ವಾಟ್ಸಾಪಿನ ಗುಂಪಿನಲ್ಲಿ ಒಬ್ಬರು ಬೆಂಗಳೂರಿನ ಅತ್ಯಾಧುನಿಕ ತಿಂಡಿಊಟಗಳ ಕೆಫೆ, ಹೋಟೆಲ್‌ಗಳ ಫೋಟೋಗಳನ್ನು ಹಂಚಿದ್ದರು. ಅವುಗಳಲ್ಲಿದ್ದ ಖಾದ್ಯಗಳ ಚಿತ್ರಗಳನ್ನು ನೋಡಿ ನನಗೆ ‘ಮಾಯಾ ಬಜಾರ್’ ಚಿಲನಚಿತ್ರದ ‘ವಿವಾಹ ಭೋಜನಂ’ ಹಾಡಿನ ನೆನಪು ಬಂತು. ಗುಂಪಿನ ಕೆಲ ಸದಸ್ಯರಿಗೆ ತಮ್ಮ ತವರಿನ ನೆನಪು ನುಗ್ಗಿ ಬಂದು ಅಲ್ಲಿಗೆ ಹೋಗಲಾರದ ಸ್ಥಿತಿಯಲ್ಲಿದ್ದೀವಲ್ಲಾ, ತಮ್ಮವರನ್ನು ನೋಡಿ ಮನೆಯೂಟ ಮಾಡಲಾರದ ಈ ಪರಿಸ್ಥಿತಿ ಯಾಕಾದರೂ ಬಂತೊ ಅಯ್ಯೋ, ಎನ್ನುವ ದುಃಖವಾಯ್ತು.
ಡಾ. ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’

 

ಡೌನ್ ಅಂಡರ್ ಅನ್ನೋ ಈ ಕೆಳಗಿನ ಲೋಕದಲ್ಲಿ ನಡೆಯುವ ಕಲಾಪಗಳು ಮೇಲಿನ ಭೂಲೋಕದವರಿಗೆ ಕಣ್ಣಾಮುಚ್ಚಾಲೆ ಆಟದಂತೆ. ಬೇಕಾದಾಗ ಕಣ್ಣು ತೆರೆದು ಬೊಟ್ಟು ಮಾಡುತ್ತಾ ‘ಓ ಆಸ್ಟ್ರೇಲಿಯಾ, ನೀನು ಕಾಣಿಸ್ಬಿಟ್ಟೆ’ ಅಂತಾರೆ. ಹಾಗೆನ್ನಲು ಡೌನ್ ಅಂಡರ್ ನಲ್ಲಿ ತೀವ್ರ ಪೊದೆಬೆಂಕಿ ಅನಾಹುತವೋ, ಬರಗಾಲವೋ, ಚಂಡಮಾರುತವೋ ಬಾಯ್ಬಿಡಬೇಕು. ಇಲ್ಲವೇ ಆಸ್ಟ್ರೇಲಿಯನ್ ಗಂಡು ಬಜಾರಿ ಕ್ರಿಕೆಟಿಗರ ಬ್ಯಾಟು ಸಿಕ್ಸರ್ ಹೊಡೆದು, ಅವರ ಕೊಂಕು, ಅಣಕುಮಾತು ದೊಡ್ಡ ಸುದ್ದಿಯಾಗಬೇಕು.

ಅದೂ ಇಲ್ಲವೆಂದರೆ ಕೋವಿಡ್-೧೯ ಸೋಂಕು ಹೇಗೆ ಒಂದೆರೆಡು ಜನರಿಂದ ೬೦-೮೦ ಮತ್ತು ೨೦೦-೩೦೦ ಜನರಿಗೆ ಹಬ್ಬಿ ಅದರಿಂದ ಇಡೀ ಒಂದು ನಗರವೋ, ರಾಜ್ಯವೋ ಲಾಕ್ ಡೌನ್ ಆಗಬೇಕು. ಹಾಗಾದಾಗ, ಅದು ಇತರ ಐದು ರಾಜ್ಯಗಳಿಗೆ ಇನ್ನಿಲ್ಲದಷ್ಟು ನಡುಕ ಹುಟ್ಟಿಸಿ ಅವರು ತಮ್ಮ ಗಡಿಗಳ ಬಾಗಿಲು ಮುಚ್ಚಿ ಧಡ್ ಧಡ್ ಎಂದು ಹೊಡೆದುಕೊಳ್ಳುವ ಹೃದಯವನ್ನು ಸ್ಥಿಮಿತದಲ್ಲಿರಿಸಿಕೊಳ್ಳುತ್ತ ಮಾಧ್ಯಮಗಳಿಗೆ ಸಮಜಾಯಿಷಿ ಹೇಳಬೇಕು. ನಾಲ್ಕೇ ವಾರಗಳಲ್ಲಿ ಒಂದೇ ಒಂದು ಕೋವಿಡ್-೧೯ ಕೇಸ್ ಹೆಚ್ಚಾಗದಂತೆ ಮಾಡುತ್ತೇವೆ, ಎಂದು ಹೇಳಿಕೆ ಕೊಟ್ಟು ಜನರನ್ನು ಸಮಾಧಾನಪಡಿಸಬೇಕು. ಈ ರೀತಿಯ ಕಣ್ಣುಮುಚ್ಚಾಲೆ ೨೦೨೧ರ ಆದಿಯಿಂದಲೂ ನಡೆಯುತ್ತಲೇ ಇದೆ. ಹೌದಾ ಎನ್ನುತ್ತಾ ಜನಜೀವನ ನಡೆಯುತ್ತಿದೆ.

