ಕೆಳಗೆ ಹರಡಿದ ಮಹಿಷನ ಮೈಸೂರು ಪ್ರದೇಶ ದೀಪ ಕಡಲಲ್ಲಿ ಈಜುತಿತ್ತು. ಚಾಮುಂಡಿ ಪೂಜೆಯಿಂದ ಶುರುವಾಗುವ ಈ ವಿಜಯೋತ್ಸಾಹ ನವರಾತ್ರಿ ಕಳೆದು, ತಾಯಿ ತೇರಾಡಿ, ತಾಯಿ ತೆಪ್ಪೋತ್ಸವದ ಕೊಳದಲ್ಲಿ ಹುಲಿ ಮೇಲೆ ಕುಳಿತು ತೇಲಿ, ಭಕ್ತರ ಮನದುಂಬಿಸಿ ತನ್ನಡ್ಡೆಯಲ್ಲಿ ದೇವಳವ ಹೊಕ್ಕು ಮುಂದಿನ ವರುಷದವರೆಗೂ ಗೊತ್ತು ಕೂತಾಗ ಉತ್ಸವ ಮುಗಿಯುತ್ತದೆ. ಬೆಟ್ಟದ ಮೇಲಿನ ಎಲ್ಲ ಬೆರಗಿಗೂ ಅಲ್ಲಿನ ಹಸಿರು ಹಾಗೂ ತಣ್ಣನೆಯ ವಾತಾವರಣ ಗುಡಿಗಳು ಕಾರಣವಾಗಿ ನಮ್ಮನ್ನು ಹಳೆಯ ಕಾಲಕ್ಕೆ ಆ ನಿಗೂಢ ಲೋಕಕ್ಕೆ ಕೊಂಡೊಯ್ಯುತ್ತವೆ.
ಸುಜಾತಾ ಎಚ್.ಆರ್. ಬರೆಯುವ ತಿರುಗಾಟ ಕಥಾನಕದ ಹನ್ನೆರಡನೆಯ ಕಂತು.

 

ನಮ್ಮ ದಸರಾ ಉತ್ತರ ಭಾರತದಲ್ಲಿ ದಶೆರಾ ಎಂಬ ಉಚ್ಛಾರಣೆಯಾಗಿದೆ. ಮೈಸೂರಿನಲ್ಲಿದು ರಾಜ ಮನೆತನದ ಚಾಮುಂಡಿ ಪೂಜೆಯಿಂದ ಶುರುವಾಗಿ ನವರಾತ್ರಿಯ ಪೂಜೆಯಾಗಿ ದುರ್ಗಾವತಾರದ, ವಿಜಯ ದಶಮಿಯ ಕೊನೆಯ ದಿನದ ಅವತಾರವಾಗಿ ಕೊನೆಯಾಗುತ್ತದೆ. ನಾಡನ್ನು ಕಾಪಾಡುವ ಎಲ್ಲಾ ತಾಯಂದಿರು ಲಕ್ಷ್ಮಿ ಸರಸ್ವತಿಯರಾಗಿ, ಕೊನೆಗೆ ಕೇಡನ್ನು ಜಯಿಸುವ ತಾಯಿ ದುರ್ಗೆಯಾಗಿ ಪೂಜಿಸಿಕೊಂಡು, ಕೇಡಾಗಿ ಮಹಿಷನನ್ನು ವಧಿಸಿ, ನಾಲಿಗೆ ಹಿರಿದು ನಿಂತ ದುರ್ಗೆಯಾಗಿ, ಅಂಗಾತ ಬಿದ್ದ ಮಹಿಷನ ಎದೆಗೆ ಹೊಕ್ಕ ಅವಳ ತ್ರಿಶೂಲ ಕಾಲಲ್ಲಿ ಗಂಡನ್ನು ಮೆಟ್ಟಿ ನಿಂತ ಹೆಣ್ಣಿನ ಚಿತ್ರವಾಗಿ, ದಾಖಲೆಯಾಗಿದ್ದಾಳೆ. ಈ ಕಥೆ ಕಲಾವಿದರನ್ನು ದುಡಿಸಿಕೊಂದು ಒಂದು ನಾಟಕವಾಗಿ, ನೃತ್ಯ ರೂಪಕವಾಗಿ, ತಂಬೂರಿ ನಾದವಾಗಿ, ಕೇಳಿದಾಗೆಲ್ಲ ನಮ್ಮ ಎದೆಯನ್ನು ಬಗೆಯುತ್ತಲೇ ಇರುತ್ತದೆ.

