ಆಗಾಗ ಅಂಗಡಿಗೆ ಹೋಗುವ ಕೆಲಸ ನನಗೆ ಬೀಳುತ್ತಿತ್ತು. ಅಂಗಡಿಗೆ ಹೋಗುವುದು ಅಡ್ಡಿಯಿರಲಿಲ್ಲವಾದರೂ ಆ ದಿನಸಿಗಳನ್ನು ಹೊತ್ತುಕೊಂಡು ಕೋಟೆ ಬೀದಿಯಲ್ಲಿರುವ ನಮ್ಮ ಮನೆಗೆ ಅಶ್ವತ್ಥಕಟ್ಟೆಯನ್ನು ದಾಟಿಕೊಂಡು ಹೋಗುವುದು ನನಗೆ ಸವಾಲಾಗಿತ್ತು. ಕಾರಣ ಅಶ್ವತ್ಥ ಕಟ್ಟೆಯ ದೊಡ್ಡ ಮರದ ಕೊಂಬೆಗಳಲ್ಲಿ, ಬೀದಿಯ ಸುತ್ತಮುತ್ತಲ ಮನೆಗಳು, ಕಾಂಪೌಂಡ್ ಗೋಡೆಗಳ ಮೇಲೆ, ರಾಮಮಂದಿರದೊಳಗೆ ಹಾಗೂ ದಾರಿಯುದ್ದಕ್ಕೂ ಇರುತ್ತಿದ್ದ ಕೋತಿಗಳ ಗುಂಪಿನ ದಾಳಿಯ ಭೀತಿಯಲ್ಲೇ ದಿನಸಿ ಬ್ಯಾಗನ್ನು ಉದ್ದನೆಯ ಲಂಗದ ನೆರಿಗೆಗಳಲ್ಲಿ ಮುಚ್ಚಿಟ್ಟುಕೊಂಡು ಅವುಗಳಿಂದ ತಪ್ಪಿಸಿಕೊಂಡು ಮನೆಗೆ ಹೋಗುವಷ್ಟರಲ್ಲಿ ಹೈರಾಣಾಗುತ್ತಿದ್ದೆ. ಆದರೆ ಆಶ್ಚರ್ಯವೆಂಬಂತೆ ಒಮ್ಮೆಯೂ ಕೈಚೀಲದೊಂದಿಗೆ ಕೋತಿಗಳಿಗೆ ಸಿಕ್ಕಿಹಾಕಿಕೊಳ್ಳಲಿಲ್ಲ, ಅಷ್ಟರ ಮಟ್ಟಿಗೆ ನಾನು ಜಯಶಾಲಿ!
ಎಂ.ಜಿ. ಶುಭಮಂಗಳ ಬರೆದ ಪ್ರಬಂಧ ನಿಮ್ಮ ಓದಿಗೆ

ಪ್ರಸ್ತುತ ಏಕ ಬಳಕೆಯ ಪ್ಲಾಸ್ಟಿಕ್ ಕವರುಗಳು ನಿಷೇಧಗೊಂಡಿರುವುದರಿಂದ ಇತ್ತೀಚೆಗೆ ಹೊರಗೆ ಸುತ್ತಾಡಲು ಹೋಗುವಾಗ ಒಂದು ಬಟ್ಟೆಯ ಕೈಚೀಲ ತೆಗೆದುಕೊಂಡು ಹೋಗುವುದು ವಾಡಿಕೆಯಾಗಿದೆ. ಆದರೂ ಒಮ್ಮೊಮ್ಮೆ ಮರೆವು ಆವರಿಸಿ ಬರಿಗೈಲಿ ಹೋಗುವುದೂ ಹೊರತಲ್ಲ. ಹಾಗೆ ಬ್ಯಾಗ್ ಮರೆತುಹೋದಾಗಲೇ ಮನೆಗೆ ಬೇಕಾದ ದಿನಸಿಯೋ, ತರಕಾರಿಯೋ ಅಥವಾ ಇನ್ನೇನಾದರೂ ಅಗತ್ಯ ವಸ್ತುಗಳು ಕೊಳ್ಳಲು ನೆನಪಾಗುವುದು!

