ನನ್ನ ಸುತ್ತಲಿನ ಜಗತ್ತು ಇದ್ದಕ್ಕಿದ್ದಂತೆ -`ಗೋ ಗ್ರೀನ್’ ಅಂತ ಬೊಬ್ಬೆ ಹೊಡೆಯುತ್ತಿದೆ. ಹಸಿರುಗಟ್ಟಡ, ಹಸಿರುಮನೆ, ಹಸಿರುಬದುಕು… ವಗೈರೆ. ಜತೆಗೆ ಇನ್ನೇನೋ ಗ್ರೀನ್-ಆರ್ಕಿಟೆಕ್ಚರಂತೆ. ನಿನ್ನೆ ಇದನ್ನು `ಹರಿದ್ವಾಸ್ತು’ ಅಂತ `ಇಂಡಿಯನು’ಗೊಳಿಸಿ, ಹೊಸತೇನೋ ಕಂಡುಹಿಡಿದೆನ್ನುವ ಖುಷಿಯಲ್ಲಿದ್ದೆ. ನನಗಿಂತ ಹೆಚ್ಚು ಕನ್ನಡದ ನುಡಿಯನ್ನಾಡುವ ಓರಗೆಯನೊಬ್ಬ ಈ ಶಬ್ದದ ಜಾಡು ಹಿಡಿದು, ಅದು ಹೊಸ ಆವಿಷ್ಕಾರವೇ ಸರಿ -ಅಂತ ಬೆರಗಿಟ್ಟು ನನಗೂ ಮಿಗಿಲಾಗಿ ಬೀಗುತ್ತಿದ್ದ. ಹೆಚ್ಚು-ಕಡಿಮೆ ಅವನು ಕಟ್ಟುತ್ತಿರುವುದೆಲ್ಲ ಈ ಬಗೆಯ ವಾಸ್ತುವೇ. ಕಡಿಮೆ ಸಿಮೆಂಟು, ಹೆಚ್ಚು ಹೆಚ್ಚು ಕಲ್ಲು, ಮಣ್ಣು, ಇಟ್ಟಿಗೆ. ಈಚೆಗೆ ಈ ಸಲುವಾಗಿ ಅವನಿಗೊಂದು ಅವಾರ್ಡು ಬಂದಿದ್ದು, ಅದರ ಖುಷಿಯಲ್ಲಿ ನಿನ್ನೆ ಕೂಟ. ಕೂಟವೆಂದರೆ ಗೊತ್ತಲ್ಲ- ಬರೇ ಬಿಯರು, ಶಾಸ್ತ್ರಕ್ಕೆ ಊಟ. ನಡುವೆ ಅಷ್ಟಿಷ್ಟು ಪಟ್ಟಾಂಗ. ವಾಪಸಾದ ಮೇಲೆ ಒಂದೆರಡು ತಾಸುಗಳಲ್ಲೇ ಈ ನಡುಮಾರ್ಚಿನಲ್ಲೊಂದು ನಿರರ್ಥಕ ರಾತ್ರಿ ಅಷ್ಟೇ ವ್ಯರ್ಥದ ಇನ್ನೊಂದು ಹಗಲಿನತ್ತ ಹೊರಳುತ್ತಿತ್ತು. ಹೊರಳಿಗೂ ಎಷ್ಟು ತ್ವರೆಯಿತ್ತು. ಎಲ್ಲ ದಂಡ ದಂಡ. ಬರೇ ದುಂದು ಮಾತು.

