ಇದು ಪ್ರವಾಸ ಕಥನವಲ್ಲ. ಕಾರಣಗಳು ಹಲವು. ಕಾರಂತರ ಅಪೂರ್ವ ಪಶ್ಚಿಮ, ಗೊರೂರರ `ಅಮೇರಿಕಾದಲ್ಲಿ ಗೊರೂರು‘, ಇನ್ನೂ ಅನೇಕರ ಯಾವತ್ತೂ ಯಾರೂ ಕಂಡಂತಹ ಅಬ್ಬೆಫಾಲ್ಸ್, ಕುದುರೆಮುಖ ಇತ್ಯಾದಿಗಳು ಸಾಹಿತ್ಯದ ಪ್ರಕಾರಗಳಲ್ಲಿ ಒಂದಾದ `ಪ್ರವಾಸ ಕಥನ’ದ ಯಾವತ್ತಿನ ಅಂಗೀಕೃತ ಮಾದರಿಗಳನ್ನು ಪುನರಾವರ್ತಿಸಿದ ಮತ್ತು ಆ ಪ್ರಕಾರದ ಆನುಷಂಗಿಕ ಅವಶ್ಯಕತೆಗಳನ್ನು ಅನಿವಾರ್ಯವಾಗಿ ಒಳಗೊಂಡ ಕೃತಿಗಳಾಗಿ ಮಾತ್ರ ಕಾಣುತ್ತವೆ ನನಗೆ.

ಬಹುಪಾಲು ಪ್ರವಾಸ ಕಥನಗಳು ಒಂದೋ ಗ್ರಹೀತ ಸತ್ಯಗಳು ಅಥವಾ `ಗೈಡಿತ’ ಸತ್ಯಗಳು ಅಥವಾ ಅಂಕ್ಯಾಂಷಿಕ ಸತ್ಯಗಳು. ಲೇಖಕ ಒಂದು ಜಾಗಕ್ಕೆ ಹೋಗುವ ಮುಂಚೆ ಪ್ರಜ್ಞಾಪೂರ್ವಕವಾಗಿ ಅಥವಾ ತನ್ನ ಓದಿನ ಯಾವುದೋ ಕಾಲದಲ್ಲಿ ಗ್ರಹಿಸಿದ ಬೇರೆಯ ದೇಶ-ಪ್ರದೇಶಗಳ ತಿಳುವಳಿಕೆಯನ್ನು ಆತ ಅಲ್ಲಿಗೆ ನಿಜವಾಗಿ ಹೋದಾಗ ಕಂಡು ರೋಮಾಂಚಿತಗೊಂಡು ಅದರ ಅಂಕಿ, ಅಂಶ, ರಾಜ, ಮ್ಯೂಸಿಯಂ ಕಟ್ಟಿದ ವರ್ಷ, ಅದರೊಳಗೆ ಯಾವ ರಾಜನ ಯಾವ ಹರಿದ ಚಡ್ಡಿಯಿದೆ ಎಂದೆಲ್ಲ ಬರೆಯುತ್ತ ತಮ್ಮ ಪ್ರವಾಸವನ್ನು-ಪ್ರವಾಸ ಕಥನವಾಗಿ ಬರೆಯುವ ಅವಸರದಲ್ಲಿ- ಹಾಳು ಮಾಡಿಕೊಳ್ಳುತ್ತಾರೆ ಎಂಬ ನನ್ನ ಅಭಿಪ್ರಾಯವನ್ನು ಯಾವ ವ್ಯಂಗ್ಯವಿಲ್ಲದೇ ಹೇಳಬೇಕಿದೆ.

ಆದರೆ ಇದು ಅನಿವಾರ್ಯ ಕೂಡ ಇರಬಹುದು. ಕೇವಲ ಪ್ರವಾಸಿಗಳಾಗಿ ದೇಶ, ಸ್ಥಳ ನೋಡಲು ಹೋದವರಿಗೆ ಹೀಗೆ ತಮ್ಮ ಅನುಭವವನ್ನು ವರ್ಣಿಸುವ ತಿಕ್ಕಲು, ಆಸಕ್ತಿ ಮತ್ತು ಅನಿವಾರ್ಯತೆಗಳು ಇರುವುದು ಸಹಜ. ಆದರೆ, ಈ ಬಗೆಯ ಪ್ರವಾಸ ಕಥನದ ಆದಿಕಾಲದ ಕಾನ್ಸೆಪ್ಟ್ ಗಳನ್ನು ಈ ಮಾಹಿತಿ ಯುಗದಲ್ಲಿ ರಿಪೀಟ್ ಮಾಡುವುದು ಅನಗತ್ಯ. ಒಂದು ದೇಶದ ವಿವರಗಳನ್ನು ಯಾವ ಕಷ್ಟಗಳಿಲ್ಲದೇ, ಕ್ಷಣಮಾತ್ರದಲ್ಲಿ ತೆರೆದಿಡುವ ಇಂಟರ್ ನೆಟ್ ಈ ಮಾಹಿತಿಗಳ ಕೆಲಸವನ್ನು ನಮಗಿಂತ ಸುಲಭವಾಗಿ ಮಾಡುತ್ತದೆ. ಎಷ್ಟು ಎಟಿಎಮ್ ಗಳಿವೆ ಆ ದೇಶದಲ್ಲಿ ಎಂಬುದರಿಂದ ಹಿಡಿದು ಸಾಂಸೃತಿಕ ಅನ್ಯತೆಯ ಚಿತ್ರಣದವರೆಗೆ. ಈ ಸಾಂಸ್ಕೃತಿಕ ಅನ್ಯತೆ ಎಂಬ ಪ್ರಯೋಗ ನನಗೆ ನಗು ತರಿಸುತ್ತಿದೆ-ಬರೆಯುವಾಗ.

ಏಕೆಂದರೆ, ಮನುಷ್ಯನ ಅತ್ಯಂತ ಸಹಜ ತಿಳುವಳಿಕೆಯಲ್ಲಿಯೇ ಆತ ಬೇರೆಯ ದೇಶದ ಇನ್ನೊಂದು ಸಂಸ್ಕೃತಿಯ ಭಿನ್ನತೆಯನ್ನು ಊಹಿಸಬಲ್ಲ. ಅಲ್ಲಿ ನಮಗಿಂತ ತೀರಾ ಏಲಿಯನೇಟೆಡ್ ಆದ ಸಂಸ್ಕೃತಿಯೊಂದು ಇರಬಲ್ಲದೆಂದು ಒಪ್ಪಿಕೊಳ್ಳಬಲ್ಲ. ಆದರೆ ನಮ್ಮ ಗೈಡೆಡ್ ಮತ್ತು ಪ್ಯಾಕೇಜ್ ಪ್ರವಾಸಗಳಲ್ಲಿ ದೇಶ ನೋಡಲು ಹೋಗುವ ಜನರು ಮತ್ತು ಲೇಖಕರು, ಈ ಭಿನ್ನತೆಗಳನ್ನು, ಮಾರಾಟಕ್ಕಿಟ್ಟ ಸಾಂಸ್ಕೃತಿಕ ಶೋಕೇಸ್ ನಲ್ಲಿ ಗ್ರಹಿಸಿ, ಅವನ್ನು ಪ್ರವಾಸ ಕಥನವೆಂದು ಬರೆಯುವ ಬಗ್ಗೆ ಬಗ್ಗೆ ನನ್ನ ತಕರಾರಿದೆ.

