ಹೊರಗಡೆಯಿಂದ ನಿಂತು ನಾವು ಸಾವಿರ ಹೇಳಬಹುದು. ಆದರೆ ಒಳಗಿದ್ದು ಕೆಂಡ ಹಾಯುತ್ತಿರುವವರ ಪರಿಸ್ಥಿತಿಗಳು ಭಿನ್ನ ಭಿನ್ನವಾಗಿರುತ್ತವೆ. ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಹಿತ ಎನ್ನುವ ಹಾಗೆ; ಏಕ್ತಾ ಕಪೂರ್ ಸೀರಿಯಲ್ಲುಗಳಲ್ಲಿರುವಂತೆ ಅದೆಷ್ಟೋ ಬಾರಿ ಬೇರೆಯಾಗಿ ಮತ್ತೆ ಮತ್ತೆ ಕೂಡಿಕೊಳ್ಳಲೂಬಹುದು. ಮಾತಿನ ಕೊನೆಯಲ್ಲಿ ‘ಹೋಗ್ಲಿ ಬಿಡೋ ಯಣ. ಬಿಟ್ಟೆ ಬಿಡ್ತೀನಿ ಅತಾಗ. ಹೊಯ್ಕೋತ ಹೋಗ್ಲಿ!’ ಎಂದೇನೋ ಅಂದ. ಅದರ ಮರುದಿನದಿಂದಲೇ ಅವನ ಕುಡಿತ ಶುರುವಾಯಿತು. ಬೆಳಿಗ್ಗೆ ಕೆಲಸಕ್ಕೆ ಹೊರಡುವ ಮುನ್ನವೇ ಓಲ್ಡ್ ಮಾಂಕ್ ಎದೆಗಿಳಿಸಿಕೊಳ್ಳುತ್ತಿದ್ದ. ಮಧ್ಯಾಹ್ನ ಊಟಕ್ಕೆ ಬಂದಾಗ ಒಂದು ಓಲ್ಡ್ ಮಾಂಕ್ ಮತ್ತು ರಾತ್ರಿಗೊಂದು ಓಲ್ಡ್ ಮಾಂಕ್ ಶುರುಹಚ್ಚಿಕೊಂಡ.
ದಾದಾಪೀರ್‌ ಜೈಮನ್ ಬರೆಯುವ ಜಂಕ್ಷನ್‌ ಪಾಯಿಂಟ್‌ ಅಂಕಣ

ಅವನು ಹೊಸದಾಗಿ ನನ್ನ ರೂಮು ಸೇರಿಕೊಂಡ ಹೊಸತರಲ್ಲಿ ರಾತ್ರಿ ಎರಡರ ಸುಮಾರಿಗೆ ಬಂದು ‘ಖಟ್ ಖಟ್ ಖಟ್’ ಎಂದು ಬಾಗಿಲು ಬಡಿಯುತ್ತಿದ್ದ. ಗಾಢ ನಿದ್ರೆಯಲ್ಲಿರುತ್ತಿದ್ದ ನನಗೆ ಎದ್ದು ಬಾಗಿಲು ತೆರೆಯುವುದು ಯಮಯಾತನೆ ಎನಿಸುತ್ತಿತ್ತು. ಪ್ರತಿಬಾರಿಯೂ ಗೊಣಗಿಕೊಳ್ಳುತ್ತಲೇ ಬಾಗಿಲು ತೆರೆಯುತ್ತಿದ್ದೆ. ಬಾಗಿಲು ತೆರೆದಕೂಡಲೇ ಅವನು ಮುಗುಳ್ನಗುತ್ತಾ ಝೀರೋ ಬಲ್ಬ್ ಹಾಕಿದ ರೂಮಿನೊಳಗಡೆ ಬರುತ್ತಿದ್ದುದು ಒಮ್ಮೊಮ್ಮೆ ಇದೆಲ್ಲಾ ಕನಸಿನಲ್ಲೇ ಘಟಿಸುತ್ತಿದೆ ಎನಿಸುತ್ತಿತ್ತು. ನಾನು ಹೆಜ್ಜೆ ಸರಿಸುತ್ತಲೇ ಕಾಟು ಮುಟ್ಟಿ ಧೊಪ್ ಎಂದು ಬಿದ್ದು ನಿದ್ದೆ ಹೋದರೂ ರೂಮಿನಲ್ಲಿರುತ್ತಿದ್ದ ಸಪ್ಪಳದಿಂದ ಅವನೇನು ಮಾಡುತ್ತಿದ್ದಾನೆ ಎನ್ನುವುದರ ಸುಳುಹು ಸಿಗುತ್ತಿತ್ತು. ಅವನು ತನ್ನ ಡೋಮಿನೋಜ್ ಪಿಜ್ಜಾ ಶಾಪಿನವರು ಕೊಟ್ಟಿರುವ ಕಡುನೀಲಿ ಬಣ್ಣದ ಟೀ ಶರ್ಟು, ಚೀಸ್ ಬಣ್ಣದ ಪ್ಯಾಂಟು, ಸೊಂಟಕ್ಕೆ ದುಡ್ಡು ಹಾಕಿಕೊಳ್ಳಲು ನೀಡಿರುವ ಸೊಂಟ ಪಟ್ಟಿ, ತಲೆಗೊಂದು ಕ್ಯಾಪಿನ ಯೂನಿಫಾರ್ಮನ್ನು ಕಳಚಿ ರೂಮಿನ ಗೋಡೆಯೊಂದಕ್ಕೆ ತೂಗುಹಾಕಿ ಅವನ ನಿತ್ಯದ ಕಂಫರ್ಟ್ ಬಟ್ಟೆಗಳಾದ ಬರ್ಮುಡಾ ಮತ್ತು ಹಳೆಯದಾಗಿರುವ ತನ್ನ ಪಿಜ್ಜಾ ಟೀಶರ್ಟನ್ನೇ ಧರಿಸುತ್ತಾನೆ. ಈ ಹಳೆಯ ಬಟ್ಟೆಗಳು ಒಮ್ಮೊಮ್ಮೆ ಹೇಗಾಗಿಬಿಡುತ್ತವೆಂದರೆ ಅವುಗಳನ್ನು ತೊಟ್ಟೂ ತೊಟ್ಟೂ ಅವು ನಮ್ಮದೇ ದೇಹದ ಅಂಗಗಳಾಗಿಬಿಡುತ್ತವೆ. ಅಲ್ಲಿಂದ ಸೀದಾ ಅವನು ಬಾತ್ರೂಮಿನ ಬಾಗಿಲು ತೆರೆದು ಕೂರುತ್ತಾನೆ. ಒಂದು ಹತ್ತು ನಿಮಿಷದ ನಂತರ ಫ್ಲಶ್ ಮಾಡಿದ ಸದ್ದು ಬರುತ್ತದೆ. ಹೊರಗಡೆ ಬಂದವನೇ ನೀರಿನ ಬಾಟಲಿಯನ್ನುಹುಡುಕುತ್ತಾನೆ. ಓಲ್ಡ್ ಮಾಂಕ್ ಬಾಟಲಿಯ ಮುಚ್ಚಳವನ್ನು ತೆರೆಯಲು ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ ‘ಮ್ಮ್ಮ್ಮ್sss’ ಎಂದು ಒಂದೆರಡು ಬಾರಿ ತಿಣುಕಿದ ಸದ್ದು ಬರುತ್ತದೆ. ಅಲ್ಲಿಂದ ಸ್ಟಾಕ್ ಇಟ್ಟುಕೊಂಡ ತನ್ನ ಪ್ಲಾಸ್ಟಿಕ್ ಗ್ಲಾಸಿನೊಳಗಡೆ ಸುರುವುತ್ತಾನೆ. ಅದನ್ನು ಕೊಂಚ ಹೊತ್ತು ಅಲ್ಲಿಯೇ ಬಿಟ್ಟು ನನ್ನ ಅಲ್ಮೆರಾದ ಬಲಬದಿಯ, ಕೀಲಿಯಿಲ್ಲದ, ಪುಸ್ತಕವೇ ತುಂಬಿಟ್ಟಿರುವ ಒಂದು ಬೀರೂವಿನ ಕೆಳಾಗಡೆಯಲ್ಲಿರುವ ಉಪ್ಪಿನಕಾಯಿಯ ಬಾಟಲಿಗೆ ಅವನ ಕೈ ಹೋಗುತ್ತದೆ. ಅವನು ತನ್ನ ಬಲಗೈಯಲ್ಲಿ ಎರಡು ಹೋಳುಗಳನ್ನು ಸುರುವಿಕೊಳ್ಳುತ್ತಾನೆ. ಬೀರುವನ್ನು ಎಡಗೈಯಿಂದ ಭದ್ರವಾಗಿ ನಿಧಾನಕ್ಕೆ ಮುಚ್ಚುತ್ತಾನೆ. ಅಲ್ಲಿಂದ ಪರಮಾತ್ಮನಿರುವ ಪ್ಲಾಸ್ಟಿಕ್ ಗ್ಲಾಸಿನ ಬಳಿ ಬಂದು ಎಡಗೈಯಲ್ಲಿ ಎತ್ತಿಕೊಂಡು ‘ಆಹ್sss ಆ…ಹಾ.. ಪೀಸ್’ ಎಂದು ಪುಳಕಗೊಂಡ ಸ್ವರದಲ್ಲಿ ಒಂದು ಮಹಾ ಉದ್ಘಾರ ತೆಗೆದಿದ್ದಾನೆಂದರೆ ಅವನು ಗ್ಲಾಸಿನ ಒಂದು ಗುಟುಕನ್ನು ಗಂಟಲೊಳಗಿಳಿಸಿಕೊಂಡಿದ್ದಾನೆ ಎಂದರ್ಥ.

