ಪ್ರಾಮಾಣಿಕವಾದದ್ದಾಗಲೀ, ಯಥೋಚಿತವಾದದ್ದಾಗಲೀ, ದುರುದ್ದೇಶಪೂರ್ವಕವಾದದ್ದಾಗಲೀ ಉಪದೇಶವೆಂಬುದು ಉಪದೇಶವೇ! ಈ ಜಗತ್ತಿನಲ್ಲಿ ಉಪದೇಶಗಳಿಂದ ಆಗಿರುವಷ್ಟು ಹಾವಳಿ ಇನ್ನು ಯಾವುದರಿಂದಲೂ ಆಗಿಲ್ಲ. ಎಲ್ಲ ಬಣ್ಣದ, ಎಲ್ಲ ನೆರಳಿನ, ಎಲ್ಲ ಧರ್ಮದ, ಎಲ್ಲ ವಿತಂಡವಾದದ ಸಕಲ ರೀತಿಯ ಆಧ್ಯಾತ್ಮಿಕ, ಸಾಂಸ್ಕೃತಿಕ ಉಪದೇಶಗಳಿಂದ ಈ ಜಗತ್ತು ನಲುಗಿ ನಲುಗಿ ಬಸವಳಿದುಹೋಗಿದೆ. ಈಗಾಗಲೇ ಸತ್ಯವನ್ನು ಕಂಡಾಗಿದೆ, ಹೇಳಿಯೂ ಆಗಿದೆ ಎಂಬ ಬಾಲಿಶ ಧೋರಣೆಯಿಂದ ಕೊನೆಗೂ ನಾನು ಒಂದು ಮಾತು ಹೇಳುತ್ತೇನೆ. ನಾನು ವಿರೋಧಿಸುತ್ತಿರುವುದು ಉಪದೇಶಗಳನ್ನು, ಉಪದೇಶಾತ್ಮಕತೆಯನ್ನು ಹೊರತು ಚಿಂತನಶೀಲತೆಯನ್ನಲ್ಲ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಕೊನೆಯ ಪ್ರಬಂಧ ನಿಮ್ಮ ಓದಿಗೆ

ಬರಹಗಾರನ ಅದೃಷ್ಟವೋ, ದುರಾದೃಷ್ಟವೋ, ಅವನ ಬರವಣಿಗೆಗೆ ಅಭಿಪ್ರಾಯ, ವಿಮರ್ಶೆ, ಪ್ರಶಸ್ತಿಗಳು ಸಿಗುವಂತೆ ನಿರಂತರವಾಗಿ ಉಪದೇಶವೂ ಸಿಗುತ್ತಿರುತ್ತದೆ. ಹೇಗೆ ಬರೆಯಬೇಕು, ಎಷ್ಟು ಬರೆಯಬೇಕು, ಯಾರಿಗೆ ಬರೆಯಬೇಕು, ಯಾವಾಗ ಬರವಣಿಗೆ ನಿಲ್ಲಿಸಬೇಕು ಎಂದು ಸಿಕ್ಕ ಸಿಕ್ಕವರೆಲ್ಲ ಉಪದೇಶಿಸುತ್ತಲೇ ಇರುತ್ತಾರೆ. ನನಗೆ ಈ ರೀತಿಯ ಉಪದೇಶ ಸ್ವಲ್ಪ ಹೆಚ್ಚಾಗಿಯೇ ಸಿಕ್ಕಿದೆ. ಅದು ನಾನು ಪ್ರಬಂಧಕಾರನೂ ಆಗಿರುವುದರಿಂದ. ಕತೆ, ಕಾದಂಬರಿ, ಅಂಕಣ, ವಿಮರ್ಶೆ, ಆತ್ಮಕತೆ, ಸ್ವಭಾವಚಿತ್ರ ಎಂದು ನನಗೆ ಬರವಣಿಗೆ ಬೇರೆ ಬೇರೆ ಪ್ರಕಾರಗಳಲ್ಲಿ ಹಂಚಿಹೋಗಿರುವುದರಿಂದ, ನಾನು ನಾನಾ ರೀತಿಯ ಉಪದೇಶಗಳನ್ನು ನಿರಂತರವಾಗಿ ಸ್ವೀಕರಿಸಲೇ ಬೇಕಾಗುತ್ತದೆ. ಪ್ರಬಂಧಕಾರನಿಗೆಂದೇ ಕೆಲವು ವಿಶಿಷ್ಟವಾದ, ನಿರ್ದಿಷ್ಟವಾದ ಉಪದೇಶಾಮೃತವೂ ಇರುತ್ತದೆ.