ಹಿಂದೆ ಇದು ಅನಿವಾರ್ಯವಿತ್ತು: ಬಹುಶಃ. ಹ್ಯುಯೆಂತ್ಸಾಂಗನಿಂದ ನಮ್ಮ ಕಾರಂತರವರೆಗೆ ಬೇರೆಯ ದೇಶವನ್ನು ಮಾಹಿತಿಗಳ ಮೇಲೆ ಗ್ರಹಿಸುವ ಅನಿವಾರ್ಯವಿತ್ತು. ಏಕೆಂದರೆ ಎಲ್ಲರೂ ತಿರುಗಲು ಸಾಧ್ಯವಿರುತ್ತಿರಲಿಲ್ಲ. ವಿಜಯನಗರದಲ್ಲಿ ರತ್ನಗಳನ್ನು ಸೇರಿನಲ್ಲಿ ಅಳೆಯುತ್ತಾರೆ ಎಂದು ಚೀನಿಯರಿಗೆ ತಿಳಿಸಿದ ಪ್ರವಾಸಿಗರ ಬರಹಗಳ ಆಧಾರದ ಮೇಲೆ ಅವರು ಭಾರತವನ್ನು ಅಳೆಯಬೇಕಿತ್ತು, ನಂಬಬೇಕಿತ್ತು ಮತ್ತು ಅದರ ಮೇಲೆ ಅವರು ಭಾರತವನ್ನು ಅರ್ಥೈಸಿಕೊಳ್ಳಬೇಕಿತ್ತು. ಕಾರಂತರು ಚಿತ್ರಿಸಿದ ಪಶ್ಚಿಮವು ಇವತ್ತಿನ ಐಟಿ ಪಡ್ಡೆಗಳಿಗೆ ಹಿತ್ತಿಲಿನಂತಾಗಿದೆ. (ತಮಾಷೆಯೆಂದರೆ ಈ ಐಟಿ ಪಡ್ಡೆಗಳೂ ಪ್ರವಾಸ ಕಥನ ಬರೆಯುತ್ತಾರೆ) ಆದರೆ ಇವತ್ತು ನಾವು ನಾಲ್ಕನೇ ಕ್ಲಾಸಿನಲ್ಲಿ ಓದಿದ ಚೀನಿ ಯಾತ್ರಿಕರ ಭಾರತ ಪ್ರವಾಸ ಕಥನದ ಮಾದರಿಗಳೂ ಅಥವಾ ತೀರ ಇತ್ತೀಚಿನ ಕಾರಂತರ ಮಾದರಿಗಳೂ ನಮಗೆ ಖಂಡಿತಕ್ಕೂ ಇಂಟರ್ನೆಟ್ಟಿನ ಕಾರಣದಿಂದ ಹಳತಾಗಿವೆ.

ನಮ್ಮಲ್ಲಿ- ಅಂದರೆ ಕನ್ನಡದಲ್ಲಿ- ಬಂದ ಮತ್ತು ಈ ಮೇಲಿನ ಪೂರ್ವಕಲ್ಪಿತ ದೇಶವೊಂದನ್ನು ತಮ್ಮ ಪ್ರವಾಸದ ಕಾರಣದಿಂದ ನಿಜವಾಗಿಸಿಕೊಳ್ಳುವ ಪ್ರವಾಸ ಕಥನಗಳಿಗೆ ಹೊರತಾಗಿ ಕಂಡುಬರುವ ಒಂದು ಕಥನ ತೇಜಸ್ವಿಯವರ `ಅಲೆಮಾರಿಯ ಅಂಡಮಾನ್‘. ಇಲ್ಲಿನ ಕೆಂಪುಹೊಳೆಯಲ್ಲಿ ಮೀನು ಹಿಡಿಯುತ್ತ ಕೂತ ಹಾಗೇ ಅಲ್ಲಿನ ಸಮುದ್ರದಲ್ಲಿ ಗಾಳ ಎಸೆದುಕೊಂಡು ಕೂತ ತೇಜಸ್ವಿಯವರಿಗೆ ಒಂದು ಅಪರೂಪದ ಮೀನು ಸಿಗುತ್ತದೆ. ಈ ಮೀನಿನ ಬಗ್ಗೆ ತೇಜಸ್ವಿಯವರಿಗೆ ಮುಂಚೆಯೇ ತಿಳುವಳಿಕೆಯಿತ್ತು; ಆದರೆ ಅದು ಅವರಿಗೆ ಎದುರಾಗುವ ರೀತಿ ಆ ಮೀನಿನಷ್ಟೇ ಅಪರೂಪದ್ದಾಗಿ ಆ ಪ್ರವಾಸ ಕಥನ ಹೊಸದಾಗುತ್ತ ನಳನಳಿಸುತ್ತದೆ. ರೂಪಕದ ಈ ಮಾತನ್ನು, ರೂಪಕಗಳನ್ನು ಬಿಡಿಸುವ ತಾಳ್ಮೆ ಮತ್ತು ಮತ್ತು ಅವಕ್ಕೆ ಒದಗುವ ಸಂಯಮಗಳಿರದ ಸಂಪಿಗೆಯ ಕೆಲವು ಓದುಗರಿಗೆ ಬಿಡಿಸಿ ಹೇಳುವ ಅನಿವಾರ್ಯತೆಯನ್ನು ವಿನಯದಲ್ಲಿ ಒಪ್ಪಿಕೊಂಡು:

