ಅಂಗಡಿಯ ಭಟ್ರಿಗೆ ಮೊಟ್ಟೆಕೊಂಡು ಹೋದವರು ಯಾರೆಂದು ಗುರುತಿಸುವುದೇ ಕಷ್ಟವಾಯಿತು. ರಫೀಕ್ ನನ್ನು ತೋರಿಸಿ, ‘ಇವನೇ ಕೊಂಡುಹೋಗಿದ್ದ’ ಎಂದರು. ‘ನಾನಲ್ಲ’ ಎಂಬ ಉತ್ತರ ಬಂದ ಕೂಡಲೇ ಶಫೀಕ್ ನನ್ನು ತೋರಿಸಿ, ‘ಇವನೇ ಇವನೇ’ ಎಂದರು. ಶಫೀಕ್ ಕೂಡ ನಾನಲ್ಲ ಎನ್ನಬೇಕೇ.. ಅವಳಿಜವಳಿ ಮಕ್ಕಳು ಸೇರಿ ಅಂಗಡಿ ಭಟ್ರಿಗೆ ಚಳ್ಳೇಹಣ್ಣು ತಿನ್ನಿಸಿ ಓಡಿದ್ದರು. 
ಶೇಣಿ ಮುರಳಿ ಬರೆದ ಉಸ್ತಾದ್ ರಫೀಕ್ ಖಾನ್ ಜೀವನಚರಿತ್ರೆ ‘ಖಾನ್ ಕಾಂಪೌಂಡ್’ನ ಅಧ್ಯಾಯ ಕೆಂಡಸಂಪಿಗೆ ಓದುಗರಿಗಾಗಿ

 

ಜೂನ್ ೩೦ ೧೯೬೮. ಇದು ರಫೀಕ್-ಶಫೀಕ್ ಅವರ ಜನ್ಮದಿನಾಂಕ.
ಧಾರವಾಡದ ಆಸ್ಪತ್ರೆಯಲ್ಲಿ ಈ ಅವಳಿ ಮಕ್ಕಳಿಗೆ ಮೆಹಬೂಬಿ ಜನ್ಮ ನೀಡಿದ್ದರು. ರಫೀಕ್ ಹುಟ್ಟಿ, ಹತ್ತು ನಿಮಿಷಗಳ ಅನಂತರ ಶಫೀಕ್ ಜನಿಸಿದರು.ಅವಳಿಗಳ ಹೆಜ್ಜೆ ಕುಟುಂಬಕ್ಕೆ ಹೊಸತು. ಮನೆಮಂದಿಗೆಲ್ಲ ಅವೊಂಥರಾ ಸಂತಸದ ಕ್ಷಣಗಳು. ಉಳಿದ ಮಕ್ಕಳು ಬಾಂಬೆ ಹಾಗೂ ಪುಣೆಯಲ್ಲಿದ್ದ ಕಾರಣ, ಈ ಮಕ್ಕಳು ಅಂಬೆಗಾಲಿಡುತ್ತ ಅತ್ತಿಂದಿತ್ತ ಓಡಾಡಿಕೊಂಡು ಇರುತ್ತಿದ್ದುದನ್ನು ನೋಡುವಾಗ ಕರೀಂ ಖಾನ್ ಮತ್ತು ಮೆಹಬೂಬಿ ಅವರಿಗೆ ಆನಂದವಾಗುತ್ತಿತ್ತು. ಸಿತಾರ್ ನೋಡುತ್ತ, ಕೇಳುತ್ತ ಬೆಳೆದ ಮಕ್ಕಳು ನಡೆದಾಡಲಾರಂಭಿಸಿದರು. ಪ್ರೀತಿಯಿಂದ ನನ್ಹಾ-ಮುನ್ಹಾ ಎಂದೇ ಅವರನ್ನು ಕರೆಯುತ್ತಿದ್ದರು. ಇವರಲ್ಲಿ ನನ್ಹಾ ಶಫೀಕ್ ಮತ್ತು ಮುನ್ಹಾ ರಫೀಕ್.

