ಸಿರಿಗೆ ಬಿಸ್ಕೆಟ್ ಅಂದರೆ ಅದೂ ಈ ಪಾರ್ಲೆ ಜಿ ಬಿಸ್ಕೆಟ್ ಎಂದರೆ ಎಂಥದೋ ಸೆಳೆತ. ಅವಳ ಅಪ್ಪ ಎಲ್ಲಿಯಾದರೂ ಹೋದವ ಮನೆಗೆ ಬರುವಾಗಲೆಲ್ಲ ಒಂದೊಂದು ಬಿಸ್ಕೆಟ್ ಪ್ಯಾಕೆಟ್ ತರುತ್ತಿದ್ದದ್ದು, ಮನೆಮಂದಿಗೆ ಹಂಚಿ ಕಡೆಗೆ ಉಳಿದಿರುವ ಒಂದೇ ಬಿಸ್ಕೆಟ್ ತಿಂದು ಇನ್ನಷ್ಟು ಬೇಕಿತ್ತು ಎಂದು ಅದೆಷ್ಟು ಸಲ ಅನಿಸುತ್ತಿತ್ತು.”
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕತೆಗಳ ಹತ್ತೊಂಬತ್ತನೆಯ ಕಂತು

ಕಾಡಿನ ನಡುವೆ ಇದ್ದ ಏಕೈಕ ಶಾಲೆಯ ಹೊರಗಡೆಯ ಕಟ್ಟೆಯ ಮೇಲೆ ಗೆಳತಿಯರೊಂದಿಗೆ ಕುಳಿತು ಕಲ್ಲಾಟವಾಡುತ್ತಿದ್ದ ಸಿರಿಗೆ ಆ ಊರಿನ ಪರಮೇಶ್ವರ ಹೆಗಡೆಯ ಮಗ ವಿಶ್ವೇಶ್ವರ ಅಂದರೆ ಶಿವು ಕಾಣೆಯಾಗಿದ್ದಾನೆ, ಮನೆಬಿಟ್ಟು ಓಡಿಹೋಗಿದ್ದಾನೆಂಬ ಸುದ್ದಿ ಕೇಳಿ ತಕ್ಷಣ ಅವಳಿಗೆ ಅನಿಸಿದ್ದು ಅವ ಗ್ಯಾರಂಟಿ ಬೆಂಗಳೂರಿನ ಬಿಸ್ಕೆಟ್ ಫ್ಯಾಕ್ಟರಿಗೇ ಹೋಗಿ ಸೇರಿಕೊಂಡಿರಬಹುದು ಎಂದು. ಹಾಗೆ ಸಿರಿಗೆಅನಿಸುವುದಕ್ಕೆ ಕಾರಣಗಳಿದ್ದವು. ಅದುವರೆಗೆ ಕನಿಷ್ಠ ಎಂದರೂ 7-8 ಜನವಾದರೂ ಓಡಿಹೋದವರ ಕತೆಯನ್ನು ಅವಳು ಕೇಳಿದ್ದಳು. ಸ್ವತಃ ಅವಳ ಅತ್ತೆಯ ಮಗ ಬಾವಯ್ಯ ಶಾಲೆಗೆ ಹೋಗಿಬರುತ್ತೇನೆಂದು ಹೋದವ ಮತ್ತೆ ಬಂದಿರಲಿಲ್ಲ. ಅದಕ್ಕಾಗಿ ಅವನ ಅಪ್ಪ –ಅಮ್ಮ ಕಣ್ಣೀರು ಹಾಕಿದ್ದೇ ಬಂತು. ಕಡೆಗೆ ಯಾರೋ ಹೇಳಿದರು ಅವನು ಬೆಂಗಳೂರಿನಲ್ಲಿ ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆಸೇರಿಕೊಂಡಿದ್ದಾನೆಂದು. ಅದೇ ರೀತಿ ಅವಳ ಊರಿನ ಸುಬ್ರಾಯ ಕೂಡ ಒಂದು ದಿನ ನಾಪತ್ತೆಯಾಗಿದ್ದ. ಅವ ಯಾಕೆ ನಾಪತ್ತೆಯಾಗಿದ್ದ ಎಂಬುದು ಅವಳಿಗೆ ಅಷ್ಟಾಗಿ ತಿಳಿಯದಿದ್ದರೂ ಮ್ಯಾಲಿನ ಮನೆಯ ಭಟ್ರಮನೆಯ ಮಾಲತಿ ಹೇಳಿದ್ದು ಅವಳಿಗೆ ನೆನಪಿದೆ. ಸುಬ್ಬಣ್ಣನ ಅಕ್ಕ ಸೀತೆ ಅದ್ಯಾವುದೋ ಪೈಕಿಯವನ ಕಟ್ಟಿಕೊಂಡು ಓಡಿ ಹೋದಳಂತೆ. ಮನೆಯಲ್ಲಿ ಅಪ್ಪ ಮೊದಲೇ ನೆಟ್ಟಗಿಲ್ಲದೆ ಅವನು ಯಾರದ್ದೋ ಹೆಂಗಸಿನೊಂದಿಗೆ ಊರಾಚೆಯ ತೋಟದಾಚೆಯ ಮನೆಯಲ್ಲಿ ಇರುತ್ತಾನಂತೆ. ಇದನ್ನೆಲ್ಲ ನೋಡಿದ ಅಮ್ಮ ಒಂದು ದಿನ ತೀರಿಹೋದಳು. ಈಗ ಇಡೀ ಸಂಸಾರದ ಜವಾಬ್ದಾರಿ ಅವನ ತಲೆಯ ಮೇಲೆ ಬಂದು ಅವನಿಗೆ ಇದ್ಯಾವುದೂ ನಿಭಾಯಿಸಲು ಸಾಧ್ಯವಾಗದೇ ಓಡಿ ಹೋದನೆಂದು ಹೇಳಿದ್ದಳು. ಆದರೆ ಕೆಲವು ದಿನಗಳನಂತರ ಇದೇ ಮಾಲತಿ ಹೇಳಿದ್ದು, ಬೆಂಗಳೂರಿನಲ್ಲಿರುವ ತನ್ನ ನೆಂಟರೊಬ್ಬರಿಗೆ ತಿಳಿದಿದೆಯಂತೆ. ಅವನೀಗ ಅಲ್ಲಿ ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಸೇರಿಕೊಂಡಿದ್ದಾನೆಂದು. ಅದನ್ನು ಕೇಳಿಯೇ ಸಿರಿಗೆ ರೋಮಾಂಚನವಾಗತೊಡಗಿತು.

“ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದರೆ ಎಷ್ಟು ಚೊಲೋ. ರಾಶಿ ಬಿಸ್ಕೆಟ್ ಸಿಗ್ತು ತಿಂಬಲೆ ಅಲ್ದಾ, ಅವಂಗೆಷ್ಟು ಚಾನ್ಸು ..” ಎಂದು ಶಾಲೆಗೆ ಹೋಗುತ್ತ ಬ್ಯಾಣದ ಎರಡೂ ಪಕ್ಕ ಇರುವ ಎದೆ ಮಟ್ಟಕ್ಕೆ ಬೆಳೆದ ಹುಲ್ಲನ್ನು ಹಿಡಿದೆಳೆಯುತ್ತ ಹೇಳಿದಳು. ಮಾಲತಿಗೂ ಹಾಗೇ ಅನಿಸಿ, “ಹೌದೇ, ಎಷ್ಟು ಚೊಲೊ ಅವಂಗೆ. ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಯಾರು ಹೋದ್ರೂ ಕೆಲ್ಸ ಕೊಡತ್ವಡ. ರಾಶಿ ರಾಶಿ ಬಿಸ್ಕೆಟ್ ತಯಾರಿಸೋದು, ಒಂದುಕಡೆಯಿಂದ ಮತ್ತೊಂದು ಕಡೆ ಬಕೆಟ್ ಗಟ್ಟಲೆ ಸಾಗಿಸೋದು, ಬಿಸ್ಕೆಟ್ ಮಾಡದು ಎಲ್ಲ ದೊಡ್ಡ ಕೆಲ್ಸವಡ. ಅದ್ನೆಲ್ಲಸುಬ್ಬಣ್ಣ ಮಾಡತ್ನಡ, ಅವಕ್ಕೆಲ್ಲ ಬಿಸ್ಕೆಟ್ ದುಡ್ಡು ಕೊಟ್ಟು ತಗಂಬದೇ ಬ್ಯಾಡ್ದಡ. ಬೇಕಾದಷ್ಟು ಕೊಡತ್ವಡ ಪುಕ್ಷಾಟೇಯ..ಎನ್ನ ಮಾವನ ಮಗ ಹೇಳಿದ’ ಎಂದು ತನಗೆಲ್ಲವೂ ಗೊತ್ತಿರುವಂತೆ ಮಾಲತಿ ಹೇಳುತ್ತಿದ್ದರೆ ಸಿರಿ ಆ ಬಿಸ್ಕೆಟ್ ತಯಾರಿಕೆಯಲ್ಲಿ ತಾನೂ ಸೇರಿಕೊಂಡಂತೆ, ತಾನೂ ಸಿಕ್ಕಾಪಟ್ಟೆ ಬಿಸ್ಕೆಟ್ ತಿಂದಂತೆ ಕನಸು ಕಾಣುತ್ತ ಶಾಲೆಗೆ ಹೋದಳು.