ನಾನು ಹೇಳಲೇಬೇಕಿರುವ ಮಾತೆಂದರೆ ಪ್ರವಾಸ ಕಥನವು ಇನ್ನಿತರ ಸಾಹಿತ್ಯ ಪ್ರಕಾರಗಳಂತೆ ಬದಾಲಾವಣೆಗೆ ಒಳಗಾಗದೇ ಈಜಿಪ್ಟಿನ ಪಿರಾಮಿಡ್ಡುಗಳನ್ನು ಅಗಣಿತವಾಗಿ ಮತ್ತು ಒಂದೇ ತೆರನಾಗಿ ವರ್ಣಿಸಿದ ಪ್ರವಾಸಿಗಳ ತೆರ ನಿಶ್ಚಲವಾಗಿ ನಿಂತಿದೆ ಎಂದು. ಬಹುತೇಕರು ಪ್ರವಾಸದ ನಿಮಿತ್ತ `ಯಾವುದೋ ದೇಶದ ಯಾವುದೋ ಮೂಲೆಗೆ’ ಹೋಗುವುದಿಲ್ಲ. ಬದಲು ಎಟಿಎಮ್ ನಿಂದ ಹಿಡಿದು ಅಲ್ಲಿಗೆ ಹೋಗಿ ಲ್ಯಾಂಡ್ ಆದ ತಕ್ಷಣ ಅವರ ಸಾಂಪ್ರದಾಯಿಕ ನೃತ್ಯದೊಂದಿಗೆ ನಮ್ಮನ್ನು ಬರಮಾಡಿಕೊಳ್ಳುವ ಒಂದು ಟೂರಿಸ್ಟಿಕ್ ದೇಶಕ್ಕೆ ಹೋಗುತ್ತಾರೆ. ಇದು ನನಗೆ ಅತ್ಯಂತ ತಮಾಷೆಯಾಗಿ ಕಾಣುತ್ತದೆ. ನಾವು ಅವರಲ್ಲಿಗೆ ಹೋದಾಗ ಅವರು ಅವರ ನೃತ್ಯದೊಂದಿಗೆ ನಮ್ಮನ್ನು ಬರಮಾಡಿಕೊಳ್ಳುವುದು; ನಾವು ಅಲ್ಲಿ ಅವರಿಗೆ ಟೂರಿಸ್ಟುಗಳು. ಅವರು ನಮ್ಮಲ್ಲಿಗೆ ಬಂದಾಗ ನಾವು ಅದೇ ಕೆಲಸವನ್ನು ಮಾಡುವುದು: ಅವರು ನಮಗೆ ಟೂರಿಸ್ಟುಗಳು! ಪರಸ್ಪರರು ಯಾರೂ ಇಲ್ಲಿ ನಮಗಿಂತ ಹೊರಗಿನ ಒಂದು ಸಂಸ್ಕೃತಿಯನ್ನು ಅನುಸಂಧಾನ ಮಾಡಿಕೊಳ್ಳುವ ತಾಳ್ಮೆ ತೋರುವುದಿಲ್ಲ. ಎಲ್ಲರಿಗೂ ರೋಮಾಂಚನೆ ಬೇಕು. ಆಹಾ! ಎನ್ನುವಂತಿರಬೇಕು. ಆ ಸಂಸ್ಕೃತಿ ಪ್ರಕೃತಿಯೊಂದಿಗೆ ಇನ್ನೂ ಸಂಬಂಧವಿಟ್ಟುಕೊಂಡಿದೆ ಎಂದು ಕಾಣುವಂಥ ಏನಾದರೂ ಉದಾಹರಣೆಗಳು ಕಾಣಬೇಕು ಮತ್ತು ಅದನ್ನು ಪ್ರಕೃತಿಯ ಮಕ್ಕಳು ಎಂದೋ, ನಮ್ಮ ಗೊಂದಲದ ಬದುಕಿನ ಕಾಂಟ್ರರಿ ಎಂಬ ರೂಪಕವಾಗಿ ಬಳಸಿಕೊಳ್ಳಲು ಬರುವಂತಿರಬೇಕು. ಬರೆಯುವಂತಿರಬೇಕು.

ನಮ್ಮ ಕರ್ನಾಟಕ ಸರ್ಕಾರ ಆಗಾಗ ಹಮ್ಮಿಕೊಳ್ಳುವ ಅಸಂಖ್ಯ  ಯೋಜನೆಗಳಲ್ಲಿ ಒಂದಾಗಿ ಕೆಲವು ವರ್ಷದ ಹಿಂದೆ ದಾರಿ ಬದಿಗಳಲ್ಲಿ ಪ್ರವಾಸಿ ತಾಣಗಳ ಹೆಸರು, ದಾರಿ ಮತ್ತು ಕಿಲೋಮೀಟರುಗಳನ್ನು ಒಳಗೊಂಡ ಕಂಬಗಳನ್ನು ನಿಲ್ಲಿಸಿತು. ಈ ಪ್ರವಾಸಿ ತಾಣಗಳಲ್ಲಿ ಹೆಗ್ಗೋಡಿನ ನೀನಾಸಂ ಕೂಡ ಒಂದು! ಜೋಗ ನೋಡಲು ಬರುವ ಪ್ರವಾಸಿಗರು ಆಲ್ಲೇ ಬೋರ್ಡಿನಲ್ಲಿ ಕಾಣುವ ಹೆಗ್ಗೋಡನ್ನೂ `ಬಂದಾಗಿದೆ. ಇದನ್ನೂ ನೋಡಿಕೊಂಡು ಹೋಗಿಬಿಡೋಣ’ ಎಂಬ ತರಲೆಯಲ್ಲಿ ಹೋಗುತ್ತಾರೆ.

ಪ್ಯಾಕೇಜ್ಡ್ ಪ್ರವಾಸಗಳಲ್ಲಿ ಹೋಗುವ ಈ ಜನರು ಮತ್ತು ಆತ ಅಪ್ಪೀತಪ್ಪಿ ಲೇಖಕನಾಗಿದ್ದು ಬಿಟ್ಟರೆ ಆ ಪ್ರವಾಸ ಸ್ಥಳದಲ್ಲಿ ಏನೂ ಜೀವಂತಿಕೆ ಇಲ್ಲ ಎಂಬ ಹಳಹಳಿಕೆಯನ್ನು ತಮ್ಮ ಅನಿವಾರ್ಯ ಪ್ರವಾಸ ಕಥನದಲ್ಲಿ ಬರೆದು ತೃಪ್ತರಾಗುತ್ತಾರೆ. ಅಮೇರಿಕಾದ ಹಾಲೀವುಡ್ಡಿಗೂ, ಹೈದರಾಬಾದಿನ ಫಿಲ್ಮ್ ಸಿಟಿಗೂ, ಮರಳುಗಾಡಿನ ಬೆಲ್ಲಿ ಡಾನ್ಸ್ ಗೂ, ಕೀನ್ಯಾದ ಸಫಾರಿಗೂ ಇವತ್ತು ಅಂಥಾ ವ್ಯತ್ಯಾಸಗಳೇನಿಲ್ಲ. ಎಲ್ಲ ಡಾಲರ್ ಗಳಲ್ಲಿ ಸಿಗುತ್ತವೆ.

