ಪೆಜತ್ತಾಯರ ನೇಪಾಲೀ ನವರಾತ್ರಿ ಡೈಲಿ ಸ್ಪೆಶಲ್ -1

ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ಎಂದು ಹೆಸರುವಾಸಿ ಆಗಿದ್ದ ನೇಪಾಳವನ್ನು ನವರಾತ್ರಿಯಲ್ಲಿ ನೋಡಬೇಕೆಂಬ ಆಸೆ ನನ್ನಲ್ಲಿ ಬಹುಕಾಲದಿಂದಲೂ ಇತ್ತು. ನವರಾತ್ರಿಯ ಹಬ್ಬದ ವಾತಾವರಣದಲ್ಲಿ ಆ ಹಿಂದೂ ರಾಷ್ಟ್ರವು ಬಹು ಚೆನ್ನಾಗಿ ಶೋಭಿಸಬಹುದೆಂಬ ಕಲ್ಪನೆ ನನ್ನಲ್ಲಿತ್ತು.

ನೇಪಾಳದ ಬಗ್ಗೆ ಬಗೆಗಿನ ಕುತೂಹಲಕ್ಕೆ ಕಾರಣ ಅಲ್ಲಿನ ನಾಣ್ಯಗಳಲ್ಲಿ ಮತ್ತು ನೋಟುಗಳಲ್ಲಿ ಕಾಣಬರುತ್ತಿದ್ದ ಸಂಸ್ಕೃತ ಲಿಪಿ.  ಸಂಸ್ಕೃತ ಅಲ್ಲಿನ ರಾಷ್ಟ್ರ ಭಾಷೆ ಎಂದು ನಮ್ಮ ಪ್ರಾಥಮಿಕ ಶಾಲೆಯ ಚರಿತ್ರೆಯ ಪಾಠದಲ್ಲಿ ಓದಿ ತಿಳಿದಿದ್ದೆ. ಅದಲ್ಲದೇ, ಭಾರತೀಯ ಸೈನ್ಯದ ಗೂರ್ಖಾ ರೆಜಿಮೆಂಟಿನ ಸೈನಿಕರನ್ನು ಕಂಡರೆ ನನಗೇಕೋ ಬಹು ಅಭಿಮಾನ. ಅಗಲವಾದ ಹ್ಯಾಟ್ ಗಳನ್ನು ತಲೆಯ ಮೇಲೆ ಬಲಬದಿಗೆ ಸ್ವಲ್ಪ ವಾರೆಯಾಗಿ ಇರಿಸಿಕೊಂಡು ಠಾಕು ಠೀಕಾದ ಯೂನಿಫಾರಮ್ ಧರಿಸಿದ ಸ್ವಲ್ಪ ಕುಳ್ಳರೇ ಎನ್ನಬಹುದಾದ ಮಧ್ಯಮ ಎತ್ತರದ ಏಕರೀತಿಯ  ಮುಖ ಚಹರೆಯುಳ್ಳ ದಷ್ಟಪುಷ್ಟರಾದ ಈ ಗುಡ್ಡಗಾಡಿನ (ಪಹಾಡೀ) ಸೈನಿಕ  ಪಡೆಯ ಚುರುಕು ಪರ್ವತೀಯರ  ‘ರೋಲಿಂಗ್’ ನಡೆಯ   ಪಥಚಲನದ ವೈಖರಿಯೇ ಒಂದು ವಿಶಿಷ್ಟ ಮಾದರಿಯದು.

ಗೂರ್ಖಾ ಸೈನಿಕರು ಸೊಂಟದ ಪಟ್ಟಿಯಲ್ಲಿ ಧರಿಸುವ ಅವರ ಪ್ರೀತಿಯ ಆಯುಧವಾದ ಕುಖ್ರಿಯ ಬಗ್ಗೆ ನನಗೆ ಬಹು ಕುತೂಹಲ. ಗೂರ್ಖಾ ಸೈನಿಕರು ಅಸಮಾನ್ಯ ಯೋಧರು ಎಂಬ ಮಾತಿಗೆ ಎರಡು ಮಾತಿಲ್ಲದೇ ಎಲ್ಲರೂ ಒಪ್ಪುತ್ತಾರೆ.

ಗೂರ್ಖಾ ಸೈನಿಕರು Bravest of the Brave, Generous of the Generous (ದೀರರಲ್ಲಿ ಧೀರರು, ಉದಾತ್ತರಲ್ಲಿ ಉದಾತ್ತರು) ಎಂಬ ವಾಕ್ಯವನ್ನು ಬ್ರಿಟಿಷ್ ಸೇನೆಯೂ ಒಪ್ಪಿಕೊಂಡು ಅದೇ ವಾಕ್ಯವನ್ನು ಬ್ರಿಟನಿನ ಗೂರ್ಖಾ ರೈಫಲ್ಸ್ ರೆಜಿಮೆಂಟಿನ  ಮಾರ್ಚಿಂಗ್ ಬ್ಯಾಂಡ್ ಟ್ಯೂನ್  ಎಂದು  ಪರಿಗಣಿಸಿದೆ.

ಬ್ರಿಟಿಷ್ ಗೂರ್ಖಾ ರೆಜಿಮೆಂಟಿನ ಧ್ಯೇಯ ವಾಕ್ಯ
“It is better to die in Valour than to live like a Coward”

ಗೂರ್ಖಾ ಜನಾಂಗದ ಸರ್ವೋಪಯೋಗಿಯಾದ ವಿಶಿಷ್ಟ ಆಯುಧ ಕುಖ್ರಿ. ಈ ಬಾಗು ಚಾಕು ಅಥವಾ ಕತ್ತಿಯನ್ನು ರೈತಾಪಿ ಗೂರ್ಖಾ ಜನರು  ಹೊಲದ ಕೆಲಸಗಳಿಗೆ ಮತ್ತು ಕಾಡು ಸವರಲು ಕೂಡಾ ಬಳಸುತ್ತಾರೆ. ಕುಖ್ರಿ ಇಲ್ಲದ ಗೂರ್ಖಾನನ್ನು ಕಲ್ಪಿಸಿಕೊಳ್ಳಲೂ ಸಾದ್ಯವಿಲ್ಲ.

ಈ ಆಯುಧವನ್ನು ಧರಿಸಲು ನೇಪಾಳೀ ಜನರಿಗೆ ಪರವಾನಗಿ ಬೇಕಿಲ್ಲ. ಸೈನ್ಯದಲ್ಲಿ ಇರುವ ಸೈನಿಕರ ಕೈಯ್ಯಲ್ಲಿ ಝಳಪಿಸುವ ಈ ಮಾರಕ ಆಯುಧಗಳು ಅವರು ಕೆಲಸ ಮಾಡುವ ಸೇನೆಯ ವತಿಯಿಂದಲೇ ಒದಗಿಸಲ್ಪಡುತ್ತವೆ. ಈ ಆಯುಧದ ಬಗ್ಗೆ ಹಲವಾರು ದಂತಕಥೆಗಳೇ ಹುಟ್ಟಿಕೊಂಡಿವೆ.

ಒಂದು ದಂತಕಥೆಯನ್ನು ನಾನು ಇಲ್ಲಿ ಉದ್ಧರಿಸಲೇಬೇಕು– ಅಂತ ಅನ್ನಿಸುತ್ತಾ ಇದೆ.

ಎರಡನೇ ಮಹಾಯುದ್ಧದ ಒಂದು ರಣರಂಗದಲ್ಲಿ  ತೀವ್ರವಾಗಿ ಬಾಂಬಿಂಗ್ ನಡೆಯುತ್ತಾ ಇತ್ತಂತೆ. ಪ್ರಾಣ ಉಳಿಸಿಕೊಳ್ಳಲು ಒಬ್ಬ ಜರ್ಮನ್ ಸೈನಿಕ ಮತ್ತೊಬ್ಬ ಗೂರ್ಖಾ ಸೈನಿಕ  ಅಕಸ್ಮತ್ತಾಗಿ ಆಚೆ ಈಚೆಯಿಂದ ಒಂದೇ ಕಂದಕಕ್ಕೆ (ಟ್ರೆಂಚ್ಗೆ) ಧುಮುಕಿದರಂತೆ. ಇಬ್ಬರೂ ಕಂದಕದೊಳಗೆ ಮುಖಾಮುಖಿಯಾದಾಗ ವೈರಿ ಸೈನಿಕ ಅಟ್ಟಹಾಸದಿಂದ “ನನ್ನ ಆಟೋಮ್ಯಾಟಿಕ್ ರೈಫಲಿನ ಇದುರು ನಿನ್ನ ಹಳೆಯ ಸ್ಪ್ರಿಂಗ್ ಫೀಲ್ಡ್ ರೈಫಲ್ ಮತ್ತು ಕುಖ್ರಿಗಳಿಗೆ ಯಾವ ಅವಕಾಶವೂ ಇಲ್ಲ” ಅಂದನಂತೆ.

ಆಗ ಗೂರ್ಖಾ ನಮ್ರತೆಯಿಂದಲೇ “ಸರ್, ನಿಮ್ಮ ತಲೆಯನ್ನು ಸ್ವಲ್ಪ ಅಲ್ಲಾಡಿಸಿ” ಅಂದನಂತೆ.
ವೈರಿ ಸೈನಿಕನು ತನ್ನ ತಲೆಯನ್ನು ಅಲ್ಲಾಡಿಸಲು ಆತನ ತಲೆಯೇ ಉರುಳಿಬಿತ್ತಂತೆ!
ಟ್ರೆಂಚಿನ ಒಳಗೆ ನೆಗೆಯಬೇಕಾದ ಕ್ಷಣದಲ್ಲೇ ಗೂರ್ಖಾ ಸೈನಿಕ ತನ್ನ ಕೆಲಸ ಪೂರೈಸಿ ನಿರಾಳವಾಗಿ ಕುಳಿತಿದ್ದನಂತೆ!
ಎಂತಹಾ ಕೆಚ್ಚೆದೆಯ ಸೈನಿಕನ ರಕ್ತವನ್ನೂ ಹೆಪ್ಪುಗಟ್ಟಿಸುವಂತಹುದು ಗೂರ್ಖಾ ಪಡೆಯ ರಣರಂಗದ ಸಿಂಹನಾದ “ಜೈ ಮಾಕಾಳೀ, ಆಯೋ ಗೂರ್ಖಾಳೀ” (ಮಹಾ ಕಾಳಿಗೆ ಜಯವಾಗಲಿ, ಗೂರ್ಖಾಗಳು ಬರುತ್ತಾ ಇದ್ದಾರೆ).

ಬ್ರಿಟನ್ ಭಾರತ ಮತ್ತು ನೇಪಾಳ- ಈ ತ್ರಿದೇಶ ಗಳ ರಕ್ಷಣಾ ಒಪ್ಪಂದ 1947 ರ ಪ್ರಕಾರ ಬ್ರಿಟನ್ ಮತ್ತು ಭಾರತದ ಸರಕಾರಗಳು ತಮ್ಮ ಬಳಿ ನೇಪಾಳೀ ಗೂರ್ಖಾಗಳ ಪದಾತಿ ರೆಜಿಮೆಂಟುಗಳನ್ನು ಇಂದಿಗೂ ಉಳಿಸಿಕೊಂಡಿವೆ.

ಈ ಧೀರ ಸೈನಿಕರ ರೆಜಿಮೆಂಟ್ ಒಂದನ್ನು ಇಂಗ್ಲೆಂಡಿನ  ಆರನೇ ಎಲಿಜಬೆತ್ ರಾಣಿ  Queens Own Regiment ಎಂದೇ ಹೆಸರಿಸಿದ್ದರು. ಇಂದಿಗೂ ಬ್ರಿಟನ್ ತಮ್ಮ ಸೈನ್ಯದಲ್ಲಿ ಗೂರ್ಖಾ ರೆಜಿಮೆಂಟ್ ಅನ್ನು ಖಾಯಂ ಪದಾತಿ ದಳವಾಗಿ  ಉಳಿಸಿಕೊಂಡಿದೆ.

ಭಾರತ ಮತ್ತು ಬ್ರಿಟನ್ ಗಳ ಗೂರ್ಖಾರೆಜಿಮೆಂಟ್ ಗಳಲ್ಲಿ ಸೇವೆ ಸಲ್ಲಿಸುವುದು ನೇಪಾಳೀ ಯುವಕರಿಗೆ ಹೆಮ್ಮೆಯ  ಪ್ರತೀಕ.