ಸಿರಿಗೆ ಬಿಸ್ಕೆಟ್ ಅಂದರೆ ಅದೂ ಈ ಪಾರ್ಲೆ ಜಿ ಬಿಸ್ಕೆಟ್ ಎಂದರೆ ಎಂಥದೋ ಸೆಳೆತ. ಅವಳ ಅಪ್ಪ ಎಲ್ಲಿಯಾದರೂ ಹೋದವ ಮನೆಗೆ ಬರುವಾಗಲೆಲ್ಲ ಒಂದೊಂದು ಬಿಸ್ಕೆಟ್ ಪ್ಯಾಕೆಟ್ ತರುತ್ತಿದ್ದದ್ದು, ಮನೆಮಂದಿಗೆ ಹಂಚಿ ಕಡೆಗೆ ಉಳಿದಿರುವ ಒಂದೇ ಬಿಸ್ಕೆಟ್ ತಿಂದು ಇನ್ನಷ್ಟು ಬೇಕಿತ್ತು ಎಂದು ಅದೆಷ್ಟು ಸಲ ಅನಿಸುತ್ತಿತ್ತು. ಯಾರಾದರೂ ನೆಂಟರು ಮನೆಗೆ ಬರುವುದಿದ್ದರೂ ತರುತ್ತಿದ್ದುದು ಇದೇ ಬಿಸ್ಕೆಟ್ಪ್ಯಾಕೆಟ್. ತಾನು ದೊಡ್ಡವಳಾದಾಗ ಬಿಸ್ಕೆಟ್ ಫ್ಯಾಕ್ಟರಿಯಲ್ಲೇ ಕೆಲಸ ಮಾಡಬೇಕು, ಆಗ ತುಂಬ ಬಿಸ್ಕೆಟ್ ತಿನ್ನಬಹುದೆಂದು ಕನಸುಕಾಣುತ್ತಿದ್ದವಳಿಗೆ ಈಗ ಸುಬ್ಬಣ್ಣ ಬಿಸ್ಕೆಟ್ ಫ್ಯಾಕ್ಟರಿಯಲ್ಲೇ ಕೆಲಸಕ್ಕೆ ಸೇರಿದ್ದಾನೆಂಬುದನ್ನು ಕೇಳಿಯೇ ಅವಳಿಗೆ ಖುಷಿಯಾಗಿ, ದಿವಸಕ್ಕೆ ಅವ ಎಷ್ಟು ಬಿಸ್ಕೆಟ್ ತಿನ್ನಬಹುದು ಎಂದೆಲ್ಲ ನೆನೆಸಿಕೊಂಡೇ ಇಲ್ಲಿ ಅವಳಿಗೆ ಬಾಯಲ್ಲಿ ನೀರೂರ ತೊಡಗಿತು.
ಅದು ಇಟಗಿಯ ಸಮೀಪದ ಕೆಲವೇ ಮನೆಗಳಿರುವ ಒಂದು ಪುಟ್ಟ ಹಳ್ಳಿ. ಸಿರಿ ಅಪ್ಪ, ಅಮ್ಮ, ಅಣ್ಣ ಎಲ್ಲ ಸೇರಿ ಅವರ ನೆಂಟರೊಬ್ಬರ ಮನೆಯಲ್ಲಿದ್ದರು. ಸಿರಿಯ ಹೆಸರು ಶ್ರೀದೇವಿ. ಅಪ್ಪ ಅಮ್ಮ ಪ್ರೀತಿಯಿಂದ ಸಿರಿ ಎಂದು ಕರೆದು ಕಡೆಗೆ ಅದೇ ಕಾಯಂ ಆಗಿತ್ತು. ಇಡೀ ಊರಿನಲ್ಲಿ ಮಾಲತಿಯೊಬ್ಬಳೇ ಅವಳಿಗಿದ್ದ ಏಕೈಕ ಗೆಳತಿಯಾಗಿದ್ದು, ಇಬ್ಬರೂ ಒಟ್ಟಿಗೇ ತೋಟ ದಾಟಿ, ಬ್ಯಾಣ ದಾಟಿ ಮೈಲುಗಟ್ಟಲೆ ದೂರವಿದ್ದ ಶಾಲೆಗೆ ಹೋಗಿಬಂದು ಮಾಡುತ್ತಿದ್ದರು. ಮನೆಯಲ್ಲಿ ಅಪ್ಪ ಹೆಚ್ಚಾಗಿರದ ಕಾರಣ ಸಿರಿ ಅಪ್ಪನೆಂದರೆ ಪ್ರೀತಿಯಾಗಿರುವುದು ಅಪ್ಪ ಜಾಸ್ತಿ ಮನೆಯಲ್ಲಿರುತ್ತಿರದ ಕಾರಣಕ್ಕಾಗಿಯೂ ಇದ್ದಿರಬಹದು. ಅಂತಹ ಅಪ್ಪ ಮೊದಲ ಬಾರಿಗೆ ಬಂದವ ಒಂದು ಬಿಸ್ಕೆಟ್ ಪ್ಯಾಕೆಟ್ಟನ್ನು ಕೊಟ್ಟದ್ದು ಇನ್ನೂ ನೆನಪಿದೆ. ಬಂದವ ಜಗುಲಿಯಮೇಲೆ ಕುಳಿತು, ಅವಳನ್ನು ತೊಡೆಯಮೇಲೆ ಕೂರಿಸಿಕೊಂಡು ಚೀಲದಿಂದ ಬಿಸ್ಕೆಟ್ ಪ್ಯಾಕೆಟ್ ಹೊರತೆಗೆದು ತನಗೆ ಕೊಟ್ಟ, ಅದು ಸಿಕ್ಕೊಡನೆಯೇ ಚಂಗನೆ ಅಲ್ಲಿಂದ ಓಟಕಿತ್ತು ಅಣ್ಣ, ಭಾವಂದಿರಿಗೆಲ್ಲ ತೋರಿಸಿ ತಿಂದಿದ್ದಳು. ಅದುವರೆಗೂ ಅಂಥದ್ದೊಂದು ತಿನ್ನದೇ ಇದ್ದ ಕಾರಣಕ್ಕಾಗಿ ಆ ರುಚಿಯನ್ನು ಅವಳೆಂದೂ ಮರೆಯಲಾರಳು.

ಅಪ್ಪ ಒಂದೇ ಪ್ಯಾಕೆಟ್ ತಂದ. ಇನ್ನೊಂದಿಷ್ಟು ತರಬಹುದಿತ್ತು ಎಂದು ಅನಿಸಿದ್ದು ಎಷ್ಟೋ ಸಲ. ಕಡೆಗೆಲ್ಲ ಅಪ್ಪ ಹೊರಗೆ ಹೋದವನು ಬರುವಾಗಲೆಲ್ಲ ಈ ಬಿಸ್ಕೆಟ್ ಪ್ಯಾಕೆಟ್ ತರುತ್ತಿದ್ದ. ಅಪ್ಪ ಬರುತ್ತಾನೆಂದರೆ ಬಿಸ್ಕೆಟ್ ಪ್ಯಾಕೆಟ್ ಬರುತ್ತದೆ ಎಂತಲೇ ಅರ್ಥ. ಆ ಪ್ಯಾಕೆಟ್ ಮೇಲೆ ಒಂದು ಪುಟ್ಟ ಹುಡುಗಿಯ ಚಿತ್ರವಿರುತ್ತಿತ್ತು. ಆ ಚಿತ್ರ ನೋಡಿದಾಗಲೆಲ್ಲ ಸಿರಿಗೆ ಇವಳು ಅಲ್ಲಿ ದಿನಕ್ಕೆ ಎಷ್ಟು ಬಿಸ್ಕೆಟ್ ತಿನ್ನಬಹುದು ಎಂದು ಯೋಚಿಸಿ, ತಾನೂ ಹೀಗೇ ಚಿತ್ರವಾಗಿ ಆ ಪ್ಯಾಕೆಟ್ ಮೇಲೆ ಕೂರಬೇಕೆನಿಸುತ್ತಿತ್ತು. ಆದರೆ ಅಲ್ಲಿಗೆ ಹೋಗುವುದು ಹೇಗೆಂದು ತಿಳಿಯದೇ ಇರುವ ಹೊತ್ತಲ್ಲಿ ಈ ಓಡಿ ಹೋದ ಬಾವಯ್ಯ ಮತ್ತು ಸುಬ್ಬಣ್ಣ ಎಲ್ಲ ಬೆಂಗಳೂರಿನ ಬಿಸ್ಕೆಟ್ ಫ್ಯಾಕ್ಟರಿಗೆ ಸೇರಿಕೊಂಡಿದ್ದಾರೆಂದು ತಿಳಿದು ಸಿರಿಗೆ ರೋಮಾಂಚನವಾಗಿತ್ತು. ಎಂದಾದರೊಂದು ದಿನ ತಾನೂ ಅಲ್ಲಿಗೆ ಹೋಗಿ ಸೇರಿ ಕೆಲಸಮಾಡಿ ಕೈತುಂಬ ಬಿಸ್ಕೆಟ್ ತಿನ್ನಬೇಕೆಂದು ಆಸೆಯಾಗುತ್ತಿತ್ತು ಕೂಡ.

ಹೀಗೆಲ್ಲ ಕನಸು ಕಾಣುತ್ತಿರುವಾಗಲೇ ಆ ಊರಿನ ಹೆಗಡೆಯವರ ಮಗ ಶಿವು ಓಡಿಹೋಗಿದ್ದಾನೆಂದು ತಿಳಿದೇ ಅವಳಿಗೆ ಪಕ್ಕಾ ಆಗಿಬಿಟ್ಟಿತ್ತು. ಇವ ಗ್ಯಾರಂಟಿ ಅಲ್ಲಿಗೇ ಹೋಗಿ ಸೇರಿಕೊಂಡಿದ್ದಾನೆಂದು.

