”ಅವಳಿಗೆ ದೈಹಿಕ ಸ್ಪರ್ಶ ಮನಸ್ಸನ್ನು ಮುಟ್ಟುವುದಿಲ್ಲ ಎಂದು ಸಾಬೀತು ಪಡಿಸಲೇಬೇಕು, ಆದರೆ ಅವನ ಎಲ್ಲಾ ಸ್ಪರ್ಶ ಸಂವೇದನೆಗಳೂ ಮನಸ್ಸಿನ ಮೂಲಕವೇ ಹಾದು ಹೋಗಬೇಕು. ಹಾಗಾಗಿಯೇ ಅವನು ಯಾವುದೇ ಕ್ಯಾಶುವಲ್ ಸಂಬಂಧಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲಾರ. ಅವಳನ್ನು ಬಿಡಲಾರ, ಒಪ್ಪಿಕೊಳ್ಳಲಾರ, ಅವಳು ತನ್ನನ್ನು ಬಿಟ್ಟು ಇನ್ನೊಬ್ಬನೊಡನೆ ಇದ್ದಳು ಎನ್ನುವುದನ್ನು ಅರಗಿಸಿಕೊಳ್ಳಲಾರ. ಈ ಎಲ್ಲಾ ಘಟನೆಗಳಲ್ಲಿ ಅವನು ನವೆಯುತ್ತಿದ್ದರೆ, ಅವನನ್ನು ನೋಡಿ ನೋಡಿ ಅವಳು ನವೆಯುತ್ತಿದ್ದಾಳೆ”
ಲೇಖಕಿ ಸಂಧ್ಯಾರಾಣಿ ಬರೆಯುವ ಲೋಕ ಸಿನೆಮಾ ಟಾಕೀಸಿನಲ್ಲಿ ಆಸ್ಟ್ರೇಲಿಯಾದ ಸಿನೆಮಾ ಝೆಲೋಸ್.

 

ಝೆಲೋಸ್ ಒಂದು ಆಸ್ಟ್ರೇಲಿಯನ್ ಚಿತ್ರ. ಝೆಲೋಸ್ ಎನ್ನುವ ಗ್ರೀಕ್ ಪದಕ್ಕೆ ನಾನಾ ಅರ್ಥಗಳು, ಉತ್ಸಾಹ, ಭಾವತೀವ್ರತೆ, ಅಸೂಯೆ, ಅನುಮಾನ. ಚಿತ್ರದ ಒಂದೊಂದು ಹಂತದಲ್ಲಿ ಒಂದೊಂದು ಅರ್ಥ ಹೊಂದಿಕೊಳ್ಳುತ್ತಾ ಹೋಯಿತು. ಇದು ಇನ್ ಫೆಡಿಲಿಟಿ (infidelity) ಯ ಸುತ್ತಲೂ ಹೆಣೆದ ಕಥೆ. ಚಿತ್ರ ನೋಡಿದ ಮೇಲೆ ಇನ್ ಫೆಡಿಲಿಟಿ ಎನ್ನುವ ಪದಕ್ಕೆ ಕನ್ನಡ ಅರ್ಥ ಹುಡುಕಬೇಕೆನ್ನಿಸಿತು, ನೋಡಿದೆ, ‘ದಾಂಪತ್ಯ ದ್ರೋಹ’ ಎನ್ನುವ ಅರ್ಥ ಸಿಕ್ಕಿತು. ಹಾಗಾದರೆ ಅದು ‘ದಾಂಪತ್ಯ’ವಾಗಿದ್ದಾಗ ಮಾತ್ರ ದ್ರೋಹವೇ? ಇಷ್ಟಕ್ಕೂ ‘ದ್ರೋಹ’ ಎಂದರೆ ಏನು? ಮದುವೆ ಎನ್ನುವ ಸಂಸ್ಥೆಯೂ ಸೇರಿ ಎಲ್ಲಾ ಸಂಸ್ಥೆಗಳೂ, ಸಂಬಂಧಗಳೂ ತಮ್ಮ ತಮ್ಮ ಅರ್ಥ, ವ್ಯಾಪ್ತಿ ಎಲ್ಲವನ್ನೂ ಬದಲಾಯಿಸಿಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಇದನ್ನು ಹೀಗೆ ಎಂದು ಬೆರಳಿಟ್ಟು ಹೇಗೆ ಹೇಳಲಿ? ಆ ಚಿತ್ರ ಸಹ ಇದರ ಬಗ್ಗೆ ಮಾತನಾಡುವುದಿಲ್ಲ. ಚಿತ್ರದ ಹುಡುಕಾಟ ಇರುವುದು ಈ ‘ಇನ್ ಫೆಡಿಲಿಟಿ’ ನಡೆದ ಮೇಲೆ ವ್ಯಕ್ತಿ ಅದನ್ನು ಎದುರಿಸುವ ರೀತಿಯಲ್ಲಿ. ಅದನ್ನು ಒಬ್ಬೊಬ್ಬರು ಒಂದೊಂದು ರೀತಿ ಎದುರಿಸುತ್ತಾರೆ. ಕೆಲವರು ಬೆಂಕಿಯಾಗುತ್ತಾರೆ, ಕೆಲವರು ಮಂಜುಗಡ್ಡೆ.. ಸಾಧಾರಣವಾಗಿ ‘ಇನ್ ಫೆಡಿಲಿಟಿ’ ಎಂದ ತಕ್ಷಣ ಅದನ್ನು ಗಂಡಿಗೆ ಆರೋಪಿಸಿ, ಅದರಿಂದ ನೋವಿಗೊಳಪಡುವವಳು ಹೆಣ್ಣು ಎಂದು ನಿರ್ಧರಿಸಿಬಿಡುತ್ತೇವೆ. ಅದು ಹಾಗೇ ಆಗಬೇಕು ಎಂದಿಲ್ಲ. ಈ ಚಿತ್ರದಲ್ಲಿ ಆ ‘ಇನ್ ಫೆಡಿಲಿಟಿ’ ಘಟಿಸುವುದು ಹೆಣ್ಣಿನಿಂದ, ಅದರ ನೋವು ಅನುಭವಿಸುವವನು ಗಂಡು. ಈ ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನ ಮತ್ತು ಛಾಯಾಗ್ರಹಣ ಅಷ್ಟೇ ಏಕೆ ಚಿತ್ರದ ತಂಡದಲ್ಲಿ ಮುಕ್ಕಾಲುವಾಸಿ ಇರುವವರು ಹೆಣ್ಣುಮಕ್ಕಳು. ಹೆಣ್ಣುಮಕ್ಕಳು ಈ ವಿಷಯವನ್ನು ಇಟ್ಟುಕೊಂಡು ಅತ್ಯಂತ ಆರ್ದ್ರವಾಗಿ ಮತ್ತು ಅಷ್ಟೇ ಕಲಾತ್ಮಕವಾಗಿ ಚಿತ್ರದ ಕಥೆ ಕಟ್ಟಿರುವುದು ಚಿತ್ರದ ವಿಶೇಷ.