ಎರಡು ವಾರಗಳ ಲಾಕ್‌ಡೌನ್ ಮುಗಿದು ಮೆಲ್ಬೋರ್ನ್ ನಗರ ತೆರೆಯುತ್ತಿದ್ದಂತೆ ಸಿಡ್ನಿ ನಗರ ಲಾಕ್‌ಡೌನ್ ಪ್ರವೇಶಿಸಿ ಅದು ನಾಲ್ಕನೇ ವಾರಕ್ಕೆ ಕಾಲಿಡಲಿದೆ. ಸಿಡ್ನಿಯನ್ನು ಅಪ್ಪಿಕೊಂಡೊ ಇಲ್ಲವೇ ಹಿಂಬಾಲಿಸಿಯೊ ಏನೊ ಮೆಲ್ಬೋರ್ನ್ ನಗರವೂ ಎರಡನೇ ವಾರದ ಲಾಕ್‌ಡೌನಿನಲ್ಲಿದೆ. ಜನರು it is as it is ಅನ್ನುತ್ತಾ ದಿನ ತಳ್ಳುತ್ತಿದ್ದಾರೆ. ಅದನ್ನು ನೋಡುತ್ತಾ ನಾವು ರಾಣಿರಾಜ್ಯದಲ್ಲಿ ಆರಾಮಾಗಿ ಅಡ್ಡಾಡಿಕೊಂಡು ಸುಖವಾಗಿದ್ದೀವಿ ಎಂದುಕೊಳ್ಳುವಷ್ಟರಲ್ಲೇ ಮೂರು ದಿನಗಳ ಹಠಾತ್ ಮಿನಿ ಲಾಕ್‌ಡೌನ್ ಘೋಷಿಸಿ, ಅದನ್ನು ನಾವೆಲ್ಲಾ ಪಾಲಿಸಿ ಸದ್ಯಕ್ಕೆ ಇನ್ನೂ ಮುಖಕ್ಕೆ ಮಾಸ್ಕ್ ಹಾಕಿಕೊಂಡೆ ಇದ್ದೀವಿ.

ಏಕಕಾಲದಲ್ಲಿ ಬ್ರಿಸ್ಬೇನ್, ಪರ್ತ್, ಡಾರ್ವಿನ್ ಮತ್ತು ಸಿಡ್ನಿ ನಗರ ವಲಯಗಳಲ್ಲಿ ಕೊರೋನಾ ವೈರಸ್ಸಿನ ಡೆಲ್ಟಾ ರೂಪ ಕಾಣಿಸಿಕೊಂಡಿದ್ದರಿಂದ ಈ ಬಾರಿ ರಾಜ್ಯ ಸರಕಾರಗಳು ಹೌಹಾರಿವೆ. ಜೀವನವು ಖಾಯಂ ಆಗಿ ಜೋಕಾಲಿಯಲ್ಲಿ ಕೂತು ತೂಗಿಕೊಳ್ಳುತ್ತಾ ಲೋಕಕಲಾಪಗಳನ್ನು ವೀಕ್ಷಿಸುತ್ತಿದೆ.

