ಹಸಿಹಸಿ ಬಾಣಂತಿ ಪಾರ್ವತಿ ಮಗುವನ್ನೂ ಕರೆದುಕೊಂಡು ಮನೆಯಿಂದ ಹೊರಬಿದ್ದಳು. ಸೀದಾ ಅಘನಾಶಿನಿ ನದಿಯ ದಂಡೆಯ ಮೇಲೆ ಹೊಳೆಯನ್ನೇ ದಿಟ್ಟಿಸಿತ್ತ ಕುಳಿತಳು. ಅದೆಷ್ಟು ಹೊತ್ತು ಹಾಗೆಯೇ ಕುಳಿತಿದ್ದಳೋ… ಹಿಂದೆ ಗಣಪಿ ಬಂದು ನಿಂತದ್ದೂ ಅರಿವಿಗೆ ಬಾರದಂತೆ. ‘ಎಂತದ್ರಾ ಅಮ್ಮಾ.. ಹೀಂಗ್ ಕುಂತೀರಿ’ ಎಂದು ಗಣಪಿ ಕೇಳಿದಾಗಲೇ ಎಚ್ಚರವಾಗಿದ್ದು. ‘ಎಂತ ಇಲ್ಲ ಗಣಪಿ, ಈ ಹೊಳೆಗೇ ಬಿದ್ದು ಸತ್ಹೋಗನ ಅಂದರೆ ನಂಗೆ ಈಜು ಬರ್ತದೆ, ಬೇರೆ ಸಾಯುವ ಯಾವ ಹಾದಿಯೂ ನಂಗೆ ಗೊತ್ತಾಗ್ತಾ ಇಲ್ಲದೇ ಹೀಗೇ ಕುಂತ್ಕಂಡಿದೇನೆ’ ಎಂದು ಹರಿಯುವ ಹೊಳೆಯನ್ನೇ ನೋಡುತ್ತಾ ಹೇಳಿದಳು.
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕಥೆಗಳು

 

‘ನಾವು ಹಾಕುವ ಅನ್ನ ನಿಂಗೆ ಸಾಕಾಗುತ್ತದೆಯೇನೇ ಗಣಪಿ…’ ತಾಯೊಬ್ಬಳು ಮಗುವಿಗೆ ಕೇಳುವಂತೆ ಕಕ್ಕುಲಾತಿಯಿಂದ ಕೇಳಿದಳು ಪಾರ್ವತಿ. ಮನೆಯ ಹಿತ್ತಲ ಕಡೆಯ ಬದಿಯಲ್ಲಿರುವ ಬಚ್ಚಲು ಮನೆಯ ಬಳಿ ಊಟಕ್ಕೆ ಕುಕ್ಕರಗಾಲಲ್ಲಿ ಕುಳಿತು ಬಾಳೆ ಎಲೆಯ ತುಂಬ ಹರವಿದ ಅನ್ನದ ರಾಶಿಯ ನಡುವೆ ಹೊಂಡಮಾಡಿಕೊಂಡು, ಹುಳಿಯನ್ನು ಹಾಕಿಕೊಂಡು ಅಷ್ಟೂ ಅನ್ನಕ್ಕೆ ಕಲಸುತ್ತ ಕುಳಿತ ಗಣಪಿ ಮುಖ ಎತ್ತಿ ನಸುನಕ್ಕು “ಸಾಕ್ರಾ…” ಎಂದಳು. ಇನ್ನೂ ಹಾಕ್ಯಳೆ ಎಂದು ಕೈತುಂಬ ಗಾಜಿನಬಳೆಗಳ ನಡುನಡುವೆ ಚಿನ್ನದ ಬಳೆಗಳಿರುವ ಕೈಯನ್ನು ಮುಂದಕ್ಕೆ ಚಾಚಿ ಸೌಟು ತುಂಬಾ ತರಕಾರಿ ಹೋಳುಗಳಿರುವ ಹುಳಿಯನ್ನು ಮತ್ತಷ್ಟು ಬಡಿಸಿದಳು ಪಾರ್ವತಿ.

ಮನೆಯ ಆಳೊಬ್ಬಳಿಗೆ ಹಾಗೆಲ್ಲ ಹೊಟ್ಟೆತುಂಬ ಊಟಕೊಟ್ಟು, ಮತ್ತೆ ನಿಂಗೆ ಸಾಕಾಗುತ್ತದಾ ಎಂದು ಉಪಚರಿಸುವ ಪರಿಪಾಠ ಎಲ್ಲಿಯೂ ಇಲ್ಲದ ಕಾರಣಕ್ಕೆ ಅದನ್ನು ನೋಡಿದವರಿಗೆ ಮತ್ತು ಸ್ವತಃ ಹಾಗೆ ಬಡಿಸಿಕೊಂಡು ಊಟ ಮಾಡವ ಆಳುಗಳಿಗೂ ಇದೊಂದು ಆಶ್ಚರ್ಯದ ಸಂಗತಿಯಾಗಿತ್ತು. ಯಾಕೆಂದರೆ ತೋಟ, ಗದ್ದೆಗೆ ಕೆಲಸಕ್ಕೆ ಬರುವ ಆಳುಗಳಿಗೆ ದಿನಗೂಲಿ ಥರ ಇಂತಿಷ್ಟು ಎಂದು ಪಗಾರ ಮಾತನಾಡಿಬಿಡುವುದು, ನಂತರ ಅವರಿರುವುದು ಕೆಲಸಕ್ಕೆ ಮಾತ್ರ ಎಂಬಂತೆ. ಎಷ್ಟು ಬೇಕಾದರೂ ಕೆಲಸ ಮಾಡಬಹುದು. ಮಧ್ಯೆ ಅವರು ಕೇಳುವುದು ಉಂಡೆ ಬೆಲ್ಲ ಮತ್ತು ನೀರು ಮಾತ್ರ. ಅದಕ್ಕಿಂತ ಜಾಸ್ತಿ ಏನಾದರೂ ಕೇಳಿದರೋ ಬೈದುಕೊಂಡೇ ಕೊಡುವುದು. ಊಟ ತಿಂಡಿ ಮಾತ್ರ ನಾವು ಕೊಟ್ಟಷ್ಟು. ಕೆಲಸವೂ ನಾವು ಹೇಳಿದಷ್ಟು. ಊಟ ಅವರಿಗೆ ಸಾಕಾಗುತ್ತದಾ, ಬೇಕಾ ಎಂಬೆಲ್ಲ ಉಪಚರಿಸಲು ಅವರೇನು ನಮ್ಮ ನೆಂಟರೇ? ಹೀಗಿರುವ ಸಂದರ್ಭದಲ್ಲಿ ಆಳು ಗಣಪಿಗೆ ಪ್ರತಿದಿವಸ ಇಷ್ಟೊಂದು ಉಪಚರಿಸುತ್ತಿದ್ದ ಪಾರ್ವತಿಯನ್ನು ನೋಡಿ ಆ ಮನೆಯವರಿಗೂ, ಮುಖ್ಯವಾಗಿ ಅವಳ ಗಂಡನಿಗೂ, ಅಲ್ಲಿಗೆ ಬಂದ ನೆಂಟರಿಗೂ ವಿಚಿತ್ರವೆನಿಸುತ್ತಿತ್ತು. ‘ಇವಳಿಗೆಂತ ಮಳ್ಳಾ’ ಎಂಬಂತೆ ನೋಡುತ್ತಿದ್ದರು.

ಆದರೆ ಇದು ಗಣಪಿಗೇನೂ ವಿಶೇಷವೆನಿಸಿರಲಿಲ್ಲ. ಇಷ್ಟರೊಳಗೇ ಪಾರ್ವತಿ ಸೆರಗಲ್ಲಿ ಕದ್ದುಮುಚ್ಚಿ ಅವಳಿಗೆ ರೊಟ್ಟಿ, ಉಪ್ಪಿನಕಾಯಿ, ಮಾವಿನ ಹಣ್ಣು, ತೆಂಗಿನಕಾಯಿ, ನಿಂಬೆಹಣ್ಣು.. ಹೀಗೆ ಏನೆಲ್ಲವನ್ನೂ ಕೊಡುತ್ತಿದ್ದಳು. ಒಂದೆರೆಡು ಬಾರಿ ಸೊಂಟದಲ್ಲಿ ಸೀರೆಯ ತುದಿಯಿಂದ ಮಡಚಿಟ್ಟುಕೊಂಡ ಬೆಳ್ಳಿ ನಾಣ್ಯವನ್ನು ಕೊಟ್ಟಿದ್ದೂ ಉಂಟು. ಆಗೆಲ್ಲ ಕಣ್ಣೀರು ಹರಿಸಿ ಗಣಪಿ, ತಕಳಿ, ಇದ್ನ, ಎಂದು ವಾಪಾಸು ಮಾಡಿದ್ದೂ ಉಂಟು.

