ನಮ್ಮ ಕೆಂಚಬೆಕ್ಕಿನೊಂದಿಗೆ ನಿಮ್ಮನ್ನು ಎದುರುಗೊಳ್ಳುತ್ತೇನೆ. ಇವನ ಪರಿಚಯವಾದ ನಂತರ ಕೆಂಚು-ಬಿಳಿ ಮಿಶ್ರಿತ ಎಲ್ಲಾ ಬೆಕ್ಕುಗಳೂ ನನ್ನ ಕಣ್ಣಿಗೆ ಅಪ್ಯಾಯಮಾನವಾಗಿ ಕಾಣುವಂತಾಗಿದ್ದು ಇವನ ವಿಶಿಷ್ಟ ಗುಣದಿಂದ. ಚುರುಕಿನ, ಇಲಿ ಹಿಡಿಯುವ, ಠಣ್ಣನೆ ನೆಗೆದು ಮಡಿಲಲ್ಲಿ ಕೂರುವ ಬೆಕ್ಕೊಂದು ಈಗ ನಿಮ್ಮ ಕಣ್ಮುಂದೆ ಬಂದು ನಿಂತಿರಬೇಕಲ್ಲವೇ? ಆದರೆ ಕೆಂಚ ಹಾಗಲ್ಲವೇ ಅಲ್ಲ. ಇವನು ಬಹಳ ಸೋಮಾರಿ. ಸೋಮಾರಿ ಎನ್ನುವುದಕ್ಕಿಂತ ‘ಹೆದ್‌ರ್‌ಪುಕ್ಲ’. ಬೇಟೆಗೂ ಇವನಿಗೂ ದೊಡ್ಡ ವೈರ. ಇಲಿ, ಹೆಗ್ಗಣ, ಗುಡ್ಡೆಹೆಗ್ಗಣ, ಅಳಿಲು, ಕೋಳಿ ಎಲ್ಲ ಬಿಡಿ ಒಂದು ಜಿರಳೆಯನ್ನೂ ಹಿಡಿಯಲಾರ! ಪ್ರಾಣಿಪ್ರಪಂಚದ ಲವಲವಿಕೆಯ ಕತೆಗಳನ್ನು ಬರೆದಿದ್ದಾರೆ ವಿಜಯಶ್ರೀ ಹಾಲಾಡಿ

 

ನಿನ್ನೆ ರಾತ್ರಿ ನಮ್ಮ ಮನೆಯ ಮೂರೇ ಮೂರು ಪ್ರಾಣಿಗಳಾದ ನಾವೆಲ್ಲ ಸೇರಿ ಡಿಸ್ಕವರಿ, ನ್ಯಾಷನಲ್ ಜಿಯಾಗ್ರಫಿ, ಅನಿಮಲ್ ಪ್ಲಾನೆಟ್ ಮತ್ತಿತರ ಚಾನೆಲ್‌ಗಳಲ್ಲಿ ಬರುವ ಹಲವು ಮುದ್ದು ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳನ್ನು ಕಣ್ತುಂಬಿಕೊಳ್ಳುತ್ತಿದ್ದೆವು. ಕರಡಿಗಳು ಮರಗಿಡಗಳಿಗೆ ಬೆನ್ನನ್ನು ತಿಕ್ಕಿ ತಿಕ್ಕಿ ತುರಿಸಿಕೊಳ್ಳುತ್ತಿದ್ದ ಪರಿಯನ್ನು ನೋಡಿ ಆ ಮರ ನಾನಾಗಬಾರದಿತ್ತೇ ಎಂದೆನಿಸಿತು! ಉದ್ದಾನುದ್ದಕ್ಕೆ ಹಬ್ಬಿದ್ದ ಗಟ್ಟಿ ಮಂಜಿನ ನೆಲದಲ್ಲಿ ತೋಳವೊಂದು ಅದು ಹೇಗೋ ಆರನೆಯ ಇಂದ್ರಿಯದ ಸಹಾಯದಿಂದ ಬೇಟೆಯನ್ನು ಪತ್ತೆಹಚ್ಚಿ ಡುಬಕ್ಕನೆ ಹಾರಿ ಮೂತಿಯಿಂದಲೇ ಮಂಜನ್ನು ತೂತು ಕೊರೆದು ಎಂತದನ್ನೋ ಹಿಡಿದು ಗುಳಕ್ಕನೆ ನುಂಗುತ್ತಿತ್ತು. ಚಿರತೆ, ಹುಲಿಗಳು ಅಲ್ಲಿಲ್ಲಿ ಮೂಸುತ್ತ ನಡುನಡುವೆ ಕಗ್ಗಲ್ಲಿಗೋ ಹೆಮ್ಮರದ ತೊಗಟೆಗೋ ಕಿವಿ, ತಲೆಯನ್ನು ಉಜ್ಜಿ ಮರದ ಕಾಂಡಕ್ಕೆ ಉಚ್ಚೆ ಸಿಂಪಡಿಸುತ್ತ ಅಡ್ಡಾಡುತ್ತಿದ್ದವು. ಸಿನಿಮಾ, ಟಿ.ವಿ. ಯಾವುದೇ ಇರಲಿ; ನೋಡುವಾಗ ಪಕ್ಕದವರಲ್ಲಿ ವಟಗುಟ್ಟುವ ಅಭ್ಯಾಸವಿರುವ ನಾನು “ಈ ಪ್ರಾಣಿಗಳನ್ನೆಲ್ಲ ಟಿವಿಯೊಳಗೆ ಕಾಣಲು ಚಂದ; ಆದರೆ ಎದುರಿಗೇನಾದರೂ ಬಂದರೆ ನಾವು ಒಬ್ಬೊಬ್ಬರು ಒಂದೊಂದು ಮರ ಹತ್ತಿ ಕೂತುಕೊಳ್ಳುತ್ತಿದ್ದೆವು” ಎಂದೆ; ನನಗೆ ಮರವೇರಲು ಬಾರದು ಎಂಬುದನ್ನು ಮರೆತು! “ನಮಗೆ ಬೆಕ್ಕು, ನಾಯಿ, ಮೊಲ, ಅಳಿಲು ಅಥವಾ ಹುಲಿ, ಚಿರತೆ, ಕರಡಿ ಹೀಗೆ ಸಾಧು-ಕ್ರೂರ ಎಂತವೇ ಪ್ರಾಣಿಗಳನ್ನಾದರೂ ಕಂಡಾಗ ಒಂದು ಪ್ರೀತಿಯ ಭಾವ ಬರುತ್ತದಲ್ಲಾ, ಯಾಕದು? ಆದರೆ ನಮ್ಮಂತಹ ಇನ್ನೊಬ್ಬ ಮನುಷ್ಯನ ತಲೆ ಕಂಡರಾಗುವುದಿಲ್ಲ, ಅಸಹನೆ ಉಕ್ಕಿ ಹರಿಯುತ್ತದೆ. ಎಂಥಾ ವಿಚಿತ್ರ” ಎಂಬ ನನ್ನ ರಗಳೆಗೆ ಗಂಡ ಹಾ ಹೂಂ ಎನ್ನದೆ ಟಿವಿಯೊಳಗೆ ಕಣ್ಣು ನಿಲ್ಲಿಸಿದ್ದರೂ ವಿನ್ಯಾಸ್ ಮಾತ್ರ ಒಳ್ಳೆಯ ಉತ್ತರವನ್ನೇ ಕೊಟ್ಟ. “ನಮಗೆ ಪುಟ್ಟ ಮಗುವನ್ನು ಕಂಡರೆ ಖುಷಿಯಾಗುವುದಿಲ್ವಾ? ಇದೂ ಹಾಗೇ” ಅವನ ಸಣ್ಣ ವಾಕ್ಯದಲ್ಲಿ ಹಲವು ಅರ್ಥಗಳು ಹೊಮ್ಮಿದವು. ನಿಜ, ಕ್ರೂರ ಪ್ರಾಣಿಗಳೇ ಆದರೂ ಅವು ಹೊಟ್ಟೆಪಾಡಿಗೆ ಕೊಂದು ತಿನ್ನುವುದು. ಅದಲ್ಲದೆ ಅವುಗಳ ತಲೆಯೊಳಗೆ ಮನುಷ್ಯನ ಬಗ್ಗೆ (ಇತರ ಪ್ರಾಣಿಗಳ ಮೇಲೆಯೂ) ದ್ವೇಷ, ರೋಷ, ಅಸೂಯೆ ಇರುವುದಿಲ್ಲ, ಆದರೆ ಇನ್ನೊಬ್ಬ ಮನುಷ್ಯನೊಳಗೆ ತನ್ನನ್ನು ಸೋಲಿಸುವ, ಆಕ್ರಮಿಸುವ ತಂತ್ರಗಾರಿಕೆ, ಸ್ಪರ್ಧೆ ಇರುತ್ತದೆ ಎನ್ನುವುದು ನಮಗೆ ಜನ್ಮಜಾತವಾಗಿ ಅರ್ಥವಾಗಿ ಬಿಡುತ್ತದೆ ಮತ್ತು ಇದೊಂದು ಸಂಕೀರ್ಣ ಪ್ರಕ್ರಿಯೆಯಾಗಿದೆ. ಇರಲಿ, ಒಟ್ಟಿನಲ್ಲಿ ತರ್ಕದ ಕಟ್ಟಿಗೆ ಸಿಗದ ತರ್ಕದ ಗೋಜೂ ಇರದ ಒಂದು ವಿಚಾರವೆಂದರೆ ಪ್ರಾಣಿಗಳು ನನಗೆ ಭಾರೀ ಇಷ್ಟ. ಹಾಗೇ, ಈ ಇಷ್ಟದ ಪ್ರಕರಣ ಕಷ್ಟದ ಮಾರ್ಗಗಳನ್ನು ತೆರೆದು ತೋರಿಸಿದ್ದು ಉಂಟು; ಸುಖದ ಗಳಿಗೆಗಳನ್ನು ಸುರಿಸುರಿದು ಪೊರೆದದ್ದೂ ಉಂಟು!

ಮೊದಲಿಗೆ ನಮ್ಮ ಕೆಂಚಬೆಕ್ಕಿನೊಂದಿಗೆ ನಿಮ್ಮನ್ನು ಎದುರುಗೊಳ್ಳುತ್ತೇನೆ. ಇವನ ಪರಿಚಯವಾದ ನಂತರ ಕೆಂಚು-ಬಿಳಿ ಮಿಶ್ರಿತ ಎಲ್ಲಾ ಬೆಕ್ಕುಗಳೂ ನನ್ನ ಕಣ್ಣಿಗೆ ಅಪ್ಯಾಯಮಾನವಾಗಿ ಕಾಣುವಂತಾಗಿದ್ದು ಇವನ ವಿಶಿಷ್ಟ ಗುಣದಿಂದ. ಚುರುಕಿನ, ಇಲಿ ಹಿಡಿಯುವ, ಠಣ್ಣನೆ ನೆಗೆದು ಮಡಿಲಲ್ಲಿ ಕೂರುವ ಬೆಕ್ಕೊಂದು ಈಗ ನಿಮ್ಮ ಕಣ್ಮುಂದೆ ಬಂದು ನಿಂತಿರಬೇಕಲ್ಲವೇ? ಆದರೆ ಕೆಂಚ ಹಾಗಲ್ಲವೇ ಅಲ್ಲ. ಇವನು ಬಹಳ ಸೋಮಾರಿ. ಸೋಮಾರಿ ಎನ್ನುವುದಕ್ಕಿಂತ ‘ಹೆದ್‌ರ್‌ಪುಕ್ಲ’. ಬೇಟೆಗೂ ಇವನಿಗೂ ದೊಡ್ಡ ವೈರ. ಇಲಿ, ಹೆಗ್ಗಣ, ಗುಡ್ಡೆಹೆಗ್ಗಣ, ಅಳಿಲು, ಕೋಳಿ ಎಲ್ಲ ಬಿಡಿ ಒಂದು ಅಕ್ಳೆ(ಜಿರಳೆ)ಯನ್ನೂ ಹಿಡಿಯಲಾರ! ಜಿರಳೆಗಳು ಮನೆ ತುಂಬ ಓಡಾಡಿದರೂ ಅವುಗಳ ಕಡೆ ನೋಡಲೂ ಭಯ ಇವನಿಗೆ. ಇವನ ‘ಹೆಂಡತಿ’ ಗಟ್ಟಿಗಿತ್ತಿ ಕೆಂಚಿ ನಾಲ್ಕು ಜಿರಳೆ ಹಿಡಿದು ತಿಂದರೆ ಅದೇ ನಮ್ಮನೆ ಆರೋಗ್ಯಕ್ಕೆ ಆಧಾರ! ಇದಲ್ಲದೆ ಕೆಂಚ ಇರುವೆಗೂ ಹೆದರುತ್ತಾನೆ ಎಂಬ ಸಂಗತಿ ನಿಮಗೆ ಗೊತ್ತಿರಲಿ! ಕಚ್ಚುವ ಇರುವೆಗಳಿಂದ ಹಿಂಸೆ ಅನುಭವಿಸಿದ್ದಾನೆ ಕಾಣುತ್ತದೆ; ಯಾವ ಇರುವೆ ಕಂಡರೂ ಮಾರು ದೂರ ಹಾರಿ ನಿಲ್ಲುತ್ತಾನೆ. ಮತ್ತೊಂದು ವಿಚಿತ್ರವೆಂದರೆ ಎದುರಿನ ಬಾಗಿಲು ತೆರೆದಿದ್ದರೂ ಅವನು ಅಲ್ಲಿಂದ ಎಂದೂ ಬರುವುದಿಲ್ಲ; ಕೆಂಚಿಯಂತೆ ಕಿಟಕಿಯಲ್ಲಿ ತೂರಿ ಕೆಳಗೆ ಹಾರುವುದೂ ಇಲ್ಲ. ಹಿಂಬಾಗಿಲೇ ಇವನ ಮಾಮೂಲಿ ರಹದಾರಿ. ಒಳಗೆ ಬಂದ ಕೂಡಲೇ ಅಡುಗೆಮನೆಯಲ್ಲಿ ಖಾಯಂ ನೆಲೆಕಂಡಿರುವ ಹೂಗಳ ಡಿಸೈನ್ ಇರುವ ತಟ್ಟೆ ಮೂಸುತ್ತಾನೆ. ಅದು ತೊಳೆಸಿಕೊಂಡು ಶುಭ್ರವಾಗಿದ್ದು, ಮೊಸರು- ಅನ್ನ ಬಡಿಸಿಕೊಂಡಿದ್ದರೆ ಗಬಗಬ ತಿನ್ನುತ್ತಾನೆ. ಇಲ್ಲವೆಂದರೆ ಕ್ಷಣಾರ್ಧದಲ್ಲಿ ಬಂದ ದಾರಿಯಲ್ಲೇ ತಿರುಗಿ ಓಡುವುದೂ ಉಂಟು! ಇಷ್ಟು ಗಡಿಬಿಡಿ ಯಾಕೆಂದು ತಿಳಿಯದೆ ಗಾಬರಿಬಿದ್ದು ‘ಕೆಂಚಾ ಕೆಂಚಾ’ ಎಂದು ಅನುನಯಿಸಿ ಕರೆದು ಹೇಗಾದರೂ ಮತ್ತೆ ಮನೆಯೊಳಗೆ ಸೇರಿಸಿ, ಬೇಗನೇ ಕಾಫಿಗಿಡುತ್ತೇನೆ! ಕೆಂಚನಿಗೆ ಕಾಫಿಯೆಂದರೆ ಭಾರೀ ಇಷ್ಟ. ನನ್ನ ಇಷ್ಟೊಂದು ವರ್ಷಗಳ ಅನುಭವದಲ್ಲಿ ಕಾಫಿಗಾಗಿ ಜೀವ ಬಿಡುವ ಮೊದಲ ಬೆಕ್ಕೆಂದರೆ ಇವನೇ! ಸರಿ; ಕಾಫಿ ಬಸಿದು ಇನ್ನೊಂದು ತಟ್ಟೆಗಿಟ್ಟೊಡನೆ ವಾಸನೆ ಗ್ರಹಿಸಿ ತಣಿದ ಮೇಲೆ ವಿರಾಮವಾಗಿ ನೆಕ್ಕುತ್ತಾನೆ. ಕೆಲವೊಮ್ಮೆ ಕಾಫಿ ಮಾಡಲು ಹಾಲಿಲ್ಲ ಅಥವಾ ‘ನನಗೀಗ ಸಾಧ್ಯವೇ ಇಲ್ಲ’ ಎಂಬಷ್ಟು ರೋಸಿಹೋಗಿರುವ ಹೊತ್ತಲ್ಲಿ ಕಾಫಿಪುಡಿಯನ್ನೇ ಹಾಕಿದರೆ ಅದನ್ನೆ ತಿಂದು, ಹಾಲು ಕುಡಿದು ಹೊಟ್ಟೆಯೊಳಗೇ ‘ಹದ’ ಮಾಡಿಕೊಳ್ಳುವ ಕಲೆಯನ್ನೂ ಕೆಂಚ ಕಲಿತಿದ್ದಾನೆ! ಈ ಕಾಫಿಯ ವಿಷಯದಲ್ಲಿ ಒಂದು ಸವಿ ನೆನಪಿದೆ. ನಾವು ಆ ಮನೆಗೆ ಹೋದ ಹೊಸತರಲ್ಲಿ ಪ್ರತಿದಿನವೂ ಸಂಜೆ ನಾಲ್ಕೂವರೆಯ ಹೊತ್ತಿಗೆ ಎಲ್ಲಿಂದಲೋ ಕಾಫಿಯ ಘಮ ತೇಲಿ ಬರುತ್ತಿತ್ತು. ಹಿಂದುಗಡೆ ಹಾಸ್ಟೆಲ್‌ನಂತಹದು ಒಂದು ದೊಡ್ಡ ಕಟ್ಟಡವಿತ್ತು; ಆಗಾಗ ವಿದ್ಯಾರ್ಥಿಗಳ ಮಾತೂ ಕೇಳಿಬರುತ್ತಿತ್ತು. ಹಾಗಾದರೆ ಅದು ಹಾಸ್ಟೆಲ್ಲೇ ಆಗಿರಬೇಕು, ಅಲ್ಲಿಯ ಕಾಫಿಯ ವಾಸನೆ ಇದು; ಅಲ್ಲಿಗೆಲ್ಲಾ ಭೇಟಿ ಕೊಟ್ಟು ಕಾಫಿ ಕುಡಿಯುತ್ತಾ ಕೆಂಚನಿಗೆ ಈ ಅಭ್ಯಾಸ ಅಂಟಿಕೊಂಡಿರಬೇಕು ಎಂದೆಲ್ಲಾ ನಾನು ಕಲ್ಪನೆಯನ್ನು ಹರಿಯಬಿಟ್ಟಿದ್ದೆ! ಆಮೇಲೆ ತಿಳಿದಿದ್ದೆಂದರೆ ಅದು ಹಾಸ್ಟೆಲ್ ಅಲ್ಲ, ಮದುವೆ ಹಾಲ್ ಮತ್ತು ಬಾಡಿಗೆ ಮನೆಗಳುಳ್ಳ ಕಟ್ಟಡ ಎಂದು!