ಗೂರ್ಖಾ ಪಡೆಯ ಸೈನಿಕರು ಕರ್ತ್ಯವ್ಯನಿಷ್ಠೆಗೆ, ಶ್ರದ್ಧೆಗೆ, ಕಷ್ಟ ಸಹಿಷ್ಣುತೆಗೆ ಮತ್ತು ಅಪ್ರತಿಮ ಧೈರ್ಯಕ್ಕೆ ಹೆಸರುವಾಸಿಗಳು.

ಮಾನ್ಯ ಫೀಲ್ಡ್ ಮಾರ್ಷಲ್ ಮಾಣೇಕ್ ಷಾ ಅವರಿಗೆ ಗೂರ್ಖಾ ಪಡೆ ಅತ್ಯಂತ ಪ್ರಿಯವಾದ ಪಡೆ. ಗೂರ್ಖಾ ಸೈನಿಕರು ಅವರನ್ನು “ಸ್ಯಾಮ್  ಬಹದ್ದೂರ್” ಎಂಬ ಹೆಸರಿನಿಂದಲೇ ಗುರುತಿಸುತ್ತಿದ್ದರಂತೆ.

ಸ್ಯಾಮ್ ಬಹದ್ದೂರರರ ಒಂದು ವ್ಯಾಖ್ಯೆ ಹೀಗಿದೆ. `ಯಾರಾದರೂ ತನಗೆ ಮರಣದ ಹೆದರಿಕೆ ಇಲ್ಲ ಅಂದರೆ ನಾನದನ್ನು ಸುಳ್ಳು ಅನ್ನುತ್ತೇನೆ. ಆದರೆ ಆ ಮಾತನ್ನು ಒಬ್ಬ ಗೂರ್ಖಾ ಆಡಿದರೆ ಮಾತ್ರ ಆ ಮಾತು ಪರಮ ಸತ್ಯ’.

”If anyone says he’s not afraid of dying, he is either lying or he is a Gurkha.” –Field Marshal Sam Manekshaw.

ಸ್ಯಾಮ್ ಬಹದ್ದೂರ್ ಎಂಬ ಹೆಸರು ಫೀಲ್ಡ್ ಮಾರ್ಷಲ್ ಮಾಣೇಕ್ ಷಾ ಅವರ ‘ಪೆಟ್ ನೇಮ್’ ಆಗಿ ಭಾರತದ ಇತಿಹಾಸದಲ್ಲಿ ಹಾಸುಹೊಕ್ಕಾಗಿ ಚಿರಾಯುವಾಗಿ ಉಳಿದಿದೆ. ಭಾರತೀಯ ಮಿಲಿಟರಿಯ  ಬ್ಯಾಂಡಿನಲ್ಲಿ “ಸ್ಯಾಮ್ ಬಹದ್ದೂರ್” ಎಂಬ ಮಾರ್ಚಿಂಗ್ ಪದ್ಯ ನುಡಿಸಲಾಗುತ್ತಿದೆ.

ಪೆಜತ್ತಾಯ ನೇಪಾಲೀ ನವರಾತ್ರಿ 2:ಭಕ್ತಾಪುರದಲಿ ಟಗರು ಬಲಿ

1998ನೇ ಇಸವಿಯ ನವರಾತ್ರಿಯ ದಿನಗಳನ್ನು ನೇಪಾಳದಲ್ಲಿ ಸಂಸಾರದೊಂದಿಗೆ ಕಳೆಯಲು ಆಲೋಚಿಸಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರಿನ ಸೀತಾ ಟ್ರಾವೆಲ್ಸಿನವರಲ್ಲಿ ವಿಚಾರಿಸಲು ಕೋಲ್ಕೋತಾ, ಪಾಟ್ನಾ ಮತ್ತು ಬನಾರಸುಗಳಿಂದ ಮಾತ್ರ ವಿಮಾನ ಸೀಟುಗಳು ಲಭ್ಯ ಎಂದರು. ಸೀತಾ ಟ್ರಾವೆಲ್ಸಿನವರ ಮೂಲಕ ಕೋಲ್ಕೋತಾದಲ್ಲಿ ನವರಾತ್ರಿಯ ಮೊದಲ ನಾಲ್ಕು ದಿನಗಳನ್ನು ಕಳೆದು, ಅಲ್ಲಿಂದ ಕಾಠ್ಮಂಡುವಿಗೆ ಹಾರಿ ಬನಾರಸ್ ಮೂಲಕ  ಹಿಂದಿರುಗೋಣ ಎಂಬ ಯೋಜನೆ ಹಾಕಿದೆವು. ನೇಪಾಳದ ಪ್ರತಿಷ್ಠಿತ ಹೋಟೆಲ್  ಡಿಎಲ್’ ಅನ್ನಪೂರ್ಣಾದಲ್ಲಿ ನಮ್ಮ ವಸತಿಯ ಏರ್ಪಾಡೂ ಆಯಿತು.

ನೇಪಾಳ ಪ್ರವಾಸ ಮಾಡಲು ವೀಸಾ ಅಗತ್ಯವಿಲ್ಲ. ಆದರೂ, ನಮ್ಮ ಐಡೆಂಟಿಟಿ ಪ್ರೂಫ್ ನೀಡುವ ಬಗ್ಗೆ ನಮ್ಮ ಪಾಸ್ಪೋರ್ಟ್ ಗಳನ್ನು ಜತೆಗೆ ಒಯ್ಯಲು ತೀರ್ಮಾನಿಸಿದೆವು. ಕೋಲ್ಕೋತಾದಲ್ಲಿ ನವರಾತ್ರಿಯನ್ನು ದುರ್ಗಾ ಪೂಜಾ ಅನ್ನುತ್ತಾರೆ. ಎಲ್ಲೆಲ್ಲೂ ಸಿಂಹಾರೂಢೆಯಾದ ದುರ್ಗೆಯ  ಪ್ರತಿಮೆಗಳ ಸ್ಥಾಪನೆ ಮತ್ತು ಪೂಜೆಯು ಬಹು ವಿಜೃಂಭಣೆಯಿಂದ ನಡೆಯುತ್ತಿತ್ತು. ಕೋಲ್ಕತ್ತಾದ ಶಹರದಲ್ಲಿ ನಿಜವಾದ ಹಬ್ಬದ ವಾತಾವರಣವೇ ತುಂಬಿತ್ತು. ಕೋಲ್ಕೋತಾ ನಗರ ವೀಕ್ಷಣೆ ಮಾಡುತ್ತಾ ನಾಲ್ಕು ದಿನ ಕಳೆದು ಕಾಠ್ಮಂಡುವಿನ ತ್ರಿಭುವನ್ ವಿಮಾನ ನಿಲ್ದಾಣದಲ್ಲಿ ಇಳಿದೆವು. ನವರಾತ್ರಿಯ ದಿನಗಳಲ್ಲಿ ಕಾಠ್ಮಂಡು ಕೋಲ್ಕೋತ್ತಾ ನಗರಕ್ಕಿಂತಲೂ ಹೆಚ್ಚಿಗೆ ವಿಜೃಂಭಿಸಬಹುದೆಂಬ ನಿರೀಕ್ಷಣೆಯಲ್ಲಿಯೇ ನಾವು ನಮ್ಮ ಹೋಟೆಲ್ ಸೇರಿದೆವು.

ಪಂಚತಾರಾ ಹೋಟೆಲ್ ‘ಅನ್ನಪೂರ್ಣಾ’ ಕಾಠ್ಮಂಡುವಿನ ಪ್ರತಿಷ್ಠಿತ ದರ್ಬಾರ್ ಮಾರ್ಗದಲ್ಲಿ ಇದೆ. ನಮ್ಮ ರೂಮಿನಿಂದಲೇ ಅನ್ನಪೂರ್ಣಾ ಶಿಖರದ ದರ್ಶನ ಆಗುವಂತೆ ದೊಡ್ಡ ಗಾಜಿನ ಕಿಟಿಕಿ ಅಳವಡಿಸಿದ್ದರು. ಅನ್ನಪೂರ್ಣಾ ಪರ್ವತ ಶ್ರೇಣಿಯ ಅಪೂರ್ವ ನೋಟವನ್ನು ಸವಿಯಲು ನಮ್ಮ ರೂಮುಗಳಲ್ಲಿ ಆರಾಮಾಸನ ಹಾಕಿದ್ದರು.

ಹೆಚ್ಚಿನ ಪ್ರವಾಸಿಗಳಿಗೆ ಹೋಟೆಲ್ ಅನ್ನಪೂರ್ಣಾದ ‘ಕ್ಯಸೀನೋ’ ಬಹುದೊಡ್ದ ಆಕರ್ಷಣೆ. ಅಪವಾದ ಎಂಬಂತೆ, ನಾವು ಮಾತ್ರ ಆ ವೈಭವೋಪೇತ ಜೂಜುಕಟ್ಟೆಯಿಂದ ಬಹುದೂರ ಉಳಿದೆವು. ಕಾಠ್ಮಂಡುವಿನ ಹವಾಮಾನ ಬಹಳ ಚೆನ್ನಾಗಿತ್ತು. ಕ್ರೂರವಾದ ಚಳಿ ಇನ್ನೂ ಕಾಲಿಟ್ಟಿರಲಿಲ್ಲ. ಸಾಯಂಕಾಲದ ಹೊತ್ತು  ಪ್ರತಿಷ್ಠಿತ ದರ್ಬಾರ್ ಮಾರ್ಗದಲ್ಲಿ ತಿರುಗಾಡಿ ಬರಲು ಪಾದಾಚಾರಿಗಳಾಗಿ ಹೊರಟೆವು.
ದರ್ಬಾರ್ ಮಾರ್ಗದಲ್ಲಿ ನಡೆಯುತ್ತಾ ಹೋದಂತೆ ನನ್ನ ಹೆಂಡತಿ ಮಕ್ಕಳಿಗೆ ತುಂಬಾ ದೊಡ್ಡ ನಿರಾಶೆ ಆಯಿತು. ಇದಕ್ಕೆ ಕಾರಣ ಶೇಕಡ ತೊಂಬತ್ತೊಂಭತ್ತರಷ್ಟು ಅಂಗಡಿಗಳ ಮುಂಗಟ್ಟುಗಳು ಮುಚ್ಚಿದ್ದುವು. ವಿಚಾರಿಸಲಾಗಿ, ನೇಪಾಳದಲ್ಲಿ ‘ದಶೈನ್’ ಎಂದು ಕರೆಯಲಾಗುವ  ದುರ್ಗಾ ಪೂಜೆಯ ಹತ್ತು ದಿನಗಳಲ್ಲಿ ಹೆಚ್ಚಿನ ಕಛೇರಿಗಳು, ವ್ಯಾಪಾರೀ ಸ್ಥಳಗಳು, ಹೋಟೆಲುಗಳು ಮತ್ತು ಅಂಗಡಿಗಳು ಮುಚ್ಚಿರುತ್ತವೆ– ಎಂಬ ಸಮಾಚಾರ ನಮಗೆ ಮೊದಲ ಬಾರಿಗೆ ತಿಳಿಯಿತು.ಕಾಸ್ತಾ ಮಂಟಪ

ನಾವು ನೇಪಾಳ ಬಿಡುವ ದಿನ, ಅಂದರೆ ವಿಜಯ ದಶಮಿಯ ಮರುದಿನ ಅಂಗಡಿಗಳ ಬಾಗಿಲು ತೆಗೆಯುತ್ತವೆ- ಎಂಬ ವಿಚಾರ ತಿಳಿದು ನನ್ನ ಹೆಂಡತಿ ಮಕ್ಕಳು ಬಹಳ ಸಂಕಟಪಟ್ಟರು. ಅವರ ನೇಪಾಳದ ಷಾಪಿಂಗ್ ಕಾರ್ಯಕ್ರಮ ರದ್ದಾಗಿ ಹೋಯಿತು ಎಂದು ಕೈ ಕೈ ಹಿಸುಕಿಕೊಂಡರು. (ನಾನು ಮಾತ್ರ ಹಣ ಉಳಿಯಿತು- ಎಂದು  ಮನಸ್ಸಿನ ಒಳಗೆಯೇ ಸಂತಸಪಟ್ಟೆ!)

