ಈ ಮಾತಿಗೆ ಒಂದ ದಿಡ ತಿಂಗಳ ಆಗಲಿಕ್ಕೆ ಬಂತು. ನಮ್ಮ ಮಾಳಮಡ್ಡಿ ಶತಾಯುಷಿ ಪ್ರಾಣೇಶಾಚಾರ್ಯರು  ಜಡ್ಡ ಇಲ್ಲಾ ಜಾಪತ್ರಿಲ್ಲಾ, ಏನೋ  ಬಚ್ಚಲದಾಗ ನಡರಾತ್ರ್ಯಾಗ ಕೈ ಕಾಲ ತೊಕ್ಕೊಳ್ಳಿಕ್ಕೆ ಹೋದಾಗ ಕಾಲ ಜಾರಿ  ಬಿದ್ದರಂತ ಒಂದ ದಿವಸ ದಾವಾಖಾನಿಗೆ ಅಡ್ಮಿಟ್ ಆದೋರ ಮತ್ತ ವಾಪಸ ಮನಿಗೆ ಬರಲೇ ಇಲ್ಲಾ. ತಲಿಗೆ ಪೆಟ್ಟ ಹತ್ತಿದ್ದ ಒಂದ ನೆವಾ ಸಾಕಾಗಿತ್ತ, ಮ್ಯಾಲೆ ಹೋಗಿ ಬಿಟ್ಟರು. ಹಂಗ ಈ ವಯಸ್ಸಾದವರು ಬಚ್ಚಲ ಮನ್ಯಾಗ ಬಿದ್ದದ್ದ ನೆವಾ ಮಾಡ್ಕೋಂಡ ಸಾಯೋದ ಇತ್ತೀಚಿಗೆ ಭಾಳ ಆಗೇದ. ಅಲ್ಲಾ ಇವರ ಸುಮ್ಮನ ಬಚ್ಚಲ ಮನಿಗೆ ಹೋಗೊದ ಬಿಟ್ಟ ಬೆಡ್ ಪ್ಯಾನ ಇಟಗೊಂಡರ ಇನ್ನೊಂದ ಎರಡ ಮೂರ ವರ್ಷ ಜಾಸ್ತಿ ಬದಕತಾರೊ ಏನೋ ಅಂತ ಒಮ್ಮೋಮ್ಮೆ ಅನಸ್ತದ. ಆದರ ಮನಿಮಂದಿಗೆ ಈ ವಯಸ್ಸಾದವರನ ಹಿಡಿಯೋದ ರಗಡ ಆಗಿರತದ ಇನ್ನ ಮತ್ತ ಅವರಿಗೆ ಬೆಡ್ ಪ್ಯಾನ್ ಎಲ್ಲೆ ಹಿಡಕೋತ ಕೂಡ್ತಾರ.

ಈ ಪ್ರಾಣೇಶಾಚಾರ್ಯರ ಬಿದ್ದದ್ದ ನಡರಾತ್ರ್ಯಾಗ, ಆದರ ಅವರ ಮಗಾ ವಾಮನಾಚಾರ, ಮೊಮ್ಮಗ ರಾಘು ಮೀನಾ-ಮೇಷಮಾಡಿ ಮರುದಿವಸ ಮುಂಜಾನೆ ಅವರನ ದಾವಾಖಾನಿಗೆ ಕರಕೊಂಡ ಹೋಗೊದರಾಗ ತಲಿ ಒಳಗ ರಕ್ತ ಹೆಪ್ಪ ಗಟ್ಟಿ ಏಂಟ ತಾಸ ಮ್ಯಾಲೆ ಆಗಿತ್ತು. ಡಾಕ್ಟರ “ನೀವು ಲಗೂನ ಕರಕೊಂಡ ಬಂದಿದ್ದರ ಏನರ ಮಾಡಬಹುದಿತ್ತ, ಈಗ ಭಾಳ ತಡಾ ಆತು, ಈ ವಯಸ್ಸಿನಾಗ ಆಪರೇಶನ್ನೂ ಮಾಡಲಿಕ್ಕೆ ಬರಂಗಿಲ್ಲಾ, ಆದ್ರೂ ಇಂಜೆಕ್ಷನ್ನ ಮ್ಯಾಲೆ ನಮ್ಮ ಪ್ರಯತ್ನ ಮಾಡೋಣಂತ” ಅಂತ ಅಂದ್ರು. ಮರುದಿವಸ ಮುಂಜಾನೆ ಅನ್ನೋದರಾಗ ಆಚಾರ್ಯರು ಭಾಳ ಸೋತ ಹೋಗಿದ್ದರು, ಎದ್ದ ತಲಿ ಎತ್ತಿ ಕೂಡಲಿಕ್ಕು ಆಗಲಿಲ್ಲಾ. ಅಲ್ಲೇ ನೀರ ಬಿಡಲಿಕ್ಕೆ  ಕಾಯಕೋತ ಕೂತದ್ದ  ವಾಮಾನಾಚಾರರು  ಅರ್ಧಾ ತಾಸಿಗೆ ಒಮ್ಮೆ ಎರೆಡೆರಡ ಚಮಚಾ ನೀರ ಬಿಟ್ಕೋತ ಇದ್ದರು, ಯಾರಿಗೊತ್ತ ಯಾವಾಗ ಅವರಪ್ಪ ಜೀವ ಬಿಟ್ಟ, ಕಟಬಾಯಿ ಮಾಡ್ತಾನಂತ ಸತತ ತಂಬಗಿ ಒಳಗ ತುಳಸಿ ದಳಾ ಹಾಕಿದ್ದ ನೀರ ಬಿಟ್ಕೋತ ಇದ್ದರು. ಅಷ್ಟರಾಗ ನರ್ಸ್ ಬಾಯಿ ಬಂದ
“ಯಾಕೋ ರಾತ್ರಿ ಇಂದ ಅಜ್ಜಾಂದ ಉಸಿರಾಟಾನೂ ಏರ-ಪೆರ ಆಗಲಿಕತ್ತದ, ಸುಮ್ಮನ ದೊಡ್ಡ ದಾವಖಾನಿಗೆರ  ಒಯ್ಯಿರಿ” ಅಂತ ಹೇಳಿದ್ಲು.