ನೀವು ಏಕೆ ಬರೇ ಪ್ರಬಂಧಗಳನ್ನು ಬರೆದುಕೊಂಡು “ಹಾಯಾಗಿರಬಾರದು” ಎನ್ನುವುದು ಮೊದಲ ಉಪದೇಶ. ಈ ಉಪದೇಶವನ್ನು ನಾನೂ ಒಪ್ಪುತ್ತೇನೆ. ಹಾಗೆ ಹಾಯಾಗಿರಲು ನನಗೂ ಇಷ್ಟವೇ! ಆದರೆ ಎಲ್ಲ ಸಮಯ ಸಂದರ್ಭದಲ್ಲೂ ಪ್ರಬಂಧಗಳನ್ನು ಬರೆಯಬೇಕೆನಿಸುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಕಥಾ ಪಾತ್ರಗಳೇ ಪ್ರಬಂಧಗಳನ್ನು ಇಷ್ಟಪಡುವುದಿಲ್ಲ. ನನ್ನ ಬಗ್ಗೆ ಕೇವಲ ಪ್ರಬಂಧ ಬರೆಯಬೇಡ ಎಂದು ತಾಕೀತು ಮಾಡುತ್ತವೆ. ಇನ್ನೂ ಕೆಲವು ಸನ್ನಿವೇಶಗಳಲ್ಲಿ ಮತ್ತು ಇನ್ನು ಕೆಲವು ಸಲ ವಿಚಾರ ಮಂಡನೆಗೆ ಪ್ರಬಂಧದ ದಾಟಿ ಒಗ್ಗುವುದಿಲ್ಲ. ಅಲ್ಲದೆ, ನನ್ನ ಮನಸ್ಸಿನ ಲಹರಿ ಕೂಡ ಯಾವಾಗಲೂ ಪ್ರಬಂಧಕಾರನದೇ ಆಗಿರುವುದಿಲ್ಲ. ಹಾಗಾಗಿ ನಾನು ಪ್ರಬಂಧಗಳನ್ನು ಮಾತ್ರವೇ ಬರೆದುಕೊಂಡು ಕೂತಿರಲು ಸಾಧ್ಯವಿಲ್ಲ. ಹೀಗೆಂದು ವಿವರಿಸಿದರೆ, ಪ್ರಬಂಧದ ಸ್ವರೂಪ, ಪ್ರಬಂಧಕಾರನ ಮನೋಧರ್ಮವನ್ನು ವಿವರಿಸುವಂತವನಾಗು ಎಂದು ಆಗ್ರಹಿಸುತ್ತಾರೆ. ಪ್ರಬಂಧದ ಸ್ವರೂಪ ಅಂತ ನಿರ್ದಿಷ್ಟವಾಗಿ ಏನೂ ಇಲ್ಲ. ಹಾಗೆ ಯಾವ ರೀತಿಯ ನಿರ್ದಿಷ್ಟತೆ ಇಲ್ಲದಿರುವುದೇ ಪ್ರಬಂಧದ ಸ್ವರೂಪ. ನಮ್ಮೆಲ್ಲರ ಮನಸ್ಸು ಒಂದಲ್ಲ ಒಂದು ಕಾರಣಕ್ಕೆ ಜಡ್ಡು ಹಿಡಿದಿರುತ್ತದೆ. ನಮ್ಮ ಅಹಂಕಾರದಿಂದ, ಸ್ವಂತ ದೃಷ್ಟಿಕೋನವೆಂಬ ಕನ್ನಡಕದಿಂದ, ಕಡ ಪಡೆದ ವಿಚಾರಗಳಿಂದ, ಸ್ಥಾನಮಾನಗಳಿಂದ, ಜಾತಿ-ವರ್ಗಗಳ ಹಿನ್ನೆಲೆಯಿಂದ ಈ ಜಡ್ಡು ಕಳೆದುಕೊಳ್ಳಬೇಕಾದರೆ ಆಗಾಗ್ಗೆಯಾದರೂ ಮನಸ್ಸನ್ನು ಅದಕ್ಕೆ ಬೇಕಾದ ರೀತಿಯಲ್ಲಿ ಹೋಗಲು, ಹರಿಯಲು, ಹಾಗೆ ಹರಿಯುವಾಗಲೂ ಯಾವುದೇ ಫಲಾಪೇಕ್ಷೆಯೂ ಇಲ್ಲದಂತೆ ಇರಲು ಪ್ರಬಂಧ ಬರೆಯುವುದು ಅನಿವಾರ್ಯವಾಗುತ್ತದೆ. ಈ ಮನೋಲಹರಿಗನುಗುಣವಾಗಿ ಬರೆಯುವ ಬರವಣಿಗೆಗೆ ನಿರ್ದಿಷ್ಟ ಸ್ವರೂಪ ಬಯಸುವುದು, ಆರೋಪಿಸುವುದು ತಪ್ಪಲ್ಲವೇ? ಜಡ್ಡು ಹಿಡಿದ ಸ್ಥಿತಿಯಿಂದ ಬಿಡುಗಡೆ ಪಡೆಯುವ ಆಸೆಯೊಂದೇ ಪ್ರಬಂಧಕಾರನಿಗಿರಬೇಕಾದ ನಿಜವಾದ ಮನೋಧರ್ಮ ಎಂದು ವಿವರಿಸುತ್ತೇನೆ. ಗೆಳೆಯರಿಗೆ ತೃಪ್ತಿಯಾಯಿತೆಂದುಕೊಳ್ಳುತ್ತೇನೆ. ಅಷ್ಟು ಸುಲಭಕ್ಕೆ ಬಿಡುವರೆ? ಇದೆಲ್ಲವನ್ನೂ, ಪ್ರಬಂಧದ ಧ್ವನಿಯನ್ನೂ ನೀವು ಉಳಿದ ಬರಹಗಳಲ್ಲೂ ಸಾಧಿಸುವ ಮೂಲಕ ತೋರಿಸಬಹುದಲ್ಲವೇ? ಬದಲಿಗೆ ಪ್ರಬಂಧಗಳನ್ನು ಬರೆದು ನಿಮ್ಮ ಪ್ರಕಟಿತ ಪುಸ್ತಕಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತೀರಿ ಎಂದೆಲ್ಲಾ ಆಪಾದಿಸುತ್ತಾರೆ, ಕೆಣಕುತ್ತಾರೆ. ಪ್ರಬಂಧ ಧ್ವನಿಯ ಪರಿಕರಗಳನ್ನು ಅಳವಡಿಸಬಹುದು ಎಂಬುದು ನಿಜ. ಆದರೆ ಅಷ್ಟಕ್ಕೇ ಅದು ಪ್ರಬಂಧವಾಗುವುದಿಲ್ಲ. ಅಲ್ಲದೆ ಪ್ರಬಂಧ ಎಂಬುದು ಪ್ರತ್ಯೇಕವಾಗಿರಬಾರದು ಎಂದು ನೀವೇಕೆ ಹಠ ಮಾಡುತ್ತೀರಿ ಎಂದು ನಾನು ಮರು ಪ್ರಶ್ನೆ ಕೇಳುತ್ತೇನೆ.

ನನ್ನನ್ನು ಸಮಾಧಾನಪಡಿಸುವಂತೆಯೂ, ಪ್ರಚೋದಿಸುವಂತೆಯೂ, ಅನುಕಂಪಪೂರಿತವಾಗಿ ಮಿತ್ರರು ನಯವಾಗಿ ಹೇಳುತ್ತಾರೆ – ಕತೆಗಾರ, ಕವಿ, ಕಾದಂಬರಿಕಾರ, ವಿಮರ್ಶಕ ಇವರೆಲ್ಲರಿಗೆ ಇರುವ ರಾಜಮರ‍್ಯಾದೆ, ಪ್ರಬಂಧಕಾರನಿಗೆ ಎಲ್ಲಿದೆ. ಏನೇ ಆದರೂ ಉಳಿದೆಲ್ಲ ಪ್ರಕಾರಗಳು ಸೃಜನಶೀಲವಾದ ರಾಜಾ ಪ್ರಕಾರಗಳು. ಇದುವರೆಗೆ ಬಂದಿರುವ ಎಲ್ಲ ಭಾಷೆಗಳ ಗಣ್ಯ ಲೇಖಕರು ಕೂಡ ಇಂತಹ ಪ್ರಕಾರಗಳಿಂದಲೇ ಬಂದವರು. ಕೇವಲ ಪ್ರಬಂಧಗಳನ್ನು ಬರೆದುಕೊಂಡು ಮುಖ್ಯ ಲೇಖಕರಾದವರು ಯಾರಿದ್ದಾರೆ?

ಸ್ವಾಮಿ, ನೀವು ಸೂಚಿಸುತ್ತಿರುವ ರಾಜಮರ‍್ಯಾದೆಯನ್ನು ನಾನು ಬರವಣಿಗೆಯಿಂದ ಬಯಸುತ್ತಿಲ್ಲ. ಅಂತಹ ಮರ‍್ಯಾದೆಗೋಸ್ಕರ ನಾನು ನನ್ನಲ್ಲಿರುವ ಹಾಸ್ಯ ಪ್ರವೃತ್ತಿ, ಕಿಡಿಗೇಡಿತನ, ಜೀವಂತಿಕೆ, ಇನ್ನೊಬ್ಬರನ್ನು ಚುಡಾಯಿಸುವ ಪ್ರವೃತ್ತಿ ಇದೆಲ್ಲವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ, ನಿಮ್ಮ ಮರ‍್ಯಾದೆ ನಿಮಗೇ ಇರಲಿ!

ಮಿತ್ರರಿಗೆ ಕೋಪ ಬಂತು. ಇಲ್ಲ, ಇಲ್ಲ, ನಿಮ್ಮ ಬರವಣಿಗೆ ಬಗ್ಗೆ ನಮಗೆ ತುಂಬಾ ಗೌರವವಿದೆ. ಆ ಗೌರವವನ್ನು ಪ್ರಬಂಧಗಳನ್ನು ಬರೆದು ಕಳೆದುಕೊಳ್ಳಬೇಡಿ ಎಂದು ಬುದ್ಧಿಮಾತು ಹೇಳುವುದಕ್ಕೆ ಇಷ್ಟೆಲ್ಲಾ ಮಾತಾಡಬೇಕಾಯಿತು, ವರಸೆ ಬದಲಾಯಿಸಿ ಉಪದೇಶಿಸಿದರು.

