ಆಗಿನ ಕಾಲದಲ್ಲಿ, ರೀತಿಯ ಪಬ್ಲಿಕ್ ಪರೀಕ್ಷೆಗೆ ಕುಳಿತವರು, ಪ್ರಶ್ನೆಪತ್ರಿಕೆ ದೊರಕಿದ ಅರ್ಧಗಂಟೆಯವರೆಗೂ ಪರೀಕ್ಷಾ ಕೇಂದ್ರದಿಂದ ಹೊರ ಹೋಗುವಂತಿರಲಿಲ್ಲ. ಅರ್ಧಗಂಟೆಯ ಸಮಯಕ್ಕೆ ಒಂದು ಬೆಲ್ ಆಗುತ್ತಿತ್ತು. ಅದರ ನಂತರ, ಪರೀಕ್ಷೆಗೆ ಬಂದ ವಿದ್ಯಾರ್ಥಿಗಳು ಉತ್ತರ ಪತ್ರಿಕೆ ನೀಡಿ ಹೊರ ಹೋಗಬಹುದಿತ್ತು. ನಾನು ಮಾಡಿದ್ದು ಅದನ್ನೇ. ಪರೀಕ್ಷೆಯ ಐದೂ ದಿನಗಳು ಅರ್ಧಗಂಟೆಯಷ್ಟು ಮಾತ್ರ ಉತ್ತರಿಸಿ, ಉತ್ತರ ಪತ್ರಿಕೆಯನ್ನು ಪರೀಕ್ಷಾಧಿಕಾರಿಗಳಿಗೆ ನೀಡಿ ಹೊರ ನಡೆಯುತ್ತಿದ್ದೆ. ಅಲ್ಲಿಂದ ನಾನು ಹೋಗುತ್ತಿದ್ದುದ್ದು ಹತ್ತಿರದಲ್ಲೇ ಇದ್ದ ಪಬ್ಲಿಕ್ ಲೈಬ್ರರಿಗೆ. ಅಲ್ಲಿ, ಪರೀಕ್ಷೆ ಮುಗಿಯುವ ವೇಳೆಯವರೆಗೂ ಇದ್ದು, ಮನೆಗೆ ಹೋಗುತ್ತಿದ್ದೆ. ನಾನು ರೀತಿ ಮಾಡುತ್ತಿದ್ದುದು ಯಾರಿಗೂ ಗೊತ್ತಿರಲಿಲ್ಲ.
ಶೇಷಾದ್ರಿ ಗಂಜೂರು ಬರೆಯುವ ಅಂಕಣ

 

ಚಿಕ್ಕಂದಿನಲ್ಲಿ ನನ್ನದೊಂದು ತತ್ವವಿತ್ತು: “ಜ್ಞಾನ ಎನ್ನುವುದು ಖಾಸಗಿ ವಿಷಯ. ನನಗೆ ತಿಳಿದ ಅಥವಾ ತಿಳಿಯದ ವಿಷಯಗಳನ್ನು ಕಟ್ಟಿಕೊಂಡು ಬೇರಾರಿಗೋ ಏನಾಗಬೇಕಿದೆ?” ಈ ವಿಚಾರವಾಗಿ ನಾನು ಮನೆಯ ಹಿರಿಯರೊಂದಿಗೆ ಬೇಕಾದಷ್ಟು ವಾದ ಮಾಡುತ್ತಿದ್ದೆ. ಎಲ್ಲಕ್ಕಿಂತ ಮುಖ್ಯವಾಗಿ, ನನಗೆ ಶಾಲೆಯ ಟೆಸ್ಟ್-ಪರೀಕ್ಷೆಗಳ ಕುರಿತು ಅತ್ಯಂತ ಅಸಹನೆ ಇತ್ತು. ಆದರೂ, ಬಯ್ಯಿಸಿಕೊಳ್ಳಬಾರದೆಂದು ಈ ಟೆಸ್ಟ್-ಪರೀಕ್ಷೆಗಳಲ್ಲಿ ತಕ್ಕ ಮಟ್ಟಿಗೆ ಚೆನ್ನಾಗಿಯೇ ಮಾಡುತ್ತಿದ್ದೆ.

ನಾನು ಏಳನೆಯ ತರಗತಿಯಲ್ಲಿದ್ದಾಗ, ನಮಗೆ ಜಿಲ್ಲಾ ಮಟ್ಟದ ಪಬ್ಲಿಕ್ ಪರೀಕ್ಷೆ ಇತ್ತು. ಈ ಪರೀಕ್ಷೆಗಳು ನಡೆಯುತ್ತಿದ್ದುದು ನಮ್ಮ ಶಾಲೆಯಲ್ಲಲ್ಲ. ಜೊತೆಗೇ, ಪರೀಕ್ಷೆಯ ಇನ್ವಿಜಿಲೇಟರುಗಳು ಕೂಡ ಯಾರೂ ನಮ್ಮ ಶಿಕ್ಷಕರಾಗಿರುತ್ತಿರಲಿಲ್ಲ. ಹೀಗಾಗಿ, ನಾನು ನನ್ನ ತತ್ವವನ್ನು ಕಾರ್ಯಾಚರಣೆಗೆ ತರಲು ನಿರ್ಧರಿಸಿದೆ.

ಆಗಿನ ಕಾಲದಲ್ಲಿ, ಈ ರೀತಿಯ ಪಬ್ಲಿಕ್ ಪರೀಕ್ಷೆಗೆ ಕುಳಿತವರು, ಪ್ರಶ್ನೆಪತ್ರಿಕೆ ದೊರಕಿದ ಅರ್ಧಗಂಟೆಯವರೆಗೂ ಪರೀಕ್ಷಾ ಕೇಂದ್ರದಿಂದ ಹೊರ ಹೋಗುವಂತಿರಲಿಲ್ಲ. ಅರ್ಧಗಂಟೆಯ ಸಮಯಕ್ಕೆ ಒಂದು ಬೆಲ್ ಆಗುತ್ತಿತ್ತು. ಅದರ ನಂತರ, ಪರೀಕ್ಷೆಗೆ ಬಂದ ವಿದ್ಯಾರ್ಥಿಗಳು ಉತ್ತರ ಪತ್ರಿಕೆ ನೀಡಿ ಹೊರ ಹೋಗಬಹುದಿತ್ತು. ನಾನು ಮಾಡಿದ್ದು ಅದನ್ನೇ. ಪರೀಕ್ಷೆಯ ಐದೂ ದಿನಗಳು ಅರ್ಧಗಂಟೆಯಷ್ಟು ಮಾತ್ರ ಉತ್ತರಿಸಿ, ಉತ್ತರ ಪತ್ರಿಕೆಯನ್ನು ಪರೀಕ್ಷಾಧಿಕಾರಿಗಳಿಗೆ ನೀಡಿ ಹೊರ ನಡೆಯುತ್ತಿದ್ದೆ.

ಅಲ್ಲಿಂದ ನಾನು ಹೋಗುತ್ತಿದ್ದುದ್ದು ಹತ್ತಿರದಲ್ಲೇ ಇದ್ದ ಪಬ್ಲಿಕ್ ಲೈಬ್ರರಿಗೆ. ಅಲ್ಲಿ, ಪರೀಕ್ಷೆ ಮುಗಿಯುವ ವೇಳೆಯವರೆಗೂ ಇದ್ದು, ಮನೆಗೆ ಹೋಗುತ್ತಿದ್ದೆ. ನಾನು ಈ ರೀತಿ ಮಾಡುತ್ತಿದ್ದುದು ಯಾರಿಗೂ ಗೊತ್ತಿರಲಿಲ್ಲ.

ಆ ಕಾಲದಲ್ಲಿ ನಮ್ಮ ಮನೆಗೆ ಪಾಠ ಹೇಳಲು ಶಿಕ್ಷಕರೊಬ್ಬರು ಬರುತ್ತಿದ್ದರು. ಅವರು, ಪ್ರತಿ ಪರೀಕ್ಷೆಯ ನಂತರ, ಆ ಪ್ರಶ್ನೆ ಪತ್ರಿಕೆಯಲ್ಲಿದ್ದ ಪ್ರಶ್ನೆಗಳನ್ನು ನನಗೆ ಕೇಳುತ್ತಿದ್ದರು. ಕೊಂಚ ಮಟ್ಟಿಗೆ “ಜಾಣ ವಿದ್ಯಾರ್ಥಿ”ಯೇ ಎಂದೆನಿಸಿಕೊಂಡಿದ್ದ ನಾನು ಅವರಿಗೆ ಸಮಂಜಸ ಉತ್ತರಗಳನ್ನೇ ನೀಡುತ್ತಿದ್ದೆ – ಆ ಉತ್ತರಗಳನ್ನು ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಬರೆಯದೇ ಇದ್ದರೂ! ನನ್ನ ಉತ್ತರಗಳಿಂದ ಸಮಾಧಾನ-ಸಂತಸ ಹೊಂದುತ್ತಿದ್ದ ಅವರು, ಜಿಲ್ಲಾ ಮಟ್ಟದಲ್ಲಿ ನನಗೊಂದು “rank” ದೊರೆಯುವುದು ನಿಶ್ಚಿತ ಎಂದೇ ಹೇಳುತ್ತಿದ್ದರು. ಅಲ್ಲದೇ, ಫಲಿತಾಂಶ ಬಂದಾಗ, ಅವರಿಗೆ ನಮ್ಮ ಮನೆಯ ಹಿರಿಯರಿಂದ ಒಂದು ವಿಶೇಷ ಕಾಣಿಕೆ ಸಿಗುತ್ತದೆ ಎಂದೆಲ್ಲಾ ನಂಬಿದ್ದರು.

ಕೆಲವು ವಾರಗಳ ನಂತರ ಪರೀಕ್ಷೆಯ ಫಲಿತಾಂಶ ಹೊರಬಿದ್ದಾಗ, ನನ್ನ ಮಾರ್ಕ್ಸ್ ಕಾರ್ಡ್ ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. “Rank Student” ಎಂದೇ ಎಲ್ಲರೂ ಪರಿಗಣಿಸುತ್ತಿದ್ದ ನಾನು, ಹಾಗೋ-ಹೀಗೋ ಪಾಸಾಗಿದ್ದೆ. ನಮ್ಮ ತಾತ, “revaluation”ಗೆ ಹಾಕುವ ಮಾತನಾಡಿದರು. ಅಲ್ಲಿಯವರೆಗೂ ನನ್ನ ಗುಟ್ಟು ಬಿಡದಿದ್ದ ನಾನೂ, ಕೊನೆಗೂ ಅದನ್ನು ಎಲ್ಲರಿಗೂ ತಿಳಿಸಿದೆ. ಮನೆಯ ಹಿರಿಯರಿಗೆ ನನ್ನ ಈ ನಡುವಳಿಕೆಯಿಂದ ಕೋಪ ಬಂದಿತಾದರೂ, ಅದರಿಂದ ಅತ್ಯಂತ ಬೇಸರ ಪಟ್ಟವರೆಂದರೆ, ಮನೆ ಪಾಠ ಮಾಡುಲು ಬರುತ್ತಿದ್ದ ಶಿಕ್ಷಕರೇ. ಅವರ ಬೇಸರ, ನನ್ನಲ್ಲೂ ಪಾಪಪ್ರಜ್ಞೆಯೊಂದನ್ನು ಬಿತ್ತಿತು. ನಂತರದಲ್ಲಿ ನಾನು ಅವರನ್ನೆಂದೂ ಮುಖಕೊಟ್ಟು ನೋಡಲಿಲ್ಲ. ಆಗೊಮ್ಮೆ-ಈಗೊಮ್ಮೆ ರಸ್ತೆಯಲ್ಲಿ ಕಂಡರೂ, ನಾನು ತಲೆ ತಗ್ಗಿಸಿಯೇ ನಡೆದೆ.

******

(ಜೂಲ್ಸ್ ವೆರ್ನ್)

ಆ ಪರೀಕ್ಷೆಗಳ ಸಮಯದಲ್ಲಿ ನಾನು ಲೈಬ್ರರಿಯಲ್ಲಿ ಓದುತ್ತಿದ್ದ ಪುಸ್ತಕವೆಂದರೆ, ಜೂಲ್ಸ್ ವೆರ್ನ್‌ ನ “ಅರೌಂಡ್ ದ ವರ್ಲ್ಡ್ ಇನ್ ಎಯ್ಟಿ ಡೇಸ್”ನ ಕನ್ನಡದ ಸಂಕ್ಷಿಪ್ತಾನುವಾದ.

ಫ್ರೆಂಚ್ ಸಾಹಿತಿ ಜೂಲ್ಸ್ ವೆರ್ನ್, ಈ ಕಾದಂಬರಿಯನ್ನು ಬರೆದದ್ದು ೧೮೭೨ರಲ್ಲಿ. ಇದರ ಕಥಾನಾಯಕ ಫಿಲಿಯಾಸ್ ಫಾಗ್ ಮತ್ತು ಅವನ ಸೇವಕ ಪಸ್ಪಾರ್ತೂ ಇಡೀ ಭೂಗೋಳವನ್ನೇ ೮೦ ದಿನಗಳಲ್ಲಿ ಸುತ್ತಿ ವಾಪಸು ಬರುವ ಸಾಹಸದ ಕಥಾನಕವಿದು. ಆ ಕಥೆ ಪ್ರಾರಂಭವಾಗುವುದು, ಲಂಡನ್ನಿನ ಕ್ಲಬ್ ಒಂದರಲ್ಲಿ. ಆ ದಿನದ ಲಂಡನ್ನಿನ ಪತ್ರಿಕೆಯೊಂದರಲ್ಲಿ, ಭಾರತದ ಅಗಲಕ್ಕೂ ರೈಲ್-ವೇ ಹಳಿಗಳನ್ನು ಹಾಕಿರುವ ನ್ಯೂಸ್ ಇರುತ್ತದೆ. ಇದು, ಫಿಲಿಯಾಸ್ ಫಾಗ್ ಮತ್ತು ಅವನ ಸ್ನೇಹಿತರ ಚರ್ಚೆಯ ವಿಷಯವಾಗುತ್ತದೆ. ಈ ರೈಲು ಸಂಪರ್ಕ ಪೂರ್ಣವಾಗಿರುವುದರಿಂದ, ಎಂಬತ್ತು ದಿನದೊಳಗೇ ಭೂಗೋಳವನ್ನು ಸುತ್ತಿ ಬರಬಹುದೆಂದು ಫಾಗ್ ವಾದಿಸುತ್ತಾನೆ. ಅವನ ವಾದ, ಫಾಗ್ ಮತ್ತು ಅವನ ಸ್ನೇಹಿತರ ನಡುವೆ ಪಣವೊಂದಕ್ಕೆ ಕಾರಣವಾಗುತ್ತದೆ. ಅವನು ಹೇಳಿದ್ದನ್ನು ಮಾಡಿ ತೋರಿಸುವಂತೆ ಫಾಗ್‌ ನ ಸ್ನೇಹಿತರು ಪಣ ಹಾಕುತ್ತಾರೆ. ಆ ಪಣದ ಷರತ್ತಿನಂತೆ, ಫಾಗ್ ಭೂಗೋಳದ (ಅ)ಪ್ರದಕ್ಷಿಣೆ ಮಾಡಿ ಎಂಭತ್ತು ದಿನಗಳಲ್ಲಿ ವಾಪಸಾಗದಿದ್ದರೆ, ಅವನ ಆಸ್ತಿ-ಪಾಸ್ತಿಗಳೆಲ್ಲಾ ಅವನ ಸ್ನೇಹಿತರ ಪಾಲಾಗಬೇಕು.