ಸಾರ ಮತ್ತು ಬರ್ನಾರ್ಡ್ ನಡುವಿನ ಅತ್ಯಂತ ಹತ್ತಿರದ ಕ್ಷಣಗಳ ‌ಮಾಂಟೇಜ್ ನೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ಅವರಿಬ್ಬರ ನಡುವಿನ ಮಾನಸಿಕ ಮತ್ತು ದೈಹಿಕ ಸಾಮಿಪ್ಯ ಮನಸ್ಸನ್ನು ತಾಕುತ್ತದೆ. ಆ ಎಲ್ಲಾ ದೃಶ್ಯಗಳಲ್ಲೂ ಅವರಿಬ್ಬರೂ ಕಾಲಿಗೆ ಸಾಕ್ಸ್ ಹಾಕಿಕೊಂಡಿರುತ್ತಾರೆ. ಹಾಸಿಗೆಯ ಮೇಲೆ ಅವರು ಸಾಕ್ಸ್ ಹಾಕಿಕೊಂಡಿರುವ ಒಂದೇ ಕಾರಣದಿಂದ ಅವರಿಬ್ಬರ ಸಾಮಿಪ್ಯ ಶೃಂಗಾರಕ್ಕಿಂತ ಮಿಗಿಲಾಗಿ ಆಪ್ತತೆಯನ್ನು ಕಟ್ಟಿಕೊಡುತ್ತದೆ. ಇಡೀ ಚಿತ್ರದಲ್ಲಿ ಹೀಗೆ ಪರಿಸರವನ್ನು, ಪರಿಕರಗಳನ್ನು ಪಾತ್ರಗಳನ್ನಾಗಿ ಬಳಸಿಕೊಂಡಿರುವುದರಲ್ಲಿ ಕ್ಯಾಮೆರಾದ ಪಾತ್ರವೂ ಇದೆ, ಕಲಾ ನಿರ್ದೇಶನದ ಪಾತ್ರವೂ ಇದೆ.

ಚಿತ್ರ ಪ್ರಾರಂಭವಾಗುವಾಗ ನಮಗೆ ಅವರಿಬ್ಬರ ಬಗ್ಗೆಯೂ ಗೊತ್ತಿರುವುದಿಲ್ಲ. ಅವರು ಕೇವಲ ಪಾತ್ರಗಳು, ಯಾವ ಹಿನ್ನಲೆಯನ್ನೂ ಕೊಡದೆ ನಿರ್ದೇಶಕಿ ಕಥೆ ಹೇಳುವುದರಿಂದ ನಾವು ಮಾನಸಿಕವಾಗಿ ಯಾರ ಪಕ್ಷವನ್ನೂ ವಹಿಸದೆ ಚಿತ್ರ ನೋಡುವುದು ಸಾಧ್ಯವಾಗುತ್ತದೆ. ಸಾರಾ ಭಾರತದ ಪ್ರವಾಸದಿಂದ ಹಿಂದಿರುಗುತ್ತಿದ್ದಾಳೆ. ಬರ್ನಾರ್ಡ್ ಅವಳ ಪ್ರೇಮಿ. ಅವಳು ಪ್ರವಾಸ ಹೋಗುವ ಮೊದಲು, ಇಬ್ಬರೂ ಜೊತೆಗಿದ್ದರೂ ಭವಿಷ್ಯದ ಬಗ್ಗೆ ಯಾವುದೇ ಮಾತುಕತೆ ಆಡಿರುವುದಿಲ್ಲ. ಅವಳು ಪ್ರವಾಸ ಹೋಗಿದ್ದಾಳೆ, ಅವಳ ಅನುಪಸ್ಥಿತಿಯಲ್ಲಿ ಅವನಿಗೆ ಅವಳು ತನಗೆ ಎಷ್ಟು ಮುಖ್ಯ ಎನ್ನುವುದು ಅರಿವಾಗಿದೆ. ಅವಳ ಬರುವಿಗೆ ಕಾಯುತ್ತಿದ್ದಾನೆ. ಅವಳಿಗೆ ಮನೆಯ ಕೀಲಿಕೈ ಕೊಟ್ಟು, ಜೊತೆಗೆ ಬದುಕಲು ಆಹ್ವಾನಿಸಬೇಕು ಎಂದು ಸಿದ್ಧತೆ ಮಾಡಿಕೊಂಡಿರುತ್ತಾನೆ. ಮನೆಯ ಫ್ರಿಡ್ಜ್ ಒಳಗಡೆ ಒಂದು ಶಾಂಪೇನ್ ಬಾಟಲಿಗೆ ಮನೆಯ ಕೀಲಿ ಕೈ ಕಟ್ಟಿರುತ್ತಾನೆ. ಬಾಟಲ್ ಕಾಯುತ್ತಿರುತ್ತದೆ, ತಂಪಾಗಿ.

