ದೀಪಾವಳಿ ದೀಪಗಳ ಹಬ್ಬ, ಬೆಳಕಿನ ಹಬ್ಬ, ಕತ್ತಲ ಹಬ್ಬ, ಹೆಣ್ಮಕ್ಕಳ ಹಬ್ಬ, ಮಕ್ಕಳ ಹಬ್ಬ, ಆಕಾಶಬುಟ್ಟಿಯ ಹಬ್ಬ, ಪಟಾಕಿಯ ಹಬ್ಬ, ಸುಗ್ಗಿಯ ಹಬ್ಬ, ರೈತಮಕ್ಕಳ ಹಬ್ಬ, ಮಲೆನಾಡಿನ ಹಬ್ಬ, ಮಾರವಾಡಿಗಳ ಹಬ್ಬ, ದುಡ್ಡಿನ ಹಬ್ಬ, ಇನ್ನೂ ಮತ್ತೆ ಏನೇನೋ ಹಬ್ಬ ಅಂತೆಲ್ಲ ಬರೆದರು. ಟೀವಿ ಮಾಧ್ಯಮಗಳಂತೂ ಎಲ್ಲದಕ್ಕೂ ಬೆಳಕಿನ ನಕ್ಕಿ ಪುಡಿ ಹಚ್ಚಿವೆ. ಹಬ್ಬದ ರಿಡಕ್ಷನ್ ಸೇಲುಗಳು ಭಾರೀ ಕಡಿತದ ಮಾರಾಟದವರ ಜಾಹೀರಾತುಗಳ ಬೆಳಕು ಕಣ್ಣು ಕೋರೈಸುತ್ತಿದೆ. ನಿಯಾನ್ ದೀಪಗಳು, ಹೈ ಮಾಸ್ಕ್ ದೀಪಗಳು, ಆಕಾಶಚುಂಬಿತ ಮಾಲ್ ಗಳ ಗಾಜುಗನ್ನಡಿ ಗೋಡೆಗಳಿಂದ ಪ್ರತಿಫಲಿತವಾಗುವ ಝಗಮಗ ಬೆಳಕು ಹೊರಗಿನ ಕತ್ತಲನ್ನ ಇನ್ನಷ್ಟು ಬೆತ್ತಲಾಗಿಸುತ್ತಿದೆ. ಈ ಎಲ್ಲದರ ಮಧ್ಯೆ ಒಳಗೊಳಗೇ ಕತ್ತಲ ಕಣಿವೆಯಲ್ಲಿ ಹುತ್ತಗಟ್ಟುತ್ತ ಹೋಗುತ್ತಿರುವ ಅಂತಃಕರಣಕ್ಕೆ ಬೆಳಕಿನ ಮಿಂಚು ಹಾಯಿಸುವುದು ಯಾರು? ಬೇಕು ಬೇಕೆನ್ನುವ ಒರಲೆಗಳು ಲಕ್ಷಗಟ್ಟಲೆ ಆವರಿಸಿ ದಿನದಿಂದ ದಿನಕ್ಕೆ ಅಂತಃಕರಣದ ಪಕಳೆಗಳು ಉದುರಿ ಪುಡಿಯಾಗಿ ಕೊನೆಗುಳಿಯುವುದೇನು? ಯಾವ ಹಾವು ಬಂದು ಸೇರಬಹುದು? ಹೆದರಿಕೆಯಾಗಿ ಕೂಡಲೆ ನಾನು ಚಿಕ್ಕವಳಿದ್ದಾಗ ಅಮ್ಮ ಮಣ್ಣುಗೋಡೆಯ ಬಾವಿಯ ಒಡಕಿಗೆ ಹೊಸಮಣ್ಣು ತುಂಬಿ, ಕೆಮ್ಮಣ್ಣು ಬಳಿದು, ಮೇಲೆ ಚಿತ್ತಾರವಾಗಿ ಬರೆದ ರಂಗೋಲಿಯ ಗೆರೆಗಳ ಮೊರೆಹೋಗುತ್ತೇನೆ. ಲಕ್ಷ್ಮಣ್ ರೇಖೆಯ ಸಮೀಪಬಂದು ಓಡಿಹೋಗುವ ಜಿರಳೆಗಳ ಹಾಗೆ ಕತ್ತಲು ಹತ್ತಿರ ಹಾಯ್ದು