ಕಿರಿಯ ಬಲಿಪರು ಪೂರ್ಣ ಪ್ರದರ್ಶನವೊಂದರಲ್ಲಿ ಮೊದಲು ಭಾಗವತಿಕೆ ಮಾಡಿದ್ದು ಪೊಳಲಿ ಎಂಬಲ್ಲಿ.  ಪ್ರಸಂಗ ಹೊಸದಾಗಿದ್ದರೆ ಆಟಕ್ಕೆ ಅವಕಾಶ ನೀಡಬಹುದು ಎಂದು ಆಡಿಸುವವರ ಷರತ್ತು.  ಪ್ರದರ್ಶನದ ದಿನದಂದೇ, ಹೊಸ  ಕಥೆಯನ್ನು ಪೊಳಲಿಯ ಶೀನಪ್ಪ ಹೆಗಡೆಯವರು ಹೇಳುವುದು ಎಂದು ನಿರ್ಧಾರವಾಯಿತು.  ಬಲಿಪರು ನಿರ್ಧಾರವಾದ ಆಟವನ್ನು ಯಾವುದೇ ಕಾರಣಕ್ಕೂ ಬಿಡುವಂತಿಲ್ಲ ಎಂದು ತೀರ್ಮಾನಿಸಿ ಬಳಿಯ ಅಂಗಡಿಯಲ್ಲಿ ಕೆಲವು ಬಿಳಿ ಹಾಳೆಗಳನ್ನು ಖರೀದಿಸಿ ಪ್ರಸಂಗ ಪಟ್ಟಿ ಸಿದ್ಧಪಡಿಸಿದರು.
ಬಲಿಪ ಮಾರ್ಗ ಸರಣಿಯಲ್ಲಿ ಕೃಷ್ಣ ಪ್ರಕಾಶ ಉಳಿತ್ತಾಯ ಬರಹ  ಇಲ್ಲಿದೆ.

 

ಪೊಳಲಿಯಲ್ಲಿ ಶ್ರೀ ಬಲಿಪರು ಮೊದಲ ಬಾರಿಗೆ ಪ್ರಸಂಗ ರಚಿಸಿ ಆಡಿಸಿದರು.  ಕಿರಿಯ ಬಲಿಪರ ತಂದೆ ಮಾಧವ ಭಟ್ರಿಗೂ ತಾಯಿ ಸರಸ್ವತಿ ಅಮ್ಮನವರಿಗೂ ಮಗನನ್ನು ಪರಿಪೂರ್ಣ ಭಾಗವತನನ್ನಾಗಿ ಮಾಡಬೇಕೆಂಬ ಹಂಬಲವಿತ್ತು ಎಂಬುದನ್ನು ಬಲಿಪರು ಸಕಾರಣವಾಗಿ ಊಹಿಸುತ್ತಾರೆ. ಬಲಿಪ ಮಾಧವ ಭಟ್ರ ತಂದೆ ಮೂರು ವರುಷ  ಪುತ್ತೂರು ಮತ್ತು ಸುಬ್ರಹ್ಮಣ್ಯದಲ್ಲಿಸಂಗೀತ ಕಲಿತ್ತಿದ್ದರು.  ಪಡ್ರೆಯ ಸುಬ್ರಾಯ ಹಾಸ್ಯಗಾರ ಎಂಬ ಅಂದಿನ ಕಾಲದ ಪ್ರಸಿದ್ಧ ಹಾಸ್ಯಗಾರರಲ್ಲಿ ಯಕ್ಷಗಾನದ ಭಾಗವತಿಕೆಯನ್ನು ಕಲಿತಿದ್ದರು. ಅವರು ದೊಡ್ಡ ಬಲಿಪರ ನೆಚ್ಚಿನ ಹಾಸ್ಯಗಾರರೂ ಆಗಿದ್ದವರು.