ಈ ಪ್ರವಾಸ ಕಥನ, ನಂತರದಲ್ಲಿ ಹಲವಾರು ಬಾರಿ ಚಲನಚಿತ್ರ ಮತ್ತು ಟೆಲೆವಿಷನ್‌ ಗಳಲ್ಲಿ ಬಿಂಬಿತವಾಗಿದೆಯಾದರೂ, ನನ್ನ ಮನಸ್ಸಿನಲ್ಲಿ ಬಹುಮಟ್ಟಿಗೆ ಉಳಿದಿರುವುದು ನಾನು ಓದಿದ ಕನ್ನಡದ ಅನುವಾದದ ಮೂಲಕವೇ. ಈ ಕತೆಯ ಅಂತ್ಯದಲ್ಲಿ ಒಂದು ರೋಚಕ ತಿರುವಿದೆ. ತನ್ನ ಪ್ರಯಾಣದಲ್ಲಿ, ಎಂಭತ್ತು ಸೂರ್ಯೋದಯಗಳನ್ನು ಭೂಮಿಯ ಹಲವಾರು ದೇಶಗಳಲ್ಲಿ ನೋಡುವ ಫಾಗ್, ಲಂಡನ್ನಿಗೆ ವಾಪಸು ಬಂದಾಗ, ತಾನು ಪಣದಲ್ಲಿ ಸೋತನೆಂದೇ ಭಾವಿಸಿರುತ್ತಾನೆ. ಆದರೆ, ಅವನು ತನ್ನ ಪ್ರಯಾಣದಲ್ಲಿ ಇಂಟರ್ ನ್ಯಾಷನಲ್ ಡೇಟ್ ಲೈನ್ ಅನ್ನು ದಾಟಿ ಬಂದಿರುವುದರಿಂದ, ಒಂದು ದಿನ ಮುನ್ನವೇ ಬಂದಿರುತ್ತಾನೆ. ಅವನು ಎಂಭತ್ತು ಸೂರ್ಯೋದಯಗಳನ್ನು ಕಂಡಿದ್ದರೂ, ಲಂಡನ್ನಿನವರು ಅದೇ ಸಮಯದಲ್ಲಿ ಎಪ್ಪತ್ತೊಂಭತ್ತು ಸೂರ್ಯೋದಯಗಳನ್ನು ಮಾತ್ರ ಕಂಡಿರುತ್ತಾರೆ. ಫಿಲಿಯಾಸ್ ಫಾಗ್ ತನ್ನ ಪಣದಲ್ಲಿ ವಿಜೇತನಾಗುವುದು ಮಾತ್ರವಲ್ಲ, ಅವನ ಪಯಣದಲ್ಲಿ ಅವನೊಡನೆ ಜೊತೆಗೂಡುವ ಭಾರತೀಯ ಸುಂದರಿ ತನ್ನ ಪ್ರೇಮ ನಿವೇದನೆಯನ್ನೂ ಅವನಿಗೆ ಮಾಡುತ್ತಾಳೆ.

ಎಚ್.ಜಿ.ವೆಲ್ಸ್‌ ನ ಟೈಮ್ ಮಷೀನ್ ಪುಸ್ತಕ ಪ್ರಕಟವಾಗುವ ಎರಡು ದಶಕಕ್ಕೂ ಮುನ್ನ ಪ್ರಕಟವಾದ ಜೂಲ್ಸ್ ವೆರ್ನ್‌ ನ ಈ ಕಥಾನಕ, ಯಾರ ಮನಸ್ಸನ್ನು ಮುದಗೊಳಿಸುವುದಿಲ್ಲ?! ಅದೂ ಅಲ್ಲದೇ, ವೆರ್ನ್‌ ನ ಕಥಾನಾಯಕ ಫಿಲಿಯಾಸ್ ಫಾಗ್ ಕೇವಲ ದೂರ ಪ್ರಯಾಣದ ಮೂಲಕವೇ ಕಾಲ ಪ್ರಯಾಣ ಮಾಡಿ ಒಂದು ದಿನ ಹಿಂದಕ್ಕೆ ಬಂದಿರುತ್ತಾನೆ, ಯಾವುದೇ ಟೈಮ್ ಮಷೀನ್ ಸಹಾಯವಿಲ್ಲದೇ!!

೧೮೭೨ರಲ್ಲಿ, ವೆರ್ನ್ ತನ್ನ ಕಥಾನಕ ಬರೆಯಲಾರಂಭಿಸಿದಾಗ – ಅದು ಪ್ರಕಟವಾಗಿದ್ದು ಧಾರಾವಾಹಿಯ ರೂಪದಲ್ಲಿ, ಎಲ್ಲಾ ದೇಶಗಳು ಇಂದು ಒಪ್ಪಿಕೊಳ್ಳುವ ಒಂದು ಅಧಿಕೃತ “ಇಂಟರ್ ನ್ಯಾಷನಲ್ ಡೇಟ್ ಲೈನ್” ವಾಸ್ತವದಲ್ಲಿ ಇರಲಿಲ್ಲ. ಅಂತಹದೊಂದು “ಗೆರೆ” ಸೃಷ್ಟಿಯಾಗಲೂ ಇನ್ನೂ ಕೆಲವು ದಶಕಗಳೇ ಬೇಕಿತ್ತು. ಆದರೆ, ಅದರ ಸೃಷ್ಟಿಯ ಆರಂಭವೂ, ರೈಲ್-ವೇ ಇಂದಲೇ ಪ್ರಾರಂಭವಾಗುತ್ತದೆ. ಫಿಲಿಯಾಸ್ ಫಾಗ್‌ ನ ಯಾತ್ರೆಯಂತೆಯೇ.

ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ ಯೂರೋಪ್ ಮತ್ತು ಅಮೆರಿಕಾಗಳಲ್ಲಿ ರೈಲ್-ವೇ ನೆಟ್‌ವರ್ಕ್‌ ಗಳ ವ್ಯಾಪ್ತಿ ಹೆಚ್ಚಾದಂತೆ ಇಡೀ ದೇಶಕ್ಕೆ ಒಂದು “ಟೈಮ್ ಸ್ಟಾಂಡರ್ಡ್” ಇರಬೇಕೆನ್ನುವ ಅವಶ್ಯಕತೆಯೂ ಸ್ಪಷ್ಟವಾಗಿ ಕಾಣಿಸಲಾರಂಭಿಸಿತು. ಇಂತಹದೊಂದು “ಸ್ಟಾಂಡರ್ಡ್” ರೂಪಿಸಲು ಒತ್ತಾಯ ಹಾಕುತ್ತಿದ್ದವರಲ್ಲಿ ರೈಲ್-ವೇ ಕಂಪೆನಿಗಳ ಒಡೆಯರೇ ಮೊದಲಿಗರಾಗಿದ್ದರೂ, ಇದಕ್ಕೆ, ವಿಜ್ಞಾನಿಗಳೂ, ಅದರಲ್ಲೂ ಖಗೋಳಶಾಸ್ತ್ರಜ್ಞರು ದನಿಗೂಡಿಸಿದರು. ದೇಶ-ವಿದೇಶಗಳ ವಿಜ್ಞಾನಿಗಳು ಜೊತೆ ಸೇರಿದಂತೆ, ಇದಕ್ಕೆ ದೇಶವನ್ನೂ ಮೀರುವ “ಇಂಟರ್ ನ್ಯಾಷನಲ್” ಆಯಾಮವೊಂದು ಬಂತು. ಇವರೊಂದಿಗೆ ಜೊತೆಗೂಡಿದವರೆಂದರೆ, ನಾವಿಕರು ಮತ್ತು ಭೂಪಟಗಳನ್ನು ನಿರ್ಮಿಸುತ್ತಿದ್ದವರು. (ಮೈಲುಗಲ್ಲುಗಳಿಲ್ಲದ ಸಾಗರ ಪ್ರಯಾಣದಲ್ಲಿ, ನಕ್ಷತ್ರ ಮತ್ತು ಸಮಯಗಳೇ ನಾವೆಲ್ಲಿದ್ದೀವೆಂದು ಅಂದಾಜಿಸಲು ಬೇಕಾದ ಸಾಧನಗಳು)

ಭೂಗೋಳವನ್ನು, ಉತ್ತರದಿಂದ ದಕ್ಷಿಣಕ್ಕೆ ಈರುಳ್ಳಿಯ ಬಳೆಗಳಂತೆ ಕತ್ತರಿಸಬಹುದು. ಹಾಗೆಯೇ, ಪೂರ್ವದಿಂದ ಪಶ್ಚಿಮಕ್ಕೆ ಕಿತ್ತಳೆಯ ಹಣ್ಣಿನ ತೊಳೆಗಳಂತೆ ಬೇರ್ಪಡಿಸಲೂ ಬಹುದು. ಈ ಉತ್ತರ-ದಕ್ಷಿಣಗಳ ಬಳೆಗಳ ರೇಖೆಯನ್ನು “ಲ್ಯಾಟಿಟ್ಯೂಡ್” ಎಂದೂ, ಪೂರ್ವ-ಪಶ್ಚಿಮಗಳ ತೊಳೆಗಳ ರೇಖೆಗಳನ್ನು “ಲಾಂಜಿಟ್ಯೂಡ್” ಎಂದೂ, ಕರೆಯುವುದು, ನಾವು ಶಾಲೆಯಲ್ಲಿದ್ದಾಗಲೇ ಕಲಿತ ವಿಚಾರಗಳು.