“ಯೆ, ಅಂವಾ ಗಟ್ಟಿ ಮನಷ್ಯಾ ಹಂಗ ಅಷ್ಟ ಸರಳ ಹೋಗೊಂವಾ ಏನ ಅಲ್ಲಾ, ದೊಡ್ಡ ದಾವಾಖಾನಿಗೆ ಒಯ್ದರ ಸುಮ್ಮನ ರೊಕ್ಕ ದಂಡಾ, ಅದರಾಗ್ ಮನ್ಯಾಗ ಮೊಮ್ಮಗಂದ ಮುಂಜವಿ ಬ್ಯಾರೆ ಹರಕೊಂಡೇವಿ, ನೂರಾ ಎಂಟ ಕೆಲಸ ಒಡ್ಯಾಡೋರು ಯಾರು ಇಲ್ಲಾ” ಅಂತ ಹೇಳಿದ್ರು. ಅದನ್ನ ಕೇಳಿದ್ದ ಪ್ರಾಣೇಶಾಚಾರ್ಯರು ಮುಂದ ಭಾಳೊತ್ತ ಉಳಿಲಿಲ್ಲಾ, ಒಂದ ಹತ್ತ ನಿಮಿಷಕ್ಕ ಒಂದ ಸರತೆ ಜೋರ್ ಆಗಿ ಉಸಿರ ತೊಗೊಂಡಂಗ ಮಾಡಿ ನಿಟ್ಟುಸಿರ ಬಿಟ್ಟ ಬಾಯಿ ತಗದಬಿಟ್ಟರು. ಸಿಸ್ಟರ್ ಗಾಬರಿ ಆಗಿ ಬಿ.ಪಿ, ಚೆಕ್ ಮಾಡೋದರಾಗ ಅಜ್ಜ ಈ ಲೋಕಾನ ಚೆಕಾಔಟ್ ಮಾಡಿ ಬಿಟ್ಟಿದ್ದಾ. ಡಾಕ್ಟರ ಏನೋ ಒಂದೇರಡ ದಿವಸ ಕಾಯೋಣ ಅಂತ ಅಂದಿದ್ದರು ಆದ್ರ ದೇವರು ಒಂದೆರಡ ದಿವಸ ಕಾಯಲಿಲ್ಲಾ, ‘ಸಾಕ ನೀ ಮಕ್ಕಳು, ಮೊಮ್ಮಕ್ಕಳ ಕೈಯಾಗ ಅನುಭವಿಸಿದ್ದು, ಇನ್ನ ಸುಳ್ಳ ದಾವಾಖಾನ್ಯಾಗ  ಇದ್ದ ಯಾಕ ನೀ ಅವರದ ಟೈಮ್, ರೊಕ್ಕಾ ವೇಸ್ಟ್ ಮಾಡತಿ’ ಅಂತ ಆಚಾರ್ಯರ ಆತ್ಮ ಡಿಸ್ಚಾರ್ಜ ಮಾಡಿಸಿಗೊಂಡ ಕರಕೊಂಡ ಹೋದಾ. ಇನ್ನ ಆ ದೇಹಕ್ಕ ಒಂದ ಗತಿ ಕಾಣಸೋ ಜವಾಬ್ದಾರಿ ಮನಿ ಮಂದಿಗೆ ಬಾಕಿ ಉಳಿತು.

ಹಂಗ ಬ್ರಾಹ್ಮಣರಾಗ ಹೆಣಾ ಭಾಳೊತ್ತ ಇಟಗೊಂಡ ಅದರ ಮುಂದ ಚುನಮರಿ, ಮಿರ್ಚಿ ತಿಂದ ಹಾಡ ಕಟ್ಟಿ- ಕಟ್ಟಿ, ಹೇಳಿ-ಹೇಳಿ ಎದಿ ಬಡ್ಕೋಂಡ ಅಳೊ ಪದ್ದತಿ ಇಲ್ಲಾ, ಮತ್ತೇಲ್ಲರ ಹೋಗಿದ್ದ ಜೀವ ಬಂದ-ಗಿಂದಿತ್ತ ಅಂತ ಆ ಹೆಣದ ಮೈಯಾಗಿನ ಬಿಸಿ ರಕ್ತ ಆರೊಕ್ಕಿಂತ ಮುಂಚೇನ ಬೆಂಕಿ ಹಚ್ಚಿ ಬಂದ ಬೀಡ್ತಾರ. ಎತ್ತಲಿಕ್ಕೆ ನಾಲ್ಕ ಮಂದಿ ಹಿಂದ, ಮುಂದ ಬೆಂಕಿ ಹಿಡಿಲಿಕ್ಕೆ ಒಬ್ಬ ಮಗಾ ಇದ್ದರ ಸಾಕ ಸಾಕು. ಆದರ ಪ್ರಾಣೇಶಾಚಾರ್ಯರ ದೇಹದ ಹಣೆಬರಹದಾಗ ಅಷ್ಟ ಹಗರ ಬೂದಿ ಆಗೋದ ಬರದಿದ್ದಿಲ್ಲಾ.

ವಾಮಾನಾಚಾರರು ಅವರಪ್ಪನ ಕಣ್ಣ ಮುಚ್ಚಿ, ಅವನ ಕಣ್ಣಾಗ ಬಂದಿದ್ದ ಕೊನೆ ಹನಿ ನೀರ ಒರಸಿ  ತಮ್ಮ ಮಗ ರಾಘುಗ ಫೋನ್ ಮಾಡಿ “ನಿಮ್ಮಜ್ಜ ಹೋದಾಪಾ, ಎಲ್ಲಾ ಕಾಕಾಗೊಳಿಗೆ ಫೋನ ಮಾಡಿ ಹೇಳು, ಮನ್ಯಾಗ ಪಡಸಾಲ್ಯಾಗ ಹರವಿದ್ದ ಮುಂಜವಿ  ಸಾಮಾನ ತಗದ ಒಳಗ ಇಟ್ಟ ಒಂದ ಚಾಪಿ ಹಾಸಿ ಇಡಂತ ನಿಮ್ಮವ್ವಗ ಹೇಳು, ಎಲ್ಲಾ ಮುಂದಿನ ವ್ಯವಸ್ಥೆ ಆದ ಮ್ಯಾಲೇನ ಇಲ್ಲಿಂದ ಬಾಡಿ ತೊಗೊಂಡ ಮನಿಗೆ ಹೋಗೊಣಂತ” ಅಂತ ಹೇಳಿ ಮುಂದಿನ ತಯಾರಿ ಶುರು ಮಾಡಿದರು.