ಚಾಮುಂಡಿ ದಸರಾದ ಮೊದಲಿಂದ ಕೊನೆ ದಿನದವರೆಗೂ ತನ್ನ ಭಕ್ತವೃಂದವನ್ನು ಭಯ ಭಕ್ತಿಯಲ್ಲಿರಿಸುವ, ಮೈಸೂರು ಸೀಮೆಯನ್ನು ಕಾಪಾಡುವ ದೊಡ್ಡ ಶಕ್ತಿ ದೇವತೆಯಾಗಿದ್ದು, ಮೈಸೂರಿನಂಚಿನಲ್ಲಿ ಹಾಸಿಕೊಂಡ ಬೆಟ್ಟದ ಮೇಲೆ ನಮ್ಮ ಚಾಮುಂಡಿ ನೆಲೆ ನಿಂತಿದ್ದಾಳೆ. ಅದಕ್ಕೆ ಅದು ‘ಚಾಮುಂಡಿ ಬೆಟ್ಟ’ ಅದಿಲ್ಲದೆ ಮೈಸೂರಿಲ್ಲ. ಅದೊಂದು ಮೈಸೂರಿನ ಎತ್ತರದ ಭದ್ರಕೋಟೆ. ಮೈಸೂರಿನ ಹೆಮ್ಮೆ. ಅದರ ಪಕ್ಕದಲ್ಲಿ ಇದಕ್ಕಿಂತ ಒಂದು ಚಿಕ್ಕ ಬೆಟ್ಟ. ಅಲ್ಲಿ ಉತ್ತನಳ್ಳಿ ಎಂಬ ಊರೊಂದಿದ್ದು, ಅದಕ್ಕೆ ಅಧಿ ದೇವತೆ ಉತ್ತನಳ್ಳಿ ಮಾರಮ್ಮ. ಅವಳು ಚಾಮುಂಡಿಯ ತಂಗಿ.

ಎಲ್ಲ ಊರಿನಲ್ಲಿ ಮಾರಮ್ಮ, ದುರ್ಗೆಯರು, ಚೌಡಮ್ಮರು ಊರ ಕಾಯುವ ದೇವತೆಯರಾಗಿ ಉಳಿದಿದ್ದು ಊರ ಬಾಗಿಲಲ್ಲಿ ಊರಂಚಿನಲ್ಲಿ ಕಟ್ಟಿದ ಗುಡಿಯಲ್ಲಿ ಕುಳಿತಿರುತ್ತಾರೆ. ಈ ಉರಿಮಾರಿಯರು ವರುಷವರುಷವೂ ಕುರಿ ಕೋಳಿ ಹಂದಿ, ಎಮ್ಮೆ ಬಲಿ ತೆಗೆದುಕೊಂಡು ಶಾಂತಚಿತ್ತರಾಗಿ ತನ್ನೂರನ್ನು ಕಾಯ್ದುಕೊಳ್ಳುತ್ತಾರೆ. ಇಂಥ ನವನಾಗರೀಕ ಯುಗದಲ್ಲೂ ಅಣ್ಣಮ್ಮರನ್ನು ಮಾರಿಯರನ್ನು ಹೊತ್ತು ಕುಣಿಯುವ ಮನುಷ್ಯನ ಅಭಿಲಾಶೆ ಆಚರಣೆಯಾಗಿ ಉಳಿದು ಬಂದಿದೆಯೆಂದರೆ ನಮ್ಮ ಹುಬ್ಬೇರುತ್ತದೆ.

ದುರ್ಗೆಯ ನಿಜರೂಪ

ಒಮ್ಮೆ ಕಲ್ಕತ್ತಾಗೆ ಹೋದಾಗ ಕಲ್ಕತ್ತಾದ ಕಾಳಿಯ ದರ್ಶನವನ್ನೂ, ರಾಮಕೃಷ್ಣಾಶ್ರಮವನ್ನು ನೋಡಿ ಬಂದಾಗ ಆಧ್ಯಾತ್ಮಕ್ಕೂ ಪರಮಹಂಸರ ಅಲೌಕಿಕ ಜಗತ್ತಿನಲ್ಲಿ ಹೆಂಡತಿಯನ್ನು ದೇವತೆಯನ್ನಾಗಿ ಕಾಣುವ ಅವರ ಒಳಗಣ್ಣಿನ ದರ್ಶನಕ್ಕೂ ತಾಳೆಯಾದರೂ ಏನೋ ಒಂದು ಗೊಂದಲವಿದ್ದೇ ಇತ್ತು. ಇದು ಇನ್ನೊಮ್ಮೆ ಮತ್ತೆ ತಲೆಯೆತ್ತಿ ನಿಂತದ್ದು ಎರಡು ವರುಷದ ಹಿಂದೆ ನಮ್ಮ ಮೈಸೂರು ದಸರಾದಲ್ಲಿ.

ದಸರಾ ಕಲಾ ವೈವಿಧ್ಯದ ವೇದಿಕೆಯಲ್ಲಿ ದುರ್ಗೆಯ ನೃತ್ಯ ರೂಪಕ ನಡೆಯುತಿತ್ತು. ಆನಂತರ ಇನ್ನೊಂದು ವೇದಿಕೆಯಲ್ಲಿ ಚಾಮಚೆಲುಮೆ ನಾಟಕ ನಡೆದಿತ್ತು. ಹಾಗೇ ಜನಪದ ವೇದಿಕೆಯಲ್ಲಿ ಚಾಮುಂಡಿ ಹಾಗೂ ನಂಜುಂಡನ ಸಂಬಂಧವನ್ನು ಪ್ರಶ್ನಿಸಿ ನಾದಿನಿಯಾದ ಉತ್ತನಳ್ಳಿ ಮಾರಮ್ಮ ತನ್ನ ಭಾವನನ್ನು ಹೀನಾಮಾನ ಬೈಗುಳದಲ್ಲಿ ಹರಾಜಾಕುವ ತಂಬೂರಿ ಪದದ ಹಾಡು ನಡೆದಿತ್ತು. ಇಷ್ಟು ಗಲಾಟೆಯ ನಡುವೆಯೂ ಚಾಮುಂಡಿಯ ಬೆಟ್ಟ ತಣ್ಣಗೆ ಮಲಗಿತ್ತು. ಅಲ್ಲಿ ಮಹಿಷಾಸುರನ ವಿಗ್ರಹವಿತ್ತು. ಅದೂ ನಿಂತ ಭಂಗಿಯಲ್ಲಿ….