ಹೀಗೆಲ್ಲ ಉಪಚಾರ ಮಾಡುವ ಪಾರ್ವತಿಯೂ, ಮಾಡಿಸಿಕೊಳ್ಳುವ ಗಣಪಿಯೂ ಇಬ್ಬರೂ ಯಜಮಾನ್ತಿ, ಆಳು ಎಂಬುದಕ್ಕಿಂತ ಗೆಳತಿಯರಂತೆ ಇದ್ದರು. ದೊಡ್ಡದಾದ ಆ ಮನೆಯಲ್ಲಿ, ಮನೆತುಂಬ ಜನವಿರುತ್ತಿದ್ದರು. ಪಾರ್ವತಿಯ ಮೂವರು ಅಕ್ಕಂದಿರೂ, ಪಾರ್ವತಿಯ ಮಕ್ಕಳೂ, ಎಲ್ಲರೂ ಸೇರಿ ತುಂಬಿದ ಸಂಸಾರವದು. ಬೇಕಾದಷ್ಟು ದುಡ್ಡು, ಬಂಗಾರವಿತ್ತು ಆ ಮನೆಯಲ್ಲಿ. ಬಂಗಾರವನ್ನು ಕೊಳಗದಲ್ಲಿ ಪಾಲುಮಾಡಿಕೊಂಡಿದ್ದರು ಎಂಬುದು ಆ ಮನೆಯ ಇತಿಹಾಸದ ಕತೆಯಾಗಿಬಿಟ್ಟಿತ್ತು.

ಕಟ್ಟಿಗೆಯಿಂದ ಮಾಡಿದ ದೊಡ್ಡದಾದ ಆ ಮನೆಯ ಅಂಗಳವೇ ನೂರಾರು ಜನ ಹಿಡಿಸುವಷ್ಟು ವಿಶಾಲವಾಗಿತ್ತು. ಅಂಗಳ ದಾಟಿ 5-6 ಮೆಟ್ಟಿಲು ಹತ್ತಿ ಹೋದ ಮೇಲೆ ಸಿಗುವ ಜಗುಲಿಯಂಥ ಲಾಯ. ಅದರ ನಂತರ ಮತ್ತೊಂದು ಅಂಗಳ, ಅದರ ನಂತರ ಸಿಗುವ ದೊಡ್ಡಜಗುಲಿ, ಭವಂತಿ ಮನೆ ಎಂದೇ ಹೆಸರಾದ ಆ ಮನೆಯ ಕಂಬ, ಬಾಗಿಲು, ದೇವರ ಮನೆಗಳಲ್ಲೆಲ್ಲ ಶ್ರೀಮಂತಿಕೆ ಎಂಬುದು ತುಂಬಿ ತುಳುಕುತ್ತಿತ್ತು. ಅಂಥವುಗಳ ನಡುವೆ ಏಕಾಂಗಿಯಾಗಿ ನಿಂತವಳು ಪಾರ್ವತಿ. ಮೊದಮೊದಲು ಯಾರಿಗೂ ಹೇಳಿಕೊಳ್ಳಲಾಗದೆ ಮನೆಯ ಹಿಂದುಗಡೆ ಹರಿವ ಅಘನಾಶಿನಿ ನದಿಯ ದಂಡೆಯಲ್ಲಿ ಕುಳಿತು ಕೊಡಗಟ್ಟಲೆ ಅಳುತ್ತಿದ್ದಳು.

ಪಾರ್ವತಿಯ ಮದುವೆಗಿಂತಲೂ ಮುಂಚೆಯೇ ಗಣಪಿ ಆ ಮನೆಯ ಕೆಲಸಕ್ಕೆ ಬರುತ್ತಿದ್ದಳು. ಅವಳ ಅಪ್ಪನೂ, ಅಮ್ಮನೂ ಎಲ್ಲರೂ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಅವಳ ಅಮ್ಮ ಸತ್ತ ಮೇಲೆ ಗಣಪಿ ಆ ಸಾರಥ್ಯವನ್ನು ವಹಿಸಿಕೊಂಡಿದ್ದಳು. ಹೆಚ್ಚೂಕಡಿಮೆ ಪಾರ್ವತಿಯದ್ದೇ ವಯಸ್ಸಾಗಿದ್ದ ಗಣಪಿ ಮೊದಮೊದಲು ಇಬ್ಬರೂ ಅಷ್ಟಾಗಿ ಸೇರುತ್ತಿರಲಿಲ್ಲ. ಹೇಳಿಕೇಳಿ ಮನೆಯ ಆಳು, ಜೊತೆಗೆ ಬೇರೆ ಜಾತಿ, ಅವರನ್ನೆಲ್ಲ ಮಾತನಾಡಿಸುವುದುಂಟೇ..? ಯಾವಾಗ ಪಾರ್ವತಿಯ ಮದುವೆಯಾಗಿ, ಅಳಿಯ ಮನೆಯಾಳ್ತನಕ್ಕೆಂದು ಇಲ್ಲಿಗೆ ಬಂದನೋ, ಆ ಮನೆಯ ಹೆಣ್ಣುಮಕ್ಕಳಪೈಕಿ ಇಬ್ಬರು ವಿಧವೆಯರಾಗಿ ಈ ಮನೆಗೇ ಬಂದು ಸೇರಿಕೊಂಡರೋ ಅಲ್ಲಿಂದ ಪಾರ್ವತಿಯ ಗೋಳಿನ ಕತೆ ಶುರುವಾಯಿತು. ಅಷ್ಟರ ನಂತರ ಅವಳ ಕಣ್ಣೀರಿಗೆ ಕರಗಿದ ಏಕೈಕ ಜೀವವೆಂದರೆ ಈ ಗಣಪಿ ಮಾತ್ರ.

ಕಪ್ಪಗೆ ಹೊಳೆಯುತ್ತಿದ್ದ, ಹರಕು ಅಂಗಿ ಹಾಕಿಕೊಂಡು ಶೆಗಣಿ ಎತ್ತಲು ಬರುತ್ತಿದ್ದ ಗಣಪಿಗೂ, ಬೆಳ್ಳಗೆ ಚೆಂದಕಿದ್ದ, ರೇಶಿಮೆ ಲಂಗ, ಚಿನ್ನದ ಒಡವೆಗಳನ್ನು ತೊಟ್ಟುಕೊಳ್ಳುತ್ತಿದ್ದ ಪಾರ್ವತಿಗೂ ಎಲ್ಲಿಗೆಲ್ಲಿಯ ಗೆಳೆತನ? ಹಾಗೆ ನೋಡಿದರೆ ಗಣಪಿ ಆ ಮನೆಯಲ್ಲಿ ಕೆಲಸಕ್ಕೆ ಬರುವಾಗ ತನ್ನದೇ ವಯಸ್ಸಿನ ಈ ಪಾರ್ವತಿ ಜರಿಲಂಗ ತೊಟ್ಟು ಮೈತುಂಬ ಬಂಗಾರ ಹಾಕಿಕೊಂಡು ಚಟಪಟ ಎಂದು ಓಡಾಡುತ್ತಿದ್ದುದನ್ನು ನೋಡುತ್ತ ನಿಲ್ಲುತ್ತಿದ್ದ ಗಣಪಿಗೆ ತನಗೂ ಹಾಗಿದ್ದೇ ಬಂಗಾರ, ರೇಶಿಮೆ ಬಟ್ಟೆ ಬೇಕು ಎನಿಸುತ್ತಿತ್ತು.