ಪ್ರಾಣೇಶಾಚಾರ್ಯರಿಗೆ  ಮೂರ ಗಂಡಸ ಮಕ್ಕಳು. ಅದರಾಗ ವಾಮಾನಾಚಾರರ ದೊಡ್ಡವರು, ಇವರ ನೆಕ್ಸ್ಟ್ ಇರೋ ಸೀನಣ್ಣ ಈಗ ಇರೋದು ಅಹ್ಮೆದನಗರದಾಗ,ಅಲ್ಲೆ ಒಂದ ಮರಾಠಿ ಹುಡುಗಿ ಲಗ್ನಾ ಮಾಡ್ಕೋಂಡ್ ಸೆಟ್ಲ್ ಆಗಿ ಐವತ್ತ  ವರ್ಷ ಆಗಲಿಕ್ಕೆ ಬಂತು. ಹಿಂಗ ಯಾವುದರ ಲಗ್ನಾ-ಮುಂಜವಿ ಇಲ್ಲಾ ಯಾರರ ಸತ್ತಾಗ ಇಷ್ಟ ಈ ಕಡೆ ಕಾರನಾಗ ಧಾರವಾಡಕ್ಕ ಹಾಯ್ದ ತನ್ನ ದೊಡ್ಡಿಸ್ತನಾ ಬಡದ ಹೋಗೊಂವಾ. ಕಡೀಂವಾ ನರಹರಿ ಇರೋದು ಬೆಂಗಳೂರಾಗ. ಅವನ ಮಕ್ಕಳು-ಸೊಸೆಂದರು ಕೆಲಸಾ ಮಾಡೋರು, ಹಿಂಗಾಗಿ ಅಂವಾ ಬೆಂಗಳೂರ ಬಿಟ್ಟ ಅಳಗ್ಯಾಡೋದ ಭಾಳ ಕಡಿಮಿ. ಪಾಪಾ, ಎಲ್ಲಾರಿಗೂ ಅವರವರ ಸಂಸಾರದ ಜಂಜಾಟ, ಹಿಂಗ ಅವರಪ್ಪ ಹೇಳದ ಕೇಳದ ಗೊಟಕ್ ಅಂದ್ರ ಅವರಿಗೆಲ್ಲಾ ತ್ರಾಸ ಆಗೊದ ಗ್ಯಾರಂಟಿ. ಅದರಾಗ ಮುಂದ ಹದಿಮೂರ ದಿವಸಕ್ಕ ರಾಘುನ ಮಗಂದ ಮುಂಜವಿ ಬ್ಯಾರೆ ಇಟಗೊಂಡಿದ್ರು,ಈಗ ಒಮ್ಮಿಂದೊಮ್ಮಿಲೆ ಹಿಂಗ ಆದ ಕೂಡಲೆನ ಎಲ್ಲಾರದೂ ಪ್ಲ್ಯಾನ ಅಪಸೆಟ್ ಆಗಿ ಬಿಡ್ತು.

ರಾಘ್ಯಾನ ಹೆಂಡತಿ ಈ ಸುದ್ದಿ ಕೇಳಿದ ಕೂಡ್ಲೇನ “ಅಯ್ಯೋ ದೇವರ, ಮುಂಜವಿಗೆ ಇದ ಲಾಸ್ಟ ಮೂಹೂರ್ತ್ ಇತ್ತಲ್ಲರಿ, ಇನ್ನ ಮುಂದ ಮಗಗ ಒಂಬತ್ತ ದಾಟಿ ಬಿಡ್ತಾವ.  ಅವಂಗ ಇನ್ನ ಗುರುಬಲಾ  ಇರೋದ ೧೮ನೇ ವರ್ಷಕ್ಕ, ಅಲ್ಲಿ ತನಕಾ ಹುಡುಗಗ ಮುಂಜವಿ ಮಾಡಲಿಕ್ಕೆ ಬರಂಗಿಲ್ಲಾ” ಅಂತ ಮರಗಿ ಹಣಿ ಬಡ್ಕೋಂಡರ,  ರಾಘು ಮುಂಜವಿ ಸಂಬಂಧ ಬುಕ್ ಮಾಡಿದ್ದ ಹಾಲ್ ಏನ್ ಮಾಡಬೇಕು? ಇನ್ನೂ ನಾಲ್ಕ ಮನ್ಯಾಗ ‘ಗಡಿಗೆ ನೀರು’ ಬಾಕಿ ಇದ್ವು, ಅದರಾಗ ದೊಡ್ಡಿಸ್ತನ ಮಾಡಿ ಮುಂಜವಿ ಆಮಂತ್ರಣ ಪತ್ರಿಕೆ ಜೊತಿಗೆ ಬಳಗದವರಿಗೆಲ್ಲಾ ಉಡುಗೊರೆ ಬ್ಯಾರೆ ಕೊಟ್ಟಬಂದಿದ್ದ ವೇಸ್ಟ ಆತು ಅಂತ ವಟಾ-ವಟಾ ಅನ್ನಲಿಕತ್ತಾ.