ಹಿಂದಿರುಗುತ್ತದೆ. ಈಗಿನ ಗ್ಲೋಬಲ್ ಲಿಬರಲ್ ಯುಗದಲ್ಲಿ ಒಂದು ರಂಗೋಲಿಯ ಗೆರೆ ಸಾಕೇ ಅಂತ ಯೋಚನೆ ಮಾಡುವಾಗ, ಆ ದಿನಗಳಲ್ಲಿ ಅಪ್ಪ ಹುಡುಕಿ ಕೊಯ್ದು ತಂದು ದೊಡ್ಡ ಬಚ್ಚಲುಮನೆಯ ಹಂಡೆಗೆ ಕಟ್ಟಿದ ಕಹಿ ಹಿಂಡಲ ಕಾಯಿಯ ಬಳ್ಳಿ ನೆರವಾಗುತ್ತದೆ. ತಿನ್ನಬರುವ ಕತ್ತಲೆ ಕಹಿಮುಖ ಮಾಡಿಕೊಂಡು ಇನ್ಯಾವುದೋ ಜಾಡು ಹಿಡಿದು ಓಡುತ್ತದೆ. ಒರಲೆಗಳು ಬಂದು ಬಿಟ್ಟರೆ ಅಂತ ಮೈ ನಡುಗುವಾಗ, ಬೇಲಿಯ ಸಾಲಿನ ಹೂಗಿಡಗಳ ಫ್ರೇಮಿನಲ್ಲಿ ವಿಶಾಲವಾಗಿ ಹರಡಿಕೊಂಡ ಮಣ್ಣಿನಂಗಳವು ಸಂಜೆಯಷ್ಟೇ ಸಿಕ್ಕ ಫ್ರೆಶ್ ಸಗಣಿಯನ್ನ ಅಮ್ಮನೂ ನಾನೂ ಬಕೀಟಿನಲ್ಲಿ ಕದಡಿ ಬಳಿದ ಹಸಿರುಗಪ್ಪಿನ ಮೇಲುದ ಹೊದ್ದು ಘಮ್ಮೆನ್ನುತ್ತಿದೆ. ನಡುಕ ನಿಲ್ಲುತ್ತದೆ. ಒರಲೆಗಳು ಮಣ್ಣು ಸಿಗದೆ ಬಂದ ದಾರಿಯಲ್ಲಿ ಬಂದ ಹಾಗೆ ಹೋಗುತ್ತವೆ.

ಹೀಗೇ ಸುಮ್ಮನೆ ಯೋಚನೆ ಮಾಡುತ್ತ ಕೂರುವಾಗ ಅಚ್ಚರಿಯೆನಿಸುತ್ತದೆ – ಹೇಗೆ ಈ ಯಾವುದೋ ಕಾಲದ ನೆನಪುಗಳು ಇವತ್ತಿನ ಸಂಕಟಗಳಿಗೆ ಸಾಂತ್ವನ ಕೊಡುತ್ತವೆ ಅಂತ! ಇವತ್ತು ನಮ್ಮ ನಡುವೆ ತುಂಬಿ ತುಳುಕುತ್ತಿರುವ ಎಲ್ಲ ಬೌದ್ಧಿಕತೆ ಮತ್ತು ಮೌಢ್ಯತೆಗಳ ನಡುವೆ ಅವುಗಳ್ಯಾವುದರ ಗೊಡವೆಯೂ ಇಲ್ಲದೆ ತನ್ನಷ್ಟಕ್ಕೆ ತಾನು ಸಹಜವಾಗಿ ಅರಳಿಕೊಂಡಿದ್ದ ಈ ಆಚರಣೆಗಳು, ಅವುಗಳ ನೆರವೇರಿಕೆಯ ಸಂಭ್ರಮಗಳು ಹೇಗೆ ಒಂದು ಅಪ್ಪಟ ಖುಶಿಯನ್ನ ಕಟ್ಟಿಕೊಡುತ್ತಿದ್ದವು ಅಂತ ನೆನೆದರೆ ಮನಸ್ಸು ತುಂತುರು ಮಳೆಯಲ್ಲಿ ನೆನೆಯುವ ಸುಖವನ್ನ ಅನುಭವಿಸುತ್ತದೆ.

