆಯೇ ಬ್ಯಾರೆ ಆಗ್ತಿತ್ತು… ಏ ಯಶೋದೇ.. ನೋಡೇ ನಿನ್ನ ಸೊಸೆ ಎಂಗೇ ತಿರುಗಿ ಹೇಳ್ತು’ ಎಂದು ಕುಳಿತಲ್ಲಿಂದಲೇ ಕೂಗಿದಳು. ಕೊಟ್ಟಿಗೆಯಲ್ಲಿ ಕುಕ್ಕರಗಾಲಲ್ಲಿ ಕುಳಿತು ದನ ಕರೆಯುತ್ತಿದ್ದ ಸಾವಿತ್ರಿಯ ಮನೆ ಅಕ್ಕ ಯಶೋದೆ ಇದನ್ನು ಕೇಳಿಸಿಯೂ ಕೇಳದಂತಿದ್ದಳು.

ಹಾಗೆ ನೋಡಿದರೆ ಅವಳಿಗೂ ಆ ಮನೆಗೂ ಯಾವ ಸಂಬಂಧವೂ ಇರಲಿಲ್ಲ. ಅವಳ ಊರು ಸಿದ್ದಾಪುರ ತಾಲೂಕಿನ ಬೆಗಡಿಪಾಲ ಎಂಬ ಹಳ್ಳಿ. ಅವಳ ತಾಯಿಯ ಊರು ಸಾಗರದ ಕಡೆ ಒಂದು ಹಳ್ಳಿ. ಆದರೆ ಅವಳು ಸದಾ ಊರೂರು ತಿರುಗುತ್ತಿರುವವಳು. ಸಿದ್ದಾಪುರದ ಸುತ್ತಮುತ್ತ ಇರುವ ಒಡ್ಡಿನಗದ್ದೆ, ಹೆಗ್ಗಾರಳ್ಳಿ, ಕೊಳಗಿ, ಮುಗದೂರು, ಶೀಬಳಮನೆ, ಶಿರಳಗಿ ಸೇರಿದಂತೆ ಅನೇಕ ಊರುಗಳನ್ನು ಸುತ್ತುತ್ತಿದ್ದಳು. ಯಾವುದೋ ನೆಂಟಸ್ತನದ ಒಂದು ಎಳೆ ಸಿಕ್ಕರೂ ಸಾಕಿತ್ತು ಅವಳಿಗೆ. ಅಲ್ಲಿ ಹೋಗಿ ತಿಂಗಳಾನುಗಟ್ಟಲೆ ಠಿಕಾಣಿ ಹೂಡಿ, ಅಲ್ಲೆಲ್ಲ ಮಡಿ, ಆಚಾರ, ವಿಚಾರಗಳನ್ನೆಲ್ಲ ಹರಡುತ್ತಿದ್ದಳು. ಅವಳು ತುಂಬ ಮಡಿ ಮಾಡುತ್ತಾಳೆಂಬ ಕಾರಣಕ್ಕೆ ಅವಳನ್ನು ಭಯಭಕ್ತಿಯಿಂದ ಜನ ನೋಡುತ್ತಿದ್ದರು ಕೂಡ. ಹಾಗೆ ಸಿದ್ದಾಪುರದ ಸಮೀಪದ ಒಡ್ಡಿನಗದ್ದೆಗೆ ಬಂದು ತಿಂಗಳುಗಟ್ಟಲೆ ಕಳೆದಿತ್ತು. ಅವರ ಮನೆಯ ಸಾವಿತ್ರಿ, ಯಶೋದೆ ಎಲ್ಲರನ್ನೂ ಆಟವಾಡಿಸುತ್ತಿದ್ದಳು.

ಅವಳ ಹೆಸರು ಪದ್ಮಾವತಿ. ‘ನಿನ್ನ ಹೆಸರೆಂತದ್ದೇ ಅಮ್ಮಮ’ ಎಂದು ಕೇಳಿದರೆ ಸಾಕಿತ್ತು. ಬೇ..ಪ..ಪದ್ಮಾವತಮ್ಮ ಎಂದು ರಾಗವಾಗಿ ಹೇಳುತ್ತಿದ್ದಳು. ಅಂದರೆ ಬೆಗಡಿಪಾಲ ಪದ್ಮಾವತಮ್ಮ ಎಂದು. ಪದ್ಮಾವತಮ್ಮಮ್ಮಂಗೆ ಅವಳ ಹೆಸರೇ ಮರೆತು ಹೋಗಿ ಮಡಿ ಮುದುಕಿ ಎಂಬ ಹೆಸರೇ ಕಾಯಂ ಆಗಿ ನಿಂತದ್ದು ಅವಳು ತುಂಬ ಮಡಿ ಮಾಡುತ್ತಿದ್ದಳು ಎಂಬ ಕಾರಣಕ್ಕಾಗಿ ಆಗಿರಲಿಲ್ಲ. ಗಂಡ ತೀರಿಹೋದ ಕ್ಷಣದಿಂದಲೇ ಅದುವರೆಗಿನ ಅವಳ ಮುತೈದೆ ಭಾಗ್ಯವೆಲ್ಲ ಕಳೆದು ಹೋಗಿ ಅವಳಿಗೆ ತಲೆಬೋಳಿಸಿ, ಕೆಂಪನೆಯ ಸೀರೆ ಉಡಿಸಿ, ಜಪಸರ ಹಿಡಿಸಿ ದೇವರ ಮುಂದೆ ಕೂರಿಸಿದ್ದಕ್ಕಾಗಿಯೂ ಆಗಿರಲಿಲ್ಲ. ಬದಲಾಗಿ ಊರೂರು ಅಲೆಯುತ್ತ, ಹೋದಲ್ಲೆಲ್ಲ ತನ್ನ ಮಡಿಯ ಆಚಾರವನ್ನೆಲ್ಲ ಉದ್ದರಿಸುತ್ತ ತನಗೆ ಬೇಕಾದ ಎಲ್ಲ ಸೌಕರ್ಯಗಳನ್ನೂ ಮಾಡಿಕೊಂಡೂ ಮನೆಯವರನ್ನೆಲ್ಲ ಮಡಿಯ ಹೆಸರಲ್ಲಿ ಹೆದರಿಸಿದ್ದ ಕಾರಣಕ್ಕಾಗಿ.

ಮಡಿ ಎಂದರೆ ಹಾಗೆ ಹೀಗಿನ ಮಡಿಯಲ್ಲ ಅವಳದ್ದು. ಅಡುಗೆ ಮಾಡಿ ಹಾಕುವವರೂ ಸ್ನಾನ ಮಾಡಿ, ಮಡಿಯುಟ್ಟು ಅಡುಗೆ ಮಾಡಿ ಬಡಿಸಬೇಕಾಗಿತ್ತು. ಬೆಳಗಿನ ತಿಂಡಿಗೊಮ್ಮೆ, ಮಧ್ಯಾಹ್ನದ ಊಟಕ್ಕೊಮ್ಮೆ ಮತ್ತು ರಾತ್ರಿಯ ಫಲಾಹಾರಕ್ಕೊಮ್ಮೆ ಸ್ನಾನ ಮಾಡಿಯೇ ತಿಂಡಿ ಸಿದ್ಧಗೊಳಿಸಿ ಬಡಿಸಬೇಕಾಗುತ್ತಿತ್ತು. ಊಟಕ್ಕೆ ಕುಳಿತಾಗ ಲೋಟದ ನೀರನ್ನು ಎಡಗೈಯ್ಯಲ್ಲಿ ಕುಡಿದರೆ ಮೈಲಿಗೆಯಾಗುತ್ತದೆ, ಅದನ್ನು ಬಲಗೈಯ್ಯಲ್ಲೇ ಕುಡಿಯಬೇಕು, ಊಟವಾದ ಮೇಲೆ ಎಲೆ ಎತ್ತಿ, ಶಗಣಿ ಹಾಕಿ ಸಾರಿಸಲೇ ಬೇಕು.ಹೀಗೆ ಒಂದೆರಡಲ್ಲ ಅವಳ ಮಡಿಯ ಅವತಾರಗಳು.