ಅವನು ಪರಮಾತ್ಮನ ಪೇಯವನ್ನು ಒಂದು ಲಯದಲ್ಲಿ ಕುಡಿಯುವುದು ಗಂಟಲಿನಿಂದ ಹೊಮ್ಮುವ ಗಟಗಟಗಟ ಶಬ್ದದಿಂದಲೇ ತಿಳಿಯುತ್ತದೆ. ನಂತರ ಅವನು ಸಿಗರೇಟು ಹಚ್ಚುತ್ತಾನೆ. ನಾನು ಮಲಗಿರುವುದರಿಂದ ಕಿಟಕಿಗೆ ಮುಖ ಮಾಡಿ ಹೊರಗಡೆ ಹೊಗೆ ಬಿಡುತ್ತಾನೆ. ಅಲ್ಲಿಂದ ಮೆಲ್ಲಗೆ ಹಾಸಿಗೆ ಸರಿ ಮಾಡಿಕೊಂಡು ಧೊಪ್ ಎಂದು ಬೀಳುತ್ತಾನೆ. ಆಗ ಅವನ ಹುಡುಗಿಗೆ ‘ಗುಡ್ ನೈಟ್ ಚಿನ್ನಾ’ ಎನ್ನುವ ವಾಯ್ಸ್ ಮೆಸೇಜು ಕಳಿಸುತ್ತಾನೆ, ಇದಿಷ್ಟೂ ಅವನು ರೂಮಿಗೆ ಬಂದಾಗ ನನ್ನ ರಾತ್ರಿಯ ನಿದ್ದೆ ಮಂಪರಿನ ಸಮಯದಲ್ಲಿ ಆಗಲು ಶುರುವಾದಂತವು… ಇದರ ನಿಯಮಿತತೆಯ ಲಯಗಾರಿಕೆ ಹೇಗಾಗಿಬಿಟ್ಟಿತೆಂದರೆ ನನ್ನ ಕನಸಿನಲ್ಲೂ ಈ ದೃಶ್ಯಗಳ ಹಾಜರಿ ಹಾಕಲು ಶುರುವಾದಂತೆ!

ಅವನು ರೂಮಿಗೆ ಬಂದಾದ ಮೇಲೆ ಒಂದಷ್ಟು ವಿಷಯಗಳು ಬದಲಾದವು. ದಿನ ಸಾಯುವವರಿಗೆ ಅಳುವವರು ಯಾರು ಎನ್ನುವಂತೆ ನನಗೆ ನಿದ್ದೆಯಿಂದೆದ್ದು ಬಂದು ರಾತ್ರಿ ಎರಡಕ್ಕೆ ಬಾಗಿಲು ತೆರೆಯುವುದು ಆಗದ ಮಾತು ಎಂದುಕೊಂಡು ರೂಮಿನ ಬಾಗಿಲ ಚಿಲಕ ಹಾಕದೆ ಮಲಗುವುದು ಅಭ್ಯಾಸವಾಯಿತು. ವರ್ಷಕ್ಕೊಮ್ಮೆಯೋ ಎರಡು ಬಾರಿಯೋ ತಿಂದರೆ ಅಬ್ಬಬ್ಬಾ ಎನ್ನುವಂತಾಗುತ್ತಿದ್ದ ನನಗೆ ಮನೆಯಲ್ಲಿಯೇ ಪಿಜ್ಜಾ ಹುಡುಗ ಇರುವಾಗ ಪಿಜ್ಜಾ ನಮ್ಮ ದೈನಿಕದ ಭಾಗವೇ ಆಗಿ ಹೋಯಿತು. ನನಗಂತೂ ಅವರಂಗಡಿಯ ಮೆನು ಕಾರ್ಡು ಒಂದು ರೀತಿಯಲ್ಲಿ ಬಾಯಿಪಾಠ ಆಗುವಷ್ಟರ ಮಟ್ಟಿಗೆ ಪಿಜ್ಜಾಗಳು ಸಾಮಾನ್ಯವಾಗಿ ಹೋದವು. ಎಷ್ಟರಮಟ್ಟಿಗೆ ಎಂದರೆ ಬೆಳಿಗ್ಗೆ ಎದ್ದಾಗ ಟೆಮೆಟೋ ಕೆಚಪ್, ಚಿಲ್ಲಿ ಫ್ಲೇಕ್ ಸ್ಯಾಶೆಟ್ಟುಗಳು ಎಡತಾಕುವಷ್ಟು ಸಿಗುತ್ತಿದ್ದವು.