ಈಗ ಮಿನಿ ಸೂಪರ್ ಮಾರ್ಕೆಟ್‍ಗಳು, ಸೂಪರ್ ಮಾರ್ಕೆಟ್, ಬಿಗ್ ಬಜಾರ್, ಟೋಟಲ್ ಮಾರ್ಕೆಟ್, ರಿಲಯನ್ಸ್ ಒನ್, ಸೂಪರ್ ಬಜಾರ್, ಡಿ ಮಾರ್ಟ್‍ಗಳು.. ಎಲ್ಲೆಡೆ ತಲೆಯೆತ್ತಿವೆ. ಬಹುತೇಕ ಈ ಮಾರುಕಟ್ಟೆಗಳಲ್ಲಿ ಮನೆಗೆ ಅಗತ್ಯ ಅಕ್ಕಿ, ಬೇಳೆ, ಎಣ್ಣೆ, ಬೆಣ್ಣೆ, ತುಪ್ಪ, ಹಿಟ್ಟು, ಕಾಳುಗಳು ಹೀಗೆ ವಿವಿಧ ದಿನಸಿ ಸಾಮಗ್ರಿಗಳು ವಿವಿಧ ಕಂಪನಿಗಳ ಲೇಬಲ್‌ಗಳೊಂದಿಗೆ ಕವರುಗಳಲ್ಲಿ ಪ್ಯಾಕಿಂಗ್ ಸಮೇತ ಸಿಗುತ್ತವೆ. ಆದರೆ ಪ್ಯಾಕಿಂಗ್ ಆಗಿರುವ ಕೆಲವು ದಿನಸಿ ಪದಾರ್ಥಗಳಂತೂ ಆಯಾ ಕಂಪನಿಯ ಬ್ರಾಂಡ್‌ಗೆ ತಕ್ಕಂತೆ ಬಹಳ ದುಬಾರಿ. ಆದರೆ ಮಧ್ಯಮ ವರ್ಗದ ಬಜೆಟ್‌ಗೆ ಅನುಗುಣವಾಗಿ ಪ್ರತಿ ತಿಂಗಳೂ ಅಗತ್ಯವಿರುವ ಮುಖ್ಯ ದಿನಸಿ ಪದಾರ್ಥಗಳು ಬಿಡಿಯಾಗಿಯೂ ಸಿಗುತ್ತದೆ. ಸದ್ಯ ಅದೊಂದು ಸಮಾಧಾನಕರ ಸಂಗತಿ.

ಮೊದಲಿಗಾದರೆ ಬಿಡಿ ದಿನಸಿ ಸಂಗ್ರಹದ ಉದ್ದನೆಯ ಸ್ಟೀಲ್ ಅಥವಾ ಅಲ್ಯೂಮಿನಿಯಂ ಕೊಳಗಗಳ ಪಕ್ಕದಲ್ಲೇ ಸುರುಳಿಯಾಗಿ ಪ್ಲಾಸ್ಟಿಕ್ ಕವರುಗಳ ರೋಲ್ ಇರುತ್ತಿತ್ತು. ಆ ರೋಲ್‌ನಿಂದ ಸುಂಯ್.. ಸುಂಯ್ ಎಂದು ಒಂದೊಂದೇ ಪ್ಲಾಸ್ಟಿಕ್ ಕವರ್ ಎಳೆದುಕೊಂಡು ಬೇಳೆ, ಬೆಲ್ಲ, ಸಕ್ಕರೆ, ಕಡಲೆಬೀಜ, ಅವಲಕ್ಕಿ ಇತ್ಯಾದಿ ಬಿಡಿ ಪದಾರ್ಥಗಳನ್ನು ತುಂಬಿಕೊಳ್ಳುವುದು ಸುಲಭವಾಗಿತ್ತು. ಆದರೆ ಈಗ ಪ್ಲಾಸ್ಟಿಕ್ ಬಳಕೆ ನಿಷೇಧವಿರುವುದರಿಂದ ಪ್ಲಾಸ್ಟಿಕ್ ಕವರುಗಳ ಜಾಗದಲ್ಲಿ ಖಾಕಿ ಮತ್ತು ಬಿಳಿಯ ಪೇಪರ್ ಪೊಟ್ಟಣಗಳ ಕಲರವ.

ಪೇಪರ್ ಕವರುಗಳಲ್ಲಿ ಬಿಡಿ ದಿನಸಿ ತುಂಬಿ ಅದನ್ನು ಹೋಂ ಡೆಲಿವರಿ ಸೇವೆ ಪಡೆದು ಮನೆಯಲ್ಲಿರುವ ಡಬ್ಬಗಳಲ್ಲಿ ಪದಾರ್ಥಗಳನ್ನು ತುಂಬುವವರೆಗೂ ನೆಮ್ಮದಿ ಇರುವುದಿಲ್ಲ. ಆರಂಭಿಕ ಒಂದಷ್ಟು ತಿಂಗಳು ಅಂಗಡಿಯವರು 25 ಕೆ.ಜಿ. ತೂಕದ ಅಕ್ಕಿ, ಬೇಳೆ, ಸಕ್ಕರೆ ಇತ್ಯಾದಿಗಳ ದೊಡ್ಡ ಪ್ಲಾಸ್ಟಿಕ್ ಖಾಲಿ ಚೀಲಗಳಲ್ಲಿ ನಾವು ಕೊಳ್ಳುವ ತಿಂಗಳ ದಿನಸಿ ಮತ್ತು ಇತರ ವಸ್ತುಗಳನ್ನು ತುಂಬಿ ಮನೆಗೆ ತಂದುಕೊಡುತ್ತಿದ್ದರು. ಚೀಲದಲ್ಲಿ ಪದಾರ್ಥಗಳನ್ನು ಒಟ್ಟಿಗೆ ತುಂಬುವುದರಿಂದ ಒಂದರ ಭಾರಕ್ಕೆ ಇನ್ನೊಂದು ಬಿಡಿ ದಿನಸಿಯ ಪೊಟ್ಟಣಗಳು ಒಡೆದು ಅವುಗಳಲ್ಲಿದ್ದ ಪದಾರ್ಥಗಳು ಬೆರಕೆಯಾಗಿ ಅದನ್ನು ವಿಂಗಡಿಸುವಷ್ಟರಲ್ಲಿ ಸಾಕಾಗುತ್ತಿತ್ತು. ಸಾಮಾನ್ಯವಾಗಿ ಒಮ್ಮೆ ಯಾವುದಾದರೂ ಒಂದು ಸೌಲಭ್ಯಕ್ಕೆ ಒಗ್ಗಿಕೊಂಡ ಮೇಲೆ ಮತ್ತೆ ಶ್ರಮಪಡಲು ದೇಹ ಮತ್ತು ಮನಸ್ಸು ಎರಡೂ ಒಪ್ಪುವುದಿಲ್ಲ. ಆದರೆ ಡಾ. ರಾಜ್‍ಕುಮಾರ್ ಅವರು ‘ಮುತ್ತಿನಂಥ ಮಾತೊಂದು ಗೊತ್ತೇನಮ್ಮ ನಿನಗೆ ಗೊತ್ತೇನಮ್ಮ ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು ಎಂದೂ ತಾಳಕ್ಕೆ ತಕ್ಕಂತೆ ಕುಣಿಯಬೇಕು’ ಎಂದು ಹಾಡಿದ್ದಾರೆ.

ನಾವು ಅದರಂತೆ ನಡೆದುಕೊಳ್ಳಬೇಕೆಂದು ಮನೆಯಲ್ಲಿದ್ದ ಬಟ್ಟೆಯ ಬ್ಯಾಗುಗಳನ್ನು ಹುಡುಕಿ ಒಗೆದು ಅದರ ಜೊತೆಗೆ ಒಂದೆರಡು ಹೊಸ ಬ್ಯಾಗುಗಳನ್ನು ಖರೀದಿಸಿ ಬಿಡಿ ಪದಾರ್ಥಗಳ ಕವರುಗಳನ್ನಿಡಲು ಎರಡು ಬ್ಯಾಗುಗಳು, ಸೋಪ್ ಐಟಮ್‌ಗಳಿಗೆ ಒಂದು ಬ್ಯಾಗ್, ಆಯಿಲ್ ಐಟಮ್ ಮತ್ತು ಬಿಸ್ಕೆಟ್ಸ್, ಕುರುಕಲು ತಿಂಡಿಗೆ ಹೀಗೆ ಪ್ರತ್ಯೇಕ ಬ್ಯಾಗುಗಳನ್ನು ತಿಂಗಳ ಪ್ರಯಾಣಕ್ಕೆ ಅಣಿ ಮಾಡಿದ್ದಾಯಿತು.