ಒಂದೊಂದುಸಲ ಅಂಗಳ ಗುಡಿಸುವಾಗ, ಕಟ್ಟೆ ಸಾರಿಸುವಾಗ, ಅಲ್ಲೇ ಹಾದು ಹೋಗುವ ಪಾರ್ವತಿಯನ್ನು ನೋಡಿದಾಗಲೆಲ್ಲ ಗಣಪಿಗೆ ಆಸೆಯಾಗುತ್ತಿತ್ತು. ಆದರೆ ಮಾತನಾಡಿಸುತ್ತಿರಲಿಲ್ಲ. ಪಾರ್ವತಿಯೂ ಇವಳನ್ನು ಆಳಿನ ಥರವೇ ನೋಡುತ್ತಿದ್ದಳು. ಮನೆಯಲ್ಲಿ ಅಕ್ಕ ತಿಮ್ಮಕ್ಕ, ಸಾವಿತ್ರಿ, ದುಗ್ಗಿ, ಶೇಷಿ, ಲಚ್ಚಿ… ಹೀಗೆ ಸಾಲಾಗಿ ಐದು ಹೆಣ್ಣುಮಕ್ಕಳ ನಂತರ ಹುಟ್ಟಿದವಳು ಈ ಪಾರ್ವತಿ. ಕಡೆಯವಳೆಂಬ ಮುದ್ದೂ ಹೌದು. ಆದರೆ ಅತಿಯಾದ ಮಡಿ, ಮೈಲಿಗೆ ಇದ್ದ ಆ ಮನೆಯಲ್ಲಿ ಅಡುಗೆ ಮನೆ, ದೇವರ ಮನೆಗೆಲ್ಲ ಪ್ರವೇಶವೇ ಇರಲಿಲ್ಲ. ಹೀಗೆ ನಿರ್ಬಂಧದಲ್ಲಿ ಬೆಳೆದ ಪಾರ್ವತಿಗೆ ಚೌಕಾಬಾರ, ಚನ್ನೆಮಣೆ, ಪಗಡೆ ಆಟ ಆಡಲು ಅಕ್ಕಂದಿರು ಜೊತೆಗೆ ಬರುತ್ತಿರಲಿಲ್ಲ. ಇವಳು ಎರಡುಜಡೆ ಹೆಣೆದುಕೊಂಡು, ಜರಿಲಂಗ ತೊಟ್ಟುಕೊಂಡು ಬೆಳೆಯುವ ಹೊತ್ತಿಗೆ ಆ ಅಕ್ಕಂದಿರ ಪೈಕಿ ಹಲವರಿಗೆ ಮದುವೆಯಾಗಿಬಿಟ್ಟಿತ್ತು. ಈಪೈಕಿ ಒಬ್ಬಳಂತೂ ಮದುವೆಯಾಗಿ ಗಂಡನ ಮನೆಗೆ ಹೋಗಿ ಒಂದುವರ್ಷ ಬಾಳ್ವೆ ಮಾಡಿ, ಗಂಡ ಸತ್ತು ವಿಧವೆಯಾಗಿ, ತಲೆಬೋಳಿಸಿಕೊಂಡು ಬಿಳಿಸೀರೆ ಉಟ್ಟು ಮತ್ತೆ ತವರುಮನೆ ಸೇರಿ, ದೇವರಪೂಜೆಯಲ್ಲೇ ಆಯಸ್ಸು ಕಳೆಯುತ್ತಿದ್ದಳು. ಹಾಗಾಗಿ ಅವಳನ್ನು ಆಟಕ್ಕೆ ಕರೆಯುವಂತೆಯೇ ಇರಲಿಲ್ಲ. ಆದರೂ ಒಮ್ಮೆ ಹೋಗಿ ಚನ್ನೆಮಣೆ ಆಡೋಣ ಬಾರೆ ಎಂದು ಕರೆದದ್ದೇ ಸಿಟ್ಟುಗೊಂಡು, ‘ಆಟನಡ, ಎನ್ನ ಬದುಕೇ ಆಟವಾಗ್ಹೋಯ್ದು ಇಲ್ಲಿ, ಎನ್ನ ಆಟಕ್ಕೆ ಕರೀತು, ನಡಿ ಇಲ್ಲಿಂದ’ ಎಂದು ಎರಡು ಏಟು ಕೊಟ್ಟು ಕಳುಹಿಸಿದಳು. ಪಾರ್ವತಿಗೆ ತನ್ನಿಂದ ಯಾವ ತಪ್ಪಾಗಿದೆ ಎಂದೇ ಗೊತ್ತಾಗಲಿಲ್ಲ. ಹಾಗೆ ನೋಡಿದರೆ ಉಳಿದ ಅಕ್ಕಂದಿರಿಗಿಂತ ಇವಳೇ ಪರವಾಗಿಲ್ಲ ಅನ್ನುವಹಾಗಿದ್ದಳು. ಎಲ್ಲಕ್ಕಿಂತ ಹೆಚ್ಚಾಗಿ ಮಡಿ, ಜಪ, ಅಂತ ದೇವರಮುಂದೆ ಕೂರೋದು ಬಿಟ್ಟರೆ, ಉಳಿದವರಿಗಿಂತ ಇವಳೇ ಹೆಚ್ಚು ಪುರುಸೊತ್ತಾಗಿದ್ದವಳು. ಅದಿಕ್ಕೆ ಅವಳನ್ನು ಕೇಳಿದರೆ ಬೈದು ಕಳಿಸಿದ್ದಳು.

ಹೀಗೆ ಯಾರೂ ಇಲ್ಲದೆ ಬೆಳೆದ ಪಾರ್ವತಿಗೂ ಮನೆಯಾಳ್ತನಕ್ಕೆ ಒಂದು ಗಂಡು ನೋಡಿ ಮದುವೆ ಮಾಡಿದ ಅವಳ ಅಪ್ಪ ಶಿವರಾಂ ಭಟ್ಟ. ಮನೆತುಂಬ ಜನ ಇದ್ದಂತೆಯೇ ಆಸ್ತಿಯೇನೋ ಸಾಕಷ್ಟಿತ್ತು. ಆದರೆ ಹುಟ್ಟಿದ್ದೆಲ್ಲವೂ ಹೆಣ್ಣೇ ಆದ್ದರಿಂದ ಈ ಸಮಸ್ತ ಆಸ್ತಿ ನೋಡಿಕೊಳ್ಳಲು ಒಬ್ಬ ಗಂಡು ದಿಕ್ಕು ಬೇಕಾಗಿತ್ತು. ಅದಿಕ್ಕೆ ಪಾರ್ವತಿಗೆ ಮನೆಯಳಿಯನನ್ನೇ ಹುಡುಕಿ ಮದುವೆ ಮಾಡಿಬಿಟ್ಟ. ಪುಟ್ಟ ಹುಡುಗಿ ಪಾರ್ವತಿಗೂ, ಗಂಡು ಲಕ್ಕಣ್ಣನಿಗೂ ವಯಸ್ಸಿನ ಅಂತರ ಸಾಕಷ್ಟಿತ್ತು. ಮೇಧಾವಿ, ಮಾತಿನಮೋಡಿಗಾರ, ಬಂದ ಕೆಲವೇ ದಿನಗಳಲ್ಲಿ ಇಡೀಮನೆ, ಊರು, ಕೇರಿಗಳೆಲ್ಲವನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡ. ಅಂಥ ಪ್ರಭಾವಿ ವ್ಯಕ್ತಿ. ಅಂಥವನ ಹೆಂಡತಿಯಾಗಿ ಗುಬ್ಬಚ್ಚಿಯಂತಿದ್ದ ಪಾರ್ವತಿಗೆ ಮೊದಮೊದಲು ಗಂಡನ ಪ್ರೀತಿಯಲ್ಲಿ ತೇಲಿಹೋಗಿದ್ದಳು. ದೊಡ್ಡಕ್ಕ ತಿಮ್ಮಕ್ಕ ಗಂಡಸತ್ತು ವಿಧವೆಯಾಗಿ ತವರುಮನೆಗೆ ಬರುವವರೆಗೂ ಚೆಂದವಾಗಿಯೇ ಇದ್ದಳು. ಮೊದಲಿನಿಂದಲೂ ತಿಮ್ಮಕ್ಕಂದೇ ದರ್ಬಾರಾಗಿತ್ತು ಆ ಮನೆಯಲ್ಲಿ. ಅಮ್ಮ ಬಹಳ ಬೇಗ ತೀರಿಹೋದ್ದರಿಂದ ಎಲ್ಲ ಪಾರುಪತ್ಯ ಅವಳದ್ದೇ ಆಗಿತ್ತು. ಅವಳು ಹೇಳಿದ ಅಂಗಿಯನ್ನೇ ತೊಡಬೇಕು, ಅವಳು ಹೇಳಿದ ತಿಂಡಿಯನ್ನೇ ತಿನ್ನಬೇಕು ಎಂಬಂತೆ. ಉಳಿದವರೂ ಅದನ್ನೇ ಪಾಲಿಸುತ್ತಿದ್ದರು. ಅಷ್ಟು ಯಜಮಾನಿಕೆಯನ್ನು ನಡೆಸುತ್ತಿದ್ದಳು. ಆದರೆ ಯಾವಾಗ ಅವಳು ಮತ್ತು ಸಾವಿತ್ರಿ ಇಬ್ಬರೂ ವಿಧವೆಯರಾಗಿ ತವರು ಮನೆಗೇ ಬಂದಿಳಿದರೋ, ಉಳಿದ ಅಕ್ಕಂದಿರೆಲ್ಲ ಮದುವೆಯಾಗಿ ಗಂಡನ ಮನೆ ಸೇರಿ, ಈ ಪಾರ್ವತಿ ಮಾತ್ರ ಮದುವೆಯಾಗಿ ತವರುಮನೆಯಲ್ಲೇ ಉಳಿದು, ಮುತೈದೆತನದಿಂದ ಬೀಗುತ್ತ, ವರ್ಷಕ್ಕೊಂದರಂತೆ ಬಸಿರು, ಬಾಳಂತನವೆಂದು ಆರೈಕೆ ಮಾಡಿಕೊಳ್ಳುವ ಮುದ್ದು ತಂಗಿ ಪಾರ್ವತಿ ಅವರೆಲ್ಲರ ಕಣ್ಣುಕುಕ್ಕುತ್ತಿದ್ದಳು. ಅದಕ್ಕಿಂತಲೂ ಹೆಚ್ಚಾಗಿ ಆಕರ್ಷಕ ವ್ಯಕ್ತಿತ್ವದ ಲಕ್ಕಣ್ಣಭಾವ ಹೆಂಡತಿಯೊಡನೆ ಸಲುಗೆಯಿಂದಿರುವುದು ಇನ್ನೂ ಹೆಚ್ಚು ಕುಕ್ಕುತ್ತಿತ್ತು ಅವರಿಬ್ಬರಿಗೆ. ಇದೇ ಹೆಚ್ಚಾಯಿತೋ ಏನೋ. ಒಟ್ಟಿನಲ್ಲಿ ತಂಗಿ ಪಾರ್ವತಿಯನ್ನು ವೈರಿಯಂತೆ ದ್ವೇಷಿಸುವಂತೆ ಆಯಿತು ಅವರಿಬ್ಬರಿಗೂ. ಅದರ ಪರಿಣಾಮ, ಪಾರ್ವತಿ ಅಘನಾಶಿನಿ ನದಿಯ ದಂಡೆಗೆ ಹೋಗಿ ಕುಳಿತು ಮನಸೋ ಇಚ್ಛೆ ಅಳುವುದು ಹೆಚ್ಚಾಯಿತು.