ಇವತ್ತು ಒಂದು ದೇಶದ ಮಾಹಿತಿಯನ್ನು ಲಕ್ಷಗಟ್ಟಲೆ ಲಿಂಕ್ ಗಳಲ್ಲಿ, ಸಮಯದ ನಿರ್ಲಕ್ಷ್ಯದಲ್ಲಿ ನಮ್ಮೆದುರಿಗೆ ತೆರೆದಿಡುವ ಇಂಟರ್ನೆಟ್ ಇದೆ. ಇಂಟರ್ನೆಟಿನ ಕುರಿತಾದ ನಮ್ಮೆಲ್ಲ ತಕಾರಾರು, ರಿಸರ್ವೇಶನ್ ಗಳ ಹೊರತಾಗಿಯೂ ಇಂಟರ್ನೆಟ್ ಈ ಕೆಲಸವನ್ನು ಮಾಡುತ್ತದೆ. ಅನೇಕ ದೇಶದ ಪ್ರವಾಸಿಗರಿಗೆ ಕಂಡ `ಒಂದು ದೇಶದ’ ವಿವರಗಳು ಭಾರತೀಯರಾದ ನಮ್ಮ ಕಣ್ಣೆದುರಿನ ಸತ್ಯಗಳಂತೆ ನಮಗೆ ಗೋಚರವಾಗುತ್ತವೆ. ಬ್ಲಾಗ್, ಆಯಾ ದೇಶದ ಎಂಬೆಸಿಗಳು ಪೋಸ್ಟ್ ಮಾಡಿದ ಅಧಿಕೃತ ಅಥವಾ ಕನಿಷ್ಠ ಪ್ರವಾಸಿಗರನ್ನು ಕೆರಳಿಸಲು ಮಾಡಿದ ದೇಶಗಳ ಪ್ರೊಫೈಲ್ ಗಳು, ಸೀರಿಯಸ್ ಬ್ಲಾಗರ್ ಗಳು ಬರೆದ ಪ್ರವಾಸ ಕಥನಗಳು (ಸೀರಿಯಸ್ ಬ್ಲಾಗರ್ ಗಳು ಎಂಬ ಪ್ರಯೋಗ ಏತಕ್ಕೆ ಎಂದರೆ, ನನಗೆ ಒಬ್ಬ ಸ್ನೇಹಿತನಿದ್ದಾನೆ. ಆತ ಹಿಂದೆ ತನ್ನ ಸ್ವಂತ ಹಣದಲ್ಲಿ ದೇಶ ದೇಶ ತಿರುಗುತ್ತ ತನ್ನ ಬ್ಲಾಗಿನಲ್ಲಿ ಅದನ್ನೆಲ್ಲ ಬರೆಯುತ್ತಿದ್ದಾಗ ಅದನ್ನು ಗುರುತಿಸಿದ ಒಂದು ಟ್ರಾವೆಲ್ ಮ್ಯಾಗಸಿನ್ ಅವನನ್ನು ತನ್ನ ಎಂಪ್ಲಾಯ್ ಆಗಿ ಮಾಡಿಕೊಂಡಿತು. ಇವತ್ತು ಆ ಮ್ಯಾಗಸಿನ್ ಅವನಿಗೆ ತಿರುಗಲು ದುಡ್ಡು ಕೊಡುತ್ತದೆ. ಆತ ತನ್ನಿಷ್ಟ ಬಂದಷ್ಟು ದಿನ, ತಾನಿಷ್ಟ ಪಟ್ಟ ದೇಶಕ್ಕೆ ಪ್ರವಾಸ ಮಾಡಬಹುದು ಮತ್ತು ಅದನ್ನು ಆ ಪತ್ರಿಕೆಗೆ ಬರೆಯಬಹುದು.), ನೆಟ್ ಮಾಹಿತಿಗಳು ಮತ್ತು ಇತ್ಯಾದಿಗಳು ನಮಗೆ ಎಲ್ಲ ಮಾಹಿತಿಗಳನ್ನು ಒದಗಿಸುತ್ತವೆ. ಕೇವಲ ಮಾಹಿತಿಗಳಷ್ಟೇ ಅಲ್ಲ. ನಮ್ಮ ಇತ್ತೀಚಿನ ಹುಚ್ಚಾದ `ಸಾಂಸ್ಕೃತಿಕ’ ಭಿನ್ನತೆಗಳನ್ನು ಕೂಡ ನಮಗೆ ಪರಿಚಯ ಮಾಡಿಕೊಡುತ್ತವೆ.

ಹೀಗಿರುವಾಗ ಒಬ್ಬನ ಪ್ರವಾಸ ಕಥನದ ಭಿನ್ನತೆಯೇನು? ಅದೂ ಹತ್ತು ಹದಿನೈದು ದಿನಗಳ ಪ್ಯಾಕೇಜ್ಡ್ ಪ್ರವಾಸದ ಸಮಯದಲ್ಲಿ ಒಬ್ಬ ತನ್ನ ಪೂರ್ವಗ್ರಹಗಳಿಗಿಂತ ಭಿನ್ನವಾದ ಹೊಸ ಬದುಕನ್ನು ಹೇಗೆ ನೋಡಬಲ್ಲ, ಗ್ರಹಿಸಬಲ್ಲ ಮತ್ತು ಚಿತ್ರಿಸಬಲ್ಲ? ನಿಮ್ಮಲ್ಲಿ ಅನೇಕರಿಗೆ ಸಕಾರಣವಾಗಿ ಅಮೇರಿಕಾದಲ್ಲಿ ಕೆಲಸ ಮಾಡುತ್ತಿರುವ ಐಟಿ ಸ್ನೇಹಿತನಿದ್ದಾನು. ಅವನಿಗೆ ಆತ ತನ್ನ ವೀಕೆಂಡ್ ಗಳಲ್ಲಿ ಯಾರ ಜೊತೆ ಬಿಯರ್ ಕುಡಿಯುತ್ತಾನೆ ಮತ್ತು ಯಾವ ಅಮೇರಿಕನ್ ಶೋಕೇಸ್ಡ್ ಸಿಟಿಗಳಲ್ಲಿ ಅಮೇರಿಕಾವನ್ನು ನೋಡುತ್ತಾನೆ ಕೇಳಿನೋಡಿ. ಆತ ಯಾವ ಕಾರಣಕ್ಕೂ ತನ್ನ ಭಾರತೀಯ ಕೊಲೀಗ್ ಗಳ ಜೊತೆ ಕುಡಿಯುತ್ತಾನೆ ಮತ್ತು ಎಲ್ಲ `ಪ್ರವಾಸಿಗರು’ ಕಂಡ ಅಮೇರಿಕಾವನ್ನಷ್ಟೇ ನೋಡುತ್ತಾನೆ. (ಅಮೇರಿಕಾದಲ್ಲಿ ಯಾವುದೋ ಪ್ರಾಜೆಕ್ಟ್ ನಿಮಿತ್ತ ಇರುವ ನನ್ನ ಸ್ನೇಹಿತನನ್ನು ಚಾಟ್ ನಲ್ಲಿ ಮಾತಾಡಿಸುತ್ತ ಕೇಳಿದಾಗ ಆತ ನನಗೆ ಹೇಳಿದ್ದು: ನಾನು ಲಾಸ್ ಎಂಜಲಿಸ್ ಹತ್ತಿರದ ಹೊಗೆ ಮತ್ತು ಧೂಳು ತುಂಬಿಕೊಂಡ ಇಂಡಷ್ಟ್ರಿಯಲ್ ಊರೊಂದರಲ್ಲಿ ಇದ್ದೇನೆ, ನಿಜವಾಗಿ ಅಮೇರಿಕಾ ನೋಡಬೇಕೆಂದರೆ ಇಲ್ಲಿನ ಹತ್ತಿರದ ಸಿಟಿಯಾದ ಲಾಸ್ ಎಂಜಲಿಸ್ ಗೆ ಹೋಗಬೇಕೆಂದು)