ಸುಂಯ್ ಎಂದು ಒಂದೊಂದೇ ಪ್ಲಾಸ್ಟಿಕ್ ಕವರ್ ಎಳೆದುಕೊಂಡು ಬೇಳೆ, ಬೆಲ್ಲ, ಸಕ್ಕರೆ, ಕಡಲೆಬೀಜ, ಅವಲಕ್ಕಿ ಇತ್ಯಾದಿ ಬಿಡಿ ಪದಾರ್ಥಗಳನ್ನು ತುಂಬಿಕೊಳ್ಳುವುದು ಸುಲಭವಾಗಿತ್ತು. ಆದರೆ ಈಗ ಪ್ಲಾಸ್ಟಿಕ್ ಬಳಕೆ ನಿಷೇಧವಿರುವುದರಿಂದ ಪ್ಲಾಸ್ಟಿಕ್ ಕವರುಗಳ ಜಾಗದಲ್ಲಿ ಖಾಕಿ ಮತ್ತು ಬಿಳಿಯ ಪೇಪರ್ ಪೊಟ್ಟಣಗಳ ಕಲರವ.

ಈ ಸಮಯದಲ್ಲಿ ನೆನಪು ಆಗಾಗ ಬಾಲ್ಯಕ್ಕೆ ಮರಳುತ್ತಿರುತ್ತದೆ. ನನ್ನ ಗ್ರಹಿಕೆಯಂತೆ ನಮ್ಮೂರಿನಲ್ಲಿ ಒಂದೊಂದು ಮನೆಯವರು ಒಂದೊಂದು ಅಂಗಡಿಗೆ ದಿನಸಿಗೆ ವರ್ತನೆ(ತಿಂಗಳ ದಿನಸಿ ನಿಯಮಿತವಾಗಿ ಒಂದು ಅಂಗಡಿಯಲ್ಲಿ ಕೊಳ್ಳುವ ವಾಡಿಕೆ)ಮಾಡಿಕೊಂಡಿರುತ್ತಿದ್ದರು. ನಾವು ದಿನಸಿ ಕೊಳ್ಳುತ್ತಿದ್ದ ಶೆಟ್ಟರ ಅಂಗಡಿಯಲ್ಲಿ ನಮಗೆ ಬೇಕಿರುವ ಪದಾರ್ಥಗಳನ್ನು ನೀಡಿ ಒಂದು ಪುಟ್ಟ ಪುಸ್ತಕದಲ್ಲಿ ಅದನ್ನು ನಮೂದಿಸಿಕೊಂಡು ದರ ಬರೆದುಕೊಳ್ಳುತ್ತಿದ್ದರು, ತಿಂಗಳ ಕೊನೆಯಲ್ಲಿ ಒಟ್ಟು ಮೊತ್ತವನ್ನು ನಾವು ಕಟ್ಟಬೇಕಿತ್ತು. ಅಂಗಡಿಯಲ್ಲಿ ಪೊಟ್ಟಣ ಕಟ್ಟಿಕೊಡುವ ಹುಡುಗ ಗ್ರಾಹಕರ ಅಳತೆಯ ಬೇಡಿಕೆಗನುಗುಣವಾಗಿ ಚಿಕ್ಕ, ಮಧ್ಯಮ ಮತ್ತು ದೊಡ್ಡ ಗಾತ್ರಗಳಲ್ಲಿ ಪೊಟ್ಟಣ ಕಟ್ಟಿ ಅದರಲ್ಲಿ ದಿನಸಿ ತುಂಬಿ ಅದಕ್ಕೆ ಬಿಗಿಯಾಗಿ ದಾರ ಸುತ್ತಿಕೊಡುತ್ತಿದ್ದ. ಅವನು ಮೇಲಿನಿಂದ ಕೆಳಕ್ಕೆ ಇಳಿಬಿಟ್ಟ ಸುರುಳಿಯಿಂದ ಸರಸರನೆ ದಾರ ಎಳೆದುಕೊಂಡು ವಯ್ಯಾರವಾಗಿ ಸುತ್ತುತ್ತಿದುದನ್ನು ನೋಡುವುದೇ ನಮಗೊಂದು ರೀತಿಯ ಕುತೂಹಲ. ಪೊಟ್ಟಣ ಕಟ್ಟುವುದು ಕೂಡ ಒಂದು ನಾಜೂಕಿನ ಕಸುಬುದಾರಿಕೆ ಎನ್ನಬಹುದು. ಒಂದು ದಿನವೂ ಅವನು ಕಟ್ಟುತ್ತಿದ್ದ ದಿನಸಿಗಳ ಪೊಟ್ಟಣ ಒಡೆದು ಕಲಬೆರಕೆಯಾದ ನೆನಪಿಲ್ಲ. ಕಡಲೆಕಾಯಿ ಎಣ್ಣೆ, ಹರಳೆಣ್ಣೆ ಇಂತಹವುಗಳಿಗೆ ಒಂದು ಕ್ಯಾನ್ ತೆಗೆದುಕೊಂಡು ಹೋಗುತ್ತಿದ್ದೆವು. ಆಗಾಗ ಅಂಗಡಿಗೆ ಹೋಗುವ ಕೆಲಸ ನನಗೆ ಬೀಳುತ್ತಿತ್ತು. ಅಂಗಡಿಗೆ ಹೋಗುವುದು ಅಡ್ಡಿಯಿರಲಿಲ್ಲವಾದರೂ ಆ ದಿನಸಿಗಳನ್ನು ಹೊತ್ತುಕೊಂಡು (ಈಗಿನಂತೆ ಹನುಮಂತನ ಬಾಲದ ಪಟ್ಟಿಯಲ್ಲ. ತಕ್ಷಣಕ್ಕೆ ಬೇಕಿರುವ ಒಂದಷ್ಟು ಮಿತ ಅಳತೆಯ ದಿನಸಿ) ಕೋಟೆ ಬೀದಿಯಲ್ಲಿರುವ ನಮ್ಮ ಮನೆಗೆ ಅಶ್ವತ್ಥಕಟ್ಟೆಯನ್ನು ದಾಟಿಕೊಂಡು ಹೋಗುವುದು ನನಗೆ ಸವಾಲಾಗಿತ್ತು. ಕಾರಣ ಅಶ್ವತ್ಥ ಕಟ್ಟೆಯ ದೊಡ್ಡ ಮರದ ಕೊಂಬೆಗಳಲ್ಲಿ, ಬೀದಿಯ ಸುತ್ತಮುತ್ತಲ ಮನೆಗಳು, ಕಾಂಪೌಂಡ್ ಗೋಡೆಗಳ ಮೇಲೆ, ರಾಮಮಂದಿರದೊಳಗೆ ಹಾಗೂ ದಾರಿಯುದ್ದಕ್ಕೂ ಇರುತ್ತಿದ್ದ ಕೋತಿಗಳ ಗುಂಪಿನ ದಾಳಿಯ ಭೀತಿಯಲ್ಲೇ ದಿನಸಿ ಬ್ಯಾಗನ್ನು ಉದ್ದನೆಯ ಲಂಗದ ನೆರಿಗೆಗಳಲ್ಲಿ ಮುಚ್ಚಿಟ್ಟುಕೊಂಡು ಅವುಗಳಿಂದ ತಪ್ಪಿಸಿಕೊಂಡು ಮನೆಗೆ ಹೋಗುವಷ್ಟರಲ್ಲಿ ಹೈರಾಣಾಗುತ್ತಿದ್ದೆ. ಆದರೆ ಆಶ್ಚರ್ಯವೆಂಬಂತೆ ಒಮ್ಮೆಯೂ ಕೈಚೀಲದೊಂದಿಗೆ ಕೋತಿಗಳಿಗೆ ಸಿಕ್ಕಿಹಾಕಿಕೊಳ್ಳಲಿಲ್ಲ, ಅಷ್ಟರ ಮಟ್ಟಿಗೆ ನಾನು ಜಯಶಾಲಿ!

ಪ್ರಾಚೀನ ಕಾಲದಲ್ಲಿ ಆಹಾರ ಉತ್ಪಾದನೆ ಮತ್ತು ಉಪಭೋಗ ಸ್ಥಳೀಯವಾಗಿದ್ದುದರಿಂದ ಪದಾರ್ಥಗಳನ್ನು ಪೊಟ್ಟಣ ಕಟ್ಟುವ ಅಗತ್ಯವಿರಲಿಲ್ಲ. ನಾಗರಿಕತೆ ಬೆಳೆದಂತೆ ಆಹಾರ ಪದಾರ್ಥಗಳನ್ನು ಇಟ್ಟುಕೊಳ್ಳುವುದು, ಸಂರಕ್ಷಿಸುವುದು ಮತ್ತು ರವಾನಿಸುವುದು ಬಹಳ ಕಷ್ಟವಾಯಿತು. ಆದಿಮಾನವ ನೈಸರ್ಗಿಕವಾಗಿ ಸಿಗುತ್ತಿದ್ದ ಮರದ ಎಲೆಗಳು, ಬಿದಿರು, ಕಮಲದ ಎಲೆಗಳು, ತಾಳೆಗರಿ ಎಲೆಗಳು, ಸೋರೆ ಬುರುಡೆ, ಪ್ರಾಣಿಗಳ ಚರ್ಮ ಮತ್ತು ಚಿಪ್ಪುಗಳನ್ನು