ಇಂಥವನ್ನೆಲ್ಲ ನೋಡುತ್ತ ಬೆಳೆದ ಗಣಪಿಗೆ, ಪಾರ್ವತಿ ಹತ್ತಿರವಾದದ್ದು ಒಂದು ಘಟನೆಯಿಂದ. ಅಂದು ಎಂದಿನಂತೆ ಕೊಟ್ಟಿಗೆಯಲ್ಲಿ ಸಗಣಿ ಬಾಚಿ, ಅಂಗಳ ಸಾರಿಸಲೆಂದು ಅಣಿಯಾಗುತ್ತಿದ್ದಳು ಗಣಪಿ. ಮನೆಯೊಳಗೆ ಏನೋ ಗಲಾಟೆ ಕೇಳುತ್ತಿತ್ತು. ಏನೆಂದು ಕುತೂಹಲದಿಂದ ಕಿಟಕಿಯಲ್ಲಿ ಹಣಕಿನೋಡಿದಳು. ಲಕ್ಕಣ್ಣ ಪ್ಯಾಟೆಯಿಂದ ಬಂದವನೇ ಉಸ್ಸೆಂದು ಜಗುಲಿಯಲ್ಲಿದ್ದ ತನಗೆಂದೇ ಇದ್ದ ಮರದ ಕುರ್ಚಿಯ ಮೇಲೆ ಕುಳಿತು ಕುಡಿಯಲು ಮಜ್ಜಿಗೆ ಕೇಳಿದ. ಪಾರ್ವತಿ ಲಗುಬಗೆಯಿಂದ ದೊಡ್ಡ ಲೋಟದಲ್ಲಿ ಮಜ್ಜಿಗೆ ಮಾಡಿ ತಂದುಕೊಟ್ಟಳು. ಕುಡಿಯುತ್ತಿದ್ದವನಿಗೆ ಅದರಲ್ಲೇನೋ ಕಸ ಕಂಡು ತಕ್ಷಣ, ‘ಸರಿಯಾಗಿ ನೋಡಕ್ಯಬಪ್ಪಲೂ ಆಗ್ತಿಲ್ಯಾ ನಿಂಗೆ’ ಎಂದು ಅವಳ ಮುಖಕ್ಕೆ ಮಜ್ಜಿಗೆಯನ್ನು ಎರಚಿದ. ಅಳುತ್ತ ಒಳಗೆ ಓಡಿದಳು ಪಾರ್ವತಿ. ಮಿಕ್ಕ ಇಬ್ಬರೂ ಅಕ್ಕಂದಿರ ಬೈಗುಳದ ಸುರಿಮಳೆಯೊಂದಿಗೆ.

ಹಾಗೆ ಅಳುತ್ತಾ ಹಿತ್ತಲಕಡೆಯಿರುವ ಬಾವಿಬಳಿ ಬಂದು ತುಂಬ ಹೊತ್ತು ಕುಳಿತಿದ್ದಳು. ಅದೇಕೋ ಗಣಪಿಗೂ ತಡೆಯಲಾಗದೆ ಅಲ್ಲಿಗೆ ಹೋದಳು. ಗಣಪಿಯನ್ನು ನೋಡಿದವಳೇ ಅವಳನ್ನು ಅಪ್ಪಿಕೊಂಡು ಅಳತೊಡಗಿದಳು. ಗಣಪಿಗೆ ಭಯವಾಗತೊಡಗಿತು. ಬ್ರಾಂಬ್ರ ಹುಡುಗಿ ಹೀಗೆ ಕೆಳಗಿನ ಜಾತಿಯವಳನ್ನು ಮುಟ್ಟುವುದೇ, ಬೇರೆಯವರು ನೋಡಿದರೇನು ಗತಿ ಎಂದು ತಕ್ಷಣ ಅವಳನ್ನು ತಳ್ಳಿದಳು. ‘ಸಮಾಧಾನ ತಂದ್ಕಳ್ರಾ ಅಮ್ಮಾ, ಎಲ್ಲ ಸರಿಹೋಕೈತಿ’ ಎಂದು ತನಗೆ ತಿಳಿದದ್ದನ್ನು ಹೇಳಿ ಸಮಾಧಾನಿಸಿದಳು. ಹೀಗೆ ಪಾರ್ವತಿ ದುಃಖ ತೋಡಿಕೊಳ್ಳುತ್ತ, ಗಣಪಿ ಸಮಾಧಾನಿಸುತ್ತ ಇಬ್ಬರೂ ಹತ್ತಿರವಾದರು. ಅಲ್ಲಿ ಜಾತಿ, ಮಡಿ ಯಾವುದೂ ಅಡ್ಡ ಬರಲೇ ಇಲ್ಲ.

ಒಂದು ದಿನ ಯಾಕೆ ತನ್ನದೇ ಅಕ್ಕಂದಿರು ಹೀಗೆಲ್ಲ ಮಾಡುತ್ತಾರೆ ಗಣಪಿ ಎಂದು ಕಣ್ಣೀರು ಹರಿಸಿ ಕೇಳಿದಳು. ‘ಅವರಿಗಿಲ್ಲದ ಸೌಭಾಗ್ಯ ನಿಮಗೈತ್ರಲ್ಲ ಅಮ್ಮಾ, ಅದ್ಕೆ ಹಂಗೆ ಮಾಡ್ತವ್ರೇ..’ ಎಂದಳು.

ಯಾವಾಗ ಪಾರ್ವತಿಯ ಮದುವೆಯಾಗಿ, ಅಳಿಯ ಮನೆಯಾಳ್ತನಕ್ಕೆಂದು ಇಲ್ಲಿಗೆ ಬಂದನೋ, ಆ ಮನೆಯ ಹೆಣ್ಣುಮಕ್ಕಳಪೈಕಿ ಇಬ್ಬರು ವಿಧವೆಯರಾಗಿ ಈ ಮನೆಗೇ ಬಂದು ಸೇರಿಕೊಂಡರೋ ಅಲ್ಲಿಂದ ಪಾರ್ವತಿಯ ಗೋಳಿನ ಕತೆ ಶುರುವಾಯಿತು. ಅಷ್ಟರ ನಂತರ ಅವಳ ಕಣ್ಣೀರಿಗೆ ಕರಗಿದ ಏಕೈಕ ಜೀವವೆಂದರೆ ಈ ಗಣಪಿ ಮಾತ್ರ.