ಅವನು ಎಂಭತ್ತು ಸೂರ್ಯೋದಯಗಳನ್ನು ಕಂಡಿದ್ದರೂ, ಲಂಡನ್ನಿನವರು ಅದೇ ಸಮಯದಲ್ಲಿ ಎಪ್ಪತ್ತೊಂಭತ್ತು ಸೂರ್ಯೋದಯಗಳನ್ನು ಮಾತ್ರ ಕಂಡಿರುತ್ತಾರೆ. ಫಿಲಿಯಾಸ್ ಫಾಗ್ ತನ್ನ ಪಣದಲ್ಲಿ ವಿಜೇತನಾಗುವುದು ಮಾತ್ರವಲ್ಲ, ಅವನ ಪಯಣದಲ್ಲಿ ಅವನೊಡನೆ ಜೊತೆಗೂಡುವ ಭಾರತೀಯ ಸುಂದರಿ ತನ್ನ ಪ್ರೇಮ ನಿವೇದನೆಯನ್ನೂ ಅವನಿಗೆ ಮಾಡುತ್ತಾಳೆ.

“ಲ್ಯಾಟಿಟ್ಯೂಡ್” ಅನ್ನು ರೂಪಿಸುವುದು ಒಂದು ರೀತಿಯಲ್ಲಿ ಸುಲಭ. ಉತ್ತರ ಧೃವದಲ್ಲಿ ನಡು-ನೆತ್ತಿಯ ಮೇಲೆ ಕಾಣುವ ನಕ್ಷತ್ರವೊಂದನ್ನು ಗುರುತಿನಲ್ಲಿಟ್ಟುಕೊಂಡು, ದಕ್ಷಿಣಕ್ಕೆ ಬರುತ್ತಾ, ಆ ನಕ್ಷತ್ರದ ಸ್ಥಳಾಂತರವಾಗುವುದನ್ನು ಗಮನಿಸುತ್ತಾ ಗೆರೆಗಳನ್ನು ಎಳೆದರಾಯಿತು. ಆದರೆ, ಪೂರ್ವ ಮತ್ತು ಪಶ್ಚಿಮಗಳ ಮಾತು ಹಾಗಲ್ಲ. ಉತ್ತರ ಮತ್ತು ದಕ್ಷಿಣ ಧೃವಗಳಂತೆ, ಇಲ್ಲಿ, ಎಲ್ಲರೂ ಒಪ್ಪುವ ಧೃವಗಳಿಲ್ಲ. ಯಾವುದೋ ಒಂದು ಸ್ಥಳವನ್ನು, ಇದೇ ಆರಂಭವೆಂದು ನಾವು ಮನ್ನಿಸಬೇಕು. ಅದನ್ನು, ಜ಼ೀರೋ ಡಿಗ್ರಿ ಮೆರಿಡಿಯನ್ ಎಂದು ಎಲ್ಲರೂ ಒಪ್ಪಬೇಕು. ನಂತರವಷ್ಟೇ ಎಲ್ಲವೂ ಸುಸೂತ್ರ. ನಾಲ್ಕು-ನಾಲ್ಕು ನಿಮಿಷಗಳಿಗೆ ಒಂದೊಂದು ಗೆರೆ ಎಳೆದರಾಯಿತು. (ವಾಸ್ತವದಲ್ಲಿ, ಇದೇನೂ ಅಂತಹ ಸರಳ ವಿಷಯವಲ್ಲ, ಒಂದು ಪ್ರದೇಶದ ಲ್ಯಾಟಿಟ್ಯೂಡ್ ಮತ್ತು ಲಾಂಜಿಟ್ಯೂಡ್‌ ಗಳನ್ನು ಗುರುತಿಸಲು ಪ್ರಯತ್ನಿಸಿದವರ ಪಡಿಪಾಟಲು ಒಂದೆರಡಲ್ಲ. ಆದರೆ, ಅದು ಬೇರೆಯ ಕತೆ.)

ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿಯೇ, ಅಮೆರಿಕ ಮತ್ತು ಬ್ರಿಟನ್ ನಡುವಿನ ಸಮಯದ ಅಂತರವನ್ನು ಕರಾರುವಾಕ್ಕಾಗಿ ಅಳೆಯುವ ಹಲವಾರು ಪ್ರಯತ್ನಗಳು ನಡೆದವು. ಹಡಗುಗಳಲ್ಲಿ ಹಲವಾರು ಗಡಿಯಾರಗಳನ್ನು ಇಟ್ಟು, ಲಂಡನ್ ಮತ್ತು ಬಾಸ್ಟನ್‌ ಗಳ ನಡುವೆ ಪ್ರಯಾಣ ಮಾಡಿ ಸಮಯವನ್ನು ತಾಳೆ ಹಾಕುವ ಯತ್ನಗಳು ನಡೆದವಾದರೂ, ಅವೆಲ್ಲಕ್ಕೂ ಒಂದು ತೊಂದರೆ ಇತ್ತು. ಈ ಗಡಿಯಾರಗಳು, ವಾತಾವರಣದ ತಾಪಮಾನ, ಆರ್ದ್ರತೆ (“moisture”)ಗಳಿಂದಾಗಿ ಹೆಚ್ಚೂ-ಕಡಿಮೆಯಾಗುತ್ತಿದ್ದವು. (೧೮೫೧ರಲ್ಲಿ ೩೭ ಗಡಿಯಾರಗಳನ್ನು, ಇಂಗ್ಲೆಂಡ್ ಮತ್ತು ಅಮೆರಿಕಗಳ ನಡುವೆ ಐದು ಬಾರಿ ಹಡಗುಗಳಲ್ಲಿ ಸಾಗಿಸಿ ಒಂದು ಸರಾಸರಿ ಅಂದಾಜು ಮಾಡುವ ಯತ್ನವೂ ನಡೆಯಿತು)

