ನಿರರ್ಗಳ ನಿರೂಪಣೆ ಕರಗತವಾಗಿರುವ ಲೇಖಕಿಯ ಕತೆಗಳು ಅನಾಯಾಸವಾಗಿ ಓದಿಸಿಕೊಂಡು ಹೋಗುತ್ತವೆ. ಈ ನಿರೂಪಣೆಯ ಉತ್ಸಾಹದಿಂದ ಮುಂದುವರಿಯುವ ಲೇಖಕಿ ಕೆಲವು ಕತೆಗಳ ಅಂತ್ಯದಲ್ಲಿ ತೀರ್ಪುಗಾರಿಕೆ ಕೈಗೆತ್ತಿಕೊಳ್ಳುತ್ತಾರೆ. ಉದಾಹರಣೆಗೆ “ಸಿಂಗಾರಳ್ಳಿ ಗಣಪತಿ” “ಕಾಣೆ” ಕತೆಗಳ ಅಂತ್ಯದಲ್ಲಿ ಪಾತ್ರಗಳ ಕುರಿತ ವ್ಯಾಖ್ಯೆ. ಈ ವಾಚ್ಯತೆ ಅದುವರೆಗಿನ ಕಥನ ಶೈಲಿಯ ನವಿರುಗಾರಿಕೆಯನ್ನು ಮೊಂಡಾಗಿಸಿ ವರದಿಯ ಸ್ವರೂಪ ತಳೆಯುತ್ತದೆ. ಹಾಗೆಯೇ ಕಥನ ಪ್ರಸ್ತುತಪಡಿಸುವಲ್ಲಿ ವಿಭಿನ್ನ ತಂತ್ರಗಳನ್ನು ಅಳವಡಿಸಿಕೊಂಡಲ್ಲಿ ವೈವಿಧ್ಯತೆ ಲಭಿಸುತ್ತದೆ.
ಶಾರದಾ ಮೂರ್ತಿ ಬರೆದ “ಪಲಾಯನ ಮತ್ತು ಇತರೆ ಕಥೆಗಳು” ಕಥಾಸಂಕಲನದ ಕುರಿತು ಕೆ.ಆರ್. ಉಮಾದೇವಿ ಉರಾಳ ಬರಹ

ಶಾರದಾ ಮೂರ್ತಿಯವರ ವಿವಿಧ ಲೇಖನಗಳು ಕತೆ ಕವಿತೆಗಳು ವಿವಿಧ ಪತ್ರಿಕೆಗಳಲ್ಲಿ, ಅವುಗಳ ವಿಶೇಷಾಂಕಗಳಲ್ಲಿ ಬೆಳಕು ಕಾಣುತ್ತಲೇ ಇರುತ್ತವೆ. ಆಕಾಶವಾಣಿಯಲ್ಲೂ ಇವರ ಹಲವಾರು ಕತೆಗಳು ಪ್ರಸಾರವಾಗಿವೆ. ಹಲವಾರು ದೇಶಗಳನ್ನೂ ಕುಟುಂಬದವರೊಂದಿಗೆ ಸುತ್ತಿ ಬಂದಿರುವವರು ಶಾರದಾ ಮೂರ್ತಿಯವರು. ಬರವಣಿಗೆಯ ಕ್ಷೇತ್ರಕ್ಕೆ ತಡವಾಗಿ ಪಾದಾರ್ಪಣೆ ಮಾಡಿದವರು. ಆದರೂ ಆತ್ಮವಿಶ್ವಾಸದಿಂದ ಭರವಸೆ ಉತ್ಸಾಹದಿಂದ ಮುಂದುವರಿಯುತ್ತಾ ಬಂದು “ಪಲಾಯನ ಮತ್ತು ಇತರ ಕಥೆಗಳು” ಎಂಬ ಮೊದಲ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ

“ಪಲಾಯನ ಮತ್ತು ಇತರ ಕತೆಗಳು” ಕಥಾ ಸಂಕಲನದಲ್ಲಿ ಒಟ್ಟು ಹತ್ತೊಂಬತ್ತು ಕತೆಗಳಿವೆ. ಲೇಖಕಿಯ ಲವಲವಿಕೆಯ ನಿರೂಪಣಾ ಶೈಲಿಯಿಂದಾಗಿ ಎಲ್ಲವೂ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಲೇಖಕಿ ತಮ್ಮ ಬಾಳಿನ ಗತಕಾಲದ ಅವಲೋಕನದಿಂದ ಹೆಕ್ಕಿ ತೆಗೆದ ಘಟನಾವಳಿಗಳು, ಪಾತ್ರಗಳು, ಅಂದಿನಕಾಲದ ಸನ್ನಿವೇಶ ಪರಿಸ್ಥಿತಿ ಮೌಲ್ಯಗಳು, ಸಂಬಂಧಗಳ ನಡುವಿನ ಬಂಧ, ಆ ಕಾಲದ ಜನರ ನಿರೀಕ್ಷೆಗನುಗುಣವಾದ ನಿರ್ಣಯಗಳು ಇವನ್ನೆಲ್ಲ ಕತೆಯಲ್ಲಿ ಸೂಕ್ತವಾಗಿ ಹೆಣೆದು ಸಮಂಜಸವಾದ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ಇದರಿಂದಾಗಿ ಈ ಕತೆಗಳ ಓದು ಆಪ್ಯಾಯಮಾನವಾಗಿಯೇ ಸಾಗುತ್ತದೆ. ಈ ಕತೆಗಳ ಕತಾ ನಾಯಕಿಯರು ಹೆಣ್ಣು ಕುಟುಂಬಕ್ಕೆ ಹೊರೆ, ಬೇಗ ಮದುವೆ ಮಾಡಿ ಕಳಿಸಿಕೊಡಬೇಕು ಎಂಬಂತಹ ಲಿಂಗ ಅಸಮಾನತೆಯ ವಾತಾವರಣದಲ್ಲಿ ಬೆಳೆದವರಾದರೂ ತಂತಮ್ಮ ಬಾಳಿನ ಬವಣೆಗಳಿಂದ ಬಸವಳಿದಾಗ ಸಾಂಪ್ರದಾಯಿಕ ಸಮಾಜದ ಕಟ್ಟುಪಾಡುಗಳನ್ನು ತಣ್ಣಗೆ ಬದಿಗೆ ಸರಿಸಿ ಆತ್ಮ ವಿಶ್ವಾಸದಿಂದ ಮುಂದೆ ಸಾಗಿದವರು.

(ಶಾರದಾ ಮೂರ್ತಿ)