ಇದ್ದಿರಬಹುದು ಎಂದು ಆಗ ಪಾರ್ವತಿಗೂ ಅನಿಸತೊಡಗಿತು. ಅದುವರೆಗೆ ಎಲ್ಲವೂ ಸರಿಯೇ ಇತ್ತು. ಮದುವೆಯಾದ ಹೊಸತರಲ್ಲಿ ಗಂಡ ಇವಳನ್ನು ತುಂಬ ಪ್ರೀತಿಸುತ್ತಿದ್ದ ಕೂಡ. ಎಲ್ಲ ಆಸ್ತಿಪಾಸ್ತಿ ಅವನ ಹೆಸರಿಗೇ ಮಾಡಿಕೊಡುತ್ತೇನೆಂದು ಅಪ್ಪ ಅವನನ್ನು ತಂದು ಮದುವೆಮಾಡಿದ್ದರು. ಅಕ್ಕ ಸಾತಕ್ಕ ವಿಧವೆಯಾಗಿ ಆ ಮನೆಗೆ ಬಂದಾಗಲೂ ಅಷ್ಟು ಸಮಸ್ಯೆ ಇರಲಿಲ್ಲ. ಅವಳ ಪಾಡಿಗವಳು ಮಡಿ, ಜಪ, ದೇವರು ಎಂದು ಇದ್ದಳು. ಸಮಸ್ಯೆ ಇದ್ದದ್ದು ತಿಮ್ಮಕ್ಕನದ್ದು. ಮದುವೆಯಾಗಿ 4-5 ವರ್ಷವಾಗಿದ್ದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಅವಳ ಗಂಡನೂ ತೀರಿಹೋಗಿ, ಅವಳಿಗೂ ಮಡಿ ಮಾಡಿ, ಕೆಂಪು ಸೀರೆ ಉಡಿಸಿ ತವರು ಮನೆಯಲ್ಲಿ ಕೂರಿಸಿದರೋ ಅಲ್ಲಿಂದ ಶುರುವಾಯಿತು ಪಾರ್ವತಿಯ ಸಂಕಷ್ಟದ ದಿನಗಳು. ಪಾರ್ವತಿ ಯಾವ ಸೀರೆ ಉಟ್ಟರೂ ಕೊಂಕು, ಯಾವ ಬಂಗಾರ ಹಾಕಿಕೊಂಡರೂ ಅದರ ಮೇಲೆ ಕಣ್ಣು ಶುರುವಾಯಿತು. ಇದು ಎಷ್ಟು ವಿಕೋಪಕ್ಕೆ ಹೋಯಿತೆಂದರೆ ಅವಳ ಗಂಡನನ್ನು ಅವಳಿಂದ ಬೇರೆ ಮಾಡುವಷ್ಟು. ಅವಳ ಗಂಡ ಲಕ್ಕಣ್ಣ ನೋಡಲು ಸುರಸುಂದರ, ಆಜಾನುಬಾಹು. ಎತ್ತರದ ನಿಲುವು. ಒಳ್ಳೆ ಮಾತುಗಾರಿಕೆ, ಆಗಲೇ ಊರಲ್ಲೆಲ್ಲ ಪ್ರಭಾವಿ ವ್ಯಕ್ತಿಯಾಗಿಬಿಟ್ಟಿದ್ದ. ಯಾರದ್ದೇ ಮನೆಯ ಜಗಳವಿದ್ದರೂ ಬಗೆಹರಿಸಲು ಲಕ್ಕಣ್ಣನೇ ಬೇಕಿತ್ತು. ಇಂಥ ಸಮಯದಲ್ಲಿ ಅವನ ನ್ಯಾಯ ಪಂಚಾಯ್ತಿ ಮಾಡುವ ರೀತಿ, ಮಾತನಾಡುವ ರೀತಿ ಎಲ್ಲವನ್ನೂ ಹೊಗಳುತ್ತಿದ್ದಳು ತಿಮ್ಮಕ್ಕ. ಹೀಗೆ ನಡೆಯುತ್ತಾ ಬಂದು ಪಾರ್ವತಿ ಅಕ್ಷರಶಃ ಮೂಲೆಗುಂಪಾಗಿ, ಮಕ್ಕಳನ್ನು ಹೆರುವುದಕ್ಕೆ ಮಾತ್ರ ಹೆಂಡತಿ…ಎಂಬಲ್ಲಿಗೆ ಬಂದು ನಿಂತಳು.

ಒಂದು ದಿನ ನಡೆದ ಘಟನೆ ಪಾರ್ವತಿಯಷ್ಟೇ ಅಲ್ಲ, ಗಣಪಿಗೂ ಮರೆಯಲು ಸಾಧ್ಯವಿಲ್ಲ. ಅವತ್ತು ದೀಪಾವಳಿ. ಬೂರೆಹಬ್ಬದ ದಿವಸ ಎಲ್ಲರಿಗೂ ಅಭ್ಯಂಗ ಸ್ನಾನವಾಗಬೇಕು. ಪಾರ್ವತಿ ಮಕ್ಕಳಿಗೆಲ್ಲ ಎಣ್ಣೆಹಚ್ಚಿ ಸ್ನಾನಕ್ಕೆ ತಯಾರಿ ಮಾಡಿ, ಇನ್ನು ಗಂಡನಿಗೂ ಎಣ್ಣೆ ಹಚ್ಚಬೇಕೆಂದು ಹಿತ್ತಲಕಡೆಯ ಅಂಗಳಕ್ಕೆ ಹೋಗಿ ನೋಡುತ್ತಾಳೆ. ಇಬ್ಬರು ಅಕ್ಕಂದಿರೂ ಆಗಲೇ ಗಂಡನಿಗೆ ಎಣ್ಣೆ ಹಚ್ಚುತ್ತ ನಿಂತಿದ್ದರು. ಒಬ್ಬಳು ಬೆನ್ನಿಗೆ ಎಣ್ಣೆ ಹಚ್ಚಿ ನೀವುತ್ತಿದ್ದರೆ ಮತ್ತೊಬ್ಬಳು ಕಾಲಿಗೆ ಹಚ್ಚುತ್ತ ಕುಳಿತಿದ್ದಳು. ಅದನ್ನು ನೋಡಿ ಏನು ಮಾಡಬೇಕೆಂದೇ ತಿಳಿಯದೇ ಹಾಗೇ ನಿಂತಳು. ಎಣ್ಣೆ ತಟ್ಟೆಯನ್ನು ಹಿಡಿದು ಬಂದ ಅವಳನ್ನು ನೋಡಿದ ತಿಮ್ಮಕ್ಕ, ‘ನೀ ಹಚ್ಚದು ಭಾವಯ್ಯಂಗೆ ಸರಿ ಹೋಗ್ತಿಲ್ಲೆ. ಯಾವ ಕೆಲ್ಸವನ್ನೂ ಸರಿ ಮಾಡಲೆ ಬತ್ತಿಲ್ಲೆ ನಿಂಗೆ. ನೀ ಹುಡುಗ್ರ ಸ್ನಾನಮಾಡ್ಸು ಸಾಕು. ಇವನ್ನು ಎಂಗ ನೋಡಕ್ಯತ್ಯ’ ಎಂದು ಇಬ್ಬರೂ ಒಟ್ಟೊಟ್ಟಿಗೇ ಹೇಳಿದರು. ಗಂಡ ಒಂದೂ ಮಾತನಾಡದೆ ಎಣ್ಣೆ ಹಚ್ಚಿಸಿಕೊಳ್ಳುತ್ತ ಆನಂದದಲ್ಲಿ ತೇಲುತ್ತ ಇದ್ದಂತೆನಿಸಿತು. ಈ ಘಟನೆ ಪಾರ್ವತಿಗಿಂತಲೂ ಹೆಚ್ಚಾಗಿ ಗಣಪಿಗೇ ನೋವು ತರಿಸಿತು. ಗೊತ್ತು, ಈಗ ಪಾರ್ವತಿ ಬಾವಿಕಟ್ಟೆ ಬಳಿ ಕೂತು ಕಣ್ಣೀರು ಸುರಿಸುತ್ತಿರುತ್ತಾಳೆಂದು, ಮೆಲ್ಲಗೆ ಅಲ್ಲಿಗೆ ಹೋಗಿ, “ಹೆಂಗಸ್ರೇನ್ರಮ್ಮಾ ಅವರು, ಥೂ..” ಎಂದು ಉಗಿದಳು. ಪಾರ್ವತಿ ಅತ್ತು ಸಮಾಧಾನಿಸಿಕೊಂಡು ಒಳನಡೆದಳು ಮಕ್ಕಳನ್ನು ಸ್ನಾನಮಾಡಿಸಲು. ಅಷ್ಟೊತ್ತಿಗೆ ಇದ್ದ ನಾಲ್ಕೈದು ಮಕ್ಕಳು ಎಣ್ಣೆ ಹಚ್ಚಿಕೊಂಡು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಆಟವಾಡುತ್ತಿದ್ದರು.