ದಿನನಿತ್ಯ ಬಳಕೆಗೆ ಬೇಕಾದ ವಸ್ತುಗಳು ಹಾಗೂ ಕೆಲವು ನಾಜೂಕಿನ ಮರ ಮತ್ತು ಲೋಹದ ಕಲಾಕೃತಿಗಳು, ಸ್ಥಳೀಯ ಕಲಾಕಾರರಿಂದ ನಿರ್ಮಿತವಾದ ಬಟ್ಟೆಗಳು ನಮ್ಮ ಹೋಟೆಲಿನ ಬೋಟಿಕ್ ನಲ್ಲೇ ಲಭ್ಯ ಇದ್ದುವು. ನಮ್ಮ ಊಟ ತಿಂಡಿಗಳಿಗೆ ನಾವು ನಮ್ಮ ಹೋಟೆಲಿನ ಮೂರು ರೆಸ್ಟುರಾಂಟ್ ಗಳನ್ನೇ ಆಶ್ರಯಿಸಬೇಕಿತ್ತು.

ಆ ಮೊದಲ ಸಂಜೆ ನಾವು ತಿರುಗಾಡುತ್ತಾ ದರ್ಬಾರ್ ರಸ್ತೆಯ ಕೊನೆಯಲ್ಲಿ ಇರುವ ದರ್ಬಾರ್ ಚೌಕ, ಹನುಮಾನ್ ಧೋಕ ಅರಮನೆಗಳ ಆಸುಪಾಸಿನಲ್ಲಿ ತಿರುಗಾಡಿದೆವು. ಪಕ್ಕದಲ್ಲೇ ಇದ್ದ ಜಗನ್ನಾಥ ದೇವಸ್ಥಾನದ ಮುಂದಿರುವ ಉನ್ನತ ಕಂಬದ ಮೇಲೆ ದೇವರಿಗೆ ನಮಿಸುತ್ತಾ ಇರುವ ರಾಜಾ ಪ್ರತಾಪ ಮಲ್ಲರ ಪ್ರತಿಮೆಯು ಈ ಚೌಕದ ಮುಖ್ಯ ಆಕರ್ಷಣೆ. ಪಕ್ಕದಲ್ಲೇ ಇರುವ ತಲೇಜು ಮಂದಿರ ಮತ್ತು ಕಾಲಭೈರವ ದೇವಸ್ಥಾನಗಳನ್ನು ನೋಡಿದೆವು. ನೇಪಾಳಿಗರಿಗೆ ನಡೆದಾಡುವ ದೇವಿ ಅನ್ನಿಸಿರುವ ಕನ್ನಿಕೆ “ಕುಮಾರಿಯ ಅರಮನೆ”ಯನ್ನು ದೂರದಿಂದಲೇ ನೋಡಿದೆವು.

ನೇಪಾಳದ ರಾಜಧಾನಿಗೆ ಕಾಠ್ಮಂಡು ಎಂಬ ಹೆಸರು ಬರಲು ಕಾರಣವಾದ “ಕಾಷ್ಟ ಮಂಟಪ್” ಎಂದು ಕರೆಯಲ್ಪಡುವ ಮರದ ಕೆತ್ತನೆಯ ಸುಂದರ ದೇಗುಲವನ್ನು ನೋಡಿದೆವು. ಇದು ದರ್ಬಾರ್ ಚೌಕದ ಸನಿಹದಲ್ಲೇ ಇದೆ. ಈ ದೇವಳವನ್ನು ಒಂದೇ ಮರವನ್ನು ಕೊರೆದು ತಯಾರಿಸಿದರಂತೆ!

ದೇವಸ್ಥಾನದ ಪ್ರಾಂಗಣಹೋಟೆಲಿನ ಟ್ರಾವೆಲ್ ಡೆಸ್ಕಿನವರು ಪ್ರವಾಸಿಗಳಾದ ನಮಗೆ ಬೋರ್ ಆಗದ ರೀತಿಯಲ್ಲಿ ಪ್ರತೀದಿನವೂ ಸ್ಥಳೀಯ ಪ್ರವಾಸಗಳನ್ನು ಏರ್ಪಡಿಸಿದ್ದರು. ಪ್ರತೀದಿನ ಬೆಳಗ್ಗೆ ಹೋಟೆಲಿನವರ ಲಕ್ಜುರಿ ಕೋಚ್ ಗಳು ನಿಗದಿತ ದರದಲ್ಲಿ ನಮ್ಮನ್ನು ಸುತ್ತಮುತ್ತಲಿನ ಪ್ರವಾಸೀ ತಾಣಗಳಿಗೆ ಕರೆದೊಯ್ದು ಸಾಯಂಕಾಲ ಹೋಟೆಲಿಗೆ ವಾಪಸ್ ಕರೆದುಕೊಂಡು ಬರುವ ಏರ್ಪಾಡನ್ನು ಹೋಟೆಲಿನವರೇ ಮಾಡಿದ್ದರು.
ನೇಪಾಳದಲ್ಲಿ ಗುಡ್ಡ ಬೆಟ್ಟ ನದಿಗಳನ್ನು ಬಿಟ್ಟರೆ, ಅರಮನೆಗಳು, ಹಿಂದೂ ಮತ್ತು ಬೌದ್ಧ ಮಂದಿರಗಳೇ ಪ್ರಮುಖ ಪ್ರವಾಸೀ ಆಕರ್ಷಣೆಗಳು.
ನಮ್ಮ ಜತೆಗೆ ತಿರುಗಾಡಲು ಬಂದ ಜನರಲ್ಲಿ ಹೆಚ್ಚಿನವರು ವಿದೇಶೀ ಪ್ರವಾಸಿಗರಾಗಿದ್ದರು.

ಹೋಟೆಲಿನ ಷೆಫ್ ಖುದ್ದಾಗಿ ನಮ್ಮ ರೂಮಿಗೆ ಬಂದು, ನಮಗೆ ಮರುದಿನದ ಪ್ರಯಾಣದ ಹೊತ್ತು ಬೇಕಾದ ಆಹಾರಗಳ ಆರ್ಡರನ್ನು  ಹಿಂದಿನ ದಿನವೇ ಪಡೆದು, ಅವನ್ನು ನಮ್ಮ ಪ್ರವಾಸದ ಬಸ್ ಹೊರಡುವ ಹೊತ್ತಿಗೆ ಪ್ಯಾಕ್ ಮಾಡಿ ತಂದು ಬಸ್ಸಿನೊಳಗೆ ಬೆಚ್ಚಗೆ ಇರಿಸುತ್ತಾ ಇದ್ದರು. ಈ ರೀತಿ ಪ್ಯಾಕ್ ಮಾಡಿ ನಮ್ಮ ನಮ್ಮ ಹೆಸರಿನ ‘ಲೇಬೆಲ್’ ಹಾಕಿದ ಆಹಾರದ ಥರ್ಮೋಕೋಲ್ ಪೊಟ್ಟಣಗಳನ್ನು ನಮಗೆ ಪಿಕ್ನಿಕ್ ಲಂಚ್ ತರಹ ಒದಗಿಸುವ ಏರ್ಪಾಡನ್ನು ಹೋಟೆಲಿನವರೇ ಮಾಡಿದ್ದರು. ಎಲ್ಲದಕ್ಕೂ ಪಂಚತಾರಾ ರೇಟು! ನಾವು ನೋಡಿದ ಪ್ರತೀ ಊರು ಅಥವಾ ಹಳ್ಳಿಗಳಲ್ಲಿ ನವರಾತ್ರಿಯ ರಜಾದಲ್ಲಿ ಮುಚ್ಚಿರುವ ಅಂಗಡಿಗಳು ಮಾತ್ರ ಕಂಡುವು! ನಾವು ಹೊರಗೆ ಹೋದಾಗ ಒಂದು ಬಾಟಲ್ ನೀರು ಕೊಂಡುಕೊಳ್ಳ ಬೇಕೆಂದರೂ ಯಾವ ಅಂಗಡಿಯ ಬಾಗಿಲೂ ತೆರೆದಿರುತ್ತಾ ಇರಲಿಲ್ಲ. ಆದರೆ, ಬಾಟಲ್ ನೀರು, ಕ್ಯಾಮರಾಗಳಿಗೆ ಬ್ಯಾಟರಿ, ಫೋಟೋ ಫಿಲ್ಮ್ ಮುಂತಾದುವು ಬೇಕಿದ್ದಲ್ಲಿ, ನಮ್ಮ ಬಸ್ಸಿನಲ್ಲಿ ನಮ್ಮ ಜತೆಗೇ ಬರುತ್ತಿದ್ದ ನಮ್ಮ ಹೋಟೆಲಿನ ಪರಿಚಾರಕನೇ ಅವನ್ನು ನಮಗೆ ಒದಗಿಸುತ್ತಿದ್ದ. ಹಣ ಸ್ವಲ್ಪ ಜಾಸ್ತಿ ಖರ್ಚಾದರೂ ಕಾಠ್ಮಂಡುವಿನ ಸುತ್ತಮುತ್ತದ ಪ್ರವಾಸದ ಸಮಯದಲ್ಲಿ ನಮ್ಮ ಊಟ ತಿಂಡಿಗಳಿಗೆ ಯಾವುದೇ ರೀತಿಯ ತೊಂದರೆಗಳು ಆಗಲಿಲ್ಲ.

ನಾವು ತಲುಪಿದ ಮರುದಿವಸ ಬೆಳಗ್ಗೆ ನಾವು ಪಾಟನ್ ಸಿಟಿ ಎಂಬ ಪುರಾತನ ಪಟ್ಟಣ ಮತ್ತು ಭಕ್ತಾಪುರ್ ಎಂಬ ದೇವಸ್ಥಾನ ಸಮುಚ್ಛಯಗಳನ್ನು ನೋಡಲು ಹೋದೆವು. ನವರಾತ್ರಿಯ ಸಮಯದಲ್ಲಿ ಹೆಚ್ಚಿನ ದೇವಸ್ಥಾನಗಳಲ್ಲಿ ಮಧ್ಯಾಹ್ನಕ್ಕೆ ಮೊದಲು ವ್ಯಾಪಕವಾಗಿ ಪ್ರಾಣಿ ಬಲಿಯ ಪೂಜೆ  ನಡೆಯುತ್ತವೆ- ಎಂಬ ವಿಚಾರ ನಮಗೆ ಮೊದಲಬಾರಿಗೆ ನಮ್ಮ ಗೈಡ್ ನಿಂದ ತಿಳಿದು ಬಂತು. ಏನೋ ಜನರಿಗೆ ಕಾಣದ ರೀತಿಯಲ್ಲಿ ಗುಟ್ಟಾಗಿ ಬಲಿಪೂಜೆಗಳು ನಡೆಯಬಹುದೆಂಬ ಮಿಥ್ಯ ಭಾವನೆ ಹೊಂದಿ ನಾವೆಲ್ಲರೂ ನಿರಾಳವಾಗಿ ಇದ್ದೆವು. ಆ ನಿರೀಕ್ಷೆ  ಕೆಲವೇ ನಿಮಿಷಗಳಲ್ಲಿ ಹುಸಿಯಾಯಿತು.

ಭಕ್ತಾಪುರದಲ್ಲಿ ನಾವು ನಮ್ಮ ಬಸ್ಸಿನಿಂದ಼ ಇಳಿಯುತ್ತಲೇ ಪಕ್ಕದಲ್ಲಿ ನಿಂತಿದ್ದ ಒಂದು ಬಸ್ಸಿನ ನೇಪಾಳೀ ಡ್ರೈವರ್ ತನ್ನ ಬಸ್ ಗೆ ಪೂಜೆ  ಮಾಡಲು ಶುರುಮಾಡಿದ್ದ. ಬಸ್ಸಿಗೆ ಹೂವು, ಕುಂಕುಮ ಏರಿಸಿ ಊದಿನ ಕಡ್ಡಿ ಹಚ್ಚಿ ಇನ್ನೇನು ತೆಂಗಿನಕಾಯಿ ಒಡೆಯಬಹುದು-  ಅಂದುಕೊಂಡರೆ,,,,, ಅಲ್ಲಿಗೆ ಒಂದು ಬಲವಾದ ಟಗರನ್ನು ತಂದು ನಾಲ್ಕು ಜನರು ಅದನ್ನು ಕುತ್ತಿಗೆ ಚಾಚುವಂತೆ ಗಟ್ಟಿಯಾಗಿ ಹಿಡಿದು ನಿಲ್ಲಿಸಿ ಕೊಂಡರು. ಆ ಡ್ರೈವರ್ ತನ್ನ ಕುಖ್ರಿಯನ್ನು ಝಳಪಿಸಿ ಒಂದೇ ಒಂದೇ ಬೀಸಿನಲ್ಲಿ ಅದರ ಕುತ್ತಿಗೆಯನ್ನು ಕಡಿದುಬಿಟ್ಟ!  ನಾವು ತಂಬಿಗೆಯಿಂದ ನೀರು ಚಿಮ್ಮಿಸುವ ರೀತಿಯಲ್ಲೇ ಆತ ಟಗರಿನ ಬಿಸಿರಕ್ತವನ್ನು ತನ್ನ ವಾಹನದ ಮುಂದಿನ ಬಂಪರಿಗೆ ಹಾರಿಸಿ ರಕ್ತ ಪ್ರೋಕ್ಷಣೆ ಮಾಡಿದ. ಟಗರಿನ ತಲೆಯನ್ನು ಒಂದು ತಟ್ಟೆಯಲ್ಲಿರಿಸಿ ತನ್ನ ಬಸ್ಸಿಗೆ ಒಂದು ಸುತ್ತು ಬರಿಸಿ ತಂದ!

ನನ್ನ ಸಹಧರ್ಮಿಣಿ ಈ ದೃಶ್ಯವನ್ನು ನೋಡಿ ಅವಾಕ್ಕಾದಳು. ಆಕೆಗೆ ಉಸಿರಾಡಲು ಕಷ್ಟ ಅನ್ನಿಸಿ ತಲೆ ಸುತ್ತಲಾರಂಭಿಸಿತು. ಸಹಪ್ರಯಾಣಿಕರಾಗಿದ್ದ ಕೆಲವೇ ಕೆಲವು ಭಾರತೀಯ ಮಹಿಳೆಯರು ಮತ್ತು ಕೆಲವು ವಿದೇಶೀಯರಿಗೆ ಕೂಡಾ ಇದೇ ರೀತಿಯ ಸಂಕಟ ಆಯಿತು. ನಮ್ಮ ಬಸ್ಸಿನಲ್ಲಿ ಬಂದಿರುವ ಮಹಿಳೆಯರು ಒಂದು ಗುಂಪಾಗಿ ನಮ್ಮ ಬಸ್ಸಿನ ಡ್ರೈವರನ್ನು ಘೇರಾಯಿಸಿ, “ನಾವು ಬಂದ ಬಸ್ಸಿಗೂ ಇದೇರೀತಿ ಪೂಜೆ ಮಾಡುವ ಕ್ರಮ ಇದೆಯೋ? ಈ ರೀತಿ ಪೂಜೆ ಮಾಡುವುದಾದರೆ ನಾವು ನಿನ್ನ ಬಸ್ಸಿನಲ್ಲಿ ಬರುವುದಿಲ್ಲ!” ಎಂದು ನಮ್ಮ ಬಸ್ಸಿನ ಡ್ರೈವರನನ್ನು ತರಾಟೆಗೆ ತೆಗೆದುಕೊಂಡೇಬಿಟ್ಟರು.

ಆಗ ನಮ್ಮ ಡ್ರೈವರ್, “ನಮ್ಮದು ಹೋಟೆಲಿನ ಕೋಚ್, ಇಂಟರ್ ನ್ಯಾಶನಲ್ ಪ್ರವಾಸಿಗಳು ಓಡಾಡುವ ಈ ಬಸ್ಸಿಗೆ ರಕ್ತಸಿಕ್ತ ಪೂಜೆ ಮಾಡಲು ನಮ್ಮ ಹೋಟೆಲಿನವರು ಒಪ್ಪಿಗೆ ನೀಡುವುದಿಲ್ಲ. ಮೇಲಾಗಿ ನಾನು ನೇಪಾಳೀ ಪಂಡಿತ್ (ಬ್ರಾಹ್ಮಣ). ನಾನು ಸಸ್ಯಾಹಾರಿ. ಪ್ರಾಣಿಹಿಂಸೆಯನ್ನು  ಮಾಡಬಾರದು ಎಂದು ವೈಯ್ಯಕ್ತಿಕವಾಗಿ ಹೇಳುವವನು ನಾನು. ಈಗ ನಾನು ನನ್ನ ಬಸ್ಸನ್ನು ಸ್ವಲ್ಪ ದೂರಕೊಂಡು ಹೋಗಿ ನಿಲ್ಲಿಸುತ್ತೇನೆ. ಇಂತಹಾ ಬಲಿಪೂಜೆಗಳು ಈ  ಭಕ್ತಾಪುರ ಮಂದಿರಗಳ ಸಮುಚ್ಛಯಗಳಲ್ಲಿ  ಇಂದು ವ್ಯಾಪಕವಾಗಿ ನಡೆಯುತ್ತವೆ. ನಿಮಗೆ ಈ ರೀತಿಯ ಪೂಜೆಗಳನ್ನು ನೋಡಲು ಇಷ್ಟ ಇಲ್ಲದೇ ಇದ್ದರೆ, ದಯವಿಟ್ಟು ನಮ್ಮ ಬಸ್ಸಿನಲ್ಲೇ ಕುಳಿತುಕೊಳ್ಳಿರಿ. ಈ ಐತಿಹಾಸಿಕ ದೇವಸ್ಥಾನಗಳನ್ನು ಮತ್ತು ಬಲಿ ಪೂಜೆಗಳನ್ನು ನೋಡುವ ಇಚ್ಛೆಯುಳ್ಳವರು ನೋಡಿಕೊಂಡು ಬರಲಿ.

ಕುಮಾರಿ ಪ್ಯಾಲೇಸ್

ನಮ್ಮ ಹೋಟೆಲಿನಲ್ಲಿ ದೊರಕುವ ನೇಪಾಳದ ಗೈಡ್ ಪುಸ್ತಕದಲ್ಲಿ ಈ ಮಂದಿರಗಳ ಎಲ್ಲಾ ಕೆತ್ತನೆ, ವಿನ್ಯಾಸ ಮತ್ತು ಮೂರ್ತಿಗಳ ವಿವರಗಳೂ  ತಮಗೆ ಸಿಗುತ್ತದೆ. ನಮ್ಮ ನವರಾತ್ರಿಯ ಪೂಜಾ ವಿಧಾನವೇ ಹೀಗೆ.  ನವರಾತ್ರಿಯ ಸಮಯದಲ್ಲಿ ಬಲಿಪೂಜೆಗಳು ನಡೆಯಲೇಬೇಕು! ಉಳಿದ ದಿನಗಳಲ್ಲಿ ಈ ತರಹದ ವ್ಯಾಪಕವಾದ ಪ್ರಾಣಿಬಲಿಯನ್ನು ನೀವಿಲ್ಲಿ ಕಾಣಲಾರಿರಿ.

ಆದರೆ, ಹೆಚ್ಚಿನ ಪ್ರವಾಸಿಗಳು ಈ ಪ್ರಾಣಿ ಬಲಿಯ ವಧೆಗಳನ್ನು ನೋಡಿ ಟಿಪ್ಪಣಿ ಬರೆದುಕೊಳ್ಳಲು ಅಥವಾ ಚಿತ್ರೀಕರಣ ಅಥವಾ ವಿಡಿಯೋ ಮಾಡಿಕೊಳ್ಳುವ ಸಲುವಾಗೇ ಈ “ದಶೈನ್” ಸಮಯದಲ್ಲಿ ನೇಪಾಳಕ್ಕೆ ಬರುತ್ತಾರೆ. ದಯವಿಟ್ಟು ನೀವು ನಿರಾಶರಾಗಬೇಡಿ. ನೀವುಗಳು ದೂರದಿಂದಲೇ ಬಸ್ಸಿನಲ್ಲಿ ಕುಳಿತು ಚಾರಿತ್ರಿಕ ದೇವಸ್ಥಾನಗಳನ್ನು ಹೊರಗಿನಿಂದಲೇ ನೋಡಿ. ಪ್ರಾಣಿ ವಧೆ ಇಲ್ಲದ ಜಾಗಗಳು ಬಂದಾಗ ನಾನು ತಮಗೆ ಖುದ್ದಾಗಿ ತಿಳಿಸುತ್ತೇನೆ. ತಮ್ಮಲ್ಲಿ ಇನ್ನೊಂದು ವಿನಮ್ರ ವಿನಂತಿ ಇದೆ. ಈ ಪ್ರಾಣಿವಧೆಯ ಬಲಿ ಪೂಜೆಗಳ ಬಗ್ಗೆ ನೇಪಾಳಿಗಳ ಇದುರು ಅಸಹ್ಯ ಭಾವನೆಗಳನ್ನು  ವ್ಯಕ್ತ ಪಡಿಸಬೇಡಿರಿ. ಹಾಗೇನಾದರೂ ಮಾಡಿದರೆ, ನಮ್ಮ ಜನರಿಗೆ  ಬೇಸರವಾಗುತ್ತದೆ. ದಯವಿಟ್ಟು ಗಟ್ಟಿಯಾಗಿ ಕಮೆಂಟ್ ಮಾಡಬೇಡಿ. ನೇಪಾಳದ ಸಜ್ಜನರಿಗೆ ಇದರಿಂದ ತುಂಬಾ ಸಿಟ್ಟೇ ಬರಬಹುದು. ಇದು ನಮ್ಮ “ದಶೈನ್” ಹಬ್ಬದ ದಿನಗಳ ಪೂಜಾ ವಿಧಾನ. ಇದು ನಮ್ಮ ಜೀವನರೀತಿ. ದಯವಿಟ್ಟು ಸಹಕರಿಸಿ” ಎಂದು ಕೈಮುಗಿದು ಕೇಳಿಕೊಂಡ.