ಎಲ್ಲವನ್ನೂ ತುಂಬ ಸರಳೀಕರಿಸುವ, ಎಲ್ಲ ವಿಷಯಗಳ ಸಂಕೇತಗಳನ್ನೂ ಪೂರಾ ಡೀಕೋಡ್ ಮಾಡಿ ಓ ಇದಿಷ್ಟೆ ಎರಡು ಸೊನ್ನೆ, ಒಂದು ಗೆರೆಯ ಪುನರಾವೃತ್ತಿಗಳು ಎಂದುಕೊಳ್ಳುತ್ತಾ, ಎಲ್ಲ ಅನುಕೂಲಗಳನ್ನೂ ಚಿಟಿಕೆ ಹೊಡೆಯುವಷ್ಟರಲ್ಲಿ ಸಾಧಿಸಿಕೊಂಡು, ಇರುವ ಸಮಯವನ್ನೆಲ್ಲ ಒತ್ತೆಯಿಟ್ಟು ಇನ್ನಷ್ಟು ಮತ್ತಷ್ಟು ಪೇರಿಸುತ್ತಾ ಚೆಲ್ಲುವುದೆ ಬದುಕಾಗಿ ಹೋಗಿದೆ. ಸ್ವಿಚ್ಚೊತ್ತಿದರೆ, ಕೆಲಸದವಳೂ ಬಂದು ನಿಮಿಷಗಳಲ್ಲಿ ಮನೆ ಕ್ಲೀನಾಗುವಾಗ ನಾನು ಹಬ್ಬದ ಹಿಂದಿನ ಸಂಜೆ ಅವಳ ತಿಂಗಳ ಸಂಬಳವನ್ನ ಒಂದಷ್ಟು ಗಂಟೆ ಕಂಪ್ಯೂಟರ್ ಮುಂದೆ ಕೂತು ದುಡಿಯುತ್ತಿರುತ್ತೇನೆ. ಗುಡಿಸಲು ಅಂಗಳವಿಲ್ಲ. ಅದೆಲ್ಲ ಯಾರಿಗೆ ಬೇಕು. ಹಬ್ಬದ ಹೋಳಿಗೆ ಇನ್ನೆರಡು ಕೊಡಿ ಅಕ್ಕಯ್ಯ ಅಂತ ಅಚ್ಚೆ ಮಾಡಿ ತೆಗೆದುಕೊಳ್ಳುತ್ತಿದ್ದ ಗಂಗೆಯ ಹಾಗೆ ಇವಳೂ ಅಂದುಕೊಂಡು ಹಬ್ಬದ ತಿಂಡಿಯೇನಾದರೂ ಕೊಡಹೋದರೆ ನಮ್ಮವಳಿಗೆ ಅದೆಲ್ಲ ಬೇಕಿಲ್ಲ. ಇದೆಲ್ಲ ಬಿಡಿ ನಂಗೆ ಬೇಳೆತಿಂಡಿ ಆಗಾಕಿಲ್ಲ, ಒಂದು ಹೊಸಸೀರೆಗೆ ದುಡ್ಡುಕೊಡಿ ಎನ್ನುತ್ತಾಳೆ. ಹಗಲಲ್ಲೂ ಕಳವು ದರೋಡೆಯ ಭೀತಿಯಲ್ಲೆ ಬದುಕುಸಾಗಿಸುವ ನಮಗೆ ಭೂರೆಗಳವಿನ ಎಚ್ಚರದ ರಾತ್ರಿಯ ಮಜ ಇಲ್ಲಿ ಬರುವುದೇ ಇಲ್ಲ. ಪಾಟುಗಳಲ್ಲಿರುವುದೆಲ್ಲ ಹಸಿರೆಲೆಯ ಕ್ರೋಟನ್ ಅಲಂಕಾರಿಕ ಗಿಡಗಳು. ಪೇಟೆಯಿಂದ ಕೊಂಡು ತಂದ ಹಣ್ಣುಗಳು ಝಿಪ್ ಲಾಕ್ ಕವರುಗಳಲ್ಲಿ ಫ್ರಿಜ್ಜಿನಲ್ಲಿದೆ – ಕದಿಯುವುದೇನನ್ನು. ಫ್ರಿಜ್ಜನ್ನೇ ಕದೀಬೇಕಷ್ಟೆ.

