ಅವನ ಜೊತೆ ನಾನು ಕೈಬಡಿಯುತ್ತಾ ಮಂಗನನ್ನ ಓಡಿಸುತ್ತಿದ್ದೆ.ಅಂದು ನಾನು ಹಾಗೆ ತೋಟದ ಮಂಗಗಳೊಂದಿಗೆ ಹೋರಾಟ ಮೊದಲಿಟ್ಟದ್ದು ಸಾಂಕೇತಿಕವೆಂತಲೂ, ಮುಂಬರುವ ಬದುಕಿನ ಮಹಾಯುದ್ಧವೊಂದನ್ನು ಸೆಣಸುವಲ್ಲಿ ನಾನು ಅನುಭವಿಸಿದ ನೋವು, ಸಂಕಟ, ಅವಮಾನ, ದುಃಖ, ಅಭದ್ರತೆ, ಅನಾಥತೆಯೆಂಬೆಲ್ಲಾ ಮಂಗಗಳ ದಾಳಿಗೆ ಅಡ್ಡಲಾಗಿ ಆ ಭಗವಂತನೆಂಬೋ ಸೆಕ್ಯೂರಿಟಿಯು ನಿಂತು ನನ್ನ ಗೆಲ್ಲಿಸಿದ್ದೇ ಈ ಪ್ರಸಂಗವೆಂತಲೂ ಹೇಗೆ ಅರಿತುಕೊಂಡೇನು ಆಗ? 
ಸದ್ದು ಮಾಡಿ ಹ್ಯಾಂಗ ಹೇಳಲಿ?’ ಲೇಖಕಿ ಮಧುರಾಣಿ ಬರೆಯುವ ಹೆಣ್ಣೊಬ್ಬಳ ಅಂತರಂಗದ ಪುಟಗಳ ನಾಲ್ಕನೆಯ ಕಂತು.

ಮಾವ ಬೆಳಗಾಗುವ ಹೊತ್ತಿಗೆ ಊರಿಂದ ಬಂದಿದ್ದ. ಅಂದು ಬೆಳಗು ನನ್ನ ಮುದ್ದಾಗಿ ಸಜ್ಜಾಗಿಸಿ ಹೊರಗೆ ಕರೆದೊಯ್ದ. ‘ಮಾಮಾ, ಅಮ್ಮ ಎಲ್ಲಿದಾಲೋ..?’ ಅಂದವಳಿಗೆ ‘ಬಾ ಚಿನ್ನೀ, ಅವಳನ್ನೇ ನೋಡೋಕೆ ಹೋಗ್ತಿರೋದು.’ ಅಂದನವನ ಮಾತು  ಕಿವಿ ತುಂಬಿತು. ಕಡೆಗೆ ನಿನ್ನ ನೋಡುವ, ಮಾತಾಡುವ ಗಳಿಗೆ ಬಂದೇಬಿಟ್ಟಿತ್ತು.

ಆಸ್ಪತ್ರೆ  ಒಳಹೊಕ್ಕ ಕೂಡಲೇ ಮುಖಕ್ಕೆ ಅಡರುವ ಫೆನಾಯಿಲ್ ವಾಸನೆಯನ್ನು ನೀನು ಯಾವಾಗಲೂ ‘ಛೀ ಆಸ್ಪತ್ರೆ ವಾಸನೆ!’ ಎಂದು ಮೂಗು ಮುರಿಯುತ್ತಿದ್ದದ್ದು ಇಂದಿಗೂ ಹಸಿಹಸಿ ನೆನಪು. ಕಾಲಾಂತರದಲ್ಲಿ ಎಲ್ಲಾದರೂ ಫೆನಾಯಿಲ್ ವಾಸನೆ ಬಂದಾಗಲೆಲ್ಲಾ ಆಸುಪತ್ರೆಯ ನೆನಪಾಗಿ ಅದು ಹಾಗೇ ನಿನ್ನ ಮೂದಲಿಕೆಯ ಮುಖವನ್ನು ಕಣ್ಣಮುಂದೆ ಹೊತ್ತುತಂದು ಮೆರವಣಿಗೆ ಮಾಡುತ್ತದೆ. ಇಂತಹದೊಂದುಆಸ್ಪತ್ರೆಯಲ್ಲಿ ನೀನು ಹಾಸಿಗೆಯೊಂದರ ಮೇಲೆ ಅಸಹಾಯಕಳಾಗಿ ಮಲಗಿ ಏನೋ ಮೆಲ್ಲಗೆ ಮಾತಾಡುತ್ತಿದ್ದೆ. ಕಂಡೊಡನೇ ಓಡಿಬಂದು ನಿನ್ನ ಕೊರಳಿಗೆ ಬೀಳಲು ಹಲವು ಅಡೆತಡೆಗಳಿದ್ದವು, ಮಧ್ಯೆ ಹಲವು ಜನರಿದ್ದರು. ಆದರೂ ಹೇಗೋ ಮಾಡಿ ಹಾಸಿಗೆಯ ಬಳಿಸಾರಿ ‘ಅಮ್ಮೀ..’ ಅಂದೆ. ನೀ ನನ್ನ ನೋಡಿ ‘ಕಂದಾ, ಬಂದ್ಯಾ ಮರೀ..’ ಎಂದಷ್ಟೇ ಹೇಳಿ ಸುಮ್ಮಗೆ ಮಲಗಿದೆ.