ಆದರೆ, ಆ ವೇಳೆಗೆ ಇನ್ನೊಂದು ತಂತ್ರಜ್ಞಾನ ಸಿದ್ಧವಿತ್ತು. ಅದುವೇ ಟೆಲೆಗ್ರಾಫ್. ಟೆಲೆಗ್ರಾಫ್ ತಂತ್ರಜ್ಞಾನದಿಂದ ಒಂದು ಊರಿನ ಸಮಯವನ್ನು ಇನ್ನೊಂದು ಊರಿಗೆ ಕ್ಷಣಾರ್ಧದಲ್ಲಿ – ಬೆಳಕಿನ ವೇಗದಲ್ಲಿ – ಕಳುಹಿಸಲು ಸಾಧ್ಯವಿತ್ತು. ೧೮೫೩ ಆಗಸ್ಟಿನಲ್ಲಿ, ಅಮೆರಿಕ ಈಶಾನ್ಯ ಭಾಗದಲ್ಲಿ ಎರಡು ರೈಲು ಬಂಡಿಗಳು ಒಂದಕ್ಕೊಂದು ಡಿಕ್ಕಿ ಹೊಡೆದು, ಹದಿನಾಲ್ಕು ಮಂದಿ ಮೃತರಾದರು. ಮುಂದಿನ ಕೆಲವೇ ದಿನಗಳಲ್ಲಿ ಇಂತಹುದೇ ಇನ್ನೊಂದು ಅಪಘಾತವಾಗಿ ಮತ್ತಷ್ಟು ಮಂದಿ ಸಾವಿಗೀಡಾದರು. ಆ ನಂತರ, ರೈಲ್-ವೇಗಳಿಗೆ ಒಂದೇ ಸ್ಟಾಂಡರ್ಡ್ ಟೈಮ್ ಅಳವಡಿಸುವ ಮತ್ತು ಆ ಟೈಮ್ ಅನ್ನು ಟೆಲೆಗ್ರಾಫ್ ತಂತ್ರಜ್ಞಾನದಿಂದ ಎಲ್ಲ ರೈಲ್-ವೇ ನಿಲ್ದಾಣಗಳಿಗೂ ಕಳುಹಿಸುವ ವ್ಯವಸ್ಥೆ ಪ್ರಾರಂಭವಾಯಿತು. ಅದೇ ಸಮಯದಲ್ಲಿ, ಇಂತಹುದೇ ಕಾರಣಗಳಿಂದ, ಬ್ರಿಟನ್ನಿನ ರೈಲ್-ವೇ ವ್ಯವಸ್ಥೆಯಲ್ಲೂ ಟೆಲೆಗ್ರಾಫ್ ಮೂಲಕ ಟೈಮ್ ಬಿತ್ತರಿಸುವ ಪರಿಪಾಠ ಶುರುವಾಯಿತು. ಕೆಲವೇ ವರ್ಷಗಳಲ್ಲೇ, ಈ ರೈಲ್-ವೇ ಟೈಮ್ ಅನ್ನು ರೈಲ್-ವೇಯವರು ಅಷ್ಟೇ ಅಲ್ಲ, ರೈಲ್-ವೇ ನಿಲ್ದಾಣಗಳ ಸುತ್ತಲಿನ ಅಂಗಡಿಗಳವರೂ ಪಾಲಿಸತೊಡಗಿದರು. ಹಲವೆಡೆಗಳಲ್ಲಿ, ಚರ್ಚ್‌ ಗಳ ಗಡಿಯಾರಗಳೂ ಈ ರೈಲ್-ವೇ ಟೈಮ್ ತೋರಿಸಲಾರಂಭಿಸಿದವು.

ಈ ರೈಲ್-ವೇ ಟೈಮ್ ಅನ್ನು ಹಲವರು ಪಾಲಿಸಲಾರಂಭಿಸಿದರೂ, ಅದನ್ನು ಟೆಲೆಗ್ರಾಫ್‌ ಗಳಲ್ಲಿ ಕಳುಹಿಸುತ್ತಿದ್ದವರು ಮಾತ್ರ ಅಮೆರಿಕ ಮತ್ತು ಬ್ರಿಟನ್‌ ಗಳ ಖಗೋಳ ವೀಕ್ಷಣಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಖಗೋಳ ಶಾಸ್ತ್ರಜ್ಞರು. ಬರು-ಬರುತ್ತಾ, ಈ ಸಮಯದ “ಮಾರಾಟ”, ಕೆಲವಾರು ಖಗೋಳಾಲಯಗಳಿಗೆ ಸಾವಿರಾರು ಡಾಲರು ಆದಾಯ ತರುವ ಉದ್ಯಮವೂ ಆಯಿತು. ಅಮೆರಿಕದ ಹಲವು ಶ್ರೀಮಂತರಿಗೆ, ಟೆಲೆಗ್ರಾಫ್ ಮೂಲಕ ಸರಿಯಾದ ಸಮಯವನ್ನು ಪಡೆದುಕೊಂಡು, ತಮ್ಮ ಕೈಗಡಿಯಾರಗಳನ್ನು ಸರಿಪಡಿಸಿಕೊಳ್ಳುವ ಖಯಾಲಿಯೂ ಬೆಳೆಯಿತು. ಇದಕ್ಕಾಗಿ ಅವರು ಎಷ್ಟಾದರೂ ಹಣ ಖರ್ಚು ಮಾಡಲು ಸಿದ್ಧವಿದ್ದರು.

ಈ ರೀತಿಯ ಸಮಯದ ಮಾರಾಟ, ಒಂದು ಲಾಭದಾಯಕ ಉದ್ದಿಮೆಯಾಗುತ್ತಿದ್ದಂತೆಯೇ, ಖಗೋಳ ವೀಕ್ಷಣಾಲಯಗಳಲ್ಲಿ ಪೈಪೋಟಿ ಏರ್ಪಟ್ಟಿತು. ಸ್ಥಳೀಯ ಸರ್ಕಾರಗಳೂ, ತಮ್ಮ ವ್ಯಾಪ್ತಿಯಲ್ಲಿರುವವರು ಇಂತಹುದೇ ವೀಕ್ಷಣಾಲಯದಿಂದ ಸಮಯವನ್ನು ಪಡೆಯಬೇಕೆಂದು ಅಣತಿಗಳನ್ನು ನೀಡಲಾರಂಭಿಸಿದವು. ಉದಾಹರಣೆಗೆ, ಅಮೆರಿಕದ ಕನೆಕ್ಟಿಕಟ್ ರಾಜ್ಯ ಸರ್ಕಾರ ಹಾರ್ವರ್ಡ್ ವಿಶ್ವವಿದ್ಯಾಲಯದ ವೀಕ್ಷಣಾಲಯದ ಸಮಯದ ಬದಲಿಗೆ, ತನ್ನದೇ ರಾಜ್ಯದ ಹಾರ್ಟ್‌ಫರ್ಡ್ ವೀಕ್ಷಣಾಲಯದ ಸಮಯವನ್ನೇ ಎಲ್ಲರೂ ಬಳಸಬೇಕೆಂಬ ಆಜ್ಞೆ ಹೊರಡಿಸಿತು. ಎರಡು ವರ್ಷಗಳ ನಂತರ ಇನ್ನೊಂದು ಅಣತಿಯನ್ನು ಹೊರಡಿಸಿ, ಯೇಲ್ ವಿಶ್ವವಿದ್ಯಾಲಯದ ವೀಕ್ಷಣಾಲಯದ ಸಮಯವನ್ನು ರಾಜ್ಯದ ಎಲ್ಲರೂ ಪಾಲಿಸುವಂತೆ ಹೇಳಿತು.

ಈ ಎಲ್ಲಾ ವೀಕ್ಷಣಾಲಯಗಳ ಸಮಯದ ಮಧ್ಯೆ ಅಂತರವಿರುತ್ತಿದ್ದುದರಿಂದ, ಈ ರೀತಿಯ ಅಣತಿಗಳಿಂದಾಗಿ, ಮತ್ತೊಮ್ಮೆ ರೈಲ್-ವೇ ಕಂಪೆನಿಗಳಿಗೆ ಹಳೆಯ ತೊಂದರೆ ಮತ್ತೊಮ್ಮೆ ಎದುರಾಯಿತು. ಈ ಬಾರಿ ಅವರು, ಇಡೀ ದೇಶಕ್ಕೇ ಒಂದು ಸಮಯದ ಸ್ಟಾಂಡರ್ಡ್ ನಿರೂಪಿಸುವಂತೆ ಕೇಂದ್ರ ಸರ್ಕಾರದ ಮೊರೆಹೊಕ್ಕರು.

ಅಮೆರಿಕದಲ್ಲಿ, ಇಂತಹದೊಂದು ರಾಷ್ಟ್ರೀಯ ಮಾನದಂಡವನ್ನು ನಿರೂಪಿಸಲು ಮೊದಲ ಬಾರಿಗೆ ಪ್ರಯತ್ನಿಸಿದವನು ಫ್ರೆಡರಿಕ್ ಬಾರ್ನಾರ್ಡ್ ಎನ್ನುವ ವ್ಯಕ್ತಿ. ಅಮೆರಿಕದ ಪ್ರಖ್ಯಾತ ಕೊಲಂಬಿಯಾ ವಿಶ್ವವಿದ್ಯಾಲಯದ ಅಧ್ಯಕ್ಷನಾಗಿದ್ದ ಬಾರ್ನಾರ್ಡ್, ಅಮೆರಿಕದ ಮೆಟ್ರೋಲಾಜಿಕಲ್ ಸೊಸೈಟಿಯ ಸಂಸ್ಥಾಪಕನೂ ಸಹ. ವಸ್ತು, ಸಮಯಗಳನ್ನು ಅಳೆಯುವಲ್ಲಿ, ವಿವಿಧ ದೇಶಗಳು ತಮ್ಮದೇ ಆದ ಮಾನದಂಡಗಳನ್ನು ಹೊಂದಿರುವುದು ಅಂತರ ರಾಷ್ಟ್ರೀಯ ವಾಣಿಜ್ಯಕ್ಕೆ ಮಾರಕವೆಂದೇ ಬಗೆದಿದ್ದ ಅವನು, ೧೮೭೩ರ ಡಿಸೆಂಬರಿನಲ್ಲಿ ಒಂದು ತಂಡವನ್ನು ಮಾಡಿ, ಒಂದು ಅಂತರ ರಾಷ್ಟ್ರೀಯ ಮಾನದಂಡವನ್ನು ನಿರೂಪಿಸುವಂತೆ ಕರೆ ಇತ್ತ. ಆ ತಂಡದ ಒಂದು ಗುರಿ, ಜೀ಼ರೋ ಮೆರಿಡಿಯನ್ ಎಲ್ಲಿರಬೇಕೆಂದು ನಿರ್ಧರಿಸುವುದು.