ಅಲ್ಲ ಬರೀ ಹಿಂಗೆ ನಾಸ್ಟಾಲ್ಜಿಕ್ ಆಗಿ ಹಳೆಯ ಚಂದಕ್ಕೆ ಇವತ್ತಿನ ಕ್ಷಣಗಳನ್ನ ಹೋಲಿಸುತ್ತಾ ಕುಂತರೆ ಎಂಗೆ ಅಂತ ಬಹಳ ಜನ ನನ್ನ ಕೇಳಿದ್ದಾರೆ. ಏನುಪಯೋಗ ಅನ್ನುವುದು, ಹಳತನ್ನೆ ಮತ್ತೆ ಮತ್ತೆ ಹೊಸ ಅಕ್ಷರಗಳಲ್ಲಿ ಕುಟ್ಟುವುದು ಯಾಕೆ ಅನ್ನುವುದು ಅವರ ಪ್ರಶ್ನೆ. ಆದರೆ ಈ ಹಳತರಲ್ಲಿ ಇರುವ ಯಾವುದೋ ಒಂದು ಜೀವಂತಿಕೆ ನನ್ನ ಇವತ್ತಿನ ಬರಡು ಕ್ಷಣಗಳಿಗೆ ನೀರು ಹನಿಸುತ್ತಿರುವುದು ನನಗೆ ಮಾತ್ರ ಗೊತ್ತಿರುವ ಸತ್ಯ. ಎಲ್ಲರೂ ಅವರವರ ದಾರಿಗೆ ನೆರಳಾಗಲು, ಜೀವಜಲ ತುಂಬಲು ಅವರದ್ದೇ ಆದ ವಿಧಾನಗಳನ್ನ ಅಳವಡಿಸಿಕೊಂಡಿರುತ್ತಾರೆ. ನನ್ನದು ಮೂಲಮುಖೀ ಧೋರಣೆಯಿರಬಹುದು..:)

ನಮ್ಮೆಲ್ಲ ನಡವಳಿಕೆ, ಮಾತುಕತೆ, ಓದು, ಸಭ್ಯತೆ, ಮುನ್ನಡೆಯುವಿಕೆ ಎಲ್ಲವೂ ಅವತ್ತು ಬಹಳ ಹಿಂದೆ ಮೊಳಕೆಯೊಡೆದ ಎರಡು ಚಿಗುರು ಎಲೆಗಳ ಮಧ್ಯದಲ್ಲಿ ಬೆಳೆಯುತ್ತ ಬಂದ ಟಿಸಿಲುಗಳೇ ಅಲ್ಲವೇ ಅನಿಸುತ್ತದೆ ನನಗೆ.