ಹಾಸಿಗೆಯ ಪಕ್ಕದಲ್ಲಿ ಒಂದು ಹಾಲು ಬಿಳಿ ಬಣ್ಣ ಹೊಡೆದ ಕಬ್ಬಿಣದ ತೊಟ್ಟಿಲು. ಆ ತೊಟ್ಟಿಲೊಳಗೊಂದು ಅದಕ್ಕಿಂತಲೂ ಬಿಳುಪಿನ ಗೊಂಬೆಯಂಥಾ ಮಗು. ಅದು ‘ಕಿಯೋ, ಕಿಯೋ…’ ಅಂತ ಪುಟಿಪುಟಿದು ಹಾರುತ್ತಿತ್ತು. ತನ್ನ ಕೈ ತಾನೆಚೀಪುತ್ತಾ, ಆ ರುಚಿಗೆ ತುಟಿಗೆ ನಾಲಗೆಯ ರಸ ಸವರಿಕೊಳ್ಳುತ್ತಾ, ಅಚ್ಚರಿಯ ಅಗಲಗಲ ಕಣ್ಣುಗಳನ್ನು ಎಲ್ಲಾ ದಿಕ್ಕಿಗೂ ತಿರುಗಿಸುತ್ತಾ ಪಟಪಟನೆ ಕೈ ಕಾಲು ಬಡಿಯುತ್ತಿತ್ತು. ಎಂಥಾ ಮುದ್ದಾದ ಮಗು ಅವನು..! ಬಂಗಾರದ ಬಣ್ಣದಕೂದಲಿನ, ಕೆಂಪೆಂದರೆ ದಾಳಿಂಬೆಯಷ್ಟೇ ಕೆಂಪಾದ ತುಟಿಗಳ ಅನನ್ಯ ಚೆಲುವಿನ ಮಗು. ಅಲ್ಲಿ ಸೇರಿದ್ದ ಎಲ್ಲರಿಗೂ ತೊಟ್ಟಿಲ ಕಡೆಗೊಂದು ಕಣ್ಣು. ಅದರದ್ದೆ ಸುದ್ದಿ. ಅದೇ ಮಾತು, ಮಾಮನೂ ಅದನ್ನೇ ನೋಡುತ್ತಾ ನಗುತ್ತಾ ಏನನ್ನೋ ಮಾತಾಡುತ್ತಿದ್ದ. ಅಬಚಿಯು ಸಂತಸದಿಂದ ನಗಾಡುತ್ತಾ ಏನೋ ಹಗುರಾದ ಮೊಗದಿಂದ ಹೊಳೆಯುತ್ತಿದ್ದಳು. ನಾನು ನಿನ್ನ ಮಂಚದ ಸುತ್ತಲೂ ಓಡಾಡಿದೆ. ಬಗ್ಗಿ ಅದಕ್ಕಿದ್ದ ಚಕ್ರಗಳನ್ನೂ ಮುಟ್ಟಿ ನೋಡಿದೆ. ಪಕ್ಕದ ಮೇಜಿನ ಮೇಲಿದ್ದ ಔಷಧಗಳನ್ನೆಲ್ಲಾ  ದಿಟ್ಟಿಸಿದೆ. ಓಡಿ ಬಂದು ಒಂದು ಕಾಲಿಟ್ಟು ಹತ್ತಿತೊಟ್ಟಿಲ ಜಗ್ಗಿಹಿಡಿದು ಬಗ್ಗಿ ನೋಡಿದೆ. ಹಾಗೇ ಕೈ ಬಿಟ್ಟು ಕೆಳಗಿಳಿದೆ .ಕೈ ಬಿಟ್ಟು ಇಳಿದ ರಭಸಕ್ಕೆ ತೊಟ್ಟಿಲು ಜಯ್ಯೋ ಅಂತ ಅತ್ತಿತ್ತ ತೂಗ ಹತ್ತಿತು. “ಅಯ್ಯೋ ಚುಮ್ಮೀ… ಯಾಕಷ್ಟ್ ತರ್ಲೆ ಮಾಡ್ತಿ, ಬಾರೋ ಇಲ್ಲಿ… ಪಾಪಚ್ಚಿ ಬೀಳ್ಸೀಯ…!’ ಅಂತ ಕೂಗಿದಳು ಅಬಚಿ. ಒಮ್ಮೆಯೇ ಭಯಾನಕ ಮೌನವೊಂದು ಎದೆಗೆ ಹತ್ತಿ ಮಾತು ಹೊರಡದೇ “ಇಲ್ಲಾ ಅಬಚೀ.. ತರಲೆ ಮಾಡಿಲ್ಲ..” ಎಂದಷ್ಟೇ ಹೇಳಿ ಬಲಗೈ ಹೆಬ್ಬೆರಳನ್ನು ಸಾಧ್ಯವಾದಷ್ಟೂ ಬಾಯೊಳಗೆ ತುರುಕಿಟ್ಟುಕೊಂಡು ಚೀಪುತ್ತಾ ಮಂಚದಂಚಿನಲ್ಲೇ ನಡೆದು ಹೊರಬಂದೆ. ಅಂದು ನನಗಾದ ವೇದನೆಯನ್ನೂ, ಎದೆಗಡರಿದ ಅನಾಥ ಭಾವವೊಂದನ್ನೂ ಅದು ಹೇಗೆ ಇನ್ನೂ ಮರೆಯಲಾಗಿಲ್ಲವೋ… ದೇವಾ, ನಿನಗೆ ಗೊತ್ತಾ ಆ ನಿನ್ನ ಎರಡನೆಯ ಮಗುವು ಕ್ಷಣಕ್ಷಣವೂ ಹೇಗೆ ನನ್ನ ಅಸ್ಥಿತ್ವವನ್ನೇ ಅಲುಗಿಸುವ ವಾಮನರೂಪಿಯಾಗಿತ್ತೆಂದು? ನಾನು ಅದರೆದುರು ಹೇಗೆ ಶೂನ್ಯವಾಗುತ್ತಾ ಹೋದೆನೆಂದು?

ಇಡೀ ದಿನ ಅಲ್ಲೇ, ನಿನ್ನ ವಾಸನೆಯು ನನ್ನಿಂದದೂ ರಾಗದಷ್ಟು ಹತ್ತಿರದಲ್ಲೇ ಕಳೆದೆ. ಹೊಟ್ಟೆಗೊಂಬೆ ನೋಡಲು ಯಾರ್ಯಾರೋ ಬಂದು ಹೋದರು. ಬಂದವರೆಲ್ಲಾ ಏನೇನೋ ಹಿಡಿದುತಂದು ಅಬಚಿಗೆ ಕೊಡುತ್ತಿದ್ದರು. ಮಂಚದ ಬಳಿ ಬಂದು ನಿನ್ನನ್ನು ಏನೇನೋ ಕೇಳುತ್ತಿದ್ದರು. ತೊಟ್ಟಿಲ ಬಳಿ ತೆರಳಿ ಹೊಟ್ಟೆಬೊಂಬೆಯನ್ನು “ಅಲ್ಲೆಲ್ಲೆಲ್ಲೆಲ್ಲೇ… ದಂತದ ಬೊಂಬೆ ಹಾಗೆ ಇದೆಯಲ್ಲೇ ವಾಣಿ.. ಇನ್ನೇನು ಬಿಡು ನಿನ್ನ ಗಂಡನ್ನ ಹಿಡಿಯೋರೇ ಇಲ್ಲ.” ಅಂತ ಹೊಗಳುವರು. ನಾನು ಬೆಳಗಿಂದ ಸಂಜೆಯವರೆಗೂ ಅಲ್ಲೆಲ್ಲಾ ಪರದಾಡಿದೆ. ನಿನ್ನಕೋಣೆಯ ಹೊರಗೆ ದೊಡ್ಡದೊಂದು ಉದ್ಯಾನವಿತ್ತು. ಆಸ್ಪತ್ರೆಯದೇ ಭಾಗವಾಗಿದ್ದ ಅಲ್ಲಿ ಕೈಲಾಗದ ರೋಗಿಗಳನ್ನು ಹಿಡಿದು