ಎಲ್ಲ ಮಿತ್ರರು ಅಮಾಯಕರಿರುವುದಿಲ್ಲ. 1988ರಲ್ಲಿ ನಾನು ನನ್ನ ಮೊದಲ ಪ್ರಬಂಧ ಸಂಕಲನ ಪ್ರಕಟಿಸಿದೆ (ನಮ್ಮ ಪ್ರೀತಿಯ ಕ್ರಿಕೆಟ್‌). ಆವಾಗ ಮಾತ್ರ ಲೇಖಕ ಮಿತ್ರರು ಖುದ್ದು ಮನೆಗೇ ಬಂದು ಉಪದೇಶಿಸಿದರು. ನನ್ನ ಗ್ರಹಚಾರಕ್ಕೆ “ಒಂದು ಕಥಾನಕದ ಮೂಲಕ” ಕಾದಂಬರಿ ಕೂಡ ಆವಾಗಲೇ ಪ್ರಕಟವಾಗಿ ಜನಪ್ರಿಯವಾಗಿತ್ತು. ಕಾದಂಬರಿ, ಕತೆಗಳ ಮುಂದೆ ಈ Essay ಎನ್ನುವುದು ಒಂದು Form ಏನ್ರೀ? ಅದನ್ನು ಬರೆಯುವುದಿರಲಿ, ಇನ್ನೊಬ್ಬರು ಬರೆದ ಪ್ರಬಂಧಗಳನ್ನು ಓದಲು ಕೂಡ ವಾಕರಿಕೆ ಬರುತ್ತದೆ. ಹಾಗೆಂದು ವಾಕರಿಸಿಯೂಬಿಟ್ಟರು. ಮಿತ್ರರ ದುರಾದೃಷ್ಟ! ನನ್ನ ಪ್ರಬಂಧ ಸಂಕಲನ ಪ್ರಸಿದ್ಧವಾಯಿತು, ಪ್ರಶಸ್ತಿಯೋಗ ಕೂಡ ಪ್ರಾಪ್ತವಾಯಿತು. ಲೇಖಕ ಮಿತ್ರರ ವರಾತ ಕೂಡ ತೀವ್ರವಾಯಿತು. ಈ ವರಾತದಿಂದ ತಪ್ಪಿಸಿಕೊಳ್ಳಲು ಹತ್ತಾರು ವರ್ಷಗಳ ಕಾಲ ನಾನು ಪ್ರಬಂಧಗಳನ್ನು ಬರೆಯದೆ ತಲೆಮರೆಸಿಕೊಂಡು ಮದ್ರಾಸು, ಕೊಯಮತ್ತೂರು ಕಡೆಗೆಲ್ಲ ದೇಶಾಂತರ ಹೋಗಬೇಕಾಯಿತು. ಪ್ರಬಂಧಗಳನ್ನು ಬರೆದರೂ ಪ್ರಕಟಿಸಲು ಹೋಗಲಿಲ್ಲ. ಪ್ರಕಾಶಕರು ಕೂಡ Royal Formಗಳಾದ ಕತೆ, ಕಾದಂಬರಿಗಳಿಗೇ ಒತ್ತಾಯಿಸುತ್ತಿದ್ದರು. ಹೊಸದಾಗಿ ಪ್ರಕಾಶನ ಸಂಸ್ಥೆ ಆರಂಭಿಸಿದ್ದ ಆಲೋಚನೆ, ವರ್ತನೆಗಳಲ್ಲಿ ಹೊಸತನ ಮತ್ತು ಮುಗ್ಧತೆಯನ್ನು ಹೊಂದಿದ್ದ ಅಭಿನವದ ರವಿಕುಮಾರ್‌-ಚಂದ್ರಿಕಾ “ದಾಂಪತ್ಯಕ್ಕೊಂದು ಶೀಲ” ಪ್ರಬಂಧ ಸಂಕಲನ ಪ್ರಕಟಿಸಿದರು. ಅದೂ ಕೂಡ ಜನಪ್ರಿಯವಾಯಿತು. ಈಗಲೂ ಮಿತ್ರರ ಉಪದೇಶ ಮುಂದುವರೆಯಿತು. ಆಯ್ತು, ಹಾಗಿದ್ದರೆ ನೀವು ಕತೆಗಳನ್ನು ಬರೆಯಬೇಡಿ, ನಾವು ಪರಿಗಣಿಸುವುದಿಲ್ಲ ಎಂದು ಬೆದರಿಕೆ ಹಾಕಿದರು. ಮತ್ತೆ ಗುಂತೂರು, ಹೈದರಾಬಾದ್‌, ಪೂನಾ, ಕೊಲ್ಹಾಪುರ ಕಡೆಗೆ ದೇಶಾಂತರ ಹೋಗುತ್ತ ಗುಟ್ಟಾಗಿ ಪ್ರಬಂಧಗಳನ್ನು ಬರೆದು ಇಟ್ಟುಕೊಳ್ಳುತ್ತಿದ್ದೆ. ಮರ‍್ಯಾದೆ ಮತ್ತು ಪ್ರಸಿದ್ಧಿ ಸಂಪಾದಿಸಲು ಕತೆ, ಕಾದಂಬರಿಗಳ ಬರವಣಿಗೆ ಮುಂದುವರೆಸಿದೆ. ಪ್ರಬಂಧ ನಿಂತ ಬಂಡಿಯಂತಾಗಿದ್ದಾಗ, ಮುರಳಿ-ರಂಗನಾಥನ್‌ರಂಥ ಮಿತ್ರರು, “ನಿಂತ ಬಂಡಿಯ ದೇಶಾಂತರ” ಪ್ರಬಂಧ ಸಂಕಲನ ಪ್ರಕಟಿಸಿದರು. (ನಂತರವೂ ನಿಡಸಾಲೆಯವರು “ಲೋಕ ಪ್ರಬಂಧ” ಎಂಬ ಸಮಗ್ರ ಪ್ರಬಂಧ ಸಂಕಲನವನ್ನೂ ಮತ್ತೆ ರವಿಯವರು “ಸ್ಕೂಲು ಬಿಡುವ ಸಮಯ” ಪ್ರಬಂಧ ಸಂಕಲನವನ್ನೂ ಪ್ರಕಟಿಸಿದರು. ಈ ಮಧ್ಯೆ ಚಂದ್ರಶೇಖರ ಪಾಟೀಲರು ತರುಣ ಪ್ರಬಂಧಕಾರರಿಗೆ ಮಾದರಿ ಪ್ರಬಂಧಗಳನ್ನು ಪ್ರಕಟಿಸುವ ಅವಶ್ಯಕತೆಯಿದೆಯೆಂದು ಸೂಚಿಸಿ, “ಸ್ಕೂಲು ಬಿಡುವ ಸಮಯ” ಪ್ರಬಂಧ ಬರೆಸಿ, ಸಂಕ್ರಮಣದ ವಿಶೇಷಾಂಕದಲ್ಲಿ ಪ್ರಕಟಿಸಿದರು. ನನಗೆ ತಿಳಿದ ಮಟ್ಟಿಗೆ ಅವರು ಕತೆ, ಕಾದಂಬರಿ ಪ್ರಕಾರದ ಬಗ್ಗೆ ಇಟ್ಟುಕೊಂಡಿದ್ದಷ್ಟೇ ಗೌರವವನ್ನು ಪ್ರಬಂಧ ಪ್ರಕಾರದ ಬಗ್ಗೆ ಕೂಡ ಇಟ್ಟುಕೊಂಡಿದ್ದರು.)