ಪ್ರತಿದಿವಸದ ರಾತ್ರಿಗೆ ಫಲಾಹಾರ ಆಗಲೇಬೇಕಾಗಿತ್ತು. ಸಾಧಾರಣವಾಗಿ ಫಲಾಹಾರವೆಂದರೆ ಅವಲಕ್ಕಿ ಕಾಯಂ ಆಗುತ್ತಿತ್ತು. ಆದರೆ ಆ ಸಂಪ್ರದಾಯವನ್ನು ಮುರಿದ ಕೀರ್ತಿ ಮಡಿಮುದುಕಿಗೇ ಸಲ್ಲುತ್ತದೆ. “ಎಂಗಿವತ್ತು ಅವಲಕ್ಕಿ ಯಾಗ್ತಿಲ್ಲೆ. ಸ್ವಲ್ಪ ಸಜ್ಜಿಗೆ ಮಾಡಿಬಿಡು ಎಂದು ಅಧಿಕಾರವಾಣಿಯಲ್ಲೇ ಹೇಳಿ ಸಜ್ಜಿಗೆ ಮಾಡಿಸಿಕೊಂಡು ತಿನ್ನುವವಳೇ.

ಅವಳು ಮನೆಯಲ್ಲಿರುವುದೇ ಅಪರೂಪ. ಸದಾ ತಿರುಗಾಟದಲ್ಲೇ ಇರುತ್ತಿದ್ದಳು. ಗೋಕರ್ಣದ ಕಡೆಯ ಸಂಭಾನೆ ಭಟ್ಟರ ಹಾಗೇ ಹೊರಟುಬಿಡುತ್ತಾಳೆ ಊರೊಟ್ಟಿಗೆ ತಿರುಗಲು ಎಂದೆಲ್ಲ ಊರವರು, ನೆಂಟರಿಷ್ಟರು ಹೇಳಿದರೂ ಯಾವುದಕ್ಕೂ ಕ್ಯಾರೇ ಎನ್ನುತ್ತಿರಲಿಲ್ಲ. ಕೈಯ್ಯಲ್ಲೊಂದು ದೊಡ್ಡ ಕೈಚೀಲ ಹಿಡಿದು, ಮೊಣಕಾಲಿನವರೆಗೆ ಸೀರೆ ಉಟ್ಟು, ಸೆರಗನ್ನು ತಲೆತುಂಬ ಹೊದ್ದು, ಸಣ್ಣ ಕವಳಚೀಲವನ್ನು ಸೊಂಟಕ್ಕೆ ಸಿಗಿಸಿ, ಸರಬರನೆಂದು ಹೊರಟಳೆಂದರೆ ‘ಬಂದಳಪ್ಪ ಕಾರವಾರದ ಪೊಲೀಸರು’ ಎಂದು ಹುಡುಗರೆಲ್ಲ ಉದ್ಘಾರ ತೆಗೆಯುತ್ತಿದ್ದರು.

‘ಏಯ್… ಕಾರವಾರದ ಪೊಲೀಸರು ಗೀಲೀಸರು ಅಂತೆಲ್ಲ ಅಂದ್ರೆ ನಾ ಸುಮ್ಮಂಗಿರತ್ನಿಲ್ಲೆ ನೋಡು. ಮುಕಳಿಮೇಲೆ ನಾಕು ಬಾರಿಸ್ತಿ ಇನ್ನೊಂದ್ಸಲ ಹಂಗೆಲ್ಲ ಹೇಳಿದ್ರೆ’ ಅಂತ ಜೋರು ಮಾಡುತ್ತಿದ್ದಳು. ಅವಳು ಜೋರು ಮಾಡಿದಂತೆಲ್ಲ ಈ ಹುಡುಗರ ತಮಾಶೆಯೂ ಹೆಚ್ಚಾಗುತ್ತಿತ್ತು. ಆಗೆಲ್ಲ ಕಾರವಾರದ ಪೊಲೀಸರೆಂದರೆ ಹಾಗೇ.. ತಲೆಯಲ್ಲಿ ಚಿಕ್ಕ ಕೂದಲು ಬರುವಂತೆ ಟ್ರಿಮ್ ಮಾಡಿಸಿ, ಟಿಪ್‍ ಟಾಪಾಗಿರುತ್ತಿದ್ದರು. ಮಡಿಮುದುಕಿಯ ತಲೆಯೂ ಒಮ್ಮೊಮ್ಮೆ ಬೋಳು ಹಾಗೂ ಕೆಲವೊಮ್ಮ ಚೌರ ಮಾಡಿಸಿಕೊಳ್ಳದಿದ್ದರೆ ಕ್ರಾಪಿನ ಥರ ಕೂದಲು ಬರುತ್ತಿತ್ತು. ಅದಕ್ಕೆ ಅವಳನ್ನೂ ಕಾರವಾರದ ಪೊಲೀಸರಿಗೆ ಹೋಲಿಸಿ ತಮಾಶೆ ಮಾಡುತ್ತಿದ್ದರು.

ಮಡಿ ಎಂದರೆ ಹಾಗೆ ಹೀಗಿನ ಮಡಿಯಲ್ಲ ಅವಳದ್ದು. ಅಡುಗೆ ಮಾಡಿ ಹಾಕುವವರೂ ಸ್ನಾನ ಮಾಡಿ, ಮಡಿಯುಟ್ಟು ಅಡುಗೆ ಮಾಡಿ ಬಡಿಸಬೇಕಾಗಿತ್ತು. ಬೆಳಗಿನ ತಿಂಡಿಗೊಮ್ಮೆ, ಮಧ್ಯಾಹ್ನದ ಊಟಕ್ಕೊಮ್ಮೆ ಮತ್ತು ರಾತ್ರಿಯ ಫಲಾಹಾರಕ್ಕೊಮ್ಮೆ ಸ್ನಾನ ಮಾಡಿಯೇ ತಿಂಡಿ ಸಿದ್ಧಗೊಳಿಸಿ ಬಡಿಸಬೇಕಾಗುತ್ತಿತ್ತು.

ಒಂದೊಮ್ಮೆ ಮನೆಯಲ್ಲೇ ಇದ್ದಳೆಂದರೆ ಅಡುಗೆ ಮಾಡಲು ಬಂದರೆ ಉಪ್ಪು, ಸಕ್ಕರೆಯಿಂದ ಎಲ್ಲವನ್ನೂ ತೊಳೆದೇ ಬಳಸುತ್ತಿದ್ದಳು. ಬಹುಶಃ ನೀರನ್ನು ತೊಳೆಯಲು ಸಾಧ್ಯವಿದ್ದರೆ ಅದನ್ನೂ ತೊಳೆದೇಬಿಡುತ್ತಿದ್ದಳೋ ಏನೋ. ಅವಳೇ ದನ ಕರೆಯಲು ಹೋದರೆ ಮೊದಲೇ ದನಕ್ಕೆ ಹಿಂಡಿಕೊಟ್ಟು ತಿನ್ನಿಸಿಯಾದ ಮೇಲೆ ಅದರ ಬಾಯನ್ನೂ ತೊಳೆಯುತ್ತಿದ್ದಳು. ಅದು ಹಿಂಡಿ ತಿಂದು ಬಾಯೆಲ್ಲ ಎಂಜಲು ಆಗಿ ತನ್ನ ದೇಹಕ್ಕೆಲ್ಲಾದರೂ ಬಡಿದು ತಾನು ಮೈಲಿಗೆಯಾಗಿಬಿಡುತ್ತೇನೆಂಬ ಭಯ. ಅದಕ್ಕೆ ಅವಳಿಗೆ ‘ದನದ ಬಾಯಿ ತೊಳೆಯೋ ಅಮ್ಮಮ್ಮ’ ಎಂದೂ ಹೆಸರು ಬಿದ್ದಿತ್ತು.