ಪ್ರವಾಸದಿಂದ ಬಂದ ಸಾರಾ ಅವನಿಗೆ ಉಡುಗೊರೆಯಾಗಿ ಒಂದು ಕ್ಯಾಕ್ಟಸ್ ಗಿಡವನ್ನು ತಂದಿರುತ್ತಾಳೆ. ಅದು ಸಹಜವಾದ ಗಿಫ್ಟ್ ಅಲ್ಲ ಅನ್ನಿಸುವಷ್ಟರಲ್ಲೇ ಕ್ಯಾಕ್ಟಸ್ ಗಿಡಕ್ಕಿಂತಾ ಮುಳ್ಳು ತುಂಬಿರುವ ಮತ್ತೊಂದು ಘಟನೆ ಅವರಿಬ್ಬರ ನಡುವೆ ನಿಲ್ಲಲಿದೆ ಎನ್ನುವುದು ಅರ್ಥವಾಗುತ್ತದೆ. ಬರ್ನಾರ್ಡ್ ಶಾಂಪೇನ್ ಬಾಟಲಿ ಅವಳ ಕೈಗಿಡುವ ಕ್ಷಣದಲ್ಲಿ ಭಾವಾವೇಶಕ್ಕೆ ಒಳಗಾಗುವ ಸಾರಾ ಭಾರತದಲ್ಲಿ ಒಬ್ಬರ ಜೊತೆ ತನಗೆ ಒಂದು ಅಫೇರ್ ಆಯಿತು, ಇದನ್ನು ನಿನ್ನಿಂದ ಮುಚ್ಚಿಡಬಾರದು ಎಂದು ಹೇಳುತ್ತಿದ್ದೇನೆ ಎಂದುಬಿಡುತ್ತಾಳೆ. ಈ ತಪ್ಪೊಪ್ಪಿಗೆ ಒಂದು ರೀತಿಯ ನಿಧಾನ ವಿಷ ಸವರಿದ ಕತ್ತಿ. ಹೇಳುವವರು ಭಾರ ಕಳಚಿಕೊಳ್ಳುತ್ತಾರೆ, ಕೇಳಿಸಿಕೊಂಡವರ ಹೆಗಲಿಗೆ ಆ ಭಾರ ಏರುತ್ತದೆ. ಇದು ಹೇಳುವವರ ಪ್ರಾಮಾಣಿಕತೆಯೋ, ಕ್ರೌರ್ಯವೋ ಎಂದು ಒಮ್ಮೊಮ್ಮೆ ಗಲಿಬಿಲಿ ಆಗುತ್ತದೆ. ಹೇಳಿ ಹಗುರಾಗುತ್ತೇನೆ ಎಂದು ಅವಳು ಅಂದುಕೊಳ್ಳುತ್ತಾಳೆ, ಆದರೆ ಅದೊಂದು ಮಾತಿನಿಂದ ಅವನ ಮನಸ್ಸಿನ ನಗುವನ್ನು ಕಿತ್ತುಕೊಂಡೆ ಎನ್ನುವುದು ಅವಳಿಗೆ ನಿಧಾನವಾಗಿ ಅರಿವಾಗುತ್ತದೆ.

ಸತ್ಯ ತಿಳಿದ ಬರ್ನಾರ್ಡ್ ಆಘಾತಕೊಳಗಾಗುತ್ತಾನೆ. ಅವನ ಆ ತಳಮಳವನ್ನು ಒಂದು ದೃಶ್ಯ ಅತ್ಯಂತ ತೀವ್ರವಾಗಿ ಕಟ್ಟಿಕೊಡುತ್ತದೆ. ಅವನು ಊಟದ ಪ್ಲೇಟ್ ಗಳನ್ನು ತೆಗೆಯುತ್ತಿರುತ್ತಾನೆ, ಸಾರಾ ಏನೋ ಹೇಳಲೆಂದು ಅವನ ಕೈ ಎಳೆದಾಗ ಒಂದು ಪ್ಲೇಟ್ ಬಿದ್ದು ಒಡೆಯುತ್ತದೆ, ‘ನಾನು ತೆಗೀತೀನಿ’ ಎಂದು ಅವಳು ಕೆಳಗೆ ಕೂರುತ್ತಾಳೆ, ಅವನು ಮಿಕ್ಕ ಪ್ಲೇಟ್ ಗಳೆಲ್ಲವನ್ನೂ ಕೆಳಕ್ಕೆ ಬೀಳಿಸಿ, ಧಡಾರ್ ಎಂದು ಬಾಗಿಲನ್ನು ಮುಚ್ಚಿಕೊಂಡು ಹೊರಟುಬಿಡುತ್ತಾನೆ. ಬೆಚ್ಚಿದ ಅವಳ ಸುತ್ತಲೂ ಮುರಿದು ಬಿದ್ದ ಪ್ಲೇಟ್ ಗಳು. ಕೈ ಎಳೆದು ಒಂದು ಪ್ಲೇಟ್ ಬೀಳಿಸಿದ್ದರಿಂದ ಅವಳು ಅಪರಾಧಿಯಾಗುತ್ತಾಳೋ ಅಥವಾ ಮಿಕ್ಕ ಪ್ಲೇಟ್ ಗಳನ್ನು ಸಿಟ್ಟಿನಿಂದ ಬೀಳಿಸಿ ಒಡೆದುಹಾಕಿದ್ದಕ್ಕೆ ಅವನು ಅಪರಾಧಿ ಆಗುತ್ತಾನೋ? ತಪ್ಪು-ಸರಿ ನಿರ್ಧಾರ ಎಂದಿಗೂ ಸರಳವಲ್ಲ, ಅದಕ್ಕೆಷ್ಟು ಪದರಗಳು. ಹೇಗೋ ಘಟಿಸಿದ ಆ ಒಂದು ಘಟನೆಯನ್ನು ಮರೆತೋ ಕ್ಷಮಿಸಿಯೋ ಮುನ್ನಡೆಯಬೇಕೆ? ಅದು ಸಾಧ್ಯವೇ? ಅಥವಾ ಹಾಗೆ ಮಾಡದೆ ಅದ್ಭುತ ಸಂಬಂಧವನ್ನು ಒಂದು ಘಟನೆಯ ಕಾರಣಕ್ಕೆ ಕೊಲ್ಲುವುದು ಸರಿಯೇ? ಒಂದು ಪ್ರವಾಸದ ಆ ಅಫೇರ್ ಅವಳ ತಪ್ಪೆ, ಅಥವಾ ಅದನ್ನು ಮರೆಯಲಾರದೆ ಇಬ್ಬರ ಬದುಕನ್ನು ಅಸಹನೀಯಗೊಳಿಸಿದ್ದು ಅವನ ತಪ್ಪೋ? ತೀರ್ಪು ಸರಳವಲ್ಲ, ಸುಲಭವೂ ಅಲ್ಲ. ಅವರಿಬ್ಬರೂ ಒಬ್ಬರನ್ನೊಬ್ಬರು ಅತ್ಯಂತ ಆಳವಾಗಿ ಪ್ರೀತಿಸುವವರು, ಹೌದು ‘ಪ್ರೀತಿಸುವವರು’, ‘ಪ್ರೀತಿಸುತ್ತಿದ್ದವರು’ ಅಲ್ಲ. ಇಷ್ಟು ಪ್ರೀತಿ ಕೊಟ್ಟವನು ನೋವು ತಿನ್ನುತ್ತಿದ್ದಾನೆ ಎನ್ನುವ ಸಂಕಟ ಅವಳಿಗೆ, ಇಷ್ಟು ಪ್ರೀತಿಸುವವಳು ನೋವು ಕೊಟ್ಟಳು ಎನ್ನುವ ಸಂಕಟ ಅವನಿಗೆ. ಅವರಿಬ್ಬರಲ್ಲಿ ಯಾರನ್ನೂ ಅಪರಾಧಿಯಾಗಿಸದೆ, ಕಥೆಯನ್ನು ಹೇಳುವುದು ನಿರ್ದೇಶಕಿಗೆ ಸವಾಲು. ಅದನ್ನು ಆಕೆ ಅತ್ಯಂತ ಸಮರ್ಥವಾಗಿ ಎದುರಿಸಿದ್ದಾರೆ.