ಮುಂದಿನ ವರ್ಷಗಳಲ್ಲಿ ಈ ತಂಡ ಬೆಳೆಯತೊಡಗಿತು. ಮೊದಲಿಗೆ ಅಮೆರಿಕನ್ನರಷ್ಟೇ ಇದ್ದ ಈ ತಂಡಕ್ಕೆ, ಬ್ರಿಟನ್, ಫ್ರಾನ್ಸ್, ರಷಿಯಾ, ಇಟಲಿ, ಬ್ರಜಿಲ್ ಸೇರಿದಂತೆ, ಹಲವಾರು ದೇಶಗಳ ಪ್ರತಿನಿಧಿಗಳು ಸೇರಿಕೊಂಡರು. ಆದರೆ, ಈ ಜೀ಼ರೋ ಡಿಗ್ರಿ ಮೆರೆಡಿಯನ್ ಎಲ್ಲಿರ ಬೇಕೆಂಬ ಒಮ್ಮತ ಮಾತ್ರ ಮೂಡಲಿಲ್ಲ. ಇಟಲಿಯವರು ಇದು ನೇಪಲ್ಸಿನಲ್ಲಿರಬೇಕೆಂದರೆ, ರಷ್ಯನ್ನರು ಇದು ತಮ್ಮ ಸೆಂಟ್ ಪೀಟರ್ಸ್‌ಬರ್ಗ್‌ ನಲ್ಲಿ ಇರಬೇಕೆಂದರು. ಫ್ರಾನ್ಸ್‌ ನವರ ಪ್ರಕಾರ ಇದು ಕೇಪ್ ವೆರ್ಡೆಯಲ್ಲಿರಬೇಕಿದ್ದರೆ, ಬ್ರಜಿಲ್‌ ನವರ ಪ್ರಕಾರ ಇದು ರಿಯೋ ಡಿ ಜನೈರೋ ದಲ್ಲಿರಬೇಕು. ಇಂತಹ ಒತ್ತಾಯ ಮಾಡದಿದ್ದರವರೆಂದರೆ ಅಮೆರಿಕನ್ನರು ಮಾತ್ರ. ಅವರ ಪ್ರಕಾರ, ಬ್ರಿಟನ್ನಿನ ಗ್ರೀನಿಚ್ ಇದಕ್ಕೆ ಸೂಕ್ತವಾದ ಜಾಗವಾಗಿತ್ತು.

ಗ್ರೀನಿಚ್ ಇದಕ್ಕೆ ಸೂಕ್ತವೆನ್ನಲು ಕಾರಣವೂ ಇತ್ತು. ಹತ್ತೊಂಬತ್ತನೆಯ ಶತಮಾನದ ಅಂತ್ಯದ ವೇಳೆಗೆ, ವಿಶ್ವದ ಅತ್ಯಂತ ಬಲಿಷ್ಠ ಮತ್ತು ವಿಶಾಲ ಸಾಮ್ರಾಜ್ಯವೊಂದಿದ್ದರೆ ಅದು ಬ್ರಿಟನ್ನೇ ಆಗಿತ್ತು. ವಿಶ್ವದ ನಾನಾ ಸಾಗರಗಳಲ್ಲಿ ಯಾನ ಮಾಡುತ್ತಿದ್ದ ನೌಕೆಗಳು ಬ್ರಿಟನ್ನಿನ್ನ ಯೂನಿಯನ್ ಜಾಕ್ ಧ್ವಜಗಳನ್ನು ಹಾರಿಸುತ್ತಿದ್ದವಷ್ಟೇ ಅಲ್ಲ, ಅವುಗಳಲ್ಲಿದ್ದ ಗಡಿಯಾರಗಳು ಗ್ರೀನಿಚ್ ಸಮಯವನ್ನೇ ತೋರುತ್ತಿದ್ದವು. ಅದೂ ಅಲ್ಲದೆ, ಗ್ರೀನಿಚ್‌ನ ಖಗೋಳ ವೀಕ್ಷಣಾಲಯ ಆ ಕಾಲದ ಅತ್ಯಂತ ಸುಸ್ಸಜ್ಜಿತ ವೀಕ್ಷಣಾಲಯಗಳಲ್ಲಿ ಒಂದಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಈ ಜೀ಼ರೋ ಡಿಗ್ರಿ ಮೆರೆಡಿಯನ್ ಎಂಬುದು ಕೇವಲ ಸಂಕೇತ ಮಾತ್ರ, ಅದಕ್ಕೆ ಇನ್ನಾವುದೇ ಮೌಲ್ಯವೂ ಇಲ್ಲವೆಂದು ಅಮೆರಿಕನ್ನರು ಪ್ರಜ್ಞಾಪೂರ್ವಕವಾಗಿ ತಿಳಿದಿದ್ದರು. ಅವರಿಗೆ ಬೇಕಿದ್ದುದು, ವಾಣಿಜ್ಯದ ಹರಿವನ್ನು ಸುಲಭಗೊಳಿಸುವ ಮಾನದಂಡವಷ್ಟೇ, ಅದರ ಆರಂಭ ತಮ್ಮ ದೇಶದಿಂದಲೇ ಆಗಬೇಕೆಂಬ ಪ್ರತಿಷ್ಠೆಯಲ್ಲ. (ಇಷ್ಟರ ಮಧ್ಯೆ ಅಮೆರಿಕನ್ನರು, ತಮ್ಮ ರಾಷ್ಟ್ರವನ್ನು ನಾಲ್ಕು ಟೈಮ್ ಜ಼ೋನ್‌ ಗಳಾಗಿ ವಿಂಗಡಿಸಿ, ಒಂದು ಟೈಮ್ ಜ಼ೋನ್‌ ನವರು ಅಲ್ಲಿನ ಸಮಯವನ್ನೇ ಪಾಲಿಸುವ ಪದ್ಧತಿ ಜಾರಿಗೆ ತಂದಿದ್ದರು. ತಮ್ಮ ದೇಶದ ಸಮಸ್ಯೆಯನ್ನು ಬಹು ಮಟ್ಟಿಗೆ ನೀಗಿಸಿಕೊಂಡಿದ್ದ ಅವರು, ಅಂತರ ರಾಷ್ಟ್ರೀಯ ವಾಣಿಜ್ಯದ ಕಡೆಗೆ ಗಮನ ಹರಿಸಲಾರಂಭಿಸಿದ್ದರು)