ಹಾಗೆ ನೋಡಿದರೆ ಈ ಹರಿದ್ವಾಸ್ತು ಹೊಸ ಆವಿಷ್ಕಾರವೇನಲ್ಲ. ನಾವು ಆಗಿಕೊಂಡಿರುವ ಸದ್ಯದ ದೇಶಕಾಲಗಳು ಇಷ್ಟು ಸು`ಸಂಸ್ಕೃತ’ಗೊಳ್ಳುವ ಮೊದಲು ಇಡೀ ಪ್ರಪಂಚ ಹಸಿರನ್ನೇ ಉಸುರುತ್ತಿತ್ತು. ಊಟ, ತಿನಿಸುಗಳಿಂದ ಮೊದಲುಗೊಂಡು, ನಮ್ಮ ಉಡಿಗೆ-ತೊಡಿಗೆಗಳನ್ನೂ ಒಳಗೊಂಡು, ನಮ್ಮ ಇರವುಗಳವರೆಗೆ ಎಲ್ಲವನ್ನೂ ಈಗಿನ ಹಾಗೆ ಸಂಸ್ಕರಿಸಿದ್ದೇ ಕಡಿಮೆ! ಇಂತಹ ಹಳೆಯ ಲೋಕಕ್ಕೆ ಇತಿಮಿತಿಗಳು ಹೆಚ್ಚಿದ್ದವೆನ್ನುವುದನ್ನು ಬಿಟ್ಟರೆ, ನಾವೆಂದೂ ಮಾಡುತ್ತಿರುವ `ಉಮಹೇ’ಯನ್ನೇ ಅಂದಿನವರೂ ಮಾಡಿದ್ದು. ಇಂದು ನಾವು ನಮ್ಮ ದೇಹಶ್ರಮವನ್ನು ನಮ್ಮದೇ ಆವಿಷ್ಕಾರಗಳಲ್ಲಿ ಅಡವಿಟ್ಟು ಮೆಷಿನ್-ಮೇಡ್ ಬದುಕು ಬದುಕುತ್ತಿದ್ದೇವೆ ಮತ್ತು ಅತೀವ`ದೈಹಿಕ’ವೇ ಆಗಿರುವ ಈ `ಉಮಹೇ’ಯಾಚೆಗೆ ಇನ್ನೇನನ್ನೋ ಸಾಧಿಸುತ್ತಿದ್ದೇವೆಂದು ಭ್ರಮಿಸಿದ್ದೇವೆ ಅಷ್ಟೆ! ಇದನ್ನೇ ಸುಸಂಸ್ಕೃತಿಯೆಂದು ಬಗೆಯುತ್ತದೆ ಈ ನಾಗರಿಕತೆ!!

ಎಷ್ಟು ವ್ಯಂಗ್ಯವಲ್ಲವೆ? ನಮ್ಮ ನಾಗರಿಕ ಹಿತ್ತಲುಗಳಲ್ಲಿ, ಶಿಷ್ಟ ಮ್ಯಾನರಿಸಮುಗಳ ಬೆನ್ನುಗಳಲ್ಲಿ ಏನೆಲ್ಲ ಹೊಲಸು ತುಂಬಿದೆ, ನೋಡಿ! ವಿಚಿತ್ರವೆಂದರೆ ಈ ಕಸ ನಮ್ಮೆಲ್ಲ `ಸದಾಚಾರ’ಗಳ ಉಪೋತ್ಪನ್ನವೇ ಆಗಿದೆ. ಅಬ್ಬಾ! ನಮ್ಮ ತ್ಯಾಜ್ಯಕ್ಕೂ ಎಷ್ಟು ಆಯಸ್ಸಿದೆ!! ಅದನ್ನು ಬ್ಯಾಕ್ಟೀರಿಯಗಳು ಸಹಿತ ಮುಟ್ಟುವುದಿಲ್ಲ. ಇನ್ನು ಇದನ್ನು ಪೂರ್ತಾ ವಿಸರ್ಜಿಸುವುದೆಂದರೆ ಮತ್ತೊಮ್ಮೆ ಸಂಸ್ಕರಿಸಲೇಬೇಕು. ಈ ತ್ಯಾಜ್ಯಸಂಸ್ಕಾರವೇ ಇವತ್ತಿನ ಇಂಜಿನಿಯರಿಕೆಯಲ್ಲೊಂದು ಉನ್ನತ ವ್ಯಾಸಂಗ! ನಂಬಲಾದೀತೆ? ಇಷ್ಟು ಸಾಲದೆಂಬಂತೆ- ನಮ್ಮ ಮಾತು-ಕೃತಿಗಳ ನಡುವಿನ ಕಂದರಗಳಲ್ಲಿ, ನುಡಿ ಮತ್ತು ನಡೆಗಳಲ್ಲಿನ ಅಂತರಗಳಲ್ಲಿಯೂ ಇಂಥದೇ ತ್ಯಾಜ್ಯ ತುಂಬಿಕೊಂಡಿದೆಯಲ್ಲ? ಇವುಗಳ ನಿವಾರಣೆಯಾದರೂ ಹೇಗೆ? ಈ ಹೂಳನ್ನು ಎತ್ತುವವರಾರು? ಎಂದು ಮತ್ತು ಎಂತು?

ಹೇಳಬೇಕೆಂದರೆ, ವೈಯಕ್ತಿಕವಾಗಿ ಯಕಃಶ್ಚಿತ್ ಪಾಲಿಥೀನುಕೊಟ್ಟೆಯನ್ನೇ ಸದರಿ ಬದುಕಿನಿಂದ ನನಗೆ ವಿಸರ್ಜಿಸಿಕೊಳ್ಳಲಾಗುತ್ತಿಲ್ಲ. ಮನೆಗೆ ದಿನಸಿ ತರುತ್ತಲೇ- ನನ್ನಮ್ಮ ತನ್ನ ಬಾಯಾರಿದ ಅಂಗುಳಿಗೆ ಗುಟುಕುನೀರಾಯಿತು ಅನ್ನುವಷ್ಟರ ಮಟ್ಟಿಗೆ ಉತ್ಕಟಳಾಗಿ ಪಾಲಿಥೀನುಗಳನ್ನು ಕಲೆ ಹಾಕುತ್ತಾಳೆ. ಜತನವಿಟ್ಟು ಜೋಪಾನಿಸುತ್ತಾಳೆ. ಅವಳ ಹಾಸಿಗೆದಿಂಬುಗಳಡಿಗೆ, ಸೀರೆಯ ಮಡಿಕೆಗಳ ನಡುವೆ, ಸೂಟ್ ಕೇಸು, ಕಿಟ್ ಬ್ಯಾಗುಗಳ ತಳದಲ್ಲಿ, ಫ್ರಿಜ್ಜ್ ಮೇಲಿನ ಸ್ಟಬಿಲೈಸರಿನ ಕೆಳಗೆ -ಸರ್ವಂತರ್ಯಾಮಿಯೆನ್ನುವ ಹಾಗೆ ಕೂಡಿಟ್ಟ ಕವರುಗಳಿರುತ್ತವೆ. ರೇಗಿದರೆ, ನಿನಗೇನು ಗೊತ್ತಾಗುತ್ತೆ ನಮ್ಮ ಕಷ್ಟ ಅಂತ ಒಂದನ್ನೂ ಎಸೆಯಗೊಡದೆ ಕಾದು, ಕಾದಿಡುತ್ತಾಳೆ. ನನ್ನ ವಿಷಯಕ್ಕೆ ಬರಬೇಡ -ಅಂತ ಅವಳು ಕನಲಿದಳೆಂದರೆ ಅವಳ ಆಸ್ತಿಪಾಸ್ತಿಯ ಮೇಲೆ ನನಗೆ ಹಕ್ಕಿಲ್ಲವೆನ್ನುವ ಅಲಿಖಿತ ಕಟ್ಟಳೆ. ಅವಳ ಪಾಲಿಗೆ ಕೊಟ್ಟೆಗಳು ಕಷ್ಟ ಕಾಲದಲ್ಲಿ ಆಗಿಬರುವ ಆಪದ್ಧನವಿದ್ದ ಹಾಗೆ! ಅಮ್ಮನಿಗೆ ಐಸ್ ಕ್ರೀಮೆಂದರೆ ಬಲು ಇಷ್ಟ. ಹಾತೊರೆದಳೆಂದು ತಂದುಕೊಟ್ಟರೆ ಅದರ ಡಬ್ಬ, ಸ್ಪೂನುಗಳನ್ನೂ ಬಿಟ್ಟುಕೊಡದಷ್ಟು ಜೋಪಾನ. ಹುಳಿತ ಹಾಲಿನ ವಾಸನೆಯ `ನಂದಿನಿ’ ಕೊಟ್ಟೆಗಳೆಂದರೆ ಅವಳ ಆಸ್ಥೆ ಇನ್ನೂ ಒಂದು ಕೈ ಮುಂದೆ! ಕಷ್ಟ ಕಷ್ಟ!!