ಇತ್ತಲಾಗ ದಾವಾಖಾನ್ಯಾಗೆ ವಾಮಾನಾಚಾರರು, ಘಳಗಿ ಆಚಾರ್ಯರನ್ನ ಕೇಳಿ ಸಂಜಿ ನಾಲ್ಕ ಘಂಟೇಕ್ಕ ಅವರಪ್ಪನ ಅಂತ್ಯಕ್ರೀಯೆ ಮಾಡಿದರಾತು, ಹಂಗ ಹೆಣಾ ಇಟಗೊಂಡ ಕೂಡಲಿಕ್ಕೆ ಬರಂಗಿಲ್ಲಾ, ಇನ್ನ ಅವನ ತಮ್ಮಂದರ ಎಲ್ಲಾ ದೂರದ ಊರಾಗ ಇರೋರು ಅವರಿಗೇನ ಬರಲಿಕ್ಕೆ ಆಗಂಗಿಲ್ಲಾ ಅಂತ ಅವರ ಅಪ್ಪಣೆ ಕೇಳಿದರು. ಬೆಂಗಳೂರ ನರಹರಿ ‘ಯಾಕ ಆಗವಲ್ತಾಕ ನೀನ ಎಲ್ಲಾ ಮಾಡಿ ಮುಗಿಸಿಬಿಡು. ನಾ ರಾತ್ರಿ ವಿ.ಆರ್.ಎಲ್ ಬಸ್ ಹತ್ತಿ ನಾಳೆ ಬರ್ತೇನಿ, ನನ್ನ ಹೆಂಡತಿಗೂ ಶುಗರ್ ಜಾಸ್ತಿ ಆಗೇದ ಅಕಿ ಇಲ್ಲೆ ಮಕ್ಕಳ ಜೊತಿ ಇರವಳ್ಳಾಕ, ಸುಮ್ಮನ ಎಲ್ಲಾರೂ ಬಂದ್ರ ಗಾಡಿ ಖರ್ಚ ದಂಡಾ, ಮುಂದ ಹೆಂಗಿದ್ದರೂ ಧರ್ಮೋದಕ ಬಿಡಲಿಕ್ಕೆ ಬಂದ ಬರತಾರಲಾ’ ಅಂತ ಅಂದಾ. ಆದ್ರ ಸೀನಣ್ಣಾ ಹಂಗ ಅನ್ನಲಿಲ್ಲಾ,

” ಏ, ನಾ ಬರೋತನಕ ಎತ್ತಂಗಿಲ್ಲಾ, ನಾ ನಮ್ಮಪ್ಪನ ಮಾರಿ ನೋಡಿದ ಮ್ಯಾಲೇನ ಎತ್ತೋದ, ಅದ ಬೇಕಾದ್ದ ಆಗಲಿ, ಎಷ್ಟ ಬೇಕಷ್ಟ ಖರ್ಚ ಆಗಲಿ, ನಿಮಗ ಮನ್ಯಾಗ ಇಟಗೊಳ್ಳಿಕ್ಕೆ ಆಗಂಗಿಲ್ಲಾ ಅಂದರ ಎಲ್ಲರ ಶವಾಗಾರದಾಗ ಐಸ್ ಪ್ಯಾಕನಾಗ ಇಡ್ರಿ” ಅಂತ ತಾಕಿತ ಮಾಡಿದಾ. ಇನ್ನ ಅಂವಾ ಅಹ್ಮೆದನಗರ ಬಿಟ್ಟ ಧಾರವಾಡ ಮುಟ್ಟ ಬೇಕಂದರ ಮಿನಿಮಮ್ ೧೪-೧೬ ತಾಸ ಬೇಕು, ಅಲ್ಲಿ ತನಕ ಹೆಣಾ ಇಟಗೊಂಡ ಮನ್ಯಾಗ ಕೂಡೋದ ಸರಿ ಕಾಣಂಗಿಲ್ಲಾಂತ ಘಳಗಿ ಆಚಾರ್ಯರ ಕ್ಲಿಯರ್ ಆಗಿ ಹೇಳಿ ‘ಇವತ್ತ ನಾ ಖಾಲಿ ಇದ್ದೇನಿ, ನಾಳೆ ಆದ್ರ ಹೊಸಾ ಯೆಲ್ಲಾಪುರದಾಗ ಒಂದ ಹೋಮದಾಗ ಇರತೇನಿ, ಏನೋಂಬದನ್ನ ನೀವ ಡಿಸೈಡ ಮಾಡಿದ ಮ್ಯಾಲೆ ನಂಗ ಹೇಳ್ರಿ’ ಅಂತ ಹೇಳಿದ್ರು.

‘ಹಂಗ ಸೀನಣ್ಣ ಭಾಳ ಸಿಡಕ ಮನಷ್ಯಾ, ಅವಂದ ನಡಿಲಿಲ್ಲಾ ಅಂದ್ರ ಆಕಾಶ ಭೂಮಿ ಒಂದ ಮಾಡಿ ಬಿಡೋಂವಾ, ಅಂವಾ ಬರೋತನಕಾ ಹೆಣಾ ಇಟ್ಟರಾತು, ಹೆಂಗಿದ್ದರೂ ಅಷ್ಟರಾಗ ನರಹರಿನೂ ಬಂದ ಬರತಾನ, ಊರ ಮಂದಿ ಏನ ಅನ್ಕೊಂಡರು ಅನ್ಕೊವಳ್ಳರಾಕ’ ಅಂತ ವಾಮಾನಾಚಾರರು  ತಮ್ಮ ಮಗಾ ರಾಘುಗ “ಹೆಣಾ ಒಂದ ದಿವಸದ ಮಟ್ಟಿಗೆ ಎಲ್ಲರ ಐಸ್ ಬಾಕ್ಸ್ ನಾಗ ಇಡಸೋ ವ್ಯವಸ್ಥೆ ಮಾಡಪಾ, ನಿಮ್ಮ ಸೀನು ಕಾಕಾ ಎಷ್ಟ ಬೇಕಷ್ಟ ಖರ್ಚ ಆಗಲಿ ಅಂತ ಅಂದಾನ” ಅಂದ್ರು. ಆದರ ಬಳಗದವರ ಒಂದಿಷ್ಟ ಮಂದಿ “ಅಲ್ರಿ, ಹಂಗ ಅನಾಥ ಇದ್ದೊವರದ ಹೆಣಾ ಪಂಚನಾಮಿ ಆಗೋತನಕ ಶವಾಗಾರದಾಗ ಇಡತಾರ, ಪ್ರಾಣೇಶಾಚಾರ್ಯರನ ಯಾಕ ಅನಾಥ ಮಾಡ್ತೀರಿ. ಸುಮ್ಮನ ಮನಿಗೆ ತೊಗೊಂಡ ಹೋಗರಿ, ಓಣಿ ಮಂದಿ ಹಿರೇ ಮನಷ್ಯಾಂದ ದರ್ಶನಾನರ ಮಾಡ್ತಾರ” ಅಂದ್ರು, ಆದರ ವಾಮಾನಾಚಾರ ಹೆಂಡತಿ ವಿಮಲಾಬಾಯಿ ಮಾತ್ರ ‘ ಮನ್ಯಾಗ ಮುಂಜವಿ ಹರಕೊಂಡಿದ್ವಿ, ಎರಡ ದಿವಸಾತು ಮನಿಗೆ ಸುಣ್ಣ-ಬಣ್ಣಾ ಹಚ್ಚಿ, ನಾ ಅಂತೂ ಹೆಣಾ ಇಟಗೊಂಡ ಕೂಡೋಕಿ ಅಲ್ಲಾ, ಬೇಕಾರ ಇವತ್ತ ಎಲ್ಲಾ ದಾವಾಖಾನಿಯಿಂದ ಒಯ್ದ ಮುಗಿಸಿಬಿಡರಿ, ಇಲ್ಲಾ ದಾವಾಖಾನ್ಯಾಗ ಇಡ್ರಿ’ ಅಂತ ಕಡ್ಡಿ ಮುರದಂಗ ಹೇಳಿ ಬಿಟ್ಟಳು.