ನನಗೆ ಈ ನಿಜವಾದ ಅಮೇರಿಕಾ ಎಂದರೆ ಏನು ಅನ್ನಿಸುತ್ತದೆ. ಆತ ಈ ಮಾತನ್ನು ಹೇಳಿದಾಗ ನನಗೆ ಟ್ವೈನ್ ನ `ದ ಅಡ್ವೆಂಚರ್ಸ್ ಆಫ್ ಹಕ್ಲ್ ಬರಿ ಫಿನ್‘ ಎಂಬ ಕಾದಂಬರಿ ನೆನಪಾಯಿತು. ಅದರಲ್ಲಿನ ಅಮೇರಿಕನ್ ಇಂಗ್ಲೀಶ್ ನ ಡಯಲೆಕ್ಟ್ ಮಾತನಾಡುವ ಜಿಮ್ ನಂತಹ ನಿಗ್ಗರ್(ಕರಿಯ ಎಂಬುದಕ್ಕೆ ಇಂಗ್ಲಿಶ್ ನಲ್ಲಿರುವ ಅಫೆನ್ಸಿವ್ ಪದ)ಗಳು ಮತ್ತು ಅವರ ಬದುಕಿನ ಇನ್ನೊಂದು ಅಮೇರಿಕಾಗಳು ಯಾವತ್ತು ನಮ್ಮ ಪ್ರವಾಸಿಗರಿಗೂ, ಐಟಿ ಹುಡುಗರಿಗೂ `ನಿಜವಾದ’ ಅಥವಾ ಕನಿಷ್ಠ `ಇನ್ನೊಂದು’ ಅಮೇರಿಕಾವಾಗಿ ಕಂಡೀತು ಎಂದೂ ಕುತೂಹಲವಾಗುತ್ತದೆ. ನಾನು ಇದೆಲ್ಲವನ್ನೂ ಆದಷ್ಟೂ ಯಾವ ರೂಪಕಗಳನ್ನಾಗಿಸದೇ ಬರೆಯಲು ಪ್ರಯತ್ನಿಸುತ್ತಿದ್ದೇನೆ. ಕೆಲವೇ ವಾರಗಳ ಹಿಂದೆ ಬಿಬಿಸಿ ಅಮೇರಿಕಾದ ಹಳ್ಳಿಯೊಂದರಲ್ಲಿನ ಜೀತ ಪದ್ಧತಿಯ ಕೇಸ್ ಒಂದನ್ನು ವಿವರವಾಗಿ ವರದಿ ಮಾಡಿತ್ತು ಮತ್ತು ಚರ್ಚಿಸಿತ್ತು. ನಮ್ಮಲ್ಲಿ ಒಬ್ಬ ಕೂಡ ಅಮೇರಿಕಾದ ಈ ಹಳ್ಳಿಯನ್ನು ಹುಡುಕಿ ಅಲ್ಲಿಗೆ ಯಾಕೆ ಪ್ರವಾಸ ಹೋಗುವುದಿಲ್ಲ? ವಿನಾಕಾರಣ, ಗೊತ್ತಿದ್ದೂ ಗೊತ್ತಿದ್ದೂ `ನನಗೆ ಜೀವಂತಿಕೆ ಕಾಣಲಿಲ್ಲ ನಾನು ಮೊನ್ನೆ ಸುಡಾನ್ ನಲ್ಲಿ ನೋಡಿದ ಸಾಂಪ್ರದಾಯಿಕ ನೃತ್ಯದಲ್ಲಿ’ ಎಂದು ಪ್ರವಾಸ ಕಥನದಲ್ಲಿ ಬರೆದುಕೊಳ್ಳುವ ರಮ್ಯತೆಯನ್ನು ಕನಸುವುದರ ಬದಲು..