ವಾಟ್ಸಾಪಿನ ಗುಂಪಿನಲ್ಲಿ ಒಬ್ಬರು ಬೆಂಗಳೂರಿನ ಅತ್ಯಾಧುನಿಕ ತಿಂಡಿಊಟಗಳ ಕೆಫೆ, ಹೋಟೆಲ್‌ಗಳ ಫೋಟೋಗಳನ್ನು ಹಂಚಿದ್ದರು. ಅವುಗಳಲ್ಲಿದ್ದ ಖಾದ್ಯಗಳ ಚಿತ್ರಗಳನ್ನು ನೋಡಿ ನನಗೆ ‘ಮಾಯಾ ಬಜಾರ್’ ಚಿಲನಚಿತ್ರದ ‘ವಿವಾಹ ಭೋಜನಂ’ ಹಾಡಿನ ನೆನಪು ಬಂತು. ಗುಂಪಿನ ಕೆಲ ಸದಸ್ಯರಿಗೆ ತಮ್ಮ ತವರಿನ ನೆನಪು ನುಗ್ಗಿ ಬಂದು ಅಲ್ಲಿಗೆ ಹೋಗಲಾರದ ಸ್ಥಿತಿಯಲ್ಲಿದ್ದೀವಲ್ಲಾ, ತಮ್ಮವರನ್ನು ನೋಡಿ ಮನೆಯೂಟ ಮಾಡಲಾರದ ಈ ಪರಿಸ್ಥಿತಿ ಯಾಕಾದರೂ ಬಂತೊ ಅಯ್ಯೋ, ಎನ್ನುವ ದುಃಖವಾಯ್ತು. ಪರಕೀಯತೆ ಅನ್ನೋ ಭಾವನೆ ನಮ್ಮನ್ನು ಯಾವ್ಯಾವ ರೀತಿಯಲ್ಲಿಯೊ ಆವರಿಸಿಕೊಂಡು ಕಾಡಬಹುದು. ನಮ್ಮ ಮನೆಯಲ್ಲಿದ್ದುಕೊಂಡೆ ನಾವು ‘the othered’ ಆಗಬಹುದು. ನಮ್ಮದೇ ಮನಸ್ಸಿನಲ್ಲಿ ಬಂಧಿತರಾಗಬಹುದು. ಬೇರೆ ಸ್ಥಳಕ್ಕೆ ಹೋಗಿ ಅಲ್ಲಿ ಕಾಲಿಟ್ಟು ಸ್ವಲ್ಪ ಕಾಲಾನಂತರ ಒಂದಷ್ಟು ಬೇರು ಬಿಟ್ಟಾದ ಮೇಲೂ ಕೂಡ ಇನ್ನೂ ನಾವಿಲ್ಲಿ ಅನ್ಯರೇ ಅನ್ನಿಸಬಹುದು. ಇಂತಹವರನ್ನು ಎಡಬಿಡದೆ ಕಾಡುವ ಅನ್ಯತೆಯ ಭಾವದ ಬಗ್ಗೆ ಬರೆಯುವುದು ಬೇಕಾದಷ್ಟಿದೆ. ಕೋವಿಡ್-೧೯ ಉದ್ಭವದ ನಂತರವಂತೂ ಪರಕೀಯತೆಗೆ ಬೇರೆಬೇರೆ ಅನ್ವರ್ಥ ಪದಗಳು ಸಿಕ್ಕಿಬಿಟ್ಟಿವೆ.

ಒಂದು ಸಮಾಧಾನವೆಂದರೆ, ಬೇರೆ ದೇಶಗಳಲ್ಲಿ ವಾಸಿಸಲು ತೊಡಗುವ ಕನ್ನಡಿಗರಲ್ಲಿ ಅನ್ಯತೆಯ ಬೇಗುದಿಯನ್ನು ಕಡಿಮೆ ಮಾಡಲು ಸ್ಥಳೀಯ ಕನ್ನಡ ಸಂಘಗಳು ನೆರವಾಗುತ್ತವೆ. ಅದರ ಪ್ರಯೋಜನವನ್ನು ಪಡೆದುಕೊಳ್ಳುವುದು ಅವರವರಿಗೆ ಸೇರಿದ್ದು ಬಿಡಿ. ಕೋವಿಡ್-೧೯ರ ಈ ಕಾಲದಲ್ಲಂತೂ ಭಾರತದ ಹೊರಗಡೆ ದೇಶಗಳಲ್ಲಿರುವ ಕನ್ನಡಿಗರ ಜೀವನದಲ್ಲಿ ನುಸುಳುವ ಕನ್ನಡ ಸಂಘ, ಕನ್ನಡ ಕೂಟಗಳ ಪಾತ್ರವನ್ನು ನೆನೆಯುವುದು, ಅವಕ್ಕೆ ವಂದನೆ ಸಲ್ಲಿಸುವುದು ಅವಶ್ಯವೆನಿಸುತ್ತಿದೆ. ಆಸ್ಟ್ರೇಲಿಯಾದಲ್ಲಿರುವ ಕನ್ನಡಿಗರಲ್ಲಿ ಅನ್ಯತೆಯ ಭಾವವನ್ನು ಕಡಿಮೆ ಮಾಡುವತ್ತ ಕೆಲಸ ಮಾಡುವ, ನನಗೆ ಪರಿಚಯವಿರುವ ಎರಡು ಕನ್ನಡ ಸಂಘಗಳು ಈ ವರ್ಷ ಗುರುತರ ಸಾಧನೆಯನ್ನು ಮಾಡಿವೆ.