ಇಲ್ಲಿ ಸಿಗ್ನಲ್ಲಿನಲ್ಲಿ ಸಿಗುವ ಬೇಡುವ ಕೈಗಳು, ಚಪ್ಪಾಳೆ ತಟ್ಟುತ್ತ ಜೋಬಿಗೆ ಕೈ ಹಾಕುವ ಧಾರ್ಷ್ಟ್ಯದ ಕೈಗಳು, ಯುನಿಫಾರ್ಮಿನಲ್ಲಿ ನಿಂತು ಅಡ್ಡಹಾಕಿ ರಸೀತಿ ಹರಿದು ಕಸಿದುಕೊಳ್ಳುವ ಕೈಗಳು, ಎಲ್ಲದರ ಮಧ್ಯೆ ನನ್ನನ್ನ ತುಂಬ ಕಾಡುವ, ಮತ್ತೆ ಹೇಗಾದರೂ ಮಾಡಿ ನೋಡಬೇಕೆನ್ನುವ ಎರಡು ಜೊತೆ ಪುಟ್ಟ ಕೈಗಳು ಆ ಕಳೆದು ಹೋದ ಕಾಲದಲ್ಲಿವೆ. ಅವುಗಳ ನೆನಪಲ್ಲೆ ಒದ್ದೆಯಾದ ಮನಸ್ಸು ಹೊರಗಿನ ಮೈಯಲ್ಲು ಮುಳ್ಳುಹೂಗಳನ್ನರಳಿಸುತ್ತವೆ. ದೀಪಾವಳಿಯ ಸಂಜೆ ಅಜ್ಜನ ಬಿಳಿಅಂಗಿಯ ಜೇಬಿನಿಂದ ನಾಲ್ಕು ನಾಲ್ಕಾಣೆಗಳು ನನ್ನ ಪುಟ್ಟ ಕೈ ಸೇರುತ್ತಿದ್ದವು. ಕಿಟಕಿಯ ತಳಿಹಿಡಿದು ನೋಡುತ್ತ ನಿಂತವಳಿಗೆ ಆಚೆಮನೆಯ ಮೆಟ್ಟಿಲಿಳಿಯುವ ಆ ಜೋಡಿಹುಡುಗಿಯರು, ಅವರ ಹಳೇ ಉದ್ದಲಂಗ ಮತ್ತು ಇಬ್ಬರೂ ಸೇರಿ ಹಿಡಿದಿರುವ ಪುಟ್ಟ ಬಟ್ಟಲಿನಲ್ಲಿ ಇನ್ನೂ ಪುಟ್ಟಗೆ ಬೆಳಗುತ್ತಿರುವ ಮಣ್ಣಿನ ಹಣತೆಯ ದೀಪ ಮತ್ತು ಆರದಂತೆ ಹಿಡಿದ ಅವರಿಬ್ಬರ ಕೈ ಕಾಣುತ್ತಿತ್ತು. ಅವರು ಮೆಟ್ಟಿಲೇರಿ ನಮ್ಮನೆಯೊಳಗೆ ಬರುವಾಗ ಕೇಳುವ ರಾಗವಾದ ದೀಈಈಈಈಪಾಆಆಅವಳೀಈಈಈಈಈ ಮುಗಿಯುವುದಕ್ಕೆ ಮುನ್ನವೇ ಅವರ ತಟ್ಟೆಯೊಳಗೆ ಎರಡು ನಾಲ್ಕಾಣೆ ಹಾಕುತ್ತಿದ್ದೆ. ಒಂದು ಮೆದುವಾದ ನಗು ನಗುತ್ತ ಅವರು ಹೊರಡುತ್ತಿದ್ದರು. ಕತ್ತಲೆಯ ದಾರಿ ಸೀಳುತ್ತಾ ಮುಂದಿನ ಮನೆಗೆ. ಇನ್ನೊಂದು ಸ್ವಲ್ಪ ಹೊತ್ತಿಗೆ ಇನ್ನೆರಡು ಪುಟ್ಟ ಜೋಡಿಗಳ ಪುಟ್ಟ ಹಣತೆಯ ಪುಟ್ಟ ದೀಪ ಮತ್ತದೇ ಕತ್ತಲ ದಾರಿಯನ್ನು ಬೇಧಿಸುತ್ತ ಸಾಗುತ್ತಿತ್ತು.

ಯಾರು ಯಾರಿಗೆ ಬೆಳಕು ಕೊಟ್ಟವರು? ಕಾಯುತ್ತ ಕೂತ ಪುಟ್ಟ ಹುಡುಗಿಯ ಮನದಲ್ಲಿ ಕೊಟ್ಟ ಸಂತೋಷದ ಬೆಳಕು ಹತ್ತಿಸಿದರೋ, ಗಾಳಿಗಡ್ಡವಾಗಿ ಆರದಂತೆ ಕೈ ಹಿಡಿದು ದೀಪ ತಂದ ಪುಟ್ಟ ಕೈಗಳಿಗೆ ಎಂಟಾಣೆಯ ಆಸರೆಯ ದೀಪ ಹತ್ತಿಸಿದರೋ, ಪುಟ್ಟ ಕೈಯೊಂದು ಇನ್ನೊಂದು ಪುಟ್ಟಕೈಯನ್ನು ಗಟ್ಟಿಗೊಳಿಸುವ ಹಾಗೆ ನಾಲ್ಕಾಣೆಗಳನ್ನು ಕೊಟ್ಟು, ಆ ಕೊಡು-ಕೊಳ್ಳುವಿಕೆಯ ಬೆಳಕನ್ನು ಹೀರುತ್ತ ಕುಳಿತ ಅಜ್ಜನಿಗೆ ಬೆಳಕು ಕೊಟ್ಟರೋ, ಅವನಿಂದ ಇವರಿಗೆ ಬೆಳಕೋ, ಇವಳಿಂದ ಅವರಿಗೆ ಬೆಳಕೋ, ಅವರಿಂದ ಇವರೆಲ್ಲರ ಬೆಳಕೋ – ಇದೇ ಅಂತ ಹೇಳಲು ಗೊತ್ತಾಗುತ್ತಿಲ್ಲ. ಈ ಬಗೆಯ ನೆನಪುಗಳು ಇಂದಿನ ಬದುಕಿನ ಗಾಳಿಗೊಡ್ದಿದ ಹಣತೆಯಂತ ದಿನದಲ್ಲಿ ತನ್ನ ಪುಟ್ಟ ಪುಟ್ಟ ಕೈಗಳನ್ನು ಅಡ್ಡ ಹಿಡಿದು ಕತ್ತಲೆಯಲ್ಲಿ ಮಿನುಗು ಹುಟ್ಟಿಸುತ್ತವೆ. ಒಂದೊಂದು ಮಿನುಗೂ ಒಳಗಿನ ಕತ್ತಲೆಯನ್ನ ಬೆಳಗುವ ಪ್ರಜ್ವಲ ದೀಪ.

ಪುಟ್ಟ ಊರಿನ ಆ ಪುಟ್ಟ ಹುಡುಗಿಯ ದೀಪಾವಳಿಯೆಂದರೆ:

*ಒಂದು ವಾರ ಮೊದಲು ರೇಷಿಮೆ ಲಂಗದ ಹೊಲಿಗೆ ಬಿಚ್ಚುವುದು;
*ನಾಲ್ಕು ದಿನ ಮೊದಲು ಹೋದವರ್ಷ ಉಳಿದ ಪಟಾಕಿಗಳನ್ನ ಒಲೆಯ ಮೇಲಿನ ನಾಗಂದಿಗೆಯಲ್ಲಿಡುವುದು; ಮತ್ತು ದಿನಾ ಬಿಸಿಲಿಗೆ  ಹಾಕುವುದು
*ಹಿಂದಿನ ದಿನವಿಡೀ ಸುತ್ತುಕೆಲಸದಲ್ಲಿ ಮೈಕೈ ಕೊಳೆಮಾಡಿಕೊಳ್ಳುವುದು;
*ಬೆಳಿಗ್ಗೆ ಬೇಗ ಎದ್ದು ತಲೆಸ್ನಾನ ಮಾಡಿಸಿಕೊಂಡು ಬಚ್ಚಲೊಲೆಯ ಬಿಸಿಯಲ್ಲಿ ಕೂದಲು ಒಣಗಿಸಿಕೊಳ್ಳುವುದು;