“ತಪ್ಪಿಲ್ಲ” ಕತೆಯ ನಾಯಕಿಯರಾದ ಸಾವಿತ್ರಿ ಮತ್ತು ಮೀನಾ ಇಂತಹ ಶೋಷಣೆಯ ಬಲಿಪಶುಗಳು. ಅವರಲ್ಲಿ ಮೀನಾ ಸಂಪ್ರದಾಯದ ಶೃಂಖಲೆಗೆ ತಲೆ ಬಾಗದೇ ತನ್ನ ಸುಖ ತಾನು ಕಂಡುಕೊಳ್ಳುವ ದಾರಿಯಲ್ಲಿ ಮುನ್ನಡೆಯುತ್ತಾಳೆ. ಸಾವಿತ್ರಿ ಅದೇ ವ್ಯವಸ್ಥೆಯ ಬಲಿಪಶುವಾಗಿದ್ದವಳು. ಆದರೆ ಅವಳು ಹೃತ್ಪೂರ್ವಕವಾಗಿ ಮೀನಾಳ ದಿಟ್ಟತನವನ್ನು ಬೆಂಬಲಿಸುತ್ತಾಳೆ. ಶೀರ್ಷಿಕೆಯ ಕತೆ “ಪಲಾಯನ” ದ ನಾಯಕಿ ಪತಿ ವಿಧಿಸುವ ಕಟ್ಟುಪಾಡುಗಳಿಗೆ ತಲೆಬಾಗಿ ಬಾಳು ಸಾಗಿಸುತ್ತಿದ್ದವಳು. ಶೋಷಣೆಯಿಂದಾಗಿ ಬಾಗಿದ ಬೆನ್ನನ್ನು ಬಾಗುವವರೆಗೂ ಬಾಗಿಸಿ, ಇನ್ನು ಬಾಗಲಾರೆನೆಂದಾದಾಗ ಎದೆ ಸೆಟೆಸಿ ಎದ್ದು ನಿಲ್ಲುತ್ತಾಳೆ. ಅವಳ ಮಗಳು ಅವಳನ್ನು ಬೆಂಬಲಿಸುತ್ತಾಳೆ. ಹೆಂಡತಿಯನ್ನು ಹದ್ದುಬಸ್ತಿನಲ್ಲಿಡುವುದೇ ತನ್ನ ವ್ಯಕ್ತಿತ್ವದ ಸಾರ ಎಂಬಂತಿದ್ದ ಪತಿ ಶೇಷಯ್ಯ ಹೆಂಡತಿ ಮಗಳ ಈ ಆತ್ಮಪ್ರತ್ಯಯದ ಪ್ರಭೆಯ ಝಳ ತಾಳಲಾರದೆ ಪಲಾಯನ ಮಾಡುತ್ತಾನೆ.

“ಭರವಸೆ” ಕತೆಯ ನಾಯಕಿ ಕವಿತಾ ಮನೆಯ ಒಳಗೂ ಹೊರಗೂ ಸಮರ್ಥವಾಗಿ ದುಡಿಯುತ್ತಾ ಅತ್ತೆ ಮಾವನ ಸೇವೆಯನ್ನೂ ನಿರ್ವಹಿಸುತ್ತಿದ್ದವಳು. ಗಂಡ ಮಾವನಿಂದ ಇವಳ ಮೇಲೆ ದಬ್ಬಾಳಿಕೆ. ಕ್ಲೀನರ್ ಪಾರ್ವತಿ ಇದೇ ವಿಧದ ಒತ್ತಡವನ್ನು ತಾನು ಚಾಣಾಕ್ಷತನದಿಂದ ಎದುರಿಸಿದ್ದನ್ನು ಹೇಳಿದಾಗ ಅವಳಿಂದ ಪ್ರೇರಿತಳಾಗುವ ಕವಿತಾಳನ್ನು ಅವಳ ಸ್ನೇಹಿತೆ ಮತ್ತು ಅತ್ತೆ ಬೆಂಬಲಿಸುತ್ತಾರೆ‌. ಇಲ್ಲಿ ಹೆಣ್ಣಿಗೆ ಹೆಣ್ಣೇ ಒತ್ತಾಸೆಯಾಗುವ ಚಿತ್ರಣವಿದೆ. ತನ್ನಾತ್ಮ ಬಲವೇ ತನಗೆ ಭರವಸೆಯ ಬೆಳಕಾಗುವುದನ್ನು ಕಾಣುತ್ತಾಳೆ ಕವಿತಾ.