ಕ್ವೀನ್ಸ್‌ಲ್ಯಾಂಡ್ ರಾಜ್ಯದಲ್ಲಿರುವ ಕನ್ನಡ ಸಂಘ ಕ್ವೀನ್ಸ್‌ಲ್ಯಾಂಡಿಗೆ (ಕೆ.ಎಸ್.ಕ್ಯೂ) ಇಪ್ಪತೈದು ವರ್ಷ ತುಂಬಿ, ಸದಸ್ಯರೆಲ್ಲ ಸೇರಿ ಬೆಳ್ಳಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ನೂರಾರು ಜನ ಸೇರಿ ಹೀಗೆ ಸಮಾರಂಭಗಳನ್ನು ನಡೆಸುವುದೇ ಮರೆತುಹೋಗುತ್ತಿರುವ ೨೦೨೦ ಮತ್ತು ಈ ವರ್ಷದಲ್ಲಿ ರಾಜ್ಯ ಸರಕಾರದ ಅನುಮತಿ ಪಡೆದು ಕೆ.ಎಸ್.ಕ್ಯೂ ಬೆಳ್ಳಿಹಬ್ಬದ ಭರ್ಜರಿ ನೆನಪಿನಲ್ಲಿ ಮೂರು ಸಮಾರಂಭಗಳನ್ನು ಯಶಸ್ವಿಯಾಗಿ ನಡೆಸಿದೆ. ಬ್ರಿಸ್ಬೇನ್ ನಗರದ ಕನ್ನಡಿಗರು ಹರುಷದಿಂದ ಪರಸ್ಪರ ಭೇಟಿಯಾಗಿದ್ದಾರೆ. ವಾರ್ಡ್ ರೋಬಿನಿಂದಾಚೆ ಬಂದು ಹೊಸಗಾಳಿ ಹೀರಿ ಮೈಕೊಡವಿಕೊಂಡ ಹೆಂಗಸರ ರೇಷ್ಮೆಸೀರೆ, ಒಡವೆಗಳು, ಮಕ್ಕಳ ಇಂಡಿಯನ್ ಔಟ್ ಫಿಟ್ಟುಗಳು, ಗಂಡಸರ ಕುರ್ತಾ ಪೈಜಾಮಗಳು ಮಿಂಚಿವೆ. ಹಾಡು-ನೃತ್ಯಗಳು, ಮಕ್ಕಳ ಕಾರ್ಯಕ್ರಮಗಳು, ರಸಪ್ರಶ್ನೆ, ಭಾಷಣಗಳು ಎಲ್ಲರ ಮನರಂಜಿಸಿವೆ. ಬೆಳ್ಳಿಹಬ್ಬದ ವಿಶೇಷ ಸ್ಮರಣ ಸಂಚಿಕೆ ‘ಸಿಂಚನ’ ಪ್ರಕಟವಾಗಿ ಅದು ಕೆ.ಎಸ್.ಕ್ಯೂ ಹುಟ್ಟಿದ ಮತ್ತು ಬೆಳೆದ ದಾಖಲೆಯ ಮೈಲಿಗಲ್ಲಾಗಿದೆ.