ಇಷ್ಟೆಲ್ಲ ಮಡಿ ಮಾಡುವ ಮಡಿಮುದುಕಿ ಉಡುತ್ತಿದ್ದ ಮಡಿ ಸೀರೆ ಮಾತ್ರ ಕೊಳೆಕೊಳೆಯಾಗಿ, ಕಮಟು ವಾಸನೆ ಬರುತ್ತಿತ್ತು. ತೊಳೆಯದೇ ಎಷ್ಟು ದಿವಸವಾಗಿರುತ್ತಿತ್ತೋ… ಹಾಗೆ ಯಾರಾದರೂ ಮಡಿ ಸೀರೆಯನ್ನು ತೊಳೆಯಲು ಹೊರಟರೆ ಒಂದಿಡೀ ದಿನ ಬಿಸಿನೀರಲ್ಲಿ ಅದೂ ಅಂಟುವಾಳಕಾಯಿ ಹಾಕಿದ ನೀರಲ್ಲಿ ನೆನೆಹಾಕಿ, ಕೊಳೆ ಎಲ್ಲ ಬಿಟ್ಟ ಮೇಲೆ ತೊಳೆದರೆ ಸ್ವಲ್ಪವಾದರೂ ಅದರಲ್ಲಿರುವ ಎಣ್ಣೆ ಅಂಶ ಹೋಗುತ್ತಿತ್ತು.. ಹಾಗೆ ಅವಳ ಸೀರೆ ಕಮಟು ವಾಸನೆ ಬರುವುದಕ್ಕೂ ಒಂದು ಕಾರಣವಿತ್ತು. ಅವಳಿಗೆ ಮಂಡಿನೋವು ವಿಪರೀತವಿತ್ತು. ಅದಕ್ಕಾಗಿ ಒಂದು ತೈಲ ತಂದಿಟ್ಟುಕೊಂಡಿದ್ದಳು. ಆ ತೈಲ ಕಮಟು ವಾಸನೆ. ಅದನ್ನು ದಿನಾ ಹಚ್ಚಿಕೊಂಡು ಮಲಗುತ್ತಿದ್ದಳು. ಹಾಗಾಗಿ ಅವಳು ಬಂದರೆ ಕಮಟು ವಾಸನೆ ಬರುತ್ತಿತ್ತು.

ಇಂಥ ಮಡಿಮುದುಕಿ ಪ್ರತಿದಿವಸ ಊಟ ಮಾಡಿದ ಮೇಲೆ ಚೂರು ಕೊಬ್ಬರಿ ಚೂರನ್ನು ತಿನ್ನುತ್ತಿದ್ದಳು. ಯಾಕೆಂದರೆ ಈಗ ಹೀಗೆ ಊಟ ಮಾಡಿದ ಮೇಲೆ ಕೊಬ್ಬರಿ ಚೂರನ್ನು ತಿಂದರೆ ಸಾಯುವ ಕಾಲಕ್ಕೆ ರಾಮಾ.. ರಾಮಾ.. ಎಂದು ರಾಮನ ಜಪ ಮಾಡುತ್ತಾರಂತೆ. ಬಾಯಲ್ಲಿ ರಾಮ ಮಂತ್ರವೇ ಬರುತ್ತದಂತೆ. ಹಾಗೆ ರಾಮನ ಮಂತ್ರ ಬಾಯಲ್ಲಿ ಬಂದರೆ ನೇರ ವೈಕುಂಠಕ್ಕೇ ಹೋಗುತ್ತಾರಂತೆ… ಎಂದೆಲ್ಲ ಕತೆ ಹೇಳಿ ಪ್ರತಿದಿವಸ ಕೊಬ್ಬರಿ ಗಿಟುಕನ್ನು ತಿಂದು ತೇಗುತ್ತಿದ್ದಳು. ಅದೂ ಅವಳು ಎಲ್ಲೇ ಹೋಗಲಿ, ಯಾರದ್ದೇ ಮನೆಗೆ ಹೋಗಲಿ ಅವರಹತ್ರ ಊಟವಾದ ಕೂಡ್ಲೇ ‘ಏ… ಯಶೋದೆ… ಕೊಬ್ಬರಿ ಚೂರು ಕೊಡೆ..’ ಎಂದ್ಹೇಳಿ ಆ ಮನೆಯ ಗೃಹಿಣಿಯರ ಬಳಿ ಇಸ್ಕಂಡು ತಿನ್ನುತ್ತಿದ್ದಳು. ಅವಳು ದಿನಾ ಕೊಬ್ಬರಿ ಚೂರು ತಿನ್ನುವುದನ್ನು ನೋಡಿದ ಆ ಮನೆಯ ಸಣ್ಣ ಕೂಸು ಚೈತ್ರಿಕಾ ‘ಅಮ್ಮಮ್ಮ ನೀ ಎಂತಕ್ಕೆ ಊಟಾದ ಕೂಡ್ಲೇ ಕೊಬ್ಬರಿ ಚೂರು ತಿಂತೆ’ ಎಂದು ಕೇಳಿದ್ದಕ್ಕೆ, ‘ಕೂಸೆ.. ಸಾಯೋ ಕಾಲಕ್ಕೆ ರಾಮಾ..ರಾಮಾ..ಎಂದು ಹೇಳಿ ಪ್ರಾಣ ಬಿಡತ್ವಡ ಅದಿಕ್ಕೇಯ’ ಎಂದುಹೇಳಿದ್ದಳು. ‘ರಾಮ ಎಂದೆಂತಕ್ಕೆ ಹೇಳವು’ ಮತ್ತೆ ಅವಳ ಪ್ರಶ್ನೆಗೆ, ‘ಸಾಯೋ ಕಾಲಕ್ಕೆ ರಾಮನ ಜಪ ಮಾಡಿದ್ರೆ ನೇ….ರ ಸ್ವರ್ಗಕ್ಕೇ ಹೋಗತ್ವಡ ಕೂಸೇ…’ ಎಂದು ಕೈಯನ್ನು ಸುಮಾರು ಸ್ವರ್ಗದೆತ್ತರಕ್ಕೇ ಏರಿಸಿಕೊಂಡು, ಕಾಜು ಗಣ್ಣುಗಳನ್ನು ಮತ್ತಷ್ಟು ಅರಳಿಸಿ ಅವಳು ಹೇಳಿದ ಪರಿಗೆ ಸ್ವರ್ಗ ಅಲ್ಲೇ ಸಿಕ್ಕಂತೆನಿಸಿ ಆ ಕೂಸು ‘ಆನೂ ಸ್ವರ್ಗಕ್ಕೆ ಹೋಗ್ತಿ ಅಮಾ, ಎಂಗೂ ಕಾಯಿಚೂರು ಕೊಡು’ ಎಂದಳು. ಅದಕ್ಕೆ ಅಮ್ಮಮ್ಮ ‘ಸುಮ್ಮಂಗಿರೆ ಕೂಸೆ. ನೀ ಎನ್ನಷ್ಟು ದೊಡ್ಡವಳಾಗಿ ಎನ್ನ ಥರವೇ ಮಡಿ ಮಾಡಿ, ಅನುಷ್ಠಾನ ಮಾಡಿದ್ರೆ ಮಾತ್ರವಾ ಸ್ವರ್ಗಕ್ಕೆ ಹೋಪಲಾಗ್ತು’ ಎಂದು ಹೇಳಿದರೆ, ಅವಳ ಕಣ್ಣುಗಳಲ್ಲೇ ಸ್ವರ್ಗವನ್ನು ಕೂಸು ನೋಡುತ್ತಿದ್ದರೆ, ಕೂಸಿನ ಅಮ್ಮ ಮಾತ್ರ ‘ಅಯ್ಯ… ನಿನ್ನ ಹಾಂಗೆಲ್ಲ ಎನ್ನ ಮಗಳು ಆಪದು ಬ್ಯಾಡ ಅಮ್ಮಮ್ಮ. ಅವಳಿಗೆ ಸ್ವರ್ಗ ಸಿಗದೇ ಇದ್ರೂ ಪರವಾಗಿಲ್ಲೆ. ಇಪ್ಪಲ್ಲಿ ಸುಖವಾಗಿದ್ರೆ ಸಾಕು’ ಎಂದಿದ್ದಕ್ಕೆ ‘ಆನು ಸ್ವರ್ಗಕ್ಕೆ ಹೋಪದು ಬ್ಯಾಡ್ದನೇ’ ಎಂದು ಜೋರಾಗಿ ಕೂಗಿದಳು ಮಡಿಮುದುಕಿ. ಇನ್ನಿವಳ ಸುದ್ದಿಗೆ ಹೋದ್ರೆ ರಾತ್ರಿಬೆಳತಂಕ ಮಹಾಭಾರತವನ್ನೇ ಶುರುಮಾಡುತ್ತಾಳೆಂದು ಸುಮ್ಮನಾದಳು ಯಶೋದೆ.