ಕೆಳಗೆ ಹರಡಿದ ಮಹಿಷನ ಮೈಸೂರು ಪ್ರದೇಶ ದೀಪ ಕಡಲಲ್ಲಿ ಈಜುತಿತ್ತು. ಚಾಮುಂಡಿ ಪೂಜೆಯಿಂದ ಶುರುವಾಗುವ ಈ ವಿಜಯೋತ್ಸಾಹ ನವರಾತ್ರಿ ಕಳೆದು, ತಾಯಿ ತೇರಾಡಿ, ತಾಯಿ ತೆಪ್ಪೋತ್ಸವದ ಕೊಳದಲ್ಲಿ ಹುಲಿ ಮೇಲೆ ಕುಳಿತು ತೇಲಿ, ಭಕ್ತರ ಮನದುಂಬಿಸಿ ತನ್ನಡ್ಡೆಯಲ್ಲಿ ದೇವಳವ ಹೊಕ್ಕು ಮುಂದಿನ ವರುಷದವರೆಗೂ ಗೊತ್ತು ಕೂತಾಗ ಉತ್ಸವ ಮುಗಿಯುತ್ತದೆ. ಬೆಟ್ಟದ ಮೇಲಿನ ಎಲ್ಲ ಬೆರಗಿಗೂ ಅಲ್ಲಿನ ಹಸಿರು ಹಾಗೂ ತಣ್ಣನೆಯ ವಾತಾವರಣ ಗುಡಿಗಳು ಕಾರಣವಾಗಿ ನಮ್ಮನ್ನು ಹಳೆಯ ಕಾಲಕ್ಕೆ ಆ ನಿಗೂಢ ಲೋಕಕ್ಕೆ ಕೊಂಡೊಯ್ಯುತ್ತವೆ.

ಪುರೂಲಿಯಾ

ಆಗತಾನೇ ಬೆಟ್ಟ ಇಳಿದು ಬಂದು ದಸರಾ ಸಂಭ್ರಮದ ಇನ್ನೊಂದು ವೇದಿಕೆ ಕಡೆಗೆ ನಾವು ಹೋಗಿ ಕುಳಿತಾಗ ಅಲ್ಲಿ ಪಶ್ಚಿಮ ಬಂಗಾಳದ ಜಾನಪದ ಕಲಾಪ್ರಕಾರವೊಂದು ಅತ್ಯಂತ ವೇಗವೇ ಪ್ರಧಾನವೆಂಬಂತೆ, ತಾಳಮದ್ದಳೆ ಪೀಪಿಗಳೊಂದಿಗೆ, ಹಳೆ ವಾದ್ಯ ಮೇಳದೊಂದಿಗೆ, ಹಗಲು ವೇಷಗಳಂಥ ಬಣ್ಣಬಣ್ಣದ ವೇಶಭೂಷಣದೊಂದಿಗೆ, ಮಹಿಷಾಸುರನ ವಧೆಯಿಂದ ಚಾಮುಂಡಿಯ ವಿಜಯೋತ್ಸಾಹದವರೆಗೆ ವಿವಿಧ ಘಟ್ಟಗಳ ದೃಶ್ಯಗಳು ಮಾತಿಲ್ಲದೆ ಪಟಪಟನೆ ಬಂದು ಹೋಗಿ ಆಶ್ಚರ್ಯ ಹುಟ್ಟಿಸಿದವು.

ಅವರ ಮುಖವಾಡಗಳು, ಬಣ್ಣಗಳು ಹಾಗೂ ಸಂಗೀತದ ಹಿನ್ನೆಲೆಯ ಏರಿಳಿತ ರೂಪಕವನ್ನು ನಮಗೆ ಯಶಸ್ವಿಯಾಗಿ ತಲುಪಿಸಿದ್ದವು. ಕೇವಲ ಇಪ್ಪತ್ತು ನಿಮಿಷದಲ್ಲಿ ಕಥೆಯ ಎಲ್ಲ ಘಟ್ಟಗಳು ಬಂದುಹೋಗಿದ್ದವು. ಇದು ‘ಪುರೂಲಿಯಾ’ ಎಂಬ ಕಲಾಪ್ರಕಾರವಾಗಿತ್ತು.