ಖಾನ್ ಕಾಂಪೌಂಡ್‌ನಲ್ಲಿ ಗೋಲಿ, ಬುಗರಿ, ಕ್ರಿಕೆಟ್ ಆಡುತ್ತಿದ್ದ ಅವರಿಬ್ಬರ ಬಾಲ್ಯ ರಸಮಯವಾಗಿತ್ತು. ಮನೆಯ ವಾತಾವರಣವೂ ಸಂಗೀತಮಯವಾಗಿರುತ್ತಿತ್ತು. ಮನೆಯ ಪಕ್ಕ ನಾಲ್ಕೈದು ಕೆರೆಗಳಿದ್ದವು. ಅದರಲ್ಲಿ ಈಜುತ್ತ ಕಾಲ ಕಳೆಯುತ್ತಿದ್ದ ಅವಳಿ ತಮ್ಮಂದಿರನ್ನು ಅಣ್ಣ ಮೆಹಮೂದ್ ಖಾನ್ ಗದರಿಸುತ್ತಿದ್ದರು. ‘ನಮ್ಮದು ಕಲಾವಿದರ ಮನೆತನ, ನೀವು ಸಂಗೀತವನ್ನು ಕಲಿಯುವುದು ಬಿಟ್ಟು, ಮಕ್ಕಳಾಟಿಕೆಯಲ್ಲೇ ದಿನ ಕಳೆಯುತ್ತೀರಿ. ಇದು ಸರಿಯಲ್ಲ, ಸಿತಾರ್ ಕಲಿಯಿರಿ’. ಅಣ್ಣನ ಕಣ್ಣುಗಳು ಕೆಂಪಾಗುತ್ತಿದ್ದಾಗ ತಮ್ಮಂದಿರು ಹೆದರಿ ಮನೆಗೆ ಓಡುತ್ತಿದ್ದರು. ಅಜ್ಜನಂತೆ, ಅಪ್ಪನಂತೆ, ಅಣ್ಣಂದಿರಂತೆ ಸಿತಾರ್ ಆಸಕ್ತಿ ಇವರಲ್ಲಿ ಆಗ ಮೂಡಿರಲಿಲ್ಲ, ಅವು ಆಟದ ದಿನಗಳು.

ಒಮ್ಮೆ ರಜಾಕಾಲದಲ್ಲಿ ಮೆಹಬೂಬಿ ಮಕ್ಕಳನ್ನು ತಮ್ಮ ಸಹೋದರ ಬಡೇ ಬಾಬು ಅವರ ಮನೆಗೆ ಕರೆದುಕೊಂಡು ಹೋಗಿದ್ದರು.
(ಧಾರವಾಡದ ಖಾದರ್ ಸಾಹಬ್ ಗರಗ್-ಮನ್ನಾಬಿ ದಂಪತಿಯ ಹಿರಿಯ ಮಗಳಾಗಿದ್ದರು ಮೆಹಬೂಬಿ) ಬಡೇ ಬಾಬು ಮಾವನ ಮನೆ, ಮಕ್ಕಳ ಪಾಲಿನ ಸ್ವರ್ಗ. ಅಲ್ಲಿ ತುಂಬ ಪಾರಿವಾಳಗಳಿದ್ದವು. ಎಲ್ಲೆಲ್ಲೂ ಅವುಗಳು ಹೊರಡಿಸುತ್ತಿದ್ದ ಗುಡುರ್…ಗುಡುರ್…ಸದ್ದು. ನನ್ಹಾ-ಮುನ್ಹಾರಿಗೆ ಈ ಪಾರಿವಾಳಗಳೆಂದರೆ ಜೀವ. ಹಾರಬಿಟ್ಟರೂ, ಪಾರಿವಾಳಗಳು ಮನೆಗೇ ಮರಳುತ್ತಿದ್ದವು. ಮಕ್ಕಳಿಗೆ ಇದು ದೊಡ್ಡ ಆಟವೇ ಆಯಿತು. ಹಾರಲು ಬಿಡುವುದು, ಮತ್ತೆ ಕರೆಯುವುದು! ಪಾರಿವಾಳಗಳಿಗೂ ಇದು ಅಭ್ಯಾಸವಾಗಿಬಿಟ್ಟಿತ್ತು. ರಜೆ ಮುಗಿಸಿ ಮನೆಗೆ ಹೋಗುವ ಸಮಯ ಬಂದಾಗ ಮಕ್ಕಳ ಮುಖ ಮುದುಡಿಕೊಳ್ಳುತ್ತಿತ್ತು. ಇದನ್ನು ಗಮನಿಸಿದ ಮಾವ, ಮೂರು ಪಾರಿವಾಳಗಳನ್ನು ಉಡುಗೊರೆಯಾಗಿ ಕೈಗಿತ್ತಾಗ ನನ್ಹಾ-ಮುನ್ಹಾರಿಗೆ ಖುಷಿಯೋ ಖುಷಿ. ‘ಈ ಪಾರಿವಾಳಗಳನ್ನು ಹಾರಲು ಬಿಡಬೇಡಿ. ಬಿಟ್ಟರೆ ಅವು ನನ್ನ ಮನೆಗೇ ವಾಪಸ್ ಬರುತ್ತವೆ. ನಿಮ್ಮ ಮನೆಗಲ್ಲ’ ಎಂಬ ಎಚ್ಚರಿಕೆಯ ಮಾತನ್ನೂ ಹೇಳಿದ್ದರು ಮಾವ. ಪಾರಿವಾಳಗಳು ಬಹಳ ಬೇಗ ಸಂತಾನೋತ್ಪತ್ತಿ ಮಾಡುತ್ತವೆ. ಹಾಗೆ ಮೂರು ಪಾರಿವಾಳಗಳು ಒಂದು ವರ್ಷದ ಅವಧಿಯೊಳಗೆ ೩೦ ಪಾರಿವಾಳಗಳಾಗಿ ಮನೆ ಆವರಣ ತುಂಬಿಬಿಟ್ಟವು. ನನ್ಹಾ-ಮುನ್ಹಾ ಬೆಳೆಯುತ್ತ ಹೋದಂತೆ, ಪಾರಿವಾಳಗಳ ಮೇಲಿನ ಆಸಕ್ತಿ ಕ್ಷೀಣಿಸಿತು. ಬಲಿತ ರೆಕ್ಕೆಗಳು ಪಾರಿವಾಳಗಳನ್ನು ಬೇರೆಲ್ಲಿಗೋ ಕರೆದೊಯ್ದವು!