ಕಡೆಕಡೆಗೆ ಇದು ಯಾವ ಮಟ್ಟಕ್ಕೆ ಹೋಯಿತೆಂದರೆ ಗಂಡ ಲಕ್ಕಣ್ಣ ಪಾರ್ವತಿ ಮಾಡಿದ ಅಡುಗೆಯನ್ನು ಉಣ್ಣುತ್ತಿರಲಿಲ್ಲ. ಅವಳು ಕೊಟ್ಟ ನೀರನ್ನೂ ಕುಡಿಯುತ್ತಿರಲಿಲ್ಲ. ಇಷ್ಟಾದರೇನು, ದಂಡಿಯಾಗಿ ಮಕ್ಕಳಂತೂ ಆದವು, ಒಂದಾದಮೇಲೊಂದರಂತೆ 10 ಮಕ್ಕಳಾದವು. ಅವುಗಳಲ್ಲಿ ಕೆಲವು ಸತ್ತೂ ಹೋದವು. ಒಂದು ಬಾಣಂತನ ಇನ್ನೂ ನೆನಪಿದೆ ಅವಳಿಗೆ.. ಅದು ಮಗ ಗುರುಪಾದ ಹುಟ್ಟಿದ ಹೊತ್ತು. ಮಗ ಮೈಕೈ ತುಂಬಿಕೊಂಡು ಒಳ್ಳೆ ಹುಣ್ಣಿಮೆಯ ಚಂದ್ರನಹಾಗಿದ್ದ. ಆದರೆ ನೆಟ್ಟಗೆ ಬಾಣಂತನ ಮಾಡುವವರೂ ಯಾರೂ ಇಲ್ಲದೆ ಕಷ್ಟಪಡುತ್ತಿದ್ದಳು ಪಾರ್ವತಿ. ಅದು ಜೋರು ಮಳೆಗಾಲ, ಮೊದಲೇ ಬಟ್ಟೆ ಒಣಗುತ್ತಿರಲಿಲ್ಲ. ಬಚ್ಚಲು ಮನೆಯ ಸಮೀಪದ ದೊಡ್ಡ ಲಾಯದಲ್ಲಿ ಒಂದು ಕಡೆ ಹೊಡಸಲು ಹಾಕಿದ್ದರು. (ಮಲೆನಾಡ ಕಡೆಗಳಲ್ಲಿ ಮಳೆಗಾಲದಲ್ಲಿ ಬೆಂಕಿಕಾಯಿಸಿಕೊಳ್ಳಲು, ಮುಖ್ಯವಾಗಿ ತೋಟ, ಗದ್ದೆಗೆಂದು ಹಾಕಿಕೊಂಡು ಹೋಗಿದ್ದ ಕಂಬಳಿ ಕೊಪ್ಪೆಯನ್ನು ಒಣಗಿಸಲು ಇರುವ ಜಾಗ. ಚಿಕ್ಕದಾದ ಹೊಂಡಮಾಡಿ, ಅದರಲ್ಲಿ ಬೆಂಕಿ ಹಾಕುತ್ತಿದ್ದರು. ಮೇಲೊಂದು ಅಡಕೆ ದಬ್ಬೆಯ ಅಟ್ಟವಿರುತ್ತಿತ್ತು. ಆ ಅಟ್ಟದ ಮೇಲೆ ಕಂಬಳಿ ಹರವಿ ಒಣಗಿಸಿಕೊಳ್ಳುತ್ತಿದ್ದರು. ಆ ಹೊಂಡಕ್ಕೆ ಹೊಡಸಲು ಎಂದು ಕರೆಯುತ್ತಾರೆ.) ಬೆಚ್ಚಗಿರಲಿ ಎಂದು ಹೊಡಸಲ ಸಮೀಪದಲ್ಲೇ ಗೋಣಿಪಾಟು ಹಾಕಿ ಅದರ ಮೇಲೆ ಮಗನನ್ನು ಆಡಿಮಲಗಿಸಿ, ಪಾರ್ವತಿ ಬಚ್ಚಲುಮನೆಗೆ ಹೋಗಿದ್ದಳು. ಮಗು ಆಗಷ್ಟೇ ಮಗಚಿ ಹಾಕಿಕೊಳ್ಳುತ್ತಿತ್ತು. ಮಗು ಮಗಚಿಕೊಂಡು, ಇನ್ನೇನು ಒಂದು ಕಾಲು ಧಗಧಗನೆ ಉರಿವ ಹೊಡಸಲಿಗೆ ಬೀಳಬೇಕು ಅನ್ನುವಷ್ಟರಲ್ಲಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಗಣಪಿ ಓಡಿ ಹೋಗಿ ಅಯ್ಯೋ ಎನ್ನುತ್ತ ಎತ್ತಿಕೊಂಡಳು.

ಅವಳು ಕೂಗಿದ ಹೊಡೆತಕ್ಕೆ ಜಗುಲಿಯಲ್ಲಿದ್ದ ಲಕ್ಕಣ್ಣನೂ, ಅಡುಗೆಮನೆ, ದೇವರ ಮನೆಗಳಲ್ಲಿದ್ದ ಸಾತಕ್ಕ, ತಿಮ್ಮಕ್ಕಂದಿರೂ ಓಡಿಬಂದು ನೋಡುತ್ತಾರೆ, ಗಣಪಿ ಕೈಯ್ಯಲ್ಲಿ ಮಗು. ಅದೂ ಹೆಚ್ಚೂಕಮ್ಮಿ ಅಡುಗೆ ಮನೆ ಸಮೀಪದವರೆಗೂ ಬಂದುಬಿಟ್ಟಿದ್ದಳು ಗಣಪಿ. ‘ಅಯ್ಯೋ.. ಮುಟ್ಟುಬಿಟ್ಯನೆ ರಂಡೆ. ಎಲ್ಲ ಹಾಳಾಗ್ಹೋತು, ಜಾತಿಪೀತಿ ಎಂತದ್ದೂ ಇಲ್ಲೆ ಖರ್ಮಕ್ಕೆ..’ ಎಂದು ಇಬ್ಬರೂ ಕೂಗಿಕೊಂಡರು. ತಕ್ಷಣ ಬಂದ ಪಾರ್ವತಿಗೂ ‘ನಿನ್ನ ಗೆಳತ್ಯಲೇ.. ನೋಡು ಎಂತ ಕೆಲ್ಸ ಮಾಡಿದ್ದು ನೋಡು’ ಎಂದು ಮಹಾ ಅಪರಾಧಮಾಡಿದವರಂತೆ ಬೈದರು. ‘ಅಲ್ಲಾ ಅಕ್ಕಯ್ಯ, ಅವ ಹೊಡಸ್ಲಿಗೆ ಕಾಲು ಹಾಕ್ಯಂಡಿಯಿದ್ರೆ ಗತಿ ಎಂತಾಗ್ತಿತ್ತು. ಸುಟ್ಟೋಪದನ್ನ ಗಣಪಿ ತಡದ್ದಿಲ್ಯಾ. ಅದ್ನ ನಿಂಗ ನೋಡವಲ್ದ. ಎಂತ ಜಾತಿಪೀತಿ. ಪಾಪ, ಎಳೇ ಕಾಲು, ಸುಟ್ಟುಹೋಗಿದ್ರೆ ನಿಂಗ ಬರ್ತಿದ್ರಾ ಅದ್ನ ಸರಿ ಮಾಡಲೇ..’ ಎಂದು ಪಾರ್ವತಿಯೂ ತಿರುಗಿನಿಂತಳು. ಜೊತೆಗೆ ಗಣಪಿಯ ಬಳಿ ಇದ್ದ ಮಗುವನ್ನು ತೆಗೆದುಕೊಂಡು ಹಾಗೇ ಮನೆಯೊಳಗೆ ಹೊರಡಲು ಅನುವಾದಳು. ಅದುವರೆಗೆ ಒಮ್ಮೆಯೂ ತಿರುಗಿ ಮಾತನಾಡದ ಪಾರ್ವತಿಯ ಮಾತು ಕೇಳಿ ತಿಮ್ಮಕ್ಕನಿಗೆ ಉರಿಹತ್ತಿ, ‘ಕೇಳದ್ಯನಾ ಭಾವಯ್ಯ, ನಿನ್ನ ಹೆಂಡತಿ ಮಾತ್ನಾ, ಅದಕ್ಕೆ ಜಾತಿ ಮುಖ್ಯ ಅಲ್ದಡ. ಈ ಹೊಲಿಗೆಟ್ಟವಳ ಗೆಳ್ತನ ಅದಕ್ಕೆ, ಏಯ್ ನಿಂತ್ಕಾ ಅಲ್ಲೇಯ, ಮೈಲಿಗೆಲಿ ನೀ ಮನೆಯೊಳಗೆ ಕಾಲಿಡಲಾಗ್ತಿಲ್ಲೆ, ತಾಯಿ ಮಗ ಇಬ್ಬರೂ ಸ್ನಾನ ಮಾಡಿಕೈಂಡು ಬನ್ನಿ’ ಎಂದು ಜೋರುಮಾಡಿದ ಹೊಡೆತಕ್ಕೆ ಒಳಗೆ ಕಾಲಿಡಬೇಕಿದ್ದ ಕಾಲನ್ನು ಹಾಗೆಯೇ ಹಿಂದೆಗೆದಳು ಪಾರ್ವತಿ. ಆದರೆ, ಅದೇನಾಯ್ತೋ ಈ ಲಕ್ಕಣ್ಣ ಭಾವನಿಗೆ, ‘ಎಂಗಕ್ಕಿಗೇ ತಿರುಗಿ ಹೇಳುವಷ್ಟು ಜೋರಾಯ್ದೆನೇ ನೀನು’ ಎಂದು ಕೆನ್ನೆಗೆರೆಡು ಬಾರಿಸಿಬಿಟ್ಟ. ನೋವು, ಅವಮಾನದಿಂದ ಕುಗ್ಗಿಹೋದಳು ಪಾರ್ವತಿ. ತಾಯಿ ಮಗ ಇಬ್ಬರನ್ನೂ ಮೂರುಮೂರು ಬಾರಿ ಸ್ನಾನ ಮಾಡಿಸಿದ ಹೊರತೂ ಮನೆಯೊಳಗೆ ಬಿಟ್ಟುಕೊಳ್ಳಲಿಲ್ಲ ಇಬ್ಬರೂ.