ಅದನ್ನು ನೋಡಿ ಬಂದಮೇಲೆ ನನಗೆ ತಲೆಯಲ್ಲಿ ಪ್ರಶ್ನೆಯೊಂದು ಎದ್ದು ನಿಂತಿತು. ರಾಮಾಯಾಣ ಮಹಾಭಾರತಗಳೇನೋ ಏಶಿಯಾ ಖಂಡದ ತುಂಬ ನಡೆದಾಡಿದ ಕಥೆಗಳು ಸೈ. ಆದರೆ ನಮ್ಮ ಮೈಸೂರಿನ ಚಾಮುಂಡಿಯ ನಡಿಗೆ ಉತ್ತರ ಪೂರ್ವ ಭಾರತದವರೆಗೂ ಹೇಗೆ ಹೋಯಿತು? ಇಲ್ಲಿಂದ ಅಲ್ಲಿಗೆ ಇಷ್ಟು ಸಾಮ್ಯ ಹೇಗೆ? ಅದರಲ್ಲೂ ಈ ಪ್ರಕಾರವನ್ನು ಮಾಡಿದ ಕಲಾವಿದರು ಸಾಂಪ್ರದಾಯಿಕ ‘ಪುರೂಲಿಯ’ ಪ್ರದೇಶದ ಅದೇ ಹೆಸರಿನ ಕಲಾವಿದರಾಗಿದ್ದರು. ಅವರು ಕೆಳವರ್ಗದ ಜನರಾಗಿದ್ದರು. ಅದು ಇತ್ತೀಚೆಗಷ್ಟೇ ಎಲ್ಲ ವರ್ಗದವರನ್ನು ಕೂಡಿಕೊಳ್ಳುತ್ತಿದೆ ಎಂದು ಅವರಿಂದಲೇ ತಿಳಿಯಿತು.

ಜನಪದ ವೇದಿಕೆಯಲ್ಲಿ ಚಾಮುಂಡಿ ಹಾಗೂ ನಂಜುಂಡನ ಸಂಬಂಧವನ್ನು ಪ್ರಶ್ನಿಸಿ ನಾದಿನಿಯಾದ ಉತ್ತನಳ್ಳಿ ಮಾರಮ್ಮ ತನ್ನ ಭಾವನನ್ನು ಹೀನಾಮಾನ ಬೈಗುಳದಲ್ಲಿ ಹರಾಜಾಕುವ ತಂಬೂರಿ ಪದದ ಹಾಡು ನಡೆದಿತ್ತು. ಇಷ್ಟು ಗಲಾಟೆಯ ನಡುವೆಯೂ ಚಾಮುಂಡಿಯ ಬೆಟ್ಟ ತಣ್ಣಗೆ ಮಲಗಿತ್ತು. ಅಲ್ಲಿ ಮಹಿಷಾಸುರನ ವಿಗ್ರಹವಿತ್ತು. ಅದೂ ನಿಂತ ಭಂಗಿಯಲ್ಲಿ….

ಪುರೂಲಿಯ ಬುಡಕಟ್ಟು ಜನರ ಕೈಲಿ ಪ್ರಸಂಗಗಳಾಗಿ, ವೇದಿಕೆಯಲ್ಲಿ ತಮ್ಮಟೆ, ಪೀಪಿ, ಹಾಗೂ ಡೊಳ್ಳು ವಾದ್ಯಗಳ ಪರಿಕಲ್ಪನೆಯಲ್ಲಿ ರೂಪಕಗಳಾಗಿವೆ. ಇದನ್ನು ಆಡುವವರೆಲ್ಲರೂ ಊರಂಚಿನ ಜನಗಳೇ. ಅವರೇ ವಾದ್ಯ ಹಾಗೂ ಪರಿಕರಗಳನ್ನು, ಮುಖವಾಡಗಳನ್ನು ತಯ್ಯಾರಿಸಿಕೊಂಡು ಇಡೀ ರಾತ್ರಿ ಮಾತು ಹಾಗೂ ಸಂಭಾಷಣೆಯಲ್ಲಿ ನಡೆಯುವ ಈ ದೃಶ್ಯ ರೂಪಕಗಳು ಕಾಲಕ್ಕೆ ತಕ್ಕಂತೆ ಸಣ್ಣ ಕತೆಗಳಾಗಿ ವಾದ್ಯದ ಹಿನ್ನೆಲೆಯಲ್ಲಿ ಇಂದಿನ ೨೦ ನಿಮಿಷದ ರೂಪಕವಾಗಿ ನಮ್ಮ ಕಣ್ಣ ಮುಂದೆ ತೆರೆದಿತ್ತು.

ಯಾಕೆಂದರೆ ದೂರದೂರಿಂದ ಬಂದ ಹತ್ತಾರು ಕಲಾವಿದರು ವೇದಿಕೆಯಲ್ಲಿ ನಿರೂಪಕರ ಆದೇಶವನ್ನು ಪಾಲಿಸಬೇಕಾಗುತ್ತದೆ. ಹಾಗೂ ಈ ನಿರೂಪಕರು ಆಡಳಿತ ಹಾಗೂ ಪ್ರೇಕ್ಷಕರ ವೈವಿಧ್ಯತೆಯನ್ನು ನಿಭಾಯಿಸುವಂತವರಾಗಿರುತ್ತಾರೆ. ಕಲೆಯೆಂಬುದು ಸಮಾಜದ ಓರೆಕೋರೆಗಳಿಗೆ ಪ್ರಶ್ನೆಯಾಗುವುದರ ಜೊತೆ ಜೊತೆಗೆ ತನ್ನ ಉಳಿವಿಗಾಗಿ ಹೊಂದಾಣಿಕೆಯ ಉತ್ತರವನ್ನೂ ಇಂದಿನ ವೇಗದ ಕಾಲದಲ್ಲಿ ಹುಡುಕಿಕೊಳ್ಳಬೇಕಾಗಿದೆ. ಇಂದು ಪ್ರೇಕ್ಷಕನೂ ಕೂಡ ತಾಳ್ಮೆಯಿಲ್ಲದ ಬಿಡುವಿಲ್ಲದ ಚಿತ್ರಾನ್ನವಾಗಿದ್ದಾನೆ.
ಹೀಗೆ ಕಾವೇರಿಯಿಂದ ಬ್ರಹ್ಮಪುತ್ರದ ಕೊನೆವರೆಗೂ ವಿಸ್ತರಿಸಿದ ನಮ್ಮ ಚಾಮುಂಡಿ ಮಹಿಮೆ ಬ್ರಹ್ಮಗಂಟಾಗಿ ನನ್ನೊಳಗೆ ನೆನೆಗುದಿ ಬಿದ್ದಿದ್ದಳು. ಎರಡು ವರ್ಷದ ಈ ಹಳೆಯ ಪ್ರಶ್ನೆಯನ್ನು ಇತ್ತೀಚೆಗೆ ನಮ್ಮ ನಡುವೆ ಇರುವ ಓದಿನ ಕಣಜವಾದ ಜಿ.ಎನ್. ನಾಗರಾಜರಲ್ಲಿ ಕೇಳುವ ಸಮಯ ಒದಗಿ ಬಂತು. ಆಗ ಅವರು ಸವಿವರವಾಗಿ ವಿವರಣೆ ಕೊಡುತ್ತ ಕಥೆಯ ವಿವರಣೆಯೊಳಗೆ ನಮ್ಮನ್ನು ಕೊಂಡೊಯ್ದರು.

ಚಾಮುಂಡಿಯ ರಾಜಕೀಯ ಸಾಮಾಜಿಕ ತಿರುವುಗಳು

ಕಾಲಕಾಲಕ್ಕೆ ಬೆಟ್ಟವನ್ನೇರುವ ಕಾಲುಹಾದಿಗಳು, ಮೆಟ್ಟಿಲಾಗಿ, ವಾಹನದ ದಾರಿಯಾಗಿ, ಅದರ ನಿಲುಗಡೆಯಾಗಿ, ಕೊನೆಗೆ ಬೆಟ್ಟದ ಹಸಿರು ಮಾಯವಾಗಿ, ಮನುಷ್ಯ ಕಟ್ಟಿದ ಬಣ್ಣದ ಗೋಡೆಯಾಗಿ, ಎತ್ತರೆತ್ತರದ ಅಡ್ಡಗೋಡೆಗಳ ನಡುವೆ ನಮ್ಮ ಊರ ದೇವತೆಯ ಕಾಣಲು ಸರಳು ಕಟ್ಟುಗಳ ಬಂದೋಬಸ್ತಾಗಿ, ತನ್ನೂರಿನ ಜನರನ್ನೇ ದೂರವಿಡುವ ಹೈಟೆಕ್ ದೇವತೆಗಳಾಗಿಬಿಡುವಂತೆ ಇದರ ಕಥೆಗಳು ಬದಲಾಗಿಹೋಗಿದ್ದು, ವರ್ತಮಾನದಲ್ಲಿ ಮೂಲಸ್ವರೂಪವನ್ನೇ ಕಳೆದುಕೊಂಡುಬಿಟ್ಟಿರುವುದು ಹೀಗೆ….

ಇತ್ತ ಉತ್ತರ ಹಾಗೂ ದಕ್ಷಿಣ ಭಾರತದದಿಂದ ಏಶಿಯಾ ಖಂಡದ ಪೂರ್ವಾಗ್ನೇಯ ಬರ್ಮಾ ವಿಯೆಟ್ನಾಮ್ ತನಕ ದಸರಾ ಸಂಭ್ರಮದ ಈ ದುರ್ಗಾ ಪೂಜೆಯ ಕಲ್ಪನೆ ಬಂದಿದ್ದು ಹೀಗೆ, ಎಂಬುದು ಒಂದು ಸಂಶೋಧನೆಯ ತಿಳಿವು. ಹಣ್ಣು ಹಂಪಲು ತಿಂದು ಬದುಕುವ ಆದಿ ಮಾನವನ ಕಾಲದಲ್ಲಿ ಬೆಂಕಿಯಲ್ಲಿ ಬಿದ್ದ ಮಾಂಸದ ರುಚಿ ನೋಡಿದ ಕಾಲದಲ್ಲಿ ಬೇಟೆಯೂ ಆವಿಷ್ಕಾರವಾಯಿತು. ಎಲ್ಲ ಬೆಟ್ಟಗುಡ್ಡದ ತಪ್ಪಲಲ್ಲಿ ಎಮ್ಮೆ ಕೋಣಗಳ ತಳಿಯಿತ್ತು. ಮಾನವನ ಬೇಟೆಯ ಕಾಲದಲ್ಲಿ ಇವು ಆಹಾರವಾಗಿದ್ದವು. ಒಂದು ಎಮ್ಮೆಯ ಮಾಂಸ ಅವನಿಗೆ ಹತ್ತಾರು ದಿನದ ತನಕ ಆಹಾರವಾಗುತಿತ್ತು. ನಮ್ಮ ರಾಜರುಗಳಂತೆ ಬೇಟೆ ಅವರ ಹವ್ಯಾಸವಾಗಿರಲಿಲ್ಲ. ಅದು ಕೇವಲ ಉದರ ಪೋಷಣೆಗೆ ಒದಗಿ ಬರುತಿತ್ತು. ನಂತರ ಅವರ ಕುಲಮೂಲದ ಪರಿಕಲ್ಪನೆ ಬೆಳೆವ ಕಾಲದಲ್ಲಿ, ಮೀನು ತಿಂದವರು ಮೀನುಕುಲ, ಆಮೆ ತಿಂಬವರು ಆಮೆಕುಲ, ಇಲಿ ತಿಂದವರು ಇಲಿ ಕುಲ. ಹಂದಿ ತಿನ್ನುವರು ಹಂದಿ ಕುಲ, ಆನೆ ತಿಂದವರು ಆನೆ ಕುಲ, ಎಮ್ಮೆ ತಿಂಬುವರು ಎಮ್ಮೆ ಕುಲ, ಹೀಗೆ ವಿಂಗಡಣೆಗಳಾದವು.