ಇನ್ನ ಐಸ್ ಬಾಕ್ಸನಾಗ್ ಇಡಬೇಕಂದ್ರ ಸಿವಿಲ್ ಹಾಸ್ಲಿಟಲನಾಗ ಇಡಬೇಕು. ಆದ್ರ ಅಲ್ಲೆ ಡಾಕ್ಟರು ‘ ನಾವು ಒಮ್ಮೆ ಹೆಣಾ ಐಸ್ ಪ್ಯಾಕ್ ಮಾಡಿ ಇಟ್ಟಮ್ಯಾಲೆ, ಹಗಲಗಲಾ ಬಂದ ಅವರ ಬಂದಾರ ಮಾರಿ ತೊರಸರಿ, ಬೀಗರ ಬಂದಾರ ಮಾರಿ ತೊರಸರಿ’ ಅಂತ ಅನ್ನೊಂಗಿಲ್ಲಾ ಅಂತ ಹೇಳಿಬಿಟ್ಟರು. “ಏ, ಅದ ಹೆಂಗ ಆಗ್ತದ ಸತ್ತ ಮ್ಯಾಲೆ ಮಾತಡಸಲಿಕ್ಕೆ ಬಂದ ಮಂದಿಗೆ ಹೆಣದ್ದ ಮಾರಿ ತೊರಸಲಿಲ್ಲಾಂದ್ರ ಹೆಂಗ” ಅಂತ ವಾಮಾನಾಚಾರರು ಕಡಿಕೆ ತಲಿಕೆಟ್ಟ ರೊಕ್ಕ ಹೋದರ ಹೋಗಲಿ ಅಂತ ಒಂದ ದಿವಸಕ್ಕ ೧೦೦೦ ರೂಪಾಯಿ ಕೊಟ್ಟ ಮ್ಯಾಲೆ ಅಂಬುಲೆನ್ಸನವರಿಗೆ ೧೫೦೦ ರೂಪಾಯಿ ಬಡದ ೧೦ ಕಿ.ಮಿ. ದೂರ ಎಸ್.ಡಿ.ಎಮ್ ಒಳಗ ಐಸ್ ಬಾಕ್ಸನಾಗ ಇಟ್ಟರು. ಎಲ್ಲಾ ಬಳಗದವರಿಗೆ, ಓಣಿ ಮಂದಿಗೆ ಅಲ್ಲೇ ಬಂದ ಮಾತಾಡ್ಸಿ ಹೆಣದ ಮಾರಿ ನೋಡಿ ಹೋಗರಿ ಅಂತ ಹೇಳಿ ಬಿಟ್ಟರು. ಮುಂದ ಮಂದಿ ಹೋಗಿ ಅಲ್ಲೆ ಹೆಣದ ಮಾರಿ ನೋಡೋದು ದೂರ ಉಳಿತ, ಮನ್ಯಾಗಿನ ಹೆಣ್ಣಮಕ್ಕಳು ಹೋಗಿ ಅಜ್ಜನ್ನ ಮಾರಿ ನೋಡಲಿಲ್ಲಾ.

ಬಹುಶಃ ಅವರ ಅವತ್ತ ರಾತ್ರಿ ಅಜ್ಜಾ ಬಿದ್ದಾಗ ರೊಕ್ಕಕ್ಕ ಶಾಣ್ಯಾತನ ಮಾಡಲಾರದ ಎಸ್.ಡಿ. ಎಮ್. ಒಳಗ  ಹಾಕಿದ್ದರ ಪ್ರಾಣೇಶಾಚಾರ್ಯರು ಇವತ್ತ ಇನ್ನೂ ದಿನಕ್ಕೊಂದ ಧಾರವಾಡ ಪೇಢೆ ತಿನ್ನಕೋತ, ಮಾಳಮಡ್ದಿ ತುಂಬ ವಾಕಿಂಗ ಮಾಡ್ಕೋತ ಇರತಿದ್ದರೋ ಏನೋ? ಆದರ ಈಗ ಏನ ಮಾಡೋದ, ಈಗ ನಾವ ಅವರು ಹಿಂಗ ಮಾಡ್ಬೇಕಿತ್ತು, ಹಂಗ ಮಾಡ್ಬೇಕಿತ್ತು ಅಂತ ಅನ್ನೋದರಾಗ ಅರ್ಥ್ ಇಲ್ಲಾ. ಏಷ್ಟ ಅಂದರೂ ನಾವು ಮಂದಿ, ನಮಗ ಆಡ್ಕೋಳೋದ ಬಿಟ್ಟರ ಮತ್ತ ಏನ ಬರತದ.