ಪೆಜತ್ತಾಯ ನೇಪಾಲೀ ನವರಾತ್ರಿ 3:ನೆತ್ತರ ಕಂಡು ಹೌಹಾರಿ

ಭಕ್ತಾಪುರದ ದೇವಳದ ಸಮುಚ್ಛಯದಲ್ಲಿ  ಅಲ್ಲಲ್ಲಿ  ಮಡುಗಟ್ಟಿದ್ದ ರಕ್ತದ ಕಲೆಗಳನ್ನು  ಕಂಡ ಕೆಲವು ಗಂಡಸರು ಮತ್ತು ಹೆಂಗಸರು ಮುಖ ಸಿಂಡರಿಸುತ್ತಾ  ಹಿಂದಿರುಗಿ ಬಂದು ಬಸ್ಸಿನಲ್ಲಿ ಕುಕ್ಕರಿಸಿದರು.
ಸಸ್ಯಾಹಾರಿಯಾದರೂ,  ನಾನೊಬ್ಬ ಭಂಡನಂತೆ ಬೆರಳೆಣಿಕೆ ಗಂಡಸರು ಮತ್ತು  ಇಬ್ಬರು ಮಹಿಳೆಯರೊಂದಿಗೆ ಭಕ್ತಾಪುರದ ದೇವಸ್ಥಾನಗಳ ಸಮುಚ್ಛಯಗಳ ಕಡೆಗೆ  ಕಾಲು ಹಾಕಿದೆ. ಆ  ಇಬ್ಬರು ಮಹಿಳೆಯರಲ್ಲಿ ಒಬ್ಬರು  ಅಮೆರಿಕನ್ ಬಯಾಲಾಜಿಸ್ಟ್  ಮತ್ತು ಇನ್ನೊಬ್ಬರು  ಆಸ್ಟ್ರೇಲಿಯನ್ ವೆಟೆರಿನರಿ ಡಾಕ್ಟರ್.ಮುಂದೆ ಸಾಗಿದಂತೆ  ಎಲ್ಲೆಲ್ಲೂ  ಕೊಳೆತ  ರಕ್ತದ ವಾಸನೆ.  ನೆಲದ ತುಂಬಾ ಹೆಪ್ಪುಗಟ್ಟಿದ್ದ ರಕ್ತದ ಕಲೆಗಳು. ಆ ಕಲೆಗಳನ್ನು ತಪ್ಪಿಸಿ  ಬರಿಕಾಲಿನಲ್ಲಿ ಹೆಜ್ಜೆ ಇಡುತ್ತಾ ನಡೆಯುವ ಪ್ರಯತ್ನದಲ್ಲಿದ್ದ ನನಗೆ  ಅಲ್ಲಿನ  ಕಟ್ಟಡಗಳ ವಾಸ್ತು ಸೌಂದರ್ಯ ಅಥವಾ ಶಿಲ್ಪಕಲೆಗಳು  ಕಣ್ಣಿಗೆ  ಗೋಚರಿಸಲೇ ಇಲ್ಲ !
ಆ ಬೆಳಗಿನ ಹನ್ನೊಂದು ಗಂಟೆಯ ಹೊತ್ತು, ನಮ್ಮ ಪ್ರವಾಸೀ ಗುಂಪು ಒಂದು ವಿಶಾಲವಾದ ಅಂಗಣವನ್ನು ದಾಟಿ ಮುಂದೆ  ಸಾಗಿತು. ಅಲ್ಲಿದ್ದ ಹಲವಾರು ಗುಡಿಗಳ ಮುಂದೆ  ಮುಂದೆ ಅಸಂಖ್ಯ ಕೋಳಿ, ಬಾತು. ಟಗರು  ಮತ್ತು ಹೋತಗಳ  ಬಲಿ ನಡೆದಿತ್ತು.
ಹಲವರು ಕೋಣಗಳ ಕುತ್ತಿಗೆಯ ಹಗ್ಗವನ್ನು  ಹಿಡಿದು ನಿಂತಿದ್ದರು. ನಾವು ನೋಡುತ್ತಾ ಇದ್ದಂತೆ  ಒಂದು ವಧಾ ಸ್ಥಾನದ ಇದುರು  ಕೆಲವು ಜನರು  ಒಂದು  ಕೊಬ್ಬಿದ ಕೋಣವನ್ನು  ಅದರ ಬಾಲ ಮತ್ತು  ಕೊರಳಿನ ಹಗ್ಗ   ಜಗ್ಗಿ  ಗಟ್ಟಿಯಾಗಿ ಹಿಡಿದರು.
ನಾನೂ ಇತರರೊಂದಿಗೆ ನನ್ನ  ವಿಡಿಯೋ ಕ್ಯಾಮೆರಾವನ್ನು ಆ ಕಡೆ ತಿರುಗಿಸಿ ಹಿಡಿದೆ.  ಕೋಣದ  ಕತ್ತಿನ ಬಳಿ ನಿಂತಿದ್ದ ಒಬ್ಬ ಮನುಷ್ಯನ ಕುಖ್ರಿ ಮಿಂಚಿನಂತೆ  ಬೀಸಿತು.
ಕ್ಷಣಾರ್ಧದಲ್ಲಿ ಮಹಿಷಾಸುರನ ವಧೆ ಆಗಿ ಹೋಗಿತ್ತು!
ಹಸಿರು ನೆತ್ತರು ಕುಂಕುಮದಿಘ್ಮೂಡನಾದ ನಾನು ನನ್ನ ಕೈಯ್ಯ ಲ್ಲಿದ್ದ  ವಿಡಿಯೋ ಕ್ಯಾಮೆರಾವನ್ನು ಮರೆತು  ನನ್ನ ತಲೆಯ  ಮೇಲೆ ನನ್ನ  ಎರಡೂ ಕೈಗಳನ್ನು  ಹಿಡಿದುಕೊಂಡೆ. “ಅಯ್ಯೋ!” ಎನ್ನುವ ಉದ್ಗಾರ ನನಗರಿವಿಲ್ಲದೇ ನನ್ನ  ಗಂಟಲಿನಿಂದ ಹೊರಬಿತ್ತು.
ಅದ್ದೃಷ್ಟವಶಾತ್  ನನ್ನ ಕ್ಯಾಮೆರಾಕ್ಕೆ   ಬೆಲ್ಟ್ ಇದ್ದ ಕಾರಣ ಅದು  ನೆಲಕ್ಕೆ  ಬೀಳಲಿಲ್ಲ.
ಕೋಣದ  ವಧೆಯ ಚಿತ್ರೀಕರಣ ಮಾಡವಲ್ಲಿ  ನಾನು  ಸಂಪೂರ್ಣ ವಿಫಲನಾಗಿದ್ದೆ!
ಸತ್ತ ಕೋಣದ ರುಂಡ  ರಹಿತ ದೇಹವನ್ನು  ಆ ಜನರು ಒಂದು ಕೈಗಾಡಿಯಲ್ಲಿ  ಇರಿಸಿ ದೂರ ಸಾಗಿಸಿದರು. ಪ್ರಾಣಿ ವಧೆ ಮಾಡಿದ ಜನರು ಅ  ಕೋಣದ ಶಿರಭಾಗವನ್ನು ತಟ್ಟೆಯೊಂದರಲ್ಲಿ ಇಟ್ಟು ಗುಡಿಗೆ  ಪ್ರದಕ್ಷಿಣೆ ಬಂದರು.
ಇದನ್ನೆಲ್ಲಾ ಪ್ರತ್ಯಕ್ಷ ಕಂಡ ನನ್ನ ಮೈ ಸಂಕಟದಿಂದ ನಡುಗಿತು. ತಲೆ ಸುತ್ತಿ ಬಂತು!
ಅಲ್ಲಿ ನಿಲ್ಲಲಾರದೇ ನಾನು ನಮ್ಮ ಬಸ್ಸಿನ ಕಡೆಗೆ ನಡೆದೆ. ನನ್ನ ಮೈಯೆಲ್ಲಾ ಬೆವತು ಹೋಗಿತ್ತು . ನನ್ನ ಕೈಕಾಲು ಗಳು ನಿತ್ರಾಣವಾದಂತಾಗಿ ನಡುಗುತ್ತಾ ಇದ್ದುವು.
ನನ್ನಂತೆಯೇ ವಿಚಿತ್ರ ಸಂಕಟವನ್ನು  ಅನುಭವಿಸುತ್ತಾ ಇದ್ದ ನಮ್ಮ ಗುಂಪಿನ ಬಹಳಷ್ಟು ಜನರು ನನ್ನೊಡನೆ ವಾಪಸ್ ಬಸ್ಸಿಗೆ ಹೊರಟಿದ್ದರು.
ಸ್ವಲ್ಪ ಹೊತ್ತಿನಲ್ಲೇ ಉಳಿದ ಪ್ರವಾಸಿ ಜನರೂ ಬಂದು ಬಸ್ಸಿನಲ್ಲಿ ಕುಳಿತರು. ಎಲ್ಲರೂ ಬಸವಳಿದಂತೆ ಕಾಣುತ್ತಿದ್ದರು. ಯಾರ ಮುಖದಲ್ಲೂ ಸಂತೋಷದ ಚಿಹ್ನೆ  ಕಾಣುತ್ತಿರಲಿಲ್ಲ.
ನನ್ನ ಅನಿಸಿಕೆ:
ತಲತಲಾಂತರದಿಂದ ನಡೆದುಬಂದ ಈ ರಕ್ತದ ಓಕುಳಿಯಿಂದ ನೇಪಾಳಿಗಳ ಮನ ಗಟ್ಟಿ ಆಗಿದೆ – ಅಂತ ನನ್ನ ಅನಿಸಿಕೆ.

ದಶೈನ್ ದಿನಗಳಲ್ಲಿ ಕಠ್ಮಂಡುಈ ದಶೈನ್ ಹಬ್ಬದ ಸಮಯ ಕ್ಷತ್ರಿಯ ಮತ್ತು ರೈತವರ್ಗದ ಜನರಿಗೆ ಈ ಪ್ರಾಣಿಬಲಿ ಕಡ್ಡಾಯ  ಅಂತೆ!
ನೇಪಾಳದ ಬಡ ಜನರು  ಕೋಳಿ ಬಾತುಗಳ ಬಲಿಕೊಟ್ಟರೆ  ಮಧ್ಯಮ ವರ್ಗದವರು  ಟಗರು ಅಥವಾ ಹೋತಗಳ ಬಲಿ ಕೊಡುತ್ತಾರಂತೆ.
ಉಳ್ಳವರು  ಮಹಿಷ  ಬಲಿ  ಪೂಜೆ ಕೊಡುವುದು  ನೇಪಾಳದ ಜನರ ಸಂಪ್ರದಾಯವಂತೆ.
ಈ ತರಹದ ರಕ್ತಪಾತಗಳನ್ನು ಪದೇ ಪದೇ  ಕಂಡು ಈ ಪರ್ವತ ಪ್ರಾಂತ್ಯದ ಕಷ್ಟ ಸಹಿಷ್ಣು ಜನರ ಮನಸ್ಸು ಗಟ್ಟಿಯಾಗಿ ಅವರು ಜಗತ್ತಿನ ಅತ್ಯುತ್ತಮ ಸೈನಿಕರೆನ್ನಿಸಿಕೊಂಡಿದ್ದಾರೆ   — ಎನ್ನುವುದು ಸಮಾಜ ಶಾಸ್ತ್ರದ ವಿಧ್ಯಾರ್ಥಿಯಾದ ನನ್ನ  ಅನಿಸಿಕೆ.

 

 