ಗಣೇಶ ಆನೆ ಕುಲದವನು. ಹಾಗಾಗಿ ಅವನ ಹಾವಭಾವವೂ ಹಾಗೇ ದಾಖಲಾಗುತ್ತದೆ. ಇಲಿವಾಹನ ಆಗಿದ್ದು ಹೀಗೆಯೇ. ಉದಾಹರಣೆಗೆ ಪಂಜುರ್ಲಿಯ ಕೋಲ ಕುಣಿತದಲ್ಲಿ ಅದರ ಮುಖವಾಡ ತೊಟ್ಟು ಹಂದಿಯ ಗುಟುರು ಹಾಕುವ ಭಾವ ಶಬ್ಧಗಳು ಹುಟ್ಟಿರುವುದು ಹಂದಿ ಕುಲದ ಕಲ್ಪನೆಯೇ.

ಆ ನಂತರ ಬದಲಾವಣೆಗಳಾಗಿ ನಡೆನುಡಿಗಳು ಬದಲಾವಣೆಗೆ ಒಳಪಟ್ಟಿವೆ. ಕುಲ ಮೂಲದ ತಾಯಿಯನ್ನು ಪ್ರತಿಯೊಬ್ಬರೂ ಕಂಡಿರುತ್ತಿದ್ದರಿಂದ ತಂದೆಯನ್ನು ಗುರುತಿಸುವ, ಪಂಗಡಗಳನ್ನು ಗುರುತಿಸುವ ಅವರ ಗಣಗಳಲ್ಲಿ ಗಣಾರಾಧನೆ ಆಗುವ ಕಾಲ ವಿಸ್ತರಣೆಯಾಗಿತ್ತು. ಪಶು ಸಂಗೋಪನೆಯ ಒಡನಾಟಗಳನ್ನು ಕಾಪಾಡಿಕೊಳ್ಳುವಾಗಲೇ ಕೃಷಿ ಹಾಗೂ ಅದರ ಮೇವಿನ ತಿಳುವಳಿಕೆಯೊಂದು ಮನುಷ್ಯನಿಗೆ ಹುಟ್ಟಿಕೊಂಡಿತ್ತು.

ಗಂಡಿನ ಮಿಲನದಿಂದ ವಂಶ ಬೆಳವಣಿಗೆಯಾಗುವುದೆಂಬ ಅರಿವಾಯಿತು. ತಂದೆ ಕೋಣವಾಗಿದ್ದು ಹೀಗೆ. ತಂದೆ ತಾಯಿಗೂ ಮದುವೆ ಮಾಡಿಸುವ ಕಲ್ಪನೆ ಹುಟ್ಟಿದಾಗ ಮಾರಮ್ಮ ಊರ ದೇವತೆಯಾಗಿ ಬುಡಕಟ್ಟು ಕುಲದ ತಾಯಿಯಾಗಿ ಅವರೊಳಗೆ ಜನ್ಮ ತಾಳಿದಳು. ಹೀಗೆ ಮಹಿಷನೂ ಎಮ್ಮೆ ಕುಲದ ನಾಯಕನೇ….

ಮೈಸೂರಿನ ಚಾಮುಂಡಿಯ ನಡಿಗೆ ಉತ್ತರ ಪೂರ್ವ ಭಾರತದವರೆಗೂ ಹೇಗೆ ಹೋಯಿತು? ಇಲ್ಲಿಂದ ಅಲ್ಲಿಗೆ ಇಷ್ಟು ಸಾಮ್ಯ ಹೇಗೆ? ಅದರಲ್ಲೂ ಈ ಪ್ರಕಾರವನ್ನು ಮಾಡಿದ ಕಲಾವಿದರು ಸಾಂಪ್ರದಾಯಿಕ ‘ಪುರೂಲಿಯ’ ಪ್ರದೇಶದ ಅದೇ ಹೆಸರಿನ ಕಲಾವಿದರಾಗಿದ್ದರು. ಅವರು ಕೆಳವರ್ಗದ ಜನರಾಗಿದ್ದರು. ಅದು ಇತ್ತೀಚೆಗಷ್ಟೇ ಎಲ್ಲ ವರ್ಗದವರನ್ನು ಕೂಡಿಕೊಳ್ಳುತ್ತಿದೆ ಎಂದು ಅವರಿಂದಲೇ ತಿಳಿಯಿತು.