ಇರಲಿ! ಉಪದೇಶಾಮೃತದ ಧಾರೆ ಮುಂದುವರೆಯುತ್ತಲೇ ಇತ್ತು. ಈಗ ಜೊತೆಗೆ ಇನ್ನೊಂದು ಪ್ರಹಸನ ಸೇರಿಕೊಂಡಿತು. ನಾನು ದಶಕಗಳ ಹಿಂದೆ ಪ್ರಬಂಧಗಳನ್ನು ಬರೆಯಲು ಪ್ರಾರಂಭಿಸಿದ್ದಾಗ ಗದರಿಸಿದ್ದ, ಛೀಮಾರಿ ಹಾಕಿದ್ದ ಗಣ್ಯ ಲೇಖಕರೇ ಈಗ ಪ್ರಬಂಧಗಳನ್ನು ಸತತವಾಗಿ, ರಾಜಾರೋಶವಾಗಿ ಬರೆಯಲು ಪ್ರಾರಂಭಿಸಿದರು. ತುಂಬಾ High Sounding ಶೀರ್ಷಿಕೆಗಳನ್ನು ಕೊಟ್ಟರು. ರಾಜಾಂಗಣದಲ್ಲಿ ಖ್ಯಾತನಾಮರನ್ನು ಕರೆದು ಸಂಕಲನ ಬಿಡುಗಡೆ ಮಾಡಿಸಿದರು. ವಿದೇಶಿ ಪ್ರಬಂಧಕಾರರನ್ನೂ ಅಗತ್ಯವಿರಲಿ, ಇಲ್ಲದಿರಲಿ ಉಲ್ಲೇಖಿಸಿ ಓದುಗರನ್ನು ದಂಗು ಬಡಿಸಲು ಪ್ರಯತ್ನಿಸಿದರು. ಏಳೇಳು ಜನ್ಮಗಳಿಂದ ಮಾಡಿಕೊಂಡು ಬಂದಿದ್ದ ಅನುವಾದದ ಕೆಲಸವನ್ನು ನಿಲ್ಲಿಸಿ ಪ್ರಬಂಧಗಳನ್ನು ಬರೆಯುತ್ತಲೇ ಹೋದರು. ಪ್ರಬಂಧ ಪ್ರಕಾರಕ್ಕೆ ಇಂಥವರೂ ಒಲಿದರಲ್ಲ ಎಂದು ಸಂತೋಷವಾದರೂ, ಗೋಸುಂಬೆತನದಿಂದ ಬೇಸರವಾಯಿತು. ಹೋಗಲಿ, ಚೆನ್ನಾಗಿ ಪ್ರಬಂಧಗಳನ್ನು ಬರೆಯುತ್ತಾರೋ ಅಂದರೆ ಅದೂ ಇಲ್ಲ. ಎಲ್ಲವೂ ಸರ್ಕಾರಿ ಲೇಖನದ ಸ್ವರೂಪದವು. ವಿಮರ್ಶೆ, ಟಿಪ್ಪಣಿಗಳ ದಾಟಿಯದು. ಪ್ರಬಂಧಕಾರನಿಗೆ ಬೇಕಾದ ಹಾಸ್ಯ ಪ್ರವೃತ್ತಿ, “Aside” ಮನೋಧರ್ಮ, ಯಾವಾಗಲೂ ಹಿಂದಿನ ಸಾಲಿನಲ್ಲೇ ಇರುವ ಮನೋಭಾವ, ಯಾವುದೂ ಇವರ ಬರವಣಿಗೆಯಲ್ಲಿ ಕಾಣಲಿಲ್ಲ. ಇಂಥವರಿಂದ ಜೀವಂತ ಬರವಣಿಗೆ-ಪ್ರಬಂಧ ರಚನೆ ಬಯಸಿದ್ದ ನನ್ನ ನಿರೀಕ್ಷೆಯಲ್ಲೇ ಏನೋ ತಪ್ಪಿದೆ ಅನಿಸಿತು.

ನಾನೇನೋ ಸುಮ್ಮನಾದೆ. ಇಂತಹ ಪ್ರಬಂಧಕಾರರೊಬ್ಬರು ನಾನು ಆವಾಗ ವಾಸವಾಗಿದ್ದ ಮದ್ರಾಸಿಗೂ ಬಂದರು. ಗೊರೂರರು ಮದ್ರಾಸ್‌ ವಿಶ್ವವಿದ್ಯಾಲಯದ ಕನ್ನಡ ಪರೀಕ್ಷೆಗೆ ಕುಳಿತು ಫೇಲಾಗಿದ್ದರು, ಅವರು ಬರೆದು ಪ್ರಬಂಧವೇ ಪರೀಕ್ಷೆಗೆ ಪಠ್ಯವಾಗಿದ್ದಾಗಲೂ. ಈ ಅಸಾಂಗತ್ಯಕ್ಕೆ ನೊಂದ ಗೊರೂರರ ಓದುಗರು ಅವರ ಬಗ್ಗೆ ಒಂದು ಉಪನ್ಯಾಸ ಏರ್ಪಡಿಸಿದರು. ಭಾಷಣ ಈ ಉದಯೋನ್ಮುಖ ಪ್ರಬಂಧಕಾರನದೆ. ಗೊರೂರರಿಗೆ ಪ್ರಕಾರದ ಬಗ್ಗೆ ತಿಳುವಳಿಕೆ ಇಲ್ಲ, ಸಂವೇದನೆಯಲ್ಲಿ ಚಲನಶೀಲತೆಯಿಲ್ಲ, ಲಹರಿ ಮನುಷ್ಯ ಎಂದೆಲ್ಲಾ ಭಾಷಣ ಮಾಡಿದಾಗ ಸಭಿಕರು ನೊಂದುಕೊಂಡರು. ಸಭಿಕರಲ್ಲಿ ಬಹುಪಾಲು ಜನ ವಿದ್ಯಾರ್ಥಿಗಳಾಗಿದ್ದಾಗ ಗೊರೂರರ ಪ್ರಬಂಧಗಳನ್ನು ಓದಿ ಸಂತೋಷಪಟ್ಟು ನೆನಪಿನಲ್ಲಿಟ್ಟುಕೊಂಡಿದ್ದವರು. ಆದರೆ ಸಭೆಯಲ್ಲಿ ಎದ್ದು ನಿಂತು ವಾದಿಸುವಷ್ಟು ಸಾಹಿತ್ಯಿಕ ಪರಿಭಾಷೆ ಗೊತ್ತಿಲ್ಲ. ನಾನೂ ಕೂಡ ನಮ್ರ ಪ್ರಬಂಧಕಾರನಂತೆ ಹಿಂದಿನ ಸಾಲಿನಲ್ಲಿ ಕುಳಿತು ಎಲ್ಲವನ್ನೂ ಗಮನಿಸಿದೆ, ಗಮನಿಸಿದ್ದೆ ಅಷ್ಟೇ.

ಯಾವ ರೀತಿಯ ನಿರ್ದಿಷ್ಟತೆ ಇಲ್ಲದಿರುವುದೇ ಪ್ರಬಂಧದ ಸ್ವರೂಪ. ನಮ್ಮೆಲ್ಲರ ಮನಸ್ಸು ಒಂದಲ್ಲ ಒಂದು ಕಾರಣಕ್ಕೆ ಜಡ್ಡು ಹಿಡಿದಿರುತ್ತದೆ. ನಮ್ಮ ಅಹಂಕಾರದಿಂದ, ಸ್ವಂತ ದೃಷ್ಟಿಕೋನವೆಂಬ ಕನ್ನಡಕದಿಂದ, ಕಡ ಪಡೆದ ವಿಚಾರಗಳಿಂದ, ಸ್ಥಾನಮಾನಗಳಿಂದ, ಜಾತಿ-ವರ್ಗಗಳ ಹಿನ್ನೆಲೆಯಿಂದ ಈ ಜಡ್ಡು ಕಳೆದುಕೊಳ್ಳಬೇಕಾದರೆ ಆಗಾಗ್ಗೆಯಾದರೂ ಮನಸ್ಸನ್ನು ಅದಕ್ಕೆ ಬೇಕಾದ ರೀತಿಯಲ್ಲಿ ಹೋಗಲು, ಹರಿಯಲು, ಹಾಗೆ ಹರಿಯುವಾಗಲೂ ಯಾವುದೇ ಫಲಾಪೇಕ್ಷೆಯೂ ಇಲ್ಲದಂತೆ ಇರಲು ಪ್ರಬಂಧ ಬರೆಯುವುದು ಅನಿವಾರ್ಯವಾಗುತ್ತದೆ.