ಪೆಜತ್ತಾಯ ನೇಪಾಳೀ ನವರಾತ್ರಿ೪:ಕಂಡರೂ ಕಾಣದ ಅಡಿಗಳು

ಅಲ್ಲಿಂದ ನಮ್ಮ ಬಸ್ ಪ್ರಾಣಿವಧೆಯ  ಪದ್ಧತಿ ಇಲ್ಲದ ಪಶುಪತಿ ದೇವಸ್ಥಾನದ ಕಡೆಗೆ ಓಡಿತು.  ಅಲ್ಲಿ ಎಲ್ಲರೂ  ಇಳಿದು ಬಾಗ್ಮತೀ ನದೀ ತೀರದ  ಪಶುಪತೀ ನಾಥ ಮಂದಿರ ಹೊಕ್ಕು ದರ್ಶನ ಪಡೆದೆವು. ಪಶುಪತೀ ಮಂದಿರದ ಸಹಾಯಕ ಅರ್ಚಕರು  ಅಲ್ಲಿ ತೀರ್ಥ ಕೊಡುತ್ತಾ ಇದ್ದರು.
ಅವರನ್ನು ನಾನು ಹಲವು ಬಾರಿ ಬೆಂಗಳೂರಿನಲ್ಲಿ ಕಂಡಿದ್ದೆ. ಅವರ ಹೆಸರು ಅಡಿಗಳು.
ಅವರು  ಭಾರತಕ್ಕೆ ಬಂದಾಗ  ನಮ್ಮ ಬೆಂಗಳೂರಿನ ಮನೆಗೆ  ಬಂದು ನಮಗೆ ಪಶುಪತಿ ನಾಥನ ಪ್ರಸಾದ ಕೊಡುತ್ತಿದ್ದ ವ್ಯಕ್ತಿ.
ನಾನು  ಅವರನ್ನು ಕನ್ನಡದಲ್ಲಿ ಮಾತನಾಡಿಸಿದಾಗ ಅವರು ಕನ್ನಡ ಅರ್ಥವಾಗದಂತೆ  ನಟಿಸಿದರು.
ದೇವಸ್ಥಾನದ ಸೆಕ್ಯೂರಿಟಿಯವರ ವಿಧೇಯಕವೋ, ಅಥವಾ ನಾವೇನಾದರೂ ಅವರಲ್ಲಿ ಹೆಚ್ಚಿನ ಫೇವರ್ ಕೇಳಬಹುದು ಎಂಬ ಆತಂಕವೋ? –  ಅವರನ್ನು  ಆ ರೀತಿ  ವರ್ತಿಸಲು ಪ್ರೇರೇಪಿಸಿರಬಹುದು.  ನಾನಂತೂ ಆ   ಬಗ್ಗೆ ಕಳವಳ ಗೊಳ್ಳಲಿಲ್ಲ.
ಪಶುಪತಿನಾಥ ದೇಗುಲಅವರು ಆ  ರೀತಿ ವರ್ತಿಸಿದ ನಂತರ, ನಾನೂ ಅವರ ಪರಿಚಯಲ್ಲದ ಯಾತ್ರಾರ್ಥಿಯಂತೆಯೇ ವರ್ತಿಸಿದೆ.
ನನ್ನ ಯೋಗ್ಯತಾನುಸಾರ ಪಶುಪತಿ ನಾಥರಿಗೆ ಕಾಣಿಕೆ ಹಾಕಿ ಅರ್ಚಕರಿಗೆ  ದಕ್ಷಿಣೆ ನೀಡಿದೆ.
ತೀರ್ಥ ಪ್ರಸಾದ ಕೊಟ್ಟರು. ಮೌನವಾಗಿ  ಕೈ ಮುಗಿದು ನಾವು ಮಂದಿರದಿಂದ ಹೊರ ಬಂದೆವು.
ಪಶುಪತೀ ನಾಥ  ಮಂದಿರದ ಹೊರಗೆ  ಧ್ವಜ ಸ್ಥಂಭದ ಬಳಿಯಲ್ಲಿ ಮಂಡಿಯೂರಿ  ಕೈಮುಗಿಯುತ್ತಿವ  ನೇಪಾಳದ ಒಬ್ಬ ಮಹಾರಾಜರ ಶಿಲ್ಪ  ತುಂಬಾ ಚೆನ್ನಾಗಿದೆ.
ಮುಂದಕ್ಕೆ  ಈ ಸುಂದರ ದೇವಸ್ಥಾನದ ಪರಿಸರದಲ್ಲಿಯೂ ನಮ್ಮ ಗೈಡ್ ನನ್ನ  ಸಹಧರ್ಮಿಣಿಯ ಮೂಡ್ ಕೆಡಿಸಿದ!
“ಬನ್ನಿ ! ಬನ್ನಿ!”ಎನ್ನುತ್ತಾ  ನಮ್ಮನ್ನು  ಆ  ಮಂದಿರದ ಬಳಿಯ  ಚಿಕ್ಕ  ಸೇತುವೆ  ಒಂದನ್ನು ದಾಟಿಸುತ್ತಾ  ಅತ್ಯುತ್ಸಾಹದಿಂದ  “ ನಾವು ಈಗ ಬಾಗ್ಮತೀ ನದೀ ತೀರಕ್ಕೆ  ಹೋಗೋಣ!”  ಅಂತ ಕರೆದುಕೊಂಡು ಹೋದ.
ನದೀ ತೀರದಲ್ಲಿ ಏನೋ ವಿಚಿತ್ರ ಇರಬೇಕು! ಅಂತ  ನಾವು ಕುತ್ತಿಗೆ ಉದ್ದ ಮಾಡಿಕೊಂಡು  ಆತನ ಹಿಂದೆ ನಡೆದೆವು.
ಅಲ್ಲಿ ನಮಗೆ ಆತ ತೋರಿಸಿದ್ದು ಅಲ್ಲಿ  ಸಾಲಾಗಿ  ಧಗಧಗನೆ ಉರಿಯುತ್ತಿದ್ದ  ಮನುಷ್ಯರ ಅಂತ್ಯ ಸಂಸ್ಕಾರದ ಚಿತೆಗಳನ್ನು!
ನಮ್ಮ ಜತೆ ಬಂದ ವಿದೇಶೀಯರು  ತಮ್ಮ ಕ್ಯಾಮೆರಾಗಳನ್ನು ಹೊರತೆಗೆದು ಅವರಿಗೆ ಅಪರೂಪವಾದ ಆ  ದೇಹ ದಹನದ ದೃಶ್ಯವನ್ನು ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು!
ಅವರಿಗೆ  ಮನುಷ್ಯನ ಹೆಣವನ್ನು ದಹನ ಮಾಡುವುದು ಕಂಡರಿಯದ ಸಂಗತಿ!
ನನ್ನ ಹೆಂಡತಿ ಮಕ್ಕಳು “ ನೇಪಾಳಕ್ಕೆ ಬಂದುದಕ್ಕೆ ಇಂದು ನಮಗೆ ಪಶುಪತೀ ದರ್ಶನ ಆಯಿತಲ್ಲಾ!  ಇನ್ನು ಸಾಕಪ್ಪಾ ಸಾಕು ಈ ನೇಪಾಳ ದ ಪ್ರವಾಸ !” ಅಂದರು.
ಮರುದಿನದಿಂದ ಖಟ್ಮಂಡುವಿನ ಸುತ್ತ ಮುತ್ತಣದ ಎರಡನೇ ದಿನದ ಪ್ರವಾಸಕ್ಕೆ ನನ್ನ ಹೆಂಡತಿ ಮಕ್ಕಳು ಗೈರು!
ನನ್ನ ಹೆಂಡತಿ  ಮಕ್ಕಳು ನಮ್ಮ ರೂಮಿನಿಂದಲೇ ದೊಡ್ದ ಗಾಜಿನ ಕಿಟಿಕಿಯ ಮೂಲಕ  ಕಾಣುತ್ತಿದ್ದ ಹಿಮ ಹೊತ್ತ ಅನ್ನಪೂರ್ಣಾ ಪರ್ವತಾವಳಿಯ  ಸೊಬಗನ್ನು ವೀಕ್ಷಿಸುತ್ತಾ ನೇಪಾಳ ಪ್ರವಾಸದ ಬಗ್ಗೆ  ನಮ್ಮ ಹೋಟೆಲಿನಲ್ಲೇ ದೊರಕುತ್ತಾ ಇದ್ದಹಲವು ಪುಸ್ತಕಗಳನ್ನು ಕೊಂಡು ಓದುತ್ತಾ ಆರಾಮ ಆಗಿ  ಫೈವ್ ಸ್ಟಾರ್ ಹೋಟೆಲಿನ ಆತಿಥ್ಯ ವನ್ನು ಅನುಭವಿಸುತ್ತಾ  ತಮ್ಮ  ರೂಮುಗಳಲ್ಲೇ  ಕುಳಿತರು.
ಖಟ್ಮಂಡು ಲೋಕಲ್ ಪ್ರವಾಸದ ಎರಡು ದಿನದ ಪ್ಯಾಕೇಜಿಗೆ ಮೊದಲೇ ಹಣ ಸಲ್ಲಿಸಿದ್ದ ನಾನು ನಾಲ್ಕು ಜನರ ಪ್ರವಾಸದ ಹಣ ಕೊಟ್ಟ  ಕರ್ಮಕ್ಕೆ   ಒಬ್ಬನಾದರೂ ಪ್ರವಾಸಮಾಡದೇ ಬಿಡಲಾರೆ ! – ಎನ್ನುತ್ತಾ ಮರುದಿನವೂ ಸಂದರ್ಶನದ ಬಸ್ ಹತ್ತಿದೆ.
ಎರಡನೇ ದಿವಸದ  ಪ್ರವಾಸಕ್ಕೆ ಬಹಳಷ್ಟು ಜನ ಭಾರತೀಯ ಹೆಂಗಸರು ಮತ್ತು ಮಕ್ಕಳು  ಬಸ್ ಏರದೇ ಹೋಟೆಲಿನಲ್ಲೇ ಉಳಿದಿದ್ದರು. ನಲವತ್ತು ಜನರ ಬಸ್ಸು  ಅರ್ಧದಷ್ಟು ಖಾಲಿ ಆಗಿತ್ತು.
ಆ ದಿನ ನಮ್ಮ ಡ್ರೈವರ್ ರಕ್ತದ ಓಕುಳಿ ಇಲ್ಲದ  ಸ್ವಯಂಭುನಾಥ ಸ್ತೂಪಕ್ಕೆ ಕರೆದುಕೊಂಡು ಹೋದ.
365 ಮೆಟ್ಟಿಲುಗಳನ್ನು ಹತ್ತಿ  ಈ ಸುಂದರವಾದ ಸ್ತೂಪವನ್ನು ತಲುಪಿ ನೋಡಿದಾಗ ಮೆಟ್ಟಿಲು ಹತ್ತಿ ಬಂದ ಆಯಾಸವೆಲ್ಲಾ ಪರಿಹಾರ ಆಯಿತು.
ಈ ಎತ್ತರದ ಜಾಗದಲ್ಲಿ ಸ್ವಯಂಭುನಾಥ ಅಥವಾ ಬುದ್ಧ ದೇವನು ಲೋಕದ ನಾಲ್ಕು ದಿಕ್ಕುಗಳನ್ನೂ ನೋಡುವನು ಮತ್ತು ಜಗತ್ತಿನ ಎಲ್ಲಾ ಒಳ್ಳೆಯದು ಮತ್ತು ಕೆಡುಕುಗಳನ್ನು ಪರಾಂಬರಿಸುವನು   ಎಂಬ ಅಭಿಪ್ರಾಯವನ್ನು ಬಿಂಬಿಸಲು ಸ್ತೂಪದ ಶಿಖರದಲ್ಲಿ ಸುಂದರವಾದ ನಾಲ್ಕು ಜತೆ ಕಣ್ಣುಗಳು ಚಿತ್ರಿತವಾಗಿವೆ.
ಸ್ವಯಂಭುನಾಥನ ನೆಲೆಯಿಂದ ದಕ್ಷಿಣಕಾಳಿ ಎಂಬ  ಕಾಳಿಯ ಮಂದಿರದ ಕಡೆಗೆ ನಮ್ಮ ಬಸ್ಸು ಸಾಗಿತು.
ದಕ್ಷಿಣ ಕಾಳಿಯ ಮಂದಿರದಲ್ಲೂ  ವ್ಯಾಪಕ ಪ್ರಾಣಿಗಳ ವಧೆ ಇದೆ ! – ಅಂತ ಡ್ರೈವರ್ ನಮಗೆ ಮೊದಲೇ ತಿಳಿಸಿದ.
ಎಲ್ಲ ಪ್ರಯಾಣಿಕರೂ ಈ ವಧೆಗಳನ್ನು ನೋಡಲು ತಮಗೆ ಇಷ್ಟ ಇಲ್ಲ  ! – ಎಂದು ಒಕ್ಕೊರಳಿನಲ್ಲಿ ತಿಳಿಸಿದರು.
ನಮ್ಮ ಬಸ್ ಡ್ರೈವರನು  ಅ ಮಂದಿರವು  ಬಹಳ ಸುಂದರ ಜಾಗದಲ್ಲಿ ಇದೆ . ಅದನ್ನು ದೂರದಿಂದಲೇ ನೋಡಿ,  ಹಿಂದೆ  ಬರುವ ದಾರಿಯಲ್ಲಿ ಇರುವ ಬೌದ್ಧ  ಲಾಮಾಗಳ ಮಠವನ್ನು ನೋಡಿ ಬರೋಣ! –  ಎಂದು ಸೂಚಿಸಿದ.
ಬೌದ್ಧ ಮಠನಮ್ಮ ಬಸ್ ಬಹು ಸುಂದರವಾದ ಪರ್ವತ ಕೊಳ್ಳಗಳ  ರಸ್ತೆಯಲ್ಲಿ ಸಾಗಿ ಭತ್ತ ಮತ್ತು ಬಾರ್ಲಿಯ ಹೊಲಗಳನ್ನು ಹಾದು   ದಕ್ಷಿಣ ಕಾಳಿಯ ಮಂದಿರದ  ದರ್ಶನವನ್ನು ದೂರದಿಂದಲೇ ಮಾಡಿಸಿತು. ಹಿಂದಿರುಗುವ ದಾರಿಯಲ್ಲಿದ್ದ   ಬೃಹತ್ ಬೌದ್ಧ ಮಠವನ್ನು ಸೇರಿತು. ಅಲ್ಲಿ ನೂರಾರು ಮಂದಿ ಬೌದ್ಧ ಲಾಮಾಗಳು  ಚಿತ್ತಾರ  ಉಳ್ಳ  ಲೋಹದ ಚಿಕ್ಕ  ಚಿಕ್ಕ   ಪ್ರಾರ್ಥನಾ ಕೈಗಂಟೆಗಳು ಹಾಗೂ ಬಹು ದೊಡ್ದ ಲೋಹನಿರ್ಮಿತ ಪ್ರಾರ್ಥನಾ ಗಂಟೆಗಳನ್ನು ಗರಗರನೆ ತಿರುಗಿಸುತ್ತಾ ಮೆಲುದನಿಯ  ಓದು ಮತ್ತು ಪ್ರಾರ್ಥನೆಗಳಲ್ಲಿ ತಲ್ಲೀನರಾಗಿದ್ದರು. ನಾವು ಕೂಡಾ ಸಾಲಾಗಿರಿಸಿದ್ದ ಆ ದೊಡ್ದ ದೊಡ್ದ ಪ್ರಾರ್ಥನಾ ಗಂಟೆಗಳನ್ನು  ತಿರುಗಿಸಿ  ‘ಮಣಿ ಪದ್ಮೇ ಹೂಮ್ ’ ಎನ್ನುತ್ತಾ  ಕೈ ಮುಗಿದೆವು.
ಆ ಮಠದ ಆವರಣವು  ತುಂಬಾ ಅಚ್ಚುಕಟ್ಟಾಗಿದ್ದು ಬಹು ಪ್ರಶಾಂತವಾಗಿತ್ತು. ಮಠದ ಪರಿಸರ ಇರುವ ಕೊಳ್ಳ ವು ಕೂಡಾ ಬಹು ಮನಮೋಹಕವಾಗಿತ್ತು.