ಎಳವೆಯಿಂದಲೇ ತಾಯಿಯೇ ಮಗನಿಗೆ ಪ್ರಸಂಗ ಪಠ್ಯವನ್ನು ಕಂಠಪಾಠ ಮಾಡಿಸುತ್ತಿದ್ದುದನ್ನು ಈ ಹಿಂದೆ ನೋಡಿದೆವಷ್ಟೆ. ಈ ಕಂಠಪಾಠ ಮಾಡಿಸುವ ಕ್ರಮ ಎಷ್ಟರ ಮಟ್ಟಿಗೆ ತೀವ್ರವಾಗಿತ್ತೆಂದರೆ, ಅವರು  ಶಾಲೆಗೆ ಹೋಗುವ ಮುನ್ನ ಬಾಯಿಪಾಠ ಮಾಡಿದ ಪ್ರಸಂಗ ಪದ್ಯಗಳನ್ನು ತಂದೆ ಅಥವಾ ತಾಯಿಗೆ ಒಪ್ಪಿಸಿ ಹೋಗಬೇಕಿತ್ತು.  ಶಾಲೆಯಿಂದ ಬಂದ ಮೇಲೆ ತಾಯಿ ಮತ್ತೆ ಮತ್ತೆ ಪ್ರಸಂಗ ಪದ್ಯಗಳನ್ನು ಓದಿಸುತ್ತಿದ್ದರು ಎನ್ನುವುದನ್ನೂ ನೆನಪಿಸಿಕೊಳ್ಳುತ್ತಾರೆ. ಹೀಗೆ ಓದಿದ ಪದ್ಯಗಳು ಕಂಠಸ್ಥವಾಗಿರುತ್ತಿದ್ದವು. ಶಾಲೆಯಲ್ಲಿ ಪಠ್ಯರೂಪವಾಗಿ ಕಲಿಯಲು ಇರುತ್ತಿದ್ದ ಪಾರ್ತಿಸುಬ್ಬನ ಉಂಗುರ ಸಂಧಿ ಪ್ರಸಂಗದ ಲಂಕಾದಹನದ ಭಾಗ, ಕನಕದಾಸರ ನಳದಮಯಂತಿ, ಜೈಮಿನಿ ಭಾರತದ, ಹರಿಶ್ಚಂದ್ರ ಕಾವ್ಯಭಾಗಗಳ ಅಧ್ಯಯನವೂ ಇರುತ್ತಿತ್ತು. ಈ ವಿಷಯ ಅಂದಿನ ಕನ್ನಡ ಭಾಷಾ ಅಧ್ಯಯನದ ಗಾಂಭೀರ್ಯವನ್ನು ಆಳವನ್ನೂ ಸೂಚಿಸುತ್ತಿದ್ದವು. ಹೀಗೆ ಶಾಲೆಯಲ್ಲಿ ಕಾವ್ಯ ಭಾಗಗಳೂ ಮತ್ತು ಮನೆಯಲ್ಲಿ ಯಕ್ಷಗಾನ ಪ್ರಸಂಗ ಭಾಗಗಳೂ ಜತೆಯಾಗಿ ಕಲಿಯಲು ಅನುಕೂಲವಾಯಿತು. ಮಾತ್ರವಲ್ಲ, ಯಕ್ಷಗಾನ ಪ್ರಸಂಗ ರಚನಾ ಸಂವಿಧಾನದ ಪ್ರಮೇಯಗಳೂ ಕರಗತವಾಯಿತು.