ಆದರೆ ಒಂದೇ ಒಂದು ಕೊರತೆ. ಸಮಾರಂಭದಲ್ಲಿ ಹಿಂದಿನಂತೆ ಭರ್ಜರಿ ಊಟವಿಲ್ಲ. ಪ್ಯಾಕ್ಡ್ ಡಿನ್ನರ್ ಸರಬರಾಜು ಮಾತ್ರ. ನಳಪಾಕ ಭೀಮಪಾಕಗಳ ಜೊತೆ ತಮ್ಮತಮ್ಮ ಪ್ರಾಂತೀಯ ತಿನಿಸುಗಳನ್ನು ಆಶಿಸುವ ಕನ್ನಡಿಗರಿಗೆ ಪ್ರಿ-ಪ್ಯಾಕ್ಡ್ ಊಟವೇ?! ವರ್ಷಕ್ಕೆರಡು ಬಾರಿ ಲಭಿಸುವ ಈ ಸಮಾರಂಭದ ಊಟ ಕೋವಿಡ್-೧೯ ದೆಸೆಯಿಂದ ತಪ್ಪಿಹೋಯಿತಲ್ಲ. ಮನಸ್ಸು ಮತ್ತೆ ತವರಿನ ನೆನಪುಗಳಿಗೆ ಜೋತು ಬೀಳುವುದು ಆಶ್ಚರ್ಯವೇನಿಲ್ಲ.

ಒಮ್ಮೊಮ್ಮೆ ನನಗೆ ನಾನೇ ಪರಕೀಯಳಾದಾಗ ನಾನು ಏನನ್ನು ಮಿಸ್ ಮಾಡಿಕೊಳ್ಳುತ್ತಿದ್ದೀನಿ ಅನ್ನೋ ಪ್ರಶ್ನೆ ಬರುತ್ತದೆ. ಖಚಿತವಾದ ಉತ್ತರ- ಅಪ್ಪಟ ಭಾರತೀಯ ರುಚಿಕರ ಊಟತಿಂಡಿ. ಯಾವುದೇ ರೆಸ್ಟೋರೆಂಟಿಗೆ ಹೋಗಿ ಏನೇ ತಿಂದರೂ ಮನಸ್ಸಿಗೆ ತೃಪ್ತಿಯಾಗುವುದಿಲ್ಲ. ಕೊರತೆಯ ಭಾವನೆ ಇನ್ನೂ ಹೆಚ್ಚಾಗುತ್ತದೆ. ಆತ್ಮವನ್ನು ಭಾರತದ ತವರಿನಲ್ಲೇ ಬಿಟ್ಟು ದೇಹವನ್ನು ಹೊತ್ತುಕೊಂಡು ಹೋಗಿ ಪರದೇಶಗಳಲ್ಲಿ ನೆಲೆಸುವ ಮೊದಲ ಸಂತತಿ ಜನರಲ್ಲಿ ಈ ಕೊರತೆ ಹೆಚ್ಚು ಎಂದು ಕಾಣುತ್ತದೆ.

ರಾಣಿರಾಜ್ಯದಲ್ಲಿ ಆರಾಮಾಗಿ ಅಡ್ಡಾಡಿಕೊಂಡು ಸುಖವಾಗಿದ್ದೀವಿ ಎಂದುಕೊಳ್ಳುವಷ್ಟರಲ್ಲೇ ಮೂರು ದಿನಗಳ ಹಠಾತ್ ಮಿನಿ ಲಾಕ್‌ಡೌನ್ ಘೋಷಿಸಿ, ಅದನ್ನು ನಾವೆಲ್ಲಾ ಪಾಲಿಸಿ ಸದ್ಯಕ್ಕೆ ಇನ್ನೂ ಮುಖಕ್ಕೆ ಮಾಸ್ಕ್ ಹಾಕಿಕೊಂಡೆ ಇದ್ದೀವಿ.

ಹಾ ಮನಸೇ, ನೀನ್ಯಾಕೆ ಪದೇಪದೇ ಮಾಯಾ ಬಜಾರ್ ಆಗ್ತೀಯ ಎನ್ನುವ ಕನವರಿಕೆ. ಬದುಕಿನ ಜಟಕಾಬಂಡಿಯನ್ನು ಓಡಿಸುತ್ತಿರುವ ಆ ಕಾಣದ ಶಕ್ತಿ ನಮ್ಮಂತಹ ಹುಲುಮಾನವರಿಗೆ ಕಲಿಸುತ್ತಿರುವ ಪಾಠಗಳ ಲೀಲೆ ಕೈಗೆಟುಕುತ್ತದೆಯೇ?