ನೇಪಾಳೀ ನವರಾತ್ರಿ-5: ನಭದಿಂದ ಕಂಡ ಗೌರಿಶಂಕರ

ಹೋಟಲಿನ ಐದಾರು ಎಕರೆ ವಿಸ್ತೀರ್ಣದ ವಿಶಾಲ ಕಾಂಪೌಂಡ್ ಬಿಟ್ಟು ಹೊರಬರಲು ಮೀನ ಮೇಷ ಎಣಿಸುತ್ತಾ ನವರಾತ್ರಿಯ ದಿನಗಳನ್ನು ಕಳೆಯಬೇಕಿದ್ದ ನನ್ನ ಹೆಂಡತಿ ಮಕ್ಕಳ ಎದುರು ನಾನು ಇನ್ನೊಂದು ಒಂದು ಪ್ರವಾಸದ ಯೋಜನೆ ಇರಿಸಿದೆ. “ನಾವೀಗ ಹೇಗೂ ನೇಪಾಳಕ್ಕೆ ಬಂದಿದ್ದೇವೆ. ‘ಹಿಮಾಲಯ ದರ್ಶನ್’ ಎಂಬ ಮುಕ್ಕಾಲರಿಂದ ಒಂದು ಗಂಟೆಯ ಅವಧಿಯ ನಿಕಾನ್ ಏರ್ಲೈನ್ಸ್  ಅವರ ವಿಮಾನ ಹಾರಾಟದ ಟಿಕೆಟ್ ಖರೀದಿಸಿ ಹಿಮಾಲಯ ದರ್ಶನ ಮಾಡಿಬರೋಣ. ಹಿಮವಂತನ ನಾಡಿಗೆ ಬಂದು ಅವನ ದರ್ಶನ ಮಾಡದೇ ಹೇಗೆ ವಾಪಸಾಗುವುದು?” ಎನ್ನುತ್ತಾ ಅವರನ್ನು ಒಪ್ಪಿಸಿದೆ.

ಸಪ್ತಮಿಯ ದಿನದ ಹಿಮಾಲಯ ದರ್ಶನ ಹಾರಾಟಕ್ಕೆ ನಮಗೆ ವಿಮಾನದ ಟಿಕೆಟ್ ಗಳು ದೊರಕಿದುವು. ಬೆಳಗಿನ ಆರು ಗಂಟೆಗೆ ನಾವು ಹೋಟೆಲ್ ಬಿಟ್ಟು ತ್ರಿಭುವನ್ ವಿಮಾನ ನಿಲ್ದಾಣದ ದೇಶೀಯ ವಿಭಾಗಕ್ಕೆ ಹೊರಟೆವು. ಸುಮಾರು ಏಳುಗಂಟೆಯ ಹೊತ್ತಿಗೆ ಮಂಜು ಕರಗಿ ಬಿಸಿಲು ಬಂತೆಂದು ಹವಾಮಾನ ಇಲಾಖೆಯಿಂದ ಸೂಚನೆ ಸಿಕ್ಕಿತು. ಈ ಸೂಚನೆ ಬಂದೊಡನೆಯೇ ವಿಮಾನ ನಿಲ್ದಾಣದ ATC (ಏರ್ ಟ್ರಾಫಿಕ್  ಕಂಟ್ರೋಲ್) ನಮ್ಮ ಹಾರಾಟಕ್ಕೆ ಅನುಮತಿ ಕೊಟ್ಟಿತು. ಹದಿನೆಂಟು ಸೀಟುಗಳ ಚಿಕ್ಕ ಡೋರ್ನೀಯರ್ 228 ವಿಮಾನದಲ್ಲಿ ಪ್ರತೀ ಪ್ರಯಾಣಿಕರಿಗೂ ಕಿಟಕಿಯ ಬದಿಯ ಸೀಟ್ ಕೊಡಲ್ಪಟ್ಟಿತ್ತು. ಎಡಬದಿಯ ಒಂಬತ್ತು ಸೀಟು ಮತ್ತು ಬಲಬದಿಯ ಒಂಬತ್ತು ಸೀಟುಗಳ ಬಳಿ ವಿಶಾಲವಾದ ಗಾಜಿನ ಕಿಟಕಿಗಳಿದ್ದವು. ವಿಮಾನಕ್ಕೆ ಇಬ್ಬರು ಪೈಲಟ್ ಗಳು ಮತ್ತು ಒಬ್ಬ ಪರಿಚಾರಿಕೆ (ಗಗನ ಸಖಿ) ಇದ್ದರು. ಈ ವಿಮಾನದ ವಿಶೇಷ ಏನೆಂದರೆ ಈ  ವಿಮಾನದ ಪ್ರಯಾಣಿಕರಿಗೆ ಛಾಯಾಗ್ರಹಣ ಮಾಡಲು ನೇಪಾಳ ಸರಕಾರದ ಅನುಮತಿ ಇರುತ್ತೆ, ಹಾಗಾಗಿ, ನಾವು ನಮ್ಮ ಕ್ಯಾಮೆರಾಗಳನ್ನು ಜತೆಗೆ ಒಯ್ದಿದ್ದೆವು.

ಕಾಠ್ಮಂಡು ನಗರದ ಮೇಲಿನ ಹೊಗೆ ಮತ್ತು ಮಂಜು (ಸ್ಮಾಗ್) ಮುಸುಕಿದ ಆವರಣದಿಂದ ಹೊರಬಂದ ಮೇಲೆ ನಮ್ಮ ವಿಮಾನವು ಪ್ರಖರ ಬಿಸಿಲಿನಲ್ಲಿ ಹಾರಾಡತೊಡಗಿತು. ಪಟ್ಟಣದ ಹೊರಗಿನ ಗುಡ್ದ ಬೆಟ್ಟಗಳ ತಪ್ಪಲಿನ ಅಕ್ಕಿ, ಗೋಧಿ, ಬಾರ್ಲಿಗಳ ಟರಾಸ್ ಹೊಲಗಳ ವ್ಯವಸಾಯ  ಕ್ಷೇತ್ರಗಳನ್ನು ಹಾದು ನಮ್ಮ ವಿಮಾನ ಹಿಮಾಲಯ ಶ್ರೇಣಿಯ ತಪ್ಪಲಿನ ಪ್ರದೇಶಗಳ ಮೇಲೆ ಏರತೊಡಗಿತು.

ಸುಮಾರು ಇಪ್ಪಾತ್ತರಿಂದ ಇಪ್ಪತ್ತೈದು ಸಾವಿರ ಅಡಿಗಳ ಎತ್ತರದಲ್ಲಿ ನಮ್ಮ ವಿಮಾನ ಹಾರಾಡಿತು. ಪೈಲೆಟ್ ಗಳು ನಮ್ಮ ಕಿಟಕಿಯ ಹೊರಗೆ ಕಾಣುವ ಶಿಖರಗಳ ಬಗ್ಗೆ ವಿವರಣೆ ಕೊಡುತ್ತಾ ಇದ್ದರು. ನಾವು  ಮೌಂಟ್ ಎವೆರೆಸ್ಟ್ ಬಳಿ ಹೋಗುತ್ತಾ ಇರುವಾಗ ವಿಮಾನದ ಎಡಬದಿಯ  ಕಿಟಕಿಗಳ ಪ್ರಯಾಣಿಕರಿಗೆ ಹಿಮಾಲಯದ ಶಿಖರಗಳು ತಮ್ಮ ಬಳಿಯ ಕಿಟಿಕಿಯಲ್ಲಿ ಕಾಣುತ್ತವೆ. ನಾವು ಮೌಂಟ್ ಎವೆರೆಸ್ಟ್  ನೋಡಿಕೊಂಡ ನಂತರ ನಾವು “ನಾಮ್ಚೆ ಬಜಾರ್” ಎಂಬ ಹೆಸರಿನ ಎವೆರೆಸ್ಟ್ ಪರ್ವತಾರೋಹಿಗಳ ಮೊದಲನೇ ಕ್ಯಾಂಪಿನ ಮೇಲೆ ಸುತ್ತು ಹಾಕಿ ಹಿಂದಿರುಗುತ್ತೇವೆ. ಹಿಂದಿರುಗಿ ಬರುವಾಗ ವಿಮಾನದ ಬಲಬದಿಗೆ ಕುಳಿತಿರುವ ಪ್ರಯಾಣಿಕರಿಗೆ ಶಿಖರಗಳ ದೃಶ್ಯವನ್ನು ತಮ್ಮ ಕಿಟಕಿಗಳ ಮೂಲಕ ನೋಡುವ ಮತ್ತು ಛಾಯಾಗ್ರಹಣ ಮಾಡುವ ಅವಕಾಶ ಸಿಗುತ್ತದೆ. ಎಲ್ಲರೂ ಸುಖಾಸೀನರಾಗಿರಿ ಎಂದು ನಮ್ಮ ಪೈಲಟ್ ನಮ್ಮ ವಿಮಾನ ಹೊರಡುವ ಸಮಯದಲ್ಲೇ ತಿಳಿಸಿದ್ದರು.

ಗೌರಿಶಂಕರ

ಚಿಕ್ಕ ವಿಮಾನ ಆದುದರಿಂದ ನಮ್ಮ ಪಕ್ಕ ಕುಳಿತಿರುವ ಎಡಬದಿಯ ಸೀಟುಗಳಲ್ಲಿ ಆಸೀನರಾದ ಪ್ರಯಾಣಿಕರ ಪಕ್ಕದ ವಿಶಾಲವಾದ ಗಾಜಿನ ಕಿಟಕಿಯಿಂದಲೇ ನಾವು ಹಿಮಾಲಯ ಪರ್ವತಾವಳಿಯ ದೃಶ್ಯವನ್ನು ನೋಡಲು ಯಾವ ಅಡ್ದಿಯೂ ಇರಲಿಲ್ಲ. ನಮ್ಮ ವಿಮಾನ ಮೊದಲು  4400 ಮೀಟರ್ ಎತ್ತರದಲ್ಲಿರುವಗೋಸಾಯಿ ಕುಂಡ್ ಸರೋವರವನ್ನು ತೋರಿಸಿ ಹಿಮಾಲಯ ಪರ್ವತ ಶ್ರೇಣಿಗಳ ದರ್ಶನಕ್ಕೆ ಮೊದಲಿಟ್ಟಿತು.

ಬೆಳಗಿನ ಹೊಂಬಿಸಿಲಿಗೆ ಹಿಮಾಚ್ಛಾದಿತ ಪರ್ವತಗಳು ಹೊಂಬಣ್ಣದಿಂದ ಹೊಳೆಯುತ್ತಾ ಇದ್ದುವು. ಹವಾನಿಯಂತ್ರಿತ ವಿಮಾನದಲ್ಲಿ ಕುಳಿತು ಆ ಹಿಮಾಲಯದ ಪರ್ವತಾವಳಿಗಳ ದರ್ಶನ ಪಡೆದು ಅವುಗಳ ಛಾಯಾಗ್ರಹಣ ಮಾಡಿದುದೇ ನಮಗೆ ಜೀವನದ ಅವಿಸ್ಮರಣೀಯ ಅನುಭವ. ಪರ್ವತ ಶಿಖರಗಳನ್ನು ತೋರಿಸುತ್ತಾ ‘ನಾಮ್ಚೆ ಬಜಾರ್’ ಎಂಬ ಪುಟ್ಟ ಜನವಸತಿಯ ಮೇಲೆ ಒಂದು ಸುತ್ತು ಹಾಕಿ ಹಿಂದಿರುಗಿತು.