ಓಡಾಡಿಸುವವರು, ನರ್ಸ್‍ಗಳು ಅಲ್ಲಲ್ಲಿ ಕಾವಲಿರುತ್ತಿದ್ದರು. ‘ಕೀಚ್‍ಕೀಚ್’ ಹಾಡುವ ಬಣ್ಣಬಣ್ಣದ ಪಕ್ಷಿಗಳಿದ್ದವು. ನನ್ನ ಕೈಗೆಟುಕದ ಆದರೆ ಆಕಾಶದ ನಕ್ಷತ್ರಗಳಂತೆ ಕಂಡು ಹೊಳೆಯುವ ಎತ್ತರದ ಗಿಡಗಳಲ್ಲಿ ಗುಲಾಬಿ ಹೂಗಳಿದ್ದವು. ಅಲ್ಲಿ ದಿನದಲ್ಲಿ ಮೂರ್ನಾಲ್ಕು ಬಾರಿ ಧಡಿಯ ಮಂಗಗಳು ದಾಳಿ ಮಾಡಿ ಎಲ್ಲರನ್ನೂ ಹೈರಾಣು ಮಾಡುತ್ತಿದ್ದವು. ರೋಗಿಗಳಿಗೆ ಇಟ್ಟಿದ್ದ ಬ್ರೆಡ್ಡು ಹಣ್ಣು ಮುಂತಾದವನ್ನು ಕೈಯಿಂದಲೇ ಕಿತ್ತೊಯ್ಯುವುವು. ಅವರು ಕಿರುಚಿಕೊಳ್ಳುವರು. ಅಲ್ಲಿ ಮಂಗನನ್ನು ಕಾಯಲೆಂದೇ ಸೆಕ್ಯೂರಿಟಿಯವನೊಬ್ಬನಿದ್ದ. ಅವನ ಕೈಲೊಂದು ಬೆತ್ತ. ಅವನು ಆದಷ್ಟೂ ಅಟ್ಟಾಡಿಸಿ ಮಂಗಗಳನ್ನು ಓಡಿಸುವ ಪ್ರಯತ್ನ ಮಾಡುವನು. ಸ್ವಲ್ಪ ಹೊತ್ತು ಇದನ್ನೆಲ್ಲಾ ನಿಂತು ನೋಡಿ ಪರಿಸ್ಥಿತಿ ಅರಿತ ನಾನು ಮಂಗನನ್ನ ಅಟ್ಟಾಡಿಸಲು ಅವನಿಗೆ ಸಹಕರಿಸತೊಡಗಿದೆ.  ಸಹಕಾರವೆಂದರೇನು, ನೆಲದ ಮೇಲೆಯೇ ತಕತಕ ಕುಣಿಯುತ್ತಾ ‘ಹುಷ್.. ಹುಷ್..’ ಎನ್ನುತ್ತಾ ಕೈಚಾಚಿ ಕೂಗಾಡುವುದು ಅಷ್ಟೇ. ನನ್ನಆರ್ಭಟಕ್ಕೆ ಪುಟ್ಟ ಮರಿಮಂಗನೂ ಹೆದರದೇ, ಆ ಸೆಕ್ಯೂರಿಟಿಯವನ ಕೋಲಿನ ಪೆಟ್ಟಿಗೆ ಮಾತ್ರ ಹೆದರಿ ಓಡಿದರೂ ಆ ವಿಜಯೋತ್ಸವವನ್ನು ನಾನು ನನ್ನದೆಂದೇ ಬಗೆದು ಅನುಭವಿಸಿ ಆಚರಿಸುವೆನು. “ಹೋಯ್.. ಹೋಯ್ತು ಹೋಯ್ತು.. ”ಕೈತಟ್ಟಿ ಕುಣಿದು ಕಿರುಚುವಾಗ ಅವನ್ಯಾರೋ ಏನೂ ಅಲ್ಲದ ಅನ್ಯನೊಬ್ಬನು ನನ್ನ ಸಂಭ್ರಮವನ್ನುಕಂಡು