ವಾಪಸ್ ಕನ್ನಡ ಸಂಘಗಳ ವಿಷಯಕ್ಕೆ ಬರುತ್ತೀನಿ. ಆಸ್ಟ್ರೇಲಿಯಾದ ಕನ್ನಡ ಸಂಘಗಳಲ್ಲಿ ಮೆಲ್ಬೋರ್ನ್ ಕನ್ನಡ ಸಂಘಕ್ಕೆ (MKS) ವಿಶಿಷ್ಟ ಸ್ಥಾನವಿದೆ. ಜನಪ್ರಿಯತೆಯ ವೋಟ್ ನಲ್ಲಿ ಸದಾ ಗೆದ್ದಿರುವ MKS ಗೆ ಮೂವತ್ತೈದು ವರ್ಷವಾಗಿ ಕಿರಿಯಕ್ಕನೆನಿಸಿಕೊಂಡಿದೆ. ಹಿರಿಯಕ್ಕನ ಸ್ಥಾನದಲ್ಲಿರುವುದು ಸಿಡ್ನಿ ಕನ್ನಡ ಸಂಘ. ಕಾರ್ಯಕ್ರಮಗಳ ವೈವಿಧ್ಯತೆ ಮತ್ತು ಕಳೆದ ಹತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಪುಸ್ತಕ ಕೂಟದಿಂದ ಮೆಲ್ಬೋರ್ನ್ ಕನ್ನಡ ಸಂಘವು ದೇಶದ ಇತರೆ ಕನ್ನಡ ಸಂಘಗಳಿಗಿಂತಲೂ ಭಿನ್ನವಾಗಿದ್ದು ಗಮನ ಸೆಳೆದಿದೆ.

೨೦೦೮ ನೇ ವರ್ಷದಲ್ಲಿ ನಾನು ಮೆಲ್ಬೋರ್ನ್ ನಗರ ವಾಸಿಯಾಗಿದ್ದಾಗ ಸಿಡ್ನಿ ಕನ್ನಡ ಸಂಘದ ಪಡಿಯಚ್ಚಿನಂತಿದ್ದ ಕಾರ್ಯಕ್ರಮಗಳ ಬಗ್ಗೆ ಕೇಳಿ ತಿಳಿದು ನಿರಾಸೆಗೊಂಡಿದ್ದೆ. ಆದರೆ MKS ೨೦೦೪ ರಿಂದ ಕನ್ನಡ ಗ್ರಂಥಾಲಯವನ್ನು ನಡೆಸುತ್ತಿರುವ ವಿಷಯ ಗೊತ್ತಿರಲಿಲ್ಲ. ಮೊದಲು ಮೊಬೈಲ್ ಗ್ರಂಥಾಲಯವಾಗಿದ್ದು ಕ್ರಮೇಣ ತನ್ನದೇ ಖಾಯಂ ಸ್ಥಳವನ್ನು ಪಡೆದಿದೆಯಂತೆ. ಪ್ರತಿತಿಂಗಳ ಮೊದಲ ಮತ್ತು ಮೂರನೇ ಭಾನುವಾರದಂದು ಮಧ್ಯಾಹ್ನ ಗ್ರಂಥಾಲಯಕ್ಕೆ ಹೋಗಿ ಪುಸ್ತಕಗಳನ್ನು ಎರವಲು ಪಡೆಯಬಹುದು. ಕಾಲಚಕ್ರ ತಿರುಗುತ್ತಾ ನಾನು ಈಗ ಬ್ರಿಸ್ಬೇನ್ ವಾಸಿಯಾಗಿದ್ದರೂ, MKS ಪುಸ್ತಕ ಕೂಟದ ಸದಸ್ಯಳಾಗಿ ಕನ್ನಡ ಸಾಹಿತ್ಯ ಸಂಬಂಧಿತ ಚರ್ಚೆಗಳಲ್ಲಿ ಭಾಗವಹಿಸುವುದು ಹಿತವಾಗಿದೆ. ಅವರ ಗುಂಪಿಗೆ ನನ್ನನ್ನು ಸೇರಿಸಿಕೊಂಡದ್ದಕ್ಕೆ ಕೃತಜ್ಞತೆಗಳು. ಈ ಪುಸ್ತಕ ಕೂಟದ ಬಗ್ಗೆ ಇನ್ನೊಂದಷ್ಟು ಹೇಳಬೇಕೆನಿಸಿದೆ.