ಅವತ್ತು ಊಟವಾಗಿ ಎಲ್ಲರೂ ಮಲಗಿದ ಹೊತ್ತು, ಹಸಿಹಸಿ ಬಾಣಂತಿ ಪಾರ್ವತಿ ಮಗುವನ್ನೂ ಕರೆದುಕೊಂಡು ಮನೆಯಿಂದ ಹೊರಬಿದ್ದಳು. ಸೀದಾ ಅಘನಾಶಿನಿ ನದಿಯ ದಂಡೆಯ ಮೇಲೆ ಹೊಳೆಯನ್ನೇ ದಿಟ್ಟಿಸಿತ್ತ ಕುಳಿತಳು. ಮಗುವು ಮಡಿಲಲ್ಲಿ ಜಗದ ಅರಿವೇ ಇಲ್ಲದಂತೆ ನಿದ್ದೆಹೋಗಿತ್ತು. ಅದೆಷ್ಟು ಹೊತ್ತು ಹಾಗೆಯೇ ಕುಳಿತಿದ್ದಳೋ… ಹಿಂದೆ ಗಣಪಿ ಬಂದು ನಿಂತದ್ದೂ ಅರಿವಿಗೆ ಬಾರದಂತೆ. ‘ಎಂತದ್ರಾ ಅಮ್ಮಾ.. ಹೀಂಗ್ ಕುಂತೀರಿ’ ಎಂದು ಗಣಪಿ ಕೇಳಿದಾಗಲೇ ಎಚ್ಚರವಾಗಿದ್ದು. ‘ಎಂತ ಇಲ್ಲ ಗಣಪಿ, ಈ ಹೊಳೆಗೇ ಬಿದ್ದು ಸತ್ಹೋಗನ ಅಂದರೆ ನಂಗೆ ಈಜು ಬರ್ತದೆ, ಬೇರೆ ಸಾಯುವ ಯಾವ ಹಾದಿಯೂ ನಂಗೆ ಗೊತ್ತಾಗ್ತಾ ಇಲ್ಲದೇ ಹೀಗೇ ಕುಂತ್ಕಂಡಿದೇನೆ’ ಎಂದು ಹರಿಯುವ ಹೊಳೆಯನ್ನೇ ನೋಡುತ್ತಾ ಹೇಳಿದಳು. ‘ಅಯ್ಯ, ಸಾಯ ಮಾತ್ಯಾಕ ಈಗ ಅಮ್ಮಾ. ನೋಡು ಮಗೀನ. ಎಷ್ಟು ಚೆಂದಕೆ ನಿದ್ದೆ ಮಾಡಿದೆ. ಈ ಕಷ್ಟ ಹಿಂಗೇ ಇರಾಕಿಲ್ಲ. ಈ ಕಷ್ಟ ಎಲ್ಲ ಹರೀತದೆ, ಬೆಳಕು ಮೂಡತೈತೆ ಬಿಡ್ರಾ..’ ಎಂದು ತನಗನಿಸಿದ ರೀತಿಯಲ್ಲೇ ಸಮಾಧಾನ ಮಾಡಿದಳು ಗಣಪಿ. ನನ್ನ ಬದುಕಿನಲ್ಲಿ ಬೆಳಕಾ… ಎಂದು ಹರಿವ ನೀರನ್ನೇ ದಿಟ್ಟಿಸುತ್ತ ನಿಟ್ಟುಸಿರು ಬಿಟ್ಟಳು ಪಾರ್ವತಿ.
ಆದರೆ ಗಣಪಿ ಅದ್ಯಾವ ಘಳಿಗೆಯಲ್ಲಿ ಈ ಮಾತು ಆಡಿದಳೋ… ಇದೆಲ್ಲ ಹರಿಯುವ ದಿನ ಅವಳೆದುರಿಗೆ ಬಂದು ನಿಂತಿತು.

ಗಂಡ-ಹೆಂಡತಿಯರಿಬ್ಬರನ್ನೂ ದೂರಮಾಡಿದ ಆ ಇಬ್ಬರು ಅಕ್ಕಂದಿರಿಗೆ ಇದೇ ಭಾವನನ್ನೂ ದೂರಮಾಡುವ ಸಂದರ್ಭ ಒದಗಿಬರುತ್ತದೆಂದು ಸ್ವತಃ ಲಕ್ಕಣ್ಣನೂ ಅಂದುಕೊಂಡಿರಲಿಲ್ಲ. ಆ ಅಕ್ಕಂದಿರಿಗೂ ಗೊತ್ತಿರಲಿಲ್ಲ. ಜೊತೆಗೆ ಆ ಮನೆಯನ್ನೂ ಬಿಡಬೇಕಾಗಿ ಬರಬಹುದೆಂದೂ ಅನಿಸಿರಲಿಲ್ಲ. ಇದು ತನ್ನದೇ ಮನೆ ಎಂದು ಭದ್ರವಾಗಿ ತಳವೂರಿ ಆಡಳಿತ ನಡೆಸಿಕೊಂಡು ಬರುತ್ತಿದ್ದ ಲಕ್ಕಣ್ಣನಿಗೂ, ಮಾವ ಶಿವರಾಂ ಭಟ್ಟನಿಗೂ ನಡುವೆ ತಕರಾರಾಯಿತು. ಅದು ಜಮೀನು ವಿಷಯಕ್ಕೆ.
ಲಕ್ಕಣ್ಣ ಆ ಮನೆಗೆ ಬಂದಮೇಲೆ ಲಕ್ಕಣ್ಣನ ಮನೆಯೆಂದೇ ಊರವರು ಗುರುತಿಸುತ್ತಿದ್ದರು. ಹೆಣ್ಣು ಸಂತಾನವಾದ ಕಾರಣಕ್ಕೆ ಅಷ್ಟೂ ಆಸ್ತಿಯ ಒಡೆತನ ನಿನಗೇ ಸಿಗುತ್ತದೆಂದೇ ಕರೆದು ಮಗಳ ಕೊಟ್ಟು ಮದುವೆ ಮಾಡಿಸಿದ್ದ ಶಿವರಾಂ ಭಟ್ಟನಿಗೆ ಇತ್ತೀಚೆಗೆ ಅಳಿಯನ ದರ್ಬಾರ್ ಯಾಕೋ ಸರಿಬರುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮಗಳು ಪಾರ್ವತಿಯ ಮೈಮೇಲಿನ ಸಾಕಷ್ಟು ಒಡವೆಗಳು ಕಾಣೆಯಾಗತೊಡಗಿದ್ದು ಅವನ ಗಮನಕ್ಕೂ ಬಂದಿತ್ತು. ಅದನ್ನು ಕೇಳುವ ಹಾಗೂ ಇರಲಿಲ್ಲ.

ಇದ್ದ ಸಮಸ್ತ ಆಸ್ತಿಯಲ್ಲಿ ಒಡವೆಗಳ ಪಾಲೂ ಸಾಕಷ್ಟಿದ್ದವು. ಟೀಕೀಸರ, ನಾಗರಹೆಡೆ, ಬಾಜುಬಂದಿ, ಸೊಂಟದ ಪಟ್ಟಿ, ಗೋಧಿಮಣಿಸರ, ಜಿಲೇಬಿ ಸರ, ಅವಲಕ್ಕಿ ಸರ, ಕೊತ್ತಂಬರಿ ಕಾಳು ಸರ, ಜೋಮಾಲೆ ಸರ, ಮಗೆಬೀಜದ ಸರ, ಸೇರಿದಂತೆ ಉದ್ದುದ್ದ ಹಾರಗಳು, ಪಾಟಲಿ, ಚಿಕ್ಕಿಬಳೆ, ಮಗೆಬೀಜದ ಬಳೆ, ಕೆಂಪು, ಬಿಳಿ ಕಲ್ಲಿನ ಬಳೆಗಳು, ಹವಳದ ಬಳೆಗಳು, ಸೇರಿದಂತೆ ಅನೇಕ ಬಳೆಗಳು, ಕೇದಿಗೆಹೂವು, ಮುಡಿಹೂವು, ಸಂಪಿಗೆಹೂವು ಸೇರಿದಂತೆ ತಲೆಬಂಗಾರ, ಬೈತಲೆಮುತ್ತು, ತಲೆಗೆ ಹಾಕುವ ಅನೇಕ ಒಡವೆಗಳು, ಜಡೆಬಂಗಾರ, ಜಡೆಯ ತುದಿಯಲ್ಲಿ ಕಟ್ಟುವ ಗೊಂಡೆ, ಕಿವಿಗೆ ಹಾಕುವ ಮುತ್ತಿನ ಬುಗುಡಿ, ಬೆಂಡೋಲೆಗಳು ಸೇರಿದಂತೆ ಲೆಕ್ಕವಿಲ್ಲದಷ್ಟು ಒಡವೆಗಳು. ಒಬ್ಬೊಬ್ಬ ಅಕ್ಕತಂಗಿಯರೂ ಕೊಳಗದಲ್ಲಿ ಅಳೆದುಪಾಲುಮಾಡಿಕೊಂಡಿದ್ದರು.