ಕರೀಂ ಖಾನ್ ವರ್ಷಕ್ಕೊಮ್ಮೆ, ತಮ್ಮ ತಂದೆ ರಹಿಮತ್ ಖಾನ್ ಅವರ ನೆನಪಿಗಾಗಿ ಸಂಗೀತ ಮಹೋತ್ಸವ ಆಯೋಜಿಸುತ್ತಿದ್ದರು. ಅದು ಇಡೀ ರಾತ್ರಿಯ ಕಾರ್ಯಕ್ರಮ, ಹಾಗಾಗಿ ಸಭಾಂಗಣದ ಹೊರಗಡೆ ಚಹಾ, ಎಣ್ಣೆತಿಂಡಿಗಳ ಸ್ಟಾಲ್‌ಗಳು ಇರುತ್ತಿದ್ದವು ಪ್ರೇಕ್ಷಕರಿಗಾಗಿ. ಆದರೆ ಒಮ್ಮೆ ಯಾಕೋ, ಸ್ಟಾಲ್‌ಗಳೇ ಇರಲಿಲ್ಲ. ಪ್ರೇಕ್ಷಕರು ತೂಕಡಿಸಬಾರದು ಎಂಬ ಕಾರಣಕ್ಕೆ ಕರೀಂ ಖಾನ್ ಅವರ ಮಗ ಮೆಹಮೂದ್ ಖಾನ್ ಚಹಾ ಸ್ಟಾಲ್ ಹಾಕಿಸಿದ್ದರು. ಮೆಹಮೂದ್ ಅವರ ಸಂಘಟನಾ ಶಕ್ತಿಯನ್ನು ಇಲ್ಲಿ ಗುರುತಿಸಬಹುದು. ನಂತರದ ದಿನಗಳಲ್ಲಿ ಅವರು ರಾಜಕಾರಣಿಯಾದರು. ಅಂದು ಒಳಗೆ ಸಭಾಂಗಣದಲ್ಲಿ ಕಛೇರಿಯಾಗುತ್ತಿದ್ದರೆ, ರಫೀಕ್-ಶಫೀಕ್ ಟೀ ಸ್ಟಾಲ್ ಬಳಿ ಸಮಯ ಕಳೆಯುತ್ತಿದ್ದರು. ಅವರಿಗೆ ಎಷ್ಟು ಜನ ಟೀ ಕುಡಿಯಲು ಬರುತ್ತಾರೆ ಎಂಬುದೇ ಕುತೂಹಲ.

ಖಾನ್ ಕಾಂಪೌಂಡ್‌ಗೆ ಅಂಟಿಕೊಂಡೇ ಇದ್ದ ಸಾಲು ಸಾಲು ಅಂಗಡಿಗಳಿಂದ ತುರ್ತು ಸಂದರ್ಭಗಳಲ್ಲಿ ಬ್ರೆಡ್ ಮತ್ತು ಮೊಟ್ಟೆ ತರಲು ಮನೆಮಂದಿ ಈ ಅವಳಿ ಮಕ್ಕಳನ್ನು ಕಳುಹಿಸುತ್ತಿದ್ದರು. ಅದು ಭಟ್ರ ಅಂಗಡಿ. ಪ್ರತೀ ಬಾರಿ ಮೊಟ್ಟೆ ತರುವಾಗ ಹಣ ಕೊಡುವ ಕ್ರಮ ಇರುತ್ತಿರಲಿಲ್ಲ. ಅಂಗಡಿ ಮಾಲೀಕ ಲೆಕ್ಕ ಬರೆದಿಡುತ್ತಿದ್ದರು. ತಿಂಗಳ ಕೊನೆಯಲ್ಲಿ ಮನೆಯವರು ಅದನ್ನು ಚುಕ್ತಾ ಮಾಡುತ್ತಿದ್ದರು. ರಫೀಕ್-ಶಫೀಕ್ ಸಂಜೆ ವೇಳೆ ಮೊಟ್ಟೆಗಳನ್ನು ಪಡೆದು, ಲೆಕ್ಕ ಬರೆಸಿ ಶಾಲೆಗೆ ತೆಗೆದುಕೊಂಡುಹೋಗುತ್ತಿದ್ದರು. ಯಾರಿಗೂ ಗೊತ್ತಾಗದಂತೆ ಅವುಗಳನ್ನು ಶಾಲೆಯ ಲ್ಯಾಬೊರೇಟರಿಯಲ್ಲಿ ಬೇಯಿಸಿ ತಿನ್ನುತ್ತಿದ್ದರು. ಲ್ಯಾಬ್ ಸಹಾಯಕ ಕೂಡ ಮಕ್ಕಳ ಜತೆ ಮೊಟ್ಟೆಯನ್ನು ತಿಂದು ತೇಗುತ್ತಿದ್ದ! ಬೇರೆ ಯಾರೂ ಸಂಜೆಯ ವೇಳೆ ಶಾಲೆಯಲ್ಲಿ ಇರುತ್ತಿರಲಿಲ್ಲ. ಹಾಗಾಗಿ ಈ ಕಣ್ಣಾಮುಚ್ಚಾಲೆ ಮುಂದುವರಿಯುತ್ತಿತ್ತು.