ಹೀಗೆ ಅವಳು ಕೊಬ್ಬರಿ ಚೂರನ್ನು ತಿಂದದ್ದಷ್ಟೇ ಬಂತು. ಆದರೆ ಅವಳು ಸಾಯುವಾಗ ಮಾತ್ರ ಅದೇನು ಕಾಯಿಲೆ ಇತ್ತೋ ಏನೋ… ಕಾಚ್‍ ಗುಟ್ಟಿಕೊಂಡು (ವಿಕಾರವಾಗಿ) ಕೂಗುತ್ತಿದ್ದಳು. ವರ್ಷಾನುಗಟ್ಟಲೆ ಹಾಸಿಗೆಯಲ್ಲಿ ಮಲಗಿ, ನೆವೆದೂ ನೆವೆದೂ… ಕಡೆಗೂ ಪ್ರಾಣಬಿಟ್ಟಳು. ಅವಳು ಸತ್ತಾಗ ಎಲ್ಲರೂ ಕೇಳಿದ ಪ್ರಶ್ನೆಯೆಂದರೆ ‘ಯಮಧರ್ಮರಾಯ ಮಡಿಯಲ್ಲೇ ಬಂದು ಅವಳನ್ನು ತೆಗೆದುಕೊಂಡು ಹೋದನಾ ಹೇಗೆ, ಏಯ್.. ಹೆಣಕ್ಕೂ ಒಂದು ಮಡಿಸೀರೆಯನ್ನೇ ಹೊದೆಸಿಬಿಡಿ.. ಇಲ್ದಿದ್ರೆ ಮಡಿಪಿಶಾಚಿಯಾಗಿ ಅಲೆಯಲೆ ಶುರುಮಾಡಿಬಿಡ್ತು…’ ಎಂದೆಲ್ಲ ಹೇಳುತ್ತಿದ್ದರು. ಒಟ್ಟಿನಲ್ಲಿ ಅವಳು ಸತ್ತದ್ದಕ್ಕೆ ಅವರ ಮನೆಯವರೂ, ಊರವರೂ, ನೆಂಟರಿಷ್ಟರೂ ಯಾರೊಬ್ಬರೂ ಬೇಜಾರು ಮಾಡಿಕೊಳ್ಳಲಿಲ್ಲ. ಬದಲಾಗಿ ಅಂತೂ ಸತ್ಲಲ್ಲ… ಎಂದು ನಿಟ್ಟುಸಿರು ಬಿಟ್ಟಿದ್ದೇ ಹೆಚ್ಚು ಜನ.

ಹಾಗೆ ನೋಡಿದರೆ ಆ ಅಮ್ಮಮ್ಮ ದೇವರ ಮುಂದೆ ಅಷ್ಟೆಲ್ಲ ಕೂತದ್ದು ಕಡಿಮೆಯೇ. ಬೇರೆಯವರ ಬಳಿ ಮಡಿ ಮಾಡಿಸಿ ತಿಂಡಿಗಳನ್ನು ಸರಿಯಾಗಿ ಮಾಡಿಸಿ ತಿನ್ನುತ್ತಿದ್ದಳು. ‘ಈ ಮಡಿಮುದುಕಿ ಹೋದಲ್ಲೆಲ್ಲ ಹೀಂಗೇಯ, ತಂಗೆ ಬೇಕಾದ್ದು ಮಾಡಿಸ್ಗ್ಯಂಡು ತಿಂತು. ತಂಗೆ ಬೇಕಾದ್ಹಾಗೇ ಇರವು. ಮಲಗಲೆ ಮಂಚವೇ ಆಗವು. ತಡಿಯನ್ನೇ ತಂದ್ಹಾಕವು. ಎಲ್ಲ ಸೌಕರ್ಯವೂ ಬೇಕು ಇದಕ್ಕೆ’ ಎಂದು ಮನೆಜನಗಳೆಲ್ಲ ಬೈಯ್ಯುವಷ್ಟರ ಮಟ್ಟಿಗೆ ಮಡಿ ಅಮ್ಮಮ್ಮ ಇದ್ದಳು. ಎಲ್ಲಿಗೇ ಹೋಗುವುದಾದರೂ ಬಹುತೇಕ ನಡೆದೇ ಹೋಗುತ್ತಿದ್ದಳು. 7-8ಮೈಲಿಗಳು ಬೇಕಾದ್ರೂ ಒಬ್ಬಳೇ ನಡೆದು ಹೋಗಬಲ್ಲವಳಾಗಿದ್ದಳು. ಕಡೆಗೆ ರಾತ್ರಿ ಮಲಗುವಾಗ ಕಾಲುನೋವೆಂದು ಕಮಟು ವಾಸನೆಯ ಎಣ್ಣೆಯನ್ನು ಹಚ್ಚಿಕೊಂಡು ಮಲಗುತ್ತಿದ್ದಳು, ಇಡೀ ಮನೆಗೆ ವಾಸನೆಯನ್ನು ಪಸರಿಸಿ.

ಮಡಿ ಅಮ್ಮಮ್ಮನಿಗೆ ಇಬ್ಬರು ಗಂಡು ಮಕ್ಕಳಿದ್ದರು. ಅವಳ ಮನೆ ಬೆಗಡಿಪಾಲಲ್ಲಿ ಬೇಕಾದಷ್ಟು ಆಸ್ತಿಪಾಸ್ತಿ ಎಲ್ಲವೂ ಇತ್ತು. ಗಂಡನಮನೆ ಇಡೀ ಊರಿಗೇ ದೊಡ್ಡ ಮನೆತನ. ಒಂದು ಮನೆಯಲ್ಲಿ ಏನಿಲ್ಲವೆಂದರೂ 25-30 ಜನ ಇರುತ್ತಿದ್ದರು. 7-8 ಅಣ್ಣತಮ್ಮಂದಿರ ಪೈಕಿ ನಾಲ್ಕನೆಯವನಾದ ಅಪ್ಪಣ್ಣನಿಗೆ ಕೊಟ್ಟು ಮದುವೆ ಮಾಡಿದ್ದರು ಪದ್ಮಾವತಿಯನ್ನು. ಆದರೆ ಚಿಕ್ಕ ವಯಸ್ಸಿಗೇ ಮದುವೆಯಾಗಿ ಗಂಡನೊಂದಿಗೆ ಒಂದೆರೆಡುವರ್ಷ ಬಾಳ್ವೆ ಮಾಡುವಾಗಲೇ ಗಂಡ ತೀರಿಕೊಂಡಿದ್ದ. ಅಷ್ಟರ ನಂತರ ತಲೆ ಬೋಳಿಸಿ, ಮಡಿಸೀರೆ ಉಡಿಸಿ, ಕೈಗೊಂದು ಜಪಸರ ಹಿಡಿಸಿ ಕೂರಿಸಿದ್ದರು ಪದ್ಮಾವತಿಯನ್ನು. ರಾಮಶಿವಾ ಎಂದು ಜಪಮಾಡಿಕೊಂಡಿದ್ದಳು ಪದ್ಮಾವತಿ ತನ್ನ ಇಬ್ಬರು ಮಕ್ಕಳನ್ನೂ ಬೆಳೆಸುತ್ತ. ಆಗ ಅವಳ ವಯಸ್ಸು ಹದಿನೆಂಟೋ-ಇಪ್ಪತ್ತೋ ಇದ್ದಿರಬಹುದಷ್ಟೆ. ನೋಡಲು ಚೆಂದವಿದ್ದ ಪದ್ಮಾವತಿ, ಇಬ್ಬರು ಮಕ್ಕಳ ತಾಯಿಯಾದಮೇಲೆ ಇನ್ನೂ ಚೆಂದ ಕಾಣುತ್ತಿದ್ದಳು. ತಲೆಬೋಳಿಸಿ, ಮಡಿಸೀರೆ ಉಡಿಸಿಟ್ಟರೂ ಏರು ಜವ್ವನೆ ಪದ್ಮಾವತಿ ಎಂಥವರಾದರೂ ತಿರುಗಿ ನೋಡುವಂಥ ರೂಪವತಿಯಾಗಿದ್ದಳು.