ಕಾಸರಗೋಡು ಜಿಲ್ಲೆಯ ಪೆರ್ಲದ ಸತ್ಯನಾರಾಯಣ ಹೈಸ್ಕೂಲ್ ನಲ್ಲಿ ಏಳನೆಯ ತರಗತಿಯವರೆಗೆ ಕಲಿತ ಬಲಿಪ ನಾರಾಯಣ ಭಾಗವತರಿಗೆ ದೊರಕಿದ ಅಧ್ಯಾಪಕ ವರ್ಗ ಶ್ರೇಷ್ಠ ಮಟ್ಟದ್ದೇ ಆಗಿತ್ತು. ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ವಿದ್ವಾಂಸರಾದ ಪೆರ್ಲ ಕೃಷ್ಣ ಭಟ್ಟರು, ಮಂಗಳೂರಿನಲ್ಲಿ ವಕೀಲರಾಗಿ ಹೆಸರಾಗಿದ್ದ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಕಲೆಯ ಮೂಲಸ್ವರೂಪದ ಉಳಿವಿಗಾಗಿ ಕಮ್ಮಟಗಳನ್ನು ಮತ್ತು ಬರಹ ಕಾರ್ಯಗಳನ್ನು ಕೈಗೊಂಡ ಮುಳಿಯ ಮಹಾಬಲ ಭಟ್ ಮುಂತಾದವರು ಅಧ್ಯಾಪಕರಾಗಿದ್ದರು. ಹಾಗಾಗಿ ಬಲಿಪರಿಗೆ ಎಳವೆಯಿಂದಲೇ ಸಾಹಿತ್ಯದ ಗಂಧ ತಾಗಿ ಅದೃಷ್ಟವಾಗಿ ಅವರೊಳಗೆ ಸೇರಿಕೊಂಡಂತಾಯಿತು. ಬಲಿಪರಿಗೆ ಶಾಲೆಗೆ ಹೋಗಲು ಬಹಳ ಆಸಕ್ತಿ ಇತ್ತು.  ತೋಟದ  ಕಲಸಗಳು, ದನಕ್ಕೆ ಹುಲ್ಲು ತರುವುದು ಮುಂತಾಗಿ  ಮನೆಯಲ್ಲಿ ಹೇಳುತ್ತಿದ್ದ ಕೆಲಸದ ಒತ್ತಡ ನೋಡಿ ಅವರಿಗೆ ಶಾಲೆಯೇ ಲೇಸು ಎನಿಸುತ್ತಿತ್ತು.   ಆದರೆ ಕೆಲಸಗಳು ಹೆಚ್ಚಾದ ವೇಳೆಯಲ್ಲಿ ಶಾಲೆಗೆ ಹೋಗಲೂ ಆಗದ ಪರಿಸ್ಥಿತಿ ಮತ್ತು ಶಾಲೆಗೆ ಹೋದ ಮೇಲಾದರೋ ಅಧ್ಯಾಪಕರಿಂದ ಛೀಮಾರಿ ಹಾಕಿಸಿಕೊಂಡು ಕ್ಲಾಸಿನಿಂದ ಹೊರಗೆ ನಿಲ್ಲಬೇಕಾಗಿ ಬರುವುದೂ ಆಗುತ್ತಿತ್ತು. ಇವೆಲ್ಲದರ ನಡುವೆ ಮನೆಯಲ್ಲಿ ಪ್ರಸಂಗ ಪಠ್ಯದ ಬಾಯಿಪಾಠ  ಮಾತ್ರ ನಡೆದೇ ಇತ್ತು.

ಶಾಲೆಯಿಂದ ಬಂದ ಮೇಲೆ ತಾಯಿ ಮತ್ತೆ ಮತ್ತೆ ಪ್ರಸಂಗ ಪದ್ಯಗಳನ್ನು ಓದಿಸುತ್ತಿದ್ದರು ಎನ್ನುವುದನ್ನೂ ನೆನಪಿಸಿಕೊಳ್ಳುತ್ತಾರೆ. ಹೀಗೆ ಓದಿದ ಪದ್ಯಗಳು ಕಂಠಸ್ಥವಾಗಿರುತ್ತಿದ್ದವು.