ಅವತ್ತು ಮಧ್ಯಾಹ್ನ ಊಟವಾದ ನಂತರದ ಪಿಟಿ ಪಿರಿಯಡ್ ನಲ್ಲಿ ಎಲ್ಲರೂ ಆಟವಾಡುತ್ತಿರುವಾಗ, ಮಾಸ್ತರು ಜೋರು ಧ್ವನಿಯಲ್ಲಿ “ಬರಲಿ ಅವನು ಇವತ್ತು, ಮಾಡಿಸುತ್ತೇನೆ. ದಾಸಾಳ ಬರ್ಲು ಮುರಿದು ಹೋಪವಷ್ಟು ಹೊಡೆಯುತ್ತೇನೆ’ ಎಂದು ಅಬ್ಬರಿಸುತ್ತಿದ್ದರು. ಯಾಕೆ, ಏನಾಯಿತೆಂದು ಅರ್ಥವಾಗಲಿಲ್ಲ. ಅವನ ತಂಗಿ ಗಾಯತ್ರಿಯೂ ಸಿರಿಯ ಜೊತೆಗೆ ಆಟವಾಡುತ್ತಿದ್ದವಳೇ. ಅವಳು ಸಂಪೂರ್ಣ ಆಟದಲ್ಲೇ ತಲ್ಲೀನಳಾಗಿದ್ದಳು. ಮಾಸ್ತರರ ಜೊತೆಗೆ ನಾಲ್ಕೈದು ಹುಡುಗರು ಸೇರಿಕೊಂಡು “ಅವ ನಿನ್ನೆನೇ ಹೇಳುತ್ತಿದ್ದ ಸರ್. ನಾನು ನಾಳೆ ಬರುವುದಿಲ್ಲ. ಮನೆಬಿಟ್ಟು ಹೊರಡುತ್ತೇನೆಂದು ಎಂದೊಬ್ಬ ಹೇಳಿದರೆ, ಅವನಿಗೆ ಸಾಂಸ್ಕೃತಿಕ ಮಂತ್ರಿಯನ್ನು ಮಾಡಿದ್ದೇ ತಪ್ಪಾಯಿತು. ಏನೋ ಚೆನ್ನಾಗಿ ಹಾಡು ಹೇಳುತ್ತಾನೆ, ತಾಲೂಕಾ ಮಟ್ಟದಲ್ಲೆಲ್ಲ ಬಹುಮಾನ ಬಂದಿದೆ ಎಂದು ಅವನನ್ನುಸಾಂಸ್ಕೃತಿಕಮಂತ್ರಿಯನ್ನಾಗಿ ಮಾಡಿದರೆ ಇವ ಹೀಗೆಲ್ಲ ಮಾಡದ ಹಂಗರೆ… ಇಷ್ಟು ದೊಡ್ಡ ಹೆಗಡೇರ ಮಗ, ದೇವ್ರ ದುಡ್ಡು, ಹೀಂಗೆಲ್ಲ ಮಾಡತ್ನ ಹಂಗರೆ ಅವ…. ಬರ್ಲಿ ಬರ್ಲಿ ಅವ ಮಾಡಸ್ತೆ. ಇವತ್ತು ಅವನ ಬೆನ್ನು ಮುರಿಯುವಷ್ಟು ಹೊಡೇತೆ’ ಎಂದು ಅರ್ಧ ಪ್ಯಾಟೆ ಭಾಷೆ, ಮತ್ತರ್ಧ ಘಟ್ಟದ ಕೆಳಗಿನವರ ಭಾಷೆಯಲ್ಲಿ ಒಂದೇ ಸಮನೆ ಬಯ್ಯುತ್ತಿದ್ದರು.

ಅವರು ಮತ್ತು ಆ ಹುಡುಗರು ಮಾತನಾಡಿದ್ದರ ಮೇಲೆ ಸಿರಿ ಅರ್ಥೈಸಿಕೊಂಡದ್ದಿಷ್ಟೇ. ಬರುವ ಚೌತಿ ಹಬ್ಬಕ್ಕೆ ಗಣಪತಿಯನ್ನು ಕೂರಿಸಬೇಕಾಗಿತ್ತು. ಅದಕ್ಕಾಗಿ ಊರವರ ಬಳಿ ಈ ಹುಡುಗರೆಲ್ಲ ಸೇರಿ ದುಡ್ಡು ಸಂಗ್ರಹಿಸಿದ್ದರು. ಅದಷ್ಟೂ ದುಡ್ಡು ಸಾಂಸ್ಕೃತಿಕ ಮಂತ್ರಿ ಶಿವುನ ಹತ್ತಿರ ಇತ್ತು. ಅವ ನನ್ನ ಹತ್ರ ಇಷ್ಟು ದುಡ್ಡು ಇದೆ ಎಂದು ಸೊಕ್ಕಿನಿಂದ ಆ ಹುಡುಗರಿಗೆಲ್ಲ ತೋರಿಸುತ್ತಿದ್ದ. ಅದಕ್ಕೇ ಅವನ ಗೆಳೆಯ ಸುರೇಶ, ಸತೀಶ, ವೆಂಕಟ್ರಮಣ ಎಲ್ಲರೂ ಒಟ್ಟಾಗಿ, ಅವನಬಳಿ ಅಷ್ಟು ದುಡ್ಡಿದೆ ಎಂದು ತೋರಿಸಿದ್ದ ಸರ್ ಎಂದು ಮಾಸ್ತರ ಹತ್ರ ಚಾಡಿ ಹೇಳಿದ್ದರು. ಆದರೆ ಇದ್ಯಾವುದೂ ತನಗೆ ಸಂಬಂಧಿಸಿಯೇ ಇಲ್ಲದಂತೆ ಆಟದಲ್ಲಿ ಮಗ್ನಳಾಗಿದ್ದಳು ಗಾಯತ್ರಿ. ಮಧ್ಯಾ ಹ್ನದ ಇಳಿ ಬಿಸಿಲಿಗೆ ಕಾಡಿನ ಹಸಿರೆಲ್ಲ ಮತ್ತಷ್ಟು ಗಾಢವಾಗಿ ಹಸಿರು ಕಪ್ಪಾದಂತೆ ಅನಿಸಿತು ಸಿರಿಗೆ.

ಅವತ್ತು ಶಾಲೆ ಬಿಟ್ಟ ನಂತರ ಗಾಯತ್ರಿ ಜೊತೆಗೆ ಅವಳ ಮನೆಗೆ ಹೋದಳು ಸಿರಿ. ಕಾರಣ ಈ ಶಿವು ಅದಿಷ್ಟು ದುಡ್ಡು ತೆಗೆದುಕೊಂಡು ಎಲ್ಲಿಗೆ ಹೋಗಿರಬಹುದೆಂಬ ಕುತೂಹಲ ಅವಳಿಗೆ. ಅವರು ಆ ಮನೆಗೆ ಹೋಗಿ ತಲುಪುವಷ್ಟರಲ್ಲಿಯೇ ಅವರಿಗೆ ವಿಷಯ ಗೊತ್ತಾಗಿತ್ತು. ಬಿಳಿಪಂಚೆ, ಕಸೆ ಅಂಗಿಯನ್ನು ಹಾಕಿಕೊಂಡ ಪರಮೇಶ್ವರಣ್ಣೆ ಅಷ್ಟೊತ್ತಿಗೇ ಕೆಂಡಾಮಂಡಲವಾಗಿದ್ದ. ಇಷ್ಟೊತ್ತಾದ್ರೂ ಮನೆಗೆ ಬರದ ಮ, ಮಗನ ಮೇಲೆ ಬಂದ ಆಪಾದನೆ ಎಲ್ಲವೂ ಸೇರಿ ಅವನನ್ನು ಕೆರಳಿಸಿತ್ತು. ಒಂದೇ ಸಮನೆ ಇವನ ಬೈಗುಳ, ಅಳುತ್ತ ಕೂತಿದ್ದ ತಾಯಿ ಶರಾವತಕ್ಕ. ಇಡೀ ಮನೆ ಒಂಥರ ಮೌನವಾಗಿ ರೋದಿಸುತ್ತಿರುವಂತೆ ಭಾಸವಾಗುತ್ತಿತ್ತು.

“ಅವ ಎಂತಕ್ಕೆ ಹೋದ ಹಂಗರೆ? ಸಂಜೆ ನಾಲ್ಕು ಘಂಟೆ ಗಾಡಿನ ಹತ್ತಿದ್ನಡ… ಎತ್ಲಗೋಗತ್ಯ ತಮಾ ಎಂದು ಕೇಳಿದ್ದಕ್ಕೆ, ಪ್ಯಾಟಿಗೆ ಹೋಗ್ತಿ ಹೇಳಿ ಬಸ್ಸು ಹತ್ತಿದ್ನಡ… ನೋಡಿದವ್ರು ಒಂದಿಬ್ರು ಹೇಳ್ದ ಎಂಗೆ..” ಎಂದ ಎಂದು ಬೇಸರದಿಂದಲೇ ಪರಮೇಶ್ವರಣ್ಣ ಹೇಳುತ್ತಿದ್ದರೆ, ಸಿರಿ ಮೆಲ್ಲಗೆ ಬಾಯಿಬಿಟ್ಟಳು, ಮಾಸ್ತರು ಹೇಳಿದ್ದು, ಮಿಕ್ಕ ಹುಡುಗರೆಲ್ಲ ಹೇಳಿದ್ದು ಎಲ್ಲವನ್ನೂ. ಅರೆ ಇದ್ಯಾವುದೂ ನಿಂಗೆ ಗೊತ್ತಾಯ್ದಿಲ್ಯನೆ ಹಂಗರೆ ಎಂದು ಗಾಯತ್ರಿಯನ್ನು ಅವಳ ಅಪ್ಪ ಅಮ್ಮ ಇಬ್ಬರೂ ಒಟ್ಟಿಗೇ ಕೇಳಿದರು. “ನೋಡು, ಇದು ಬ್ಯಾರೇರಮನೆ ಕೂಸು. ಅಂಥದ್ದರಲ್ಲಿ ಇದನ್ನೆಲ್ಲ ಕೇಳಿಸಕ್ಯಂಡಿದ್ದು, ನೀಅವನ ತಂಗಿ. ನಿಂಗೆ ಜ್ಞಾನ ಇಲ್ಯ” ಎಂದು ಜೋರು ಮಾಡಿ, ಅದ್ಯಾವುದನ್ನೂ ಕೇಳಿಸಿಕೊಳ್ಳದೆ ತನ್ನ ಪಾಡಿಗಿದ್ದ ಗಾಯತ್ರಿಗೆ ಒಂದೆರೆಡು ಪೆಟ್ಟನ್ನು ಕೊಟ್ಟು ಅವಳು ಹೋ ಎಂದು ಅಳುತ್ತಿರುವ ಹೊತ್ತಿಗೆ, ಅವಳ ತಾಯಿಯೂ ಇನ್ನಿಬ್ಬರು ಅಕ್ಕಂದಿರೂ ಎಲ್ಲರೂ ಅಳುವ ಹೊತ್ತಿಗೆ ಪರಮೇಶ್ವರಣ್ಣನ ಸಿಟ್ಟು ನೆತ್ತಿಗೇರಿ ಎಲ್ಲರೂ ಬಾಯ್ ಮುಚ್ಚಿಕ್ಯಳ್ರೇ…ಇಲ್ದಿದ್ರೆ ನಿಂಗಕ್ಕಿಗೂ ಬಾರುಕೋಲು ತಗಬತ್ತಿ ಎಂದು ಜೋರುಮಾಡಿದ ಮೇಲೆ, ಶಬ್ದಮಾತ್ರ ಹೊರಡಿಸದೇ ಒಳಗೊಳಗೇ ಕಾಣದಂತೆ ಕಣ್ಣೀರು ಹರಿಸಿಕೊಂಡು ಒಳನಡೆದರು. ಇತ್ತ ಪರಮೇಶ್ವರಣ್ಣ ದೀಪ ಹಚ್ಚುವ ಮೂರುಸಂಜೆಯ ಆ ಹೊತ್ತು ಕತ್ತಲೆಯಲ್ಲೇ ಅಂಗಳದಲ್ಲಿ ಅತ್ತಿಂದಿತ್ತ ಓಡಾಡತೊಡಗಿದ. ಮಗ ಬರುತ್ತಾನೆ, ಅವನ ಬೆನ್ನ ಮೇಲೆ ಬಾಸುಂಡೆ ಏಳುವಂತೆ ಬಾರುಕೋಲಿನಿಂದ ಹೊಡೆಯುತ್ತೇನೆಂಬ ತಹತಹಿಕೆಯಲ್ಲಿರುವವನಂತೆ. ಸಿರಿಗೆ ಈ ಅಳು, ಇವನ ಸಿಟ್ಟೂ ಎರಡನ್ನೂ ನೋಡಿ, ಏನು ಮಾಡಬೇಕೆಂದು ತಿಳಿಯದೇ ಮನೆಯ ಹಾದಿ ಹಿಡಿದಳು.