ಅವನ ಹೆಸರು ಬಸವ. ನಮ್ಮ ರೂಮಿನ ಹತ್ತಿರದಲ್ಲಿಯೇ ಇದ್ದ ಪಿಜ್ಜಾ ಹಟ್ಟಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸಮಾಡುತ್ತಿದ್ದ. ಬೆಳಿಗ್ಗೆ ಹತ್ತು ಗಂಟೆಗೆ ಅವನ ಕೆಲಸ ಶುರುವಾದದ್ದು ರಾತ್ರಿ ಹನ್ನೆರಡು ಗಂಟೆಯವರೆಗೂ ಸಾಗುತ್ತಿತ್ತು. ನಡುವೆ ಮಧ್ಯಾಹ್ನಕ್ಕೊಮ್ಮೆ ಮತ್ತು ರಾತ್ರಿ ಹತ್ತಕ್ಕೊಮ್ಮೆ ಊಟಕ್ಕೆ ಬರುತ್ತಿದ್ದ. ಪೀಜಿಯ ಊಟ ಅದೆಷ್ಟೇ ಆದರೂ ಮನೆಯ ಊಟದ ಹಾಗೆ ಹೇಗಾದೀತು? ಬರುವಾಗ ಕೆಳಗಡೆ ಶೆಟ್ಟರ ಅಂಗಡಿಯಲ್ಲಿ ಒಂದೆರಡು ಸಂಡಿಗೆ ಪ್ಯಾಕೆಟ್ಟುಗಳನ್ನು ಕೂಡ ಜೊತೆಗೆ ತರುತ್ತಿದ್ದ. ದಿನಕ್ಕೆ ಹತ್ತಿರತ್ತಿರ ಹದಿನಾರು ಆರ್ಡರುಗಳನ್ನು ಮಾಡಿದರೆ ಅವನಿಗೆ ಕೈಯಲ್ಲೊಂದಿಷ್ಟು ಕಾಸು ಉಳಿಯುತ್ತಿತ್ತು. ಆಗೀಗ ಒಂದಿಷ್ಟು ದೊಡ್ಡ ಮನಸ್ಸಿನವರು ಟಿಪ್ಸು ಕೊಡುತ್ತಿದ್ದರು. ಅದನ್ನವನು ಹೊಸ ಬಟ್ಟೆ ತೆಗೆದುಕೊಳ್ಳಲಿಕ್ಕೋ ಅಥವಾ ಮುಂದಿನ ಬಾರಿ ಊರಿಗೆ ಹೋದಾಗ ಅಮ್ಮನಿಗೊಂದು ಹೊಸ ಸೀರೆ ತೆಗೆದುಕೊಡಲೋ ಅಥವಾ ಅವನ ಗರ್ಲ್ ಫ್ರೆಂಡನ್ನು ಕೆಫೆ ಕಾಫಿಡೇಗೆ ಕರೆದುಕೊಂಡುಹೋಗಲೋ ತೆಗೆದಿರಿಸುತ್ತಿದ್ದ.