ಹೀಗೆ ಸರಸ್ವತಿ ಅಮ್ಮನವರಿಂದ ಸಾಹಿತ್ಯ ಪಾಠ ಮಾಡಿಸಿಕೊಂಡ ಬಲಿಪರು ಮೊತ್ತಮೊದಲು ಪ್ರಸಂಗ ರಚಿಸಿದ್ದು ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ದೇವಳದ ಎದುರಿನಲ್ಲಿ ನಡೆದ ಆಟದ ರಂಗಸ್ಥಳದಲ್ಲಿ. ಕಿರಿಯ ಬಲಿಪರು ರಚಿಸಿದ ಮೊದಲ ಪ್ರಸಂಗ “ನಾಗ ಕನ್ನಿಕೆ”. ಪೊಳಲಿ ದೇವಿಗೆ ಎದುರಾಗಿದ್ದ ರಂಗಸ್ಥಳದಲ್ಲಿ. ಮಂಗಳೂರಿನ ಭಗವತಿ ಮೇಳದಲ್ಲಿ ಆಗ ತಾನೇ ಭಾಗವತರಾಗಿ ವ್ಯವಸಾಯವನ್ನು ಆರಂಭಿಸಿದ್ದ ಬಲಿಪರಿಗೆ ಹದಿನೈದೋ ಹದಿನಾರೋ ವರುಷ. ಭಗವತಿ ಮೇಳದ ಯಜಮಾನರಾಗಿದ್ದ ಬದಿಯಡ್ಕ ತಿಮ್ಮಯ್ಯ ಎಂಬವರು ಪೊಳಲಿಯಲ್ಲಿ ಕಾಡಿ ಬೇಡಿ ಆಟವೊಂದನ್ನು ನಿಗದಿ ಪಡಿಸಿದ್ದರು. ಆಟವಾಡಿಸುವವರ ಬಳಿ “ನಮ್ಮ ಭಾಗವತರು ಯಾವ ಪ್ರಸಂಗವನ್ನಾದರೂ ಆಡಿಸಬಲ್ಲರು” ಎಂದು ಹೇಳಿ ಆಟವನ್ನು ನಿಗದಿ ಪಡಿಸಿದ್ದರು. ಅಂದಿನ ಕಾಲಮಾನದಲ್ಲಿ ಒಂದು ಆಟವನ್ನು  ಆಯೋಜಿಸುವ ಅವಕಾಶ ಗಳಿಸಬೇಕಾದರೆ ಹರಸಾಹಸ ಪಡಬೇಕಿತ್ತು. ಅಂಥ ಸಂದರ್ಭದಲ್ಲಿ ಪೊಳಲಿಯಲ್ಲಿ ಆಟ ನಿಗದಿಯಾಗಿತ್ತು. ಆದರೆ ಪ್ರಸಂಗ ಮಾತ್ರ ಹೊಸದು ಆಗಬೇಕು ಎಂಬುದು ಆಡಿಸುವವರ ಬೇಡಿಕೆ. ಕಥೆಯನ್ನು ಪೊಳಲಿಯ ಶೀನಪ್ಪ ಹೆಗಡೆಯವರು ಹೇಳುತ್ತಾರೆ ಎಂದು ನಿರ್ಧಾರವಾಯಿತು. ತಿಮ್ಮಯ್ಯನವರು ದೇವಸ್ಥಾನದ ಸಮೀಪದ ಒಂದು ಸ್ಥಳದಲ್ಲಿ ಮಲಗಿದ್ದ ಬಲಿಪರಲ್ಲಿಗೆ ಧಾವಿಸಿದರು. ನಿದ್ದೆಯಲ್ಲಿದ್ದ ಬಲಿಪರನ್ನು ಎಬ್ಬಿಸಿದರು. ನಡೆದ ವಿಷಯವನ್ನು ಹೇಳಿದರು. ಬಲಿಪರು ನಿರ್ಧಾರವಾದ ಆಟವನ್ನು ಯಾವುದೇ ಕಾರಣಕ್ಕೂ ಬಿಡುವಂತಿಲ್ಲ ಎಂದು ತೀರ್ಮಾನಿಸಿ ಎದ್ದು ಬಳಿಯ ಅಂಗಡಿಯಲ್ಲಿ ಕೆಲವು ಬಿಳಿ ಹಾಳೆಗಳನ್ನು ಖರೀದಿಸಿದರು. ಯಜಮಾನ ತಿಮ್ಮಯ್ಯನವರ ಜತೆಗೆ ಪೊಳಲಿ ಶೀನಪ್ಪ ಹೆಗಡೆಯವರ ಮನೆಗೆ ಬಂದರು. ಶೀನಪ್ಪ ಹೆಗಡೆಯವರು ಹೇಳಿದ “ನಾಗ ಕನ್ನಿಕೆ” ಕಥೆಯನ್ನು ಬರೆದುಕೊಂಡು ಹೋಗುತ್ತಿದ್ದ ಬಲಿಪರು ಅಲ್ಲೇ ಪಾತ್ರ ಪಟ್ಟಿಯನ್ನೂ ಮಾಡಿಕೊಂಡರು. ಮಾತ್ರವಲ್ಲ ಪ್ರಸಂಗದ ನಡೆಗೆ ಸರಿಯಾಗಿ ಬೇಕಾಗುವ ಪ್ರಸಂಗ ಪಟ್ಟಿಯನ್ನೂ(ಪ್ರಸಂಗಕ್ಕೆ ಅಗತ್ಯವಾದ ಆಯುಧಗಳು, ದೊಂದಿ, ಮಾವಿನ ಸೊಪ್ಪು ಇತ್ಯಾದಿ) ಮಾಡಿಕೊಳ್ಳುತ್ತಿದ್ದರು.