ಅವರವರ ಬುಡಕಟ್ಟುಗಳು ಒಗ್ಗೂಡುವ ಕಾಲಕ್ಕೆ ಒಬ್ಬರಿಗೊಬ್ಬರು ಮೇಲಾಡುವಾಟಕ್ಕೆ ಸಿಕ್ಕಿದ ಕಾಲದಲ್ಲೇ ಈ ದಶಾವತಾರದ ಪರಿಕಲ್ಪನೆ ಬುದ್ಧಿವಂತರ ಕೈಗೆ ದಕ್ಕಿಬಿಟ್ಟಿತು. ಅದನ್ನು ಬಳಸಿಕೊಂಡು ತಂದೆಯನ್ನು ಪ್ರಾಣಿಗಳಂತೆ ಗುರುತಿಸುವ ತಂತ್ರಗಾರಿಕೆಯೊಂದು ಹುಟ್ಟಿಕೊಂಡು ಕುಲವನ್ನು ಬೇರೆಯಾಗಿಸುವ ಹಾಗೂ ಸಂಪತ್ತನ್ನು ಕಾಪಾಡಿಕೊಳ್ಳುವ ಹುನ್ನಾರವಾಯಿತು.

ರಾಜರಾಳ್ವಿಕೆಯ ನಡುವೆ, ಜಾತಿಗಳ ಮೇಲಾಟದಲ್ಲಿ ಬಲಹೀನರನ್ನು ತುಳಿದು ಕಾಲಾಳಾಗಿಸುವ ಸೋತವರನ್ನು ವಶಪಡಿಸಿಕೊಳ್ಳುವ ಕಾಲಕ್ಕೆ ಅದರ ನಿರ್ವಹಣೆಗೆ ಪುರೋಹಿತಶಾಹಿಯೊಂದು ತಲೆಯೆತ್ತಿತು. ಆಳ್ವಿಕೆ ಹಾಗೂ ಚಾಣಾಕ್ಷ ಜನಸಮೂಹದ ನಿರ್ವಹಣೆ ಒಟ್ಟೊಟ್ಟಿಗೆ ಹುಟ್ಟಿಕೊಂಡವು. ಅಲ್ಲಿ ತಂತಾನೆ ಪ್ರಜಾನೀತಿ ಮರೆಯಾಗಿ ರಾಜನೀತಿ ಆಳ್ವಿಕೆಯ ಸುತ್ತ ರೂಪು ಪಡೆವಾಗ ಮಾತೃ ಸಂಸ್ಕೃತಿಯಾಗಿದ್ದ ಜಗತ್ತು ಕುಲಮೂಲದ ಅರ್ಥವಾಗಿದ್ದ ಹೆಣ್ಣನ್ನೂ ನಿರ್ಲಜ್ಜೆಯಿಂದ ಬಲಹೀನಳನ್ನಾಗಿಸುವ, ಭೋಗಿಸುವ, ಆಸ್ತಿಯನ್ನಾಗಿಸುವ ಜಗತ್ತು ಹುಟ್ಟಿಕೊಂಡಿತು.

ಬಲಹೀನರು ಕಾಲಾಳು ಕಯ್ಯಾಳುಗಳಾಗಿ, ಯುದ್ಧದಲ್ಲಿ ಮಡಿವ ದೇಹಗಳಾಗಿ, ಬಿಸಿಲಲ್ಲಿ ಬೇಯುವ ಹೀನಕುಲಗಳಾದರು. ಅಂತೆಯೇ ಹೆಣ್ಣು ಯುದ್ಧ ಗೆಲ್ಲುವ, ಯುದ್ಧ ಸೋಲಿಸುವ, ಬೇಕಾದಾಗ ಅವಳನ್ನು ಎತ್ತೊಯ್ಯುವ ದಾಳವಾದಳು. ಜಾತಿಗಳು, ಮೇಲು ಕೀಳುಗಳೆಂಬ ಭಾವನೆಗಳು ಹುಟ್ಟಿಕೊಂಡವು.

ಕಟ್ಟುಕಥೆಗಳ ಹುಟ್ಟಾಣಿಕೆ

ಆಗ ಹುಟ್ಟಿಕೊಂಡ ಕಥೆಗಳು ಸಾವಿರ ಸಾವಿರ. ವಾಮನ ತ್ರಿವಿಕ್ರಮರ ಕಲ್ಪನೆ, ಬಲಿಚಕ್ರವರ್ತಿ ಹಾಗೂ ವಾಮನ, ಹೀಗೆ ರಾಜರಾಳ್ವಿಕೆಯಲ್ಲಿ ಭೂಮಿಯೊಡೆತನದಲ್ಲಿ ಈ ಕೆಳವಾಟ ಮೇಲಾಟದಲ್ಲಿ ಮೇಲ್ಜಾತಿ ಕೆಳಜಾತಿಗಳು ಸುರ-ಅಸುರ ಕಲ್ಪನೆ ಹುಟ್ಟಿ ಒಬ್ಬರಿಂದೊಬ್ಬರನ್ನು ದೂರವಿಡುವ ಕಲೆ ಸಿದ್ಧಿಸಿತು. ಇಂಥ ನಡೆಯಲ್ಲೇ ಎಲ್ಲಿ ಎಮ್ಮೆಯ ಸಂತತಿ ಹಾಗೂ ಪಶುಸಂಗೋಪನೆಯಿತ್ತೋ ಅಲ್ಲಿ ಎಮ್ಮೆ ಕುಲದ ಅಧೀನತೆಗಾಗಿ ಕುಲದ ತಾಯಿಯನ್ನು ಚಾಮುಂಡಿ ದೇವತೆಯನ್ನಾಗಿ ಮಾಡಿಬಿಟ್ಟರು. ಮಾದಿಗರನ್ನು ಸದೆಬಡಿಯಲು ಕುಲದ ಮಗಳಾದ ಮಾರಮ್ಮನನ್ನು ಬ್ರಾಹ್ಮಣ ಕುಲದ ಹೆಣ್ಣು ಮಗಳಂತೆ ಚಿತ್ರಿಸಿ, ಗಂಡ ಮೋಸಮಾಡಿ ಮಾಂಸ ತಿನ್ನಿಸಿದ ತಪ್ಪು ತೋರಿಸಿ ತನ್ನ ಗಂಡನನ್ನು ಬಲಿ ತೆಗೆದುಕೊಂಡಳು ಎಂಬ ಕಥೆ ಕಟ್ಟಿ ಹರಿಬಿಟ್ಟರು.