ಪ್ರವಾಸದಿಂದ ಬಂದ ಸಾರಾ ಅವನಿಗೆ ಉಡುಗೊರೆಯಾಗಿ ಒಂದು ಕ್ಯಾಕ್ಟಸ್ ಗಿಡವನ್ನು ತಂದಿರುತ್ತಾಳೆ. ಅದು ಸಹಜವಾದ ಗಿಫ್ಟ್ ಅಲ್ಲ ಅನ್ನಿಸುವಷ್ಟರಲ್ಲೇ ಕ್ಯಾಕ್ಟಸ್ ಗಿಡಕ್ಕಿಂತಾ ಮುಳ್ಳುತುಂಬಿರುವ ಮತ್ತೊಂದು ಘಟನೆ ಅವರಿಬ್ಬರ ನಡುವೆ ನಿಲ್ಲಲಿದೆ ಎನ್ನುವುದು ಅರ್ಥವಾಗುತ್ತದೆ.

ಅವನ ಆರೋಪಕ್ಕೆ ಪ್ರತಿಯಾಗಿ ಅವಳು ತಮ್ಮ ಸಂಬಂಧದ ಭವಿಷ್ಯದ ಬಗ್ಗೆ ನಾವು ಏನೂ ಮಾತನಾಡಿಕೊಂಡೇ ಇರಲಿಲ್ಲವಲ್ಲ ಎಂದು ಕೇಳುತ್ತಾಳೆ, ಆದರೆ ಕೇಳುವ ಘಳಿಗೆಯಲ್ಲೇ ಅವಳಿಗೆ ಹಾಗೆ ಮಾತನಾಡಿಕೊಳ್ಳುವ ಅಗತ್ಯವೇ ಇರಲಿಲ್ಲ ಎನ್ನುವುದು ಅರಿವಾಗುತ್ತದೆ. ‘ನಮ್ಮಿಬ್ಬರ ನಡುವೆ ಇರುವುದು ದೊಡ್ಡದು, ಭಾರತದಲ್ಲಿ ನಡೆದದ್ದು ಒಂದು ಘಟನೆ ಮಾತ್ರ’ ಎಂದು ಸಮಜಾಯಿಶಿ ಹೇಳಲು ಪ್ರಯತ್ನಿಸುತ್ತಾಳೆ. ಆದರೆ ಅವನ ಸಿಟ್ಟು ಕಡಿಮೆ ಆಗದೆ ಹೋದಾಗ, ‘ಹೋಗಲಿ, ನೀನು ಸಹ ಒಂದು ಅಫೇರ್ ನಡಿಸು, ಆಗ ನಿನಗೇ ಅದು ಪ್ರೇಮವಲ್ಲ ಎನ್ನುವುದು ಅರ್ಥವಾಗುತ್ತದೆ’ ಎನ್ನುವ ಪರಿಹಾರವನ್ನು ಕೊಡುತ್ತಾಳೆ! ಒಂದು ನೋವಿಗೆ ಮತ್ತೊಂದು ನೋವು ಪರಿಹಾರವೆ? ಆದರೆ ಅವನು ಅದಕ್ಕೂ ಮುಂದಾಗುತ್ತಾನೆ. ಸಿಟ್ಟಿಗಲ್ಲ, ಸೇಡಿಗಲ್ಲ, ಅದರಿಂದಲಾದರೂ ಈ ನೋವನ್ನು ದಾಟಬಹುದೇನೋ ಎನ್ನುವ ನಿರೀಕ್ಷೆಯಿಂದ. ಒಳಗಿಂದೊಳಗೆ ಅದು ಅವನನ್ನು ಸುಡುತ್ತಿರುತ್ತದೆ. ಅದನ್ನು ಮರೆಯಲಾರ, ಅವಳೊಡನೆ ಮೊದಲಿನಂತೆ ಬೆರೆಯಲಾರ. ಅದನ್ನು ಎದುರಿಸಲು ಎಲ್ಲಾ ಉಪಾಯಗಳನ್ನೂ ಮಾಡುತ್ತಾನೆ. ಹಲವು ಹುಡುಗಿಯರನ್ನು ಭೇಟಿ ಮಾಡುತ್ತಾನೆ, ಆದರೆ ಯಾರೊಂದಿಗೆಯೂ ಹತ್ತಿರವಾಗುವುದು ಸಾಧ್ಯವಾಗುವುದಿಲ್ಲ. ನೋವನ್ನೆಲ್ಲಾ ಕಥೆಯಾಗಿಸಲು ಪ್ರಯತ್ನಿಸುತ್ತಾನೆ, ಅದೂ ಆಗುವುದಿಲ್ಲ.