ಇಂತಿಪ್ಪ ಅವನು ಒಮ್ಮೆ ರೂಮಿಗೆ ಬಂದವನೇ ‘ಯಣ, ನೋಡಣ, ಇಷ್ಟ್ ದಿನಾ ಚೆನಾಗ್ ಮಾತಾಡಿಸ್ತಾ ಇದಾಳೆ ಅನ್ನೋ ಧೈರ್ಯದ ಮೇಲೆ ನಾನಿವತ್ತು ಕಿಚನ್ನಿನಲ್ಲಿ ಯಾರೂ ಇಲ್ಲದಾಗ ಹಿಂದಿನಿಂದ ತಬ್ಬಿ ಮುತ್ತು ಕೊಟ್ಟುಬಿಟ್ಟೆ ಯಣೋ!’ ಎಂದು ಖುಷಿ ಖುಷಿಯಲ್ಲಿ ಕಣ್ಣಲ್ಲೊಂದು ಮಿಂಚಿನ ಬೆಳಕನ್ನು ತುಳುಕಿಸುತ್ತಾ ಹೇಳುವಾಗ ನನ್ನ ಮುಖದ ಮೇಲೊಂದು ಮುಗುಳುನಗೆ ಅನಾಯಾಸವಾಗಿ ಮೂಡಿಹೋಗಿತ್ತು. ಇದೆ ಹುಡುಗ ಮತ್ತೊಂದಿಷ್ಟು ದಿನ ಬಿಟ್ಟು ‘ಇಷ್ಟ್ ದಿನ ಪ್ರೀತಿ ಪ್ರೇಮ ಅಂತಿದ್ದೋಳು ಈಗ ಇದ್ದಕ್ಕಿದ್ದಂಗೆ ವಲ್ಲೆ ಅಣಕತ್ತಳ. ಏನ್ಮಾಡ್ಲ್ಯಣ? ಅಕಿ ಬೇರೆ ಸಾಬ್ರು ಹುಡುಗಿ. ಟೈಮ್ ಬೇರೆ ಸುಮಾರದವು. ಯಾಕ್ ಬೇಕ್ ಹೌದಿಲ್ಲೋ?! ಬಿಟ್ಟಾ ಬಿಡ್ಲೆನ್? ಯಣ! ನೀ ಏನಂತೀ ಹೇಳಾ.’ ಎಂದು ಗೋಗರೆದ. ‘ನೋಡಪಾ ತಮ್ಮ ನೀನಾ ಏನ್ಮಾಡ್ತಿ ಅಂತ. ನಿಂಗೇನ್ ಅನಿಸ್ತಾತಿ ಅದನ್ನ ಮಾಡು. ಅದ ಭಾಳ್ ಚೊಲೊ.’ ಎನ್ನುವಾಗ ನನ್ನಲ್ಲೊಂದು ಗೊಂದಲವಿತ್ತು. ಪ್ರೀತಿಯಲ್ಲಿ ಎಲ್ಲರದ್ದೂ ಭಿನ್ನ ಭಿನ್ನ ನಿಲುವು ಹಾಗೂ ಎಲ್ಲರಿಗೂ ಭಿನ್ನ ಭಿನ್ನ ಪ್ರಶ್ನೆ ಪತ್ರಿಕೆ. ಒಬ್ಬರ ಉತ್ತರ ಮತ್ತೊಬ್ಬರಿಗೆ ಖಂಡಿತಾ ಹೊಂದುವುದಿಲ್ಲ.

ಅವನು ರೂಮಿಗೆ ಬಂದಾದ ಮೇಲೆ ಒಂದಷ್ಟು ವಿಷಯಗಳು ಬದಲಾದವು. ದಿನ ಸಾಯುವವರಿಗೆ ಅಳುವವರು ಯಾರು ಎನ್ನುವಂತೆ ನನಗೆ ನಿದ್ದೆಯಿಂದೆದ್ದು ಬಂದು ರಾತ್ರಿ ಎರಡಕ್ಕೆ ಬಾಗಿಲು ತೆರೆಯುವುದು ಆಗದ ಮಾತು ಎಂದುಕೊಂಡು ರೂಮಿನ ಬಾಗಿಲ ಚಿಲಕ ಹಾಕದೆ ಮಲಗುವುದು ಅಭ್ಯಾಸವಾಯಿತು.