ಇನ್ನೊಬ್ಬ ಉಪದೇಶಿಗೆ ನನ್ನ ವಿಮರ್ಶಾ ಬರಹಗಳನ್ನು ಕಂಡರೆ ಆಗುತ್ತಿರಲಿಲ್ಲ. ಹಾಗೆಂದು ನೇರವಾಗಿ ಹೇಳುವ ಧೈರ್ಯವಿಲ್ಲದ ಸಣ್ಣ ಮನಸ್ಸಿನ ಪ್ರಾಣಿ ಆತ. ಆದರೆ ತೆಗಳಲೇಬೇಕಲ್ಲ! ಅದಕ್ಕೆ ಪ್ರಬಂಧ ಪ್ರಕಾರವನ್ನು ಹತಾರವನ್ನಾಗಿ ಮಾಡಿಕೊಂಡ. ನಿಮ್ಮ ವಿಮರ್ಶಾ ಬರಹಗಳು ಲಲಿತ ಪ್ರಬಂಧಗಳಂತಿರುತ್ತವೆ. ವಿಮರ್ಶೆಯ ಗಾಂಭೀರ್ಯ, ಗತ್ತು ಇಲ್ಲವೆಂದ. ವಿಮರ್ಶೆಯೆಂಬುದು ಗತ್ತಿನ ಪ್ರದರ್ಶನವಲ್ಲ, ತಿಳುವಳಿಕೆ, ಸದಭಿರುಚಿಯನ್ನು ಹಂಚಿಕೊಳ್ಳುವ ಕ್ರಮವೆಂದು ನಂಬಿರುವವನು ನಾನು. ಹಾಗೆಂದು ಬಿಡಿಸಿ ಹೇಳಿದರೂ ಈ ಪ್ರಾಣಿ ಒಪ್ಪಲಿಲ್ಲ. ಹಾಳಾಗಿ ಹೋಗಲಿ ಎಂದರೆ, ಇದೇ ಪ್ರಾಣಿ ಕೆಲವು ವರ್ಷಗಳ ನಂತರ ಇನ್ನು ಮುಂದೆ ವಿಮರ್ಶೆಯನ್ನು ಪ್ರಬಂಧಗಳ ಸ್ವರೂಪದಲ್ಲಿ ಹಾಸ್ಯ ಮಿಶ್ರಿತವಾಗಿ ಬರೆಯುತ್ತೇನೆ ಎಂದು ಕೆಲವು ಬಾಲಲೀಲೆಗಳನ್ನು ಬರೆದು ಪ್ರಕಟಿಸಲು ಪ್ರಾರಂಭಿಸಿದ. ಹೇಳಿ ಕೇಳಿ ಆ ಪತ್ರಿಕೆ ಹಾಸ್ಯ ಬರಹಗಳಿಗೆ ಮೀಸಲಾದದ್ದು. ಸಂಪಾದಕರು ನಡುಗಿಹೋದರು, ಈತನ ಪ್ರಯೋಗಗಳಿಗೆ. ಇತ್ತ ಹಾಸ್ಯವೂ, ಅತ್ತ ವಿಮರ್ಶೆಯೂ ಅಲ್ಲದ ಬರಹಗಳಿಗೆ ಅವಕಾಶ ಕೊಟ್ಟರೆ ಸಾರ್‌, ನಮ್ಮ Brand Name ಹೊರಟುಹೋಗುತ್ತೆ ಎಂದು ನನ್ನ ಬಳಿ ಪೇಚಾಡಿಕೊಂಡರು. ಪ್ರಬಂಧ ಬರೆಯುವವರು ಸ್ವಲ್ಪ ಪೆದ್ದರಾಗಿರಬೇಕು. ಎಲ್ಲರ ಬಗ್ಗೆ ನಗುವುದಕ್ಕಿಂತ ಹೆಚ್ಚಾಗಿ ತಮ್ಮ ಬಗ್ಗೆ ತಾವೇ ಗೇಲಿ ಮಾಡಿಕೊಳ್ಳುವುದನ್ನು ವೃತ್ತಿಧರ್ಮವನ್ನಾಗಿ ಒಪ್ಪಿಕೊಳ್ಳಬೇಕು. ಇದು ನನ್ನ ತಿಳುವಳಿಕೆ. ಆದರೆ ಹಾಗೆಂದು ನಾನು ಯಾರಿಗೂ ಉಪದೇಶಿಸುವುದಿಲ್ಲ. ಒಮ್ಮೆ ನೀವು ಉಪದೇಶ ಮಾಡಲು ಹೊರಟರೆ, ಪ್ರಬಂಧ ಬರೆಯುವ ಹಕ್ಕನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೀರಿ. ಇವೆಲ್ಲ ಲೇಖಕ ಮಿತ್ರರು ಸಹ ಲೇಖಕರೆಂಬ ಹಿತ ಶತ್ರುಗಳ ಉಪದೇಶಾಮೃತದ ಭಾಗವಾದರೆ, ಸಂಪಾದಕರು, ಪತ್ರಕರ್ತರ ಉಪದೇಶಾಮೃತದ ಸ್ವರೂಪವೇ ಬೇರೆ. ವಿಶೇಷಾಂಕಕ್ಕೆ ಬರಗಳನ್ನು ಕೋರುವ ಪತ್ರ ಹೀಗಿರುತ್ತಿತ್ತು –

ಮಾನ್ಯರೆ,

ದಯವಿಟ್ಟು ನೀವು ನಮ್ಮ ವಿಶೇಷಾಂಕಕ್ಕೆ ಬರೆಯಿರಿ.
ಪ್ರಬಂಧ/ಲಲಿತ ಪ್ರಬಂಧ/ಚಿತ್ರ ಪ್ರಬಂಧ/ಹರಟೆ/ಹಾಸ್ಯ ಲೇಖನ/ವ್ಯಕ್ತಿಚಿತ್ರ ಕಳಿಸಿಕೊಡಿ”

ಹೀಗೆ ಒಂದು ಪ್ರಕಾರದ ಹೆಸರು ಬರೆದು ನಂತರ / ಚಿಹ್ನೆ ಹಾಕಿ ಇನ್ನೊಂದು ಹೆಸರನ್ನು ಬರೆದರೆ, ನಾನು ಏನನ್ನು ಬರೆಯಬೇಕು, ಏನೆಂದು ಉತ್ತರಿಸಬೇಕು. ಇಂಥವರ ಪ್ರಕಾರ ಇದೆಲ್ಲ ಪ್ರಕಾರಗಳು ಒಂದೇ ಸ್ವರೂಪದವು. ಇವರ ಪತ್ರಿಕೆಗಳಿಗೆ ನಾನು ಪ್ರಬಂಧ ಕಳಿಸುವಾಗ ಪ್ರಬಂಧ ಎಂದು ದಪ್ಪಕ್ಷರದಲ್ಲಿ ಬರೆದು, ಕೆಳಗಡೆ ಕೆಂಪಿಂಕಿನಲ್ಲಿ ಗೆರೆ ಎಳೆದು ಕಳಿಸುತ್ತಿದ್ದೆ. “ಏನು ಮಾಡಿದರೇನು ಹರಿ ಕರುಣೆಯಿಲ್ಲದ ಮೇಲೆ” ಎಂಬಂತೆ ನನ್ನ ಬರಹ ಯಾವ ಯಾವುದೋ ಶೀರ್ಷಿಕೆಯಡಿಯಲ್ಲಿ, ಯಾವ ಯಾವುದೋ ಪುಟಗಳಲ್ಲಿ ಪ್ರಕಟವಾಗುತ್ತಿತ್ತು. ಇನ್ನೊಬ್ಬ ಸಂಪಾದಕರಂತೂ ಅವರೇ ಕೋರಿ ಬರೆಸಿಕೊಂಡಿದ್ದ ಪ್ರಬಂಧವನ್ನು ವಿಶೇಷಾಂಕದ ಕೊನೆ ಪುಟಗಳಲ್ಲಿ ಹಾಕಿದರು. ಅದೂ ಪೂರ್ತಿ ಹಾಕಲಿಲ್ಲ. ದೊಡ್ಡ ಮೊತ್ತದ ಜಾಹೀರಾತು ಬಂತಂತೆ. ಹಾಗಾಗಿ ಪ್ರಬಂಧದ ಅರ್ಧ ಭಾಗವನ್ನು ವಿಶೇಷಾಂಕದಲ್ಲಿ ಹಾಕಿ ಉಳಿದರ್ಧ ಭಾಗವನ್ನು ಮುಂದಿನ ತಿಂಗಳ ಪುರವಣಿಯಲ್ಲಿ ಪ್ರಕಟಿಸಿದರು. ತುಂಬಾ ನೊಂದುಕೊಂಡು ಕೇಳಿದ್ದಕ್ಕೆ, ಪ್ರಬಂಧಕ್ಕೆ ಅಷ್ಟು ಮರ್ಯಾದೆ ಕೊಡುವುದೇ ಹೆಚ್ಚಾಯಿತು ಎಂದು ಬೈದಟ್ಟಿದ್ದರು.