ಇದೆಲ್ಲ ಆಗಿ ಒಂದು ವಾರವಾದರೂ ಶಿವುನ ಸುಳಿವಿರಲಿಲ್ಲ. ಶಾಲೆಯಲ್ಲಿ ಮಾಸ್ತರು ಬೈದೂ ಬೈದೂ ಸುಸ್ತಾಗಿ ಸುಮ್ಮನಾಗಿದ್ದರು. ಮನೆಯಲ್ಲಿ ಅವನಮ್ಮ ಮಾತ್ರ ಈಗಲೂ ಕಣ್ಣೀರು ಹಾಕುತ್ತಿದ್ದಳು. ಅಪ್ಪ ಆಗೀಗ ನೆನಪಾದಾಗ ಮಾತ್ರ ಬೈದು ಸಮಾಧಾನಪಟ್ಟುಕೊಳ್ಳುತ್ತಿದ್ದ. ಆದರೆ ಸಿರಿಗೆ ಮಾತ್ರ ಅವಳಿಗೆ ಗ್ಯಾರಂಟಿ ಅನಿಸುತ್ತಿತ್ತು, ಈ ಶಿವು ಬಿಸ್ಕೆಟ್ ಫ್ಯಾಕ್ಟರಿಗೇ ಸೇರಿಕೊಂಡಿದ್ದಾನೆಂದು. ಯಾವುದಾದ್ರೂನೆಂಟರ ಮನೆಗೆ ಹೋಗಿದ್ದಿದ್ದರೆ, ಅಥವಾ ಇನ್ನೆಲ್ಲಿಗೋ ಹೋಗಿದ್ದಿದ್ದರೆ ಖಂಡಿತ ಇಷ್ಟೊತ್ತಿಗೆ ಬಂದುಬಿಡುತ್ತಿದ್ದ. ಆದರೆ ಇನ್ನೂ ಅವ ಬರಲಿಲ್ಲವೆಂದರೆ ಅವ ಸೇರಿಕೊಂಡಿದ್ದು ಅಲ್ಲಿಗೇ ಎಂದು ಅವಳಿಗೆ ಖಾತರಿಯಾಗಿತ್ತು. ಬೇಕಾದಷ್ಟು ತಿನ್ನಲು ಸಿಗುತ್ತದೆ ಎಂದಮೇಲೆ ಅವನ್ಯಾಕೆ ವಾಪಾಸು ಇಲ್ಲಿಗೆ ಬರುತ್ತಾನೆಂದು ಯೋಚಿಸಿದ್ದಲ್ಲದೆ, ಅದನ್ನು ಗಾಯತ್ರಿಗೂ, ಮಾಲತಿಗೂ ಹೇಳಿದ್ದಳು ಕೂಡ. ಬೇಕಿದ್ದರೆ ನೋಡು, ಅವ ದೊಡ್ಡವನಾದ ಮೇಲೆ ಪ್ಯಾಂಟು ಷರ್ಟು ಹಾಕಿಕೊಂಡು ಬರ್ತ. ಆಗ ರಾಶಿ ರಾಶಿ ಬಿಸ್ಕೆಟ್ ನೂ ತಂದುಕೊಡ್ತ ನೋಡು..’ ಎಂದಿದ್ದಳು.

ಸಿರಿ ಹಾಗೆ ಹೇಳುವುದಕ್ಕೂ ಒಂದು ಕಾರಣವಿತ್ತು. ನಾಲ್ಕಾರು ವರ್ಷಗಳ ಹಿಂದೆ ಅವಳ ಅತ್ತೆಯ ಮಗ ಬಾವಯ್ಯ ಹೀಗೆ ಓಡಿಹೋದವನು ಎಷ್ಟು ದಿವಸಗಳಾದರೂ ಬಂದಿರಲೇ ಇಲ್ಲ. ಅವನ ಅಮ್ಮನೂ ಇದೇರೀತಿ ಅತ್ತೂ ಕರೆದೂ ಮಾಡಿ, ಕಡೆಗೆ ಮಗನ ಆಸೆಬಿಟ್ಟಮೇಲೆ, ದಿಢೀರಂತ ಒಂದು ದಿನ ತಾನು ಅವರ ಮನೆಗೆ ಹೋದಾಗಲೇ ಬಂದದ್ದು. ಓಡಿಹೋಗುವುದಕ್ಕಿಂತ ಮುಂಚೆ ಲುಂಗಿ ಉಡುತ್ತಿದ್ದ ಭಾವಯ್ಯ ತಿರುಗಿ ಬಂದಾಗ ಪ್ಯಾಂಟು ಶರ್ಟು ಹಾಕಿಕೊಂಡು, ಟಿಪ್ ಟಾಪಾಗಿಬಂದಿದ್ದ. ಆದರೆ ಬಾವಯ್ಯ ಕಡೆಗೆಂದೂ ಬಿಸ್ಕೆಟ್ ಫ್ಯಾಕ್ಟರಿಯತ್ತ ಮುಖಮಾಡಿದವನಲ್ಲ. ಮನೆಯಲ್ಲೇ ತೋಟ ಗದ್ದೆ ನೋಡಿಕೊಂಡಿದ್ದ. ಅವ ಯಾಕೆ ಹೋಗಲಿಲ್ಲ ಎಂದು ಸಿರಿಗೆ ಆಶ್ಚರ್ಯವಾಗಿ, ಹಲವು ಬಾರಿ ಕೇಳಿದ್ದಿದೆ, “ನೀ ಎಂತಕ್ಕೆ ಮತ್ತೆ ಬಿಸ್ಕೆಟ್ ಫ್ಯಾಕ್ಟರಿಗೆ ಹೋಗ್ತಿಲ್ಲೆ. ಆನೂ ಬರ್ಲಾ. ಎನ್ನೂ ಅಲ್ಲಿಗೆ ಕರೆದುಕೊಂಡು ಹೋಗು” ಎಂದು ಕೇಳಿದ್ದಳು ಆಸೆಯಿಂದ. “ಅಯ್ಯೋ ಮಾರಾಯ್ತಿ. ಮಕ್ಕಳೆಲ್ಲ ಅಲ್ಲಿಗೆ ಹೋದೆ ಅಷ್ಟೇಯ” ಎಂದು ಏನನ್ನೋ ನೆನೆಸಿಕೊಂಡು ತುಂಬ ಬಡೀ ಮುಖ ಮಾಡಿಕೊಂಡು ಹೇಳಿದ್ದ. ಅದನ್ನು ನೆನೆದೇ ಸಿರಿ ಗೆಳತಿಯರಿಗೆಲ್ಲ ಹೇಳಿದ್ದು, ಅವನು ಅಲ್ಲಿಗೇ ಹೋಗಿದ್ದಾನೆಂದು.. ಆದರೆ ಅವ ಹೋಗಿ ನಾಲ್ಕೈದು ತಿಂಗಳು, ವರ್ಷಗಳು ಕಳೆದರೂ ಬರಲಿಲ್ಲ. ಅಲ್ಲಿಗೆ ಸಿರಿಗೆ ಬಿಸ್ಕೆಟ್ ನ ಆಸೆಯೇ ಕೈಬಿಟ್ಟಂತಾಗಿತ್ತು. ಯಾಕೆಂದರೆ ಅವಳು, ಅವ ಬಂದ ಮೇಲೆ ಹೇಗಾದರೂ ಪತ್ತೆಹಚ್ಚಿ ತಾನೂ ಅಲ್ಲಿಗೆ ಹೋಗಬೇಕೆಂದೆಲ್ಲ ಲೆಕ್ಕ ಹಾಕಿದ್ದಳು. ಅದಕ್ಕಾಗಿ ಕೆಲವು ಸಿದ್ಧತೆಯನ್ನೂ ಮಾಡಿಕೊಂಡಿದ್ದಳು. ಅಪ್ಪ ಅಮ್ಮನಿಗೆ ಹೇಳುವುದೇ ಬೇಡ, ತಾನು ಅಲ್ಲಿಗೆ ಹೋಗುತ್ತೇನೆಂದು. ಹೇಗಿದ್ದರೂ ಅಪ್ಪ ಅಂತೂ ಮನೆಯಲ್ಲಿರುವುದಿಲ್ಲ. ಹಾಗಾಗಿ ತಾನು ಹೋದರೂ ಅಪ್ಪನಿಗೆ ತಿಳಿಯುವುದಿಲ್ಲ. ಅಮ್ಮ ಹೊಂಬಾಳೆ ಹೆಕ್ಕಲು ತೋಟಕ್ಕೆ ಹೋದಾಗ ಮೆಲ್ಲನೆ ಗಾಡಿಬಿಡಬೇಕು… ಹೀಗೆ ಏನೇನೋ ಲೆಕ್ಕಗಳು ಅವಳ ತಲೆಯ ಒಳಗೆ. ಆದರೆ ಈ ಶಿವು ಬರದೇ ಅವಳ ಪ್ಲಾನೆಲ್ಲ ಉಲ್ಪಾಪಲ್ಟಾ ಆಗಿತ್ತು. ಅವರೆಲ್ಲ ನಿಜಕ್ಕೂ ಬಿಸ್ಕೆಟಿನ ಆಸೆಗೇ ಓಡಿಹೋಗಿದ್ದರಾ ಅಥವಾ ಬೇರೆ ಯಾವುದಕ್ಕಾದರೂ ಇದ್ದಿರಬಹುದಾ ಎಂದೆಲ್ಲ ಒಮ್ಮೊಮ್ಮೆ ಅನಿಸುತ್ತಿತ್ತು. ಅದಕ್ಕೆ ಸರಿಯಾಗಿ ಮಾಲತಿ ಹೇಳಿದ ಸುಬ್ರಾಯಣ್ಣನ ಕತೆ ಕೇಳಿದ ಮೇಲೆ ಇವ ಮಾತ್ರ ಬಿಸ್ಕೆಟ್ ನ ಆಸೆಗೆ ಹೋದವನೇ ಅಲ್ಲ, ಆದರೂ ಅವನಿಗೆಂಥ ಚಾನ್ಸು ಅಂತ ಅಂದುಕೊಂಡಳು.