ನಾಮ್ಚೆ ಬಜಾರಿನ ಮೇಲೆ ಸುತ್ತು ಹಾಕಲು ಹೋಗುವಾಗ ಮತ್ತು ಹಿಂದಿರುಗುವಾಗ ನಮ್ಮ ವಿಮಾನದ ಮೇಲೆ ತಲೆಯೆತ್ತಿ ನಿಂತ ೨೯೦೨೮ ಅಡಿ ಎತ್ತರದ ಹಿಮವಂತ ಮೌಂಟ್ ಎವೆರೆಸ್ಟ್ ಮುಂದೆ ನಾವೆಷ್ಟು ಕುಬ್ಜರು ಅನ್ನುವ ಭಾವನೆ ಉಂಟಾಯಿತು. ನೇಪಾಳೀಯರು ಮೌಂಟ್ ಎವೆರೆಸ್ಟ್ ಅನ್ನು “ಸಾಗರ್ ಮಾತಾ” ಎಂದು ಕರೆದರೆ, ಟಿಬೆಟನ್ ಜನಾಂಗ  “ಚೋಮೋಲುಂಗ್ಮಾ” ಎಂದು ಕರೆಯುತ್ತಾರೆ. ಈ ಶಬ್ದಗಳ ಅರ್ಥವನ್ನು “ನಭೋಮಂಡಲದ ಒಡತಿ” ಎಂಬ ಶಬ್ದಕ್ಕೆ ಹೋಲಿಸಬಹುದೆಂದು ನಮ್ಮ ಪೈಲಟ್ ಹೇಳಿದರು. ನಾನು ಮನಸಾರೆ ತಲೆಬಾಗಿ ಹಿಮವಂತನಿಗೆ ನಮಿಸಿದೆ.

ಗೌರಿಶಂಕರನಾನು ವಿಮಾನದ ಬಲಬದಿಯ ಸೀಟಿನಲ್ಲಿ ಕುಳಿತಿದ್ದ ಕಾರಣ, ಹಿಂದೆ ಬರುತ್ತಿರುವಾಗ ಗೌರೀಶಂಕರ ಪರ್ವತದ ಜಂಟಿ ಶಿಖರಗಳು ನನ್ನ ಕಣ್ಣಿಗೆ ಶಿವ ಪಾರ್ವತಿಯವರು ನಿಂತ ರೀತಿಯೇ ಕಂಡವು. ಜಟಾಜೂಟ ಧಾರಿ ಶಿವನು ಎಡಬದಿ ನಿಂತಿದ್ದರೆ ಹಿಮದ ಸೀರೆಯ ಅವಕುಂಠನ ಹೊದ್ದ ಗೌರಿಯು ಆತನ ಬಲಕ್ಕೆ ನಿಂತಿರುವಳು ಎಂದು ನಾನು ಕಲ್ಪಿಸಿಕೊಂಡು ಕೈಮುಗಿದು ನಮಿಸಿದೆ. ಶಿವಪಾರ್ವತಿಯರು ಹೀಗೆ ಜತೆಜತೆಯಾಗಿ ಫೋಟೋಗೆ ಪೋಸು ಕೊಟ್ಟಂತೆ ಗೌರೀಶಂಕರ ಪರ್ವತದಲ್ಲದೇ ಬೇರೆಲ್ಲಿ ಕಂಡು ಬಂದಾರು?

ಮಂದಿರಗಳಲ್ಲಿ ದೇವರ ಇರವನ್ನು ಕಾಣದ ನಾನು ಈ ಪರ್ವತಗಳಿಗೆ ಏಕೆ ಕೈ ಮುಗಿದೆ? ಎಂದು ಅಚ್ಚರಿಪಡುತ್ತಾ ಆ ಕಡೆ ಈ ಕಡೆ ನೋಡಿದರೆ ನಮ್ಮ ಸಹ ಪ್ರಯಾಣಿಕರೂ ನನ್ನಂತೆ ಕೈಮುಗಿಯುತ್ತಾ ಇದ್ದರು. ನೋಡುತ್ತಿದ್ದಂತೆಯೇ ಉಳಿದ ಶಿಖರಗಳ ದರ್ಶನ ಮಾಡಿಸಿ ನಮ್ಮ ವಿಮಾನ ಕಾಠ್ಮಂಡು ತಲುಪಿತು. ವಿಮಾನದಿಂದ ಇಳಿಯುವಾಗ ನಿಕಾನ್ ಏರ್ ಸಂಸ್ಥೆಯವರು ಎಲ್ಲ ಪ್ರಯಾಣಿಕರಿಗೂ ಒಂದೊಂದು ಕಾಂಪ್ಲಿಮೆಂಟರಿ ಟೀ-ಶರ್ಟ್ ಮತ್ತು  ಒಂದು ಸುಂದರ ಸರ್ಟಿಫಿಕೇಟ್ ನೀಡಿ ಬೀಳ್ಕೊಟ್ಟರು. ಹಿಮಾಲಯ ದರ್ಶನದ ಅಪೂರ್ವ ಅನುಭವವು ನಮ್ಮ ನೆನಪಿನ ಖಜಾನೆ ಸೇರಿತ್ತು.

ಪೆಜತ್ತಾಯ ನೇಪಾಳೀ ನವರಾತ್ರಿ-ಕೊನೇ ಕಂತು- ವಿಜಯ ದಶಮಿಯ ಸಡಗರ

ಕ್ತದೋಕುಳಿಯ ಹೆದರಿಕೆಯಿಂದ ನಾವು ಎರಡು ದಿನ ಬೇರೆಲ್ಲೂ ಪ್ರವಾಸ ಮಾಡದೇ ನಮ್ಮ ಹೋಟೆಲಿನಲ್ಲೇ ವಿಶ್ರಾಂತಿ ಪಡೆಯುತ್ತಾ ಆರಾಮವಾಗಿ ಕಾಲ ನೂಕಿದೆವು. ವಿಜಯದಶಮಿಯ ದಿನ ಎಂದರೆ ಇಡೀ ನೇಪಾಳಕ್ಕೇ ಹಬ್ಬದ ದಿನವಂತೆ. ಎಲ್ಲಾ ನೇಪಾಳಿಗಳೂ ಹೊಸಾ ಬಟ್ಟೆ ತೊಟ್ಟು ಸಂಭ್ರಮಿಸುತ್ತಾ ಇದ್ದರು. ಪ್ರತಿಯೊಬ್ಬರ ಮುಖದಲ್ಲೂ ನಗು. ಪ್ರತ್ಯೊಬ್ಬರ ಬಾಯಲ್ಲಿ “ನಮಶ್ಕಾರ್” ಎಂಬ ಉದ್ಗಾರ. ದರ್ಬಾರ್ ಮಾರ್ಗದಲ್ಲಂತೂ ಎಲ್ಲಿಲ್ಲದ ಜನಸಂದಣಿ. ದರ್ಬಾರ್ ಮಾರ್ಗದಲ್ಲಿ ಬೆಳಗಿನಿಂದಲೇ ಒಂದು ದೊಡ್ದ ಕ್ಯೂವಿನಲ್ಲಿ ಜನರು ಸೇರಿಕೊಳ್ಳುವುದನ್ನು ಕಂಡೆವು.

ಈ ದೊಡ್ಡ ಕ್ಯೂ ಅರಮನೆಯ ಕಡೆಗೆ ಸಾಗಿತ್ತು. ಈ ದೊಡ್ಡ ಲೈನಿನ ಬಗ್ಗೆ ವಿಚಾರಿಸಲಾಗಿ, ಆಗ ನೇಪಾಳದ ಮಹಾರಾಜರಾಗಿದ್ದ ವೀರೇಂದ್ರ ವೀರ್ ವಿಕ್ರಮ್ ಶಾಹ ದೇವ್ ಅವರು ತಮ್ಮ ಕೈಯ್ಯಿಂದಲೇ ವಿಜಯ ದಶಮಿಯ ದಿನದಂದು ತನ್ನ ಪ್ರಜೆಗಳಿಗೆ ತಿಲಕವಿಟ್ಟು ಹರಸುತ್ತಾರೆಂಬ ವಿಷಯ ನಮಗೆ ತಿಳಿಯಿತು. ಪ್ರತೀ ವಿಜಯ ದಶಮಿಯ ದಿನದಂದು ನೇಪಾಳದ ದೊರೆಗಳು ಜನಸಾಮಾನ್ಯರೊಂದಿಗೆ ಸಾರ್ವಜನಿಕವಾಗಿ ಬೆರೆತು ಸಂಭ್ರಮಿಸುವ ದಿನವಂತೆ. ಈ ಅವಕಾಶಕ್ಕಾಗಿ ನೇಪಾಳ ದೇಶದ ನಿಷ್ಟ ನಾಗರಿಕರು ಕಾಯುತ್ತಾ ಇರುತ್ತಾರಂತೆ.

ವಿದೇಶಿಯ ಪ್ರಜೆಗಳಿಗೂ ಈ ಲೈನಿನಲ್ಲಿ ನಿಲ್ಲಲು ಅವಕಾಶ ಇರುತ್ತದೆ. ನಮ್ಮ ಪಕ್ಕದ ರೂಮಿನಲ್ಲಿ ವಾಸ್ತವ್ಯ ಹೂಡಿದ್ದ ಅಮೇರಿಕನ್ ಪ್ರವಾಸೀ ಸಂಸಾರದವರು ನಮ್ಮನ್ನೂ “ಬನ್ನಿ, ಬನ್ನಿ” ಎಂದು ಕರೆಯುತ್ತಾ ಲೈನಿನಲ್ಲಿ  ಸೇರಿಕೊಂಡರು. ನಾವು ಮೂರು ನಾಲ್ಕು ಗಂಟೆ ಹೊತ್ತು ಆ ಕ್ಯೂವಿನಲ್ಲಿ ನಿಲ್ಲಲು ಸಾಧ್ಯವಿಲ್ಲ ಅಂತ ತೀರ್ಮಾನಿಸಿ ನಮ್ಮ ಕೊಠಡಿಗೆ ವಾಪಸಾದೆವು. ನೇಪಾಳಿಗಳು ಕುಂಕುಮ ತಿಲಕವನ್ನು “ಟೀಖಾ” ಎನ್ನುತ್ತಾರೆ.

ಮಹರಾಜರು ತಮ್ಮ ಹಣೆಗಳಲ್ಲಿ ಇರಿಸಿದ ತಿಲಕವನ್ನು ಹಲವರು ಅದೃಷ್ಟದ ಸಂಕೇತ ಅಂತ ಭಾವಿಸಿ ಹಲವು ದಿನ ಅಳಿಸದೇ ಹಾಗೆಯೇ ಇಟ್ಟುಕೊಳ್ಳುತ್ತಾರಂತೆ. ವಿಜಯದಶಮಿಯ ಈ ಕೊನೆಯ ಸಡಗರದೊಂದಿಗೆ ನೇಪಾಳದ ‘ದಶೈನ್’ ಉತ್ಸವ ಮಂಗಳ ಹಾಡಿತು. ಮರುದಿನ ಬೆಳಗಿನ ಹತ್ತುಗಂಟೆಗೆ ನಾವು ಬನಾರಸ್ ಗೆ ಹೋಗುವ ವಿಮಾನ ಹತ್ತಲು ಹೊರಟೆವು. ಆಗಷ್ಟೇ, ದರ್ಬಾರ್ ಮಾರ್ಗದ ದೊಡ್ದ ದೊಡ್ದ ಅಂಗಡಿಗಳ ಮುಂಗಟ್ಟುಗಳು ತೆರೆಯಹತ್ತಿದ್ದುವು.

ನೇಪಾಳದಲ್ಲಿ ಶಾಪಿಂಗ್ ಮಾಡುವ ಅವಕಾಶ ತಪ್ಪಿ ಹೋದುದಕ್ಕೆ ನನ್ನ ಪತ್ನಿ ಮತ್ತು ಮಕ್ಕಳು ಪರಿತಪಿಸುತ್ತಾ ವಿಮಾನ ಹತ್ತಿದರು. ದುರ್ಗಾಪೂಜೆಯ ದಿನಗಳಲ್ಲಿ ನೇಪಾಳದ “ಸರ್ವವ್ಯಾಪೀ ರಜೆ” ಮತ್ತು ಅಸಂಖ್ಯ ಪ್ರಾಣಿವಧಾ ಪೂಜೆಗಳ ವಿಚಾರ ಮೊದಲೇ ಗೊತ್ತಿದ್ದರೆ, ನಾವು ನವರಾತ್ರಿಯ ದಿನಗಳಲ್ಲಿ ನೇಪಾಳದ ಪ್ರವಾಸ ಮಾಡುತ್ತಲೇ ಇರಲಿಲ್ಲ. ಆದರೂ, 1998 ಇಸವಿಯ ನವರಾತ್ರಿಯ ನೇಪಾಳ ಪ್ರವಾಸ ನಮ್ಮ ಮನದಲ್ಲಿ ಅವಿಸ್ಮರಣೀಯವಾಗಿ ಉಳಿದಿದೆ.

**********************