ಗಂಡನ ಅಣ್ಣ-ತಮ್ಮಂದಿರ ಮಕ್ಕಳನ್ನು ಬೆಳೆಸುತ್ತ ಮನೆಗೆಲಸ ಮಾಡಿಕೊಂಡು, ಉಳಿದ ಸಮಯದಲ್ಲಿ ಭಗವಂತನ ನಾಮಸ್ಮರಣೆ ಮಾಡುತ್ತ, ಬದುಕು ನೂಕುತ್ತಿದ್ದಳು. ಅಂಥ ದಿನಗಳಲ್ಲೇ ಒಂದು ದಿವಸ ಮಡಿಯುಟ್ಟು ಅಡುಗೆ ಮನೆಗೆ ಬಂದ ಪದ್ಮಾವತಿ ದೊಡ್ಡ ಚರಿಗೆ ಅನ್ನವನ್ನು ಬಾಗಿಸುತ್ತಿದ್ದಳು. ಆಗ ಅಡುಗೆ ಮನೆಯ ಸೂರಿನಲ್ಲಿ ಹಾಕಿದ್ದ ಕನ್ನಡಿ ಬೆಳಕಿಗೆ ಅವಳ ಕೈಯ್ಯಲ್ಲಿದ್ದ ಉಂಗುರ ಫಳಕ್ಕೆಂದು ಹೊಳೆದದ್ದು ಅವಳ ಅತ್ತೆ ಗಣಪಮ್ಮನ ಕಣ್ಣಿಗೆ ಬಿತ್ತು. ಅನ್ನ ಬಾಗಿಸಿದ ಕೂಡಲೇ ಅತ್ತೆ ಅವಳನ್ನು ನಡುಮನೆಗೆ ಕರೆದುಕೊಂಡು ಹೋಗಿ ಮೆಲ್ಲಗೆ ಉಂಗುರದ ವಿಷಯ ಕೇಳಿದಳು. ‘ಇದ್ಯಾರದ್ದು, ಯಾರುಕೊಟ್ಟ, ಎಲ್ಲಿ ಸಿಕ್ಚು ನಿಂಗೆ?’ ಎಂದು ಅಧಿಕಾರವಾಣಿಯಲ್ಲೇ ಕೇಳಿದ ಹೊಡೆತಕ್ಕೆ ಪದ್ಮಾವತಿ ಅದುರಿಹೋದಳು. ಅದುವರೆಗೆ ಹೀಗೆಲ್ಲ ಪ್ರಶ್ನೆ ಬರಬಹುದೆಂದು ಅವಳಿಗೆ ಅನಿಸಿಯೇ ಇರಲಿಲ್ಲ. ಅವಳ ಮೈಮೇಲೆ ರುದ್ರಾಕ್ಷಿ ಸರವೊಂದು ಬಿಟ್ಟರೆ ಇನ್ಯಾವುದೇ ಆಭರಣವೂ ಇರದ ಕಾರಣಕ್ಕೆ ಬೆರಳಲ್ಲಿದ್ದ ಉಂಗುರ ಪ್ರಶ್ನೆಯಾಗಿ ಕಾಡತೊಡಗಿತು. ಏನು ಹೇಳಬೇಕೆಂದು ತಿಳಿಯದೇ ಒದ್ದಾಡುತ್ತಿರುವಾಗಲೇ, ಕದ್ದಿದ್ಯಾ ಇದನ್ನು ಎಂದು ಅತ್ತೆ ಜೋರು ಮಾಡಿದಳು. ‘ಇಲ್ಲೆ.. ಕದ್ದಿದ್ನಿಲ್ಲೆ. ಇದನ್ನು ಅವರೇ ಕೊಟ್ಟಿದ್ದು’ ಎಂದು ಅಳು ತಡೆಯುತ್ತಾ ಹೇಳಿದಳು ಪದ್ಮಾವತಿ. ತಕ್ಷಣ ಆ ಉಂಗುರವನ್ನು ಇಸಿದುಕೊಂಡದ್ದಲ್ಲದೆ ‘ಇದನ್ನು ಯಾರಮುಂದೆಯೂ ಬಾಯಿಬಿಡಡ ಮತ್ತೆ’ ಎಂದೂ ತಾಕೀತು ಮಾಡಿ ಅವಳನ್ನು ಕಳಿಸಿದಳು ಅತ್ತೆ. ಆದರೆ ಅತ್ತೆಗೆ ನೆಮ್ಮದಿಯಿಂದಿರಲು ಸಾಧ್ಯವಾಗಲಿಲ್ಲ ಆ ಉಂಗುರವನ್ನು ನೋಡಿದಮೇಲೆ. ಆ ಉಂಗುರ ಅವಳ ಕಿರಿಯ ಮಗನದ್ದಾಗಿತ್ತು. ಅದು ಇವಳ ಬೆರಳಿಗೆ ಹೇಗೆ ಬಂತು.. ಅದೂ ಅವನೇಕೊಟ್ಟದ್ದು ಎಂದು ಬೇರೆ ಹೇಳುತ್ತಾಳೆ… ಏನೋ ಹೊಳೆದು ಗಣಪಮ್ಮಮ್ಮ ನಿಜಕ್ಕೂ ಗಾಬರಿಬಿದ್ದಳು. ಅದಕ್ಕೆ ಉತ್ತರವಾಗಿ ಸ್ವಲ್ಪದಿವಸದಲ್ಲೇ ಹೊರಬಿತ್ತು. ಆ ತಿಂಗಳು ಪದ್ಮಾವತಿ ಹೊರಗಾಗಲಿಲ್ಲ. ಆರೋಗ್ಯದಿಂದ ಇದ್ದು ಮನೆತುಂಬ ಚಟುವಟಿಕೆಯಿಂದ ಓಡಾಡಿಕೊಂಡಿದ್ದ ಪದ್ಮಾವತಿ ಈಗೀಗ ಸುಸ್ತಾಗಿ ಕೂತುಬಿಡುತ್ತಿದ್ದಳು. ಒಂದೆರೆಡು ಬಾರಿ ವಾಂತಿಯೂ ಆಯಿತು. ಮತ್ತೆ ಅವಳನ್ನು ಬಚ್ಚಲಮನೆಯ ಬಳಿ ಯಾರಿಗೂ ಕಾಣದಂತೆ ಕರೆದು ಅತ್ತೆ ಕೇಳಿದಳು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

‘ಈ ತಿಂಗಳು ಮುಟ್ಟಾಯ್ದಿಲ್ಯಾ …’
ಇಲ್ಲವೆಂದು ತಲೆಅಲ್ಲಾಡಿಸಿದಳು ಪದ್ಮಾವತಿ. ಅತ್ತೆಗೆ ಭಯ, ಸಿಟ್ಟು, ಎಲ್ಲವೂ ಒಟ್ಟಿಗೇ ಆಗಿ, ಯಾರು ಇದಕ್ಕೆ ಕಾರಣ.. ಯಾರಿಂದ ಇದು ಎಂದು ಜೋರುಮಾಡಿ ಕೇಳಿದಳು. ಅದಕ್ಕೆ ಪದ್ಮಾವತಿ ನಸುನಕ್ಕು ‘ಅತ್ತೇರೇ… ಯಾರು ಉಂಗುರ ಕೊಟ್ರೋ ಅವ್ರೇಯ… ಅವರನ್ನೇ ಕೇಳಿ ನೀವು’ ಎಂದಳು ಹೊಟ್ಟೆ ಹಿಡಿದುಕೊಂಡು.

ಅತ್ತೆಗೆ ತಲೆತಿರುಗಿದಂತಾಗಿ ಸ್ವಲ್ಪ ಹೊತ್ತು ಅಲ್ಲೇ ಕುಳಿತವಳು, ನಂತರ ಎದ್ದು ಹೆಬ್ಬಾಗಿಲಲ್ಲಿ ಖುರ್ಚಿಯಮೇಲೆ ಕವಳ ಹಾಕುತ್ತ ಕುಳಿತ ಗಂಡ ಕೃಷ್ಣಭಟ್ಟರನ್ನು ಕರೆದಳು. ನಡುಮನೆಯಲ್ಲಿರುವ ತಮ್ಮ ಕತ್ತಲ ಕೋಣೆಗೆ ಕರೆದುಕೊಂಡು ಹೋಗಿ ವಿಷಯ ಹೇಳಿದಳು. ವಿಷಯ ಕೇಳಿ ಗಾಬರಿಗೊಂಡ ಭಟ್ಟರು,
‘ಅವಳ ಬಸಿರನ್ನು ಇಳಿಸಲು ಏರ್ಪಾಡು ಮಾಡು, ಇನ್ನು ಅವಳಿಗೂ ನಮಗೂ ಯಾವ ಸಂಬಂಧವೂ ಇಲ್ಲೆ. ಅವಳಿಗೆ ಶ್ರಾದ್ಧ ಮಾಡಿ, ಎಲ್ಲ ಸಂಬಂಧವನ್ನೂ ಕಳಚಿಕೊಂಡು ಅವಳನ್ನು ಅವಳ ಅಪ್ಪನ ಮನೆಗೆ ಕಳಿಸಿಬಿಡು’ ಎಂದು ಹೆಂಡತಿಗೆ ಹೇಳಿದ್ದಲ್ಲದೆ ತನ್ನ ದೊಡ್ಡಮಗನಿಗೆ ಭಟ್ಟರನ್ನು ಕರೆತರುವಂತೆ ಹೇಳಿದರು. ಊರಿಗೆಲ್ಲ ಹೆಸರುಮಾತಿನ ಮನೆತನ. ದೊಡ್ಡ ಕುಟುಂಬ. ಅಲ್ಲಿಯೇ ಹೀಗಾದರೆ ಮನೆತನದ ಮರ್ಯಾದೆ ಏನಾದೀತು…?