ಹೀಗೆಲ್ಲ ಇರುವಾಗಲೇ ಸಿರಿಯೇ ಆ ಊರನ್ನು ಬಿಡುವಂಥ ಸಂದರ್ಭ ಬಂತು. ಆ ಹಳ್ಳಿಯಿಂದ ಅಪ್ಪ ಅಮ್ಮನ ಸಮೇತ ಅವರು ಸಿದ್ದಾಪುರಕ್ಕೆ ಬಂದು, ಸಿದ್ದಾಪುರವೆಂಬ ಪೇಟೆಯಲ್ಲಿ ಇರಬೇಕಾಗಿ ಬಂದು ಅಲ್ಲಿಯೇ ಶಾಲೆಗೆ ಹೋಗಬೇಕಾಗಿ ಬಂದದ್ದೂ ಒಂದು ಹೊಸ ಜಗತ್ತೇ ತೆರೆದುಕೊಂಡಂತಾಗಿತ್ತು ಸಿರಿಯ ಪಾಲಿಗೆ. ಅಲ್ಲಿಂದ ಇಲ್ಲಿಗ್ಯಾಕೆ ಬಂದರು ಎಂಬುದು ಅವಳಿಗೆ ತಿಳಿದಿರಲಿಲ್ಲ. ಆದರೆ ಈ ಶಾಲೆಗೆ ಹೋಗುವಾಗ, ಸಿದ್ದಾಪುರದ ಬೀದಿ ಬದಿಯ ಅಂಗಡಿಗಳಲ್ಲೆಲ್ಲ ಅಪ್ಪ ತರುತ್ತಿದ್ದ ಪಾರ್ಲೆ ಜಿ ಬಿಸ್ಕೆಟ್ ಪುಟ್ಟ ಪ್ಯಾಕೆಟ್ ಮಾತ್ರವಲ್ಲ, ಪುಟ್ಟದು, ದೊಡ್ಡದು, ಉದ್ದದು, ಉಪ್ಪು, ಸಿಹಿ .. ಹೀಗೆ ವೈವಿಧ್ಯಮಯ ಬಿಸ್ಕೆಟ್ ಗಳನ್ನು ಅಂಗಡಿಗಳಲ್ಲಿ ನೋಡಿ ಎಷ್ಟೊಂದು ಫ್ಯಾಕ್ಟರಿಗಳಿರಬಹುದಾ? ಅಥವಾ ಒಂದೇ ಪ್ಯಾಕ್ಟರಿಯಲ್ಲೇ ಇದಿಷ್ಟೂ ತಯಾರಾಗುತ್ತದಾ ಎಂದು ಯೋಚಿಸಿ, ಇಲ್ಲಿ ಎಲ್ಲಾದರೂ ಒಂದು ಕಡೆಯಾದರೂ ತನಗೆ ಕೆಲಸ ಸಿಗಬಹುದಾ ಎಂದು ಕೇಳಿಕೊಂಡಳು ತನ್ನಷ್ಟಕ್ಕೆ ತಾನೆ. ಆಗ ಸಿರಿ ಐದನೇ ಕ್ಲಾಸ್ ನಲ್ಲಿ ಓದುತ್ತಿದ್ದಳು.
ಆದರೆ ಓಡಿ ಹೋಗಿದ್ದವರ ಪೈಕಿ ಬಾವಯ್ಯ, ಸುಬ್ಬಣ್ಣ ಎಲ್ಲ ವಾಪಾಸು ಬಂದಿದ್ದರೂ ಈ ಶಿವುನ ಪತ್ತೆ ಮಾತ್ರ ಆಗಿರಲೇ ಇಲ್ಲ. ಅದೇ ಹೊತ್ತಿಗೆ ಇನ್ನು ಅನೇಕರು ಓಡಿಹೋದವರ ಕತೆಯನ್ನೂ ಕೇಳಿದ್ದಳು ಸಿರಿ. ಇಷ್ಟೆಲ್ಲ ಕತೆಗಳ ನೆನಪಿನೊಂದಿಗೆ ಅವಳು ಸಿದ್ದಾಪುರದ ಬೀದಿಗಳಲ್ಲಿಯೂ ಶಿವುನನ್ನು ಹುಡುಕುತ್ತಿದ್ದಳು. ಎಂದಾದರೊಂದು ದಿನ ಅವನ ಬಿಸ್ಕೆಟ್ ನೊಂದಿಗೆ ಇಲ್ಲಿ ಪ್ರತ್ಯಕ್ಷನಾದಾನಾ ಎಂದು.

ಆದರೆ ಹೀಗೆ ಕೆಲವು ವರ್ಷಗಳು ಕಳೆದು ಅವಳು ಐದರಿಂದ ಆರನೇ ತರಗತಿಗೆ ಬರುವ ಹೊತ್ತಿಗೆ ಇವೆಲ್ಲವೂ ಮರೆತು ಹೋಗಿ, ಪಕ್ಕಾ ಪ್ಯಾಟೆಯವಳೇ ಆಗಿರುವಾಗಲೇ ಒಂದು ಘಟನೆ ನಡೆಯಿತು. ಆಗ ಶಿವು ಥಟ್ಟನೆ ನೆನಪಾಗುವುದಕ್ಕೆ ಕಾರಣವಿತ್ತು.

6ನೇ ತರಗತಿಯಲ್ಲಿರುವಾಗ ನಾಲ್ಕಾರು ಹುಡುಗರು, ಹುಡುಗಿಯರೂ ಸೇರಿ ಒಂದು ದೊಡ್ಡ ಗೆಳೆಯ ಗೆಳತಿಯರ ಬಳಗವೇ ಅವಳೊಂದಿಗಿತ್ತು. ಕಿರಣ್, ಸುಧೀರ, ಶಾಮಲಾ, ಸವಿತಾ, ಗೌರಿ, ಮಂಗಳಾ, ಟೋನಿ ಹೀಗೆ ಹತ್ತಾರು ಸ್ನೇಹಿತರ ಗುಂಪೇ ಇತ್ತು. ಈ ಗುಂಪಿನಲ್ಲಿ ಶೆಲ್ಲಿ ಎಂಬುವಳು ತುಂಬ ಪಾಪದವಳಾಗಿದ್ದಳು. ಗುಡ್ಡದ ತುದಿಯಿಂದ ಶಾಲೆಗೆ ಬರುತ್ತಿದ್ದ ಶೆಲ್ಲಿ, ಅವಳಜ್ಜಿ ಜೊತೆ ಇರುತ್ತಿದ್ದಳು. ತಲೆಯನ್ನು ಒಮ್ಮೆಯೂ ಬಾಚಿಕೊಳ್ಳದ ಅವಳ ತಲೆ ಜಿಡ್ಡುಗಟ್ಟಿ ಜಡೆ ಬೆಳೆದು ಬಾಚಲಾರದ ಸ್ಥಿತಿಗೆ ಬಂದುಬಿಟ್ಟಿತ್ತು. ಪ್ರತಿಸಲವೂ ಶಾಲೆಗೆ ಬಂದಾಗ ಅಕ್ಕೋರ ಹತ್ರ ಬೈಸಿಕೊಳ್ಳುತ್ತಿದ್ದಳು, ಎಣ್ಣೆಹಾಕಿ ಎರಡು ಜಡೆ ಹೆಣೆದು ಎತ್ತಿ ಕಟ್ಟುವುದಿಲ್ಲ ಮತ್ತು ಪದೇಪದೆ ಶಾಲೆ ತಪ್ಪಿಸಿಕೊಳ್ಳುತ್ತಾಳೆ ಎಂದು ಅಕ್ಕೋರು ಬಯ್ಯುತ್ತಿದ್ದರು. ಅದಿಕ್ಕೇ ಪ್ರತಿಸಲ ಅವಳನ್ನು ಸ್ವಲ್ಪ ಹೊರಗೆ ನಿಲ್ಲಿಸುತ್ತಿದ್ದರು ಅಕ್ಕೋರು.

ಹೀಗೆ ಜಿಡ್ಡುಗಟ್ಟಿದ ತಲೆ, ಕಾಜುಗಣ್ಣಿನ ಶೆಲ್ಲಿ ಬೆಳ್ಳಗೆ ಇದ್ದಳು. ಅವಳ ಎರಡೂ ಕೆನ್ನೆಗಳನ್ನು ನೋಡಿದಾಗಲೆಲ್ಲ ಸಿರಿಗೆ ಅಂಗಡಿಯಲ್ಲಿ ಸಿಗುವ ಬೋಟಿಯ ನೆನಪಾಗುತ್ತಿತ್ತು. ಅವಳ ಕೆನ್ನೆಯನ್ನು ಮುಟ್ಟಿದರೆ ಬೋಟಿಯಂತೆ ಒಡೆದು ಚೂರಾಗಿಬಿಡಬಹುದು ಎನಿಸುವಷ್ಟು ಅವಳ ಚರ್ಮ ತೆಳ್ಳಗೆ ಇತ್ತು. ಆದರೆ ಶೆಲ್ಲಿಗೆ ಅಪ್ಪ ಅಮ್ಮ ಇರಲಿಲ್ಲ. ಎಷ್ಟೋ ದಿವಸ ಹಸಿವೆಯಿಂದ ಅವಳು ಶಾಳೆಗೆ ಬಂದು ಅಳುತ್ತಿದ್ದಳು ಕೂಡ.