ಕಡಿಕೆ ಮರದಿವಸ ಮುಂಜಾನೆ ಹತ್ತ ಗಂಟೆ ಹೊತ್ತಿಗೆ ಸೀನಣ್ಣಾ ‘ಟೊಯೋಟಾ ಇನ್ನೋವಾ’ ತೊಗಂಡ ಬಂದಾ, ಇತ್ತಲಾಗ ನರಹರಿನೂ ಬಂದಿದ್ದಾ. ಮೂರು ಮಂದಿ ಗಂಡಸ ಮಕ್ಕಳ ಸೇರಿ ಮೊಮ್ಮಕ್ಕಳ ಸಹಿತ ಪ್ರಾಣೇಶಾಚಾರ್ಯರ ದೇಹ ಮುಕ್ತಿಧಾಮಕ್ಕ ಒಯ್ದ ಮುಕ್ತಿ ಕಾಣಸಿದರು. ಯಾವತ್ತ ರಾಘುನ ಮಗನ ಮುಂಜವಿದ ದೇವರ ಊಟ ಇತ್ತೊ ಅವತ್ತ ತಡಸ ತಪೋವನದೊಳಗ ರಾಯರದ ಧರ್ಮೋದಕ ಬಿಟ್ಟರು. ಮುಂದ ಮುಂಜವಿ ಸಂಬಂಧ ಹಿಡದದ್ದ ಹಾಲ್ ಒಳಗ ೧೩ ನೇ ದಿವಸದ್ದ ಸೀಮ ಇಟಗೋಳು ಕಾರ್ಯಕ್ರಮ ಮಾಡಿ ಇಡಿ ಮಾಳಮಡ್ಡಿ ಮಂದಿಗೆಲ್ಲಾ ಊಟಕ್ಕ ಹಾಕಿ ಕೈ ತೊಳ್ಕೋಂಡರು. ಹಂಗ ನಾ ‘ಅವ್ವಾ-ಅಪ್ಪಾ ಇದ್ದೊಂವಾ, ಸ್ಮಶಾನಕ್ಕ ಹೋಗ ಬ್ಯಾಡಾ’ ಅಂತ ನಮ್ಮವ್ವ ಹೇಳಿದ್ದಕ್ಕ ಅಂತ್ಯಕ್ರೀಯೆಗೆ ಹೋಗಲಿಲ್ಲಾ. ಆದರ ೧೩ನೇ ದಿವಸದ ಸಿಹಿ ಉಟಕ್ಕ ಹೋಗಿ ರವಾ ಉಂಡಿ ಹೊಡದ ಬಂದೆ. ಅವರ ಮಾಡಿಸಿದ್ದ ಅಡಿಗೆ ನೋಡಿದ್ರ ಅದೇನ ಸತ್ತವರ ಮನ್ಯಾಗಿಂದ ೧೩ನೇ ದಿವಸದ್ದ ಅಡಿಗೆ ಅನಸಲಿಲ್ಲ, ಮುಂಜವಿ ಅಡಿಗಿನ ಅನಸ್ತು. ನಮಗ ಮುಂಜವಿ ಮಣಿಗೆ ಗಿಫ್ಟ ಒಂದ  ಕೊಡೊದ ತಪ್ಪತ ಇಷ್ಟ.

ಮುಂದ ಎಲಿ-ಅಡಿಕೆ ತಿನ್ನಕೋತ ಹರಟಿ ಹೊಡಿತಿರಬೇಕಾರ ಪ್ರಾಣೇಶಾಚಾರ್ಯರ ಮನೆತನದ್ದ ಒಳಗಿನ ಹಕಿಕತ್  ಹೊರಗ ಬರಲಿಕತ್ವು. ಇಪ್ಪತ್ತ ವರ್ಷದಿಂದ ಆಚಾರ್ಯರು ಒಬ್ಬಬ್ಬ ಮಗನ ಮನ್ಯಾಗ ಒಂದೊಂದ ವರ್ಷ ಇರೋದು ಅಂತ ಮಕ್ಕಳ ಒಳಗ ಒಪ್ಪಂದ ಆಗಿತ್ತಂತ. ಹಂಗ ಆಚಾರ್ಯರದ ಆಸ್ತಿ ಏನ್ ಇದ್ದಿದ್ದಿಲ್ಲಾ, ಮಕ್ಕಳ ಆಸ್ತಿ ಅಂತ ಕಲಿಸಿ ದೊಡ್ಡವರನ ಮಾಡಿ, ದೊಡ್ಡ-ದೊಡ್ಡ ನೌಕರಿಗೆ ಹಚ್ಚಿದ್ದರು, ಈಗ ಆ ಮಕ್ಕಳು ತಾವ ಮೊಮ್ಮಕ್ಕಳನ ಕಂಡ್ರು ‘ನಾ ಒಬ್ಬವನ ಯಾಕ ನಮ್ಮಪ್ಪನ ಸಾಕ ಬೇಕು, ಇದು ಮೂರು ಮಂದಿದ ಜವಾಬ್ದಾರಿ ಅಂತ’ ಇದ್ದ ಒಬ್ಬ ಅಪ್ಪನ ಖರ್ಚ್ ಮೂರೂ ಮಂದಿ ಹಂಚಗೊತಿದ್ದರು. ಅದರಾಗ ಮೊಮ್ಮಕ್ಕಳಿಗೆ ಅವರಪ್ಪನ್ನ ಅಲ್ಲದ ಅವರಜ್ಜನ ಬ್ಯಾರೆ ಸಾಕೋದು ವಜ್ಜ ಆಗಿತ್ತು. ವಾಮಾನಚಾರರಂತು ಹೆಂಡತಿ ಮಕ್ಕಳ ಕಡೆ ತಿವಿಸಿಗೋತ  ತಮ್ಮ ಹತ್ತರ ಇಟಗೋತಿದ್ದರು, ಮುಂದ ನರಹರಿ ‘ಅವರಪ್ಪಗ  ಬೆಂಗಳೂರಾಗ ಫ್ಲ್ಯಾಟನಾಗ ಇರಲಿಕ್ಕೆ ಆಗಂಗಿಲ್ಲಾ, ನಂಬದು ಐದನೇ ಅಂತಸ್ತನಾಗ ಮನಿ ಅದ, ಅದರಾಗ ನನ್ನ ಹೆಂಡತಿಗೆ ಶುಗರ್ ಬ್ಯಾರೆ, ಅಕಿ ಕೈಲೆ ಸೇವಾ ಮಾಡಲಿಕ್ಕೆ ಆಗಂಗಿಲ್ಲಾ’ ಅಂತ ಒಂದ ಎರಡ ಸರತೆ ತನ್ನ ಪಾಳೆ ಇದ್ದಾಗ ಹುಬ್ಬಳ್ಳಿ ತಬಿಬಲ್ಯಾಂಡನಾಗ ಒಂದ ಸಣ್ಣ ಮನಿ ಭಾಡಗಿಗೆ ತೊಗೊಂಡ  ಒಂದ  ಬಡ ಬ್ರಾಹ್ಮಣರ ಕುಟುಂಬ ಅವರಜೊತಿ ಇಟ್ಟ ಇಡತಿದ್ದಾ. ಹಂಗ ಬ್ರಾಹ್ಮಣರಾಗ ಬಡವರಿಗೆ ಏನ ಕಡಿಮಿಲ್ಲಾ, ಯಾರೊ ಪಾಪ, ಹಿರೇ ಮನಷ್ಯಾ ಅಂತ ರೊಕ್ಕದ ಆಶಾಕ್ಕ ಇಟಗೊಳ್ಳಿಕ್ಕೆ ಒಪ್ಪಿದ್ದರು. ಆದರ ಅದ ಭಾಳ ವರ್ಷ ಬಗಿಹರಿಲಿಲ್ಲಾ. ಕಡಿಕೆ ವಾಮಾನಾಚಾರರ ಅವರಪ್ಪನ ಕಾಯಮ್ ಇಟಗೊಳೊದು ಆದರ ಖರ್ಚ ಮಾತ್ರ ವರ್ಷಾ ಒಬ್ಬಬ್ಬರ ಕೊಡುದು ಅಂತ ಆತು. ಸೀನಣ್ಣನೂ ಇದಕ್ಕ  ಸೈ ಅಂದಾ, ಅಂವಾ ಅಂತು ‘ರೊಕ್ಕ ಇದ್ದಾಂವ’, ಒಮ್ಮೀನೂ ಅವರಪ್ಪನ ಒಯ್ದ ಇಟಗೊಂಡಿದ್ದಿಲ್ಲಾ, ಇಲ್ಲೆ ವಾಮಾನಾಚಾರರಿಗೆ ರೊಕ್ಕಾ ಕೊಟ್ಟ ‘ನೀನ ನೋಡ್ಕೋ’ ಅಂತ ಹೇಳಿ ಬಿಡ್ತಿದ್ದಾ.