ಹೊರಗಡೆಯಿಂದ ನಿಂತು ನಾವು ಸಾವಿರ ಹೇಳಬಹುದು. ಆದರೆ ಒಳಗಿದ್ದು ಕೆಂಡ ಹಾಯುತ್ತಿರುವವರ ಪರಿಸ್ಥಿತಿಗಳು ಭಿನ್ನ ಭಿನ್ನವಾಗಿರುತ್ತವೆ. ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಹಿತ ಎನ್ನುವ ಹಾಗೆ; ಏಕ್ತಾ ಕಪೂರ್ ಸೀರಿಯಲ್ಲುಗಳಲ್ಲಿರುವಂತೆ ಅದೆಷ್ಟೋ ಬಾರಿ ಬೇರೆಯಾಗಿ ಮತ್ತೆ ಮತ್ತೆ ಕೂಡಿಕೊಳ್ಳಲೂಬಹುದು. ಮಾತಿನ ಕೊನೆಯಲ್ಲಿ ‘ಹೋಗ್ಲಿ ಬಿಡೋ ಯಣ. ಬಿಟ್ಟೆ ಬಿಡ್ತೀನಿ ಅತಾಗ. ಹೊಯ್ಕೋತ ಹೋಗ್ಲಿ!’ ಎಂದೇನೋ ಅಂದ. ಅದರ ಮರುದಿನದಿಂದಲೇ ಅವನ ಕುಡಿತ ಶುರುವಾಯಿತು. ಬೆಳಿಗ್ಗೆ ಕೆಲಸಕ್ಕೆ ಹೊರಡುವ ಮುನ್ನವೇ ಓಲ್ಡ್ ಮಾಂಕ್ ಎದೆಗಿಳಿಸಿಕೊಳ್ಳುತ್ತಿದ್ದ. ಮಧ್ಯಾಹ್ನ ಊಟಕ್ಕೆ ಬಂದಾಗ ಒಂದು ಓಲ್ಡ್ ಮಾಂಕ್ ಮತ್ತು ರಾತ್ರಿಗೊಂದು ಓಲ್ಡ್ ಮಾಂಕ್ ಶುರುಹಚ್ಚಿಕೊಂಡ. ನನಗೊಮ್ಮೆ ತಡೆಯಲಾರದೆ ‘ಅಲ್ಲೋ, ಯಾರಾದ್ರೂ ಡಾಕ್ಟರು ದವಾಖಾನೆಗ ಪ್ರಿಸ್ಕ್ರಿಪ್ಷನ್ ಬರ್ದು ಕೊಟ್ಟರೇನು? ವೀಕ್ ಡೇಸ್ ದಾಗ, ಅದ್ರಾಗೂ ಕೆಲ್ಸಕ್ ಹೋಗು ಮುಂದ, ಅದ್ರಾಗೂ ಗಾಡಿ ಓಡ್ಸುಕಾರ ಎಣ್ಣೆ ಹೊಡ್ದು ಯಾಕ್ ಹೊಕ್ಕಿಯೋ ಮಾರಾಯ? ಕೇಳಿಯಿಲ್ಲೊ ಅತಿ ವೇಗ ತಿಥಿ ಬೇಗ. ಬಸ್ವ… ನೋವಿರ್ತಾವು. ನೋವಿಂದ ಎದ್ದು ಬರೋದಕ ಈ ಪಾಟಿ ನಮ್ಮನ್ನ ನಾವು ಸುಟ್ಟುಕೊಬಾರ್ದೋ…’ ಎಂದಾಗ ಸುಮ್ಮನೆ ಮುಗುಳ್ನಕ್ಕು ಬಲಗೈಯಲ್ಲಿ ಮತ್ತೊಂದು ಉಪ್ಪಿನಕಾಯಿ ನೆಕ್ಕಿ ಓಲ್ಡ್ ಮಾಂಕನ್ನು ಸುರುವಿಕೊಂಡು ಮತ್ತೆ ಕೆಲಸಕ್ಕೆ ಹೊರಟುಬಿಡುತ್ತಿದ್ದ.

ನನಗೊಮ್ಮೊಮ್ಮೆ ಅನಿಸುತ್ತಿತ್ತು. ಛೆ, ಈ ಹುಡುಗರಿಗೆ ರಾಜಕೀಯ ಪ್ರಜ್ಞೆಯೇ ಇಲ್ಲವಲ್ಲ ಎಂದು. ಸಾಮಾಜಿಕ ದಂದುಗಗಳ ಬಗ್ಗೆ ಇವು ಯೋಚನೆಯೇ ಮಾಡುವುದಿಲ್ಲ ಎಂದು. ಮರುಕ್ಷಣವೇ ಇದ್ದಾದರೂ ಏನು ಮಾಡಲಿಕ್ಕಾಗುತ್ತದೆ? ಈ ಹುಡುಗರ ಪ್ರಪಂಚ ಬಹಳ ಚಿಕ್ಕದು. ದಿನ ರಾತ್ರಿ ಎನ್ನದೆ ಮೈಬಗ್ಗಿಸಿ ದುಡಿಯುತ್ತಾರೆ. ಬೈಕಿನಲ್ಲಿ ಪಿಜ್ಜಾಗಳನ್ನು ಬ್ಯಾಗಿನಲ್ಲಿಟ್ಟುಕೊಂಡು ಮನೆ ಮನೆ ಸುತ್ತುತ್ತಾರೆ. ಮಳೆಗಾಲ ಬಂದರೆ ಒಂದಿಷ್ಟು ಹೆಚ್ಚು ಎನ್ನುವಂತೆ ಕೈಯಲ್ಲಿ ಕಾಸಾಗುತ್ತದೆ ಎಂದು ಮಳೆಗಾಗಿ ಕಾಯುತ್ತಾರೆ. ಅವರಿಗೆ ತಾವಿರುವ ಏರಿಯಾದಲ್ಲಿ ಯಾರು ಎಷ್ಟೊತ್ತಿಗೆ ಪಿಜ್ಜಾ ಆರ್ಡರ್ ಮಾಡುತ್ತಾರೆ? ಅವರಿಗೆ ಸಾಮಾನ್ಯವಾಗಿ ಯಾವ ಪಿಜ್ಜಾ ಇಷ್ಟ! ಯಾರಿಗೆ ಯಾವ ಟಾಪಿಂಗ್ಸ್ ಇಷ್ಟ? ಯಾರು ಹೆಚ್ಚು ಟಿಪ್ಸ್ ಕೊಡುತ್ತಾರೆ? ಮುಖಗಳು ಪರಿಚಿತವಾದ ಮೇಲೆ ಯಾರು ಮುಗುಳ್ನಗುತ್ತಾರೆ? ವೀಕೆಂಡುಗಳಲ್ಲಿ ಯಾವ ಮನೆಯವರು ಪಾರ್ಟಿ ಮಾಡುತ್ತಾರೆ ಎನ್ನುವ ವಿವರಗಳೆಲ್ಲವೂ ಇವರ ತಲೆಯಲ್ಲಿ ದಾಖಲಾಗಿರುತ್ತದೆ. ಈ ಎಲ್ಲಾ ವಿವರಗಳನ್ನು ಬಸವ ಊಟ ಮಾಡುವಾಗಲೋ, ಅವನ ವೀಕಾಫಿನ ದಿನದಂದೋ ಸಾಮಾನ್ಯವಾಗಿ ಹೇಳಿಕೊಳ್ಳುತ್ತಿದ್ದ. ನಾನೇನಾದರೂ ಲ್ಯಾಪ್ ಟಾಪಿನಲ್ಲಿ ಏನಾದರೂ ಬರೆಯುತ್ತಾ ಕೂತಿದ್ದರೆ ‘ಯಣ, ನನಗು ಇಂಗ್ಲಿಷ್ ಹೇಳಿಕೊಡ. ಅವನೌನ್ ನನ್ನ ಸ್ಟೋರ್ ಮ್ಯಾನೇಜರ್ ಮಾಡ್ತೀನಿ ಮಾಡ್ತೀನಿ ಅಂತಾನಾ ಒಂದು ವರ್ಷಾತು… ಬರಿ ಆಕಾಶನ ತೋರಿಸಾಕತ್ತಾರ. ಇಂಗ್ಲಿಷ್ ಬರಾಂಗಿಲ್ಲ ಅಂತ ಈ ಧಿಮಾಕ. ನೀ ಹೇಳಿ ಕೋಡಾ ಯಣ್ಣಾ ನಾ ಹೇಳ್ತಿನಿ. ನಾ ಮ್ಯಾನೇಜರ್ ಆದೆ ಅಂದರ ಏನ್ ಕೇಳ್ತಿ?! ನಿನ್ನ ಸಾಯು ಮಟ ನೆನೆಸಿಕೋತೀನಿ.’ ಎಂದು ಕನಸು ಹರವುತ್ತಾನೆ. ಒಮ್ಮೆ ಜೋಶಿನಲ್ಲಿ ಬಂದವನೇ ‘ನನ್ನ ಪೀಯೂಸಿ ಪಾಸ್ ಆಗಿಲ್ಲ. ಇಂಗ್ಲಿಷ್ ಪಾಸ್ ಮಾಡಿಕೋಬಕು. ಆಮೇಲೆ ನನಗಿರೋ ಕಾಂಟ್ಯಾಕ್ಟ್ಸ್ ಹಚ್ಚಿ ಏನಾರ ಚೊಲೋ ಕೆಲಸ ಮಾಡ್ತೀನಿ’ ಎಂದು ಕನಸುಗಳನ್ನು ವಿಸ್ತರಿಸುತ್ತಾನೆ. ರಜೆಯಿರುವಾಗ ಅವರ ಊರಿಗೆ ಹೋದಾಗ ಒಂದೇ ಕೈಯಲ್ಲಿ ಬೈಕು ಓಡಿಸುತ್ತಲೋ, ಬೈಕ್ ವೀಲಿಂಗ್ ಮಾಡುತ್ತಲೋ ವಿಡಿಯೋ ಮಾಡಿಸಿಕೊಂಡು ವಾಟ್ಸಾಪ್ ಸ್ಟೇಟಸ್ ಹಾಕಿಕೊಳ್ಳುತ್ತಾನೆ.