ಅಕ್ಟೋಬರ್ ೧, ೧೮೮೪ರಂದು ವಿಶ್ವದ ೨೪ ದೇಶಗಳ ಪ್ರತಿನಿಧಿಗಳು, ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯ ವಿದೇಶಾಂಗ ಕಚೇರಿಯ ಸಭಾಂಗಣವೊಂದರಲ್ಲಿ ನೆರೆದರು. ವಿಷದವಾದ ಚರ್ಚೆಯ ನಂತರ, ಜೀ಼ರೋ ಡಿಗ್ರಿ ಮೆರೆಡಿಯನ್ ಎಲ್ಲಿರಬೇಕೆಂಬ ವಿಷಯದ ಕುರಿತು ಮತ ಹಾಕಲಾಯಿತು. ೨೧ ದೇಶಗಳು ಗ್ರೀನಿಚ್‌ ಅನ್ನು ಒಪ್ಪಿದವು. ಫ್ರಾನ್ಸ್ ಮತ್ತು ಬ್ರೆಜಿಲ್ ಸೇರಿದಂತೆ ಮೂರು ದೇಶಗಳು ಒಪ್ಪಲಿಲ್ಲ. (ಬ್ರಿಟನ್ನಿನ ಗ್ರೀನಿಚ್‌ ನಲ್ಲಿ ಆರಂಭವಾಗುವ ಈ ಇಂಟರ್ ನ್ಯಾಷನಲ್ ಟೈಮ್ ಸ್ಟಾಂಡರ್ಡ್‌ಗೆ ಫ್ರಾನ್ಸ್ ಕೊನೆಗೂ ಸೇರಿಕೊಂಡಿದ್ದು ೧೯೧೧ರಲ್ಲಿ)

ಆ ದಿನ, ಅಲ್ಲಿ ನೆರೆದಿದ್ದ ಪ್ರತಿನಿಧಿಗಳು ನಿರ್ಧರಿಸಿದ್ದು ಕೇವಲ ಜೀ಼ರೋ ಡಿಗ್ರಿ ಮಾತ್ರವಲ್ಲ. ಸಮಯಕ್ಕೆ ಸಂಬಂಧಿಸಿದ ಹಲವಾರು ಮಹತ್ವದ ವಿಚಾರಗಳು ಚರ್ಚೆಗೆ ಬಂದವು. ಉದಾಹರಣೆಗೆ, ದಿನದ ಆರಂಭ ಸೂರ್ಯೋದಯದಿಂದಲೋ ಅಥವಾ ಮಧ್ಯರಾತ್ರಿ ಹನ್ನೆರಡರಿಂದಲೋ ಎಂಬಂತಹುದು. ಇಂತಹ ವಿಷಯಗಳಿಗೆ ಧಾರ್ಮಿಕ, ವೈಜ್ಞಾನಿಕ ಮತ್ತು ಅನುಕೂಲಸಿಂಧು ಆಯಾಮಗಳೂ ಇದ್ದವು. (ಖಗೋಳ ಶಾಸ್ತ್ರಜ್ಞರು ದಿನದ ಆರಂಭವನ್ನು ಸೂರ್ಯೋದಯದಿಂದಲೇ ಮಾಡುವುದು ಲೇಸೆಂದರು. ಏಕೆಂದರೆ, ಬಹುಮಟ್ಟಿಗೆ ರಾತ್ರಿಯಷ್ಟೇ ಕಾರ್ಯ ತತ್ಪರರಾಗುತ್ತಿದ್ದ ಅವರಿಗೆ, ಮಧ್ಯರಾತ್ರಿಯಲ್ಲಿ ದಿನ ಬದಲಾಗುವುದರಿಂದ ಮಧ್ಯರಾತ್ರಿಯ ನಂತರ ಸಮಯದ ಜೊತೆಗೇ ದಿನವನ್ನೂ ದಾಖಲಿಸ ಬೇಕಿತ್ತು. ಆದರೆ, ಟರ್ಕಿಯ ಪ್ರತಿನಿಧಿ, ತಾವು ಶತಮಾನಗಳಿಂದ ಅನುಸರಿಸುತ್ತಿರುವ ಇಸ್ಲಾಮಿಕ್ ಸಂಸ್ಕೃತಿಯಲ್ಲಿ ದಿನದ ಆರಂಭವಾಗುವುದು ರಾತ್ರಿಯಲ್ಲೇ ಆಗಿರುವುದರಿಂದ, ಖಗೋಳಶಾಸ್ತ್ರಜ್ಞರ ಬೇಡಿಕೆಯನ್ನು ಒಪ್ಪಲಿಲ್ಲ)

ಇಂದು ಭಾರತದ ಭಾರತದ ಕಾಲಮಾನ ಗ್ರೀನಿಚ್‌ ಗಿಂತ ಐದೂವರೆ ಗಂಟೆಗಳ ಮುಂದಿದೆ. ಆದರೆ, ನಾವಾರೂ, ಈ ಗ್ರೀನಿಚ್‌ ಬಗೆಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಸಮಯದ ಮಾನದಂಡ ನಮ್ಮನ್ನಾಳುತ್ತಿದ್ದ ಬ್ರಿಟನ್ನಿನ ಗ್ರೀನಿಚ್‌ ನಿಂದ ಪ್ರಾರಂಭವಾಗುವುದು ನಮಗೆ ಬ್ರಿಟಿಷ್ ಇಂಪೀರಿಯಲಿಸಂನ ಸಂಕೇತವೆಂದೇನೂ ಕಾಡುವುದಿಲ್ಲ. (ನನ್ನ ದೃಷ್ಟಿಯಲ್ಲಿ ಅದು ಸರಿ ಸಹ)

ಆದರೆ, ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ, ಗ್ರೀನಿಚ್ ವೀಕ್ಷಣಾಲಯ, ಸೂರ್ಯ ಮುಳುಗದ ಸಾಮ್ರಾಜ್ಯವಾಗಿದ್ದ ಬ್ರಿಟನ್ನಿನ ಉತ್ತುಂಗತೆಯ ಸಂಕೇತಗಳಲ್ಲಿ ಒಂದಾಗಿತ್ತು, ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಸೆಂಟರಿನ ಗಗನ ಚುಂಬಿ ಕಟ್ಟಡಗಳು ಅಮೆರಿಕದ ಪಾರಮ್ಯದ ಸಂಕೇತಗಳಾಗಿದ್ದಂತೆ.

ಸೆಪ್ಟೆಂಬರ್ ೧೧, ೨೦೦೧ರಂದು ಒಸಾಮಾ ಬಿನ್ ಲ್ಯಾಡೆನ್‌ ನ ಭಯೋತ್ಪಾದಕರು ವರ್ಲ್ಡ್ ಟ್ರೇಡ್ ಸೆಂಟರ್ ಅನ್ನು ವಿಮಾನಗಳಿಂದ ಹೊಡೆದುರುಳಿಸಿದಾಗ, ನಾನು ಅಕ್ಷರಷಃ ಅದರ ಕೆಳಗಿದ್ದ ಸಬ್-ವೇ ಟ್ರೇನಿನಲ್ಲಿ ಕುಳಿತಿದ್ದೆ. ನಂತರದ ದಿನಗಳಲ್ಲಿ, ಅದರ ಬಗೆಗೆ ಬಹಳಷ್ಟು ಯೋಚಿಸಿದ್ದೇನೆ; ಹಲವಾರು ಲೇಖನ, ವರದಿ, ವಿಶ್ಲೇಷಣೆ, ಪುಸ್ತಕಗಳನ್ನು ಓದಿದ್ದೇನೆ. ಅದರಲ್ಲಿ ಬ್ರಿಟಿಷ್ ಲೇಖಕ ಜೋಸೆಫ್ ಕಾನ್ರಾಡ್ ಬರೆದಿರುವ “ದ ಸೀಕ್ರೆಟ್ ಏಜೆಂಟ್” ಎನ್ನುವ ಕಾದಂಬರಿಯೂ ಒಂದು. ಈ ಪುಸ್ತಕ ೧೯೦೭ರಲ್ಲೇ ಪ್ರಕಟವಾದರೂ, ಅದು ೯/೧೧ರ ಮಾರಣಹೋಮದ ನಂತರ ಮತ್ತೊಮ್ಮೆ ಜನಮನದಲ್ಲಿ ಮರಳಿತು. ಅದು ಕಾದಂಬರಿಯೇ ಆದರೂ, ವಾಸ್ತವದಲ್ಲಿ ನಡೆದ ಘಟನೆಯೊಂದರ ಆಧಾರದ ಮೇಲೆ ಬರೆದಂತಹ ಕಥಾನಕ.