ಒಂದು ದಿನ ಭಟ್ರ ಅಂಗಡಿಯಲ್ಲಿ ಲೆಕ್ಕ ಚುಕ್ತಾ ಮಾಡಲು ಹೋದ ಅಣ್ಣನಿಗೆ ಆಶ್ಚರ್ಯ. ಅಂಗಡಿಯಿಂದ ಇಷ್ಟು ಮೊಟ್ಟೆಗಳನ್ನು ಮನೆಗೆ ತಂದಿರಲೇ ಇಲ್ಲ, ಮತ್ತೆ ಇಷ್ಟು ಬಿಲ್ ಹೇಗೆ ಎಂದು ಕೇಳಿದಾಗ, ಭಟ್ರು, ರಫೀಕ್ ಕಡೆಗೆ ಕೈ ತೋರಿಸಿ ‘ಇವನು ತೆಗೆದುಕೊಂಡು ಹೋಗುತ್ತಿದ್ದ’ ಎಂದರು. ಆದರೆ, ‘ಇಲ್ಲ ನಾನು ತೆಗೆದುಕೊಂಡು ಹೋಗಿಲ್ಲ’ ಎನ್ನುತ್ತಿದ್ದರು ರಫೀಕ್. ಹಾಗಾದರೆ ‘ಅವನೇ ಇರಬೇಕು’ ಎಂದು ಶಫೀಕ್‌ನನ್ನು ಭಟ್ರು ತೋರಿಸುವಾಗ, ಆತನೂ ಕೂಡ ‘ನಾನು ತೆಗೆದುಕೊಂಡು ಹೋಗಿಲ್ಲ ಎನ್ನುತ್ತಿದ್ದ. ಅವಳಿ ಮಕ್ಕಳಲ್ಲಿ ರೂಪಸಾದೃಶ್ಯ ಇದ್ದ ಕಾರಣ ಯಾರು ತೆಗೆದುಕೊಂಡು ಹೋದದ್ದು ಎಂದು ಭಟ್ರಿಗೆ ಗೊತ್ತೇ ಆಗುತ್ತಿರಲಿಲ್ಲ! ಮಕ್ಕಳ ಹೆಸರು ಕೂಡ ಅವರಿಗೆ ತಿಳಿದಿರಲಿಲ್ಲ. ತಮ್ಮಂದಿರ ಸ್ವಭಾವ ಗೊತ್ತಿದ್ದ ಅಣ್ಣ, ಭಟ್ರ ಲೆಕ್ಕ ಚುಕ್ತಾ ಮಾಡಿ, ‘ಇನ್ನು ಮುಂದೆ ಇವರಿಬ್ಬರು ಬಂದರೆ ಮೊಟ್ಟೆ ಕೊಡಬೇಡಿ’ ಎಂದುಬಿಟ್ಟರು. ಅನಂತರ ಶಾಲೆಯ ಪ್ರಯೋಗಾಲಯದಲ್ಲಿ ಮೊಟ್ಟೆ ಬೇಯಲಿಲ್ಲ!

ರಜೆ ಮುಗಿಸಿ ಮನೆಗೆ ಹೋಗುವ ಸಮಯ ಬಂದಾಗ ಮಕ್ಕಳ ಮುಖ ಮುದುಡಿಕೊಳ್ಳುತ್ತಿತ್ತು. ಇದನ್ನು ಗಮನಿಸಿದ ಮಾವ, ಮೂರು ಪಾರಿವಾಳಗಳನ್ನು ಉಡುಗೊರೆಯಾಗಿ ಕೈಗಿತ್ತಾಗ ನನ್ಹಾ-ಮುನ್ಹಾರಿಗೆ ಖುಷಿಯೋ ಖುಷಿ.