ಹೀಗಿದ್ದ ಬಸವ ಪ್ರೀತಿಯಲ್ಲಿ ಬಿದ್ದು ಎದ್ದೇಳಲಾಗದೆ ಚಡಪಡಿಸುತ್ತಿರುವಾಗ ನನಗೆ ಹಿಂಸೆಯೆನಿಸುತ್ತದೆ. ಒಮ್ಮೆ ರಾತ್ರಿ ನಾನು ಕೆಲಸವೆಲ್ಲಾ ಮುಗಿಸಿ ಮಲಗುವ ಮುಂಚೆ ಕಿಟಕಿಯಾಚೆಗಿನ ಕಂಪೌಂಡನ್ನು ನೋಡಿದೆ. ಸುಮಾರು ರಾತ್ರಿ ಒಂದಾಗಿರಬೇಕು. ಅವನು ಅದಕ್ಕಾತುಕೊಂಡು ದೀರ್ಘವಾಗಿ ಸಿಗರೇಟಿನ ಪಫ್ ಎಳೆದುಕೊಂಡು ಆಕಾಶವನ್ನೇ ದಿಟ್ಟಿಸುತ್ತಾ ಹೊಗೆ ಬಿಡುತ್ತಿದ್ದ. ಆಕಾಶದಲ್ಲಿ ಒಂದು ನಕ್ಷತ್ರದ ಸುಳಿವೂ ಕೂಡ ಇರಲಿಲ್ಲ. ನಾನೂ ಕೂಡ ಕತ್ತು ಬಗ್ಗಿಸಿ ಆಚೆ ಈಚೆ ಮಾಡಿ ಆಕಾಶದ ಚಂದ್ರನನ್ನು ಹುಡುಕಿದೆ. ಅವನು ಎಲ್ಲೋ ತೆಂಗಿನ ಮರದ ಗರಿಯ ಮೇಲೆ ಅರ್ಧ ಚಂದ್ರಾಕಾರದಲ್ಲಿ ಕ್ಷೀಣವಾಗಿ ಕಾಣಿಸುತ್ತಿದ್ದ. ಕರೆಂಟುಕಂಬ ಕೆಟ್ಟುನಿಂತು ಬೀದಿಯಲ್ಲಿ ಅರೆಕತ್ತಲು. ಅದೆನನಿಸಿತೋ ಏನೋ ಅವನು ತನ್ನ ಹೆಡ್ ಲೈಟನ್ನು ಹೊತ್ತಿಸಿ ನಿಂತ. ಮತ್ತೊಂದು ಸಿಗರೇಟನ್ನು ಸೇದಿ ಒಳಬಂದಿದ್ದ.‌

ಮರುದಿನ ಪತ್ರಿಕೆಯ ಮೇಲೆ ಕಣ್ಣಾಡಿಸುವ ಎಂದು ಕೂತೆ. ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ ಕಾರಣಕ್ಕಾಗಿ ದಲಿತ ಹುಡುಗನನ್ನು ಹುಡುಕಿಕೊಂದ ಹುಡುಗಿ ಮನೆಯವರು ಎಂಬ ಸುದ್ದಿ ಓದಿದೆ. ಎದೆ ಧಸಕ್ಕೆಂದಿತು. ಕೂಡಲೇ ಮತ್ತೊಮ್ಮೆ ಪಕ್ಕಕ್ಕೆ ನೋಡಿದೆ. ಇವನು ಕೈಕಾಲುಗಳನ್ನು ಸೊಟ್ಟಂಬಟ್ಟ ಬಿಸಾಕಿ ಗಡದ್ದಾಗಿ ನಿದ್ರೆ ಹೊಡೆಯುತ್ತಿದ್ದ. ಚೂರು ಸಮಾಧಾನವಾಯಿತು. ಆಮೇಲೆ ಹೊಳೆಯಿತು. ಈ ಹುಡುಗರು ರಾಜಕೀಯದ ಬಗ್ಗೆ ಸಾಮಾಜಿಕ ಜ್ವಲಂತಗಳ ಬಗ್ಗೆ ಮಾತನಾಡುವುದಿಲ್ಲ. ಅವರೇ ಆ ಕಥೆಗಳ, ಅದು ಒಯ್ಯುವ ದುರಂತಗಳ ನಾಯಕರೂ ಆಗಿರುತ್ತಾರೆ. ಕೆಲಸಕ್ಕೆ ತಡವಾಯಿತು ಎಂದರಿವಾಗಿ ಪತ್ರಿಕೆಯನ್ನು ಮುಚ್ಚಿ ಏಳಲು ಅನುವಾದಾಗ ಕಾಲಲ್ಲಿ ಓಲ್ಡ್ ಮಾಂಕ್ ಪ್ಯಾಕೆಟ್ ತಾಕಿದ್ದೆ ದೂರ ಮೂಲೆಗೆ ಹೋಗಿ ಬಿದ್ದುಕೊಂಡಿತು.