ಕೆಂಚನಿಗೆ ಬೇಟೆಯ ಬಗ್ಗೆ ಏನೂ ತಿಳಿದಿಲ್ಲ ಎಂದು ಹೇಳಿದೆನಲ್ಲ; ವಯಸ್ಸು ಬರೀ ಮೂರ್ನಾಲ್ಕು ಅಷ್ಟೇ ಆದರೂ ಆಗಲೇ ಜಬ್ಬ(ಮುದುಕ)ನಾದಂತೆ ಭಾವಭಂಗಿ ಪ್ರದರ್ಶಿಸುವ ನಿಧಾನಿ ಬೆಕ್ಕಿವನು. ಆದರೇನು ಮಾಡುವ, ಪ್ರಕೃತಿ ಸಹಜವಾದ ವಂಶ ಮುಂದುವರೆಸುವ ಕರ್ತವ್ಯ ನೆರೆವೇರಿಸಬೇಕಲ್ಲ…! ಪಾಪ ಕೆಂಚನ ಪಾಡು ನೋಡಲಾಗುವುದಿಲ್ಲ. ಏಕೆಂದರೆ ಗಂಡುಬೆಕ್ಕುಗಳಿಗೆ ತನ್ನ ಏರಿಯಾ ಅಥವಾ ಬೇರೆ ಏರಿಯಾಗಳಿಂದ ಬಂದ ಹಲವಾರು ಮ್ವಾಳ (ಗಂಡುಬೆಕ್ಕು)ಗಳೊಂದಿಗೆ ಸೆಣಸಿಯೇ ಪ್ರಿಯತಮೆಯನ್ನು ಸೇರಬೇಕಾದದ್ದು ನಿಸರ್ಗ ವಿಧಿಸಿರುವ ಸವಾಲು. ಆ ಸಂದರ್ಭದಲ್ಲಿ ತಾನು ಆರಿಸಿಕೊಂಡ ಬೀಚು ಬೆಕ್ಕಿನ (ಹೆಣ್ಣುಬೆಕ್ಕಿನ) ಮನೆಮುಂದೆ ದಿನಗಟ್ಟಲೆ ಕಾಯುತ್ತ ಉಪವಾಸ ಕೂರುತ್ತವಂತೆ ಮ್ವಾಳಗಳು. ನಮ್ಮ ಕೆಂಚನೂ ಎಷ್ಟೋ ದಿನ ಮನೆಗೆ ಬರದೆ, ಮ್ವಾಳಗಳೊಂದಿಗೆ ಕಾದಾಡಿ ನಲ್ಲೆಯನ್ನು ಕಾದು ಹೈರಾಣಾದದ್ದಕ್ಕೆ ನಮಗೆ ಸಾಕ್ಷಿ ಸಿಕ್ಕಿದೆ. ವಾರಗಟ್ಟಲೆ ಮಾಯವಾಗಿ ಆಮೇಲೆ ಬರುವಾಗ ಮೈ ತುಂಬಾ ಗಾಯ; ಮುಖ ನೋಡಲೂ ಆಗದಷ್ಟು ರೋಮಗಳೆಲ್ಲ ಅಲ್ಲಲ್ಲಿ ಗಂಟುಕಟ್ಟಿಕೊಂಡು ಇವನ ಅವತಾರ ಕನಿಕರ ಹುಟ್ಟಿಸುವಂತಿರುತ್ತದೆ. ಸೊರಗಿದವನಿಗೆ ವಿಸ್ಕಸ್ ಮೊದಲಾದ ಫುಡ್, ಹಾಲು, ಮೊಸರು, ಅನ್ನ ಹಾಕಿ ನಾನೂ ಮಗನೂ ಆರೈಕೆ ಮಾಡುತ್ತೇವೆ. ಆಗ ಮುಖವೆತ್ತಿ ನೋಡದೆ ಜೋಲು ಮೋರೆ ಹಾಕಿಕೊಂಡು ತಿಂದು, ದಿನಗಟ್ಟಲೆ ನಿದ್ದೆಮಾಡಿ ಸುಧಾರಿಸಿಕೊಳ್ಳುತ್ತಾನೆ. ಕೆಂಚನಿಗೆ ಈ ಪಾಟಿ ಗಾಯವಾಗಲು ಮುಖ್ಯ ಕಾರಣವೆಂದರೆ ಇವನ ದೌರ್ಬಲ್ಯ. ಜೋರಿಲ್ಲ, ದೈಹಿಕವಾಗಿ ಸ್ಟ್ರಾಂಗೂ ಇಲ್ಲ ಇವನು. ಇಂಥಾ ಮೋಹವುಕ್ಕಿಸುವ ಕೆಂಚ ನಾವು ತಂದು ಸಾಕಿದ ಬೆಕ್ಕಲ್ಲ, ಎಲ್ಲಿಂದಲೋ ನಮ್ಮನೆಗೆ ಬಂದು, ನಮ್ಮವನೇ ಆಗಿ ಸಂಭ್ರಮ ಹೆಚ್ಚಿಸಿದವನು. ಕೆಲವೊಮ್ಮೆ ಒಂದೆರಡು ದಿನ ಊಟ ತಿಂಡಿಗೂ ಏಳದೆ ಮಗನ ಹಾಸಿಗೆಯಲ್ಲಿ, ಅವನ ಪುಸ್ತಕಗಳ ಮೇಲೆ ಮಲಗಿಬಿಡುವ ಕೊಂಗಾಟದ ಕೊಡಿಮುದ್ದು! ಸುಮಾರು ಮೂರು ವರ್ಷ ನಿರಂತರವಾಗಿ ನಮ್ಮ ಸಂಪರ್ಕವಿಟ್ಟುಕೊಂಡವನು ಮಧ್ಯದಲ್ಲಿ ಎರಡು ಸಲ ಮಾಯವಾಗಿದ್ದರೂ ಮರಳಿ ಬಂದಿದ್ದ. ಆದರೆ ಕೊನೆಗೊಮ್ಮೆ ಏನಾಯಿತೆಂದರೆ, ಒಂದಿನ ಹಿಂದೆಂದೂ ಕಂಡಿರದಷ್ಟು ಗಾಯಗಳೊಂದಿಗೆ ಬಂದಿದ್ದ. ಅದರ ಹಿಂದಿನ ಕೆಲದಿನಗಳು ಬೆಕ್ಕುಗಳ ದೊಡ್ಡ ಕಾಳಗವೇ ನಡೆಯುತ್ತಿದ್ದ ಸುಳುಹು ಸಿಕ್ಕಿತ್ತು. ರಾತ್ರಿ ಮನೆಯ ಸುತ್ತಮುತ್ತ ಕಡುಕತ್ತಲಲ್ಲಿ ಬೆಕ್ಕುಗಳ ಭೀಕರ ಆರ್ಭಟವೇ ಕೇಳಿಬರುತ್ತಿತ್ತು! ನಾನಂತೂ ಪದೇ ಪದೇ ಹೇಳುತ್ತಿದ್ದೆ; “ಅಲ್ಲಿ ಕೆಂಚನೂ ಸಿಕ್ಕಿಹಾಕಿಕೊಂಡಿರಬಹುದು” ಎಂದು. ಕಡೆಗೆ ನೋಡಿದರೆ ಹಾಗೇ ಆಗಿತ್ತು! ಮೈಯ್ಯೆಲ್ಲ ಒರೆಸಿ, ಮುಲಾಮು ಹಚ್ಚಿ ಉಪಚರಿಸಿ, ಒಳ್ಳೆಯ ಆಹಾರ ಕೊಟ್ಟರೂ ಒಂದೆರಡು ದಿನ ಮನೆಯಲ್ಲಿದ್ದವನು ಕುಂಟುತ್ತ ಹೋಗಿಬಿಟ್ಟ; ಮರಳಿ ಬರಲೇ ಇಲ್ಲ. ನಾವೂ ಕಾದೆವು; ಬಹುಶಃ ಆ ದೊಡ್ಡ ದೊಡ್ಡ ಗಾಯಗಳೇ ಕೆಂಚನಿಗೆ ಕೊನೆ ತಂದವೋ ಏನೋ, ಬಂಧುವೊಬ್ಬನನ್ನು ಕಳೆದುಕೊಂಡ ನೋವು ನಮಗಾಯಿತು. ಅವನ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಾದರೂ ಎಲ್ಲೋ ಆಸುಪಾಸಿನಲ್ಲಿ ಬದುಕುತ್ತಿರಬಹುದು ಎಂಬುದೊಂದು ಸಮಾಧಾನ ಮಾತ್ರ ಈಗ ಉಳಿದಿದೆ!

ತರ್ಕದ ಕಟ್ಟಿಗೆ ಸಿಗದ ತರ್ಕದ ಗೋಜೂ ಇರದ ಒಂದು ವಿಚಾರವೆಂದರೆ ಪ್ರಾಣಿಗಳು ನನಗೆ ಭಾರೀ ಇಷ್ಟ. ಹಾಗೇ, ಈ ಇಷ್ಟದ ಪ್ರಕರಣ ಕಷ್ಟದ ಮಾರ್ಗಗಳನ್ನು ತೆರೆದು ತೋರಿಸಿದ್ದು ಉಂಟು; ಸುಖದ ಗಳಿಗೆಗಳನ್ನು ಸುರಿಸುರಿದು ಪೊರೆದದ್ದೂ ಉಂಟು!

ಇನ್ನು ನಮ್ಮ ಮುಸುವ ಬೆಕ್ಕು ಮತ್ತು ಪಾಪಣ್ಣನ ಕತೆ ವಿಸ್ತಾರವಾಗಿಯೇ ಇದ್ದರೂ ಅದನ್ನು ಸಂಕ್ಷೇಪಿಸಿ ಹೇಳುತ್ತೇನೆ. ಪಾಪಣ್ಣ ನಮ್ಮನೆಗೆ ‘ಬಂದುಸೇರಿದ’ ಬೀದಿನಾಯಿ ಮರಿಯಾದರೆ ಮುಸುವ ಯಾರೋ ರಸ್ತೆಯಲ್ಲಿ ಬಿಟ್ಟು, ಅವರಿವರು ಹೊಡೆದು, ಒಂದು ಕಣ್ಣೂ ಕಿತ್ತುಹೋಗಿ ಅಸಹಾಯಕಳಾದ ಬೆಕ್ಕು. ಇವಳ ಕುರೂಪವೇ ಎಲ್ಲರೂ ಬಡಿಬಡಿದು ಅಟ್ಟಲು ಕಾರಣ! ನಮ್ಮನೆಗೆ ಬಂದ ಮೇಲೆ ಇಬ್ಬರೂ ಸುಧಾರಿಸಿಕೊಂಡು ಬೆಳೆದರು. ಪಾಪಣ್ಣ ಅಪೂರ್ವ ಸ್ನೇಹಜೀವಿ, ಕಳ್ಳಕಾಕರೇ ಮನೆ ಬಾಗಿಲಿಗೆ ಬಂದರೂ ಬಾಲವಲ್ಲಾಡಿಸಿ ನಕ್ಕುನಲಿದು ಸ್ವಾಗತಿಸುವ ಮುಗ್ಧಜೀವಿ! ಆದರೆ ಮುಸುವ ಗಂಭೀರೆ; ಸಿಟ್ಟು, ಸೆಡವೇ ಅವಳ ಪ್ರಧಾನ ಗುಣ. ಪಾಪಣ್ಣ ಇವಳನ್ನು ಗೋಳು ಹೊಯ್ದುಕೊಂಡದ್ದು ಸ್ವಲ್ಪವಲ್ಲ. ಅವಳು ಸಿಟ್ಟಾದಾಗೆಲ್ಲ ಪಾಪಣ್ಣನ ತಲೆಹರಟೆಗೆ ಹೊಸ ಹೊಸ ರೂಪ ಬರುತ್ತಿತ್ತು! ಮುಸುವ ಮರಿಯಿಟ್ಟ ಮೇಲಂತೂ ಪಾಪಣ್ಣನಿಗೆ ಆಡಲು ಒಳ್ಳೇ ಜೊತೆ ಸಿಕ್ಕಿತು. ಅಡುಗೆಮನೆಯ ಬಟ್ಟೆ ಹಾಸಿಗೆಯಲ್ಲಿ ನಾಯಿ-ಬೆಕ್ಕುಗಳು