ರಂಜಾನ್, ಬಕ್ರೀದ್ ಹಬ್ಬ ಬಂತೆಂದರೆ, ಈ ಕಿಲಾಡಿ ಜೋಡಿಗಳಿಗೆ ಎಲ್ಲಿಲ್ಲದ ಸಂತಸ. ಮನೆಯ ಹಿರಿಯರು ಕಿರಿಯರಿಗೆ ಹಬ್ಬದ ಈದಿ (ಉಡುಗೊರೆ) ಕೊಡುತ್ತಿದ್ದರು. ಬಬ್ಬ ೨೫ ಪೈಸೆ ಕೊಡುತ್ತಿದ್ದರು. ಹೆಚ್ಚು ಹಣ ಕೊಟ್ಟರೆ ಮಕ್ಕಳು ಕೆಟ್ಟ ಹವ್ಯಾಸಗಳನ್ನು ಬೆಳೆಸಿಕೊಳ್ಳುತ್ತಾರೆ, ದುಂದುವೆಚ್ಚ ಮಾಡುತ್ತಾರೆ ಎಂದು ಅವರು ಹೇಳುತ್ತಿದ್ದರು. ಅಣ್ಣ ಬಾಲೇ ಖಾನ್ ೧ ರೂ. ಕೊಡುತ್ತಿದ್ದರು. ಅವರ ಗೆಳೆಯರು ಮತ್ತು ಕುಟುಂಬದ ಆಪ್ತರೆಲ್ಲ ಮನೆಗೆ ಬಂದು ಶುಭಾಶಯ ವಿನಿಮಯ ಮಾಡುತ್ತಿದ್ದರು. ಅತಿಥಿಗಳ ಸಂಖ್ಯೆ ಹೆಚ್ಚಾದಷ್ಟು, ಈದಿಯ ಮೊತ್ತವೂ ಹೆಚ್ಚುತ್ತದೆ ಎಂಬುದು ಮಕ್ಕಳಿಗೆ ಖುಷಿಯ ಸಂಗತಿ. ಒಟ್ಟಾದರೆ, ಒಬ್ಬೊಬ್ಬರಿಗೆ ತಲಾ ೧೦ ರೂ.ನಷ್ಟು ಈದಿ ಸಿಗುತ್ತಿತ್ತು. ಅಕ್ಕನ ಮಕ್ಕಳಾದ ಇಕ್ಬಾಲ್ ಮತ್ತು ಇರ್ಫಾನ್, ರಫೀಕ್-ಶಫೀಕರ ಸಮವಯಸ್ಕರು. ಹಾಗಾಗಿ, ಈ ನಾಲ್ಕು ಮಂದಿ ಒಟ್ಟಾಗಿ ಮನೆಯಲ್ಲಿ ಹೇಳದೆ, ಕೇಳದೆ ಸಿನಿಮಾಗೆ ಹೋಗುತ್ತಿದ್ದರು. ಧಾರವಾಡದಲ್ಲಿ ರೀಗಲ್ ಮತ್ತು ಸಂಗಂ ಥಿಯೇಟರ್‌ಗಳಿದ್ದವು. ರಫೀಕ್ ಅಮಿತಾಭ್ ಬಚ್ಚನ್ ಅವರ ಅಭಿಮಾನಿ. ಆಂಗ್ರಿ ಯಂಗ್‌ಮ್ಯಾನ್ ಇಮೇಜ್ ಈ ಮಕ್ಕಳಲ್ಲಿ ಜೋಶ್ ಹುಟ್ಟುಹಾಕಿತ್ತು. ಒಂದು ಸಿನಿಮಾ ನೋಡಿ, ಹೊರಬಂದಾಗ ಸೂರ್ಯ ನೆತ್ತಿಮೇಲಿರುತ್ತಿದ್ದ. ಮಿರ್ಚಿ ಭಜ್ಜಿ(ಹಸಿಮೆಣಸಿನ ಪೋಡಿ), ಗಿರ್ಮಿಟ್(ಒಗ್ಗರಣೆ ಹಾಕಿದ ಚುರುಮುರಿ), ದಹಿ ವಡ ತಿಂದು ತಂಪು ಪಾನೀಯ ಕುಡಿದು ಮತ್ತೆ ಇನ್ನೊಂದು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ನುಗ್ಗಿಬಿಡುತ್ತಿದ್ದರು. ಹಾಗೆ, ರಜಾ ದಿನಗಳಲ್ಲಿ ನೋಡಿದ ಸಿನಿಮಾಗಳ ಪಟ್ಟಿಯಲ್ಲಿ ಅಮಿತಾಭ್ ಚಿತ್ರಗಳ ಹೆಸರೇ ಜಾಸ್ತಿ. ಲಾವಾರಿಸ್, ಕಾಲಿಯಾ, ಯಾರಾನಾ, ಶೋಲೆ… ಇವೆಲ್ಲವನ್ನೂ ರಫೀಕ್-ಶಫೀಕ್, ಈದಿಯಾಗಿ ಸಿಕ್ಕ ಹಣದಲ್ಲೇ ನೋಡಿದ್ದರು.