ನಮ್ಮ ಪ್ರವಾಸ ಕಥನಗಳು ಈ ಮಾದರಿಯವಾಗಿವೆ ಇವತ್ತು. ದೇಶ ಬಿಟ್ಟು ಹೋಗಿ ಹೊರಗಿನ ದೇಶವನ್ನು ಚಿತ್ರಿಸುವಾಗ ಒಂದೋ ಗೈಡ್ ಹೇಳಿದ ಮತ್ತು ತಾನು ಓದಿಕೊಂಡ ಅಂಕಿ ಅಂಶ ಗಳನ್ನು ನರೇಟ್ ಮಾಡುವ ಕಥನಗಳನ್ನು “ಪ್ರವಾಸ ಕಥನ” ಎಂದು ಬರೆಯುವ ಸ್ಟಫ್ ಗಳು ನನ್ನ ದೃಷ್ಟಿಯಲ್ಲಿ ಪ್ರವಾಸ ಕಥನಗಳಲ್ಲ. ಅವು ಡ್ರೈ ಡಾಕ್ಯುಮೆಂಟ್ ಗಳು. ಇವತ್ತಿನ ಸನ್ನಿವೇಶದಲ್ಲಿ ಇವು ಬದಲಾಗದೇ ಪ್ರವಾಸ ಕಥನವೆಂಬ ಪ್ರಕಾರ ಮಮ್ಮಿಯಾಗಿಯೇ ಉಳಿದಿದೆ. ನಮ್ಮೆಲ್ಲರ ಕೋಶದೋದಿನ ತಿಳುವಳಿಕೆಗಳನ್ನು ತ್ರೀ.ಡಿ ಗಳಲ್ಲಿ ನಮ್ಮೆದುರು ನಿಜವಾಗಿಸುವ ಈ ಭಯಂಕರ ಕಾಲದಲ್ಲಿ, ನಾವು ನಮ್ಮ ಓದಿನ ತಿಳುವಳಿಕೆಯಿಂದ ಪಡಕೊಂಡದ್ದನ್ನು ಆ ಜಾಗಕ್ಕೆ ಹೋಗಿ ಮತ್ತೆ ನಿಜವಾಗಿಸಿಕೊಳ್ಳುವ ಅವಶ್ಯಕತೆಗಳು ನನಗೆ ಕಾಣುತ್ತಿಲ್ಲ. ಈ ಎಲ್ಲ “ಪ್ರವಾಸೀ ತಾಣಗಳು” ನಮ್ಮ ಊಹೆಗಳನ್ನು ಸುಳ್ಳು ಮಾಡುವ ಅಥವಾ ನಿಜ ಮಾಡುವ ತಮ್ಮೆಲ್ಲ ಪ್ರಭೆಗಳನ್ನು ಕಳೆದುಕೊಂಡು ನಿಸ್ತೇಜವಾಗಿವೆ. ಮನುಶ್ಯನ ಧಾರ್ಮಿಕ, ಸಾಂಸ್ಕೃತಿಕ ಪೂರ್ವಾಗ್ರಹಗಳ ಮನಸ್ಸಿಗೆ ಮಾಸ್ಟರ್‌ಬೇಶನ್ ಸಂತೋಷಗಳನ್ನು ಮಾತ್ರ ಕೊಡಬಹುದಾದ ಈ ಪ್ಯಾಕೇಜ್ಡ್ ಪ್ರವಾಸಗಳು ಅಷ್ಟೇ ನೀರಸವಾದ ಅನುಭವವನ್ನು ಪಯಣಿಗನಿಗೂ ಅದನ್ನು ಕಥನಗಳಲ್ಲಿ ಓದುವ ಓದುಗನಿಗೂ ಕೊಡುತ್ತವೆ.

ಹುಯೆನ್ ತ್ಸಾಂಗ್ ನೆಂಬ ನಮ್ಮ ನಾಲ್ಕನೇ ತರಗತಿಯ ಗೆಳೆಯ ಇಲ್ಲಿಗೆ ಬಂದಾಗ ಬಹುಷಃ ಒಬ್ಬ ಝೆನ್ ನ ಕುತೂಹಲ, ಖಾಲೀತನದಲ್ಲಿ ಬಂದಿದ್ದನಿರಬೇಕು. ಅದಕ್ಕೇ ವಿಜಯನಗರದ ಕುರಿತ ಅವನ ಭ್ರಮೆ-ದಿಗ್ಭ್ರಮೆಗಳು ಇವತ್ತಿಗೂ ಅಷ್ಟೇ ಶಕ್ತವಾಗಿ, ತಾಜಾವಾಗಿ ನಮ್ಮೊಳಗೂ ಅವನ ಕಥನದ ಕಾರಣದಿಂದ ಕೂತಿವೆ. ತೇಜಸ್ವಿಗೆ ಸಿಕ್ಕ ಅನನ್ಯ ಮೀನಿನಂಥ ಮೀನುಗಳ ಬಾಲಕ್ಕಂಟಿ ಅನೂಹ್ಯತೆಯ ಕಡೆಗೆ ಕಡೆಗೆ ಪ್ರವಾಸ ಹೊರಡದೇ ಅಲ್ಲೇ ಅಕ್ವೇರಿಯಂ ನಲ್ಲಿ ಗಾಳ ಎಸೆದು ಕುಳಿತು “ಜೀವವಿಲ್ಲ, ಭಾವವಿಲ್ಲ” ಎಂದು ನವೋದಯದವರ ಬಗೆಯಲ್ಲೋ ಅಥವಾ “ಇತ್ತೀಚೆಗೆ ಗಾಳದ ತುದಿಗೆ ಡಾಲರ್ ಸಿಕ್ಕಿಸದೇ ಹೋದರೆ ಮೀನುಗಳು ಬೀಳುವುದಿಲ್ಲ” ಎಂದು ನವ್ಯದವರ ಸ್ಟೈಲ್ ನಲ್ಲೋ ಗೊಣಗುತ್ತಿದ್ದರೆ ನಾವು ಮುದುಕರಾದೆವು ಎಂದಷ್ಟೇ ಅರ್ಥ.

ನಮ್ಮ ಪಯಣ ಮತ್ತು ಕಥನಗಳು ಈ ಅನನ್ಯತೆ ಮತ್ತು ಅನೂಹ್ಯತೆಗಳ ಕಡೆಗೆ ತಿರುಗದೇ ಹೋದರೆ, ಪ್ರವಾಸ ಕಥನವೆಂಬ ಪ್ರಕಾರ `ಹಳೆ ಪ್ಲಾಸ್ಟಿಕ್, ಹಳೆ ತಗಡು, ಹಳೆ ಕಬ್ಬಿಣ ಥರ ಹೋಯಿ….’