ಒಂದರ ಮೇಲೊಂದು ಬಿದ್ದುಕೊಂಡು ನಿದ್ದೆ ಮಾಡುತ್ತಿದ್ದುದು ಕಣ್ಣಿಗೆ ಕಟ್ಟಿದ ಚಿತ್ರ. ಆಮೇಲೆ ಸ್ವಲ್ಪ ದೊಡ್ಡವಳಾದ ಪಾಪಣ್ಣ ನಾನು ಮತ್ತು ವಿನ್ಯಾಸ್ ಮಲಗುವ ಮಂಚದ ಕೆಳಗಡೆ ಇಟ್ಟ ಬುಟ್ಟಿಯಲ್ಲಿ ರಾತ್ರಿ ನಿದ್ದೆ ಮಾಡತೊಡಗಿತು. ಮಂಚದ ಮೇಲೆ ನಮ್ಮಿಬ್ಬರ ಮಧ್ಯದಲ್ಲಿ ಮುಸುವ ಮತ್ತು ಕರಿಯ, ಸಿಂಗ ಎಂಬ (ಹೆಣ್ಣು)ಬೆಕ್ಕುಗಳ ಮರಿಗಳಾದ ಫುಟ್ಬಾಲ್, ಪೈಲ್ವಾನ್ ಕಿಟ್ಟಪ್ಪ, ಮಿಂಚು, ಬಾತುಕೋಳಿ, ನಿತ್ರಾಣ್ ಮುಂತಾದವು ಮಲಗಿದರೆ, ಮಂಚದ ಕೆಳಗಡೆ ವಾತ್ಸಲ್ಯಮಯಿ ಪಾಪಣ್ಣ! ನಮ್ಮ ಸುಖನಿದ್ದೆಗೆ ಇನ್ನೇನೂ ಬೇಕಿರಲಿಲ್ಲ. ಬೆಳಗು ಯಾಕಾಗುತ್ತದೋ; ಶಾಲೆ ಬಾಗಿಲು ಯಾಕೆ ತೆರೆಯುತ್ತದೋ ಎಂದು ವಿದ್ಯಾರ್ಥಿಯಾದ ವಿನ್ಯಾಸನಿಗೂ, ಶಿಕ್ಷಕಿಯಾದ ನನಗೂ ಅನ್ನಿಸಿದ್ದರೆ ಅದಕ್ಕೆ ಅಚ್ಚರಿಪಡಬೇಕಾದುದೇನೂ ಇರಲಿಲ್ಲ!

ಮುಸುವ ಒಳ್ಳೇ ಬೇಟೆಗಾತಿ. ಕಪ್ಪೆ, ಹಾವು ಸಹಿತ ಎಂತೆಂತದೋ ತಂದು ಮಕ್ಕಳಿಗೆ ಕೊಡುವ ಭರದಲ್ಲಿ ನಮ್ಮನ್ನೂ ಅಪಾಯಕ್ಕೆ ದೂಡುತ್ತಿದ್ದಳು. ಇನ್ನು ಕೆಲವೊಮ್ಮೆ ಅಕ್ಕಪಕ್ಕದ ಮನೆಯವರು ಪ್ಲಾಸ್ಟಿಕ್‌ ಕೊಟ್ಟೆಯಲ್ಲಿ ಕಟ್ಟಿ ಎಸೆದ ಮೀನು-ಮಾಂಸದ ಚೂರುಗಳು! ‘ಎರಡು ಬಾರಿಸಬೇಕುʼ ಎಂಬಷ್ಟು ಸಿಟ್ಟು ಬಂದರೂ ಅವಳ ಮುಖ ನೋಡಿದಾಗ ನನ್ನ ವರ್ತನೆಯೇ ಬದಲಾಗುತ್ತಿತ್ತು! ಅದಲ್ಲದೆ ಶಾಲೆಯ ಒತ್ತಡ, ಕೆಲಸದ ಶ್ರಮದಲ್ಲಿ ದಣಿದು ಬಂದ ನನಗೆ ಮುಸುವ, ಪಾಪಣ್ಣರ ಪಟಾಲಮ್ಮೇ ಸಂಜೀವಿನಿಯಾಗಿದ್ದಾಗ ಹೊಡೆಯುವ, ಬಡಿಯುವ ಮಾತೆಲ್ಲಿ ಬಂತು! ಆದರೂ ಈ ನಾಯಿ, ಬೆಕ್ಕುಗಳಿಗೆ ತಮಾಷೆಗೆಂದು ನಾವು ರೇಗಿಸಿದರೂ ಗೊತ್ತಾಗಿಬಿಡುತ್ತದೆ! ಆಗ ಫಕ್ಕನೆ ಮೂತಿ ದಪ್ಪ ಮಾಡಿಕೊಂಡು, ಬಾಲ ಎತ್ತಿಕೊಂಡು ದುಡು ದುಡು ಹೊರಗೋಡುವ ಚಂದವನ್ನು ನೋಡಿಯೇ ತೀರಬೇಕು! ಮುಂದೆ ನಮ್ಮನೆಗೆ ಬಂದ ಸುಂದರ ಬೆಕ್ಕು ಬೆಳ್ಳಿ ಹೀಗೆ ಮಾಡುತ್ತಿದ್ದ. ಸ್ವಲ್ಪ ಗೇಲಿ ಮಾಡಿದರೂ ಸಾಕು, ಮುಖಮುಖ ನೋಡಿ, ತನ್ನ ಮೋರೆಯನ್ನು ಸೊಟ್ಟ ಮಾಡಿಕೊಂಡು ಕ್ಷಣದಲ್ಲಿ ಮಾಯವಾಗುತ್ತಿದ್ದ! ಇದೂ ಬೀದಿಯಲ್ಲಿ ಯಾರೋ ಬಿಟ್ಟು ಹೋದ ಎಳೆಯ ಕೂಸು. ಗಂಡು ಮರಿಯಾದ ಬೆಳ್ಳಿ ನಡೆ ನುಡಿಯಲ್ಲಿ ತುಂಬಾ ಸೌಮ್ಯ. ನಾವು ಮನೆ ಬದಲಿಸುವ ಸಂದರ್ಭದಲ್ಲಿ ರಿಕ್ಷಾದಲ್ಲಿ ಕರೆದೊಯ್ದಾಗ ಹೆದರಿ ನನ್ನ ಬಟ್ಟೆ, ರಿಕ್ಷಾದ ಒಳಗೆಲ್ಲ ಒಂದು-ಎರಡು ಮಾಡಿದವನು… ಬೆಳ್ಳಿ ನನ್ನನ್ನು, ಮಗನನ್ನು ಎಷ್ಟು ಹಚ್ಚಿಕೊಂಡಿದ್ದನೆಂದರೆ ನಮ್ಮ ಹಾಸಿಗೆಯೇ ಅವನು ಮಲಗುವ ಖಾಯಂ ಜಾಗ. ನಾವಿಬ್ಬರು ಶಾಲೆಯಿಂದ ಬರುವ ಹೊತ್ತಿಗೆ ಕಾಯುತ್ತಾ ಕಂಪೌಂಡ್‌ ಮೇಲೆ ಕುಳಿತಿರುತ್ತಿದ್ದ. ಇಂಥಾ ಬೆಳ್ಳಿ ನಾವು ಮತ್ತೊಮ್ಮೆ ಮನೆ ಬದಲಿಸಿದಾಗ ಕಷ್ಟಪಟ್ಟು ಹಿಡಿದು ತಂದರೂ ನಮ್ಮ ಹೊಸ ಬಾಡಿಗೆ ಮನೆಗೆ ಬರಲೊಪ್ಪದೆ ಕಾರಿನ ಬಾಗಿಲು ತೆಗೆದೊಡನೆ ಹಾಗೇ ಅಂಗಳದಿಂದಲೇ ಓಡಿಹೋದ. ಎಷ್ಟು ಕರೆದರೂ ತಿರುಗಿ ನೋಡದೆ ಅಪರಿಚಿತನಂತೆ ಅವನು ತೆರಳಿದ್ದು ಇಂದಿಗೂ ಬಿಡಿಸಲಾಗದ ನಿಗೂಢ. ಬಹುಶಃ ಗಂಡು ಬೆಕ್ಕಾದ ಬೆಳ್ಳಿಗೆ ಪದೇ ಪದೇ ಅವನ ಏರಿಯಾ ಬದಲಾದದ್ದು ಇಷ್ಟವಾಗಲಿಲ್ಲ! ನಾವು ಅವನ ಬದುಕನ್ನು, ಭಾವನೆಗಳನ್ನು ಗೌರವಿಸಲಿಲ್ಲವೇನೋ ಎಂದು ಆಗಾಗ ದುಃಖವೆನಿಸುತ್ತದೆ.

ಈಗ ಸ್ವಲ್ಪ ಹಿಂದಕ್ಕೆ ಹೋಗುವುದಾದರೆ, ನಮ್ಮ ಮುಸುವ ಮತ್ತು ಕರಿಯ, ಸಿಂಗರ ಮರಿಗಳು ತುಸು ದೊಡ್ಡವಾಗಿದ್ದ ಸಮಯವದು. ಪಾಪಣ್ಣ ಚಪ್ಪಲಿ ಕಚ್ಚಿತರುವ ಅಭ್ಯಾಸ ಬೆಳೆಸಿಕೊಂಡಿತ್ತು. ಈ ಸಂದರ್ಭದಲ್ಲಿ ಪಕ್ಕದ ಮನೆಯವರ ಬೆಲೆಬಾಳುವ ಶೂಗಳನ್ನು ಅದು ಕದ್ದು ತಂದಿತೆಂಬ ನೆಪದಲ್ಲಿ ಅವರು ವಿಷವಿಟ್ಟುಬಿಟ್ಟಿದ್ದರು. ನಮಗೆ ಈ ಯಾವ ಸಂಗತಿಗಳೂ ತಿಳಿಯುವ ಮೊದಲೇ ವಿಷವನ್ನು ತಿಂದ ಮುಸುವ, ಇನ್ನಿತರ ಮರಿಗಳು ಸತ್ತುಹೋದವು! ಕರಿಯ ಮತ್ತು ಸಿಂಗ ಮಾತ್ರ ಉಳಿದುಕೊಂಡವು. ಇದು ಜೀವಮಾನದಲ್ಲಿ ಮರೆಯಲಾಗದ ದುಃಖ. ಆರು ಬೆಕ್ಕುಗಳ ಮಾರಣಹೋಮ! ಸತ್ತು ಗಡ್ಡೆ ಕಟ್ಟಿದ ನಮ್ಮ ಮುದ್ದು ಮರಿಗಳನ್ನು ಕಂಡು ಆಕ್ರೋಶ ತಾಳಲಾರದೆ ಶ್ರೀಮಂತಿಕೆಯ ನೆರೆಮನೆಯ ಸಿಟೌಟಿಗೆ ಮೊದಲಬಾರಿ ಕಾಲಿಟ್ಟಾಗ ಆ ದಂಪತಿ ಅಲ್ಲಿಯೇ ಕುಳಿತಿದ್ದರು. ಅಳುವಿನ ನಡುವೆಯೇ ನನ್ನ ಸಂಕಟವನ್ನು ವ್ಯಕ್ತಗೊಳಿಸಿ ಅವರ ಕೃತ್ಯ ತಪ್ಪೆಂದು ನಾನು ತಿಳಿಸಿದಾಗ ಮಾತೇ ಆಡದೆ, ತಮಗೆ ಸಂಬಂಧವೇ ಇರದಂತೆ ಕುಳಿತೇ ಇದ್ದ ಅವರು ಕೊನೆಯಲ್ಲಿ “ನಿಮಗ್ಯಾಕಮ್ಮ ಈ ಬೆಕ್ಕು-ನಾಯಿಗಳ ರಗಳೆ” ಎನ್ನುತ್ತಾ ಪ್ರಾಣಿಗಳಿಗೆ ಜೀವವೇ ಇಲ್ಲ ಎಂಬಂತೆ ಮುಖಭಾವ ಮಾಡಿ ಇರಿಯುವ ಮೌನದಲ್ಲೇ ಅಲ್ಲಿಂದ ನನ್ನನ್ನು ಹೊರಹಾಕಿದರು! ಆದರೆ ಇದೆಲ್ಲ ಆದ ಸ್ವಲ್ಪ ದಿನದಲ್ಲೇ ಮತ್ತೊಮ್ಮೆ ವಿಷವಿಟ್ಟರು! ಈ ಸಲ ಪಾಪಣ್ಣ ಅದನ್ನು