ಪ್ರತಿ ಹಬ್ಬ ಜಾತ್ರೆ ಮಾಡುವಾಗ ‘ತಂದೆಯೇ… ನಿನ್ನನ್ನು ಕಡಿಯುತ್ತೇವೆ ‘ ಅಂತ ಭಾವಿಸಿ ಕೋಣವನ್ನು ಕಡಿದು ಒಕ್ಕೂಟದಲ್ಲಿ ಮಾಂಸದೂಟ ಉಣ್ಣುತ್ತಿದ್ದ ಸಮೂಹದ ಭಾವುಕತೆಯನ್ನು ಬಂಡವಾಳವನ್ನಾಗಿಸಿಕೊಂಡರು. ಆ ಪ್ರದೇಶದ ಬಲಿಷ್ಠನನ್ನು ಕೋಣದ ಪರಿಕಲ್ಪನೆಯಲ್ಲಿ ಚಿತ್ರಿಸಿ ಒಳ ಜಗಳವನ್ನೆಬ್ಬಿಸಿ ಕುಲದ ಬಲಶಾಲಿ ನಾಯಕನನ್ನು ಕುಲದ ಹೆಣ್ಣಿಂದಲೇ ಕೊಲ್ಲಿಸಿ ಎಮ್ಮೆ ಕುಲವನ್ನು ಅಧೀನಗೊಳಿಸಿಕೊಂಡರು. ಚಾಮುಂಡಿ ಹೀಗೆ ಕಾಲಾನಂತರದಲ್ಲಿ ರಾಜರ ಕುಲ ದೇವತೆಯಾದಳು.

ಇಂಥದ್ದೇ ಬೆಟ್ಟ ತಪ್ಪಲುಗಳ ಪ್ರದೇಶದ ಪುರೂಲಿಯಾ ಕೂಡ ನಮ್ಮ ಮೈಸೂರಿನಂಥದ್ದೇ ಪ್ರದೇಶವಾಗಿದೆ. ಕಲ್ಕತ್ತಾದ ದುರ್ಗೆಯೂ ಇಂಥವಳೇ… ಬಾದಾಮಿಯಲ್ಲೂ ಮಹಿಷಾಸುರ ಮರ್ದಿನಿಯ ಕೆತ್ತನೆಯಿದೆ. ಇಂಥ ಕಥೆಗಳ ವಿಸ್ತಾರವನ್ನು ಪ್ರಶ್ನಿಸಿ ಕೆಳವರ್ಗದವರ ಬಾಯಲ್ಲಿ ಎಚ್ಚರಿಕೆಯ ಗಂಟೆಯಂತೆ ಚಾಮುಂಡಿ ಹಾಗೂ ಉತ್ತನಳ್ಳಿ ಮಾರಮ್ಮರ ಕಥೆಗಳು ತಂಬೂರಿ ನಾದವಾಗಿ ಮೈಸೂರು ಪ್ರದೇಶದಿಂದ ಪುರೂಲಿಯದವರೆಗೂ ಇಂದಿಗೂ ಕಿವಿಯಲ್ಲಿ ಮಿಡಿಯುತ್ತಿವೆ. ಪುರೂಲಿಯ ಬುಡಕಟ್ಟು ಜನರ ಕೈಲಿ ಪ್ರಸಂಗಗಳಾಗಿ ವೇದಿಕೆಯಲ್ಲಿ ತಮಟೆ, ಪೀಪಿ ಹಾಗೂ ಡೊಳ್ಳುಗಳ ವಾದ್ಯಗಳ ಪರಿಕಲ್ಪನೆಯಲ್ಲಿ ರೂಪಕಗಳಾಗಿವೆ. ಹುನ್ನಾರದ ಜೊತೆಯಲ್ಲಿಯೇ ಸತ್ಯದ ಪ್ರಶ್ನೆಗಳೂ ಉಳಿದಿರುತ್ತವೆ. ಸತ್ಯವೆಂಬುದು ಬೆತ್ತಲೆ. ಆಕಾಶವನ್ನೇ ತಂದು ಮುಚ್ಚಿದರೂ, ಸೂರ್ಯನ ಕಿರಣ ಹೊಳಪು, ಚಂದ್ರನ ನಗೆ, ಚಿಕ್ಕಿಯ ಕಣ್ಣು ಮಿಟುಕು ಜೊತೆಗೇ ಇರುತ್ತದೆ.