ಹಾಗೆ ಅವಳು ಜೀವಂತವಿರುವಾಗಲೇ ಅವಳಿಗೆ ಘಟಶ್ರಾದ್ಧ ಮಾಡಿದರು. ಪದ್ಮಾವತಿಯ ದೊಡ್ಡ ಮಗ ರಘುಪತಿ ಅಜ್ಜ ಹೇಳಿದಂತೆ ಕೇಳಿದ. ಸ್ವಲ್ಪ ತಿಳಿವಳಿಕೆ ಬಂದಂತಿತ್ತು ಅವನಿಗೆ. ಆದರೆ ಚಿಕ್ಕವನು ಶ್ರೀಪತಿ, ‘ಅಜ್ಜಾ… ಸತ್ತವರದ್ದಲ್ದ ಶ್ರಾದ್ಧ ಮಾಡದು. ಅಮ್ಮನ್ನೆಂತಕ್ಕೆ ಬದುಕಿದ್ದಾಗಲೇ ಶ್ರಾದ್ಧ ಮಾಡ್ತ’ ಎಂದು ಕೇಳಿದ್ದಕ್ಕೆ ಅಜ್ಜ ಬೈದು ಸುಮ್ಮಂಗಿರಿಸಿದರು. ಅವನಿಗಿವೆಲ್ಲ ವಿಚಿತ್ರವೆನಿಸುತ್ತಿತ್ತು. ಅವನ ಮನೆಯಲ್ಲೇ ಅಜ್ಜನೇ ಅಜ್ಜನ ಅಪ್ಪ-ಅಮ್ಮನ ಶ್ರಾದ್ಧ ಮಾಡುತ್ತಿದ್ದ. ಹಾಗೆಯೇ ಅಕ್ಕಪಕ್ಕದ ಮನೆಯಲ್ಲಿ ಶ್ರಾದ್ಧಕ್ಕೆ ಊಟಕ್ಕೆಲ್ಲ ಹೋಗುತ್ತಿದ್ದ. ಸತ್ತವರದ್ದು ಮಾತ್ರ ಶ್ರಾದ್ಧ ಮಾಡುತ್ತಾರೆಂದು ಅವನಿಗೆ ತಿಳಿದಿತ್ತು. ಆದರೆ ಅವತ್ತು ಅಜ್ಜ, ದೊಡ್ಡಪ್ಪ ಎಲ್ಲ ಸೇರಿ ನಿನ್ನಮ್ಮನ ಶ್ರಾದ್ಧ ಮಾಡವು ಎಂದು ಒಂದು ದಿನ ನಿಗದಿ ಮಾಡಿ ಅಣ್ಣನಿಗೆ ಹೇಳಿದಾರಿಂಬ ಈ ಪುಟ್ಟ ಮಗ ಶ್ರೀಪತಿಗೆ ತಲೆಯಲ್ಲಿ ಹುಳ ಬಿಟ್ಟಂತಾಗಿತ್ತು.

‘ಈ ಮಡಿಮುದುಕಿ ಹೋದಲ್ಲೆಲ್ಲ ಹೀಂಗೇಯ, ತಂಗೆ ಬೇಕಾದ್ದು ಮಾಡಿಸ್ಗ್ಯಂಡು ತಿಂತು. ತಂಗೆ ಬೇಕಾದ್ಹಾಗೇ ಇರವು. ಮಲಗಲೆ ಮಂಚವೇ ಆಗವು. ತಡಿಯನ್ನೇ ತಂದ್ಹಾಕವು. ಎಲ್ಲ ಸೌಕರ್ಯವೂ ಬೇಕು ಇದಕ್ಕೆ’ ಎಂದು ಮನೆಜನಗಳೆಲ್ಲ ಬೈಯ್ಯುವಷ್ಟರ ಮಟ್ಟಿಗೆ ಮಡಿ ಅಮ್ಮಮ್ಮ ಇದ್ದಳು.

ಬದುಕಿದ್ದವರ ಶ್ರಾದ್ಧ ಮಾಡತ್ವಾ… ಹೆಂಗ್ ಮಾಡ್ತ.. ಆಗ ಅಮ್ಮ ಎಂತ ಮಾಡ್ತಿರ್ತು. ಶ್ರಾದ್ಧ ಮಾಡಿದ ಮೇಲೆ ಖರೇವಾಗ್ಲೂ ಸತ್ತೇ ಹೋಗ್ತಾ…? ಹೀಗೆಲ್ಲ ಕೇಳಿಕೊಳ್ಳುವ ಅವನ ವಯಸ್ಸು ಆರೋ.. ಏಳೋ ಇದ್ದಿರಬಹುದು. ನಡುಮನೆಯಲ್ಲಿ ಅಜ್ಜನ ಪಕ್ಕ ಮಲಗಿಕೊಂಡು ಇನ್ನಷ್ಟು ಅಜ್ಜನಿಗೆ ಆತುಕೊಂಡು ಮಲಗಿದ. ಮಾರನೇ ದಿನ ಅಮ್ಮನ ಶ್ರಾದ್ಧ. ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿಪಂಜೆ ಉಟ್ಟು ದೇವರ ಮನೆಗೆ ಬರುವಷ್ಟರಲ್ಲಿಯೇ ಅಜ್ಜ, ದೊಡ್ಡಪ್ಪ, ಅಣ್ಣ ಎಲ್ಲ ತಯಾರಾಗಿ ಕೂತಿದ್ದರು. ಅಮ್ಮ ಎಲ್ಲೂ ಕಾಣಿಸಲಿಲ್ಲ. ಹಿತ್ತಲಕಡೆ ಹೋಗುವಷ್ಟರಲ್ಲಿ ಅಜ್ಜಿ, ದೊಡ್ಡಮ್ಮ, ಅತ್ತೆ ಎಲ್ಲ ಅಮ್ಮನ ಎರಡೂ ಕೈ ಹಿಡಿದುಕೊಂಡು ದೊಡ್ಡ ಲೋಟದಲ್ಲಿ ಅವಳ ಬಾಯಿಗಿಟ್ಟು ಕುಡಿಸುತ್ತಿದ್ದರು. ಅಮ್ಮ ಅದನ್ನು ಕುಡಿದವಳೇ ಒದ್ದಾಡತೊಡಗಿದಳು. ಹಾಗೇ ಒದ್ದಾಡಿ ಒದ್ದಾಡಿ ಅಲ್ಲೇ ಮಲಗಿದಳು. ಇತ್ತ ಭಟ್ಟರು ಬಂದು ಶ್ರಾದ್ಧದ ವಿಧಿವಿಧಾನಗಳನ್ನೆಲ್ಲ ಪೂರೈಸುತ್ತಿದ್ದರು. ಅಲ್ಲೇ ಕಂಬಕ್ಕೆ ಒರಗಿ ನಿಂತು ಇದನ್ನೆಲ್ಲ ನೋಡುತ್ತ ನಿಂತಿದ್ದ ಶ್ರೀಪತಿ. ಅವತ್ತು ಶ್ರಾದ್ಧ ಮುಗಿಸಿದ ಮೇಲೆ ಅಣ್ಣ -ತಮ್ಮಂದಿರಿಬ್ಬರನ್ನೂ ಕೂರಿಸಿ ಭಟ್ಟರು, ಅಜ್ಜ ಎಲ್ಲರೂ ಹೇಳಿದ್ದು ‘ಇವತ್ತಿಗೆ ನಿನ್ನ ಅಮ್ಮ ಸತ್ತು ಹೋತು. ಅವಳನ್ನು ಇನ್ನು ನೋಡಹಾಂಗಿಲ್ಲೆ. ಹಾಗೆಯೇ ಅದು ಸತ್ತ ಮೇಲೆ ಇನ್ಯಾವ ರೀತಿಯ ಶ್ರಾದ್ಧವೂ ನಿಂಗ ಮಾಡುವ ಅಗತ್ಯ ಇರ್ತಿಲ್ಲೆ’ ಎಂದು. ಒಟ್ಟಿನಲ್ಲಿ ಅವಳ ಸಂಬಂಧವನ್ನು ಕಳಚಿಕೊಳ್ಳಲು ಇದೊಂಥರದ ಶಾಸ್ತ್ರೋಕ್ತ ವಿಧಾನವಾಗಿತ್ತು. ಹಾಗೆ ಹೇಳುತ್ತಿರುವಾಗ ಹಿತ್ತಲಕಡೆಯಲ್ಲಿ ನಿಧಾನಕ್ಕೆ ಎದ್ದು ಕುಳಿತಿದ್ದಳು ಪದ್ಮಾವತಿ. ಇನ್ನೂ ನೋವು ಹಾಗೆಯೇ ಇತ್ತು. ಹಾಗೆ ಹಿತ್ತಲಕಡೆಯಿಂದಲೇ ಹೊರಟು ಹೋದವಳು ಮತ್ತೆ ಆ ಮನೆಗೆ ಕಾಲಿಡಲಿಲ್ಲ. ಮಕ್ಕಳ ಮುಖವನ್ನೂ ನೋಡಲಿಲ್ಲ.