ಹೊರನಾಡಿನ ಒಂದು ಪುಸ್ತಕ ಕೂಟವು ದಶಕದಲ್ಲಿ ಸಾಧಿಸಿರುವುದು ಏನೇನು? ನಾನು ಈ ಪ್ರಶ್ನೆಯನ್ನು ಮುಂದಿಟ್ಟಾಗ ಗ್ರಂಥಾಲಯ ಮತ್ತು ಪುಸ್ತಕ ಕೂಟದ ಸಂಯೋಜಕರಾದ ಸತೀಶ್ ಸವಣೂರ ಚಿಕ್ಕಚೊಕ್ಕ ಸಾರಾಂಶವನ್ನು ಕೊಟ್ಟರು. ವರ್ಷ ೨೦೧೧ ಮೇ ತಿಂಗಳ ೮ರಂದು ವಿಜಯ ಮತ್ತು ಜನಾರ್ಧನ್ ದಂಪತಿಯ ಮನೆಯಲ್ಲಿ ಪುಸ್ತಕ ಕೂಟವು ಆರಂಭವಾಯ್ತು. ಮೊದಲ ಪುಸ್ತಕ ಕೂಟದ ಚರ್ಚೆ ನಡೆದದ್ದು ಜೂನ್ ತಿಂಗಳಿನಲ್ಲಿ, ರವೀಂದ್ರ ನಾಯಕರ ಮನೆಯಲ್ಲಿ. ಚರ್ಚಿತವಾದ ಪುಸ್ತಕಗಳು: ಕಮಲಪುರದ ಹೊಟ್ಲಿನಲ್ಲಿ (ಪಂಜೆ ಮಂಗೇಶರಾಯ), ಬಣ್ಣ (ನಾ.ಡಿಸೋಜ) ಮತ್ತು ಮೂಸಾ ಮೊಯ್ಲಿಯಾರರ ಮಗಳು ಮತ್ತು ಹೆಲಿಪೆಟ್ಟರ್ (ಅಬ್ದುಲ್ ರಶೀದ್). ಒಳ್ಳೆಯ ದಿನವನ್ನೇ ನೋಡಿ ಪುಸ್ತಕ ಕೂಟವನ್ನು ಆರಂಭಿಸಿರಬೇಕು! ಅಥವಾ, ಒಳ್ಳೆ ಪುಸ್ತಕಗಳನ್ನೆ ಆರಿಸಿದ್ದರು ಅನ್ನಲೇ!! ಮೂರರಿಂದ ಆರಂಭವಾಗಿ ಇಲ್ಲಿಯತನಕ ಸದಸ್ಯರು ಎಂಭತ್ತು ಕಾದಂಬರಿಗಳನ್ನು, ಎರಡು ನೀಳ್ಗತೆಗಳನ್ನು, ಮೂವತ್ತು ಸಣ್ಣಕಥೆಗಳನ್ನು, ಹದಿನೈದು ಕವನಗಳನ್ನು, ಕೆಲ ನಾಟಕಗಳನ್ನು ಚರ್ಚಿಸಿದ್ದಾರೆ.

ಅಷ್ಟಕ್ಕೇ ಸುಮ್ಮನಾಗಿಲ್ಲ. ಕನ್ನಡ ಸಾಹಿತಿಗಳಾದ ಎಸ್.ಎಲ್.ಭೈರಪ್ಪ, ಕರಣಂ ಪವನ್‌ ಪ್ರಸಾದ್, ಭಾಗ್ಯರೇಖಾ ದೇಶಪಾಂಡೆ, ಸಹನಾ ವಿಜಯಕುಮಾರ್, ಎಸ್.ಎನ್.ಸೇತುರಾಂ, ಜಯಂತ್ ಕಾಯ್ಕಿಣಿ ಮತ್ತು ಸುಧಾ ಮೂರ್ತಿಯವರನ್ನು ವಿಶೇಷ ಅತಿಥಿಗಳನ್ನಾಗಿ ಆಹ್ವಾನಿಸಿ ಅವರೊಡನೆ ಸಂವಾದ ಕಾರ್ಯಕ್ರಮವನ್ನು ನಡೆಸಿದ್ದಾರೆ. ಹೆಚ್ಚಿನ ಪಕ್ಷ ಹಾಡು-ನೃತ್ಯಗಳಲ್ಲೇ ಅದ್ದಿಕೊಂಡು ಮುಳುಗಿಹೋಗುವ ಕನ್ನಡ ಕಾರ್ಯಕ್ರಮಗಳಿಗೆ ಅಪವಾದವೆಂಬಂತೆ MKS ಪುಸ್ತಕ ಕೂಟದ ಸಂವಾದಗಳು ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಿವೆ.