ಪ್ರಸಂಗ ಪಟ್ಟಿಯನ್ನು ಮಾಡಿ ಪ್ರಸಂಗದ ನಡೆಗೆ ಅನುಗುಣವಾಗಿ ಪಟ್ಟಿಯಲ್ಲಿದ್ದ ಸಾಮಾಗ್ರಿಗಳನ್ನು ರಂಗಸ್ಥಳದಲ್ಲಿ ಸಂದರ್ಭಾನುಸಾರ ಇರುವಂತೆ ಮಾಡುವ ಜವಾಬ್ದಾರಿ ಹಾಸ್ಯಗಾರರದ್ದೇ ಆಗಿತ್ತು.

ಹೀಗೆ ಬರೆದುಕೊಂಡ ಕಥೆಯನ್ನು ಮತ್ತೊಮ್ಮೆ ಓದಿನೋಡಿ ಒಬ್ಬೊಬ್ಬರೇ ವೇಷಧಾರಿಗಳನ್ನು ಕರೆದು ಆಗಲೇ ಕಥೆಯನ್ನು ಹೇಳತೊಡಗಿದರು. ಪಾತ್ರದ ಶೀಲ-ಸ್ವಭಾವ ಮತ್ತು ವೇಷದ ರೀತಿ (ಪುಂಡು ವೇಷವೋ, ರಾಜವೇಷವೋ, ಬಣ್ಣದ ವೇಷವೋ ಇತ್ಯಾದಿ) ಇವುಗಳನ್ನು ತಿಳಿಸಿಕೊಟ್ಟರು. “ಪದ್ಯವನ್ನು  ನಾನು ರಂಗಸ್ಥಳದಲ್ಲಿ ಹೇಳುತ್ತೇನೆ.” ಎಂದು ಎಲ್ಲಾ ವೇಷಧಾರಿಗಳಿಗೂ ಹೇಳಿದರು.