ಮನೆಯ ಹತ್ತಿರದಲ್ಲೇ ದೊಡ್ಡ ಮೈದಾನವಿತ್ತು. ಅಲ್ಲಿ ಆಸುಪಾಸಿನ ಮಕ್ಕಳು ಬೆಳಗ್ಗಿನಿಂದ ಸಂಜೆ ತನಕ ಕ್ರಿಕೆಟ್ ಆಡುತ್ತಿದ್ದರು. ಹಾಗಾಗಿ, ರಫೀಕ್-ಶಫೀಕ್ ಕೂಡ ಅಲ್ಲಿಯೇ ಆಡುತ್ತಿದ್ದಿರಬಹುದು ಎಂದು ಮನೆಮಂದಿ ಭಾವಿಸುತ್ತಿದ್ದರು, ಹಾಗಾಗಿ ಅವಳಿ ಮಕ್ಕಳ ಸಿನಿಮಾ, ತಿರುಗಾಟ ನಿರಾತಂಕವಾಗಿ ನಡೆಯುತ್ತಿತ್ತು. ಈದಿ ರೂಪದಲ್ಲಿ ಸಿಕ್ಕ ೧೦ ರೂ.ಮುಗಿದಾಗ, ಮಕ್ಕಳು ಮನೆ ಸೇರುತ್ತಿದ್ದರು. ಸಿಕ್ಕಿದ್ದನ್ನೆಲ್ಲ ತಿಂದ ಕಾರಣ, ಮರುದಿನ ಜ್ವರ. ಮೂರು ದಿನ ಶಾಲೆಗೆ ಚಕ್ಕರ್! ಬಬ್ಬ ಬಯ್ಯುವಾಗ ಬಚಾವ್ ಮಾಡಲು ಅಕ್ಕಂದಿರುತ್ತಿದ್ದರು. ತಮ್ಮಂದಿರ ಕಳ್ಳಾಟಗಳೆಲ್ಲ ಅವರಿಗೆ ಗೊತ್ತಿದ್ದವು. ವಯಸ್ಸಿನಲ್ಲಿಯೂ ದೊಡ್ಡವರಾದ್ದರಿಂದ ರಫೀಕ್-ಶಫೀಕ್‌ರನ್ನು ಅಕ್ಕಂದಿರು ತಮ್ಮ ಮಕ್ಕಳಂತೆಯೇ ನೋಡುತ್ತಿದ್ದರು.

ಹಬ್ಬಕ್ಕೆ ಆರು ತಿಂಗಳ ಮುಂಚಿತವಾಗಿಯೇ ಮೀರಜ್‌ನಿಂದ ಆಡಿನ ಮರಿಗಳನ್ನು ಧಾರವಾಡದ ಮನೆಗೆ ತರಲಾಗುತ್ತಿತ್ತು. ಹಬ್ಬದ ದಿನಗಳಲ್ಲಿ ಆಡಿನ ಮರಿಗಳಿಗೆ ಮಾರುಕಟ್ಟೆ ದರ ಸಿಕ್ಕಾಪಟ್ಟೆ ಏರಿಕೆಯಾಗುತ್ತಿದ್ದುದು ಇದಕ್ಕೆ ಕಾರಣ. ಮೀರಜ್‌ನಿಂದ ಸಿತಾರ್ ರಿಪೇರಿಗೆಂದು ಬರುತ್ತಿದ್ದವರು ಈ ಆಡಿನ ಮರಿಗಳನ್ನು ಕೂಡ ರೈಲಿನಲ್ಲಿ ತರುತ್ತಿದ್ದರು. ಆರು ತಿಂಗಳಾಗುವಾಗ ಆಡುಗಳು ಬಲಿಷ್ಠವಾಗಿ ‘ಜುಬಾ’ (ಬಲಿ)ಕ್ಕೆ ಸಿದ್ಧವಾಗಬೇಕಿತ್ತು. ಇಂತಹ ಆಡನ್ನು ‘ಬಲಿ ಕಾ ಬಕ್ರಾ ಎಂದೂ ಕರೆಯಲಾಗುತ್ತದೆ. ಹೀಗೆ ಬಂದ ಆಡಿನ ಮರಿಗಳನ್ನು ಆರು ತಿಂಗಳು ನೋಡಿಕೊಳ್ಳುವ ಜವಾಬ್ದಾರಿ ರಫೀಕ್-ಶಫೀಕ್ ಅವರದಾಗಿತ್ತು. ಹಬ್ಬದ ದಿನಗಳಲ್ಲಿ ಆಡನ್ನು ಬಲಿ ಕೊಟ್ಟು, ಬಿರಿಯಾನಿ ಮಾಡಿ ತಿನ್ನುವುದು ಮುಸ್ಲಿಂ ಕುಟುಂಬಗಳ ಸಂಪ್ರದಾಯ. ಇದನ್ನು ‘ಕುರ್ಬಾನಿ’ ಎನ್ನಲಾಗುತ್ತದೆ.