ಪುಸ್ತಕಕೂಟಕ್ಕೆ ಮತ್ತು ಗ್ರಂಥಾಲಯಕ್ಕೆ MKS ವತಿಯಿಂದ ಸಂಪೂರ್ಣ ಸಹಕಾರವಿದೆ ಎನ್ನುವುದು ಗಮನಾರ್ಹ. ಹಾಗೆಯೆ, ಹತ್ತು ವರ್ಷಗಳಿಂದಲೂ ಎರಡನ್ನೂ ಬಹುಜತನದಿಂದ ಕಾಪಾಡಿಕೊಂಡು, ಅವನ್ನು ಲಕ್ಷ್ಯವಿಟ್ಟು ನಡೆಸುತ್ತಿರುವುದರಲ್ಲಿ ಸತೀಶ ಸವಣೂರರ ಪಾತ್ರವೂ ಬಹಳ ಮುಖ್ಯವಾದದ್ದು.

೨೦೨೦ರಲ್ಲಿ ಆರಂಭವಾದ ಕೋವಿಡ್-೧೯ ದೆಸೆಯಿಂದ ಪುಸ್ತಕ ಕೂಟ ಸದಸ್ಯರು ಪರಸ್ಪರ, ಮುಖತಃ MKS ಗ್ರಂಥಾಲಯದಲ್ಲೇ ಭೇಟಿಯಾಗಿ ತಮ್ಮ ಪುಸ್ತಕ ಕೂಟದ ಚರ್ಚೆಗಳನ್ನು ನಡೆಸುವುದು ಕಡಿಮೆಯಾಗಿದೆ. ಆದರೇನು, Zoom-ಲ್ಯಾಂಡಿನಲ್ಲಿ ಭೇಟಿಯಾಗಿ ಮಾತನಾಡಬಹುದಲ್ಲ! ನಮ್ಮ ಪುಸ್ತಕ ಚರ್ಚೆಗಳು Zoom ತಂತ್ರಜ್ಞಾನದಿಂದ ಮುಂದುವರೆದಿರುವುದು ಒಂದು ರೀತಿಯಲ್ಲಿ ಪ್ರಗತಿಪರವಾಗಿದೆ. ಈ ವರ್ಷದಿಂದ ಬರಿ ಆಸ್ಟ್ರೇಲಿಯ ನಿವಾಸಿಗಳಲ್ಲದೆ, ಪುಸ್ತಕಪ್ರಿಯರು ಭಾರತದಿಂದಲೂ ಕೂಡ ಭಾಗವಹಿಸುತ್ತಿದ್ದಾರೆ. ಇದು ನಿಜಕ್ಕೂ ಹೊರನಾಡಿನ ಕನ್ನಡ ಸಂಘವೊಂದಕ್ಕೆ ಬಹು ಹೆಮ್ಮೆ ತರುವ ಸಂಗತಿ.

ಮರೆಯುವ ಮುನ್ನ ಮತ್ತೊಮ್ಮೆ ತಿಂಡಿಊಟದ ಬಗ್ಗೆ ಇನ್ನೊಂದು ಮಾತು ಹೇಳಿಬಿಡುತ್ತೀನಿ. MKS ಪುಸ್ತಕ ಕೂಟದ ಸದಸ್ಯರು ಮುಖತಃ ಭೇಟಿಯಾದಾಗ ಪುಸ್ತಕ ಸಂವಾದ ಕಾರ್ಯಕ್ರಮದ ಬಳಿಕ ಪ್ರತಿಯೊಬ್ಬರೂ ಮನೆಯಲ್ಲಿ ಮಾಡಿ ತಂದಿರುವ ಅಡುಗೆಯನ್ನು ಬಡಿಸಿಕೊಂಡು ಹರಟೆ ಹೊಡೆಯುತ್ತಾ ಸವಿಯುತ್ತಾರಂತೆ. ಇದಕ್ಕೇ ಅಲ್ಲವೇ, ಮೆಲ್ಬೋರ್ನ್ ಆಸ್ಟ್ರೇಲಿಯಾದ ಸಾಂಸ್ಕೃತಿಕ ನಗರವೆಂದು ಹೆಸರಾಗಿರುವುದು!

ಭೋಜನದಿಂದ MKS ಪುಸ್ತಕಕೂಟ ಜನಪ್ರಿಯವಾಯ್ತೆ ಎನ್ನುವುದು ನನ್ನ ಸಣ್ಣಗುಮಾನಿ. ಅದೇನೆ ಇರಲಿ, ಪುಸ್ತಕಕೂಟಕ್ಕೆ ಹತ್ತನೇ ವರ್ಷದ ಹುಟ್ಟುಹಬ್ಬದ ಅಭಿಮಾನಪೂರ್ವಕ ಶುಭಾಶಯಗಳು!