ಆ ಕಾದಂಬರಿಯ ಹಿಂದಿನ ವಾಸ್ತವ ಇದು: ಗ್ರೀನಿಚ್ ಅನ್ನು ಜೀ಼ರೋ ಡಿಗ್ರಿ ಮೆರಿಡಿಯನ್ ಆಗಿ ಒಪ್ಪಿದ ಹತ್ತು ವರ್ಷದ ನಂತರ, ೧೮೯೪ರಲ್ಲಿ, ಮಾರ್ಷಲ್ ಬೌರ್ಡೀನ್ (Martial Bourdin) ಎನ್ನುವ ಫ್ರೆಂಚ್ ವ್ಯಕ್ತಿಯೊಬ್ಬ, ಗ್ರೀನಿಚ್ ವೀಕ್ಷಣಾಲಯವನ್ನು ನಾಶಮಾಡಲು ಸ್ಫೋಟಕ ವಸ್ತುಗಳೊಂದಿಗೆ ಬಂದ. ಅವನ ಈ ಕೃತ್ಯದಲ್ಲಿ ವೀಕ್ಷಣಾಲಯಕ್ಕೆ ಅಷ್ಟೇನೂ ಹಾನಿಯಾಗದಿದ್ದರೂ, ಆ ವಿಸ್ಫೋಟದಲ್ಲಿ ತಾನೇ ತೀವ್ರವಾಗಿ ಗಾಯಗೊಂಡು, ಕೊನೆಗೆ ಸಾವನ್ನಪ್ಪಿದ.

ಕಾನ್ರಾಡ್ ತನ್ನ ಕಾದಂಬರಿಯಲ್ಲಿ, ಹಿರಿಮೆಯ ಸಂಕೇತವೊಂದನ್ನು, ಆತ್ಮಾಹುತಿಯ ಮೂಲಕ ಅಳಿಸುವ ಈ ರೀತಿಯ ಪ್ರಯತ್ನವನ್ನು ಮಾನವ ತರ್ಕಕ್ಕೆ ಸಿಲುಕದ ಹೆಡ್ಡತನದಂತೆ ಬಿಂಬಿಸುತ್ತಾನೆ.

ಗ್ರೀನಿಚ್ಚಿನಲ್ಲಿ ಜೀ಼ರೋ ಡಿಗ್ರಿ ಮೆರಿಡಿಯನ್ ಇದ್ದರೆ, ಅದರ ಎದುರಿನಲ್ಲಿ ೧೮೦ ಡಿಗ್ರಿ ಮೆರಿಡಿಯನ್ ಇದೆ. ಅದು, “ಇಂಟರ್ ನ್ಯಾಷನಲ್ ಡೇಟ್ ಲೈನ್” ಸಹ. ಈ ರೇಖೆಯ ಒಂದು ಬದಿಗೆ ಒಂದು ದಿನವಾದರೆ, ಇನ್ನೊಂದು ಬದಿಗೆ ಇನ್ನೊಂದು ದಿನ. ಭೂಪಟದಲ್ಲಿ ನೋಡಿದರೆ, ಈ ರೇಖೆ ಅಂಕು-ಡೊಂಕುಗಳನ್ನು ಹೊಂದಿರುವುದನ್ನು ನಾವು ಕಾಣಬಹುದು. ಇದಕ್ಕೆ ಕಾರಣವೂ ಇದೆ. ಈ ರೇಖೆಯನ್ನು ನೇರವಾಗಿ ಎಳೆದಿದ್ದರೆ, ರಷ್ಯಾದ ಸೈಬೀರಿಯಾದ ಒಂದೇ ಪ್ರದೇಶವನ್ನು ಅದು ಎರಡಾಗಿಸುತ್ತದೆ. ಇದರಿಂದ, ಒಂದೇ ಊರಿನ, ಒಂದೇ ರಸ್ತೆಯ ಒಂದು ಭಾಗದಲ್ಲಿ ಕಾಣುವುದು ಇಂದಿನ ಸೂರ್ಯನಾದರೆ, ಇನ್ನೊಂದರಲ್ಲಿ ಕಾಣುವುದು ನಾಳಿನ ಸೂರ್ಯ! ಇಂತಹ ವೈಚಿತ್ರ್ಯವನ್ನು ತಡೆಗಟ್ಟಲು ಕೆಲವೊಂದು ಜಾಗಗಳಲ್ಲಿ, ಅಲ್ಲಿನ ಸರ್ಕಾರಗಳ ಅಣತಿಯಂತೆ, ಇದನ್ನು ಎಡಕ್ಕೋ-ಬಲಕ್ಕೋ ಬಗ್ಗಿಸಲಾಗಿದೆ.

ಪ್ಯಾಸಿಫಿಕ್ ಮಹಾಸಾಗರದಲ್ಲಿರುವ ಸಮೋಆ ದ್ವೀಪ ಸಮೂಹದ ದೇಶದಲ್ಲಿ, ೨೦೧೧ರದ ಡಿಸೆಂಬರ್ ೩೦ರಂದು, ಯಾರೂ ಊಟಮಾಡಲೇ ಇಲ್ಲ, ನಿದ್ರೆ ಮಾಡಲೇ ಇಲ್ಲ, ಕೊನೆಗೆ ಉಸಿರೂ ಸಹ ಆಡಲಿಲ್ಲ. ಏಕೆಂದರೆ ಅವರ ಕ್ಯಾಲೆಂಡರಿನಲ್ಲಿ ಆ ದಿನವೇ ಇಲ್ಲ!

೧೮೯೨ರಿಂದ ಅಮೆರಿಕದ ಛತ್ರಛಾಯೆಯಲ್ಲಿ ಬೆಳೆದಿದ್ದ ಸಮೋಆ, ಅಮೆರಿಕದ ದಿನವನ್ನೇ ತನ್ನದಾಗಿಸಿಕೊಂಡು, ಇಂಟರ್ ನ್ಯಾಷನಲ್ ಡೇಟ್ ಲೈನ್‌ ನ ಬಲಬದಿಯಲ್ಲಿತ್ತು. ಆದರೆ, ಈ ಶತಮಾನದಲ್ಲಿ, ಹತ್ತಿರದ ಆಸ್ಟ್ರೇಲಿಯಾ ಮತ್ತು ನ್ಯೂಜಿ಼ಲ್ಯಾಂಡುಗಳೊಡನೆ ವಾಣಿಜ್ಯ-ವಹಿವಾಟುಗಳು ಬೆಳೆದಂತೆ, ಸಮೋಆ ಸರ್ಕಾರಕ್ಕೆ, ಆಸ್ಟ್ರೇಲಿಯಾಗೆ ಹತ್ತಿರವಾಗುವುದು ಒಳಿತೆಂದು ತೋರಿತು. ಅಲ್ಲಿನ ಪ್ರಧಾನಮಂತ್ರಿ ಹೇಳಿದಂತೆ, “ನಾವು ಭಾನುವಾರವೆಂದು ಚರ್ಚಿನಲ್ಲಿದ್ದರೆ, ಆಸ್ಟ್ರೇಲಿಯಾದ ಬ್ರಿಸ್ಬೇನಿನಲ್ಲಿ ಜನರು ಸೋಮವಾರದ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಇದು ಸರಿಯಲ್ಲ” ಹೀಗಾಗಿ, ೨೦೧೧ರಲ್ಲಿ ಅವರು ಡಿಸೆಂಬರ್ ೩೦ ದಿನಾಂಕವನ್ನೇ ಕ್ಯಾಲೆಂಡರಿನಿಂದ ರದ್ದು ಮಾಡಿದರು. ಅವರ, ಆ ವರ್ಷದ ಕ್ಯಾಲೆಂಡರಿನಲ್ಲಿ ಡಿಸೆಂಬರ್ ೨೯ರ ನಂತರದ ದಿನ, ಡಿಸೆಂಬರ್ ೩೧. ಸಮೋಆ, ಆ ದಿನ, ಇಂಟರ್ ನ್ಯಾಷನಲ್ ಡೇಟ್ ಲೈನ್‌ ನ ಬಲಬದಿಗೆ ಬಂದಿತು.

ಕಾಲವನ್ನು ಅನುಕೂಲಕ್ಕೆ ತಕ್ಕಂತೆ ಈ ರೀತಿ ಬಗ್ಗಿಸುವುದನ್ನು ನೋಡಿ ಫಿಲಿಯಾಸ್ ಫಾಗ್ ಮೆಚ್ಚುಗೆಯ ನಗೆ ಬೀರಬಹುದೇನೋ…

(ಮುಂದುವರೆಯುವುದು)