ಅವನೊಂದು ಸರ್ವೆಗೆ ಪ್ರಶ್ನೆ ಉತ್ತರಗಳನ್ನು ತಯಾರಿಸುವ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಪ್ರತಿ ಪ್ರಶ್ನೆಗೂ ಹಲವು ಉತ್ತರಗಳು. ಆಯ್ಕೆಯನ್ನೇ ವ್ಯಾಪಾರವಾಗಿಸಿಕೊಳ್ಳುವ ಕೆಲಸ ಮಾಡುವವನಿಗೆ ಆಯ್ಕೆ ಎಷ್ಟು ಕಷ್ಟ ಎನ್ನುವುದನ್ನು ಬದುಕು ಕಲಿಸುತ್ತದೆ. ಚಿತ್ರದ ಮಾಂಟೇಜ್ ಅವರಿಬ್ಬರ ದೈಹಿಕ ಸಾಮಿಪ್ಯದ ಬಗ್ಗೆ ಹೇಳಿದರೆ, ಇಡೀ ಚಿತ್ರ ಅವರಿಬ್ಬರ ಮಾನಸಿಕ ಸಾಮಿಪ್ಯದ ಬಗ್ಗೆ ಹೇಳುತ್ತದೆ. ಅವರಿಬ್ಬರ ಪ್ರೀತಿಯ ಆಳ ಅರ್ಥವಾಗುವುದು ಈ ಕ್ಷಣಗಳಲ್ಲಿಯೇ. ಅಷ್ಟು ಒದ್ದಾಡುತ್ತಿದ್ದರೂ ಅವನು ಅವಳಿಗೆ ಮನೆಬಿಟ್ಟು ಹೋಗಲು ಹೇಳುವುದಿಲ್ಲ. ಅವನು ದೈಹಿಕವಾಗಿ ಅಷ್ಟು ದೂರವಾಗಿದ್ದರೂ, ಮಾತಿನಲ್ಲಿ ಅವಳನ್ನು ಚುಚ್ಚುತ್ತಿದ್ದರೂ ಅವಳು ಅವನನ್ನು ಬಿಟ್ಟು ಹೋಗುವುದಿಲ್ಲ. ಅವರಿಬ್ಬರ ಪ್ರೀತಿ ಗೆಲ್ಲುವುದು ಅಲ್ಲಿ. ಒಬ್ಬರಿಗೆ ಘಾಸಿ ಮಾಡಿದಾಗ, ತಪ್ಪೊಪ್ಪಿಕೊಂಡರೆ ತಪ್ಪು ಸರಿಯಾಗುವುದಿಲ್ಲ, ಅದಕ್ಕೆ ಅವರು ಕೊಡುವ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಆದರೆ ಆ ಶಿಕ್ಷೆಯನ್ನು ನಾವು ಆಯ್ಕೆ ಮಾಡುವ ಹಾಗಿಲ್ಲ. ನೋವಾಗಿರುವುದು ಅವನಿಗೆ, ಅವನು ಕೊಟ್ಟ ನೋವನ್ನು ಅನುಭವಿಸಿಯೇ ಅವನ ನೋವನ್ನು ಕಳೆಯುತ್ತೇನೆ ಎನ್ನುವಂತೆ ಅವಳು ಅವನ ಸಿಟ್ಟು, ಸಂಕಟ, ಅನುಮಾನ, ಉಪೇಕ್ಷೆ, ದೂರ ಎಲ್ಲವನ್ನೂ ಸಹಿಸುತ್ತಾ, ಅವನ ಮನೆಯಲ್ಲೇ ಉಳಿದುಬಿಡುತ್ತಾಳೆ. ಅವನು ಅವಳನ್ನು ದೂರ ‘ತಳ್ಳ’ಲಾರ, ಆದರೆ ಅವಳೊಡನೆ ಮೊದಲಿನಂತೆ ಒಂದಾಗಲಾರ. ಅವಳ ದೃಷ್ಟಿಯಿಂದ ಅದು ಕೇವಲ ಒಂದು ಘಟನೆ, ಬದುಕಲ್ಲ. ಆದರೆ ಇವನಿಗೆ ಅವಳು ತನ್ನವಳು ಎನ್ನುವ ಪೊಸೆಸಿವ್ ನೆಸ್. ಪ್ರೀತಿಸುವಾಗ ಅದು ಹೇಗೆ ಬಿಟ್ಟು ಇನ್ನೊಬ್ಬರೊಡನೆ ಹೋಗಲು ಸಾಧ್ಯ ಎಂದು ಅವನಿಗೆ ಅರ್ಥವೇ ಆಗುವುದಿಲ್ಲ. ಒಲಿದು ಒಂದಾಗಿರುವವರ ನಡುವೆ ಸಹ ಹೀಗೆ ಹಾಡೊಂದು ಯಾವುದೋ ಮಾಯದಲ್ಲಿ ಎದೆ ಕದ ತಟ್ಟ ಬಹುದು, ಹಾಗಾದಾಗ ಅವರಿಬ್ಬರ ದೇಹಗಳು ಬೆರೆತವೇ, ಇಲ್ಲವೇ ಎನ್ನುವುದರ ಮೇಲೆ ಫಿಡಿಲಿಟಿ ನಿಂತಿರುವುದಿಲ್ಲ ಎನ್ನುವುದನ್ನು ಚಿತ್ರ ಹೇಳುತ್ತದೆ. ಇಷ್ಟಕ್ಕೂ ‘ಫಿಡಿಲಿಟಿ’ ಎನ್ನುವುದು ಕೇವಲ ದೇಹಕ್ಕೆ ಮಾತ್ರ ಸಂಬಂಧಿಸಿರುತ್ತದೆ, ಮಾನಸಿಕವಾಗಿ ಮತ್ತೊಬ್ಬರು ಹತ್ತಿರವಾದರೆ ಅದು ‘ಇನ್ ಫಿಡಿಲಿಟಿ’ ಆಗುವುದಿಲ್ಲವೆ? ಏಕೆಂದರೆ ಅವಳದು ದೈಹಿಕ ‘ಇನ್ ಫಿಡಿಲಿಟಿ’ ಆದರೆ, ಅವನು ಆ ‘ನೋವು’ ಮರೆಯಲೆಂದು ಹಲವರ ಜೊತೆ ಸಮಯ ಕಳೆಯುತ್ತಾ ಹೋಗುತ್ತಾನೆ. ಹಾಗಾದರೆ ಅದು ಏನು?