ಭಗವತಿ ಮೇಳದಲ್ಲಿ ಪ್ರಧಾನ ಭಾಗವತರಾಗಿ ಕಿರಿಯ ಬಲಿಪರೇ ಇದ್ದರೆ, ಚೆಂಡೆ ಮದ್ದಳೆಗೆ ಇರುವೈಲು ಪಾಚಪ್ಪ ಶೆಟ್ಟಿ ಎಂಬವರು ಮತ್ತು ಕುಂಬಳೆ ತಿಮ್ಮಪ್ಪ ಎಂಬವರು ಇದ್ದರು. ವೇಷಧಾರಿಗಳಾಗಿ ಪಡ್ರೆ ಚಂದ ಪಾಟಾಳಿ, ಮುತ್ತಪ್ಪ ರೈ, ಸಂಜೀವ ಚೌಟ ಮಂಜೇಶ್ವರ (ಸ್ತ್ರೀ ವೇಷಕ್ಕೆ), ಯಜಮಾನರಾದ ತಿಮ್ಮಪ್ಪ, ಬಂಗ ಭಂಡಾರಿ (ಬಣ್ಣದ ವೇಷ), ಶೀನಪ್ಪ ಭಂಡಾರಿ ಇಂಥ ಕಲಾವಿದರಿದ್ದರು.

ಆ ದಿನಗಳಲ್ಲಿ ಮೈಕ್ ಇರಲಿಲ್ಲ. ಮೈಕ್ ಇಲ್ಲದೆಯೇ ಸುಮಾರು ಹನ್ನೆರಡು ವರುಷ ಶ್ರೀ ಬಲಿಪರು ಭಾಗವತಿಕೆ ಮಾಡಿದ್ದರು. ಅಂತೆಯೇ ಪೊಳಲಿಯಲ್ಲೂ ಬಲಿಪರು ಭಾಗವತಿಕೆ ಮಾಡಿದ್ದರು. ಆಗ ಬ್ಯಾಟರಿ ಚಾಲಿತ ಮೈಕ್ ಇತ್ತು ಎಂಬ  ಸುದ್ದಿ ಕೇಳಿದ್ದರು. ಆ ವಿಶೇಷ ಮೈಕ್ ನಲ್ಲಿ ಪದ್ಯ ಹೇಳಬೇಕು ಎಂದುಬಲಿಪರಿಗೆ ಕಾತರವಾಗುತ್ತಿತ್ತು. ಎಷ್ಟೋ ಬಾರಿ ಆ ಮೈಕ್ ಗಳು ಆಟದ ಮಧ್ಯೆಯೇ ಕೆಟ್ಟು ಅಭಾಸವಾಗುತ್ತಿತ್ತು.

ಅಂದಿನ ಆಟಕ್ಕೆ ಬಲಿಪರು ಮಾನಸಿಕವಾಗಿ ತಯಾರಾದರು. ತಮ್ಮಲ್ಲಿದ್ದ ಒಂದು ಖದ್ದರ್ ಜಾತಿಯ ಜುಬ್ಬವನ್ನು ಒಗೆದು ಅದಕ್ಕೆ ಬಿಸಿನಿರು ತುಂಬಿದ ತಪಲೆಯಲ್ಲಿ ಇಸ್ತ್ರಿ ಹಾಕಿ ತಮ್ಮ ನಿಗದಿತ ಸಮಯಕ್ಕೆ ರಂಗಸ್ಥಳದಲ್ಲಿ ಬಂದು ಕೂತು ಪ್ರಸಂಗದ ಪದ್ಯಗಳನ್ನು ಅಲ್ಲೇ ಕಟ್ಟಿ ಹೇಳತೊಡಗಿದರು. ಇಡೀ ಪ್ರಸಂಗವನ್ನು ಆಶು ರೀತಿಯಲ್ಲಿ ಕಟ್ಟಿ ಹೇಳಿದ ಬಲಿಪರು ಪ್ರಸಂಗಕ್ಕೆ ಕಳೆಗಿಟ್ಟಿಸಿದರು. ಭಾರೀ ಜನಸ್ತೋಮ ಸೇರಿದ ಅಂದಿನ ಪ್ರಸಂಗಕ್ಕೆ ಭರ್ಜರಿ ಹೆಸರೂ ಬಂತು.