ನನ್ನ ಯೋಚನೆ ಒಮ್ಮೊಮ್ಮೆ ಇನ್ನಷ್ಟು ಚಿಂತಾಕ್ರಾಂತಿಸುತ್ತದೆ. ಮುಟ್ಟಿದರೆ ಸುಕ್ಕುಗಟ್ಟುವ, ಹುಲು ಮೈಕ್ರಾನು ತೆಳುಮೆಯ ಈ ಪಾಲಿಥೀನು ಚೀಲಗಳು ನಮ್ಮ ಬದುಕಿನೊಟ್ಟಿಗೆ ಹೀಗೊಂದು ಅಭೂತಪೂರ್ವ ಅವಿನಾಭಾವದಲ್ಲಿ ಬೆರೆತದ್ದಾದರೂ ಹೇಗೆ? ಇವಕ್ಕೆ ಹುಟ್ಟು ಕಾಣಿಸಿದ ಧೀಮಂತನಿಗೆ ಇವತ್ತು ನಾವು ಹೇಳುತ್ತಿರುವ ಅಡ್ಡ ಪರಿಣಾಮಗಳನ್ನು ಮುಂಗಾಣುವ ಕಾಣ್ಕೆಯೇ ಇರಲಿಲ್ಲವೆ? ಅಷ್ಟು ಹೆಡ್ಡನೇ ಆ ಪ್ರವರ್ತಕ? ಅಥವಾ ಇವೆಲ್ಲ ಯಾವುದೇ ಸದುದ್ದೇಶವನ್ನು ಒಂದು ಕ್ಷುಲ್ಲಕ ನೆಲೆಯಲ್ಲಿ ಹೊಸಕಿಬಿಡುವ ನಮ್ಮದೇ ಸಹಜ `ಮಾನುಷ’ ತಾತ್ಸಾರವೆ? ಬಲ್ಲವರು ಹೇಳಬೇಕು.

ತೆಳ್ಳಗಿನ ಪ್ಲಾಸ್ಟಿಕ್ಕು ನಮ್ಮ ತ್ಯಾಜ್ಯಾವಶೇಷದಲ್ಲಿ ಬೆರೆತೂ ಬೆರೆಯದೆ ಶಾಸನದ ಹಾಗೆ ಶಾಶ್ವತವಾಗಿ ಇದ್ದುಬಿಡುತ್ತದೆ. ಒಣಗಸ, ಹಸಿಗಸವೆಂದು ವಿಂಗಡಿಸಿ ಹೊರಗೆ ಕಳಿಸಬೇಕೆಂಬ ಸಾಮಾನ್ಯ ಚಿಂತನೆಯನ್ನೇನೋ ಈಚೆಗೆ ಪ್ರಚುರಗೊಳಿಸಲಾಗುತ್ತಿದೆ. ಆದರೆ ನಮ್ಮ ಬೆಳಗುಗಳ ಓಟದ ಜಂಜಾಟಗಳಲ್ಲಿ ಹೂಡಿಕೊಂಡವರು ಈ ಸಲುವಾಗಿ ಎಷ್ಟು ವ್ಯವಧಾನ ತಾಳುತ್ತಾರೆ? ಇಷ್ಟಕ್ಕೂ ನಮ್ಮ ವ್ಯವಧಾನಕ್ಕೆ ತಾನೇ ಪುರುಸೊತ್ತೆಲ್ಲಿದೆ? ಮನೆಯ ಹೊಸ್ತಿಲಿನಲ್ಲೇ ತರಕಾರಿ ಮಾರುವವನು ಸಹ ತನ್ನ ಟೊಮಾಟೊ, ಬದನೆಯನ್ನು ಕೊಟ್ಟೆ ಸಮೇತ ತೂಗುತ್ತಾನೆ. ನೂಕುಗಾಡಿಯಿಂದ ಒಳಮನೆವರೆಗಿನ ಹತ್ತಾರು ಹೆಜ್ಜೆಗೂ ಈ ಸುಕ್ಕಿಟ್ಟ ಕೊಟ್ಟೆ ಜತೆಯಾಗುತ್ತದೆ. ಬೇಕರಿಯಲ್ಲಿ ಬ್ರೆಡ್ಡು ಕೊಂಡರೂ ಸಾಕು, ಕಾರು ಸೇರುವವರೆಗೆ ಕೈ ಬೀಸಲು ಅನುವಾಗುವಂತೆ ಬೆಳ್ಳನೆ ಚೀಲ ನಮ್ಮನ್ನು ಅನುಸರಿಸುತ್ತದೆ. ಯಾವುದನ್ನೂ ಕವರಿಗಿಳಿಸಿ ಕೊಡುವುದು ಈ ನಾಗರಿಕತೆಯಲ್ಲಿ ವ್ಯಾಪಾರೀ ಶಿಷ್ಟಾಚಾರವೇ ಆಗಿಬಿಟ್ಟಿದೆ.