ತಿಂದುಬಿಟ್ಟಿತು. ಅದು ಒದ್ದಾಡುತ್ತ ಬಿದ್ದಿದ್ದ ಆ ದಿನ ನಾನು ಆಕಸ್ಮಿಕವಾಗಿ ರಜೆಹಾಕಿ ಮನೆಯಲ್ಲೇ ಇದ್ದುದರಿಂದ ಕೂಡಲೇ ಉಪ್ಪು ನೀರು ಕುಡಿಸಿ ವಾಂತಿ ಮಾಡಿಸಿ ಆಸ್ಪತ್ರೆಗೆ ಕರೆದೊಯ್ದೆ. ತನ್ನ ರಿಕ್ಷಾ ಗಲೀಜಾಗುವುದನ್ನು ಲೆಕ್ಕಿಸದೆ ನಮ್ಮನ್ನು ಹತ್ತಿಸಿಕೊಂಡ ರಿಕ್ಷಾ ಡ್ರೈವರ್ ಅವರ ಮಾನವೀಯತೆ ಬಹುದೊಡ್ಡದು. ಪಾಪಣ್ಣ ಒಂದು ವಾರ ನಿರಂತರವಾಗಿ ಮಾತ್ರೆ, ಔಷಧ ಕುಡಿಯುತ್ತಾ ವಾಂತಿ ಬೇದಿ ಮಾಡಿ ವಿಷ ಹೊರಹಾಕಿ ಅಂತೂ ಸಾವನ್ನು ಜಯಿಸಿ ಬಂದಿತ್ತು. ಆಗ ನಮ್ಮ ಬೆಕ್ಕು ನಾಯಿಗಳ ಜೀವ ಉಳಿಸಿಕೊಳ್ಳುವ ಸವಾಲು ಮುಂದೆ ಬಂತು ನಿಂತಿತು. ಉಳಿದ ಬೆಕ್ಕುಗಳು ಮತ್ತು ಪಾಪಣ್ಣನನ್ನು ಕಾರಿನಲ್ಲಿ ಕರೆದೊಯ್ದು ಊರಲ್ಲಿ ಬಿಟ್ಟುಬಂದೆವು. ನಾಲ್ಕೈದು ವರ್ಷಗಳೇ ಕಳೆದರೂ ಇವತ್ತಿಗೂ ಪಾಪಣ್ಣನನ್ನು ಮರಳಿ ತರಬೇಕೆಂಬ ನಮ್ಮ ಆಸೆ ಕೈಗೂಡುವ ಸಮಯ ಬಂದಿಲ್ಲ…

ಕರಿಯ, ಸಿಂಗ, ಕೆಂಚಿ, ಬೆಕ್ಕಿ, ಅಚ್ಚು, ಮಿಂಚಿ, ಸಣ್ಣಬೆಳ್ಳಿ… ಹೀಗೆ ಇನ್ನು ಹಲವು ಬೆಕ್ಕುಗಳು ನಮ್ಮ ಮನೆಗೆ ಬಂದು ನಮ್ಮವೇ ಆಗಿ ಕೊನೆಗೊಮ್ಮೆ ಅಗಲಿವೆ. ಇವುಗಳು ಕೊಟ್ಟ ಖುಷಿಗೆ ಯಾವುದೇ ಹೋಲಿಕೆಯಿಲ್ಲ. ನಮ್ಮನೆಯ ಎಲ್ಲ ನಾಯಿ ಬೆಕ್ಕುಗಳೂ ಯಾರೋ ತಂದು ರಸ್ತೆಬದಿಯಲ್ಲಿ ಬಿಟ್ಟುಹೋದ ಮುದ್ದು ಜೀವಗಳು. ಇಂಥಹ ನಾಯಿ, ಬೆಕ್ಕುಗಳ ಸಂಖ್ಯೆ ಸಾವಿರಾರು ಇರುವಾಗ ದುಡ್ಡುಕೊಟ್ಟು ತಂದು ಸಾಕುವ ಯಾವ ಆಲೋಚನೆಯೂ ನನಗಿಲ್ಲ. ಉತ್ತಮ ತಳಿಯವೆಂದು ಕರೆಸಿಕೊಳ್ಳುವ ಅಂಥಹ ನಾಯಿ-ಬೆಕ್ಕುಗಳನ್ನು ಅನೇಕರು ತಂದು ಸಾಕುತ್ತಾರೆ. ಒಟ್ಟಿನಲ್ಲಿ ಅವುಗಳಿಗೆ ಒಳ್ಳೆಯ ಆಶ್ರಯ ದೊರಕುತ್ತದೆ. ಆದರೆ ಬೀದಿ ಬದಿಯಲ್ಲಿ ಅನಾಥರಾಗುವ ಈ ಜೀವಗಳಿಗೆ ಯಾರೂ ಇಲ್ಲ. ಇನ್ನು ನಮ್ಮದೇ ಮನೆಗೆ ಹೋದೊಡನೆ ಹತ್ತಾರು ಬೆಕ್ಕುಗಳು, ಕನಿಷ್ಠ ಮೂರು ನಾಯಿಗಳನ್ನಾದರೂ ಸಾಕುವ ಆಸೆಯಿದೆ. ಇವುಗಳೊಂದಿಗೆ ಆಗಾಗ ಬಂದುಹೋಗುವ ನಾಯಿ ಬೆಕ್ಕುಗಳಿಗೂ ನಮ್ಮನೆಯಲ್ಲಿ ಊಟ ಸಿಕ್ಕೇ ಸಿಗುತ್ತದೆ. ನಾನು ತಿನ್ನುವ ತುತ್ತು ಕಮ್ಮಿಯಾದರೂ ಈ ಮುಗ್ಧ ಜೀವಗಳು ಹಸಿದಿರಬಾರದು. ನಮ್ಮಿಂದ; ಅಂದರೆ ಮನುಷ್ಯರಿಂದಲೇ ಅನ್ಯಾಯಕ್ಕೊಳಗಾದ ಈ ಮೂಕಪ್ರಾಣಿಗಳಿಗೆ ಇಷ್ಟಾದರೂ ಸಹಕಾರ ನೀಡದಿದ್ದರೆ ಭೂಮಿತಾಯಿ ನನ್ನನ್ನು ಮನ್ನಿಸಲಾರಳು ಎಂಬುದು ನನ್ನ ಭಾವನೆ.