ಮನೆಯಲ್ಲಿದ್ದ ಇಬ್ಬರು ಮಕ್ಕಳಾದ ಸಾವಿತ್ರಿ ಮತ್ತು ತಿಮ್ಮಕ್ಕ ಹೇಗೂ ವಿಧವೆಯರು. ಅವರ ಬಂಗಾರವನ್ನೆಲ್ಲ ಅಪ್ಪನಕೈಯ್ಯಲ್ಲೇ ಕೊಟ್ಟಿದ್ದರು. ಅಪ್ಪ ಅವಷ್ಟನ್ನೂ ಕಬ್ಬಿಣದ ಪೆಟಾರಿಯಲ್ಲಿಟ್ಟು ಬೀಗ ಹಾಕಿದ್ದ. ಮಿಕ್ಕ ಮಕ್ಕಳು ತಮ್ಮ ಪಾಲಿಗೆ ಬಂದ ಬಂಗಾರವನ್ನು ಗಂಡನ ಮನೆಯಲ್ಲೇ ಇಟ್ಟುಕೊಂಡಿದ್ದರು, ಆದರೆ ಕಿರಿಯ ಮಗಳು ಪಾರ್ವತಿಯ ಬಂಗಾರವನ್ನೆಲ್ಲ ಗಂಡ ಲಕ್ಕಣ್ಣನೇ ಇಟ್ಟುಕೊಳ್ಳುತ್ತಿದ್ದ. ಹೀಗಿರುವಾಗಲೇ ಅವಳ ಒಡವೆಗಳು ಕಾಣೆಯಾಗುತ್ತಿದ್ದದ್ದು ಗಮನಕ್ಕೆ ಬಂದದ್ದು ನೆಂಟರಿಷ್ಟರ ಮದುವೆಮನೆಯಲ್ಲಿ. ಟೀಕೀಸರ, ಗೋದಿಮಣಿ ಸರ, ಸೇರಿದಂತೆ ದೊಡ್ಡದೊಡ್ಡ ಸರಗಳ್ಯಾವವೂ ಮಗಳ ಕುತ್ತಿಗೆಯಲ್ಲಿ ಕಾಣಿಸುತ್ತಿರಲಿಲ್ಲ. ಕೇಳಿದಾಗ ಏನೇನೋ ಕಾರಣಗಳನ್ನು ಕೊಡುತ್ತಿದ್ದಳು, ಇಂದು ಮರೆತುಹೋಯಿತು, ಮನೆಯಲ್ಲೇ ಇದೆ ಇತ್ಯಾದಿ. ಒಂದು ದಿನ ಲಕ್ಕಣ್ಣ ಇಲ್ಲದ ಹೊತ್ತಲ್ಲಿ ಮಗಳನ್ನು ಕೇಳಿದ, ಕಾಣೆಯಾದ ಒಡವೆಗಳ ಕುರಿತು, ಮೊದಮೊದಲು ಸುಳ್ಳು ಹೇಳಿದವಳು ಕಡೆಗೆ ಅವರು ತೆಗೆದುಕೊಂಡಿದ್ದಾರೆಂದು ಹೇಳಿದಳು. ‘ಎಂತಕ್ಕೆ ಅವ ತಗತ್ತ, ನೀ ಕೇಳಕ್ಕಾಗಿತ್ತು, ಎಷ್ಟು ಹೀಂಗೇ ತಗಂಡು ಹೋಯ್ದ’ ಎಂದು ಕಣ್ಣು ಕೆಂಪಾಗಿಸಿ ಕೇಳಿದ. ‘ಟೀಕೀಸರ, ಗೋದಿಮಣಿಸರ, ಕೊತ್ತಂಬರಿ ಬೀಜದ ಸರ, ಬಳೆಗಳು ಯಾವುದೂ ಇಲ್ಲೆ, ಎಲ್ಲ ತಗಂಡುಹೋಯ್ದ’ ಎಂದು ನಿಧಾನಕ್ಕೆ ಬಾಯಿಬಿಟ್ಟಳು. ‘ನೀ ಸುಮ್ಮಂಗಿದ್ಯ, ಕೊಡತ್ನಿಲ್ಲೆ ಹೇಳಕ್ಕಾಗಿತ್ತು’ ಎಂದು ಮತ್ತಷ್ಟು ಜೋರು ಧ್ವನಿಯಲ್ಲಿ ಕೇಳಿದ ಅಪ್ಪ. ಹಂಗೆ ಕೇಳಿದ್ದಕ್ಕೇ ನೋಡು ಇಲ್ಲಿ ಎಂದು ಬೆನ್ನು, ಕಾಲುಗಳ ಮೇಲಿನ ಬಾಸುಂಡೆಯನ್ನು ತೋರಿಸಿದಳು. ಅಷ್ಟೊತ್ತಿಗೆ ಅವಳ ಹೆಸರಿಗೆ ಬಂದ ಜಮೀನನ್ನೂ, ಇಲ್ಲಿ ರುಜು ಹಾಕು ಎಂದು ಪತ್ರದ ಮೇಲೆ ಹೆಬ್ಬೆಟ್ಟು ಒತ್ತಿಸಿ ಆ ಜಮೀನನ್ನೂ ಯಾರಿಗೋ ಮಾರಾಟಮಾಡಿಯಾಗಿತ್ತು, ಮಾವನಿಗೂ ತಿಳಿಯದೇ.

ಇದೆಲ್ಲ ಗೊತ್ತಾಗಿ ಶಿವರಾಂ ಭಟ್ಟ ಕೆಂಡಾಮಂಡಲವಾದ. ಅವತ್ತು ಪ್ಯಾಟೆಯಿಂದ ಬಂದ ಲಕ್ಕಣ್ಣನನ್ನು ತರಾಟೆಗೆ ತೆಗೆದುಕೊಂಡ. ‘ಎಲ್ಲಿ ಹೋತು ಬಂಗಾರನೆಲ್ಲ, ಜಮೀನು ಯಾರಿಗೆ ಮಾರಾಟ ಮಾಡಿದ್ದೆ, ಅದರ ದುಡ್ಡೆಲ್ಲ ಎಂತ ಮಾಡಿದೆ’ ಎಂದು ಕೇಳಿದ. ಅನಿರೀಕ್ಷಿತವಾದ ಮಾವನ ದಾಳಿಯಿಂದ ತತ್ತರಿಸಿದರೂ, ಮಾತಿನ ಚತುರಗಾರ ಲಕ್ಕಣ್ಣ ಸಾವರಿಸಿಕೊಂಡು ನಿನ್ನ ಮಗಳಿಗೆ ಕೊಟ್ಟಮೇಲೆ ಅದೆಲ್ಲವೂ ಎಂದು, ಆ ಎಂತ ಬೇಕಾರೂ ಮಾಡಕ್ಯತ್ತಿ ಎಂದ. ಹೀಗೆ ಇಬ್ಬರಿಗೂ ಕೈಕೈ ಮಿಲಾಯಿಸುವಷ್ಟು ಜಗಳ ಆಗಿ, ಮನೆಯಿಂದ ಹೊರಗೆ ಹೋಗು ಎಂಬಲ್ಲಿಗೆ ಮಾತು ಬಂದು ನಿಂತಿತು. ತಾಳಲಾರದಷ್ಟು ಅವಮಾನಗೊಂಡ ಲಕ್ಕಣ್ಣ ಹೊರಹೋಗುವ ಮಾತಾಡಿದರೆ ಇರು ಎಂದು ಅವನಿಗೆ ತೀರ ಆಪ್ತರಾದ ತಿಮ್ಮಕ್ಕ ಕೂಡ ಏನೂ ಹೇಳಲಿಲ್ಲ. ಒಂದು ಕಿಲುಬು ಆಸ್ತಿಯನ್ನೂ ಕೊಡದೆ ಅವನನ್ನು ಹೊರಹಾಕಿದರು.

ಹೀಗೆ ಅನಾಥನ ಹಾಗೆ ಹೊರಬಿದ್ದ ಲಕ್ಕಣ್ಣನನ್ನೇ ಹಿಂಬಾಲಿಸಿದಳು ಪಾರ್ವತಿ ತನ್ನ ಏಳೆಂಟು ಮಕ್ಕಳನ್ನೂ ಕಟ್ಟಿಕೊಂಡು, ತಿರುಗಿಯೂ ಆ ಮನೆಯನ್ನು ನೋಡದಂತೆ. ದೂರದಿಂದಲೇ ಇದೆಲ್ಲವನ್ನೂ ನೋಡುತ್ತ ನಿಂತ ಗಣಪಿಗೆ ಪಾರ್ವತಿಯ ತುಟಿಯ ಮೇಲೊಂದು ಕಿರುನಗು ಹಾದುಹೋದಂತೆನಿಸಿತು. ಗಂಡ ಬರಿಗೈಯ್ಯಲ್ಲಿ ಅನಾಥನಂತೆ ಮುಖ ತಗ್ಗಿಸಿ ಹೊರಟರೆ, ಎಲ್ಲ ಬೇಡಿಗಳನ್ನು ಕಳಚಿಕೊಂಡು ಅವಳು ಹೊರಟಂತೆ ಅನಿಸುತ್ತಿತ್ತು ಗಣಪಿಗೆ.