ಇನ್ನೊಬ್ಬ ಸಂಪಾದಕರು ನನ್ನ ಮೇಲೆ ತುಂಬಾ ಪ್ರೀತಿಯಿಂದ ನನ್ನ ಕೈಲಿ ಸಣ್ಣ ಕತೆಗಳನ್ನು ಬರೆಸಿ ಪ್ರಕಟಿಸುತ್ತಿದ್ದರು. ಸದರಿ ವರ್ಷ ಒಂದು ಪ್ರಬಂಧ ಕೇಳಿದರು. ಬರೆದು ಕೊಟ್ಟೆ. ಓದಿದ ನಂತರ ದೂರವಾಣಿ ಕರೆ ಮಾಡಿ ನಿಮ್ಮದೊಂದು ಭಾವಚಿತ್ರ ಬೇಕಲ್ಲ ಅಂದರು. ಏನ್‌ ಸಾರ್‌, ನಾನೇನು ಹೊಸಬನೇ, ಎಷ್ಟು ವರ್ಷಗಳಿಂದ ನಿಮ್ಮ ಪತ್ರಿಕೆಗೆ ಬರೆಯುತ್ತಿದ್ದೇನೆ, ಈಗೇಕೆ ಹೊಸದಾಗಿ ಫೋಟೋ ಕೇಳುತ್ತಿದ್ದೀರಿ ಎಂದು ಕೇಳಿದೆ. ನಿಮ್ಮ ಫೋಟೋ ನಮ್ಮ ಬಳಿ ಇರುವ ಕತೆಗಾರನದು ಗಂಭೀರವಾಗಿದೆ. ಮುಖದಲ್ಲಿ ಪ್ರಬುದ್ಧ, ಮಾಗಿದ ಕಳೆಯಿದೆ. ಪ್ರಬಂಧದ ಜೊತೆ ಅಷ್ಟೊಂದು ಗೌರವದ, ಪ್ರಬುದ್ಧತೆಯ ಕಳೆ ಇರುವ ಫೋಟೋ ಬೇಡ. ಸ್ವಲ್ಪ ಉಡಾಫೆ ಸ್ವಭಾವದ, ಕ್ಯಾತೆ ಮನುಷ್ಯನ ಮುಖದ ಕಳೆ ಇರುವ ಫೋಟೋ ಕಳಿಸಿಕೊಡಿ ಎಂದರು.

ಸಾಹಿತ್ಯ ಸಂಘಟಕರದು ಕೂಡ ಪ್ರಬಂಧಕಾರನಿಗೆ ಉಪದೇಶವಿದ್ದೇ ಇರುತ್ತದೆ. ಹಾಸ್ಯಗೋಷ್ಠಿಗೆ ಸಭಿಕನಾಗಿ ನನ್ನನ್ನು ಆಹ್ವಾನಿಸುತ್ತಿದ್ದರು. ಬಿಡುವಿನಲ್ಲಿ ನಾನೂ ಹೋಗುತ್ತಿದ್ದೆ. ಕ್ರಮೇಣ ನನ್ನ ಪ್ರಬಂಧಕಾರನ ವ್ಯಕ್ತಿತ್ವ ಪರಿಚಯವಾಯಿತು. ಪ್ರಬಂಧವನ್ನು ಕವನದ ರೂಪದಲ್ಲಿ, ಹನಿಗವನದ ರೂಪದಲ್ಲಿ ಬರೆದು ಓದಲು ಸಾಧ್ಯವೇ ಎಂದು ಕೇಳಿದರು. ನಾನು ಕಕ್ಕಾಬಿಕ್ಕಿಯಾದೆ. ಈ ರೀತಿಯ ಬೇಡಿಕೆ ನನಗೆ ಯಾರಿಂದಲೂ ಬಂದಿರಲಿಲ್ಲ. ಏಕೆ ಹೀಗೆಲ್ಲ ಅವಮಾನಿಸುತ್ತೀರಿ ಎಂದು ಗೋಗರೆದೆ. ನೋಡಿ, ಜನಪ್ರಿಯರಾಗಲು ನಿಮಗೆ ಇದೊಂದು ಸದಾವಕಾಶ ಎಂಬ ಪ್ರಲೋಭನೆ ನೀಡಿದರು. ನಾನು ಕೊನೆಗೆ ಹೇಳಿದೆ, ಹನಿಗವನಗಳ ಸಾಮ್ರಾಟರಾದ ಡುಂಡಿರಾಜರೇ ಬೇಕೆಂದಾಗ ಪ್ರಬಂಧಗಳನ್ನು, ಅಂಕಣಗಳನ್ನು ಬರೆಯುತ್ತಾರೆ ಅಂದರೆ ಪ್ರಬಂಧಗಳನ್ನು ಕವನ ರೂಪದಲ್ಲಿ ಬರೆಯಲು ಸಾಧ್ಯವಿಲ್ಲ. ಹಾಗೇನು! ಇನ್ನು ಮೇಲೆ ಡುಂಡಿರಾಜರ ಕೈಲಿ ಕೂಡ ಪ್ರಬಂಧಗಳನ್ನು ಹನಿಗವನದ ರೂಪದಲ್ಲಿ ಬರೆಸುತ್ತೇವೆ ಎಂದು ಘೋಷಿಸಿದರು. ಇದುವರೆಗೆ ದುಂಡಿರಾಜರು ಹಾಗೆ ಬರೆದಿಲ್ಲ. ಮುಂದೇನು ಮಾಡುವರೋ ಗೊತ್ತಿಲ್ಲ.