ಹೀಗೆ ಬಟ್ಟೆಗಂಟು ಹಿಡಿದು ಸೀದಾ ಬಂದದ್ದು ತನ್ನ ತವರು ಮನೆಗೆ. ಹಾಗೆ ಬಂದು ಅದೆಷ್ಟು ವರ್ಷಗಳಾದವೋ. ತವರುಮನೆಯಲ್ಲೂ ನೆಮ್ಮದಿಯಾಗೇನೂ ಇದ್ದಿರಲಿಲ್ಲ. ಗಂಡ ಸತ್ತವಳು, ಮುಂಡೆಯಾದ ಮೇಲೆ ಬಸಿರು ಇಳಿಸಿಕೊಂಡವಳು… ಇಷ್ಟೆಲ್ಲ ಕುಖ್ಯಾತಿ ಇರುವ ಅವಳ ಕುರಿತು ಯಾರಿಗೆ ತಾನೆ ಸಹ್ಯವಿರುತ್ತಿದೆ.? ಒಟ್ಟಿನಲ್ಲಿ ಅವಳ ಬಗ್ಗೆ ಇನ್ನಿಲ್ಲದ ಅನಾದರ. ಅವಳಪ್ಪ ಗಟ್ಟಿ ಇರುವಾಗಲೇ ಇದೆಲ್ಲ ನಡೆದಿದ್ದಕ್ಕೆ ಅಪ್ಪ ಅಮ್ಮ ಅವಳನ್ನು ಮನೆಯೊಳಗೆ ಸೇರಿಸಿಕೊಂಡರು. ಅದಿಲ್ಲದಿದ್ದರೆ ಅದೂ ಇರುತ್ತಿರಲಿಲ್ಲ. ತೀರಾ ಮಡಿ ಮಾಡುವ ಮನೆಗೆ ಅವಳು ಬಂದರೆ ಅವಳನ್ನು ಒಳಗೆ ಸೇರಿಸುತ್ತಿರಲಿಲ್ಲ. ಮನೆಯಲ್ಲಿ ಸರಿಯಾಗಿ ಊಟಹಾಕುತ್ತಿರಲಿಲ್ಲ. ಜಗುಲಿಯಲ್ಲೇ ಊಟ ಹಾಕುತ್ತಿದ್ದರು. ಹೀಗೆ ಅವಮಾನ, ಹಸಿವು ಇವುಗಳಿಂದಲೇ ಬೆಂದು ಹೋದಳು ಪದ್ಮಾವತಿ.
ಆ ಸಂಕಟದಿಂದ ಮುಕ್ತಿ ಪಡೆಯಲು ಅವಳು ಹಿಡಿದದ್ದು ಜಪಸರ. ಮಡಿ ಎಂಬ ಮಂತ್ರ. ಅದೊಂಥರದಲ್ಲಿ ಅವಳಿಗೆ ಶ್ರೀರಕ್ಷೆ ಆಯಿತು. ಅಲ್ಲಿಂದ ಅವಳು ಊರೂರು ಅಲೆಯತೊಡಗಿದಳು. ಹೋದಲ್ಲೆಲ್ಲ ಮಡಿ, ಶಾಸ್ತ್ರ ಸಂಪ್ರದಾಯವನ್ನು ಹೇಳತೊಡಗಿದಳು. ಅದರಲ್ಲೂ ಸಾಗರ ಸೀಮೆಗಿಂತ ಸಿದ್ದಾಪುರ ಸೀಮೆಗೆ ಬಂದಳೆಂದರೆ ಅವಳಿಗೆ ಒಂಥರದ ಸ್ವಾತಂತ್ರ್ಯ ಸಿಕ್ಕಂತೆನಿಸಿತ್ತು. ಇಲ್ಲೆಲ್ಲ ಅವಳನ್ನು ಮನೆಯೊಳಗೆ ಸೇರಿಸುತ್ತಿದ್ದರು. ಅದಕ್ಕೆ ಕಾರಣ ಅವಳ ಹಿನ್ನೆಲೆ ಈ ಕಡೆಯ ಹಳ್ಳಿಗಳವರಿಗೆ ಅಷ್ಟಾಗಿ ಗೊತ್ತಿರಲಿಲ್ಲ. ಅವರಿಗೆಲ್ಲ ಅವಳ ಕೆಂಪುಸೀರೆ, ಮಡಿ, ಜಪಸರ ಇವೇ ಕಾಣಿಸುತ್ತಿದ್ದವು. ಹಾಗಾಗಿ ಭಯಭಕ್ತಿಯಿಂದ ಒಳಸೇರಿಸುತ್ತಿದ್ದರು. ಇಷ್ಟು ಸಾಕಲ್ಲ. ಮಡಿ ಅಮ್ಮಮ್ಮಂಗೆ. ಅಲ್ಲಿಂದ ಶುರುವಾಯಿತು ಅವಳ ಹೊಸ ಅವತಾರ. ತಾನು ಹೇಳಿದ್ದೇ ಆಗಬೇಕು. ಇಂಥದ್ದೇ ತಿಂಡಿ, ಇಂಥದ್ದೇ ಊಟ, ಮನೆಯಲ್ಲಿ ಹೀಗೆಯೇ ಇರಬೇಕು. ಎಂದೆಲ್ಲ ತಾಕೀತು ಮಾಡತೊಡಗಿದಳು. ಹೀಗೆ ಊರೂರು ಅಲೆಯುತ್ತಲೇ ದಿನಗಳನ್ನು ಕಳೆದು ಈಗಂತೂ ಮಡಿಅಮ್ಮಮ್ಮ, ಮಡಿ ಮುದುಕಿಯಾಗಿಬಿಟ್ಟಳು.

ಇಷ್ಟೆಲ್ಲ ಸಂಕಟಗಳನ್ನು ದಾಟಿದ ಮಡಿ ಅಮ್ಮಮ್ಮಂಗೆ ಮುಟ್ಟಾದ ಹೆಣ್ಣುಮಕ್ಕಳನ್ನು, ಮದುವೆಯಾದ ಗೃಹಿಣಿಯರನ್ನು ಕಂಡರಾಗುತ್ತಿರಲಿಲ್ಲ. ಎಷ್ಟೆಂದರೆ ಆ ಮನೆಯಲ್ಲಿ ಹೆಣ್ಣುಮಕ್ಕಳಿದ್ದರೆ ಅವರನ್ನು ಮಾತು ಕೂಡ ಆಡಿಸುತ್ತಿರಲಿಲ್ಲ. ಅಷ್ಟೇ ಅಲ್ಲ ಅವಳಿಗೆ ಹೆಣ್ಣುಮಕ್ಕಳನ್ನು ಅದರಲ್ಲೂ ಹರೆಯಕ್ಕೆ ಬಂದ ಹೆಣ್ಣುಮಕ್ಕಳು, ಆಗತಾನೇ ಮದುವೆಯಾದ ಹೆಂಗಸರನ್ನು ಕಂಡರೆ ಆಗುತ್ತಿರಲಿಲ್ಲ. ಆ ಹೆಣ್ಣುಮಕ್ಕಳು ಚೆಂದನೆಯ ಡ್ರೆಸ್ ಮಾಡಿಕೊಂಡು ಪ್ಯಾಟಿಗೋ, ನೆಂಟರ ಮನೆಗೋ ಹೊರಟರಂತೂ ಮುಗಿದೇ ಹೋಯಿತು. ಅವತ್ತೆಲ್ಲ ಅವರಿಗೆ ಸಹಸ್ರನಾಮಾರ್ಚನೆ.

