ಕ್ರೋನೋಲಜಿ!

ಚಂದ್ರನ ಹೆಣ ಮುಕ್ಕುವ
ನಕ್ಷತ್ರಗಳಸಾಲಿನಲ್ಲಿ
ನಾನು‌ ಅವನೂ
ಎಷ್ಟೋ ರಾತ್ರಿಗಳನ್ನು
ಕದ್ದು ತಿಂದೆವು!

ಸುಡುಗಾಡಿನ ಕೊನೆ ಮೂಲೆಯಲ್ಲಿ
ಅರ್ಧಂಬರ್ದ ಉರಿದ ಕಟ್ಟಿಗೆಯ
ಆರಿದ ವಾಸನೆಗೆ ಮತ್ತು ಏರಿಸಿಕೊಂಡೆವು

ಗೂಬೆಗಳ ಸಂಗೀತಕ್ಕೆ ಕುಣಿಯುತ್ತಾ
ಮೊಲೆ ಚೀಪುವ ನಾಯಿಕುನ್ನಿಗಳ
ಕಂಡು ಕರಗಿದೆವು

ಕದ್ದು ತಿಂದ ರಾತ್ರಿಯ ಬಸುರಿಗೆ
ಹಗಲು ಹೆತ್ತ ಪಾಪದಲ್ಲಿ ಭಾಗಿಯಾಗಿ
ಊರ ದಾರಿಗೆ ಕಲ್ಲು ನೆಟ್ಟೆವು

ಕಲ್ಲು ಕಲ್ಲಿಗೆ ಎಳೆದ ಗೀಟುಗಳ ಮೇಲೆ
ಕುಲಗಳೆರಡು ಕಸುಬು ಹತ್ತು ಹುಟ್ಟಿಕೊಂಡವು
ದಾರಿ ನೂರಾಗಿ ಕವಲೊಡೆದು
ನೀರು‌ ನೆತ್ತರೂ ಹರಿದು
ಲೆಕ್ಕವಿಡಲಾಗದ್ದಕ್ಕೆ ನಮ್ಮನ್ನು ಶಪಿಸಿಕೊಂಡೆವು

ನೂರಾದ ದಾರಿಗೂ ಸುಡುಗಾಡ ಬಯಲಿಗೂ
ನಡುವೆ, ದೇಹಗಳ ಉಸುರುಗಳು
ಕುಣಿಕೆಗೆ ಕುಣಿಕೆ ಬೆಸೆದು ಹೊಸೆದ
ಹಗ್ಗವಾದೆವು

ಆಮೇಲಾಮೇಲೆ ಕೋಟೆ ಕೊತ್ತಲದ
ಅಳಿಸಿದ ಚಿತ್ರ ಕೆತ್ತನೆಯ ಗೋಡೆಗಳ
ಮೇಲೆ ಲೊಚಗುಟ್ಟುವ ಹಲ್ಲಿಗಳಾದೆವು!

ಊರು ಕೋಟೆಯ ಕೊಂಪೆಯಲ್ಲಿ
ಹಲ್ಲಿ ಹಿಕ್ಕೆ ತಾಗಿಸಿಕೊಂಡ ನರರು
ಓಡಾಡುತಲೂ ನಾವು
ಕರಿ ಬೆಕ್ಕ ಬಾಯಲ್ಲಿ ಸಿಕ್ಕಿ
ಬಾಲ ಬೀಳಿಸಿಕೊಂಡವು!

ಊರಿಗೂ ಕೇರಿಗೂ
ಬೇಕಾದ ಕೆರೆಯ ಮಡುವಿನ
ಪಾಚಿಯಲ್ಲಿ ಗೋದಮೊಟ್ಟೆಗಳಾಗಿ
ಮಿಜಿಗುಟ್ಟಿದೆವು

ಅಕಾಲದಲ್ಲಿ ಕಾಲವಾಗಿ
ಕಾಲದ ಕೋಲಿನ ಗಿಲಕಿಯ ಸದ್ದಿಗೆ
ಕಿವಿ ಹರಿದುಕೊಂಡೆವು

ಹೀಗೇ ಗೀಟಿನಿಂದ ತಾಟಿನ ತನಕ
ಚರ್ಮದಿಂದ ಚಕ್ರದ ತನಕ
ಕಾಲಾನೂಕ್ರಮದಲ್ಲಿ‌
ನಾನೂ ಈಗವನೂ
ಬಿಸ್ಕತ್ತಿನಲ್ಲಿ ಚಹಾಕಪ್ಪಿನ
ಗೋಧಿ ತೆನೆಯ ಚಿತ್ರವಾಗಿದ್ದೇವೆ

ಕವಿಗಳ ಕವಿತೆಗಳಲ್ಲಿ
ಬೆಳದಿಂಗಳು, ಅಮಾವಾಸ್ಯೆಯ
ರೂಪಕಗಳಾಗಿದ್ದೇವೆ
ಕುಲದಾಟಿ ಬಂದ ಬಾವುಟಗಳಲ್ಲಿ
ಕುಡುಗೋಲು ಕತ್ತಿಗಳಾಗಿದ್ದೇವೆ
ಜಾತಿ ಜನಿವಾರದ ದಾರ ಸಾಲಿಗ್ರಾಮಗಳಾಗಿದ್ದೇವೆ!

ಪಾವನ. ಎಸ್ ಯುವ ಕವಯತ್ರಿ
ರವೀಂದ್ರಕಲಾನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿ
ಕಲೆ, ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