ಪ್ರಬಂಧಕಾರನಿಗೇ ಏಕೆ ಇಷ್ಟೊಂದು ಉಪದೇಶ ಗಂಟು ಬೀಳುತ್ತದೆ ಎಂದು ಯೋಚಿಸಿದೆ. ಪ್ರಬಂಧಕಾರರು ಅಮಾಯಕರೆಂದೇ, ಬುದ್ಧಿಜೀವಿಗಳಾಗಿಲ್ಲವೆಂದೇ? ಏನೇ ಆದರೂ ಈ ಪ್ರಕಾರವನ್ನು ಜನ ಹೆಚ್ಚಾಗಿ ಓದುತ್ತಿರಬಹುದು ಅನಿಸಿತು. ಬಂಧುಮಿತ್ರರು ಸಿಕ್ಕಾಗ ಪ್ರಬಂಧ ಪ್ರಕಾರವನ್ನು ಗೇಲಿ ಮಾಡುವುದಿಲ್ಲ. ಪ್ರಬಂಧಕ್ಕೆ ಸಂದರ್ಭಗಳನ್ನು ಸೂಚಿಸುತ್ತಾರೆ. ವಸ್ತು, ಏಣಿಯ ಬಗ್ಗೆ ಬರೆಯಿರಿ. ತೊಟ್ಟಿ, ಗೇಟ್‌, ಹೆಂಗಸರ ಬಿಂದಿ, ಸೂರ್ಯೋದಯ, ಸೂರ್ಯಾಸ್ತಗಳ ಬಗ್ಗೆ ಬರೆಯಿರಿ. ಚಿತ್ರಪ್ರಬಂಧವಿರಲಿ. ಪ್ರತಿಮೆಗಳ ಮೆರವಣಿಗೆ ಇರಬೇಕು. ಕಾವ್ಯಾತ್ಮಕ ಭಾಷೆ ಇರಬೇಕು ಎಂಬೆಲ್ಲಾ ಸೂಚನೆಗಳು. ಇದೆಲ್ಲ ತರಲೆಯೇ ಬೇಡ ಅನ್ನುವವರು ದಾಂಪತ್ಯ ಸುಖ ಹೆಚ್ಚಿಸುವಂತಹ ಪ್ರಬಂಧಗಳನ್ನು ಬರೆಯಿರಿ ಎಂಬ ಸೂಚನೆ ಕೂಡ ಕೊಡುತ್ತಾರೆ. ಪ್ರಬಂಧಕಾರ ಇಷ್ಟೊಂದು ಸರ್ವಶಕ್ತ ಸರ್ವಾಂತರ್ಯಾಮಿಯಾಗಬೇಕೆಂದು ಜನ ಬಯಸುತ್ತಾರಲ್ಲ, ಅದೇ ಸಂತೋಷ.

ಇನ್ನಷ್ಟು ಸೂಕ್ಷ್ಮವಾಗಿ ಪ್ರಶಸ್ತಿ ವಿತರಕರ ಕೈಲಿ ಸಿಕ್ಕಿ ಹಾಕಿಕೊಂಡೆ. ಪ್ರಬಂಧ ಸಂಗ್ರಹವೊಂದನ್ನು ಪ್ರಶಸ್ತಿಗೆ ಸಲ್ಲಿಸಿದ್ದೆ. ಸ್ವಲ್ಪ ದಿನದ ನಂತರ ದೂರವಾಣಿ ಕರೆ ಬಂತು. ಬಹುಮಾನ ಇರುವುದು ಲಲಿತ ಪ್ರಬಂಧಕ್ಕೆ. ನಿಮ್ಮದು ಬರೇ ಪ್ರಬಂಧಗಳಲ್ಲ! ಎಂದರು. ಇಲ್ಲ ಸಾರ್‌ ಲಲಿತ ಪ್ರಬಂಧ ಎಂಬ ಒಂದು ಪ್ರಕಾರವೇ ಇಲ್ಲ. ಮಧುರವಾದ ಭಾವನೆಗಳು, ಸುಲಲಿತ ಭಾಷೆ ಬಳಸಿ ಕೆಲವು ಪ್ರಬಂಧಗಳನ್ನು ಬರೆದಾಗ ಹಾಗೆ ಕರೆಯುವುದುಂಟು. ಅದಲ್ಲದೆ, ಅಸಂಗತ ರೀತಿಯ ಶೋಧನಾತ್ಮಕ ಧಾಟಿಯ, ಪ್ರಶ್ನಾತ್ಮಕ ಸ್ವರೂಪದ ಪ್ರಬಂಧಗಳೂ ಇವೆ. ನನ್ನ ಸಂಕಲನದಲ್ಲೂ ಕೂಡ ಹೀಗೆ ಬೇರೆ ಬೇರೆ ರೀತಿಯ ಪ್ರಬಂಧಗಳು ಇವೆ. ದಯವಿಟ್ಟು ಪರಿಗಣಿಸಿ, ಪ್ರಶಸ್ತಿ ತಪ್ಪಿಸಿ ಮೋಸ ಮಾಡಬೇಡಿ ಎಂದು ವಿನೀತನಾಗಿ ಕೇಳಿಕೊಂಡೆ. ನೋಡಿ, ಹಾಗಲ್ಲ. ಪ್ರಶಸ್ತಿಗೆ ಹಣ ಕೊಟ್ಟಿರುವವರು ಲಲಿತ ಪ್ರಬಂಧಗಳೇ ಬೇಕೆನ್ನುತ್ತಾರೆ. ಮುಂದಿನ ವರ್ಷ ನೋಡೋಣ. ಕೇವಲ ಲಲಿತ ಪ್ರಬಂಧಗಳನ್ನು ಮಾತ್ರ ಬರೆದು ಸಂಗ್ರಹ ಮಾಡಿ. ತಂಗಾಳಿ, ಮಲ್ಲಿಗೆ ಮೊಗ್ಗು, ಮಸಾಲೆದೋಸೆ, ಹೆಂಡತಿಯನ್ನು ಪ್ರೀತಿಸುವುದು ಇಂತಹ ಸಂಗತಿಗಳ ಮೇಲೆ ಮಾತ್ರ ಬರೆಯಿರಿ. ನಾನೂ ಕೂಡ ಪ್ರಯತ್ನಿಸಿದೆ. ಪ್ರಶಸ್ತಿ ವಿತರಕರು ಸೂಚಿಸಿದ ರೀತಿಯ ಪ್ರಬಂಧಗಳನ್ನು ಬರೆಯಲು ಸಾಧ್ಯವಾಗಲಿಲ್ಲ.

ನಿಮಗೆ ಒಳ್ಳೆಯ ಉಪಯಕ್ತ ಉಪದೇಶ ಸಿಗಲೇ ಇಲ್ಲವೇ ಎಂಬ ಪ್ರಶ್ನೆ ನನಗೂ ಇಷ್ಟ. ಈ ಪ್ರಶ್ನೆಗೂ ಉತ್ತರ ಕೊಡುತ್ತೇನೆ. ಹಾದಿ ತಪ್ಪಿಸುವ ಹಿತಶತ್ರುಗಳು ಎಷ್ಟೊಂದು ಜನರಿದ್ದಾರೆ ಎಂಬುದನ್ನು ಸೂಚಿಸಲು ಇಷ್ಟೆಲ್ಲವನ್ನೂ ಹೇಳಬೇಕಾಯಿತು ಅಷ್ಟೆ.