ಆನಂದಿಸುವನು. “ಪುಟ್ಟೀ, ಮಂಗ ಓಡಿತೋ.. ನೀನೇ ಓಡ್ಸಿದ್ದೂ.. ಭಾಳಾ ಶಕ್ತಿ ಕಣವ್ವಾ ನಿಂಗೇ..” ಹೊಗಳುವನು. ನಾನು ಉಬ್ಬಿಹೋಗಿ ಮತ್ತೂ ಕುಣಿಯುವೆನು. ಓಡಿ ರೂಮಿಗೆ ಬರುವೆನು. ನಿನಗೋ ಅಬಚಿಗೋ ಮಾವನಿಗೋ ಕಿವಿಯಲ್ಲಿ ಹೇಳೋಣವೆಂದು ನಿಮ್ಮ ಬಟ್ಟೆಗಳನ್ನು ಹಿಡಿದು ಜಗ್ಗುವೆನು. ‘ಓನಾ.. ಓನು ಬೇಕು.’ ಅನ್ನುವ ಮಾವನೂ, ‘ಓನು ಚಿನ್ನಾ? ಒಬ್ಬಳೇ ಒಬ್ಬಳು ಏನು ಆಡುವೆಯೋ?’ ಎಂಬ ಅಬಚಿಗೂ, ಸುಮ್ಮನೆ ನನ್ನ ನೋಡಿ ಮುಗುಳುನಕ್ಕು ಕಣ್ಣು ಮುಚ್ಚುವ ನಿನಗೂ ನನ್ನ ಮಾತು ಕೇಳಿ ಅರಗಿಸಿಕೊಳ್ಳುವ ವ್ಯವಧಾನವೇ ಇರಲಿಲ್ಲ. ಸ್ವಲ್ಪ ಹೊತ್ತು ರೂಮಲ್ಲಿ ಸುತ್ತಾಡುತ್ತಾ ಇಲ್ಲಿ ನನ್ನ ಅಗತ್ಯವಿಲ್ಲವೆಂದು ತಿಳಿದ ಮೇಲೆ ಮತ್ತೆ ಮಂಗನ ಕಾಯುವವನ ಬಳಿಗೆ ಮರಳುವೆನು. ಅವನಾದರೋ,

“ಪುಟ್ಟೀ, ಬಂದಾವ್ವಾ. ಬಾ.. ಮತ್ತೆ ಬಂದ್ವು ನೋಡು ಮಂಗಾ.. ಗದುಮು ಅವನ್ನು, ಕೂಗಿ ಹೆದರ್ಸವ್ವಾ..” ಎಂದು ಅವನಿಗೆ ಅಗತ್ಯವಾಗಿ ಬೇಕಾಗಿರುವ ನನ್ನ ಸಹಾಯಹಸ್ತಕ್ಕಾಗಿ ದೈನೇಸಿಯಾಗಿ ಕೈಚಾಚುವನಂತೆ ನಟಿಸುವನು.

ಅವನ ಜೊತೆ ನಾನು ಯಾವ ಎಗ್ಗಿಲ್ಲದೇ ಹರಟುತ್ತಾ ಕುಳಿತೇಬಿಟ್ಟಿದ್ದೆ. ಮಧ್ಯೆ ಮಧ್ಯೆ ‘ಹುಷ್ ಹುಷ್’ ಎನ್ನುತ್ತಾ ಕೈಬಡಿಯುತ್ತಾ ಮಂಗನನ್ನ ಓಡಿಸುತ್ತಿದ್ದೆ. ನನ್ನ ಕಾಲ್ಪನಿಕ ಮಂಗಗಳೂ, ಅವುಗಳೊಟ್ಟಿಗೆ ನನ್ನಕಾಲ್ಪನಿಕ ಹೋರಾಟವೂ ಅವುಗಳ ಮೇಲೆ ನಾನು ಸಾಧಿಸುವಕಾಲ್ಪನಿಕ ವಿಜಯವೂ ನಿರಂತರ ಸಾಗೇ ಇತ್ತು.