ಎರಡನೇಯ ಕಾರಣ- ಇದು ಪ್ರವಾಸ ಕಥನವಲ್ಲದಿರುವುದಕ್ಕೆ- ನಾನು ಈ ದೇಶಕ್ಕೆ ಪ್ರವಾಸಿಗನಲ್ಲ. ಯಾಕೆ ಇಲ್ಲಿಗೆ ಬಂದು ಒಂದು, ಒಂದೂವರೆ ವರುಷ ಇರಲು ತೀರ್ಮಾನಿಸಿದೆ ಎಂಬುದಕ್ಕೆ ನನಗೆ ಕಾರಣಗಳು ಹೊಳೆಯುತ್ತಿಲ್ಲ. ಅಥವಾ ಕಾರಣಗಳ ಕುರಿತು ಗೊಂದಲವಾಗುತ್ತಿದೆ. ಎಲ್ಲರಿಗೆ ನಾನು ಹೇಳಿದಂತೆ ಫ್ರೆಂಚ್ ಕಲಿಯಲು ಇಲ್ಲಿಗೆ ಬಂದೆನೋ, ವಿದ್ಯಾಭ್ಯಾಸ ಮುಂದುವರೆಸಲು ಬಂದೆನೋ, ತಲೆ ಕೆಟ್ಟಿತ್ತೋ- ಎಲ್ಲವೂ ನನಗೆ ಅರ್ಧ ಸುಳ್ಳುಗಳಂತೆ ಕಾಣುತ್ತಿದೆ. ಉಳಿದರ್ಧ ಸತ್ಯವಿದ್ದೀತು ಎಂಬ ಬಗ್ಗೆಯೂ ಸಕಾರಣ ಗೊಂದಲಗಳಿವೆ. ನಾನು ನನ್ನ ವೀಸಾ ಎಕ್ಸ್ ಟೆಂಡ್ ಮಾಡಲು ಒದ್ದಾಡುತ್ತ ಯಾವುದೋ ಡಾಕ್ಯುಮೆಂಟಿಗಾಗಿ ಇಲ್ಲಿನ ಇಂಡಿಯನ್ ಎಂಬೆಸಿಗೆ ಹೋಗಿದ್ದಾಗ ಅಲ್ಲಿನ ಬಂಗಾಳಿ ಬಾಬು ಒಬ್ಬ ನನಗೆ ಇಲ್ಲಿಗೆ ಬಂದದ್ದೇಕೆಂದು ಕೇಳಿದ. ಅರ್ಧ ಬಿಸಿಲಿಗೂ ಅರ್ಧ ವೀಸಾ ಚೊರೆಗಳಿಗೂ ತಲೆ ಕೆಟ್ಟಿದ್ದ ನಾನು- `my life was always all over the place: perhaps I came here because of my madness’ ಎಂದಿದ್ದೆ. ಅಷ್ಟೇ ನಿಜವೇನೋ.

ಇಲ್ಲಿ, ಮಡಗಾಸ್ಕರ್ ನಲ್ಲಿ- ಭಾರತೀಯನಾಗಿ ಇಲ್ಲಿನ ಜನ, ಸಂಸ್ಕೃತಿ, ಜೀವನಗಳಲ್ಲಿ ಒಂದಾಗುವುದು ಕಷ್ಟಸಾಧ್ಯ. ನಾನು ಬದುಕುತ್ತಿರುವ ಸ್ಥಳವಾದ ರಾಜಧಾನಿಯಲ್ಲಿ ಇದು ದುಸ್ಸಾಧ್ಯ. ಇಲ್ಲಿಂದ ಹೊರಗೆ, ಅಂದರೆ ಭಾರತೀಯ ಮೂಲನಿವಾಸಿಗಳು (ಅಂದರೆ ಸುಮಾರು ತಲೆಮಾರುಗಳ ಹಿಂದೆ ಇಲ್ಲಿಗೆ ಬಂದು ಬೀಡುಬಿಟ್ಟ ಭಾರತೀಯರು!) ಹೆಚ್ಚಿರುವ ಮಡಗಾಸ್ಕರ್ ನ ಪೂರ್ವ ಕರಾವಳಿಗಳಲ್ಲಿ ಈ ಸಮಸ್ಯೆ ಇಲ್ಲವಾದರೂ, ಈ ರಾಜಧಾನಿಯಲ್ಲಿ ಭಾರತೀಯರನ್ನು ಕಂಡರೆ ಜನ ಉರಿದು ಬೀಳುತ್ತಾರೆ. ಇದಕ್ಕೆ ಖಂಡಿತ ಕಾರಣಗಳಿವೆ. ಮಡಗಾಸ್ಕರ್ ನ ಜನ ಭಾರತೀಯರನ್ನೂ, ಪಾಕಿಸ್ತಾನಿಗಳನ್ನೂ, ಲಂಕನ್ನರನ್ನೂ ಮಲಗಾಸಿಯಲ್ಲಿ `ಕರಾನ’ ಎಂದು ಕರೆಯುತ್ತಾರೆ. (ನನಗೆ ಈ ಪದ ಕೇಳಿದರೆ ಮೈ ಎಲ್ಲ ಉರಿಯುತ್ತದೆ) ಫ್ರೆಂಚರನ್ನು ಈ ಭಾಷೆಯಲ್ಲಿ `ವಾಸಾ’ ಎಂದು ಗುರುತಿಸಲಾಗುತ್ತದೆ.

ಮಲಗಾಸಿಗಳಿಗೆ ಭಾರತೀಯರನ್ನು ಕಂಡರೆ ಕಿಂಚಿತ್ತೂ ಆಗುವುದಿಲ್ಲ ಏಕೆಂದರೆ, ಈ ಎಲ್ಲ ಕರಾನಗಳೂ ಅಹಂಕಾರಿ ಶ್ರೀಮಂತರು ಮತ್ತು ಯಾರ ಜೊತೆಯೂ ಬೆರೆಯುವುದಿಲ್ಲ. ತಾವು ಮತ್ತು ತಮ್ಮ ಹಣ ಮಾಡುವ ಚಟ ಎರಡನ್ನು ಬಿಟ್ಟರೆ ಇನ್ಯಾವುದಕ್ಕೂ ತಮ್ಮನ್ನು ಒಡ್ಡಿಕೊಳ್ಳದಷ್ಟು ದರಿದ್ರ ಸಭ್ಯ ಜನ ಈ ಕರಾನಗಳು. ಇಲ್ಲಿರುವ ತೊಂಬತ್ತೈದು ಪ್ರತಿಶತ ಕರಾನಗಳು ಗುಜರಾತಿಗಳು. ಎಲ್ಲೋ ನನ್ನಂತ ಸೌತ್ ಇಂಡಿಯನ್ ಎಡವಟ್ಟರು ಒಬ್ಬಿಬ್ಬರನ್ನು ಬಿಟ್ಟರೆ, ಇನ್ನೆಲ್ಲರೂ ಉತ್ತರ ಪ್ರದೇಶ, ಮಧ್ಯಪ್ರದೇಶಗಳಿಂದ ಬಂದು ಅಲ್ಲಿನ ಊಟವನ್ನೇ ಇಲ್ಲೂ ತಯಾರಿಸಿ ಉಂಡು, ಅಲ್ಲಿ ಮಲಗುವ ಹಾಗೇ ಇಲ್ಲೂ ತೊಡೆ ಸಂಧಿಯಲ್ಲಿ ಕಯ್ಯಿಟ್ಟು ಮಲಗುವ ಅಪ್ಪಟ ಕರಾನಗಳು.