ಬೆಳೆಯುತ್ತಿದ್ದ ಈ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಹುಟ್ಟುಹಾಕಿದ್ದು ಗಾಳಿಪಟ ಮತ್ತು ನೆರೆಹೊರೆಯ ಮಕ್ಕಳು. ಗಾಳಿಪಟಕ್ಕೆ ಕಟ್ಟಲಾಗುವ ದಾರದ ಮೇಲೆ (ಆಗ ಈಗಿನಂತೆ ಮಾಂಜಾ ಸಿಗುತ್ತಿರಲಿಲ್ಲ) ೩೦ ಅಡಿ ಉದ್ದಕ್ಕೆ ಗಾಜಿನ ಚೂರುಗಳನ್ನು ಪುಡಿ ಮಾಡಿ ಅಂಟಿಸಲಾಗುತ್ತಿತ್ತು. ತಂಗಳನ್ನ, ಗೋಧಿ, ಮೈದಾ ಮಿಶ್ರಣವೇ ಅಂಟು. ಮನೆಯಿಂದ ಹೊರಗೆ ಒಲೆಯನ್ನು ಮಕ್ಕಳೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ಅಂಟಿಗೆ ಗಾಜಿನ ಪುಡಿ ಹಾಕಿ ದಾರದ ಒಂದು ತುದಿಯನ್ನು ಖಾನ್ ಕಾಂಪೌಂಡಿನ ಮಾವಿನ ಸಸಿಗೆ, ಇನ್ನೊಂದು ತುದಿಯನ್ನು ಇನ್ನೊಂದು ಮಾವಿನ ಗಿಡಕ್ಕೆ ಕಟ್ಟಿ, ತುಂಬ ಜಾಗರೂಕತೆಯಿಂದ ಲೇಪಿಸಲಾಗುತ್ತಿತ್ತು. ಎಚ್ಚರ ತಪ್ಪಿದರೆ ಅಪಾಯವಿತ್ತು. ಆಗಸದಲ್ಲಿ ಹಾರಾಡುವಾಗ ಈ ದಾರದಲ್ಲಿರುತ್ತಿದ್ದ ಗಾಜಿನ ಪುಡಿ ಉಳಿದ ಗಾಳಿಪಟದ ದಾರವನ್ನು ಕತ್ತರಿಸಬೇಕು-ಇದು ಸ್ಪರ್ಧೆ. ರಫೀಕ್-ಶಫೀಕ್ ಅವರಿಗೆ ಈ ವಿದ್ಯೆ ಹೇಳಿಕೊಟ್ಟದ್ದು ನೆರೆಹೊರೆಯ ಮಕ್ಕಳು. ಸ್ಪರ್ಧಾ ಮನೋಭಾವ ಹುಟ್ಟಿದ್ದು ಇಲ್ಲಿ.

ಥಿಯೇಟರ್‌ನಲ್ಲಿ ಸಾಕಷ್ಟು ಸಿನಿಮಾಗಳನ್ನು ನೋಡಿದ್ದ ಈ ಮಕ್ಕಳು ಮನೆಯಲ್ಲೇ ಪ್ರಾಜೆಕ್ಟರ್ ಮಾದರಿಯನ್ನು ಸಿದ್ಧಪಡಿಸಿ ಖುಷಿಪಟ್ಟುಕೊಳ್ಳುತ್ತಿದ್ದರು. ರೀಗಲ್ ಥಿಯೇಟರ್‌ನಲ್ಲಿ ಹೊನ್ನತ್ತಿ ಎಂಬವರು ಪ್ರಾಜೆಕ್ಟರ್ ಆಪರೇಟರ್ ಆಗಿದ್ದರು. ಅವರ ಮಗ ರಫೀಕ್-ಶಫೀಕ್‌ಗೆ ಒಡನಾಡಿ. ಆತನ ಮೂಲಕ ಹೊನ್ನತ್ತಿ ಪರಿಚಿತರಾಗಿಬಿಟ್ಟಿದ್ದರು. ರೀಲ್‌ನಲ್ಲಿ ಕೆಲವು ಭಾಗಗಳನ್ನು ತುಂಡು ಮಾಡಿ ಎಸೆಯಲಾಗುತ್ತಿತ್ತು. ಈ ರೀಲ್‌ಗಳನ್ನು ರಫೀಕ್-ಶಫೀಕ್ ಹೊನ್ನತ್ತಿ ಅವರಿಂದ ಕೇಳಿ ಪಡೆಯುತ್ತಿದ್ದರು. ಬಿಸ್ಕೆಟ್ ಪೆಟ್ಟಿಗೆ, ಬಲ್ಬ್, ಅಗರಬತ್ತಿಯ ಕೊಳವೆಗಳನ್ನೆಲ್ಲ ಬಳಸಿ, ವಿದ್ಯುತ್ ಸಂಪರ್ಕ ಕೊಟ್ಟಾಗ ಪ್ರಾಜೆಕ್ಟರ್ ಕೆಲಸ ಮಾಡಲಾರಂಭಿಸುತ್ತಿತ್ತು. ರೀಲಿಗೆ ಬೆಳಕು ಹಾಯಿಸಿದಾಗ ಗೋಡೆ ಮೇಲೆ ನಿಶ್ಯಬ್ಧವಾಗಿ ‘ಅಮಿತಾಭ್ ಬಚ್ಚನ್ ಮೂಡಿಬರುತ್ತಿದ್ದ!