“ಚೌಕಳಿ ಸೀರೆ” ಯುವಪಡೆಯ ಸಂಘ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಚಂದದ ನಿರೂಪಣೆಯಿಂದ ಪ್ರಾರಂಭವಾಗಿ ಚೌಕಳಿ ಸೀರೆಯೊಂದಕ್ಕಾಗಿ ಬಲಿಯಾದ ತುಂಗಾಳ ಸಾವಿನೊಂದಿಗೆ ಓದುಗರ ಮನ ಮಿಡಿಯುತ್ತದೆ. “ಕಾಣೆ” ಕತೆ ಆಧುನಿಕ ಬದುಕಿನ ವಂಚನೆಯ ಜಾಲವನ್ನು ತೆರೆದಿಡುತ್ತಾ, ಮಾನವೀಯತೆಯ ಸೆಲೆ ಇನ್ನೂ ಒಸರುತ್ತಿರುವ ಆಶಾವಾದಿತ್ವವನ್ನು ಬಿಂಬಿಸುತ್ತದೆ. “ಅಮ್ಮ” ಕತೆಯಲ್ಲಿ ತಾಯಿಯ ಕುರಿತ ಮಗಳ ಮಮತೆ ಉಕ್ಕಿ ಹರಿಯಲು ಕೇವಲ ಒಂದು ಸಂಭಾಷಣೆ, ಅದು ಪ್ರೇರಿಸಿದ ಗತ ಕಾಲದ ನೆನಪು ಕಾರಣವಾಗಿ ಅದೇ ಒಂದು ಕತೆ ಆಗಿದೆ.

ನಿರರ್ಗಳ ನಿರೂಪಣೆ ಕರಗತವಾಗಿರುವ ಲೇಖಕಿಯ ಕತೆಗಳು ಅನಾಯಾಸವಾಗಿ ಓದಿಸಿಕೊಂಡು ಹೋಗುತ್ತವೆ. ಈ ನಿರೂಪಣೆಯ ಉತ್ಸಾಹದಿಂದ ಮುಂದುವರಿಯುವ ಲೇಖಕಿ ಕೆಲವು ಕತೆಗಳ ಅಂತ್ಯದಲ್ಲಿ ತೀರ್ಪುಗಾರಿಕೆ ಕೈಗೆತ್ತಿಕೊಳ್ಳುತ್ತಾರೆ. ಉದಾಹರಣೆಗೆ “ಸಿಂಗಾರಳ್ಳಿ ಗಣಪತಿ” “ಕಾಣೆ” ಕತೆಗಳ ಅಂತ್ಯದಲ್ಲಿ ಪಾತ್ರಗಳ ಕುರಿತ ವ್ಯಾಖ್ಯೆ. ಈ ವಾಚ್ಯತೆ ಅದುವರೆಗಿನ ಕಥನ ಶೈಲಿಯ ನವಿರುಗಾರಿಕೆಯನ್ನು ಮೊಂಡಾಗಿಸಿ ವರದಿಯ ಸ್ವರೂಪ ತಳೆಯುತ್ತದೆ. ಹಾಗೆಯೇ ಕಥನ ಪ್ರಸ್ತುತಪಡಿಸುವಲ್ಲಿ ವಿಭಿನ್ನ ತಂತ್ರಗಳನ್ನು ಅಳವಡಿಸಿಕೊಂಡಲ್ಲಿ ವೈವಿಧ್ಯತೆ ಲಭಿಸುತ್ತದೆ. ಯಶಸ್ವೀ ಕತೆಗಾರ್ತಿಯಾಗಿ ರೂಪುಗೊಂಡಿರುವ ಲೇಖಕಿಯ ಮುಂದಿನ ಪ್ರಯತ್ನಗಳು ಇಂತಹ ಪ್ರಯೋಗಶೀಲತೆಯಿಂದ ಮತ್ತಷ್ಟು ಸಂಪನ್ನಗೊಳ್ಳಲಿ.

(ಕೃತಿ: ಪಲಾಯನ ಮತ್ತು ಇತರ ಕಥೆಗಳು (ಕಥಾ ಸಂಕಲನ), ಲೇಖಕರು: ಶಾರದಾ ಮೂರ್ತಿ, ಪ್ರಕಾಶಕರು: ಸಾಹಿತ್ಯ ಲೋಕ ಪಬ್ಲಿಕೇಷನ್ಸ್, ಬೆಲೆ: 125/-, ಪುಟಗಳು: 102)