ಶೆಲ್ಲಿ ಈ ಅಜ್ಜಿಯ ಮಗನ ಮಗಳು. ಮಗ ತುಂಬ ಕುಡಿಯುತ್ತಿದ್ದ. ಮಳ್ಳನ ಹಾಗೆ ಮಾತನಾಡುತ್ತಿದ್ದ. ಅವನ ಹೆಂಡತಿ ಈ ಶೆಲ್ಲಿ ಹುಟ್ಟಿ ಒಂದೆರೆಡು ವರ್ಷಗಳಲ್ಲಿ ಯಾರದ್ದೋ ಜೊತೆ ಓಡಿಹೋಗಿದ್ದಳು. ಅಲ್ಲಿಂದ ಅಜ್ಜಿಯೇ ಇವಳನ್ನು ಸಾಕುತ್ತಿದ್ದಳು. ಅವರಿವರ ಮನೆಯ ಕೆಲಸ ಮಾಡಿ. ಅವಳ ಅಪ್ಪ ತಲೆಕೆಟ್ಟವನಂತೆ ಇಡೀ ದಿನ ರಸ್ತೆಯಲ್ಲೇ ಇರುತ್ತಿದ್ದ. ಯಾವಾಗ ಈ ಸಿರಿ ಕಂಡರೂ ಪಾಸು.. ಎಂದು ಕೇಳುತ್ತಿದ್ದ. ಇವಳು ಹೂ ಎಂದು ತಲೆ ಅಲ್ಲಾಡಿಸಿದ ಕೂಡಲೇ ಚಾನ್ಸು ಹೊಡೆದ ಹ… ಎನ್ನುತ್ತಿದ್ದ. ಅವನೂ ಶೆಲ್ಲಿಯಂತೆಯೇ ಬೆಳ್ಳಗಿದ್ದ. ಅವನು ಸದಾ ರೋಮಿನ ಪೋಪ್ ಬಗ್ಗೆ ಮಾತನಾಡುತ್ತಿದ್ದ. ಒಮ್ಮೆಯಾದರೂ ತಾನು ರೋಮ್ ಗೆ ಹೋಗಬೇಕು. ಅಲ್ಲಿಯ ಚರ್ಚ್ ನೋಡಿ ತಾನು ಸಾಯಬೇಕು ಎನ್ನುತ್ತಿದ್ದ. ಇವ ಸಾಯುವುದಾದರೆ ರೋಮ್ ಗ್ಯಾಕೆ ಹೋಗಬೇಕು ಎನಿಸುತ್ತಿತ್ತು ಸಿರಿಗೆ. ಸಿದ್ದಾಪುರದ ನಂತರದ ಒಂದೇಒಂದು ಊರನ್ನೂ ಕೇಳಿರದ ಸಿರಿಯಂತವಳಿಗೆ ಈ ರೋಮ್ ಎಂಬ ಪದ ಇತಿಹಾಸದ ಪುಸ್ತಕದಲ್ಲಿ ಮಾತ್ರ ಓದಿ, ಇದು ಯಾವುದೋ ಲೋಕ ಎಂದು ತಿಳಿದಿದ್ದರೆ, ಇವ ಅಲ್ಲಿಗೇ ಹೋಗುತ್ತಾನೆನ್ನುತ್ತಾನಲ್ಲ ಎಂದು ಆಶ್ಚರ್ಯವೆನಿಸುತ್ತಿತ್ತು.

ಸಿರಿಯ ಮನೆ ಶೆಲ್ಲಿಯ ಮನೆಯ ಸಮೀಪವೇ ಇತ್ತು. ಒಂದುಸಲ ಬೆಳಗ್ಗೆ ಸಿರಿ ಶಾಲೆಗೆ ಹೊರಡುವ ಗಡಿಬಿಡಿಯಲ್ಲಿದ್ದಳು. ಅದು ಮಾಗಿಯ ಚಳಿಗಾಲ. ಸಿಕ್ಕಾಪಟ್ಟೆ ಮಂಜುಸುರಿಯುತ್ತಿತ್ತು. ಎದುರಿಗೆ ಯಾರು ಬರುತ್ತಿದ್ದಾರೆಂದೂ ತಿಳಿಯದಷ್ಟು ಮಂಜು ಕವಿದಿತ್ತು. ಆ ಚಳಿಯಲ್ಲೇ ನಡುಗುತ್ತ ಸಿರಿ ಪಾಟಿಚೀಲ ಹೊತ್ತು ನಡೆದುಬರುತ್ತಿರುವಾಗ, ಎದುರಿಗೆ ಹೋಯ್ ಹೋಯ್ ಎಂದು ತಡೆದು ನಿಲ್ಲಿಸಿ, ‘ಶಾಲಿಗೆ ಹೊಂಟೀ’ ಎಂದು ಕೇಳಿದ. ಆ ಧ್ವನಿಯ ಮೇಲೇ ಇವನು ಶೆಲ್ಲಿಯ ಅಪ್ಪ ಫರ್ನಾಂಡೀಸ್ ಎಂದು ಗುರುತಿಸಿದಳು ಸಿರಿ. ಹೂ ಎಂದು ಮುಂದಕ್ಕೆ ಹೊರಡುತ್ತಿದ್ದಂತೆ, ಇರು ನಿಂಗೇನೋ ತೋರಿಸಬೇಕೆಂದು ಜೇಬಿನಿಂದ ಒಂದು ಪುಟ್ಟ ಅಲ್ಬಂ ತೆಗೆದು ತೋರಿಸಿದ. “ನೋಡು, ಇದಷ್ಟೂ ರೋಮ್ ನದ್ದು, ನಮ್ಮ ಫಾದರ್ ಹೋಗಿದ್ದರು ಅಲ್ಲಿಗೆ. ಎಂಥಾ ಪುಣ್ಯಾತ್ಮರು, ನೋಡು ಅಲ್ಲಿನ ಸುಂದರಿಯನ್ನು. ಸ್ವರ್ಗದ ಥರ ಇದೆಯಂತೆ. ಅಷ್ಟು ಚೆನ್ನಾಗಿದೆಯಂತೆ ಅಲ್ಲಿನ ಸುಂದರಿ….’ ಎಂದು ಅಲ್ಲಿನ ಸೌಂದರ್ಯ ಎನ್ನಲು ಸುಂದರಿ ಎಂದು ಪದೇಪದೆ ಹೇಳುತ್ತಿದ್ದ. ಕತೆ ಹೇಳುತ್ತ ‘ಒಂದು ಸಲನಾದ್ರೂ ಅಲ್ಲಿಗೆ ಹೋಗಬೇಕು’ ಎಂದ. ‘ಸರಿ ಸರಿ ನಂಗೆ ಶಾಲೆಗೆ ತಡವಾಗುತ್ತದೆಂದು’ ಹೊರಟಳು ಸಿರಿ. ಆಗೆಲ್ಲ ಸಿರಿಗೆ ಅನಿಸುವುದು, ಇವ ಯಾಕೆ ಹೀಗೆಲ್ಲ ಹೊರಗಡೆ ಓಡಾಡಿಕೊಂಡಿದ್ದಾನೆ. ಯಾಕೆ ಶೆಲ್ಲಿಯ ಮನೆಯಲ್ಲಿರುವುದಿಲ್ಲ. ಪಾಪ ಶೆಲ್ಲಿ ಎಷ್ಟು ಹಸಿವೆಯಿಂದ ಒದ್ದಾಡುತ್ತಾಳೆ. ಅವಳಜ್ಜಿ ಸದಾ ಇವಳಿಗೆ ಬಯ್ಯುತ್ತಿರುತ್ತಾಳೆ. ಇವ ರೋಮಿಗೆ ಹೋಗುವ ದುಡ್ಡನ್ನು ಶೆಲ್ಲಿಗೇ ಕೊಟ್ಟಿದ್ದಿದ್ದರೆ ಅವಳಿಗೊಂದಿಷ್ಟು ಊಟ, ಬಟ್ಟೆಯಾದರೂ ಸಿಗುತ್ತಿತ್ತು… ಎಂದೆನಿಸುತ್ತಿತ್ತು. ಇಷ್ಟಕ್ಕೂ ಇವಳಮ್ಮ ಯಾಕೆ ಓಡಿಹೋದಳು.? ಎಂದೂ ತಲೆಕೆಡಿಸಿಕೊಂಡಿದ್ದಳು.
ಮನೆಯಲ್ಲಿ ಅಮ್ಮ, ಪಕ್ಕದ ಮನೆ ಶಾರದಕ್ಕ ಎಲ್ಲ ಹೇಳಿದ್ದು, ಇವನ ಮಳ್ಳತನ ನೋಡಿ ಅವಳು ಓಡಿಹೋಗಿದ್ದಾಳೆಂದು. ಆದರೆ ಒಂದು ಸಲ ಶೆಲ್ಲಿ ಬೇರೆಯದೇ ಕತೆ ಹೇಳಿದ್ದಳು. ಅವಳ ಅಪ್ಪ ಮೊದಲು ಸರಿಯಾಗೇ ಇದ್ದ. ಅವರ ಮನೆಗೆ ಅಂಕಲ್ ಒಬ್ಬ ಬರುತ್ತಿದ್ದ. ಸದಾ ಕಾಲ ಅಮ್ಮನೊಂದಿಗೆ ಮಾತನಾಡುತ್ತಿದ್ದ. ಅವ ಬರುವಾಗಲೆಲ್ಲ ರಾಶಿ ರಾಶಿ ಚಾಕಲೇಟ್ ತರುತ್ತಿದ್ದ. ಅದಕ್ಕೇ ಅವನನ್ನು ಕಂಡರೆ ಶೆಲ್ಲಿಗೆ ತುಂಬ ಪ್ರೀತಿಯಾಗಿತ್ತು. ಬಹುಶಃ ಅಮ್ಮನಿಗೂ ಅದಿಕ್ಕೇ ಅವನೆಂದರೆ ಪ್ರೀತಿ ಇದ್ದಿರಬಹುದು. ಯಾಕೆಂದರೆ ಪ್ರತಿದಿವಸ ಈ ಅಪ್ಪ ಕುಡಿದು ಬಂದು ಅಮ್ಮನಿಗೆ ಹೊಡೆಯುತ್ತಿದ್ದ. ಅದಿಕ್ಕೇ ಅಮ್ಮ ಈ ಅಂಕಲ್ ಜೊತೆ ಪ್ರೀತಿಯಿಂದ ಮಾತನಾಡುತ್ತಿದ್ದಳು. ಆದರೆ ಒಂದು ದಿನ ಅವ ಮತ್ತು ಅಮ್ಮ ಇಬ್ಬರೇ ಇದ್ದರು. ಆಗ ಶೆಲ್ಲಿ ಹೊರಗಡೆ ಆಟವಾಡುತ್ತಿದ್ದಳು. ಅವರಿಬ್ಬರೂ ಕೋಣೆಯಲ್ಲಿದ್ದರು. ಆ ಹೊತ್ತಿಗೆ ಅಪ್ಪ ಬಂದ. ಅವನನ್ನು ನೋಡಿದವರೇ ಇವರಿಬ್ಬರೂ ಹೊರಬಂದರು. ಅಪ್ಪನನ್ನು ನೋಡಿದವನೇ ಈ ಅಂಕಲ್ ಓಟಕಿತ್ತಿದ್ದ. ಅವತ್ತು ಅಪ್ಪ ಅಮ್ಮನನ್ನು ತುಂಬ ಹೊಡೆದಿದ್ದ. ಅಮ್ಮ ಹೊಡೆತ ತಿಂದು ರಾತ್ರಿಯೆಲ್ಲ ಅಳುತ್ತಿದ್ದಳು. ಆದರೆಮಾರನೇ ದಿನ ಬೆಳಗ್ಗೆ ನೋಡಿದರೆ ಅಮ್ಮ ಇರಲಿಲ್ಲ. ಅಷ್ಟರ ನಂತರ ಆ ಅಂಕಲ್ಲೂ ಮನೆಗೆ ಬರಲಿಲ್ಲ ಎಂದು ಅಳುತ್ತ ಹೇಳಿದ್ದಳು ಶೆಲ್ಲಿ.