ಇಷ್ಟೆಲ್ಲ ಆಗುತ್ತಿದ್ದದ್ದು ಮಧ್ಯಾಹ್ನದ ವೇಳೆಯಲ್ಲಿ. ದೊಡ್ಡವರೆಲ್ಲ ಮನೆಯಲ್ಲಿ ಊಟ ಮಾಡಿ ನಿದ್ದೆಯಲ್ಲಿರುತ್ತಿದ್ದರು. ಆದರೆ, ಅಣ್ಣ ಮೆಹಬೂಬ್ ಖಾನ್ ಮಾತ್ರ ಇದನ್ನೆಲ್ಲ ಗಮನಿಸುತ್ತಲೇ ಇದ್ದರು. ಅವರು ತಮ್ಮಂದಿರಿಗೆ ವಿದ್ಯುತ್ ಶಾಕ್ ತಗಲುವ ಸಾಧ್ಯತೆಯನ್ನು ಮನಗಂಡು, ಎಚ್ಚರಿಕೆಯ ಮಾತುಗಳನ್ನು ಹೇಳುತ್ತಲೇ ಇದ್ದರು. ಉಳಿದ ಅಣ್ಣಂದಿರೆಲ್ಲ ಸೂಕ್ಷ್ಮಸ್ವಭಾದವರು, ಬಯ್ಯುತ್ತಿರಲಿಲ್ಲ. ಹಾಗಾಗಿ ಅವರ ಬಗೆಗೆ ಈ ತಮ್ಮಂದಿರು ಹೆದರಬೇಕಾಗಿಯೂ ಇರಲಿಲ್ಲ.

ಕಲಿಕೆಯಲ್ಲಿ ಆಸಕ್ತಿ ಇಲ್ಲದಿದ್ದರೂ, ಪ್ರಾಜೆಕ್ಟರ್ ತಯಾರಿ, ವಿಜ್ಞಾನ ಪರಿಕರ/ಮಾದರಿ ಸಿದ್ಧಪಡಿಸುವಲ್ಲಿ ಈ ಮಕ್ಕಳು ಚುರುಕಾಗಿದ್ದರು. ರಫೀಕ್ ಅವರನ್ನು ಶಫೀಕ್ ಹಿಂಬಾಲಿಸುತ್ತಿದ್ದರು. ಧಾರವಾಡದ ಶಾಲೆಯಲ್ಲಿ ಇವರು ಕೆಸೆಟ್ ರೆಕಾರ್ಡರ್‌ನ ಮೋಟಾರು ಬಳಸಿ ಸಿದ್ಧಪಡಿಸಿದ್ದ ಚಲಿಸುವ ವಿಂಡ್ ಮಿಲ್ ಮೊದಲಾದ ಮಾದರಿಗಳಿಗೆ ಬಹುಮಾನ ಸಿಗುತ್ತಿದ್ದವು. ಆದರೆ, ಇವರಿಗೆ ವಿಜ್ಞಾನದ ಕಲಿಕೆ ಇಷ್ಟವಾಗುತ್ತಲೇ ಇರಲಿಲ್ಲ. ಶಾಲಾ ದಿನಗಳಲ್ಲಿ ಎನ್‌ಸಿಸಿಯಲ್ಲಿಯೂ ಸಕ್ರಿಯರಾಗಿದ್ದರು. ಅಡಗಿಸಿಟ್ಟ ವಸ್ತುಗಳನ್ನು ಹುಡುಕುವ ಚಟುವಟಿಕೆಯಲ್ಲಿ ಇವರಿಬ್ಬರೂ ಸದಾ ಮುಂದೆ.