*ತಿಂಡಿತಿನ್ನುವುದಕ್ಕೂ ಮೊದಲೇ ರೇಷಿಮೆ ಲಂಗ ತೊಟ್ಟು, ನೀರು ಜಡೆ ಹಾಕಿಸಿಕೊಂಡು, ಹೊಸ ಸ್ಪ್ರಿಂಗು ಬಳೆಯನ್ನ ಹಾಕಿ, ಕೆನ್ನೆ ಸರಪಳಿ   ತೂಗಿಸಿಕೊಂಡು ರೆಡಿಯಾಗುವುದು ಮತ್ತು ಅಮ್ಮಮ್ಮ ಕಿರೀ ಹಿಡಿದು ನೋಡಿ ಗಲ್ಲಕ್ಕೊಂದು ಮಸಿಬೊಟ್ಟು ಇಡುವುದು;
*ವಿಶೇಷಾಂಕಗಳನ್ನ ಬರೀ ತಿರುವಿ ನೋಡಿ ಯಾವ ಯಾವ ಕತೆ ಯಾವ ಸರದಿಯಲ್ಲಿ ಓದಬೇಕೂಂತ ಗುರುತಿಸಿಕೊಂಡು ಇಡುವುದು;
*ರುಚಿಯಾದ ತಿಂಡಿ, ಊಟ, ಸಿಹಿ ಮತ್ತು ಕೊಬ್ಬರಿ ಕವಳ;
*ಕಣ್ಣು ಎಳೆದುಕೊಂಡು ಹೋಗುತ್ತಿದ್ದರೂ ಮೊದಲ ಬಹುಮಾನ ಬಂದ ಕತೆಯನ್ನೊಂದು ಹೇಗಾದರೂ ಓದಿಬಿಡುವುದು..;
*ಸಂಜೆಗೆ ಮತ್ತೊಂದು ರೌಂಡು ರೆಡಿಯಾಗಿ ಕಿಟಕಿಯುದ್ದಕ್ಕೂ ಮೆಟ್ಟಿಲುಗಳ ಮೇಲೆ, ಮನೆ ಬಾಗಿಲುಗಳ ಹೊಸ್ತಿಲಲ್ಲಿ ದೀಪ ಹಚ್ಚಿಡುತ್ತಾ  ಹೋಗುವುದು ಮತ್ತು ದೀಪಾವಳಿಯ ಹುಡುಗಿಯರಿಗೆ ಕಾಯುತ್ತಾ ನಿಲ್ಲುವುದು;
*ಅವರು ಬಂದು ಹೋದ ಮೇಲೆ ಅಜ್ಜನ ಜೊತೆಗೆ ವಿಷ್ಣುಚಕ್ರ ಮತ್ತು ಸುರ್ ಸುರ್ ಬತ್ತಿ ಹಚ್ಚುವುದು;
*ಯಾವ ಕೆಲಸವೂ ಇಲ್ಲದಿದ್ದರೂ ಸುಮ್ಮನೆ ಸುಳಿವ ಹಮಾಲರೆಲ್ಲರಿಗೂ ಅವತ್ತಿನ ವಿಶೇಷ ತಿಂಡಿ ಕೊಡುವುದು,;
*ಢಂ ಎನ್ನುವ ಪಟಾಕಿ ಹಚ್ಚಲು ಹೆದರಿ ರಫೀಕನ ಕೈಯಲ್ಲಿ ಅದನ್ನು ಹಚ್ಚಿಸುವುದು;
*ರಾತ್ರಿ ಊಟ ಮುಗಿದ ಮೇಲೆ, ರಸ್ತೆಯುದ್ದಕ್ಕೆ ಶೆಟ್ಟರ ಮನೆಯವರು ಹಚ್ಚುವ ಪಟಾಕಿ ಸರವನ್ನ ಕಿವಿಯಲ್ಲಿ ಬೆರಳಿಟ್ಟುಕೊಂಡು ನೋಡುವುದು;