ಹಾಗಿದ್ದರೆ ಆ ಅಂಕಲ್ಲೂ, ಇವಳಮ್ಮನೂ ಎಲ್ಲಿಗೆ ಹೋಗಿರಬಹುದು. ತನ್ನನ್ನು ಅಮ್ಮ ದಿನಾ ರಾತ್ರಿ ತನ್ನ ಹಾಸಿಗೆಯಲ್ಲೇ ತಬ್ಬಿ ಮಲಗಿಸಿಕೊಂಡಂತೆ ಅವಳಿಗೂ ಶೆಲ್ಲಿಯನ್ನು ಮಲಗಿಸಿಕೊಳ್ಳಬೇಕು ಅನಿಸುತ್ತಿರಲಿಲ್ಲವೇ? ಪಾಪ. ಶೆಲ್ಲಿಗೆ ಅಮ್ಮನೇ ಇಲ್ಲ, ತನ್ನಂತೆ ತಲೆಗೆ ಎಣ್ಣೆಹಾಕಿ ಬಾಚಲು. ಅದಿಕ್ಕೇ ಅವಳ ತಲೆ ಅಷ್ಟೊಂದು ಜಿಡ್ಡುಗಟ್ಟಿರುತ್ತದೆ ಎಂದೆನಿಸಿ, ಒಂದು ಸಲ ಅಮ್ಮನ ಬಳಿ ತನ್ನ ತಲೆ ಬಾಚುತ್ತಿರುವಾಗ ಅಮ್ಮ, ಶೆಲ್ಲಿಗೂ ಹೀಗೆಯೇ ತಲೆ ಬಾಚಿ ಜಡೆ ಹೆಣೆದುಕೊಡು, ಅವಳನ್ನು ಕರೆಯುತ್ತೇನೆ ಎಂದಿದ್ದಕ್ಕೆ, ಅಮ್ಮ, ಶೀ.. ತಲೆ ಸರಿ ಇದ್ದಾ ನಿಂಗೆ, ಯಾವ ಜಾತಿಯಾ, ಪೀತಿಯಾ? ಅವಳಿಗೆ ಆನು ತಲೆ ಬಾಚವನು. ಸುಮ್ಮಂಗೆ ಶಾಲಿಗೆ ಹೋಗಿ ಬಂದು ಮಾಡು ಸಾಕು ನೀನು. ಆ ಕ್ರಿಶ್ಚಿಯನ್ ಗಳನ್ನೆನ್ನ ಹಚ್ಚಗ್ಯಳಡ’ ಎಂದು ಜೋರು ಮಾಡಿದ್ದಳು.

ಹು ಹು ಎಂದು ತಲೆಯಲ್ಲಾಡಿಸಿದ ಸಿರಿಗೆ ಕಾಡುವ ಪ್ರಶ್ನೆ ಯೆಂದರೆ ಅದೇ, ಅವಳ ಅಮ್ಮನಿಗೆ ಶೆಲ್ಲಿಯನ್ನು ನೋಡಬೇಕೆನಿಸಲಿಲ್ಲವೇ ಎಂದು. ಆದರೆ ಆ ಘಟನೆಯ ನಂತರ ಅವಳ ಅಪ್ಪ ಫರ್ನಾಂಡೀಸ್ ಹುಚ್ಚುಚ್ಚಾಗಿ ಮಾತನಾಡುತ್ತ ಇಡೀ ದಿನ ರಸ್ತೆಯಲ್ಲೇ ಓಡಾಡುತ್ತ, ಚರ್ಚಿನಲ್ಲಿ ಕಸ ಗುಡಿಸಿಕೊಂಡು, ಹೂ ಗಿಡಗಳಿಗೆ ನೀರು ಹಾಕುತ್ತ ಅಲ್ಲೇ ಇರುತ್ತಿದ್ದನೇ ಹೊರತು ಎಂದಿಗೂ ಮನೆಗೆ ಬರುತ್ತಿರಲಿಲ್ಲ. ಇದನ್ನೆಲ್ಲ ಕಂಡ ಅವಳ ಅಜ್ಜಿ, ಚೆನ್ನಾಗಿದ್ದ ತನ್ನ ಮಗ ಹೀಗಾದನಲ್ಲ ಎಂದು ಕೊರಗುತ್ತ, ಮಗನ ಈ ಸ್ಥಿತಿಗೆ, ಈ ವಯಸ್ಸಲ್ಲೂ ದುಡಿಯಬೇಕಾದ ತನ್ನ ಕರ್ಮಕ್ಕೆಲ್ಲ ಶೆಲ್ಲಿಯ ಅಮ್ಮಂಗೊಂದಿಷ್ಟು ಶಾಪ ಹಾಕಿ, ಹೊಟ್ಟೆಯ ಸಿಟ್ಟು ತಾಳಲಾಗದೇ ಎದುರಿಗೆ ತನಗೆ ಅಂಟಿಕೊಂಡ ಶೆಲ್ಲಿಯನ್ನು ದನಬಡಿದ ಹಾಗೆ ಬಡಿಯುತ್ತಿದ್ದಳು.

ಪ್ರತಿ ಸಲ ಅಜ್ಜಿ ಬೈದಾಗ, ಹೊಡೆದಾಗ ಸಿರಿ ಮತ್ತು ಇತರ ಗೆಳತಿಯರೊಂದಿಗೆ ಹೇಳಿಕೊಂಡು ಅಳುತ್ತಿದ್ದಳು ಶೆಲ್ಲಿ. ಒಂದು ದಿನ ಅವಳ ಅಜ್ಜಿ ಬಾಸುಂಡೆ ಬರುವ ಹಾಗೆ ಹೊಡೆದು, ಇವಳ ಕೆನ್ನೆ, ಬೆನ್ನು, ಕಾಲುಗಳೆಲ್ಲ ಕೆಂಪಗೆ ಆಗಿದ್ದವು. ಅವತ್ತು ಶಾಲೆ ಬಿಟ್ಟಾಗ ಮನೆಗೆ ಹೋಗುವಾಗ ಇವಳು ಅಳುತ್ತಿದ್ದಳು. ಎಲ್ಲರೂ ಪಾಪ ಪಾಪ ಎನ್ನುತ್ತಿದ್ದರು. ಆದರೆ ಅಳುತ್ತಲೇ ಶೆಲ್ಲಿ “ಸಾಕಾಗಿ ಹೋಗಿದೆ, ನಾನಿನ್ನು ಇಲ್ಲಿರುವುದಿಲ್ಲ. ಎಲ್ಲಿಯಾದರೂ ಓಡಿ ಹೋಗುತ್ತೇನೆ” ಎಂದುಬಿಟ್ಟಳು. ಓಡಿ ಹೋಗುತ್ತೇನೆಂಬ ಆ ಶಬ್ದ ಕೇಳಿದೊಡನೆಯೇ ಸಿರಿಗೆ ಓಡಿಹೋದ ಬಾವಯ್ಯ, ಸುಬ್ರಾಯ, ಶಿವು ಮತ್ತೆ ಬಿಸ್ಕೆಟ್ ಫ್ಯಾಕ್ಟರಿ ಎಲ್ಲವೂ ಒಟ್ಟಿಗೇ ನೆನಪಾಗಿ, ತಕ್ಷಣ ಗೆಳೆಯರಗುಂಪಲ್ಲಿ ‘ಏಯ್, ಶೆಲ್ಲಿ ಓಡಿ ಹೋಗೊದಾದರೆ ನಾವೆಲ್ಲ ಅವಳಿಗೆ ಸಹಾಯ ಮಾಡೋಣ’ ಎಂದುಬಿಟ್ಟಳು. ಅದಕ್ಕೆ ಉಳಿದವರಾದ ಸುಧೀರ , ಶಾಮಲಾ, ಕಿರಣ, ಆಂತೋನಿ, ಸವಿತಾ ಎಲ್ಲರೂ ಒಪ್ಪಿದರು. ಅದಕ್ಕಾಗಿ ಒಂದು ಪ್ಲಾನ್ ರೂಪಿಸಿದರು ಕೂಡ. ಸಿರಿ 2 ರೂ ತಂದುಕೊಟ್ಟಳು. ಬಾಕಿಯವರೆಲ್ಲ ಒಬ್ಬೊಬ್ಬರು ಒಂದು ರೂ, ಎಂಟಾಣಿ, ನಾಕಾಣಿ, ಎಲ್ಲ ತಂದುಕೊಟ್ಟು ಇದಿಷ್ಟನ್ನು ನೀನಿಟ್ಟಕೋ. ನಿಂಗೆ ಹಸಿವಾದ್ರೆ ಏನಾದ್ರು ತಗೊಂಡು ತಿನ್ನು, ನೀನು ಇವತ್ತು ಪಿಟಿ ಪಿರಿಯಡ್ ನಲ್ಲಿ ಹೊರಟುಬಿಡು, ಆಗ ಅಕ್ಕೋರಿಗೂ ತಿಳಿಯೋದಿಲ್ಲ, ಅಜ್ಜಿಗೂ ತಿಳಿಯೋದಿಲ್ಲ. ಸೀದಾ ಬಸ್ ಸ್ಟ್ಯಾಂಡ್ ಗೆ ಹೋಗು ಬಸ್ಸು ಹತ್ತಿ ಬೆಂಗಳೂರಿಗೆ ಹೋಗು. ಅಲ್ಲಿ ಹೋದಮೇಲೆ ನೀನು ಬಿಸ್ಕೆಟ್ ಫ್ಯಾಕ್ಟರಿಗೆ ಸೇರಿಕೊಂಡುಬಿಡು. ಕಡೆಗೆ ನಾನೂ ಬರುತ್ತೇನೆ ನನ್ನೂ ಸೇರಿಸಿಕೋ’ ಎಂದೆಲ್ಲ ಹೇಳಿದಳು. ಅದನ್ನು ಕೇಳಿದ ಶೆಲ್ಲಿಗೋ ಯಾವುದೋ ಧೈರ್ಯ ಬಂದು ‘ಆಯ್ತು’ ಎಂದು ಒಪ್ಪಿಕೊಂಡುಬಿಟ್ಟಳು. ಆದರೆ ಯಾವುದೇ ಕಾರಣಕ್ಕೂ ಇದು ಯಾರಿಗೂ ಗೊತ್ತಾಗಬಾರದೆಂದು ಮಾತನಾಡಿಕೊಂಡಿದ್ದರು. ಅವಳು ಓಡಿ ಹೋದಮೇಲೂ ಇದು ಬೇರೆಯಾರಿಗೂ ತಿಳಿಯಕೂಡದು. ಗೊತ್ತಾದರೆ ತಮಗೆಲ್ಲ ಹೊಡೆಯುತ್ತಾರೆಂದು ಎಲ್ಲರೂ ಸುಮ್ಮನಿರಬೇಕೆಂದು ಮೊದಲೇ ಮಾತನಾಡಿಕೊಂಡರು.