ಹಿಂಗಾಗಿ ಪ್ರಾಣೇಶಾಚಾರ್ಯರು ಮಾಳಮಡ್ಡಿ ಒಳಗ ಕಾಯಮ್ ಉಳದರೂ ಅವರ ಖರ್ಚು-ವೆಚ್ಚಾ ಎಲ್ಲಾ  ಮೂರು ಮಂದಿ ಪ್ರೀತಿಲೇ ಹಂಚಗೋತಿದ್ದರು. ಟರ್ಮ್ಸ್- ಕಂಡೀಶನ್ಸ್ ಭಾಳ ಕ್ಲೀಯರ್ ಇದ್ದವು. ಯಾರದ ಪಾಳೆ ಇದ್ದಾಗ ಅಪ್ಪಗ  ಜಡ್ಡು- ಜಾಪತ್ರಿ ಬರತದೋ ಆ ಖರ್ಚ ಅವರದ, ಅವರವ್ವನ ಶ್ರಾದ್ಧದ ಖರ್ಚ ಸಹಿತ ಆ – ಆ ವರ್ಷ ಅವರ ಅಕೌಂಟಗೆ, ಅಕಸ್ಮಾತ ಹಂಗ ಏನರ ಅವರಪ್ಪ ಸತ್ತರ ಅದರದ ಪೂರ್ತಿ ಖರ್ಚು (ತಿಥಿದು ಹಿಡದ)  ಪಾಳೆ ಇದ್ದವರದ ಅಕೌಂಟಗೆ. ಮುಂದ ವರ್ಷಾಂತಕ ಬೇಕಾರ (ಮಾಡಿದರ) ಎಲ್ಲಾರೂ ಸೇರಿ ಮಾಡೋದು ಅಂತ ನಿರ್ಣಯ ಆಗಿತ್ತು.

ಮೊನ್ನೆ ಪ್ರಾಣೇಶಾಚಾರ್ಯರ ಸತ್ತಾಗ ಅವರನ ಸಾಕೋ ಪಾಳಿ ಸೀನಣ್ಣಂದ ಇತ್ತಂತ, ಅಂವಾ ‘ಏ, ನಾ ಬರೋತನಕ ಎತ್ತಂಗಿಲ್ಲಾ, ನಾ ನಮ್ಮಪ್ಪನ ಮಾರಿ ನೋಡಿದ ಮ್ಯಾಲೇನ ಎತ್ತೋದ, ಎಷ್ಟ ಬೇಕಷ್ಟ ಖರ್ಚ ಆಗಲಿ’ ಅಂತ ಅಂದದ್ದನ್ನ ಸೂಕ್ಷ್ಮ ತಿಳ್ಕೋಂಡ ವಾಮಾನಾಚಾರರು ನಾಳೆ ಸೀನಣ್ಣಾ ‘ನನಗ ನಮ್ಮಪ್ಪನ ಮಾರಿ ಸಹಿತ ತೊರಸಿಲ್ಲಾ, ನಾ ಖರ್ಚ ಕೊಡಂಗಿಲ್ಲಾ ‘ಅಂತ ಅಂದರ ಏನ ಮಾಡೋದು ಅಂತ  ಹೆಣಾ ಎತ್ತೊ ಧೈರ್ಯ ಮಾಡಲಿಲ್ಲಾ. ತಮ್ಮ ಮಡಿ-ಮೈಲಗಿ, ಸಂಪ್ರದಾಯ ಎಲ್ಲಾ ಬಿಟ್ಟ, ಘಳಿಗೆ ಆಚಾರರ ಇದ ಸರಿ ಅಲ್ಲಾ ಅಂತ ಹೇಳಿದರೂ, ಅವರಪ್ಪನ ಹೆಣಾ ಒಂದ ದಿವಸ ಐಸ ಬಾಕ್ಸನಾಗ ಇಟ್ಟರು. ಹೆಂಗಿದ್ದರು ಖರ್ಚ್ ಸೀನಣ್ಣಂದಲ್ಲಾ.

ಒಟ್ಟ ಎಲ್ಲಾ ಮಕ್ಕಳೂ ಸೇರಿ ಕಡಿಕೂ ಶತಾಯುಷಿ ಪ್ರಾಣೇಶಾಚಾರ್ಯರ ಪ್ರಾಣ ಬಿಡಸಿಸಿ ಮುಕ್ತಿ ಕಾಣಸಿದರು…

ನಿನ್ನೆ ವಾಮಾನಾಚಾರರ ಕೆ.ಸಿ.ಡಿ ಸರ್ಕಲನಾಗಿನ ಗಣಪತಿ ಗುಡಿಗೆ ಹೊಸಾ ಆಲ್ಟೊ ಕಾರ ತೊಗಂಡ ಪೂಜಾ ಮಾಡಿಸ್ಗೊಂಡ ಹೋಗಲಿಕ್ಕೆ ಬಂದಿದ್ರು. “ಏನರಿ ಆಚಾರರ ಹೊಸಾ ಕಾರು?” ಅಂತ ಕೇಳಿದಾಗ “ಏ,  ಮಗಾ ಬ್ಯಾಡಂದ್ರು ಮೊನ್ನೆ ಫಾದರ್ಸ್ ಡೇ ಕ್ಕ ಕಾರ ಕೊಡಿಸಿದಾ” ಅಂತ ನಕ್ಕ ಸುಮ್ಮನಾದರು. ಒಂದ ದಿಡ ತಿಂಗಳ ಹಿಂದ  ಅವರಪ್ಪ ಸತ್ತಿದ್ದ ಸೂತಕ ಮಾರಿ ಮ್ಯಾಲೆ ಅಂತೂ ಇರಲಿಲ್ಲಾ. ಅವರ ಮನಸ್ಸಿನಾಗಿಂದ ನಮಗ ಗೊತ್ತಾಗಂಗಿಲ್ಲಾ. ಅವರು ತಮ್ಮ ಮಗನ ಫಾದರ್ಸ್ ಡೇ ಸೆಲೇಬ್ರೇಶನ್ ಒಳಗ ತಮಗೂ ಒಬ್ಬ ಅಪ್ಪ ಇದ್ದಾ ಅನ್ನೋದನ್ನು ಮರತಂಗ ಕಾಣಸ್ತು. ಅಲ್ಲಾ ಎಷ್ಟ ಅಂತ ಸತ್ತವರನ ನೆನಸಿಗೊಂಡ ಅತಗೋತ ಕೂಡಲಿಕ್ಕೆ ಆಗ್ತದ ಬಿಡ್ರಿ.

ಅನ್ನಂಗ ಇನ್ನೊಂದ ಹೇಳೋದ ಮರತೆ, ರಾಯರು ಸತ್ತ ನಾಲ್ಕನೇ ದಿವಸಕ್ಕ ವಿಮಾಲಾಬಾಯಿ ಅವರ ಹಾಸಗಿ ಒಗಿಲಿಕ್ಕೆ ಹೋಗ ಬೇಕಾರ ಗಾದಿ ಬುಡಕ ಒಂದ ಚೀಟಿ ಜೊತಿ ಪೊಸ್ಟಲ್ ಸರ್ಟಿಫಿಕೇಟ ಸಿಕ್ಕಿತ್ತಂತ. ಆ ಚೀಟಿ ಒಳಗ ಪ್ರಾಣೇಶಾಚಾರ್ಯರು ‘ನಾಳೆ ನಾ ಸತ್ತಮ್ಯಾಲೆ ನನ್ನ ಕ್ರೀಯಾ ಕರ್ಮ ಮತ್ತು ವಾರ್ಷಿಕ ಶ್ರಾದ್ಧದ ಸಲುವಾಗಿ’ ಅಂತ ಬರದಿದ್ದರಂತ. ಅವರದು ಮಾಳಮಡ್ಡಿ ಪೊಸ್ಟ ಆಫೀಸನಾಗ ದೀಡ ಲಕ್ಷ ರೂಪಾಯಿ ಡಿಪಾಸಿಟ ಇತ್ತು. ಈ ವಿಷಯ ಮಕ್ಕಳಿಗೆ ಯಾರಿಗೂ ಗೊತ್ತಿದ್ದಿಲ್ಲಾ ಆದ್ರ ಅವರಪ್ಪಗ ಮಕ್ಕಳ ಸ್ವಭಾವ ಗೊತ್ತಿತ್ತು. ಸತ್ತ ಮ್ಯಾಲರ ಮಕ್ಕಳಿಗೆ ಭಾರ ಆಗೋದ ಬ್ಯಾಡ ಅಂತ ರೊಕ್ಕ ಇಟ್ಟ ಹೋಗಿದ್ದರು…

ಬಹುಶಃ ಈ ವಿಷಯ ಇವತ್ತಿಗೂ ಸೀನಣ್ಣಗ, ನರಹರಿಗೆ ಗೊತ್ತ ಇದ್ದಂಗ ಇಲ್ಲಾ, ಯಾಕಂದರ ಮೂರ  ತಿಂಗಳ ಹಿಂದ ರಾಘ್ಯಾ ಸ್ಪ್ಲೆಂಡರ್ ತೊಗೊಳಿಕ್ಕೆ ರೊಕ್ಕಾ ಇಲ್ಲಾ ಅಂದೋವಾ ಇವತ್ತ ಅರಪ್ಪಗ ಫಾದರ್ಸ ಡೇ ಕ್ಕ ಆಲ್ಟೋ ಕಾರ ಕೊಡಿಸ್ಯಾನ ಅಂದ್ರ ಅಪ್ಪನ ಮ್ಯಾಲಿನ  ಪ್ರೀತಿನೋ ಇಲ್ಲಾ  ಅವರಜ್ಜಂದ  ಆಶೀರ್ವಾದನೋ ಆ ಗಣಪತಿಗೆ ಗೊತ್ತ್.