ಆಚೆಯ ಬೀದಿಯವರ ರಾಕೆಟ್ ಹೂಬಾಣಗಳನ್ನ ಎಣಿಸುತ್ತ ನಿಲ್ಲುವುದು.;
*ಶಬ್ಧಗಳೆಲ್ಲ ಕರಗುವಾಗ ಮೂಲೆ ಮೂಲೆಯಲ್ಲಿ ಹಚ್ಚಿಟ್ಟ ದೀಪದ ಬೆಳಕಿನಲ್ಲಿ ನಿದ್ದೆಗಿಳಿಯುವುದು..;

ದಿನದಿನವೂ ಝಗಮಗಿಸುವ ಬೆಳಕಿನ ಹಬ್ಬದ ದೊಡ್ಡ ಊರಿನ ಈ ದೊಡ್ಡವಳಾಗಿಯೂ ಪುಟ್ಟಗೇ ಉಳಿದುಬಿಟ್ಟ ಇವಳ ದೀಪಾವಳಿಯೆಂದರೆ:

ಬೆಳಕಿನ ಮಧ್ಯೆ ಮುತ್ತುವ ಕತ್ತಲೆಗೆ ಹೆದರುತ್ತ
ಹಳೆಯ ದಿನಗಳನ್ನ ಕತ್ತಲು ಕವಿಯುವ ಮನಸ್ಸಿನ ತೆರೆಯ ಮೇಲೆ
ಹಾಯಿಸುತ್ತಾ
ನೆನಪುಗಳ ಮೆರವಣಿಗೆ ಹೊರಡಿಸುವುದು.
ಅದೋ ಅಲ್ಲಿ ದೂರದ ತಿರುವಿನಲ್ಲಿ ಅವತ್ತು ಕಣ್ಮರೆಯಾದ
ಪುಟ್ಟ ಕೈಗಳ ಆಸರೆಯಲ್ಲಿ ಗಾಳಿಗಾರದೆ ನಿಂತ ದೀಪದುರಿಯನ್ನ
ಮತ್ತೆ ಮತ್ತೆ ನೋಡುವುದು.

ಗದ್ದಲ, ಪಟಾಕಿ, ಹೊಗೆ, ಝಗಮಗ ಎಲ್ಲ ನೇಪಥ್ಯಕ್ಕೆ ಸರಿದು
ಅಂತರಂಗಸ್ಥಳದಲ್ಲಿ
ನೆಮ್ಮದಿಯ ಮೌನದ ಬೆಳಕಿನೆಳೆ ಮಿನುಗುತ್ತಿದೆ..

ಈ ಎಲ್ಲ ಅಚ್ಚರಿಯ ಸಂಭ್ರಮ ಕಳೆದುಹೋಗಿದೆಯೇ? ಖಂಡಿತಕ್ಕೂ ಇಲ್ಲ. ಅವೆಲ್ಲ ತುಂಬಿರುವ ಜಾಗಕ್ಕೆ ಹೋಗುವ ಬಾಗಿಲಿನ ಬೀಗದ ಕೈಯನ್ನ ಗಡಿಬಿಡಿಯ ಬದುಕಿನ ಕೊನೇ ಖಾನೆಯ ಒಳಗೆ ಇಟ್ಟು ಬಿಟ್ಟಿದ್ದೇವೆ. ಬಗ್ಗಿ ನೋಡಲು ಪುರುಸೊತ್ತಿಲ್ಲ. ಒಳಗೆ ಇಣುಕಿ ಹುಡುಕಲು ಪುಟ್ಟ ದೀಪದ ಬೆಳಕಿಲ್ಲ. ಎಲ್ಲ ನಮ್ಮ ಕೈಯಲ್ಲಿದೆ. ನಮ್ಮದೇ ಕೈ ತಾನೇ ಎಂಬ ಉಪೇಕ್ಷೆಯ ಹಿಡಿತದಲ್ಲಿದೆ.