ಪ್ರಬಂಧ ಪ್ರಕಾರದಲ್ಲಿ ಏಕೆ ಇಷ್ಟೊಂದು ಸ್ವಪ್ರದರ್ಶನ ಎಂದು ಕೆಲವರು ಕೇಳಿದ್ದಾರೆ. ನನಗೂ ಇದು ಒಂದು ಉತ್ತಮ ಪ್ರಶ್ನೆ ಎನಿಸಿದೆ. ನಾನು ಯಾರೂ ಅಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ, ಕೇವಲ ಪ್ರಬಂಧಕಾರ ಎಂದು ಪದೇ ಪದೇ ಹೇಳಿಕೊಳ್ಳುವುದರಲ್ಲೇ ಒಂದು ಸ್ವಪ್ರದರ್ಶನವಿದೆಯಲ್ಲವೇ ಎಂಬುದನ್ನು ನಾನು ಒಪ್ಪುತ್ತೇನೆ. ಸದಾ ಹಿಂಬದಿಯಲ್ಲಿರುವುದು, ಪಕ್ಕದಲ್ಲಿರುವುದು, ಮುನ್ನಲೆಯಲ್ಲಿರುವುದರಿಂದ ತಪ್ಪಿಸಿಕೊಳ್ಳುವುದು ಕೂಡ ಬದ್ಧತೆಯಿಂದ ವಿಮುಖವಾಗಿ ಆದರೆ ಆಪಾದನೆ ಬರದಂತೆ ನೋಡಿಕೊಳ್ಳುವ ಒಂದು ತಂತ್ರವಿರಬಹುದು ಎಂಬ ಅನುಮಾನ ನನ್ನಂಥ, ನಮ್ಮಂಥವರ ಬಗ್ಗೆ ಸಕಾರಣವಾದದ್ದು. ಏಕೆ ನೀವೂ ಸೇರಿದಂತೆ ಎಲ್ಲ ಪ್ರಬಂಧಕಾರರೂ ಉಳಿದ ಪ್ರಕಾರಗಳಲ್ಲೂ ನಿರಂತರವಾಗಿ ಬರೆಯುತ್ತಾ ಮತ್ತೆ ಮತ್ತೆ ಸ್ಥಾಪಿಸಿಕೊಳ್ಳುವ ತರದೂದಿನಲ್ಲಿದ್ದಾರೆ ಎಂಬ ಪ್ರಶ್ನೆಯೂ ಔಚಿತ್ಯಪೂರ್ಣವಾದದ್ದೇ. ಇನ್ನೂ ಮುಂದೆ ಹೋಗಿ ಕೆಲವರು ಮತ್ತೊಂದು ಸೂಕ್ಷ್ಮವಾದ ಪ್ರಶ್ನೆ ಕೇಳುತ್ತಾರೆ. ಏನೂ ಬರೆಯಲು ಸಾಧ್ಯವಾಗದೆ ಹೋದಾಗ ವಿರಾಮಕಾಲದ ಸಲೀಸು ಬರವಣಿಗೆಯಂತೆ ನೀವು ಪ್ರಬಂಧ ರಚನೆ ಮಾಡುತ್ತೀರಿ ಎಂದು ಕೂಡ ನನ್ನನ್ನು ತುಂಬಾ ವರ್ಷಗಳಿಂದ ಪ್ರೀತಿಸುವವರು ಆಪಾದಿಸುತ್ತಾರೆ. ಈ ಆಪಾದನೆ ಕೂಡ ನಿಜವಿರಬಹುದು. ಗಂಭೀರವಾಗಲು, ತಾತ್ವಿಕವಾಗಲು ನನಗಿರುವ ಭಯದಲ್ಲೇ ಪ್ರಬಂಧಗಳು ಹುಟ್ಟಿವೆ, ಲೀಲಾಜಾಲವಾಗಿ ಸಾಗಿವೆ ಎಂಬ ಪ್ರಶ್ನೆ, ಅನುಮಾನ ಸರಿ. ಆದರೆ ನನ್ನ ಪ್ರಬಂಧಗಳು ಅಷ್ಟು ಮಾತ್ರವೇ ಅಲ್ಲ ಎಂದು ನಿವೇದಿಸಿಕೊಳ್ಳುತ್ತೇನೆ.

ಪ್ರಾಮಾಣಿಕವಾದದ್ದಾಗಲೀ, ಯಥೋಚಿತವಾದದ್ದಾಗಲೀ, ದುರುದ್ದೇಶಪೂರ್ವಕವಾದದ್ದಾಗಲೀ ಉಪದೇಶವೆಂಬುದು ಉಪದೇಶವೇ! ಈ ಜಗತ್ತಿನಲ್ಲಿ ಉಪದೇಶಗಳಿಂದ ಆಗಿರುವಷ್ಟು ಹಾವಳಿ ಇನ್ನು ಯಾವುದರಿಂದಲೂ ಆಗಿಲ್ಲ. ಎಲ್ಲ ಬಣ್ಣದ, ಎಲ್ಲ ನೆರಳಿನ, ಎಲ್ಲ ಧರ್ಮದ, ಎಲ್ಲ ವಿತಂಡವಾದದ ಸಕಲ ರೀತಿಯ ಆಧ್ಯಾತ್ಮಿಕ, ಸಾಂಸ್ಕೃತಿಕ ಉಪದೇಶಗಳಿಂದ ಈ ಜಗತ್ತು ನಲುಗಿ ನಲುಗಿ ಬಸವಳಿದುಹೋಗಿದೆ. ಈಗಾಗಲೇ ಸತ್ಯವನ್ನು ಕಂಡಾಗಿದೆ, ಹೇಳಿಯೂ ಆಗಿದೆ ಎಂಬ ಬಾಲಿಶ ಧೋರಣೆಯಿಂದ ಕೊನೆಗೂ ನಾನು ಒಂದು ಮಾತು ಹೇಳುತ್ತೇನೆ. ನಾನು ವಿರೋಧಿಸುತ್ತಿರುವುದು ಉಪದೇಶಗಳನ್ನು, ಉಪದೇಶಾತ್ಮಕತೆಯನ್ನು ಹೊರತು ಚಿಂತನಶೀಲತೆಯನ್ನಲ್ಲ.

ನಾವೆಲ್ಲ ಪ್ರತಿದಿನವೂ ನಗುತ್ತೇವೆ, ಆಕಳಿಸುತ್ತೇವೆ, ಸಂತೋಷಪಡುತ್ತೇವೆ, ದ್ವೇಷಿಸುತ್ತೇವೆ, ಕೆಲಸ ಮಾಡುತ್ತೇವೆ, ಗೆಳೆತನ ಮಾಡುತ್ತೇವೆ. ಇದೆಲ್ಲವೂ ಜೀವನದ ಬೇರೆ ಬೇರೆ ಭಾಗಗಳಾದರೂ, ಯಾವುದೊಂದೂ ಪ್ರತ್ಯೇಕವಾದದ್ದಲ್ಲ. ಇದನ್ನೆಲ್ಲ ಒಟ್ಟಿಗೆ ಮಾಡಿಕೊಂಡೇ, ಒಟ್ಟಿಗೆ ಕಟ್ಟಿಕೊಂಡೇ ಈ ಪ್ರಬಂಧಕಾರನ ಮತ್ತು ಇದನ್ನು ಓದುತ್ತಿರುವವರ ಬದುಕು ಸಾಗಿದೆ, ಸಾಗುತ್ತಿದೆ. ನಮ್ಮ ಕಾಂತಿ, ನಮ್ಮ ಬೆಳಕು, ನಮ್ಮ ಪ್ರಭೆ ಎಲ್ಲಿ ಅಡಗಿದೆ ಎಂದು ನಮಗೆ ನಾವೇ ಹೇಳಿಕೊಳ್ಳುತ್ತಿರೋಣ. ಇನ್ನೊಬ್ಬರಿಗೆ ಹೇಳುವುದು ಬೇಡ. ಮತ್ತೆ ಉಪದೇಶಗಳ ಗೋಜಲುಗಳಿಗೆ ನಮ್ಮ ಬಂಧು ಬಾಂಧವರನ್ನು ಸಿಗಿಸುವುದು ಬೇಡ.

ಒಂದು ಭರವಸೆ ಕೊಡುತ್ತೇನೆ – ಇನ್ನು ಮುಂದೆ ನಾನು ಪ್ರಬಂಧದ ವಸ್ತು ಮತ್ತು ಸ್ವರೂಪದ ಬಗ್ಗೆ ಹಠ ಮಾಡುವುದಿಲ್ಲ. ಉಪದೇಶ ಮಾಡುವವರ ಜೊತೆ ಕೂಡ ಸುಮ್ಮನೆ, ಸುಮ್ಮನಿರಲು ಪ್ರಬಂಧಗಳನ್ನು ಬರೆಯುತ್ತಾ ಹೋಗುತ್ತೇನೆ.

(ಕೃತಿ: ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು (ಪ್ರಬಂಧಗಳ ಸಂಕಲನ), ಲೇಖಕರು: ಕೆ. ಸತ್ಯನಾರಾಯಣ, ಪ್ರಕಾಶಕರು:  ನ್ಯೂ ವೇವ್ಸ್‌ ಬುಕ್ಸ್‌ (9448788222), ಬೆಲೆ: 140/- )