ಅವಳು ತನ್ನನ್ನು ದಾಟಿ ಇನ್ನೊಬ್ಬನ ಜೊತೆಗೆ ಒಂದಾಗಿದ್ದಳು ಎನ್ನುವುದು ಅವನ ಮನಸ್ಸಿನ ಮೇಲೆ ಹೇಗೆ ಭಾರವಾಗಿ ಕೂತಿದೆ ಎನ್ನುವುದನ್ನು ಇಡೀ ಚಿತ್ರ ಕಟ್ಟಿಕೊಡುತ್ತದೆ. ಇಡೀ ಚಿತ್ರ ಇರುವುದು ‘ಇನ್ ಫಿಡಿಲಿಟಿ’ ಯ ಮೇಲಲ್ಲ, ಅದರ ಪರಿಣಾಮಗಳ ಮೇಲೆ, ಅದನ್ನು ಹೇಗೆ ಪ್ರತಿಯೊಬ್ಬರೂ ಅವರವರ ರೀತಿಯಲ್ಲಿ ಎದುರಿಸುತ್ತಾರೆ ಎನ್ನುವುದರ ಮೇಲೆ. ಅವನೊಮ್ಮೆ ಕೇಳುತ್ತಾನೆ, ‘ವಾಸ್ ಹಿ ಗುಡ್’ (‘Was he good?’), ಅತ್ಯಂತ ಪ್ರಾಮಾಣಿಕವಾಗಿ ಅವಳು ಹೇಳುತ್ತಾಳೆ, ‘ನೋ ಯೂ ಆರ್’ (‘ No you are…’) ದೆನ್ ವೈ ಡಿಡ್ ಯೂ ಡೂ ಇಟ್? (’then why did u do it?’) ಅವನು ಅತ್ಯಂತ ನೋವಿನಲ್ಲಿ ಕೇಳುತ್ತಾನೆ. ‘ಇನ್ ಫಿಡಿಲಿಟಿ’ ತರುವುದು ಕೇವಲ ಅನುಮಾನವನ್ನಲ್ಲ, ಅವಮಾನವನ್ನು ಸಹ. ಏಕೆಂದರೆ ಬಿಟ್ಟು ನಡೆದರು ಎನ್ನುವುದು ಪ್ರೀತಿಗಿಂತ ಮೊದಲು ಆತ್ಮವಿಶ್ವಾಸವನ್ನು ಕೊಲ್ಲುತ್ತದೆ, ಆತ್ಮಗೌರವವನ್ನು ಪುಡಿ ಮಾಡುತ್ತದೆ. ‘ನಾನೆಲ್ಲಿ ತಪ್ಪಿದೆ’ ಎನ್ನುವ ಹುಳು ಒಳಗಿನಿಂದಲೇ ಕೊರೆದುಹಾಕುತ್ತದೆ.

ಅವನು ದೈಹಿಕವಾಗಿ ಅಷ್ಟು ದೂರವಾಗಿದ್ದರೂ, ಮಾನಸಿಕವಾಗಿ ಚೂರಾಗುತ್ತಿದ್ದರೂ ಅವಳು ಅವನನ್ನು ಬಿಟ್ಟು ಹೋಗುವುದಿಲ್ಲ. ಅವರಿಬ್ಬರ ಪ್ರೀತಿ ಗೆಲ್ಲುವುದು ಅಲ್ಲಿ. ಒಬ್ಬರಿಗೆ ಘಾಸಿ ಮಾಡಿದಾಗ, ತಪ್ಪೊಪ್ಪಿಕೊಂಡರೆ ತಪ್ಪು ಸರಿಯಾಗುವುದಿಲ್ಲ, ಅದಕ್ಕೆ ಅವರು ಕೊಡುವ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

ಅವಳಿಗೆ ದೈಹಿಕ ಸ್ಪರ್ಶ ಮನಸ್ಸನ್ನು ಮುಟ್ಟುವುದಿಲ್ಲ ಎಂದು ಸಾಬೀತು ಪಡಿಸಲೇಬೇಕು, ಆದರೆ ಅವನ ಎಲ್ಲಾ ಸ್ಪರ್ಶ ಸಂವೇದನೆಗಳೂ ಮನಸ್ಸಿನ ಮೂಲಕವೇ ಹಾದು ಹೋಗಬೇಕು. ಹಾಗಾಗಿಯೇ ಅವನು ಯಾವುದೇ ಕ್ಯಾಶುವಲ್ ಸಂಬಂಧಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲಾರ. ಅವಳನ್ನು ಬಿಡಲಾರ, ಒಪ್ಪಿಕೊಳ್ಳಲಾರ, ಅವಳು ತನ್ನನ್ನು ಬಿಟ್ಟು ಇನ್ನೊಬ್ಬನೊಡನೆ ಇದ್ದಳು ಎನ್ನುವುದನ್ನು ಅರಗಿಸಿಕೊಳ್ಳಲಾರ. ಈ ಎಲ್ಲಾ ಘಟನೆಗಳಲ್ಲಿ ಅವನು ನವೆಯುತ್ತಿದ್ದರೆ, ಅವನನ್ನು ನೋಡಿ ನೋಡಿ ಅವಳು ನವೆಯುತ್ತಿದ್ದಾಳೆ. ಯಾರ ನೋವು ದೊಡ್ಡದು ಎಂದು ಹೇಳಲಾಗುವುದೇ ಇಲ್ಲ. ಅಷ್ಟಕ್ಕೂ ಹೇಳಲು ನಾವ್ಯಾರು…’ಯಾವ ಜೀವ ಯಾವ ನೋವಿಗೀಡೋ, ಯಾವ ಭಾವ ನೆಮ್ಮಿ ಅದರ ಪಾಡೋ….’.