ಅಂದು ನನಗಾದ ವೇದನೆಯನ್ನೂ, ಎದೆಗಡರಿದ ಅನಾಥ ಭಾವವೊಂದನ್ನೂ ಅದು ಹೇಗೆ ಇನ್ನೂ ಮರೆಯಲಾಗಿಲ್ಲವೋ… ದೇವಾ, ನಿನಗೆ ಗೊತ್ತಾ ಆ ನಿನ್ನ ಎರಡನೆಯ ಮಗುವು ಕ್ಷಣಕ್ಷಣವೂ ಹೇಗೆ ನನ್ನ ಅಸ್ಥಿತ್ವವನ್ನೇ ಅಲುಗಿಸುವ ವಾಮನರೂಪಿಯಾಗಿತ್ತೆಂದು? ನಾನು ಅದರೆದುರು ಹೇಗೆ ಶೂನ್ಯವಾಗುತ್ತಾ ಹೋದೆನೆಂದು?

ಬಹಳ ಹೊತ್ತಿನ ಬಳಿಕ ಮಾಮ ನನ್ನ ಹುಡುಕುತ್ತಾ ಬಂದು ‘ಓಯ್, ಇಲ್ಲಿದೀಯಾ ಚುಮ್ಮೀ..  ಅಂದ. ಗಾರ್ಡು ಹೇಳಿದ ‘ಅಣ್ಣಾ, ಮಗು ಭಾಳಾ ಚುರುಕೈತೆ. ಅಲ್ಲಲ್ಲಿ ಬಿಡಬ್ಯಾಡಿ. ಹೆಣ್ಣು ಕೂಸು, ವುಷಾರಾಗಿ ನೋಡ್ಕಳಿ. ಇವರವ್ವ ಇಲ್ಲವ್ರಾ..?’ ಅಂದದ್ದು ಕೇಳಿಸಿದ ಕಿವಿಗಳಿಗೆ ಅದನ್ನು ಅರ್ಥವತ್ತಾಗಿ ಮಿದುಳಿಗೆ ತಲುಪಿಸುವ ಶಕ್ತಿ ಇರಲಿಲ್ಲ.

ನಾನು ಬೆಳೆದು ದೊಡ್ಡವಳಾದ ಮೇಲೂ ಹಲವೊಮ್ಮೆ ಮಾವನು ಮುದ್ದಾಡುತ್ತಾ ‘ಓಯ್ ಮಂಗನ ಗಾರ್ಡೇ..’ ಎಂದುಕರೆಯುವಾಗ ಸಂತಸದಿಂದ ಕುಣಿಯುವಂತಾಗುತ್ತಿತ್ತು. ನಾನು ಹಾಗೇ ಇರಬೇಕಿತ್ತು. ಬೆಳೆದು ಕೃತ್ರಿಮ ಪ್ರಪಂಚದ ಭಾಗವಾಗಬಾರದಿತ್ತು ಅಂತ ಅನಿಸುತ್ತದೆ. ಪ್ರಕೃತಿಯಲ್ಲವೇ, ನನ್ನ ನಿನ್ನ ಪಾತ್ರವೇನಿದೆ ಹೇಳು? ಅಮ್ಮೀ.. ಅಂದು ನಾನು ಹಾಗೆ ತೋಟದ ಮಂಗಗಳೊಂದಿಗೆ ಹೋರಾಟ ಮೊದಲಿಟ್ಟದ್ದು ಸಾಂಕೇತಿಕವೆಂತಲೂ, ಮುಂಬರುವ ಬದುಕಿನ ಮಹಾಯುದ್ಧವೊಂದನ್ನು ಸೆಣಸುವಲ್ಲಿ ನಾನು ಅನುಭವಿಸಿದ ನೋವು, ಸಂಕಟ, ಅವಮಾನ, ದುಃಖ, ಅಭದ್ರತೆ, ಅನಾಥತೆಯೆಂಬೆಲ್ಲಾ ಮಂಗಗಳ ದಾಳಿಗೆ ಅಡ್ಡಲಾಗಿ ಆ ಭಗವಂತನೆಂಬೋ ಸೆಕ್ಯೂರಿಟಿಯು ನಿಂತು ನನ್ನ ಗೆಲ್ಲಿಸಿದ್ದೇ ಈ ಪ್ರಸಂಗವೆಂತಲೂ ಹೇಗೆ ಅರಿತುಕೊಂಡೇನು ಆಗ?

(ಮುಂದುವರಿಯುವುದು)