ಯಾರಾದರೂ ಹೆಣ್ಣುಮಕ್ಕಳು ಚೆಂದವಾಗಿ ತಯಾರಾದರೆ ಸಾಕು, ಇವಳ ಕೋಪ ನೆತ್ತಿಗೇರುತ್ತಿತ್ತು. ‘ತಯಾರಾಕ್ಯಂಡು ಹೊಂಟ್ಯನೇ. ಯಾವನ್ನ ಹುಡುಕಲೆ ಹೊಂಟೆ.. ಯಾರನ್ನು ಮೆಚ್ಚಲೆ ಇದೆಲ್ಲವಾ.. ಹೆಣ್ಣುಡ್ರು ಸ್ವಲ್ಪ ಸರಿ ಇರವು. ಹೀಂಗೆಲ್ಲ ಚೆಂದ ತಯಾರಾಕ್ಯಂಡ್ರೆ ಗಂಡಸ್ರು ಸುಮ್ಮಂಗೆ ಬಿಡ್ತ ಮಾಡಕ್ಯಂಡಿದ್ರಾ’ ಎಂದೆಲ್ಲ ಜೋರು ಧ್ವನಿಯಲ್ಲಿ ಕೂಗಿದರೆ ಎಂಥವರಾದರೂ ಭಯ ಬೀಳಬೇಕಾಗಿತ್ತು. ಗೃಹಿಣಿಯರು ಚೆಂದ ತಯಾರಾಗಿ ಹೊರಟರೆ ‘ಎಂತದ್ರೇ… ನಿಂಗೆ ಮನೆಯಲ್ಲಿ ಗಂಡ ಸಾಕಾಗತ್ನಿಲ್ಯನೇ.. ಅದ್ಯಾರನ್ನು ಮೆಚ್ಚಸಲೆ ಹೊಂಟ್ಯೆ’ ಎಂದು ಕೇಳುತ್ತಿದ್ದಳು. ಅದಿಕ್ಕೆ ಆ ಹೆಂಗಸರಿಗೂ ಇವಳನ್ನು ಕಂಡರೆ ಅಷ್ಟಕ್ಕಷ್ಟೇ ಎಂಬಂತಾಯಿತು. ಮಡಿಮುದುಕಿ ಬಂದಳು ಎಂದರೆ ಸಾಕು ಮನೆಯ ಹೆಂಗಸರಿಗೆಲ್ಲ ಛಳಿ ಹಿಡಿದಂತಾಗುತ್ತಿತ್ತು. ಅವಳಿಗೆ ಇಂಥದ್ದೇ ಮನೆ ಎಂದೇನೂ ಇರಲಿಲ್ಲ. ಒಂದು ಸಣ್ಣ ಸಂಬಂಧದ ಸಣ್ಣ ಎಳೆ ಸಿಕ್ಕರೂ ಸಾಕು ಅವರಮನೆಗೆ ಹೋಗಿ ಝಾಂಡಾ ಊರುತ್ತಿದ್ದಳು. ಶಿರಳಗಿ ಅವಳ ತಂಗಿಯ ಅತ್ತೆಮನೆಯೆಂದೂ, ಹೆಗ್ಗಾರಳ್ಳಿ ಅವಳ ಅಣ್ಣನ ಹೆಂಡತಿಯ ಚಿಕ್ಕಿಯ ಮನೆಯೆಂದೂ.. ಹೀಗೆ ಯಾವ್ಯಾವುದೋ ಸಂಬಂಧಗಳ ಹೆಳೆ (ನೆವ) ಹೇಳಿಕೊಂಡು ಹೋಗುತ್ತಿದ್ದಳು. ಅವಳು ಪದೇಪದೆ ಒಬ್ಬರ ಮನೆಗೇ ಬರುತ್ತಾಳೆಂದರೆ ಆ ಮನೆಯವರು ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಂದರ್ಥ. ಹಾಗೆ ಕೆಲವು ಮನೆಗಳಿಗೆ ಪದೇಪದೆ ಭೇಟಿಕೊಡುತ್ತಿದ್ದಳು. ಹಾಗೆ ಸಾವಿತ್ರಕ್ಕ, ಯಶೋದಕ್ಕನಂಥವರ ಮನೆಗಳಲ್ಲಿ ಹೆಚ್ಚು ದಿನ ಇರುತ್ತಿದ್ದಳು. ಅಂಥವರ ಮನೆಯ ಬಹುತೇಕ ಹೆಂಗಸರು, ‘ಇದು ಹೀಂಗೇ ತಿರುಕ್ಯೋತಿದ್ರೆ ಒಂದಿನ ಹಾದಿಬೀದಿಯಲ್ಲಿ ಸತ್ತು ಹೋಗ್ತು ಕಾಣ್ತು ನೋಡು’ ಎನ್ನುತ್ತಿದ್ದರು. ಅದು ಆಗಿದ್ದೂ ಹಾಗೆಯೇ.

ಅವಳು ಹೀಗೆ ಎಲ್ಲರಿಂದಲೂ ಬೈಸಿಕೊಂಡೂ ತನಗೆ ಬೇಕಾದ ರೀತಿ 70 ವರ್ಷಗಳ ಕಾಲ ಬದುಕಿದ್ದವಳು ಕಡೆಗೊಂದು ದಿನ ಯಾರದ್ದೋ ಮನೆಯಲ್ಲಿಯೇ ಪ್ರಾಣಬಿಟ್ಟಳು. ಆಗ ಸುದ್ದಿಹೇಳಲು ಆ ಮನೆಯ ಜನ ಅವಳಿಬ್ಬರ ಮಕ್ಕಳ ಮನೆಯನ್ನು ಹುಡುಕಿಕೊಂಡು ಹೋದರು. ಒಬ್ಬ ಬೆಗಡಿಪಾಲಲ್ಲೇ ಇದ್ದ, ಮತ್ತೊಬ್ಬ ತುಮರಿಕಡೆ ಜಮೀನು ಮಾಡಿಕೊಂಡು ಆರಾಮಾಗಿದ್ದ. ಇಬ್ಬರ ಮನೆಗೂ ಹೋದರೆ ಆ ಮಕ್ಕಳಿಬ್ಬರಿಗೂ ಏನೂ ಅನಿಸಲಿಲ್ಲ. ‘ಅಂತೂ ಹೋತಲ್ಲ ಘಟ’ ಎಂದರು. ಹಿರಿಯ ಮಗನಂತೂ ‘ಅವಳ ಶ್ರಾದ್ಧನೂ ಆಗಲೇ ಮಾಡಿಯಾಯ್ದು. ಇನ್ನವಳಿಗೆ ತಿಥಿ ಅಂತ ಏನೂ ಮಾಡುವಷ್ಟಿಲ್ಲೆ. ಹೆಣ ಸುಟ್ಟರಾಯಿತು. ಅದನ್ನೂ ನಿಂಗ್ಳೇ ಮಾಡಿಮುಗ್ಸಿಬಿಡಿ’ ಎಂದುಬಿಟ್ಟ. ಕಿರಿಯ ಮಗನಿಗಂತೂ ಆಗ ಅಮ್ಮನ ಘಟಶ್ರಾದ್ಧ ಮಾಡಿದ ನೆನಪೂ ಇಲ್ಲದೆ, ಅಮ್ಮನ ಯಾವ ನೆನಪೂ ಇರದ ಕಾರಣಕ್ಕೆ ಬರುವುದಿಲ್ಲ ಎಂದುಬಿಟ್ಟ. ಹೀಗೆ ಇಬ್ಬರು ಮಕ್ಕಳೂ ಅವಳ ಹೆಣ ಸುಡಲು ಬರಲಿಲ್ಲ. ಈ ಮನೆಯವರೇ ಅವಳ ಹೆಣವನ್ನು ಸುಟ್ಟರು. ಅಲ್ಲಿಗೆ, ಬದುಕಿದ್ದಾಗಲೇ ಶ್ರಾದ್ಧ ಮಾಡಿಸಿಕೊಂಡು ಎಲ್ಲ ಸಂಬಂಧಗಳನ್ನೂ ಕಳಚಿ ಮನೆಯಿಂದ ಆಚೆ ಹಾಕಿಸಿಕೊಂಡ ಪದ್ಮಾವತಿಯ ಭವಬಂಧನಗಳೆಲ್ಲ ಕೊನೆಯಾದವು.