ಚಿತ್ರದಲ್ಲಿ ಒಂದು ಸಲ ಅವಳು ಹಾಲಿನ ಪಾತ್ರ ಒಲೆಯ ಮೇಲಿಟ್ಟು ಮರೆತಿರುತ್ತಾಳೆ. ಹಾಲು ತಳ ಹತ್ತಿರುತ್ತದೆ. ಹಾಲು ಕುದಿಯುತ್ತಿರುವಾಗ ನೀನು ಕೋಣೆ ಬಿಟ್ಟು ಹೊರಟರೆ ಸಮಯ ನಿಲ್ಲುವುದಿಲ್ಲ, ನೀನಿಲ್ಲದ ಸಮಯದಲ್ಲೂ ಇಲ್ಲಿ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ, ಆ ಪರಿಣಾಮಗಳಿಗೆ ನೀನು ಹೊಣೆಗಾರಳು ಎನ್ನುವ ಧ್ವನಿಯಲ್ಲಿ ಅವನು ಆರೋಪಿಸುತ್ತಾನೆ. ಅವನು ಹಾಲಿನ ಬಗ್ಗೆ ಮಾತನಾಡುತ್ತಿಲ್ಲ. ಅದನ್ನು ತೊಳೆಯಲು ಇಷ್ಟು ಕಷ್ಟ ಪಡುವ ಬದಲು, ಅದನ್ನು ಎಸೆದುಬಿಡು ಎನ್ನುವುದು ಅವಳ ಪರಿಹಾರ. ಆದರೆ ಅವನ ಸಮಸ್ಯೆ ಎಂದರೆ ಅವನು ಯಾವುದನ್ನೂ ಎಸೆಯಲಾರ, ಸಿಟ್ಟನ್ನು, ಕೋಪವನ್ನು ಕಡೆಗೆ ಪ್ರೀತಿಯನ್ನು ಸಹ. ಆದರೆ ಅವಳಿಗೇ ಗೊತ್ತಿಲ್ಲದಂತೆ, ಅವಳಿಗೂ ಅವರಿಬ್ಬರ ಪ್ರೀತಿಯನ್ನು ಎಸೆಯಲು ಸಾಧ್ಯವಾಗುವುದಿಲ್ಲ. ಅವನು ಹಳೆಯದನ್ನು ಮರೆಯಲು ಸಮಯ ಕೊಡುತ್ತಾಳೆ, ಅವನನ್ನು ಸಹಿಸುತ್ತಾಳೆ, ಅವನ ಸಂಕಟದ ಪಾಲುದಾರಳಾಗುತ್ತಾಳೆ. ಪ್ರೀತಿಯಂತಹ ಶಕ್ತಿಯೂ ಇಲ್ಲ, ನೋವೂ ಇಲ್ಲ, ಪಾಶವೂ ಇಲ್ಲ.

ಅವಳು ಕೊಟ್ಟ ಕ್ಯಾಕ್ಟಸ್ ಗಿಡ, ಕಲ್ಕತ್ತಾದಿಂದ ಅವಳು ಕಳಿಸಿದ ಒಂದು ಗ್ರೀಟಿಂಗ್ ಕಾರ್ಡ್ ಅವನಿಗೆ ಆ ತಪ್ಪೊಪ್ಪಿಗೆಯ ನೆನಪನ್ನು ಮರುಕಳಿಸುತ್ತಲೇ ಇರುತ್ತವೆ.ಆ ಕ್ಯಾಕ್ಟಸ್ ಈಗ ಅವರಿಬ್ಬರ ನಡುವಿನ ಸಂಬಂಧಕ್ಕೆ ರೂಪಕವಾಗಿದೆ, ಅವಳನ್ನೂ ಅದು ಚುಚ್ಚುತ್ತದೆ, ಅವನನ್ನೂ… ಒಂದು ಸಂದರ್ಭದಲ್ಲಿ ಅವನು ಸಿಟ್ಟಿನಲ್ಲಿ ಆ ಕ್ಯಾಕ್ಟಸ್ ಮತ್ತು ಕಲ್ಕತ್ತಾದ ಚಿತ್ರವಿರುವ ಗ್ರೀಟಿಂಗ್ ಎರಡನ್ನೂ ಮಿಕ್ಸಿಗೆ ಹಾಕಿ, ಜೂಸ್ ಮಾಡಿ ಅವಳಿಗೆ ಕೊಟ್ಟುಬಿಟ್ಟಿರುತ್ತಾನೆ. ಮತ್ತು ಅವಳು ಅದನ್ನು ಕುಡಿದು, ಅರಗಿಸಿಕೊಂಡಿರುತ್ತಾಳೆ. ಅವನ ಪ್ರೀತಿಯೂ ದೊಡ್ಡದು, ಸಿಟ್ಟೂ ದೊಡ್ಡದು.

ಇದೇ ಸಂದರ್ಭದಲ್ಲಿ ಇವರಿಬ್ಬರಿಗೂ ಸ್ನೇಹಿತರಾಗಿದ್ದ ದಂಪತಿ ದೂರಾಗಿದ್ದಾರೆ. ಮದುವೆಗೂ ಸಹ ಅವರಿಬ್ಬರನ್ನು ಒಂದಾಗಿಡಲು ಆಗುತ್ತಿಲ್ಲ. ಆ ಹೆಣ್ಣು ಬರ್ನಾರ್ಡ್ ಗೆ ಮಾನಸಿಕವಾಗಿ ಹತ್ತಿರವಾಗುತ್ತಿದ್ದಾಳೆ. ಅವಳೊಡನೆ ದೈಹಿಕವಾಗಿ ಒಂದಾಗಲೂ ಹೆಜ್ಜೆ ಇಡುತ್ತಾನಾದರೂ ಅದು ಅವನಿಗೂ ಸಾಧ್ಯವಾಗುವುದಿಲ್ಲ, ಆ ಹೆಣ್ಣೂ ಅದಕ್ಕೆ ಅನುವಾಗುವುದಿಲ್ಲ. ಆ ಕ್ಷಣದಲ್ಲಿ ಅವನಿಗೆ ಒಂದು ಸತ್ಯದ ಸಾಕ್ಷಾತ್ಕಾರವಾಗುತ್ತದೆ. ಅವನೆಷ್ಟೇ ಪ್ರಯತ್ನಿಸಿದರೂ ಅವನು ಸಾರಾಳನ್ನು ಮರೆಯಲಾಗುವುದಿಲ್ಲ, ಇನ್ನೊಬ್ಬರ ಜೊತೆ ಹತ್ತಿರವಾಗುವುದು ಸಾಧ್ಯವಾಗುವುದಿಲ್ಲ. ಅವನು ಮನೆಗೆ ಹಿಂದಿರುಗುತ್ತಾನೆ.