ಹಾಗಾದರೆ- ಸುಟ್ಟರೂ ವಿಷವಾಗಿ ಕಾಡುವ ಕಳಪೆ ಪ್ಲಾಸ್ಟಿಕೆನ್ನುವುದು ನಮ್ಮ ಇರವುಗಳಲ್ಲಿ ಇರಲೇಬೇಕಾದ ವಿಷಮಾವಶ್ಯಕತೆಯೆ?  Is it such a necessary evil? ದೇವರೇ, ನಮ್ಮ ಅವಶ್ಯಕತೆಗಳು ಯಾಕಿಷ್ಟು ಘೋರ?

ನಮ್ಮ ದೈನಂದಿನದಲ್ಲಿನ ಸರಳ ಸಾಗಾಣಿಕೆಯಲ್ಲೇ ಇಂತಿಷ್ಟು ಅನಿವಾರ್ಯತೆಯಿದ್ದರೆ, ಇನ್ನು ನಮ್ಮ ಊಟ, ಬಟ್ಟೆ ಮತ್ತು ಮನೆಗಳಲ್ಲಿ ಇನ್ನೇನೆಲ್ಲ ಇದ್ದಿರಬಹುದು? ಈ ಕುರಿತ ಯೋಚನೆಯೂ ಯಾತನೆಯೆ. ಒಂದು ಕಾಲಕ್ಕೆ ಇಂಡಸ್ಟ್ರಿಯಲೈಸ್ ಎಂದು ಒತ್ತೊತ್ತಿ ಘೋಷಿಸಿ, ಒಂದು ದೊಡ್ಡ ಸರ್ಕಲು ಕ್ರಮಿಸಿ ಹೊರಟಲ್ಲಿಗೇ ಬಂದು ನಿಂತಿರುವ ನಾವೀಗ- ಹಸಿರಿಗೆ ಮೊರೆ ಹೋದರಷ್ಟೇ ಉದ್ಧಾರವೆನ್ನುವ ನಮ್ಮ ಸೋಗಿನ ಮೊಳಗುಗಳ ವಿಪರ್ಯಾಸವನ್ನು ನೋಡಿ ನಗಲಿಕ್ಕಾದರೂ ಈ ಪೂರ್ತಿ ವರ್ತುಲದ ಹೊರಗೆ ನಿಂತವರು ಯಾರಾದರೂ ಇದ್ದರೆ ಉತ್ತರಿಸಿ. ನನ್ನನ್ನು ಉದ್ಧರಿಸಿ.

ಈಗೀಗ ಸಾವಯವ ಕೃಷಿಯ ಬಗ್ಗೆ ಸಾಕಷ್ಟು ಸಂಕಿರಣಗಳು ಜರುತ್ತಿವೆ. ಹೊರಗೆ- ಬೀಟಿ ಬೇಡ, ನಾಟಿ ಸಾಕೆನ್ನುವ ಧರಣಿಗಳಾಗುತ್ತಿವೆ. ಮಣ್ಣಲ್ಲಿ ಮಣ್ಣಾಗುವ ಮನೆಗಳಾಗಲಿ ಎಂದು ಇನ್ನೊಂದು ವೇದಿಕೆಯಲ್ಲಿ ಮಂದಿ ನೆರೆದು ಭಾಷಣ ಬಿಗಿಯುತ್ತಾರೆ. `ನೋ ಸಿಂಥಟಿಕ್ಸ್, ಓನ್ಲೀ ಕಾಟನ್ಸ್’ ಎಂದು ಉದ್ಘೋಷಗಳ ನಡುವೆ ನಮ್ಮ ಬೆಡಗಿನ ರ್ಯಾಂಪುಗಳಲ್ಲಿ ಫ್ಯಾಷನು ಪೆರೇಡಿಸುತ್ತದೆ. ನೀವು ಕೊಡುವ ಉಪಶಮನವೆಲ್ಲ ಗೊಡ್ಡು ರಸಾಯನ, ಹಿತ್ತಲೇ ನಮಗಿನ್ನು ಮದ್ದೆಂದು ನಮ್ಮ `ಔಷಧೀಯ’ದಲ್ಲೊಂದು ಪರ್ಯಾಯ ಹುಟ್ಟುತ್ತಿದೆ. ಹಾಗೆ ನೋಡಿದರೆ, ಇವುಗಳಲ್ಲಿ ಒಂದೊಂದೂ ಪರ್ಯಾಯವೇ. ಹಿಂದೊಮ್ಮೆ ಇದ್ದುದನ್ನೇ ಮತ್ತೆ ಮತ್ತೆ ಕಂಡುಹಿಡಿದುಕೊಂಡಿರುವ ಮಹಾತ್ಮೆ! ದೊಡ್ಡ ಇಂಗ್ಲಿಷಿನಲ್ಲಿ ಬರೆಯುವುದಾದರೆ- a new living alternative! 

