ವಿರಹಕ್ಕೊಂದು ವಿಮೆ

ತಟಸ್ಥ ಮರದ ಎಲೆಗಳ ಮರೆಯಿಂದ
ಪುಟುಪುಟು ಓಡಾಡಿ ಒಮ್ಮೆಲೇ
ಗಲಾಟೆ ಮಾಡುವ ಅಳಿಲಂತೆ
ತಟ್ಟನೇ ಬರುತ್ತದೆ
ಬಿಟ್ಟು ಎಲ್ಲಾ ಹೋಗಿಬಿಡುವಾಸೆ!

ಹೊರಟೂ ಬಿಡುತ್ತೇನೆ,
ಹಾರೊಡೆದ ಮನೆ ಕೀಲಿಯನ್ನೂ ಹಾಕದೇ,
ಹಾಲಿನ ಹುಡುಗ, ಪೇಪರ್ ಹುಡುಗ,
ಹಾಡುವ ಮನೆಗೆಲಸದಾಕೆಗೂ ಹೇಳದೆ!

ಜೊತೆಗೆ ಯಾರೂ ಬೇಡ
ಎನ್ನುತ್ತಲೇ ಕಪಾಟಿನ ಮೂಲೆ ಮೂಲೆ ಹುಡುಕಿ
ಅವನ ನೆನಪಿಸುವ ಗರಿಗರಿ ಬಟ್ಟೆಗಳ
ಮಡಿಚಿ, ನೆರಿಗೆಗಳ ತೀಡಿ ತುಂಬಿಕೊಳ್ಳುತ್ತೇನೆ;
ಯಾವಾಗ ಬೇಕಾದರೂ ಚೀಲದ
ಹೊಟ್ಟೆ ಬಿರಿಯಬಹುದು!

ಕಾರಿನ ಮೂಲೆಯಲ್ಲೆಲ್ಲೋ
ಅವನು ಚರ್ವಿತ ಚರ್ವಣ ಎಂದು ಅಣಕಿಸಿ
ಟೋಲ್ ಬಿಲ್‌ನಲ್ಲಿ ತುರುಕಿ
ಎಸೆದ ಚುಯಿಂಗ್ ಗಮ್‌ನಂಥ
ಭಾವುಕ ಮಾತುಗಳು ಬಿದ್ದೇ ಇರಲು ಬಿಟ್ಟಿದ್ದೇನೆ;

ವಿಂಡ್ ಶೀಲ್ಡ್ ಮೇಲೆ ಅಂಟಿಕೊಂಡೇ ಇರುವ
ನೆನ್ನೆ ಬಿದ್ದ ಚೆರಿ ಬ್ಲಾಸಮ್ ಹೂವುಗಳ,
ಹೊತ್ತಲ್ಲದ ಹೊತ್ತಲ್ಲಿ ಬಿದ್ದ ಮಳೆ ಹನಿಗಳ
ನಿಷ್ಟೆಯನ್ನು ಬಯಸುವುದಿಲ್ಲ
ಈ ಕಪ್ಪು ರಸ್ತೆಗಳು;

ಅಲ್ಲಲ್ಲಿ ನಿಲ್ಲಿಸುವ
ಜೋಲು ಮೋರೆಯ
ಎಲ್ಲಾ ವಿರಹಿಗಳಿಂದಲೂ
ಅಲ್ಲೇ ರಸ್ತೆ ಬದಿಯ ಟೀ ಅಂಗಡಿಯವನು
ಮೆಲ್ಲನೆ ಒಂದು ವಿಷಾದವನ್ನು ಕದ್ದು
ಗಲ್ಲಾ ಪೆಟ್ಟಿಗೆಯೊಳಗೆ ಬಚ್ಚಿಡುತ್ತಾನೆ;
ಆಮೇಲೆ ಪ್ರೀತಿ ಮಾಡಬೇಕಿದೆ ಅವನಿಗೂ!
ಇಲ್ಲ, ನನ್ನ ಉಪದೇಶ ಬೇಡ ಅವನಿಗೆ.

ಆದರೂ ಹೇಳುತ್ತೇನೆ
ವಿರಹಕ್ಕೊಂದು ವಿಮೆ ಮಾಡಿಸು ಎಂದು!

 

ಪೂರ್ಣಿಮಾ ಮಾಳಗಿಮನಿ ಮೂಲತಃ ಶಿವಮೊಗ್ಗ ಜಿಲ್ಲೆಯವರು.
ಭಾರತೀಯ ವಾಯುಸೇನೆಯಲ್ಲಿ ಏರೋ ನಾಟಿಕಲ್ ಎಂಜಿನಿಯರ್ ಆಗಿ, ಶಾರ್ಟ್ ಸರ್ವೀಸ್ ಕಮಿಷನ್ಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
‘Anyone but the Spouse’ (2016) ಎನ್ನುವ ಇಂಗ್ಲೀಷ್ ಕಥಾ ಸಂಕಲನ ಮತ್ತು ‘ಇಜಯಾ’ (2021), ‘ಪ್ರೀತಿ ಪ್ರೇಮ-ಪುಸ್ತಕದಾಚೆಯ ಬದನೇಕಾಯಿ’ (2022) ಎನ್ನುವ ಕಾದಂಬರಿಗಳೂ ಸೇರಿ ಇವರ ಮೂರು ಪುಸ್ತಕಗಳು ಪ್ರಕಟವಾಗಿವೆ. ‘ಡೂಡಲ್ ಕಥೆಗಳು’ ಮತ್ತು ಅಗಮ್ಯ ಕಾದಂಬರಿ ಅಚ್ಚಿನಲ್ಲಿವೆ. 2022 ನೇ ಸಾಲಿನ ಬುಕ್ ಬ್ರಹ್ಮ ಸ್ವಾತಂತ್ರೋತ್ಸವ ಕಥಾ ಸ್ಪರ್ಧೆಯಲ್ಲಿ ಇವರ ‘ವಿನ್ನರ್ ವಿನ್ನರ್ ಚಿಕನ್ ಡಿನ್ನರ್’ ಕಥೆಗೆ ಪ್ರಥಮ ಬಹುಮಾನ ದೊರೆತಿದೆ.