ಆಫ್ರಿಕಾ, ಅರಬ್, ಭಾರತ, ಮಲೇಷಿಯ, ಇಂಡೋನೇಷಿಯ, ಫ್ರೆಂಚರಿಂದ ನುರಿದು ಹೋಗಿ ಸದಾ `ಮೆಟಿಸ್’ (ಮೆಟಿಸ್ ಅಂದರೆ ಫ್ರೆಂಚಿನಲ್ಲಿ ಬೇರೆ ಬೇರೆ ಜನಾಂಗಗಳ ಸೇರುವಿಕೆಯಿಂದ ಹುಟ್ಟಿದ ಸಂತತಿ)ಗಳಾಗಿದ್ದ ಮಲಗಾಸಿಗಳಿಗೆ ಈ ಆಧುನಿಕ ಗುಜರಾತಿಗಳ ಅಹಂಕಾರ ಅನ್ಯವಾಗಿ ಮತ್ತು ದ್ವೇಷಿಸಲರ್ಹವಾಗಿ ಕಂಡಿದ್ದರೆ ಅಚ್ಚರಿಯಿಲ್ಲ. ಈ ಕುರಿತು ಮುಂದೆ ಬರೆಯುತ್ತೇನೆ: ಉದಾಹರಣೆಗಳೊಂದಿಗೆ.

ಇದನ್ನು ಕೇವಲ ಪ್ರವಾಸ ಕಥನವಾಗಿಸಲಿಕ್ಕೆ ಸಾಧ್ಯವಾಗದ ಇನ್ನೊಂದು ಕಾರಣ ಹೀಗೆ: ಒಮ್ಮೆ ನಾನು ಫ್ರಾನ್ಸ್ ನಲ್ಲಿ ವಾಸಿಸುವ ನನ್ನ ಫ್ರೆಂಚ್ ಸ್ನೇಹಿತನೊಬ್ಬನಿಗೆ ಬರೆಯುತ್ತ ಇಲ್ಲಿನ ನನ್ನ ಅನೇಕ ಸ್ವೀಡಿಶ್, ಜರ್ಮನ್, ಫ್ರೆಂಚ್, ಇಂಡೋನೇಶಿಯನ್, ಚೈನೀ, ಪಾಕಿಸ್ತಾನಿ, ಟರ್ಕಿಶ್ ಮತ್ತು ಇತ್ಯಾದಿ ಸ್ನೇಹಿತರ ಬಗ್ಗೆ ಬರೆಯುತ್ತಿದ್ದೆ. ಆತ ನನಗೆ ಪ್ರತಿಕ್ರಿಯಿಸಿದ. `ನೀನು ಹೇಳುವುದು ನೋಡಿದರೆ ಮಡಗಾಸ್ಕರ್ ತುಂಬ ಕಾಸ್ಮೊಪಾಲಿಟನ್ ಆಗಿ ಕಾಣುತ್ತಿದೆ’ ಎಂದು.

ಆದರೆ ಈ  ಮಡಗಾಸ್ಕರ್ ಎಂಬ ಟೂರಿಸಂ ಅನ್ನು ನಂಬಿಕೊಂಡ ಮತ್ತು ಕಳೆದ ವರ್ಷ(2009)ದಲ್ಲಿ ಜಾಗತಿಕ ಆರ್ಥಿಕ ಕುಸಿತದಿಂದ ಶೇಕಡ 80 ರಷ್ಟು ಟೂರಿಸಂ ಆದಾಯವನ್ನು ಕಳೆದುಕೊಂಡ ಈ ದೇಶದಲ್ಲಿ ಒಂದೂ ಕಾಸ್ಮೋಪಾಲಿಟನ್ ಅನ್ನಿಸುವ ಪಟ್ಟಣವಿಲ್ಲ. ಬದಲಾಗಿ ಇದು ಜಗತ್ತಿನ ಹತ್ತು ಬಡದೇಶಗಳಲ್ಲಿ ಒಂದು. ಆದರೆ ತನ್ನ ಟೂರಿಸಂನ ಕಾರಣದಿಂದಲೂ ಮತ್ತು ಇದು ಬಡ ದೇಶವಾದದ್ದರಿಂದ ವರ್ಲ್ಡ್ ಬ್ಯಾಂಕ್, ಅಮೇರಿಕಾ, ಯೂರೋಪ್ ನ ಅಸಂಖ್ಯ ಎನ್.ಜಿ.ಓಗಳು ಇಲ್ಲಿ ನಡೆಸುವ ಹೆಲ್ಪಿಂಗ್ ಚಾಕರಿಗಳ ಸಲುವಾಗಿಯೂ ಇಲ್ಲಿ ಅನೇಕ ವಿದೇಶಿಯರು ವಾಸಿಸುತ್ತಾರೆ. ನನ್ನಂಥ ಬಡ ಭಾರತೀಯ ವಿದೇಶಿಯರು ತಮ್ಮ ವೀಕೆಂಡ್ ಅನಿವಾರ್ಯತೆಗಳಲ್ಲಿ ಪಬ್ಬಲ್ಲಿ ಒಂಟಿ ಕೂತು ಕುಡಿಯುವಾಗ ಈ ಅನ್ಯ ದೇಶೀಯರು ಭಾರತದ ಕುರಿತ ತಮ್ಮ ಅರ್ದಂಬರ್ಧ ತಿಳುವಳಿಕೆ, ಕುತೂಹಲ, ಪ್ರಶ್ನೆಗಳೊಂದಿಗೆ ನಮ್ಮ ಟೇಬಲ್ಲಿಗೆ ಬರುತ್ತಾರೆ ಮತ್ತು ಸ್ನೇಹಿತರಾಗುತ್ತಾರೆ.

ಹಾಗಾಗಿ, ಈ ಕಥನವು ಕೇವಲ ಭಾರತೀಯನೊಬ್ಬನ ಮಲಗಾಸೀ ಸಂಸ್ಕೃತಿಯ ಕುರಿತಾದ ಟಿಪ್ಪಣಿಗಳು ಮಾತ್ರವಾಗದೇ, ಈ ಟೂರಿಸ್ಟ್ ದೇಶದ ಅನಿವಾರ್ಯ ಭೇಟಿಗಳಲ್ಲಿ ಒಬ್ಬ ಎದುರುಗೊಳ್ಳುವ ಅನ್ಯ ವಿದೇಶಿಯರ ಅನುಭವ, ಬದುಕುಗಳ ಕಥನವೂ ಹೌದು. ಅರ್ಥಾತ್ ಇದು ವಿದೇಶಿಯನ ಕಣ್ಣಿನಲ್ಲಿ ವಿದೇಶಿಯರ ಕಥನವಾಗಿಯೂ ಅನೇಕ ಗೊಂದಲಮಯ ವರ್ಣ, ವಾಸನೆಗಳಲ್ಲಿ, ಮುಂದಿನ ವಾರಗಳಲ್ಲಿ ನಿಮ್ಮ ಕಣ್ಣೆದುರು ಬರಲಿದೆ.