ಅವತ್ತೇನೋ ಸಂಭ್ರಮ, ಬೆಳಗ್ಗೆ ಅಮ್ಮ ಹೇಳದೆಯೇ ಎದ್ದು ಬೇಗಬೇಗ ರೆಡಿಯಾದಳು ಸಿರಿ ಶಾಲೆಗೆ ಹೋಗಲು. ಇಂದೊಂದು ಅವರೆಲ್ಲ ಹೊಸ ಸಾಹಸ ಮಾಡುವವರಿದ್ದರು. ಅದಿಕ್ಕೆ ಈ ಸಂಭ್ರಮ. ಶಾಲೆಯಲ್ಲಿ ಎಲ್ಲರೂ ಸೇರಿದರೂ ಪ್ರತಿಯೊಬ್ಬರೂ ಕಣ್ಣ ಸನ್ನೆಯಲ್ಲೇ ಮಾತನಾಡಿಕೊಂಡರು. ಯಾರೊಬ್ಬರೂ ಒಟ್ಟಿಗೇ ಕೂತು ಮಾತನಾಡಲಿಲ್ಲ. ಶೆಲ್ಲಿಯ ಬಳಿಯೂ ಯಾರೂ ಮಾತನಾಡಲಿಲ್ಲ. 12ಗಂಟೆಗೆ ಪಿಟಿ ಪಿರಿಯಡ್ ಬಂತು. ಏನೋ ತಹತಹ ಇವರಿಗೆ. ಅದು ಬಂದ ಮೇಲೆ ಶೆಲ್ಲಿಯನ್ನು ಸೇರಿಸಿಕೊಂಡು ಒಬ್ಬೊಬ್ಬರಾಗೇ ಹೊರಬಂದರು. ಎಲ್ಲರೂ ಒಟ್ಟಿಗೇ ಬಂದರೆ ಗೊತ್ತಾಗುತ್ತದೆಂದು, ಒಬ್ಬಳು ಶಾಲೆಯ ಆಚೆ ಹೋಗಿ ನಿಂತಳು. ಮತ್ತೊಬ್ಬಳು ಶಾಲೆಯ ಅಂಗಳದಲ್ಲಿ ನಿಂತಳು. ಗೇಟಿನಬಳಿ ಒಬ್ಬ ನಿಂತಿದ್ದ. ಹೀಗೆಲ್ಲ ಮಾಡಿ, ನಿಧಾನಕ್ಕೆ ಶೆಲ್ಲಿ ಆಚೆ ಹೋದಳು. ನಿಧಾನಕ್ಕೆ ನಡೆಯುತ್ತ ಜೋರು ನಡಿಗೆ ಪ್ರಾರಂಭಿಸಿ ಕಡೆಗೆ ಓಡು ನಡಿಗೆಯಲ್ಲಿ ಓಡಿದಳು ಹಿಂತಿರುಗಿ ನೋಡದಂತೆ. ಅವಳ ಬೆನ್ನನ್ನೇ ನೋಡುತ್ತ ನಿಂತಿದ್ದ ಈ ಗುಂಪಿಗೆ ಶಾಲೆಯ ಗಂಟೆ ಎಚ್ಚರಿಸಿತು. ಎಲ್ಲರೂ ಶಾಲೆಯ ಒಳಗೆ ಹೋದರು.

ನಾಳೆ ದಿನ ಅವಳಜ್ಜಿ ಶಾಲೆಗೆ ಬರಬಹುದು, ಅಕ್ಕೋರ ಹತ್ರ ಹೇಳಿಕೊಡಬಹುದು. ನಮಗ್ಯಾರಿಗೂ ಗೊತ್ತಿಲ್ಲ ಎಂಬಂತೆ ಸುಮ್ಮನಿದ್ದುಬಿಡೋಣ. ಯಾರೇನೇ ಕೇಳಿದರೂ ಒಬ್ಬರೂ ಬಾಯಿಬಿಡಬಾರದೆಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು. ಅವತ್ತು ರಾತ್ರಿಯೆಲ್ಲ ಸಿರಿಗೆ ಶೆಲ್ಲಿಯದೇ ಚಿಂತೆ. ಇಷ್ಟೊತ್ತಿಗೆ ಅವಳು ಬೆಂಗಳೂರು ತಲುಪಿರಬಹುದು. ಅಲ್ಲಿಂದ ಅವಳು ಆ ಫ್ಯಾಕ್ಟರಿಗೆ ಹೋಗುತ್ತಾಳೆ. ಅಲ್ಲಿಕೆಲಸ ಮಾಡುತ್ತಾಳೆ. ಸ್ವಲ್ಪ ದಿವಸಗಳ ನಂತರ ತನ್ನನ್ನೂ ಕರೆದುಕೊಂಡು ಹೋಗುತ್ತಾಳೆ… ಹೀಗೆಲ್ಲ ಅಂದುಕೊಂಡವಳಿಗೆ ಅದ್ಯಾವಾಗ ನಿದ್ದೇ ಬಂತೋ.. ಬೆಳಗ್ಗೆ ಅಮ್ಮ ಎಬ್ಬಿಸಿದಾಗಲೇ ಎಚ್ಚರವಾದದ್ದು. ಲಗುಬಗೆಯಿಂದ ಎದ್ದಳು.

ಅವತ್ತು ನಿಜಕ್ಕೂ ಹೆದರುತ್ತ ಹೆದರುತ್ತ ಶಾಲೆಗೆ ಹೋದಳು ಸಿರಿ. ಇವಳಂತೆಯೇ ಇವಳ ಗೆಳೆಯರ ಗುಂಪೂ ಹೆದರಿಕೊಂಡಂತಿತ್ತು. ಈಗ ಅಜ್ಜಿ ಬರುತ್ತಾಳೆ, ಅಕ್ಕೋರ ಹತ್ರಹೇಳಿಕೊಡುತ್ತಾಳೆ, ಅಕ್ಕೋರು ತಮ್ಮನ್ನು ಕರೆದು ಬಿಸಿಲಲ್ಲಿ ನಿಲ್ಲಿಸಿ ಬಾಸುಂಡೆ ಬರುವಂತೆ ಬಾರಿಸುತ್ತಾರೆಂದು ಕಾದರು. ಶಾಲೆಗೆ ಯಾರೇ ಬರಲಿ, ತರಗತಿಯ ಹೊರಗೆ ಯಾರೇ ಸುಳಿದಾಡಲಿ, ಅಜ್ಜಿ ಬಂದಂತೆಯೇ ಅನಿಸುತ್ತಿತ್ತು ಅವರಿಗೆ. ಆದರೆ ಯಾರೂ ಬರಲಿಲ್ಲ. ಆ ದಿನ ಹೇಗೋ ಕಳೆದುಬಿಟ್ಟಿತ್ತು. ಮಾರನೇ ದಿನ ಬರಬಹುದು ಎಂದುಕೊಂಡರು.

ಆದರೆ ಶೆಲ್ಲಿ ಹೋಗಿ ವಾರವಾಯಿತು, ತಿಂಗಳಾಯಿತು, ವರ್ಷವಾದರೂ ಅಜ್ಜಿಯೂ ಬರಲಿಲ್ಲ, ಶೆಲ್ಲಿಯ ಸುಳಿವೂ ಇರಲಿಲ್ಲ. ಸಿರಿ ಮತ್ತು ಅವಳ ಗುಂಪು ಕಾದದ್ದೇ ಬಂತು. ಅವಳ ಅಜ್ಜಿ ಮಾತ್ರ ಅವರಿವರ ಮನೆಯ ಕೆಲಸ ಮಾಡಿಕೊಂಡು ಆರಾಮವಾಗಿದ್ದಾಳೆ, ಶೆಲ್ಲಿಯ ಗೊಡವೆಯೇ ಇಲ್ಲದವಳಂತೆ. ಅವಳ ಅಪ್ಪನೂ ರೋಮ್ ನ ಸುಂದರಿಯ ಕತೆಯನ್ನು ಮತ್ತೆಮತ್ತೆ ಹೇಳಿಕೊಂಡು ತಿರುಗುತ್ತಿರುತ್ತಾನೆ ಪ್ರಪಂಚದ ಯಾವ ಗೊಡವೆಯೂ ಇಲ್ಲದವನಂತೆ. ಬಹುಶಃ ಶೆಲ್ಲಿಯೂ ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ತನಗೆ ಸಾಕೆನಿಸುವಷ್ಟು ಬಿಸ್ಕೆಟ್ ತಿನ್ನುತ್ತ ಆರಾಮವಾಗಿದ್ದಿರಬಹುದು ಯಾವ ಹಸಿವೆಯ ಗೊಡವೆಯೂ ಇಲ್ಲದವಳಂತೆ… ಎಂದು ಸಿರಿಗೆ ಅನಿಸಿ, ಶೆಲ್ಲಿಗೆ ಎಷ್ಟು ಚಾನ್ಸು ಎಂದು ತನಗೆ ಸಿಗದ ಅದೃಷ್ಟವನ್ನು ಶಪಿಸಿಕೊಂಡು ಶಾಲೆಯ ಹಾದಿ ಹಿಡಿದಳು.