ಪದಾರ್ಥಗಳನ್ನಿಡಲು ಬಳಸತೊಡಗಿದ. ಕಾಲಾನಂತರದಲ್ಲಿ ಖನಿಜ, ಲೋಹ ಮತ್ತು ರಾಸಾಯನಿಕಗಳು, ಜೇಡಿಮಣ್ಣು, ಮರದ ತುಂಡು ಮತ್ತು ಕೆಲವು ರೀತಿಯ ಪೇಪರಿನಿಂದ ತಯಾರಾದ ಸಾಧನಗಳನ್ನು ಪದಾರ್ಥಗಳನ್ನಿಡಲು ಬಳಸಲಾಗುತ್ತಿತ್ತು. ಹೀಗೆ ಪದಾರ್ಥಗಳ ಸಂಗ್ರಹಕ್ಕೆಂದು ವಿಕಾಸಗೊಂಡ ಕಾಲಾನುಕ್ರಮದಲ್ಲಿ ದಿನಸಿಯನ್ನು ಪೇಪರ್ ಪೊಟ್ಟಣದಲ್ಲಿ ಕಟ್ಟುತ್ತಿದ್ದ ಕಾಲಘಟ್ಟದಲ್ಲಿ ನನ್ನ ಬಾಲ್ಯವಾದ್ದರಿಂದ ನೆನಪು ಹಾಗೇ ಮರುಕಳಿಸುತ್ತಿದೆ.

‘ಬದಲಾವಣೆ ಜಗದ ನಿಯಮ’ ಎಂಬ ಮಾತು ಸತ್ಯ. ಈಗ ಹೆಚ್ಚು ಜನ ಆನ್‍ಲೈನ್ ಶಾಪಿಂಗ್‌ಗೆ ತೆರೆದುಕೊಂಡಿದ್ದಾರೆ. ಕೆಲವು ತಿಂಗಳು ನಾನು ಕೂಡ ಹೊಸ ಪ್ರಯೋಗಕ್ಕೆ ಒಡ್ಡಿಕೊಳ್ಳುವ ಉತ್ಸುಕತೆಯಿಂದ ಬ್ಲಿಂಕಿಟ್, ಜಿಯೋಮಾರ್ಟ್, ಬಿಗ್ ಬ್ಯಾಸ್ಕೆಟ್ ಇಂತಹ ಆನ್‌ಲೈನ್ ಮಾರುಕಟ್ಟೆಯ ಬ್ಯಾಸ್ಕೆಟ್‌ಗಳ ಮೊರೆ ಹೋದದ್ದಾಯಿತು. ಆದರೆ ನನಗೆ ಅದು ಅಷ್ಟಾಗಿ ಒಗ್ಗಲಿಲ್ಲ (ಪತಿ ಅಥವಾ ಮಗನ ನೆರವಿಲ್ಲದೆ ತಬ್ಬಿಬ್ಬಾಗಿ!) ಎನ್ನಬಹುದು. ಮನೆಯಲ್ಲಿ ‘ಕೈಗೆಟುಕದ ದ್ರಾಕ್ಷಿ ಹುಳಿ’ ಎಂದು ಇಬ್ಬರೂ ಆಗಾಗ ನನ್ನನ್ನು ಕೆಣಕುತ್ತಿರುತ್ತಾರೆ. ಅದಕ್ಕೆ ನಾನು ಹೌದು ‘ಕಲಿಯುವವರೆಗೂ ಬ್ರಹ್ಮ ವಿದ್ಯೆ ಕಲಿತ ಮೇಲೆ ಕೋತಿ ವಿದ್ಯೆ’ ಎಂದು ಅವರಿಗೆ ತಿರುಗೇಟು ನೀಡುತ್ತೇನೆ.

ಕಾಲಚಕ್ರದ ತಿರುಗುವಿಕೆಯಲ್ಲಿ ಹೊಸತು ಹಳೆಗಳ ಬಳಕೆಯ ನವೀಕರಣ ಸಾಮಾನ್ಯ. ಪರಿಸರದ ಕಾಳಜಿ, ಇಂದಿನ ಮತ್ತು ಮುಂದಿನ ಮನುಕುಲದ ಒಳಿತಿಗೆಂದು ಮಾಡಿರುವ ಪ್ಲಾಸ್ಟಿಕ್ ನಿಷೇಧದ ನಿಯಮಗಳನ್ನು ಪಾಲಿಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದರಿತು ಅದರಂತೆ ನಡೆಯೋಣ.