ಅಂದಿನ ವರುಷದ ಮೇಳದ ತಿರುಗಾಟದಲ್ಲಿ ಎಲ್ಲೆಲ್ಲಿಯೂ “ನಾಗ ಕನ್ನಿಕೆ” ಪ್ರಸಂಗಕ್ಕೇ ಬೇಡಿಕೆ ಬರತೊಡಗಿ ಅದೇ ಪ್ರಸಂಗ ಅನೇಕ ಬಾರಿ  ಪ್ರದರ್ಶಿಸಲ್ಪಟ್ಟಿತು. ಮುಂದೆ ಬಲಿಪರು ಈ ಪ್ರಸಂಗದ ಪದ್ಯಗಳನ್ನು ಕ್ರಮವಾಗಿ ಬರೆದಿಟ್ಟುಕೊಂಡರು.

ಕಿರಿಯ ಬಲಿಪರ ಪಾಲಿಗೆ ಇದು ಅತ್ಯಂತ ವಿಶೇಷ ಘಟನೆ. ತಾಯಿ ಸರಸ್ವತಿಯಿಂದ ಆರಂಭವಾದ ಪ್ರಸಂಗ ಪಾಠ ಅದರ ಉಪಯೋಗ ಆಕೆಯ (ಪೊಳಲಿ ರಾಜರಾಜೇಶ್ವರಿಯ) ಸಾನ್ನಿಧ್ಯದಿಂದಲೇ ಆರಂಭವಾದ ಸಂತೋಷ. ಮುಂದೆ ಮುಲ್ಕಿ ಮೇಳಕ್ಕಾಗಿ  ಅವರು “ಚಂದ್ರಸೇನ ವಿಜಯ” ಎಂಬ ಪ್ರಸಂಗವನ್ನೂ ಬರೆದರು. ಅದು ಅನಂತರ “ಪಾಪಣ್ಣ ವಿಜಯ” ಎಂಬ ಹೆಸರಿನಿಂದ ಪ್ರಖ್ಯಾತವಾಯಿತು. ಪೆರ್ವೋಡಿ ನಾರಾಯಣ ಹಾಸ್ಯಗಾರರು ಪಾಪಣ್ಣ ಪಾತ್ರವನ್ನು ಬಹಳ ಚೆನ್ನಾಗಿ ನಿಭಾಯಿಸುತ್ತಿದ್ದರು. ಕರುಣಾರಸವು ಉಕ್ಕುವಂತೆ ಅವರ ಅಭಿನಯವು ಪ್ರೇಕ್ಷಕರನ್ನು ಹಿಡಿದಿಡುತ್ತಿತ್ತು. ಈ ಪ್ರಸಂಗವನ್ನು ಸುರತ್ಕಲ್ ಮೇಳದ ಕಲಾವಿದರೂ ಆಡುತ್ತಿದ್ದರು.  ಅಗರಿ ಶ್ರೀನಿವಾಸ ಭಾಗವತರು ಕೂಡ ಕಿರಿಯ ಬಲಿಪರು ರಚಿಸಿದ ಹಾಡುಗಳನ್ನೇ ಹಾಡುತ್ತಿದ್ದರು. ಕಿರಿಯ ಬಲಿಪ ನಾರಾಯಣ ಭಾಗವತರಿಗೆ ಈ ಕಥೆಯನ್ನು ಕೊಟ್ಟವರು ಕನ್ಯಾನದ ಓರ್ವ “ಭಟ್ಟರು” . ಭಟ್ಟರೆಂದೇ ಕರೆಯುತ್ತಿದ್ದುದರಿಂದ ಅವರ ಹೆಸರು ನೆನಪಿಗೆ ಬರುತ್ತಿಲ್ಲ. ಪ್ರಸಂಗದ ಕತೆಗಳು ಹೀಗೆ ಹಲವು ಮೂಲಗಳಿಂದ ಬರುತ್ತವೆ.