ಇಲ್ಲಿದ್ದುಕೊಂಡೇ ಇಲ್ಲವೆಂದುಕೊಂಡಿರುವ, ಮುಳುಗಿಯೂ ದಡದಲ್ಲಿದ್ದೇವೆಂದು ಧೇನಿಸುತ್ತಿರುವ, ಸಲ್ಲುತ್ತಲೇ ಅಲ್ಲಿದೆ ನಮ್ಮನೆಯೆನ್ನುತ್ತಿರುವ -ನಮ್ಮ ನಡುವಿನ ಫ್ಯಾಡಿನ ಮಂದಿಗೆ `ಆಲ್ಟರ್ನೆಟಿವ್ ಲಿವಿಂಗ್’ ಎನ್ನುವುದು ನಮ್ಮ ದೊಡ್ಡ ದೊಡ್ಡ ದಡ್ಡತನಗಳ ನಡುವೊಂದು ಉದ್ದಾಮ ಸ್ಟೇಟ್ ಮೆಂಟು. ಒಂದು ಕಾಲದಲ್ಲಿ ನನಗೊಬ್ಬ ಕ್ಲೈಂಟಿದ್ದ. ಘೊಷಾಲ್ ಅಂತ ಆತನ ಹೆಸರು. ಆ ಕಾಲಕ್ಕೆ ದೊಡ್ಡ ಹೆಸರಿದ್ದ ಆ್ಯಡೇಜೆನ್ಸಿಯೊಂದರಲ್ಲಿ ಮುಖ್ಯಸ್ಥನಾಗಿದ್ದ. ಒಂದು ದಿವಸ ಮುಂಜಾನೆಯೆದ್ದಾಗ ಟಾಯ್ಲೆಟ್ ಸೀಟಿನ ಮೇಲೆ ಅವನಿಗೊಂದು ಹೊಳಹುಂಟಾಯಿತಂತೆ. ಒಂದು ಎನ್ ಲೈಟನ್ ಮೆಂಟು. ಅಂದಿನ ಮಟ್ಟಿಗೆ ಅವನಿಗೆ ಒಬ್ಬ ಭಿಕ್ಷುಕನಾಗಬೇಕೆಂದನಿಸಿ, ದಿನ ಪೂರ್ತಿ ಮೆಜೆಸ್ಟಿಕ್ ನಲ್ಲಿ ಬಸ್ ಸ್ಟ್ಯಾಂಡಿನ ಬದಿ ಗೋಣಿ ಹಾಸಿಕೊಂಡು ಬೇಡುತ್ತ ಕುಳಿತಿದ್ದನಂತೆ! ಈ ಘೊಷಾಲ್ ನನ್ನನ್ನು ತನ್ನ ಮನೆಗೆಂದು ನಿಯುಕ್ತಿಸುವ ಹೊತ್ತಿಗೆ ಅವನಿಗೆ ಇಷ್ಟೆಲ್ಲ ಮಹಿಮೆಯಿದೆಯೆಂದು ಕಿವಿಗೆ ಬಿದ್ದಿತ್ತು. ಒಮ್ಮೆ ಈ ಘೊಷಾಲ್ ಸಿನೆಮಾ ಹಾಲ್ ನ ಲಾಬಿಯಲ್ಲಿ ಅವನ ಹೆಂಡತಿಯಲ್ಲದ `ಇನ್ನೊಬ್ಬಳ’ ಜತೆ ಸಿಕ್ಕಿದ್ದ. ಕೈಯಲ್ಲಿ ಜಪಮಾಲೆಯಿತ್ತು! ಕೇಳಿದ್ದಕ್ಕೆ, ತಾನು ಸಾರ್ವಜನಿಕವಾಗಿ ಮೈದೋರುವಾಗ ಸುಮ್ಮನೆ ಸ್ಟೈಲಿಗಾಗಿ ಇದನ್ನು ಹೊಂದಿರುತ್ತೇನೆ ಅಂತಂದ. `This is just a fashion statement for meಜ!!’ ಎನ್ನುವಾಗ ಒಂದಿಷ್ಟೂ ಭಿಡೆಯಿರದೆ, ಅಷ್ಟೇ ಗಂಭೀರನಾಗಿದ್ದ! ಅದು ಶಾರೂಖ್ಖಾನನ `ಡರ್’ ಸಿನೆಮಾ. ಪ್ರತಿ ಸಲ ಖಾನ್- ಕ್.. ಕ್.. ಕ್… ಕಿರಣ್ ಅಂದಾಗ ಇವನು ಮಣಿಯೆಣಿಸುತ್ತಿದನ್ನು ಊಹಿಸಿಕೊಂಡು ಎರಡೂವರೆ ತಾಸು ನಗದೆಯೇ ದಮ್ಮು ಹಿಡಿದಿದ್ದೆ!!

ಈ ಬರೆಹವನ್ನೂ ಒಳಗೊಂಡಂತೆ ನಾವಿಂದು ಬದುಕುತ್ತಿರುವುದೆಲ್ಲ ನಾವೇ ಕಲ್ಪಿಸಿಕೊಂಡಿರುವ ವಿರೋಧಾಭಾಸಗಳಲ್ಲಿ. ಅಷ್ಟೇ ವಿರೋಧಾಪತ್ತುಗಳಲ್ಲಿ. ಯಾವುದು ಸರಿಯೆಂತಲೇ ನಿಚ್ಚಳಿಸುತ್ತಿಲ್ಲ. ದಾರಿ ಮೂಡಿತೆಂದು ಆಧ್ಯಾತ್ಮದ ಮೊರೆ ಹೋಗೋಣವೆಂದರೆ ಅದೂ ಒಂದು ದಂಧೆ. ಹೇಳುತ್ತಾರೆ- ದೀಕ್ಷೆಯಿಲ್ಲದೆ ಈ ದಾರಿಯೂ ದುರ್ಗಮವೇ!! ಇಂತಹ ಸಂಕಷ್ಟಗಳ ನಡುವಿರುವ ನನಗೆ ಗುರಿಯೆಲ್ಲಿ? ಗುರು ಯಾರು? ಈ ದಿನಗಳ `ನಿತ್ಯಾನಂದ’ದ ನಡುವೆ ಗುರುವೊಬ್ಬನನ್ನು ನಂಬಿದರೆ ಮೋಕ್ಷವಾದೀತೆಂಬ ಸರಳ ಇರಾದೆಯನ್ನೂ ಕಾಣೆ, ಒಟ್ಟಾರೆ ಎಲ್ಲವೂ ಹೈರಾಣು.

ಹಸಿರಿನಾಣೆ, ಮತ್ತೊಮ್ಮೆ ಕೋರುತ್ತೇನೆ- ಹಸಿರಿಗೆ ಮೊರೆ ಹೋದರೆ ಉದ್ಧಾರವೆನ್ನುವ ನಮ್ಮ ಹೊಸ ಮೊಳಗುಗಳು ಸರಿಯೆನ್ನುವುದಕ್ಕಿಂತ, ಅವು ಸಾಧ್ಯ ಅನ್ನುವವರಿದ್ದರೆ ಉತ್ತರಿಸಿ. ತಿಳಿಹೇಳಿ, ಈ ಹುಲುವನ್ನುದ್ಧರಿಸಿ ಕಾಪಾಡಿ.