ಮೊದಲೇ ಹೇಳಿದಂತೆ ಇಡೀ ಚಿತ್ರದಲ್ಲಿ ಪರಿಕರ, ಆವರಣ ಮತ್ತು ಸಂಗೀತ ಎಲ್ಲವೂ ಅತ್ಯಂತ ಪೂರಕವಾಗಿ ಸೇರಿಕೊಂಡಿದೆ. ಅವನು ಒದ್ದಾಡುತ್ತಿದ್ದಾಗಲೂ ಹಿನ್ನಲೆಯಲ್ಲಿ ಮೊರೆಯುವ ಹಾಡು, ’Just stay with me, just stay with me…’. ಒಂದು ಸಂದರ್ಭದಲ್ಲಿ ಅವನು ಸ್ನೇಹಿತನ ಹೆಂಡತಿಯ ಎದಿರು ಏನೆಲ್ಲಾ ಹೇಳಿಕೊಳ್ಳಬೇಕು ಎಂದು ಒದ್ದಾಡುವಾಗ ಆ ಟೇಬಲ್ ನ ಮೇಲಿರುವ, ಅಸಹಾಯಕತೆಯಲ್ಲಿ ಕೈ ಚಾಚಿರುವ ಒಂದು ವಿಗ್ರಹ ಅವನ ಒಳತೋಟಿಯನ್ನು ಹೇಳುತ್ತಲೇ ಇರುತ್ತದೆ. ಅವನನ್ನು ನಿರಾಕರಿಸಿ ಆಕೆ ಹೊರಟುಹೋಗುತ್ತಾಳೆ, ಲಾಂಗ್ ಶಾಟ್ ನಲ್ಲಿ ಗಾಜಿನ ಮೂಲಕ ಕಾಣುವುದು ಆ ಚಾಚಿದ ಕೈ ಮತ್ತು ಒಂಟಿಯಾಗಿ ಕುಳಿತು ಕುಡಿಯುತ್ತಿರುವ ಅವನು. ಅವಳು ಒಂದು ಮಾತು ಹೇಳುತ್ತಾಳೆ, ‘ಆನ್ ಲೈನ್ ಪ್ರೀತಿ, ಬೇಕೆಂದಷ್ಟು ಸಂಗಾತಿಗಳು, ಬೇಕಾದಷ್ಟು ಆಯ್ಕೆ, ಇದೆಲ್ಲದರ ನಡುವೆ ನಾವು, ನಮ್ಮ ತಲೆಮಾರಿನವರು ಪ್ರೀತಿಯನ್ನು ಎಲ್ಲಿ ಕಳೆದುಕೊಂಡುಬಿಟ್ಟೆವು..?’.

ಚಿತ್ರ ಅನೇಕ ಕಾರಣಗಳಿಗೆ ಭಿನ್ನವಾಗುತ್ತದೆ. ತನಗಾದ ಸಂಕಟ ಮರೆಯಲೆಂದು ಬರ್ನಾರ್ಡ್ ತನ್ನ ತಳಮಳವನ್ನು ಕಥೆಯಾಗಿಸುತ್ತಾನೆ. ಅದನ್ನು ಒಂದು ಓದುಗುಂಪಿನ ಜೊತೆ ಚರ್ಚಿಸುವಾಗ ಅವರು ಈ ಕಥೆಯಲ್ಲಿ ಹೊಸದೇನಿದೆ, ಪ್ರೀತಿಯಲ್ಲಿ ದ್ರೋಹ ಎಷ್ಟೋ ಸಲ ಆಗಿದೆ ಎನ್ನುತ್ತಾರೆ. ಆದರೆ ಈ ಚಿತ್ರದ ಹೊಸತನ ಇರುವುದು ಅವರು ಅದನ್ನು ಕತೆಯಾಗಿಸುವ ರೀತಿಯಲ್ಲಿ. ಈ ಪ್ರಯತ್ನದಲ್ಲಿ ಚಿತ್ರ ಕೆಲವೆಡೆ ಎಳೆದಂತೆ ಅನ್ನಿಸುತ್ತದೆ, ಒಂದೇ ಭಾವವನ್ನು ವಿವರಿಸಲು ಬೇರೆ ಬೇರೆ ಘಟನೆಗಳನ್ನು ಬಳಸಿಕೊಂಡಿದ್ದಾರೆ ಎನ್ನಿಸುತ್ತದೆ. ಬಹುಶಃ ಚಿತ್ರವನ್ನು ಒಂದು ೧೫-೨೦ ನಿಮಿಷಗಳಷ್ಟು ಕಡಿತಗೊಳಿಸಿದ್ದರೆ ಚಿತ್ರ ಇನ್ನೂ ಪರಿಣಾಮಕಾರಿಯಾಗಿರುತ್ತಿತ್ತು ಅನ್ನಿಸುತ್ತದೆ.

ಆದರೆ ಚಿತ್ರ ಇವುಗಳ ನಡುವೆಯೂ ಇಷ್ಟವಾಗುತ್ತದೆ. ವಿಷಯದ ಕಾರಣದಿಂದ, ಅದನ್ನು ಹೇಳುವ ರೀತಿಯ ಕಾರಣದಿಂದ, ಸಾರಾಳ ಪ್ರೀತಿಯ ಕಾರಣದಿಂದ, ಬರ್ನಾರ್ಡ್ ನ ತಳಮಳದ ಕಾರಣದಿಂದ. ಅಥವಾ ಕಡೆಗೆ ಅವರಿಬ್ಬರ ಪ್ರೀತಿ ಅವರಿಬ್ಬರನ್ನೂ ಗೆಲ್ಲಿಸುತ್ತದೆ ಎನ್ನುವ ಕಾರಣದಿಂದ… ಆದರೆ ನಿಜಕ್ಕೂ ಚಿತ್ರ ಇಷ್ಟವಾಗುವುದು ಚಿತ್ರದ ವಸ್ತುವಿನ ಟ್ರೀಟ್ ಮೆಂಟ್ ಕಾರಣದಿಂದ.